Wednesday, November 9, 2022
ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ‘ಗ್ರಂಥಾಲಯ: ಸಾರ್ವಜನಿಕರ ಕೊರತೆಯೇಕೆ?’ ಲೇಖನವನ್ನು ಕೇಳಿ
Saturday, November 5, 2022
ಸಾವು: ಮಾರಾಟಕ್ಕಿಟ್ಟ ಸರಕು?

(ಪ್ರಜಾವಾಣಿ 08.09.2022)
ಪ್ರತಿಯೊಬ್ಬರ ಬದುಕಿನಲ್ಲಿ ಲೋಕಾಂತ ಮತ್ತು ಏಕಾಂತಗಳೆಂಬ ಎರಡು ಪ್ರದೇಶಗಳಿರುತ್ತವೆ ಎಂದಿದ್ದಾರೆ ತಿಳಿದವರು. ಸದಾಕಾಲ ಲೋಕಾಂತದಲ್ಲೇ ಬದುಕುತ್ತಿರುವ ಮನುಷ್ಯನಿಗೆ ಏಕಾಂತವನ್ನು ಪ್ರವೇಶಿಸುವಷ್ಟು ತಾಳ್ಮೆಯಾಗಲಿ ಮತ್ತು ಪುರುಸೊತ್ತಾಗಲಿ ಇಲ್ಲ. ಇಂದಿನ ವೈಭವದ ಆಧುನಿಕ ಜೀವನಶೈಲಿಯಿಂದಾಗಿ ನಿಶ್ಯಬ್ದ ಮತ್ತು ನೀರವ ವಾತಾವರಣದಲ್ಲಿ ಒಬ್ಬಂಟಿಯಾಗಿ ಕುಳಿತು ಮನಸ್ಸನ್ನು ನಿಗ್ರಹಿಸಿಕೊಳ್ಳುತ್ತ ಏಕಾಂತವನ್ನು ಹೊಕ್ಕು ತನ್ನ ವರ್ತನೆಯನ್ನು ವಿಮರ್ಶಿಸಿಕೊಳ್ಳುವ ಆತ್ಮಾವಲೋಕನದ ಗುಣವನ್ನು ಮನುಷ್ಯ ಕಳೆದುಕೊಂಡಿರುವನು. ಆತ್ಮಪರೀಕ್ಷೆ, ಆತ್ಮವಿಮರ್ಶೆಗೆ ಇವತ್ತು ಮನುಷ್ಯ ಒಳಗಾಗುತ್ತಿಲ್ಲ. ಸಮಾಜದಲ್ಲಿ ಕ್ರೌರ್ಯ ಮತ್ತು ಹಿಂಸೆ ವಿಜೃಂಭಿಸುತ್ತಿವೆ. ಅದಕ್ಕೆಂದೆ ಇಲ್ಲಿ ಸಾವು ಕೂಡ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಸರಕಿನಂತೆ ಗೋಚರಿಸುತ್ತಿದೆ.
ಇತ್ತೀಚೆಗೆ ಒಂದು ವಾರದ ಅವಧಿಯಲ್ಲಿ ನನ್ನ ಅನುಭವಕ್ಕೆ ಬಂದ ಎರಡು ಪ್ರಸಂಗಗಳು ಇದನ್ನು ಸಾಕ್ಷೀಕರಿಸುವಂತಿವೆ. ಬೆಳಗ್ಗಿನ ವಾಕಿಂಗ್‍ನಲ್ಲಿ ಆಗಾಗ ಭೇಟಿಯಾಗುವ ಪರಿಚಯದ ಹಿರಿಯರೊಬ್ಬರು ಇತ್ತೀಚೆಗೆ ಹದಿನೈದು ದಿನಗಳಿಂದ ಕಾಣಿಸದೆಯಿದ್ದವರು ಮೊನ್ನೆ ಧಿಡೀರೆಂದು ಪ್ರತ್ಯಕ್ಷರಾದರು. ಹದಿನೈದು ದಿನಗಳ ಅವರ ಅನುಪಸ್ಥಿತಿಗೆ ಕಾರಣ ಕೇಳಿದಾಗ ಅವರು ಹೇಳಿದ್ದಿಷ್ಟು-‘ಎರಡು ವಾರಗಳ ಹಿಂದೆ ಇದ್ದಕ್ಕಿದ್ದಂತೆ ಕಾಯಿಲೆಯಿಂದ ಆರೋಗ್ಯದಲ್ಲಿ ಏರುಪೇರಾಗಿ ಸಾವಿನ ಭಯ ಮನಸ್ಸನ್ನು ಆವರಿಸಿತು. ಬದುಕಿನಲ್ಲಿ ಇನ್ನು ಅನುಭವಿಸಬೇಕಾದದ್ದು ಸಾಕಷ್ಟಿದೆ. ಸಾವಿನ ಭೀತಿಯಿಂದ ಪಾರಾಗಲು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಕಾಣಿಕೆ ಸಮರ್ಪಿಸಿದೆ. ತಿಮ್ಮಪ್ಪನಿಗೆ ಕಿರೀಟ, ಹನುಮಪ್ಪನಿಗೆ ಗದೆ, ಫಕೀರಪ್ಪನಿಗೆ ಹೂವಿನ ಬುಟ್ಟಿ, ಮಾರಮ್ಮನಿಗೆ ಸೀರೆ ಸಲ್ಲಿಸಿ ಮನೆಯಲ್ಲಿ ಹೋಮ ಹವನಗಳನ್ನು ಮಾಡಿದ್ದಾಯಿತು. ಜೊತೆಗೆ ಆಸ್ಪತ್ರೆಯ ಖರ್ಚು ಬೇರೆ. ಲಕ್ಷಾಂತರ ರೂಪಾಯಿಗಳು ಕೈಬಿಟ್ಟು ಹೋದರೂ ಚಿಂತೆಯಿಲ್ಲ ಸಾವಿನ ಭಯ ಈಗ ದೂರಾಗಿದೆ’.
ಈ ಮೇಲಿನ ಘಟನೆಗೆ ಭಿನ್ನವಾದ ಘಟನೆಯೊಂದು ಸರಿಸುಮಾರು ಇದೇ ಸಂದರ್ಭದಲ್ಲಿ ಜರುಗಿತು. ನನ್ನ ಪಕ್ಕದ ಮನೆಯ ವಯಸ್ಸಾದ ಹಿರಿಯರು ಎದೆನೋವಿನಿಂದ ಹಾಸಿಗೆಹಿಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿರುವರು. ಅವರ ಆರೋಗ್ಯ ವಿಚಾರಿಸಲೆಂದು ಹೋದಾಗ ಅವರು ನುಡಿದಿದ್ದು ಹೀಗೆ-‘ಈಗೀಗ ಸಾವು ಯಾವ ಸಮಯದಲ್ಲಾದರೂ ಬರಬಹುದೆಂದು ಅನಿಸಲಾರಂಭಿಸಿದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವಾಗ ಬದುಕಿನ ಸತ್ಯ ದರ್ಶನವಾಯಿತು. ನಾನು ಇದುವರೆಗೂ ಬದುಕಿನಲ್ಲಿ ಸಾಧಿಸಿರುವುದೇನು ಎಂದು ಅನಿಸಲಾರಂಭಿಸಿದೆ. ಇದುವರೆಗಿನ ಆಯುಷ್ಯನ್ನು ಸ್ವಂತದ ಬದುಕನ್ನು ಕಟ್ಟಿಕೊಳ್ಳುವುದರಲ್ಲೇ ಕಳೆದದ್ದಾಯಿತು. ಈಗ ಉಳಿದಿರುವ ಆಯುಷ್ಯದಲ್ಲಿ ಬೇರೆಯವರಿಗಾಗಿ ಬದುಕಬೇಕೆನ್ನುವ ಪ್ರಜ್ಞೆ ಮೂಡಿದೆ. ದುಡಿದು ಗಳಿಸಿದ್ದರಲ್ಲಿ ಒಂದಿಷ್ಟನ್ನು ಸಮಾಜಕ್ಕೆ ನೀಡಬೇಕೆನ್ನುವ ಬಯಕೆ ಪ್ರಬಲವಾಗುತ್ತಿದೆ’.
‘ಜಾತಸ್ಯ ಮರಣಂ ಧ್ರುವಂ’ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಹುಟ್ಟು ಆಕಸ್ಮಿಕ ಆದರೆ ಸಾವು ಅನಿವಾರ್ಯ ಎಂದಿರುವರು ಚಿಂತಕರು. ‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾತಕೋ’ ಎಂದು ಅನುಭಾವಿಗಳು ಸಾವಿನ ಅನಿವಾರ್ಯತೆಯನ್ನು ತಿಳಿಸಿಕೊಟ್ಟಿರುವರು. ‘ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ’ ಎಂದು ಹಾಡಿರುವರು ಕನಕದಾಸರು. ಇಷ್ಟೆಲ್ಲ ಹಿನ್ನೆಲೆಯಿದ್ದೂ ಮನುಷ್ಯ ಚಿರಂಜೀವಿತ್ವದ ಭಾವನೆಯಿಂದ ಸೇಡು, ದ್ವೇಷ, ಕ್ರೌರ್ಯ, ಶೋಷಣೆಯ ಗುಣಗಳನ್ನು ಮೈಗೂಡಿಸಿಕೊಂಡು ಮೃಗೀಯವರ್ತನೆಯನ್ನು ತೋರಿಸುತ್ತಿರುವನು. ಅಮರತ್ವದ ಭಾವನೆ ಮುನ್ನೆಲೆಗೆ ಬಂದು ಬದುಕಿನ ಕ್ಷಣಿಕತೆಯ ಅರಿವು ಹಿನ್ನೆಲೆಗೆ ಸರಿದಿದೆ. ವಿಮರ್ಶಕ ಜಿ.ಎಸ್.ಆಮೂರ ಅವರು ಹೇಳಿದಂತೆ ಮನುಷ್ಯ ನಾಗರಿಕನಾಗಿ ಎಷ್ಟೇ ಮುಂದುವರೆದರೂ ಅವನ ಮೂಲ ಪ್ರವೃತ್ತಿಗಳಾದ ಕಾಮ, ಕ್ರೋಧ ಮತ್ತು ದ್ವೇಷ ಇವುಗಳಿಂದ ಬಿಡುಗಡೆ ಹೊಂದಲು ಇವತ್ತಿಗೂ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ನ್ಯಾಯ-ಅನ್ಯಾಯ, ಸತ್ಯ-ಸುಳ್ಳು, ಅಹಿಂಸೆ-ಹಿಂಸೆ, ನೈತಿಕ-ಅನೈತಿಕ ಇವುಗಳ ನಡುವಣ ಗೆರೆ ಬಹಳ ತೆಳುವಾಗುತ್ತಿದ್ದು ಮನುಷ್ಯ ಸಾವಿನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವನು.
ಸಾವೆನ್ನುವುದು ಸತ್ತ ನಂತರವೂ ಬೇರೆಯವರ ಮೂಲಕ ಬದುಕಲು ದಂಡನೆಗೆ ಒಳಗಾದಂತೆ ಎಂದಿರುವ ಫ್ರೆಂಚ್ ಲೇಖಕ ಸಾರ್ತ್ರೆ ಸಾವನ್ನು ಅರ್ಥೈಸಿದ್ದು ಹೀಗೆ- ‘ಸಾವು ವ್ಯಕ್ತಿಯ ಬಾಳಿನ ಭೂತವನ್ನು ಬದಲಾಯಿಸಲು ಒಂದು ನಿರ್ಧಿಷ್ಟತೆ ತಂದುಬಿಡುತ್ತದೆ. ಆದ್ದರಿಂದ ಸತ್ತ ನಂತರದ ಬಾಳು ಬದುಕಿರುವವರ ಸ್ವತ್ತಾಗುತ್ತದೆ. ಅದನ್ನು ಅವರು ಬೇಕಾದರೆ ಉಳಿಸಿಕೊಳ್ಳಬಹುದು ಅಥವಾ ಅದನ್ನು ಕತ್ತಲೆಗೆ ತಳ್ಳುವುದರ ಮೂಲಕ ಅದಕ್ಕೆ ಎರಡನೆಯ ಸಾವನ್ನು ತರಬಹುದು’.
ಸಾವು ಬರಹಗಾರರನ್ನು ಮತ್ತು ಚಿಂತಕರನ್ನು ನಿರಂತರವಾಗಿ ಕಾಡಿದ ವಸ್ತುವಾಗಿದೆ. ಕತೆ, ಕಾದಂಬರಿ, ಆತ್ಮಕಥೆಗಳಲ್ಲಿ ಸಾವು ಮತ್ತೆ ಮತ್ತೆ ಗಾಢವಾಗಿ ಚರ್ಚೆಗೊಳಗಾಗಿದೆ. ಪಿ.ಲಂಕೇಶ್ ತಮ್ಮ ಆತ್ಮಚರಿತ್ರೆ ‘ಹುಳಿಮಾವಿನ ಮರ’ದಲ್ಲಿ ಸಾವಿನ ಕುರಿತು ಹೀಗೆ ಹೇಳಿಕೊಂಡಿರುವರು, ‘ನನ್ನ ಗಾಢ, ದುಗುಡದ ವೇಳೆಯಲ್ಲಿ ಸಾವಿನ ಹತ್ತಿರ ಇದ್ದಂತಿದ್ದಾಗ ಮುತ್ಸದ್ದಿತನ, ಹೊಂದಾಣಿಕೆ, ಖ್ಯಾತಿ, ಪ್ರಶಸ್ತಿ ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ ರೀತಿಯೂ ಬದಲಾಯಿತು. ಸಾವು ಇನ್ನು ಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ ಛಾಯೆ ಅನ್ನಿಸತೊಡಗಿತು’.
ಸಾವಿನ ನೆನಪು ಬದುಕನ್ನು ಅರ್ಥಪೂರ್ಣವಾಗಿಸಿದೆ ಎಂದು ಧನಾತ್ಮಕವಾಗಿ ಯೋಚಿಸುವವರೂ ನಮ್ಮ ನಡುವಿದ್ದಾರೆ. ಮನುಷ್ಯ ಸಾಯದೆ ಇದ್ದರೆ ಈ ಜಗತ್ತು ಎಷ್ಟೊಂದು ಅಸಹ್ಯವಾಗಿರುತ್ತಿತ್ತು ಎಂದು ಚಿಂತಿಸಿದ ಅನಂತಮೂರ್ತಿ ಅವರ ಮಾತಿನಲ್ಲಿ ಸಾವಿನಪ್ರಜ್ಞೆ ಇದೆ. ಸಾವಿಲ್ಲದ ಮನೆಯ ಸಾಸಿವೆಕಾಳು ತರಲು ಹೇಳಿ ಕಿಸಾಗೌತಮಿಗೆ ಸಾವಿನ ಅಸ್ತಿತ್ವದ ಅರಿವು ಮೂಡಿಸಿದ ಬುದ್ಧನ ನಾಡಿನಲ್ಲಿ ಸಾವು ನಮ್ಮನ್ನು ಎಚ್ಚರಿಸುವ ಪ್ರಜ್ಞೆಯಾಗಬೇಕು. ಮೌಲ್ಯಗಳು ಅಪಮೌಲ್ಯಗೊಳ್ಳುತ್ತ ಅನೈತಿಕತೆ, ಅಪ್ರಾಮಾಣಿಕತೆಗಳು ವಿಜೃಂಭಿಸುತ್ತಿರುವಾಗ ಸಾವಿನ ಪ್ರಜ್ಞೆಯಲ್ಲಿ ಬದುಕು ಅರಳಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.
-ರಾಜಕುಮಾರ ಕುಲಕರ್ಣಿ
Thursday, October 6, 2022
ಪ್ರಜಾವಾಣಿ ಕನ್ನಡ ಧ್ವನಿಯಲ್ಲಿ 'ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ' ಲೇಖನವನ್ನು ಕೇಳಿ
ದಿನಾಂಕ ೦೪.೧೦.೨೦೨೨ ರಂದು ಪ್ರಜಾವಾಣಿ ಪತ್ರಿಕೆಯ 'ಸಂಗತ' ಅಂಕಣದಲ್ಲಿ ನನ್ನ 'ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ' ಲೇಖನ ಪ್ರಕಟವಾಯಿತು. ಈ ಲೇಖನ ದಿನಾಂಕ ೦೫.೧೦.೨೦೨೨ ರಂದು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಬಿತ್ತರವಾಯಿತು. ಕೇಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ವೆಬ್ ವಿಳಾಸವಾಗಿ ಉಪಯೋಗಿಸಿ.
https://open.spotify.com/
-ರಾಜಕುಮಾರ ಕುಲಕರ್ಣಿ
Monday, October 3, 2022
ಗಾಳಕ್ಕೆ ಸಿಲುಕುವುದು ಬೇಡ
(ಪ್ರಜಾವಾಣಿ 04.08.2022 ರಲ್ಲಿ ಪ್ರಕಟ)
ಲೇಖಕ ಎಂಥೋನಿ ಸ್ಟೊರ್ ಮನುಷ್ಯನ ಕ್ರೂರತ್ವವನ್ನು ಕುರಿತು ಹೇಳಿದ್ದು ಹೀಗೆ-‘ರೋಡೆಂಟ್ ಜಾತಿಯ ಕೆಲವು ಪ್ರಾಣಿಗಳನ್ನು ಬಿಟ್ಟರೆ ಕಶೇರುಕ ವರ್ಗದ ಯಾವ ಪ್ರಾಣಿಯೂ ತನ್ನದೇ ವರ್ಗದ ಇನ್ನೊಂದು ಪ್ರಾಣಿಯನ್ನು ಅಭ್ಯಾಸ ಬಲದಿಂದ ಕೊಲ್ಲುವ ಉದಾಹರಣೆಯಿಲ್ಲ. ಕೊಲ್ಲುವ ಸುಖಕ್ಕಾಗಿಯೇ ಕೊಲ್ಲುವ ಪ್ರಾಣಿ ಮನುಷ್ಯನನ್ನು ಬಿಟ್ಟು ಇನ್ನೊಂದಿಲ್ಲ. ನಮ್ಮ ವಿಷಾದಕ್ಕೆ ಕಾರಣವಾಗುವ ಸಂಗತಿಯೆಂದರೆ ಪೃಥ್ವಿಯ ಮೇಲಿನ ಪ್ರಾಣಿವರ್ಗಗಳಲ್ಲೇ ಅತ್ಯಂತ ಕ್ರೂರ ಹಾಗೂ ನಿಷ್ಠುರವಾದದ್ದೆಂದರೆ ಮನುಷ್ಯ ಜಾತಿಯೇ’.
ಮನುಷ್ಯ ಮನುಷ್ಯನನ್ನೇ ಬೇಟೆಯಾಡುವ, ಕೊಲ್ಲುವ, ಹಿಂಸಿಸುವ, ಶೋಷಿಸುವ ಪ್ರವೃತ್ತಿ ಇಂದು ನಿನ್ನೆಯದಲ್ಲ. ಅನಾದಿಕಾಲದಿಂದಲೂ ಮನುಷ್ಯನಲ್ಲಿ ಈ ಗುಣಗಳು ಅವ್ಯಾಹತವಾಗಿ ಮುಂದುವರೆದುಕೊಂಡು ಬಂದಿವೆ. ಪ್ರೀತಿ, ಕರುಣೆ, ಅಂತ:ಕರಣಗಳಿರಬೇಕಾದ ಜಾಗದಲ್ಲಿ ದ್ವೇಷ, ಸೇಡು, ಹಿಂಸೆಗಳು ವಿಜೃಂಭಿಸುತ್ತಿವೆ. ಮನುಷ್ಯ ನಾಗರಿಕನಾದಂತೆಲ್ಲ ಅವನ ಬುದ್ಧಿ, ಭಾವಗಳು ಸಂಕುಚಿತಗೊಳ್ಳುತ್ತಿವೆ. ಮನುಷ್ಯ ಮನುಷ್ಯರ ನಡುವಣ ಸಂಬಂಧಗಳನ್ನು ಲಾಭ, ನಷ್ಟಗಳ ಲೆಕ್ಕಾಚಾರದಿಂದ ನೋಡಲಾಗುತ್ತಿದೆ. ಬದುಕಿನಲ್ಲಿ ವ್ಯಾಪಾರ ಮನೋಧರ್ಮ ಮುನ್ನೆಲೆಗೆ ಬಂದು ತ್ಯಾಗ, ಪ್ರೀತಿ, ಸಹಿಷ್ಣುತೆಯ ಗುಣಗಳು ಹಿನ್ನೆಲೆಗೆ ಸರಿದಿವೆ.
ಮನಸ್ಸಿಗೆ ನೋವು ನೀಡುವ ಪ್ರವೃತ್ತಿ ನಾಗರಿಕ ಸಮಾಜದಲ್ಲೇ ಹೆಚ್ಚುತ್ತಿದೆ. ದೈಹಿಕ ನೋವಿಗಿಂತ ಮಾನಸಿಕ ನೋವು ಅತ್ಯಂತ ಅಪಾಯಕಾರಿ. ಮನುಷ್ಯ ತನ್ನ ದೇಹದ ಮೇಲಿನ ಗಾಯಗಳನ್ನು ಮರೆಯಬಹುದು ಆದರೆ ಮನಸ್ಸಿಗಾಗುವ ಗಾಯ ಬೇಗನೆ ಮಾಯುವಂತಹದ್ದಲ್ಲ. ಅಸಂವೇದಿಯಾಗುತ್ತಿರುವ ಮನುಷ್ಯ ನಗುವಿನ ಮುಖವಾಡದ ಹಿಂದೆ ಹಲ್ಲುಮಸೆತದ ಕ್ರೌರ್ಯವನ್ನು ಪ್ರದರ್ಶಿಸುತ್ತಿರುವನು.
ಮನಶಾಸ್ತ್ರಜ್ಞ ಎರಿಕ್ ಬರ್ನ್ ಪರಿಚಯಿಸಿದ ‘ಟ್ರಾನ್ಸಾಕ್ಷನಲ್ ಆ್ಯನಾಲಿಸಿಸ್’ ಎನ್ನುವ ಪರಿಕಲ್ಪನೆ ಮನುಷ್ಯನೇ ಸೃಷ್ಟಿಸಿಕೊಂಡಿರುವ ಈ ಕ್ರೂರ ವ್ಯವಸ್ಥೆಯಲ್ಲಿ ಮನುಷ್ಯ ಮನುಷ್ಯನಂತೆ ಬದುಕುವುದನ್ನು ಹೇಳಿಕೊಡುತ್ತದೆ. ಈ ಪರಿಕಲ್ಪನೆಯನ್ವಯ ಮನುಷ್ಯ ಬೇರೆಯವರೊಂದಿಗೆ ಮಾತನಾಡುವ ಪೂರ್ವದಲ್ಲಿ ವರ್ತನೆ, ಆಲೋಚನೆ, ತನ್ನೊಳಗಿನ ಸಂಘರ್ಷ ಇವುಗಳ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು ಎನ್ನುತ್ತಾರೆ ಮನೋವಿಜ್ಞಾನಿಗಳು. ಸಂಭಾಷಣೆಯ ಸಂದರ್ಭ ತನ್ನ ಮಾತು ಮತ್ತು ವರ್ತನೆ ಎದುರಿಗಿರುವ ವ್ಯಕ್ತಿಗೆ ನೋವನ್ನುಂಟು ಮಾಡದಂತೆ ಪೂರ್ವಸಿದ್ಧತೆಯೊಂದಿಗೆ ಮಾತಿಗಿಳಿಯುವುದೆ ‘ಟ್ರಾನ್ಸಾಕ್ಷನಲ್ ಆ್ಯನಾಲಿಸಿಸ್’ನ ಪ್ರಮುಖ ಲಕ್ಷಣ. ನಾಗರಿಕತೆಯ ವೇಷ ತೊಟ್ಟು ಅನಾಗರಿಕರಂತೆ ಮನುಷ್ಯರು ವರ್ತಿಸುತ್ತಿರುವ ಇವತ್ತಿನ ದಿನಗಳಲ್ಲಿ ಎರಿಕ್ ಬರ್ನ್ ಪರಿಚಯಿಸಿದ ಈ ಪರಿಕಲ್ಪನೆಯನ್ನು ಅರಿಯುವುದು ತುಂಬ ಅಗತ್ಯವಾಗಿದೆ.
ನನ್ನ ಪರಿಚಯದ ಹಿರಿಯರೊಬ್ಬರು ಆಗಾಗ ಹೇಳುವ ಮಾತಿದು-‘ನನ್ನ ಮನಸ್ಸಿಗೆ ನೋವಾದಾಗ ಅಥವಾ ಮಾಡಬೇಕೆಂದಿರುವ ಕೆಲಸದಲ್ಲಿ ಸೋಲು ಎದುರಾದಾಗ ನಾನು ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಪುಸ್ತಕವನ್ನು ಓದುತ್ತೇನೆ. ಆಗ ನೋವು ಮತ್ತು ಸೋಲನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಈ ಪುಸ್ತಕದ ಓದು ನನಗೆ ತಂದು ಕೊಡುತ್ತದೆ. ನನಗೇ ಗೊತ್ತಿಲ್ಲ ಈ ಪುಸ್ತಕವನ್ನು ನಾನು ಅದೆಷ್ಟು ಬಾರಿ ಓದಿರುವೆನೆಂದು’. ಈ ಮಾತು ಸಾಹಿತ್ಯಕ್ಕಿರುವ ಶಕ್ತಿಗೊಂದು ದೃಷ್ಟಾಂತ. ಅನುದಿನದ ಅಂತರಗಂಗೆಯಂತೆ ಸಾಹಿತ್ಯ ಜನಮಾನಸದಲ್ಲಿ ಹಾಸುಹೊಕ್ಕಾಗಿ ಪ್ರವಹಿಸುತ್ತಲೇ ಇದೆ. ಅದಕ್ಕಾಗಿಯೇ ಓದು ಬಹುಮುಖ್ಯ. ಅದನ್ನು ಎಲ್ಲರೂ ರೂಢಿಸಿಕೊಳ್ಳಬೇಕು.
ಸಾರ್ವಜನಿಕ ಜೀವನದಲ್ಲಿ ಟೀಕೆ-ಟಿಪ್ಪಣೆಗಳ ಗುಣಮಟ್ಟ ಕುಸಿದಿರುವುದಕ್ಕೆ ಓದಿನ ಕೊರತೆಯೂ ಒಂದು ಪ್ರಮುಖ ಕಾರಣ. ಶಾಸನಸಭೆ ಕಲಾಪದ ಗುಣಮಟ್ಟ ಕೆಟ್ಟಿರುವುದಕ್ಕೆ ಕೂಡ ಇದೇ ಕಾರಣ. ಭಾಷೆಗೆ ಇರುವ ಸೊಬಗು ಮತ್ತು ಘನತೆಯನ್ನು ಅರಿಯದವರು ಅದನ್ನು ಹೇಗೆ ಬೇಕಾದರೂ ಬಳಸಬಲ್ಲರು. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವ ಬಸವಣ್ಣನವರ ವಚನವು ನಮ್ಮ ನುಡಿ ಹೇಗಿರಬೇಕು ಮತ್ತು ಮನುಷ್ಯ ಹೇಗೆ ಬಾಳಬೇಕು ಎನ್ನುವುದನ್ನು ಸೂಚಿಸುತ್ತದೆ. ದಿನಕರ ದೇಸಾಯಿ ಅವರ ‘ಹಚ್ಚುವುದಾದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ. ಆರಿಸುವುದಾದರೆ ಬೆಂಕಿ ಆರಿಸು, ದೀಪ ಆರಿಸಬೇಡ’ ಎಂಬ ಈ ಸಾಲು ಬದುಕಿನ ಸಾರ್ಥಕ್ಯದ ಬಗೆಗೆ, ಬದುಕನ್ನು ಗ್ರಹಿಸುವ ದೃಷ್ಟಿಕೋನ ಹೇಗಿರಬೇಕು ಎಂಬುದರ ಕುರಿತ ಹೇಳುತ್ತದೆ.
ಕಾಮನ್‍ವೆಲ್ತ್ ಕ್ರೀಡಾಕೂಟ ನಡೆಯುತ್ತಿದೆ. ಅಲ್ಲಿನ ಆಟೋಟಗಳಿಂದ ಸ್ಫೂರ್ತಿ ಪಡೆಯೋಣ. ಮಕ್ಕಳನ್ನು ಆ ದಾರಿಯಲ್ಲಿ ನಡೆಯುವಂತೆ ಹುರಿದುಂಬಿಸೋಣ. ಕನ್ನಡದ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗುತ್ತಿವೆ. ಒಳ್ಳೆಯ ಸಿನಿಮಾ ನೋಡಿ ಖುಷಿಪಡೋಣ. ರಾಜಕಾರಣವನ್ನು ಸಹನೀಯಗೊಳಿಸಿದ ಮಹನೀಯರನ್ನು ನೆನೆದು ಅಂತಹವರಿಗಾಗಿ ಹುಡುಕೋಣ. ಇದು ಈ ಕ್ಷಣದ ಅಗತ್ಯ.
‘ಮೊಳಕೆಯೊಡೆಯಬೇಕು, ಸಸಿಯಾಗಿ-ಗಿಡವಾಗಿ-ಹೂವಾಗಿ ಕಣ್ತೆರೆಯಬೇಕು. ಮೇಲಿನ ಸೂರ್ಯನ ಬೆಳಕು ಕಾಣುತ್ತ ತಾನೇ ಬೆಳಕಾಗಬೇಕು ಎನ್ನುವ ಬೀಜದ ಬಯಕೆಯ ಸುಳಿವು ಬೀಜ ಬಿದ್ದ ಮಣ್ಣಿಗಿರುವುದು ಸಾಧ್ಯವೆ?’ ಸಾಹಿತ್ಯದ ಇಂಥ ಸಾಲುಗಳೇ ಬದುಕಬೇಕು, ಸಾಧಿಸಬೇಕೆಂಬ ನಮ್ಮೊಳಗಿನ ಜೀವಸೆಲೆ ಬತ್ತದಂತೆ ನಿರಂತರ ನೀರಹನಿ ಹೊಯ್ದು ಪೋಷಿಸುತ್ತಿವೆ.
‘ನಾವು ಎಷ್ಟೇ ಸಮರ್ಥಿಸಿಕೊಂಡರೂ ನಮ್ಮ ಬೈಗುಳಕ್ಕೆ-ದ್ವೇಷಕ್ಕೆ ಪಾತ್ರವಾದ ವ್ಯಕ್ತಿಯಾಗಲಿ, ವಸ್ತುವಾಗಲಿ ಜಗತ್ತಿನಲ್ಲಿ ಇಲ್ಲ. ದ್ವೇಷಕ್ಕೆ ಅಧಿಕಾರಿ ಇದ್ದಾನೆ, ವಸ್ತು ಇಲ್ಲ. ಇಲ್ಲಿ ಎಲ್ಲವೂ ಪ್ರೀತಿಗೆ ಯೋಗ್ಯವಾದದ್ದೇ ಪ್ರೀತಿಸುವ ತಾಕತ್ತು ನಮಗೆ ಇದ್ದಲಿ’ ಎಂದಿರುವರು ಯಶವಂತ ಚಿತ್ತಾಲರು.
ರಾಜಕೀಯ ಲಾಭಕ್ಕಾಗಿ ಕೆಲವರು ಒಡಕಿನ ಬೀಜಗಳನ್ನು ಬಿತ್ತುತ್ತಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ರಾಜಕೀಯದಾಟಗಳು ಮತ್ತೂ ಹೆಚ್ಚಬಹುದು. ಮತಗಳಿಕೆಯ ಗಾಳಕ್ಕೆ ನಾವು ಸಿಲುಕುವುದು ಬೇಡ. ಮನದ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡೋಣ.
-ರಾಜಕುಮಾರ ಕುಲಕರ್ಣಿ
Friday, September 2, 2022
ಮೆದುಳಿಗೆ ಇಳಿಯುತ್ತಿದೆಯೇ ಮಾಹಿತಿ?
(೦೫.೦೭.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)
ಇದು ಎರಡು ದಶಕಗಳ ಹಿಂದಿನ ಮಾತು-ಪದವಿ ತರಗತಿಯ ವಿದ್ಯಾರ್ಥಿಗಳಿಗೆ ನಾನು ಆಕ್ಸ್‍ಫರ್ಡ್ ಇಂಗ್ಲಿಷ್ ನಿಘಂಟುವಿನ ಸಂಪಾದಕ ಜೇಮ್ಸ್ ಮರ್ರೆ ಕುರಿತು ಪಾಠ ಮಾಡಬೇಕಿತ್ತು. ಬೃಹತ್ ಗಾತ್ರದ ಆಕ್ಸ್‍ಫರ್ಡ್ ಇಂಗ್ಲಿಷ್ ನಿಘಂಟುವಿನ ಯಾವ ಪುಟದಲ್ಲೂ ಅದರ ಸಂಪಾದಕ ಜೇಮ್ಸ್ ಮರ್ರೆ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ಕೊನೆಗೆ ಎರಡು ದಿನಗಳ ಕಾಲ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಭೇಟಿ ನೀಡಿ ಹಲವಾರು ಪರಾಮರ್ಶನ ಪುಸ್ತಕಗಳನ್ನು ಪರಿಶೀಲಿಸಿ ಮಾಹಿತಿಯನ್ನು ಹೆಕ್ಕಿ ತೆಗೆದಾಗ ಸಿಕ್ಕ ಮಾಹಿತಿ ಅರ್ಧಪುಟದಷ್ಟಿತ್ತು.
ಇಂಟರ್‍ನೆಟ್ ಹೆಚ್ಚು ಬಳಕೆಯಿಲ್ಲದ ಕಾಲದಲ್ಲಿ ಮಾಹಿತಿಯ ಶೋಧನೆ ಹೆಚ್ಚು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಆ ಎರಡು ದಿನಗಳ ಅನೇಕ ಪುಸ್ತಕಗಳ ಓದು ಹಲವು ವಿಷಯಗಳನ್ನು ತಿಳಿದುಕೊಳ್ಳಲು ಸಹಾಯವಾಯಿತು. ಇಂದು ಪರಿಸ್ಥಿತಿ ಹಿಂದಿನಂತಿಲ್ಲ- ಇಂಟರ್‍ನೆಟ್ ಬಳಕೆ ವ್ಯಾಪಕವಾಗಿದ್ದು ಜಾಲತಾಣದಲ್ಲಿ ಜೇಮ್ಸ್ ಮರ್ರೆ ಹೆಸರು ಟೈಪಿಸಿದ ಕ್ಷಣಾರ್ಧದಲ್ಲಿ ಹತ್ತಾರು ಪುಟಗಳ ಮಾಹಿತಿ ಕಂಪ್ಯೂಟರ್ ಪರದೆಯ ಮೇಲೆ ತೆರೆದುಕೊಳ್ಳುತ್ತದೆ. ಒಂದರ್ಥದಲ್ಲಿ ಮಾಹಿತಿಯು ಓದುಗನ ಬೆರಳ ತುದಿಯಲ್ಲಿದೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ.
ಸಾಮಾನ್ಯ ಮಾಹಿತಿ ಮಾತ್ರವಲ್ಲದೆ ಇಂದು ಸಂಶೋಧನಾ ಲೇಖನಗಳು ಕೂಡ ಓದುಗರಿಗೆ ಉಚಿತವಾಗಿ ಲಭ್ಯವಾಗುತ್ತಿವೆ. ಸ್ಕಿ-ಹಬ್ ಹೆಸರಿನ ಜಾಲತಾಣ ಸಂಶೋಧನಾ ಲೇಖನವೊಂದು ಪ್ರಕಟವಾದ ಕೆಲವೇ ದಿನಗಳಲ್ಲಿ ಓದುಗರ ಕೈಸೇರುವಂತೆ ಮಾಹಿತಿ ಪಡೆಯುವಿಕೆಯನ್ನು ಸರಳಗೊಳಿಸಿದೆ. ಸಾಮಾನ್ಯವಾಗಿ ಸಂಶೋಧನಾ ನಿಯತಕಾಲಿಕೆಗಳ ಜಾಲತಾಣದಿಂದ ಲೇಖನವನ್ನು ಪಡೆಯಲು ಓದುಗ ನಿರ್ಧಿಷ್ಟ ಮೊತ್ತದ ಹಣವನ್ನು ಭರಿಸಬೇಕು. ಆದರೆ ಸ್ಕಿ-ಹಬ್ ಜಾಲತಾಣದ ಮೂಲಕ ಹೊಸ ಸಂಶೋಧನಾ ಲೇಖನಗಳನ್ನು ಕೂಡ ಉಚಿತವಾಗಿ ಪಡೆಯುವ ಸೌಲಭ್ಯವುಂಟು. ಈ ಮಾಹಿತಿ ಸೋರುವಿಕೆಯನ್ನು ತಡೆಗಟ್ಟಲು ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಅಂತರರಾಷ್ಟ್ರೀಯ ನ್ಯಾಯÁಲಯದಲ್ಲಿ ಸ್ಕಿ-ಹಬ್ ಮೇಲೆ ದಾವೆ ಹೂಡಿವೆ.
ಮಾಹಿತಿಯು ಸುಲಭವಾಗಿ ಮತ್ತು ಹೆಚ್ಚಿನ ಪರಿಶ್ರಮವಿಲ್ಲದೆ ದೊರೆಯುತ್ತಿರುವುದರಿಂದ ಇಂದು ಬರವಣಿಗೆಯಲ್ಲಿ ‘ಕತ್ತರಿಸು ಮತ್ತು ಅಂಟಿಸು’ (ಕಟ್ ಆ್ಯಂಡ್ ಪೇಸ್ಟ್) ಸಂಸ್ಕೃತಿಯು ಮುನ್ನೆಲೆಗೆ ಬಂದಿದೆ. ಅತಿಹೆಚ್ಚಿನ ಬರಹಗಾರರು ತಮ್ಮ ಅಧ್ಯಯನದ ವಿಷಯದಲ್ಲಿ ಪ್ರಕಟವಾದ ವಿವಿಧ ಲೇಖನಗಳನ್ನು ಸಂಗ್ರಹಿಸಿ ಪ್ರತಿ ಲೇಖನದಿಂದ ಒಂದಿಷ್ಟು ಮಾಹಿತಿಯನ್ನು ಪಡೆದುಕೊಂಡು ಹೀಗೆ ಕಲೆಹಾಕಿದ ಮಾಹಿತಿಗೆ ಹೊಸ ಲೇಖನದ ಸ್ವರೂಪ ನೀಡುತ್ತಿರುವರು. ಬರಹಗಾರರ ಈ ನಕಲು ಸಂಸ್ಕೃತಿಗೆ ತಡೆ ಹಾಕಲು ಪ್ರಕಾಶಕರು ನಕಲು ಅಥವಾ ಕೃತಿಚೌರ್ಯವನ್ನು ಪತ್ತೆ ಹಚ್ಚಲು ತಂತ್ರಾಂಶಗಳನ್ನು ಉಪಯೋಗಿಸುತ್ತಿರುವರು. ಇಲ್ಲಿ ಜಾಣ ಬರಹಗಾರ ಮೂಲ ಲೇಖನದ ವಾಕ್ಯದಲ್ಲಿನ ಒಂದೆರಡು ಶಬ್ದಗಳನ್ನು ಕೈಬಿಡುವುದರಿಂದಲೊ ಅಥವಾ ಹೊಸ ಶಬ್ದಗಳ ಸೇರ್ಪಡೆಯಿಂದ ತಂತ್ರಾಂಶದ ನಕಲು ಶೋಧನೆಯ ಕಾರ್ಯವನ್ನೇ ಕಷ್ಟಸಾಧ್ಯಗೊಳಿಸುತ್ತಿರುವನು.
ತಂತ್ರಜ್ಞಾನ ಕೊಡಮಾಡುತ್ತಿರುವ ಸೌಲಭ್ಯಗಳಿಂದ ವಿದ್ಯಾರ್ಥಿಗಳು ಶಿಕ್ಷಕರ ಸಹಾಯವಿಲ್ಲದೆ ಅಭ್ಯಾಸಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಸುಲಭವಾಗಿ ಕಲೆಹಾಕುತ್ತಿರುವರು. ಪ್ರಾಯೋಗಿಕ ತರಗತಿಗಳಿಗೆ ಹಾಜರಾದರೆ ಸಾಕು ಥಿಯರಿಗೆ ಸಂಬಂಧಿಸಿದ ಸಾಮಗ್ರಿಯನ್ನು ತರಗತಿಗೆ ಹಾಜರಾಗದೇ ಕಲೆಹಾಕಬಹುದೆನ್ನುವ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಇಂದು ನಾವು ಕಾಣುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದ ಮೊರೆ ಹೋಗುತ್ತಿರುವುದರಿಂದ ಕಲಿಕೆ ಎನ್ನುವುದು ಶಿಕ್ಷಕ ಮತ್ತು ವಿದ್ಯಾರ್ಥಿ ಜೊತೆಯಾಗಿ ಪಾಲ್ಗೊಳ್ಳುವ ಚಟುವಟಿಕೆ ಎನ್ನುವ ಮಾತು ಸವಕಲಾಗಿ ಈಗ ಕಲಿಕೆಯು ಏಕಮುಖವಾದ ಕ್ರಿಯೆಯಾಗಿ ಬದಲಾಗುತ್ತಿದೆ.
ತಂತ್ರಜ್ಞಾನ ಅಗಾಧ ಪ್ರಮಾಣದಲ್ಲಿ ಮಾಹಿತಿಯನ್ನು ಉತ್ಪಾದಿಸಲು ಮತ್ತು ಓದುಗರಿಗೆ ಸುಲಭವಾಗಿ ದೊರೆಯಲು ನೆರವಾಗುತ್ತಿರುವ ಸಂದರ್ಭದಲ್ಲೇ ಗುಣಾತ್ಮಕ ಸಂಶೋಧನೆಗಳಾಗುತ್ತಿಲ್ಲ ಎಂದು ಚರ್ಚಿಸುವ ವಿಲಕ್ಷಣ ಸನ್ನಿವೇಶದಲ್ಲಿ ನಾವಿದ್ದೇವೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಸಮಿತಿ, ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಈ ಉನ್ನತ ಶಿಕ್ಷಣ ಸಮಿತಿಗಳು ಶಿಕ್ಷಕರು ಉದ್ಯೋಗಬಡ್ತಿ ಮತ್ತು ವೇತನಬಡ್ತಿಗಾಗಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದನ್ನು ಕಡ್ಡಾಯಗೊಳಿಸಿವೆ. ಶಿಕ್ಷಕರ ಈ ಅಗತ್ಯವನ್ನು ಮನಗಂಡು ಅನೇಕ ಸಂಶೋಧನಾ ನಿಯತಕಾಲಿಕೆಗಳು ಲೇಖನಗಳನ್ನು ಪ್ರಕಟಿಸಲು ನಿರ್ಧಿಷ್ಟ ಮೊತ್ತದ ಶುಲ್ಕವನ್ನು ನಿಗದಿಪಡಿಸಿವೆ. ಕೆಲವೊಮ್ಮೆ ತುರ್ತುಪರಿಸ್ಥಿತಿಗನುಗುಣವಾಗಿ ಶಿಕ್ಷಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಿ ತರಾತುರಿಯಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಶೀಘ್ರವಾಗಿ ಪ್ರಕಟಿಸುತ್ತಿರುವರು. ಶಿಕ್ಷಕರ ವೇತನ ಮತ್ತು ಉದ್ಯೋಗದ ಬಡ್ತಿಯನ್ನೇ ಬಂಡವಾಳವಾಗಿಸಿಕೊಂಡು ಅನೇಕ ನಿಯತಕಾಲಿಕೆಗಳು ಹೆಚ್ಚಿನ ಹಣ ಪಡೆದು ಲೇಖನಗಳನ್ನು ಪ್ರಕಟಿಸುತ್ತಿವೆ. ಈ ಬೆಳವಣಿಗೆಯನ್ನು ನಿಯಂತ್ರಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ ನಿರ್ಧಿಷ್ಟ ನಿಯತಕಾಲಿಕೆಗಳಲ್ಲೇ ಲೇಖನಗಳನ್ನು ಪ್ರಕಟಿಸಬೇಕೆನ್ನುವ ನಿಯಮವನ್ನು ಜಾರಿಗೆ ತಂದಿದೆ.
ವಿವಿಧ ಉನ್ನತ ಶಿಕ್ಷಣ ಸಮಿತಿಗಳ ಕಠಿಣ ನಿಯಮಗಳಿಂದಾಗಿ ಸಂಶೋಧನೆಯ ಪ್ರಮಾಣದಲ್ಲಿ ಏರುಗತಿ ಕಂಡುಬರುತ್ತಿದೆಯಾದರೂ ಗುಣಾತ್ಮಕ ಸಂಶೋಧನೆ ಎನ್ನುವುದು ಇನ್ನೂ ಮರಿಚಿಕೆಯಾಗಿಯೆ ಉಳಿದಿದೆ. ವೇತನಬಡ್ತಿ, ಉದ್ಯೋಗಬಡ್ತಿ, ಹುದ್ದೆಯ ನೇಮಕಾತಿಯ ನಿಯಮಗಳ ಚೌಕಟ್ಟಿಗೊಳಪಡಲು ಇಲ್ಲಿ ಬಹುಪಾಲು ಸಂಶೋಧನೆಗಳು ನಡೆಯುತ್ತಿವೆಯೇ ವಿನಾ ರಾಷ್ಟ್ರದ ಪ್ರಗತಿಗೆ ನೆರವಾಗಬಲ್ಲ ನಿಜವಾದ ಅರ್ಥದ ಸಂಶೋಧನೆಗಳು ನಿರೀಕ್ಷಿತ ಪ್ರಮಾಣದಲ್ಲಾಗುತ್ತಿಲ್ಲ. ಸಂಶೋಧನಾ ಪ್ರಬಂಧಗಳು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಗ್ರಂಥಾಲಯಗಳ ಅಲ್ಮೆರಾಗಳಿಗೆ ಶೋಭೆ ತರುತ್ತಿವೆಯೇ ಹೊರತು ಸಂಶೋಧಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿಲ್ಲ.
ಇನ್ನು ಸಾಹಿತ್ಯ ಕೃತಿಗಳನ್ನೂ ಡಿಜಿಟಲೀಕರಣಗೊಳಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ಸಾರ್ವಜನಿಕ ಗ್ರಂಥಾಲಯ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಚಾಲನೆ ದೊರೆತಿದೆ. ಏಕಕಾಲಕ್ಕೆ ಸಾಹಿತ್ಯ ಕೃತಿಯೊಂದು ಡಿಜಿಟಲೀಕರಣದ ರೂಪದಲ್ಲಿ ಹಲವು ಓದುಗರಿಗೆ ಲಭ್ಯವಾಗುವ ಈ ಸೌಲಭ್ಯವನ್ನು ಓದುಗರ ವಲಯ ಒಕ್ಕೊರಲಿನಿಂದ ಸ್ವಾಗತಿಸುತ್ತಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಓದುವ ಸಾಹಿತ್ಯ ಕೃತಿಯೊಂದು ಪುಸ್ತಕ ಓದಿದಂತೆ ಸರಾಗವಾಗಿ ಮನಸ್ಸಿಗಿಳಿಯಲಾರದು ಎನ್ನುವ ಸಮಸ್ಯೆ ಅನೇಕ ಓದುಗರದು. ಎಲೆಕ್ಟ್ರಾನಿಕ್ ಮಾಧ್ಯಮದ ವ್ಯಾಪಕ ಬಳಕೆಯಿಂದ ಪುಸ್ತಕ ಸಂಸ್ಕೃತಿ ನಶಿಸಿಹೋಗಬಹುದೆನ್ನುವ ಆತಂಕ ಒಂದುವರ್ಗದ ಓದುಗರನ್ನು ಕಾಡುತ್ತಿದೆ. ಈ ನಡುವೆ ಮಾಹಿತಿಯ ಸುಲಭ ಪ್ರಾಪ್ತಿ ಕೃತಿಚೌರ್ಯವನ್ನು ಸುಗಮವಾಗಿಸಿರುವುದರಿಂದ ಶಿಕ್ಷಕರ, ಸಂಶೋಧಕರ ಮತ್ತು ವಿದ್ಯಾರ್ಥಿಗಳ ಅರಿವಿನ ವ್ಯಾಪ್ತಿ ವಿಸ್ತರಿಸುತ್ತಿಲ್ಲ ಎನ್ನುವ ಆರೋಪ ಶೈಕ್ಷಣಿಕ ವಲಯದಲ್ಲಿ ಕೇಳಿಬರುತ್ತಿದೆ.
-ರಾಜಕುಮಾರ ಕುಲಕರ್ಣಿ
Wednesday, August 3, 2022
ಇರಲಿ ವೃತ್ತಿಘನತೆಯ ಪ್ರಜ್ಞೆ
(೧೩.೦೬.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)
ಕಳೆದ ವರ್ಷದ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ರ್ಯಾಂಕ್‍ನೊಂದಿಗೆ ತೇರ್ಗಡೆಯಾದ ನನ್ನ ಪರಿಚಿತರ ಮಗ ವೈದ್ಯಕೀಯ ಕೋರ್ಸಿಗೆ ಪ್ರವೇಶ ಪಡೆಯಲು ನಿರಾಕರಿಸಿದ ಸಂಗತಿ ನನಗೆ ಅಚ್ಚರಿಯನ್ನುಂಟು ಮಾಡಿತು. ಮಾತಿನ ನಡುವೆ ಈ ಕುರಿತು ಪ್ರಶ್ನಿಸಿದಾಗ ‘ವೈದ್ಯಕೀಯ ವೃತ್ತಿ ಸದಾಕಾಲ ಸೇವೆಯನ್ನು ಬಯಸುವಂತಹದ್ದು. ಅಲ್ಲಿ ವೈಯಕ್ತಿಕ ಬದುಕಿಗೆ ಹೆಚ್ಚಿನ ಅವಕಾಶವಿಲ್ಲ. ಹಗಲು ಹೊತ್ತು ಬಿಡಿ, ರಾತ್ರಿ ವೇಳೆಯಲ್ಲೂ ರೋಗಿಗಳ ಚಿಕಿತ್ಸೆಗೆ ಮುಂದಾಗಬೇಕು. ವೈಯಕ್ತಿಕ ಬದುಕಿನ ಆಶೋತ್ತರಗಳನ್ನು ಬದಿಗೊತ್ತಿ ಆ ವೃತ್ತಿಯಲ್ಲಿ ಸಾಧಿಸುವಂತಹದ್ದಾದರೂ ಏನಿದೆ?’ ಎಂದು ಹೇಳಿದ. ಒಂದುಕ್ಷಣ ಅವನ ಪ್ರತಿಕ್ರಿಯೆ ಕೇಳಿ ನಾನು ದಂಗಾಗಿ ಹೋದೆ. ಪ್ರತಿಭಾವಂತನಾದ ಅವನು ವೈದ್ಯಕೀಯ ವೃತ್ತಿಯನ್ನು ಆರಿಸಿಕೊಂಡರೆ ಸಮಾಜಕ್ಕೊಬ್ಬ ಸೇವಾಮನೋಭಾವದ ವೈದ್ಯ ದೊರೆಯುವನೆಂದು ಮೊದಲಿನಿಂದ ಭರವಸೆ ಇಟ್ಟುಕೊಂಡಿದ್ದ ನನಗೆ ಆ ಸಂದರ್ಭ ಅವನ ಪ್ರತಿಕ್ರಿಯೆಯಿಂದ ಒಂದಿಷ್ಟು ನಿರಾಸೆಯ ಜೊತೆಗೆ ಅವನಲ್ಲಿನ ವೃತ್ತಿ ಘನತೆಯ ಅರಿವಿನ ಕೊರತೆಯಿಂದ ಮನಸ್ಸಿಗೆ ನೋವಾಗಿದ್ದಂತೂ ಸತ್ಯ.
ಕೆಲವು ವೃತ್ತಿಗಳೆ ಹಾಗೆ ಸದಾಕಾಲ ಒಂದಿಷ್ಟು ಅಗತ್ಯಗಳನ್ನು ಬಯಸುತ್ತವೆ. ವೃತ್ತಿ ಘನತೆಯನ್ನು ಎತ್ತಿ ಹಿಡಿಯುವುದಕ್ಕಾಗಿ ವೃತ್ತಿಯೊಂದು ಬಯಸುವ ಅಗತ್ಯಗಳಿಗೆ ಮನ್ನಣೆ ನೀಡಲೆಬೇಕು. ವೈದ್ಯಕೀಯ ವೃತ್ತಿಯನ್ನು ಆರಿಸಿಕೊಳ್ಳುವ ವ್ಯಕ್ತಿ ಹಗಲು ರಾತ್ರಿಗಳೆಂಬ ಭೇದವಿಲ್ಲದೆ ಸದಾಕಾಲ ರೋಗಿಗಳ ಸೇವೆಗೆ ತೆರೆದುಕೊಳ್ಳುವ ಮುಕ್ತ ಮನಸ್ಸು ಹೊಂದಿರಬೇಕು. ಶಿಕ್ಷಕ ವೃತ್ತಿ ತುಂಬ ಶಿಸ್ತನ್ನು ಬಯಸುತ್ತದೆ. ಶಿಕ್ಷಕ ವಿದ್ಯಾರ್ಥಿಗಳಿಗೆ ಮಾದರಿಯಾಗುವ ವ್ಯಕ್ತಿತ್ವವನ್ನು ರೂಪಿಸಿಕೊಂಡಿರಬೇಕು. ಪೊಲೀಸ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುವವರು ಕಾನೂನಿನ ಪರಿಪಾಲಕರಾಗಿರಬೇಕು. ಗ್ರಂಥಪಾಲಕ ಪುಸ್ತಕಗಳ ಓದಿನ ಆರಾಧಕನಾಗಿರಬೇಕು. ಪತ್ರಕರ್ತ ಸತ್ಯ, ನ್ಯಾಯ, ನಿಷ್ಟುರತೆಗಳಿಗೆ ಬದ್ಧನಾಗಿರಬೇಕು.
ವ್ಯಕ್ತಿಯು ಸಮಾಜಕ್ಕಲ್ಲವಾದರೂ ತನ್ನ ವೃತ್ತಿಗಾದರೂ ಉತ್ತರದಾಯಿಯಾಗಿರಬೇಕಾಗುತ್ತದೆ. ವೃತ್ತಿಯೊಂದನ್ನು ಆಯ್ಕೆಮಾಡಿಕೊಳ್ಳುವ ಪೂರ್ವದಲ್ಲಿ ಆ ವೃತ್ತಿ ನಮ್ಮಿಂದ ಏನನ್ನು ಬಯಸುತ್ತಿದೆ ಎನ್ನುವುದನ್ನು ಮನಗಾಣಬೇಕು. ವೃತ್ತಿಯ ಅಗತ್ಯಗಳಿಗನುಗುಣವಾಗಿ ಹುದ್ದೆಯನ್ನು ನಿರ್ವಹಿಸಲು ಮಾನಸಿಕವಾಗಿ ಸಿದ್ಧನಾಗಬೇಕು. ಇಲ್ಲಿ ತ್ಯಾಗ ಅಥವಾ ವೈಯಕ್ತಿಕ ಬದುಕನ್ನು ಕಳೆದುಕೊಳ್ಳುತ್ತಿದ್ದೇನೆ ಎನ್ನುವುದಕ್ಕಿಂತ ವೃತ್ತಿಯ ಘನತೆಯನ್ನು ಎತ್ತಿ ಹಿಡಿಯುವುದು ಮೊದಲ ಆದ್ಯತೆಯಾಗಬೇಕು. ವೃತ್ತಿಯು ತರುವ ಸಂಬಳ ಮತ್ತು ಸವಲತ್ತುಗಳು ಬೇಕು ಎನ್ನುವುದಾದರೆ ಅದರೊಂದಿಗೆ ವೃತ್ತಿಯು ಬೇಡುವ ಕೆಲವು ಅವಶ್ಯಕತೆಗಳನ್ನು ಮೈಗೂಡಿಸಿಕೊಳ್ಳಲು ಹಿಂಜರಿಯುವುದು ಇಲ್ಲವೇ ಲೆಕ್ಕಾಚಾರ ಹಾಕುವುದು ಯಾವ ನ್ಯಾಯ?.
ನಾನೇಕೆ ಸಾರ್ವಜನಿಕರ ಆರೋಗ್ಯದ ಕುರಿತು ಚಿಂತಿಸಲಿ ಎಂದು ವೈದ್ಯನೊಬ್ಬ ಕೇಳಿದರೆ ಎಷ್ಟು ಅಸಂಗತವೆನಿಸುತ್ತದೆಯೋ ಅಷ್ಟೇ ಅಸಂಗತತೆ ಪೊಲೀಸ್ ಅಧಿಕಾರಿ ನಾನೇಕೆ ಕಾನೂನಿಗೆ ನಿಷ್ಠೆಯಿಂದಿರಲಿ ಎಂದು ಯೋಚಿಸುವುದರಿಂದ ಅನಿಸುತ್ತದೆ. ಪುಸ್ತಕಗಳ ದ್ವೇಷಿ ಗ್ರಂಥಪಾಲಕ ಹುದ್ದೆಗೆ ನ್ಯಾಯಸಲ್ಲಿಸುವುದಿಲ್ಲ. ‘ವಿದ್ಯಾರ್ಥಿಗಳಿಗೆ ಪರೋಕ್ಷವಾಗಿಯಾದರೂ ತಿಳಿದು ಅವರ ಚಾರಿತ್ರ್ಯಕ್ಕೆ ಕೆಟ್ಟ ಮಾದರಿಯಾಗುವ ಯಾವ ಕೆಲಸವನ್ನೂ ಖಾಸಗಿಯಲ್ಲಿ ಕೂಡ ಮಾಡುವುದು ಅಧ್ಯಾಪಕನಿಗೆ ಸಲ್ಲುವುದಿಲ್ಲ. ಅಂಥವನು ಆ ವೃತ್ತಿಯನ್ನು ಬಿಟ್ಟುಬಿಡಬೇಕು ಎಂದು ನಾನು ದೃಢವಾಗಿ ನಂಬಿದವನು. ಉಪಾಧ್ಯಾಯನ ಘನತೆ ಇರುವುದು ಅವನ ಸಂಬಳದಿಂದಲ್ಲ-ವಿದ್ವತ್ತು, ಚಾರಿತ್ರ್ಯದಿಂದ ಕೂಡಿದ ವ್ಯಕ್ತಿತ್ವ ಮತ್ತು ಬೋಧನಾಶಕ್ತಿಗಳಿಂದ’ ಎಂದಿರುವರು ಎಸ್.ಎಲ್.ಭೈರಪ್ಪ ತಮ್ಮ ಆತ್ಮಕತೆ ಭಿತ್ತಿಯಲ್ಲಿ.
ತಮ್ಮ ವ್ಯಕ್ತಿತ್ವದ ಹಿರಿಮೆಯಿಂದ ತಾವು ಮಾಡುವ ವೃತ್ತಿಗೆ ಒಂದು ಘನತೆ ತಂದುಕೊಟ್ಟವರ ಅನೇಕ ಉದಾಹರಣೆಗಳಿವೆ. ಬಿಪಿನ್‍ಚಂದ್ರ ರಾಯ್ ತಮ್ಮ ಸೇವಾ ಮನೋಭಾವದಿಂದ ವೈದ್ಯಕೀಯ ಲೋಕದಲ್ಲಿ ಚಿರಸ್ಮರಣಿಯರಾಗಿ ಉಳಿದಿರುವರು. ಪ್ರತಿವರ್ಷ ಜುಲೈ 1 ರಂದು ಅವರ ಜನ್ಮದಿನವನ್ನು ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಸಲ್ಲಿಸಿದ ವೈದ್ಯರಿಗೆ ‘ಬಿ.ಸಿ.ರಾಯ್’ ಪ್ರಶಸ್ತಿಯನ್ನು ಕೊಡುವುದರ ಮೂಲಕ ಬಿಪಿನ್‍ಚಂದ್ರ ರಾಯ್ ಅವರ ಹೆಸರನ್ನು ಅಜರಾಮರಗೊಳಿಸಲಾಗಿದೆ. ಎಂಜಿನಿಯರ್ ಹುದ್ದೆಗೆ ಎಮ್.ವಿಶ್ವೇಶ್ವರಯ್ಯನವರು ತಮ್ಮ ಪ್ರತಿಭೆ ಮತ್ತು ಪ್ರಾಮಾಣಿಕತೆಯಿಂದ ವಿಶಿಷ್ಟ ಘನತೆ ತಂದುಕೊಟ್ಟರು. ಪತ್ರಿಕಾಲೋಕದಲ್ಲಿ ಕೆ.ಶಾಮರಾವ್, ವೈ.ಎನ್.ಕೆ ಹೆಸರು ಚಿರಸ್ಥಾಯಿಯಾಗಿವೆ. ವಿಜ್ಞಾನಿ ಎಂದಾಕ್ಷಣ ಥಟ್ಟನೆ ನೆನಪಾಗುವುದು ಅಬ್ದುಲ್ ಕಲಾಮ್ ಅವರ ಹೆಸರು. ಕುವೆಂಪು ತಮ್ಮ ಮಹಾಕೃತಿ ರಾಮಾಯಣ ದರ್ಶನಂ ಸಮರ್ಪಿಸಿದ್ದು ತಮ್ಮನ್ನು ತುಂಬ ಪ್ರಭಾವಿಸಿದ ಗುರುಗಳಾದ ವೆಂಕಣ್ಣಯ್ಯನವರಿಗೆ. ರಾಜಕುಮಾರ ಅವರಿಗೆ ನಟನೆ ಪ್ರವೃತ್ತಿಯಾಗಿರಲಿಲ್ಲ ಅದೊಂದು ಪವಿತ್ರ ವೃತ್ತಿಯಾಗಿತ್ತು. ಕಲೆಯ ಘನತೆಗೆ ಕುಂದುಬರದಂತೆ ಅವರು ಬದುಕಿದರು. ರಾಜಕಾರಣಿಯಾಗಿ ರಾಮಮನೋಹರ ಲೋಹಿಯಾ ಇವತ್ತಿಗೂ ಮಾದರಿ ವ್ಯಕ್ತಿ.
ಬದಲಾದ ಕಾಲಘಟ್ಟದಲ್ಲಿ ವೃತ್ತಿಘನತೆ ಹಿನ್ನೆಲೆಗೆ ಸರಿದು ಹಣ ಗಳಿಕೆಯೇ ಮುನ್ನೆಲೆಗೆ ಬಂದಿದೆ. ವೃತ್ತಿಯ ಮೂಲ ಉದ್ದೇಶವೇ ಅದು ಅಕ್ರಮವಾದರೂ ಸರಿ ಸಂಪತ್ತಿನ ಗಳಿಕೆ ಎನ್ನುವ ಮನೋಭಾವ ಬಲವಾಗುತ್ತಿದೆ. ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯಸಮ್ಮತ ಎನ್ನುವುದು ಇಂದು ಬದುಕಿನ ಪ್ರತಿಹಂತದಲ್ಲೂ ಅನ್ವಯವಾಗುತ್ತಿದೆ. ಅದಕ್ಕೆಂದೆ ಇಲ್ಲಿ ನೀತಿ ಪಾಠ ಬೋಧಿಸುವ ಶಿಕ್ಷಕರೂ ಕೂಡ ಅಕ್ರಮ ಗಳಿಕೆಗೆ ಮುಂದಾಗುತ್ತಾರೆ. ಕಾನೂನನ್ನು ಎತ್ತಿಹಿಡಿಯಬೇಕಾದ ವೃತ್ತಿಯಲ್ಲಿರುವವರೆ ಅನ್ಯಾಯ ಎಸಗುತ್ತಾರೆ. ದೇಶದ ನೀತಿ, ನಿಯಮಗಳನ್ನು ರೂಪಿಸುವವರೆ ಅನೀತಿಯ ಮಾರ್ಗ ಹಿಡಿಯುತ್ತಾರೆ. ಒಟ್ಟಾರೆ ಬೇಲಿಯೇ ಎದ್ದು ಹೊಲ ಮೇಯ್ದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಕೆಲವೊಮ್ಮೆ ಪಾಲಕರ ಒತ್ತಾಯ ಮತ್ತು ಮಹತ್ವಾಕಾಂಕ್ಷೆಗೆ ಮಣಿದು ಮಕ್ಕಳು ತಮಗೆ ಇಷ್ಟವಿಲ್ಲದ ಕೋರ್ಸು-ವೃತ್ತಿಗೆ ಸೇರಿಕೊಳ್ಳುವುದುಂಟು. ವೃತ್ತಿಯಲ್ಲಿ ಆಸಕ್ತಿಯೇ ಇಲ್ಲದ ವ್ಯಕ್ತಿಯಿಂದ ವೃತ್ತಿ ಘನತೆಯನ್ನು ನಿರೀಕ್ಷಿಸುವುದಾದರೂ ಹೇಗೆ?. ಆಗ ನಷ್ಟವಾಗುವುದು ಸಮಾಜಕ್ಕೆ ವಿನಾ ವ್ಯಕ್ತಿ ಅಥವಾ ಕುಟುಂಬಕ್ಕಲ್ಲ.
ಶಿಕ್ಷಕ, ವೈದ್ಯ, ಎಂಜಿನಿಯರ್, ನ್ಯಾಯವಾದಿ, ರಾಜಕಾರಣಿ ಈ ಎಲ್ಲ ವೃತ್ತಿಗಳು ಸಮಾಜವನ್ನು ಪ್ರಭಾವಿಸುವಷ್ಟು ಮಹತ್ವದ್ದಾಗಿವೆ. ವಿದ್ಯಾರ್ಥಿ ಸಮೂಹ ತಮಗೆ ಆಸಕ್ತಿಯಿರುವ ವೃತ್ತಿಯಲ್ಲಿ ಹೆಸರು ಮಾಡಿದವರನ್ನು ಆದರ್ಶವಾಗಿಟ್ಟುಕೊಳ್ಳುವುದು ಸಹಜ. ಪರಿಣಾಮವಾಗಿ ಕೆಲವೊಂದು ವೃತ್ತಿಯಲ್ಲಿರುವವರು ತಾವು ಸಮಾಜಕ್ಕೆ ಮಾದರಿಯಾಗಿದ್ದೇವೆ ಮತ್ತು ಯುವಶಕ್ತಿಯನ್ನು ಪ್ರಭಾವಿಸುತ್ತಿದ್ದೇವೆ ಎನ್ನುವ ಪ್ರಜ್ಞೆಯನ್ನು ಸದಾಕಾಲ ಜಾಗೃತವಾಗಿರಿಸಿಕೊಂಡಿರಬೇಕು. ಈ ಘನತೆಯ ಪ್ರಜ್ಞೆಯನ್ನು ಕಳೆದುಕೊಂಡರೆ ಸಾಲು ಸಾಲು ಕೊಲೆಗಳನ್ನು ಮಾಡಿಯೂ ಜನಮನ್ನಣೆಗೆ ಪಾತ್ರವಾಗುವ ಸಿನಿಮಾ ಮಾಧ್ಯಮದ ಕಥಾನಾಯಕರ ಪಾತ್ರಗಳೇ ನಮ್ಮ ಯುವಜನಾಂಗಕ್ಕೆ ಮಾದರಿಯೂ ಮತ್ತು ಆದರ್ಶವೂ ಆಗುವ ದುರಂತಕ್ಕೆ ನಾವೇ ಹೊಣೆಯಾಗಬೇಕಾಗುತ್ತದೆ.
ಯಶವಂತ ಚಿತ್ತಾಲರ ‘ಪುರುಷೋತ್ತಮ’ದಲ್ಲಿ ಹೀಗೊಂದು ಮಾತಿದೆ ‘ನಿರ್ಜೀವ ಕಲ್ಲಿನಂತೆ ತೆಪ್ಪಗೆ ಬಿದ್ದ ಮಾವಿನ ಗೊರಟೆಗೂ ತಿಳುವಳಿಕೆ ಉಂಟಂತಲ್ಲಪ್ಪಾ, ತನ್ನ ಜನ್ಮದ ಸಾರ್ಥಕ್ಯ ಇರುವುದು ಸೂರ್ಯನತ್ತ ಮುಖ ಮಾಡಿದ ಮರವಾಗುವುದರಲ್ಲೆಂದು’. ಇಂಥದ್ದೊಂದು ಘನತೆಯನ್ನು ಮನುಷ್ಯ ರೂಢಿಸಿಕೊಳ್ಳಬೇಕಿದೆ.
-ರಾಜಕುಮಾರ ಕುಲಕರ್ಣಿ
Tuesday, July 5, 2022
ಪಯಣ ಪಥದ ಪಥಿಕರಾಗಿ
(೧೯.೫.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)
ಇತ್ತೀಚೆಗೆ ಅಂತಿಮ ಪದವಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಹಾಸ್ಟೆಲಿನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮನಸ್ಸಿಗೆ ತುಂಬ ದು:ಖವನ್ನುಂಟುಮಾಡಿತು. ಖಿನ್ನತೆಯೇ ಅವನು ಆತ್ಮಹತ್ಯೆಯಂಥ ಹೇಯ ಮಾರ್ಗವನ್ನು ಆಯ್ದುಕೊಳ್ಳಲು ಕಾರಣವಾಗಿತ್ತು ಎನ್ನುವ ಮಾತುಗಳು ಕೇಳಿಬಂದವು. ಬದುಕಿ ಸಾಧಿಸಬೇಕಾದ ವಿಪುಲ ಅವಕಾಶ ಅವನೆದುರಿಗಿದ್ದರೂ ಅವನು ಸಾವನ್ನೇ ಆಯ್ಕೆ ಮಾಡಿಕೊಂಡ. ಆ ನಿರ್ಧಾರಕ್ಕೆ ಬಂದ ಗಳಿಗೆ ತಂದೆ-ತಾಯಿಯನ್ನು ಆತ ಜ್ಞಾಪಿಸಿಕೊಳ್ಳಬೇಕಿತ್ತು. ಜೀವನದ ಸವಾಲುಗಳಲ್ಲಿ ಗೆದ್ದು ನಿಂತ ಸಾಧಕರನ್ನು ಸ್ಮರಿಸಿಕೊಳ್ಳಬೇಕಿತ್ತು. ದೇಹದ ಅಂಗವೈಕಲ್ಯವನ್ನು ಮೆಟ್ಟಿನಿಂತು ಪ್ರಪಂಚಕ್ಕೇ ಮಾದರಿಯಾದ ಪ್ರಾತ:ಸ್ಮರಣೀಯರನ್ನು ನೆನಪಿಸಿಕೊಳ್ಳಬೇಕಿತ್ತು. ಕ್ಷಣಮಾತ್ರದ ನಿರ್ಧಾರ ಬದುಕನ್ನೇ ಬಲಿ ತೆಗೆದುಕೊಂಡಿತು. ಅಪ್ಪ ಅಮ್ಮನಿಗೆ ಮಗನ ಸಾವು ಅವರು ಬದುಕಿರುವವರೆಗೆ ಕಾಡುವ, ಕಂಗೆಡಿಸುವ ನೋವಾಗಿ ಉಳಿದು ಹೋಯಿತು.
ಪ್ರಾಣಿವರ್ಗಗಳಲ್ಲೇ ಮನುಷ್ಯ ಅತ್ಯಂತ ಶ್ರೇಷ್ಠ ಪ್ರಾಣಿ ಎಂದು ಪರಿಗಣಿಸಲ್ಪಟ್ಟಿರುವನು. ಭೂಮಿಯ ಮೇಲಿನ ಉಳಿದ ಯಾವ ಪ್ರಾಣಿಗಳಿಗೂ ಇಲ್ಲದ ಯೋಚನಾಶಕ್ತಿ ಎಂಬ ವೈಶಿಷ್ಟ್ಯತೆ ಮನುಷ್ಯನಿಗಿದೆ. ತನ್ನ ಬುದ್ಧಿಶಕ್ತಿಯ ಬಲದಿಂದಲೇ ಮನುಷ್ಯ ಭೂಮಿ, ಆಕಾಶ, ಅಗ್ನಿ, ನೀರು, ವಾಯು ಈ ಪಂಚಭೂತಗಳ ಮೇಲೆ ತನ್ನ ನಿಯಂತ್ರಣ ಸಾಧಿಸಿರುವನು. ವಿಜ್ಞಾನವನ್ನು ಮಾನವ ಜಗತ್ತಿನ ಏಳ್ಗೆಗೆ ಏಣಿಯಾಗಿಸಿಕೊಂಡು ಹೊಸ ಹೊಸ ಅವಿಷ್ಕಾರಗಳಿಂದ ಅಭಿವೃದ್ಧಿಯ ಪಥದತ್ತ ನಾಗಾಲೋಟದಿಂದ ಮುನ್ನಡೆಯುತ್ತಿರುವನು. ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ವಿದ್ಯಾವಂತ ಯುವಜನಾಂಗ ಪ್ರೇಮ ವೈಫಲ್ಯ, ಅಭ್ಯಾಸದ ಹೊರೆ, ಪರೀಕ್ಷೆಯಲ್ಲಿ ಅನುತ್ತೀರ್ಣ, ಇಚ್ಛಿಸಿದ ಕೋರ್ಸಿಗೆ ದೊರೆಯದ ಪ್ರವೇಶ ಇಂತಹ ಕಾರಣಗಳನ್ನು ನೀಡಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಇಡೀ ಮಾನವ ಕುಲವೇ ನಾಚಿಕೆಯಿಂದ ತಲೆತಗ್ಗಿಸಬೇಕಾದ ಸಂಗತಿ.
ಈ ಸಂದರ್ಭ ಪಾಲಕರು ಎಚ್ಚೆತ್ತುಕೊಳ್ಳುವುದೊಳಿತು. ಏಕೆಂದರೆ ಪಾಲಕರ ಅತಿಯಾದ ಮಹತ್ವಾಕಾಂಕ್ಷೆ ಮಕ್ಕಳನ್ನು ಸಾವಿನಂಚಿಗೆ ದೂಡುತ್ತಿದೆ. ಅಪ್ಪ, ಅಮ್ಮನ ಒತ್ತಾಯಕ್ಕೆ ತಮಗೆ ಇಷ್ಟವಿಲ್ಲದ ಕಾಲೇಜು, ಕೋರ್ಸಿಗೆ ಪ್ರವೇಶ ಪಡೆಯುವ ಯುವಜನಾಂಗ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸುವುದುಂಟು. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್, ಸರ್ಕಾರಿ ಅಧಿಕಾರಿಗಳನ್ನಾಗಿ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿ ಬಹಳಷ್ಟು ಪಾಲಕರು ಮಕ್ಕಳ ಆಸಕ್ತಿ ಮತ್ತು ಬುದ್ಧಿಮತ್ತೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮಕ್ಕಳು ಬಹುಪಾಲು ಸಮಯವನ್ನು ಶೈಕ್ಷಣಿಕ ಪರಿಸರದಲ್ಲಿ ಕಳೆಯುವಂಥ ವಾತಾವರಣವನ್ನು ಪಾಲಕರೇ ನಿರ್ಮಿಸಿಕೊಡುತ್ತಿರುವರು. ವಸತಿಶಾಲೆ, ಬೇಸಿಗೆ ಶಿಬಿರ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳೆಂದು ಮಕ್ಕಳು ಮನೆಯ ಪರಿಸರದಿಂದ ಹೊರಗೇ ಉಳಿಯುತ್ತಿರುವರು. ಮನೆ ಮತ್ತು ಕುಟುಂಬದ ಸದಸ್ಯರೊಂದಿಗಿನ ಈ ಭಾವನಾತ್ಮಕ ಮತ್ತು ಮಾನಸಿಕ ಅಂತರ ಅದೆಷ್ಟೋ ವಿದ್ಯಾರ್ಥಿಗಳನ್ನು ಖಿನ್ನತೆಗೆ ಒಳಗಾಗಿಸುತ್ತಿದೆ.
ಇಂದಿನ ಶಿಕ್ಷಣ ಪದ್ಧತಿಯಲ್ಲೂ ಲೋಪದೋಷಗಳಿವೆ. ವ್ಯಾಪಾರೀಕರಣ ಶಿಕ್ಷಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಶಿಕ್ಷಣದ ಉದ್ದೇಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಶಿಕ್ಷಣದಿಂದ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗುತ್ತಿಲ್ಲ. ಶಿಕ್ಷಕರು ಪಠ್ಯಕ್ರಮದಾಚೆ ಏನನ್ನೂ ಬೋಧಿಸುತ್ತಿಲ್ಲ. ನೀತಿಶಿಕ್ಷಣ ಎನ್ನುವುದು ಶಾಲಾ ಕಾಲೇಜುಗಳ ವೇಳಾಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ. ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವುದರಲ್ಲೇ ತಮ್ಮ ಪೂರ್ಣ ಸಮಯವನ್ನು ವಿನಿಯೋಗಿಸುತ್ತಿರುವ ಶಿಕ್ಷಕರು ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಿಲ್ಲ. ಹಿಂದಿನ ದಿನಗಳಲ್ಲಿ ಶಾಲಾ ಅವಧಿಯ ನಂತರವೂ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ಪಠ್ಯಕ್ರಮದಾಚೆ ಬದುಕಿನ ತತ್ವಗಳನ್ನು ಬೋಧಿಸುತ್ತಿದ್ದರು. ಪ್ರತಿವಿದ್ಯಾರ್ಥಿಯ ಯೋಗಕ್ಷೇಮ ವಿಚಾರಿಸುತ್ತಿದ್ದರು. ದಾರಿ ತಪ್ಪಿದಾಗ ಕಿವಿ ಹಿಂಡಿ ಬುದ್ಧಿ ಹೇಳುತ್ತಿದ್ದರು. ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯದ ಸಂಬಂಧ ನಾಲ್ಕು ಗೋಡೆಗಳ ನಡುವಣ ಪಠ್ಯಕ್ರಮದ ಬೋಧನೆಗೆ ಮಾತ್ರ ಸೀಮಿತವಾಗಿದೆ.
ಬದುಕು ಒಡ್ಡಿದ ಸವಾಲುಗಳನ್ನು ಎದುರಿಸಿ ಅಪ್ರತಿಮ ಸಾಧನೆಗೈದವರು ನಮ್ಮ ನಡುವಿರುವರು. ಸ್ಟೀಫನ್ ಹಾಕಿಂಗ್, ಪುಟ್ಟರಾಜ ಗವಾಯಿಗಳು, ಸುಧಾಚಂದ್ರನ್, ಜಾನ್ ಮಿಲ್ಟನ್ ಈ ಸಾಧಕರು ತಮ್ಮ ದೈಹಿಕ ವೈಕಲ್ಯವನ್ನು ಮೀರಿನಿಂತು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅದ್ಭುತವಾದದ್ದನ್ನು ಸಾಧಿಸಿದರು. ಈ ಸಾಧಕರು ಕ್ರಮಿಸಿದ ದಾರಿ ಅದು ಹೂವಿನ ಹಾದಿಯಾಗಿರಲಿಲ್ಲ. ಪಯಣದ ಪಥದಲ್ಲಿ ಎದುರಾದ ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿ ತಾವು ನಡೆಯಬೇಕಾದ ದಾರಿಯನ್ನು ಸ್ವತ: ತಾವೇ ನಿರ್ಮಿಸಿಕೊಂಡ ಪಥಿಕರಿವರು. ಒಂದೊಮ್ಮೆ ಅವರು ಸಮಸ್ಯೆಗಳಿಗೆ ಹೆದರಿ ಸಾಧನೆಯ ಪಥದಿಂದ ವಿಮುಖರಾಗಿದ್ದರೆ ಇಂದು ಜಗತ್ತು ಅವರನ್ನು ನೆನಪಿಟ್ಟುಕೊಳ್ಳುತ್ತಿರಲಿಲ್ಲ. ಪ್ರಪಂಚ ಸದಾ ಸ್ಮರಿಸುವುದು ಸಾಧಕರನ್ನೇ ವಿನಾ ಆತ್ಮಹತ್ಯೆಗೆ ಶರಣಾಗುವ ಹೇಡಿಗಳನ್ನಲ್ಲ. ಅಮೆರಿಕಾದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗುವ ಪೂರ್ವದಲ್ಲಿ ಅಬ್ರಾಹಂ ಲಿಂಕನ್‍ಗೆ ವಿವಿಧ ಚುನಾವಣೆಗಳಲ್ಲಿ ಸತತ ಒಂಬತ್ತು ಸೋಲುಗಳು ಎದುರಾಗಿದ್ದವು. ಇಂಥ ಸಾಧಕರ ಬದುಕು ಮಕ್ಕಳಿಗಷ್ಟೇ ಅಲ್ಲ ಪಾಲಕರಿಗೂ ಸ್ಪೂರ್ತಿಯಾಗಬೇಕು. ಕೇವಲ ಬೇಸಿಗೆ ಶಿಬಿರ, ವಸತಿ ಶಾಲೆಗಳು ಮತ್ತು ತರಬೇತಿ ಕೇಂದ್ರಗಳಲ್ಲಷ್ಟೇ ಮಕ್ಕಳ ಭವ್ಯ ಭವಿಷ್ಯ ನಿರ್ಮಾಣಗೊಳ್ಳುತ್ತಿದೆ ಎನ್ನುವ ಭ್ರಮೆಯಿಂದ ಪಾಲಕರು ಹೊರಬರಬೇಕಿದೆ.
ಯಶವಂತ ಚಿತ್ತಾಲರು ಮನುಷ್ಯನ ಬದುಕಬೇಕೆನ್ನುವ ಉತ್ಸಾಹವನ್ನು ವಿವರಿಸುತ್ತ ‘ಜೀವಕೋಟಿಯ ವಿಕಾಸದಲ್ಲಿ ‘ಬದುಕಬೇಕು’ ಎಂಬ ಅಭೀಪ್ಸೆಯ ಹಿಂದೆ ಕೋಟಿ ವರ್ಷಗಳ ಇತಿಹಾಸವಿದ್ದರೆ ‘ಯಾಕೆ ಬದುಕಬೇಕು?’ ಎಂದು ಕೇಳಿಕೊಳ್ಳುವ ಪ್ರಜ್ಞೆ ತೀರ ಸಧ್ಯದ್ದು. ಬದುಕುವುದರಲ್ಲಿ ಅದಮ್ಯ ಉತ್ಸಾಹವಿರುವ ಜೀವಕ್ಕೆ ಯಾಕೆ ಬದುಕಬೇಕು? ಎಂಬ ಪ್ರಶ್ನೆಗಿಂತ ಹೇಗೆ ಬದುಕಬೇಕು? ಎಂಬ ಪ್ರಶ್ನೆಯೇ ಹೆಚ್ಚು ಸಹಜವಾದದ್ದು. ನಿವೇಕೆ ಬದುಕಿದ್ದೀರಾ? ಎಂಬ ಪ್ರಶ್ನೆಗೆ ಬದುಕಿನಲ್ಲಿ ವಿಶ್ವಾಸವಿದ್ದ ಜೀವಿಯಿಂದ ಉತ್ತರವಿಲ್ಲ. ಆದರೆ ನೀವು ನಂಬಿಕೆ ಇಟ್ಟುಕೊಂಡ ಜೀವನ ಮೌಲ್ಯಗಳಾವುವು? ಯಾವ ಸಂಗತಿಗಳಿಂದಾಗಿ ನಿಮಗೆ ಬದುಕು ಅರ್ಥಪೂರ್ಣವೆನ್ನಿಸಿದೆ? ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು’ ಎಂದಿರುವರು.
‘ಕಹಾ ಮೈನೆ ಕಿತನಾ ಹೈ ಗುಲ್ ಕಾ ಸಬಾತ್/ಕಾಲಿನೆ ಯೆ ಸುನ್ಕರ್ ತಬಸ್ಸೂಂ ಕಿಯಾ’ (‘ಎಷ್ಟು ಕಾಲ?’ ನಾನು ಕೇಳಿದೆ ಗುಲಾಬಿಯ ಆಯಸ್ಸು. ಮೊಗ್ಗು ಮೊಗವೆತ್ತಿ ಮುಗುಳ್ನಕ್ಕಿತ್ತಷ್ಟೆ)- ಬದುಕಿನ ಮಹತ್ವವನ್ನು ಅತ್ಯಂತ ಅರ್ಥಪೂರ್ಣವಾಗಿ ವಿವರಿಸುವ ಮಿರ್ಜಾ ಗಾಲಿಬ್‍ನ ಗಝಲ್ ಸಾಲುಗಳಿವು. ಅರಳಿ ನಿಂತ ಹೂವು ತನ್ನ ಬದುಕು ಕ್ಷಣಿಕವೆಂದು ಎಂದಿಗೂ ಶೋಕಿಸುವುದಿಲ್ಲ. ಅದು ಬದುಕಿರುವವರೆಗೂ ತನ್ನ ಪರಿಮಳವನ್ನು ಸುತ್ತಲೂ ಬೀರುತ್ತದೆ. ಕಲ್ಲುಬಂಡೆ ಕೆಳಗಿನ ಗರಿಕೆ ಹುಲ್ಲು ಸಿಕ್ಕ ಅವಕಾಶದಲ್ಲೇ ಹೊರಚಾಚಿ ಚಿಗುರೊಡೆಯುತ್ತದೆ. ಬಚ್ಚಲಿನ ಕೊಳೆಯ ನೀರಲ್ಲಿ ಬೆಳೆದು ನಿಲ್ಲುವ ಮಲ್ಲಿಗೆ ಬಳ್ಳಿ ಗಿಡದ ಕೊನೆಗೆ ಘಮಘಮಿಸುವ ಹೂಗಳನ್ನು ಬಿಡುತ್ತದೆ. ಆದರೆ ದೇಹದಲ್ಲಿ ದೊಡ್ಡ ಮೆದುಳಿರುವ ಮನುಷ್ಯ ಮಾತ್ರ ಸೋಲುಗಳಿಗೆ ಅಧೀರನಾಗಿ ಸಾವಿನಲ್ಲಿ ಪರಿಹಾರ ಹುಡುಕುತ್ತಿರುವುದು ಎಷ್ಟು ನ್ಯಾಯ?.
-ರಾಜಕುಮಾರ ಕುಲಕರ್ಣಿ