Tuesday, May 3, 2016

ಅರುಣಾ ಶಾನಭಾಗ: ಸ್ತ್ರೀ ಶೋಷಣೆಯ ಇನ್ನೊಂದು ಮುಖ



     

                                   (೨೦೧೫, ಮೇ ೧೮ ರಂದು ಕೊನೆಯುಸಿರೆಳೆದ ಅರುಣಾ ಶಾನಭಾಗ)


                                          ಆಕಾಶದ ನೀಲಿಯಲ್ಲಿ
                                          ಚಂದ್ರ ತಾರೆ ತೊಟ್ಟಿಲಲ್ಲಿ
                                          ಬೆಳಕನಿಟ್ಟು ತೂಗಿದಾಕೆ
                                          ನಿನಗೆ ಬೇರೆ ಹೆಸರು ಬೇಕೆ
                                          ಸ್ತ್ರೀ ಅಂದರೆ ಅಷ್ಟೆ ಸಾಕೇ?
                                                                                   - ಜಿ. ಎಸ್. ಶಿವರುದ್ರಪ್ಪ

        ಸ್ತ್ರೀ ಶೋಷಿತಳು ಎನ್ನುವುದಕ್ಕೆ ಇತಿಹಾಸವೇ ಬಹುದೊಡ್ಡ ಸಾಕ್ಷಿ. ಇಲ್ಲಿ ಕಾನೂನಿನ ನಿಯಮಗಳು ಎಷ್ಟೇ ಕಠಿಣವಾಗಿದ್ದರೂ ಮಹಿಳೆಯನ್ನು ಶೋಷಣೆಯ ಪರಧಿಯಿಂದ ಹೊರತರಲು ಸಾಧ್ಯವಾಗುತ್ತಿಲ್ಲ. ಜೊತೆಗೆ ಶೋಷಣೆಗೆ ಒಳಗಾಗುವ ಮಹಿಳೆ ಮಾನ ಮತ್ತು ಗೌರವಕ್ಕೆ ಹೆದರಿ ಕಾನೂನಿನ ನೆರವು ಪಡೆಯಲು ಮುಂದಾಗುತ್ತಿಲ್ಲವಾದ್ದರಿಂದ ಮಹಿಳಾ ಶೋಷಣೆ ಎನ್ನುವುದು ಅನೂಚಾನವಾಗಿ ಮುಂದುವರೆಯುತ್ತಿದೆ. ಈ ಸಂದರ್ಭ ಮಾಧ್ಯಮಗಳ ಪಾತ್ರವನ್ನು ನಾವು ಒಂದಿಷ್ಟು ಶ್ಲಾಘಿಸಲೇ ಬೇಕು. ಸ್ತ್ರೀ ದೌರ್ಜನ್ಯದ ಸಂದರ್ಭಗಳಲ್ಲೆಲ್ಲ ಪತ್ರಿಕಾ ಮಾಧ್ಯಮ ಕಾನೂನಿಗೆ ತನ್ನ ನೆರವನ್ನು ನೀಡುತ್ತ ಬಂದಿದೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಪತ್ರಿಕಾ ಮಾಧ್ಯಮದಲ್ಲಿ ತಂತ್ರಜ್ಞಾನದ ಬಳಕೆಯ ಪರಿಣಾಮ ಮಹಿಳೆಯರ ಮೇಲಿನ ದೌರ್ಜನ್ಯ ಬಹುಬೇಗ ಜನರನ್ನು ಹೋಗಿ ತಲುಪುತ್ತಿದೆ. ಹೀಗೆ ಸುದ್ದಿ ವಾಹಿನಿಗಳು ಮಹಿಳೆಯ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಶೋಷಣೆಯನ್ನು ಜನರಿಗೆ ಒಯ್ದು ತಲುಪಿಸುತ್ತಿರುವ ಸಂದರ್ಭ ನನಗೆ ಅರುಣಾ ಶಾನಭಾಗ ಎನ್ನುವ ನತದೃಷ್ಟ ಹೆಣ್ಣು ಮಗಳು ನೆನಪಾಗುತ್ತಾಳೆ. ಒಂದು ವೇಳೆ ೧೯೭೦ ರ ದಶಕದಲ್ಲಿ ಸುದ್ದಿ ವಾಹಿನಿಗಳು ಈಗಿನಂತೆ ಕಾರ್ಯನಿರ್ವಹಿಸುತ್ತಿದ್ದರೆ   ಆ ಹತಭಾಗ್ಯಳಿಗೆ ನಿಜಕ್ಕೂ ನ್ಯಾಯ ದೊರೆಯುತ್ತಿತ್ತು.

             ಅದು ೨೦೧೧ ಪಿಂಕಿ ವಿರಾನಿ ಎನ್ನುವ ಮುಂಬೈ ಮೂಲದ ಪತ್ರಕರ್ತೆ ಕಿಂಗ್ಸ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಸುದೀರ್ಘ ೩೮ ವರ್ಷಗಳಿಂದ ಜೀವಂತ ಶವದಂತೆ ಬದುಕುತ್ತಿರುವ ಮಹಿಳೆಯ ದಯಾಮರಣಕ್ಕೆ ಅವಕಾಶ ಕೋರಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋದಾಗ ಸುದ್ದಿ ವಾಹಿನಿಗಳು ಈ ವಿಷಯವನ್ನು ಅತಿ ಮುಖ್ಯ ಸುದ್ದಿಯಾಗಿ ಬಿತ್ತರಿಸಿದವು. ಸುಪ್ರೀಮ್ ಕೋರ್ಟ್ ಪಿಂಕಿ ವಿರಾನಿಗೂ ಮತ್ತು ಆ ಮಹಿಳೆಗೂ ಯಾವುದೇ ಸಂಬಂಧವಿಲ್ಲ ಎನ್ನುವ ಹಿನ್ನೆಲೆಯಲ್ಲಿ ಅರ್ಜಿಯನ್ನು ತಿರಸ್ಕರಿಸಿತು. ಆದರೂ ಈ ಸಂದರ್ಭ ನ್ಯಾಯಾಲಯ ಸುದೀರ್ಘ ಕಾಲ ಜೀವಚ್ಛವದಂತೆ ಬದುಕುತ್ತಿರುವ ವ್ಯಕ್ತಿಗಳಿಗೆ ಒದಗಿಸಲಾಗಿರುವ ಜೀವರಕ್ಷಕ ಸೌಲಭ್ಯಗಳಲ್ಲಿ ಭಾಗಶ: ಸೌಲಭ್ಯವನ್ನು ತೆಗೆದುಹಾಕಬಹುದೆನ್ನುವ ಮಹತ್ವದ ತೀರ್ಪನ್ನು ನೀಡಿತು. ಹೀಗೆ ಈ ದೇಶದಲ್ಲಿ ದಯಾಮರಣಕ್ಕೆ ಸಂಬಂಧಿಸಿದಂತೆ ಹೊಸ ಕಾಯ್ದೆಯೊಂದು ಜಾರಿಗೆ ಬರಲು ಕಾರಣಳಾದ ಮಹಿಳೆಯ ಜಾಡನ್ನು ಹಿಡಿದು ಹೊರಟ ಪತ್ರಕರ್ತರಿಗೆ ಆಗ ಎದುರಾದದ್ದೇ ಅರುಣಾ ಶಾನಭಾಗ ಎನ್ನುವ ನತದೃಷ್ಟ ಹೆಣ್ಣುಮಗಳ ಕಥೆ. ೧೯೭೩ ರಿಂದ ಮುಂಬೈನ ಕಿಂಗ್ಸ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಮಾಂಸದ ಮುದ್ದೆಯಂತೆ ಯಾವ ಪ್ರತಿಕ್ರಿಯೆಯೂ ತೋರದೆ ಜೀವಂತ ಶವದಂತೆ ಬದುಕುತ್ತಿದ್ದ  ಅರುಣಾ ಶಾನಭಾಗಳ ಕಥೆ ಮುಂದಿನ ದಿನಗಳಲ್ಲಿ ಪತ್ರಿಕೆಗಳು ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಸಾರವಾದಾಗಲೇ ಜನರಿಗೆ ಅಂಥದ್ದೊಂದು ಕರಾಳ ಘಟನೆಯ ಅರಿವಾಯಿತು.

             ಈ ಅರುಣಾ ಶಾನಭಾಗ ಮೂಲತ: ಕರ್ನಾಟಕದವರು. ಶಿವಮೊಗ್ಗ ಜಿಲ್ಲೆಯ ಹಳದೀಪುರ ಆಕೆಯ ಹುಟ್ಟೂರು. ಅರುಣಾ ಜನಿಸಿದ್ದು ೧೯೪೮ ಜೂನ್  ೧ ರಂದು. ಅರುಣಾಳ ತಂದೆ ರಾಮಚಂದ್ರ ಶಾನಭಾಗ ಸಣ್ಣ ವ್ಯಾಪಾರಿಯಾಗಿದ್ದರು. ಅವರಿಗೆ ಆರು ಗಂಡು ಮತ್ತು ಮೂರು ಹೆಣ್ಣು ಒಟ್ಟು ಒಂಬತ್ತು ಜನ ಮಕ್ಕಳು. ಬೆನ್ನು ಹತ್ತಿದ ಬಡತನ ಮತ್ತು ತುಂಬು ಸಂಸಾರದ ಕಾರಣ ರಾಮಚಂದ್ರ ಶಾನಭಾಗರ ಮಕ್ಕಳೆಲ್ಲ ಕಷ್ಟದಲ್ಲೇ ಬೆಳೆದರು. ಅರುಣಾ ಹತ್ತನೇ ತರಗತಿಯವರೆಗೆ ಹುಟ್ಟೂರಲ್ಲೇ ಶಿಕ್ಷಣ ಪಡೆದು ನರ್ಸ್ ತರಬೇತಿಗಾಗಿ ಮುಂಬೈನ ಕೆ ಇ ಎಮ್ ಆಸ್ಪತ್ರೆಯಲ್ಲಿ ಪ್ರವೇಶ ಪಡೆದರು. ತರಬೇತಿಯ ನಂತರ ಅದೇ ಆಸ್ಪತ್ರೆಯಲ್ಲಿ ನರ್ಸ್ ಎಂದು ನೇಮಕಾತಿ ಹೊಂದಿ ತಮ್ಮ ವೃತ್ತಿಯನ್ನಾರಂಭಿಸಿದ ಅರುಣಾ ವೃತ್ತಿಯಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷಿಯಾಗಿದ್ದರು. ಅರುಣಾಳ ವೃತ್ತಿಪರತೆ ಮತ್ತು ಸೇವಾ ಮನೋಭಾವದಿಂದ ಆಕೆಯನ್ನು ಬಹುಬೇಗ ಎಲ್ಲರೂ ಗುರುತಿಸುವಂತಾಯಿತು. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ತರುಣ ವೈದ್ಯ ಅರುಣಾಳ ಸರಳತೆ ಸದ್ಗುಣಕ್ಕೆ ಮಾರುಹೋಗಿ ಅವಳನ್ನು ಮದುವೆಯಾಗುವ ತನ್ನ ಮನದಾಸೆಯನ್ನು ಹೇಳಿಕೊಂಡ. ಅದೇ ಆಗ ವೃತ್ತಿಯನ್ನಾರಂಭಿಸಿ ಬದುಕಿನಲ್ಲಿ ಒಂದು ನೆಲೆ ಕಂಡು ಕೊಳ್ಳಲು ಪ್ರಯತ್ನಿಸುತ್ತಿದ್ದ ಅರುಣಾ ಆ ವೈದ್ಯನ ಬೇಡಿಕೆಗೆ ಸ್ಪಂದಿಸಿ ಭವಿಷ್ಯದ ಕನಸು ಕಾಣತೊಡಗಿದಳು. ಆ ಎರಡೂ ಮನೆಗಳ ಕಡೆಯಿಂದ ಅವರ ಮದುವೆಗೆ ಯಾವುದೇ ತಕರಾರುಗಳಿರಲಿಲ್ಲ. ಇಬ್ಬರೂ ಜೊತೆಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈಯುವ ಪಣ ತೊಟ್ಟರು. ೧೯೭೩ ರ ಡಿಸೆಂಬರ್ ನ ಒಂದು ದಿನ ಆತನೊಡನೆ ಸಪ್ತಪದಿ ತುಳಿಯುವ ಅರುಣಾಳ ನಿರ್ಧಾರಕ್ಕೆ ಮನೆಯವರು ಅಸ್ತು ಎಂದರು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಅರುಣಾ ಮದುವೆಯಾಗಿ ಪತಿಯೊಂದಿಗೆ ಸುಖ ಸಂಸಾರ ನಡೆಸುತ್ತಿದ್ದಳು. ಆದರೆ ಕ್ರೂರ ವಿಧಿ ಅದಕ್ಕೆ ಅವಕಾಶವನ್ನೇ ನೀಡಲಿಲ್ಲ. ೧೯೭೩ ನವೆಂಬರ್ ೨೭ ರಂದು ಆಸ್ಪತ್ರೆಯ ತನ್ನ ಕೆಲಸ ಮುಗಿಸಿ ಮನೆಗೆ ತೆರಳುವ ಮೊದಲು ಬಟ್ಟೆ ಬದಲಾಯಿಸುವ ವೇಳೆ ಆ ಒಂದು ಅಸಂಗತ ಘಟನೆ ನಡೆದು ಹೋಯಿತು. ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಕಸಗುಡಿಸುವಾತ ಅರುಣಾಳ ಮೇಲಿನ ಯಾವುದೋ ಹಳೆಯ ದ್ವೇಷದಿಂದ ಅವಳ ಬದುಕನ್ನೇ ಹೊಸಕಿ ಹಾಕಿದ. ಚೀರಲು ಬಾಯಿ ತೆರೆದವಳ ಕುತ್ತಿಗೆಗೆ ಸರಪಳಿಯಿಂದ ಬಿಗಿದ ಪರಿಣಾಮ ಆಕೆಯ ಮಿದುಳಿನ ರಕ್ತದ ಸಂಚಲನ ಸ್ಥಗಿತಗೊಂಡಿತು. ಮಿದುಳು ಯಾವ ಪ್ರತಿಕ್ರಿಯೆ ತೋರದೆ ನಿಷ್ಕ್ರಿಯಗೊಂಡಿತು. ಆಸ್ಪತ್ರೆಯ ಸಿಬ್ಬಂದಿ ಬಂದು ನೋಡಿದಾಗ ಅರುಣಾ ರಕ್ತದ ಮಡುವಿನಲ್ಲಿ ಜೀವಂತ ಶವದಂತೆ ಬಿದ್ದುಕೊಂಡಿದ್ದು ಕಾಣಿಸಿತು. ಆಕೆ ಉಸಿರಾಡುತ್ತಿದ್ದಳು ಆದರೆ ದೇಹ ಮಾತ್ರ ಮಾಂಸದ ಮೂಟೆಯಂತಾಗಿತ್ತು. ಆಸ್ಪತ್ರೆಯ ವೈದ್ಯರು ಅರುಣಾಳಿಗೆ ಅಗತ್ಯವಾದ ಎಲ್ಲ ಚಿಕಿತ್ಸೆಯನ್ನು ನೀಡಿ ಅವಳ ಪ್ರಾಣವನ್ನು ಉಳಿಸಿದರಾದರೂ ಆಕೆ ಮೊದಲಿನಂತಾಗಲಿಲ್ಲ. ಮಿದುಳಿನ ನಿಷ್ಕ್ರಿಯತೆ ಮತ್ತು ಪಾರ್ಶ್ವವಾಯುಗಳಿಂದಾಗಿ ಆಕೆ ಹಾಸಿಗೆಯ ಮೇಲೇ ಬದುಕು ಕಳೆಯುವಂತಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಉತ್ತಮ ದರ್ಜೆಯ ಆಸ್ಪತ್ರೆಗೆ ದಾಖಲಿಸಬೇಕೆನ್ನುವ ಆಲೋಚನೆ ಬಂದರೂ ಒಂದಿಷ್ಟು ಚಲಿಸಿದರೂ ಅರುಣಾಳ ಮೂಳೆಗಳು ಮುರಿದು ಪುಡಿಯಾಗುವ ಸಮಸ್ಯೆ ಎದುರಾಯಿತು. ಕೆ ಇ ಎಮ್ ಆಸ್ಪತ್ರೆಯಲ್ಲೇ ಅವಳು ಬದುಕಿರುವವರೆಗೆ ನೋಡಿಕೊಳ್ಳುವ ನಿರ್ಧಾರದಿಂದ ವಾರ್ಡ್ ನಂಬರ್ ನಾಲ್ಕನ್ನು ವಿಶೇಷವಾಗಿ ಸಿದ್ಧಪಡಿಸಲಾಯಿತು. ಈ ನಡುವೆ ಅವಳ ಸಂಬಂಧಿಕರು ಮತ್ತು ಸಹೋದರ ಸಹೋದರಿಯರು ನೋಡಲು ಬಂದರಾದರೂ ಯಾರೊಬ್ಬರೂ ಅವಳ ಆರೈಕೆಗೆ ಮುಂದಾಗಲಿಲ್ಲ. ಕೆಲವು ದಿನಗಳ ನಂತರ ಸಂಬಂಧಿಕರು ಬರುವುದೂ ಕಡಿಮೆಯಾಗಿ ಮುಂದೊಂದು ದಿನ ಅವರ ಆಗಮನ ಶಾಶ್ವತವಾಗಿ ನಿಂತು ಹೋಯಿತು.

              ಅರುಣಾ ಶಾನಭಾಗಳ ಅತಿ ಸಂಕಷ್ಟದ ಸಮಯದಲ್ಲಿ ಆಕೆಯ  ನೆರವಿಗೆ ಬಂದವರು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ದಾದಿಯರು. ಅವರೆಲ್ಲ ಒಟ್ಟಾಗಿ ನಿಂತು ಅರುಣಾ ಬದುಕಿರುವವರೆಗೆ ಮಗಳಂತೆ, ಸಹೋದರಿಯಂತೆ, ತಾಯಿಯಂತೆ ನೋಡಿಕೊಳ್ಳುವುದಾಗಿ ಪ್ರತಿಜ್ಞೆಗೈದರು. ಈ ಘಟನೆಯಾದ ಎಷ್ಟೋ ವರ್ಷಗಳ ನಂತರ ಆಸ್ಪತ್ರೆಗೆ ಹೊಸದಾಗಿ ಬಂದ ಡೀನ್ ಅರುಣಾಳನ್ನು ಅನಾಥಾಶ್ರಮಕ್ಕೆ ಸಾಗಿಸಲು ಪ್ರಯತ್ನಿಸಿದಾಗ ಆ ಸಂದರ್ಭ ಅದನ್ನು ವಿರೋಧಿಸಿ ಅರುಣಾ ಆಸ್ಪತ್ರೆಯಲ್ಲೇ ಉಳಿಯುವಂತೆ ಮಾಡಿದ್ದು ಇದೇ ದಾದಿಯರು. ಆ ದಾದಿಯರಿಗೆಲ್ಲ ವಾರ್ಡ್ ನಂಬರ್ ನಾಲ್ಕರಲ್ಲಿ ದಾಖಲಾಗಿದ್ದ ಕೇವಲ ರೋಗಿಯಾಗಿರಲಿಲ್ಲ. ವಾರ್ಡ್ ನಂಬರ್ ನಾಲ್ಕು ಮತ್ತು ಅರುಣಾಳೊಂದಿಗೆ ಅವರಿಗೆಲ್ಲ ಅದೊಂದು ರೀತಿಯ ಭಾವನಾತ್ಮಕ ಸಂಬಂಧವಿತ್ತು. ಅದಕ್ಕೆಂದೇ ಸುದೀರ್ಘ ೪೨ ವರ್ಷಗಳ ಕಾಲದ ಅವಳ ಆರೈಕೆಯಲ್ಲಿ ಅವರೆಂದೂ ಬೇಸರ ಮಾಡಿಕೊಳ್ಳಲಿಲ್ಲ. ಒಂದು ಮಗುವಿನಂತೆ ಅವರು ಅರುಣಾಳನ್ನು ಆಕೆ  ಬದುಕಿರುವಷ್ಟು ಕಾಲ ಆರೈಕೆ ಮಾಡಿದರು. ಸುದೀರ್ಘ ೪೨ ವರ್ಷಗಳ ಕಾಲ ಆಕೆ ಹಾಸಿಗೆಯ ಮೇಲೆಯೇ ಮಲಗಿಕೊಂಡಿದ್ದರೂ ಒಂದೇ ಒಂದು ಹಾಸಿಗೆ ಹುಣ್ಣು ಅವಳ ದೇಹವನ್ನು ಬಾಧಿಸಲಿಲ್ಲ. ಇದು      ಕೆ. ಇ. ಎಮ್  ಆಸ್ಪತ್ರೆಯ ದಾದಿಯರು ಅರುಣಾ ಶಾನಭಾಗಳಿಗೆ ಮಾಡಿದ ಆರೈಕೆ ಹಾಗೂ ಸೇವೆಗೊಂದು ಉತ್ಕೃಷ್ಟ ಉದಾಹರಣೆ. ಈ ನಡುವೆ ಅರುಣಾ ಚೇತರಿಸಿಕೊಳ್ಳಬಹುದೆನ್ನುವ ನಿರೀಕ್ಷೆಯಲ್ಲೇ ಆ ಆಸ್ಪತ್ರೆಯ ತರುಣ ವೈದ್ಯ ಹತ್ತು ವರ್ಷಗಳ ಕಾಲ ಆಕೆಗಾಗಿ ಕಾಯ್ದ. ಪ್ರತಿನಿತ್ಯ ವಾರ್ಡ್ ನಂಬರ್ ನಾಲ್ಕರ ಮುಂದೆ ನಿಂತು ಅರುಣಾ ಚೇತರಿಸಿಕೊಳ್ಳಲೆಂದು ದೇವರಲ್ಲಿ ಪ್ರಾರ್ಥಿಸಿದ. ಇಂದಲ್ಲ ನಾಳೆ ಅರುಣಾ ಗುಣಮುಖಳಾಗಬಹುದೆನ್ನುವ ಅವನ ಆಸೆ ಕೊನೆಗೂ ಆಸೆಯಾಗಿಯೇ ಉಳಿಯಿತು. ಅರುಣಾ ಮೊದಲಿನಂತಾಗಲಿಲ್ಲ. ಮನೆಯವರ, ಸ್ನೇಹಿತರ, ಬಂಧುಗಳ ಒತ್ತಡಕ್ಕೆ ಮಣಿದು ಹತ್ತು ವರ್ಷಗಳ ನಂತರ ಆ ವೈದ್ಯ ಬೇರೊಂದು ಹೆಣ್ಣನ್ನು ಮದುವೆಯಾಗಿ ತನ್ನ ಹೊಸ ಬದುಕನ್ನು ಕಟ್ಟಿಕೊಂಡ. ಅರುಣಾಳೆನೋ ಜೀವಂತ ಶವವಾಗಿ ಹಾಸಿಗೆ ಹಿಡಿದಳು ಆದರೆ ಅವಳನ್ನು ಆ ಸ್ಥಿತಿಗೆ ತಂದ ಪಾಪಿ ಕೇವಲ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸಿ ಹೊರಬಂದ. ದೆಹಲಿಯ ಆಸ್ಪತ್ರೆಯೊಂದರಲ್ಲಿ ಕೆಲಸಕ್ಕೆ ಸೇರಿ ಅವನೂ ತನ್ನ ಬದುಕನ್ನು ಕಟ್ಟಿಕೊಂಡ. ಆಸ್ಪತ್ರೆಯ ಆಡಳಿತ ಮಂಡಳಿ ದೂರು ದಾಖಲಿಸುವಲ್ಲಿ ಮಾಡಿದ ವಿಳಂಬ ಮತ್ತು ಅರುಣಾಳ ಗೌರವಕ್ಕೆ ಧಕ್ಕೆ ಬರಬಾರದೆಂಬ ಮುಂಜಾಗ್ರತೆಯಿಂದಾಗಿ ಆತನಿಗೆ ಶಿಕ್ಷೆಯ ಪ್ರಮಾಣ ಕಡಿಮೆಯಾಯಿತು. ಜೊತೆಗೆ ಪತ್ರಿಕಾ ಮಾಧ್ಯಮ ಈಗಿನಷ್ಟು ಆ ದಿನಗಳಲ್ಲಿ ಪ್ರಬಲವಾಗಿರದ ಕಾರಣ ಅರುಣಾಳ ಬದುಕಿನಲ್ಲಾದ ಅಸಂಗತ ಘಟನೆ ಬೆಳಕಿಗೆ ಬರದೇ ಹೋಯಿತು.

                  ಪಿಂಕಿ ವಿರಾನಿ ಎನ್ನುವ ಮುಂಬೈ ಮೂಲದ ಪತ್ರಕರ್ತೆ ಈ ಘಟನೆಯ ಬೆನ್ನು ಹತ್ತಿ ಪುಸ್ತಕ ಬರೆದಾಗಲೇ ಅರುಣಾಳ ಬದುಕಿನ ದುರಾದೃಷ್ಟ ಹಾಗೂ ಆಕೆ ಅನುಭವಿಸುತ್ತಿದ್ದ ನರಕಯಾತನೆಯ ಅರಿವು ನಮಗಾದದ್ದು. ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದ ಪಿಂಕಿ ವಿರಾನಿ ಮೂಲತ: ಗುಜರಾತ ರಾಜ್ಯದವರು. ಪತ್ರಿಕೋದ್ಯಮದ ಶಿಕ್ಷಣದ ನಂತರ ಪೂರ್ಣ ಪ್ರಮಾಣದ ಪತ್ರಕರ್ತೆಯಾಗಿ ಕೆಲಸ ಮಾಡಲಾರಂಭಿಸಿದ ಪಿಂಕಿ ವಿರಾನಿ ದೌರ್ಜನ್ಯಕ್ಕೊಳಗಾದ ಮಕ್ಕಳು ಮತ್ತು ಮಹಿಳೆಯರ ಪರ ಹೋರಾಟಗಾರ್ತಿಯಾಗಿಯೂ ಗುರುತಿಸಿಕೊಂಡಿರುವರು. ಪುರುಷ ಪ್ರಧಾನ ಸಮಾಜದ ದೌರ್ಜನ್ಯಕ್ಕೊಳಗಾದ ಮಹಿಳೆಯರ ಬದುಕಿನ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ಪ್ರಾರಂಭಿಸಿದ ಆ ಘಳಿಗೆ ಅವರಿಗೆ ಅರುಣಾಳ ಬದುಕಿನ ದಾರುಣತೆ ಗೊತ್ತಾಯಿತು. ಕಿಂಗ್ಸ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಗೆ ಹೋಗಿ ನೋಡಿದಾಗ ಅರುಣಾ ಹಾಸಿಗೆಯ ಮೇಲೆ ಬಿದ್ದಿರುವ ಮಾಂಸದ ಮೂಟೆಯಂತೆ ಗೋಚರಿಸಿದಳು. ಸುದೀರ್ಘ ಕಾಲ ಯಾವ ಚಿಕಿತ್ಸೆಗೂ ಸ್ಪಂದಿಸದೆ ಬದುಕುತ್ತಿರುವ ಅರುಣಾಳನ್ನು ನೋಡಿದ ಆ ಘಳಿಗೆ ಪಿಂಕಿ ವಿರಾನಿಗೆ ಜೀವಂತ ಶವವೊಂದನ್ನು ನೋಡಿದ ಅನುಭವವಾಯಿತು. ಆಸ್ಪತ್ರೆಯಲ್ಲಿನ ದಾಖಲೆಗಳು, ಕೋರ್ಟಿನ ತೀರ್ಪು, ಅವಳ ಹುಟ್ಟಿದೂರು, ಬಂಧುಗಳು, ಸ್ನೇಹಿತರು ಈ ಎಲ್ಲ ಕಡೆಯಿಂದ ಮಾಹಿತಿ ಕಲೆಹಾಕಿ ಟಿಪ್ಪಣಿ ಮಾಡಿದಾಗ ಅದೊಂದು ಪುಸ್ತಕದ ರೂಪತಾಳಿತು. ಹೀಗೆ ೧೯೯೮ ರಲ್ಲಿ ಪಿಂಕಿ ವಿರಾನಿ ಬರೆದ 'ಅರುಣಾಸ್ ಸ್ಟೋರಿ' ಎನ್ನುವ ಪುಸ್ತಕ ಅರುಣಾ ಶಾನಭಾಗಳ ದುರಂತಮಯ ಬದುಕನ್ನು ಅನಾವರಣಗೊಳಿಸಿತು. ೧೯೯೮ ರಿಂದ ಅರುಣಾಳಿಗೆ ಹತ್ತಿರವಾದ ಪತ್ರಕರ್ತೆ ಪಿಂಕಿ ವಿರಾನಿ ಆಕೆಗೊಂದು ಸುಖದ ಸಾವನ್ನು ತಂದುಕೊಡಲು ಇನ್ನಿಲ್ಲದಂತೆ ಪ್ರಯತ್ನಿಸಿದರು. ಅನ್ಯರಾಷ್ಟ್ರಗಳಲ್ಲಿ ಜಾರಿಯಲಿರುವ  ದಯಾಮರಣ ಎನ್ನುವ ಕಾಯ್ದೆಯ ಎಳೆಯನ್ನು ಹಿಡಿದು ೨೦೧೧ ರಲ್ಲಿ ಸುಪ್ರೀಮ್ ಕೋರ್ಟ್ ನ ಮೊರೆಹೋದ ಆಕೆ ಅರುಣಾ ಶಾನಭಾಗಗೆ ದಯಾಮರಣ ನೀಡುವಂತೆ ಅರ್ಜಿ ಸಲ್ಲಿಸಿದರು. ಇದೆ ಸಂದರ್ಭ ಕೆ ಇ ಎಮ್ ಆಸ್ಪತ್ರೆಯ ದಾದಿಯರು ಪಿಂಕಿ ವಿರಾನಿ ವಿರುದ್ಧ ಪ್ರತಿಭಟನೆಗಿಳಿದರು. ಅರುಣಾ ಬದುಕಿರುವವರೆಗೆ ಆಕೆಯ ಆರೈಕೆಯ ಹೊಣೆ ನಮ್ಮದು ಅವಳೆಂದೂ ನಮಗೆ ಭಾರವಾಗಿಲ್ಲ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಬೇಕೆಂದು ಮನವಿ ಮಾಡಿದರು. ಆದರೆ ಪಿಂಕಿ ವಿರಾನಿಯದು ಅರುಣಾಳನ್ನು ನರಕಯಾತನೆಯಿಂದ ಬಿಡುಗಡೆಗೊಳಿಸುವ ಪ್ರಯತ್ನವಾಗಿತ್ತು. ಸುಪ್ರೀಮ್ ಕೋರ್ಟ್ ದಯಾಮರಣ ಕೋರಿ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿ ಪಿಂಕಿ ವಿರಾನಿಗೂ ಮತ್ತು ಅರುಣಾ ಶಾನಭಾಗಳಿಗೂ ಏನು ಸಂಬಂಧ ಎಂದು ಪ್ರಶ್ನಿಸಿತು. ಆದರೆ ಇದೆ ಸಂದರ್ಭ ಸುಪ್ರೀಮ್ ಕೋರ್ಟ್ ಅಗತ್ಯವಾದ ಜೀವ ಸೌಲಭ್ಯ ರಕ್ಷಕಗಳನ್ನು ಬೇಕಾದರೆ ಕಡಿಮೆ ಮಾಡಬಹುದೆನ್ನುವ ಮಹತ್ವದ ತೀರ್ಪನ್ನು ನೀಡಿತು. ಪರಿಣಾಮವಾಗಿ ಆಸ್ಪತ್ರೆಯ ದಾದಿಯರ ವಿರೋಧದ ನಡುವೆಯೂ ನಾಲ್ಕು ವರ್ಷಗಳ ಹಿಂದೆ ಅರುಣಾ ಶಾನಭಾಗಳಿಗೆ ನೀಡುತ್ತಿದ್ದ ಚಿಕಿತ್ಸೆಯನ್ನು ನಿಲ್ಲಿಸಲಾಯಿತು. ದೀರ್ಘ ೪೨ ವರ್ಷಗಳ ಕಾಲ ಕೋಮಾದಲ್ಲಿದ್ದ ಅರುಣಾಳ ಬದುಕು ೨೦೧೫ ಮೇ ೧೮ ರಂದು ಅಂತ್ಯಗೊಂಡಿತು. ಕೆ ಇ ಎಮ್ ಆಸ್ಪತ್ರೆಯ ದಾದಿಯರು, ವೈದ್ಯರು ಮತ್ತು ಸಿಬ್ಬಂದಿ ಅರುಣಾಳನ್ನು ಕಳೆದುಕೊಂಡು ರೋಧಿಸಿದರು. 'ಸತ್ತು ಬದುಕಿದ ಅರುಣಾ ಇವತ್ತು ಕಾನೂನು ಬದ್ಧವಾಗಿ ಸತ್ತು ಹೋದಳು. ಸಾಯುವ ದಿನದವರೆಗೂ ಅವಳಿಗೆ ನ್ಯಾಯ ದೊರೆಯಲಿಲ್ಲ' ಎಂದು ಪಿಂಕಿ ವಿರಾನಿ ಅರುಣಾ ಸಾವಿಗೆ ಪ್ರತಿಕ್ರಿಯಿಸಿದರು.

              ವಿಚಿತ್ರ ಮತ್ತು ವಿಪರ್ಯಾಸವೆಂದರೆ ೧೯೭೩ ರಲ್ಲಿ ಅರುಣಾ ಶಾನಭಾಗ ಮೇಲೆ ಹೀಗೊಂದು ದೌರ್ಜನ್ಯ ನಡೆದಾಗ ಆಗ ಭಾರತದಲ್ಲಿ ಮಹಿಳಾ ಪ್ರಧಾನ ಮಂತ್ರಿಯ ಆಡಳಿತವಿತ್ತು. ಆಗಲೇ ಸ್ತ್ರೀ ಶೋಷಣೆಯ ವಿರುದ್ಧ ಕಠಿಣ ಕಾನೂನು ರೂಪುಗೊಳ್ಳಬೇಕಿತ್ತು. ಅಪರಾಧಿಗೆ ಕಠಿಣ ಶಿಕ್ಷೆಯಾಗಬೇಕಿತ್ತು. ಮಹಿಳೆಯನ್ನು ಶೋಷಣೆಯ ಪರಧಿಯಿಂದ ಹೊರತರುವ ಅನೇಕ ಪ್ರಯತ್ನಗಳು ನಡೆಯಬೇಕಿತ್ತು. ಆದರೆ ಅರುಣಾಳ ದುರಂತಮಯ ಬದುಕು ನಮ್ಮನ್ನಾಳುವವರಿಗೆ ಯಾವತ್ತೂ ಎಚ್ಚರಿಕೆಯ ಘಂಟೆಯಾಗಲೇ ಇಲ್ಲ. ಒಂದು ವೇಳೆ ಪ್ರಯತ್ನಗಳೆನಾದರೂ ನಡೆದಿದ್ದಲ್ಲಿ ಇವತ್ತು ನಿರ್ಭಯಾಳಂಥ ಅಮಾಯಕರು ದೌರ್ಜನ್ಯಕ್ಕೆ ಬಲಿಯಾಗುತ್ತಿರಲಿಲ್ಲ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Monday, April 4, 2016

ಸಿನಿಮಾಗಳಲ್ಲಿ ಮಹಿಳೆ




           







       



             ಕನ್ನಡ ಸಿನಿಮಾಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳು ತೆರೆಕಂಡಿದ್ದು ತೀರ ಕಡಿಮೆ. ಈ ಸಿನಿಮಾ ಎನ್ನುವ ಮಾಧ್ಯಮ ಯಾವತ್ತೂ ಪುರುಷ ಪ್ರಧಾನ ನೆಲೆಯಲ್ಲೇ ವ್ಯವಹರಿಸುತ್ತ ಬಂದಿರುವುದಕ್ಕೆ ನಾಯಕ ಪ್ರಧಾನ ಸಿನಿಮಾಗಳ ಸಂಖ್ಯೆಯೇ  ಸಾಕ್ಷಿ. ಕನ್ನಡ ಭಾಷೆಯಲ್ಲಿ ಸಿನಿಮಾಗಳ ನಿರ್ಮಾಣ ಪ್ರಾರಂಭವಾದ ಘಳಿಗೆಯಿಂದ ತೀರ ಇತ್ತೀಚಿನವರೆಗೆ ಸಿನಿಮಾ ಮಾಧ್ಯಮದಲ್ಲಿ ಮಹಿಳೆಗೆ ಪ್ರಾಧಾನ್ಯತೆ ಕೊಟ್ಟಿದ್ದು ಅಷ್ಟಕಷ್ಟೆ. ಸಿನಿಮಾ ಸಮಾಜದ ಅತ್ಯಂತ ಸಶಕ್ತ ಮಾಧ್ಯಮ ಎನ್ನುವ ಜನಪ್ರಿಯತೆಗೆ ಒಳಗಾದ ಮೇಲೂ ಇಲ್ಲಿ ಮಹಿಳಾ ಸಮಸ್ಯೆಗಳನ್ನು ಮತ್ತವಳ ಸಾಧನೆಗಳನ್ನು ಅಭಿವ್ಯಕ್ತಗೊಳಿಸುವ ಕೆಲಸ ನಿರೀಕ್ಷಿಸಿದಷ್ಟು ಆಗಿಲ್ಲ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಎಲ್ಲೋ ಒಂದು ಕಡೆ ಸಿನಿಮಾ ಒಂದು ಭ್ರಮೆಗಳಿಂದ ಕೂಡಿದ ಮತ್ತು ವಾಸ್ತವಕ್ಕೆ ದೂರವಾದ ಮಾಧ್ಯಮ ಎನ್ನುವ ಅಪವಾದವಿದ್ದಾಗೂ ಪುರುಷ ಸಮಾಜದ ಹಲವು ಸಮಸ್ಯೆಗಳು ಮತ್ತು ಸಾಧನೆಗಳು ಬೆಳ್ಳಿ ಪರದೆಯ ಮೇಲೆ ಸಿನಿಮಾಗಳಾಗಿ ಪ್ರದರ್ಶನಗೊಂಡದ್ದು ಸುಳ್ಳಲ್ಲ. ಜೊತೆಗೆ ನಾಯಕ ಪ್ರಧಾನ ಸಿನಿಮಾಗಳೂ ಕೂಡ ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಾಣಗೊಂಡಿವೆ ಮತ್ತು ಈಗಲೂ ನಿರ್ಮಾಣಗೊಳ್ಳುತ್ತಿವೆ. ಪರಿಸ್ಥಿತಿ ಹೀಗಿರುವಾಗ ನಮ್ಮ ಚಿತ್ರೋದ್ಯಮದ ಜನ ಮಹಿಳೆಯ  ಬದುಕನ್ನು ಆಧಾರವಾಗಿಟ್ಟುಕೊಂಡು ಅದೇಕೆ ಸಿನಿಮಾಗಳನ್ನು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ನಿರ್ಮಿಸುತ್ತಿಲ್ಲ ಎನ್ನುವ ಪ್ರಶ್ನೆ ಎದುರಾಗುತ್ತದೆ. ಹೀಗೆ ನಾನು ಪ್ರಶ್ನಿಸುತ್ತಿರುವ ಹೊತ್ತಿನಲ್ಲೇ ತೆಲಗು ಭಾಷೆಯ ಅರುಂಧತಿಯಂಥ ಭಕ್ತಿ ಕಥಾ ಆಧಾರಿತ ಮಹಿಳಾ ಪ್ರಧಾನ ಸಿನಿಮಾಗಳು ಕನ್ನಡ ಸಿನಿಮಾ ಮಾಧ್ಯಮವನ್ನು ಪ್ರಭಾವಿಸುತ್ತಿವೆ. ಇಂಥ ಸಿನಿಮಾಗಳಿಂದ ಪ್ರೇರಿತರಾದ ನಮ್ಮ ಚಿತ್ರೋದ್ಯಮದ ಜನ ಭಿಮಾಂಬಿಕಾ, ದುರ್ಗಾಶಕ್ತಿ, ಚಿತ್ರಲೇಖಾದಂಥ ಮಹಿಳಾ ಪ್ರಧಾನ ಸಿನಿಮಾಗಳನ್ನು ನಿರ್ಮಿಸುತ್ತಿರುವರು.  ಆದರೆ  ಈ ರೀತಿಯ ಸಿನಿಮಾಗಳು ಹೆಣ್ಣನ್ನು ಭಕ್ತಿಯ ಪರಾಕಾಷ್ಟೆಯಲ್ಲಿ  ತೋರಿಸುವುದಕ್ಕಷ್ಟೆ ಸೀಮಿತಗೊಳ್ಳುತ್ತಿವೆ. ಹೆಣ್ಣು  ಮತ್ತವಳ ಬದುಕಿನ ಒಳನೋಟಗಳು ಸಶಕ್ತವಾಗಿ ಸಿನಿಮಾದ ಪರದೆಯ ಮೇಲೆ ಮೂಡಿ ಬರುತ್ತಿಲ್ಲ.

ನಾಯಕಿಯಾಗಿ ಮಹಿಳೆ 


            ಸಿನಿಮಾ ಮಾಧ್ಯಮಕ್ಕೆ ಮಹಿಳೆ ಪ್ರವೇಶ ಮಾಡಿದ್ದು ರಂಗಭೂಮಿಯಿಂದ. ರಂಗಭೂಮಿಯ ಮಹಿಳಾ ಕಲಾವಿದರು ಸಿನಿಮಾಗಳಲ್ಲಿಯೂ ಅಭಿನಯಿಸುವುದನ್ನು ಪ್ರಾರಂಭಿಸಿದ ನಂತರ ಒಂದಿಷ್ಟು ಬದಲಾವಣೆಯಾಗಿ ಅಭಿನಯದಲ್ಲಿ ಆಸಕ್ತಿ ಇರುವ ಮಹಿಳೆಯರು ಸಿನಿಮಾ ರಂಗವನ್ನು ಪ್ರವೇಶಿಸ ತೊಡಗಿದರು. ಆದರೆ ಪ್ರಾರಂಭದ ದಿನಗಳಲ್ಲಿ ಮಹಿಳಾ ನಟಿಯರ ನಟನೆ ಹಾಡು ಮತ್ತು ಕುಣಿತಕ್ಕಷ್ಟೇ ಸೀಮಿತವಾಗಿರುತ್ತಿತ್ತು. ಯಾವಾಗ ಸಿನಿಮಾದ ಕಥೆಗೆ ನಾಯಕಿಯ ಅಗತ್ಯ ಎದುರಾಯಿತೋ ಆಗ ಮಹಿಳಾ ಕಲಾವಿದರು ಒಂದಿಷ್ಟು ಮುಖ್ಯ ಭೂಮಿಕೆಗೆ ಬರಲಾರಂಭಿಸಿದರು. ಹಾಗೆಂದು ಹೇಳಿಕೊಳ್ಳುವಂಥ ಬದಲಾವಣೆಯೇನೂ ಆಗಲಿಲ್ಲ. ನಾಯಕ ನಟನ ಜೊತೆ ಹಾಡಿ ಕುಣಿಯುವ ಶೃಂಗಾರದ ದೃಶ್ಯಗಳಲ್ಲಿ ಅಭಿನಯಿಸುವ ಹಂತಕ್ಕೆ ಮಹಿಳಾ ನಟಿಮಣಿಯರು ಬಡ್ತಿ ಪಡೆದರು. ನಾಯಕಿಯ ಪಾತ್ರಕ್ಕಿಂತ  ಮಹಿಳಾ ಕಲಾವಿದೆಯರಿಗೆ  ಆರಂಭದ ದಿನಗಳಲ್ಲಿ ಪೋಷಕ ಪಾತ್ರಗಳಲ್ಲೇ ಹೆಚ್ಚು ಅಭಿನಯಕ್ಕೆ ಅವಕಾಶ ದೊರೆಯಿತು. ತಾಯಿ, ಅತ್ತಿಗೆ, ಸಹೋದರಿಯ ಪಾತ್ರಗಳಲ್ಲಿ ಅಭಿನಯಿಸುವುದರ ಮೂಲಕ ಸಿನಿಮಾಗಳಲ್ಲಿ ಸ್ತ್ರೀ ಕಲಾವಿದರ ಆಗಮನವಾಯಿತು. ಯಾವಾಗ ರಂಗಭೂಮಿಯಲ್ಲಿ ಮಹಿಳಾ ಪ್ರಧಾನ ನಾಟಕಗಳನ್ನು ಪ್ರದರ್ಶಿಸಲಾರಂಭಿಸಿದರೋ ಅದು ನೇರವಾಗಿ ಸಿನಿಮಾಗಳ ಮೇಲೂ ಪರಿಣಾಮ ಬೀರತೊಡಗಿತು. ಪರಿಣಾಮವಾಗಿ ಸಿನಿಮಾ ನಟಿಯರಿಗೆ ನಾಯಕಿಯಾಗಿ ಅಭಿನಯಕ್ಕೆ ಹೆಚ್ಚಿನ ಅವಕಾಶ ದೊರೆಯಲಾರಂಭಿಸಿತು. ಇದುವರೆಗೂ ಹಾಡು ಕುಣಿತಕ್ಕಷ್ಟೇ ಸೀಮಿತವಾಗಿದ್ದ ನಾಯಕಿಯ ಅಭಿನಯ ಹೆಣ್ಣಿನ ಸಂವೇದನೆ ಮತ್ತು ಸಂಕಟವನ್ನು ಒಂದಿಷ್ಟಾದರೂ ವ್ಯಕ್ತಪಡಿಸುವ ಮಟ್ಟಕ್ಕೆ ವಿಸ್ತರಿತು. ಬಿ ಆರ್ ಪಂತಲು, ಹುಣಸೂರು ಕೃಷ್ಣಮೂರ್ತಿ ಅವರಂಥ ನಿರ್ದೇಶಕರು ನಾಯಕನ ಪ್ರಧಾನ ಭೂಮಿಕೆಯ ನಡುವೆಯೂ ನಾಯಕಿ ಪಾತ್ರಧಾರಿಯ ಅಭಿನಯಕ್ಕೆ ಒಂದಿಷ್ಟು ಅವಕಾಶ ನೀಡಲಾರಂಭಿಸಿದ್ದು ಅದೊಂದು ಆಶಾದಾಯಕ ಬೆಳವಣಿಗೆಯಾಗಿ ಕಂಡಿತು. ಪಂಢರಿ ಬಾಯಿ, ಲೀಲಾವತಿ, ಆದವಾನಿ ಲಕ್ಷ್ಮಿದೇವಿ ಇತ್ಯಾದಿ ನಟಿಯರು ಕ್ರಮೇಣ ನಾಯಕಿ ಪಾತ್ರಗಳಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿ ಸಿನಿಮಾ ಮಾಧ್ಯಮದ ಮುನ್ನೆಲೆಗೆ ಬರಲಾರಂಭಿಸಿದರು. ಇದೆ ಸಂದರ್ಭದ ಇನ್ನೊಂದು ಆಶಾದಾಯಕ ಬೆಳವಣಿಗೆ ಎಂದರೆ ಕೆಲವು ಸಿನಿಮಾಗಳಲ್ಲಿ ನಾಯಕಿ ನಟಿಯರಿಗೆ ನಾಯಕನಿಗೆ ಸರಿಸಮನಾದ ಪಾತ್ರಗಳು ಪ್ರಾಪ್ತವಾಗತೊಡಗಿದವು. ಕರುಣೆಯೇ ಕುಟುಂಬದ ಕಣ್ಣು, ಕುಲವಧು, ಗಾಂಧಿ ನಗರ ಸಿನಿಮಾಗಳನ್ನು ಆ ಒಂದು ಬೆಳವಣಿಗೆಗೆ ಉದಾಹರಣೆಯಾಗಿ ಹೇಳಬಹುದು.   ಹೆಣ್ಣು ಪೂರ್ಣಪ್ರಮಾಣದಲ್ಲಿ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಪಡೆದದ್ದು ಅದು ಪೌರಾಣಿಕ ಸಿನಿಮಾಗಳ ಮೂಲಕ. ಸತಿ ಸಾವಿತ್ರಿ, ಮಹಾಸತಿ ಮಂಡೊಧರಿ, ಸತಿ ಸುಕನ್ಯ, ಬಾಲ ನಾಗಮ್ಮ ಸಿನಿಮಾಗಳಲ್ಲಿ ಮಹಿಳಾ ಕಲಾವಿದರಿಗೆ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸುವ ಅವಕಾಶ ದೊರೆಯಿತು.  ಈ ಪೌರಾಣಿಕ ಸಿನಿಮಾಗಳಲ್ಲಿ ನಾಯಕಿ ಪಾತ್ರಗಳು ಪ್ರಧಾನವಾಗಿದ್ದರೂ ಆ ಪಾತ್ರಗಳು ಪುರುಷ ಪ್ರಧಾನ ಸಮಾಜದ ನೆಲೆಯಲ್ಲಿ ಚಿತ್ರಿತವಾಗಿರುವುದು ದುರಂತದ ಸಂಗತಿ. ಇಲ್ಲಿ ಮಹಿಳೆಯನ್ನು ಒಂದು ನಿರ್ಧಿಷ್ಟ ಚೌಕಟ್ಟಿನಲ್ಲಿ ತೋರಿಸಲು ಪ್ರಯತ್ನಿಸಲಾಯಿತೆ ವಿನ: ಅವಳನ್ನು ಸಂಪ್ರದಾಯದ ಬೇಲಿಯಿಂದ ಹೊರತರುವ ಪ್ರಯತ್ನಗಳಾಗಲಿಲ್ಲ. ಇದಕ್ಕೆ ಅಪವಾದವಾಗಿ 'ಬೆಳ್ಳಿ ಮೋಡ' ಸಿನಿಮಾ ಮೂಡಿಬಂದರೂ ನಂತರದ ದಿನಗಳಲ್ಲಿ ಈ ಪ್ರಕಾರದ ಸಿನಿಮಾಗಳು ಕನ್ನಡ ಭಾಷೆಯಲ್ಲಿ ನಿರ್ಮಾಣಗೊಳ್ಳಲಿಲ್ಲ.   ಆದರೆ ಇದೆ ಹೊತ್ತಿಗೆ ಒಂದಿಷ್ಟು ಬದಲಾವಣೆಗಳಿಗೆ ತನ್ನನ್ನು ತೆರೆದುಕೊಂಡ ಸಿನಿಮಾರಂಗ ಹೆಣ್ಣನ್ನು ಸಮಾಜ ಸುಧಾರಿಕೆಯಾಗಿಯೋ ಇಲ್ಲವೇ ಹೋರಾಟಗಾರ್ತಿಯಾಗಿ ತೋರಿಸಲು ಪ್ರಯತ್ನಿಸಿ ಯಶ ಕಂಡಿತು. ಮಲ್ಲಮ್ಮನ ಪವಾಡ, ಕಿತ್ತೂರ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಸಿನಿಮಾಗಳಲ್ಲಿ  ನಾಯಕಿಯನ್ನು ಹೊಸ ಪರಿವೇಷದಲ್ಲಿ ನೋಡುವ ಅವಕಾಶ ಪ್ರೇಕ್ಷಕರದಾಯಿತು. ಇದುವರೆಗೂ ಗಂಡಿನ ನೆರಳಾಗಿಯೋ ಇಲ್ಲವೇ ಅಡಿಯಾಳಾಗಿಯೋ ಚಿತ್ರಿತವಾಗುತ್ತಿದ್ದ ಹೆಣ್ಣು ಪುರುಷ ಸಮಾಜವನ್ನು ಪ್ರಶ್ನಿಸುವ ಮತ್ತು ದಬ್ಬಾಳಿಕೆಯನ್ನು ವಿರೋಧಿಸಿ  ನಿಲ್ಲುವ ಪಾತ್ರಗಳಲ್ಲಿ ಅಭಿನಯಿಸುವ ಮಟ್ಟಕ್ಕೆ ಬೆಳೆದು ನಿಂತಳು. ಈ ಸಂದರ್ಭ ಕನ್ನಡ ಸಿನಿಮಾ ರಂಗ ಮಹತ್ವದ ತಿರುವು ಪಡೆದುಕೊಂಡು ಲೀಲಾವತಿ, ಸರೋಜಾ ದೇವಿ, ಹರಿಣಿ, ಭಾರತಿ, ಆರತಿ ಇತ್ಯಾದಿ ನಟಿಮಣಿಯರು ನಾಯಕಿಯ ಇಮೇಜ್ ಗಳಿಸಲು ಸಾಧ್ಯವಾಯಿತು.

                    ೮೦ ರ ದಶಕದ ಕನ್ನಡ ಸಿನಿಮಾ ರಂಗವನ್ನು ಅವಲೋಕಿಸಿದಾಗ ಹಿಂದೆಂದಿಗಿಂತಲೂ ನಾಯಕಿಯರಿಗೆ ಒಂದಿಷ್ಟು ಹೆಚ್ಚಿನ ಪ್ರಾಮುಖ್ಯತೆ ದೊರೆಯಲಾರಂಭಿಸಿತು. ಸೇಡು ತಿರಿಸಿಕೊಳ್ಳುವ, ಖಳನಾಯಕರಿಗೆ ಎದುರಾಗಿ ಫೈಟ್ ಮಾಡುವ ದೃಶ್ಯಗಳಲ್ಲಿ ನಾಯಕಿಯರು ಹೆಚ್ಚು ಹೆಚ್ಚು ಚಿತ್ರಿತಗೊಳ್ಳತೊಡಗಿದರು. ಮಂಜುಳಾ, ಜಯಮಾಲಾ, ಲಕ್ಷ್ಮಿ ಇತ್ಯಾದಿ ನಟಿಯರು ಗಂಡುಬೀರಿ ಪಾತ್ರಗಳಲ್ಲಿ ಅಭಿನಯಿಸುವುದರ ಮೂಲಕ ನಾಯಕಿಯ ಪಾತ್ರಕ್ಕೊಂದು ಹೊಸ ಇಮೇಜ್ ತಂದುಕೊಟ್ಟರು. ಸೀತಾ ರಾಮು, ಚಂಡಿ ಚಾಮುಂಡಿ, ರುದ್ರಿ  ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ವಿಷಯದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವು. ವಿಷ್ಣುವರ್ಧನ್, ಶ್ರೀನಾಥ, ಶಂಕರ ನಾಗ್, ಅನಂತನಾಗ್ ರಂಥ ಪ್ರಮುಖ ನಾಯಕ ನಟರು ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಬೇಕಾದ ಅನಿವಾರ್ಯತೆ ಎದುರಾಯಿತು. ವಸಂತ ಲಕ್ಷ್ಮಿ, ಪಾಯಿಂಟ್ ಪರಿಮಳ, ಸೀತಾ ರಾಮು, ಚಂದನದ ಗೊಂಬೆ ಇತ್ಯಾದಿ ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಕನ್ನಡ ಚಿತ್ರರಂಗದ ದಿಗ್ಗಜರೆನಿಸಿಕೊಂಡ ನಾಯಕ ನಟರು ಅಭಿನಯಿಸಿದರು. ಇದೆ ಸಂದರ್ಭ ಅನುರಾಧ, ಜಯಮಾಲಿನಿ, ಹಲಂ, ಸಿಲ್ಕ್ ಸ್ಮಿತಾ ರಂಥ ಕ್ಯಾಬರೆ ನರ್ತಕಿಯರು ತಮ್ಮ ಮಾದಕ ಮೈ ಮಾಟದಿಂದ ಕನ್ನಡ ಸಿನಿಮಾಗಳಲ್ಲಿ ಎಂಟ್ರಿ ಪಡೆದು ಪ್ರೇಕ್ಷಕರನ್ನು ಒಂದಿಷ್ಟು ಉನ್ಮತ್ತರನ್ನಾಗಿಸಿದರು. ಕನ್ನಡ  ಚಿತ್ರರಂಗದಲ್ಲಿ  ನಾಯಕಿ ನಟಿಯರು ಪ್ರವರ್ಧಮಾನಕ್ಕೆ ಬರುತ್ತಿರುವ ಘಳಿಗೆಯಲ್ಲೇ ಈ ನಟಿಯರು ಕ್ಯಾಬರೆ ನರ್ತನವನ್ನು ಸಿನಿಮಾಕ್ಕೆ ಕರೆತಂದದ್ದು ಬಹುದೊಡ್ಡ ದುರಂತವಾಗಿ ಪರಿಣಮಿಸಿತು. ಪರಿಣಾಮವಾಗಿ ಸಿನಿಮಾದ ಕಥೆಗೆ ಅಗತ್ಯವಿಲ್ಲದಿದ್ದರೂ ಪ್ರೇಕ್ಷಕರು ಕ್ಯಾಬರೆ ನರ್ತನವನ್ನು  ಸಿನಿಮಾದಲ್ಲಿ ಅಪೇಕ್ಷಿಸತೊಡಗಿದರು. ಕ್ಯಾಬರೆ ನೃತ್ಯದ ಜನಪ್ರಿಯತೆ  ಹಾಗೂ ಪ್ರೇಕ್ಷಕರ ಮನದಿಂಗಿತವನ್ನು ಅರಿತ ನಾಯಕಿ ನಟಿಯರು ನಂತರದ ದಿನಗಳಲ್ಲಿ ಆ ಪಾತ್ರವನ್ನು ಸಹ ತಾವೇ ನಿರ್ವಹಿಸಲು ಮುಂದಾದದ್ದು ಕನ್ನಡ ಸಿನಿಮಾ ರಂಗದ ದುರಂತಗಳಲ್ಲೊಂದು.

                   ಕನ್ನಡ ಸಿನಿಮಾರಂಗದ ಮೂರನೆ ತಲೆಮಾರಿನ ನಾಯಕಿ ನಟಿಯರ ವಿಷಯಕ್ಕೆ ಬಂದರೆ ಇಲ್ಲಿ ಮಾಲಾಶ್ರೀ, ಶೃತಿ, ಸುಧಾರಾಣಿ ಮಹಿಳಾ ಪ್ರಧಾನ ಸಿನಿಮಾಗಳ ವಿಷಯದಲ್ಲಿ ಒಂದಿಷ್ಟು ಭರವಸೆ ಮೂಡಿಸಿದರಾದರೂ ಅಷ್ಟೇನು ಆಶಾದಾಯಕ ಬೆಳವಣಿಗೆಯಾಗಲಿಲ್ಲ. ಮಾಲಾಶ್ರೀ ನಾಯಕ ಪ್ರಧಾನ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರೂ ನಂತರದ ದಿನಗಳಲ್ಲಿ ಅವರು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿದ್ದೆ ಹೆಚ್ಚು. ಅದರಲ್ಲೂ ಹೊಡೆದಾಟದ ದೃಶ್ಯಗಳಲ್ಲಿನ ವಿಪರೀತ ಅಭಿನಯದಿಂದಾಗಿ ಈ ನಟಿ ಹೆಣ್ಣಿನ ಭಾವನೆಗಳನ್ನು ಸಶಕ್ತವಾಗಿ ಅನಾವರಣಗೊಳಿಸುವಲ್ಲಿ ವಿಫಲರಾದರು. ವಿಪರ್ಯಾಸವೆಂದರೆ ಪುರುಷ ಸಮಾಜದ ದಬ್ಬಾಳಿಕೆಯನ್ನು ವಿರೋಧಿಸುವ ಪಾತ್ರದ ಮೂಲಕ ನಾಯಕಿ ನಟಿಯಾದ ಶೃತಿ ನಂತರದ ದಿನಗಳಲ್ಲಿ ಅಳುಮಂಜಿ ಪಾತ್ರಕ್ಕೆ ತಮ್ಮ ಅಭಿನಯವನ್ನು ಸೀಮಿತಗೊಳಿಸಿಕೊಂಡರು. ಸುಧಾರಾಣಿ ಪ್ರಾರಂಭದಲ್ಲಿ ಒಂದೆರಡು ನಾಯಕಿ ಪ್ರಧಾನ ಸಿನಿಮಾಗಳಲ್ಲಿ ಅಭಿನಯಿಸಿದರೂ ನಂತರದ ಅವರ ಪಾತ್ರಗಳು ಮರ ಸುತ್ತುವ ಮತ್ತು ಹಾಡಿ ಕುಣಿಯುವ ಸನ್ನಿವೇಶಗಳಿಗೆ ಸೀಮಿತವಾಗಿ ಕ್ರಮೇಣ ಪೋಷಕ ಪಾತ್ರಗಳಿಗೆ ಬಡ್ತಿ ಹೊಂದಿದರು. ಈಗ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ನಾಯಕಿ ನಟಿಯರು ಬೆರಳೆಣಿಕೆಯ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುವುದೇ ಬಹುದೊಡ್ಡ ಸಾಧನೆಯಾಗಿ ಪರಿಣಮಿಸಿದೆ. ಜೊತೆಗೆ ಬೇರೆ ಭಾಷೆಗಳಿಂದ ಆಮದಾಗುತ್ತಿರುವ ನಟಿಯರು ಅಂಗಾಂಗ ಪ್ರದರ್ಶನ ಮೂಲಕ ಪ್ರಬಲ ಪೈಪೋಟಿ ನೀಡುತ್ತಿರುವುದರಿಂದ ಇಲ್ಲಿ ಅಭಿನಯಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ. ನಾಯಕಿಯ ಅಭಿನಯ  ಹಾಡುವುದು, ಕುಣಿಯುವುದು ಮತ್ತು ದೇಹ ಪ್ರದರ್ಶಿಸುವುದಕ್ಕೆ ಮಾತ್ರ ಸೀಮಿತ  ಎನ್ನುವುದನ್ನು ಪ್ರೇಕ್ಷಕರೂ ಒಪ್ಪಿಕೊಂಡಿರುವರು.

                   ಸಿನಿಮಾ ರಂಗದಲ್ಲಿ ನಾಯಕ ನಟರು ಗಳಿಸಿದಷ್ಟು ಜನಪ್ರಿಯತೆ ಮತ್ತು ಪಡೆದ ಯಶಸ್ಸನ್ನು ನಾಯಕಿ ನಟಿಯರಿಗೆ ದೊರೆಯದಿರುವುದು ಸಿನಿಮಾ ಮಾಧ್ಯಮದ ವಿಪರ್ಯಾಸಗಳಲ್ಲೊಂದು. ಸಾಮಾನ್ಯವಾಗಿ ಎಲ್ಲ ನಾಯಕಿ ನಟಿಯರು ಒಂದಿಷ್ಟು ಸಿನಿಮಾಗಳ ನಂತರ ಪೋಷಕ ಪಾತ್ರಗಳಿಗೆ  ಅನಿವಾರ್ಯವಾಗಿ ವಲಸೆ ಹೋಗಬೇಕಾಯಿತು. ರಾಜಕುಮಾರ ಅವರ ಅನೇಕ ಸಿನಿಮಾಗಳಲ್ಲಿ ಅವರಿಗೆ ನಾಯಕಿಯಾಗಿ ಅಭಿನಯಿಸಿದ ಪಂಢರಿಬಾಯಿ ನಂತರ ಹಲವು ಸಿನಿಮಾಗಳಲ್ಲಿ ಅದೇ ರಾಜಕುಮಾರ ಅವರಿಗೆ ತಾಯಿಯಾಗಿ ನಟಿಸಿದ್ದು ನಾಯಕಿ ನಟಿಯರ ವೃತ್ತಿ ಬದುಕಿನ ಅನಿಶ್ಚಿತತೆಗೊಂದು ಉದಾಹರಣೆ. ಈ ಮಾತು ಒಂದು ಕಾಲದಲ್ಲಿ ನಾಯಕಿ ನಟಿಯರಾಗಿ ತಮ್ಮ ಅಭಿನಯದ ಛಾಪು ಮೂಡಿಸಿದ್ದ ಜಯಂತಿ, ಲೀಲಾವತಿ, ಭಾರತಿ, ಸರೋಜಾದೇವಿ, ಲಕ್ಷ್ಮಿ ಅವರಿಗೂ ಅನ್ವಯಿಸುತ್ತದೆ. ಇನ್ನೊಂದು ಸಂಗತಿ ಎಂದರೆ ಒಂದು ಹಂತದಲ್ಲಿ ಕನ್ನಡ ಸಿನಿಮಾರಂಗ ನಾಯಕಿ ನಟಿಯರ ಅಭಿನಯಕ್ಕೆ  ಬದಲು ಸೌಂದರ್ಯ ಮತ್ತು ಅಂಗಸೌಷ್ಟಕ್ಕೆ ಮಹತ್ವ ನೀಡುವ ತಿರುವು ಪಡೆದುಕೊಂಡಿತು. ಆರತಿ, ಪದ್ಮಪ್ರಿಯ, ಸರಿತಾ, ಬಾನುಪ್ರಿಯ ರಂಥ ಕೃಷ್ಣ ಸುಂದರಿಯರು ನಾಯಕಿ ನಟಿಯರಾಗಿ ಮೆರೆದ ಇದೆ ಕನ್ನಡ ಚಿತ್ರರಂಗದಲ್ಲಿ ನಂತರದ ದಿನಗಳಲ್ಲಿ ಮಾದಕ ನಟಿಯರಿಗೆ ಅವಕಾಶಗಳು ಹೇರಳವಾಗಿ ಸಿಗಲಾರಂಭಿಸಿದವು. ನಟಿಮಣಿಯರ ಗ್ಲಾಮರ್ ಮತ್ತು ಅಂಗ ಪ್ರದರ್ಶನಕ್ಕೆ ಒತ್ತು ನೀಡಲಾರಂಭಿಸಿದ ಕನ್ನಡ ಚಿತ್ರರಂಗದಲ್ಲಿ ಅಭಿನಯವನ್ನೇ ಬಂಡವಾಳವಾಗಿಟ್ಟು ಕೊಂಡ ನಟಿಯರು ಕ್ರಮೇಣ ನೇಪಥ್ಯಕ್ಕೆ ಸರಿದರು. ನಟಿಯೋರ್ವಳು ಬಹುಕಾಲ ಚಲಾವಣೆಯಲ್ಲಿರಲು  ದೇಹ ಪ್ರದರ್ಶನ ಅನಿವಾರ್ಯವಾಗಿ ಕೊನೆಗೆ ನಾಯಕಿಯಿಂದಲೇ  ಕ್ಯಾಬರೆ ನೃತ್ಯ ಮಾಡಿಸುವ  ಸ್ಥಿತಿಗೆ ಕನ್ನಡ ಸಿನಿಮಾ ಮಾಧ್ಯಮ ಬಂದು ನಿಂತಿತು. ಇದಕ್ಕೆ ಪೂರಕವಾಗಿ ಅದೆಷ್ಟೋ ನಟಿಮಣಿಯರು ಬದಲಾದ ಪರಿಸ್ಥಿತಿಗೆ ಹೊಂದಿಕೊಂಡಿದ್ದು ಕನ್ನಡದಲ್ಲಿ ನಾಯಕಿ ಪ್ರಧಾನ ಸಿನಿಮಾಗಳ ನಿರ್ಮಾಣ ಕಡಿಮೆಯಾಗಲು ಪ್ರಬಲ ಕಾರಣವಾಯಿತು.

ಪೋಷಕ ಪಾತ್ರಗಳಲ್ಲಿ ಮಹಿಳೆ 

 
                   ತಾಯಿ ಮತ್ತು ಸಹೋದರಿಯಾಗಿ ಮಹಿಳಾ ಕಲಾವಿದೆಯರು ಕನ್ನಡ ಚಿತ್ರರಂಗದಲ್ಲಿ ತಮ್ಮ ಅಭಿನಯದ ಛಾಪು ಮೂಡಿಸಿರುವರು. ತಾಯಿ ಮಗನ, ಅಣ್ಣ ತಂಗಿಯ ಅನುಬಂಧವನ್ನು ಸಾರುವ ಅನೇಕ ಸಿನಿಮಾಗಳು ಕನ್ನಡ ಭಾಷೆಯಲ್ಲಿ ನಿರ್ಮಾಣಗೊಂಡಿವೆ. ಪೋಷಕ ಪಾತ್ರಗಳಲ್ಲೇ ಅಭಿನಯಿಸುತ್ತ ಅನೇಕ ನಟಿಯರು ನಾಯಕ ನಟರಿಗೆ ಪ್ರಬಲವಾಗಿ ಸ್ಪರ್ಧೆಯೊಡ್ಡಿದುಂಟು. ಮಹಿಳಾ ಕಲಾವಿದೆಯರ ಪೋಷಕ ಪಾತ್ರಗಳ ಮಹತ್ವವನ್ನು ಸಾರುವಂಥ ಸೋದರಿ, ಅಣ್ಣ ತಂಗಿ, ತಾಯಿಗೆ ತಕ್ಕ ಮಗ, ನನ್ನ ತಂಗಿ, ತಾಯಿ, ತವರಿಗೆ ಬಾ ತಂಗಿ ಇಂಥ ಶೀರ್ಷಿಕೆಗಳನ್ನು ಕನ್ನಡ ಸಿನಿಮಾಗಳಲ್ಲಿ ಬಳಸಿಕೊಂಡಿದ್ದು ವಿಶೇಷ ಸಂಗತಿಗಳಲ್ಲೊಂದು. ಪುಟ್ನಂಜದಲ್ಲಿ ಉಮಾಶ್ರೀ, ವಂಶಿಯಲ್ಲಿ ಲಕ್ಷ್ಮಿ ನಾಯಕ ನಟರಿಗೆ ಸಮನಾದ ಪಾತ್ರಗಳಲ್ಲಿ ಅಭಿನಯಿಸಿದ್ದು ಮಹಿಳಾ ಕಲಾವಿದೆಯರ ಅಭಿನಯ ಸಾಮರ್ಥ್ಯಕ್ಕೆ ಉತ್ತಮ ಉದಾಹರಣೆಗಳಿವು. ಆದರೆ ಆರಂಭದ ದಿನಗಳಲ್ಲಿ ಇದೇ ಉಮಾಶ್ರೀಯ ಅಭಿನಯ ದ್ವಂದ್ವಾರ್ಥ ಸಂಭಾಷಣೆಗಳಿಗೆ ಸೀಮಿತವಾಗಿದ್ದು ವಿಪರ್ಯಾಸ. ಒಡಲಾಳ ನಾಟಕದಲ್ಲಿ ಸಾಕವ್ವನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ ಈ ಕಲಾವಿದೆಯಲ್ಲಿನ ಅಭಿನಯ ಸಾಮರ್ಥ್ಯವನ್ನು ನಮ್ಮ ಚಿತ್ರರಂಗ ಬಹಳ ತಡವಾಗಿ ಗುರುತಿಸಿತು.

               ಮಹಿಳಾ ಪೋಷಕ ಪಾತ್ರಗಳ ಇನ್ನೊಂದು ದುರಂತವೆಂದರೆ ದೌರ್ಜನ್ಯಕ್ಕೊಳಗಾಗುವ ಮತ್ತು ದೌರ್ಜನ್ಯಕ್ಕೊಳಪಡಿಸುವ ಎರಡೂ ಪಾತ್ರಗಳನ್ನು ನಟಿಯರೇ ನಿರ್ವಹಿಸಿದ್ದು. ಲಕ್ಷ್ಮೀದೇವಿ, ರಮಾದೇವಿ, ಸತ್ಯಭಾಮಾ, ಉಮಾಶಿವಕುಮಾರ ಕೆಟ್ಟ ಅತ್ತೆ, ಮಲತಾಯಿ ಪಾತ್ರಗಳ ಮೂಲಕ ಅನೇಕ ನಟಿಮಣಿಯರನ್ನು ಸಿನಿಮಾಗಳಲ್ಲಿ ಗೋಳುಹೊಯ್ದುಕೊಂಡಿದ್ದುಂಟು. ಇದಕ್ಕೆ ಪೂರಕವಾಗಿ ಮಗಳು, ಸೊಸೆ ಪಾತ್ರಗಳಲ್ಲಿ ಹಲವಾರು ಪೋಷಕ ನಟಿಯರು ಅತ್ತೆ ಮಲತಾಯಿಯ ದೌರ್ಜನ್ಯಕ್ಕೆ ನಲುಗಿ ಪ್ರೇಕ್ಷಕರ ಕಂಗಳಲ್ಲಿ ಕಣ್ಣೀರ ಕೊಡಿಯನ್ನೇ ಹರಿಸಿರುವರು. ಯೋಚಿಸಬೇಕಾದ ಸಂಗತಿ ಎಂದರೆ ಇಂಥ ಅತ್ತೆ, ನಾದಿನಿ, ಮಲತಾಯಿಗೆ ಪಾಠ ಕಲಿಸಿ ಸರಿದಾರಿಗೆ ತರಲು ನಾಯಕ ನಟರ ಪಾತ್ರಗಳೇ ಪ್ರಧಾನ ಭೂಮಿಕೆ ಬರಬೇಕಾಯಿತು. ಅಸಾಧ್ಯ ಅಳಿಯ, ಗಡಿಬಿಡಿ ಅಳಿಯ ಸಿನಿಮಾಗಳು ಇದಕ್ಕೆ ಉತ್ತಮ ಉದಾಹರಣೆಗಳು. ಜೊತೆಗೆ ಇನ್ನೊಂದು ದುರಂತದ ಸಂಗತಿ ಎಂದರೆ ಸಿನಿಮಾದ ಕಥೆಗೆ ಅಗತ್ಯವೇನೋ ಎನ್ನುವಂತೆ ನಮ್ಮ ಸಿನಿಮಾಗಳಲ್ಲಿ ಮಹಿಳಾ ಪೋಷಕ ಕಲಾವಿದೆಯರು ಅತ್ಯಾಚಾರಕ್ಕೆ ಒಳಗಾಗಿರುವರು. ವಿಶೇಷವೆಂದರೆ ಅಕ್ಕ ಅಥವಾ ತಂಗಿಯ ಪಾತ್ರಗಳು ಸಿನಿಮಾಗಳಲ್ಲಿ ಅತ್ಯಾಚಾರಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಇಲ್ಲವೇ ಕೊಲೆಯಾಗುವ ದೃಶ್ಯಗಳಲ್ಲಿ ಕೊನೆಗೊಂಡಿದ್ದೆ ಹೆಚ್ಚು. ಇಲ್ಲಿಯೂ ಕೂಡ ತನ್ನ ಸಹೋದರಿಗಾದ ಅನ್ಯಾಯಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ನಾಯಕ ನಟನೇ ಎಂಟ್ರಿ ಕೊಡಬೇಕಾಯಿತು.

           ಒಟ್ಟಾರೆ ದೌರ್ಜನ್ಯಕ್ಕೊಳಗಾಗುವುದು ಹೆಣ್ಣಿನ ಹಣೆಬರಹ ಎನ್ನುವಂತೆ ನಮ್ಮ ಕನ್ನಡ ಸಿನಿಮಾಗಳಲ್ಲಿ ಪೋಷಕ ನಟಿಯರ ಪಾತ್ರಗಳು ಚಿತ್ರಿತಗೊಂಡಿವೆ. ಅಮ್ಮ, ಅತ್ತೆ, ಅತ್ತಿಗೆ, ಸಹೋದರಿ, ಪತ್ನಿಯಾಗಿ ಆಕೆ ಸಿನಿಮಾದಿಂದ ಸಿನಿಮಾಕ್ಕೆ ದೌರ್ಜನಕ್ಕೊಳಗಾಗುತ್ತಲೇ ಇರುವಳು. ಮೂಕಿಯಿಂದ ಟಾಕಿ, ಕಪ್ಪು ಬಿಳುಪಿನಿಂದ ಬಣ್ಣ ಹೀಗೆ ಸಿನಿಮಾ ಮಾಧ್ಯಮದಲ್ಲಿ ಸಾಕಷ್ಟು ಬೆಳವಣಿಗೆಗಳಾದರೂ ಮಹಿಳಾ ಪಾತ್ರಗಳು ಸಿನಿಮಾ ನಿರ್ಮಾಣ ಪ್ರಾರಂಭವಾಗಿ ನೂರು ವರ್ಷಗಳಾದರೂ ಇನ್ನೂ ಪುರುಷ ಪ್ರಧಾನ ನೆಲೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಎಲ್ಲೋ ಒಂದು ಕಡೆ ಉಮಾಶ್ರೀ, ಶೃತಿಯಂಥ ಕಲಾವಿದೆಯರು ಪುರುಷ ಪ್ರಧಾನ ಸಮಾಜವನ್ನು ಮೆಟ್ಟಿ ನಿಂತು ಮಹಿಳಾ ಕಲಾವಿದೆಯರ ಅಭಿನಯಕ್ಕೆ ಹೊಸ ಖದರು ತಂದು ಕೊಡಲು ಪ್ರಯತ್ನಿಸಿದರಾದರೂ ಅಂಥ ಸಿನಿಮಾಗಳ ಸಂಖ್ಯೆ ತೀರ ಕಡಿಮೆ.

ನಿರ್ದೇಶಕಿಯಾಗಿ ಮಹಿಳೆ 


              ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲೇ ಮಹಿಳಾ ನಿರ್ದೇಶಕಿಯರ ಸಂಖ್ಯೆ ಅದು ಬೆರಳೆಣಿಕೆಯಷ್ಟು ಮಾತ್ರ. ಇನ್ನು ಕನ್ನಡ ಸಿನಿಮಾಗಳ ವಿಷಯಕ್ಕೆ ಬಂದರೆ ಇಲ್ಲಿ ಸುಮನಾ ಕಿತ್ತೂರ, ವಿಜಯಲಕ್ಷ್ಮಿ ಸಿಂಗ್, ಕವಿತಾ ಲಂಕೇಶ್ ಹೆಸರುಗಳು ಮಾತ್ರ ಸಿನಿಮಾ ನಿರ್ದೇಶಕಿಯರಾಗಿ ಚಾಲ್ತಿಯಲ್ಲಿವೆ. ಇರುವ ಈ ಮೂರು ಹೆಸರುಗಳಲ್ಲಿ ಹೆಣ್ಣಿನ ಒಳಬದುಕಿನ ಸೂಕ್ಷ್ಮ ಒಳತೋಟಿಗಳನ್ನು ಅತ್ಯಂತ ಸಶಕ್ತವಾಗಿ ತೆರೆದಿಡಲು ಪ್ರಯತ್ನಿಸಿದ್ದು ಕವಿತಾ ಲಂಕೇಶ್ ಮಾತ್ರ. ದ್ವೀಪ, ಪುಟ್ಟಕ್ಕನ ಹೈವೆ, ಗೆಜ್ಜೆ ಪೂಜೆ, ಹೂವು ಹಣ್ಣು ಸಿನಿಮಾಗಳು ಮಹಿಳಾ ಬದುಕಿನ ಒಳಪದರುಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬೆಳ್ಳಿ ಪರದೆಯ ಮೇಲೆ ಅನಾವರಣಗೊಳಿಸಿದರೂ ಈ ಎಲ್ಲ ಸಿನಿಮಾಗಳನ್ನು ನಿರ್ದೇಶಿಸಿದ್ದು ಪುರುಷ ನಿರ್ದೇಶಕರು ಎನ್ನುವುದು ಅಚ್ಚರಿಯ ಸಂಗತಿಗಳಲ್ಲೊಂದು. ಇನ್ನೂ ಆಶ್ಚರ್ಯದ ಸಂಗತಿ ಎಂದರೆ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಪ್ರಧಾನ ಅಥವಾ ನಾಯಕಿ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿದ್ದು ಕೂಡ ಪುರುಷ ನಿರ್ದೇಶಕರೆ. ಗಾಳಿಮಾತು, ಬೆಳ್ಳಿ ಮೋಡ, ಶರಪಂಜರ, ಉಪಾಸನೆ, ಅರುಣ ರಾಗ, ಬಯಲು ದಾರಿ ಈ ಸಿನಿಮಾಗಳನ್ನು ನಾಯಕಿ ಪ್ರಧಾನ ಸಿನಿಮಾಗಳಿಗೆ ಉದಾಹರಣೆಯಾಗಿ ಹೇಳಬಹುದು. ಕೆ ವಿ ಜಯರಾಂ, ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್ ಇತ್ಯಾದಿ ನಿರ್ದೇಶಕರು ನಾಯಕ ಪ್ರಧಾನ ಸಿನಿಮಾಗಳಿಗಿಂತ ನಾಯಕಿ ಪ್ರಧಾನ ಸಿನಿಮಾಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ನಿರ್ದೇಶಿಸಿದರು. ಪುಟ್ಟಣ್ಣ ಕಣಗಾಲ ನಿರ್ದೇಶನದಲ್ಲಿ ತ್ರಿವೇಣಿ ಕಾದಂಬರಿಗಳಾಧಾರಿತ ಹೆಣ್ಣಿನ ಬದುಕಿನ ಸಂಕಷ್ಟವನ್ನು ಸಾರುವ ಸಾಲು ಸಾಲು ಸಿನಿಮಾಗಳು ನಿರ್ಮಾಣಗೊಂಡವು. ಪುರುಷ ನಿರ್ದೇಶಕರು ಮಹಿಳಾ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿ ಒಂದು ಭೂಮಿಕೆಯನ್ನು ಸಿದ್ಧಪಡಿಸಿದ ನಂತರವೂ ಹೆಣ್ಣಿನ ಬದುಕನ್ನು ಅತ್ಯಂತ ಸಮರ್ಥವಾಗಿ ಹಿಡಿದಿಡಲು ಸಿನಿಮಾಗಳನ್ನು ನಿರ್ದೇಶಿಸಲು ಮಹಿಳೆಯರು ಮುಂದೆ ಬರುತ್ತಿಲ್ಲದಿರುವುದು ದುರಂತದ ಸಂಗತಿ. ಇವತ್ತಿಗೂ ಮಹಿಳಾ ಪ್ರಧಾನ ಸಿನಿಮಾಗಳಿಗೆ ಉದಾಹರಣೆಯಾಗಿ ನಾವು ಸತ್ಯಜೀತ್ ರೇ ಅವರ ಪಥೇರ್ ಪಾಂಚಾಲಿ, ಗುಲ್ಜಾರರ ಮಾಚಿಸ್, ಪುಟ್ಟಣ್ಣನವರ ಶರಪಂಜರ, ಕಾಸರವಳ್ಳಿಯವರ ದ್ವೀಪ ಸಿನಿಮಾಗಳ ಹೆಸರು ಹೇಳುವಾಗ ಒಬ್ಬ ಮಹಿಳಾ ನಿರ್ದೇಶಕಿಯ ಹೆಸರೂ ಮನಪಟಲದ ಮೇಲೆ ಮೂಡುವುದಿಲ್ಲ.

                     ಇಲ್ಲಿ ಉಲ್ಲೇಖಿಸಲೇ ಬೇಕಾದ ಇನ್ನೊಂದು ಮಾತೆಂದರೆ ಸಿನಿಮಾದ ಕಥೆಗೆ ಅನಿವಾರ್ಯ ಇಲ್ಲದಿದ್ದಾಗೂ ಕೂಡ ಹೆಣ್ಣನ್ನು ಹಾಡು, ನೃತ್ಯ, ಸ್ನಾನದ ದೃಶ್ಯಗಳಲ್ಲಿ ಚಿತ್ರಿಸಿರುವುದನ್ನು ನಾವು ಸಿನಿಮಾಗಳಲ್ಲಿ ಕಾಣುತ್ತೇವೆ. ಏಕೆ ಹೀಗೆ ಎಂದು ಒಂದಿಷ್ಟು ವಿಶ್ಲೇಷಿಸಿ ನೋಡಿದಾಗ ಅದು ಸಿನಿಮಾದ ಮಾರಾಟಕ್ಕೆ ಹೆಚ್ಚು ಸಹಾಯಕವಾಗುತ್ತಿದೆ ಎನ್ನುವ ಮಾತು ಸಿನಿಮಾ ವಲಯದಲ್ಲಿ ಚಾಲ್ತಿಯಲ್ಲಿದೆ. ಈ ಮಾತನ್ನು ಒಪ್ಪುವುದಾದರೆ ನಮ್ಮ ಸಿನಿಮಾ ಉದ್ಯಮ ಹೆಣ್ಣನ್ನು ಒಂದು ಮಾರಾಟದ ಸರಕಾಗಿ ನೋಡುತ್ತಿದೆ ಎನ್ನುವ ಸಂಗತಿ ಸ್ಪಷ್ಟವಾಗುತ್ತದೆ. ಹೀಗೆ ಹೆಣ್ಣನ್ನು ಆಕರ್ಷಣೆ, ಶೃಂಗಾರ ಮತ್ತು ಕಾಮದ ಕಣ್ಣಿನಲ್ಲಿ ಚಿತ್ರಿಕರಿಸುತ್ತಿರುವ ಸಿನಿಮಾ ರಂಗ ಆಕೆಯ ಭಾವನೆಗಳನ್ನು ಸಮರ್ಥವಾಗಿ ಹಿಡಿದಿಡುವಲ್ಲಿ ಸಂಪೂರ್ಣವಾಗಿ ಸೋತಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 





Friday, March 4, 2016

ಅಸಹಿಷ್ಣುತೆ ಮತ್ತು ಭಾರತ


       









           ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ ಎನ್ನುವುದು ಅತ್ಯಂತ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾದ ಪದವಾಗಿದೆ. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಕಳೆದ ಅರವತ್ತು ವರ್ಷಗಳಿಂದ ಹೀಗೆ ಪ್ರಧಾನ ಭೂಮಿಕೆಯಲ್ಲಿ  ಕಾಣಿಸಿಕೊಳ್ಳದಿದ್ದ ಈ ಅಸಹಿಷ್ಣುತೆ ಈಗ ಚರ್ಚೆ, ಸಂವಾದ ಮತ್ತು ಸಂಘರ್ಷದ ಮೂಲಕ ನಮ್ಮಗಳ ಬದುಕನ್ನು ಪ್ರವೇಶಿಸಿದೆ. ದಿನನಿತ್ಯ ಬೆಳಗಾದರೆ ಸುದ್ದಿ ಮಾಧ್ಯಮಗಳಲ್ಲಿ ಈ ಅಸಹಿಷ್ಣುತೆಯದೆ ಮಾತು ಮತ್ತು ಚರ್ಚೆ. ಈ ಅಸಹಿಷ್ಣುತೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಹೊಸ ಪರಿಕಲ್ಪನೆಯಾಗಲಿ ಅಥವಾ ಪರಿಭಾಷೆಯಾಗಲಿ ಅಲ್ಲ. ನೂರಾರು ವರ್ಷಗಳ ಕಾಲ ಕೇವಲ ಜಾತಿಗೆ ಮಾತ್ರ ಸೀಮಿತವಾಗಿದ್ದ ಈ ಪದ ಜಾಗತೀಕರಣ ಮತ್ತು ಆಧುನೀಕರಣದ ಪರಿಣಾಮ ತನ್ನ ವ್ಯಾಪ್ತಿಯನ್ನು ಜಾತಿಯಿಂದ ಧರ್ಮಕ್ಕೆ ಹಿಗ್ಗಿಸಿಕೊಂಡಿದೆ. ಹಿಂದೆಯೆಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಮುಂದುವೆರೆದ ಜಾತಿಗೆ ಸೇರಿದ ಜನರು ಹಿಂದುಳಿದ ಜಾತಿಯವರನ್ನು ಒಂದಿಷ್ಟು ಹೆಚ್ಚೇ ಎನ್ನುವಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಮತ್ತು ಅವಮಾನಿಸುತ್ತಿದ್ದ ಹಾಗೂ ಕೀಳಾಗಿ ಕಾಣುತ್ತಿದ್ದ ಸನ್ನಿವೇಶಗಳು ಮತ್ತು ಸಂದರ್ಭಗಳಿಗೆ ನಾವುಗಳು ಸಾಕ್ಷಿಯಾಗಿದ್ದುಂಟು. ಒಂದರ್ಥದಲ್ಲಿ ಅದು ಅಸಹಿಷ್ಣುತೆ ಅಲ್ಲದೆ ಬೇರೇನಲ್ಲ. ಶಿಕ್ಷಣ ಮತ್ತು ನಗರೀಕರಣದ ಪರಿಣಾಮ ಇವತ್ತು ನಮ್ಮ ಸಾಮಾಜಿಕ ಬದುಕಿನಲ್ಲಿ ಸಾಕಷ್ಟು ಸ್ಥಿತ್ಯಂತರಗಳಾಗಿ ನಾವುಗಳು ಬದುಕುವ ರೀತಿ ನೀತಿಗಳು ಬದಲಾಗಿವೆ. ಜಾಗತೀಕರಣ ನಮ್ಮ ನಮ್ಮ ಊರುಗಳಿಗೆ ಕಾಲಿಟ್ಟ ನಂತರವಂತೂ ನಾವು ವಾಸಿಸುತ್ತಿರುವ ನಾಲ್ಕು ಗೋಡೆಗಳ ಮನೆಗಳಲ್ಲೇ ಪರಸ್ಪರ ಅಪರಿಚಿತರಾಗುತ್ತಿರುವಾಗ ನಮ್ಮ ನೆರೆಯ ಮನೆಯಲ್ಲೋ ಇಲ್ಲವೇ ನಮ್ಮ ಊರಿನಲ್ಲೋ ಯಾರು ಹೇಗೆ ಬದುಕುತ್ತಿರುವರು ಮತ್ತು ಏನನ್ನು ತಿನ್ನುತ್ತಿರುವರು ಎಂದು ವಿಚಾರಿಸುವಷ್ಟು ಸಮಯ ಹಾಗೂ ವ್ಯವಧಾನವಾದರೂ ನಮಗೆಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಈ ಅಸಹಿಷ್ಣುತೆ ಕುರಿತು ಗಲಭೆ ಮತ್ತು ಪುಕಾರು ಎಬ್ಬಿಸುತ್ತಿರುವವರಲ್ಲಿ ಹೆಚ್ಚಿನವರು ಈ  ಬರಹಗಾರರು ಮತ್ತು ಸೋಕಾಲ್ಡ್ ಬುದ್ಧಿಜೀವಿಗಳು. ಇವರೊಂದಿಗೆ ನಮ್ಮನ್ನಾಳುವ ರಾಜಕಾರಣಿಗಳೂ ಜೊತೆಗೂಡಿರುವುದರಿಂದ ಅಸಹಿಷ್ಣುತೆಯ ಚರ್ಚೆಗೆ ವ್ಯಾಪಕ ಪ್ರಚಾರ ದೊರೆಯುತ್ತಿದೆ. ದಿನನಿತ್ಯದ ಬದುಕೇ ಒಂದು ಸವಾಲು ಮತ್ತು ಬಹುದೊಡ್ಡ ಸಮಸ್ಯೆಯಾಗಿ ಕುಳಿತಿರುವಾಗ ಭಾರತದ ಬಹುಸಂಖ್ಯಾತ ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಅಸಹಿಷ್ಣುತೆ ಕುರಿತು ಚರ್ಚಿಸುವ ಮತ್ತು ಸಂವಾದಕ್ಕಿಳಿಯುವ ತಾಳ್ಮೆಯಾಗಲಿ ಇಲ್ಲವೇ ಆಸಕ್ತಿಯಾಗಲಿ ಅವರಲ್ಲಿಲ್ಲ.

ಅಸಹಿಷ್ಣುತೆ ಮತ್ತು ಸಾಹಿತ್ಯ 


      ಅಸಹಿಷ್ಣುತೆಯನ್ನು ವ್ಯಾಪಕ ಚರ್ಚೆಗೆ  ಒಳಪಡಿಸಿದವರಲ್ಲಿ ಬರಹಗಾರರು ಪ್ರಮುಖರು. ಹೀಗೆ ಇಂಥದ್ದೊಂದು ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲು ಪ್ರಸ್ತುತ ಪರಿಸ್ಥಿತಿ ಎಷ್ಟು ಅನಿವಾರ್ಯಯಾಗಿತ್ತು ಎನ್ನುವುದಕ್ಕಿಂತ ನಮ್ಮ ಸಾಹಿತ್ಯ ಕ್ಷೇತ್ರದಲ್ಲಿನ ಎಡಪಂಥೀಯ ಮತ್ತು ಬಲಪಂಥೀಯ ಎನ್ನುವ ಈ ಎರಡು ಗುಂಪುಗಳೇ ಚರ್ಚೆಯ ಹಿಂದಿನ ಪ್ರಬಲ ಕಾರಣಗಳು ಎನ್ನುವ ಸಂಗತಿ ನಿರ್ವಿವಾದ. ಚರ್ಚೆಗೆ ಅವರಿಗೊಂದು ವಿಷಯ ಬೇಕು.  ಅದು ದೇಶದ ಅಖಂಡತೆಯನ್ನಾಗಲಿ ಇಲ್ಲವೇ ಭದ್ರತೆಯನ್ನಾಗಲಿ ಸಡಿಲಗೊಳಿಸಲಿ, ಜನ ಸಮುದಾಯವನ್ನು ಸೀಳಿ ಇಬ್ಭಾಗವಾಗಿಸಲಿ, ರಾಷ್ಟ್ರದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಲಿ ಆ  ಕುರಿತು ಅವರೆಂದೂ ಚಿಂತಿಸಲಾರರು. ಮೊನ್ನೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ನಮ್ಮ ಬರಹಗಾರರ ಚರ್ಚೆಗೆ ಹೆಚ್ಚು ಗ್ರಾಸವಾಗಿದ್ದು ಈ ಅಸಹಿಷ್ಣುತೆಯೇ.  ಕೆಲವು ಲೇಖಕರು ಚರ್ಚೆಯ ಜೊತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ದೊರೆತ ಪ್ರಶಸ್ತಿಯನ್ನೇ ಹಿಂತಿರುಗಿಸಿ ಇತರರಿಗೆ ಮಾದರಿಯೂ ಮತ್ತು ಅನೇಕರ ಟೀಕೆಗೂ ಏಕಕಾಲಕ್ಕೆ ಒಳಗಾಗಬೇಕಾಯಿತು. ಹೀಗೆ ಸಾಹಿತ್ಯವಲಯ ಅಸಹಿಷ್ಣುತೆಯನ್ನು ವ್ಯಾಪಕ ಚರ್ಚೆಗೆ ಒಳಪಡಿಸುತ್ತಿರುವ ಸಂದರ್ಭದಲ್ಲಿ ಬರಹಗಾರರ ಈ ನಡೆ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಹೀಗೆ ಪ್ರಶಸ್ತಿಯನ್ನು ಮರಳಿಸುತ್ತಿರುವ ಲೇಖಕರು ಅಸಹಿಷ್ಣುತೆಯನ್ನು ವಿರೋಧಿಸುತ್ತಿರುವರೋ ಇಲ್ಲವೇ ಪ್ರಭುತ್ವವನ್ನೋ ಎನ್ನುವ ಅನುಮಾನ ಹಲವರದು. ಏಕೆಂದರೆ ಪ್ರಶಸ್ತಿಯನ್ನು ಹಿಂತಿರುಗಿಸಿದ ಲೇಖಕರಲ್ಲಿ ಬಹುಪಾಲು ಲೇಖಕರು ಎಡಪಂಥೀಯರು ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಆದ್ದರಿಂದ ಈ ಲೇಖಕರಲ್ಲಿ ಪ್ರಭುತ್ವವನ್ನು ವಿರೋಧಿಸುವ ಭಾವನೆಯೇ ಅಧಿಕವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗೆ ಪ್ರಭುತ್ವದ ವಿರೋಧವನ್ನೇ ತಮ್ಮ ಚರ್ಚೆ ಮತ್ತು ಬರವಣಿಗೆಯ ಮುಖ್ಯ ಅಜೆಂಡಾ ಮಾಡಿಕೊಂಡ ಈ ಬರಹಗಾರರು ಸಮಾಜದಲ್ಲಿನ ಇನ್ನಿತರ ಸಮಸ್ಯೆಗಳಿಗೆ ಕುರುಡಾಗುತ್ತಿರುವರು. ವಿಮರ್ಶಕ ಟಿ ಪಿ ಅಶೋಕ ತಮ್ಮ ಒಂದು ಲೇಖನದಲ್ಲಿ ಹೇಳಿದ 'ಮೋದಿ ಮೇನಿಯಾ ಅನಂತಮೂರ್ತಿ ಅವರೊಳಗಿನ ಸೃಜನಶೀಲತೆಯನ್ನೇ ಮುಕ್ಕಾಗಿಸಿತು' ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಹಾಗೆಂದು ಅವರು ಎಸ್ ಎಲ್ ಭೈರಪ್ಪನವರನ್ನು ಸಮರ್ಥಿಸುತ್ತಾರೆ ಎಂದರ್ಥವಲ್ಲ. 'ಈ ದಿನಗಳಲ್ಲಿ ಭೈರಪ್ಪನವರಲ್ಲಿ ತೀರ ಮತೀಯ ಭಾವನೆಗಳೇ ತುಂಬಿರುವ ಪರಿಣಾಮ ಅವರಿಗೆ ಹಿಂದಿನಂತೆ ಸೃಜನಶೀಲ ಸಾಹಿತ್ಯ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ' ಎಂದು ವಿಮರ್ಶಿಸುತ್ತಾರೆ. ಹೀಗೆ ಸಾಹಿತ್ಯವಲಯದಲ್ಲಿನ ಈ ಗುಂಪುಗಾರಿಕೆಯ ಪರಿಣಾಮ ಇದೆ ಈಗ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವ ಹೊಸ ಬರಹಗಾರರು ಏನನ್ನು ಬರೆಯಬೇಕೆನ್ನುವ ಗೊಂದಲದಲ್ಲಿದ್ದಂತೆ ಕಾಣುತ್ತದೆ. ಯಾವುದೇ ಒಂದು ಗುಂಪಿನೊಂದಿಗೆ ಗುರುತಿಸಿಕೊಳ್ಳದೆ ಹೋದಲ್ಲಿ ತಮ್ಮ ಬರವಣಿಗೆಗೆ ಓದುಗರು ದಕ್ಕಲಾರರು ಎನ್ನುವ ಸಂಗತಿ ಅನೇಕ ಹೊಸ ಪೀಳಿಗೆಯ ಲೇಖಕರಿಗೆ ಮನದಟ್ಟಾಗಿದೆ. ಪರಿಣಾಮವಾಗಿ ಈ ನವ ಲೇಖಕರು ಕೂಡ ಧರ್ಮ, ಅಸಹಿಷ್ಣುತೆಯ ಬೆನ್ನು ಬಿದ್ದು ಅಸಹಿಷ್ಣುತೆಯ ಚರ್ಚೆಯ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸುತ್ತಿರುವರು.

ಯುವಜನರ ಭಾವನಾತ್ಮಕತೆ 


          ನಮ್ಮ ಇಂದಿನ ರಾಜಕಾರಣಿಗಳು ಮತ್ತು ಬರಹಗಾರರು ಯುವಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಅಸಹಿಷ್ಣುತೆಯ  ವ್ಯಾಪ್ತಿಯನ್ನು ಹಿಗ್ಗಿಸುತ್ತಿರುವರು. ಒಂದು ಧರ್ಮದ ಇಲ್ಲವೇ ಸಮುದಾಯದ ವಿರುದ್ಧ ಯುವಜನರಲ್ಲಿ ಸುಲಭವಾಗಿ ದ್ವೇಷದ ಭಾವನೆಗಳನ್ನು ಬೇರೂರಿಸಬಹುದು. ಇವತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ದೇಶದ ಯುವಜನತೆ ತಮಗಾಗದ ಧರ್ಮ ಮತ್ತು ಸಮುದಾಯಗಳ ವಿರುದ್ಧ ಬಹುದೊಡ್ಡ ಸಮರವನ್ನೇ  ಸಾರಿರುವ ಉದಾಹರಣೆ ನಮ್ಮೆದುರಿಗಿದೆ. ಧರ್ಮದಿಂದಲೇ ಒಂದು ರಾಷ್ಟ್ರವನ್ನು ಕಟ್ಟುವುದು ಸಾಧ್ಯವಾಗುವಂತಿದ್ದರೆ ೧೯೭೧ ರಲ್ಲಿ ಪೂರ್ವಪಾಕಿಸ್ತಾನ ತನ್ನ ರಾಷ್ಟ್ರದಿಂದ ಹೊರಬಂದು ಹೊಸ ರಾಷ್ಟ್ರವೊಂದು ಉದಯಿಸುವ ಅನಿವಾರ್ಯತೆ ಎದುರಾಗುತ್ತಿರಲಿಲ್ಲ. ವಿಶ್ಲೇಷಣೆ ಮತ್ತು ವಿಮರ್ಶೆ ರಹಿತ ಮನಸ್ಥಿತಿಯ ಯುವಜನರು  ನಮ್ಮ ಬುದ್ಧಿಜೀವಿಗಳ, ಧಾರ್ಮಿಕ ಮುಖಂಡರ  ಹಾಗೂ ರಾಜಕೀಯ ನಾಯಕರ ಮಾತುಗಳನ್ನೇ ನಿಜವೆಂದು ನಂಬಿ ತಮ್ಮನ್ನು  ರಾಷ್ಟ್ರ ವಿಭಜಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವರು. ಅವಿದ್ಯಾವಂತ ಯುವಕರಿಗಿಂತಲೂ ಸುಶಿಕ್ಷಿತ ಯುವಕರು ರಾಷ್ಟ್ರ ವಿಭಜಕ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ದುರಂತದ ಸಂಗತಿ. ಕೆಲವೊಂದು ಧರ್ಮ ಮತ್ತು ಸಮುದಾಯದ ಯುವಜನತೆಗೆ ದೇಶಪ್ರೇಮಕ್ಕಿಂತ ಅವರಿಗೆ ಧರ್ಮವೇ ಮುಖ್ಯವಾಗಿ ಕಾಣಿಸುತ್ತಿದೆ. ತೀರ ಧರ್ಮಾಂಧತೆಯ ಪರಿಣಾಮ ರಾಷ್ಟ್ರದಲ್ಲಿ ಹಿಂಸಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿರುವುದು ಕೂಡ ಯುವಜನತೆಯೇ. ಹೀಗೆ ಯುವಜನತೆಯ ಭಾವನೆಗಳನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವ ಈ ಧಾರ್ಮಿಕ ಮುಖಂಡರುಗಳು, ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಅಸಹಿಷ್ಣುತೆ ನೆಪದಲ್ಲಿ ಯುಜನರನ್ನು ದಾರಿತಪ್ಪಿಸುತ್ತಿರುವರು. ಅತ್ಯಂತ ಭಾವಾವೇಶದಲ್ಲಿ ಈ ಯುವಜನತೆ  ಪಾರ್ಲಿಮೆಂಟಿನ ಮೇಲೆ ದಾಳಿಯ ಸಂಚು ರೂಪಿಸಿದ ಉಗ್ರ ಅಫ್ಜಲ್ ಗುರುನ ಗಲ್ಲು ಶಿಕ್ಷೆಯ ದಿನವನ್ನು ಹುತಾತ್ಮ ದಿನವಾಗಿ ಆಚರಿಸುತ್ತಾರೆ. ಆ ಸಂದರ್ಭ ಭಾರತದ ವಿರುದ್ಧದ ಘೋಷಣೆಗಳನ್ನು ಕೂಗುತ್ತಾರೆ. ಕಾಶ್ಮೀರದ ಪ್ರತ್ಯೇಕತೆಗಾಗಿ ಒತ್ತಾಯಿಸುತ್ತಾರೆ.  ಜೊತೆಗೆ ಗಾಂಧೀಜಿ ಹತ್ಯೆಯನ್ನು ಒಂದು ಗುಂಪಿನ ಯುವಕರು ಸಮರ್ಥಿಸಿಕೊಳ್ಳುವುದು ಕೂಡ ಖಂಡನೀಯ. ಆತಂಕದ ಸಂಗತಿ ಎಂದರೆ ಕೆಲವು ರಾಜಕೀಯ ಪಕ್ಷಗಳು ಯುವಜನತೆಯ ಈ ನಡೆಯನ್ನು ತಮ್ಮ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತವೆ. ಬುದ್ಧಿಜೀವಿಗಳು, ರಾಜಕಾರಣಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್ಸಿಗೆ ಭೇಟಿ ನೀಡಿ ಯುವಕರನ್ನು ಇನ್ನಷ್ಟು ಪ್ರಚೋದಿಸುವ ಮಾತನಾಡುತ್ತಾರೆ. ಇಂಥದ್ದೊಂದು ಗೂಡಾರ್ಥದ ಅರಿವಿಲ್ಲದ ಯುವಜನತೆ ತಮ್ಮದೇ ರಾಷ್ಟ್ರದ ವಿರುದ್ಧ ತಿರುಗಿಬಿದ್ದು ಹಿಂಸಾತ್ಮಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು.

ಜನಪ್ರಿಯತೆಯ ಅಸ್ತ್ರ

         ಅಸಹಿಷ್ಣುತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಂಡು ಬೆಳೆದ ಬರಹಗಾರರ ಮತ್ತು ರಾಜಕಾರಣಿಗಳ ಸಂಖ್ಯೆ ಭಾರತದಲ್ಲಿ ಬಹಳಷ್ಟಿದೆ. ಪರಿಣಾಮವಾಗಿ ಇಲ್ಲಿ ಇವರುಗಳಿಗೆ ಅಸಹಿಷ್ಣುತೆ ಎಂದಿಗೂ ಅದೊಂದು ಸಮಸ್ಯೆಯಾಗಿ ಕಾಡಿದ್ದು ತುಂಬ ಅಪರೂಪ. ಅಸಹಿಷ್ಣುತೆಯನ್ನು ಜನಪ್ರಿಯತೆಯ ಅಸ್ತ್ರವಾಗಿ ಬಳಸಿಕೊಂಡು ಈ ಬುದ್ಧಿಜೀವಿಗಳು, ರಾಜಕಾರಣಿಗಳು, ಸಾಹಿತಿಗಳು ಮತ್ತು ಸೋಕಾಲ್ಡ್ ಚಿಂತಕರು ತಮ್ಮ ತಮ್ಮ ಬದುಕನ್ನು ಹಸನಾಗಿಸಿಕೊಂಡಿದ್ದೆ ಹೆಚ್ಚು. ಜೊತೆಗೆ ಈ ಬರಹಗಾರರಿಗೆ ಬರವಣಿಗೆಗೆ ಬಂಡವಾಳದ ಕೊರತೆ ಎದುರಾದಾಗಲೆಲ್ಲ ಅವರಿಗೆ ಈ ಅಸಹಿಷ್ಣುತೆ ನೆನಪಾಗುತ್ತದೆ. ಇನ್ನು ಕೆಲವು ಲೇಖಕರು ಬರವಣಿಗೆ ಬದುಕಿನಿಂದ ಮತ್ತು ಬುದ್ಧಿಜೀವಿಗಳು ಹೋರಾಟ, ಚಳವಳಿಗಳಿಂದ ನಿವೃತ್ತರಾಗಿ ದಶಕಗಳೇ ಕಳೆದು ಹೋಗಿವೆ. ಜನರ ನೆನಪುಗಳಿಂದ ದೂರವಾಗಿರುವ ಅವರಿಗೆ ಮತ್ತೆ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಹಂಬಲ ಮತ್ತು ಚಪಲ  ಅವರನ್ನು ಈ ಅಸಹಿಷ್ಣುತೆ ಕಡೆಗೆ ಮುಖಮಾಡಿ ನಿಲ್ಲಿಸಿದೆ. ಯಾವ ಸಮಸ್ಯೆಗಳ ಪರವಾಗಿ ನಿಂತರೆ ತಾವು ಜನಪ್ರಿಯರಾಗಬಹುದು ಮತ್ತು ಜನರ ಗೌರವಾದಾರಗಳಿಗೆ ಪಾತ್ರರಾಗಬಹುದು ಎನ್ನುವ ತಿಳುವಳಿಕೆ ಇವರಿಗಿದೆ. ಅಲ್ಲದೆ ಇಂಥದ್ದೇ ನೀತಿ ಮತ್ತು ಸಿದ್ಧಾಂತವನ್ನು  ತಮ್ಮ ಪಕ್ಷಗಳ ಪ್ರಣಾಳಿಕೆಯಾಗಿ ಮಾಡಿಕೊಂಡ ರಾಜಕೀಯ ಪಕ್ಷಗಳಿಗೆ ಹತ್ತಿರವಾಗಿ ಮುಂದೊಂದು ದಿನ ಕಳೆದುಹೋದ ಅಧಿಕಾರ ಮತ್ತು ಆಯಕಟ್ಟಿನ ಸ್ಥಾನವನ್ನು ಮತ್ತೆ ಮರಳಿ ಪಡೆಯಬಹುದೆನ್ನುವ ದೂರದ ಆಸೆ ಹಾಗೂ ಇರಾದೆ ಈ ಬುದ್ಧಿಜೀವಿಗಳದು. ಅದಕ್ಕೆಂದೇ ಅವರು ಸದಾಕಾಲ ಚಲಾವಣೆಯಲ್ಲಿರಲು ಮತ್ತು ಜನರ ನೆನಪುಗಳಲ್ಲಿ ಹಸಿರಾಗಿರಲು ಬಯಸುತ್ತಾರೆ. ಹೀಗಾಗಿ ಇವರುಗಳಿಗೆ ಜಾತಿ ಮತ್ತು ಧರ್ಮಗಳ ನಡುವೆ ನಡೆಯುವ ಸಣ್ಣ ಘರ್ಷಣೆಗಳು ಕೂಡ ಬಹುದೊಡ್ಡ ಸಮಸ್ಯೆಗಳಾಗಿ ಕಾಣಿಸುತ್ತವೆ. ನೆರೆಹಾವಳಿಯಿಂದಾದ ಸಮಸ್ಯೆಗಳನ್ನು ವರದಿ ಮಾಡಲು ಕಳುಹಿಸಿದ ಕನ್ನಡದ ದೊಡ್ಡ ಬರಹಗಾರರೊಬ್ಬರು ಅಲ್ಲಿನ ಜನರ ಬವಣೆಗಳನ್ನು ವರದಿ ಮಾಡುವುದಕ್ಕಿಂತ ಅವರು ಪುನಶ್ಚೇತನ ಶಿಬಿರಗಳಲ್ಲಿ ಇಂಥ ಧರ್ಮ ಮತ್ತು ಸಮುದಾಯದವರಿಗೆ ಅನ್ಯಾಯವಾಗುತ್ತಿದೆ ಎಂದು ನುಡಿಯುತ್ತಾರೆ. ಇದರರ್ಥ ಸೂತಕದ ಮನೆಯಲ್ಲೂ ಅಸಹಿಷ್ಣುತೆಯನ್ನು ಹುಡುಕುವ ಚಟ ನಮ್ಮ ಬುದ್ಧಿಜೀವಿಗಳದು.

ವಿಶ್ವವಿದ್ಯಾಲಯಗಳು


     ನಮ್ಮ ವಿಶ್ವವಿದ್ಯಾಲಯಗಳು ಬೋಧನೆಗಿಂತ   ಧರ್ಮ ಧರ್ಮಗಳ ನಡುವೆ ಮತ್ತು ಜಾತಿ ಸಮುದಾಯಗಳ ಮಧ್ಯೆ ಬಿರುಕು ಮೂಡಿಸುವ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿವೆ. ಅಸಹಿಷ್ಣುತೆಯೊಂದು ಮೊದಲು ಹುಟ್ಟುವುದೇ  ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡುತ್ತಿರುವ ನಮ್ಮ ಪ್ರಭೃತಿಗಳ ಪ್ರಚೋದನೆಯಿಂದ.  ವಿಶ್ವವಿದ್ಯಾಲಯಕ್ಕೆ ಕಾಲಿಟ್ಟ ತಕ್ಷಣ ನಮ್ಮ ವಿದ್ಯಾರ್ಥಿಗಳಲ್ಲಿ ಸಮಾಜವನ್ನು ಗ್ರಹಿಸುವ ರೀತಿಯೇ ಬದಲಾಗುತ್ತಿದೆ. ಅಲ್ಲಿರುವ ಪ್ರಾಧ್ಯಾಪಕರು ಪಾಠ ಮಾಡುವುದಕ್ಕಿಂತ ವಿದ್ಯಾರ್ಥಿಗಳ ಮೇಲೆ ತಾವು ನಂಬಿಕೊಂಡು ಬಂದಿರುವ ತತ್ವ ಮತ್ತು ಸಿದ್ಧಾಂತಗಳನ್ನು ಬಲವಂತವಾಗಿ ಹೇರುತ್ತಿರುವರು. ಸ್ನಾತಕೋತ್ತರ ಶಿಕ್ಷಣ ಪಡೆದ ಯುವಜನತೆ ಇವತ್ತು ನಕ್ಸಲೈಟ್ ಗುಂಪಿನೊಂದಿಗೆ ಗುರುತಿಸಿಕೊಳ್ಳುತ್ತಿರುವುದು ಮತ್ತು ಹಿಂಸಾತ್ಮಕ ಮಾರ್ಗವನ್ನು ಹಿಡಿದಿರುವುದರ ಹಿಂದೆ ವಿಶ್ವವಿದ್ಯಾಲಯಗಳ ಪ್ರಭಾವ ಸಾಕಷ್ಟಿದೆ. ವಿಶ್ವವಿದ್ಯಾಲಯಗಳ  ಅದೆಷ್ಟೋ ಅಧ್ಯಾಪಕರ ಮೇಲೆ  ಯುವ ವಿದ್ಯಾರ್ಥಿಗಳನ್ನು ನಕ್ಸಲೈಟ್ ಗುಂಪಿಗೆ ಸೇರಿಸುತ್ತಿರುವ ಮತ್ತು ಸೇರುವಂತೆ ಪ್ರೋತ್ಸಾಹಿಸುತ್ತಿರುವ ಕಾರಣಕ್ಕಾಗಿ ಕೇಸ್ ಗಳು ಕೂಡ ದಾಖಲಾಗಿವೆ. ಮೊನ್ನೆ ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೆಮುಲಾ ದುರಂತ ನಾಯಕನಾಗಿಯೂ ಮತ್ತು ಯುವಜನತೆಗೆ ಆದರ್ಶವಾಗಿಯೂ ಪ್ರತಿಷ್ಥಾಪನೆಗೊಂಡಿದ್ದರ ಹಿಂದೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಪ್ರೋಚದನಕಾರಿ ಮಾತುಗಳೇ ಕಾರಣ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಮತ್ತು ದಲಿತ ಸಂಘರ್ಷ ಸಮಿತಿಯ ಸದಸ್ಯರು  ಕೈ ಕೈಹಿಡಿದು ಹೊಡೆದಾಡುವ ತಾಣಗಳಾಗಿವೆ ಈ ವಿಶ್ವವಿದ್ಯಾಲಯಗಳು.   ಭಾರತ ಸ್ವಾತಂತ್ರ್ಯಾ ನಂತರದ ದಿನಗಳಿಂದ ಎಡಪಂಥೀಯರ ವಿಚಾರ ಧಾರೆಯ ಪ್ರಬಲ ಶಕ್ತಿ ಕೇಂದ್ರಗಳಾಗಿದ್ದ ವಿಶ್ವವಿದ್ಯಾಲಯಗಳು ಕೇಂದ್ರದಲ್ಲಿ    ಹಿಂದುತ್ವದ ಪರವಾದ ಪಕ್ಷ ಅಧಿಕಾರದ ಗದ್ದುಗೆ ಏರಿದಾಗ ಸಹಜವಾಗಿಯೇ ಅವುಗಳು ಬಲಪಂಥೀಯರ ಕಾರ್ಯಕ್ಷೇತ್ರಗಳಾಗಿ ರೂಪಾಂತರಗೊಂಡವು. ಪರಿಣಾಮವಾಗಿ ಇದುವರೆಗೂ ವಿಶ್ವವಿದ್ಯಾಲಯಗಳಂಥ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ರಾಷ್ಟ್ರದ ಯುವಜನತೆಯ ನಡೆಯನ್ನು ನಿರ್ಧರಿಸುತ್ತಿದ್ದ ಎಡಪಂಥೀಯರಿಗೆ  ಅಭದ್ರತೆ ಕಾಡತೊಡಗಿತು. ಇಂಥದ್ದೊಂದು ಅಭದ್ರತೆಯಿಂದ ಹೊರಬರಲು ಅವರು ಸಹಜವಾಗಿಯೇ ಅಸಹಿಷ್ಣುತೆಯನ್ನು ಒಂದು ಪ್ರಬಲ ಅಸ್ತ್ರವಾಗಿ ಉಪಯೋಗಿಸಿಕೊಳ್ಳಲಾರಂಭಿಸಿರುವರು. ಹಾಗೆಂದು ವಿಶ್ವವಿದ್ಯಾಲಯಗಳು ಈ ಎಲ್ಲ ರಾಷ್ಟ್ರ ವಿಭಜಕ ಚಿಂತನೆಗಳಿಂದ ಮುಕ್ತಿ ಹೊಂದಿ ನಮ್ಮ ವಿದ್ಯಾರ್ಥಿಗಳಿಗೆ ಶಿಸ್ತಿನಿಂದ ಪಾಠ ಮಾಡುವ ದಿನಗಳು ಮರುಕಳಿಸಿವೆ ಎಂದು ನಾವು ಸಂಭ್ರಮಪಡುವಂತಿಲ್ಲ. ಏಕೆಂದರೆ ವಿಶ್ವವಿದ್ಯಾಲಯಗಳು ಧಾರ್ಮಿಕ ಕೇಂದ್ರಗಳಾಗಿ ರೂಪಾಂತರ ಹೊಂದುವ ದಿನಗಳೇನೂ ದೂರವಿಲ್ಲ. ಕಾಲ ಚಕ್ರ ಉರಿಳಿರುವುದರಿಂದ ವಿಶ್ವವಿದ್ಯಾಲಯಗಳ ಆವರಣದೊಳಗಿನ ಚಿಂತನೆಯ ಕ್ರಮ ಬದಲಾಗಿದೆಯೇ ಹೊರತು ಅವುಗಳು ಸೋಕಾಲ್ಡ್ ಬುದ್ಧಿಜೀವಿಗಳಿಂದ ಮುಕ್ತವಾಗಿಲ್ಲ. ಈ ಲೇಖನ ಬರೆಯುತ್ತಿರುವ ಸಂದರ್ಭದಲ್ಲೇ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಮೂರು ವರ್ಷಗಳ ಹಿಂದೆ ಉಗ್ರ  ಅಫ್ಜಲ್ ಗುರುನನ್ನು ಗಲ್ಲಿಗೆರಿಸಿದ್ದನ್ನು ಪ್ರತಿಭಟಿಸಿ ಮೆರವಣಿಗೆ ನಡೆಸಿದ ಘಟನೆಯೊಂದು ನಡೆದು ಹೋಗಿದೆ. ಭಾರತದಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳು ಹೊಸದಲ್ಲವಾದರೂ ಹೀಗೆ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿರುವುದಕ್ಕೆ ಕಾರಣವಾದ ಹಿನ್ನೆಲೆ ಅತಿ ಮುಖ್ಯ ಎನಿಸಿಕೊಳ್ಳುತ್ತದೆ. ರಾಷ್ಟ್ರೀಯತೆಗೆ ಮಾರಕವಾಗುವ ಇಂಥ ಪ್ರತಿಭಟನೆಗಳನ್ನು ನಿಯಂತ್ರಿಸದೆ ಇರುವುದು  ವಿಶ್ವವಿದ್ಯಾಲಯಗಳನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗುತ್ತದೆ. ಭಿನ್ನ ಸೈದ್ಧಾಂತಿಕ ಬೌದ್ಧಿಕ ಸಂಘರ್ಷದ ಮೂಲಕವೇ ಹೊಸ ಹೊಸ ಚಿಂತನೆಗಳು ಮೊಳೆಯಲು ಸಾಧ್ಯ ಎನ್ನುವ ಮಾತು  ಒಪ್ಪಿಕೊಳ್ಳುವಂಥದ್ದು ಹಾಗೆಂದು  ಉಗ್ರನ ಗಲ್ಲುಶಿಕ್ಷೆಯನ್ನೇ ಪ್ರತಿರೋಧಿಸುವುದನ್ನು ಭಿನ್ನ ಸೈದ್ಧಾಂತಿಕ ಸಂಘರ್ಷ ಎನ್ನಬಹುದೇ?

ಬಹುತ್ವದ ಭಾರತ 


       ಭಾರತ ವೈವಿಧ್ಯಮಯ ಸಂಸ್ಕೃತಿ ಮತ್ತು ಸಾಮಾಜಿಕ ಜೀವನವನ್ನು ಒಳಗೊಂಡಿರುವ ಬಹು ವಿಶಿಷ್ಠ ರಾಷ್ಟ್ರ. ಜೊತೆಗೆ ವಿಭಿನ್ನ ಧರ್ಮೀಯರು ಮತ್ತು ಸಮುದಾಯಗಳು ಒಟ್ಟಾಗಿ ಬಾಳಲು ಅವಕಾಶ ಒದಗಿಸಿರುವ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ಎನ್ನುವ ಹೆಗ್ಗಳಿಕೆ ಬೇರೆ. ಧರ್ಮ, ಜಾತಿ, ಭಾಷೆ, ಸಂಸ್ಕೃತಿ, ಆಚಾರ ಮತ್ತು ಸಂಪ್ರದಾಯದಲ್ಲಿ ನಮ್ಮದು  ಬಹುತ್ವದ ಭಾರತ. ಇಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಜನರ ಬದುಕಿನ ರೀತಿ ನೀತಿಗಳು, ಸಂಪ್ರದಾಯ, ಮಾತನಾಡುವ ಭಾಷೆ, ಜಾತಿ ಬೇರೆ ಬೇರೆಯಾಗಿವೆ. ಭಾರತದಲ್ಲಿ ಬಹುಸಂಖ್ಯಾತ ಹಿಂದು ಧರ್ಮೀಯರಿದ್ದರೂ ಇಲ್ಲಿ ಅಲ್ಪಸಂಖ್ಯಾತರೆಂದೇ ಗುರುತಿಸಲ್ಪಡುತ್ತಿರುವ ಇಸ್ಲಾಂ, ಕ್ರೈಸ್ತ, ಜೈನ, ಬೌದ್ಧ ಧರ್ಮೀಯರಿಗೂ ನೆಮ್ಮದಿಯ ಬದುಕಿಗೆ ಅವಕಾಶಗಳಿವೆ. ಅಲ್ಪಸಂಖ್ಯಾತರಿಗೆ ಸರ್ಕಾರದ ವಿಶೇಷ ಕಾಯ್ದೆಯಡಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಅನ್ಯಧರ್ಮಿಯರಿಗೆ ಪ್ರತ್ಯೇಕ ಕಾಯ್ದೆ ಕಾನೂನುಗಳನ್ನು ರೂಪಿಸಿ ಎಲ್ಲ ಧರ್ಮದವರ ಭಾವನೆಗಳನ್ನು ಇಲ್ಲಿ ಗೌರವಿಸಲಾಗಿದೆ. ಈ ಪರಧರ್ಮ ಸಹಿಷ್ಣುತಾ ಭಾವನೆಯ ಕಾರಣದಿಂದಲೇ ಭಾರತದ ನೆಲದಲ್ಲಿ ಮತಾಂತರದ ಚಟುವಟಿಕೆಗಳು ಯಾವ ಅಡೆತಡೆಗಳಿಲ್ಲದೆ ನಿರಾತಂಕವಾಗಿ  ನಡೆಯುತ್ತಿವೆ. ಹಿಂದುಳಿದ ಸಮುದಾಯದವರನ್ನು ಮತ್ತು ಆರ್ಥಿಕವಾಗಿ ದುರ್ಬಲರಾದವರನ್ನು ಒಂದಿಷ್ಟು ಹಣದ ಇಲ್ಲವೇ ಉದ್ಯೋಗದ ಆಮೀಷವೊಡ್ಡಿ ಮತಾಂತರಿಸುವ ಪ್ರಯತ್ನ ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇಂಥ ಪ್ರಯತ್ನಗಳಿಗೆ ಪ್ರತಿರೋಧ ತೋರಿದಾಗ ಇಲ್ಲವೇ ವಿರೋಧಿಸಿದಾಗ ಅದನ್ನು ಮತಾಂಧತೆ ಮತ್ತು ಅಸಹಿಷ್ಣುತೆ ಎಂದು ಅಪಪ್ರಚಾರ ಮಾಡಿ ದೇಶದ ಒಂದು ಧರ್ಮದ ಜನರ ಕುರಿತು ಇತರರಲ್ಲಿ ಅಸಹನೀಯ ಭಾವನೆಯನ್ನು ಮೂಡಿಸುವ ವ್ಯವಸ್ಥಿತ ಹುನ್ನಾರ ನಮ್ಮ ಬುದ್ಧಿಜೀವಿಗಳದು. ಹೀಗೆ ಅಪಪ್ರಚಾರ ಮಾಡುವವರು ವಿಶ್ವದ ಯಾವ ದೇಶದಲ್ಲಿ ಹೀಗೆ ಬಹುತ್ವವು ಸಾವಿರಾರು ವರ್ಷಗಳಿಂದ ಜೀವಂತವಾಗಿದೆ ಮತ್ತು ಅನ್ಯಧರ್ಮ ಸಹಿಷ್ಣುತೆಯನ್ನು ಇದುವರೆಗೂ ಜತನದಿಂದ ಕಾಪಿಟ್ಟುಕೊಂಡು ಬಂದ ದೇಶ ಭಾರತ ಬಿಟ್ಟರೆ ಬೇರೆ ಯಾವುದಿದೆ ಎಂದು ಉತ್ತರಿಸಲಿ.

ಭಾರತದ ರಾಜಕಾರಣ 


         ಭಾರತ ಬಹುತ್ವದ ರಾಷ್ಟ್ರವಾಗಿರುವುದರಿಂದ ಇಲ್ಲಿ ಪ್ರಜಾಪ್ರಭುತ್ವವಿದೆ ಮತ್ತು ಈ ಕಾರಣದಿಂದ ಇಲ್ಲಿ ಅನೇಕ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆ. ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳು ಮಾತ್ರವಲ್ಲದೆ ಪ್ರಾದೇಶಿಕ ಪಕ್ಷಗಳು ಸಹ ಭಾರತದ ರಾಜಕಾರಣದಲ್ಲಿ ಗಮನಾರ್ಹ ಪಾತ್ರವಹಿಸುತ್ತಿವೆ. ಜೊತೆಗೆ ಯಾವ ಪಕ್ಷಗಳಿಗೂ ಅಂಟಿಕೊಳ್ಳದೆ ವ್ಯಕ್ತಿಯೋರ್ವ ಪಕ್ಷೇತರನಾಗಿ ಸ್ಪರ್ಧಿಸುವ ಆ ಮೂಲಕ ಭಾರತದ ಕಾರ್ಯಾಂಗದಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲಿದೆ. ಹೀಗೆ ಭಾರತದ ರಾಜಕಾರಣ ಪ್ರಜಾಪ್ರಭುತ್ವದ ಕಾರಣದಿಂದ ಮುಕ್ತ ಸ್ವಾತಂತ್ರ್ಯವನ್ನು ಹೊಂದಿ ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುವ ವಿಪುಲ ಅವಕಾಶವನ್ನು ಹೊಂದಿದೆ. ಆದರೆ ಈ ವಿಪುಲ ಅವಕಾಶ ಮತ್ತು ಮುಕ್ತ ಸ್ವಾತಂತ್ರ್ಯ ನಮ್ಮ ರಾಜಕಾರಣವನ್ನು ಭ್ರಷ್ಟಾಚಾರವಾಗಿಯೂ ಹಾಗೂ ಜನರು ಅದರ ಮೇಲಿಟ್ಟ  ಭರವಸೆಯನ್ನು ಕಳೆದುಕೊಳ್ಳುವಂತೆಯೂ ಮಾಡಿವೆ. ಏಕೆಂದರೆ ಈ ರಾಜಕಾರಣಿಗಳು ತಮಗೆ ದೊರೆತ ಮುಕ್ತ ಸ್ವಾತಂತ್ರ್ಯವನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವರು. ಧರ್ಮ ಧರ್ಮದ ನಡುವೆ ಮತ್ತು ಜಾತಿ ಸಮುದಾಯಗಳ ನಡುವೆ ಬಹುದೊಡ್ಡ ಕಂದಕವನ್ನು ನಿರ್ಮಿಸಿ ಆ ಮೂಲಕ ತಮ್ಮ ರಾಜಕಾರಣದ ಬದುಕನ್ನು ಕಟ್ಟಿಕೊಂಡ ರಾಜಕೀಯ ನಾಯಕರುಗಳಿಗೆ ಇಲ್ಲಿ ಕೊರತೆಯಿಲ್ಲ. ಧರ್ಮ ಮತ್ತು ಜಾತಿಗಳ ನಡುವಣ ಅಸಹಿಷ್ಣುತೆಯನ್ನು ತಮ್ಮ ರಾಜಕೀಯ ಬದುಕನ್ನು ಹಸನಾಗಿಸಿಕೊಳ್ಳಲು ವ್ಯವಸ್ಥಿತವಾಗಿ ದುಡಿಸಿಕೊಂಡ ರಾಜಕಾರಣಿಗಳೇ ಇಲ್ಲಿ ಹೆಚ್ಚು. ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ಜೊತೆಗೂಡಿ ದೇಶದ ಅಭಿವೃದ್ಧಿಗಾಗಿ ಚಿಂತಿಸಿದ್ದು ಮತ್ತು ದುಡಿದದ್ದು ತುಂಬ ವಿರಳ. ಸಮಸ್ಯೆ ಮತ್ತು ಸಂಘರ್ಷಗಳಿಂದ ಮುಕ್ತವಾದ ಸಮಾಜವನ್ನು ಅವರೆಂದೂ ಬಯಸಲಾರರು. ಅದಕ್ಕೆಂದೇ ಪಾರ್ಲಿಮೆಂಟಿನ ಮೇಲೆ ದಾಳಿಯ ಸಂಚು ರೂಪಿಸಿದ ಉಗ್ರನನ್ನು ಸಹ ಇವರು ಕರುಣೆಯ ದೃಷ್ಟಿಯಿಂದ ನೋಡುತ್ತಾರೆ. ಗಲ್ಲು ತಡೆಯುವಂತೆ ಮನವಿ ಮಾಡುತ್ತಾರೆ ಆ ಮೂಲಕ ತಮ್ಮದೇ ವೋಟ್ ಬ್ಯಾಂಕೊಂದನ್ನು ಸೃಷ್ಟಿಸಿಕೊಳ್ಳುತ್ತಾರೆ. 'ಪ್ರಭುತ್ವಗಳು ಧರ್ಮದ ಹೆಸರೆತ್ತುವುದೇ ತನ್ನ ದಮನಕಾರಿ ಮತ್ತು ಅಪ್ರಾತಿನಿಧಿಕವಾದ ಆಡಳಿತವನ್ನು ಸಮರ್ಥಿಸಿಕೊಳ್ಳಲು' ಎಂಬ ಎಡ್ವರ್ಡ್ ಸಯೀದ್ ನ ಚಿಂತನೆಯನ್ನು ನಮ್ಮ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು. 



Monday, February 1, 2016

ಸೃಜನಶೀಲತೆ ಮತ್ತು ನಾನು


                                         


             ಪುಸ್ತಕಗಳ ಓದು, ಸಿನಿಮಾ ವೀಕ್ಷಣೆ ಮತ್ತು ಬರವಣಿಗೆ ನನ್ನಲ್ಲಿ ಒಂದಿಷ್ಟು ಸೃಜನಶೀಲತೆಯ ಸೆಲೆ ಜಿನುಗಲು ಕಾರಣವಾಗಿರುವ ಪ್ರಮುಖ ಸಂಗತಿಗಳು ಎನ್ನುವ ನಂಬಿಕೆ ನನ್ನದು. ಪುಸ್ತಕಗಳ ಓದು ಅದೊಂದು ಹವ್ಯಾಸವಾಗಿ ರೂಪಾಂತರಗೊಂಡಿದ್ದು ಅದು ಬಾಲ್ಯದಲ್ಲಿದ್ದ ಮನೆಯ ವಾತಾವರಣದಿಂದ. ಈ ಮೊದಲು ಅನೇಕ ಸಂದರ್ಭಗಳಲ್ಲಿ ನಾನು ಹೇಳಿಕೊಂಡಂತೆ ಓದು  ನನಗೆ ಅಮ್ಮನಿಂದ ಬಂದ ಬಳುವಳಿ. ಅಮ್ಮ ತನ್ನ    ಮನೆಯ ಕೆಲಸದ ಬಿಡುವಿನ ನಡುವೆ ಕುಳಿತು ಓದುತ್ತಿದ್ದ ಪುಸ್ತಕಗಳೇ ನನ್ನಲ್ಲಿ ಓದಿನ ಅಭಿರುಚಿ ಹೆಚ್ಚಲು ಕಾರಣವಾದವು. ನನ್ನ ಅಮ್ಮ ಒಂದೋ ಕೆಲಸ ಮಾಡುತ್ತ ಇಲ್ಲವೇ ಓದುತ್ತ ಕುಳಿತಿರುತ್ತಿದ್ದ ಚಿತ್ರ ನನ್ನ ಚಿತ್ತ ಭಿತ್ತಿಯಲ್ಲಿ ಮಾಸದ ಚಿತ್ರವಾಗಿ ನೆಲೆ ನಿಂತಿದೆ. ತನ್ನ ಬಿಡುವಿನ ವೇಳೆಯನ್ನು ಯಾವ ಹಾಳು ಹರಟೆಯಲ್ಲಿ ಕಳೆಯದೆ ಓದಿನಂಥ ಸೃಜನಾತ್ಮಕ ಹವ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ಅಮ್ಮ ನನ್ನ ಆದರ್ಶ ಮತ್ತು ಗುರು. ಕೇವಲ ನಾಲ್ಕನೆಯ ತರಗತಿಯವರೆಗೆ ಓದಿದ್ದ ಆಕೆ ರಾಮಾಯಣ, ಮಹಾಭಾರತ ಮತ್ತು ತ್ರಿವೇಣಿ ಅವರ ಕಾದಂಬರಿಗಳನ್ನು ಅತ್ಯಂತ ಆಸಕ್ತಿಯಿಂದ ಓದುತ್ತಿದ್ದಳು. ತ್ರಿವೇಣಿ ಅವರ ಶರಪಂಜರ, ಬೆಕ್ಕಿನ ಕಣ್ಣು, ಹೂವು ಹಣ್ಣು ಕಾದಂಬರಿಗಳು ನನ್ನ ಓದಿಗೆ ದಕ್ಕಿದ್ದು ನನ್ನ ಬಾಲ್ಯದ ದಿನಗಳಲ್ಲೇ. ಹೀಗೆ ಅಮ್ಮನ ಪುಸ್ತಕಗಳ ಓದಿನ ಒಡನಾಟದಿಂದ ನನ್ನ ಓದು ಸಹ ಒಂದು ಸದಭಿರುಚಿಯ ಹವ್ಯಾಸವಾಗಿ ರೂಪುಗೊಂಡಿತು. ನಂತರದ ದಿನಗಳಲ್ಲಿ ನಾಟಕಗಳು, ಕಥಾ ಸಂಕಲನಗಳು, ಕಾದಂಬರಿಗಳು, ಜೀವನ ಚರಿತ್ರೆಗಳು ಹೀಗೆ ಓದಿಗೆ ಹೇರಳ ಪುಸ್ತಕಗಳು ಲಭ್ಯವಾಗಿ ಓದು ಅತ್ಯಂತ ಖುಷಿ ಕೊಡುವ ಕ್ರಿಯೆಯಾಗಿ ನನ್ನೊಳಗೆ ಅಂತರ್ಗತಗೊಂಡಿತು. ಎಸ್ ಎಲ್ ಭೈರಪ್ಪ, ಅನಂತಮೂರ್ತಿ, ದೇವನೂರ ಮಹಾದೇವ, ಲಂಕೇಶ್, ತೇಜಸ್ವಿ, ಕುಂವೀ, ನಾಗತಿಹಳ್ಳಿ, ವೈದೇಹಿ, ಎಮ್ ಕೆ ಇಂದಿರಾ ಮೊದಲಾದ ಬರಹಗಾರರು ನನ್ನ ಅನುಭವದ ವ್ಯಾಪ್ತಿಗೆ ದಕ್ಕಿದ್ದು ಪುಸ್ತಕಗಳ ಓದಿನಿಂದಲೇ. ಜೊತೆಗೆ ಸಾಹಿತ್ಯದ ಓದನ್ನು ನಾನು ಯಾವತ್ತೂ ನವ್ಯ, ನವೋದಯ, ಎಡ, ಬಲ, ಬಂಡಾಯ ಎಂದು ವರ್ಗಿಕರಿಸದೆ ಓದಿದ್ದರ ಪರಿಣಾಮ ನನ್ನ ಓದಿನ ವ್ಯಾಪ್ತಿಯಲ್ಲಿ ಅನೇಕ ಬರಹಗಾರರ ಪುಸ್ತಕಗಳು ಸೇರ್ಪಡೆಯಾದವು. ಅದಕ್ಕೆಂದೇ ಅನಂತಮೂರ್ತಿ ಅವರ 'ಸಂಸ್ಕಾರ' ದಷ್ಟೇ ಭೈರಪ್ಪನವರ 'ವಂಶ ವೃಕ್ಷ' ಕೂಡ ನನಗೆ ಇಷ್ಟವಾದ ಕೃತಿ. ಅನೇಕ ಪುಸ್ತಕಗಳನ್ನು ಅತ್ಯಂತ ಆಸಕ್ತಿಯಿಂದ ಒಂದೇ ಗುಕ್ಕಿಗೆ ಓದಿಕೊಂಡು ಹೋಗಿದ್ದೇನೆ. ಇನ್ನು ಕೆಲವು ಸಂದರ್ಭಗಳಲ್ಲಿ ಆಸಕ್ತಿಯನ್ನೇ ಕೆರಳಿಸದ ಪುಸ್ತಕಗಳ ಓದನ್ನು ಅರ್ಧಕ್ಕೆ ಬಿಟ್ಟ ಉದಾಹರಣೆಯೂ ಉಂಟು. ಓದಲೇ ಬೇಕೆನ್ನುವ ಹಟದಿಂದ ನಾನು ಓದಿಗೆ ಕುಳಿತುಕೊಳ್ಳುವುದಿಲ್ಲ. ಬದಲಾಗಿ ಓದು ನನಗೆ ಅತ್ಯಂತ ಖುಷಿ ಕೊಡುವ ಅನುಭವ ಎನ್ನುವ ಮಾನಸಿಕ ಸಿದ್ಧತೆ ನನ್ನ ಪ್ರತಿ ಓದಿನ ಸಂದರ್ಭದಲ್ಲೂ ನನ್ನಲ್ಲಿ ಜಾಗೃತವಾಗಿರುತ್ತದೆ.


               ಪುಸ್ತಕಗಳ ಓದಿನ ಜೊತೆಗೆ ಸಿನಿಮಾ ಕೂಡ ನನ್ನನ್ನು ಪ್ರಭಾವಿಸಿದ ಮಾಧ್ಯಮಗಳಲ್ಲೊಂದು. ಸಿನಿಮಾ ವೀಕ್ಷಣೆ ಸಹ ನನಗೆ ಅಮ್ಮನಿಂದಲೇ ಬಂದ ಬಳುವಳಿ. ಕಪ್ಪು ಬಿಳುಪಿನ ಕಾಲದ ಸಿನಿಮಾಗಳನ್ನು ಅತ್ಯಂತ ಆಸಕ್ತಿಯಿಂದ ದೂರದರ್ಶನದ ಪರದೆಯ ಮೇಲೆ ವೀಕ್ಷಿಸುತ್ತಿದ್ದ ಅಮ್ಮನೊಂದಿಗೆ ಒಂದೆರಡು ಬಣ್ಣದ ಸಿನಿಮಾಗಳನ್ನು ದೊಡ್ಡ ಪರದೆಯ ಮೇಲೆ ನೋಡಿದ್ದು ನನ್ನ  ನೆನಪುಗಳಲ್ಲಿ ಇನ್ನು ಹಸಿರಾಗಿದೆ. ನಾನು ಶಾಲೆಗ ಹೋಗುತ್ತಿದ್ದ ದಿನಗಳಿಂದಲೂ ಸಿನಿಮಾ ಥೇಟರಿನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಅಶೋಕ ತಾನು ನೋಡಿದ ಸಿನಿಮಾಗಳನ್ನು ವರ್ಣಿಸಿ ಕಥೆ ಹೇಳುತ್ತಿದ್ದ ಸಂದರ್ಭ ನನ್ನಲ್ಲಿ ಈ ಸಿನಿಮಾದ ಕುರಿತು ಬೆರಗು ಮತ್ತು ಕುತೂಹಲ ಮೂಡುತ್ತಿತ್ತು. ನನ್ನ ಕುತೂಹಲವನ್ನು ಗುರುತಿಸಿದ ಅಣ್ಣ ಸಿನಿಮಾಗಳ ಟಿಕೇಟ್ ನ್ನು ಮನೆಗೆ ತಂದು ಕೊಟ್ಟು ನನ್ನನ್ನು ಸಿನಿಮಾ ನೋಡುವಂತೆ ಪ್ರೇರೆಪಿಸದೆ ಹೋಗಿದ್ದರೆ ನನ್ನಲ್ಲಿ ಬರವಣಿಗೆಯಂಥ ಸೃಜನಶೀಲ ಪ್ರಕ್ರಿಯೆ ಮೂಡಲು ಸಾಧ್ಯವಾಗುತ್ತಿರಲಿಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಎನ್ನುವ ತಾರತಮ್ಯವಿಲ್ಲದೆ ಕಲಾತ್ಮಕ ಕಮರ್ಷಿಯಲ್ ಎನ್ನುವ ವ್ಯತ್ಯಾಸ ತೋರುಗೊಡದೆ ನೂರಾರು ಸಿನಿಮಾಗಳನ್ನು ನಾನು ನೋಡಿದ್ದೇನೆ. ಸಿನಿಮಾವೊಂದನ್ನು ನೂರಾರು ಜನರ ಜನಜಂಗುಳಿಯ ನಡುವೆ ಕುಳಿತು ನೋಡುವುದಕ್ಕಿಂತ ಕೆಲವೇ ಕೆಲವು ಸದಭಿರುಚಿಯ ಪ್ರೇಕ್ಷಕರ ನಡುವೆ ಕುಳಿತು ನೋಡುವುದು ನನಗೆ ಅತ್ಯಂತ ಇಷ್ಟದ ಸಂಗತಿ. ಅದಕ್ಕೆಂದೇ ನನ್ನ ವಿದ್ಯಾರ್ಥಿ ಜೀವನದ ದಿನಗಳಲ್ಲಿ ನಾನು ಸಿನಿಮಾಗಳ ವೀಕ್ಷಣೆಗೆ ಅತ್ಯಂತ ಪ್ರಶಾಂತ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಈ ಕಾರಣದಿಂದಲೇ ಸಿನಿಮಾ ಮಾಧ್ಯಮ ನನ್ನನ್ನು ಹೆಚ್ಚು  ಪ್ರಭಾವಿಸಿತು. ಜೊತೆಗೆ ನಾಯಕನ ಸಿನಿಮಾ ನೋಡುವುದಕ್ಕಿಂತ ನಿರ್ದೇಶಕನ ಸಿನಿಮಾ ನೋಡುವುದು ನನ್ನ ಆಯ್ಕೆಗಳಲ್ಲೊಂದು. ಸಿನಿಮಾ ಎಂದಾಕ್ಷಣ ನನಗೆ ಪುಟ್ಟಣ್ಣ ಕಣಗಾಲ್, ರಾಜೇಂದ್ರ ಸಿಂಗ್, ದಿನೇಶ್ ಬಾಬು, ಹೃಷಿಕೇಶ್ ಮುಖರ್ಜಿ, ಗಿರೀಶ್ ಕಾಸರವಳ್ಳಿ, ಶಂಕರ್, ಚಂದ್ರಮೌಳಿಯಂಥ ನಿರ್ದೇಶಕರು ಮೊದಲು ನೆನಪಾಗುತ್ತಾರೆ ನಂತರ ಕಲಾವಿದರು. ನಮ್ಮ ಕನ್ನಡದ ರಾಜಕುಮಾರ ಅವರಿಗಿಂತಲೂ ಕಲಾವಿದನಾಗಿ ನನಗೆ ಅನಂತನಾಗ್ ಇಷ್ಟವಾದರೆ ರಜನಿಕಾಂತ್ ಗಿಂತಲೂ ಕಮಲ್ ಹಾಸನ್ ಮೆಚ್ಚಿನ ಕಲಾವಿದ. ಶೋಲೆ, ಶಂಕರ್ ಗುರು, ರೊಬೋಟ್ ಸಿನಿಮಾಗಳು  ಹಣ ಗಳಿಕೆಯಿಂದ ಜನಪ್ರಿಯ ಸಿನಿಮಾಗಳಾಗಿರಬಹುದು. ಆದರೆ ಬ್ಲ್ಯಾಕ್, ಆಕ್ಸಿಡೆಂಟ್ ನಂತಹ ಹಣ ಗಳಿಕೆಯಲ್ಲಿ ಸೋತ ಸಿನಿಮಾಗಳು ತಮ್ಮ ಕಥಾ ಹಂದರ ಮತ್ತು ಕಲಾವಿದರ ಅಭಿನಯದಿಂದ ನನ್ನನ್ನು ಹೆಚ್ಚು ಹೆಚ್ಚು ಚಿಂತನೆಗೆ ಹಚ್ಚಿವೆ. ಸಿನಿಮಾ ಯಾವತ್ತೂ ಹಾಡು, ಹೊಡೆದಾಟ, ವಿದೇಶಿ ಚಿತ್ರೀಕರಣದಿಂದ ನನ್ನನ್ನು ಆಕರ್ಷಿಸಲಾರದು ಹಾಗೂ ಅದು ಸಮಯ ಕಳೆಯಲೆಂದು ಕುಳಿತು ನೋಡುವ ಮನೋರಂಜನಾ ಮಾಧ್ಯಮವೂ ಅಲ್ಲ. ಸಿನಿಮಾ ನಮ್ಮನ್ನು ಒಂದಿಷ್ಟು ಚಿಂತಿಸುವಂತೆ, ವಿವೇಚಿಸುವಂತೆ ಮಾಡುವ ಮತ್ತು ನಮ್ಮೊಳಗಿನ ಸಂವೇದನೆ  ಮತ್ತೆ ಮತ್ತೆ ಮರುಹುಟ್ಟು ಪಡೆಯುವಂತೆ ಪ್ರೇರೇಪಿಸುವ ಅತ್ಯಂತ ಪರಿಣಾಮಕಾರಿಯಾದ ದೃಶ್ಯ ಮಾಧ್ಯಮ. ಇಂಥ ಸೃಜನಶೀಲ ಮಾಧ್ಯಮವೊಂದು ಅಪಾತ್ರರ ಕೈಗೆ ಸಿಕ್ಕು ವಿಕಾರ ಮತ್ತು ವಿರೂಪಗೊಳ್ಳುತ್ತಿರುವಾಗ ನಾನು ಆತಂಕ, ತಲ್ಲಣ ಮತ್ತು ವೇದನೆಯಿಂದ ನರಳಿದ್ದೇನೆ.


               ಪುಸ್ತಕಗಳ ಓದು ಮತ್ತು ಸಿನಿಮಾಗಳ ವೀಕ್ಷಣೆ ನನ್ನಲ್ಲಿ ಬರವಣಿಗೆಯಂಥ ಸೃಜನಶೀಲತೆಯೊಂದು ಹುಟ್ಟು ಪಡೆಯಲು ಕಾರಣವಾದ ಬಹುಮುಖ್ಯವಾದ ಎರಡು ಸಂಗತಿಗಳು ಎನ್ನುವ ನಂಬಿಕೆ ನನ್ನದು. ಪುಸ್ತಕವೊಂದನ್ನು ಓದಿದಾಗ ಮತ್ತು ಸಿನಿಮಾವೊಂದನ್ನು ನೋಡಿದಾಗ ಮನಸ್ಸಿನ ಭಾವಕೋಶದಲ್ಲಿ ಹರಳುಗಟ್ಟುವ ವಿಚಾರಗಳನ್ನು ಅಕ್ಷರ ರೂಪಾಕ್ಕಿಳಿಸಲು ನಾನು ಹಂಬಲಿಸುತ್ತೇನೆ. ಈ ಹಂಬಲದೊಂದಿಗೆ ಆತಂಕ ಮತ್ತು ತಲ್ಲಣಗಳೂ ಜೊತೆಗೂಡಿ ಬರೆಯಲು ನನ್ನನ್ನು ಪ್ರೇರೇಪಿಸುತ್ತವೆ. ಸಾಧನೆ, ಪೂರ್ಣ ಸತ್ಯ, ಅನಾವರಣ, ಮನದ ಮಾತು, ಮಹಾಚೇತನ ಮತ್ತು ಅನ್ವೇಷಣೆ ಹೀಗೆ ಇದುವರೆಗೆ ನಾನು ಬರೆದ ಪುಸ್ತಕಗಳ ಸಂಖ್ಯೆ ಆರು. ಬರವಣಿಗೆ ಅದು ನನ್ನ ಖಾಸಗಿ ವಿಷಯ ಮತ್ತು ವೈಯಕ್ತಿಕವಾಗಿ ಖುಷಿ ಕೊಡುವ ಸಂಗತಿ ಎನ್ನುವ ಪ್ರಜ್ಞೆ ನನ್ನಲ್ಲಿ ಸದಾಕಾಲ ಜಾಗೃತವಾಗಿದೆ. ನಾನು ಬರೆದದ್ದನ್ನು ಬೇರೆಯವರು ಓದಬೇಕೆನ್ನುವ ಹಠಮಾರಿತನದ ಧೋರಣೆಯಾಗಲಿ ಮತ್ತು ಸಾಹಿತ್ಯ ಲೋಕದ ವಿಮರ್ಶಕರು ಮೆಚ್ಚಬೇಕೆನ್ನುವ ಆಸಕ್ತಿಯಾಗಲಿ ನನಗಿಲ್ಲ. ನನ್ನ ಬರವಣಿಗೆ ಸಮಾಜ ಪರಿವರ್ತನೆಗೆ ಎನ್ನುವ ಒಣ ಆದರ್ಶವಂತೂ ಮೊದಲೇ ನನ್ನಲ್ಲಿಲ್ಲ. ಬರವಣಿಗೆಯಿಂದಲೇ ಬದುಕನ್ನು ರೂಪಿಸಿಕೊಳ್ಳುವಷ್ಟು ದೊಡ್ಡ ಬರಹಗಾರನೂ ನಾನಲ್ಲ. ಈ ಎಲ್ಲವೂಗಳಿಗಿಂತ ಭಾಷೆಯೊಂದು ಅಪಾಯವನ್ನು ಎದುರಿಸುತ್ತಿರುವ ಸಂದರ್ಭ ಓದು  ಮತ್ತು ಬರವಣಿಗೆಯ ಮೂಲಕ ಕನ್ನಡವನ್ನು ಹೃದಯದ ಭಾಷೆಯಾಗಿ ಮಾಡಿಕೊಂಡಿರುವ ತೃಪ್ತಿ ಮತ್ತು ಖುಷಿ ನನಗಿದೆ.

ಕೊನೆಯ ಮಾತು 



               ಓದು ಮತ್ತು ಸಿನಿಮಾ ವೀಕ್ಷಣೆಯ ಜೊತೆಗೆ ನನ್ನಲ್ಲಿ ಬರವಣಿಗೆಯಂಥ ಸೃಜನಶೀಲತೆಯೊಂದು ಅಭಿವ್ಯಕ್ತಗೊಳ್ಳಲು ಕಾರಣವಾದ ಅನೇಕ ಸಂಗತಿಗಳಿವೆ. ನನಗೆ ಗಾಂಧಿಯಷ್ಟೇ ದಿನಬೆಳಗಾದರೆ ಎದುರಾಗುವ ಪೇಪರ್ ಮಾರುವ ಹುಡುಗ  ಕೂಡ ಬರೆಯಲು ಪ್ರೇರಣೆಯಾಗಬಲ್ಲ. ಕಲಾಮ್ ರಷ್ಟೇ ಬೀದಿ ಬದಿಯಲ್ಲಿ ಮಗನ ಭವಿಷ್ಯದ ಕನಸು ಕಾಣುತ್ತ ಚಪ್ಪಲಿ ಹೊಲಿಯುತ್ತ ಕುಳಿತ ತಂದೆಯೊಬ್ಬ ಸ್ಪೂರ್ತಿಯಾಗಬಲ್ಲ. ಭೈರಪ್ಪನವರ  ಕಾದಂಬರಿಗಳಷ್ಟೇ ತಳ್ಳು ಗಾಡಿಯಲ್ಲಿ ತರಕಾರಿ ಮಾರುವ ವೃದ್ಧ ನನ್ನೊಳಗೆ ಸಂವೇದನೆ ಹುಟ್ಟಿಸಬಲ್ಲ. ಜಿಎಸ್ಸೆಸ್ ಕಾವ್ಯದ ಓದಿನಷ್ಟೇ ಚಿಂದಿ ಆಯುವ ಹೆಂಗಸು ಕೂಡ ನನ್ನನ್ನು ಸೂಕ್ಷ್ಮಜ್ಞನನ್ನಾಗಿಸಬಲ್ಲಳು. ಹೀಗೆ ಬದುಕಿನ ಪ್ರತಿ ಘಳಿಗೆ ಎದುರಾಗಿ ನನ್ನೊಳಗೆ ಸೃಜನಶೀಲತೆಯ ಸೆಲೆ ಜಿನುಗಲು ಕಾರಣರಾದವರೆಲ್ಲರಿಗೂ ನಾನು ಋಣಿಯಾಗಿದ್ದೇನೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


    

Tuesday, December 29, 2015

ಅನ್ವೇಷಣೆ: ಪುಸ್ತಕ ಬಿಡುಗಡೆ


  




ದಿನಾಂಕ ೨೭. ೧೨. ೨೦೧೫ ರಂದು ನನ್ನ ಆರನೇ ಕೃತಿ 'ಅನ್ವೇಷಣೆ' ಬಿಡುಗಡೆಯಾಯಿತು. ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಪ್ರಕಟಿಸುತ್ತಿರುವ ನನ್ನ ನಾಲ್ಕನೇ ಕೃತಿಯಿದು. ಇನ್ನುಳಿದ ಎರಡು ಪುಸ್ತಕಗಳು ಬಾಗಲಕೋಟೆಯಲ್ಲಿ ಪ್ರಕಟವಾಗಿವೆ. ಇನ್ನು ಅನ್ವೇಷಣೆ ಕೃತಿಯ ಕುರಿತು ಹೇಳುವುದಾದರೆ ಇಲ್ಲಿನ ಎಲ್ಲ ಲೇಖನಗಳು ನಾನು ನನ್ನ ಬ್ಲಾಗಿಗೆ ಬರೆದವುಗಳು. ಈ ಬ್ಲಾಗಿಗೆ ಬರೆಯುವಾಗಲೆಲ್ಲ ನಾನು ಪತ್ರಿಕೆಯೊಂದಕ್ಕೆ ಬರೆಯುವ ಬದ್ಧತೆಯಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಬ್ಲಾಗ್ ಬರವಣಿಗೆಯನ್ನು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲಿಸುವ ಕಾಳಜಿ ನನ್ನದು. 

ಇನ್ನು ನನ್ನ ಪುಸ್ತಕಗಳ ಪ್ರಕಟಣೆಯ ವಿಷಯವಾಗಿ ನಾನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕಾದ ವ್ಯಕ್ತಿತ್ವ ಶ್ರೀ ಬಸವರಾಜ ಕೊನೇಕ ಅವರದು. ಕಲಬುರಗಿಯಲ್ಲಿ ಪ್ರಕಾಶನ ಸಂಸ್ಥೆ ಮತ್ತು ಬೃಹತ್ ಪುಸ್ತಕ ಮಳಿಗೆಯನ್ನು ಸ್ಥಾಪಿಸಿ ಅವರು ಮಾಡುತ್ತಿರುವ ಕನ್ನಡದ ಈ ಕೆಲಸ ನಿಜಕ್ಕೂ ಅಭಿನಂದನಾರ್ಹ. ಅವರ ಈ ಕನ್ನಡದ ಸೇವಾ ಕೈಂಕರ್ಯ ನಿರಂತರವಾಗಿ ಮುಂದುವರೆಯಲಿ. 

ನನ್ನ ಬರವಣಿಗೆಯ ಬದುಕಿನಲ್ಲಿ ನನ್ನ ಜೊತೆಗೆ ನಿಂತು ಸಹಕರಿಸುತ್ತಿರುವವರಿಗೆಲ್ಲ ನಾನು ಈ ಸಂದರ್ಭ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. 








-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Sunday, November 1, 2015

ಕನ್ನಡ ಭಾಷೆಯ ಆತಂಕಗಳು



        ಕನ್ನಡ ಭಾಷೆ ತುಂಬ ಆತಂಕದಲ್ಲಿರುವ ದಿನಗಳಿವು. ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ಬಹುದೊಡ್ಡ ರಾಜ್ಯದ ನಾಡ ಭಾಷೆಯಾಗಿರುವ ಕನ್ನಡ ಭಾಷೆ ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾಷೆಯ ಮಟ್ಟಿಗೆ ಬೆಳವಣಿಗೆ ಎನ್ನುವುದು ಅದು ನಿರಂತರವಾಗಿ ಪ್ರವಹಿಸುತ್ತಿರಬೇಕು. ಏಕೆಂದರೆ ಭಾಷೆ ಕೇವಲ ಸಂವಹನದ ಮಾಧ್ಯಮ ಮಾತ್ರವಲ್ಲ. ಅದು ಒಂದು ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಅತ್ಯಂತ ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದ ಭಾಷೆಗೂ ಮತ್ತು ನೆಲದ ಸಂಸ್ಕೃತಿಗೂ ನಿಕಟವಾದ ಸಂಬಂಧವಿದೆ. ಇಂಥದ್ದೊಂದು ಸಂಬಂಧವಿಲ್ಲದೆ ಹೋದಲ್ಲಿ ಭಾಷೆ ಕೇವಲ ಮಾತನಾಡುವ ಸಂಕೇತ ಮಾತ್ರವಾಗಿ ಉಳಿದು ಜನಮಾನಸದಿಂದ ಬಹುಬೇಗ ಮರೆಯಾಗಿ ಹೋಗುತ್ತದೆ. ಇದಕ್ಕೆ ಉದಾಹರಣೆಯಾಗಿ ಲಿಪಿಯಿಲ್ಲದ ಭಾಷೆಗಳಾದ ಲಂಬಾಣಿ, ತುಳು, ಕೊಡವ ಇತ್ಯಾದಿ ಭಾಷೆಗಳನ್ನು ಉದಾಹರಣೆಯಾಗಿ ಹೇಳಬಹುದು. ಭಾಷೆಯೊಂದು ಗಟ್ಟಿಯಾಗಿ ತಳವೂರಿ ಬೆಳೆಯಲು ಆ ಭಾಷೆಯನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಈ ದೃಷ್ಟಿಯಿಂದ ಕನ್ನಡ ಭಾಷೆಯನ್ನು ಈ ನಾಡಿನಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಅದಕ್ಕೆಂದೇ ಕನ್ನಡ ಭಾಷೆಯಲ್ಲಿ ಸಾಹಿತ್ಯ ಮತ್ತಿತರ ಸೃಜನಶೀಲತೆಯ ಫಸಲು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಯಿತು. ಅಮೋಘವರ್ಷ ನೃಪತುಂಗನ ಕಾಲದಿಂದ ಕುವೆಂಪು, ಕಾರಂತ, ಬೇಂದ್ರೆ ಮತ್ತು ನವೋದಯದ ಅಡಿಗರು, ಅನಂತಮೂರ್ತಿ, ಲಂಕೇಶ್, ಭೈರಪ್ಪನವರವರೆಗೆ ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಕೃತಿಗಳು ರಚನೆಯಾದವು. ಹಳೆಗನ್ನಡ, ಹೊಸಗನ್ನಡ, ನವ್ಯ, ನವೋದಯ, ಬಂಡಾಯ ಹೀಗೆ ವಿವಿಧ ಕಾಲಘಟ್ಟದಲ್ಲಿ ಕನ್ನಡ ಭಾಷೆ ಅನೇಕ ಅಗ್ನಿದಿವ್ಯಗಳನ್ನು ಹಾದು ತನ್ನತನ ಮತ್ತು ಸಮೃದ್ಧತೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಕಳೆದ ಮೂರು ದಶಕಗಳಿಂದ  ಕನ್ನಡ ಭಾಷೆಗೆ ಎದುರಾದ ಸಮಸ್ಯೆಗಳು ಮಾತ್ರ ಈ ನೆಲದ ಭಾಷೆಯನ್ನು ಜರ್ಜರಿತಗೊಳಿಸಿವೆ. ಪರಭಾಷೆಗಳ ಪೈಪೋಟಿ, ಶಿಕ್ಷಣದ ಮಾಧ್ಯಮವಾಗಿ ಬೇರೂರಿರುವ ಇಂಗ್ಲಿಷ್ ಭಾಷೆ, ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವ ಓದುಗರ ಕೊರತೆ, ರಾಜಕಾರಣಿಗಳ ಸ್ವಹಿತಾಸಕ್ತಿ ಈ ಎಲ್ಲ ಸಮಸ್ಯೆಗಳ ನಡುವೆ ಕನ್ನಡ ಭಾಷೆ ತನ್ನ ನೆಲದಲ್ಲೇ ಅಪರಿಚಿತವಾಗುತ್ತಿದೆ.

ಕನ್ನಡ ಮಾಧ್ಯಮದ ಅವನತಿ 


          ಇವತ್ತು ರಾಜ್ಯದಲ್ಲಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿವೆ. ಜಾಗತೀಕರಣದ ಪರಿಣಾಮ ಇಂಗ್ಲಿಷ್ ಭಾಷೆ ಮಹತ್ವ ಪಡೆದಿರುವುದರಿಂದ ಅದನ್ನು ಭಾಷೆ ಮಾತ್ರವಾಗಿ ಕಲಿಯದೆ ಅದನ್ನೇ ಶಿಕ್ಷಣದ ಮಾಧ್ಯಮವಾಗಿ ಮಾಡಿಕೊಳ್ಳಲಾಗಿದೆ. ಹೀಗೆ ಇಂಗ್ಲಿಷ್ ಭಾಷೆ ಶಿಕ್ಷಣದ ಮಾಧ್ಯಮವಾಗಿ ಬಳಕೆಯಾಗುತ್ತಿರುವ ಈ ದಿನಗಳಲ್ಲಿ ಈ ನೆಲದ ಭಾಷೆ ಕನ್ನಡವನ್ನು ಶಾಲೆಗಳಲ್ಲಿ ಭಾಷೆಯಾಗಿ ಕಲಿಸುವ ದುರಂತ ಎದುರಾಗಿದೆ. ವಿಪರ್ಯಾಸ ನೋಡಿ ಮಾತನಾಡುವ ಭಾಷೆಯಾಗಿ ಕನ್ನಡ ನಮಗೆಲ್ಲ ಚಿರಪರಿಚಿತ ಹೀಗಿದ್ದೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವ ದಿನಗಳು ಬಂದಿವೆ. ಯಾವ ಭಾಷೆಯನ್ನು ಶಿಕ್ಷಣದ ಮಾಧ್ಯಮವಾಗಿ ಬಳಸಿಕೊಳ್ಳಬೇಕೋ ಅದನ್ನು ಕೇವಲ ಭಾಷೆಯಾಗಿ ನಮ್ಮ ಮಕ್ಕಳು ಕಲಿಯುತ್ತಿರುವರು. ಭಾಷೆಯಾಗಿ ಕಲಿಯುವ ಅಗತ್ಯವಿರುವ ಇಂಗ್ಲಿಷ್ ಇಂದು ಶಿಕ್ಷಣದ ಮಾಧ್ಯಮವಾಗಿ ಬಹುಮುಖ್ಯ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮಕ್ಕಳು ತಮ್ಮ  ಮಾತ್ರಭಾಷೆ ಮೂಲಕ ವಿವಿಧ ವಿಷಯಗಳನ್ನು ಸುಲಭವಾಗಿ ಕಲಿಯಬಲ್ಲರು ಎನ್ನುವ ವೈಜ್ಞಾನಿಕ ಸತ್ಯವನ್ನು ಕಡೆಗಣಿಸಿ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಮಣೆ ಹಾಕಲಾಗುತ್ತಿದೆ. ಪರಿಣಾಮವಾಗಿ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಉದ್ಯಮದ ರೂಪ ಪಡೆದು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ತಮ್ಮ ಮಕ್ಕಳನ್ನು ಜಾಗತೀಕರಣಕ್ಕೆ ಮುಖಾಮುಖಿಯಾಗಿಸುವ ಧಾವಂತದಲ್ಲಿ ಉಳ್ಳವರು ಮತ್ತು ಉಳ್ಳದವರು ಎಲ್ಲರೂ ಕೂಡಿಯೇ ಇಂಗ್ಲಿಷ್ ಶಾಲೆಗಳ ಪ್ರವೇಶಕ್ಕೆ ಮುಗಿಬಿಳುತ್ತಿರುವರು. ಪಾಲಕರ ಇಂಗಿತವನ್ನು ತಮ್ಮ ಸ್ವಾರ್ಥ ಮತ್ತು ಧನದಾಹಕ್ಕೆ ಬಳಸಿಕೊಳ್ಳುತ್ತಿರುವ ಖಾಸಗಿ ಇಂಗ್ಲಿಷ್ ಶಾಲೆಗಳ ಆಡಳಿತ ಮಂಡಳಿಗಳು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಇನ್ನೊಂದೆಡೆ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿ ಹೋಗುವ ದುಸ್ಥಿತಿಗೆ ಬಂದು ನಿಂತಿವೆ. ಯಾವಾಗ ಇಂಗ್ಲಿಷ್ ಭಾಷೆ ಶಿಕ್ಷಣದ ಮಾಧ್ಯಮವಾಗಿ ತನ್ನ ಪಾರುಪತ್ಯವನ್ನು ಮೆರೆಯತೊಡಗಿತೋ ಆಗ ನಿಜವಾಗಿ ಸಂಕಷ್ಟದಲ್ಲಿ ಸಿಲುಕಿದ್ದು ಕನ್ನಡ ಭಾಷೆ.

ಸಾಹಿತ್ಯ ವಲಯದ ಗುಂಪುಗಾರಿಕೆ 


         ಕನ್ನಡದ ವೈಚಾರಿಕ ವಲಯ ವಿಶೇಷವಾಗಿ ಸಾಹಿತ್ಯ ವಲಯ ಇಂದು ವಿವಿಧ ಗುಂಪುಗಳಾಗಿ ಒಡೆದು ಹೋಳಾಗಿದೆ. ಭಿನ್ನಾಭಿಪ್ರಾಯ ಅದು ಪ್ರಜಾಪ್ರಭುತ್ವದ ಜೀವಂತ ಲಕ್ಷಣ ನಿಜ ಆದರೆ ನಾವು ತಿಳಿದುಕೊಂಡಂತೆ ಡೆಮಾಕ್ರೆಟಿಕ್ ವಾತಾವರಣ ಇವತ್ತಿನ ಕನ್ನಡ ಸಾಹಿತ್ಯ ವಲಯದಲ್ಲಿಲ್ಲ. ಅಸಹನೆ, ವರ್ಗತಾರತಮ್ಯ, ಅಸೂಯೆ, ಗುಂಪುಗಾರಿಕೆ, ರಾಜಕಾರಣ, ಅಧಿಕಾರದ ಲಾಲಸೆ, ಪ್ರಶಸ್ತಿ ಪುರಸ್ಕಾರಗಳ ವಾಂಛೆ ಇವತ್ತಿನ ಸಾಹಿತ್ಯವಲಯದ ವಾತಾವರಣವನ್ನು ಅಸಹನೀಯಗೊಳಿಸಿವೆ. ಸಾಹಿತ್ಯ ವಲಯ ಎಡಪಂಥಿಯ ಮತ್ತು ಬಲಪಂಥಿಯ ಎಂದು ಎರಡು ವಿಭಿನ್ನ ವರ್ಗಗಳಲ್ಲಿ ಗುರುತಿಸಿಕೊಂಡಿದೆ. ಒಬ್ಬ ಬರಹಗಾರ ಈ ಯಾವುದಾದರು ಒಂದು ಗುಂಪಿನೊಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ಆತ ತನ್ನದೇ ಆದ ಐಡೆಂಟಿಟಿ ಹೊಂದಲು ಸಾಧ್ಯ ಎನ್ನುವಂಥ ವಾತಾವರಣ ಸಾಹಿತ್ಯ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಪ್ರತಿ ಗುಂಪಿಗೂ ಬರೆಯಲು ಅವರದೇ ಆದ ಅಜೆಂಡಾಗಳಿವೆ. ಅಂಥದ್ದೊಂದು ಸ್ಥಾಪಿತ ಅಜೆಂಡಾದ ಚೌಕಟ್ಟಿನಲ್ಲೇ ಬರೆಯಬೇಕಾದ ಅನಿವಾರ್ಯತೆ ಲೇಖಕನದು. ಒಂದು ಗುಂಪಿನ ಬರಹಗಾರರ ವಿರುದ್ಧ ಇನ್ನೊಂದು ಗುಂಪಿನವರು ಇಲ್ಲಿ ಕತ್ತಿ ಮಸೆಯುತ್ತಾರೆ. ಅದಕ್ಕೆಂದೇ ಭೈರಪ್ಪನವರ ಆವರಣದ ವಿರುದ್ಧ ಇಲ್ಲಿ ಅನಾವರಣ  ಕೃತಿ ಪ್ರಕಟವಾಗುತ್ತದೆ. ಸಂಸ್ಕಾರದ ಎದುರು ವಂಶವೃಕ್ಷವನ್ನು ಹತಾರವಾಗಿಸುತ್ತಾರೆ. ಅಕಾಡೆಮಿಗಳ ಅಧ್ಯಕ್ಷರಾಗುವ ಸೃಜನಶೀಲರು ಪ್ರಶಸ್ತಿ ಪುರಸ್ಕಾರಗಳಿಗಾಗಿ ತಮ್ಮದೇ ಗುಂಪಿನ ಲೇಖಕರಿಗೆ ಮಣೆಹಾಕುತ್ತಾರೆ. ಗುಂಪುಗಾರಿಕೆ, ದ್ವೇಷಾಸೂಯೆಗಳ ಪರಿಣಾಮ ಇಲ್ಲಿ ಭಾಷೆಯ ಕುರಿತಾದ ಕಾಳಜಿ ಮೂಲೆಗುಂಪಾಗುತ್ತದೆ.

ಭಾಷಾ ಚಳವಳಿ 


           ಕನ್ನಡ ಭಾಷೆಯ ಉಳಿವಿಗಾಗಿ  ಗೋಕಾಕ ಚಳವಳಿಯ ನಂತರ ಮತ್ತೊಂದು ಅಂಥ ಮಹತ್ವದ ಚಳವಳಿ ಕನ್ನಡದ ನೆಲದಲ್ಲಿ ಕಾಣಿಸಿಕೊಂಡಿಲ್ಲ. ಗೋಕಾಕ ಚಳವಳಿ ಕಾಣಿಸಿಕೊಂಡ ೧೯೮೦ ರ ದಶಕದ ಅಂದಿನ ಕನ್ನಡ ಭಾಷೆಯ ಸ್ಥಿತಿಗೂ ಮತ್ತು ಇವತ್ತು ಭಾಷೆ ಎದುರಿಸುತ್ತಿರುವ ಸಮಸ್ಯೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ೧೯೮೦ ರ ದಶಕದಲ್ಲಿ ಆಗಿನ್ನೂ ಜಾಗತೀಕರಣ ಈಗಿನಷ್ಟು ತನ್ನ ಪ್ರಾಬಲ್ಯವನ್ನು ಮೆರೆದಿರಲಿಲ್ಲ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅದೇ ಆಗ ನೆಲೆಯೂರಲು ಪ್ರಯತ್ನಿಸುತ್ತಿತ್ತು. ಅಂಥ ದಿನಗಳಲ್ಲಿ ಕನ್ನಡದ ಸಾಹಿತ್ಯಿಕ ವಲಯ ಹಾಗೂ ಸಿನಿಮಾ ಕಲಾವಿದರು ಒಟ್ಟಾಗಿ ಪ್ರತಿಭಟನೆಗಿಳಿದು ಬಹುದೊಡ್ಡ ಚಳವಳಿಗೆ ಕಾರಣರಾದರು. ಅಂದಿನ ಸರ್ಕಾರ ಸಹ ಹೋರಾಟಗಾರರ ಪ್ರತಿಭಟನೆಗೆ ಸ್ಪಂದಿಸಿ ಅನೇಕ ಭರವಸೆಗಳನ್ನು ನೀಡಿತು. ಗೋಕಾಕ ಚಳವಳಿಯ ನಂತರದ ಈ ಮೂರು ದಶಕಗಳಲ್ಲಿ ಕನ್ನಡ ಭಾಷೆ ಬಲಾಢ್ಯವಾಗಿ ಬೆಳೆಯುವ ಯಾವ ಅವಕಾಶಗಳಿಲ್ಲದೆ ನಿರ್ಲಕ್ಷಕ್ಕೆ ಒಳಗಾಗಿದೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವ ಈ ಘಳಿಗೆ ಕನ್ನಡ ಶಾಲೆಗಳ ಸಂಖ್ಯೆ ಕ್ಷಿಣಿಸುತ್ತಿದೆ. ಗಡಿ ಪ್ರದೇಶಗಳಲ್ಲಿ ಪರಭಾಷೆಗಳ ಪ್ರಾಬಲ್ಯದೆದುರು ಗಡಿನಾಡ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದೇ ಬಹುದೊಡ್ಡ ಸಾಹಸವಾಗಿದೆ. ಗೋವಾ ರಾಜ್ಯದಲ್ಲಿರುವ ಅನಿವಾಸಿ ಕನ್ನಡಿಗರ ಬದುಕು ತನ್ನ ನೆಲೆಯನ್ನು ಕಳೆದುಕೊಂಡಿದೆ. ಸೃಜನಶೀಲ ಮಾಧ್ಯಮವಾದ ಸಿನಿಮಾ ಇಂದು ಭಾಷೆಯನ್ನು ಅತಿ ಕೆಟ್ಟದಾಗಿ ಬಳಸಿಕೊಳ್ಳುತ್ತಿದೆ. ಈ ಸಮಯದಲ್ಲಿ ಒಂದಾಗಿ ಪ್ರತಿಭಟಿಸಬೇಕಾದ ಮತ್ತು ಚಳವಳಿಯನ್ನು ರೂಪಿಸಬೇಕಾದ ನಮ್ಮ ಸಾಹಿತ್ಯವಲಯ ತನ್ನ ಗುಂಪುಗಾರಿಕೆಯಿಂದ ಚಳವಳಿಗಳಿಗೆ ವಿಮುಖವಾಗುತ್ತಿದೆ.

ಜಾತ್ರೆಯಾಗುತ್ತಿರುವ ಸಮ್ಮೇಳನಗಳು 


         ಕನ್ನಡ ಸಾಹಿತ್ಯ ಸಮ್ಮೇಳನಗಳು ಭಾಷೆಯ ಶ್ರೇಷ್ಠತೆ ಮತ್ತು ಅದು ಎದುರಿಸುತ್ತಿರುವ ಸಮಸ್ಯೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜನರಿಗೆ ಒಯ್ದು ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಮ್ಮೇಳನಗಳ ಮೇಲೆ ಮಹತ್ವದ ಜವಾಬ್ದಾರಿಯಿದೆ. ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು ಮತ್ತು ಅದಕ್ಕೆ ಎದುರಾಗಿರುವ ಆತಂಕದ ಕುರಿತು ಸಮ್ಮೇಳನದ ವೇದಿಕೆಯಲ್ಲಿ ಚರ್ಚೆಯಾಗಬೇಕು. ಕನ್ನಡವನ್ನು ಭಾಷೆಯಾಗಿ ಮತ್ತು ಶಿಕ್ಷಣದ ಮಾಧ್ಯಮವಾಗಿ ಉಳಿಸಿಕೊಳ್ಳುವ ಕುರಿತು ಅಭಿಪ್ರಾಯಗಳು ಮತ್ತು ಪರಿಹಾರಗಳು ಮೂಡಬೇಕು. ಕನ್ನಡ ಭಾಷೆಯನ್ನು ಜನ ಸಮೂಹಕ್ಕೆ ಇನ್ನಷ್ಟು ಹತ್ತಿರಗೊಳಿಸುವ ಪ್ರಯತ್ನಗಳಾಗಬೇಕು. ದುರಂತದ ಸಂಗತಿ ಎಂದರೆ ಅಧ್ಯಕ್ಷ ಸ್ಥಾನದ ಲಾಲಸೆ, ವೇದಿಕೆಯಲ್ಲಿ ಅವಕಾಶ ಪಡೆಯುವ ಹುನ್ನಾರ, ಪ್ರಶಸ್ತಿ ಪುರಸ್ಕಾರಗಳಿಗಾಗಿ ಲಾಭಿ, ಸ್ವಜಾತಿ ಸ್ವಧರ್ಮದ ಮೋಹಗಳಿಗೆ ಕಟ್ಟು ಬಿದ್ದು ನಮ್ಮ ಸಾಹಿತ್ಯ ವಲಯ ಸಮ್ಮೇಳನಗಳಿಗೆ  ಅಕ್ಷರಶ: ಜಾತ್ರೆಯ ಸ್ವರೂಪವನ್ನು ತಂದಿರುವರು. ಜೊತೆಗೆ ಸಮ್ಮೇಳನದ ವೇದಿಕೆಯನ್ನು ಸಾಹಿತಿಗಳು ರಾಜಕಾರಣಿಗಳೊಂದಿಗೆ ಹಂಚಿಕೊಳ್ಳುತ್ತಿರುವುದು ಕನ್ನಡ ಭಾಷೆಯ ದೃಷ್ಟಿಯಿಂದ ಇನ್ನೊಂದು ಆತಂಕದ ಸಂಗತಿ. ಹೀಗೆ ರಾಜಕಾರಣಿಗಳನ್ನು ಸಮ್ಮೇಳನಗಳ ವೇದಿಕೆಗೆ ಕರೆತರುತ್ತಿರುವುದರಿಂದ ಸಮ್ಮೇಳನಗಳು ರಾಜಕಾರಣಿಗಳ ಒಡ್ಡೋಲಗದಂತೆ ಭಾಸವಾಗುತ್ತಿದೆ. ಅವರವರ ವೈಯಕ್ತಿಕ ಹಿತಾಸಕ್ತಿಗಳ ನಡುವೆ ನಲುಗಿಹೋಗುತ್ತಿರುವುದು ಮಾತ್ರ ಕನ್ನಡ ಭಾಷೆ ಎನ್ನುವುದು ಅಕ್ಷರಶ: ಸತ್ಯ.

ಕನ್ನಡ ಸಾಹಿತ್ಯ ಪರಿಷತ್ತು 


          ಕನ್ನಡ ಸಾಹಿತ್ಯ ಪರಿಷತ್ತಿಗೆ ಈಗ ನೂರರ ಸಂಭ್ರಮ. ಭಾಷೆ ಮತ್ತು ನಾಡಿನ ರಕ್ಷಣೆಗಾಗಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲವು ದಶಕಗಳಿಂದ ತನ್ನ ಮೂಲ ಉದ್ದೇಶದಿಂದ ಕಳಚಿಕೊಂಡು ಸ್ವಾರ್ಥಿಗಳ ಮತ್ತು ಅಧಿಕಾರ ಲಾಲಸೆಯ ಕೇಂದ್ರವಾಗಿ ರೂಪಾಂತರಗೊಂಡಿದೆ. ಈಗ ಅಲ್ಲಿಯೂ ರಾಜಕೀಯ ತಲೆ ಹಾಕಿದೆ. ಪರಿಣಾಮವಾಗಿ ಕಸಾಪದ ರಾಜ್ಯಾಧ್ಯಕ್ಷರ ಮತ್ತು ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಸ್ಥಾನಗಳಿಗಾಗಿ ನಡೆಯುವ ಚುನಾವಣೆ ವಿಶೇಷ ಮಹತ್ವ ಪಡೆದುಕೊಂಡಿದೆ. ಕಸಾಪದ ಚುನಾವಣೆಯಲ್ಲಿ ರಾಜಕಾರಣಿಗಳ ಪ್ರವೇಶದಿಂದಾಗಿ ಅಲ್ಲಿ ಜಾತಿ ಮತ್ತು ಪ್ರಾದೇಶಿಕ ಗುಂಪುಗಾರಿಕೆ ಪರಿಷತ್ತಿನ ನಡೆಯನ್ನು ನಿರ್ಣಯಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಪುಸ್ತಕಗಳ ಪ್ರಕಟಣೆ, ಪ್ರಶಸ್ತಿ ಪುರಸ್ಕಾರ, ಸಮ್ಮೇಳನದ ಅಧ್ಯಕ್ಷರ ಆಯ್ಕ,  ಗೋಷ್ಠಿಗಳ ಅಧ್ಯಕ್ಷತೆ, ಗೋಷ್ಠಿಗಳಲ್ಲಿ ಕವನಗಳ ವಾಚನ ಮತ್ತು ಪ್ರಬಂಧಗಳ ಮಂಡನೆ ಹೀಗೆ ಪ್ರತಿ ಹಂತದಲ್ಲೂ ಜಾತಿ ಮತ್ತು ಪ್ರಾದೇಶಿಕತೆಯ ಕೋಟಾ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸಮ್ಮೇಳನದ ಸರ್ವಾಧ್ಯಕ್ಷರ ಮಾತುಗಳನ್ನು ವೇದಿಕೆಯಲ್ಲೇ ಮೊಟಕುಗೊಳಿಸುವಂತೆ ಒತ್ತಾಯಿಸುವಷ್ಟು ಕಸಾಪದ ಕೈಗಳು ಉದ್ದವಾಗಿವೆ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಭಾಷೆಯ ಉಳುವಿಗಾಗಿ ಹೋರಾಟಗಳನ್ನು ಸಂಘಟಿಸುತ್ತಿಲ್ಲ ಮತ್ತು ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾದಾಗ ಹೋರಾಟ ಮತ್ತು ಚಳವಳಿಗಳನ್ನು ಸಂಘಟಿಸಬೇಕಾದ ಮಹತ್ವದ ಜವಾಬ್ದಾರಿಯಿದೆ. ಆದರೆ ಪರಿಷತ್ತು ಈ ವಿಷಯವಾಗಿ ನುಣುಚಿಕೊಂಡಿದ್ದೆ ಹೆಚ್ಚು.

ಓದುಗರ ಕೊರತೆ 


       ಕನ್ನಡ ಭಾಷೆಯಲ್ಲಿ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗುತ್ತಿರುವ ಈ ಹೊತ್ತು ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಪುಸ್ತಕಗಳನ್ನು ಅವುಗಳ ಮುಖಬೆಲೆಗೆ ಖರೀದಿಸಿ ಓದುವ ಓದುಗರ ಸಂಖ್ಯೆ ಕನ್ನಡದಲ್ಲಿ ಅಷ್ಟೇನೂ ಆಶಾದಾಯಕವಾಗಿಲ್ಲ. ಬೆರಳೆಣಿಕೆಯ ಲೇಖಕರ ಪುಸ್ತಕಗಳು ಹತ್ತಾರು ಬಾರಿ ಮುದ್ರಣಗೊಂಡು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವಾಗ  ಅದನ್ನೇ ಇಡೀ ಕನ್ನಡ ಪುಸ್ತಕೋದ್ಯಮಕ್ಕೆ ಅನ್ವಯಿಸುವುದು ತಪ್ಪು ನಡೆಯಾಗುತ್ತದೆ. ಸಾಹಿತ್ಯದಂತೆ ಓದುಗರ ವಲಯದಲ್ಲಿನ  ಗುಂಪುಗಾರಿಕೆಯ ಪರಿಣಾಮ ಪ್ರಕಟವಾದ ಪುಸ್ತಕವೊಂದು ಅದು ಹೆಚ್ಚಿನ ಸಂಖ್ಯೆಯ ಓದುಗರ ಓದಿಗೆ ದಕ್ಕುವ ಸಾಧ್ಯತೆ ತೀರ ಕಡಿಮೆ. ಅನಂತಮೂರ್ತಿ ಅವರನ್ನು ಓದುವ ಓದುಗ ಭೈರಪ್ಪನವರನ್ನು ಓದಲಾರದಂಥ ವಾತಾವರಣ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಲೆದೂರಿದೆ. ಪರಿಣಾಮವಾಗಿ ಲೇಖಕ ಒಂದು ಗುಂಪಿನೊಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ಅವನ ಕೃತಿಗಳ ಓದಿಗೆ ಒಂದಿಷ್ಟು ಓದುಗರು ದಕ್ಕಬಹುದು. ಪರಿಸ್ಥಿತಿ ಹೀಗಿರುವಾಗ ಯಾವ ಗುಂಪಿನೊಂದಿಗೂ ಗುರುತಿಸಿಕೊಳ್ಳದ ಲೇಖಕರ ಪುಸ್ತಕಗಳು ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಅಲ್ಮೆರಾಗಳಿಗೆ ಅಲಂಕಾರಿಕ ವಸ್ತುಗಳಾಗಿಬಿಡಬಹುದು. ಸಾಹಿತಿ ತಿರುಮಲೇಶ್ ಅವರು ಹೇಳುವಂತೆ ಓದುಗರು ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಟ್ಟ ಲೇಖಕರ ಪುಸ್ತಕಗಳನ್ನು ಮಾತ್ರ ತಮ್ಮ ಓದಿಗಾಗಿ ಆಯ್ಕೆ ಮಾಡುತ್ತಿರುವರು. ಅವರೇ ಹೇಳುವಂತೆ ಇದು ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ತುಂಬ ಅಪಾಯಕಾರಿಯಾದ ನಡೆ. ಏಕೆಂದರೆ ಮುಖ್ಯವಾಹಿನಿ ಎನ್ನುವುದು ಎಲ್ಲರನ್ನೂ ಮತ್ತು ಎಲ್ಲರ ಕೃತಿಗಳನ್ನು ಒಳಗೊಂಡಿರುವ ಸಮಗ್ರವಾಹಿನಿಯಲ್ಲ. ಗಟ್ಟಿಯಾದ ವಿಷಯ ವಸ್ತುವನ್ನು ಒಳಗೊಂಡಿರುವ ಅನೇಕ ಪುಸ್ತಕಗಳು ಮುಖ್ಯವಾಹಿನಿಯಲ್ಲೇ ಕಾಣಿಸಿಕೊಳ್ಳದೆ ಹೋಗಬಹುದು. ಆಗೆಲ್ಲ ಅಂಥ ಪುಸ್ತಕಗಳು ಓದುಗರ ಓದಿನ ವ್ಯಾಪ್ತಿಯಿಂದ ದೂರವೇ ಉಳಿಯುತ್ತವೆ.

ಕನ್ನಡ ಸಿನಿಮಾಗಳು 


        ಸೃಜನಶೀಲ ಮಾಧ್ಯಮವೆಂದೆ ಗುರುತಿಸಿಕೊಂಡಿರುವ ಕನ್ನಡ ಸಿನಿಮಾ ಮಾಧ್ಯಮ ಇವತ್ತು ಭಾಷೆಯನ್ನು ಅತ್ಯಂತ ಕೆಟ್ಟದಾಗಿ ಬಳಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ  ಸಿನಿಮಾವನ್ನು ಅದೊಂದು ಸೃಜನಶೀಲ ಮಾಧ್ಯಮವೆಂದು ಭಾವಿಸಿದ್ದ ಕಲಾವಿದರು ಮತ್ತು ತಂತ್ರಜ್ಞರು ಕನ್ನಡ ಸಿನಿಮಾ ಮಾಧ್ಯಮದಲ್ಲಿದ್ದರು. ಆಗ ನಿರ್ಮಾಣಗೊಳ್ಳುತ್ತಿದ್ದ ಸಿನಿಮಾಗಳು ನಾಡು ನುಡಿಯ ಆಶಯಕ್ಕೆ ಪೂರಕವಾಗಿರುತ್ತಿದ್ದವು. ಸಿನಿಮಾವನ್ನು ಸೃಜನಶೀಲ ಮಾಧ್ಯಮವೆಂದು ಭಾವಿಸಿ ಅನೇಕ ಬರಹಗಾರರು ಸಿನಿಮಾಗಳಿಗೆ ಸಂಭಾಷಣೆ ಬರೆದ ಮತ್ತು ಹಾಡುಗಳನ್ನು ರಚಿಸಿದ ಅನೇಕ ಉದಾಹರಣೆಗಳಿವೆ.  ಕಾಲಾನಂತರದಲ್ಲಿ ಸಿನಿಮಾ ಅದೊಂದು ಹಣ ಮಾಡುವ ಉದ್ಯಮ ಎನ್ನುವ ಭಾವನೆ ಬಲವಾದಂತೆ ಸಿನಿಮಾದ ಕಥೆ ಹೆಣೆಯುವ ಮತ್ತು ಸಂಭಾಷಣೆಗಳನ್ನು ಹೇಳಿಸುವ ರೀತಿನೀತಿಗಳು ಬದಲಾದವು. ಸಿನಿಮಾ ಮಾಧ್ಯಮ ತನ್ನದೇ ಭಾಷೆಯನ್ನು ರೂಪಿಸಿಕೊಂಡು ಮನರಂಜನೆಯನ್ನೇ ತನ್ನ ಮೂಲ ಉದ್ದೇಶವಾಗಿಸಿಕೊಂಡಾಗ ಅಲ್ಲಿ ನಿಜವಾಗಿಯೂ ಸಂಕಷ್ಟಕ್ಕೆ ಒಳಗಾಗಿದ್ದು ಈ ನೆಲದ ಭಾಷೆ. ಜೊತೆಗೆ ಕನ್ನಡ ಸಿನಿಮಾದ ಮಾರುಕಟ್ಟೆ ವಿಸ್ತರಿಸಿದಂತೆಲ್ಲ ಕನ್ನಡೇತರ  ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅನ್ಯಭಾಷೆಯ ಪದಗಳಿಗೆ ಸಿನಿಮಾಗಳಲ್ಲಿ ಮುಕ್ತ ಪ್ರವೇಶ ದೊರೆಯಲಾರಂಭಿಸಿತು. ವ್ಯಾಕರಣವೇ ಇಲ್ಲದ ವಾಕ್ಯಗಳು, ಇಂಗ್ಲಿಷ್ ಮಿಶ್ರಿತ ಕನ್ನಡ, ತೆಲಗು ತಮಿಳು ಸಂಭಾಷಣೆ ಹೀಗೆ ಹೊಸ ಹೊಸ ಪ್ರಯೋಗಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ಹಿಡಿದಿಡಲು ಮಾಡಿದ ಪ್ರಯತ್ನಗಳು ಕನ್ನಡ ಭಾಷೆಗೆ ಬಹುದೊಡ್ಡ ಆತಂಕವನ್ನು ತಂದೊಡ್ಡಿವೆ.

ಪರಭಾಷೆಗಳ ಪ್ರಾಬಲ್ಯ 


           ಇವತ್ತು ಕನ್ನಡ ಭಾಷೆ ತನ್ನದೇ ನೆಲದಲ್ಲಿ ಅನೇಕ ಭಾಷೆಗಳೊಡನೆ ಸೇಣಿಸಬೇಕಿದೆ. ರಾಜ್ಯದ ರಾಜಧಾನಿ ಅದು ಅನೇಕ ಭಾಷೆಗಳ ಮತ್ತು ಸಂಸ್ಕೃತಿಗಳ ಸಂಗಮ. ಅಲ್ಲಿ ಕನ್ನಡಕ್ಕಿಂತ ತಮಿಳು ಮತ್ತು ಮಲೆಯಾಳಂ ಭಾಷಿಕರ ಸಂಖ್ಯೆಯೇ ಹೆಚ್ಚು. ಸಾಫ್ಟ್ ವೇರ್ ಉದ್ಯಮ ಬೆಂಗಳೂರಿಗೆ ಕಾಲಿಟ್ಟು ಅದು ಸಿಲಿಕಾನ್ ವ್ಯಾಲಿ ಎನ್ನುವ ಮನ್ನಣೆಗೆ ಪಾತ್ರವಾದ ಮೇಲೆ ಇಲ್ಲಿ ಇಂಗ್ಲಿಷ್ ಸಹ ಬಹುಮುಖ್ಯ ಸಂವಹನದ ಭಾಷೆ ಎಂದು ಪರಿಗಣಿಸಲ್ಪಟ್ಟಿದೆ. ಹೀಗಾಗಿ ಬೆಂಗಳೂರಿನಲ್ಲಿ ಕನ್ನಡವನ್ನು ಬರಿಕಣ್ಣಿನಿಂದ ಹುಡುಕಿದರೆ ಅದು ನಮಗೆ ಸಿಗದು. ಇನ್ನು ಗಡಿನಾಡಿನ ಪ್ರದೇಶಗಳಲ್ಲಿ ಮಲೆಯಾಳಂ, ತೆಲುಗು  ತಮಿಳು ಮತ್ತು ಮರಾಠಿ ಭಾಷೆಗಳು ಕನ್ನಡಕ್ಕೆ ತೀವ್ರ ಪೈಪೋಟಿ ಒಡ್ಡುತ್ತಿವೆ. ಬೆಳಗಾವಿಯ ಮನೆಗಳ ಮೇಲೆ ಇವತ್ತಿಗೂ ಮರಾಠಿ ಧ್ವಜ ಹಾರಾಡುವುದನ್ನು ಕಾಣಬಹುದು. ಈ  ಜಿಲ್ಲೆಯ ಅದೆಷ್ಟೋ ಹಳ್ಳಿಗಳು ಭೌತಿಕವಾಗಿ ಕರ್ನಾಟಕದಲ್ಲಿದ್ದರೂ ಮಾನಸಿಕವಾಗಿ ಮಹಾರಾಷ್ಟ್ರದೊಂದಿಗೆ ಗುರುತಿಸಿಕೊಂಡಿವೆ. ಬಳ್ಳಾರಿ, ರಾಯಚೂರು ಮತ್ತು ಕೋಲಾರದ ಜನ ತೆಲುಗು  ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಾರೆ. ಹೀಗಾಗಿ ಕನ್ನಡ ಭಾಷೆ ಇವತ್ತು ತನ್ನ ಅಸ್ತಿತ್ವವನ್ನು ಹುಡುಕಿ ಅಲೆಯಬೇಕಾದ ಪ್ರಸಂಗ ಎದುರಾಗಿದೆ.

ರಾಜಕೀಯದ ಸ್ವಹಿತಾಸಕ್ತಿ 


        ಚುನಾವಣೆಯ ಸಂದರ್ಭದಲ್ಲಿ ಸ್ವಜಾತಿ, ಸ್ವಧರ್ಮ ಮತ್ತು ಪ್ರಾದೇಶಿಕತೆಯ ಹಿತಾಸಕ್ತಿಯನ್ನು ತಮ್ಮಲ್ಲಿ ಆವಾಹಿಸಿಕೊಳ್ಳುವ ನಮ್ಮ ಜನಪ್ರತಿನಿಧಿಗಳು ಭಾಷೆ ಮತ್ತು ನಾಡಿನ ವಿಷಯವಾಗಿ ಯಾವತ್ತೂ ನಿರಾಸಕ್ತರು. ಈ ವಿಷಯದಲ್ಲಿ ನಾವು ತೆಲಗು, ತಮಿಳು ಮತ್ತು ಮರಾಠಿಗರಿಗೆ ಅನುಕರಣಿಯರಾಗಿರಬೇಕು. ಎಂದಿಗೂ ಪ್ರಾದೇಶಿಕ ನೆಲೆಯಲ್ಲಿ ಚಿಂತಿಸುವ ನಮ್ಮ ನೆರೆಯ ರಾಜ್ಯಗಳ ರಾಜಕಾರಣಿಗಳು ರಾಜ್ಯದ ಹಿತಾಸಕ್ತಿಗೆ ತೊಂದರೆ ಎದುರಾದಾಗ ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುತ್ತಾರೆ. ಆದರೆ ನಮ್ಮ ರಾಜಕಾರಣಿಗಳಲ್ಲಿನ ಅಂಥದ್ದೊಂದು ಮನೋಭಾವದ ಕೊರತೆಯ ಪರಿಣಾಮ ಇವತ್ತು ರಾಜ್ಯ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು. ಅದು ಕಾವೇರಿ ನದಿಯ ನೀರಿನ ವಿಷಯವಾಗಿರಬಹುದು ಅಥವಾ ಮಹಾದಾಯಿ ನದಿಗೆ ಸಂಬಂಧಿಸಿದ್ದಾಗಿರಬಹುದು. ಆಲಮಟ್ಟಿ ಅಣೆಕಟ್ಟಿನ ಎತ್ತರ, ಪರಭಾಷಾ ಸಿನಿಮಾಗಳ ಬಿಡುಗಡೆಗೆ ನಿಷೇಧ, ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಸ್ಥಾಪನೆ ಹೀಗೆ ಅನೇಕ ವಿಷಯಗಳಲ್ಲಿ ರಾಜ್ಯಕ್ಕೆ ಸೋಲಾಗಿದೆ. ಈ ಎಲ್ಲದರ  ಹಿಂದೆ ನಮ್ಮನ್ನಾಳುವ ರಾಜಕಾರಣಿಗಳ ಸ್ವಹಿತಾಸಕ್ತಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.

ಕೊನೆಯ ಮಾತು 


       ಕನ್ನಡ ಭಾಷೆಯ ಗತವೈಭವವನ್ನು ಮತ್ತೆ ಮರಳಿ ತರುವ ಕೆಲಸ ಇವತ್ತಿನ ತುರ್ತು ಅಗತ್ಯಗಳಲ್ಲೊಂದು. ನಮ್ಮ ಪ್ರಯತ್ನಗಳು ರಾಜ್ಯೋತ್ಸವದ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಕನ್ನಡ ಪುಸ್ತಕಗಳ ಓದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ಉತ್ತಮ ಸಿನಿಮಾಗಳ ನಿರ್ಮಾಣ, ಸಮ್ಮೇಳನಗಳಲ್ಲಿ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ, ಸಾಹಿತ್ಯವಲಯದ ಸಹಸ್ಪಂದನ, ಸ್ವಹಿತಾಸಕ್ತಿಯನ್ನು ಮರೆತ ರಾಜಕಾರಣ ಹೀಗೆ ಹತ್ತು ಹಲವು ಪ್ರಯತ್ನಗಳ ಮೂಲಕ ಭಾಷೆಯ ಆತಂಕವನ್ನು ದೂರಮಾಡಬೇಕಾಗಿದೆ. ನೆಲದ ಭಾಷೆಯ ಆತಂಕ ಮತ್ತು ತಲ್ಲಣಗಳು ನಮ್ಮ ವೈಯಕ್ತಿಕ ಆತಂಕಗಳಾಗಬೇಕು.  ಜೊತೆಗೆ ಪ್ರಜ್ಞಾಪೂರ್ವಕವಾಗಿ ಕನ್ನಡವನ್ನು  ಹೃದಯದ ಭಾಷೆಯಾಗಿಸಿಕೊಳ್ಳುವತ್ತ  ಹೆಜ್ಜೆಯನ್ನು ನಾವಿಡಬೇಕಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 





Wednesday, October 14, 2015

ಪೂರ್ಣ ಸತ್ಯ: ಪ್ರಚಲಿತ ವಿದ್ಯಮಾನದ ಹೂರಣ








'ಪೂರ್ಣಸತ್ಯ' ನನ್ನ  ಈ ಪುಸ್ತಕದ ವಿಮರ್ಶೆ ಅಕ್ಟೋಬರ್ ೧೧ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾಗಿದೆ. ವಿಮರ್ಶಿಸಿದ ಪ್ರೊ. ಬಿ. ಜಿ. ಕುಲಕರ್ಣಿ ಅವರಿಗೆ ಕೃತಜ್ಞತೆಗಳು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ