Wednesday, August 1, 2012

ಋಣಸಂದಾಯದ ಎರಡು ದೃಷ್ಟಾಂತಗಳು

       'ಋಣ' ಇದು ಎಲ್ಲರ ಬದುಕಿನೊಂದಿಗೆ ತಳುಕು ಹಾಕಿಕೊಂಡಿರುವ ಪದ. ಒಂದಲ್ಲ ಒಂದು ವಿಧದಲ್ಲಿ ನಾವುಗಳೆಲ್ಲ ಋಣಿಗಳೇ. ತಾಯಿಯ ಋಣ, ತಂದೆಯ ಋಣ, ಗುರುಗಳ ಋಣ, ತಾಯಿ ನಾಡಿನ ಋಣ ಹೀಗೆ ನಮ್ಮ ಜನ್ಮದಾರಂಭದಿಂದ ಸಾವಿನ ಮಡಿಲು ಸೇರುವವರೆಗೆ ನಾವು ವಿವಿಧ ಪ್ರಕಾರದಲ್ಲಿ ಉಪಕೃತರು. ಅನೇಕ ಸಂದರ್ಭಗಳಲ್ಲಿ 'ಅಯ್ಯೋ ದೇವರೇ ಅವರ ಋಣ ನನ್ನ ಮೇಲೆ ಹಾಗೇ ಇದೆ' ಎಂದು ಉದ್ಘರಿಸುವದೂ ಉಂಟು. ಆಗೆಲ್ಲ ಋಣಮುಕ್ತಿಗಾಗಿ ಮನಸ್ಸು ಕಾತರಿಸುತ್ತದೆ. ಋಣಮುಕ್ತಿ ಕುರಿತು ನಾವೆಲ್ಲಾ ಪುರಾಣ ಪುಣ್ಯಕಥೆಗಳಲ್ಲಿ ಓದಿದ್ದೇವೆ. ದೇವಾನು  ದೇವತೆಗಳು ಋಣಮುಕ್ತಿಗಾಗಿ ಭೂಲೋಕದಲ್ಲಿ ಮನುಷ್ಯ ರೂಪಿಗಳಾಗಿ ಜನಿಸಿದ್ದುಂಟು. 
          ಈ ಉಪಕಾರ ಮತ್ತು ಋಣಸಂದಾಯ  ಎನ್ನುವುದು ಕೊಟ್ಟು ತೆಗೆದು ಕೊಳ್ಳುವ ಪ್ರಕ್ರಿಯೆಯಾಗಬಾರದು. ಅದರಲ್ಲಿ ಒಂದು ಘನತೆ, ಶ್ರೇಷ್ಠತೆ ಮತ್ತು ನಿರ್ಮಲ ಅಂತ:ಕರಣವಿರಬೇಕು. ಋಣಸಂದಾಯ ಎನ್ನುವುದು ತೀರ ವ್ಯವಹಾರಕ್ಕಿಳಿದಾಗ ಅದು ಮನುಷ್ಯ ಸ್ವಭಾವದ ನೈಜ ಪ್ರಕ್ರಿಯೆ ಎಂದೆನಿಸಿಕೊಳ್ಳದೆ ಅದೊಂದು ವ್ಯಾಪಾರವಾಗಿ ಪರಿಣಮಿಸುತ್ತದೆ. ಸಾಮಾನ್ಯವಾಗಿ ಈ ದಿನಗಳಲ್ಲಿ ಉಪಕಾರ ಮತ್ತು ಋಣಸಂದಾಯ ಎನ್ನುವ ಈ ಎರಡು ಕ್ರಿಯೆಗಳು ಕೊಟ್ಟು ಕೊಳ್ಳುವ ವ್ಯಾಪಾರದ ನೆಲೆಗಟ್ಟಿನ ಮೇಲೆ ನಡೆಯುತ್ತಿವೆ. 
           ನಾನು ಓದಿದ ಮತ್ತು ನೋಡಿದ ಎರಡು ವಿಭಿನ್ನ ಋಣಸಂದಾಯದ ದೃಷ್ಟಾಂತಗಳು ಹೀಗಿವೆ.

ದೃಷ್ಟಾಂತ-1
         ಇದು ಕನ್ನಡ ಪ್ರಭ ದಿನಪತ್ರಿಕೆಯಲ್ಲಿ ಓದಿದ ಲೇಖನ. ಲೇಖಕರಾದ ಶ್ರೀ ಮಣಿಕಾಂತ ಆ ಒಂದು ಘಟನೆಯನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಬರೆದಿರುವರು. ದುರಾದೃಷ್ಟವಶಾತ್ ಆ ಲೇಖನ ಇಂದು ನನ್ನ ಬಳಿಯಿಲ್ಲ. ಆದರೆ ಓದಿದ ವಿಷಯ ಅತ್ಯಂತ ಮಾನವೀಯ ಅಂತ:ಕರಣದಿಂದ ಕೂಡಿದ್ದರಿಂದ ಅದಿನ್ನೂ ನನ್ನ ನೆನಪುಗಳಲ್ಲಿ ಹಸಿರಾಗಿದೆ. ಹಾಗೆ ನೆನಪು ಮಾಡಿಕೊಂಡ ಆ ಅಂತ:ಕರಣದ ಕಥೆಯನ್ನು ಇಲ್ಲಿ ದಾಖಲಿಸಿರುವೆ. 'ಆ ಹುಡುಗ ಚಿಕ್ಕ ವಯಸ್ಸಿನವನಿರುವಾಗಲೇ ತಂದೆ ತಾಯಿ ತೀರಿಕೊಂಡರು. ಹೇಳಿಕೊಳ್ಳುವಂಥ ಹತ್ತಿರದ ಬಂಧುಗಳೂ ಅವನಿಗಿರಲಿಲ್ಲ. ಅಕ್ಷರಶ: ಅವನೊಬ್ಬ ಅನಾಥ.  ದಿನ ಪತ್ರಿಕೆಗಳನ್ನು ಮನೆ ಮನೆಗೂ ಹಂಚಿ ಬರುತ್ತಿದ್ದ ಅಲ್ಪ ಸಂಬಳದಲ್ಲಿ ಹೇಗೋ ಬದುಕು ನಡೆಸುತ್ತಿದ್ದ. ಓದ ಬೇಕೆನ್ನುವ ಅದಮ್ಯ ಆಸೆಯನ್ನು ಅತ್ಯಂತ ಕಷ್ಟಪಟ್ಟು ತಡೆ ಹಿಡಿದಿದ್ದ. ದಿನಗಳು ಅದು ಹೇಗೋ ಕಳೆಯುತ್ತಿದ್ದವು. ಅದೊಂದು ದಿನ ಎಂದಿನಂತೆ ಪತ್ರಿಕೆಗಳನ್ನು ಹಂಚಿ ಬಂದವನಿಗೆ ವಿಪರೀತ ಹಸಿವು ಕಾಡಲಾರಂಭಿಸಿತು. ಇನ್ನು ಹಸಿವು ತಾಳಲಾರೇನು ಎಂದೆನಿಸಿದಾಗ ಒಂದಿಷ್ಟು ಮುಂಗಡ ಹಣ ಪಡೆಯಲು ತಾನು ಕೆಲಸ ಮಾಡುತ್ತಿದ್ದ ಮಾಲೀಕರ ಮನೆಗೆ ಹೊರಟು ನಿಂತ. ಕಾಲೆಳೆಯುತ್ತ ನಡೆಯುತ್ತಿದ್ದಾತನಿಗೆ ಅರ್ಧ ದಾರಿ ಕಳೆಯುವಷ್ಟರಲ್ಲಿ ಕಣ್ಣು ಕತ್ತಲಾವರಿಸ ತೊಡಗಿತು. ನೀರು ಕೇಳಲು ಅಕ್ಕ ಪಕ್ಕದ ಮನೆಗಳತ್ತ ನೋಡಿದ. ಅರ್ಧ ಬಾಗಿಲು ತೆರೆದಿದ್ದ ಮನೆ ಎದುರು ನಿಂತು ಕುಡಿಯಲು ನೀರು ಕೇಳಿದ. ಕೈಯಲ್ಲಿ ಲೋಟ ಹಿಡಿದು ಬಂದವಳು ಅವನಿಗಿಂತ ನಾಲ್ಕೈದು ವರ್ಷಕ್ಕೆ ದೊಡ್ದವಳಿರಬಹುದೆನಿಸುವ ಲಕ್ಷಣವಾದ ಹುಡುಗಿ. ಆಕೆ ಅವನೆಡೆ ಅನುಕಂಪದಿಂದ ನೋಡಿ ಜಗುಲಿಯ ಮೇಲೆ ಕೂಡಲು ಹೇಳಿದವಳೇ ಕೈಗೆ ಲೋಟವನ್ನಿತ್ತಳು. ಲೋಟ ಕೈಗೆ ತೆಗೆದುಕೊಂಡವನ ಕಣ್ಣುಗಳು ಅರಳಿದವು. ನೀರು ಕೇಳಿದವನಿಗೆ ಕುಡಿಯಲು ಲೋಟದ ತುಂಬ ಬಿಸಿ ಹಾಲು. ಹಸಿದ ಹೊಟ್ಟೆಗೆ ಹಾಲು ಸೇರುತ್ತಿದ್ದಂತೆ ಸಂತೃಪ್ತ ಭಾವ ಅವನ ಮುಖದಲ್ಲಿ ಮೂಡಿತು. ಹಾಲು ಕೊಟ್ಟು ಹಸಿವು ನೀಗಿಸಿದ ಅವಳನ್ನೊಮ್ಮೆ ಕಣ್ತುಂಬಿ ನೋಡಿದ. ಕೆಳದುಟಿಯ ಅನತಿ ದೂರದಲ್ಲಿ ಅಗಲವಾದ ಕಪ್ಪು ಚುಕ್ಕೆ. ಅವನ ಪೂರ್ವಾಪರ ವಿಚಾರಿಸಿದವಳೇ ಸಮೀಪದ ಸಿದ್ಧಗಂಗಾ ಮಠದ ವಿಳಾಸ ಕೊಟ್ಟು ಬದುಕು ಕಟ್ಟಿಕೊಳ್ಳಲು ನೆರವು ನೀಡಿದಳು. ಅಂದು ಸಿದ್ಧಗಂಗಾ ಮಠ ಸೇರಿದ ಆ ಹುಡುಗ ಮುಂದೊಂದು ದಿನ ಖ್ಯಾತ ವೈದ್ಯನಾದ.
        ಕಾಲಚಕ್ರ ಉರುಳಿತು. ಆಸ್ಪತ್ರೆಯ ತನ್ನ ಕೊಠಡಿಯಲ್ಲಿ ಕುಳಿತಿದ್ದವನಿಗೆ ಶಸ್ತ್ರ ಚಿಕಿತ್ಸಾ ಕೋಣೆಯಿಂದ ತುರ್ತಾಗಿ ಕರೆ ಬಂತು. ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಮಹಿಳೆಯನ್ನು ಹೇಗಾದರೂ ಸರಿ ಉಳಿಸಲೇ ಬೇಕೆಂದು ಅಲ್ಲಿದ್ದ ವೈದ್ಯರೆಲ್ಲ ಹರಸಾಹಸ ಪಡುತ್ತಿದ್ದರು. ಶಸ್ತ್ರ ಚಿಕಿತ್ಸಾ  ಕೋಣೆಯೊಳಗೆ ಪ್ರವೇಶಿಸಿದ ಆ ಯುವ ವೈದ್ಯ ಅರೇ ಕ್ಷಣ ಮಹಿಳೆಯ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದ. ಕೆಳದುಟಿಯ ಅನತಿ ದೂರದಲ್ಲಿ ಅಗಲವಾದ ಕಪ್ಪು ಚುಕ್ಕೆ. ವೈದ್ಯರ ಪ್ರಯತ್ನ ಯಶಸ್ವಿಯಾಯಿತು. ಮಹಿಳೆಗೆ ಮರುಜೀವ ಕೊಟ್ಟ ಸಂಭ್ರಮ ಅಲ್ಲಿ ಮನೆ ಮಾಡಿತ್ತು. ಮಹಿಳೆ ಆಸ್ಪತ್ರೆಯಲ್ಲಿರುವಷ್ಟು ದಿನ ಆ ಕಿರಿಯ ವೈದ್ಯನೇ ವಿಶೇಷ ಕಾಳಜಿ ತೆಗೆದುಕೊಂಡ. ಪ್ರತಿದಿನ ಹತ್ತಾರು ಬಾರಿ ಬಂದು ಯೋಗಕ್ಷೇಮ ವಿಚಾರಿಸಿದ. ಅಗತ್ಯದ ಎಲ್ಲ ಸೌಲಭ್ಯಗಳನ್ನು ದೊರಕಿಸಿ ಕೊಟ್ಟ. ಕೊನೆಗೊಂದು ದಿನ ಆಸ್ಪತ್ರೆಯಿಂದ ಬಿಡುಗಡೆಯಾಗಿ ಹಣ ಪಾವತಿಸುವ  ಕೌಂಟರಿನ ಹತ್ತಿರ ಹೋದ ಆ ಮಹಿಳೆಗೆ ಬಿಲ್ ಬದಲಾಗಿ ಕಾಗದವೊಂದನ್ನು ಅಲ್ಲಿನ ಸಿಬ್ಬಂದಿ ನೀಡಿದರು. ನಡುಗುವ ಕೈಗಳಿಂದ ಆ ಕಾಗದದ ಚೂರನ್ನು ಬಿಡಿಸಿ ನೋಡಿದಾಗ ಅಲ್ಲಿ ಹೀಗೆ ಬರೆದಿತ್ತು  'ನಿಮ್ಮ ಚಿಕಿತ್ಸೆಯ ಬಿಲ್ ನ ಹಣ   ಒಂದು ಲೋಟ ಹಾಲಿನ ರೂಪದಲ್ಲಿ ಸಂದಾಯವಾಗಿದೆ'.

 ದೃಷ್ಟಾಂತ-2
         ಅದೊಂದು ಕನ್ನಡ ಸಮ್ಮೇಳನ. ಕನ್ನಡಿಗರೆಲ್ಲ ಅತ್ಯಂತ ಸಂಭ್ರಮದಿಂದ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಕವಿಗೋಷ್ಠಿ ಆ ದಿನದ ವಿಶೇಷವಾಗಿತ್ತು. ವೇದಿಕೆಯಲ್ಲಿ ಕವಿಗಳು ಮತ್ತು ಅವರನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಪ್ರೇಕ್ಷಕರು ಬಿಸಿಲನ್ನೂ ಲೆಕ್ಕಿಸದೆ ಮೈದಾನದ ತುಂಬ ತುಂಬಿಕೊಂಡಿದ್ದರು. ಕವಿಗೋಷ್ಠಿ ಆರಂಭವಾಯಿತು. ಕವಿಗಳೆಲ್ಲ ಒಬ್ಬರಾದ ನಂತರ ಒಬ್ಬರಂತೆ ತಾವು ಬರೆದು ತಂದಿದ್ದ ಕವನಗಳನ್ನು ವಾಚಿಸಲಾರಂಭಿಸಿದರು. ಮರಿಕವಿಯೊಬ್ಬನ ಸರದಿ ಬಂತು. ಇಂಥ ಹಿರಿಕವಿಯೊಬ್ಬ ಏಕೆ ಬಂದಿಲ್ಲ ಎಂದಾತ  ಕವಿತೆಯ ಮೂಲಕ ಪ್ರಶ್ನಿಸಿದ. ಅವರ ಖುರ್ಚಿ ಖಾಲಿ ಇದೆ ಅವರಿಗಿಲ್ಲ ಖುರ್ಚಿಯ ವ್ಯಾಮೋಹ ಎಂದು ಬಣ್ಣಿಸಿದ. ಈ ಸಮ್ಮೇಳನ ನಡೆಯಬಾರದೆಂದು ಅಡ್ಡಗಾಲು ಹಾಕಿದ್ದ ಆ ಹಿರಿಕವಿಯನ್ನು ಎಲ್ಲರೂ ಮರೆತಿರುವ ಹೊತ್ತಿನಲ್ಲಿ ಈ ಮರಿಕವಿ ನೆನಪಿಸಿದ್ದ. ಪ್ರೇಕ್ಷಕರಿಗೆ ಮೊಸರನ್ನದಲ್ಲಿ ಕಲ್ಲು ಸಿಕ್ಕ ಅನುಭವ. ಆದರೆ ಆ ಮರಿಕವಿ ಮುಖದಲ್ಲಿ ಮಾತ್ರ ಧನ್ಯತಾ ಭಾವ. ಯಾಕೆ ಹೀಗಾಯ್ತು ಎಂದು ವಿಚಾರಿಸಿದಾಗ ಗೊತ್ತಾಯಿತು. ಈ ಮರಿಕವಿಯ ಮೇಲೆ ಆ ಹಿರಿಕವಿಯ ಋಣ ಬೆಟ್ಟದಷ್ಟಿತ್ತು. ವಶೀಲಿ ಬಾಜಿಗಳಿಂದ ಆಯಕಟ್ಟಿನ ಜಾಗಗಳನ್ನು ಅತಿಕ್ರಮಿಸುತ್ತಲೇ ಬಂದ ಹಿರಿಕವಿ ತನ್ನ ಶಿಷ್ಯನಿಗೆ ಹಲವು ಬಗೆಯಲ್ಲಿ ಉಪಕಾರ ಮಾಡಿದ್ದ. ತನ್ನ ಶಿಫಾರಸುಗಳಿಂದ ಮರಿಯ ಪುಸ್ತಕಗಳನ್ನು ವಿಶ್ವವಿದ್ಯಾಲಯಗಳಲ್ಲಿ pathya ವಾಗಿಸಿದ್ದ. ಪುಸ್ತಕ ಮಾರಾಟ ಜೋರಾಗಿ ಮರಿಯ ಜೇಬು ಭರ್ತಿಯಾಗಿತ್ತು. ಋಣಸಂದಾಯಕ್ಕಾಗಿ ಕಾದವನಿಗೆ ಕನ್ನಡ ಸಮ್ಮೇಳನ ಸೂಕ್ತ ಅವಕಾಶವನ್ನೇ ಒದಗಿಸಿತು. ಸಮಯ, ಸಂದರ್ಭಗಳ ಕಿಂಚಿತ್ ಪ್ರಜ್ಞೆಯೂ ಇಲ್ಲದೆ ತನ್ನ ಮನಸಿನಲ್ಲಿದ್ದುದ್ದನ್ನೆಲ್ಲ ಕಾರಿಕೊಂಡ. ಒಟ್ಟಾರೆ ಆ ದಿನ ಅವನಿಂದ ಋಣಸಂದಾಯವಾಗಿತ್ತು.

ಇದ್ದದ್ದು ಇದ್ದಹಾಂಗ 
        2010 ನೇ ಸಾಲಿನ ರಾಜ್ಯ ಸರ್ಕಾರದ ಕನ್ನಡ ಸಿನಿಮಾ ಕಲಾವಿದರ ಪ್ರಶಸ್ತಿ ಈಗ ಕೋರ್ಟ್ ಮೆಟ್ಟಿಲು ಹತ್ತುವ ಹಂತದಲ್ಲಿದೆ. ಪ್ರಶಸ್ತಿ ಸಮಿತಿಯ ಅಧ್ಯಕ್ಷೆ ಹಲವರಿಗೆ ಪ್ರಶಸ್ತಿ ಕೊಡಮಾಡುವುದರ ಮೂಲಕ ತಮ್ಮ ಮೇಲಿನ ಋಣದಿಂದ ಮುಕ್ತರಾಗಿರುವರು. ಜೀವಮಾನದ ಸಾಧನೆಯ ಪ್ರಶಸ್ತಿಯನ್ನು ಕೊನೆಯ ಕ್ಷಣದವರೆಗೂ ಯಾರಿಗೆ ಎನ್ನುವುದನ್ನು ಬಿಟ್ಟು ಕೊಡದೆ ತಮ್ಮ ಪತಿಯ ಕುಚುಕು ಗೆಳೆಯನಿಗೆ ಕೊಟ್ಟರೆನ್ನುವ ಆಪಾದನೆ ಇತರ ಸದಸ್ಯರು ಮಾಡಿರುವರು.  ಇದೇ ನಟಿ 'ಋಣ ಮುಕ್ತಳು' ಚಿತ್ರದಲ್ಲಿ ನಟಿಸಿದ್ದು ಕಾಕತಾಳಿಯವಾಗಿದ್ದರೂ ಈ ಕ್ಷಣ ಆ ಚಿತ್ರ ನೆನಪಿಗೆ ಬರುತ್ತಿದೆ.

-ರಾಜಕುಮಾರ ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment