Wednesday, August 22, 2012

ರಾಜಕೀಯದಲ್ಲಿ ಕುಸಿಯುತ್ತಿರುವ ಮೌಲ್ಯಗಳು

         'ನಿರಂತರ ಚುನಾವಣೆಗಳು ದೇಶದ ಆರ್ಥಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಆದ್ದರಿಂದ ಇಲ್ಲಿಯೂ ಅಮೇರಿಕಾ ದೇಶದಂತೆ ಲೋಕಸಭೆ ಮತ್ತು ವಿಧಾನ ಸಭೆಗಳಿಗೆ ನಿರ್ಧಿಷ್ಟ ಅವಧಿಯನ್ನು ನಿಗದಿಪಡಿಸಿ ಆ ಅವಧಿ ಪೂರ್ಣಗೊಳ್ಳುವವರೆಗೆ ಚುನಾವಣೆಗೆ ಅವಕಾಶವೇ ಇರಕೂಡದು' ಹೀಗೆಂದು ಕೆಲವು ದಿನಗಳ ಹಿಂದೆ ದೇಶದ ಹಿರಿಯ ರಾಜಕಾರಣಿ ಶ್ರೀ ಅಡ್ವಾಣಿ ಅವರು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದರು. ವೈಚಾರಿಕ ಚಿಂತನೆಗಳಿಂದ ಕೂಡಿದ ಪ್ರಾಮಾಣಿಕ ವ್ಯಕ್ತಿತ್ವದ ಮನಸ್ಥಿತಿ ಅದು. ಆದರೆ ಈ ದಿನಗಳಲ್ಲಿ ರಾಜಕೀಯದಲ್ಲಿ ನೈತಿಕತೆ, ಮೌಲ್ಯಾಧಾರಿತ ವಿಚಾರಗಳು, ಪ್ರಾಮಾಣಿಕತೆ ಇವುಗಳೆಲ್ಲ ಕಾಣಸಿಗುತ್ತಿಲ್ಲ. ಮೌಲ್ಯಾಧಾರಿತ ರಾಜಕಾರಣವನ್ನು ದುರ್ಬೀನು ಹಾಕಿಕೊಂಡು ಹುಡುಕುವ ಮಟ್ಟಕ್ಕೆ ರಾಜಕೀಯ ಕ್ಷೇತ್ರದಲ್ಲಿ ತತ್ವ ಮತ್ತು ಮೌಲ್ಯಗಳ ಕ್ಷೋಭೆ ಕಾಣಿಸಿಕೊಂಡಿದೆ. ಆ ಕಾಲವೊಂದಿತ್ತು ಅಲ್ಲಿ ಮೌಲ್ಯಗಳಿದ್ದವು, ನೈತಿಕತೆ ಮತ್ತು ಪ್ರಾಮಾಣಿಕತೆಗಳಿದ್ದವು. ಇಡೀ ರಾಜಕೀಯ ಬದುಕು ಮೌಲ್ಯಾಧಾರಿತವಾಗಿತ್ತು. ಪದವಿ ಮತ್ತು ಅಧಿಕಾರಕ್ಕಿಂತ ಪ್ರಾಮಾಣಿಕವಾಗಿ ನೈತಿಕತೆಯಿಂದ ಬದುಕುವುದು ಮುಖ್ಯವಾಗಿತ್ತು. ಕುರ್ಚಿಗೆ ಅಂಟಿಕೊಂಡು ಕೂಡುವ ಆಸೆ ಇದ್ದಿದ್ದರೆ ಲಾಲಬಹದ್ದೂರ ಶಾಸ್ತ್ರಿ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರಲಿಲ್ಲ. ಮೌಲ್ಯಾಧಾರಿತ ರಾಜಕಾರಣ ಮತ್ತು ರಾಜಕೀಯ ಧ್ರುವಿಕರಣದ ಕನಸು ಕಂಡ ರಾಮಕೃಷ್ಣ ಹೆಗಡೆ ಭೂ ಹಗರಣಕ್ಕೆ ಸಂಬಂಧಿಸಿದಂತೆ ರಾಜೀನಾಮೆ ಕೊಟ್ಟು ಮುಖ್ಯಮಂತ್ರಿ ಹುದ್ಧೆಯನ್ನೇ ತ್ಯಜಿಸಿದರು. ಹೀಗೆ ಮಾಡುವುದರ ಮೂಲಕ ಅವರು ಸರ್ಕಾರವೊಂದು ಮುಜುಗರಕ್ಕೆ ಸಿಕ್ಕಿ ಬೀಳುವ ಅತಿ ದೊಡ್ಡ ಸಂಕಟದಿಂದ ಪಾರು ಮಾಡಿದರು. ಎಸ.ನಿಜಲಿಂಗಪ್ಪನವರು ಮುಖ್ಯಮಂತ್ರಿಗಳಾಗಿದ್ದ ಅವಧಿಯುದ್ದಕ್ಕೂ ತಮ್ಮ ಮಕ್ಕಳನ್ನು ಮತ್ತು ಸಂಬಂಧಿಕರನ್ನು ಮುಖ್ಯಮಂತ್ರಿ ಕಚೇರಿಯ ಹತ್ತಿರ ಸುಳಿಯಲು ಬಿಡುತ್ತಿರಲಿಲ್ಲ ಎಂದು ಅನೇಕರು ಇವತ್ತಿಗೂ ಸ್ಮರಿಸುತ್ತಾರೆ. ಆದರೆ ಇಂದು ಕಾಲ ಬದಲಾಗಿದೆ. 'ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯ ಸಮ್ಮತ' ಎನ್ನುವುದು ರಾಜಕೀಯ ಕ್ಷೇತ್ರಕ್ಕೂ ಅನ್ವಯಿಸುತ್ತಿದೆ. ರಾಜಕೀಯ ಧ್ರುವೀಕರಣ, ಮೌಲ್ಯಾಧಾರಿತ ರಾಜಕೀಯ, ನೈತಿಕತೆಗಳೆಲ್ಲ ನಮ್ಮ ನಾಯಕರುಗಳಿಗೆ ಅಪರಿಚಿತ ಪದಗಳಾಗಿ ಕಾಣಿಸುತ್ತಿವೆ. ರಾಜಕೀಯ ಎನ್ನುವುದು ಈಗ ಸಮಾಜ ಸೇವೆಯಾಗಿ ಉಳಿದುಕೊಂಡಿಲ್ಲ. ಇದು ಅನೇಕರಿಗೆ  ಹಣ ಮಾಡುವ ಅತ್ಯಂತ ಸುಲಭ ಮತ್ತು ಸರಳ ಮಾರ್ಗೋಪಾಯ. ಇಲ್ಲಿ ನೀತಿ ಮತ್ತು ಮೌಲ್ಯಗಳಿಗೆ ಕವಡೆ ಕಾಸಿನ ಬೆಲೆಯಿಲ್ಲ.
         ಜನಾದೇಶ ಮತ್ತು ಜನಾಭಿಪ್ರಾಯಕ್ಕೂ ಹಾಗೂ ನಮ್ಮ ರಾಜಕೀಯ ನಾಯಕರುಗಳಿಗೂ ಗಾವುದ ದೂರ. ಇಲ್ಲಿ ಚುನಾವಣೆಗೆ ನಿಲ್ಲದೆ ಮಂತ್ರಿಯಾಗಬಹುದು ಮತ್ತು ಚುನಾವಣೆಯಲ್ಲಿ ಸೋತ ನಂತರವೂ ಹಿಂಬಾಗಿಲ ಮೂಲಕ ಪ್ರವೇಶಿಸಿ ಮಂತ್ರಿಯಾಗಿ ಮಂದುವರಿಯಬಹುದು. ಜನಾದೇಶವನ್ನು ಗೌರವಿಸುವುದು ಮತ್ತು ಅದಕ್ಕೆ ಮನ್ನಣೆ ನೀಡುವುದು ಅದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ. ಆದರೆ ಜನರಿಂದ ತಿರಸ್ಕೃತನಾದ ವ್ಯಕ್ತಿ ಈ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಂತ್ರಿಯಾಗಿ ಮುಂದುವರಿಯುವ ಹಕ್ಕಿದೆ. ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾದ ರಾಷ್ಟ್ರವೊಂದರ ಪ್ರಜಾತಾಂತ್ರಿಕ ವ್ಯವಸ್ಥೆಯ ದುಸ್ಥಿತಿ ಇದು.
             ಇಲ್ಲಿ ಪ್ರಜಾಪ್ರಭುತ್ವ ಎನ್ನುವ ಪವಿತ್ರ ವ್ಯವಸ್ಥೆಯೊಂದು ರಾಜಕಾರಣಿಗಳಿಂದ ನಿರಂತರ ಶೋಷಣೆಗೆ ಒಳಗಾಗುತ್ತಿದೆ. ಈ ರಾಷ್ಟ್ರದ ರಾಜಕೀಯ ವ್ಯವಸ್ಥೆಯಲ್ಲಿ ಏನೆಲ್ಲಾ ವಿಪರ್ಯಾಸಗಳು ಮತ್ತು ವೈರುಧ್ಯಗಳು ಸಂಭವಿಸಬಹುದು ಎನ್ನುವುದಕ್ಕೆ ಪ್ರಮೋದ ಮಹಾಜನ್ ಅವರ ಈ ಹೇಳಿಕೆ ಉತ್ತಮ ಉದಾಹರಣೆಯಾಗಿದೆ. ದೇವೇಗೌಡರ ನೇತೃತ್ವದಲ್ಲಿ ಅಲ್ಪಮತದ ತೃತೀಯ ರಂಗ ಪಕ್ಷ ಕೇಂದ್ರದಲ್ಲಿ ಸರ್ಕಾರ ರಚಿಸಿದ ಆ ಸಂದರ್ಭ ಪ್ರಮೋದ ಮಹಾಜನ್ ಹೀಗೆ ಉದ್ಘರಿಸಿದ್ದರು 'ಈ ದೇಶದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿರುವ ಪಕ್ಷ ವಿರೋಧ ಪಕ್ಷದ ಸ್ಥಾನದಲ್ಲಿದೆ, ಅತಿ ಕಡಿಮೆ ಸ್ಥಾನಗಳನ್ನು ಗಳಿಸಿರುವ ಪಕ್ಷ ಸರ್ಕಾರ ರಚಿಸಿದೆ ಮತ್ತು ಎರಡನೇ ಅತಿ ದೊಡ್ಡ ಪಕ್ಷವೊಂದು ವಿಪಕ್ಷದ ಸ್ಥಾನದಲ್ಲೂ ಇರದೆ ಆಳುವ ಸ್ಥಾನದಲ್ಲೂ ಕೂಡದೆ ತಟಸ್ಥವಾಗಿ ಉಳಿದಿದೆ'. ಹೌದು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂಥ ಘಟನೆಗಳು ಸಾಮಾನ್ಯ ಮತ್ತು ಜೊತೆಗೆ ಅನಿವಾರ್ಯವಾಗುತ್ತಿರುವುದು ದುರದೃಷ್ಟಕರ ಸಂಗತಿ. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ವಿಭಿನ್ನ ಸೈದ್ದಾಂತಿಕ ಹಿನ್ನೆಲೆಯ ಎರಡು ರಾಜಕೀಯ ಪಕ್ಷಗಳು ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದಾಗ ಕೆಲವರು ಅದನ್ನು ಅಪವಿತ್ರ ಮೈತ್ರಿ ಎಂದು ಜರೆದರು. ಆ ಸಂದರ್ಭ ಆ ರಾಜಕೀಯ ಪಕ್ಷಗಳು ಇದು ರಾಜ್ಯದ ಅಭಿವೃದ್ಧಿಗಾಗಿ ಆದ ಮೈತ್ರಿ ಎಂದು ತಮ್ಮ ಕಾರ್ಯವನ್ನು ಸಮರ್ಥಿಸಿಕೊಂಡವು. ರಾಜ್ಯದ ಅಭಿವೃದ್ಧಿ ವಿಷಯವಾಗಿ  ಅಷ್ಟೊಂದು ಪ್ರಾಮಾಣಿಕ ಕಾಳಜಿ ಇದ್ದಿದ್ದರೆ ಅವುಗಳ ಮೈತ್ರಿ ಅವಧಿ ಪೂರ್ಣಗೊಳ್ಳುವುದಕ್ಕೆ  ಮೊದಲೇ ಮುರಿದು ಬೀಳುತ್ತಿರಲಿಲ್ಲ. ರಾಜ್ಯದ ಅಭಿವೃದ್ಧಿಯ ನಾಟಕವಾಡುವ ಈ ನಾಯಕರುಗಳು ಮಧ್ಯಂತರ ಚುನಾವಣೆಗೆ ಕಾರಣರಾಗಿ ಜನರ ಮೇಲಿನ  ತೆರಿಗೆಯ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದರು. ಇಲ್ಲಿ ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜ್ಞಾವಂತ ಮತದಾರರನ್ನು ನಿರಂತರವಾಗಿ ಮೋಸಗೊಳಿಸುತ್ತಿವೆ.
         ಭಾರತದ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣಾ ಕ್ರಿಯೆಯೊಂದು ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಿದೆ. ರಾಜಕೀಯ ನಾಯಕರುಗಳು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿರುವುದರಿಂದ ಅವಧಿಗಿಂತ ಮೊದಲೇ ಚುನಾವಣೆಗಳು ನಡೆಯುತ್ತಿವೆ. ಆಡಳಿತ ಪಕ್ಷದಲ್ಲಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎನ್ನುವ ನೆಪವೊಡ್ಡಿ ಜನಾದೇಶವನ್ನು ಧಿಕ್ಕರಿಸಿ ಮತದಾರರ ಮತಗಳನ್ನು ಅಪಮೌಲ್ಯಗೊಳಿಸಿ ಮತ್ತೆ ಮತ್ತೆ ಚುನಾವಣೆಗೆ ಸ್ಪರ್ಧಿಸುತ್ತಿರುವರು. ನಖಶಿಖಾಂತ ದ್ವೇಷಿಸುತ್ತಿದ್ದ ಪಕ್ಷವನ್ನು ಸೇರಿ ವಾಚಾಮಗೋಚರ ಬೈಯ್ದುಕೊಂಡಿದ್ದವರನ್ನೇ ಅಪ್ಪಿಕೊಂಡು ಮತದಾರನ ಎದುರು ಬಂದು ನಿಲ್ಲುತ್ತಾರೆ. ಮತದಾರ ಪ್ರಭು ಗೊಂದಲದಲ್ಲಿ ಬೀಳುತ್ತಾನೆ. ಯಾರದು ಸರಿ, ಯಾರದು ತಪ್ಪು. ನಿನ್ನೆವರೆಗೆ ಬದ್ಧ ವೈರಿಗಳಾಗಿದ್ದವರು ಇಂದು ಹಿತೈಷಿಗಳು. ಇಲ್ಲಿ ತಪ್ಪು ಒಪ್ಪುಗಳ ಪ್ರಶ್ನೆಯೇ ಇಲ್ಲ. ಎಲ್ಲವೂ ಅಧಿಕಾರದ ಆಸೆಗಾಗಿ ಕುರ್ಚಿಯ ವ್ಯಾಮೋಹಕ್ಕಾಗಿ. ಆಡಳಿತ ಪಕ್ಷದಲ್ಲಿದ್ದರೆ ಅಭಿವೃದ್ಧಿ ಸಾಧ್ಯ ಎನ್ನುವುದಾದರೆ ವಿರೋಧ ಪಕ್ಷವಾದರೂ ಏಕಿರಬೇಕು? ಎಲ್ಲ 224 ಶಾಸಕರು ಆಡಳಿತ ಪಕ್ಷದಲ್ಲೇ ಇರಬಹುದಲ್ಲ.
          ಕಳೆದ ಲೋಕಸಭೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ ಹಿರಿಯ ಮತ್ತು ಮುತ್ಸದ್ದಿ ರಾಜಕಾರಣಿ ಸೋಮನಾಥ ಚಟರ್ಜಿ ತತ್ವ, ಸಿದ್ಧಾಂತ, ಮೌಲ್ಯಗಳಿಗೆ ಅಂಟಿಕೊಂಡ ಪರಿಣಾಮ ತಾವು ದೀರ್ಘಕಾಲದಿಂದ ಪ್ರತಿನಿಧಿಸುತ್ತ ಬಂದಿದ್ದ ಪಕ್ಷದಿಂದಲೇ ಉಚ್ಚಾಟನೆಗೊಳ್ಳಬೇಕಾಯಿತು. ವಿಪರ್ಯಾಸವೆಂದರೆ  ಮೌಲ್ಯಾಧಾರಿತ ರಾಜಕೀಯವನ್ನು ಬದುಕಿದ ವ್ಯಕ್ತಿ ರಾಜಕಾರಣದ ಭಾಷೆಯಲ್ಲಿ ಶತಮೂರ್ಖನೆಂದು ಕರೆಯಿಸಿಕೊಳ್ಳುತ್ತಾನೆ. ವೈಯಕ್ತಿಕ ಲಾಭಕ್ಕಾಗಿ, ಅಧಿಕಾರದ ಆಸೆಗಾಗಿ ಪಕ್ಷದಿಂದ ಪಕ್ಷಕ್ಕೆ ಕಪ್ಪೆಯಂತೆ ಜಿಗಿಯುವ ರಾಜಕಾರಣಿ ಬದುಕನ್ನು ಚೆನ್ನಾಗಿ ಅರ್ಥ ಮಾಡಿಕೊಂಡವನು ಎನ್ನುವ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ಕಡಿಮೆ ಹಣಕ್ಕೆ ರೈತರ ಭೂಮಿಯನ್ನು ಖರೀದಿಸಿ ಅದೇ ಭೂಮಿಯನ್ನು ಸರ್ಕಾರಕ್ಕೆ ಅಧಿಕ ಬೆಲೆಗೆ ಮಾರಿಕೊಂಡ ಮಂತ್ರಿಯೋರ್ವರು ತಮ್ಮ ಕೆಲಸವನ್ನು ಸಮರ್ಥಿಸಿಕೊಳ್ಳುತ್ತಾರೆ. ಹಣ ಮಾಡುವುದು ತಮ್ಮ ಕುಲದ ಕಸುಬು ಎಂದು ಸಮಜಾಯಿಷಿ ನೀಡುತ್ತಾರೆ. 'ಕೊಟ್ಟವ ಕೋಡಂಗಿ ಇಸಗೊಂಡವ ಈರಭದ್ರ' ಎನ್ನುವ ವ್ಯಾಪಾರಿ ಮನೋಭಾವ ಅನೇಕ ರಾಜಕಾರಣಿಗಳಲ್ಲಿ ಮನೆ ಮಾಡಿಕೊಂಡಿದೆ. ಹಾಗಾದರೆ ನಾವು ಯಾರನ್ನು ಆದರ್ಶ ನಾಯಕ ಎಂದು ಕರೆಯಬೇಕು? ಭೃಷ್ಟಾಚಾರಕ್ಕಿಳಿಯುವ, ಹಣ ಮಾಡುವ, ಅಧಿಕಾರಕ್ಕಾಗಿ ಹಪಹಪಿಸುವ ರಾಜಕಾರಣಿ ಭೇಷ್ ಎಂದು ಬೆನ್ನುತಟ್ಟಿಸಿಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರನಾಗುತ್ತಾನೆ. ತತ್ವ, ಸಿದ್ಧಾಂತಗಳಿಗೆ ಅಂಟಿಕೊಂಡ ಮೌಲ್ಯಾಧಾರಿತ ವ್ಯಕ್ತಿತ್ವದ ರಾಜಕಾರಣಿ ಸಮಾಜದ ಅವಕೃಪೆಗೆ ಮತ್ತು ನಿಂದನೆಗೆ ಒಳಗಾಗುತ್ತಾನೆ.
        ವಿರೋಧ ಪಕ್ಷದವರಿಗೆ ಹಂದಿ ಜ್ವರ ಬರಲಿ ಎಂದು ಶಪಿಸುವ, ನಮ್ಮ ತಪ್ಪುಗಳನ್ನು ಎತ್ತಿ ತೋರಿಸಿದರೆ ನಿಮ್ಮ ತಪ್ಪುಗಳನ್ನು ಬಯಲಿಗೆಳೆಯಬೇಕಾಗುತ್ತದೆ ಎಂದು ಬೆದರಿಸುವ  ಇದು ಇವತ್ತಿನ ನಮ್ಮ ರಾಜಕಾರಣಿಗಳ ರೋಗಗ್ರಸ್ತ ಮನಸ್ಥಿತಿ. ಆಳುವ ಮತ್ತು ವಿರೋಧ ಪಕ್ಷಗಳ ನಡುವೆ ಒಂದು ಸಮನ್ವಯತೆ ಬೇಕು. ವೈಯಕ್ತಿಕ ದ್ವೇಷಾಸೂಯೆಗಳಿಗೆ ಅವಕಾಶವಿರಬಾರದು. ರಾಜ್ಯದ ಮತ್ತು ಜನತೆಯ ಅಭಿವೃದ್ಧಿಯೇ ಮೂಲ ಮಂತ್ರವಾಗಬೇಕು. ಆದರೆ ಆಗುತ್ತಿರುವುದಾದರೂ ಏನು? ಆರೋಗ್ಯಕರ ಚರ್ಚೆಗೆ, ಸಂವಾದಗಳಿಗೆ ಅವಕಾಶವೇ ಇಲ್ಲ. ಅವರದೇನಿದ್ದರೂ ಪರಸ್ಪರರ ತಪ್ಪುಗಳನ್ನು ಮುಚ್ಚಿಕೊಳ್ಳುವ ಸಮಯಸಾಧಕತನ. ಅದು ಒಂದರ್ಥದಲ್ಲಿ ನನ್ನ ತಪ್ಪುಗಳನ್ನು ನೀನು ತೋರಿಸಬೇಡ, ನಿನ್ನ ತಪ್ಪುಗಳನ್ನು ನಾನು ತೋರಿಸುವುದಿಲ್ಲ ಎನ್ನುವ ಒಳ ಒಪ್ಪಂದ. ಆಳುವ ಪಕ್ಷವಾದರೂ ಸರಿಯೇ ವಿರೋಧ ಪಕ್ಷವಾದರೂ ಸರಿ ಇಬ್ಬರೂ ಸೇರಿಯೇ ಹಣ ಮಾಡಿಕೊಳ್ಳೋಣ ಎನ್ನುವ ಅಸಹ್ಯ ಮತ್ತು ಕೀಳು  ಮನೋಭಾವ. ಹೊರಗೆ ಮಾತ್ರ ಅಭಿವೃದ್ಧಿಯೇ ನಮ್ಮ ಧ್ಯೇಯ ಎಂದೆನ್ನುತ ಮತದಾರರ ಕಣ್ಣೋರಿಸುವ ನಾಟಕ ಅವ್ಯಾಹತವಾಗಿ ಮುಂದುವರಿಯುತ್ತಿದೆ. ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜ್ಞಾವಂತ ಮತದಾರನ ಜೊತೆ ಜೊತೆಗೆ ತತ್ವ ಮತ್ತು ಸಿದ್ಧಾಂತಗಳ ನೆಲೆಗಟ್ಟಿನ ಮೇಲೆ ಬದುಕನ್ನು ಕಟ್ಟಿಕೊಂಡ ಆದರ್ಶ ರಾಜಕಾರಣಿ ಕೂಡಾ ನಿರಂತರ ಶೋಷಣೆಗೆ ಗುರಿಯಾಗುತ್ತಾನೆ. ಏಕೆಂದರೆ ಕುರುಡು ಕಾಂಚಾಣ ಕುಣಿಯುತಲಿತ್ತು ಅದು ಕೆಳಗೆ ಬಿದ್ದವರ ತುಳಿಯುತಲಿತ್ತು.

ಇದ್ದದ್ದು ಇದ್ದಹಾಂಗ

        ಗುಂಡೂರಾಯರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಸಮಾರಂಭವೊಂದರಲ್ಲಿ  ಮಾತನಾಡುತ್ತ ಸಂಸ್ಕೃತ ಎಲ್ಲ ಭಾಷೆಗಳ ತಾಯಿಯೆಂದು ಶ್ಲಾಘಿಸಿದರು. ಈ ಮಾತು ಅನೇಕ ಸಾಹಿತಿಗಳ ಆಕ್ರೋಶಕ್ಕೆ ಕಾರಣವಾಯಿತು. ಹಾ.ಮಾ.ನಾಯಕರಂತೂ ಪತ್ರಿಕೆಯಲ್ಲಿ ಉಗ್ರವಾಗಿ ಟೀಕಿಸಿ 'ಇಂತಹ ವಿಚಾರವನ್ನು ತಿಳಿಸಿದ ಗುಂಡೂರಾಯರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು' ಎಂದು ವ್ಯಂಗ್ಯವಾಡಿದರು. ಅದಾದ ಒಂದೆರಡು ತಿಂಗಳುಗಳ ನಂತರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭವಾಯಿತು. ಪಟ್ಟಿಯಲ್ಲಿ ಹಾಮಾನಾ ಅವರ ಹೆಸರೂ ಇತ್ತು. ಹಿರಿಯ ಅಧಿಕಾರಿಯೊಬ್ಬರು ಗುಂಡೂರಾಯರ ಬಳಿ ಬಂದು ಹಾಮಾನಾ ಟೀಕಿಸಿದ್ದನ್ನು ತಿಳಿಸಿ ಅವರ ಹೆಸರನ್ನು ಪರಿಗಣಿಸಬಾರದೆಂದು ಮನವಿ ಮಾಡಿದರು. ಅದಕ್ಕೆ ಗುಂಡೂರಾಯರು 'ರ್ರೀ ನಾವು ನಮ್ಮನ್ನು ಹೊಗಳಿದವರಿಗೆ ಮಾತ್ರ ಪ್ರಶಸ್ತಿ ಕೊಡುವುದಲ್ಲ. ಅವರು ಏನು ಸಾಧನೆ ಮಾಡಿದ್ದಾರೆ ಎನ್ನುವುದು ಮುಖ್ಯ. ಹಾಮಾನಾ ಕನ್ನಡದ ಕೆಲಸ ಸಾಕಷ್ಟು ಮಾಡಿದ್ದಾರೆ. ಅವರ ಹೆಸರನ್ನೂ ಪಟ್ಟಿಯಲ್ಲಿ ಸೇರಿಸಿ' ಎಂದರು. ಈ ವಿಷಯ ಕನ್ನಡ ಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ತಮ್ಮದೇ ಜಾತಿಯವರೆಂಬ ಕಾರಣಕ್ಕೆ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೆಳನಾಧ್ಯಕ್ಷೆಗೆ 11 ಲಕ್ಷ ರುಪಾಯಿಗಳನ್ನು ಉಡಿ ತುಂಬಿ ಸ್ವಜನ ಪಕ್ಷಪಾತ ಮಾಡುವ ನಮ್ಮ ರಾಜಕಾರಣಿಗಳು ಗುಂಡೂರಾಯರಂತೆ  ವಿಶಾಲ ಹೃದಯವರು ಎಂದಾಗಬೇಕು.

-ರಾಜಕುಮಾರ ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment