1990ರ ದಶಕದ ಮಾತಿದು ಬೆಂಗಳೂರಿನ ಕೆ.ಪಿ.ಎಸ್.ಸಿ ಕಚೇರಿಯಿಂದ ಸಂದರ್ಶನಕ್ಕೆ ಕರೆ ಬಂದಿತ್ತು. ಬೆಂಗಳೂರು ಅಪರಿಚಿತ ಊರಾಗಿದ್ದರಿಂದ ಜೊತೆಯಲ್ಲಿ ನನ್ನ ಅಣ್ಣಂದಿರೂ ಬಂದಿದ್ದರು. ಸಿನಿಮಾವನ್ನು ತುಂಬ ಪ್ರೀತಿಸುವ ನನ್ನ ಅಣ್ಣಂದಿರು ಇದೆ ಸಂದರ್ಭ ತಮ್ಮ ಇಷ್ಟದ ಕಲಾವಿದರಾದ ರಾಜಕುಮಾರ ಮತ್ತು ವಿಷ್ಣುವರ್ಧನ ಅವರನ್ನು ಭೇಟಿಮಾಡಲು ನಿರ್ಧರಿಸಿದರು. ನನ್ನನ್ನು ಸಂದರ್ಶನ ಕೇಂದ್ರಕ್ಕೆ ಬಿಟ್ಟು ಖರೀದಿಸಿದ ಹೊಸ ಕ್ಯಾಮೆರಾದೊಂದಿಗೆ ಜಯನಗರದತ್ತ ಹೆಜ್ಜೆ ಹಾಕಿದ ಅವರು ನಾನು ಸಂದರ್ಶನ ಮುಗಿಸಿ ಹೊರ ಬರುವ ಹೊತ್ತಿಗೆ ಕೈಯಲ್ಲಿ ಫೋಟೋ ಅಲ್ಬಮ್ ಹಿಡಿದು ಕಾಯುತ್ತ ನಿಂತಿದ್ದರು. ನಾನು ಸಂದರ್ಶನ ಹೇಗೆ ಮಾಡಿದೆ ಎನ್ನುವುದಕ್ಕಿಂತ ತಾವು ವಿಷ್ಣುವರ್ಧನ್ ಜೊತೆ ತೆಗೆಸಿಕೊಂಡ ಫೋಟೋಗಳನ್ನು ನನಗೆ ತೋರಿಸುವ ತವಕ ಅವರಲ್ಲಿತ್ತು. ವಿಷ್ಣುವರ್ಧನ್ ಗಾಗಿ ಇಡೀ ರೀಲನ್ನು ಖರ್ಚು ಮಾಡಿದ್ದರು. ತಮ್ಮ ಇಷ್ಟದ ನಟನನ್ನು ಭೇಟಿ ಮಾಡಿದ್ದರೂ ಎಲ್ಲೋ ಒಂದು ಕಡೆ ಅವರಲ್ಲಿ ಬೇಸರ ಕಾಣಿಸುತ್ತಿತ್ತು. ವಿಚಾರಿಸಿದಾಗ ತಿಳಿಯಿತು ರಾಜಕುಮಾರ ಗಾಜನೂರಿಗೆ ಹೋಗಿದ್ದರಿಂದ ಅವರ ಭೇಟಿ ಸಾಧ್ಯವಾಗಿರಲಿಲ್ಲ. ನನಗೆ ಆಶ್ಚರ್ಯವಾಯಿತು ಏಕಕಾಲಕ್ಕೆ ರಾಜ್ ಮತ್ತು ವಿಷ್ಣು ಅವರನ್ನು ಅಭಿಮಾನಿಸುವುದು ಅದು ಹೇಗೆ ಸಾಧ್ಯ ಎಂದು. ಏಕೆಂದರೆ 90ರ ದಶಕ ರಾಜ್ ಮತ್ತು ವಿಷ್ಣು ಅಭಿಮಾನಿಗಳ ನಡುವಣ ಕಾದಾಟ ಮತ್ತು ಪೈಪೋಟಿಗಳ ಪರ್ವಕಾಲ. ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುತ್ತಿರಲಿಲ್ಲ. ಅಂಥ ವಾತಾವರಣ ಕನ್ನಡ ನಾಡಿನಲ್ಲಿ ಮನೆಮಾಡಿಕೊಂಡಿದ್ದ ಹೊತ್ತು ನನ್ನ ಅಣ್ಣಂದಿರ ಅಭಿಮಾನ ನನ್ನಲ್ಲಿ ಅಚ್ಚರಿ ಮೂಡಿಸಿದ್ದು ಸಹಜವಾಗಿತ್ತು. ಅದಕ್ಕೆ ಅವರು ಕೊಟ್ಟ ಕಾರಣ ಹೀಗಿತ್ತು "ರಾಜ್ ಮತ್ತು ವಿಷ್ಣು ಇಬ್ಬರೂ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದರು. ಆದರೆ ರಾಜ್ ಮಾಡಿದ ಕೆಲವು ಪಾತ್ರಗಳನ್ನು ವಿಷ್ಣುವರ್ಧನ್ ಗೆ ಮಾಡಲು ಸಾಧ್ಯವಾಗಿಲ್ಲ. ಅದೇ ರೀತಿ ವಿಷ್ಣು ಮಾಡಿದ ಒಂದಿಷ್ಟು ಪಾತ್ರಗಳನ್ನು ರಾಜಕುಮಾರಗೆ ಮಾಡಲು ಸಾಧ್ಯವಾಗಿಲ್ಲ. ನಮ್ಮ ಅಭಿಮಾನ ಒಬ್ಬ ನಟನಿಗೆ ಮಾತ್ರ ಸೀಮಿತವಾಗಿ ಉಳಿದರೆ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನೋಡುವ ಅವಕಾಶದಿಂದ ನಾವು ವಂಚಿತರಾಗಬೇಕಾಗುತ್ತದೆ". ಈ ಮಾತು ಕನ್ನಡ ಪ್ರೇಕ್ಷಕನ ಮನಸ್ಸು ಹೇಗೆ ಆರೋಗ್ಯಕರವಾಗಿ ಇರಬೇಕಾಗಿತ್ತು ಎನ್ನುವುದಕ್ಕೆ ನಿದರ್ಶನವಾಗಿತ್ತು. ಆದರೆ ಇಡೀ ಕನ್ನಡ ಚಿತ್ರರಂಗ ಮತ್ತು ಕನ್ನಡ ಪ್ರೇಕ್ಷಕ ವರ್ಗದಲ್ಲಿನ ಇಂಥದ್ದೊಂದು ಮನೋಭಾವದ ಕೊರತೆಯಿಂದಾಗಿ ರಾಜ್ ಮತ್ತು ವಿಷ್ಣು ನಡುವಣ ಪೈಪೋಟಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಯಿತು.
1972ರಲ್ಲಿ ವಿಷ್ಣುವರ್ಧನ್ ಚಿತ್ರರಂಗಕ್ಕೆ ಕಾಲಿಟ್ಟ ಆ ಘಳಿಗೆಗಾಗಲೇ ರಾಜಕುಮಾರ ಹತ್ತಿರ ಹತ್ತಿರ ನೂರೈವತ್ತು ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದರು. ನ ಭೂತೋ ನ ಭವಿಷ್ಯತಿ ಎನ್ನುವಂತೆ ಯಶಸ್ಸು ಮತ್ತು ಜನಪ್ರಿಯತೆ ಅವರನ್ನು ಅರಸಿಕೊಂಡು ಬಂದಿದ್ದವು. ತಮ್ಮ ಸಹಜ ಅಭಿನಯದಿಂದ ರಾಜಕುಮಾರ ಇಡೀ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದರು. ಹೀಗಿರುವಾಗ ರಾಜ್ ಮತ್ತು ವಿಷ್ಣು ನಡುವೆ ಪೈಪೋಟಿ ಸಾಧ್ಯವೇ ಇರಲಿಲ್ಲ. ಅವರಿಬ್ಬರ ನಡುವಣ ವ್ಯತ್ಯಾಸ ಅಜಗಜಾಂತರವಾಗಿದ್ದು ಹೋಲಿಕೆಯೇ ಹಾಸ್ಯಾಸ್ಪದವಾಗಿತ್ತು. ಆದರೆ ರಾಜ್ ಸುತ್ತ ಮುತ್ತ ಇರುವವರಿಗೆ ಎರಡು ದಶಕಗಳ ಕಾಲ ಇಲ್ಲದೆ ಇದ್ದ ಪೈಪೋಟಿ ವಿಷ್ಣುವರ್ಧನ್ ರೂಪದಲ್ಲಿ ಗೋಚರಿಸತೊಡಗಿತು. ಅದರಲ್ಲೂ 'ನಾಗರ ಹಾವು'ನಂಥ ಹಿಟ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದೆ ವಿಷ್ಣುವರ್ಧನ್ ಗೆ ಮುಳುವಾಯಿತು (ಅವರ ಮೊದಲ ಚಿತ್ರ ವಂಶ ವೃಕ್ಷ ವಾದರೂ ಗುರುತಿಸುವುದು ನಾಗರ ಹಾವು ಚಿತ್ರದ ಮೂಲಕವೇ). ಇಂಥದ್ದೊಂದು ಭರ್ಜರಿ ಆರಂಭದ ಅಬ್ಬರಕ್ಕೆ ಅತ್ಯಂತ ಗಟ್ಟಿಯಾಗಿ ನೆಲೆಯೂರಿದ್ದ ರಾಜ್ ಅವರಂಥ ಮೇರು ನಟ ಅಲುಗಾಡಬಹುದೆಂದು ಅವರ ಹಿತೈಷಿಗಳು ಚಿಂತಿಸಿದ್ದು ಕನ್ನಡದ ಚಿತ್ರರಂಗದ ದುರ್ದೈವ.
ತಪ್ಪು ಎಲ್ಲಿಂದ ಮತ್ತು ಯಾರಿಂದ ಪ್ರಾರಂಭವಾಯಿತು ಎನ್ನುವುದು ಅಪ್ರಸ್ತುತ. ಆದರೆ ಒಂದಂತೂ ನಿಜ ವಿಷ್ಣು ಆಗಮನಕ್ಕಿಂತ ಮೊದಲು ಏಕಮೇವ ನಟರಾಗಿ ಬೆಳೆಯುತ್ತಿದ್ದ ರಾಜಕುಮಾರ ಕಾಲ್ ಶೀಟ್ ಎಲ್ಲ ನಿರ್ಮಾಪಕರಿಗೂ ದೊರೆಯುವುದು ದುರ್ಲಭವಾಗಿತ್ತು. ಇಂಥ ಸನ್ನಿವೇಶದಲ್ಲಿ ರಾಜ್ ಸಿನಿಮಾಗಳ ನಿರ್ಮಾಣದಿಂದ ವಂಚಿತರಾದ ನಿರ್ಮಾಪಕರಿಗೆ ವಿಷ್ಣು ಆಗಮನ ವರದಾನವಾಯಿತು. ಇದನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡ ಅವರು ಕ್ರಮೇಣ ವಿಷ್ಣುವರ್ಧನ್ ಆಸ್ಥಾನದ ಹೋಗಳು ಭಟ್ಟರಾಗಿ, ಬಹುಪರಾಕ್ ಭಟ್ಟಂಗಿಗಳಾಗಿ ಆ ನಟನ ಸುತ್ತ ಒಂದು ಭದ್ರ ಕೊಟೆಯನ್ನೇ ನಿರ್ಮಿಸಿದರು. ಅವರಿಗೆ ವಿಷ್ಣು ಒಬ್ಬ ಪ್ರತಿಭಾನ್ವಿತ ನಟನಾಗಿ ಬೆಳೆಯುವುದು ಬೇಕಿರಲಿಲ್ಲ. ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಇಡಿಯಾಗಿ ಆಕ್ರಮಿಸಿಕೊಂಡಿದ್ದ ರಾಜಕುಮಾರ ಎದುರು ತೀವ್ರ ಪ್ರತಿಸ್ಪರ್ಧೆ ಒಡ್ಡುವ ನಟನೊಬ್ಬ ಅವರಿಗೆ ಬೇಕಿತ್ತು. ಅವರೆಲ್ಲ ವಿಷ್ಣುವನ್ನು ತಾವಂದುಕೊಂಡಂತೆ ಬೆಳೆಸಲು ಪ್ರಯತ್ನಿಸಿ ಯಶಸ್ವಿಯೂ ಆದರು. ರಾಜ್ ಕುಟುಂಬ ಇಂಥದ್ದೊಂದು ಬೆಳವಣಿಗೆಗೆ ಆವತ್ತೇ ತಣ್ಣಗೆ ಪ್ರತಿಕ್ರಿಯಿಸಿದ್ದರೆ ಮೂರುವರೆ ದಶಕಗಳ ನಂತರ ನಾವುಗಳೆಲ್ಲ ಇವತ್ತು ಆ ವಿಷಯವನ್ನು ಕುರಿತು ಚರ್ಚಿಸುವ ಅಗತ್ಯವೇ ಇರುತ್ತಿರಲಿಲ್ಲ. ಆ ಹೊತ್ತಿಗಾಗಲೇ ಎಲ್ಲ ಪ್ರಕಾರದ ಪಾತ್ರಗಳಲ್ಲಿ ಅಭಿನಯಿಸಿ ಮಾಗಿದ್ದ ಕಲಾವಿದ ಒಬ್ಬ ಹೊಸ ನಟನ ಬೆರಳೆಣಿಕೆಯಷ್ಟು ಸಂಖ್ಯೆಯ ಚಿತ್ರಗಳಿಂದ ಅದೇಕೆ ಅನಿಶ್ಚಿತತೆಯ ಭೀತಿ ಎದುರಿಸಬೇಕಾಯಿತು ಎನ್ನುವುದು ಇವತ್ತಿಗೂ ಆಶ್ಚರ್ಯದ ಸಂಗತಿ.
ಇಲ್ಲೆ ರಾಜ್ ಕುಟುಂಬ ತಪ್ಪು ಮಾಡಿದ್ದು. ಯಾವಾಗ ವಿಷ್ಣುವರ್ಧನ್ ದಿನದಿಂದ ದಿನಕ್ಕೆ ಪ್ರವರ್ಧಮಾನಕ್ಕೆ ಬರತೊಡಗಿದರೋ ಆಗ ರಾಜ್ ಅಳಿವು ಉಳಿವಿನ (ಅವರು ಹಾಗೆಂದು ಭಾವಿಸಿದ್ದರು) ಸಂಪೂರ್ಣ ಜವಾಬ್ದಾರಿಯನ್ನು ಅಭಿಮಾನಿಗಳ ಹೆಗಲಿಗೆರಿಸಿದರು. ಮೊದಲೇ ರಾಜ್ ಅಭಿಮಾನದ ಹುಚ್ಚು ಹೊಳೆಯಲ್ಲಿ ಈಜುತ್ತಿದ್ದ ಅಭಿಮಾನಿಗಳು ಈ ಒಂದು ಜವಾಬ್ದಾರಿಯಿಂದ ಮತ್ತಷ್ಟು ಉನ್ಮತ್ತರಾದರು. ಆಗ ಪ್ರಾರಂಭವಾದವು ನೋಡಿ ಕಲ್ಲು ಎಸೆಯುವ, ಖಾರದಪುಡಿ ಎರಚುವ, ಪೋಸ್ಟರ್ ಗಳಿಗೆ ಸಗಣಿ ಬಳಿಯುವ ಅಹಿತಕರ ಘಟನೆಗಳು. ನಂತರದ ದಿನಗಳಲ್ಲಿ ರಾಜ್ ಅಭಿಮಾನಿಗಳ ಆಟಾಟೋಪಕ್ಕೆ ಪ್ರತ್ಯುತ್ತರ ನೀಡಲು ವಿಷ್ಣುವನ್ನು ಪೂಜಿಸುವ ಮತ್ತು ಆರಾಧಿಸುವ ಅಭಿಮಾನಿಗಳ ಪಡೆ ಹುಟ್ಟಿಕೊಂಡಿತು. ಇಬ್ಬರೂ ಕಲಾವಿದರ ಅಭಿಮಾನಿಗಳ ಮನಸ್ಥಿತಿ ಒಂದೇ ಆಗಿತ್ತು. ಬೆಂಗಳೂರಿನ ಬೀದಿಗಳಲ್ಲಿ ಕೈ ಕೈ ಮಿಲಾಯಿಸಿ ಹೊಡೆದಾಟಕ್ಕಿಳಿಯಲು ಅವರು ಹಿಂಜರಿಯುತ್ತಿರಲಿಲ್ಲ. ಆದರೆ ಒಂದಂತೂ ನಿಜ ಅಭಿಮಾನದ ಇಂಥ ಕೆಟ್ಟ ಸಂಪ್ರದಾಯಕ್ಕೆ ನಾಂದಿ ಹಾಡಿದ ಅಪಕೀರ್ತಿ ರಾಜ್ ಮತ್ತು ವಿಷ್ಣು ಬದುಕಿನುದ್ದಕ್ಕೂ ಕಪ್ಪು ಚುಕ್ಕೆಯಾಗಿ ಉಳಿಯಿತು. ವಿಷ್ಣು ಪ್ರವರ್ಧಮಾನದಿಂದ ರಾಜ್ ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿಯ ಪ್ರಶ್ನೆಯೇ ಇರಲಿಲ್ಲ. ಏಕೆಂದರೆ ಆ ಹೊತ್ತಿಗಾಗಲೇ ರಾಜ್ ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಅಬಾಲವೃದ್ಧರಾದಿಯಾಗಿ ಎಲ್ಲ ವಯೋಮಾನದವರು ರಾಜ್ ಅವರನ್ನು ಇಷ್ಟ ಪಡುತ್ತಿದ್ದರು. ಯಾವಾಗ ಸಂಕುಚಿತ ಮತ್ತು ವಿಕೃತ ಮನಸ್ಸುಗಳು ರಾಜ್ ಮತ್ತು ವಿಷ್ಣು ಅಭಿನಯ ಮತ್ತು ಜನಪ್ರಿಯತೆಯ ನಡುವೆ ಹೋಲಿಕೆ ಪ್ರಾರಂಭಿಸಿದರೋ ಆಗ ಕನ್ನಡ ಚಿತ್ರರಂಗದ ಅಭಿವೃದ್ಧಿ ಕುಂಠಿತಗೊಂಡಿತು.
ನಂತರ ರಾಜ್ ಮತ್ತು ವಿಷ್ಣು ಒಂದೇ ದಾರಿಯ ಪಯಣಿಗರಾದರು. ಒಬ್ಬರು ಸಾಹಸ ಸಿಂಹನಾದರೆ ಇನ್ನೊಬ್ಬರು ಕೆರಳಿದ ಸಿಂಹನಾದರು. ಒಬ್ಬರು ಸಂಪತ್ತಿಗೆ ಸವಾಲ್ ಎಂದರೆ ಇನ್ನೊಬ್ಬರು ಸಿರಿತನಕ್ಕೆ ಸವಾಲೆಸೆದರು. ನನ್ನನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಸಿನಿಮಾ ಡೈಲಾಗ್ ಇಬ್ಬರ ಬಾಯಿಯಿಂದಲೂ ಕೇಳಿ ಬಂದಿತು. ಒಬ್ಬರನ್ನೊಬರು ಹೋಲಿಕೆ ಮಾಡಿಕೊಳ್ಳುತ್ತಲೇ ಇಬ್ಬರೂ ಒಂದೇ ಪ್ರಕಾರದ ಪಾತ್ರಗಳಿಗೆ ಅಂಟಿಕೊಂಡರು. ಇಬ್ಬರ ಚಿತ್ರಗಳಲ್ಲೂ ಅಭಿಮಾನಿಗಳನ್ನು ಸಂತೋಷಪಡಿಸಲೆಂದೇ ಹಾಡು ಮತ್ತು ಸಂಭಾಷಣೆಗಳು ರಚನೆಯಾದವು. ಅವರವರದೇ ಸಹಕಲಾವಿದರ, ತಂತ್ರಜ್ಞರ, ನಿರ್ಮಾಪಕರ, ನಿರ್ದೇಶಕರ ಪ್ರತ್ಯೇಕ ಗುಂಪುಗಳು ಹುಟ್ಟಿಕೊಂಡವು. ಪೈಪೋಟಿಯಿಂದಲೇ ಚಿತ್ರಗಳು ಬಿಡುಗಡೆಯಾದವು. ಅವರಿಬ್ಬರ ಈ ಪ್ರಬಲ ಪೈಪೋಟಿಯಿಂದ ಕನ್ನಡ ಚಿತ್ರರಂಗ ಮತ್ತಷ್ಟು ಶ್ರೀಮಂತವಾಗುವ ಒಂದು ಉತ್ತಮ ಅವಕಾಶದಿಂದ ವಂಚಿತವಾಯಿತು. ಯಾವಾಗ ಈ ಇಬ್ಬರು ಜನಪ್ರಿಯ ನಟರ ನಡುವೆ ಸ್ಪರ್ಧೆ ಏರ್ಪಟ್ಟಿತೋ ಆಗ ಅವರಿಬ್ಬರ ಪಾತ್ರಗಳು ಏಕತಾನತೆಯಿಂದ ಸೊರಗತೊಡಗಿದವು ಎನ್ನುವುದು ಸತ್ಯಕ್ಕೆ ಹತ್ತಿರವಾದ ಮಾತು. ಪಾತ್ರಗಳ ಆಯ್ಕೆಯಲ್ಲಿ ಎಡವಿದ ಇವರಿಬ್ಬರೂ ನಿರ್ದೇಶಕರ ನಟರಾಗುವುದಕ್ಕಿಂತ ನಿರ್ದೇಶಕರನ್ನೇ ತಮ್ಮ ನಟನೆಗೆ ತಕ್ಕಂತೆ ರೂಪಿಸಿಕೊಂಡರು. ಈ ಕಾರಣದಿಂದಲೇ ಇರಬೇಕು ಕ್ಲಾಪ್ ಬಾಯ್ ಗಳೆಲ್ಲ ಇವರನು ನಿರ್ದೇಶಿಸಲು ಸಾಧ್ಯವಾಯಿತು.
ನೆರೆಯ ತಮಿಳು ಚಿತ್ರರಂಗದಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ನಡುವೆ ಪೈಪೋಟಿ ಇದ್ದರೂ ಅವರಿಬ್ಬರೂ ತಮ್ಮದೇ ಪ್ರತ್ಯೇಕ ಇಮೇಜ್ ರೂಪಿಸಿಕೊಂಡಿರುವರು.ಒಬ್ಬರ ಇಮೇಜ್ ಬಗ್ಗೆ ಇನ್ನೊಬ್ಬರು ತೆಲೆ ಕೆಡಿಸಿಕೊಂಡವರಲ್ಲ. ಇಂಥದ್ದೇ ಪ್ರಯತ್ನ ಕನ್ನಡ ಚಿತ್ರರಂಗದಲ್ಲಿ ರಾಜ್ ಮತ್ತು ವಿಷ್ಣು ನಡುವೆ ಸಾಧ್ಯವಾಗಲೇ ಇಲ್ಲ. ಇವರಿಬ್ಬರಲ್ಲಿ ಯಾರೊಬ್ಬರೂ ಹೊಸ ಪ್ರಯೋಗಗಳಿಗೆ ತಮ್ಮನ್ನು ಒಡ್ಡಿಕೊಳ್ಳಲೆ ಇಲ್ಲ. ಒಬ್ಬರ ಜನಪ್ರಿಯತೆ ಇನ್ನೊಬ್ಬರಿಗೆ ಅನಿಶ್ಚಿತತೆ ಮತ್ತು ಅಭದ್ರತೆಯ ಭಯ ಹುಟ್ಟಿಸಿತು. ಹೀಗಾಗಿ ಗಂಭೀರ ಮತ್ತು ಕಲಾತ್ಮಕ ಚಿತ್ರಗಳ ಸೃಜನಶೀಲ ನಿರ್ದೇಶಕರು ಈ ಇಬ್ಬರು ನಟರನ್ನು ನಿರ್ದೇಶಿಸಲು ಸಾಧ್ಯವಾಗದೆ ಹೋಯಿತು. ಕಲಾತ್ಮಕ ಮತ್ತು ಪ್ರಯೋಗಶೀಲ ಚಿತ್ರಗಳಲ್ಲಿ ಅಭಿನಯಿಸಿದರೆ ತಮ್ಮ ಇಮೇಜಿಗೆ ಧಕ್ಕೆ ಉಂಟಾಗಬಹುದೆನ್ನುವ ಭೀತಿ ಇವರಿಬ್ಬರನ್ನೂ ಕಾಡುತ್ತಿತ್ತು ಎನ್ನುವುದಕ್ಕೆ ಅವರು ಕೊನೆಯವರೆಗೂ ಮರ ಸುತ್ತುವ ಪಾತ್ರಗಳಿಗೆ ಅಂಟಿಕೊಂಡಿದ್ದೆ ಸ್ಪಷ್ಟ ನಿದರ್ಶನ. ಪೈಪೋಟಿ ಮತ್ತು ಸ್ಪರ್ಧೆಯಿಂದಾಗಿ ಗಂಭೀರ ಪಾತ್ರಗಳ ಆಯ್ಕೆಯಲ್ಲಿ ಎಡವಿದ ಪರಿಣಾಮ ರಾಷ್ಟ್ರ ಪ್ರಶಸ್ತಿಯಂಥ ಅತ್ಯುನ್ನತ ಪ್ರಶಸ್ತಿ ಇವರಿಬ್ಬರ ನಟನೆಗೆ ಮರೀಚಿಕೆಯಾಗಿಯೇ ಉಳಿಯಿತು.
ಒಂದು ವೇಳೆ ರಾಜ್ ಮತ್ತು ವಿಷ್ಣು ನಡುವೆ ಯಾವುದೇ ಸ್ಪರ್ಧೆ ಮತ್ತು ಹೋಲಿಕೆಯಂಥ ಅಸಹಜತೆ ಕಾಣಿಸಿಕೊಳ್ಳದೆ ಇದ್ದಿದ್ದರೆ ಕನ್ನಡ ಚಿತ್ರರಂಗಕ್ಕೆ ಇನ್ನಷ್ಟು ಅತ್ಯುತ್ತಮ ಚಿತ್ರಗಳು ದೊರೆಯುತ್ತಿದ್ದವು. ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲಿ ದಾಖಲಿಸಬಹುದಾದಂಥ ಪಾತ್ರಗಳು ಸೃಷ್ಟಿಯಾಗುತ್ತಿದ್ದವು. ಇಬ್ಬರೂ ಒಟ್ಟಾಗಿ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದರೆ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ನಿರ್ಮಾಣವಾಗುತ್ತಿತ್ತು. ಕನ್ನಡದ ಸಾಂಸ್ಕೃತಿಕ ಲೋಕ ಇನ್ನಷ್ಟು ಶ್ರೀಮಂತಗೊಳ್ಳುತ್ತಿತ್ತು. ಉತ್ತರಿಸಬೇಕಾದ ಅವರಿಬ್ಬರೂ ಇಂದು ನಮ್ಮೊಂದಿಗಿಲ್ಲ. ಇನ್ಯಾರೊ ಉತ್ತರಿಸಿದರೆ ಅದು ಚರ್ಚೆಯಾಗಬೇಕಾದ ಗಂಭೀರ ವಿಷಯವೊಂದನ್ನು ಮುಚ್ಚಿ ಹಾಕುವ ಪ್ರಯತ್ನವಾಗುತ್ತದೆ. ಆದರೆ ಅವರವರ ಸುತ್ತಲಿನ ಸಮಯ ಸಾಧಕರ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಕನ್ನಡ ಚಿತ್ರರಂಗದ ಈ ಇಬ್ಬರು ಮೇರು ಕಲಾವಿದರ ಪ್ರತಿಭೆ ಪೂರ್ಣವಾಗಿ ಬಳಕೆಯಾಗಲೇ ಇಲ್ಲ ಎನ್ನುವ ಕೊರಗು ಒಂದು ವರ್ಗದ ಕನ್ನಡ ಪ್ರೇಕ್ಷಕರನ್ನು ಸದಾ ಕಾಲ ಕಾಡುತ್ತಲೇ ಇರುತ್ತದೆ.
-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ

No comments:
Post a Comment