ಈ ದಿನ ಅಂದರೆ ಸೆಪ್ಟೆಂಬರ್ 15 ದೇಶ ಕಂಡ ಅಪ್ರತಿಮ ಪ್ರತಿಭೆ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನ. ನೂರು ವರ್ಷಗಳ ಸಾರ್ಥಕ ಬದುಕು ಬಾಳಿದ ಸರ್.ಎಂ.ವಿಶ್ವೇಶ್ವರಯ್ಯನವರು ರಾಷ್ಟ್ರಕ್ಕೆ ನೀಡಿದ ಕೊಡುಗೆ ಅನನ್ಯ. ದಕ್ಷ ಆಡಳಿತಗಾರರಾಗಿ, ಇಂಜಿನಿಯರ್ ರಾಗಿ, ಹಲವು ರಾಜ್ಯಗಳ ಸಲಹೆಗಾರರಾಗಿ, ಎಂವಿ ಅವರು ನಿರ್ವಹಿಸಿದ ಪಾತ್ರಗಳು ಅನೇಕ. ಮೂಸಿ ಜಲಾಶಯ, ಕೃಷ್ಣರಾಜ ಸಾಗರ, ಮೈಸೂರು ವಿಶ್ವವಿದ್ಯಾಲಯ, ಭದ್ರಾವತಿಯ ಉಕ್ಕಿನ ಕಾರ್ಖಾನೆ, ಶ್ರೀ ಜಯಚಾಮ ರಾಜೇಂದ್ರ ಔದ್ಯೋಗಿಕ ವಿದ್ಯಾಸಂಸ್ಥೆ, ಸುಕ್ಕೂರು ಬ್ಯಾರೆಜು, ಗ್ರಾಮೀಣ ಕೈಗಾರೀಕರಣ ಯೋಜನೆ, ದಿ ಹಿಂದುಸ್ತಾನ್ ವಿಮಾನ ಕಾರ್ಖಾನೆ ಇತ್ಯಾದಿ ಯೋಜನೆಗಳು ವಿಶ್ವೇಶ್ವರಯ್ಯ ನವರ ಪ್ರತಿಭೆ ಮತ್ತು ಪರಿಶ್ರಮಕ್ಕೆ ಕೆಲವು ಉದಾಹರಣೆಗಳು. ಕೃಷಿ, ಕೈಗಾರಿಕೆ ಮತ್ತು ಶೈಕ್ಷಣಿಕ ಅಭಿವೃದ್ಧಿಯಿಂದ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎನ್ನುವ ಸೈದ್ದಾಂತಿಕ ನಿಲುವು ಅವರದಾಗಿತ್ತು. ಅವರ ದೂರದರ್ಶಿತ್ವ ಮತ್ತು ಕೃರ್ತತ್ವ ಶಕ್ತಿಯ ಪರಿಣಾಮ ವಿಶೇಷವಾಗಿ ಕರ್ನಾಟಕ ರಾಜ್ಯ ಕೃಷಿ ಮತ್ತು ಕೈಗಾರಿಕೆಯಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿದೆ. ಸರಳತೆ, ಸನ್ನಡತೆ ಮತ್ತು ಪ್ರಾಮಾಣಿಕತೆಯನ್ನು ತಮ್ಮ ವೈಯಕ್ತಿಕ ಬದುಕು ಮತ್ತು ವೃತ್ತಿ ಬದುಕುಗಳೆರಡರಲ್ಲೂ ಒಂದು ವ್ರತದಂತೆ ಪಾಲಿಸಿಕೊಂಡು ಬಂದರು. ಅವರ ಬದುಕಿನ ಪ್ರಾಮಾಣಿಕತೆಗೊಂದು ನಿದರ್ಶನ ಹೀಗಿದೆ, ಒಮ್ಮೆ ಮೈಸೂರಿನ ಮಾಹಾರಾಜರು ವಿಶ್ವೇಶ್ವರಯ್ಯನವರನ್ನು ಕರೆದು 'ನಿಮ್ಮನ್ನು ಮೈಸೂರಿನ ದಿವಾನರನ್ನಾಗಿ ಮಾಡ ಬೇಕೆಂದಿದ್ದೇನೆ ಒಪ್ಪಿಕೊಳ್ಳಬೇಕು' ಎಂದರು. ವಿಶ್ವೇಶ್ವರಯ್ಯನವರ ಜಾಗದಲ್ಲಿ ಬೇರೆ ಯಾರೇ ಇದ್ದರೂ ತಕ್ಷಣವೇ ಒಪ್ಪಿಕೊಂಡು ಬಿಡುತ್ತಿದ್ದರು. ಆದರೆ ವಿಶ್ವೇಶ್ವರಯ್ಯನವರು 'ನನಗೆ ಯೋಚಿಸಲು ಸ್ವಲ್ಪ ಸಮಯ ಬೇಕು. ನಾನು ನನ್ನ ತಾಯಿಯ ಜೊತೆ ಈ ವಿಷಯ ಚರ್ಚಿಸಬೇಕು ಅನಂತರ ನಾನು ನನ್ನ ನಿರ್ಧಾರವನ್ನು ಕುರಿತು ತಿಳಿಸುವೇನು' ಎಂದರು. ಅವರ ಮಾತಿಗೆ ಮಾಹಾರಾಜರು ಸಮ್ಮತಿಸಿದರು. ವಿಶ್ವೇಶ್ವರಯ್ಯನವರು ಮನೆಗೆ ಬಂದು ಮಾಹಾರಾಜರೊಂದಿಗೆ ನಡೆದ ಮಾತುಕತೆಯನ್ನು ತಾಯಿಗೆ ವಿವರಿಸಿದರು. ಅದಕ್ಕೆ ಅವರ ತಾಯಿ 'ನನ್ನ ಒಪ್ಪಿಗೆ ಪಡೆದು ನಿನ್ನ ಅಭಿಪ್ರಾಯ ತಿಳಿಸುತ್ತೇನೆಂದು ಏಕೆ ಹೇಳಿದೆ' ಎಂದು ಕೇಳಿದರು. ಆಗ ವಿಶ್ವೇಶ್ವರಯ್ಯನವರು ಮಾರ್ಮಿಕವಾಗಿ ನುಡಿದರು 'ನಾನು ದಿವಾನನಾದ ಅವಧಿಯಲ್ಲಿ ರಾಜ್ಯದ ಕೆಲಸವನ್ನು ಮಾತ್ರ ಮಾಡುತ್ತೇನೆ ಹೊರತು ಬೇರೆಯವರ ವೈಯಕ್ತಿಕ ಕೆಲಸಗಳನ್ನು ಮಾಡಲಾರೆನು. ಬೇರೆಯವರಾದರೆ ನಾನು ನೇರವಾಗಿ ಹೇಳಬಲ್ಲೆ. ಆದರೆ ಹಾಗೆ ಖಡಾಖಡಿಯಾಗಿ ನಿನಗೆ ಹೇಳಲು ಆಗುವುದಿಲ್ಲ. ಆದ್ದರಿಂದ ನೀನು ನನಗೆ ಮಾತು ಕೊಡಬೇಕು. ನಿನ್ನ ಬಂಧುಗಳ, ಪರಿಚಿತರ, ಊರಿನವರ ಕೆಲಸ ತರಬಾರದು. ನಿನಗೆ ಬೇಕಾದವರಿಗೆ, ಹತ್ತಿರದವರಿಗೆ, ಬಂಧುಗಳಿಗೆ, ಕುಲಬಾಂಧವರಿಗೆ ನೌಕರಿ, ಬಡ್ತಿ ಮತ್ತಿತರ ಸಹಾಯ ಮಾಡೆಂದು ನೀನು ನನಗೆ ಒತ್ತಾಯಿಸಬಾರದು. ನೀನು ನನ್ನ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲವೆಂದು ಭಾಷೆ ಕೊಟ್ಟರೆ ನಾನು ದಿವಾನನಾಗಲು ಸಮ್ಮತಿಸುತ್ತೇನೆ'. ರಾಜ್ಯದ, ರಾಷ್ಟ್ರದ ಹಿತಾಸಕ್ತಿ ಮರೆತು ವೈಯಕ್ತಿಕ ಹಿತಾಸಕ್ತಿಗೆ ಮಹತ್ವ ನೀಡುವ ನಮ್ಮ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು ಸರ್.ಎಂ.ವಿಶ್ವೇಶ್ವರಯ್ಯನವರಿಂದ ಕಲಿಯುವುದು ಬಹಳಷ್ಟಿದೆ.
ಹೀಗೆ ವಿಶ್ವೇಶ್ವರಯ್ಯನವರ ಕುರಿತು ಯೋಚಿಸಲು ಈ ದಿನ ಅವರ ಜನ್ಮದಿನ ಕಾರಣ ಎನ್ನುವುದರ ಜೊತೆಗೆ ನಿನ್ನೆ ನಾನು ಪುಸ್ತಕವೊಂದನ್ನು ಖರೀದಿಸಿದೆ. ಆ ಪುಸ್ತಕದ ಹೆಸರು 'ನನ್ನ ವೃತ್ತಿ ಜೀವನದ ನೆನಪುಗಳು' ಎಂದು. ಇದು ಸರ್.ಎಂ.ವಿಶ್ವೇಶ್ವರಯ್ಯನವರು ಬರೆದಿರುವ 'Memoirs of My Working Life' (Memories) ಎನ್ನುವ ಮೂಲ ಕೃತಿಯ ಅನುವಾದಿತ ಪುಸ್ತಕ. ಡಾ.ಗಜಾನನ ಶರ್ಮ ಅವರು ಅನುವಾದಿಸಿರುವ ಈ ಪುಸ್ತಕವನ್ನು ಅಂಕಿತ ಪ್ರಕಾಶನದವರು ಪ್ರಕಟಿಸಿರುವರು. ಪುಸ್ತಕದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು ತಮ್ಮ ವೃತ್ತಿ ಬದುಕಿನಲ್ಲಿನ ಅವಿಸ್ಮರಣೀಯ ಅನುಭವಗಳನ್ನು ಕುರಿತು ಮಾತನಾಡಿರುವರು. ವಿಶೇಷವಾಗಿ ಅಲ್ಲಿ ಉತ್ಪ್ರೇಕ್ಷೆಗಳಿಲ್ಲ. ಅತ್ಯಂತ ಸರಳವಾಗಿ ಅವರು ತಮ್ಮ ಅನುಭವಗಳನ್ನು ದಾಖಲಿಸಿರುವರು. ಡಾ.ಗಜಾನನ ಶರ್ಮಾ ಅವರು ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ ಒಂದು ಒಳ್ಳೆಯ ಕೆಲಸ ಮಾಡಿರುವರು.
ಪುಸ್ತಕ ಓದಿದ ನಂತರ ನನ್ನನ್ನು ವಿಶೇಷವಾಗಿ ಆಕರ್ಷಿಸಿದ್ದು ರಾಷ್ಟ್ರ ನಿರ್ಮಾಣದ ಕುರಿತು ಸರ್.ಎಂ.ವಿಶ್ವೇಶ್ವರಯ್ಯನವರು ಆಡಿದ ಮಾತುಗಳು ಮತ್ತು ಅವರ ವಿಚಾರ ಧಾರೆ. ಆ ವಿಚಾರಧಾರೆಗಳನ್ನು ಅವರ ಮಾತುಗಳಲ್ಲೇ ಕೇಳಿ 'ಪ್ರಬಲ ರಾಷ್ಟ್ರವೊಂದನ್ನು ಕಟ್ಟಲು ಪ್ರಬುದ್ಧ ವ್ಯಕ್ತಿತ್ವವುಳ್ಳ ಪ್ರಜಾವರ್ಗವನ್ನು ರೂಪಿಸಬೇಕು. ಯಶಸ್ವೀ ರಾಷ್ಟ್ರವೊಂದರ ಬಹುತೇಕ ಪ್ರಜೆಗಳು ದಕ್ಷರೂ, ಗುಣಸಂಪನ್ನರೂ, ಕರ್ತವ್ಯ ನಿಷ್ಟರೂ ಆಗಿರುತ್ತಾರೆ. ಯಾವ ವ್ಯಕ್ತಿಯು ಇತರರ ನಂಬಿಕೆಗೆ ಪಾತ್ರನಾಗಲು ಬಯಸುತ್ತಾನೋ ಆತ ಸ್ವಯಂ ಸನ್ನಡತೆಯನ್ನು ರೂಡಿಸಿಕೊಳ್ಳಬೇಕು. ನಾವು ತಿಳಿದಿರುವಂತೆ ವ್ಯವಹಾರದ ಅಡಿಪಾಯವೇ ದೃಢ ವಿಶ್ವಾಸ. ವಿಶ್ವಾಸಕ್ಕೆ ಭರವಸೆಯ ಭದ್ರತೆ ಬೇಕು. ಭರವಸೆ ಹುಟ್ಟುವುದು ವ್ಯಕ್ತಿತ್ವದಲ್ಲಿ ಒಡಮೂಡಿರುವ ಸದ್ಗುಣಗಳಿಂದ. ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತದ ಬಹುಪಾಲು ಜನಸಮುದಾಯ ಅನಕ್ಷರಸ್ತರು ಮತ್ತು ಅಶಿಸ್ತಿನಿಂದ ಕೂಡಿದವರು. ಬಹುತೇಕ ಪ್ರಜೆಗಳು ಮೂಢ ನಂಬಿಕೆ ಮತ್ತು ಅಜ್ಞಾನದಿಂದ ಬಳಲುತ್ತಿದ್ದು ಆಲಸಿಗಳು ಮತ್ತು ಉದಾಸೀನರಾಗಿದ್ದಾರೆ. ಭಾರತವು ದಕ್ಷ ರಾಷ್ಟ್ರವಾಗಿ ಪ್ರಬಲವಾಗಿ ಪ್ರವರ್ಧಮಾನಕ್ಕೆ ಬರುವ ಮಾರ್ಗವನ್ನು ಕುರಿತು ವಿದೇಶಗಳು ಉಪದೇಶ ನೀಡುತ್ತವೆ ಎಂದು ನಾವು ನಿರೀಕ್ಷಿಸಬಾರದು. ಈ ಜವಾಬ್ದಾರಿಯನ್ನು ನಮ್ಮ ಜನನಾಯಕರು ಮತ್ತು ಸರ್ಕಾರವೇ ಹೊತ್ತು ಕೊಳ್ಳಬೇಕು. ಸರ್ಕಾರ ಮತ್ತು ಸಾರ್ವಜನಿಕ ಕ್ಷೇತ್ರದ ಮುಖಂಡರು ದೇಶದ ಜನತೆಯಲ್ಲಿ ರಾಷ್ಟ್ರೀಯತೆ, ಪ್ರಗತಿಶೀಲ ಮನೋಭಾವ ಮತ್ತು ದಕ್ಷ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾದ ಗುಣ ನಡತೆಗಳನ್ನು ಹುಟ್ಟುಹಾಕುವ ಹೊಣೆಗಾರಿಕೆಯನ್ನು ಹೊರಬೇಕು'.
ಅವರು ಮುಂದುವರಿದು ಹೀಗೆ ಹೇಳುತ್ತಾರೆ 'ಭಾರತೀಯ ಪ್ರಜೆಗಳಿಗೆ ಸಚ್ಚಾರಿತ್ರ್ಯವನ್ನು ಬದುಕಿನಲ್ಲಿ ಅಳವಡಿಸಿ ಕೊಳ್ಳಲು ಕೆಲವೊಂದು ನಿಯಮಗಳನ್ನು ಸಂಕ್ಷಿಪ್ತವಾಗಿ ನಿಡಬಯಸುತ್ತೇನೆ.
1. ಪರಿಶ್ರಮ ಪೂರ್ಣ ಕೆಲಸ: ಸಾಧಾರಣವಾಗಿ ಭಾರತೀಯರು ಯಾವುದೇ ವಿಷಯವನ್ನು ಹಗುರವಾಗಿ ತೆಗೆದುಕೊಳ್ಳುವ ಸ್ವಭಾವದವರು. ಅವರು ಯಾವುದೇ ಕೆಲಸಕ್ಕೆ ಹೂಡುವ ಶ್ರಮ, ಪ್ರಮಾಣ ಮತ್ತು ಪ್ರಯತ್ನ ಅತ್ಯಲ್ಪ. ಇದರ ಪರಿಣಾಮವಾಗಿ ಇಡೀ ದೇಶದ ದಕ್ಷತೆ ಮತ್ತು ಆರ್ಥಿಕ ಸಮೃದ್ಧಿ ಅತ್ಯಂತ ಕೆಳಮಟ್ಟದಲ್ಲಿವೆ.
2. ಯೋಜಿತ ಶಿಸ್ತುಬದ್ಧ ಕೆಲಸ: ಪ್ರತಿದಿನವೂ ನಿಗದಿಗೊಳಿಸಲ್ಪಟ್ಟ ಅವಧಿಯಲ್ಲಿ ನಿಯಮಿತವಾಗಿ, ಶಿಸ್ತುಬದ್ಧವಾಗಿ ಕೆಲಸವನ್ನು ಮಾಡುತ್ತಾ ಹೋದರೆ ಪ್ರಯತ್ನಕ್ಕೆ ಹೆಚ್ಚು ಮೌಲ್ಯ ದೊರೆಯುವುದು. ಶಿಸ್ತುಬದ್ಧವಾಗಿ ಶ್ರಮವಹಿಸಿ ಕೆಲಸ ಮಾಡುವುದರಿಂದ ಶ್ರಮಿಕನ ಆರೋಗ್ಯ ಮತ್ತು ಆಯುಷ್ಯ ಎರಡೂ ವೃದ್ಧಿಯಾಗುವುದು.
3. ದಕ್ಷತೆ: ಉನ್ನತ ಮಟ್ಟದ ಕಾರ್ಯತತ್ಪರತೆ, ಕಾಲನಿಷ್ಟ ಕಾರ್ಯವೈಖರಿ, ಶಿಸ್ತುಬದ್ಧತೆ, ಉನ್ನತ ಧ್ಯೇಯೋದ್ದೇಶ, ಉನ್ನತ ಗುಣಮಟ್ಟದಲ್ಲಿ ಕಾರ್ಯನಿರ್ವಹಿಸುವ ತವಕ ಮುಂತಾದ ಗುಣಗಳನ್ನು ಪಡೆದಿರುವುದು ದಕ್ಷತೆಯ ಲಕ್ಷಣ. ಸಾಧಾರಣವಾಗಿ ಕೆಲಸದ ಗುಣಮಟ್ಟ ಅಧಿಕವಾಗಿದ್ದರೆ ಅದರ ಫಲಿತಾಂಶವೂ ಅಧಿಕವಾಗಿರುತ್ತದೆ.
4. ಸೇವೆ ಮತ್ತು ಸೌಜನ್ಯ: ಪ್ರತಿ ಪ್ರಜೆಯು ತನ್ನ ಸಹೋದ್ಯೋಗಿಯೊಡನೆ, ತನ್ನ ನೆರೆಹೊರೆಯವರೊಂದಿಗೆ ನಡೆಸುವ ವರ್ತನೆ ಸೌಹಾರ್ದತೆ ಮತ್ತು ಸೌಜನ್ಯದೊಂದಿಗೆ ಕೂಡಿರಬೇಕು.
ಯಶಸ್ವಿಯಾಗಲು ಇಚ್ಚಿಸುವ ಪ್ರತಿಯೊಬ್ಬ ಪ್ರಜೆಯೂ ಮೇಲ್ಕಂಡ ನಾಲ್ಕು ನಿಯಮಗಳನ್ನು ಪಟ್ಟು ಹಿಡಿದು ಕೃತಿಗಿಳಿಸಬೇಕು'.
ಇನ್ನೊಂದೆಡೆ ನೈತಿಕ ಬದುಕನ್ನು ಕುರಿತು ಅವರು ಹೀಗೆ ವ್ಯಾಖ್ಯಾನಿಸುತ್ತಾರೆ 'ಯಾವುದೇ ವೃತ್ತಿ-ವ್ಯವಹಾರಗಳಲ್ಲಿ ಯಶಸ್ಸು ವ್ಯಕ್ತಿಯ ಸಾಮರ್ಥ್ಯ, ವ್ಯಕ್ತಿತ್ವ, ಪ್ರಾಮಾಣಿಕತೆ ಮತ್ತು ಮುಂದಾಲೋಚನೆ ಮುಂತಾದವುಗಳನ್ನು ಆಧರಿಸಿ ಲಭಿಸುತ್ತದೆ. ಮನುಷ್ಯರ ಬದುಕಿನ ಯಶಸ್ಸಿಗೆ ಅವರ ಪರಿಶ್ರಮವೇ ಆಧಾರ. ಬಹಳಷ್ಟು ಬದುಕೆಂಬ ಹಡಗುಗಳು ಅಪಘಾತಕ್ಕಿಡಾಗುವುದು ಆಕಸ್ಮಿಕಗಳಿಂದಲ್ಲ. ಅವು ನಾಶವಾಗುವುದು ಜನ ಸಂಕಷ್ಟಗಳನ್ನು ಎದುರಿಸಲಿಚ್ಚಿಸದೆ ಕೇವಲ ಸಂತೋಷದ ಬೆನ್ನು ಹತ್ತುವುದರಿಂದ ಮಾತ್ರ. ಯಾವ ಮನುಷ್ಯನ ಬದುಕಿನ ಸಿದ್ಧಾಂತವು ನೋವನ್ನು ತಪ್ಪಿಸಿಕೊಂಡು ಕೇವಲ ಸಂತೋಷವನ್ನು ಅನುಭವಿಸುವುದಾಗಿದೆಯೋ ಆತ ಅಪಯಶಸ್ಸು ಗಳಿಸುವುದು ಶತಸ್ಸಿದ್ದ. ಸುಖ ದು:ಖಗಳೆರಡನ್ನು ಸಮನಾಗಿ ಸ್ವೀಕರಿಸುವುದು ಬದುಕಿನ ನಿತ್ಯ ನಿರಂತರ ಯಶಸ್ಸಿನ ಸಿದ್ದ ಸೂತ್ರ. ನೀತಿಯುತ ವರ್ತನೆಯೇ ಘನತೆವೆತ್ತ ಬದುಕಿನ ಹೆಗ್ಗುರುತು. ನೈತಿಕ ಸಾಧನೆಯೇ ಶ್ರೇಷ್ಠ ವ್ಯಕ್ತಿಯ ಬದುಕಿನ ಔನ್ನತ್ಯ'.
ಇಂಥ ಉನ್ನತ ವಿಚಾರಗಳನ್ನು ಕೇವಲ ಉಪದೇಶಿಸದೆ ಅದರಂತೆ ಬದುಕಿ ತೋರಿಸಿದ ಹಿರಿದಾದ ವ್ಯಕ್ತಿತ್ವ ಸರ್.ಎಂ.ವಿಶ್ವೇಶ್ವರಯ್ಯನವರದು. ಅದಕ್ಕೆಂದೇ ಅವರು ಇಂದಿಗೂ ಪ್ರಾತ:ಸ್ಮರಣಿಯರು. ಅವರ ಜನ್ಮದಿನವಾದ ಈ ದಿನವಾದರೂ ಅವರನ್ನು ಸ್ಮರಿಸುತ್ತ ಅವರು ನಡೆದ ದಾರಿಯಲ್ಲಿ ಒಂದೆರಡು ಹೆಜ್ಜೆಗಳನ್ನಾದರೂ ನಡೆಯಲು ಪ್ರಯತ್ನಿಸೋಣ. ಇದೇ ನಾವುಗಳು ಆ ಅಪ್ರತಿಮ ಪ್ರತಿಭೆಯ ಕಾಯಕ ಯೋಗಿಗೆ ಸಲ್ಲಿಸುವ ನಮನಗಳು.
-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ

No comments:
Post a Comment