ನನ್ನೂರು ಗುಲಬರ್ಗಾ ಹೈದರಾಬಾದಿಗೆ ಅತೀ ಹತ್ತಿರದಲ್ಲಿರುವುದರಿಂದ ಹಾಗೂ ಮುಸಲ್ಮಾನರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವುದರ ಪರಿಣಾಮ ಉರ್ದು ಭಾಷೆಯ ಪ್ರಭಾವ ದಟ್ಟವಾಗಿರುವುದರಿಂದ ಅಲ್ಲಿ ಹಿಂದಿ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ. ಒಂದರ್ಥದಲ್ಲಿ ಹಿಂದಿ ಅಲ್ಲಿನ ವಾಣಿಜ್ಯ ಭಾಷೆಯಾಗಿ ಬಳಕೆಯಾಗುತ್ತಿದೆ. ಪರಿಣಾಮವಾಗಿ ಅಲ್ಲಿ ಕನ್ನಡ ಸಿನಿಮಾಗಳಿಗೆ ಹಿಂದಿ ಚಿತ್ರಗಳ ಪೈಪೋಟಿ ಸದಾ ಕಾಲ ಇದ್ದದ್ದೆ. ಅನೇಕ ಹಿಂದಿ ಸಿನಿಮಾಗಳು ಆ ನಗರದಲ್ಲಿ ಶತದಿನಗಳ ಪ್ರದರ್ಶನ ಕಂಡಿದ್ದುಂಟು. ಹೀಗಿದ್ದೂ ನನಗೆ ಹಿಂದಿ ಸಿನಿಮಾಗಳ ಕುರಿತು ಅಂಥ ಹೆಚ್ಚಿನ ಆಕರ್ಷಣೆಯೇನೂ ಇರಲಿಲ್ಲ. ಆಗೆಲ್ಲ ಕನ್ನಡ ಚಿತ್ರರಂಗದಲ್ಲಿ ರಾಜಕುಮಾರ ಸಿನಿಮಾಗಳ ಪ್ರಭಾವ ಮತ್ತು ಆಕರ್ಷಣೆ ದಟ್ಟವಾಗಿದ್ದರಿಂದ ಅನ್ಯಭಾಷಾ ಚಿತ್ರಗಳೆಡೆ ಮನಸ್ಸು ವಾಲುತ್ತಿರಲಿಲ್ಲ. ಜೊತೆಗೆ ಆ ದಿನಗಳಲ್ಲಿ ಜನರು ಹಿಂದಿ ಸಿನಿಮಾಗಳ ಬಗ್ಗೆ ಮಾತನಾಡುವಾಗ ಅವರ ಚರ್ಚೆ ಸೀಮಿತವಾಗುತ್ತಿದ್ದದ್ದು 'ಶೋಲೆ' ಎನ್ನುವ ಮಲ್ಟಿ ಸ್ಟಾರ್ ಚಿತ್ರಕ್ಕೆ ಮಾತ್ರ. ಹೀಗಾಗಿ ಹಿಂದಿ ಸಿನಿಮಾ ಎಂದರೆ ಅದು ಶೋಲೆ ಮತ್ತು ಅಮಿತಾಬ ಬಚ್ಚನ್ ಮಾತ್ರ ಎನ್ನುವ ನಿರಾಸಕ್ತಿ ನನ್ನಲ್ಲಿ ಮನೆ ಮಾಡಿತ್ತು (ಧರ್ಮೇಂದ್ರ ಶೋಲೆ ಚಿತ್ರದ ನಾಯಕನಾದರೂ ನಂತರದ ದಿನಗಳಲ್ಲಿ ಯಶಸ್ಸಿನ ಉತ್ತುಂಗಕ್ಕೆರಿದ್ದು ಅಮಿತಾಬ ಬಚ್ಚನ್). ಅಂಥದ್ದೊಂದು ನಿರಾಸಕ್ತಿ ಮತ್ತು ಅನಾಕರ್ಷಣೆ ಮಧ್ಯೆಯೂ ನಾನು ನೋಡಿದ ಮೊದಲ ಹಿಂದಿ ಸಿನಿಮಾ 'ಆಖಿರ್ ಕ್ಯೊಂ'.
1990ರ ದಶಕದಲ್ಲಿ ನಾನು ನೋಡಿದ ಈ 'ಆಖಿರ್ ಕ್ಯೊಂ' ಸಿನಿಮಾದಲ್ಲಿ ಸ್ಮೀತಾ ಪಾಟೀಲ್, ರಾಜ ಬಬ್ಬರ್, ರಾಜೇಶ ಖನ್ನಾ ರಂಥ ಪ್ರತಿಭಾನ್ವಿತ ಕಲಾವಿದರ ಅಭಿನಯವಿತ್ತು. ಆ ಕಡೆ ಕಲಾತ್ಮಕ ಚಿತ್ರದ ನಿಧಾನಗತಿಯೂ ಇಲ್ಲದ ಈ ಕಡೆ ಕಮರ್ಷಿಯಲ್ ಸಿನಿಮಾದ ಅಬ್ಬರವೂ ಇಲ್ಲದ ಈ ಸಿನಿಮಾ ಒಂದರ್ಥದಲ್ಲಿ ಅವೆರಡರ ನಡುವಿನ ಬ್ರಿಡ್ಜ್ ಸಿನಿಮಾ ಆಗಿತ್ತು. ಮಹಿಳಾ ಪ್ರಧಾನದ ಈ ಚಿತ್ರದಲ್ಲಿ ಸ್ಮೀತಾ ಪಾಟೀಲರ ಸಹಜ ಅಭಿನಯ ಹಾಗೂ ಕ್ರೌರ್ಯವೇ ತಾನಾಗಿ ಪರಕಾಯ ಪ್ರವೇಶ ಮಾಡಿದ ರಾಜ ಬಬ್ಬರ ಅಭಿನಯದ ನಡುವೆಯೂ ಗಮನ ಸೆಳೆದದ್ದು ಪಾದರಸದಂತೆ ಚುರುಕಾಗಿ ಅಭಿನಯಿಸಿದ ರಾಜೇಶ ಖನ್ನಾ ಪಾತ್ರ. ಮಹಿಳಾ ಶೋಷಣೆಯ ವಿರುದ್ಧ ಚಿತ್ರದುದ್ದಕ್ಕೂ ಅತ್ಯಂತ ಮನೋಜ್ಞವಾಗಿ ಅಭಿನಯಿಸಿದ ರಾಜೇಶ ಖನ್ನಾ ಅಭಿನಯ ಅಚ್ಚಳಿಯದೆ ನೆನಪಾಗಿ ಉಳಿದುಕೊಂಡಿತು. ಆ ಹೊತ್ತಿಗಾಗಲೇ ರಾಜೇಶ ಖನ್ನಾ ತನ್ನ ಸುಪರ್ ಸ್ಟಾರ್ ಪಟ್ಟವನ್ನು ಬೇರೊಬ್ಬ ನಟನಿಗೆ ಬಿಟ್ಟು ಕೊಟ್ಟಾಗಿತ್ತು. ಆ ನಂತರ ನೋಡಿದ್ದು ಇದೇ ರಾಜೇಶ ಖನ್ನಾ ಅಭಿನಯದ 'ಆನಂದ' ಚಿತ್ರವನ್ನು ( ಇದು 'ಆಖಿರ್ ಕ್ಯೊಂ' ಕ್ಕಿಂತ ಮೊದಲು ನಿರ್ಮಾಣಗೊಂಡ ಸಿನಿಮಾ). ಕ್ಯಾನ್ಸರ್ ರೋಗದಿಂದ ಬದುಕು ಇನ್ನೇನು ಆರು ತಿಂಗಳಲ್ಲಿ ಕೊನೆಗೊಳ್ಳಲಿದೆ ಎನ್ನುವ ಸತ್ಯದ ಅರಿವಿನ ನಡುವೆಯೂ ಜೀವನ ಪ್ರೀತಿಯನ್ನು ಪ್ರತಿಪಾದಿಸುವ ಪಾತ್ರದಲ್ಲಿ ರಾಜೇಶ ಖನ್ನಾರದು ಚಿರಕಾಲ ನೆನಪಿನಲ್ಲುಳಿಯುವ ಅಭಿನಯ. ಅರಳು ಹುರಿದಂತೆ ಪಟಪಟನೆ ಮಾತನಾಡುತ್ತ ತನ್ನ ಸುತ್ತಲಿನವರ ಬದುಕಿನಲ್ಲಿ ಸಂತಸವನ್ನು ಅರಳಿಸುವ ಪಾತ್ರದಲ್ಲಿ ರಾಜೇಶ ಖನ್ನಾ ಇಡೀ ಚಿತ್ರವನ್ನು ಆವರಿಸಿಕೊಂಡ ರೀತಿ ಅನನ್ಯ. ನಿಜಕ್ಕೂ ಹಿಂದಿ ಸಿನಿಮಾಗಳೆಡೆ ನನ್ನ ಆಸಕ್ತಿಯನ್ನು ಸೆಳೆದದ್ದು ಈ 'ಆನಂದ' ಸಿನಿಮಾ.
'ಆನಂದ' ಸಿನಿಮಾದ ರಾಜೇಶ ಖನ್ನಾ ಅವರ ಅದ್ಭುತ ಅಭಿನಯ ವೀಕ್ಷಿಸಿದ ಪರಿಣಾಮ ನಂತರದ ದಿನಗಳಲ್ಲಿ ಅನೇಕ ಹಳೆಯ ಹಿಂದಿ ಸಿನಿಮಾಗಳನ್ನು ನೋಡಲು ಪ್ರೇರಣೆಯಾಯಿತು. ರಾಜ್ ಕಪೂರ, ದಿಲೀಪ ಕುಮಾರ, ಮನೋಜ ಕುಮಾರ, ದೇವಾನಂದ, ಆಶಾ ಪರೇಖ, ನರ್ಗೀಸ್, ಶರ್ಮಿಳಾ ಟ್ಯಾಗೋರ್ ಅವರಂಥ ಅಪ್ರತಿಮ ಕಲಾವಿದರ ಅದ್ಭುತ ಪ್ರತಿಭೆಯ ದರ್ಶನವಾಯಿತು. 'ಮೇರಾ ನಾಮ ಜೋಕರ್', 'ಮದರ್ ಇಂಡಿಯಾ', 'ಗೈಡ್', 'ಆರಾಧನಾ' ದಂಥ ಸರ್ವಕಾಲಿಕ ಶ್ರೇಷ್ಠ ಚಿತ್ರಗಳನ್ನು ನೋಡಲು ಸಾಧ್ಯವಾಯಿತು. ಇದೇ ಆಸಕ್ತಿ ಮುಂದಿನ ದಿನಗಳಲ್ಲಿ ನಾಸಿರುದ್ದೀನ್ ಷಾ, ಓಂ ಪೂರಿ, ಶಬನಾ ಅಜ್ಮಿ ಅವರಂಥ ಅಭಿಜಾತ ಕಲಾವಿದರ ಕಲಾತ್ಮಕ ಚಿತ್ರಗಳನ್ನು ನೋಡುವ ಉಮೇದಿ ಮೂಡಿಸಿತು. ಒಂದರ್ಥದಲ್ಲಿ ರಾಜೇಶ ಖನ್ನಾ ಅಭಿನಯದ 'ಆಖಿರ್ ಕ್ಯೊಂ' ಸಿನಿಮಾ ನನಗೆ ಇಡೀ ಹಿಂದಿ ಸಿನಿಮಾ ರಂಗವನ್ನೇ ಪರಿಚಯಿಸಿತು. ಆಗಲೇ ಹಿಂದಿ ಸಿನಿಮಾ ಎಂದರೆ ಅದು ಕೇವಲ ಶೋಲೆ ಮತ್ತು ಅಮಿತಾಬ ಬಚ್ಚನ್ ಮಾತ್ರವಲ್ಲ ಅದನ್ನೂ ಮೀರಿ ಅಲ್ಲಿ ಅನೇಕ ಪ್ರತಿಭೆಗಳ ಸಂಗಮವಿದೆ ಎಂದು ಗೊತ್ತಾಗಿದ್ದು.
ನನ್ನ ಸಮಕಾಲಿನ ಹಿಂದಿಯೇತರ ಪ್ರೇಕ್ಷಕರಲ್ಲಿ ಹಿಂದಿ ಸಿನಿಮಾರಂಗದ ಒಂದು ಶ್ರೇಷ್ಠತೆಯನ್ನು ಪರಿಚಯಿಸಿದ್ದೆ ಈ ರಾಜೇಶ ಖನ್ನಾ ಅಭಿನಯದ ಸಿನಿಮಾಗಳು. ರಾಜೇಶ ಖನ್ನಾ ಹಳೆ ಬೇರು ಮತ್ತು ಹೊಸ ಚಿಗುರಿನ ಮಧ್ಯದ ಕೊಂಡಿ. ಹಿಂದಿ ಸಿನಿಮಾಕ್ಕೊಂದು ಮಾಂತ್ರಿಕ ಸ್ಪರ್ಶ ನೀಡಿದ ರಾಜಕಪೂರ, ಶಮ್ಮಿ ಕಪೂರ, ಗುರುದತ್ತ ಅವರ ಕಲಾ ಬದುಕಿನ ಕೊನೆಯ ದಿನಗಳು ಹಾಗೂ ಯಂಗ್ರಿ ಯಂಗ್ ಮ್ಯಾನ್ ಇಮೇಜಿನಿಂದ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಲು ಪ್ರಯತ್ನಿಸುತ್ತಿದ್ದ ಧರ್ಮೇಂದ್ರ, ಅಮಿತಾಬರಂಥ ನಟರು ಪ್ರವರ್ಧಮಾನಕ್ಕೆ ಬರುತ್ತಿದ್ದ ಆ ಸಮಯ ತಮ್ಮ ವಿಶಿಷ್ಠ ಅಭಿನಯದಿಂದ ತಮ್ಮದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡವರು ಈ ರಾಜೇಶ ಖನ್ನಾ. 1980ರ ದಶಕದ ನಂತರದ ಹಿಂದಿ ಚಿತ್ರರಂಗಕ್ಕೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ನನ್ನ ವಯೋಮಾನದ ಪ್ರೇಕ್ಷಕರನ್ನು ಹಳೆಯ ಹಿಂದಿ ಸಿನಿಮಾಗಳನ್ನು ನೋಡುವಂಥ ಆಕರ್ಷಣೆಗೆ ಒಳಪಡಿಸಿದ್ದು ಇದೇ ರಾಜೇಶ ಖನ್ನಾರ 'ಆರಾಧನಾ', 'ಬಾವರ್ಚಿ'ಯಂಥ ವಿಶಿಷ್ಟ ಸಿನಿಮಾಗಳು.
1980ರ ದಶಕದ ನಂತರ ಮಲ್ಟಿ ಸ್ಟಾರ್ ಸಿನಿಮಾಗಳ ಅಬ್ಬರದ ನಡುವೆ ರಾಜೇಶ ಖನ್ನಾ ಜನಪ್ರಿಯತೆ ಕಡಿಮೆಯಾಗುತ್ತ ಬಂದಿದ್ದು ನಿಜ. ಆದರೆ ಕಲೆಯನ್ನು ಕಲೆಯಾಗಿಯೇ ಉಳಿಸಿ ಹೋದವನು ಈ ನಟ ಎಂದರೆ ಉತ್ಪ್ರೇಕ್ಷೆಯಾಗಲಾರದು. ಏಕೆಂದರೆ ಆತನ ನಂತರದ ಅನೇಕ ಕಲಾವಿದರು ತಮ್ಮಲ್ಲಿನ ಕಲೆಯನ್ನು ಅಭಿನಯದ ಆಚೆಯೂ ಜಾಹಿರಾತು ಪ್ರಪಂಚಕ್ಕೆ ಕೊಂಡೊಯ್ದು ಕಲಾವಂತಿಕೆಯನ್ನು ಮಾರುಕಟ್ಟೆಯ ಸರಕಾಗಿಸಿ ಬಿಕರಿಗಿಟ್ಟಿದ್ದುಂಟು. ಕಲೆಯನ್ನು ಹಣಕ್ಕಾಗಿ ಮಾರಿಕೊಳ್ಳುತ್ತಿರುವ ಕಲಾವಿದರ ನಡುವೆಯೂ ರಾಜೇಶ ಖನ್ನಾ ಅಭಿನಯಿಸುವುದನ್ನು ಬಿಟ್ಟ ಅನೇಕ ವರ್ಷಗಳ ನಂತರವೂ ಮತ್ತೆ ಮತ್ತೆ ನೆನಪಾಗುತ್ತಾರೆ. ಅವರ ಅಭಿನಯದ ಚಿತ್ರಗಳು ಸರ್ವಕಾಲಿಕ ಶ್ರೇಷ್ಠ ಚಿತ್ರಗಳ ಸಾಲಿನಲ್ಲಿ ಸದಾಕಾಲ ಇದ್ದು ಭಾರತೀಯ ಪ್ರೇಕ್ಷಕರನ್ನು ಕಾಡುತ್ತಲೇ ಇರುತ್ತವೆ.
-ರಾಜಕುಮಾರ ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ

No comments:
Post a Comment