Monday, August 13, 2012

ಸ್ವತಂತ್ರ ಭಾರತದಲ್ಲಿ ನಾವು: ಮೂರು ಪ್ರಶ್ನೆಗಳೊಂದಿಗೆ ಮುಖಾಮುಖಿ

       ಭಾರತಕ್ಕೆ ಸ್ವಾತಂತ್ರ್ಯ ದೊರೆತು ಆರು ದಶಕಗಳು ಕಳೆದು ಹೋದವು. ಈ ಆರು ದಶಕಗಳ ಅವಧಿಯಲ್ಲಿ ಆದ ಪ್ರಗತಿಗಿಂತ ದೇಶವನ್ನು ಕಾಡಿದ ಸಮಸ್ಯೆಗಳೇ ಅನೇಕ. ಭೃಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗ, ಜನಸಂಖ್ಯೆ ಹೆಚ್ಚಳ,ಗ್ರಾಮ ಜೀವನದ ಅವನತಿ ಹೀಗೆ ಹಲವಾರು ಸಮಸ್ಯೆಗಳು ದೇಶದ ಪ್ರಗತಿಗೆ ಮಾರಕಗಳಾಗಿ ಪರಿಣಮಿಸಿವೆ. ಸ್ವಾತಂತ್ರ್ಯದ ನಂತರದ ದಿನಗಳಿಗಿಂತ ಸ್ವಾತಂತ್ರ್ಯ ಪೂರ್ವ ಭಾರತದಲ್ಲೇ ಬದುಕು ಸಮೃದ್ಧವಾಗಿತ್ತೆಂದು ಅಲ್ಲಲ್ಲಿ ಮಾತುಗಳು ಕೇಳಿ ಬರುತ್ತಿವೆ. ಈ ಸಮಸ್ಯೆಗಳಿಗೆ ಕಾರಣವಾದ ಒಂದೆರಡು ಪ್ರಶ್ನೆಗಳನ್ನುಎದುರಿಗಿಟ್ಟುಕೊಂಡು ಲೇಖನ ಸಿದ್ಧಪಡಿಸಿದ್ದೇನೆ.

    ಸ್ವತಂತ್ರ ಭಾರತದಲ್ಲಿ ಗಾಂಧೀಜಿ ವಿಚಾರಧಾರೆ ಎಷ್ಟು ಪ್ರಸ್ತುತ.

       ಗಾಂಧಿ ನಮ್ಮ ನಡುವಿನ ಸತ್ಯ. ಅಂಥದ್ದೊಂದು ಸತ್ಯಕ್ಕೆ ನಮ್ಮನ್ನು ನಾವು ಒಪ್ಪಿಕೊಳ್ಳುವಂತಹ ಪ್ರಕ್ರಿಯೆಗೆ ಮೊದಲು ಚಾಲನೆ ದೊರೆಯಬೇಕು. ಇಲ್ಲಿ ಗಾಂಧೀಜಿ ಅವರ ವಿಚಾರ ಧಾರೆಗಳು ಎನ್ನುವುದಕ್ಕಿಂತ ಮೂಲತ: ಗಾಂಧಿ ಅವರನ್ನೇ ಅಪ್ರಸ್ತುತಗೊಳಿಸುವ ಹುನ್ನಾರ ಅತ್ಯಂತ ವ್ಯವಸ್ತಿತವಾಗಿ ನಡೆದುಕೊಂಡು ಬರುತ್ತಿದೆ. ಗಾಂಧೀಜಿ ಹತ್ಯೆಯಾದ ದಿನದ ನಂತರದ ದಿನಗಳಿಂದ ಇಂಥದ್ದೊಂದು ಪ್ರಯತ್ನ ಅವ್ಯಾಹತವಾಗಿ ಮುಂದುವರಿದುಕೊಂಡು  ಬಂದಿದೆ. ಇತ್ತೀಚಿನ ದಿನಗಳಲ್ಲಿ ಗಾಂಧೀಜಿ ಅವರನ್ನು ಮಾಧ್ಯಮಗಳು ಚಿತ್ರಿಸುತ್ತಿರುವ ರೀತಿಯೇ ಅತ್ಯಂತ ಬೇಸರದ ಸಂಗತಿ. ಗಾಂಧೀಜಿ ಗತಿಸಿದ ಎಷ್ಟೋ ದಶಕಗಳ ನಂತರ ಅವರ ಲಂಪಟ ಮಗನ ಕುರಿತು ಈ ಜನ ಪುಸ್ತಕ ಬರೆಯುತ್ತಾರೆ, ಸಿನಿಮಾ ಮಾಡುತ್ತಾರೆ. ಒಬ್ಬ ಲೇಖಕ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಗಾಂಧಿಜಿ ಬದುಕಿನಲ್ಲಿ ಪ್ರೇಮ ಪ್ರಕರಣವೊಂದು ನಡೆಯಿತೆಂದು ಹೇಳಿ ಅಚ್ಚರಿ ಮೂಡಿಸುತ್ತಾನೆ. ಒಂದರ್ಥದಲ್ಲಿ ಗಾಂಧೀಜಿ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ವ್ಯವಸ್ಥಿತ ಹುನ್ನಾರವಿದು. 'ಭಾರತದ ನೆಲದಲ್ಲಿ ಗಾಂಧೀಜಿ ಅವರಂಥ ಸಂತನೊಬ್ಬ ನಡೆದಾಡಿದ್ದ ಎನ್ನುವುದನ್ನು ನಮ್ಮ ಮುಂದಿನ ಪೀಳಿಗೆ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ' ಎಂದ ವಿಜ್ಞಾನಿ ಅಲ್ಬರ್ಟ್ ಐನ್ ಸ್ಟೀನ್ ಮಾತನ್ನು ಅರ್ಥ ಮಾಡಿಕೊಳ್ಳದಷ್ಟು ಬಹುದೂರ ನಾವುಗಳೆಲ್ಲ ಸಾಗಿ ಬಂದಿದ್ದೇವೆ.
       ಇನ್ನು ಗಾಂಧೀಜಿ ಅವರ ವಿಚಾರ ಧಾರೆಗಳ ಕುರಿತು ಹೇಳುವುದಾದರೆ ಸಪ್ತ ಸಾಮಾಜಿಕ ಪಾಪಗಳು, ಗುಡಿ ಕೈಗಾರಿಕೆಗಳು, ಗ್ರಾಮ ಸ್ವರಾಜ್ಯ, ಶೌಚಾಲಯಗಳ ನಿರ್ಮಾಣ ಹೀಗೆ ಗಾಂಧೀಜಿ ಅವರ ಅನೇಕ ಸಮಾಜಮುಖಿ ವಿಚಾರಗಳು ಕಾರ್ಯರೂಪಕ್ಕೆ ಬಂದಲ್ಲಿ ಭ್ರಷ್ಟಾಚಾರ ಮುಕ್ತ ಭಾರತದ ನಿರ್ಮಾಣ ಸಾಧ್ಯ. ಆದರೆ ಈ ದಿನಗಳಲ್ಲಿ ಅವರ ವಿಚಾರಧಾರೆಗಳನ್ನು ಅಪ್ರಸ್ತುತಗೊಳಿಸಲಾಗುತ್ತಿದೆ. ಗುಡಿಕೈಗಾರಿಕೆಯನ್ನೇ ತೆಗೆದುಕೊಳ್ಳಿ ನನ್ನೂರಿನ ಮಾಚಪ್ಪ ಈ ಗುಡಿ ಕೈಗಾರಿಕೆಯಿಂದ ಒಂದು ಸಮೃದ್ಧ ಬದುಕನ್ನೇ ಕಟ್ಟಿಕೊಂಡ. ಚಪ್ಪಲಿ ಮಾಡುವ ವೃತ್ತಿಯಿಂದಲೇ ತನ್ನ ಮಕ್ಕಳಿಗೆಲ್ಲ ಶಿಕ್ಷಣ ಕೊಡಿಸಿದ. ಬದುಕು ನೀಡಿದ ಕಸುಬು ತನ್ನೊಂದಿಗೆ ಕೊನೆಯಾಗಬಾರದೆಂದು ಸಣ್ಣ ಮಗ ಮಾರನನ್ನು ಅದೇ ವೃತ್ತಿಯಲ್ಲಿ ಮುಂದುವರೆಸಿದ. ಒಂದು ಕಾಲದಲ್ಲಿ ಮಾಚಪ್ಪನಿಗೆ ಬದುಕು ಕಟ್ಟಿಕೊಟ್ಟ ವೃತ್ತಿ ಇಂದು ಮಾರನನ್ನು ನಿರುದ್ಯೋಗಿಯಾಗಿಸಿದೆ. ಇದಕ್ಕೆಲ್ಲ ಕಾರಣ ಜಾಗತೀಕರಣದ ಪ್ರಭಾವ. ಚೀನಾ ದೇಶದ ಬೂಟು ಚಪ್ಪಲಿಗಳೆಲ್ಲ ನಮ್ಮ ಪಾದಗಳಿಗೆ ಅಲಂಕಾರಿಕ ವಸ್ತುಗಳಾಗುತ್ತಿರುವಾಗ ಮಾರಪ್ಪನ ಚಪ್ಪಲಿಗಳಿಗೆ ಮಾರುಕಟ್ಟೆಯಲ್ಲಿ ಜಾಗವೇ ಸಿಗುತ್ತಿಲ್ಲ. ಜಾಗತೀಕರಣದ ಪರಿಣಾಮ ಭಾರತ ವಿದೇಶಿ ಉತ್ಪಾದನೆಗಳಿಗೆ ಮಾರುಕಟ್ಟೆಯಾಗುತ್ತಿದೆ. ಇದರ ನೇರ ಪರಿಣಾಮ ಉಂಟಾಗುತ್ತಿರುವುದು ಗುಡಿ ಕೈಗಾರಿಕೆಗಳ ಮೇಲೆ. ಒಂದು ಕಾಲದಲ್ಲಿ ಇಡೀ ರಾಜ್ಯಕ್ಕೆ ಸೀರೆಗಳನ್ನು ಪೂರೈಸಿದ ಇಳಕಲ್ಲಿನ ನೇಕಾರರ ಸ್ಥಿತಿ  ಇವತ್ತು ಏನಾಗಿದೆ. ಇಂಥದ್ದೊಂದು ಅಪಾಯ ಎದುರಾಗಬಹುದೆಂದು ಗಾಂಧೀಜಿ ಅನೇಕ ದಶಕಗಳ ಹಿಂದೆಯೇ ಗುಡಿ ಕೈಗಾರಿಕೆಗಳ ಅಭಿವೃದ್ಧಿಗೆ ಕರೆ ನೀಡಿದ್ದರು. ಜಾಗತಿಕರಣದಿಂದ ಲಕ್ಷ ಲಕ್ಷ ರೂಪಾಯಿಗಳ ಸಂಬಳ ಪಡೆಯುತ್ತಿರುವವರು ಯಾರು. ಅಂಥದ್ದೊಂದು ದೊಡ್ಡ ಮೊತ್ತದ ಸಂಬಳ ಗುಡಿ ಕೈಗಾರಿಕೆಯನ್ನೇ ನಂಬಿ ಬದುಕುತ್ತಿರುವ ಮಾರಪ್ಪನಿಗೆ ದೊರೆಯುತ್ತಿದೆಯೇ. ವ್ಯವಸ್ಥೆಯೊಂದರ ಅನಾವರಣದಿಂದ ಸಮಾಜದ ಕಟ್ಟ ಕಡೆಯ ಮನುಷ್ಯನಿಗೂ ಪ್ರಯೋಜನವಾಗಬೇಕು.
      ಗ್ರಾಮ ಸ್ವರಾಜ್ಯ ಗಾಂಧೀಜಿ ಅವರ ಚಿಂತನೆಯಾಗಿತ್ತು.  ಕೃಷಿ  ಪ್ರಧಾನವಾದ  ಭಾರತದಲ್ಲಿ ಕೃಷಿಗೆ ಪ್ರಾಮುಖ್ಯತೆ ದೊರೆಯಬೇಕೆನ್ನುವುದು ಅವರ ಕಳಕಳಿಯಾಗಿತ್ತು. ಸ್ವಚ್ಚತೆ ಅಥವಾ ಶೌಚಾಲಯಗಳ ನಿರ್ಮಾಣ ಗಾಂಧೀಜಿ ಅವರು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಮತ್ತೊಂದು ಮೂಲಭೂತ ಅವಶ್ಯಕತೆ. ಈ ದಿನಗಳಲ್ಲಿ ಗ್ರಾಮ ಸ್ವರಾಜ್ಯ, ಗುಡಿ ಕೈಗಾರಿಕೆ, ಆರೋಗ್ಯ, ಕೃಷಿ ಭಾರತದ ಮೂಲಭೂತ ಅವಶ್ಯಕತೆಗಳಾಗಿ ಪರಿಣಮಿಸಿವೆ. ಗಾಂಧೀಜಿ ಹಲವು ದಶಕಗಳ ಹಿಂದೆಯೇ ಹೇಳಿದ ಈ ವಿಷಯಗಳ ಕುರಿತು ನಾವು ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿದ್ದರೆ ಇವತ್ತು ಆಹಾರ ಕೊರತೆ, ನಿರುದ್ಯೋಗ, ಅನಾರೋಗ್ಯದಂಥ ಸಮಸ್ಯೆಗಳು ನಮ್ಮನ್ನು ಕಾಡುತ್ತಿರಲಿಲ್ಲ. ಈ ಕಾರಣದಿಂದಲೇ ಗಾಂಧೀಜಿ ಮತ್ತು ಅವರ ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗುತ್ತವೆ.

ಭಯೋತ್ಪಾದನೆ ಭಾರತವನ್ನು ಕಾಡುತ್ತಿರುವ ಬಹುಮುಖ್ಯ ಸಮಸ್ಯೆಯೇ 

       ಭಾರತಕ್ಕೆ ಸ್ವಾತಂತ್ರ್ಯ ದೊರೆತು ಆರು ದಶಕಗಳಾದವು. ಇಲ್ಲಿ ಪಾರ್ಲಿಮೆಂಟ್ ಮೇಲೆ ಉಗ್ರರು ದಾಳಿ ಮಾಡುತ್ತಾರೆ, ದೇಶದ ರಕ್ಷಣಾ ಮಂತ್ರಿಗಳೇ ಉಗ್ರರನ್ನು ವಿಮಾನದಲ್ಲಿ ಕರೆದೊಯ್ದು ಅವರಿದ್ದ ಸ್ಥಳಕ್ಕೆ ಬಿಟ್ಟು ಬರುತ್ತಾರೆ, ಮುಂಬೈನ ಜನನಿಬೀಡ ಪ್ರದೇಶಗಳಲ್ಲಿ ರಾಜಾರೋಷವಾಗಿ ಪ್ರವೇಶಿಸುವ ಉಗ್ರರು ಗುಂಡಿನ ಮಳೆಗೆರೆಯುತ್ತಾರೆ. ಸರಣಿ ಬಾಂಬ್ ಸ್ಫೋಟ್ ಗಳಂತೂ ಮಕ್ಕಳ ಆಟದಂತಾಗಿವೆ. ಒಟ್ಟಿನಲ್ಲಿ ಭಯೋತ್ಪಾದನೆ ಎನ್ನುವುದು ದೇಶದ ಮೂಲಭೂತ ಸಮಸ್ಯೆಯಾಗಿ ಪರಿಣಮಿಸಿದೆ. ಈ ಸಮಸ್ಯೆ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿರುವುದರಿಂದ ನಮ್ಮನ್ನಾಳುವ ನಾಯಕರುಗಳು ಈ ಸಮಸ್ಯೆ ಕುರಿತು ತೆಲೆ  ಕೆಡಿಸಿಕೊಳ್ಳುತ್ತಿಲ್ಲ. ಅದಕ್ಕೆಂದೇ ಮುಂಬೈ ಸ್ಫೋಟದ ನಂತರ ಘಟನಾ ಸ್ಥಳಕ್ಕೆ ಭೇಟಿ ನೀಡುವ ದೇಶದ ಗೃಹಮಂತ್ರಿ ಒಂದೇ ದಿನ ಮೂರೂ ಬಾರಿ ಬಟ್ಟೆ ಬದಲಿಸಿ ತಮ್ಮ ಅಭಿರುಚಿಯನ್ನು ಅನಾವರಣಗೊಳಿಸುತ್ತಾರೆ. ಧ್ವಂಸಗೊಂಡ ತಾಜ್ ಹೋಟೆಲ್ ಗೆ ಭೇಟಿ ನೀಡುವ ಮುಖ್ಯಮಂತ್ರಿ ಸುಟ್ಟು ಕರಕಲಾದ ತಾಜ್ ನ ಕೋಣೆಗಳಲ್ಲಿ ತಮ್ಮ  ಮಗನ ಸಿನಿಮಾ ಬದುಕಿಗಾಗಿ ಕಥೆ ಹುಡುಕುತ್ತಾರೆ. ಅದೆಂಥ ಅಸಂಗತ ಘಟನೆಗಳು ನಮ್ಮ ದೇಶದಲ್ಲಿ ಘಟಿಸುತ್ತವೆ ಎನ್ನುವುದಕ್ಕೆ ಈ ಮೇಲಿನ ಎರಡು ಉದಾಹರಣೆಗಳೇ ದೃಷ್ಟಾಂತ.
        ಅಮೇರಿಕಾ ದೇಶದಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಭಯೋತ್ಪಾದಕರ ದಾಳಿಯ ನಂತರ ಅಲ್ಲಿ ಮತ್ತೊಮ್ಮೆ ಅಂಥ ಘಟನೆ ಮರುಕಳಿಸಲಿಲ್ಲ. ಆ ಘಟನೆಗೆ ಕಾರಣನಾದ ಭಯೋತ್ಪಾದಕನನ್ನು ಅವನು ಅಡಗಿ ಕುಳಿತ ದೇಶದಲ್ಲೇ ಅಮೆರಿಕನ್ನರು ಬೇಟೆಯಾಡಿದರು. ಆ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಅಮೇರಿಕಾ ದೇಶದ ಅಧ್ಯಕ್ಷ ತನ್ನ ಸೇನಾ ಪಡೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಭಯೋತ್ಪಾದನೆಯ ನಿಗ್ರಹದಲ್ಲಿ ಅಲ್ಲಿನ ಆಳುವ ಮತ್ತು ವಿರೋಧ ಪಕ್ಷಗಳೆರಡೂ ಕೈ ಜೋಡಿಸಿ ಕೆಲಸ ಮಾಡಿದವು. ರಾಷ್ಟ್ರದ ಇಡೀ ಜನತೆ ಒಂದಾಗಿ ನಿಂತರು. ಅಂಥದ್ದೊಂದು ಮನಸ್ಥಿತಿ ಭಾರತದಲ್ಲಿ ಸಾಧ್ಯವೇ ಎನ್ನುವುದು ಇಲ್ಲಿನ ಮೂಲಭೂತ ಪ್ರಶ್ನೆಯಾಗಿದೆ.
      ನಮ್ಮದು ವೋಟ್ ಬ್ಯಾಂಕ್ ರಾಜಕಾರಣವಾಗಿರುವುದರಿಂದ ಇಲ್ಲಿ ಜಾತಿ, ಧರ್ಮಗಳ ಆಧಾರದ ಮೇಲೆ ಜನರನ್ನು ಓಲೈಸುವ ತಂತ್ರ ಮಹತ್ವ ಪಡೆಯುತ್ತಿದೆ. ದೇಶದ ಪ್ರಮುಖ ಸ್ಥಳವಾದ ಪಾರ್ಲಿಮೆಂಟಿನ ಮೇಲೆ ದಾಳಿಯ ಸಂಚು ರೂಪಿಸಿದ ಭಯೋತ್ಪಾದಕ ಈ ದಿನದವರೆಗೂ ಭಾರತದ ಜೈಲಿನಲ್ಲಿ ಐಶಾರಾಮಿ ಬದುಕು ನಡೆಸುತ್ತಿರುವನು. ಮುಂಬೈ ಮೇಲೆ ದಾಳಿ ಮಾಡಿದ ಭಯೋತ್ಪಾದಕನಿಗೂ ಐಶಾರಾಮಿ ಬದುಕಿಗೆ ಅಗತ್ಯವಾದ ಎಲ್ಲ ಸವಲತ್ತುಗಳನ್ನು ಜೈಲಿನಲ್ಲಿ ಮಾಡಿಕೊಡಲಾಗಿದೆ. ಕೆಲವು ದಿನಗಳ ಹಿಂದೆ ಲೇಖನವೊಂದರಲ್ಲಿ ಲೇಖಕರು ಅನ್ಯರಾಷ್ಟ್ರಗಳಲ್ಲಿನ ಉಗ್ರರಿಗೆ ಭಾರತದ ಜೈಲುಗಳನ್ನು ಆಶ್ರಯಿಸಿ ರಕ್ಷಣೆ ಪಡೆಯುವಂತೆ ಕರೆ ನೀಡಿದ್ದರು.  ಇದು ವಿಡಂಬನಾತ್ಮಕ ಎಂದೆನಿಸಿದರೂ ಸತ್ಯಕ್ಕೆ ಹತ್ತಿರವಾದ ಸಂಗತಿ.
    ಭಯೋತ್ಪಾದನೆಯನ್ನು ಸಂಪೂರ್ಣವಾಗಿ ತೊಡೆದು ಹಾಕಲು ಇಲ್ಲಿ ಕಾನೂನಿನ ನಿಯಮಗಳು ಕಠಿಣವಾಗಬೇಕು. ಒಬ್ಬ ಭಯೋತ್ಪಾದಕನಿಗೆ ಕೊಡುವ ಶಿಕ್ಷೆ ಬೇರೆ ಉಗ್ರರಿಗೆ ಪಾಠವಾಗಬೇಕು. ಧರ್ಮ ಮತ್ತು ಜಾತಿಗಳನ್ನು ಓಲೈಸುವ ರಾಜಕಾರಣ ಅಳಿದು ಹೊಸ ವ್ಯವಸ್ಥೆಯೊಂದು ಅಸ್ತಿತ್ವಕ್ಕೆ ಬರಬೇಕು.

ಸ್ವತಂತ್ರ ಭಾರತದಲ್ಲಿ ಭೃಷ್ಟಾಚಾರ 

         ಭೃಷ್ಟಾಚಾರ ಮುಕ್ತ ಭಾರತ ಅದು ಅನೇಕರ ಕನಸು.  ಆದರೆ ಆ ಕನಸು ಇವತ್ತಿನವರೆಗೂ ಕನಸಾಗಿಯೇ ಉಳಿದಿರುವುದು ಮಾತ್ರ ದೇಶದ ಬಹುದೊಡ್ಡ ದುರಂತ. ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಗುಮಾಸ್ತನೋರ್ವನ ಮನೆಯಲ್ಲಿ ಕೇಜಿಗಟ್ಟಲೆ ಚಿನ್ನ, ಬೆಳ್ಳಿ ಮತ್ತು ಕೋಟ್ಯಾಂತರ ರೂಪಾಯಿಗಳು ಲೋಕಾಯುಕ್ತರು ದಾಳಿ ಮಾಡಿದಾಗ ಸಿಗುತ್ತವೆ. ಭೃಷ್ಟಾಚಾರ ಎನ್ನುವುದು ಎಲ್ಲ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಳ್ಳುವುದಕ್ಕಿಂತ ಸಮರ್ಥಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಹಿಂದೆಲ್ಲ ಸಾವಿರಾರು ರೂಪಾಯಿಗಳಿಗೆ ಸೀಮಿತವಾಗಿದ್ದ ಭೃಷ್ಟಾಚಾರ ಇಂದು ಕೋಟ್ಯಾಂತರ ರೂಪಾಯಿಗಳಿಗೆ ವಿಸ್ತರಿಸಿದೆ. ಸಾರ್ವಜನಿಕರಾದ ನಮ್ಮದೂ ಅನೇಕ ತಪ್ಪುಗಳಿವೆ. ಸರ್ಕಾರಿ ಕಛೇರಿಗಳಲ್ಲಿ ಲಂಚ ಕೊಟ್ಟು ನಮ್ಮ ಕೆಲಸಗಳನ್ನು ಅಕ್ರಮವಾಗಿ ಮಾಡಿಸಿಕೊಳ್ಳುತ್ತೇವೆ. ಪ್ರತ್ಯಕ್ಷವಾಗಿಯೇ ಆಗಲಿ ಇಲ್ಲವೇ ಅಪರೋಕ್ಷವಾಗಿಯೇ ಆಗಲಿ ನಾವು ಸಹ ಈ ಭೃಷ್ಟಾಚಾರದಲ್ಲಿ ಸಮಭಾಗಿಗಳು. ಒಂದು ಸಾಮಾಜಿಕ ಪ್ರಜ್ಞೆ ನಮ್ಮೊಳಗೆ ಜಾಗೃತಗೊಳ್ಳದ    ಹೊರತು    ಈ ಭೃಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಸಾಧ್ಯವಿಲ್ಲ.
        ಇನ್ನೂ ಒಂದು ಪರಿಹಾಸ್ಯದ ಸಂಗತಿ ಎಂದರೆ ಈ ಭೃಷ್ಟಾಚಾರದ ವಿರುದ್ಧದ ಹೋರಾಟ ಎನ್ನುವುದು ನಮಗೆಲ್ಲ  ಗೀಳಾಗಿ ಅಂಟಿಕೊಂಡಿದೆ. ಅಣ್ಣಾ ಹಜಾರೆ ಅವರು ಹೋರಾಟಕ್ಕೆ ಕರೆ ನೀಡಿದಾಗ ಅವರ ಹೆಸರಿನ ಟೊಪ್ಪಿಗೆ ಧರಿಸಿ ನಾವುಗಳೆಲ್ಲ ಬೀದಿಗಿಳಿಯುತ್ತೇವೆ. ಹೀಗೆ ಬೀದಿಗಿಳಿಯುವ ನಮಗೆ ನಮ್ಮದೇ ಮನೆಯ ಪಕ್ಕ ಸರಾಯಿ ಅಂಗಡಿಯೊಂದು ಇರುವುದು ನೆನಪಿಗೆ ಬರುವುದಿಲ್ಲ. ಸರ್ಕಾರಿ ಬಸ್ಸಿನಲ್ಲಿ ನಿರ್ವಾಹಕ ಟಿಕೆಟ್ ಕೊಡದೆ ಅರ್ಧ ಹಣ ಮರಳಿಸಿದಾಗ ವಿವೇಚನೆ ಇಲ್ಲದೆ ಅದನ್ನು ಜೇಬಿಗೆ ಸೇರಿಸುತ್ತೇವೆ. ಚುನಾವಣಾ ಸಂದರ್ಭ ಹಣ ಪಡೆದು ಮತದಾನದಲ್ಲಿ ಪಾಲ್ಗೊಳ್ಳುತ್ತೇವೆ. ಭೃಷ್ಟಾಚಾರದ ವಿರುದ್ಧದ ಹೋರಾಟವೆಂದರೆ ಅದು ನಮ್ಮಗಳ ಮನೆಯಿಂದಲೇ ಪ್ರಾರಂಭವಾಗಬೇಕು.
       ಜೊತೆಗೆ ಇಲ್ಲಿ ಹೋರಾಟಗಾರರು ಜನರ ಭಾವನಾತ್ಮಕ ದೌರ್ಬಲ್ಯವನ್ನು ತಮ್ಮ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವುದು ಇನ್ನೊಂದು ಅರ್ಥದಲ್ಲಿ ಭೃಷ್ಟಾಚಾರವೇ  ಸರಿ. ಭೃಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದ ಅಣ್ಣಾ ಹಜಾರೆ ಅವರ ತಂಡ ಈಗ ರಾಜಕೀಯ ಪಕ್ಷವನ್ನು ಕಟ್ಟಲು ನಿರ್ಧರಿಸಿದೆ. ವ್ಯವಸ್ಥೆಯೊಂದರ ವಿರುದ್ಧ ಹೋರಾಟಕ್ಕಿಳಿದ ಈ   ತಂಡ ಈಗ ಅದೇ ವ್ಯವಸ್ಥೆಯ ಒಂದು ಭಾಗವಾಗಲು ಹೊರಟಿರುವುದು ನ್ಯಾಯಸಮ್ಮತವಲ್ಲ. ಪರಿಣಾಮವಾಗಿ ಬಹುಪಾಲು ಸಾರ್ವಜನಿಕರಿಗೆ ಈ ಹೋರಾಟಗಳ ಕುರಿತು ಭ್ರಮನಿರಸನವಾಗಿದೆ. ನಾವು ನೈತಿಕವಾಗಿ ಬದುಕಿದರೆ ಮಾತ್ರ ಇನ್ನೊಬ್ಬರ ನೈತಿಕತೆಯನ್ನು ಪ್ರಶ್ನಿಸಲು ಸಾಧ್ಯ ಎನ್ನುವ ಮನೋಭಾವ ಜನರಲ್ಲಿ ಜಾಗೃತವಾಗಬೇಕು.

ಇದ್ದದ್ದು ಇದ್ದಹಾಂಗ 

       ಗೂಗಲ್ ನಲ್ಲಿ ಗಾಂಧಿಯನ್ನು ಹುಡುಕಲು ಹೊರಟಾಗ ಗಾಂಧಿ  ಜೊತೆ ಸಿಕ್ಕಿದ್ದು ಇಂದಿರಾ ಗಾಂಧಿ, ರಾಜೀವ ಗಾಂಧಿ, ಸಂಜಯ ಗಾಂಧಿ, ಮನೇಕಾ ಗಾಂಧಿ, ಸೋನಿಯಾ ಗಾಂಧಿ, ರಾಹುಲ ಗಾಂಧಿ, ಪ್ರಿಯಾಂಕಾ ಗಾಂಧಿ ಇವರೆಲ್ಲ. ಮೊನ್ನೆ  ಆರನೇ ತರಗತಿಯಲ್ಲಿ ಓದುತ್ತಿರುವ ಹುಡುಗನನ್ನು ಪ್ರಶ್ನಿಸಿದೆ ಗಾಂಧಿ ಗೊತ್ತಾ ಎಂದು. ಥಟ್ಟನೆ ಉತ್ತರಿಸಿದ ಭೂಪ 'ಗೊತ್ತು ಸಾರ್ ಅದೇ ನಮ್ಮ ಗಣೇಶ ಜೊತೆ ಮುಂಗಾರು ಮಳೆ ಸಿನಿಮಾದಲ್ಲಿ ಸಖತ್ತಾಗಿ ನಟಿಸಿದ್ದಾಳಲ್ಲ ಪೂಜಾ ಗಾಂಧಿ'.

-ರಾಜಕುಮಾರ ವಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ             





No comments:

Post a Comment