Monday, July 15, 2013

ಸಿನಿಮಾ ಎನ್ನುವ ಆ ಕ್ಷಣದ ಸತ್ಯ

       



 





           ಸಿನಿಮಾ ಎನ್ನುವುದರ ವಾಸ್ತವಿಕತೆ ಅದು ನಾವು ಸಿನಿಮಾ ಮಂದಿರದೊಳಗೆ ಕುಳಿತ ಆ ಘಳಿಗೆಯ ಸತ್ಯ ಮಾತ್ರವಾಗಬಾರದು. ಸಿನಿಮಾ ಸೃಜಿಸುವ ವಾಸ್ತವಿಕತೆ ಅದು ಎಲ್ಲ ಕಾಲಕ್ಕೂ ಸಲ್ಲಬೇಕು. ಸಿನಿಮಾವೊಂದರ ವಾಸ್ತವಿಕತೆ ಅದು ಹೇಗೆ ಕಾಲಾತೀತವಾಗಿರಬೇಕು ಎನ್ನುವುದನ್ನು ನಾನು ಉದಾಹರಣೆಯೊಂದಿಗೆ ಹೇಳಬಯಸುತ್ತೇನೆ. 

            ಇದು ಮೂರು ದಶಕಗಳ ಹಿಂದಿನ ಮಾತು. ಆಗೆಲ್ಲ ಈಗಿನಂತೆ ಮನೆ ಮನೆಗಳಲ್ಲಿ ಟಿವಿಯಾಗಲಿ ಮತ್ತು ವಿವಿಧ ಮನೋರಂಜನಾ ಚಾನೆಲ್ ಗಳಾಗಲಿ ಇರಲಿಲ್ಲ. ಶಾಲೆಯಲ್ಲೋ ಇಲ್ಲವೇ ಪಂಚಾಯಿತಿ ಕಚೇರಿಯಲ್ಲೋ ಇಟ್ಟಿರುತ್ತಿದ್ದ ಕಪ್ಪು ಬಿಳುಪಿನ ಟಿವಿಯೇ ಆಗೆಲ್ಲ ಇಡೀ ಗ್ರಾಮಸ್ಥರಿಗೆ ಏಕೈಕ ಮನೋರಂಜನೆಯ ಆಧುನಿಕ ಸಾಧನವಾಗಿತ್ತು. ಅದರಲ್ಲಿ ಪ್ರತಿ ರವಿವಾರಕ್ಕೊಮ್ಮೆ ಪ್ರಸಾರವಾಗುತ್ತಿದ್ದ ಕನ್ನಡ ಸಿನಿಮಾವೇ ಬಹುಮುಖ್ಯ ಆಕರ್ಷಣೆಯಾಗಿರುತ್ತಿತ್ತು. ಜನರೆಲ್ಲ ಅತ್ಯಂತ ಉಮೇದಿಯಿಂದ ದೂರದರ್ಶನದಲ್ಲಿ ಪ್ರಸಾರವಾಗುವ ಕನ್ನಡ ಸಿನಿಮಾಗಳನ್ನು ನೋಡುವಂಥ ಆ ಸಂದರ್ಭದಲ್ಲೇ ಬಂಗಾರದ ಮನುಷ್ಯ ಸಿನಿಮಾವನ್ನು ಪ್ರಸಾರ ಮಾಡುವ ಸೂಚನೆಯನ್ನು ಒಂದು ವಾರ ಮೊದಲೇ ಪ್ರಕಟಿಸಲಾಯಿತು. ರಾಜಕುಮಾರ ಅಭಿನಯದ ಕೃಷಿಕನ ಯಶೋಗಾಥೆಯ ಆ ಸಿನಿಮಾ ಕನ್ನಡ ಚಿತ್ರರಂಗದಲ್ಲೇ ಒಂದು ಮೈಲಿಗಲ್ಲು. ಆ ಚಿತ್ರ ಸೃಷ್ಟಿಸಿದ ಸಾಮಾಜಿಕ ಪರಿಣಾಮ ಹಾಗೂ ಕಟ್ಟಿಕೊಟ್ಟ ಅನುಭವ ಇವತ್ತಿಗೂ ಅನನ್ಯ. ಅಂಥದ್ದೊಂದು ಸಿನಿಮಾ ವೀಕ್ಷಿಸಲು ನನ್ನೂರಿನ ಇಡೀ ಜನತೆ ಕಾತರದಿಂದ ಕಾಯುತ್ತಿದ್ದರು. ಆದರೆ ದುರಾದೃಷ್ಟಕ್ಕೆ ಸಿನಿಮಾ ಪ್ರಸಾರವಾಗಬೇಕಿದ್ದ ಆ ಭಾನುವಾರ ಬೆಳೆಗ್ಗೆಯಿಂದಲೇ ತಾಂತ್ರಿಕ ತೊಂದರೆಯಿಂದಾಗಿ ನನ್ನೂರಿಗೆ ವಿದ್ಯುಶ್ಚಕ್ತಿ ಕಡಿತಗೊಂಡಿತು. ವಿಚಾರಿಸಿದಾಗ ಆ ಸಮಸ್ಯೆ ಇನ್ನು ಒಂದೆರಡು ದಿನಗಳು ಮುಂದುವರೆಯುವುದಾಗಿ ತಿಳಿದು ಬಂತು. ಅದುವರೆಗೆ 'ಬಂಗಾರದ ಮನುಷ್ಯ' ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿದ್ದವರಿಗೆ ನಿರಾಸೆಯಾಯಿತು. ಅಂಥ ಪರಿಸ್ಥಿತಿಯಲ್ಲೂ ಸಿನಿಮಾವನ್ನು ನೋಡಲೇ ಬೇಕೆನ್ನುವ ಅವರೊಳಗಿನ ಉತ್ಸಾಹ ಮಾತ್ರ ಕಡಿಮೆಯಾಗಲಿಲ್ಲ. ಕೊನೆಗೆ ಅರ್ಧ ಉರಿನಷ್ಟು ಜನ ಎತ್ತಿನ ಗಾಡಿಗಳಲ್ಲಿ ಎರಡು ಮೈಲಿ ದೂರದಲ್ಲಿರುವ ಪಕ್ಕದ ಹಳ್ಳಿಗೆ ಹೋಗಿ ಸಿನಿಮಾ ವೀಕ್ಷಿಸಿ ಅವರೆಲ್ಲ ಮರಳಿ ಊರಿಗೆ ಬರುವಷ್ಟರಲ್ಲಿ ಮಧ್ಯರಾತ್ರಿಯಾಗಿತ್ತು. ಈ ಘಟನೆ ಸಿನಿಮಾವೊಂದು ಬೀರುವ ಸಾಮಾಜಿಕ ಪರಿಣಾಮಕ್ಕೆ ಒಂದು ದೃಷ್ಟಾಂತ.

         ಇಲ್ಲಿ ಈ ಮೇಲಿನ ಘಟನೆ ನೆನಪಾಗಲು ಕಾರಣ ಈ ದಿನಗಳಲ್ಲಿ ತಯ್ಯಾರಾಗುತ್ತಿರುವ ಸಿನಿಮಾಗಳು ಮತ್ತು ಅವುಗಳಲ್ಲಿನ ಕಥಾವಸ್ತು. ಇವತ್ತಿನ ಬಹುತೇಕ ಕನ್ನಡ ಸಿನಿಮಾಗಳಲ್ಲಿ ವಾಸ್ತವಿಕತೆಯಾಗಲಿ ಅಥವಾ ಸಾಮಾಜಕ್ಕೆ ಹತ್ತಿರವಾದ ಕಥಾವಸ್ತುವಾಗಲಿ ಕಾಣಸಿಗುತ್ತಿಲ್ಲ. ಹೆಚ್ಚಿನ ಸಿನಿಮಾಗಳಲ್ಲಿ ನೈಜತೆಗಿಂತ ಫ್ಯಾಂಟಸಿಯೇ ವಿಜೃಂಭಿಸುತ್ತಿದೆ. ಸಿನಿಮಾವೊಂದನ್ನು ವೀಕ್ಷಿಸಿ ಚಿತ್ರಮಂದಿರದಿಂದ ಹೊರಬರುವಷ್ಟರಲ್ಲಿ ಆ ಸಿನಿಮಾದ ಕಥೆ ಮತ್ತು ಅದರೊಳಗಿನ ಕಲಾವಿದರು ಪ್ರೇಕ್ಷಕರ ನೆನಪಿನಿಂದ ಮರೆಯಾಗುತ್ತಿರುವುದು ಸಿನಿಮಾ ಅದು ಕೇವಲ ಆ ಕ್ಷಣದ ಸತ್ಯ ಎನ್ನುವ ಆಪಾದನೆಯನ್ನು ನಿಜವಾಗಿಸುತ್ತಿದೆ.

ಸಿನಿಮಾ ಮತ್ತು ಸಾಮಾಜಿಕ ಪ್ರಜ್ಞೆ 


             ಸಮಾಜದಲ್ಲಿನ ಸಮಸ್ಯೆಗಳಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಿ ನಿಲ್ಲಿಸುವ ಸಿನಿಮಾಗಳ ಸಂಖ್ಯೆ ಕಳೆದೆರಡು ದಶಕಗಳಿಂದ ಗಮನಾರ್ಹವಾಗಿ ಕ್ಷೀಣಿಸುತ್ತಿದೆ. ಸಿನಿಮಾವೊಂದನ್ನು ವೀಕ್ಷಿಸಿದ ನಂತರ ಅದರ ಕಥಾವಸ್ತು ಅನೇಕ ದಿನಗಳವರೆಗೆ ನೋಡುಗನನ್ನು ಕಾಡಬೇಕು. ಸಮಾಜದಲ್ಲಿನ ಜ್ವಲಂತ ಸಮಸ್ಯೆಗಳ ಅರಿವು ಆತನಿಗಾಗಬೇಕು. ಆ ಸಮಸ್ಯೆಗಳ ಬಿಸಿ ಅವನನ್ನು ತಟ್ಟಬೇಕು. ಪ್ರೇಕ್ಷಕರನ್ನು ಹೀಗೆ ಸ್ಪಂದಿಸುವ ಪ್ರಕ್ರಿಯೆಗೆ ಒಳಪಡಿಸದೇ  ಹೋದಲ್ಲಿ ಸಿನಿಮಾ ಸಮಾಜದ ದರ್ಪಣ  ಎನ್ನುವ ಸತ್ಯ  ಸುಳ್ಳಾಗಬಹುದು.

        ಈ ದಿನಗಳಲ್ಲಿ ಈ ಸಿನಿಮಾದವರು ವಿಶೇಷವಾಗಿ ಕನ್ನಡ ಚಿತ್ರರಂಗದವರು ತಮ್ಮ ಸುತ್ತ ಒಂದು ಬೇಲಿಯನ್ನು ಕಟ್ಟಿಕೊಂಡು ಅದರ ನಡುವೆ ಕುಳಿತು ಒಂದು ಸಿದ್ದ ಸೂತ್ರವನ್ನಿಟ್ಟುಕೊಂಡು ಸಿನಿಮಾಗಳಿಗೆ ಕಥೆ ಹೆಣೆಯುತ್ತಿರುವರು. ಹೀಗೆ ಅವರು ಕಟ್ಟುತ್ತಿರುವ ಕಥೆಗಳಲ್ಲಿ ಪ್ರೇಮ, ಕಾಮ, ಕೊಲೆಗಳದೆ ಸಿಂಹಪಾಲು. ಸಿನಿಮಾವೊಂದು ಸಮಾಜವನ್ನು ಪ್ರತಿಫಲಿಸುವುದಕ್ಕಿಂತ ಸಿನಿಮಾದಿಂದ ಸಮಾಜದಲ್ಲಿನ ರೀತಿ ನೀತಿಗಳು ರೂಪಿತಗೊಳ್ಳುತ್ತಿವೆ. ಈ ಸಿನಿಮಾಜನ ತಾವೇ ಹಾಕಿಕೊಂಡ ಬೇಲಿಯಿಂದ ಹೊರಬಂದಲ್ಲಿ ಅವರಿಗೆ ಸಮಾಜ ಸಾಕಷ್ಟು ಕಥಾವಸ್ತುವನ್ನು  ಒದಗಿಸಬಲ್ಲದು. ಭ್ರಷ್ಟಾಚಾರ, ಕೈಗಾರೀಕರಣದ ಸಮಸ್ಯೆಗಳು, ಶಿಕ್ಷಣದ ಸಮಸ್ಯೆಗಳು, ರೈತರ ಬದುಕಿನ ಸಂಕಟ, ವಿನಾಶದ ಅಂಚಿಗೆ ಬಂದು ನಿಂತಿರುವ ಹಳ್ಳಿಗಳು, ವಿಭಕ್ತ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳು, ಜಾಗತೀಕರಣ ತಂದೊಡ್ಡುತ್ತಿರುವ ಅಪಾಯ, ಮಾತೃ ಭಾಷೆಯ ಅವನತಿ ಹೀಗೆ ಇಡೀ ಒಂದು ಶತಮಾನಕ್ಕಾಗುವಷ್ಟು ಕಥೆಗಳು ಸಮಾಜದಲ್ಲಿವೆ. ಆದರೆ ಸಮಾಜದ ಸಮಸ್ಯೆಗಳಿಗೆ ಈ ಸಿನಿಮಾ ಜನ ಕುರುಡಾಗಿರುವುದರಿಂದ ಅವರು ಸಿನಿಮಾದ ಮೂಲಕ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿರುವರು.

          ಕನ್ನಡದಲ್ಲಿ ಚೋಮನ ದುಡಿ, ಸಂಸ್ಕಾರ, ಭಾಗ್ಯ ಜ್ಯೋತಿ ಹೀಗೆ ಬೆರಳೆಣಿಕೆಯ ಚಿತ್ರಗಳನ್ನು ಹೊರತುಪಡಿಸಿ ಜಾತಿ ಸಂಘರ್ಷದ ಕಥಾವಸ್ತು ಆಧಾರಿತ ಸಿನಿಮಾಗಳು ಸಂಖ್ಯಾ ದೃಷ್ಟಿಯಿಂದ ಬಹಳ ಕಡಿಮೆ. ಜಾತಿ ಸಮಸ್ಯೆ ಆಧಾರಿತ  ಸಿನಿಮಾಗಳನ್ನು ನಿರ್ಮಿಸಿದಲ್ಲಿ ಅದು ನಿರ್ಧಿಷ್ಟ ಜಾತಿಯ ಪ್ರೇಕ್ಷಕರಿಗೆ ಸೀಮಿತವಾಗಬಹುದೆನ್ನುವ ಭಯ ಅವರನ್ನು ಕಾಡಿರಲೂಬಹುದು. ಲಗಾನ್ ನಂಥ ರೈತ ಪ್ರಧಾನ ಸಿನಿಮಾ ಕನ್ನಡದಲ್ಲಿ ನಿರ್ಮಾಣಗೊಂಡಿದ್ದು ತುಂಬ ಕಡಿಮೆ. ಎಲ್ಲೋ ಒಂದು ಕಡೆ ರಾಜಕುಮಾರ ಒಂದಿಷ್ಟು ರೈತ ಪ್ರಧಾನ ಸಿನಿಮಾಗಳಲ್ಲಿ ನಟಿಸಿ ಆ ಬದುಕಿನ ಸಂಕಟಗಳನ್ನು ಬೆಳ್ಳಿತೆರೆಗೆ ತರಲು ಪ್ರಯತ್ನಿಸಿ ಯಶಸ್ವಿಯಾದರು. ಆದರೆ ಅವರ ನಂತರ ಅಂಥ ಪಾತ್ರಗಳಿಗೆ ವಾರಸುದಾರನಿಲ್ಲದೆ ಕನ್ನಡ ಚಿತ್ರರಂಗ ರೈತನ ಬದುಕಿನಿಂದ ಸಂಪೂರ್ಣವಾಗಿ ವಿಮುಖವಾಯಿತು.

        ಈ ಸಂದರ್ಭ ಭ್ರಷ್ಟಾಚಾರದಂಥ ಕಥಾವಸ್ತು ಆಧಾರಿತ ಸಿನಿಮಾಗಳು ಪ್ರತಿವರ್ಷ ಕನ್ನಡದಲ್ಲಿ ಹೇರಳವಾಗಿ ನಿರ್ಮಾಣಗೊಳ್ಳುತ್ತಿವೆ ಎಂದು ಕೆಲವರು ವಾದಿಸಬಹುದು. ಹಿಂಸೆಯ ವೈಭವಿಕರಣವೇ ಸಾಮಾಜಿಕ ಪ್ರಜ್ಞೆ ಎನ್ನುವುದಾದರೆ ಅಂಥ ಸಿನಿಮಾಗಳಿಂದ ಸಮಾಜಕ್ಕೆ ಉಪಯೋಗವಾಗಿದೆಯೇ? ಸಿನಿಮಾ ನಾಯಕ ಕೈಯಲ್ಲಿ ಮಚ್ಚು ಹಿಡಿದು ಭೂಗತ ಸಾಮ್ರಾಜ್ಯದ ಅಧಿಪತಿಯಾಗಿ ಮೆರೆಯುವುದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿಲ್ಲವೇ? ಸಾಲು ಸಾಲು ಕೊಲೆಗಳನ್ನು ಮಾಡುವ ಸಿನಿಮಾದ ನಾಯಕನನ್ನು ಸಮಾಜ ಆದರ್ಶ ವ್ಯಕ್ತಿಯೆಂದು ಒಪ್ಪಿಕೊಳ್ಳಬೇಕೆ? ಸಾಮಾಜಿಕ ಪ್ರಜ್ಞೆಯ ಹೆಸರಿನಲ್ಲಿ ಇಂಥ ಸಿನಿಮಾಗಳನ್ನು ನಿರ್ಮಿಸುವುದು ಕಾನೂನು ಬಾಹಿರ ಎನ್ನುವ ಅರಿವಿನ ನಡುವೆಯೂ ಈ ಪ್ರಕಾರದ ಸಿನಿಮಾಗಳೇ ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿರುವುದು ಮತ್ತು ಪ್ರೇಕ್ಷಕರು ಪ್ರೋತ್ಸಾಹಿಸುತ್ತಿರುವುದು ಸಧ್ಯದ ಮಟ್ಟಿಗೆ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಬಹುದೊಡ್ಡ ಅಪಾಯವಿದು.

ಮಹಿಳಾ ಪ್ರಧಾನ ಚಿತ್ರಗಳ ಕೊರತೆ 

         
             ಪುರುಷ ಪ್ರಧಾನ ನೆಲೆಯಲ್ಲೇ ವ್ಯವಹರಿಸುತ್ತ ಬಂದಿರುವ ಕನ್ನಡ ಚಿತ್ರರಂಗದಲ್ಲಿ ಮಹಿಳಾ ಕಲಾವಿದರಿಗೆ ದೊರೆಯಬೇಕಾದ ಪ್ರಾಮುಖ್ಯತೆ ಇದುವರೆಗೂ ಸಿಕ್ಕಿಲ್ಲ ಎನ್ನುವುದನ್ನು ನಾವು ಒಪ್ಪಿಕೊಳ್ಳಲೇಬೇಕು. ಇದುವರೆಗೂ ಸ್ತ್ರೀಯನ್ನು ಪ್ರೇಮ ಮತ್ತು ಕಾಮದ ನೆಲೆಯಲ್ಲಿ ಪ್ರದರ್ಶನದ ಗೊಂಬೆಯಂತೆ ಚಿತ್ರಿಸುತ್ತ ಬಂದಿರುವ ಕನ್ನಡ ಭಾಷೆಯ ಸಿನಿಮಾಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ಕೊರತೆ ಎದ್ದು ಕಾಣುವಂತಿದೆ. ಒಂದು ಕಾಲದಲ್ಲಿ ಪುಟ್ಟಣ್ಣ ಕಣಗಾಲ್, ಕೆ.ವಿ. ಜಯರಾಂ, ದೊರೈ ಭಗವಾನ್ ಅವರಂಥ ನಿರ್ದೇಶಕರುಗಳಿಂದ ಸಾಲು ಸಾಲು ಮಹಿಳಾ ಪ್ರಧಾನ ಸಿನಿಮಾಗಳು ತೆರೆ ಕಂಡರೂ ಎಲ್ಲೋ ಒಂದು ಕಡೆ ಪೂರ್ಣ ಪ್ರಮಾಣದಲ್ಲಿ ಮಹಿಳೆಯರ ಸಮಸ್ಯೆಗಳನ್ನು ಬೆಳ್ಳಿತೆರೆಯ ಮೇಲೆ ತರುವಲ್ಲಿ ಕನ್ನಡ ಚಿತ್ರರಂಗ ಸೋತಿದೆ ಎನ್ನುವ ಕೊರಗು ಪ್ರೇಕ್ಷಕರದು.

         'ಶರ ಪಂಜರ', 'ಇಬ್ಬನಿ ಕರಗಿತು', 'ಗಾಳಿ ಮಾತು' ಇತ್ಯಾದಿ  ಚಿತ್ರಗಳನ್ನು ಮಹಿಳಾ ಪ್ರಧಾನ ಸಿನಿಮಾಗಳಿಗೆ ಉದಾಹರಣೆಯಾಗಿ ಹೆಸರಿಸಬಹುದಾದರೂ ಪುಟ್ಟಣ್ಣ ಮತ್ತು ಅವರ ಸಮಕಾಲಿನ ನಿರ್ದೇಶಕರು ಸುಶಿಕ್ಷಿತ ಮಧ್ಯಮ ವರ್ಗದ ಕುಟುಂಬಗಳಲ್ಲಿನ ಸ್ತ್ರೀ ಸಮಸ್ಯೆಗಳಾದ ಸೊಸೆಯಂದಿರ ಸಂಕಟ, ವರದಕ್ಷಿಣೆ ಪಿಡುಗು, ಗಂಡನ ವಿವಾಹೇತರ ಸಂಬಂಧಗಳಿಂದ ನೊಂದ ಪತ್ನಿ ಹೀಗೆ ಸೀಮಿತ ಸಮಸ್ಯೆಗಳ ಸುತ್ತಲೇ ಮಹಿಳಾ ಪ್ರಧಾನ ಸಿನಿಮಾಗಳನ್ನು ನಿರ್ದೇಶಿಸಿದರು.

      ಮಹಿಳೆಯರ ಸಮಸ್ಯೆಗಳ ಕುರಿತು ಚರ್ಚಿಸುವಾಗ ಈ ಮೇಲೆ ಹೇಳಿದ ಸಮಸ್ಯೆಗಳನ್ನಷ್ಟೇ ಆಧರಿಸಿ ಸಿನಿಮಾಗಳು ನಿರ್ಮಾಣಗೊಂಡರೆ ಸಾಕೆ? ಸ್ತ್ರೀ ಶಿಕ್ಷಣ, ಉದ್ಯೋಗಸ್ಥ ಮಹಿಳೆಯರು ಎದುರಿಸುವ ಸಮಸ್ಯೆಗಳು, ಲಿಂಗ ತಾರತಮ್ಯ ಇತ್ಯಾದಿ ಸಮಸ್ಯೆಗಳನ್ನಾಧರಿಸಿ ಎಷ್ಟು ಮಹಿಳಾ ಪ್ರಧಾನ ಸಿನಿಮಾಗಳು ಕನ್ನಡ ಭಾಷೆಯಲ್ಲಿ ತೆರೆ ಕಂಡಿವೆ? ಈ ಸಂದರ್ಭ ಉಲ್ಲೇಖಿಸಲೇ ಬೇಕಾದ ಇನ್ನೊಂದು ಮಾತೆಂದೆರೆ ಸಿನಿಮಾ ಕಥೆಗೆ ಅನಿವಾರ್ಯ ಇಲ್ಲದಿದ್ದಾಗೂ ಕೂಡ ಹೆಣ್ಣನ್ನು ಹಾಡು, ನೃತ್ಯ, ಸ್ನಾನದ ದೃಶ್ಯಗಳಲ್ಲಿ ಚಿತ್ರಿಸುವುದನ್ನು ನಾವು ಪ್ರತಿ ಸಿನಿಮಾದಲ್ಲೂ ಕಾಣುತ್ತೇವೆ. ಏಕೆ ಹೀಗೆ ಎಂದು ಒಂದಿಷ್ಟು ವಿಶ್ಲೇಷಿಸಿ ನೋಡಿದಾಗ ಅದು ಸಿನಿಮಾವೊಂದರ ಮಾರಾಟಕ್ಕೆ ಹೆಚ್ಚು ಸಹಾಯಕವಾಗುತ್ತಿದೆ ಎನ್ನುವ ಮಾತು ಸಿನಿಮಾ ವಲಯದಲ್ಲಿ ಕೇಳಿ ಬರುತ್ತಿದೆ. ಈ ಮಾತನ್ನು ಒಪ್ಪುವುದಾದರೆ ನಮ್ಮ ಸಿನಿಮಾ ಉದ್ಯಮ ಹೆಣ್ಣನ್ನು  ಒಂದು ಮಾರಾಟದ ಸರಕಾಗಿ ನೋಡುತ್ತಿದೆ  ಎನ್ನುವ ಸಂಗತಿ ನಿಚ್ಚಳವಾವಾಗುತ್ತದೆ. ಹೀಗೆ ಹೆಣ್ಣನ್ನು ಅರೆಬತ್ತಲೆಯಲ್ಲೇ ಚಿತ್ರಿಸಲು ಇಷ್ಟ ಪಡುತ್ತಿರುವ ಸಿನಿಮಾ ಜನರಿಗೆ   ಸ್ತ್ರೀ ಸಂವೇದನೆಯ ಸೂಕ್ಷ್ಮ  ಒಳತೋಟಿಗಳನ್ನು ಬೆಳ್ಳಿಪರದೆಯ ಮೇಲೆ ತೋರಿಸಲು ಮನಸ್ಸು ಒಪ್ಪುತ್ತಿಲ್ಲ.

          ಇನ್ನೊಂದು ಚರ್ಚಿಸಲೇ ಬೇಕಾದ ಮುಖ್ಯ ಸಂಗತಿ ಎಂದರೆ ನಮ್ಮ ಕನ್ನಡ ಸಿನಿಮಾಗಳಲ್ಲಿ ಮುಸ್ಲಿಂ ಮತ್ತು ದಲಿತ ಮಹಿಳೆ ಅವಳು ಅನುಭವಿಸುತ್ತಿರುವ ಸಮಸ್ಯೆಗಳೊಂದಿಗೆ ಚಿತ್ರಿತವಾಗಿರುವುದು  ತೀರ  ಕಡಿಮೆ. ಈ ಮಾತನ್ನು ನಾವು ಇತರ ವರ್ಗಗಳ ಮಹಿಳೆಯರಿಗೂ ಅನ್ವಯಿಸಿ ಹೇಳಬಹುದು. ಹೀಗೆ ಹೇಳುವಾಗ ಮಹಿಳೆ ಅನುಭವಿಸುತ್ತಿರುವ ಸಮಸ್ಯೆಗಳು ಒಂದು  ವರ್ಗದಿಂದ ಇನ್ನೊಂದು ವರ್ಗಕ್ಕೆ ವಿಭಿನ್ನವಾಗಿವೆ ಎನ್ನುವುದನ್ನು ನಾವು ಗಮನಿಸಬೇಕು. 'ಫಣಿಯಮ್ಮ' ಸಿನಿಮಾವೊಂದೆ ಎಲ್ಲ ವರ್ಗದ ಮಹಿಳೆಯರನ್ನು ಪ್ರತಿನಿಧಿಸಲಾರದು. ನಮ್ಮದು ವಿಭಿನ್ನ ಜಾತಿ ಸಮುದಾಯಗಳ ಸಮಾಜವಾಗಿರುವುದರಿಂದ ಇಡೀ ಮಹಿಳಾ ಸಮುದಾಯದ ಸಮಸ್ಯೆಗಳನ್ನು ಚಿತ್ರಿಸುವಲ್ಲಿ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸೋತಿದೆ ಎನ್ನುವುದನ್ನು ಕನ್ನಡ ಪ್ರೇಕ್ಷಕ ಅತ್ಯಂತ ನೋವಿನಿಂದ ಒಪ್ಪಿಕೊಳ್ಳಬೇಕಿದೆ.

ಕಲಾತ್ಮಕ ಎನ್ನುವ ಹಣೆಪಟ್ಟಿ 


        ಸಿನಿಮಾವನ್ನು ವ್ಯಾಪಾರಿ ಮತ್ತು ಕಲಾತ್ಮಕ ಎಂದು ವರ್ಗೀಕರಿಸಿ ಅನೇಕ ದಶಕಗಳಾದವು. ವ್ಯಾಪಾರಿ ಸಿನಿಮಾವೊಂದು ಬಹುಸಂಖ್ಯೆಯ ಪ್ರೇಕ್ಷಕರನ್ನು ತಲುಪಿದರೆ ಕಲಾತ್ಮಕ ಸಿನಿಮಾಗಳು ವೈಚಾರಿಕ ಪ್ರಜ್ಞೆಯುಳ್ಳ ಸೀಮಿತ ಸಂಖ್ಯೆಯ ಪ್ರೇಕ್ಷಕ ವರ್ಗಕ್ಕೆ ಮಾತ್ರ ತಲುಪಬಲ್ಲವು. ಹಾಗೆ ನೋಡಿದರೆ ವ್ಯಾಪಾರಿ ಸಿನಿಮಾಗಳಿಗಿಂತ ಕಲಾತ್ಮಕ ಸಿನಿಮಾಗಳಲ್ಲೇ ನಾವು ಸಾಮಾಜಿಕ ಕಳಕಳಿಯನ್ನು ಕಾಣಲು ಸಾಧ್ಯ. ಈ ಕಲಾತ್ಮಕ ಸಿನಿಮಾಗಳು  ಕಾಲಕಾಲಕ್ಕೆ ಸಮಾಜದಲ್ಲಿನ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿವೆ. ಆದರೆ ಪ್ರತಿವರ್ಷ ನಿರ್ಮಾಣವಾಗುತ್ತಿರುವ ಇಂಥ ಸಿನಿಮಾಗಳ ಸಂಖ್ಯೆ ಕನ್ನಡ ಚಿತ್ರರಂಗದಲ್ಲಿ   ಬೆರಳೆಣಿಕೆಯಷ್ಟು   ಮಾತ್ರ.

           ಕನ್ನಡ ಚಿತ್ರರಂಗದಲ್ಲಿ ಕಲಾತ್ಮಕ ಸಿನಿಮಾಗಳ ನಿರ್ಮಾಣ ಕಡಿಮೆಯಾಗುತ್ತಿರುವುದಕ್ಕೆ ಅಂಥ ಸಿನಿಮಾಗಳಿಗೆ ಸೂಕ್ತ ಉತ್ತೇಜನ ಇಲ್ಲದಿರುವುದೇ ಪ್ರಬಲ ಕಾರಣ. ಕಲಾತ್ಮಕ ಸಿನಿಮಾಗಳನ್ನು ನಿರ್ಮಿಸಲು ಹೆಚ್ಚಿನ ನಿರ್ಮಾಪಕರು ಆಸಕ್ತಿ ತೋರುವುದಿಲ್ಲ ಜೊತೆಗೆ ಈ ಪ್ರಕಾರದ ಸಿನಿಮಾಗಳನ್ನು ಪ್ರದರ್ಶಿಸಲು ಯಾವ ಸಿನಿಮಾ ಮಂದಿರಗಳ ಮಾಲೀಕರು ಮುಂದೆ ಬರುತ್ತಿಲ್ಲ. ಒಟ್ಟಿನಲ್ಲಿ ಸಾಮಾಜಿಕ ಪ್ರಜ್ಞೆಯುಳ್ಳ ಕಲಾತ್ಮಕ ಚಿತ್ರಗಳ ನಿರ್ಮಾಣ ಆರ್ಥಿಕವಾಗಿ ಹೊರೆಯಾಗುತ್ತಿದೆ. ಎಲ್ಲೋ ಒಂದು ಕಡೆ ಕಲಾತ್ಮಕ ಸಿನಿಮಾಗಳನ್ನು ಪ್ರಶಸ್ತಿಗಾಗಿಯೇ ನಿರ್ಮಾಣ ಮಾಡಲಾಗುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಹೀಗೆ ಪ್ರಶಸ್ತಿಯ ಹಿಂದೆ ಬಿದ್ದಿರುವ ನಿರ್ದೇಶಕರು ಮತ್ತು ನಿರ್ಮಾಪಕರು ಕಲಾತ್ಮಕ ಸಿನಿಮಾಗಳನ್ನು ಪ್ರೇಕ್ಷಕರ ಸಮೂಹಕ್ಕೆ ಒಯ್ದು ತಲುಪಿಸುವ ಇಚ್ಛೆ ತೋರುತ್ತಿಲ್ಲ.

      ಕಲಾತ್ಮಕ ಸಿನಿಮಾಗಳು ಬಹುಸಂಖ್ಯೆಯ ಪ್ರೇಕ್ಷಕರಿಗೆ ತಲುಪದೇ ಇರಲು ಜನಪ್ರಿಯ ಕಲಾವಿದರು ಇಂಥ ಚಿತ್ರಗಳಲ್ಲಿ ನಟಿಸದೇ ಇರುವುದು ಕೂಡ ಒಂದು ಕಾರಣವಾಗುತ್ತಿದೆ. ಸದಾಕಾಲ ಮೆನ್ ಸ್ಟ್ರೀಮ್ ನಲ್ಲೇ ಕಾಣಿಸಿಕೊಳ್ಳಲು ಇಚ್ಛಿಸುವ ಜನಪ್ರಿಯ ಕಲಾವಿದರಿಗೆ ಕಲಾತ್ಮಕ ಸಿನಿಮಾಗಳೆಂದರೆ ಯಾವತ್ತಿಗೂ ಅಪಥ್ಯ. ರಾಜಕುಮಾರ, ವಿಷ್ಣುವರ್ಧನ ಅವರಂಥ ಖ್ಯಾತ ಮತ್ತು ಪ್ರತಿಭಾನ್ವಿತ ಕಲಾವಿದರೂ ಈ ಅಪವಾದದಿಂದ ಹೊರಾತಾಗಿರಲಿಲ್ಲ. ಜನಪ್ರಿಯ ಕಲಾವಿದರ ನಿರ್ಲಕ್ಷದಿಂದಾಗಿಯೇ ಕಲಾತ್ಮಕ ಸಿನಿಮಾಗಳಲ್ಲಿ ಸಾಮಾಜಿಕ ಕಾಳಜಿ ಇದ್ದೂ ಸಿನಿಮಾ ಎನ್ನುವ ಮಾಧ್ಯಮ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ವಿಫಲವಾಯಿತು.

ಜಾಗತೀಕರಣಕ್ಕೆ ಮುಖಾಮುಖಿ 


       ಕನ್ನಡ ಚಿತ್ರರಂಗದ ಮೇಲೆ ಜಾಗತೀಕರಣ ತನ್ನ ಪ್ರಭಾವ ಬೀರಿದೆ. ಇದಕ್ಕೆ ಪೂರಕವಾಗಿ ಕನ್ನಡ ಸಿನಿಮಾ ಉದ್ಯಮ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುತ್ತಿದೆ. ಇವತ್ತು  ಕರ್ನಾಟಕ ಮಾತ್ರವಲ್ಲದೆ ಕನ್ನಡ ಸಿನಿಮಾಗಳು ಮುಂಬೈ, ದೆಹಲಿ, ದುಬೈ, ಅಮೆರಿಕಾ, ಜಪಾನ್, ಜರ್ಮನಿಗಳಲ್ಲಿ ಬಿಡುಗಡೆಯಾಗುತ್ತಿವೆ. ಸಿನಿಮಾದ ಮಾರುಕಟ್ಟೆ ವಿಸ್ತರಿಸಿದಂತೆಲ್ಲ ಈ ವಿಸ್ತರಣೆಗೆ ಪೂರಕವಾಗಿ ಕನ್ನಡ ಸಿನಿಮಾಗಳ ಕಥಾವಸ್ತು ಮತ್ತು ಚಿತ್ರೀಕರಣದ ಲೊಕೇಷನ್ ಗಳಲ್ಲಿ ಸಾಕಷ್ಟು ಮಾರ್ಪಾಡುಗಳಾಗುತ್ತಿವೆ. ಜಾಗತೀಕರಣದ ಪರಿಣಾಮ ಇಂದಿನ ಕನ್ನಡ ಸಿನಿಮಾಗಳಲ್ಲಿ ಕಾರ್ಪೋರೆಟ್ ಸಂಸ್ಕೃತಿ ಕಾಣಿಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ ಮಧ್ಯಮ ವರ್ಗದ ಜನರ ಬದುಕನ್ನು ಪ್ರತಿನಿಧಿಸುತ್ತಿದ್ದ ಸಿನಿಮಾಗಳಲ್ಲಿ ಕಾಲಾನಂತರದಲ್ಲಿ ಶ್ರೀಮಂತ ವರ್ಗದ ವಿಲಾಸಿ ಬದುಕು ಸಿಂಹಪಾಲು  ಪಡೆಯತೊಡಗಿತು. ಜೊತೆಗೆ ವಿಸ್ತರಿಸುತ್ತಿರುವ ಮಾರುಕಟ್ಟೆಗೆ ಅನುಗುಣವಾಗಿ ಕನ್ನಡ ಸಿನಿಮಾಗಳನ್ನು ವಿದೇಶದಲ್ಲಿ ಚಿತ್ರೀಕರಿಸಲು ಪೈಪೋಟಿ ಕಾಣಿಸುತ್ತಿದೆ. ಒಂದು ಕಾಲದಲ್ಲಿ ಸಿನಿಮಾವೊಂದರ ಒಂದೆರಡು ಹಾಡುಗಳನ್ನು ಮಾತ್ರ ವಿದೇಶದಲ್ಲಿ ಚಿತ್ರೀಕರಿಸುತ್ತಿದ್ದ ಕನ್ನಡ ಸಿನಿಮಾರಂಗದಲ್ಲಿ ಈಗ ಸಿನಿಮಾವೊಂದರ ಅರ್ಧದಷ್ಟು ಭಾಗ ವಿದೇಶದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಇದಕ್ಕೆಲ್ಲ ಜಾಗತೀಕರಣದ ಪ್ರಭಾವವೇ ಮುಖ್ಯ ಕಾರಣ.

           ಜಾಗತೀಕರಣಕ್ಕೆ ಕನ್ನಡ ಸಿನಿಮಾ ರಂಗವನ್ನು ಮುಖಾಮುಖಿಯಾಗಿ ನಿಲ್ಲಿಸುತ್ತಿರುವ ಹೊತ್ತಿನಲ್ಲೇ ನಮ್ಮ ಸಿನಿಮಾಗಳು ಪ್ರಾದೇಶಿಕತೆಯಿಂದ ದೂರವಾಗುತ್ತಿವೆ. ಉದಾಹರಣೆಯಾಗಿ ಹೇಳುವುದಾದರೆ ಕೊಡವರ ಬದುಕಿನ ಸಮಸ್ಯೆಗಳನ್ನು ಸಿನಿಮಾದ ಮೂಲಕ ಹೇಳಲು ಅವರಿಗೆ ಕೊಡವ ಭಾಷೆಯೇ ಬೇಕಾಯಿತು. ಇದೇ ಮಾತನ್ನು ತುಳು ಮತ್ತು ಲಂಬಾಣಿ ಭಾಷೆಯ ಸಿನಿಮಾಗಳಿಗೂ ಅನ್ವಯಿಸಿ ಹೇಳಬಹುದು. ಪ್ರಾದೇಶಿಕ ಸಮಸ್ಯೆಯೊಂದನ್ನು ಪ್ರಾದೇಶಿಕ ಭಾಷೆಯಲ್ಲೇ ಚಿತ್ರಿಸಿದಾಗ ಅದು ನಾಡಿನ ಎಲ್ಲ ಪ್ರೇಕ್ಷಕರನ್ನು ತಲುಪಲಾರದು. ಕನ್ನಡ ಸಿನಿಮಾ ಜಾಗತೀಕರಣಕ್ಕೆ ಮುಖಾಮುಖಿಯಾಗಿ ನಿಂತಿರುವ ಹೊತ್ತಿನಲ್ಲಿ ತಮ್ಮ ನೆಲದ ಸಮಸ್ಯೆಗಳನ್ನು ಸಿನಿಮಾದ ಮೂಲಕ ಹೇಳಲು ಕೆಲವೊಂದು ಪ್ರದೇಶಗಳಿಗೆ ಪ್ರಾದೇಶಿಕ ಭಾಷೆಗಳಾದರೂ ಇವೆ. ಆದರೆ ಪ್ರಾದೇಶಿಕ ಭಾಷೆಯಿಲ್ಲದೇ ರಾಜ್ಯ ಭಾಷೆಯನ್ನೇ ಅವಲಂಬಿಸಿರುವ ಮುಂಬೈ ಕರ್ನಾಟಕ, ಹೈದರಾಬಾದ ಕರ್ನಾಟಕ, ಮೈಸೂರು ಕರ್ನಾಟಕ ಭಾಗಗಳ ಪ್ರಾದೇಶಿಕತೆ ಬೆಳ್ಳಿತೆರೆಯ ಮೇಲೆ ಮೂಡಲು ಕನ್ನಡ ಭಾಷೆಯೇ ಅನಿವಾರ್ಯವಾಗಿರುವ ಹೊತ್ತಿನಲ್ಲೇ ನಮ್ಮ ಚಿತ್ರರಂಗ ಜಾಗತೀಕರಣಕ್ಕೆ ತೆರೆದುಕೊಳ್ಳುತ್ತಿದೆ.

ಕೊನೆಯ ಮಾತು


            ಕೆಲವು ವರ್ಷಗಳ ಹಿಂದೆ ಹಿಂದಿಯಲ್ಲಿ 'ಗಂಗಾ ಜಲ್' ಎನ್ನುವ ಸಿನಿಮಾ ಬಿಡುಗಡೆಯಾದಾಗ ಬಿಹಾರ ರಾಜ್ಯದಲ್ಲಿನ ಭೂಮಾಲಿಕರುಗಳು ಸಿನಿಮಾ ಬಿಡುಗಡೆಗೆ ಅಡ್ಡಿಪಡಿಸಿದರು. ಸಿನಿಮಾದ ನಿರ್ದೇಶಕನಿಗೆ ಬೆದರಿಕೆಯೊಡ್ಡಿದರು. ಏಕೆಂದರೆ   ಆ ಸಿನಿಮಾದ ಕಥಾವಸ್ತು ಭೂಮಾಲಿಕರ ಅಟ್ಟಹಾಸ ಹಾಗೂ ದೌರ್ಜನ್ಯಕ್ಕೆ  ಹತ್ತಿರವಾಗಿತ್ತು. ಆದ್ದರಿಂದ  ಸಿನಿಮಾದ ಬಿಡುಗಡೆಯೇ ಒಂದು ರೀತಿ ಸಂಚಲನವನ್ನು ಉಂಟುಮಾಡಿತ್ತು. ಇದು ಸಿನಿಮಾವೊಂದು ಸಮಾಜದಲ್ಲಿ ಸೃಷ್ಟಿಸುವ ಪರಿಣಾಮಕ್ಕೆ ಉತ್ತಮ ಉದಾಹರಣೆ. ಹೀಗೆ ಸಿನಿಮಾ ಸಮಾಜಿಕ ಪಲ್ಲಟಕ್ಕೆ ಮತ್ತು ಜಿಗಿತಕ್ಕೆ ಕಾರಣವಾಗಬೇಕು. ಆದರೆ ಕಳೆದ ಒಂದು ದಶಕದಿಂದ ಕನ್ನಡದಲ್ಲಿ ಇಂಥ ಪ್ರಯೋಗ ತುಂಬ ಕಡಿಮೆಯಾಗುತ್ತಿದೆ.  ಪ್ರೇಕ್ಷಕರು ಸಿನಿಮಾವನ್ನು ಮನೋರಂಜನೆ ಎನ್ನುವ ಸೀಮಿತ ಚೌಕಟ್ಟಿಗೆ ಸ್ಥಿರಗೊಳಿಸಿ ನೋಡುತ್ತಿರುವುದರಿಂದ ಪ್ರಯೋಗಶೀಲ ಮನೋಭಾವದ ನಿರ್ದೇಶಕರು ಸಹ ಸಿನಿಮಾವನ್ನು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲಿಸುವ ಧೈರ್ಯ ತೋರುತ್ತಿಲ್ಲ. ಸಧ್ಯದ ಮಟ್ಟಿಗೆ ಇದು ಕನ್ನಡ ಚಿತ್ರರಂಗದ ಹಾಗೂ ಸಮಾಜದ ಆರೋಗ್ಯದ ದೃಷ್ಟಿಯಿಂದ ಸರಿಯಾದ ನಿರ್ಧಾರವಲ್ಲ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


           

Monday, July 1, 2013

ಪರಿಸರ ಪ್ರಜ್ಞೆ














          ಪರಿಸರ ಮಾನವನ ಬದುಕಿನ ಬಹುಮುಖ್ಯ ಅಗತ್ಯಗಳಲ್ಲೊಂದು. ಪ್ರತಿಯೊಬ್ಬ ವ್ಯಕ್ತಿ ತನ್ನ ಜೀವಿತಾವಧಿಯುದ್ದಕ್ಕೂ ಪರಿಸರದಿಂದ ಪಡೆಯುವುದು ನಮ್ಮ ಅಂಕಿ ಸಂಖ್ಯೆಗೂ ನಿಲುಕದ ಲೆಕ್ಕವದು. ಹೀಗಿದ್ದೂ ಮನುಷ್ಯ ಪರಿಸರಕ್ಕೆ ಕೃತಜ್ಞನಾಗಿರದೆ ಕೃತಘ್ನನಾಗಿರುವುದೇ ಹೆಚ್ಚು. ಮಾನವನ ಅನಾಗರಿಕ ಆಟಾಟೋಪಗಳಿಗೆ ಪರಿಸರ ಬಲಿಯಾಗುತ್ತಿದೆ. ನಾಗರಿಕ ಸಮಾಜ ನಿರಂತರವಾಗಿ ಪರಿಸರವನ್ನು ಹಾಳುಗೆಡುವುತ್ತ ಅದನ್ನು ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ. ಇದು ಹೀಗೆ ಮುಂದುವರೆದಲ್ಲಿ ನಾವು ನಮ್ಮ ನಂತರದ ಪೀಳಿಗೆಯನ್ನು ಉಸಿರು ಕಟ್ಟುವ ವಾತಾವರಣದಲ್ಲಿ ಬಿಟ್ಟು ಹೋಗಬೇಕಾದಿತು. ಎಚ್ಚರಿಸುವ ಕೆಲಸ ಸಾಹಿತ್ಯ, ಸಿನಿಮಾ, ನಾಟಕಗಳಂಥ ಸೃಜನಶೀಲ ಕ್ಷೇತ್ರಗಳಿಂದಾಗಬೇಕು. ಜೊತೆಗೆ ಸರ್ಕಾರ ಮತ್ತು ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಕಡೆಗಣಿಸುವಂತಿಲ್ಲ.

ಪರಿಸರ ಪ್ರಜ್ಞೆ: ಸಾಹಿತ್ಯ ಮತ್ತು ಸಿನಿಮಾ 


           ಜೂನ್ ತಿಂಗಳಂದು ಪರಿಸರ ದಿನವನ್ನು ಆಚರಿಸುವುದು ನಮ್ಮಲ್ಲಿ ಒಂದು ಸಂಪ್ರದಾಯದಂತೆ ಬೆಳೆದು ಬಂದಿದೆ. ಪತ್ರಿಕೆಗಳಲ್ಲಿ, ದೂರದರ್ಶನದ ವಿವಿಧ ವಾಹಿನಿಗಳಲ್ಲಿ ಮತ್ತು ಸಂಘ ಸಂಸ್ಥೆಗಳಲ್ಲಿ ಪರಿಸರ ದಿನಾಚರಣೆಯು ಒಂದು ಪ್ರತಿಷ್ಠೆಯ ವಿಷಯವಾಗುತ್ತಿರುವುದು ಅದೊಂದು ಕಳವಳಕಾರಿ ಸಂಗತಿ. ಈ ಪ್ರಯತ್ನದ ಹಿಂದೆ ನಿಜವಾದ ಕಾಳಜಿ ಇದ್ದಲ್ಲಿ ಇವತ್ತು ಪರಿಸರ ಇಷ್ಟೊಂದು ಮಾಲಿನ್ಯಗೊಳ್ಳುತ್ತಿರಲಿಲ್ಲ. ಪರಿಸರ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸುವ ಕೆಲಸ ಅದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಇಂಥದ್ದೊಂದು ಅನುಸಂಧಾನ ದಿನನಿತ್ಯ ನಡೆಯಬೇಕು.

           ಜೊತೆಗೆ ಸೃಜನಶೀಲ ಮಾಧ್ಯಮಗಳಾದ ಸಾಹಿತ್ಯ ಮತ್ತು ಸಿನಿಮಾಗಳಿಂದ ಜನರಲ್ಲಿ ಪರಿಸರ ಪ್ರಜ್ಞೆಯನ್ನು ಮೂಡಿಸುವ ಕೆಲಸವಾಗುತ್ತಿಲ್ಲ ಎನ್ನುವುದನ್ನು ನಾನಿಲ್ಲಿ ಬೇಸರದಿಂದ ಹೇಳುತ್ತಿದ್ದೇನೆ. ಈ ಸಿನಿಮಾ ಮತ್ತು ಸಾಹಿತ್ಯ ಜನರನ್ನು ಮುಟ್ಟಬಲ್ಲ ಪರಿಣಾಮಕಾರಿ ಮಾಧ್ಯಮಗಳು. ಹೀಗಾಗಿ ಈ ಎರಡು ಮಾಧ್ಯಮಗಳು ಪ್ರಯತ್ನಿಸಿದಲ್ಲಿ ನಾಶವಾಗುತ್ತಿರುವ ಪರಿಸರವನ್ನು ಖಂಡಿತವಾಗಿ ನಾವು ಉಳಿಸಿಕೊಳ್ಳಬಹುದು. ಕನ್ನಡ ಸಾಹಿತ್ಯದ ವಿಷಯಕ್ಕೆ ಬಂದರೆ ಇಲ್ಲಿ ಪರಿಸರದ ಮೇಲೆ ರಚನೆಯಾದ ಸಾಹಿತ್ಯ ಬಹಳಷ್ಟು ಕಡಿಮೆ. ನಮ್ಮ ಹೆಚ್ಚಿನ ಬರಹಗಾರರು ಪರಿಸರವನ್ನು ಒಂದು ಆಕರ್ಷಣೆ ಇಲ್ಲವೇ ಶೃಂಗಾರವಾಗಿ ನೋಡಿದ್ದೆ ಹೆಚ್ಚು. ಪರಿಸರದ ಒಳಗಿಳಿದು ಅದರ ಅಗತ್ಯ ಮತ್ತು ಅದು ಎದುರಿಸುತ್ತಿರುವ ಅಪಾಯವನ್ನು ಶೋಧಿಸಿದ ಬರಹಗಾರರು ಬೆರಳೆಣಿಕೆಯಷ್ಟು ಮಾತ್ರ. ಅವರಲ್ಲಿ ನಾವು ತೇಜಸ್ವಿ ಮತ್ತು ಕಾರಂತರ ಹೆಸರನ್ನು ಸೂಚಿಸಬಹುದು. ಈ ಇಬ್ಬರೂ ಬರಹಗಾರರು ಪರಿಸರವನ್ನು ವಿಜ್ಞಾನವಾಗಿ ಮತ್ತು ಮಾನವ ಸಂಕುಲದ ಅಗತ್ಯವಾಗಿ ನೋಡಿದ್ದರಿಂದಲೇ ಕರ್ವಾಲೋ, ಚಿದಂಬರ ರಹಸ್ಯ, ಮಾಯಾಲೋಕ, ಚಿಗುರಿದ ಕನಸು ಇತ್ಯಾದಿ ಮಹತ್ವದ ಕೃತಿಗಳು ರಚನೆಯಾದವು. ತೇಜಸ್ವಿ ಕಾಡಿನೊಳಗಿನ ಬಗೆಬಗೆಯ ಸಸ್ಯ, ಕೀಟಗಳ ಕುರಿತು ಬರೆದರು. ಕಾಡಿನೊಂದಿಗೆ ನಿರಂತರ ಒಡನಾಟವಿಟ್ಟುಕೊಂಡು ಬದುಕುತ್ತಿದ್ದ ಮಂದಣ್ಣ, ಚೀಂಕ್ರ, ಅಣ್ಣಪ್ಪಣ್ಣ, ಪ್ಯಾರಾ, ಕರಾಟೆ ಮಂಜನಂಥವರು ಅವರ ಕಥೆ ಕಾದಂಬರಿಗಳ ನಾಯಕರಾದರು. ತೇಜಸ್ವಿ ಅವರ ಕಥೆ ಕಾದಂಬರಿಗಳಲ್ಲಿ ಧಾರಾಕಾರ ಮಳೆ, ಕಾಡ್ಗಿಚ್ಚು, ಭೀಕರ ಗಾಳಿ ಮುಖ್ಯ ಪಾತ್ರಗಳಾಗಿ ಬಂದಿವೆ. ಅವರು ಮಾನವ ಸಮಾಜಕ್ಕೆ ಎಚ್ಚರಿಕೆಯನ್ನು ಪರಿಸರದ ಮೂಲಕ ಒದಗಿಸುತ್ತಾರೆ. ಪರಿಸರದೊಂದಿಗೆ ತೇಜಸ್ವಿ ಅವರದು ನಿರಂತರ ಅನುಸಂಧಾನ. ಹೀಗೆ ಪರಿಸರವನ್ನು ತನ್ನೊಳಗೆ ಆವಾಹಿಸಿಕೊಂಡು ಬರೆದ ಲೇಖಕ ಕನ್ನಡದಲ್ಲಿ ತೇಜಸ್ವಿ ಅವರನ್ನು ಬಿಟ್ಟರೆ ಬೇರೊಬ್ಬರಿಲ್ಲ. ಶಿವರಾಮ ಕಾರಂತರು ಸಾಮಾಜಿಕ ಬದುಕಿನ ಸಂಕೀರ್ಣಗಳ ಜೊತೆ ಪರಿಸರದ ಬಗ್ಗೆಯೂ ಒಂದಿಷ್ಟು ಕೆಲಸ ಮಾಡಿದ್ದು ಶ್ಲಾಘನೀಯ. ಇಲ್ಲಿ ನಾವು ಕಾರಂತರು ಪರಿಸರದ ಬಗ್ಗೆ ಎಷ್ಟು ಬರೆದಿರುವರು ಎನ್ನುವುದಕ್ಕಿಂತ ಅವರು ಪರಿಸರ ರಕ್ಷಣೆಗಾಗಿ ಮಾಡಿದ ಚಳುವಳಿ ಕುರಿತು ಗಮನಹರಿಸಬೇಕು. ದಕ್ಷಿಣ ಕನ್ನಡದಲ್ಲಿ ಅಣುಸ್ಥಾವರ ಸ್ಥಾಪನೆಯನ್ನು ಅವರು ತಮ್ಮ ಬದುಕಿನುದ್ದಕ್ಕೂ ವಿರೋಧಿಸುತ್ತಲೇ ಬಂದರು. ಆದರೆ ಇಂಥದ್ದೊಂದು ಹೋರಾಟದ ಮನೋಭಾವ ಹೆಚ್ಚಿನ ಲೇಖಕರಿಂದ ವ್ಯಕ್ತವಾಗಿದ್ದು ಕನ್ನಡದಲ್ಲಿ ಕಡಿಮೆ.

          ಇನ್ನು ಸಿನಿಮಾ ಕುರಿತು ಮಾತನಾಡುವುದಾದರೆ ನಮ್ಮ ಸಿನಿಮಾ ಜನ ವಿದೇಶಿ ಸಿನಿಮಾಗಳಿಂದ ಕಲಿಯುವುದು ಬಹಳಷ್ಟಿದೆ. ಜಾಗತಿಕ ತಾಪಮಾನ ತಂದೊಡ್ಡಬಹುದಾದ ಅಪಾಯ, ವಿನಾಶದಂಚಿಗೆ ಬಂದು ನಿಂತಿರುವ ಪ್ರಾಣಿ ಸಂಕುಲ ಹೀಗೆ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸುವ ಸಿನಿಮಾಗಳು ಇವತ್ತಿಗೂ ಹಾಲಿವುಡ್ ನಲ್ಲಿ ನಿರ್ಮಾಣಗೊಳ್ಳುತ್ತಿವೆ. ಆದರೆ ನೂರು ವರ್ಷಗಳ ಇತಿಹಾಸವುಳ್ಳ ನಮ್ಮ ಕನ್ನಡ ಚಿತ್ರರಂಗದಲ್ಲಿ ಪರಿಸರದ ಕುರಿತಾದ ಸಿನಿಮಾಗಳೇ ನಿರ್ಮಾಣಗೊಂಡಿಲ್ಲ. ಎಲ್ಲೋ ಒಂದು ಕಡೆ 'ದ್ವೀಪ' ದಂಥ ಸಿನಿಮಾದ ಮೂಲಕ ಒಂದು ಸಣ್ಣ ಪ್ರಯತ್ನವನ್ನು ಮಾಡಲಾಯಿತಾದರೂ ಅಲ್ಲಿಯೂ ಮನುಷ್ಯ ಬದುಕಿನ ಸಂಕೀರ್ಣತೆಯೇ ಮೇಲುಗೈ ಸಾಧಿಸಿ ನಿಜವಾದ ಕಾಳಜಿ ಮೂಲೆಗುಂಪಾಯಿತು. ೨೦೦೪ ರಲ್ಲಿ ಹಾಲಿವುಡ್ ನಲ್ಲಿ ನಿರ್ಮಾಣಗೊಂಡ 'ಡೇ ಆಫ್ಟರ್ ಟುಮಾರೋ' ಸಿನಿಮಾವನ್ನು ನೀವು ನೋಡಿರಬೇಕು. ಜಾಗತಿಕ ತಾಪಮಾನ ತಂದೊಡ್ಡುವ ಅಪಾಯವನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಚಿತ್ರವಿದು. ನೀರೆಲ್ಲ ಹೆಪ್ಪುಗಟ್ಟಿ ಹಿಮರಾಶಿಯ ನಡುವೆ ಸಿಕ್ಕಿಕೊಂಡ ನಾಗರಿಕ ಸಮಾಜ ಎದುರಿಸುವ ಅಪಾಯವನ್ನು ವೀಕ್ಷಿಸುತ್ತಿರುವ ಆ ಸಂದರ್ಭ ಪ್ರಕೃತಿ ವಿಕೋಪದ ಮುಂದೆ ಅತ್ಯಾಧುನಿಕ ತಂತ್ರಜ್ಞಾನ ಅದೆಷ್ಟು ಅಸಹಾಯಕ ಎಂದು ಆ ಕ್ಷಣ ಯಾರಿಗಾದರೂ ಅನಿಸುತ್ತದೆ. ಹೀಗೆ ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮಗಳು ಕಟ್ಟಿಕೊಡುವ ಅನುಭವ ಅನನ್ಯ. ಆದ್ದರಿಂದ ಪರಿಸರ ಪ್ರೇಮವನ್ನು ಜಾಗೃತಗೊಳಿಸುವ ಪ್ರಯತ್ನ ಸೃಜನಶೀಲ ಮಾಧ್ಯಮಗಳಾದ ಸಾಹಿತ್ಯ ಮತ್ತು ಸಿನಿಮಾಗಳಿಂದ ಪ್ರಾರಂಭವಾದಲ್ಲಿ ಅದು ಅತಿ ಹೆಚ್ಚಿನ ಪರಿಣಾಮವನ್ನು ಬೀರಬಲ್ಲದು. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಅಂಥದ್ದೊಂದು ಪ್ರಯತ್ನವಾಗಲಿ ಮತ್ತು ಬೆಳವಣಿಗೆಯಾಗಲಿ ಕಾಣಿಸುತ್ತಿಲ್ಲ.

                 ಈ ಸಂದರ್ಭ ವನ್ಯಜೀವಿ ಛಾಯಾಗ್ರಾಹಕರಾದ ಕೃಪಾಕರ ಮತ್ತು ಸೇನಾನಿ ಈ ಇರ್ವರೂ ಪರಿಸರ ಸಂರಕ್ಷಣೆಗಾಗಿ ಮಾಡುತ್ತಿರುವ ಪ್ರಯತ್ನವನ್ನೊಮ್ಮೆ ಅವಲೋಕಿಸಬೇಕು. ಸಂಘ ಸಂಸ್ಥೆಗಳಿಂದ ಹಣ ಸಂಗ್ರಹಿಸಿ ಬಂಡಿಪುರ ಅರಣ್ಯದಂಚಿನಲ್ಲಿರುವ ಸುಮಾರು ಎರಡುನೂರು ಹಳ್ಳಿಗಳಲ್ಲಿನ ಮೂರು ಸಾವಿರ ಕುಟುಂಬಗಳಿಗೆ ಅಡುಗೆ ಅನಿಲದ ಸೌಲಭ್ಯವನ್ನು ಒದಗಿಸಿ ಆ ಮೂಲಕ ಅರಣ್ಯ ನಾಶವನ್ನು ತಡೆಗಟ್ಟಿದ ಇವರ ಪ್ರಯತ್ನ ಅಭಿನಂದನಾರ್ಹ. ಇಂಥ ಮನೋಭಾವ ಸೃಜನಶೀಲ ಮನಸ್ಸುಗಳಲ್ಲಿ ಹೆಚ್ಚಬೇಕು.

ಪರಿಸರ ಪ್ರಜ್ಞೆ ಮತ್ತು ಸರ್ಕಾರ 


             ಪರಿಸರ ರಕ್ಷಣೆ ಕುರಿತಾಗಿ ಸರ್ಕಾರೇತರ ಸಂಸ್ಥೆಗಳು ಮಾಡುತ್ತಿರುವ ಪ್ರಯತ್ನದಲ್ಲಿ ಅರ್ಧದಷ್ಟನ್ನಾದರೂ ಕಾಲಕಾಲಕ್ಕೆ ಬಂದ ನಮ್ಮ ಸರ್ಕಾರಗಳು ಮಾಡಲೇ ಇಲ್ಲ. ನಿಮಗೆ ನೆನಪಿರಬಹುದು ಕೆಲವು ದಿನಗಳ ಹಿಂದೆ ಗೊರಿಲ್ಲಾಗಳ ನಾಮಕರಣಕ್ಕೆ ಸಂಬಂಧಿಸಿದ ಲೇಖನವೊಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಇದು ನಡೆದದ್ದು ಆಫ್ರಿಕಾದ ರವಾಂಡಾ ಎನ್ನುವ ಪುಟ್ಟ ದೇಶದಲ್ಲಿ. ಇದು ನಮ್ಮ ಕರ್ನಾಟಕಕ್ಕಿಂತಲೂ ವಿಸ್ತೀರ್ಣದಲ್ಲಿ ಚಿಕ್ಕದಾದ ದೇಶ. ಅಲ್ಲಿ ನಶಿಸಿ ಹೋಗುತ್ತಿರುವ ಗೊರಿಲ್ಲಾಗಳನ್ನು ಉಳಿಸಿಕೊಳ್ಳಲು ಹಾಗೂ ಅವುಗಳಿಗಾಗಿ ಅರಣ್ಯದ ಸಂರಕ್ಷಣೆಗೆ ಸರ್ಕಾರವೇ ಮುಂದಾಗಿದೆ. ಸರ್ಕಾರವೇ ಖುದ್ದು ಆಸಕ್ತಿವಹಿಸಿ ಪ್ರತಿವರ್ಷ ಗೊರಿಲ್ಲಾಗಳ ನಾಮಕರಣದ ಸಮಾರಂಭ ಏರ್ಪಡಿಸುತ್ತದೆ. ಹೀಗೆ ಸರ್ಕಾರವೇ ಪಾಲ್ಗೊಳ್ಳುವುದರ ಮೂಲಕ ಸಾರ್ವಜನಿಕರಲ್ಲಿ ಪ್ರಾಣಿಸಂಕುಲ ಮತ್ತು ಪರಿಸರದ ಕುರಿತಾದ ಅರಿವು ಮೂಡಿಸುತ್ತಿದೆ. ಆದರೆ ಇಲ್ಲಿ ಯಾವುದೇ ಸರ್ಕಾರದಿಂದ ಅಂಥದ್ದೊಂದು ಪ್ರಯತ್ನ ಇದುವರೆಗೆ ಕಂಡುಬಂದಿಲ್ಲ. ಸುಂದರಲಾಲ ಬಹುಗುಣ, ಅಣ್ಣಾ ಹಜಾರೆ, ಮೇಧಾ ಪಾಟ್ಕರ್, ಪಾಳೇಕರ್ ಅವರು ಮಾಡಿದ ಮತ್ತು ಮಾಡುತ್ತಿರುವ ಪರಿಸರ ಸಂರಕ್ಷಣೆ ಕುರಿತಾದ ಪ್ರಯತ್ನಗಳು ವೈಯಕ್ತಿಕ ಮಟ್ಟದಲ್ಲಾದವೇ  ವಿನ: ಈ ವಿಷಯವಾಗಿ ಸರ್ಕಾರದ ಪ್ರಯತ್ನ ಹೇಳಿಕೊಳ್ಳುವಂಥದ್ದೆನಿಲ್ಲ.

                ಕರ್ನಾಟಕದ ಅರ್ಧದಷ್ಟೂ ಇರದ ಪುಟ್ಟ ದೇಶವೊಂದು ಪರಿಸರ ಸಂರಕ್ಷಣೆಗೆ ಮುಂದಾಗುವುದರ ಮೂಲಕ ಅದನ್ನೇ ರಾಷ್ಟ್ರದ ಬಂಡವಾಳವಾಗಿಸಿಕೊಂಡು ಅಧಿಕ ಕಂದಾಯವನ್ನು ಸಂಗ್ರಹಿಸುತ್ತಿರುವಾಗ ಜಗತ್ತಿನ ಎರಡನೇ ಅತಿ ದೊಡ್ಡ ದೇಶವೆನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಅರಣ್ಯ ನಾಶವಾಗುತ್ತಿರುವ ಜೊತೆಗೆ ಪ್ರಾಣಿಗಳ ಸಂತತಿಯೂ ನಶಿಸುತ್ತಿದೆ. ದೇಶವೊಂದು ಸುಭಿಕ್ಷವಾಗಿರಬೇಕೆಂದರೆ ಅದು ಕೇವಲ ಕೈಗಾರೀಕರಣ ಮತ್ತು ಜಾಗತೀಕರಣದಿಂದ ಸಾಧ್ಯವಿಲ್ಲ. ರಾಷ್ಟ್ರದ ಪ್ರಗತಿಯಲ್ಲಿ ಪರಿಸರ ಸಹ ಅತ್ಯುತ್ತಮ ಪಾತ್ರವನ್ನು ನಿರ್ವಹಿಸುತ್ತದೆ. ಭೂಮಿ ಅಗೆಯುವ, ಅರಣ್ಯ ಸಂಪತ್ತು ಕೊಳ್ಳೆ ಹೊಡೆಯುವ ಪ್ರಕರಣಗಳಿಗೆ ಸರ್ಕಾರ ಕಡಿವಾಣ ಹಾಕುವ ಪ್ರಯತ್ನಕ್ಕೆ ಮುಂದಾಗಬೇಕು. ಇದು ಯಾರೋ ವೈಯಕ್ತಿಕವಾಗಿ ಮಾಡುವಂಥ ಕೆಲಸವಲ್ಲ. ಸರ್ಕಾರ ಮನಸ್ಸು ಮಾಡಬೇಕು.

ಸಾರ್ವಜನಿಕರ ಪಾತ್ರ 


        ನಾವುಗಳ ನಮ್ಮ ಇತಿಮಿತಿಯೊಳಗೆ ಪರಿಸರವನ್ನು ಸಂರಕ್ಷಿಸುವ ಕೆಲಸಕ್ಕೆ ಮುಂದಾಗಬೇಕು. ಈ ಸಂದರ್ಭ ನಾವು ಮಾಡಬೇಕಾಗಿರುವುದೆನೆಂದರೆ,

೧. ವಾಹನಗಳ ಉಪಯೋಗ ಕಡಿಮೆ ಮಾಡುವುದು ನಾವು ಪರಿಸರಕ್ಕೆ ನೀಡುವ ಬಹುಮೂಲ್ಯ ಕೊಡುಗೆಯಾಗಿದೆ. ವಾಹನಗಳ ಕಡಿಮೆ ಉಪಯೋಗದಿಂದ ಆರ್ಥಿಕವಾಗಿ ನಮಗೆ ಉಳಿತಾಯವಾಗುವುದಲ್ಲದೆ ಪರಿಸರಕ್ಕೆ ಸೇರಿ ಮಲಿನಗೊಳಿಸುವ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣವನ್ನು ನಾವು ಕಡಿಮೆಮಾಡಿದಂತಾಗುತ್ತದೆ.

೨. ಬಿಸಿ ನೀರಿನ ಉಪಯೋಗ ಕಡಿಮೆ ಮಾಡುವುದರಿಂದ ನಾವು ಕಾರ್ಬನ್ ಡೈ  ಆಕ್ಸೈಡ್ ನ ವಿಸರ್ಜನೆಯ ಪ್ರಮಾಣವನ್ನು ತಗ್ಗಿಸಬಹುದು.

೩. ಗೃಹ ಬಳಕೆಯ ವಿದ್ಯುತ್ ನ್ನು ಮಿತವಾಗಿ ಬಳಸುವುದು ಸಹ ನಾವು ಪರಿಸರಕ್ಕೆ ನೀಡುವ ಬಹುದೊಡ್ಡ ಕೊಡುಗೆಯಾಗಿದೆ. ಮನೆಯ ಎಲ್ಲ ಕೋಣೆಗಳಲ್ಲಿ ಅನಾವಶ್ಯಕವಾಗಿ ದೀಪಗಳನ್ನು ಉರಿಸದೆ ಅಗತ್ಯದ ಸಂದರ್ಭಗಳಲ್ಲಿ ಮಾತ್ರ ವಿದ್ಯುತ್ ದೀಪವನ್ನು ಉಪಯೋಗಿಸಬೇಕು. ಟಿ.ವಿ ಮತ್ತು ಕಂಪ್ಯೂಟರ್ ಗಳನ್ನು ಅಗತ್ಯವಿದ್ದಾಗ ಮಾತ್ರ ಉಪಯೋಗಿಸುವುದು ಉತ್ತಮ.

೪. ಪರಿಸರ ನೈರ್ಮಲ್ಯಕ್ಕಾಗಿ ಮರಗಳನ್ನು ಬೆಳೆಸುವುದು ಅದು ಎಲ್ಲರ ಕರ್ತವ್ಯವಾಗಬೇಕು. ಮರಗಳು ಪರಿಸರ ಸಮತೋಲನದ ಕಾಪಾಡುವಿಕೆಗಾಗಿ ಭೂಮಿಯ ಮೇಲಿರುವ ನೈಸರ್ಗಿಕ ರಕ್ಷಣಾ ವ್ಯವಸ್ಥೆಯ ಅತಿ ಮುಖ್ಯ ಭಾಗಗಳಾಗಿವೆ. ಆದ್ದರಿಂದ ಹೆಚ್ಚು ಹೆಚ್ಚು ಮರಗಳನ್ನು ಬೆಳೆಸುವುದರ ಮೂಲಕ ತಾಪಮಾನದ ಏರಿಕೆಯನ್ನು ತಡೆಗಟ್ಟಬಹುದು.

೫. ರೈತರು ತಮ್ಮ ಬೇಸಾಯ ಪದ್ಧತಿಯಲ್ಲಿ ಯಂತ್ರೋಪಕರಣಗಳ  ಬದಲಾಗಿ ಪ್ರಾಣಿಗಳನ್ನು ಬಳಸುವ ಪದ್ಧತಿಯನ್ನೇ ಹೆಚ್ಚು ಹೆಚ್ಚು ಅನುಸರಿಸಬೇಕು. ಜೊತೆಗೆ ಆಧುನಿಕ ರಸಗೊಬ್ಬರಗಳ ಉಪಯೋಗ ಕಡಿಮೆಮಾಡಿ ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ ನೀಡಬೇಕು.

೬. ಜನಸಂಖ್ಯಾ ಸ್ಫೋಟ ಕೇವಲ ನಿರುದ್ಯೋಗ ಸಮಸ್ಯೆಯನ್ನು ಮಾತ್ರ ತಂದೊಡ್ಡುವುದಿಲ್ಲ. ಅದು ಪರಿಸರಕ್ಕೂ ಮಾರಕವಾಗಿ ಪರಿಣಮಿಸುತ್ತದೆ. ಜನರ ಸಂಖ್ಯೆ ಹೆಚ್ಚಿದಂತೆಲ್ಲ ವಾಹನಗಳ ಉಪಯೋಗ ಅಧಿಕವಾಗುತ್ತಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸಲು ಕಾರ್ಖಾನೆಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಈ ವಾಹನಗಳ ಮತ್ತು ಕಾರ್ಖಾನೆಗಳ ಹೊಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ಪರಿಸರದ ಸಮತೋಲನಕ್ಕಾಗಿ ಜನಸಂಖ್ಯಾ ನಿಯಂತ್ರಣ ಕಡ್ಡಾಯವಾಗಬೇಕು.

ಕೊನೆಯ ಮಾತು 


            ನಿಸರ್ಗದ ಮೇಲೆ ಮಾನವನ ದಾಳಿ ಇದು ಇಂದು ನಿನ್ನೆಯದಲ್ಲ. ಅನಾದಿ ಕಾಲದಿಂದಲೂ ಮನುಷ್ಯ ನಿಸರ್ಗದೊಂದಿಗೆ ಆಟವಾಡುತ್ತಲೇ ಬಂದಿರುವನು. ಪ್ರತಿಯೊಂದು ಆರಂಭಕ್ಕೆ ಅಂತ್ಯವಿರುವಂತೆ ಮನುಷ್ಯನ ಈ ಆಟಕ್ಕೆ ಕೊನೆ ಎನ್ನುವುದಿದೆ. ತನ್ನ ಮಿತಿಯನ್ನು ಅರ್ಥ ಮಾಡಿಕೊಳ್ಳದೆ ಮಾನವನ ಈ ದುಷ್ಕೃತ್ಯಗಳು ಹೀಗೆ ಮುಂದುವರೆದಲ್ಲಿ ಇಡೀ ಮನುಕುಲವೇ ನಾಶ ಹೊಂದಬಹುದು. ಈಗಾಗಲೇ ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಗಳು ನಾಗರಿಕ ಸಮಾಜವನ್ನು ಕಂಗೆಡಿಸಿವೆ. ಜಾಗತಿಕ ತಾಪಮಾನ ಮನುಕುಲಕ್ಕೆ ತನ್ನ ಬಿಸಿ ಮುಟ್ಟಿಸಿದೆ. ಇನ್ನಾದರೂ ಮನುಷ್ಯ ಎಚ್ಚೆತ್ತುಕೊಳ್ಳುವುದೊಳಿತು.

-ರಾಜಕುಮಾರ.ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Friday, June 14, 2013

ಎದೆಗೆ ಬಿದ್ದ ಅಕ್ಷರ: ಸಮಾನತೆಯ ಕನಸು ಮತ್ತು ಕಾಣ್ಕೆ






           'ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು' ದೇವನೂರ ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಪುಸ್ತಕದ ಪುಟಗಳು ತೆರೆದುಕೊಳ್ಳುವುದೇ ಈ ಮೇಲಿನ ನುಡಿಯೊಂದಿಗೆ. ಪ್ರಕಟವಾದ ಕೆಲವೇ ತಿಂಗಳುಗಳಲ್ಲಿ ಅನೇಕ ಮುದ್ರಣಗಳನ್ನು ಕಂಡ ಪುಸ್ತಕವಿದು. ದೇವನೂರ ಮಹಾದೇವ ಕನ್ನಡ ಸಾಹಿತ್ಯ ಲೋಕದ ಅನನ್ಯ ಬರಹಗಾರ. ಅವರ ಅನೇಕ ಬಿಡಿ ಲೇಖನಗಳು ಮತ್ತು ಕಥೆಗಳು ಪ್ರಕಟವಾಗಿವೆಯಾದರೂ ಪುಸ್ತಕ ರೂಪದಲ್ಲಿ ಅವರ ಬರಹ ಬೆಳಕು ಕಂಡಿದ್ದು ಬಹಳಷ್ಟು ಕಡಿಮೆ ಎಂದೇ ಹೇಳಬಹುದು. ೧೯೭೩ ರಲ್ಲಿ ದ್ಯಾವನೂರು, ೧೯೮೨ ರಲ್ಲಿ ಒಡಲಾಳ, ೧೯೮೮ ರಲ್ಲಿ ಕುಸುಮ ಬಾಲೆಯ ನಂತರ ಪ್ರಕಟವಾದ ಕೃತಿ ಈ 'ಎದೆಗೆ ಬಿದ್ದ ಅಕ್ಷರ'. 

         ಕನ್ನಡದ ಪ್ರತಿಭಾವಂತ ಲೇಖಕರಲ್ಲಿ ಒಬ್ಬರಾದ ದೇವನೂರ ಮಹಾದೇವ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ದೇವನೂರಿನವರು. ಆರಂಭದ ಕೆಲವು ವರ್ಷಗಳ ಕಾಲ ಅಧ್ಯಾಪಕರಾಗಿ ಕೆಲಸ ಮಾಡಿದ ಮಹಾದೇವ ಅದು ತಮ್ಮ ಜಾಯಮಾನಕ್ಕೆ ಒಗ್ಗದೇ ಹೋದಾಗ ಯಾವ ಮುಲಾಜಿಲ್ಲದೆ ನೌಕರಿಗೆ ರಾಜೀನಾಮೆಯಿತ್ತು ಕೃಷಿಯಲ್ಲಿ ತೊಡಗಿಸಿಕೊಂಡವರು. ಜೊತೆ ಜೊತೆಗೆ ದಲಿತ ಚಳುವಳಿ ಮತ್ತು ಬಂಡಾಯ ಸಾಹಿತ್ಯದೊಂದಿಗೆ ತಮ್ಮನ್ನು ಗುರುತಿಸಿಕೊಂಡವರು. ಹಾಗೆಂದು ದಲಿತ ಚಳುವಳಿಯ ಬಗ್ಗೆ ಅವರದು ಸಂಪೂರ್ಣ ಕುರುಡು ನಂಬಿಕೆಯಲ್ಲ. ದಲಿತ ಸಂಘರ್ಷ ಸಮಿತಿಯಲ್ಲಿನ ಒಳಜಗಳ ಹಾಗೂ ಒಡಕುಗಳ ಬಗ್ಗೆ ನಿಷ್ಠುರವಾಗಿ ಮಾತನಾಡುವ ಎದೆಗಾರಿಕೆ ಅವರದು. ಕುವೆಂಪು ಮತ್ತು ಬೇಂದ್ರೆ ಅವರ ಸಾಹಿತ್ಯದ ಜೊತೆಗೆ ಶೇಕ್ಸ್ ಪಿಯರ್ ಮತ್ತು ಟಾಲ್ ಸ್ಟಾಯ್ ಅವರನ್ನೂ ಓದಿಕೊಂಡಿರುವ ದೇವನೂರ ಮಹಾದೇವ ಅಂಬೇಡ್ಕರ್ ರಷ್ಟೇ ಗಾಂಧಿಯನ್ನೂ  ಪ್ರೀತಿಸಬಲ್ಲರು. ಅವರು ಗತದ ನೆನಪುಗಳೊಂದಿಗೆ ವರ್ತಮಾನದಲ್ಲಿ ಬದುಕುತ್ತ ನಾಳಿನ ಕನಸುಗಳನ್ನು ಕಾಣುವರು. ಅವರ ಈ ವ್ಯಕ್ತಿತ್ವಕ್ಕೊಂದು ನಿದರ್ಶನ ಕೊಡುವುದಾದರೆ 'ಗಾಂಧಿಗೆ ಅಬ್ರಾಹಿಂ ಲಿಂಕನ್ ಸಿಕ್ಕಿದ್ರೆ ಭಾಳ ದೊಡ್ಡ ಸಂಗತಿಗಳು ಆಗ್ತಿದ್ವೇನೋ' ಎನ್ನುವ ಅವರ ಹೇಳಿಕೆಯೇ ಒಂದು ದೃಷ್ಟಾಂತ. ತಳ ಸಮುದಾಯದ ಸಾಮಾಜಿಕ  ಬದುಕಿನ ತಲ್ಲಣಗಳನ್ನು ಬರವಣಿಗೆಯ ಮೂಲಕ ತೆರೆದಿಡುತ್ತಿರುವ ಮಹಾದೇವರ ಬರಹಗಳಲ್ಲಿ ಸಂವೇದನೆ ಹಾಗೂ ಸಮಾಜದ ಕುರಿತಾದ ಕಾಳಜಿ ಈ ಗುಣಗಳು ಎದ್ದು ಕಾಣುತ್ತವೆ. 'ನನಗೆ ಏನೂ ಗೊತ್ತಿಲ್ಲ ಎಂಬ ರೀತಿಯಲ್ಲಿ ಎಂಬಂತೆ ಚಿಂತಿಸುವವರು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಚಿಂತಕರು' ಸಂದರ್ಶನವೊಂದರಲ್ಲಿ ಶಂಕರ ಮೊಕಾಶಿ ಪುಣೇಕರ್ ಅವರು ಹೇಳಿದ ಈ ಮಾತು ದೇವನೂರ ಮಹಾದೇವರಿಗೆ ಹೆಚ್ಚು ಅನ್ವಯಿಸುತ್ತದೆ.

             ಇನ್ನು 'ಎದೆಗೆ ಬಿದ್ದ ಅಕ್ಷರ' ಕೃತಿಯ ಕುರಿತು ಹೇಳುವುದಾದರೆ ಓದಿದ ನಂತರ ನನ್ನನ್ನು ಒಂದಿಷ್ಟು ಹೆಚ್ಚೇ ಎನ್ನುವಂತೆ ಕಾಡಿದ ಹಾಗೂ ಚಿಂತಿಸುವಂತೆ ಮಾಡಿದ ಪುಸ್ತಕವಿದು. ಪುಸ್ತಕದಲ್ಲಿ ಒಟ್ಟು ೯೦ ಲೇಖನಗಳಿದ್ದು ಸಂಖ್ಯೆ ಅತಿಯಾಯಿತೇನೋ ಎನ್ನಿಸಿದರೂ ಪುಸ್ತಕವೇನೂ ಬೃಹತ್ ಗಾತ್ರದಲ್ಲಿಲ್ಲ. ಲೇಖನಗಳನ್ನು ಹೆಚ್ಚು ಲಂಬಿಸದೆ ಹೇಳಬೇಕಾದದ್ದನ್ನು ತಮ್ಮ ಎಂದಿನ ರೂಪಕ ಶೈಲಿಯನ್ನು ಬಳಸಿಕೊಂಡು ನೇರವಾಗಿ ಹೇಳಿರುವ ವಿಧಾನ ಮೆಚ್ಚುಗೆ ಎನಿಸುತ್ತದೆ. ದೇವನೂರ ಮಹಾದೇವರೇ ಹೇಳಿಕೊಂಡಂತೆ ಇಲ್ಲಿರುವ ಲೇಖನಗಳಿಗೆ ಹಲವು ವರ್ಷ ವಯಸ್ಸಾಗಿದೆ. ಅವರು ಅಲ್ಲಲ್ಲಿ ಬರೆದ ಲೇಖನಗಳು ಮತ್ತು ಆಗೀಗ ಮಾಡಿದ ಭಾಷಣಗಳನ್ನು ಒಟ್ಟು ಸೇರಿಸಿ ಈ ಪುಸ್ತಕ ಪ್ರಕಟಿಸಲಾಗಿದೆ. ಲೇಖನಗಳಿಗೆ ವಯಸ್ಸಾಗಿದ್ದರೂ ಅವುಗಳಲ್ಲಿನ ವಿಷಯವಸ್ತು ತನ್ನ ತಾಜಾತನವನ್ನು ಹಾಗೆಯೇ ಉಳಿಸಿಕೊಂಡಿರುವುದು ಇಲ್ಲಿನ ವಿಶೇಷ. ಅದು ಆಯ್ದುಕೊಂಡ ವಿಷಯದ ವ್ಯಾಪ್ತಿ ಮತ್ತು ದೇವನೂರರ ಬರವಣಿಗೆಯ ಜನಪ್ರಿಯತೆ ಎರಡನ್ನೂ ಸೂಚಿಸುತ್ತದೆ.


            ಪುಸ್ತಕದ ಪ್ರಥಮದಲ್ಲಿ ದೇವನೂರ ಮಹಾದೇವ ಅವರು  ನನ್ನ ದೇವರು, ಕೊಳಕು ಎಲ್ಲಿದೆ, ಯಾರಿಗೆ ಯಾವ ಚಿಕಿತ್ಸೆ, ಅಹಿಂಸೆಯ ಹುಡುಕುತ್ತ, ಬುದ್ಧನೆಡೆಗೆ ಒಂದು ನಡಿಗೆ ಇತ್ಯಾದಿ ಲೇಖನಗಳಲ್ಲಿ ತಮ್ಮನ್ನು ಕಾಡಿದ ಅನೇಕ ಸಂಗತಿಗಳನ್ನು ಅಕ್ಷರಗಳಲ್ಲಿ  ಹಿಡಿದಿಟ್ಟಿರುವರು. ಬುದ್ಧ, ಗಾಂಧಿ, ಪರಮಹಂಸ, ಅಂಬೇಡ್ಕರ್ ರಲ್ಲಿನ  ಸತ್ಯ ಹಾಗೂ ಸಮಾನತೆಯ ಸಮಷ್ಟಿಯನ್ನು ಗುರುತಿಸುವ ಪ್ರಯತ್ನ ನಡೆಯಬೇಕಿದೆ ಎಂದೆನ್ನುವ ಲೇಖಕರು ಇವರೆಲ್ಲರ ಅಸ್ತಿತ್ವ ಪುಣ್ಯದಂತೆ ಕಾಣಿಸುತ್ತದೆ ಎಂದು ಕೃತಜ್ಞತೆ ಮೆರೆವರು. ಒಂದು ಸಮುದಾಯದ ಬದುಕನ್ನು ಬಂಡೆಗಳಿಗೆ ಹೋಲಿಸುತ್ತಲೇ ಮೂರ್ಛಾವಸ್ಥೆಯಲ್ಲಿರುವ  ನಮ್ಮೊಳಗಿನ  ಕಾರುಣ್ಯವನ್ನು ಎಚ್ಚರಗೊಳಿಸಬೇಕಾಗಿದೆ ಎಂದು ಇನ್ನೊಂದು ಸಮುದಾಯಕ್ಕೆ ಕರೆ ಕೊಡುತ್ತಾರೆ. ಕೆಲವರಲ್ಲಿನ ಕಾರುಣ್ಯ ಎಚ್ಚರಗೊಳ್ಳದೆ ಇದ್ದಲ್ಲಿ ಹಲವರ ಬದುಕು ಬಂಡೆಗಳ ಮೇಲೆಯೇ ಚಿಗುರೊಡೆಯಬೇಕಾಗಬಹುದು ಎನ್ನುವ ಆತಂಕ ಲೇಖಕರದು. ಒಟ್ಟಿನಲ್ಲಿ ಕೀಳು ಹುಚ್ಚುರೋಗದಿಂದ ಬಿಡುಗಡೆ ಪಡೆದು ಮೇಲು ಹುಚ್ಚುರೋಗದವರನ್ನು ವಿಮೋಚನೆಗೊಳಿಸಿದಾಗಲೇ ಸಮಾನತೆ ಸಾಧ್ಯ ಎನ್ನುವುದು ಇಲ್ಲಿನ ಎಲ್ಲ ಲೇಖನಗಳ ತಿರುಳಾಗಿದೆ.


            ತಳಸಮುದಾಯದ ಬದುಕಿನ ದಾರುಣತೆಯ ಜೊತೆಗೆ  ಅಸ್ಪೃಶ್ಯ ಸಮುದಾಯದೊಳಗಿನ ಭಿನ್ನಾಭಿಪ್ರಾಯಗಳು ಮತ್ತು ಅವರೊಳಗಿನ ಒಡಕುಗಳ ಕುರಿತು ಮಾತನಾಡಲು ದೇವನೂರ ಮಹಾದೇವ ಹಿಂಜರಿಯುವುದಿಲ್ಲ. ಸೌಲಭ್ಯಗಳಡಿ ಒಂದು ಬಹಿಷ್ಕೃತ ಬದುಕನ್ನು ಬಾಳುವುದಕ್ಕಿಂತ ಅದನ್ನು ಪ್ರತಿಭಟಿಸುವ ಮನೋಭಾವ ಜಾಗೃತಗೊಳ್ಳಬೇಕು ಎಂದು ಕರೆ ಕೊಡುವರು. ಇನ್ನೊಂದೆಡೆ ದಲಿತ ನಾಯಕರಲ್ಲಿನ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜಕೀಯ ವಾಂಛೆ, ರಾಜಕಾರಣವೊಂದು ವ್ಯವಸ್ಥಿತವಾಗಿ ಚಳುವಳಿಯನ್ನು ದಮನಗೊಳಿಸುತ್ತಿರುವ ಕುರಿತು ಅವರ ಆತಂಕ ಮತ್ತು ವೇದನೆ ಇಲ್ಲಿ ವ್ಯಕ್ತಗೊಳ್ಳುತ್ತದೆ. ಎಡಗೈ, ಬಲಗೈ, ಹೆಬ್ಬೆರಳು, ಕಿರು ಬೆರಳು ಎನ್ನುವ ನೂರೆಂಟು ಭಿನ್ನತೆಗಳು ಇಡೀ ಅಸ್ಪೃಶ್ಯ ಸಮುದಾಯವನ್ನೇ ಸಾಯಿಸಬಹುದು ಎಂದು ಚಿಂತಿಸುವ ದೇವನೂರ ಈ ಭಿನ್ನತೆಗಳನ್ನು ಕಿತ್ತೆಸೆದರೆ ಮಾತ್ರ ನಮ್ಮ ಉಳಿವು ಎಂದು ಹೇಳಲು ಮರೆಯುವುದಿಲ್ಲ. ಅವಮಾನಿತರು (ದಲಿತರು) ಮತ್ತು ಅನುಮಾನಿತರು (ಮುಸ್ಲಿಮರು) ಜೊತೆಗೂಡಿ ಹೋರಾಡಿದಲ್ಲಿ ಜಾತಿರಹಿತ, ವರ್ಗರಹಿತ ಸಮಾಜ ಸ್ಥಾಪನೆ ಸಾಧ್ಯ ಎನ್ನುವ ಆಶಯವನ್ನು ಲೇಖಕರು ವ್ಯಕ್ತಪಡಿಸುವರು.


           ಪುಸ್ತಕದಲ್ಲಿ  ಹೆಚ್ಚುತ್ತಿರುವ ಕೋಮುವಾದ ಮತ್ತು ಅದು ತಂದೊಡ್ಡುತ್ತಿರುವ ಸಮಸ್ಯೆಗಳನ್ನು ಕುರಿತಾದ ಲೇಖಕರ ಕಾಳಜಿ ಕೂಡ  ವ್ಯಕ್ತವಾಗಿದೆ. ಮತಾಂಧತೆ ಹೀಗೇ ಮುಂದುವರೆದಲ್ಲಿ ಅದು ಭಾರತ ಎಂಬ ವೃಕ್ಷದ ಬೇರುಗಳನ್ನು ಕತ್ತರಿಸಿ ಹಾಕುತ್ತದೆ ಎನ್ನುವ ಕಳವಳ ಅವರದು. ಹಿಂದಿನ ಜನ್ಮದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡಿದ ಕಾರಣಕ್ಕಾಗಿ ಈ ಜನ್ಮದಲ್ಲಿ ಕರ್ಮಕಳೆಯಲು ನಾನು ಅಸ್ಪೃಶ್ಯನಾಗಿ ಹುಟ್ಟಿರಬಹುದು ಎಂದು ಎಚ್ಚರಿಸುವ ಮಹಾದೇವ ಮಠಗಳು ಜಾತಿ, ಧರ್ಮದಿಂದ ದೂರಾಗಿ ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿ ಎಂದು ಆಶಿಸುವರು.  ತಳ ಸಮುದಾಯಗಳ ಬದುಕಿನ ತಲ್ಲಣಗಳ ಆಚೆಯೂ ಇಲ್ಲಿ ಮಹಾದೇವ ಖಾಸಗೀಕರಣ, ಜಾಗತೀಕರಣ, ಉದಾರೀಕರಣ, ಅಪವಿತ್ರಗೊಳ್ಳುತ್ತಿರುವ ರಾಜಕಾರಣ ಮತ್ತು ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಕುರಿತು ಬರೆಯುತ್ತ ಇದು ಹೀಗೇ ಮುಂದುವರೆದರೆ ಏನಾಗಬಹುದು ಎಂದು ಚಿಂತಿಸುತ್ತಾರೆ. ಜಾಗತೀಕರಣ ಮತ್ತು ಖಾಸಗೀಕರಣ ತಳ ಸಮುದಾಯಗಳ ಜೊತೆಗೆ ಇಡೀ ದೇಶವನ್ನೇ ನುಂಗಲು ಹೊಂಚು ಹಾಕುತ್ತಿರುವ ಸಾಧ್ಯತೆಯನ್ನು ವಿವರಿಸುತ್ತಾರೆ. ಇಂಗ್ಲಿಷನ್ನು ಭಾಷೆಯಾಗಿ ಒಂದನೇ ತರಗತಿಯಿಂದಲೇ ಕಲಿಸದೆ ಇದ್ದಲ್ಲಿ ಇಂಗ್ಲಿಷ್ ದಾಹ ಮಾತೃ ಭಾಷಾ ಶಿಕ್ಷಣ ಮಾಧ್ಯಮವನ್ನೇ  ತಿಂದು ಹಾಕಿಬಿಡುವ ಅಪಾಯವಿದೆ ಎನ್ನುವ ಕಿವಿಮಾತು ಇಲ್ಲಿದೆ.


            ಪುಸ್ತಕದ ಒಂದು  ಭಾಗದಲ್ಲಿ ದೇವನೂರ ಮಹಾದೇವ ಕನ್ನಡದ ಹಿರಿಯ ಬರಹಗಾರರು, ಚಿಂತಕರು, ಚಳುವಳಿಗಾರರು ಮತ್ತು ರಾಜಕೀಯ ನಾಯಕರುಗಳೊಂದಿಗಿನ ಒಡನಾಟ ಮತ್ತು ಅವರ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿರುವರು. ಇಲ್ಲಿ ಎಲ್.ಬಸವರಾಜು, ಪಿ.ಲಂಕೆಶ್, ಯು. ಆರ್. ಅನಂತ ಮೂರ್ತಿ, ದೇವರಾಜ ಅರಸು, ಎಂ. ಡಿ. ನಂಜುಂಡ ಸ್ವಾಮಿ ಕುರಿತು ಲೇಖನಗಳಿವೆ. ಪ್ರೊ. ಎಲ್. ಬಸವರಾಜು ಅವರನ್ನು ಕುರಿತು ಬರೆಯುವಾಗ ಮಹಾದೇವ ಹೆಚ್ಚು ಆರ್ದ್ರರಾಗುತ್ತಾರೆ. ಅವರೊಳಗಿನ ಬೆರಗು, ಪ್ರತಿಭೆ, ಜೀವನ ಪ್ರೀತಿ ಎಲ್ಲವನ್ನೂ ನೆನಪಿಸಿಕೊಳ್ಳುತ್ತಾರೆ. ಅದೇ ಲಂಕೇಶರ ಬಗ್ಗೆ ಬರೆಯುವಾಗ ಗೊತ್ತಿಲ್ಲದಂತೆಯೇ ಒಂದು ತುಂಟತನ ಅಲ್ಲಿ ಹಣಿಕಿಕ್ಕುತ್ತದೆ. ಜೊತೆಗೆ ವರ್ತಮಾನದ ತಲ್ಲಣಗಳಿಗೆ ಪ್ರತಿಕ್ರಿಯಿಸಿ ಪ್ರಭಾವಿಸಿದ ಲೇಖಕ ಕನ್ನಡದಲ್ಲಿ ಲಂಕೇಶ್ ಬಿಟ್ಟರೆ ಬೇರೊಬ್ಬರಿಲ್ಲ ಎನ್ನುವ ಮೆಚ್ಚುಗೆಯ ಮಾತುಗಳೂ ಅಲ್ಲಿವೆ. ಅನಂತಮೂರ್ತಿ ಮತ್ತು ದೇವರಾಜ ಅರಸು ಅವರೊಳಗಿನ ತಳಸಮುದಾಯಗಳ ಬಗೆಗಿನ ಪ್ರೀತಿಯನ್ನು ಪರಿಚಯಿಸುತ್ತಾರೆ. ಇನ್ನು ಎಂ. ಡಿ. ನಂಜುಂಡ ಸ್ವಾಮಿ ಅವರೊಡನೆ ದೇವನೂರರ ಸಂದರ್ಶನ ಅತ್ಯಂತ ಚೇತೋಹಾರಿಯಾಗಿದೆ. ಸಂದರ್ಶನದುದ್ದಕ್ಕೂ ಮಹಾದೇವ ನಂಜುಂಡಸ್ವಾಮಿ ಅವರನ್ನು ಕೆಣಕುತ್ತ ಮತ್ತು ಕಾಲೆಳೆಯುತ್ತಲೇ ಹೋಗುತ್ತಾರೆ. ಇದೊಂದು ಕತ್ತಿವರಸೆಯಂತೆ ಓದುಗನಿಗೆ ಭಾಸವಾಗುತ್ತದೆ. ಪಂಪ, ಚದುರಂಗ, ಖಾಸನೀಸರನ್ನೂ ಲೇಖಕರು ಇಲ್ಲಿ ಸ್ಮರಿಸಿಕೊಂಡಿರುವರು. ಲೋಹಿಯಾರ ಕುರಿತು ಮಹಾದೇವರೇ ಅನುವಾದಿಸಿದ ಲೇಖನದಲ್ಲಿ ಲೋಹಿಯಾರ ವ್ಯಕ್ತಿತ್ವ ಹಾಗೂ ಹೋರಾಟವನ್ನು ಅತ್ಯಂತ ಅರ್ಥಪೂರ್ಣವಾಗಿ ಚಿತ್ರಿಸಲಾಗಿದೆ.


        ಒಂದು ಹಂತದಲ್ಲಿ  ದೇವನೂರ ಮಹಾದೇವ ಅಸ್ಪೃಶ್ಯತಾ ಆಚರಣೆಗೆ ಕುಮ್ಮಕ್ಕು ನೀಡುತ್ತಿರುವ ವ್ಯವಸ್ಥೆಗೆ ಮುಖಾಮುಖಿಯಾಗಿ ನಿಲ್ಲುತ್ತಾರೆ. ವ್ಯವಸ್ಥೆಯೊಂದಿಗಿನ ಲೇಖಕರ ಸುದೀರ್ಘ ಹೋರಾಟವನ್ನು ನಾವು ಇಲ್ಲಿ ಕಾಣಬಹುದು. ಪ್ರತಿಯೊಂದು ಹೋರಾಟದ ಅನುಭವವನ್ನು ಅಕ್ಷರ ರೂಪಕ್ಕಿಳಿಸಿ ತಳಸಮುದಾಯದ ತಲ್ಲಣಗಳನ್ನು ಓದುಗರೆದುರು ಹಿಡಿದು ನಿಲ್ಲಿಸುವ ಪ್ರಯತ್ನ ಇಲ್ಲಿದೆ. ಜೀತ ಪದ್ಧತಿ, ದಲಿತರ ವಸತಿ ಸಮಸ್ಯೆ, ಜಾತಿ ಸಂಘರ್ಷ ಇತ್ಯಾದಿ ಸಂದರ್ಭಗಳಲ್ಲಿನ ಹೋರಾಟ ಹಾಗೂ ರಾಜಕೀಯ ಬೆಳವಣಿಗೆಗಳಿಗೆ ತಾವು ಸಾಕ್ಷಿಯಾಗಿದ್ದನ್ನು ಮಹಾದೇವ ದಾಖಲಿಸಿರುವರು.


         ಕೃತಿಯ ಕೊನೆಯ ಭಾಗದಲ್ಲಿ ಲೇಖಕರು ಸಮಾನತೆಯ ಅಗತ್ಯವನ್ನು ಮನಗಾಣಿಸುತ್ತ ಅದಕ್ಕಾಗಿ ಆಗ ಬೇಕಾದ ಬದಲಾವಣೆಗಳನ್ನು ಕುರಿತು ಹೇಳುತ್ತಾರೆ. ಸಮಾನತೆಗಾಗಿ ಬೇಕಿರುವುದು ಯಾವ ಧರ್ಮ, ಜಾತಿಯಲ್ಲ ಬೇಕಿರುವುದು ಮಾನವೀಯತೆ ಎನ್ನುವುದು ಮಹಾದೇವರ ಕಳಕಳಿಯಾಗಿದೆ. ಊರಾಚೆ ಪರಕೀಯವಾಗಿ ಬಿದ್ದು ನರಳುತ್ತಿರುವ ಅಸ್ಪೃಶ್ಯತೆಯ ಆಕ್ರಂದನ, ಕೋಪ, ತಾಪ ಅದು ಪ್ರೀತಿಗಾಗಿ ಮಾನವತೆಯ ಸ್ಪರ್ಶಕ್ಕಾಗಿ ಎನ್ನುವುದನ್ನು ಹೇಳಲು ಲೇಖಕರು ಮರೆಯುವುದಿಲ್ಲ. ಸಮಾನತೆಗಾಗಿ ಮಾನವೀಯತೆಯ ಜೊತೆಗೆ ಒಂದಿಷ್ಟು ಅಗತ್ಯಗಳನ್ನು ಮನಗಾಣಿಸಿ ಕೊಡುವರು. ಮೀಸಲಾತಿ, ಖಾಸಗಿಯಲ್ಲಿ ಮೀಸಲಾತಿ, ಒಳಮೀಸಲಾತಿ ನಿಷೇಧ, ಗಾಂಧಿ ಮತ್ತು ಅಂಬೇಡ್ಕರ್ ವಿಚಾರಗಳು ಒಂದುಗೂಡುವಿಕೆ, ವಿಕೇಂದ್ರೀಕರಣ, ಎಲ್ಲರಿಗೂ ಉದ್ಯೋಗ, ಸ್ವಾವಲಂಬನೆ ಇವುಗಳಿಂದ ಸಮಾನತೆ ತರಲು ಸಾಧ್ಯ ಎನ್ನುವ ಅಭಿಪ್ರಾಯ ಲೇಖಕರದಾಗಿದೆ.

ದೇವನೂರರ ಗಾಂಧಿ ಪ್ರೀತಿ


              ದೇವನೂರ ಮಹಾದೇವ ಅಂಬೇಡ್ಕರ್ ರನ್ನು ಪ್ರೀತಿಸುವಷ್ಟೇ ಗಾಂಧಿಯನ್ನು ಕೂಡ ಉತ್ಕಟವಾಗಿ ಪ್ರೀತಿಸಬಲ್ಲರು ಎನ್ನುವುದು ಈ ಪುಸ್ತಕದಲ್ಲಿನ ಕೆಲವು ಅಧ್ಯಾಯಗಳನ್ನು ಓದಿದಾಗ ವ್ಯಕ್ತವಾಗುತ್ತದೆ. ಹೀಗೆ ನಾನು ಹೇಳಲು ಕಾರಣ ಈಗಿನ ದಲಿತ ಯುವಕರು ಅಂಬೇಡ್ಕರ್ ರನ್ನು ಪ್ರೀತಿಸುವುದರ ಜೊತೆಗೆ ಗಾಂಧಿಯನ್ನು ದ್ವೇಷಿಸುತ್ತಿರುವರು. ಗಾಂಧೀಜಿಯ ದಲಿತೋದ್ಧಾರದ ಕನಸು ಹಾಗೂ ಅದಕ್ಕಾಗಿ ಮಾಡಿದ ಪ್ರಯತ್ನ ಇಂದಿನ ದಲಿತ ಯುವಕರಿಗೆ ಪರಿಚಯಿಸುವ ಕೆಲಸವಾಗಬೇಕಿದೆ. ಇಂಥದ್ದೊಂದು ಕೆಲಸ ದಲಿತ ಲೇಖಕರಿಂದಲೇ ನಡೆದಲ್ಲಿ ಅದು ಹೆಚ್ಚು ಪರಿಣಾಮಕಾರಿಯಾಗಬಲ್ಲದು. 'ಎದೆಗೆ ಬಿದ್ದ ಅಕ್ಷರ' ಕೃತಿಯಲ್ಲಿ ದೇವನೂರ ಮಹಾದೇವ ಗಾಂಧೀಜಿ ಬಗ್ಗೆ ಬರೆಯುತ್ತ ಅಂಥದ್ದೊಂದು ಪ್ರಕ್ರಿಯೆಗೆ ಚಾಲನೆ ನೀಡಿರುವರೆಂದೇ ನನ್ನ ಭಾವನೆ.

           'ಸಾಯಲು ಮಾನಸಿಕವಾಗಿ ದೃಢವಾಗಿ ಸಿದ್ಧನಾದವನು ಮಾತ್ರ ಗಾಂಧಿಯಾಗಬಲ್ಲ. ಅಹಿಂಸಾವಾದಿಯಾದ ಗಾಂಧಿಯ ದೇಹದ ಒಂದು ರೋಮದಲ್ಲೂ ಹೇಡಿತನದ ಸುಳಿವು ಇಲ್ಲದಿರುವುದು ನನ್ನನ್ನು ನಡುಗಿಸಿತು' ಎಂದು ದೇವನೂರ ಮಹಾದೇವ ಗಾಂಧಿ ಕುರಿತು ಬರೆಯುತ್ತಾರೆ. ಇಡೀ ದಲಿತ ಸಂಘರ್ಷ ಸಮಿತಿ 'ಗಾಂಧಿ' ಸಿನಿಮಾ ನೋಡದಂತೆ ಬಹಿಷ್ಕರಿಸಿದಾಗ ಗಾಂಧಿ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಮಹಾದೇವ ಆ ಚಿತ್ರವನ್ನು ವೀಕ್ಷಿಸುತ್ತಾರೆ. ಗಾಂಧಿ ಮತ್ತು ಅಂಬೇಡ್ಕರ್ ರ ಸಮಾನತೆಯ ಹೋರಾಟ ಮಹಾದೇವರಿಗೆ ಹೀಗೆ ಕಾಣಿಸುತ್ತದೆ 'ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನ ಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವವನಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಒಳಗಿದ್ದ ಗಾಂಧಿಗೂ ಬಿದ್ದು ರಕ್ತ ಚೆಲ್ಲಿರಬಹುದು. ಇದನ್ನು ಕಂಡು ಹೊರಲೋಕವು ಗಾಂಧಿಗೂ ಅಂಬೇಡ್ಕರ್ ಗೂ ಮಾರಾಮಾರಿ ಹೊಡೆದಾಟ ಎನ್ನಬಹುದು. ಆದರೆ ಇಬ್ಬರೂ ಮಾಡುತಿದ್ದುದು ಹೆಚ್ಚು ಕಮ್ಮಿ ಒಂದೇ ಕೆಲಸವನ್ನಲ್ಲವೇ'. ಇನ್ನೂ ಮುಂದುವರೆದು ಗಾಂಧಿಯ ವ್ಯಕ್ತಿತ್ವವನ್ನು ಕಟ್ಟಿಕೊಡಲು ಪ್ರಯತ್ನಿಸುತ್ತಾರೆ 'ಗಾಂಧಿ ಅಸಮಾನತೆಯ ವ್ಯವಸ್ಥೆ ಎಂಬ ಬಚ್ಚಲು ಕೊಳಕು ನೀರನ್ನು ಭಟ್ಟಿ ಇಳಿಸುತ್ತ ತಿಳಿಗೊಳಿಸುತ್ತಿದ್ದರು. ಚಿಟ್ಟೆಯಾಗಲಾರದ ಬಚ್ಚಲು ಹುಳುಗಳಿಗೆ ಉಸಿರು ಕಟ್ಟಿತ್ತು. ಗಾಂಧಿಯನ್ನು ಹೀಗಲ್ಲದೆ ಬೇರೆ ಯಾವ ರೀತಿ ಅರ್ಥಮಾಡಿಕೊಳ್ಳಲು ಸಾಧ್ಯ'.

           ಹೀಗಿದ್ದೂ ಗಾಂಧಿ ಯಾಕೆ ಅಪಾರ್ಥಕ್ಕೆ ಒಳಗಾದರು? ಎನ್ನುವ ಪ್ರಶ್ನೆ ಮಹಾದೇವರ ಮನದಲ್ಲಿ ಮೂಡಿ ಕಾಡುತ್ತದೆ. ಅದಕ್ಕೆ ಪರಿಹಾರವನ್ನೂ ಅವರೇ ಸೂಚಿಸುತ್ತಾರೆ 'ಗಾಂಧಿಯನ್ನು ದಲಿತರು ಹೇಗೆ ಸ್ವೀಕರಿಸಬೇಕು? ಒಂದು ಮಾಡಬಹುದು- ಗಾಂಧಿ ಸಾಹಿತ್ಯವನ್ನು ದಲಿತನ ಒಡಲಿಗೆ ಹಿತಾಸಕ್ತಿಗೆ ಎಷ್ಟು ಒಗ್ಗುತ್ತದೋ ಅಷ್ಟನ್ನು ಮಾತ್ರ ಸಂಪಾದಿಸಿ ಇಟ್ಟುಕೊಂಡರೆ ಅಲ್ಲಿಂದ ಗಾಂಧಿ ಮತ್ತೆ ಹುಟ್ಟುತ್ತಾನೆ. ಇಡೀ ಜಗತ್ತಿನ ಹಿತವೂ ಇದರೊಳಗೆ ಇರಬಹುದು'.

ಒಂದಿಷ್ಟು ಝಲಕ್ ಗಳು 


        ಒಂದಿಷ್ಟು ಎದೆಗೆ ಬಿದ್ದ ನುಡಿಗಳು ಓದುಗರಿಗಾಗಿ

# ಗಾಂಧಿ ಕಾಠಿಣ್ಯದ ತಂದೆಯಂತೆ, ಜೆಪಿ ಅಸಹಾಯಕ ತಾಯಿ, ವಿನೋಬಾ ಮದುವೆಯಾಗದ ವೃತನಿಷ್ಠ ಅಕ್ಕನಂತೆ, ಲೋಹಿಯಾ ಊರೂರು ಅಲೆಯುವ ಮನೆ ಸೇರದ ಅಲೆಮಾರಿ ಮಗ, ಅಂಬೇಡ್ಕರ್ ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆ ಹೊರಗೆ ಇರುವ ಮಗ. ಇದು ನಮ್ಮ ಕುಟುಂಬ. ನಾವು ಇಲ್ಲಿನ ಸಂತಾನ.

# ದೈಹಿಕವಾಗಿ ದುರ್ಬಲನಾದ ಶೋಷಿತನ ನಿಜದ ಎದುರು ದೈಹಿಕ ಪ್ರಬಲನಾದ ಶೋಷಕ ತಂತಾನೆ ಕುಸಿಯುತ್ತಾನೆ.

# ಒಬ್ಬನ ಭುಜದ ಮೇಲೆ ಇನ್ನೊಬ್ಬ ಕೂತಿದ್ದಾನೆ. ಮೇಲೆ ಕೂತಿರುವವನು ತನ್ನನ್ನು ಹೊತ್ತವನ ಭಾರವನ್ನು ತಾನೇ ಹೊತ್ತಿರುವುದು ಎಂದು ಆ ಭಾರ ಹೊತ್ತವನಿಗೆ ನಂಬಿಸುತ್ತಿದ್ದಾನೆ. ದುರಂತವೆಂದರೆ ಅದನ್ನೇ ತಾನೂ ನಂಬುತ್ತಿದ್ದಾನೆ.

# ನೋಡುವ ಕ್ರಮ ಬದಲಾಗುವುದಾದರೆ ಬದಲಾವಣೆಯ ದಾರಿಗಳೂ ತಂತಾನೆ ತೆರೆದುಕೊಳ್ಳಬಹುದು.

# ಮಾತೃಭೂಮಿಯನ್ನೇ ಮಾರ್ಕಂಡು ತಿನ್ನುವವರಿಗೆ ಮಾತೃ ಭಾಷೆ ಯಾವ ಲೆಕ್ಕ.

# ಈ ಎನರ್ಜಿಯ ಚೈತನ್ಯ ಉಕ್ಕಿ ಹರಿಯಲು ಲಂಕೇಶರಿಗೆ ಒಂದು ಹುಲ್ಲುಕಡ್ಡಿಯಾದರೂ ವೈರಿಯಾಗಿ ಅವರ ಎದುರಿಗೆ ಬಂದು ತಲೆ ಕುಣಿಸಬೇಕಿತ್ತು, ತೊಡೆ ತಟ್ಟ ಬೇಕಿತ್ತು.

# ಗುಲಾಮನನ್ನು ಪಳಗಿಸಲು ಹೆಣಗುವ ಮಾಲೀಕನ ಮನಸ್ಸಿನ ತುಂಬಾ ಗುಲಾಮತನ ತುಂಬಿರುತ್ತದೆ.

# ಕಠೋರ ಮಡಿ ಆಚರಿಸುವವರನ್ನು ಪಳೆಯುಳಿಕೆ ಎಂದು ಭಾವಿಸಿದರೆ ಸಮಸ್ಯೆ ಇಲ್ಲ. ಆದರೆ ಅವರ ಮಡಿಯನ್ನು ಪಾರಂಪರಿಕ ಮೌಲ್ಯ ಎಂದು ಗೌರವಿಸಿದರೆ ಅಪಾಯ ಆರಂಭವಾಗುತ್ತದೆ.


ಕೊನೆಯ ಮಾತು 


           'ಎದೆಗೆ ಬಿದ್ದ ಅಕ್ಷರ' ಕೃತಿಯುದ್ದಕ್ಕೂ ತಳಸಮುದಾಯಗಳ ಬದುಕಿನ ಸಮಸ್ಯೆಗಳು ಅನಾವರಣಗೊಳ್ಳುತ್ತ ಹೋಗುತ್ತವೆ. ಜೊತೆಗೆ ಅಲ್ಲಲ್ಲಿ   ಲೇಖಕರು  ಖಾಸಗೀಕರಣ,  ಜಾಗತೀಕರಣ, ರೈತರ ಸಮಸ್ಯೆಗಳು, ಕನ್ನಡ ಮಾಧ್ಯಮದ ಹಿನ್ನಡೆ  ಇತ್ಯಾದಿ ಸಂಗತಿಗಳನ್ನೂ  ಚರ್ಚಿಸುವರು. ಒಟ್ಟಾರೆ ಬರಹಗಾರ ತನ್ನ ಬರವಣಿಗೆಯ ಮೂಲಕ ಪ್ರತಿಭಟನೆಯ ಕಾವನ್ನು ಕಾಯ್ದುಕೊಳ್ಳಬೇಕೆನ್ನುವ ಸಿದ್ಧಾಂತವನ್ನು ದೇವನೂರ ಮಹಾದೇವರ ಬರವಣಿಗೆ ಕಾಲಕಾಲಕ್ಕೆ ಎತ್ತಿಹಿಡಿಯುತ್ತಲೇ ಬಂದಿದೆ. ಹಾಗೆಂದ ಮಾತ್ರಕ್ಕೆ ದೇವನೂರ ಮಹಾದೇವ ವಿತಂಡವಾದಿಯಾಗಲಿ ಇಲ್ಲವೇ ಖಂಡಿತವಾದಿಯಾಗಲಿ ಅಲ್ಲ. ಪ್ರಕಾಶಕರು ಹೇಳುವಂತೆ ಮಾತಿನಲ್ಲಾಗಲಿ, ಬದುಕಿನಲ್ಲಾಗಲಿ ಯಾರನ್ನೂ, ಯಾವುದನ್ನೂ ನೋಯಿಸುವ ಜಾಯಮಾನ ಮಹಾದೇವ ಅವರದಲ್ಲ. ಅದಕ್ಕೆಂದೇ ಇಲ್ಲಿನ ಲೇಖನಗಳಿಗೆ  ಧುಮ್ಮಿಕ್ಕಿ ಹರಿಯುವ ಜಲಪಾತದ ವೇಗವಿಲ್ಲ. ಇಲ್ಲಿನ ಬರಹದ ಪ್ರತಿಭಟನೆಗೆ ಶಾಂತವಾಗಿ ಹರಿಯುವ ನದಿಯ ಮನಸ್ಥಿತಿ ಇದೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



Saturday, June 1, 2013

ಕಟ್ಟಿದ್ದನ್ನು ಕೆಡವಿದರು

     




           ಭಾರತ ಬಹುಧರ್ಮಗಳ ಸಂಗಮ. ಇದು ಅನೇಕತೆಯಲ್ಲಿ  ಏಕತೆಯನ್ನು ಮೈಗೂಡಿಸಿಕೊಂಡ ದೇಶ. ಇಲ್ಲಿ ಬಹುಸಂಖ್ಯಾತ ಹಿಂದೂಗಳಿರುವಂತೆ ಕ್ರೈಸ್ತರು, ಮುಸ್ಲಿಮರು, ಬೌದ್ಧರು, ಪಾರ್ಸಿಗಳು ಹೀಗೆ ಹಲವಾರು ಧರ್ಮೀಯರು ಬದುಕು ಕಟ್ಟಿಕೊಂಡಿರುವರು. ದೇಶದ ಸಾಹಿತ್ಯ, ವಿಜ್ಞಾನ, ಕಲೆ, ಸಂಸ್ಕೃತಿ ಎಲ್ಲ ಧರ್ಮೀಯರ ಕೊಡುಗೆಗಳಿಂದ ಶ್ರೀಮಂತ ಮತ್ತು ಸಂಪದ್ಭರಿತವಾಗಿವೆ. ಶರಣರು ಹಾಗೂ ಸೂಫಿಗಳು ಕೂಡಿಯೇ ಈ ನಾಡಿನ ಸಾಮಾಜಿಕ ಚಳುವಳಿಯನ್ನು ಅನನ್ಯವಾಗಿ ಕಟ್ಟಿರುವರು. ಶಂಕರಾಚಾರ್ಯ, ಸ್ವಾಮಿವಿವೇಕಾನಂದ, ಗೌತಮ ಬುದ್ಧ, ಮಹಾವೀರನಂಥ ದಾರ್ಶನಿಕರು  ಜನ್ಮತೆಳೆದ ನೆಲವಿದು. ಇಲ್ಲಿ ದಸರಾ, ದೀಪಾವಳಿ ಹಬ್ಬಗಳ ಜೊತೆಗೆ ಮೊಹರಂ, ರಂಜಾನ್, ಕ್ರಿಸ್ ಮಸ್ ಹಬ್ಬಗಳನ್ನೂ ಅತ್ಯಂತ ವೈಶಿಷ್ಟ್ಯಪೂರ್ಣವಾಗಿ ಆಚರಿಸುವರು. ಭಾರತದ ಸಂವಿಧಾನ ಎಲ್ಲ ಧರ್ಮೀಯರ ಬಾಳ್ವೆಗೆ ಇಲ್ಲಿ ಅವಕಾಶ ಮಾಡಿಕೊಟ್ಟಿದೆ. ಹಿಂದೂ ಧರ್ಮೀಯರು ಬಹುಸಂಖ್ಯಾತರಾಗಿದ್ಡಾಗೂ ಅನ್ಯಧರ್ಮಿಯರಿಗೆ ಅವರದೇ ನೀತಿ ಸಂಪ್ರದಾಯಗಳ ಬದುಕಿಗೆ ಇಲ್ಲಿ ಅವಕಾಶವಿದೆ. ಹೀಗೆ ವಿವಿಧತೆಯಲ್ಲಿ ಏಕತೆಯನ್ನು ಕಂಡ ರಾಷ್ಟ್ರ ಭಾರತ ಬಿಟ್ಟರೆ ವಿಶ್ವದಲ್ಲಿ ಬೇರೊಂದಿಲ್ಲ. 

ಈಗ ಒಂದಿಷ್ಟು ಹಿಂದೆ ಹೋಗೋಣ 


           'ಮೊಹರಂ' ಮುಸ್ಲಿಮರು ಆಚರಿಸುವ ವಿಶಿಷ್ಠ ಹಬ್ಬಗಳಲ್ಲೊಂದು. ನಗರ ಮತ್ತು ಹಳ್ಳಿಗಳು ಸೇರಿದಂತೆ ಎಲ್ಲಕಡೆಯೂ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುವರು. ನಾವು ಚಿಕ್ಕವರಾಗಿದ್ದಾಗ ಆ ಹಬ್ಬದ ದಿನಗಳಲ್ಲಿ ಪೀರದೇವರನ್ನು ಪ್ರತಿಷ್ಟಾಪಿಸಿದ ಅಷ್ಟೂ ದಿನಗಳು ಬೆಳೆಗ್ಗೆ ಹಾಗೂ ರಾತ್ರಿ ಹೋಗಿ ನಮಸ್ಕರಿಸಿ ಬರುತ್ತಿದ್ದೇವು. ಆ ಘಳಿಗೆ ಅಲ್ಲೇ ಪಕ್ಕದಲ್ಲೇ ಕುಳಿತಿರುತ್ತಿದ್ದ ಮುಲ್ಲಾ ತಲೆಯ ಮೇಲೆ ನವಿಲು ಗರಿಕೆಗಳಿಂದ ಆಶೀರ್ವದಿಸಿ ಕೈಗೆ ಪ್ರಸಾದದ ರೂಪದಲ್ಲಿ ಸಕ್ಕರೆಯನ್ನು ಹಾಕಿದಾಗ ನಮ್ಮಲ್ಲಿ ಒಂದು ರೀತಿಯ ಧನ್ಯತೆ ಮನೆಮಾಡುತ್ತಿತ್ತು. ಪೀರದೇವರ ಮೆರವಣಿಗೆಯ ಕೊನೆಯ ದಿನದಂದು ಇಡೀ ಊರಿಗೆ ಊರೇ ಶೃಂಗಾರಗೊಳ್ಳುತ್ತಿತ್ತು. ಮೆರವಣಿಗೆ ತಮ್ಮ ತಮ್ಮ ಮನೆಯೆದುರು ಬರುತ್ತಿದ್ದಂತೆ ದೇವರ ಕಾಲಿಗೆ ನೀರು ಹಾಕುವುದು ಮತ್ತು ಸಕ್ಕರೆಯನ್ನು ನೈವೇದ್ಯೆಯಾಗಿ ಸಮರ್ಪಿಸುವುದನ್ನು ಊರಿನ ಎಲ್ಲರೂ ಸಂಪ್ರದಾಯದಂತೆ ಆಚರಿಸುತ್ತಿದ್ದರು.

        ರಂಜಾನ್ ಆಚರಣೆಯಂತೂ ಇನ್ನೂ ವಿಶಿಷ್ಠವಾಗಿರುತ್ತಿತ್ತು. ಆ ಸಮಯದಲ್ಲಿ ಮುಸ್ಲಿಮರು ಇಡೀ ತಿಂಗಳು ಹಗಲು ಹೊತ್ತಿನಲ್ಲಿ ಉಪವಾಸವಿರುತ್ತಿದ್ದರು. ರಾತ್ರಿ ಪ್ರಾರ್ಥನೆಯ  ನಂತರ ಅವರು ಉಪವಾಸ ಬಿಡುವ ಇಫ್ತಿಯಾರ್ ಕೂಟದಲ್ಲಿ ಅನ್ಯಧರ್ಮಿಯರೂ ಪಾಲ್ಗೊಳ್ಳುತ್ತಿದ್ದುದೊಂದು ವಿಶೇಷ. ರಂಜಾನ್ ಹಬ್ಬದ ದಿನದಂದು ಮುಸ್ಲಿಂ ಬಾಂಧವರ ಮನೆಗಳಲ್ಲಿ ಹಾಲಿನಿಂದ ತಯ್ಯಾರಿಸುವ 'ಸುರಕುಂಬಾ' ಎನ್ನುವ ಖಾದ್ಯವನ್ನು ಸೇವಿಸುವುದೇ ಒಂದು ಸಂಭ್ರಮದ ವಿಷಯವಾಗಿರುತ್ತಿತ್ತು. ಆ ದಿನ ಅವರು ಹಿಂದೂ ಬಾಂಧವರಿಗಾಗಿ ಪ್ರತ್ಯೇಕ ಅಡುಗೆಯನ್ನು (ಸಸ್ಯಾಹಾರದ) ತಯ್ಯಾರಿಸಿ ಊಟಕ್ಕೆ ಆಮಂತ್ರಿಸುತ್ತಿದ್ದರು. ಆ ದಿನ ಪರಸ್ಪರ ಆಲಂಗಿಸಿಕೊಂಡು ಶುಭಾಷಯ ವಿನಿಮಯ ಮಾಡಿಕೊಳ್ಳುವುದರಿಂದ ಇಡೀ ಊರಿನಲ್ಲಿ ಭಾತೃತ್ವದ ಭಾವನೆಯೊಂದು ಅನಾವರಣಗೊಳ್ಳುತ್ತಿತ್ತು.

       ನಾವುಗಳು ಆಚರಿಸುವ ದೀಪಾವಳಿ, ಹೋಳಿ ಹುಣ್ಣಿಮೆ, ಕಾರ ಹುಣ್ಣಿಮೆ ಹಬ್ಬಗಳಲ್ಲೂ ಮುಸ್ಲಿಮರು ಅತ್ಯಂತ ಉತ್ಸಾಹದಿಂದಲೇ ಪಾಲ್ಗೊಳ್ಳುತ್ತಿದ್ದರು. ದೀಪಾವಳಿ ಹಬ್ಬದ ಆ ಮೂರೂ ದಿನಗಳಂದು ಅವರುಗಳ ಮನೆಗಳಲ್ಲೂ ಪಟಾಕಿ ಸಿಡಿಯುತ್ತಿದ್ದವು. ಹೋಳಿ ಹುಣ್ಣಿಮೆಯಂದು ಪರಸ್ಪರ ಬಣ್ಣ ಎರೆಚಿ ಸಂಭ್ರಮಿಸುತ್ತಿದ್ದರು. ಕಾರ ಹುಣ್ಣಿಮೆಯ ದಿನ ಓಡುವ ಎತ್ತಿನ ಬಂಡೆಯ ಮೇಲೆ ನನ್ನೂರಿನ ಖಬಲಾ ಸಾಬ್ ನಿಂತರೆ ಅವನನ್ನು ಸ್ಪರ್ಧೆಯಲ್ಲಿ ಸೋಲಿಸಲು ಬೇರೆ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಯುಗಾದಿ ಹಬ್ಬದ ದಿನ ಆಂಜನೇಯನ ಗುಡಿಯಲ್ಲಿ ಸ್ವಾಮಿಗಳು ಪಂಚಾಗ ಪಠಿಸುತ್ತಿದ್ದರೆ ಆ ವರ್ಷದ ಮಳೆ ಬೆಳೆಯನ್ನು ತಿಳಿದುಕೊಳ್ಳಲು ಜನರ ಗುಂಪಿನಲ್ಲಿ ಟೋಲಾಸಾಬ್, ನಜೀರ್ ಸಾಬ್, ಖಾಸಿಂ, ಮಶಾಖ್, ರಸೂಲ್ ಸಾಬ್ ಇವರೆಲ್ಲ ಕುಳಿತಿರುತ್ತಿದ್ದರು. ಮಳೆಗಾಗಿ ಪ್ರಾರ್ಥಿಸುವ ಊರ ಬುತ್ತಿ ಜಾತ್ರೆಗೆ ಎಲ್ಲರೂ ಒಟ್ಟಾಗಿ ಕೆರೆಗೆ ಹೋಗಿ ಪೂಜೆ ಸಲ್ಲಿಸಿ ಊಟ ಮಾಡಿಕೊಂಡು ಬರುತ್ತಿದ್ದರು. ಊರೂರಿಗೆ ಹೋಗಿ ನಾಟಕಗಳನ್ನು ಕಲಿಸುತ್ತಿದ್ದ ಪೇಟಿ ಮಾಸ್ತರ್ ಮಸ್ತಾನ್ ಸಾಬ್ ರಾಮಾಯಣ ಮಾಹಾಭಾರತದ ಜೊತೆಗೆ ಅನೇಕ ಪೌರಾಣಿಕ ಪುಸ್ತಕಗಳನ್ನು ಓದಿಕೊಂಡಿದ್ದ. ಮೀಸೆ ಇಲ್ಲದೆ ಉದ್ದನೆ ಬಿಳಿ ಗಡ್ಡ ಬಿಟ್ಟಿದ್ದ ಟೋಲಾಸಾಬ್ ಸಂತ ಪ್ರವಾದಿಯಂತೆ ಕಾಣಿಸುತ್ತಿದ್ದ

         ನನ್ನನ್ನು ಇವತ್ತಿಗೂ ಅಚ್ಚರಿಗೊಳಿಸುವ ಸಂಗತಿ ಎಂದರೆ ಆಗ ನಮ್ಮ ಮನೆಗೆಲಸಕ್ಕೆ ಬರುತ್ತಿದ್ದ ಮುಸ್ಲಿಂ ಹೆಣ್ಣುಮಗಳು ಹೀರಾಳಿಗೆ ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆಯೇ ಗೊತ್ತಿರಲಿಲ್ಲ. ಸಾಮಾನ್ಯವಾಗಿ ಮುಸ್ಲಿಮರ ಸಂವಹನದ ಪ್ರಮುಖ ಭಾಷೆ ಉರ್ದು. ಹೀಗಿದ್ದೂ ಆಕೆ ಉರ್ದು ಕಲಿಯುವ ಗೋಜಿಗೆ ಹೋಗಿರಲಿಲ್ಲ. ನನ್ನ ತಾಯಿಯನ್ನು ಅಕ್ಕ ಎಂದೇ ಸಂಬೋಧಿಸುತ್ತಿದ್ದ ಆಕೆಗೆ ಸಾಲಾಗಿ ಮೂರು ಹೆಣ್ಣುಮಕ್ಕಳಿದ್ದರೆ ನನ್ನ ತಾಯಿಗೆ ನಾವು ಮೂರು ಜನ ಗಂಡು ಮಕ್ಕಳು. ಹೆಣ್ಣುಮಕ್ಕಳಿಲ್ಲ ಎನ್ನುವ ನನ್ನ ತಾಯಿಯ ಕೊರಗನ್ನು ಹೀರಾಳ ಮಕ್ಕಳು ನೀಗಿಸಿದ್ದರೆ ಗಂಡು ಮಕ್ಕಳಿಲ್ಲ ಎನ್ನುವ ಹೀರಾಳ ಚಿಂತೆಯನ್ನು ನಾವು ದೂರಾಗಿಸಿದ್ದೇವು. ಒಂದು ಅನ್ಯೋನ್ಯತೆಯ ನಡುವೆ ಧರ್ಮ ಎಂದೂ ತಲೆ ಹಾಕಿರಲಿಲ್ಲ

         ನನ್ನೂರಿಗೆ ಅತೀ ಸಮೀಪದಲ್ಲಿರುವ ಕಲಬುರ್ಗಿಯಲ್ಲಿ ದರ್ಗಾವೊಂದಿದೆ. ದರ್ಗಾದ ಹೆಸರು ರಾಣೇಶಪೀರ ಎಂದು. ಅದು ರಾಣೇಶ ಮತ್ತು ಪೀರ ಎನ್ನುವ ಹಿಂದೂ ಮತ್ತು ಮುಸ್ಲಿಂ ಸ್ನೇಹಿತರಿಬ್ಬರ ಸಮಾಧಿ ಸ್ಥಳ. ದರ್ಗಾಕ್ಕೆ ಹಿಂದೂ ಮತ್ತು ಮುಸ್ಲಿಂ ಭಕ್ತರಿಬ್ಬರೂ  ಭೇಟಿ ನೀಡುವರು. ಅದು ಹಿಂದೂ ಮತ್ತು ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ. ಪ್ರತಿವರ್ಷ ನಡೆಯುವ ಶರಣಬಸವೇಶ್ವರ ರಥೋತ್ಸವದಲ್ಲಿ ಹಿಂದುಗಳಂತೆ ಮುಸ್ಲಿಮರೂ ಪಾಲ್ಗೊಂಡು ಶರಣನ ದರ್ಶನ ಪಡೆದು ಕಾಣಿಕೆ ಸಮರ್ಪಿಸುವರು. ಅದೇ ರೀತಿ ಬಂದೇ ನವಾಜ್ ಉರುಸನಲ್ಲಿ ಪಾಲ್ಗೊಳ್ಳುವ ಹಿಂದೂ ಭಕ್ತರ ಸಂಖ್ಯೆಯೂ ಅಧಿಕ

        ಒಟ್ಟಿನಲ್ಲಿ ಇಂಥದ್ದೊಂದು ಸಾಮಾಜಿಕ ಮತ್ತು ಸಾಂಸ್ಕೃತಿಕ ಭಾವೈಕ್ಯತೆಯನ್ನು ಖಾಸಗಿಯಾಗಿ ನಾವುಗಳು ಕಟ್ಟಿಕೊಂಡಿದ್ದೆ ಹೊರತು ಇದನ್ನು ಸರ್ಕಾರವಾಗಲಿ ಇಲ್ಲವೇ ಯಾವ ರಾಜಕೀಯ ಪಕ್ಷವಾಗಲಿ ಕಟ್ಟಿದ್ದಲ್ಲ. ಆದರೆ ಕಾಲಾನಂತರದಲ್ಲಿ ಈ ಭಾವೈಕ್ಯತೆ ಕೆಲವರಿಗೆ ಸಹನೀಯವಾಗಲಿಲ್ಲ. ಪರಿಣಾಮವಾಗಿ ನಮ್ಮ ಹಿರಿಯರು ಶ್ರಮಪಟ್ಟು ಕಟ್ಟಿದ ಈ ಭಾವೈಕ್ಯತೆಯಲ್ಲಿ ಬಿರುಕು ಮೂಡಲಾರಂಭಿಸಿದ್ದಂತೂ ನಿಜ. 


ಕ್ರಿಕೆಟ್  ಭಾವೈಕ್ಯತೆಯನ್ನು  ಒಡೆಯಿತಾ?


        ಪಾಕಿಸ್ತಾನಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್  ನಮ್ಮ ಕಿರಣ್ ಮೋರೆ ಕಡೆ ಮುಖಮಾಡಿ ಆತನ ಎತ್ತರಕ್ಕೆ ಜಿಗಿದಾಗಲೇ ಅಲ್ಲಲ್ಲಿ  ಅಪಸ್ವರಗಳು ಕೇಳಿ ಬಂದವು. ಮಿಯಾಂದಾದ್ ನ  ಈ ವರ್ತನೆಯನ್ನು ಭಾರತದ ಕೆಲವು ಮುಸ್ಲಿಂ ಯುವಕರು ಸಮರ್ಥಿಸಿಕೊಂಡರೆನ್ನುವ ಅನುಮಾನ ಸದ್ದಿಲ್ಲದೇ ಹರಿದಾಡ ತೊಡಗಿತು. ಈ ಕ್ರಿಕೆಟ್ ಆಟ ನಮ್ಮ ಭಾವೈಕ್ಯತೆಯ ನಡುವೆ ಬಿರುಕು ಮೂಡಿಸಬಹುದು ಎನ್ನುವ ಆತಂಕ ಕಾಡುತ್ತಿರುವ ಹೊತ್ತಿನಲ್ಲೇ ಮಿಯಾಂದಾದ್ ಕೊನೆಯ ಓವರ್ ನ ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಪಾಕಿಸ್ತಾನವನ್ನು ಗೆಲ್ಲಿಸಿದ. ಆ ಗೆಲುವಿನಿಂದ ಖುಷಿಗೊಂಡ ಮುಸ್ಲಿಂ ಯುವಕರು ಪಟಾಕಿ ಸಿಡಿಸಿ ಸಂಭ್ರಮಿಸಿದರೆಂಬ ಮಾತುಗಳು ಕೇಳಿ ಬಂದವು. ಭಾರತದ ಸೋಲಿನಿಂದ ಕಂಗೆಟ್ಟಿದ್ದ ಹಿಂದೂ ಹುಡುಗರಿಗೆ ಆ ಮಾತುಗಳು ಗಾಯದ ಮೇಲೆ ಬರೆ ಎಳೆದಂತಾಯಿತು. ಈ ಕ್ರಿಕೆಟ್  ಆಟವನ್ನು ನಮ್ಮ ಯುವಪೀಳಿಗೆ ಅತಿಯಾಗಿ ಹಚ್ಚಿಕೊಂಡಿದೆ  ಎಂದು ನಮ್ಮ ಹಿರಿಯರು ಚಿಂತಿಸುತ್ತಿರುವ ಹೊತ್ತಿನಲ್ಲೇ ಅದೇ ಆಟ ಭಾರತದ ಹಿಂದೂ ಮತ್ತು ಮುಸ್ಲಿಂ ಯುವಕರ ನಡುವೆ ಗೆರೆ ಎಳೆದು ಬಿಟ್ಟಿತ್ತು.

            ನಂತರದ ದಿನಗಳಲ್ಲಿ ಕ್ರಿಕೆಟ್  ಭಾರತದ ಭಾವೈಕ್ಯತೆಯ ಮನಸ್ಸುಗಳನ್ನು ಒಡೆದು ನಮ್ಮಗಳ ನಡುವಣ ಕಂದಕವನ್ನು ಮತ್ತಷ್ಟು ವಿಸ್ತರಿಸುವಂತೆ ಮಾಡಿತು. ಇಲ್ಲಿ ನಮ್ಮ ನಮ್ಮ ಗ್ರಹಿಕೆಯೇ ತಪ್ಪು ಎಂದು ಅರ್ಥೈಸಬಹುದಾದರೂ ಅಂಥದ್ದೊಂದು ಗ್ರಹಿಕೆಯನ್ನು ಮೂಲೋಚ್ಚಾಟನೆ ಮಾಡುವಂಥ ಪ್ರಯತ್ನ ಇಲ್ಲಿ ನಡೆಯಲೇ ಇಲ್ಲ. ಬದಲಾಗಿ ನಮ್ಮ ಆ ಒಂದು ಗ್ರಹಿಕೆಯನ್ನೇ ಮೂಲವಾಗಿಸಿಕೊಂಡು ಮಾಧ್ಯಮಗಳು ಮತ್ತಷ್ಟು ತುಪ್ಪ ಸುರಿಯುತ್ತ ಹೋದರೆ ಕ್ರಿಕೆಟ್  ಮಂಡಳಿ ಅದನ್ನೇ ತನ್ನ ಲಾಭದ ಉದ್ದಿಮೆಗೆ ಉಪಯೋಗಿಸಿಕೊಂಡಿತು. ಭಾರತ ಮತ್ತು ಪಾಕಿಸ್ತಾನ ಈ ಎರಡು ರಾಷ್ಟ್ರಗಳ ನಡುವಣ ಕ್ರಿಕೆಟ್  ಆಟವನ್ನು ಮಾಧ್ಯಮಗಳು ಒಂದು ಯುದ್ಧ ಎನ್ನುವ ಅರ್ಥದಲ್ಲೇ ವರದಿ ಮಾಡಿದ್ದೆ ಹೆಚ್ಚು. ಕ್ರಿಕೆಟ್  ಮಂಡಳಿ ಸಹ ತನ್ನ ಖಜಾನೆಯನ್ನು ತುಂಬಿಸಿಕೊಳ್ಳಲು ಭಾರತದ ಹಿಂದೂ ಹಾಗೂ ಮುಸ್ಲಿಂ ಕ್ರಿಕೆಟ್  ಪ್ರೇಮಿಗಳ ಆ ಕ್ರೀಡೆಯೊಂದಿಗಿನ  ಭಾವನೆಗಳನ್ನೇ ಬಂಡವಾಳವಾಗಿಸಿಕೊಂಡು ಈ ಎರಡೂ ರಾಷ್ಟ್ರಗಳ ಆಟವನ್ನು ಸಂಘಟಿಸುತ್ತಲೇ ಹೋಯಿತು. ಅದಕ್ಕೆ ತಕ್ಕಂತೆ ಹಿಂದೂ ಯುವಕರುಗಳಿಗೆ ಆಫ್ರಿದಿ, ಶೋಯೆಬ್, ಅಜ್ಮಲ್ ಇವರುಗಳು ಕೇವಲ ಕ್ರೀಡಾಪಟುಗಳಾಗಿ ಕಾಣಿಸದೆ ಒಂದು ರೀತಿಯಲ್ಲಿ ಯುದ್ಧಕ್ಕೆ ದಂಡೆತ್ತಿ ಬಂದ ಶತ್ರುಗಳಂತೆ ಕಾಣಿಸತೊಡಗಿದರು. ಹಾಗೆಯೇ ನಮ್ಮ ಮುಸ್ಲಿಂ ಯುವಕರಿಗೆ ಸಚಿನ್, ಧೋನಿ, ಗಂಭೀರ್ ಎಂದಿಗೂ ಹಮಾರಾ ಕ್ರಿಕೆಟರ್ಸ್ ಆಗಲೇ ಇಲ್ಲ. ಈ ಕ್ರಿಕೆಟ್  ಆಟ ಹಿಂದೂ ಮತ್ತು ಮುಸ್ಲಿಂ ಮನಸ್ಸುಗಳನ್ನು ಬೆಸೆಯುವುದಕ್ಕಿಂತ ಬೇರ್ಪಡಿಸಿದ್ದೆ  ಹೆಚ್ಚು.

ಮತ್ತಷ್ಟು ಹೆಚ್ಚಿದ ಅಂತರ


             ೧೯೯೨ ರ ಆ ದಿನ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಕೆಡುವುದರೊಂದಿಗೆ ಭಾರತದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಂಪೂರ್ಣವಾಗಿ ಮುರಿದು ಬಿತ್ತು. ಆ ದಿನದ ಘಟನೆಯ ಕಪ್ಪು ನೆರಳು  ಕ್ಷಣಾರ್ಧದಲ್ಲಿ ಇಡೀ ರಾಷ್ಟ್ರವನ್ನು ವ್ಯಾಪಿಸಿತು. ನಗರಗಳನ್ನು ಮಾತ್ರವಲ್ಲದೆ ಹಳ್ಳಿ ಹಳ್ಳಿಗಳಿಗೂ ಅದರ ಬಿಸಿ ತಟ್ಟಿತು. ನಿನ್ನೆಯವರೆಗೂ ಅನ್ಯೋನ್ಯತೆಯಿಂದ ಬಾಳಿ ಬದುಕಿದವರು ಈಗ ಪರಸ್ಪರ ಅನುಮಾನದಿಂದ ನೋಡುವಂತಾಯಿತು. ಮುಸ್ಲಿಮರು ಹಿಂದೂಗಳ ಮನೆಗಳ ಮೇಲೂ ಹಿಂದೂಗಳು ಮುಸ್ಲಿಮರ ಮನೆಗಳ ಮೇಲೂ ದಾಳಿ ಮಾಡತೊಡಗಿದರು. ಕೊಲೆ,ಅತ್ಯಾಚಾರ, ಹೊಡೆದಾಟಗಳಾದವು. ಜನರು ಜೀವ ಕೈಯಲ್ಲಿ ಹಿಡಿದುಕೊಂಡು ರಾತ್ರಿಗಳನ್ನು ಕಳೆಯಬೇಕಾಯಿತು. ತಮ್ಮ ತಮ್ಮ ಧರ್ಮಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಿಗೆ ಅನೇಕ ಕುಟುಂಬಗಳು ವಲಸೆ ಹೋದವು.

          ಈ ಘಟನೆಯ ನಂತರ ಅದುವರೆಗೂ ಕೇವಲ ಯುವಕರಿಗೆ ಮಾತ್ರ ಸೀಮಿತವಾಗಿದ್ದ ದ್ವೇಷ ಅದು ಹಿರಿಯ ಮನಸ್ಸುಗಳಿಗೂ ವಿಸ್ತರಿಸಿತು. ಮಂದಿರ, ಮಸೀದಿಗಳಲ್ಲಿ ಚರ್ಚೆಯಾಗತೊಡಗಿದವು. ಅಲ್ಲಿಯವರೆಗೂ ಪ್ರಾರ್ಥನಾ ಸ್ಥಳಗಳಾಗಿದ್ದ ಮಂದಿರ ಮತ್ತು ಮಸಿದಿಗಳು ಕೋಮುಗಲಭೆಯನ್ನು ಸೃಷ್ಟಿಸುವ ಕೇಂದ್ರಗಳಾಗಿ ರೂಪಾಂತರಗೊಂಡವು. ಹಣೆಗೆ ಕುಂಕುಮ ಧರಿಸುವವರೆಲ್ಲ ಅವರಿಗೆ ಪ್ರಬಲ ಕೋಮುವಾದಿಗಳಂತೆ ಕಾಣಿಸತೊಡಗಿದರೆ ತಲೆಗೆ ಹಸಿರು ಟೊಪ್ಪಿಗೆ ಧರಿಸಿ ಉದ್ದನೆಯ ಗಡ್ಡ ಬಿಟ್ಟವರೆಲ್ಲ ಇವರಿಗೆ ಭಯೋತ್ಪಾದಕರಂತೆ ರಾಷ್ಟ್ರದ್ರೋಹಿಗಳಂತೆ ಗೋಚರಿಸತೊಡಗಿದರು. ಸೇಡು, ಪ್ರತಿಕಾರ ಬೆಳೆಯುತ್ತ ಹೋಯಿತು. ಸರಣಿ ಬಾಂಬ್ ಸ್ಫೋಟಗಳಿಗೆ ನೂರಾರು ಅಮಾಯಕ ಜೀವಗಳು  ಬಲಿಯಾದವು. ಅನುಮಾನಗೊಂಡ ಮನಸ್ಸುಗಳನ್ನು ಇನ್ನಷ್ಟು ವ್ಯಗ್ರಗೊಳಿಸಲು ಅಲ್ಲಲ್ಲಿ ಅನ್ಯರಾಷ್ಟ್ರದ ಧ್ವಜ ಹಾರಾಡತೊಡಗಿತು. ಒಟ್ಟಿನಲ್ಲಿ ಕೋಮುಸೌಹಾರ್ದತೆ ಅಳಿದು ಬಹುದೊಡ್ಡ ಕಂದಕವೊಂದು ಸೃಷ್ಟಿಯಾಯಿತು.

ಒಡೆದು ಆಳುವ ನೀತಿ


           ನಮ್ಮದು ವೋಟ್ ಬ್ಯಾಂಕ್  ರಾಜಕಾರಣವಾಗಿರುವುದರಿಂದ ನಮ್ಮ ರಾಜಕೀಯ ನಾಯಕರುಗಳು ಈ ಒಡೆದು ಆಳುವ ನೀತಿಯನ್ನು ಪ್ರಜ್ಞಾಪೂರ್ವಕವಾಗಿಯೇ ಮೈಗೂಡಿಸಿಕೊಂಡಿರುವರು. ಧರ್ಮ ಧರ್ಮದ ನಡುವೆ ಜಾತಿ ಜಾತಿಯ ನಡುವೆ ಬಹುದೊಡ್ಡ ಕಂದಕವನ್ನು ಸೃಷ್ಟಿಸಿದಾಗಲೇ ರಾಜಕೀಯದಲ್ಲಿ ಯಶಸ್ಸು ಸಾಧ್ಯ ಎನ್ನುವ ಮನೋಭಾವ ಇವತ್ತಿನ ರಾಜಕಾರಣಿಗಳದು. ಅದಕ್ಕೆಂದೇ ಅವರು ಎಂದಿಗೂ ಎರಡು ಧರ್ಮಗಳಾಗಲಿ ಇಲ್ಲವೇ ಜಾತಿಗಳಾಗಲಿ ಒಂದುಗೂಡಲು ಬಿಡಲಾರರು.

          ಇವತ್ತಿನ ದಿನಗಳಲ್ಲಿ ರಾಜಕೀಯ ಪಕ್ಷವೊಂದರ ಅಸ್ತಿತ್ವ ಅದು ಯಾವ ಧರ್ಮ, ಜಾತಿಯನ್ನು ಓಲೈಸುತ್ತಿದೆ ಎನ್ನುವುದನ್ನು ಆಧರಿಸಿದೆ. ಪರಿಣಾಮವಾಗಿ ರಾಜಕೀಯ ಪಕ್ಷಗಳು ದೇಶದ ಅಭಿವೃದ್ಧಿಗಿಂತ ಧರ್ಮ ಮತ್ತು ಜಾತಿಗಳ ಓಲೈಕೆಗೆ ಒತ್ತು ನೀಡುತ್ತಿವೆ. ಇದಕ್ಕೆ ಪೂರಕವಾಗಿ ರಾಜಕೀಯ ಪಕ್ಷಗಳು ಧರ್ಮ ಗುರುಗಳ ಹಾಗೂ ಧರ್ಮಾಂಧರ ಕಪಿಮುಷ್ಟಿಗೆ ಸಿಲುಕಿ ನರಳುತ್ತಿವೆ. ಪಕ್ಷಗಳ ಪ್ರಣಾಳಿಕೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿಗಿಂತಲೂ ಧಾರ್ಮಿಕ ಹಿತಾಸಕ್ತಿ ಮೇಲುಗೈ ಸಾಧಿಸುತ್ತಿದೆ. ಮಠ, ಮಸೀದಿ, ಮಂದಿರಗಳು ದೇಶದ ರಾಜಕೀಯ ಸ್ಥಿತಿಗತಿಯನ್ನು ನಿರ್ಧರಿಸುವ ಮಟ್ಟಕ್ಕೆ ಬೆಳೆದು ನಿಂತಿರುವುದರ ಹಿಂದೆ ವಿವಿಧ ಧರ್ಮಗಳು ನಿರಂತರವಾಗಿ ಕೆಲಸ ಮಾಡಿವೆ. 

           ಇಲ್ಲಿ ಎಲ್ಲ ರಾಜಕೀಯ ಪಕ್ಷಗಳು ಹಿಂದೂ ಮತ್ತು ಮುಸ್ಲಿಮರ ಧಾರ್ಮಿಕ ಉನ್ಮತ್ತತೆ ಹಾಗೂ ಪರಸ್ಪರರ ನಡುವಣ ಸಂಘರ್ಷವನ್ನು ತಮ್ಮ ರಾಜಕೀಯ ಏಳ್ಗೆಯ ಲಾಭಕ್ಕಾಗಿ ಬಳಸಿಕೊಂಡಿದ್ದೆ ಹೆಚ್ಚು. ಮಠ, ಮಸೀದಿ, ಮಂದಿರ, ಚರ್ಚ್ ಗಳಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ, ಹಜ್ ಯಾತ್ರಿಕರಿಗೆ ವಿಶೇಷ ಸಹಾಯಧನ ಹೀಗೆ ಪ್ಯಾಕೇಜ್ ಗಳ ಮೂಲಕ ತಮ್ಮ ತಮ್ಮ ರಾಜಕೀಯದ ಅಸ್ತಿತ್ವವನ್ನು ಗಟ್ಟಿಗೊಳಿಸಿಕೊಂಡರೆ ವಿನ: ಒಂದು ಕೋಮು ಸೌಹಾರ್ದ ವಾತಾವರಣವನ್ನು ನೆಲೆಗೊಳಿಸಲು ಅವರುಗಳು ಪ್ರಯತ್ನಿಸಲೇ ಇಲ್ಲ.

           ಬಹುಸಂಖ್ಯಾತ ಹಿಂದುಗಳಿರುವ ಪ್ರದೇಶಗಳಿಗೆ ಹಿಂದೂ ಅಭ್ಯರ್ಥಿಗಳನ್ನು ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಗಳಿಗೆ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಡೆಯನ್ನು ನಾವು ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ಎಂದಿನಿಂದಲೂ ನೋಡುತ್ತ ಬಂದಿದ್ದೇವೆ. ಯಾವಾಗ ಧರ್ಮವೊಂದು ರಾಜಕೀಯದ ಜೊತೆಗೆ ಗುರುತಿಸಿಕೊಳ್ಳಲಾರಂಭಿಸುತ್ತದೆಯೋ ಆಗ ರಾಜಕಾರಣದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೂಲೆಗುಂಪಾಗಿ ಧಾರ್ಮಿಕ ಓಲೈಕೆ ಪ್ರಬಲವಾಗುತ್ತ ಹೋಗುತ್ತದೆ. ಜೊತೆಗೆ ನಮ್ಮ ರಾಜಕಾರಣಿಗಳ ಇಂಥದ್ದೊಂದು ನಡೆ ಧರ್ಮ ಧರ್ಮದ ನಡುವೆ ಗೋಡೆಯನ್ನು ಕಟ್ಟಲಾರಂಭಿಸುತ್ತದೆ. ನಮ್ಮ ರಾಜಕಾರಣಿಗಳು ಇಲ್ಲಿ ಮಾಡಿದ್ದೂ ಇದನ್ನೇ. ಅವರೆಂದೂ ಭಾರತದ ಈ ಎರಡು ಬಲಿಷ್ಠ ಧರ್ಮಗಳ ನಡುವೆ  ಸೇತುವೆಯಾಗಲೇ ಇಲ್ಲ.

       ಜೊತೆಗೆ ಉಲ್ಲೇಖಿಸಲೇ ಬೇಕಾದ ಇನ್ನೊಂದು ಮಹತ್ವದ ಕಾರಣವೆಂದರೆ ಅದು ಬೆಳೆಯುತ್ತಿರುವ ನಗರೀಕರಣ. ಹಳ್ಳಿ ಪ್ರದೇಶಗಳಲ್ಲಿ ಧಾರ್ಮಿಕ ಆಚರಣೆ ಹೆಚ್ಚಿದ್ದರೂ ಅಲ್ಲಿ ಅತಿಯಾದ ಧರ್ಮಾಂದತೆಗೆ ಅವಕಾಶ ತೀರ ಕಡಿಮೆ. ಆದರೆ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ನಗರಗಳಲ್ಲಿ ಮಾತ್ರ ನಾವು ಅತಿಯಾದ ಧರ್ಮಾಂದತೆಯನ್ನು ಕಾಣಬಹುದು. ಈ ಹಳ್ಳಿಗರು ನಗರ ಪ್ರದೇಶಗಳಿಗೆ ವಲಸೆ ಹೋಗಿ ಹಿಂತಿರುಗಿ ಬರುವಾಗ ತಮ್ಮ ಜೊತೆಯಲ್ಲಿ ಗ್ರಾಮಗಳಿಗೆ ಧರ್ಮಾಂದತೆಯನ್ನೂ ಬಳುವಳಿಯಾಗಿ ತಂದಿದ್ದು ಬಹುದೊಡ್ಡ ದುರಂತ.

ಇವತ್ತು ಏನಾಗಿದೆ?


              ನನ್ನೂರಿನ ಹಿರಿಯ ತಲೆಮಾರಿನವರೆಲ್ಲ ಈಗ ನೆನಪು ಮಾತ್ರ. ಅವರ ನಂತರದ ಪೀಳಿಗೆ ರಾಜಕಾರಣದ ಕಪಿಮುಷ್ಟಿಗೆ ಸಿಲುಕಿ ಕೋಮು ಸೌಹಾರ್ದತೆಯನ್ನೇ ಹೊಸಕಿ ಹಾಕಿದೆ. ಮೊಹರಂ, ರಂಜಾನ್, ದೀಪಾವಳಿ, ಹೋಳಿ ಹುಣ್ಣಿಮೆ ಹಬ್ಬಗಳು ತಮ್ಮ ಗತಕಾಲದ ವೈಭವವನ್ನು ಕಳೆದುಕೊಂಡಿವೆ. ಆಗೆಲ್ಲ ಕನ್ನಡ ಮಾತನಾಡುತ್ತಿದ್ದ ಮುಸ್ಲಿಂ ಕುಟುಂಬಗಳಲ್ಲಿ ಈಗ ಉರ್ದು ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದೆ. ಕನ್ನಡ ಶಾಲೆಗಳಿಗೆ ಓದಲು ಬರುತ್ತಿದ್ದ ಮುಸ್ಲಿಂ ಮಕ್ಕಳ ಸಂಖ್ಯೆ ಕಡಿಮೆಯಾಗಿ ಅವರೆಲ್ಲ ಮದರಸಾಗಳಿಗೆ ಹೋಗುತ್ತಿರುವರು. ಕಲ್ಲು ಮಣ್ಣುಗಳಿಂದ ನಿರ್ಮಾಣಗೊಂಡಿದ್ದ ಗುಡಿ, ಮಸೀದಿಗಳಿಗೆ ನಮ್ಮ ರಾಜಕಾರಣಿಗಳ ಕೃಪೆಯಿಂದ ಅಮೃತಶಿಲೆಯ ಭಾಗ್ಯ ದೊರೆತಿದೆ. ರಾಣೇಶ ಮತ್ತು ಪೀರರನ್ನು ಭಕ್ತರು ತಮ್ಮ ತಮ್ಮ ಧರ್ಮಕ್ಕನುಗುಣವಾಗಿ ಹಂಚಿಕೊಂಡಿರುವರು. ಶರಣಬಸವನ ರಥೋತ್ಸವದಲ್ಲಿ ಮುಸ್ಲಿಂ ಭಕ್ತರು ಪಾಲ್ಗೊಳ್ಳುತ್ತಿಲ್ಲವಾದರೆ ಖಾಜಾ ಬಂದೇನವಾಜ್ ನ ದರ್ಗಾಕ್ಕೆ ಭೇಟಿ ನೀಡುವ ಹಿಂದೂ ಭಕ್ತರ ಸಂಖ್ಯೆ ಗಣನೀಯವಾಗಿ ಕುಸಿದಿದೆ.   ಒಂದೇ ಊರಿನಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದರೂ ಎರಡು ಪ್ರತ್ಯೇಕ ದೇಶಗಳಲ್ಲಿ ಬದುಕುತ್ತಿರುವ ಮನಸ್ಥಿತಿ ಅಲ್ಲಿ ಮನೆ ಮಾಡಿದೆ. ಒಂದು ಕಾಲದಲ್ಲಿ ಸೌಹಾರ್ದತೆ, ಸಹಬಾಳ್ವೆಗೆ ಒತ್ತುಕೊಟ್ಟು ನಮ್ಮ ಹಿರಿಯರು ಬದುಕಿ ಬಾಳಿದ ಆ ನೆಲದಲ್ಲಿ ಇವತ್ತು ತೀರ ಧರ್ಮಾಂಧರಂತೆ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದಂತೆ ಬಾಳುತ್ತಿರುವರು. ನನ್ನೂರು ಎನ್ನುವುದು ಇಲ್ಲಿ ರೂಪಕ ಮಾತ್ರ. ಇದು ಇಡೀ ದೇಶಕ್ಕೆ ಅನ್ವಯವಾಗುವ ಚಿತ್ರಣ.

ಕೊನೆಯ ಮಾತು


            ಅಜ್ಮೀರ್ ದರ್ಗಾ ಭಾರತದ ಪುಣ್ಯಕ್ಷೇತ್ರಗಳಲ್ಲೊಂದು. ಈ ದರ್ಗಾಕ್ಕೆ ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನದ ಪ್ರಧಾನಿ ಭೇಟಿನೀಡಿದಾಗ ವಾಡಿಕೆಯಂತೆ ದರ್ಗಾದ ದಿವಾನ್ ಅವರನ್ನು ಸ್ವಾಗತಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಏಕೆಂದರೆ ಅಜ್ಮೀರ್ ದರ್ಗಾದ ದಿವಾನರು ಪಾಕಿಸ್ತಾನದ ಪ್ರಧಾನಿಯನ್ನು ಸ್ವಾಗತಿಸಲು ನಿರಾಕರಿಸಿ ಗೈರುಹಾಜರಾದರು. ಒಂದು ವೇಳೆ ಪಾಕಿಸ್ತಾನದ ಪ್ರಧಾನಿಯನ್ನು  ಸ್ವಾಗತಿಸಲೇ ಬೇಕೆನ್ನುವುದಾದರೆ ಆ ರಾಷ್ಟ್ರ ಮೊದಲು ಭಾರತೀಯ ಸೈನಿಕರ ಮೇಲೆ ಮಾಡುತ್ತಿರುವ ಮೋಸದ ಆಕ್ರಮಣವನ್ನು ನಿಲ್ಲಿಸಬೇಕು ಹಾಗೂ ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ರಕ್ಷಣೆ ನೀಡಬೇಕೆಂದು ಷರತ್ತು ವಿಧಿಸಿದರು. ಇದು ಧರ್ಮವನ್ನೂ ಮೀರಿದ ರಾಷ್ಟ್ರೀಯತೆ. ಇಂಥದ್ದೊಂದು ರಾಷ್ಟ್ರಪ್ರೇಮ ಪ್ರತಿಯೊಬ್ಬರಲ್ಲೂ ಮೂಡಿದಾಗಲೇ ಈ ಧರ್ಮಾಂಧತೆ ಅಳಿಯಲು ಸಾಧ್ಯ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, May 18, 2013

ನನ್ನ ಬರವಣಿಗೆಗೆ ಸ್ಪೂರ್ತಿ ನೀಡಿದ ಬರಹಗಳು


        ಪುಸ್ತಕಗಳ ಓದು ನನ್ನ ಅತ್ಯಂತ ಇಷ್ಟದ ಸಂಗತಿಗಳಲ್ಲೊಂದು. ಕೆಲವೊಮ್ಮೆ ಓದಿಲ್ಲದೆ ಕಳೆಯುವ ಬದುಕೇ ದುಸ್ತರ ಎಂದೆನಿಸುತ್ತದೆ. ಏಕೆಂದರೆ  ಬೇಸರದ ಅನೇಕ ಸಂದರ್ಭಗಳಲ್ಲಿ ಓದು ಕೈ ಹಿಡಿದು ನನಗೆ ಮರು ಚೈತನ್ಯ ನೀಡಿದೆ. ಅದಕ್ಕೆಂದೇ ನನ್ನನ್ನು ನಾನು ಓದುವ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಓದುವ ಸಂದರ್ಭ ಮನಸ್ಸಿಗೆ ಹಿಡಿಸಿದ ಸಂಗತಿಗಳನ್ನು ಟಿಪ್ಪಣಿ ಮಾಡಿಕೊಂಡು ನನ್ನ ಬರವಣಿಗೆಯಲ್ಲಿ ಬಳಸಿಕೊಂಡ ಉದಾಹರಣೆಯೂ ಉಂಟು. ಇವತ್ತಿನ ಯುವ ಲೇಖಕರಿಂದ ಹಿಡಿದು ಹಿರಿಯ ತಲೆಮಾರಿನ ಲೇಖಕರವರೆಗೆ ಯಾವ ಅಸುಯಾ ಪರ ಭಾವನೆಗಳಿಗೆ ಆಸ್ಪದ ನೀಡದಂತೆ ನಾನು ಓದಿದ್ದುಂಟು. ಹೀಗಾಗಿ ನನ್ನ ಓದು ಇಂಥ ಸಾಹಿತ್ಯ ಪ್ರಕಾರಕ್ಕೆ ಮತ್ತು ಇಂಥ ಲೇಖಕರಿಗೆಂದು ಸೀಮಿತವಾಗಿಲ್ಲ. ಪುಸ್ತಕವೊಂದರಲ್ಲಿನ ವಿಷಯ ನನ್ನ ಏಕಾಂತದ ವಲಯವನ್ನು ಪ್ರವೇಶಿಸಿದರೆ ಅಂಥ ಪುಸ್ತಕಗಳನ್ನು ಒಂದೇ ಗುಕ್ಕಿಗೆ ಓದಿಕೊಂಡು ಹೋಗಿದ್ದೇನೆ. ಕೆಲವೊಮ್ಮೆ ಪ್ರಾರಂಭದ ಪುಟಗಳಲ್ಲೇ ಬೇಸರ ಇಣುಕಿದಾಗ ಅಂಥ ಪುಸ್ತಕಗಳ ಓದು ಅರ್ಧಕ್ಕೆ ಬಿಟ್ಟಿದ್ದೂ ನಿಜ. ಒಟ್ಟಿನಲ್ಲಿ ಪುಸ್ತಕಗಳ ಓದು ನನಗೆ ಬರೆಯುವ ಚೈತನ್ಯ ನೀಡಿದೆ. ಹೀಗಾಗಿ ನನ್ನ ಪ್ರತಿ ಲೇಖನದಲ್ಲಿ ಅದಕ್ಕೆ ಪೂರಕವಾಗುವಂತಹ ಬರಹಗಳನ್ನು ನಾನೋದಿದ ಪುಸ್ತಕಗಳಿಂದ ಆಯ್ದು ಕೊಟ್ಟ ನಿದರ್ಶನ ಸಾಕಷ್ಟಿವೆ. ಒಂದರ್ಥದಲ್ಲಿ ನನಗೆ ಬರೆಯಲು ಸ್ಪೂರ್ತಿ ನೀಡಿದ ಲೇಖಕ ಮತ್ತು ಆತನ ಬರವಣಿಗೆಗೆ ನಾನು ಈ ರೀತಿ ಋಣಿಯಾಗಿರುವ ಸಾಧ್ಯತೆಯೂ ಇರಬಹುದು. ಹೀಗೆ ಸ್ಪೂರ್ತಿ ನೀಡಿದ ಕೆಲವೊಂದು ಬರಹಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಯಾರಿಗೆ ಗೊತ್ತು ಓದಿದ ನಂತರ ನಿಮ್ಮಲ್ಲೂ ಬರೆಯುವ ಉಮೇದಿಯೊಂದು ನಿಮಗರಿವಿಲ್ಲದಂತೆಯೇ ನಿಮ್ಮೊಳಗಡೆ ಟಿಸಿಲೊಡೆಯಬಹುದು. ಓದಿ ನೋಡಿ,

ಸಾವಿನ ನೆನಪು ಬದಲಾವಣೆ ತಂದ ಆ ಕ್ಷಣ.....


          ಸಾವು ತನ್ನ ತಣ್ಣನೆಯ ಹಸ್ತವನ್ನು ನಮ್ಮ ಮೇಲಿಟ್ಟಾಗ ಹೇಗಿರುತ್ತದೆ?. ಹುಟ್ಟಿದವನು ಸಾಯಲೇ ಬೇಕು ಎಂದು ಕೊಂಡು ಬದುಕುತ್ತಿರುವುದಕ್ಕೂ, ಸಾವಿನ ಸ್ಪರ್ಷಕ್ಕೂ ವ್ಯತ್ಯಾಸವೇನು? ಬದುಕುತ್ತಿರುವವರು ಯಾರೂ ಸಾವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಮನುಷ್ಯ ತನ್ನ ಸೋಮಾರಿತನದಲ್ಲಿ, ನಿರ್ಲಕ್ಷ್ಯದಲ್ಲಿ ಸಾವಿನ ಕಟು ನಿಷ್ಟುರತೆಯನ್ನು ಎದುರಿಸುವುದಿಲ್ಲವಾದ್ದರಿಂದ ಆತನ ನೆನಪು, ಆಶೆ, ರೋಮಾಂಚನಗಳು ಫೋಕಸ್ ಆಗಿರುವುದೇ ಇಲ್ಲ. ಸಾವಿನ ಶಾಕ್ ಮಾತ್ರ ಆತ  ತನಗೆ ಉಳಿದ ಕ್ಷಣಗಳನ್ನು ಜೀವಿಸುವಂತೆ ಮಾಡಬಲ್ಲದು.

      ನನ್ನ ಗಾಢ ದುಗುಡದ ವೇಳೆಯಲ್ಲಿ ಸಾವಿನ ಹತ್ತಿರ ಇದ್ದಂತ್ತಿದ್ದಾಗ ಮುತ್ಸದ್ದಿತನ, ಖ್ಯಾತಿ, ಪ್ರಶಸ್ತಿ ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ ರೀತಿ ಬದಲಾಯಿತು. ಸಾವು ಇನ್ನು ಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ ಛಾಯೆ ಅನ್ನಿಸತೊಡಗಿತು.

(ಪಿ.ಲಂಕೇಶ್ ಅವರ 'ಹುಳಿ ಮಾವಿನ ಮರ' ಕೃತಿಯಿಂದ)

ಬರವಣಿಗೆಯೇ  ನನ್ನ ಧರ್ಮ 


       ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ರಾಜಕೀಯ ಕ್ರಿಯೆ ಅಲ್ಪಾಯುಷ್ಯದ್ದು. ಸಾಹಿತ್ಯಕ್ಕೆ ಈ ಮಾತು ಅನ್ವಯಿಸುವುದಿಲ್ಲ. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ ಅನ್ನುವುದು ನಮ್ಮ ಗಮನದಲ್ಲಿರಬೇಕು. ಟೀಕಿಸುವ ಮೂಲಕವೋ, ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಒಂದಲ್ಲ ಒಂದು ವಿಧದಲ್ಲಿ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಯಾವುದು ನಮ್ಮನ್ನು ಆಳಬೇಕು ಅಂತ ಬಯಸುತ್ತೆವೆಯೋ ಅಂತಹ ನ್ಯಾಯ, ಸ್ವಾತಂತ್ರ್ಯದಿಂದ ಎಂದಿಗೂ ಪ್ರತ್ಯೇಕಿಸಲ್ಪಡಕೂಡದು. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯವನ್ನು ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಕೆಲಸದ ಹಕ್ಕಿನಂತೆ ಅಥವಾ ಒಳ್ಳೆಯ ಸಂಬಳದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಒಂದು ಅಗತ್ಯದಂತೆ ಕಾಪಾಡಿಕೊಳ್ಳಬೇಕು.

       ನನ್ನ ಅಂತ:ಸಾಕ್ಷಿ ತುಂಬಾ ಗಡಸಾದದ್ದು. ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಎನ್ನುವುದು ನನಗೆ ಗೊತ್ತು. ಬರವಣಿಗೆಯೇ ನನ್ನ ಧರ್ಮ, ಬರವಣಿಗೆಯೇ ನನ್ನ ಬದುಕು.

(ಮಯೂರ ೨೦೧೦ ರ ಸಂಚಿಕೆಯಲ್ಲಿ ಪ್ರಕಟವಾದ ನೊಬೆಲ್ ಪ್ರಶಸ್ತಿ ಪುರಸ್ಕೃತ ಮಾರಿಯೋ ವರ್ಗಾಸ್ ಯೋಸಾನ ಸಂದರ್ಶನದಿಂದ)

ಚಲಂ ಗೆ ಅದು ಹೇಗೆ ಸಾಧ್ಯವಾಯಿತು?


       ಕಡು ವ್ಯಾಮೋಹಿಯ ಹಾಗೆ, ಸಂತನ ಹಾಗೆ, ಎಲ್ಲವನ್ನು ಮೀರಿಯೂ ಮೀರದವನ ಹಾಗೆ, ನಮ್ಮನ್ನು ಕಂಗೆಡಿಸುವವನ ಹಾಗೆ, ನಾವು ಸಾಧನೆ, ಸುಖ, ತೃಪ್ತಿ, ನೆಮ್ಮದಿ ಅಂದುಕೊಂಡಿದ್ದನ್ನೆಲ್ಲ ಕೇವಲ ನಮಗೆ ನಾವೇ ಹೇಳಿಕೊಂಡ ಅಪ್ಯಾಯಮಾನ ಸುಳ್ಳು ಎಂದೆನಿಸಿ ಕಂಗಾಲಾಗುವ ಹಾಗೆ, ಅದು ಅರಿವಾಗಿಯೂ ಆ ಸುಳ್ಳನ್ನು ಧಿಕ್ಕರಿಸುವ ಧೈರ್ಯವಾಗದ ಹಾಗೆ. ಚಲಂ ನಿಜಕ್ಕೂ ಹಾಗಿದ್ದರಾ? ಅವರು ಹಾಗಿದ್ದರೆ ನಾವೇಕೆ ಹೀಗಿದ್ದೇವೆ? ಅದೇ ಭೂಮಿ, ಅದೇ ಬಾನು, ಅದೇ ಗಾಳಿ, ಅದೇ ನೀರು ಸೃಷ್ಟಿ ಮಾತ್ರ ಬೇರೆ ಬೇರೆ. ಅದು ನಮ್ಮ ಮಿತಿಯಾ?

       ಅಹಂಕಾರದ ಲವಲೇಶವೂ ಇಲ್ಲದೆ ಆತ್ಮ ಚರಿತ್ರೆ ಬರೆಯುವುದಾದರೂ ಹೇಗೆ? ನಾನೆಂಬ ಮಮಕಾರವನ್ನು ತೊರೆದು ತನ್ನ ಬದುಕನ್ನು ನಡುದಾರಿಯಲ್ಲಿ ಸತ್ತು ಬಿದ್ದ ಅಪರಿಚಿತ ಶವವನ್ನು ನೋಡುವಷ್ಟು ಪರಕೀಯ ಭಾವದಿಂದ ನೋಡುವುದು ಸಾಧ್ಯವಾ? ಚಲಂ ಗೆ ಅದು ಹೇಗೆ ಸಾಧ್ಯವಾಯಿತು?

(ರವಿ ಬೆಳಗೆರೆ ಅನುವಾದಿಸಿರುವ 'ಚಲಂ' ಆತ್ಮಕಥೆಯಲ್ಲಿನ ಜೋಗಿ ಅವರ ಲೇಖನದಿಂದ)

ಓದುಗರ ಏಕಾಂತ 


         ಬರಹಗಾರರಿಗೆ ಆಶ್ಚರ್ಯವಾಗಬಹುದು. ಬರಹಗಾರರ ಪ್ರವೇಶವೆಂಬುವುದು (ರೈಟರ್ಸ್ ಸ್ಪೇಸ್) ಕೊನೆಗೂ ಇರುವುದು ಓದುಗರ ಏಕಾಂತದಲ್ಲಿ. ಓದುಗನ ಏಕಾಂತವನ್ನು ಪ್ರವೇಶಿಸಬಲ್ಲ ಕೃತಿಗಳು ದೊಡ್ಡ ದೊಡ್ಡ ಪಲ್ಲಟಗಳಿಗೆ, ಜಿಗಿತಗಳಿಗೆ ಕಾರಣವಾಗುತ್ತವೆ. ಒಂದು ಕೃತಿ ಸುಂದರವಾಗಿದ್ದು, ನಿಪುಣವಾಗಿದ್ದು, ಕುಶಲತೆಯಿಂದ ಕೂಡಿದ್ದು ಕೂಡ ಓದುಗನ ಏಕಾಂತವನ್ನು ಪ್ರವೇಶಿಸದೇ ಹೋಗಬಹುದು. ಇಲ್ಲ ಏಕಾಂತದ ಹೊರವಲಯವನ್ನು ಪ್ರವೇಶಿಸಿ ಏನೂ ಪ್ರಭಾವ ಬೀರದೆ ಹೋಗಬಹುದು. ನಾವೆಲ್ಲಾ ಪ್ರತಿನಿತ್ಯವೂ ಎದುರಿಸುವ ಬಹುಪಾಲು ಕೃತಿಗಳು ಈ ಪೈಕಿಯವೆ. ಓದುಗ ಏಕಾಂತದಲ್ಲಿದ್ದಾಗ ತನ್ನನ್ನೂ, ತಾನು ಓದುತ್ತಿರುವ ಕೃತಿಯನ್ನೂ ಹೇಗೆ ಪರಿಭಾವಿಸುತ್ತಾನೆ ಎಂಬುದರ ಬಗ್ಗೆ ಯೋಚಿಸದೆ ಬರೆಯುವ ಬಹುಪಾಲು ಲೇಖಕರು ಸಹಸ್ರಾರು ಪ್ರತಿಗಳಲ್ಲಿ, ಗ್ರಂಥಾಲಯದ ಅಲ್ಮೆರಾಗಳಲ್ಲಿ ಉಳಿದು ಬಿಡುತ್ತಾರೆ. ಕೆಲವು ಲೇಖಕರು ಮಾತ್ರ ಓದುಗನ ಏಕಾಂತಕ್ಕೆ ಲಗ್ಗೆ ಹಾಕಲು ಪ್ರಯತ್ನಿಸುತ್ತಾರೆ. 

(ಕೆ.ಸತ್ಯನಾರಾಯಣ ಅವರ 'ಖಾಸಗಿ ವಿಮರ್ಶೆ' ಪುಸ್ತಕದಿಂದ)

ಸತ್ಯವಲ್ಲದೆ ಬೇರೇನೂ ಇಲ್ಲ 


        ಈ ಎಲ್ಲಾ ಪುಟಗಳೊಳಗೆ ಇರುವುದೆಲ್ಲವೂ ಸತ್ಯ. ಸತ್ಯವಲ್ಲದೆ ಬೇರೇನೂ ಇಲ್ಲ. ನಾನು ಹೇಳಿರುವುದೆಲ್ಲವೂ ಸತ್ಯ. ಓದುಗರು ಅರಗಿಸಿಕೊಳ್ಳಬಹುದಾದ ಬದುಕಿನ ಅಪರೂಪವೆನ್ನಿಸಬಹುದಾದ ಬಹುಪಾಲು ಘಟನೆಗಳನ್ನು ಶೇಕಡಾ ನೂರಕ್ಕೆ ತೊಂಬತ್ತರಷ್ಟು ನೈಜವಾಗಿ ಬರೆದಿರುವೆ. ಇದು ನನ್ನ ಕಥೆ ಮಾತ್ರವಲ್ಲ. ನನ್ನ ವಾರಿಗೆಯ ಮತ್ತು ಪ್ರಥಮ ಪಂಚ ವಾರ್ಷಿಕ ಯೋಜನೆಯ ಎಡ ಬಲ ಹುಟ್ಟಿರುವ ಎಲ್ಲರ ಜೀವನದ ಕಥೆ ಕೂಡ. ನಮ್ಮೆಲ್ಲರ ಸಂಕಟಗಳು ಆಯಾ ಕಾಲ ಘಟ್ಟದ ನಿಸ್ತೇಜ ಚಹರೆಗಳಿಗೆ ಸಂಬಂಧಿಸಿದವು ಕೂಡ. ಆದ್ದರಿಂದ ನನ್ನ ವಾರಿಗೆಯ ನಮ್ಮನ್ನು ಹುರಿದು ಮುಕ್ಕಿದ ಆ ದಿನಗಳ ಪ್ರತಿನಿಧಿಯಾಗಿ ನಾನಿಷ್ಟೊಂದು ಬರೆಯಲೇ ಬೇಕಾಯಿತು. ಈ ಬರಹದೊಳಗೆ ಸ್ಲಂಗಳಿರುವಂತೆಯೇ ಹಲವು ಸುಂದರ ಬಡಾವಣೆಗಳೂ ಇವೆ. ಹತಾಶೆ, ಸಂಕಟಗಳು, ಹುಂಬತನ, ಸಾಹಸಗಳು, ಕನಸುಗಳು, ನನಸುಗಳಿರುವಂತೆಯೇ ಒಂದು ಕಾಲ ಘಟ್ಟದ, ಒಂದು ಸಮಾಜದ, ಒಂದು ಪ್ರದೇಶದ, ಸಾಹಿತ್ಯದ ಇತಿಹಾಸವೂ ಇದೆ. ಇಲ್ಲಿನ ಅಕ್ಷರಗಳು ಕೇವಲ ಅಕ್ಷರಗಳಲ್ಲ. ಒಂದೊಂದು ಅಕ್ಷರ ಸಂಕಟದ ಕನ್ನಡಿಯಲ್ಲಿ ಗೋಚರಿಸುವ ಪ್ರತಿಬಿಂಬವೂ ಹೌದು. ಗ್ರಹಿಕೆ ಮತ್ತು ಸತ್ಯದ ನಡುವಿನ ಕಂದಕವನ್ನು ಮುಚ್ಚುವ ಪ್ರಯತ್ನವೇ ನನ್ನೀ 'ಗಾಂಧಿ ಕ್ಲಾಸು'.

(ಕುಂವೀ ಆತ್ಮಕಥೆ 'ಗಾಂಧಿ ಕ್ಲಾಸು' ಪುಸ್ತಕದಿಂದ)


ಪ್ರೀತಿಸುವವರು ಬಹುಶ: ಲೇಖಕರಾಗಿರುವುದಿಲ್ಲ 


        ರಮ್ಯತೆಯು ಕಲ್ಪನಾ ಶಕ್ತಿಯನ್ನು ಅಣಕವಾಡುತ್ತದೆಂದು ಅಮೇರಿಕನ್  ಕವಿ ವಾಲೇಸ್ ಸ್ಟೀವನ್ಸ್ ಹೇಳಿದ್ದನ್ನು ಇಲ್ಲಿ ಜ್ಞಾಪಿಸೋಣ. ಭಾವುಕತೆಯ ಭಾವುಕತೆಯು ಸಂವೇದನಾ ಶಕ್ತಿಗೆ  ಹೇಗೋ ಹಾಗೆ ರಮ್ಯತೆಯು ಕಲ್ಪನಾ ಶಕ್ತಿಗೆ ಎನ್ನುತ್ತಾನೆ ಈತ. ಅತಿ ರಮ್ಯತೆಯು ನಮ್ಮನ್ನು ಆತ್ಮರತಿಗೂ ಅತಿ ಭಾವುಕತೆಯು ಆತ್ಮಾವಲೊಕನಕ್ಕೂ ಕೊಂಡೊಯ್ದು ಕೂಡ್ರಿಸಬಹುದೆಂಬುದು ವಾಲೇಸ್ ಸ್ಟೀವನ್ಸ್ ನ  ಮತ. ಲೇಖಕನಾದವನಿಗೆ, ಕಲಾವಿದನಿಗೆ ಸಂವೇದನಾ ಶಕ್ತಿ ಮತ್ತು ಕಲ್ಪನಾ ಶಕ್ತಿಗಳು ಎಲ್ಲರಕ್ಕಿಂತ ಹೆಚ್ಚು. ಇವೆರಡನ್ನೂ ಆತ ಎಂಥ ಸಂದರ್ಭಗಳಲ್ಲೂ ಬಿಟ್ಟು ಕೊಡಬಾರದು. ಈ ಗುಣಗಳೇ ಆತನನ್ನು ಎಲ್ಲರ ಮಧ್ಯೆ ಒಂಟಿಯನ್ನಾಗಿ ಮಾಡುತ್ತದೆಂದು ತೋರುತ್ತದೆ.

        ಲಾರೆನ್ಸ್ ತನ್ನನ್ನು ಪ್ರೀತಿಸಿದ ಹುಡುಗಿಯರನ್ನೇ ತನ್ನ ಕತೆ ಕಾದಂಬರಿಗಳ ನಾಯಕಿಯರನ್ನಾಗಿ ಮಾಡಿದಾಗ ಆತನ ಪ್ರೀತಿ  ಯಾವ ಬಗೆಯದಿತ್ತು ಎಂಬ ಸಂದೇಹವೆಳುತ್ತದೆ. ನಿಜಕ್ಕೂ ಪ್ರೀತಿಸುವವರು ಬಹುಶ: ಲೇಖಕರಾಗಿರುವುದಿಲ್ಲ. ಅವರು ನಾವು ದಿನವೂ ಬಸ್ಸಿನಲ್ಲಿ, ಪಾರ್ಕಿನಲ್ಲಿ, ಸಿನಿಮಾಗಳಲ್ಲಿ, ಹೋಟೆಲುಗಳಲ್ಲಿ, ಗುಡಿಸಿಲುಗಳಲ್ಲಿ ಕಾಣಬಹುದಾದ ಸಾಮಾನ್ಯ ಜನರು. ಅದೇ ರೀತಿ ನಿಜಕ್ಕೂ ಕ್ರಾಂತಿಕಾರಿಗಳಾದವರು ಕೂಡ ಲೇಖಕರಾಗಿರುವುದಿಲ್ಲ. ಕ್ರಾಂತಿಕಾರಿಗಳು ಕ್ರಾಂತಿಯನ್ನು ಮಾಡುತ್ತಲೇ ಇರುತ್ತಾರೆ. ಇಲ್ಲಿ ಮತ್ತೆ ಲಾರೆನ್ಸ್ ನದೇ  ಉದಾಹರಣೆಯನ್ನು ಕೊಡುವುದಾದರೆ ಆತ ಫ್ಲೋರಿಡಾದಲ್ಲೋ ಇನ್ನೆಲ್ಲೋ ಒಂದು ಆದರ್ಶ ಗ್ರಾಮವನ್ನು  ಕಟ್ಟುತ್ತೇನೆ ಎನ್ನುತ್ತಿದ್ದ. ಅದಕ್ಕೆ ಹೊಸ ಹೊಸ ಹೆಸರುಗಳನ್ನು ಹುಡುಕುತ್ತಿದ್ದ. ಇಡಿಯ ಲೋಕದ ವಿರುದ್ಧವೇ ಲಾರೆನ್ಸ್ ಗೆ ಸಿಟ್ಟಿತ್ತು. ಆದ್ದರಿಂದಲೇ ಇಂಥ ಲೋಕವನ್ನು ನಾಶಪಡಿಸಿ ತಾನು ಹೊಸದೊಂದು ಲೋಕವನ್ನು  ಸೃಷ್ಟಿಸುತ್ತೇನೆ ಎಂದುಕೊಳ್ಳುತ್ತಿದ್ದ. ಆದರೆ ಲಾರೆನ್ಸ್ ನ ಈ ಯೋಜನೆ ಕಾರ್ಯ ರೂಪಕ್ಕೆ ಬರಲಿಲ್ಲ. ಬಹುಶ: ಅದರಿಂದ ಯಾರಿಗೂ ಅಚ್ಚರಿಯೆನಿಸಲಿಲ್ಲ. ಅಲ್ದಸ್ ಹಕ್ಸಲಿ ಹೇಳುವಂತೆ ಇದೊಂದೂ ಮುಖ್ಯವಾಗಿರಲಿಲ್ಲ. ಮುಖ್ಯವಾಗಿದ್ದುದ್ದೆಂದರೆ ಲಾರೆನ್ಸ್ ಮಾತ್ರ ಹಾಗೂ ಆತನ ಒಳಗೆ ಉರಿಯುತ್ತಿದ್ದ ಆತ ಬರೆದ ಪ್ರತಿಯೊಂದು ಬರಹದಿಂದಲೂ ಉಜ್ವಲವಾಗಿ ಬೆಳಗುತ್ತಿದ್ದ ಬೆಂಕಿ.

        ಲಾರೆನ್ಸ್ ಫ್ಲೋರಿಡಾದಲ್ಲಿ ಕಾಲನಿಯನ್ನು ಸ್ಥಾಪಿಸಲಿಲ್ಲ. ಅಂಥ ಕಾಲನಿಗಳನ್ನು ಸ್ಥಾಪಿಸುವುದಕ್ಕೆ ರಜನೀಶರಂಥವರು  ಇದ್ದಾರೆ. ಒಂದು ವೇಳೆ ಲಾರೆನ್ಸ್ ಒಂದು ಆದರ್ಶ ಲೋಕವನ್ನು ಸೃಷ್ಟಿಸಿದ್ದರೂ ಅದು ಹೆಚ್ಚು ಕಾಲ ಹಾಗೆ ಉಳಿಯುತ್ತಿರಲಿಲ್ಲ. ಮಾತ್ರವಲ್ಲ ಅವನಿಂದ ಶ್ರೇಷ್ಠ ಕೃತಿಗಳ  ನಿರ್ಮಾಣವೂ ಆಗುತ್ತಿರಲಿಲ್ಲ. ಆದರ್ಶಗಳು ಕನಸಾಗಿ ಉಳಿಯುವುದೇ ಒಳ್ಳೆಯದೆಂದು ಕಾಣುತ್ತದೆ. ಇದರರ್ಥ ಆದರ್ಶಗಳು ಯಾವ ಗಳಿಗೆಯಲ್ಲೂ  ನನಸಾಗಲಾರವು ಎಂದಲ್ಲ. ಆದರೆ ನೆನಪಾಗಿ ಅವು ಬಹಳ ಕಾಲ ಉಳಿಯಲಾರವು. ಕನಸು ಮತ್ತು ನೆನಪುಗಳ  ಸಂಘರ್ಷ  ನಿರಂತರವಾದುದು ಮತ್ತು ಈ ಸಂಘರ್ಷ   ಇರುವ ತನಕ ಕನಸುಗಳೂ ಬೇಕು ಮತ್ತು ಅವನ್ನು ಕಾಣುವವರೂ ಬೇಕು.

(ಶೂದ್ರ ಶ್ರೀನಿವಾಸ ಅವರ 'ಕನಸಿಗೊಂದು ಕಣ್ಣು' ಪುಸ್ತಕದ ಕೆ.ವಿ.ತಿರುಮಲೇಶ ಅವರ ಮುನ್ನುಡಿಯಿಂದ)

ಕೊನೆಯ ಮಾತು 


               ಪುಸ್ತಕವೊಂದು ಅದು ಅನೇಕ ಗೆಳೆಯರಿಗೆ ಸಮ ಎಂದು ಪುಸ್ತಕ ಪ್ರಿಯನೊಬ್ಬ ಹೇಳಿದ ಮಾತಿದು. ಒಂದು ಉತ್ತಮ ಪುಸ್ತಕದ ಓದು ಅದು ನಮ್ಮ ಬದುಕಿನ  ದಿಕ್ಕನ್ನೇ ಬದಲಿಸಬಲ್ಲದು. ಇವತ್ತಿನ ಏನೆಲ್ಲಾ ಮನೋರಂಜನಾ ಮಾಧ್ಯಮಗಳೆದರು ಪುಸ್ತಕದ ಓದು ಕಡಿಮೆಯಾಗುತ್ತಿದೆ ಎನ್ನುವ ಮಾತು ನಿಜ. ಆದರೆ ಪುಸ್ತಕವೊಂದನ್ನು ಓದಿದ ಆ ಕ್ಷಣ ಮನಸ್ಸಿಗೆ ಸಿಗುವ ತೃಪ್ತಿ ಮತ್ತು ಸಮಾಧಾನ ಯಾವ ಆಧುನಿಕ ಮನೋರಂಜನಾ ಮಾಧ್ಯಮಗಳಿಂದಲೂ ದೊರೆಯಲಾರದು. ಒಂದು ಓದು ನಮ್ಮನ್ನು ವಿವೇಚನೆಗೆ ಹಚ್ಚುತ್ತದೆ, ಚಿಂತನೆಯ ಕಡೆಗೆ  ಕರೆದೊಯ್ಯುತ್ತದೆ, ನಮ್ಮಲ್ಲೊಂದು ಸೃಜನಶೀಲತೆ ವಿಕಸಿಸಲು ನೆರವಾಗುತ್ತದೆ. ಒಂದರ್ಥದಲ್ಲಿ ನಮ್ಮನ್ನು ಮನುಷ್ಯರಾಗುವತ್ತ ಹೆಜ್ಜೆ ಹಾಕುವಂತೆ ಮಾಡುವ ಶಕ್ತಿ ಮತ್ತು ಸಾಮರ್ಥ್ಯ ಓದಿಗಿದೆ.  

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, May 7, 2013

ಕನ್ನಡ ಪುಸ್ತಕೋದ್ಯಮ ಎದುರಿಸುತ್ತಿರುವ ಸವಾಲುಗಳು

       


        ಈ ವಿಷಯ ಮೊನ್ನೆ ಗೊತ್ತಾಯಿತು. ಲೇಖಕ ಮತ್ತು ಪ್ರಕಾಶಕರಾಗಿರುವ ನನ್ನ ಸ್ನೇಹಿತರೋರ್ವರಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಪುಸ್ತಕ ಖರೀದಿಗೆ ಸಂಬಂಧಿಸಿದಂತೆ ಪತ್ರ ಬಂದಿತ್ತು. ಆ ಪತ್ರದಲ್ಲಿ ಉಲ್ಲೇಖಿಸಿದಂತೆ ಪುಸ್ತಕದ ಮೂರು ನೂರು ಪ್ರತಿಗಳನ್ನು ಕಳುಹಿಸಿಕೊಡುವಂತೆ ಹಾಗೂ ಪುಸ್ತಕದ ಪ್ರತಿ ಪುಟಕ್ಕೆ ೪೦ ಪೈಸೆಗಳ ಬೆಲೆ  ನಿಗದಿಪಡಿಸಲಾಗಿತ್ತು. ನನ್ನ ಸ್ನೇಹಿತನ ಪುಸ್ತಕ ಒಟ್ಟು ನೂರು ಪುಟಗಳಲ್ಲಿದ್ದು ಅದರ ಮುಖ ಬೆಲೆ ಎಪ್ಪತ್ತು ರೂಪಾಯಿಗಳಾಗಿತ್ತು. ಹೀಗಿದ್ದೂ ಆತ ಒಂದು ಪ್ರತಿಗೆ ೪೦ ರೂಪಾಯಿಗಳಂತೆ ೩೦೦ ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟಮಾಡಬೇಕಾದ ಅನಿವಾರ್ಯತೆ ಎದುರಾಯಿತು. ಈ ಪುಸ್ತಕ ಮಾರಾಟದಿಂದ ಅವನಿಗೇನಾದರೂ ಲಾಭವಾಗಿರಬಹುದೇ ಎನ್ನುವ ಸಂದೇಹ ನನ್ನನ್ನು ಕಾಡುತ್ತಿರುವ ಹೊತ್ತಿನಲ್ಲೇ ಆತ ಪ್ರಕಟಣೆಯ ಮೇಲೆ ಆದ ಖರ್ಚಿನ ಲೆಕ್ಕ ಒಪ್ಪಿಸಿದ. ಪುಸ್ತಕದ ಒಟ್ಟು ಸಾವಿರ ಪ್ರತಿಗಳ ಪ್ರಕಟಣೆಗಾಗಿ ಆತ ಮುದ್ರಕರಿಗೆ ಕೊಟ್ಟ ಹಣ ಬರೋಬ್ಬರಿ ಮೂವತ್ತು ಸಾವಿರ ರೂಪಾಯಿಗಳು. ಈ ನಡುವೆ ಪುಸ್ತಕ ಬಿಡುಗಡೆಗಾಗಿ ನಾಲ್ಕೈದು ಸಾವಿರ ರೂಪಾಯಿಗಳು ಖರ್ಚಾದವು. ಸಾವಿರ ಪ್ರತಿಗಳು ಪ್ರಕಟವಾಗಿ ಕೈಸೇರಿದಾಗ ಅವುಗಳಲ್ಲಿ ನೂರರಿಂದ ನೂರೈವತ್ತು ಪ್ರತಿಗಳು ಗೌರವ ಪ್ರತಿ ರೂಪದಲ್ಲಿ ಪುಕ್ಕಟ್ಟೆಯಾಗಿ ಕೈಬಿಟ್ಟವು. ಮೂರು ನೂರು ಪ್ರತಿಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟ ಮಾಡಿದ್ದರಿಂದ ಬಂದ ಹಣ ಹನ್ನೆರಡು ಸಾವಿರ ರೂಪಾಯಿಗಳು. ಪರಿಚಯದ ಪುಸ್ತಕ ಮಾರಾಟಗಾರರನ್ನು ಸಂಪರ್ಕಿಸಿದಾಗ ಎರಡು ನೂರು ಪ್ರತಿಗಳೆನೋ ಶೇಕಡಾ ೨೦ ರ ರಿಯಾಯಿತಿ ದರದಲ್ಲಿ ಮಾರಾಟವಾದರೂ ಅವರಿಂದ ಬರಬೇಕಾದ ರೂ. ೧೧,೨೦೦/- ಇನ್ನೂ ಆತನ ಕೈಸೇರಿಲ್ಲ. ಸುಮಾರು ಮೂರು ನೂರು ಪ್ರತಿಗಳು ಮಾರಾಟವಾಗದೆ ಹಾಗೇ ಉಳಿದುಕೊಂಡಿವೆ. 

          ಪುಸ್ತಕ ಪ್ರಕಟಣೆಗಾಗಿ ಆದ ಖರ್ಚು ಮತ್ತು ಮಾರಾಟದಿಂದ ಕೈಸೇರಿದ ಹಣ ಎರಡನ್ನೂ ಕೂಡಿ ಕಳೆದು ನೋಡಿದಾಗ ಆತನಿಗೆ ಈ ಪುಸ್ತಕ ಪ್ರಕಟಣೆಯಿಂದ ಅಂದಾಜು ೧೨,೦೦೦ ರೂಪಾಯಿಗಳ ನಷ್ಟವಾಯಿತು. ಬಳಿಯಲ್ಲಿ ಮೂರು ನೂರು ಪ್ರತಿಗಳು ಇವೆಯಾದರೂ ಅವು ಮಾರಾಟವಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಇಂಥದ್ದೊಂದು ಸಮಸ್ಯೆಯನ್ನು ಎದುರಿಸಿರುವ ಆತ ಭವಿಷ್ಯದಲ್ಲಿ ಪುಸ್ತಕ ಪ್ರಕಟಣೆಯ ಕೆಲಸಕ್ಕೆ ಕೈಹಾಕದಿರಲು ನಿರ್ಧರಿಸಿರುವನು. ಒಂದಿಷ್ಟು ಉತ್ತೇಜನ ದೊರೆತಿದ್ದರೆ ಬೇರೆ ಬೇರೆ ಲೇಖಕರ ಪುಸ್ತಕಗಳನ್ನು ಪ್ರಕಟಿಸುವ ಇರಾದೆ ಅವನದಾಗಿತ್ತು. ಆದರೆ ಎದುರಾದ ನಿರುತ್ಸಾಹ ಆತನನ್ನು ಶಾಶ್ವತವಾಗಿ ಕನ್ನಡ ಪುಸ್ತಕೋದ್ಯಮದಿಂದ ದೂರಾಗುವಂತೆ ಮಾಡಿತು.

     ಈ ಮೇಲೆ ಹೇಳಿದಂಥ ಸಮಸ್ಯೆಯನ್ನು ಇವತ್ತು ಕನ್ನಡದ ಎಲ್ಲ ಪುಸ್ತಕ ಪ್ರಕಾಶಕರು ಎದುರಿಸುತ್ತಿರುವರು. ಪುಸ್ತಕಗಳ ಪ್ರಕಟಣೆಯ ಖರ್ಚು, ಅದ್ದೂರಿ ಸಮಾರಂಭದಲ್ಲಿ ಪುಸ್ತಕಗಳ ಬಿಡುಗಡೆ, ಪುಸ್ತಕಗಳ ಮಾರಾಟಕ್ಕಾಗಿ ವಿತರಕರನ್ನು ಹುಡುಕಿಕೊಂಡು ಅಲೆದಾಟ, ಓದುಗರು ಅಪೇಕ್ಷಿಸುತ್ತಿರುವ ಅಧಿಕ ರಿಯಾಯಿತಿ ಈ ಎಲ್ಲದರ ಪರಿಣಾಮ ಪುಸ್ತಕ ಪ್ರಕಟಣೆ ಎನ್ನುವುದು ಪ್ರಕಾಶಕರಿಗೆ ಹೊರೆಯಾಗುತ್ತಿದೆ. ಇಂಥದ್ದೊಂದು ಸಮಸ್ಯೆಯ ನಡುವೆಯೂ ಕರ್ನಾಟಕದಲ್ಲಿ ನೂರಾರು ಪ್ರಕಾಶಕರು ಪುಸ್ತಕೋದ್ಯಮದಲ್ಲಿ ತೊಡಗಿಕೊಂಡಿರುವುದನ್ನು ಕೆಲವರು ಉಲ್ಲೇಖಿಸಬಹುದು. ನಿಜವಾದ ಸಂಗತಿ ಎಂದರೆ ಅವರಲ್ಲಿ ಹೆಚ್ಚಿನವರು ಲೇಖಕರೇ ಪ್ರಕಾಶಕರಾಗಿ ತಮ್ಮ ಪುಸ್ತಕಗಳನ್ನು ಪ್ರಕಟಿಸಿರುವರೆ ವಿನಃ ಪೂರ್ಣ ಪ್ರಮಾಣದಲ್ಲಿ ಪುಸ್ತಕೋದ್ಯಮದಲ್ಲಿ ತೊಡಗಿಸಿಕೊಂಡವರ ಸಂಖ್ಯೆ ಬಹಳಷ್ಟು ಕಡಿಮೆ. ಹೀಗೆ ಲೇಖಕರೇ ಪ್ರಕಾಶಕರಾದಾಗ ಒಂದೆರಡು ಪುಸ್ತಕಗಳ ಪ್ರಕಟಣೆಯ ಹೊತ್ತಿಗೆ ಹೈರಾಣಾಗಿ ಅವರು ಪುಸ್ತಕ ಪ್ರಕಟಣೆಯ ಕೆಲಸವನ್ನೇ ಕೈ ಬಿಡುತ್ತಿರುವರು. ಹೀಗಾಗಿ ಕನ್ನಡದಲ್ಲಿ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಷ್ಟೇ ವೇಗದಲ್ಲಿ ನಶಿಸಿ ಹೋಗುತ್ತಿವೆ. ಆದರೆ ಏನೆಲ್ಲ ಸಮಸ್ಯೆಗಳ ನಡುವೆಯೂ ಕೆಲವೊಂದು ಪ್ರಕಾಶನ ಸಂಸ್ಥೆಗಳು ಗಟ್ಟಿಯಾಗಿ ತಳವೂರಿ ಕನ್ನಡ ಪುಸ್ತಕಗಳ ಪ್ರಕಟಣೆಯ ಕೆಲಸವನ್ನು ಒಂದು ವೃತದಂತೆ ಮುನ್ನಡೆಸಿಕೊಂಡು ಹೋಗುತ್ತಿವೆ. ಅಂಥ ಸಂಸ್ಥೆಗಳಿಗೆ ಉದಾಹರಣೆಯಾಗಿ ಮನೋಹರ ಗ್ರಂಥಮಾಲೆ, ಲೋಹಿಯಾ ಪ್ರಕಾಶನ, ನವಕರ್ನಾಟಕ ಪಬ್ಲಿಕೇಷನ್ಸ್, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ, ಅಂಕಿತ ಪ್ರಕಾಶನ, ಸಪ್ನಾ ಬುಕ್ ಹೌಸ್ ಹೀಗೆ ಬೆರಳೆಣಿಕೆಯಷ್ಟು ಪ್ರಕಾಶನ ಸಂಸ್ಥೆಗಳ ಹೆಸರುಗಳನ್ನು ಹೇಳಬಹುದು.

           ನಿಜಕ್ಕೂ ಪುಸ್ತಕ ಪ್ರಕಟಣೆ ಎನ್ನುವುದು ಅದೊಂದು ಪವಿತ್ರ ಕಾರ್ಯ. ಇಲ್ಲಿ ಪ್ರಕಾಶಕರು ಪುಸ್ತಕ ಪ್ರಕಟಣೆಯ ಮೂಲಕ ನಾಡಿನ ಸಾಂಸ್ಕೃತಿಕ ಬೆಳವಣಿಗೆಗೆ ಅವರು ಸಲ್ಲಿಸುತ್ತಿರುವ ಕೊಡುಗೆ ಅಭಿನಂದನಾರ್ಹ. ಕರ್ನಾಟಕ ಏಕೀಕರಣದಲ್ಲಿ ಲೋಕ ಶಿಕ್ಷಣ ಟ್ರಸ್ಟ್ ತನ್ನ ಪ್ರಕಟಣೆಯ ಮೂಲಕ ಅದು ಅಂದು ನಿರ್ವಹಿಸಿದ ಪಾತ್ರ ಕರ್ನಾಟಕದ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯಿತು. ಲೇಖಕನೋರ್ವನ ಬೌದ್ಧಿಕ ವಿಚಾರವೊಂದು ಪುಸ್ತಕ ರೂಪದಲ್ಲಿ ಪ್ರಕಟವಾಗಿ ಅದು ಸಮಾಜದಲ್ಲಿ ಸೃಷ್ಟಿಸುವ ಸಂಚಲನ ಮತ್ತು ಆಗುವ ಬದಲಾವಣೆಗಳ ಹಿಂದೆ ಪ್ರಕಾಶಕರ ಪಾತ್ರ ಮಹೋನ್ನತವಾದದ್ದು. ತತ್ವಜ್ಞಾನಿಯೋರ್ವ ಪುಸ್ತಕಗಳನ್ನು ಮುಂದಿನ ಜನಾಂಗದ ಆಸ್ತಿ ಎಂದು ಕರೆದು ಪುಸ್ತಕಗಳ ಮಹತ್ವವನ್ನು ಇಡೀ ಜಗತ್ತಿಗೇ ತೋರಿಸಿಕೊಟ್ಟಿರುವನು. 'ದಾಸ್ ಕ್ಯಾಪಿಟಲ್' ನಂಥ ಕೃತಿ ದೇಶವೊಂದರ ಕ್ರಾಂತಿಗೆ ಕಾರಣವಾಯಿತು. ಗಾಂಧೀಜಿ ಅವರ 'ಸತ್ಯದೊಂದಿಗೆ ನನ್ನ ಪ್ರಯೋಗಗಳು' ಪುಸ್ತಕ ಇವತ್ತಿಗೂ ಓದುಗರನ್ನು ಆತ್ಮ ವಿಮರ್ಶೆ ಎನ್ನುವ ಕಟಕಟೆಯಲ್ಲಿ ಒಯ್ದು ನಿಲ್ಲಿಸುವ ಮಹತ್ವದ ಕೃತಿ. ಹೀಗೆ ಪುಸ್ತಕವೊಂದು ಕಟ್ಟಿಕೊಡುವ ಅನುಭವ ಮತ್ತು ಸೃಷ್ಟಿಸುವ ಸಂಚಲನದ ಹಿಂದೆ ಪ್ರಕಾಶಕರ ಶ್ರಮ ಹಾಗೂ ಅವರ ಸೃಜನಾತ್ಮಕ ಚಟುವಟಿಕೆಯಿದೆ. ಆದರೆ ಕಾಲಾನಂತರದಲ್ಲಿ ಆದ ಅನೇಕ ಬದಲಾವಣೆಗಳು ಮತ್ತು ಬೆಳವಣಿಗೆಗಳು ಇವತ್ತು ಕನ್ನಡ ಪುಸ್ತಕೋದ್ಯಮವನ್ನು ವಿನಾಶದಂಚಿಗೆ ತಂದು ನಿಲ್ಲಿಸಿವೆ. ಪರಿಣಾಮವಾಗಿ ಪುಸ್ತಕ ಪ್ರಕಟಣೆಯನ್ನು ಒಂದು ಉದ್ಯಮವಾಗಿ ಒಪ್ಪಿಕೊಳ್ಳುವ ಪ್ರಕಾಶಕರ ಸಂಖ್ಯೆ ರಾಜ್ಯದಲ್ಲಿ ಕ್ಷೀಣಿಸುತ್ತಿದೆ.

೧. ಪುಸ್ತಕದ ಓದು ಮತ್ತು ವಾಹಿನಿಗಳ ಭರಾಟೆ 


        ಕಳೆದ ಒಂದು ದಶಕದಿಂದ ಕನ್ನಡದಲ್ಲಿ ವಾಹಿನಿಗಳ ಸಂಖ್ಯೆ ದಿನದಿಂದ ದಿನಕ್ಕೆ ವೃದ್ಧಿಸುತ್ತಿದೆ. ಈ ಮೊದಲು ಸರ್ಕಾರದ ನಿಯಂತ್ರಣದಲ್ಲಿದ್ದ ದೂರದರ್ಶನವೊಂದೇ ಏಕೈಕ ಎಲೆಕ್ಟ್ರಾನಿಕ್ ಮನೋರಂಜನಾ ಮಾಧ್ಯಮವಾಗಿತ್ತು. ಆ ದೂರದರ್ಶನದಲ್ಲಿ ಮನೋರಂಜನೆ ಎನ್ನುವುದು ಅದರ ಕಾರ್ಯಕ್ರಮಗಳ ಒಂದು ಭಾಗವಾಗಿತ್ತೆ ವಿನಃ ಮನೋರಂಜನೆಯೇ ಅದರ ಪೂರ್ಣ ಉದ್ದೇಶವಾಗಿರಲಿಲ್ಲ. ಪರಿಣಾಮವಾಗಿ ಅಂದಿನ ದೂರದರ್ಶನದ ವೀಕ್ಷಕರು ಪುಸ್ತಕದ ಓದುಗರೂ ಸಹ ಆಗಿದ್ದರು. ಇದಕ್ಕೆ ಕಾರಣವೇನೆಂದರೆ ದೂರದರ್ಶನದ ಕಾರ್ಯಕ್ರಮಗಳ ನಡುವೆಯೂ ಓದುಗರಿಗೆ ಪುಸ್ತಕಗಳ ಓದಿಗಾಗಿ ಸಾಕಷ್ಟು ಕಾಲಾವಕಾಶವಿರುತ್ತಿತ್ತು. ಆದರೆ ಯಾವಾಗ ಮಾಧ್ಯಮದಲ್ಲಿ ಖಾಸಗಿ ವಾಹಿನಿಗಳು ಪ್ರಭುತ್ವ ಸಾಧಿಸಿದವೋ ಆಗ ಮನೋರಂಜನೆಯೇ ಪ್ರಧಾನವಾಗುತ್ತ ಹೋಯಿತು. ದಿನದ ೨೪ ಗಂಟೆಗಳೂ ಖಾಸಗಿ ವಾಹಿನಿಗಳಲ್ಲಿ ಮನೋರಂಜನಾ ಕಾರ್ಯಕ್ರಮಗಳು ವೀಕ್ಷಿಸಲು ಲಭ್ಯವಿರುವುದರಿಂದ ಅತಿ ಹೆಚ್ಚಿನ ಓದುಗರು ವಾಹಿನಿಗಳ ವೀಕ್ಷಕರಾಗಿ ಬದಲಾದರು. ಹಿಂದೆ ಎಲ್ಲ ಮನೆಗಳಲ್ಲಿ ಗೃಹಿಣಿಯರು ತಮ್ಮ ಮನೆ ಕೆಲಸದ ಬಿಡುವಿನ ವೇಳೆಯನ್ನು ಓದುವಂಥ ಸೃಜನಾತ್ಮಕ ಹವ್ಯಾಸಕ್ಕಾಗಿ ಬಳಸಿಕೊಳ್ಳುತ್ತಿದ್ದರು. ಯಾವಾಗ ಖಾಸಗಿ ವಾಹಿನಿಗಳು ಭರಪೂರ ಮನೋರಂಜನೆಯನ್ನು ಕೊಡಲು ಪ್ರಾರಂಭಿಸಿದವೋ ಆಗ ಅವರೆಲ್ಲ ಓದಿನಿಂದ ದೂರಾದರು. ಇದರ ನೇರ ಪರಿಣಾಮವಾಗಿದ್ದು ಪುಸ್ತಕೋದ್ಯಮವನ್ನೇ ನಂಬಿಕೊಂಡು ಬದುಕುತ್ತಿದ್ದ ಪ್ರಕಾಶಕರ ಮೇಲೆ. ಮನೋರಂಜನೆಯು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ದೊರೆಯಲು ಪ್ರಾರಂಭಿಸಿದ ಮೇಲೆ ಪುಸ್ತಕಗಳನ್ನು ಖರೀದಿಸುವವರ ಸಂಖ್ಯೆ ಕ್ಷೀಣಿಸಲಾರಂಭಿಸಿತು. ಯಾವ ರೀತಿ ಈ ಎಲೆಕ್ಟ್ರಾನಿಕ್ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸುತ್ತಿವೆ ಎಂದರೆ ಮುಂಜಾನೆ ಮನೆ ಬಾಗಿಲಿಗೆ ಬಂದು ಬೀಳುವ ದಿನಪತ್ರಿಕೆಯಲ್ಲಿನ ಸುದ್ದಿಯೇ ನಮಗೆ ಹಳೆಯದಾಗಿ ಕಾಣಿಸುತ್ತಿದೆ. ಪೈಪೋಟಿಯ ಪರಿಣಾಮ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಲು ವಾಹಿನಿಗಳು ರೋಚಕ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವುದರಿಂದ ಈ ಕಾರ್ಯಕ್ರಮಗಳೆದುರು ಪುಸ್ತಕದ ಓದು ಸಪ್ಪೆಯಾಗಿ ಕಾಣುತ್ತಿದೆ. ಒಟ್ಟಿನಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಸಾಹಿತ್ಯವಲಯ ಅತಿ ಹೆಚ್ಚಿನ ಸಂಖ್ಯೆಯ ಓದುಗರನ್ನು ಕಳೆದುಕೊಂಡಿರುವುದು ಸತ್ಯಕ್ಕೆ ಹತ್ತಿರವಾದ ಸಂಗತಿ. ಪರಿಸ್ಥಿತಿ ಹೀಗಿರುವಾಗ ಪ್ರಕಾಶಕರು ಕನ್ನಡ ಪುಸ್ತಕಗಳ ಪ್ರಕಟಣೆಗೆ ಮುಂದಾಗುತ್ತಿಲ್ಲ.

೨. ಮಾರಾಟ ಮತ್ತು ರಿಯಾಯಿತಿ 


           ಕನ್ನಡ ಪುಸ್ತಕಗಳ ಮಾರಾಟದಲ್ಲಿ ಪ್ರಕಾಶಕರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ ಎಂದರೆ ಅದು ಓದುಗರು ಪುಸ್ತಕಗಳ ಖರೀದಿಗಾಗಿ ಅಪೇಕ್ಷಿಸುತ್ತಿರುವ ಪುಸ್ತಕದ ಬೆಲೆಯ ಮೇಲಿನ ರಿಯಾಯಿತಿ.  ಹೆಚ್ಚಿನ ಓದುಗರು ಪುಸ್ತಕವೊಂದನ್ನು ಅದರ ಪ್ರಕಟಿತ ಬೆಲೆಗೆ ಖರೀದಿಸುವ ಔದಾರ್ಯ ತೋರಿಸುತ್ತಿಲ್ಲದಿರುವುದರಿಂದ ಪ್ರಕಾಶಕರಿಗೆ ಕನ್ನಡ ಪುಸ್ತಕಗಳ ಮಾರಾಟದಲ್ಲಿ ಹಿನ್ನಡೆ ಉಂಟಾಗುತ್ತಿದೆ. ಇಂಗ್ಲಿಷ್ ಭಾಷೆಯ ಪುಸ್ತಕಗಳ ಮಾರಾಟದಲ್ಲಿನ ರಿಯಾಯಿತಿಯ ಧಾರಾಳತನವೇ ಕನ್ನಡ ಪುಸ್ತಕೋದ್ಯಮಕ್ಕೆ ಉರುಳಾಗಿ ಪರಿಣಮಿಸಿದೆ. ಇಂಗ್ಲಿಷ್ ಭಾಷೆಯ ಪುಸ್ತಕಗಳ ಖರೀದಿಯಲ್ಲಿ   ೩೦ ರಿಂದ ೪೦ ಪ್ರತಿಶತ ರಿಯಾಯಿತಿ ಕೊಡುತ್ತಿರುವುದರಿಂದ ಓದುಗರು ಕನ್ನಡ ಪುಸ್ತಕಗಳಿಂದಲೂ ಇದನ್ನೇ ನಿರೀಕ್ಷಿಸುತ್ತಿರುವರು. ಇಂಗ್ಲಿಷ್ ಭಾಷೆಯ ಪುಸ್ತಕಗಳಿಗೆ ವಿಸ್ತಾರವಾದ ಮಾರುಕಟ್ಟೆ ಇರುವುದರಿಂದ ಹಾಗೂ ಕೆಲವೊಮ್ಮೆ ಪುಸ್ತಕ ವ್ಯಾಪಾರಿಗಳೇ ನಕಲು ಪ್ರತಿಗಳನ್ನು ಮುದ್ರಿಸಿ ಮಾರಾಟ ಮಾಡುವುದರಿಂದ ಇಲ್ಲಿ ನಷ್ಟಕ್ಕಿಂತ ಲಾಭವೇ ಹೆಚ್ಚು. ಆದರೆ ಇದೇ ಮಾತನ್ನು ಕನ್ನಡ ಪುಸ್ತಕಗಳ ಮಾರಾಟಕ್ಕೆ ಅನ್ವಯಿಸಿ ಹೇಳಲಾಗದು. ಕನ್ನಡ ಪುಸ್ತಕಗಳಿಗೆ ಸೀಮಿತ ಮಾರುಕಟ್ಟೆ ಇರುವುದರಿಂದ ಹೆಚ್ಚಿನ ರಿಯಾಯಿತಿ ನೀಡಿದಲ್ಲಿ ಪ್ರಕಾಶಕರಿಗೆ ನಷ್ಟವಾಗುವ ಸಾಧ್ಯತೆಯೇ ಅಧಿಕ.

           ಕನ್ನಡ ಪುಸ್ತಕಗಳ ಮಾರಾಟದಲ್ಲಿ ಪ್ರಕಾಶಕರು ಎದುರಿಸುತ್ತಿರುವ ಇನ್ನೊಂದು ಬಹುಮುಖ್ಯ ಸಮಸ್ಯೆ ಎಂದರೆ ಅದು ಹಣ ಪಾವತಿಸುವಲ್ಲಿ ಆಗುತ್ತಿರುವ ವಿಳಂಬ. ಸಾಮಾನ್ಯವಾಗಿ ಪ್ರಕಾಶಕರು ತಮ್ಮ ಪುಸ್ತಕಗಳ ಮಾರಾಟಕ್ಕಾಗಿ ಅವರು ಹೆಚ್ಚು ಅವಲಂಬಿತವಾಗಿರುವುದು ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಪುಸ್ತಕ ಮಾರಾಟಗಾರರನ್ನು. ಆದರೆ ಯಾವ ಶಿಕ್ಷಣ ಸಂಸ್ಥೆಗಳಾಗಲಿ ಇಲ್ಲವೇ ಪುಸ್ತಕ ಮಳಿಗೆಗಳಾಗಲಿ ಮುಂಗಣ ಹಣ ಪಾವತಿಸಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸುತ್ತಿರುವ ಉದಾಹರಣೆಯೇ ಇಲ್ಲ. ಇಲ್ಲಿ ಪ್ರಕಾಶಕ ಹಣ ಪಡೆಯುವುದಕ್ಕಾಗಿ ಅನೇಕ ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ಕೆಲವೊಮ್ಮೆ ಹಣ ಪಡೆಯುವುದಕ್ಕಾಗಿ ಪ್ರಕಾಶಕರು ನ್ಯಾಯಾಲಯದ ಮೆಟ್ಟಿಲು ಏರಿದ ಉದಾಹರಣೆಯೂ ಉಂಟು. ಹಲವು ಸಂದರ್ಭಗಳಲ್ಲಿ ಖರೀದಿಯಾದ ಪುಸ್ತಕಗಳು ತಿರಸ್ಕೃತಗೊಂಡು ಮತ್ತೆ ಮರಳಿ  ಪ್ರಕಾಶಕರ ಕೈ ಸೇರುವುದುಂಟು. ಹೀಗೆ ಹೆಚ್ಚಿನ ರಿಯಾಯಿತಿಯ ಅಪೇಕ್ಷೆ, ಹಣ ಪಾವತಿಸುವಲ್ಲಿನ ವಿಳಂಬ, ಕನ್ನಡ ಪುಸ್ತಕಗಳ ಖರೀದಿಯಲ್ಲಿ ತೋರಿಸುತ್ತಿರುವ ನಿರಾಸಕ್ತಿ ಈ ಎಲ್ಲ ಕಹಿ ಘಟನೆಗಳಿಂದ ಅನೇಕ ಕನ್ನಡ ಪ್ರಕಾಶನ ಸಂಸ್ಥೆಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ.

೩. ಪುಸ್ತಕ ಪ್ರಕಟಣೆ ಮತ್ತು ಪ್ರಚಾರ 


           ಪುಸ್ತಕ ಪ್ರಕಟಣೆಗಾಗಿ ಬಳಸುವ ಕಚ್ಚಾ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿರುವುದರಿಂದ ಪ್ರಕಾಶಕರಿಗೆ ಪುಸ್ತಕಗಳ ಪ್ರಕಟಣೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಈ ನಡುವೆ ಪುಸ್ತಕಗಳನ್ನು ವರ್ಣರಂಜಿತ ಸಮಾರಂಭದ ಅದ್ದೂರಿ ವೇದಿಕೆಯ ಮೇಲೆ ಬಿಡುಗಡೆ  ಮಾಡುವ  ಪರಿಸ್ಥಿತಿ ಎದುರಾಗಿದೆ. ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ, ಅತಿ ಗಣ್ಯರ ಅಧ್ಯಕ್ಷತೆ, ಆಹ್ವಾನಿತರಿಗೆ ಭೋಜನದ ವ್ಯವಸ್ಥೆ, ಪತ್ರಿಕಾ ಮಾಧ್ಯಮದವರಿಗೆ ಗೌರವ ಪ್ರತಿ ಹೀಗೆ ಅನೇಕ ಗಿಮಿಕ್ ಗಳನ್ನು ಕನ್ನಡ ಪುಸ್ತಕಗಳ ಬಿಡುಗಡೆಗಾಗಿ ಬಳಸಿಕೊಳ್ಳಲಾಗುತ್ತಿದೆ. ಕನ್ನಡ ಪುಸ್ತಕೋದ್ಯಮದಲ್ಲಿ ಪ್ರಕಾಶಕರು ಉಳಿಯಲು ಇವುಗಳೆಲ್ಲ ಅನಿವಾರ್ಯವಾಗುತ್ತಿವೆ. ಜೊತೆಗೆ ಈ ದಿನಗಳಲ್ಲಿ ಪುಸ್ತಕವೊಂದು ಓದುಗರ ವರ್ಗವನ್ನು ತಲುಪುವಂತಾಗಲು ಪ್ರಕಾಶಕರು ಈ ಹೊಸ ಬದಲಾವಣೆಗಳಿಗೆ ತಮ್ಮನ್ನು ತಾವು ತೆರೆದುಕೊಳ್ಳಬೇಕಾಗಿದೆ. ಪುಸ್ತಕಗಳ ಬಿಡುಗಡೆಯ ನಂತರವೂ ಚರ್ಚೆ, ಸಂವಾದಗಳ ಮೂಲಕ ವ್ಯಾಪಕ ಪ್ರಚಾರ ಒದಗಿಸಬೇಕಾಗಿದೆ. ಹೀಗೆ ಮಾಡಿದಾಗ ಮಾತ್ರ ಪ್ರಕಾಶಕ ಪುಸ್ತಕೋದ್ಯಮದಲ್ಲಿ ತಳವೂರಿ ನಿಲ್ಲಲು ಸಾಧ್ಯ. ಆದರೆ ಇದೆಲ್ಲ ಎಲ್ಲ ಪ್ರಕಾಶಕರಿಂದ ಸಾಧ್ಯವೇ ಎನ್ನುವುದೇ ಇಲ್ಲಿ ಎದುರಾಗುವ ಪ್ರಶ್ನೆ. ಆದ್ದರಿಂದ ಇಲ್ಲಿ ಬಲವಿರುವ ಪ್ರಕಾಶಕ ಮಾತ್ರ ಉಳಿದು ಬೆಳೆಯಲು ಸಾಧ್ಯ.

೪. ಓದುಗರ ಸೀಮಿತ ಓದು 


             ದೇವನೂರು ಮಹಾದೇವರ 'ಎದೆಗೆ ಬಿದ್ದ ಅಕ್ಷರ' ಪ್ರಕಟವಾದ ಒಂದು ತಿಂಗಳಲ್ಲೇ ಎರಡನೇ ಮುದ್ರಣ ಕಂಡಿತು. ದೇವನೂರರ ಪುಸ್ತಕಗಳ ಪ್ರಕಟಣೆಯ ನಡುವೆ ಸಾಕಷ್ಟು ಅಂತರವಿರುವುದರಿಂದ ಅವರ ಬರವಣಿಗೆಯ ಓದಿಗಾಗಿ ಕಾದು ಕುಳಿತಿದ್ದ ಓದುಗರು ಸಹಜವಾಗಿಯೇ ಪುಸ್ತಕವನ್ನು ಮುಗಿಬಿದ್ದು ಖರೀದಿಸಿದರು. ಓದುಗರ ಈ ಪ್ರಕಾರದ ಬೇಡಿಕೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಪ್ರಕಾಶಕ ಬಹು ಬೇಗನೆ ಕೃತಿಯ ಎರಡನೇ ಮುದ್ರಣ ಹೊರತರುವನು. ಅನಂತಮೂರ್ತಿಯವರ 'ಸುರಗಿ' ಗೂ ಇದೇ ರೀತಿಯ ಅನುಕೂಲಕರ ವಾತಾವರಣ ಎದುರಾಗಬಹುದು. ಭೈರಪ್ಪನವರ ಕಾದಂಬರಿಗಳಿಗೆ ದೊಡ್ಡ ಓದುಗರ ಸಮೂಹವೇ ಇರುವುದರಿಂದ ಅದರ ಲಾಭವೇನಿದ್ದರೂ 'ಸಾಹಿತ್ಯ ಭಂಡಾರ' ಪ್ರಕಾಶನ ಸಂಸ್ಥೆಗೆ ಮೀಸಲು. ಇದಕ್ಕೆಲ್ಲ ಕನ್ನಡ ಪುಸ್ತಕಗಳ ಓದುಗರ ಓದಿನ ವ್ಯಾಪ್ತಿ ಸೀಮಿತವಾಗಿರುವುದೇ ಕಾರಣ.

            ಕನ್ನಡದಲ್ಲಿ ಹೊಸ ಲೇಖಕರ ಪುಸ್ತಕಗಳನ್ನು ಓದುವ ಹಾಗೂ ಪ್ರೋತ್ಸಾಹಿಸುವ ಔದಾರ್ಯವನ್ನು ಓದುಗರು ತೋರಿಸುತ್ತಿಲ್ಲ. ಉತ್ತಮವಾದದ್ದು ಯಾವ ಲೇಖಕನಿಂದ ಬಂದರೂ ಅದನ್ನು ಓದಿ ಪ್ರೋತ್ಸಾಹಿಸುವ ಗುಣ ಕನ್ನಡದ ಓದುಗರಲ್ಲಿ ಬರಬೇಕು. ಹಾಗಾದಾಗ ಮಾತ್ರ ಲೇಖಕರೊಂದಿಗೆ ಪ್ರಕಾಶಕರೂ ಬೆಳೆಯಲು ಸಾಧ್ಯ. ನಮ್ಮ ಓದು ನಿರ್ಧಿಷ್ಟ ಲೇಖಕರ ಕೃತಿಗಳಿಗೆ ಸೀಮಿತವಾದರೆ ಒಂದರ್ಥದಲ್ಲಿ ಕೆಲವೇ ಪ್ರಕಾಶಕರು ಉಳಿದು ಬೆಳೆಯಲು ಅಪರೋಕ್ಷವಾಗಿ ನಾವುಗಳೇ ಕಾರಣರಾದಂತಾಗುವುದು. ಆದ್ದರಿಂದ ಕನ್ನಡ ಪುಸ್ತಕೋದ್ಯಮವನ್ನು ಉಳಿಸಿ ಬೆಳೆಸುವ ಮಹತ್ವದ ಜವಾಬ್ದಾರಿ ಓದುಗರ ಮೇಲಿದೆ.

೫. ಎಲೆಕ್ಟ್ರಾನಿಕ್ ಮಾಧ್ಯಮ 


             ಕನ್ನಡದಲ್ಲಿ ಅನೇಕ ಯುವ ಬರಹಗಾರರು ಎಲೆಕ್ಟ್ರಾನಿಕ್ ಮಾಧ್ಯಮವಾದ ಇಂಟರ್ ನೆಟ್ ಮೂಲಕ ಬರವಣಿಗೆಯ ಕೃಷಿಯಲ್ಲಿ ತೊಡಗಿಸಿಕೊಂಡಿರುವರು. ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬರಹಗಾರ ತನ್ನ ಬರವಣಿಗೆಯ ಪ್ರಕಟಣೆಗಾಗಿ ಪ್ರಕಾಶಕರನ್ನು ಅವಲಂಬಿಸಬೇಕಾದ ಅನಿವಾರ್ಯತೆ ಇಲ್ಲದಿರುವುದರಿಂದ ಅತಿ ಹೆಚ್ಚಿನ ಬರಹಗಾರರು ಈ ಮಾಧ್ಯಮಕ್ಕೆ ವಲಸೆ ಬರುತ್ತಿರುವರು. ಇವತ್ತು ಎಲೆಕ್ಟ್ರಾನಿಕ್ ಮಾಧ್ಯಮ ಯುವ ಬರಹಗಾರರನ್ನಲ್ಲದೆ ಹಿರಿಯ ಲೇಖಕರನ್ನೂ  ತನ್ನತ್ತ ಸೆಳೆಯುತ್ತಿದೆ. ಕನ್ನಡದ ಬ್ಲಾಗ್ ಗಳಲ್ಲಿ ಅತ್ಯುತ್ತಮ ಲೇಖನಗಳು ಪ್ರಕಟವಾಗುತ್ತಿವೆ. ಜೊತೆಗೆ ಪ್ರಕಟವಾದ ಕೆಲವೇ ಕ್ಷಣಗಳಲ್ಲಿ ಪ್ರಾದೇಶಿಕ ಗಡಿಯನ್ನೂ ದಾಟಿ ಆ ಬರಹಗಳು ಹೆಚ್ಚಿನ ಸಂಖ್ಯೆಯ ಓದುಗರನ್ನು ಹೋಗಿ ತಲುಪುತ್ತಿವೆ. ಪರಿಣಾಮವಾಗಿ ಲೇಖಕರು ಈ ದಿನಗಳಲ್ಲಿ ತಮ್ಮ ಬರಹಗಳ ಪ್ರಕಟಣೆಗಾಗಿ ಪತ್ರಿಕೆ, ನಿಯತಕಾಲಿಕೆ ಮತ್ತು ಪುಸ್ತಕಗಳಿಗಾಗಿ ಕಾಯಬೇಕಾಗಿಲ್ಲ. ಒಂದು ಕಾಲದಲ್ಲಿ ಸಂಪಾದಕೀಯ ಲೇಖನಕ್ಕೆ ಮಾತ್ರ ಸೀಮಿತವಾಗಿರುತ್ತಿದ್ದ ಪತ್ರಿಕೆಯೊಂದರ ಸಂಪಾದಕರ ಬರವಣಿಗೆ ಇವತ್ತು ಪತ್ರಿಕೆಯ ಹೆಚ್ಚಿನ ಭಾಗಗಳಿಗೆ ವಿಸ್ತರಿಸುತ್ತಿದೆ. ಇದಕ್ಕೆಲ್ಲ ಕಾರಣ ಈಗಿನ ಬರಹಗಾರರು ಪತ್ರಿಕೆ ಮತ್ತು ಪ್ರಕಾಶಕರನ್ನೇ ನೆಚ್ಚಿಕೊಂಡು ಕುಳಿತುಕೊಳ್ಳಬೇಕಾದ ಅನಿವಾರ್ಯತೆ ದೂರವಾಗಿದೆ. ಒಂದರ್ಥದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮ ಬರಹಗಾರರಿಗೆ ಒಂದು ವೇದಿಕೆಯೊದಗಿಸುವುದರ ಜೊತೆಗೆ ಪ್ರಕಾಶಕರನ್ನು ನಿರುದ್ಯೋಗಿಗಳನ್ನಾಗಿಸುತ್ತಿದೆ.

ಕೊನೆಯ ಮಾತು 


           ಕನ್ನಡದಲ್ಲಿ ಪುಸ್ತಕೋದ್ಯಮದ ಮಾತು ಬಂದಾಗ ನೆನೆಯಲೇ ಬೇಕಾದ ವ್ಯಕ್ತಿತ್ವ ಜಿ.ಬಿ.ಜೋಶಿ ಅವರದು. ಮನೋಹರ ಗ್ರಂಥಮಾಲೆ ಮೂಲಕ ಕನ್ನಡ ಪುಸ್ತಕಗಳನ್ನು ಪ್ರಕಟಿಸಿ ನಾಡಿನ ಮೂಲೆ ಮೂಲೆಗೂ ತಲುಪುವಂತೆ ಮಾಡಿದ ಅವರನ್ನು ಸಹಜವಾಗಿಯೇ ಕನ್ನಡ ಪುಸ್ತಕೋದ್ಯಮದ ಭೀಷ್ಮ ಎಂದು ಕರೆಯಲಾಗಿದೆ. ಜಿ. ಬಿ. ಜೋಶಿ ಅವರ ನೆನಪಿಗಾಗಿ ಹೊರತಂದ 'ಜಿಬಿ ಶತನಮನ' ಕೃತಿ  ಪುಸ್ತಕ ಪ್ರಕಾಶಕರ ಸಮಸ್ಯೆಗಳನ್ನು ಸವಿವರವಾಗಿ ಕಟ್ಟಿಕೊಡುವ ಕೃತಿ. ಪುಸ್ತಕದ ಗಂಟನ್ನು ತಲೆಯ ಮೇಲೆ ಹೊತ್ತುಕೊಂಡು ಊರೂರು ಅಲೆದ ಜಿಬಿ ಅವರ ಪರಿಶ್ರಮ ಹಾಗೂ ಕನ್ನಡ ಪ್ರೇಮ ಇವತ್ತಿನ ಓದುಗರಿಗೆ ಅರ್ಥವಾಗಬೇಕು ಜೊತೆಗೆ  ಅದು ಕನ್ನಡ ಪುಸ್ತಕಗಳನ್ನು ಓದಬೇಕೆನ್ನುವ ವಾಂಛೆಯೊಂದು ನಮ್ಮೊಳಗೆ ಟಿಸಿಲೊಡೆದು ಬೆಳೆಯಲು ಪ್ರೇರಣೆಯಾಗಬೇಕು. ಅದುವೇ ನಾವು ಆ ಪುಸ್ತಕ ಪ್ರಕಟಣೆಯ ಭೀಷ್ಮನಿಗೆ ಸಲ್ಲಿಸುವ ಗೌರವ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Wednesday, April 24, 2013

ರಾಜಕುಮಾರ: ನಾಡಿನ ಸೃಜನಶೀಲ ಆಯಾಮ

   




   






           
     (ಇಂದು ರಾಜಕುಮಾರ ಜನ್ಮದಿನ. ಬದುಕಿದ್ದರೆ ಅವರು ಈ ದಿನ ತಮ್ಮ ೮೫ ನೇ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದರು. ರಾಜ್ ನೆನಪಿಗಾಗಿ ಈ ಲೇಖನ)

           'ಐದು ಕೋಟಿ ಕನ್ನಡಿಗರನ್ನು ಜಾಗೃತಗೊಳಿಸಲು ಇಡೀ ಕನ್ನಡ ಸಾಹಿತ್ಯವಲಯಕ್ಕೆ ಸಾಧ್ಯವಾಗದೇ ಇದ್ದಾಗ ಕಲಾವಿದನಾಗಿ ರಾಜಕುಮಾರ ಪ್ರತಿಯೊಬ್ಬ ಕನ್ನಡಿಗನ ಮನೆ ಮತ್ತು ಮನಸ್ಸನ್ನು ತಲುಪಿದರು'. ಕನ್ನಡದ ವರನಟ ಡಾ. ರಾಜಕುಮಾರ ಕುರಿತು ನಾಡಿನ ಹಿರಿಯ ಸಾಹಿತಿ ಯು. ಆರ್. ಅನಂತಮೂರ್ತಿ ಅವರು ಹೇಳಿದ ಮಾತಿದು. ಈ ಮಾತಿನಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ ಮತ್ತು ಇದು ಮುಖಸ್ತುತಿಯೂ ಅಲ್ಲ. ನಿಜ ಯಾರಿಗೂ ಸಾಧ್ಯವಾಗದೇ ಇರುವುದನ್ನು ರಾಜಕುಮಾರ ಒಬ್ಬ ಕಲಾವಿದನಾಗಿ ಸಾಧಿಸಿದರು. ರಾಜಕುಮಾರ ಎಂದರೆ ಕನ್ನಡ ಸಿನಿಮಾ ಎನ್ನುವಷ್ಟರ ಮಟ್ಟಿಗೆ ಅವರು ಕನ್ನಡ ಸಿನಿಮಾ ರಂಗಕ್ಕೆ ಅನಿವಾರ್ಯವಾದರು. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ರಾಜಕುಮಾರ ಪೂರ್ವದಲ್ಲಿ ಮತ್ತು ರಾಜಕುಮಾರ ನಂತರ ಎನ್ನುವ ರೀತಿ ಕನ್ನಡ ಸಿನಿಮಾ ಪ್ರಪಂಚದ ಅವಿಭಾಜ್ಯ ಅಂಗವಾದರು. ಕನ್ನಡ ಚಿತ್ರರಂಗದ ಈ ಮೇರು ನಟ ನಿಧನ ಹೊಂದಿದ ಆ ಘಳಿಗೆ ಸಿನಿಮಾ ಲೋಕ ಮಾತ್ರವಲ್ಲ ಇಡೀ ಕನ್ನಡ ನಾಡು ಆಘಾತದಿಂದ ತತ್ತರಿಸಿ ಹೋಯಿತು. ಬದುಕಿದ್ದರೆ ಈ ದಿನ (ಎಪ್ರಿಲ್ ೨೪) ತಮ್ಮ ೮೫ನೇ ಹುಟ್ಟುಹಬ್ಬ ಆಚರಿಸಿ ಕೊಳ್ಳುತ್ತಿದ್ದರು. ಆದರೆ ೨೦೦೬ ರಲ್ಲಿ ಸಾವಿನ ರೂಪದಲ್ಲಿ ಬಂದ ವಿಧಿ ಅವಕಾಶವನ್ನೇ ಕೊಡಲಿಲ್ಲ.

           ರಾಜಕುಮಾರ ಮೂಲತ: ರಂಗಭೂಮಿ ಕಲಾವಿದ. ಅನೇಕ ನಾಟಕಗಳಲ್ಲಿ ನಟಿಸಿ ಪಳಗಿದ ನಟ. ರಂಗಭೂಮಿಯ ನಂಟು ಇದ್ದುದ್ದರಿಂದಲೇ ಸಂಭಾಷಣೆ ಹಾಗೂ ಭಾವನೆಗಳನ್ನು ಅಭಿವ್ಯಕ್ತ ಪಡಿಸುವುದರ ಮೇಲೆ ಅವರಿಗೆ ಹಿಡಿತವಿತ್ತು. ೧೯೫೦ ರ ದಶಕದಲ್ಲಿ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಸಿನಿಮಾ ರಂಗವನ್ನು ಪ್ರವೇಶಿಸಿದಾಗ ಆಗ ಕನ್ನಡ ಭಾಷೆಯಲ್ಲಿ ತಯ್ಯಾರಾದ ಚಿತ್ರಗಳ ಸಂಖ್ಯೆ ಕೇವಲ ೪೬. ಆಗಿನ್ನೂ ಕನ್ನಡ ಸಿನಿಮಾ ಇಂಡಸ್ಟ್ರಿ ಬೆಳೆದಿರಲಿಲ್ಲ. ತೆಲಗು, ತಮಿಳು, ಹಿಂದಿ ಸಿನಿಮಾಗಳ ಪ್ರಭಾವ ಸಾಕಷ್ಟಿತ್ತು. ಕರ್ನಾಟಕದಲ್ಲಿ ಸಿನಿಮಾಗಳ ಚಿತ್ರೀಕರಣಕ್ಕೆ ಯಾವುದೇ ಅನುಕೂಲಗಳಿರಲಿಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿ ಆಗ ಸಂಪೂರ್ಣವಾಗಿ ಮದ್ರಾಸಿನಲ್ಲಿ ನೆಲೆಯೂರಿತ್ತು. ಕನ್ನಡ ಸಿನಿಮಾರಂಗ ಇನ್ನು ಬಾಲ್ಯಾವಸ್ಥೆಯಲ್ಲಿದ್ದ ದಿನಗಳಲ್ಲಿ ರಾಜಕುಮಾರ ಚಿತ್ರರಂಗವನ್ನು ಪ್ರವೇಶಿಸಿದರು. ಪ್ರಥಮ ಪ್ರಯತ್ನದಲ್ಲೇ ಯಶಸ್ವಿಯಾದ ಅವರು ನಂತರ ಹಿಂತಿರುಗಿ ನೋಡುವ ಸಂದರ್ಭವೇ ಬರಲಿಲ್ಲ. ಚಿತ್ರದಿಂದ ಚಿತ್ರಕ್ಕೆ ರಾಜಕುಮಾರ ತಾವು ಮಾತ್ರ ಬೆಳೆಯಲಿಲ್ಲ. ಅವರ ಜೊತೆಗೆ ಅನೇಕ ಕಲಾವಿದರು, ತಂತ್ರಜ್ಞರು ಬೆಳೆದರು. ಮದರಾಸಿನಲ್ಲಿ ನೆಲೆಯೂರಿದ್ದ ಕನ್ನಡ ಸಿನಿಮಾ ಇಂಡಸ್ಟ್ರಿಯನ್ನು ಬೆಂಗಳೂರಿಗೆ ಕರೆತರುವಲ್ಲಿ ರಾಜಕುಮಾರ ಪಾತ್ರ ಅತ್ಯಂತ ಮಹತ್ವದ್ದು. ಕನ್ನಡ ಸಿನಿಮಾ ಉದ್ಯಮ ಸಂಕಷ್ಟದಲ್ಲಿದ್ದಾಗ ಅದರ ಪುನಶ್ಚೇತನಕ್ಕಾಗಿ 'ರಣಧೀರ ಕಂಠೀರವ' ಸಿನಿಮಾ ತಯ್ಯಾರಿಸಿದ್ದು ರಾಜಕುಮಾರ ಸಿನಿಮಾವನ್ನು ಅದೆಷ್ಟು ಗಾಢವಾಗಿ ಪ್ರೀತಿಸುತ್ತಿದ್ದರು ಎನ್ನುವುದಕ್ಕೊಂದು ಉದಾಹರಣೆ. ಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಆ ಸಂಸ್ಥೆಯ ಮೂಲಕ ಅನೇಕ ಕಲಾವಿದರನ್ನು, ನಿರ್ದೇಶಕರನ್ನು ಪರಿಚಯಿಸಿದರು. ಒಂದರ್ಥದಲ್ಲಿ ರಾಜಕುಮಾರ ದೊಡ್ಡ ಆಲದಮರವಿದ್ದಂತೆ ಆ ಮರದ ಕೆಳಗೆ ನೆರಳು ಪಡೆದು ಬೆಳೆದ ಕಲಾವಿದರ ಸಂಖ್ಯೆ ಅದೆಷ್ಟೋ.......

ರಾಜ್ ಜನಪ್ರಿಯತೆಗೆ ಕಾರಣಗಳು 


          ರಾಜಕುಮಾರ ಅವರ ಜನಪ್ರಿಯತೆಗೆ ನಿರ್ಧಿಷ್ಟ ಕಾರಣಗಳನ್ನು ಕೊಡಲು ಸಾಧ್ಯವಿಲ್ಲ. ಅನೇಕ ಕಾರಣಗಳಿಂದ ಅವರೊಬ್ಬ ಜನಪ್ರಿಯ ನಟರಾದರು. ಅಭಿನಯ, ಸಂಭಾಷಣೆ ಹೇಳುವ ರೀತಿ, ಕಥಾವಸ್ತು, ಗಾಯನ, ಸಾಹಿತ್ಯ ಹೀಗೆ ಹೇಳುತ್ತ ಹೋದರೆ ಅನೇಕ ಕಾರಣಗಳು ಕಾಣಸಿಗುತ್ತವೆ. ರಾಜಕುಮಾರ ಅವರ ಜನಪ್ರಿಯತೆಗೆ ಸಂಬಂಧಿಸಿದಂತೆ ಯು. ಆರ್. ಅನಂತಮೂರ್ತಿ ಅವರು 'ರಾಜಕುಮಾರ ಅಭಿನಯದ ಅನೇಕ ಚಿತ್ರಗಳು ಮಧ್ಯಮ ವರ್ಗದ ಜನರ ಆಶೋತ್ತರಗಳು ಹಾಗೂ ಸಂದರ್ಭಗಳನ್ನು ಪ್ರತಿನಿಧಿಸುತ್ತಿದ್ದವು. ಆದ್ದರಿಂದಲೇ ಅವರು ಅನೇಕ ಜನರನ್ನು ತಲುಪಲು ಸಾಧ್ಯವಾಯಿತು' ಎಂದಿರುವರು. ಹೌದು ರಾಜಕುಮಾರ ಅವರ ಚಿತ್ರಗಳಲ್ಲಿ ವಿಲಾಸಿ ಬದುಕಿನ ಕಥೆಗಳಿರುತ್ತಿರಲಿಲ್ಲ. ಮಧ್ಯಮ ವರ್ಗದ ಜನರ ಬದುಕಿನ ಹೋರಾಟವೇ ಅವರ ಹೆಚ್ಚಿನ ಚಿತ್ರಗಳ ಕಥಾವಸ್ತುವಾಗಿದೆ. ತಾಯಿ, ತಂದೆ, ಸಹೋದರ, ಪತಿ, ಪತ್ನಿ, ಮಕ್ಕಳ ನಡುವಣ ಅನೋನ್ಯ ಸಂಬಂಧ ಅವರ ಚಿತ್ರಗಳಲ್ಲಿ ಹಾಸುಹೊಕ್ಕಾಗಿರುತ್ತಿತ್ತು. ಹೀಗಾಗಿ ಪ್ರೇಕ್ಷಕ ಕೇವಲ ಸಿನಿಮಾ ಎನ್ನುವ ದೃಷ್ಟಿಯಿಂದ ರಾಜಕುಮಾರ ಅಭಿನಯದ ಸಿನಿಮಾಗಳನ್ನು ನೋಡುತ್ತಿರಲಿಲ್ಲ. ಸಿನಿಮಾ ನೋಡುತ್ತ ಹೋದಂತೆ ಅದು ತನ್ನದೇ ಬದುಕಿನ ಕಥೆ ಎನ್ನುವಂತೆ ತಲ್ಲೀನನಾಗುತ್ತಿದ್ದ. ಒಂದು ಕುಟುಂಬದ ಸದಸ್ಯರೆಲ್ಲರೂ ಯಾವುದೇ ಮುಜುಗರವಿಲ್ಲದೆ ಒಟ್ಟಾಗಿ ಕುಳಿತು ನೋಡುವಂತಹ ಚಿತ್ರಗಳಿರುತ್ತಿದ್ದವು. ರಾಜಕುಮಾರ ಸಿನಿಮಾಗಳಲ್ಲಿ ಕನ್ನಡ ನಾಡಿನ ಮಣ್ಣಿನ ವಾಸನೆ ಇದೆ. ಅಲ್ಲಿ ರೈತರ ಸಂಕಷ್ಟಗಳಿವೆ, ಸಮಸ್ಯೆಗಳಿವೆ. ರೈತರ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ತಯಾರಾದ 'ಮಣ್ಣಿನ ಮಗ', 'ಚೆಂದವಳ್ಳಿಯ ತೋಟ' ಹಾಗೂ ರೈತನ ಶ್ರಮ ಮಾತು ಶ್ರೀಮಂತಿಕೆಯನ್ನು ಬಿಂಬಿಸುವ 'ಬಂಗಾರದ ಮನುಷ್ಯ' ಈ ಎಲ್ಲ ಚಿತ್ರಗಳು ಕನ್ನಡ ಚಿತ್ರರಂಗದ ಮೈಲಿಗಲ್ಲುಗಳಾಗಿವೆ. ಈ ಕಾರಣದಿಂದಲೇ ಕನ್ನಡ ಪ್ರೇಕ್ಷಕರನ್ನು ರಾಜಕುಮಾರ ಗಾಢವಾಗಿ ಆವರಿಸಿಕೊಂಡಷ್ಟು ಬೇರೆ ಕಲಾವಿದರಿಂದ ಸಾಧ್ಯವಾಗಲೇ ಇಲ್ಲ.

             ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳೂ ಸಹ ರಾಜಕುಮಾರ ಅವರ ಜನಪ್ರಿಯತೆಗೆ ಕಾರಣಗಳಾದವು. ರಾಜಕುಮಾರ ರಂಗಭೂಮಿಯ ನಟರಾಗಿದ್ದರಿಂದ ಅವರಿಗೆ ಪರಕಾಯ ಪ್ರವೇಶ ಸುಲಭವಾಯಿತು. ಅವರ ಪೌರಾಣಿಕ ಮತ್ತು ಐತಿಹಾಸಿಕ ಪಾತ್ರಗಳು ಇವತ್ತಿಗೂ ಕನ್ನಡ ಪ್ರೇಕ್ಷಕರ ನೆನಪಿನಲ್ಲಿ ಅಚ್ಚಳಿಯದೆ ಉಳಿದಿವೆ. ರಾಜಕುಮಾರ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಕಲಾವಿದರನ್ನು ರಾಮ, ಕೃಷ್ಣ, ಅರ್ಜುನ, ಕೃಷ್ಣದೇವರಾಯ, ಭಕ್ತ ಕುಂಬಾರ, ಕಾಳಿದಾಸ ಇತ್ಯಾದಿ ಪಾತ್ರಗಳಲ್ಲಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎನ್ನುವಂತೆ ಅವರು ಐತಿಹಾಸಿಕ ಮತ್ತು ಪೌರಾಣಿಕ ಪಾತ್ರಗಳಿಗೆ ಅನಿವಾರ್ಯವಾಗಿದ್ದರು. ರಾಜಕುಮಾರ ಅವರ ಶರೀರ ಮತ್ತು ಶಾರೀರ ಈ ಪ್ರಕಾರದ ಪಾತ್ರಗಳಿಗೆ ಹೊಂದಿಕೊಳ್ಳುತ್ತಿತ್ತು ಎನ್ನುವುದು ಅವರ ಜನಪ್ರಿಯತೆಗೆ ಒಂದು ಪ್ರಬಲ ಕಾರಣವಾಗಿತ್ತು. ರಾಜಕುಮಾರ ಸಮಕಾಲಿನ ನಾಯಕ ನಟರುಗಳೆಲ್ಲ ತಮ್ಮ ದೇಹ ತೂಕವನ್ನು ಹೆಚ್ಚಿಸಿಕೊಂಡು ಪೋಷಕ ಪಾತ್ರಗಳೆಡೆ ಹೊರಳಬೇಕಾದ  ಪರಿಸ್ಥಿತಿ ತಲೆದೊರಿತು. ಯೋಗದ ಮೂಲಕ ತಮ್ಮ ಅಂಗ ಸೌಷ್ಟವವನ್ನು ಕಾಪಾಡಿಕೊಂಡು ಬಂದ ರಾಜಕುಮಾರ ೨೦೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದರು. ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚಿನ ಸಿನಿಮಾಗಳಲ್ಲಿ ನಾಯಕ ನಟನಾಗಿ ಅಭಿನಯಿಸಿದ ಹೆಗ್ಗಳಿಕೆ ಅವರದು. ಅಭಿನಯದ ಜೊತೆಗೆ ದೈಹಿಕ ಸೌಂದರ್ಯವೂ ಅವರ ಜನಪ್ರಿಯತೆಗೆ ಕಾರಣವಾಯಿತು. ಯಾವುದೇ ಒಂದು ಪಾತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ ಪೌರಾಣಿಕ, ಐತಿಹಾಸಿಕ, ಭಕ್ತಿ ಪ್ರಧಾನ, ಸಾಮಾಜಿಕ ಹೀಗೆ ವಿವಿಧ ಬಗೆಯ ಪಾತ್ರಗಳಲ್ಲಿ ಅಭಿನಯಿಸಿದರು. ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿದ್ದರಿಂದಲೇ ರಾಜಕುಮಾರ ಎಲ್ಲ ವರ್ಗದ ಪ್ರೇಕ್ಷಕರು ಮೆಚ್ಚುವಂತ ನಟನಾಗಿ ರೂಪಗೊಂಡರು.

ರಾಜಕುಮಾರ ಮತ್ತು ಕನ್ನಡ ಪ್ರೇಮ 


               ಕರ್ನಾಟಕ ರಾಜ್ಯ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ ರಾಜಕುಮಾರ ಚಿತ್ರರಂಗವನ್ನು ಪ್ರವೇಶಿಸಿದ ಐವತ್ತು ವರ್ಷಗಳ ನೆನಪಿಗಾಗಿ ಸಾರ್ಥಕ ಸುವರ್ಣವನ್ನು ಆಚರಿಸಲಾಯಿತು. ೫೦ ವರ್ಷಗಳವರೆಗೆ ರಾಜಕುಮಾರ ತಮ್ಮ ಸಿನಿಮಾಗಳ ಮೂಲಕ ಕನ್ನಡ ಭಾಷೆಯನ್ನು ಮನೆ ಮನೆಗೂ ಕೊಂಡೊಯ್ದರು. ಒಂದರ್ಥದಲ್ಲಿ ಅವರ ಚಿತ್ರಗಳು ಅನಕ್ಷರಸ್ಥರನ್ನೂ ಅಕ್ಷರಸ್ಥರನ್ನಾಗಿಸಿದವು ಎನ್ನುವ ಮಾತಿನಲ್ಲಿ ಸತ್ಯವಿದೆ. ತಮ್ಮ ಐವತ್ತು ವರ್ಷಗಳ ಚಿತ್ರ ಜೀವನದಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಅಪಚಾರವಾಗದಂತೆ ಅಭಿನಯಿಸಿದರು. ಅವರ ಪ್ರತಿಯೊಂದು ಚಿತ್ರದಲ್ಲಿ ಕನ್ನಡ ಭಾಷೆಯ ಪ್ರೇಮ ಹಾಡು ಇಲ್ಲವೇ ಸಂಭಾಷಣೆ ರೂಪದಲ್ಲಿ ಬೆಳ್ಳಿತೆರೆಯ ಮೇಲೆ ವಿಜೃಂಭಿಸುತ್ತಿತ್ತು. ಜೊತೆಗೆ ರಾಜಕುಮಾರ ರೀಮೇಕ್ ಸಿನಿಮಾಗಳ ಪ್ರಬಲ ವಿರೋಧಿಯಾಗಿದ್ದರು. ಕನ್ನಡ ಭಾಷೆಯಲ್ಲೇ ಅನೇಕ ಉತ್ತಮ ಕಥೆಗಾರರಿರುವಾಗ ಬೇರೆ ಭಾಷೆಯ ಸಿನಿಮಾ ಕಥೆಗಳನ್ನು ತಂದು ಚಿತ್ರ ತಯ್ಯಾರಿಸುವುದು ಅವರಿಗೆ ಇಷ್ಟವಿರಲಿಲ್ಲ. ಅನೇಕ ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸಿ ಬೆಳ್ಳಿತೆರೆಯ ಮೂಲಕ ಕಾದಂಬರಿಗಳನ್ನು ಸಾಮಾನ್ಯ ಪ್ರೇಕ್ಷಕನಿಗೂ ಪರಿಚಯಿಸಿದ ಕೀರ್ತಿ ರಾಜಕುಮಾರ ಅವರಿಗೆ ಸಲ್ಲುತ್ತದೆ.

               ಗೋಕಾಕ ಚಳುವಳಿಯ ಯಶಸ್ಸು ರಾಜಕುಮಾರ ಅವರ ಕನ್ನಡ ಪ್ರೇಮಕ್ಕೊಂದು ಅತ್ಯುತ್ತಮ ಉದಾಹರಣೆ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಗೋಕಾಕ ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಸಾಹಿತಿಗಳೆಲ್ಲ ಚಳುವಳಿಗೆ ಮುಂದಾದರು. ಆದರೆ ಆ ಸಂದರ್ಭ ಅವರುಗಳ ಮುಂದಿದ್ದ ಪ್ರಶ್ನೆ ಜನರನ್ನು ಹೇಗೆ ಒಂದುಗೂಡಿಸುವುದು ಎನ್ನುವುದಾಗಿತ್ತು. ಆಗ ಕನ್ನಡ ಹೋರಾಟಗಾರರಿಗೆ ಗೋಚರಿಸಿದ್ದು ರಾಜಕುಮಾರ ಅವರ ಹೆಸರು. ಏಕೆಂದರೆ ಅವರಿಗೆ ಜನರನ್ನು ಆಕರ್ಷಿಸುವ ಶಕ್ತಿಯಿತ್ತು. ಜೊತೆಗೆ ಚಳುವಳಿಯ ಮುಂದಾಳತ್ವವಹಿಸುವ ನಾಯಕನ ಗುಣ ಅವರಲ್ಲಿತ್ತು. ಜನರ ಕರೆಗೆ ಓಗೊಟ್ಟ ರಾಜಕುಮಾರ ಚಳುವಳಿಗೆ ಧುಮುಕಿದರು. ನ ಭೂತೋ ನ ಭವಿಷ್ಯತಿ ಎನ್ನುವಂತೆ ಚಳುವಳಿ ಯಶಸ್ವಿಯಾಯಿತು. ರಾಜಕುಮಾರ ಹೋದಲ್ಲೆಲ್ಲ ಲಕ್ಷಾಂತರ ಜನ ಕೂಡಿದರು. ನಾಡಿನ ಮೂಲೆ ಮೂಲೆಗೂ ಹೋದ ಚಳುವಳಿಗಾರರು ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದರು. ರಾಜಕುಮಾರ ಅವರ ಹಿಂದೆ ಇಡೀ ಕನ್ನಡ ಚಿತ್ರರಂಗವೇ ಬೆಂಗಾವಲಾಗಿ ನಿಂತಿತ್ತು. ಚಳುವಳಿಯ ತೀವೃತೆಗೆ ಮಣಿದ ಸರ್ಕಾರ ಗೋಕಾಕ ಸಮೀತಿಯಲ್ಲಿನ ಎಲ್ಲ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿತು. ಇದು ನಡೆದದ್ದು ೧೯೮೨ ರಲ್ಲಿ. ಆಗ ರಾಜಕುಮಾರ ಚಿತ್ರರಂಗವನ್ನು ಪ್ರವೇಶಿಸಿ ಇಪ್ಪತ್ತೈದು ವರ್ಷಗಳಾಗಿದ್ದವು. ೨೦೦೬ ರಲ್ಲಿ ಗೋಕಾಕ ಚಳುವಳಿಯ ರಜತ ಮಹೋತ್ಸವದ ಸಂಭ್ರಮದ ಸಂದರ್ಭದಲ್ಲಿ ಚಳುವಳಿಯ ಯಶಸ್ಸಿಗೆ ಕಾರಣರಾದ ರಾಜಕುಮಾರ ನಮ್ಮೊಡನೆ ಇಲ್ಲದಿದ್ದದ್ದು ವಿಷಾದದ ಸಂಗತಿ.

            ಕಾವೇರಿ ನದಿ ನೀರಿನ ವಿಷಯದಲ್ಲಿ ರೈತರಿಗೆ ಅನ್ಯಾಯವಾದಾಗ, ಪರಭಾಷಾ ಸಿನಿಮಾಗಳ ಹಾವಳಿ ತಡೆಗಟ್ಟಲು, ಸಿನಿಮಾ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಲು, ಅನ್ಯ ಭಾಷೆಯ ಚಿತ್ರಗಳನ್ನು ಪ್ರದರ್ಶಿಸುವ ಸಿನಿಮಾ ಮಂದಿರಗಳ ಮಾಲೀಕರ ವಿರುದ್ಧ ಹೀಗೆ ಅನೇಕ ಹೋರಾಟಗಳಲ್ಲಿ ರಾಜಕುಮಾರ ಮುಂದಾಳತ್ವ ವಹಿಸಿದ್ದರು. ಕನ್ನಡಕ್ಕೆ ಅನ್ಯಾಯವಾದಾಗಲೆಲ್ಲ ಕನ್ನಡ ಪರ ಧ್ವನಿ ಎತ್ತಿರುವರು.

ಅಸಾಮಾನ್ಯನಾಗಿಯೂ ಸಾಮಾನ್ಯ 


              ರಾಜಕುಮಾರ ಅವರದು ಅಸಾಮಾನ್ಯ ವ್ಯಕ್ತಿತ್ವ. ಕನ್ನಡ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ. ಒಂದರ್ಥದಲ್ಲಿ ಅವರದು ದೈತ್ಯ ಪ್ರತಿಭೆ. ಅನೇಕ ಪ್ರಶಸ್ತಿಗಳನ್ನು ಪಡೆದು ಹಲವು ಪುರಸ್ಕಾರಗಳಿಗೆ ಭಾಜನರಾದ ಅಭಿಜಾತ ಕಲಾವಿದ. ಆದರೆ ರಾಜಕುಮಾರ ಎಂದೂ ತಾನೊಬ್ಬ ಸೂಪರ್ ಸ್ಟಾರ್ ಎಂದು ವರ್ತಿಸಲಿಲ್ಲ. ಅಸಾಮಾನ್ಯನಾಗಿಯೂ ಒಬ್ಬ ಸಾಮಾನ್ಯನಂತೆ ಬದುಕಿದರು. ಸಿನಿಮಾ ಬದುಕಿನ ಥಳಕು ಬಳುಕಿನ ನಡುವೆ ಇದ್ದೂ ತೀರ ಸರಳವಾಗಿ ಬದುಕಿದ ಅಪರೂಪದ ಕಲಾವಿದ. ಒಂದೆರಡು ಸಿನಿಮಾಗಳಲ್ಲಿ ನಟಿಸಿದ ಮಾತ್ರಕ್ಕೆ ತಾನೊಬ್ಬ ಮಹಾನ್ ಕಲಾವಿದ ಎಂದು ವರ್ತಿಸುವವರಿಗೆ ರಾಜಕುಮಾರ ಬದುಕು ಒಂದು ನೀತಿ ಪಾಠ. ಅದೊಂದು ಆದರ್ಶ. ರಾಜಕುಮಾರ ಯಾವತ್ತೂ ವಿಲಾಸಿ ಜೀವನಕ್ಕೆ ಮಾರು ಹೋದವರಲ್ಲ. ತೀರ ಸರಳ ಜೀವನ ನಡೆಸಿದ್ದರಿಂದಲೇ ೧೦೮ ದಿನಗಳವರೆಗೆ ನರರಾಕ್ಷಸ ವೀರಪ್ಪನ್ ಸೆರೆಯಲ್ಲಿದ್ದು ನಾಡಿಗೆ ಹಿಂತಿರುಗಿ ಬರಲು ಸಾಧ್ಯವಾಯಿತು.

            ನೆರೆಯ ರಾಜ್ಯಗಳಲ್ಲಿ ಎಮ್. ಜಿ. ರಾಮಚಂದ್ರನ್, ಎನ್. ಟಿ. ರಾಮರಾವ, ಜಯಲಲಿತಾ ಇವರೆಲ್ಲ ಸಿನಿಮಾದಿಂದ ದೊರೆತ ಯಶಸ್ಸಿನಿಂದಲೇ ರಾಜಕೀಯವನ್ನು ಪ್ರವೇಶಿಸಿ ಕೊನೆಗೆ ಮುಖ್ಯ ಮಂತ್ರಿಯೂ ಆದರು. ಕರ್ನಾಟಕದಲ್ಲಿ ರಾಜಕುಮಾರ ಅವರಿಗೆ ಖಂಡಿತವಾಗಿಯೂ ಆ ಅವಕಾಶವಿತ್ತು. ಮನಸ್ಸು ಮಾಡಿದ್ದರೆ ಅವರು ರಾಜ್ಯದ ಮುಖ್ಯ ಮಂತ್ರಿಯಾಗಬಹುದಿತ್ತು. ಆದರೆ ಅವರೆಂದೂ ರಾಜಕೀಯದ ವ್ಯಾಮೋಹಕ್ಕೆ ಸಿಲುಕಲಿಲ್ಲ. ಅಭಿನಯದಲ್ಲೇ ತೃಪ್ತಿ ಕಂಡರು. ಈ ಕಾರಣದಿಂದಲೇ ರಾಜಕುಮಾರ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದರು.

         ರಾಜಕುಮಾರ ಅವರ ತಾರಾ ಮೌಲ್ಯ ಅವರು ಅಭಿನಯಿಸುವುದನ್ನು  ಬಿಟ್ಟ ನಂತರವೂ ಕಡಿಮೆಯಾಗಿರಲಿಲ್ಲ ಎನ್ನುವುದಕ್ಕೆ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದ ಜನಸಮೂಹವೇ ಸಾಕ್ಷಿ. ಸರ್ಕಾರ ಕಂಠೀರವ ಸ್ಟುಡಿಯೋದ ಆವರಣದಲ್ಲಿ ಅಂತ್ಯಸಂಸ್ಕಾರಕ್ಕೆ ಸ್ಥಳ ಒದಗಿಸಿ ಮೇರು ನಟನಿಗೆ ಸಲ್ಲಬೇಕಾದ ಗೌರವವನ್ನು ಸಲ್ಲಿಸಿತು. ಏಕೆಂದರೆ ಸ್ಟುಡಿಯೋ ಕಲಾವಿದನ ಕರ್ಮಭೂಮಿ. ಆದರೆ ಸರ್ಕಾರದ ಪ್ರಯತ್ನ ಇಷ್ಟಕ್ಕೆ ನಿಲ್ಲಬಾರದು. ರಾಜಕುಮಾರ ಹೆಸರಿನಲ್ಲಿ ಸ್ಮಾರಕ ನಿರ್ಮಾಣವಾಗಬೇಕು. ಅವರ ಚಿತ್ರ ಜೀವನವನ್ನು ಪರಿಚಯಿಸುವ ಸಿನಿಮಾ ಸಂಪುಟ ಪ್ರಕಟವಾಗಬೇಕು. ಪ್ರತಿ ವರ್ಷದ ಎಪ್ರಿಲ್ ತಿಂಗಳಲ್ಲಿ ರಾಜಕುಮಾರ ಚಿತ್ರಗಳ ಕುರಿತು ವಿಚಾರ ಸಂಕಿರಣ ಹಾಗೂ ಅವರ ಅಭಿನಯದ ಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಸಿನಿಮಾ ರಂಗದಲ್ಲಿ ಐವತ್ತು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಎಪ್ಪತ್ತೇಳು ವಸಂತಗಳ ಸಾರ್ಥಕ ಬದುಕು ಬದುಕಿದ ಆ ಹಿರಿಯ ಜೀವ ಚಿರಕಾಲ ನೆನಪಿನಲ್ಲುಳಿಯಬೇಕು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ