Saturday, September 2, 2023

ದೈವಭಕ್ತಿ ಮತ್ತು ದೈಹಿಕ ಹಿಂಸೆ

      



(12.06.2023 ರ ಪ್ರಜಾವಾಣಿಯಲ್ಲಿ ಪ್ರಕಟ)

    ಇತ್ತೀಚೆಗೆ ಮಿತ್ರರೊಬ್ಬರು ಬೆಳಗ್ಗಿನ ವಾಕಿಂಗ್ ಸಮಯ ಸಂಭಾಷಣೆಯ ನಡುವೆ ‘ದೇವರು ಹಿಂಸಾಪ್ರಿಯನೋ ಅಥವಾ ಶಾಂತಿಪ್ರಿಯನೋ’ ಎಂದು ಕೇಳಿದರು.  ಅವರು ಹಾಗೆ ಕೇಳುವುದಕ್ಕೂ ಕಾರಣವಿತ್ತು. ಕೆಲಕ್ಷಣಗಳ ಹಿಂದಷ್ಟೆ ದೂರದ ದೇವಸ್ಥಾನಕ್ಕೆ ಪಾದಯಾತ್ರೆಯ ಮೂಲಕ ತೆರಳುತ್ತಿದ್ದ ಜನರ ಗುಂಪೊಂದು ನಮಗೆ ಎದುರಾಗಿತ್ತು. ಆ ಗುಂಪಿನಲ್ಲಿ ಕೆಲವರು ಸುಮಾರು ಮೂರರಿಂದ ನಾಲ್ಕು ಅಡಿಗಳಷ್ಟು ಉದ್ದದ ಕೋಲುಗಳನ್ನು ಪಾದದ ಕೆಳಗೆ ಕಟ್ಟಿಕೊಂಡು ನಡೆಯುತ್ತಿದ್ದರು. ನೂರಾರು ಕಿಲೋಮೀಟರ್‍ಗಳ ದೂರದ ದಾರಿಯನ್ನು ಹೀಗೆ ಯಾವ ಆಸರೆಯೂ ಇಲ್ಲದೆ ಕೋಲುಗಳ ಮೇಲೆ ಕ್ರಮಿಸುವ ಈ ವಿಧಾನವೇ ನಮ್ಮ ಅಚ್ಚರಿ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು. ವಿಚಾರಿಸಿದಾಗ ತಿಳಿಯಿತು ಈ ರೀತಿ ಕೋಲುಗಳ ಮೇಲೆ ನಡೆದುಬಂದು ದೇವರ ದರ್ಶನ ಪಡೆಯುವ ಹರಕೆ ಅವರದಾಗಿತ್ತು. ಸಹಜವಾಗಿಯೇ ಈ ನಡೆ ನನ್ನ ಮಿತ್ರರಿಗೆ ಮತ್ತು ನನಗೆ ಹಿಂಸೆಯಾಗಿ ತೋರಿತು.

ದೇವರ ಹೆಸರಿನಲ್ಲಿ ದೇಹಕ್ಕೆ ಬಗೆಬಗೆಯ ಹಿಂಸೆಯನ್ನು ನೀಡುವ ಭಕ್ತರ ಸಂಖ್ಯೆ ಸಮಾಜದಲ್ಲಿ ಬಹಳಷ್ಟಿದೆ. ಕೆಂಡದ ಮೇಲೆ ನಡೆಯುವುದು, ಅಂಗೈಯಲ್ಲಿ ಕರ್ಪೂರದಾರತಿ ಬೆಳಗುವುದು, ಮುಳ್ಳಿನ ಪಾದುಕೆಗಳ ಮೇಲೆ ನಿಲ್ಲುವುದು, ರಕ್ತಜಿನುಗುವಂತೆ ಚಾಟಿಯಿಂದ ಮೈಮೇಲೆ ಹೊಡೆದುಕೊಳ್ಳುವುದು, ಬೆನ್ನಿಗೆ ಕಬ್ಬಿಣದಕೊಂಡಿ ಸಿಕ್ಕಿಸಿಕೊಂಡು ಗಾಳಿಯಲ್ಲಿ ತೇಲಾಡುವುದು, ನಾಲಗೆಗೆ ಕಬ್ಬಿಣದ ಸಲಾಕೆ ಚುಚ್ಚಿಕೊಳ್ಳುವುದು, ಅನ್ನ ಆಹಾರ ತ್ಯಜಿಸಿ ವೃಥಾ ಉಪವಾಸವಿರುವುದು ಹೀಗೆ ಆಯಾ ದೇವಸ್ಥಾನಗಳ ನಿಯಮಗಳಿಗನುಗುಣವಾಗಿ ಭಕ್ತಗಣ ದೈಹಿಕ ಹಿಂಸೆಗೆ ಒಳಗಾಗುತ್ತಾರೆ. ಹಾಗೆಂದು ಇದೇನು ದೇವರು ಮಾಡಿದ ನಿಯಮವಲ್ಲ. ದೇವರ ಹೆಸರಿನಲ್ಲಿ ಮನುಷ್ಯರು ರೂಢಿಸಿಕೊಂಡ ಪದ್ಧತಿಗಳಿವು. 

ಕೆಲವು ವರ್ಷಗಳ ಹಿಂದೆ ಭಕ್ತನೊಬ್ಬ ದೇವರಿಗೆ ತನ್ನ ನಾಲಗೆಯನ್ನೇ ಸಮರ್ಪಿಸಿದ್ದ. ಬಾಗಲಕೋಟೆ ಹತ್ತಿರದ ಊರಿನಲ್ಲಿ ಅನಕ್ಷರಸ್ಥನೋರ್ವ ದೇವರಿಗೆ ತನ್ನ ಕಣ್ಣುಗಳನ್ನು ನೀಡಿ ಭಕ್ತಿಯ  ಪರಾಕಾಷ್ಠೆ ಮೆರೆದಿದ್ದ. ಗ್ರಹಣದ ದಿನ ಪಾರ್ಶ್ವವಾಯುಪೀಡಿತರನ್ನು ಗುಂಡಿಗಳಲ್ಲಿ ಕುತ್ತಿಗೆಯವರೆಗೆ ಹೂಳುವುದರಿಂದ ರೋಗ ಗುಣಪಡಿಸಬಹುದು ಎನ್ನುವ ನಂಬಿಕೆ ಗ್ರಾಮೀಣ ಭಾಗಗಳಲ್ಲಿ ಬಲವಾಗಿದೆ. ಇಂಥ ಅಸಂಗತ ಘಟನೆಗಳು ಅನೇಕ ಸಂದರ್ಭಗಳಲ್ಲಿ ಪತ್ರಿಕೆಗಳಲ್ಲಿ ಸುದ್ಧಿಯಾಗಿ ಸಾರ್ವಜನಿಕರ ಗಮನ ಸೆಳೆದಿವೆ. ಬಿಗಿಯಾದ ಕಾನೂನು ರೂಪಿಸಬೇಕಾದ ಸರ್ಕಾರವೇ ಗುಡಿ-ಗುಂಡಾರಗಳಿಗೆ ಕೋಟ್ಯಾಂತರ ರೂಪಾಯಿಗಳ ಅನುದಾನ ನೀಡಿ ದೇವಸ್ಥಾನಗಳಲ್ಲಿನ ಅಂಧಾನುಚರಣೆಗಳನ್ನು ಪೋಷಿಸುತ್ತಿದೆ.

ಪ್ರಾಣಿ ಬಲಿ ಬೇಡುವ ಹಿಂಸಾಪ್ರಿಯ ದೇವರನ್ನು ಸಹ ಮನುಷ್ಯ ಸೃಷ್ಟಿಸಿರುವನು.  ಕುರಿ-ಕೋಳಿ-ಕೋಣಗಳನ್ನು ಬಲಿ ಕೊಡುವ ಸಂಪ್ರದಾಯ ಇನ್ನು ಅನೇಕ ಊರುಗಳಲ್ಲಿ ಚಾಲ್ತಿಯಲ್ಲಿದೆ. ಪ್ರಾಣಿ ಬಲಿಕೊಡುವ ದಿನ ದೇವಸ್ಥಾನದ ಬೀದಿಯಲ್ಲಿ ರಕ್ತದೊಕುಳಿ ಹರಿಯುತ್ತದೆ. ಭಕ್ತರು ತಮ್ಮ ಆರ್ಥಿಕ ಶಕ್ತ್ಯಾನುಸಾರ ಪ್ರಾಣಿಗಳನ್ನು ಖರೀದಿಸಿ ಬಲಿ ಕೊಡುತ್ತಾರೆ. ಹಣವಿಲ್ಲದವರು ದೇವರ ಇಷ್ಟಾರ್ಥವನ್ನು ಪೂರೈಸಲು ಸಾಲ ಮಾಡಿ ಪ್ರಾಣಿಗಳನ್ನು ಬಲಿಕೊಡುವುದುಂಟು. ಇಂಥ ಸಂಪ್ರದಾಯಕ್ಕನುಗುಣವಾಗಿ ಪ್ರಾಣಿಪ್ರಿಯ ದೇವರ ಹೆಸರುಗಳು ಕೂಡ ಬೀಭತ್ಸವಾಗಿರುತ್ತವೆ.

ಸಮಾಜದಲ್ಲಿ ಮನುಷ್ಯ ನೀತಿ ಮತ್ತು ಪ್ರಾಮಾಣಿಕತೆಗೆ ಹೆದರುವುದಿಲ್ಲವಾದರೂ ದೇವರಿಗೆ ಹೆದರುತ್ತಾನೆ. ದೇವರನ್ನು ಸಂತೃಪ್ತಿಪಡಿಸಲು ನಾನಾರೀತಿಯ ಪ್ರಯತ್ನಗಳನ್ನು ಮಾಡುತ್ತಾನೆ. ದೇವರನ್ನು ಮೆಚ್ಚಿಸಲು ಮನುಷ್ಯ ಮಾಡುವ ಪ್ರಯತ್ನಗಳಲ್ಲಿ ಸ್ವಯಂ ಹಿಂಸೆಗೆ ಒಳಗಾಗುವುದು ಕೂಡ ಒಂದು. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯ ಸಮ್ಮತ ಎನ್ನುವ ಮಾತು ದೇವರ ಮೇಲಿನ ಭಕ್ತಿಗೂ ಅನ್ವಯಿಸುತ್ತಿದೆ. ಆದರೆ ಇಂಥ ಪದ್ಧತಿಗಳ ಮೊರೆ ಹೋಗುವವರು ದುರ್ಬಲ ಮನಸ್ಸಿನವರೆಂದು ಅನೇಕ ಅಧ್ಯಯನಗಳು ರುಜುವಾತುಪಡಿಸಿವೆ. ಪ್ರಾಣಿವರ್ಗಗಳಲ್ಲೇ ಶ್ರೇಷ್ಠನೆಂದು ಪರಿಗಣಿಸಲ್ಪಟ್ಟ ಮನುಷ್ಯ ಹೀಗೆ ದೇವರ ಹೆಸರಿನಲ್ಲಿ ಹಿಂಸೆಗೆ ಒಳಗಾಗುವುದು ಮಾನವ ಬದುಕಿನ ದುರಂತಗಳಲ್ಲೊಂದು. ಗೋಕಾಕರ ‘ಭಾರತ ಸಿಂಧುರಶ್ಮಿ’ ಕೃತಿಯಲ್ಲಿ ಮನುಷ್ಯವರ್ಗದ ಮಹತ್ವವನ್ನು ಕುರಿತು ಹೀಗೆ ಹೇಳಲಾಗಿದೆ- ‘ಜಗತ್ತಿನಲ್ಲಿ ಮನುಷ್ಯನಿಗಿಂತ ಕೆಳಸ್ತರದ ಪ್ರಾಣಿಗಳು ಮಾತ್ರವಲ್ಲ ಮೇಲಿನ ವರ್ಗಗಳ ವಿದ್ಯಾಧರ, ಗಂಧರ್ವ, ಅಪ್ಸರರು ಸಹ ಸ್ವಪ್ರಯತ್ನದಿಂದ ಬೆಳೆಯಲಾರರು. ಭಾವ-ಬುದ್ಧಿ-ಕರ್ಮದ ಮಿಲನದಿಂದ ಬೆಳೆಯಬಲ್ಲವನು ಮನುಷ್ಯ ಮಾತ್ರ’.

ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದರು. ಇದರರ್ಥ ಕೆಲಸದಲ್ಲಿ ಶ್ರದ್ಧೆ ಮತ್ತು ಪ್ರೀತಿ ಇರುವವರಿಗೆ ತಾವು ಮಾಡುವ ಕಾಯಕದಲ್ಲೇ ದೇವರು ಕಾಣಿಸುತ್ತಾನೆ. ಅಂಗೈಯಲ್ಲಿ ಆರತಿ, ಕೋಲಿನ ಮೇಲೆ ನಡಿಗೆ, ಕಬ್ಬಿಣದ ಮೊಳೆಗಳ ಮೇಲೆ ನಿಲ್ಲುವುದು, ಚಾಟಿಯಿಂದ ಹೊಡೆದುಕೊಳ್ಳುವುದು ಇಂಥ ಪ್ರಯತ್ನಗಳಿಂದ ಸಮಯ ಮತ್ತು ಶ್ರಮ ವ್ಯರ್ಥವೇ ವಿನಾ ಯಾವ ಪ್ರಯೋಜನವೂ ಇಲ್ಲ. ಕಾಯವನ್ನು ಕಾಯಕದ ಮೂಲಕ ದಂಡಿಸಬೇಕೆ ಹೊರತು ಅನಗತ್ಯವಾದ ಮೂಢನಂಬಿಕೆಗಳನ್ನು ಆಚರಿಸುವುದರಲ್ಲಿ ಮನುಷ್ಯರ ಶ್ರಮ ವ್ಯರ್ಥವಾಗಬಾರದು. ಜನಪದರು ಹೇಳಿದಂತೆ ಜಂಗಮನ ಜೋಳಿಗೆಯೆಂದು ಅದನ್ನು ಮೂಲೆಯಲ್ಲಿಟ್ಟರೆ ಅದು ತುಂಬುವುದಿಲ್ಲ. ಬದುಕಿನ ಪ್ರತಿಯೊಂದು ಆಗು-ಹೋಗುಗಳಿಗೆ ಹಣೆಬರಹ, ಕೆಟ್ಟಕಾಲ ಎಂದು ದೈವದ ಮೇಲೆ ಭಾರಹಾಕಿ ಕೈಕಟ್ಟಿ ಕುಳಿತುಕೊಳ್ಳುವವರಿಗೆ ಯಾವ ದೇವರು ಸಹಾಯಹಸ್ತ ಚಾಚುವುದಿಲ್ಲ.

ದೇವರ ಅಸ್ತಿತ್ವವನ್ನು ಕುರಿತು ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್ ತಮ್ಮ ‘ಐನ್‍ಸ್ಟೀನ್-ದಿ ಹ್ಯೂಮನ್ ಸೈಡ್’ ಪುಸ್ತಕದಲ್ಲಿ ಹೀಗೆ ವಿವರಿಸುತ್ತಾರೆ ‘ನಾನು ದೇವರು ಎಂಬ ವ್ಯಕ್ತಿಯೊಬ್ಬನಿದ್ದಾನೆ ಎಂದು ನಂಬುವುದಿಲ್ಲ. ದೇವರು ಎಂಬ ವ್ಯಕ್ತಿಯನ್ನು ಕಲ್ಪಿಸಿಕೊಳ್ಳುವುದೂ ನನಗೆ ಸಾಧ್ಯವಿಲ್ಲ. ಮನುಷ್ಯನ ಪ್ರಯತ್ನಗಳಲ್ಲಿ ಅತ್ಯಂತ ಮುಖ್ಯವಾದದ್ದೆಂದರೆ ನಮ್ಮ ಕರ್ಮವೆಲ್ಲ ನೀತಿಯುತವಾಗಿರಬೇಕೆಂದು ಮಾಡುವ ಪ್ರಯತ್ನ. ನಮ್ಮ ಉಳಿವು, ಅಸ್ತಿತ್ವ ಕೂಡ ಅದನ್ನು ಅವಲಂಬಿಸಿದೆ. ನಾವು ಮಾಡುವ ಕೆಲಸ ನೀತಿಯುತವಾಗಿದ್ದರೆ ಮಾತ್ರ ಬದುಕಿಗೊಂದು ಸೌಂದರ್ಯ, ಗಾಂಭೀರ್ಯ ಇರುತ್ತದೆ’. 

‘ದೇವರು’ ಪುಸ್ತಕ ಬರೆದು ದೇವರ ಅಸ್ತಿತ್ವವನ್ನೇ ಪ್ರಶ್ನಿಸಿದ ಎ.ಎನ್.ಮೂರ್ತಿರಾವ್ ಅವರು ‘ನಾವು ನಂಬಿಕೆ ಇಡಬಹುದಾದ ಏಕಮೇವ ದೇವರು ಮನುಷ್ಯರಲ್ಲಿ ವಾಸಿಸುವ ಒಳ್ಳೆಯತನ-ದುಷ್ಟತನದೊಂದಿಗೆ ವಾಸಿಸುವ ಒಳ್ಳೆಯತನ. ನಾವು ನಮ್ಮೊಳಗಿರುವ ಒಳ್ಳೆಯತನವೆನ್ನುವ ಆ ದೇವರನ್ನು ಚೈತನ್ಯಗೊಳಿಸಬೇಕು, ಅವನನ್ನು ದುಷ್ಟತನಕ್ಕೆ ಎದಿರಾಗಿ ನಿಲ್ಲಿಸಬೇಕು’ ಎಂದಿರುವರು. ಮನುಷ್ಯ ಹಿಂಸಾಪ್ರಿಯನೇ ವಿನಾ ದೇವರು ಹಿಂಸಾವಿನೋದಿಯಲ್ಲ. ದೇವರ ಹೆಸರಿನಲ್ಲಿ ಮನುಷ್ಯ ರೂಢಿಗೆ ತಂದಿರುವ ಪದ್ಧತಿಗಳಿವು. ಆದರೆ ನ್ಯಾಯ, ಸತ್ಯ ಮತ್ತು ಪ್ರಾಮಾಣಿಕವಾಗಿ ಬದುಕುವ ಮನುಷ್ಯ ಅಂಧಾನುಚರಣೆಗಳಿಗೆ ಹೆದರುವ ಅಗತ್ಯವಿಲ್ಲ. ನಾವು ಹೆದರಬೇಕಾಗಿರುವುದು ನಮ್ಮೊಳಗಿನ ದುಷ್ಟತನಕ್ಕೆ ಎನ್ನುವುದನ್ನು ಮನುಷ್ಯರು ಅರ್ಥಮಾಡಿಕೊಳ್ಳಬೇಕಿದೆ.

-ರಾಜಕುಮಾರ ಕುಲಕರ್ಣಿ


Tuesday, August 1, 2023

ಉಡುಗೊರೆ ಮತ್ತು ಮೌಲ್ಯ ನಿರ್ಣಯ

 


(ಪ್ರಜಾವಾಣಿ ೧೬.೦೫.೨೦೨೩)

     ಇತ್ತೀಚೆಗೆ ಬಂಧುಗಳ ಮನೆಯ ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದ ನನ್ನ ಸ್ನೇಹಿತರು ಅಲ್ಲಿ ತಮಗೆ ಸೂಕ್ತ ಗೌರವ, ಮನ್ನಣೆ ದೊರೆಯಲಿಲ್ಲವೆಂದು ನೊಂದುಕೊಂಡರು. ವಧು-ವರರಿಗೆ ಕಡಿಮೆ ಮೌಲ್ಯದ ಉಡುಗೊರೆ ನೀಡಿದ್ದೆ ಮದುವೆ ಮನೆಯಲ್ಲಿ ತಮ್ಮನ್ನು ಕೀಳಾಗಿ ಕಾಣಲು ಕಾರಣವಾಯಿತೆಂದು ಹೇಳಿದರು. ಸಾಮಾನ್ಯವಾಗಿ ಮದುವೆ ಮತ್ತು ಇನ್ನಿತರ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಆಹ್ವಾನಿತರು ಉಡುಗೊರೆ ನೀಡುವುದು ಅದೊಂದು ಸಂಪ್ರದಾಯ. ಉತ್ತರ ಕರ್ನಾಟಕ ಭಾಗದಲ್ಲಿ ಇದಕ್ಕೆ ಆಹೇರಿ ಎನ್ನುತ್ತಾರೆ. ಇನ್ನು ಕೆಲವು ಕಡೆ ಇದನ್ನು ಮುಯ್ಯಿ ಬರೆಸುವುದು ಎಂದು ಕರೆಯುವುದುಂಟು.

ಬಟ್ಟೆ, ಮನೆ ಬಳಕೆಯ ಸಾಮಾನುಗಳು, ಚಿನ್ನ, ಬೆಳ್ಳಿ ಅಥವಾ ಹಣ ಹೀಗೆ ಅತಿಥಿಗಳು ತಮ್ಮ ಆರ್ಥಿಕ ಅನುಕೂಲತೆಗನುಗುಣವಾಗಿ ಉಡುಗೊರೆ ಕೊಡುವರು. ಹಿಂದೆಲ್ಲ ಬಡಕುಟುಂಬಗಳಿಗೆ ಮದುವೆ ಮತ್ತಿತರ ಕಾರ್ಯಕ್ರಮಗಳ ನಿರ್ವಹಣೆಗೆ ಅನುಕೂಲವಾಗಲೆಂದು ಉಡುಗೊರೆ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿತ್ತು. ಸಹಾಯವೆಂದರೆ ಸ್ವಾಭಿಮಾನ ಅಡ್ಡಬರಬಹುದೆಂದು ಅತಿಥಿಗಳು ಮಾಡುವ ಆರ್ಥಿಕ ಸಹಾಯಕ್ಕೆ ಉಡುಗೊರೆ ಎಂದು ಕರೆದರು. ಹೀಗೆ ಕೈಸೇರುವ ಹಣ ಬಡವರಿಗೆ ಅವರ ಕುಟುಂಬ ಕಾರ್ಯಕ್ರಮದಿಂದಾದ ಸಾಲದ ಹೊರೆಯನ್ನು ಸ್ವಲ್ಪ ಮಟ್ಟಿಗೆ ತಗ್ಗಿಸುತ್ತಿತ್ತು. ಆದರೆ ಇಂದು ಉಡುಗೊರೆ ಕೊಡುವುದು ಮತ್ತು ಪಡೆಯುವುದು ಶ್ರೀಮಂತ ಕುಟುಂಬಗಳನ್ನು ಕೂಡ ಸೋಂಕಿನಂತೆ ಆವರಿಸಿಕೊಂಡಿದೆ. 

ಮದುವೆ, ಗೃಹಪ್ರವೇಶ, ತೊಟ್ಟಿಲು, ಸೀಮಂತ ಇಂಥ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಸಮಾರಂಭದ ದಿನ ಅತಿಥಿಗಳಿಂದ ದೊರೆಯುವ ಉಡುಗೊರೆಗಳ ಪಟ್ಟಿ ಮಾಡಲು ಮನೆಯ ಸದಸ್ಯರು ಅಥವಾ ಬಂಧುಗಳು ಕುಳಿತುಕೊಳ್ಳುವ ಪರಿಪಾಠ ಉತ್ತರ ಕರ್ನಾಟಕ ಭಾಗದಲ್ಲಿ ಇನ್ನೂ ಚಾಲ್ತಿಯಲ್ಲಿದೆ. ಕಲ್ಯಾಣ ಮಂಟಪದ ದ್ವಾರದಲ್ಲೇ ಇವರು ಪವಡಿಸುವುದರಿಂದ ಬಂದು ಹೋಗುವ ಅತಿಥಿಗಳು ಒಂದು ರೀತಿಯ ಮುಜುಗರದ ಸನ್ನಿವೇಶವನ್ನು ಎದುರಿಸಬೇಕಾಗುತ್ತದೆ. ಉಣಬಡಿಸಿದ ಭೋಜನಕ್ಕೆ ಪ್ರತಿಯಾಗಿ ಪ್ರತಿಫಲವನ್ನು ಅಪೇಕ್ಷಿಸುತ್ತಿರುವರೇನೋ ಎಂದು ಭಾಸವಾಗುತ್ತದೆ. ಹತ್ತಾರು ಜನರೆದುರು ಕಡಿಮೆ ಮೌಲ್ಯದ ಹಣ ಅಥವಾ ಉಡುಗೊರೆ ಬರೆಸುವಾಗ ಸಂಕೋಚ ಉಂಟಾಗುವುದು ಸಹಜ. ಕೆಲವೊಮ್ಮೆ ಬರೆದುಕೊಳ್ಳುವವರ ವ್ಯಂಗ್ಯದ ತೀಕ್ಷಣ ನೋಟಕ್ಕೆ ಅತಿಥಿಗಳು ಕೀಳರಿಮೆಗೊಳಗಾಗುವುದುಂಟು. ಅನೇಕ ಸಂದರ್ಭಗಳಲ್ಲಿ ಮದುವೆ ಮನೆಗಳಲ್ಲಿ ಆಹ್ವಾನಿತರು ವಿಶೇಷವಾಗಿ ಹೆಣ್ಣುಮಕ್ಕಳು ಒಟ್ಟಿಗೆ ಸೇರಿದಾಗ ತಾವು ತಂದ ಉಡುಗೊರೆಗಳನ್ನು ಇತರರೆದುರು ಪ್ರದರ್ಶಿಸಿ ಹಿರಿಮೆ ಮೆರೆಯುವರು. ಆಗೆಲ್ಲ ಕಡಿಮೆ ಮೌಲ್ಯದ ಉಡುಗೊರೆ ತಂದ ಆಹ್ವಾನಿತರಿಗೆ ಸಂಕೋಚದಿಂದ ಮೈ ಮುದುಡಿಕೊಳ್ಳುವಂತಾಗುತ್ತದೆ. ‘ಉಳ್ಳವರು ಶಿವಾಲಯವ ಮಾಡುವರು, ನಾನೇನು ಮಾಡಲಿ ಬಡವನಯ್ಯ’ ಎನ್ನುವ ವಚನದ ಸಾಲನ್ನು ಇಲ್ಲಿಯೂ ಅನ್ವಯಿಸಿ ಹೇಳಬಹುದು.

ಆರ್ಥಿಕ ಭಾರವನ್ನು ತಗ್ಗಿಸಲು ಈಗ ಬಟ್ಟೆಯನ್ನು ಉಡುಗೊರೆಯಾಗಿ ಕೊಡುವುದು ಸಾಮಾನ್ಯವಾಗಿದೆ. ಸಾಧಾರಣ ಗುಣಮಟ್ಟದ ಇಂಥ ಬಟ್ಟೆಗಳು ಮುಂದೊಂದು ದಿನ ಉಡುಗೊರೆ ರೂಪದಲ್ಲೇ ವಿಲೇವಾರಿಯಾಗುತ್ತವೆ. ಬಟ್ಟೆ ಅಂಗಡಿಗಳಲ್ಲೂ ಇಂಥ ಉದ್ದೇಶಕ್ಕಾಗಿಯೇ ಪ್ರತ್ಯೇಕ ವಿಭಾಗವಿದ್ದು ಗ್ರಾಹಕರಿಗೆ ಉತ್ತಮ ಗುಣಮಟ್ಟದ ಬಟ್ಟೆ ಬೇಕೋ ಆಹೇರಿ ಬಟ್ಟೆ ಬೇಕೋ ಎಂದು ಮಳಿಗೆಯ ಮಾಲೀಕರು ವಿಚಾರಿಸುತ್ತಾರೆ. ಕೆಲವೊಮ್ಮೆ ಗ್ರಾಹಕರೇ ಆಹೇರಿಗಾಗಿ ಸಾಧಾರಣ ಗುಣಮಟ್ಟದ ಬಟ್ಟೆಗಳಿವೆಯೇ ಎಂದು ಬಾಯ್ಬಿಟ್ಟು ಕೇಳುವುದುಂಟು.

ದಂಡಿಯಾಗಿ ಹರಿದು ಬರುವ ಬಟ್ಟೆಯ ಮಹಾಪೂರವನ್ನು ತಡೆಗಟ್ಟಲು ಈಗ ಬಟ್ಟೆಯನ್ನು  ಸ್ವೀಕರಿಸದಿರುವ ಹೊಸ ವರಸೆಯೊಂದು ಶುರುವಾಗಿದೆ. ಲಗ್ನಪತ್ರ ಅಥವಾ ಆಹ್ವಾನಪತ್ರದಲ್ಲಿ ‘ಬಟ್ಟೆ ಉಡುಗೊರೆ ಸ್ವೀಕರಿಸುವುದಿಲ್ಲ’ ಎಂದು ಸ್ಪಷ್ಟವಾಗಿ ನಮೂದಿಸಿರುತ್ತಾರೆ. ಹಣ, ಚಿನ್ನ ಅಥವಾ ಬೆಳ್ಳಿಯನ್ನು ಕೊಡಬಹುದೆಂದು ಇದರರ್ಥ. ಕುಟುಂಬದ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರೂಪಾಯಿಗಳನ್ನು ಧಾರಾಳವಾಗಿ ವ್ಯಯಿಸುವವರು ಹಣ ಅಥವಾ ಒಡವೆ ರೂಪದ ಉಡುಗೊರೆಯನ್ನು ಆಹ್ವಾನಿತರಿಂದ ನಿರೀಕ್ಷಿಸುವುದು ಸರಿಯಲ್ಲ. 

ಉಡುಗೊರೆ ಎನ್ನುವುದು ಗೋಡೆಗೆ ಬಡಿದ ಚೆಂಡಿದ್ದಂತೆ. ಕೊಡುವಾಗ ಯಾವ ರೂಪದಲ್ಲಿತ್ತೋ ಮುಂದೊಂದು ದಿನ ಅದೇ ರೂಪದಲ್ಲಿ ಮರಳಿ ಬರುತ್ತದೆ. ಹೀಗಾಗಿ ಕೊಡುವವರು ಪಡೆಯುವವರ ಆರ್ಥಿಕ ಸ್ಥಾನಮಾನವನ್ನಾಧರಿಸಿ ತಾವು ಕೊಡಬೇಕಾದದ್ದನ್ನು ನಿರ್ಧರಿಸುತ್ತಾರೆ. ಬಡವರಾದರೆ ಒಂದು ಮೌಲ್ಯ, ಶ್ರೀಮಂತರಿಗೆ ಬೇರೊಂದು ಮೌಲ್ಯ. ಒಟ್ಟಾರೆ ಉಡುಗೊರೆಯ ಸ್ವರೂಪ ಮತ್ತು ಮೌಲ್ಯದಲ್ಲಿ ಬಡವ-ಬಲ್ಲಿದ ಎನ್ನುವ ಸಂಗತಿಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಇನ್ನು ಕೆಲವರು ಮುಂದೊಂದು ದಿನ ಉಡುಗೊರೆಗಳ ಮಹಾಪೂರವೇ ಹರಿದುಬರಲೆಂದು ಅಪೇಕ್ಷಿಸಿ ಕೊಡುವ ಪದ್ಧತಿಯನ್ನು ಮೈಗೂಡಿಸಿಕೊಂಡಿರುತ್ತಾರೆ. ಹಾಗೆಂದು ಇವರೇನು ಕೊಡುಗೈ ದಾನಿಗಳಲ್ಲ. ಇವರ ಧಾರಾಳತನ ಉಡುಗೊರೆ ಕೊಟ್ಟು ತೆಗೆದುಕೊಳ್ಳುವುದಕ್ಕಷ್ಟೆ ಸೀಮಿತ. 

ಬೃಹದಾಕಾರದ ಪುಷ್ಪಗುಚ್ಛಗಳನ್ನು ಕೊಡುವ ಪರಿಪಾಠವನ್ನು ಕೆಲವರು ರೂಢಿಸಿಕೊಂಡಿರುತ್ತಾರೆ. ಸಾವಿರಾರು ರೂಪಾಯಿಗಳನ್ನು ಪಾವತಿಸಿ ಖರೀದಿಸಿದ ಪುಷ್ಪಗುಚ್ಛಗಳು ಕೆಲವೇ ಗಂಟೆಗಳಲ್ಲಿ ಕಸದಗುಂಡಿ ಸೇರುತ್ತವೆ. ಪುಸ್ತಕಗಳು ಮತ್ತು ಸಸಿಗಳನ್ನು ಕೊಡುವ ಸುಸಂಸ್ಕೃತರೂ ಅಲ್ಲೊಮ್ಮೆ ಇಲ್ಲೊಮ್ಮೆ ಅಪರೂಪವೆಂಬಂತೆ ಕಾಣಸಿಗುವರು. ಪುಸ್ತಕಗಳಿಂದ ಉಡುಗೊರೆಯ ಮೌಲ್ಯ ಕೂಡ ಹೆಚ್ಚುವುದು. ಪುಸ್ತಕ ಸಂಸ್ಕೃತಿ ಮತ್ತು ಪರಿಸರ ಪ್ರೇಮದ ಅರಿವು ಮೂಡಿಸುವ ಈ ಪ್ರಯತ್ನ ಅಭಿನಂದನಾರ್ಹ. ಆದರೆ ಇಂಥವರ ಸಂಖ್ಯೆ ತೀರ ವಿರಳ ಎನ್ನುವುದು ಬೇಸರದ ಸಂಗತಿ.

ತಮ್ಮ ಸಂಬಂಧಿಕರ ಮಗನಿಗೆ ಮದುವೆಯಲ್ಲಿ ಹತ್ತು ಗ್ರಾಂ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ ನನ್ನ ಪರಿಚಿತರು ಹೇಳಿದ್ದು ಹೀಗೆ-‘ನನ್ನ ಸಂಬಂಧಿಕರೇನು ಬಡವರಲ್ಲ. ನಗ, ನಾಣ್ಯ, ಸ್ಥಿರಾಸ್ತಿ ಸೇರಿದಂತೆ ಭಾರೀ ಶ್ರೀಮಂತ ಕುಟುಂಬ. ಈ ಹತ್ತು ಗ್ರಾಂ ಚಿನ್ನ ಅವರಿಗೆ ಯಾವ ಲೆಕ್ಕಕ್ಕೂ ಇಲ್ಲ. ಅದೇ 60 ಸಾವಿರ ರೂಪಾಯಿಗಳನ್ನು ಅಸಾಹಾಯಕರಿಗೆ ನೆರವಿನ ರೂಪದಲ್ಲಿ ನೀಡಿದ್ದರೆ ಮನಸ್ಸಿಗೆ ಅದೆಷ್ಟೋ ತೃಪ್ತಿ, ಸಮಾಧಾನ ಸಿಗುತ್ತಿತ್ತು’. ಧನ, ಕನಕವನ್ನಾಧರಿಸಿ ಉಡುಗೊರೆಯ ಮೌಲ್ಯ ನಿರ್ಧಾರವಾಗುತ್ತಿರುವ ಹೊತ್ತಿನಲ್ಲಿ ಹೀಗೆ ಯೋಚಿಸುವವರ ಸಂಖ್ಯೆ ಇನ್ನಷ್ಟು ವೃದ್ಧಿಸಬೇಕಿದೆ.

-ರಾಜಕುಮಾರ ಕುಲಕರ್ಣಿ

Thursday, July 6, 2023

ಕೃತಕತೆಯ ಗೂಡಲ್ಲಿ ವಾಸ್ತವದ ಹುಡುಕಾಟ

        


(೨೭.೦೩.೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟ)

    ಪಕ್ಕದ ಮನೆಯ ಹುಡುಗ ತನ್ನ ಸ್ನೇಹಿತನೆದುರು ತಾನು ನೋಡಿದ ಸ್ಥಳಗಳನ್ನು ಬಣ್ಣಿಸುತ್ತಿದ್ದ. ಅವನ ಮಾತಿನಲ್ಲಿ ಜಲಪಾತಗಳು, ಹೊಳೆ, ಬೆಟ್ಟ, ಕಾಡು, ಹಳ್ಳಿಮನೆಗಳೆಲ್ಲ ಸುಳಿದುಹೋದವು. ‘ಏನೋ ಅಜ್ಜನ ಊರಿಗೆ ಯಾವಾಗ ಹೋಗಿದ್ದೆ’ ಎಂದು ಕೇಳಿದೆ. ‘ನೋ ಅಂಕಲ್ ಪಿಕ್‍ನಿಕ್ ಹೋಗಿದ್ವಿ. ರೆಡಿಮೇಡ್ ವಿಲೇಜ್ ಅಂತ ಪಿಕ್‍ನಿಕ್ ಸ್ಪಾಟ್ ಇತ್ತು. ಅಲ್ಲ್ಲಿ ಹೊಳೆ, ಕಾಡು, ಬೆಟ್ಟ ಎಲ್ಲ ನೋಡಿದ್ದು’ ಎಂದು ಉತ್ತರಿಸಿದ. ನಾನು ಊಹಿಸಿದ ಆ ಎಲ್ಲ ವಾಸ್ತವಗಳನ್ನು ಅವನು ಕೃತಕವಾಗಿ ನಿರ್ಮಿಸಿರುವ ಪ್ರೇಕ್ಷಣಿಯ ತಾಣದಲ್ಲಿ ವೀಕ್ಷಿಸಿದ್ದೆಂದು ಅರಿವಾಗಲು ಕೆಲವು ಕ್ಷಣಗಳೇ ಬೇಕಾದವು. ಇತ್ತೀಚಿನ ದಿನಗಳಲ್ಲಿ ಭೌತಿಕ ಮತ್ತು ಭಾವನಾತ್ಮಕ ಸಂಗತಿಗಳೆರಡನ್ನೂ ಕೃತಕ ವಾತಾವರಣದಲ್ಲಿ ಅರಸುವ ಪ್ರವೃತ್ತಿ ಮನುಷ್ಯರಲ್ಲಿ ಹೆಚ್ಚುತ್ತಿದೆ.

ಮನುಷ್ಯ ತನ್ನ ದಿನನಿತ್ಯದ ಧಾವಂತದ ಬದುಕಿನಲ್ಲಿ ಸಹಜ ಬದುಕಿಗೆ ವಿಮುಖನಾಗಿ ಬಾಳುತ್ತಿರುವನು. ವಿಶೇಷವಾಗಿ ನಗರಪ್ರದೇಶಗಳಲ್ಲಿ ಉದ್ಯೋಗವೇ ಕೇಂದ್ರಿತವಾದ ಬದುಕಿನಲ್ಲಿ ಬಿಡುವು ಪಡೆಯಲು ಒಂದಿಷ್ಟೂ ಪುರಸೊತ್ತಿಲ್ಲದಂತಾಗಿದೆ. ಉದ್ಯೋಗದ ಅಭದ್ರತೆ, ಸ್ಪರ್ಧೆಯ ವಾತಾವರಣ, ಮಕ್ಕಳ ಪಾಲನೆ, ಉಳಿತಾಯದ ಯೋಜನೆಗಳು, ಭವಿಷ್ಯದ ಚಿಂತೆಯಿಂದ ಕಂಗಾಲಾಗಿರುವ ಮನುಷ್ಯ ದಣಿವರಿಯದ ದುಡಿಮೆಗೆ ತನ್ನನ್ನು ಒಳಗಾಗಿಸಿಕೊಂಡಿರುವನು. ಈ ಆಧುನಿಕ ಬದುಕಿನ ಒತ್ತಡಗಳು ಮನುಷ್ಯನನ್ನು ಯಂತ್ರವಾಗಿ ಪರಿವರ್ತಿಸಿವೆ. ಭಾವನೆಗಳು ಮತ್ತು ಮನುಷ್ಯ ಸಂಬಂಧಗಳು ತಮ್ಮ ಅರ್ಥ ಕಳೆದುಕೊಂಡು ಸವಕಲಾಗಿವೆ.

ಭಾವನೆಗಳು ಮತ್ತು ಸಂಬಂಧಗಳನ್ನೇ ಕಳೆದುಕೊಂಡು ಬದುಕು ಯಾಂತ್ರೀಕವಾಗುತ್ತಿರುವುದು ಒಂದುಕಡೆಯಾದರೆ ಇನ್ನೊಂದೆಡೆ ಮನುಷ್ಯನ ದುರಾಸೆಗೆ ಒಳಗಾಗಿ ಪ್ರಕೃತಿ ಬರಡಾಗುತ್ತಿದೆ. ಒಂದರ್ಥದಲ್ಲಿ ಮನುಷ್ಯನ ಯಾಂತ್ರೀಕ ಬದುಕಿನ ಚೇತರಿಕೆಗೆ ಪ್ರಕೃತಿಯೇ ಮುಲಾಮು. ಆದರೆ ಮನುಷ್ಯ ಪ್ರಕೃತಿಯ ಮೇಲೆ ಅಟ್ಟಹಾಸಗೈಯುತ್ತ ನಿಸರ್ಗವನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸಿರುವನು. ತಾನು ಕಳೆದುಕೊಂಡ ಪ್ರಕೃತಿಯ ಚೆಲುವು ಮತ್ತು ಮನದ ಭಾವನೆಗಳನ್ನು ಕೃತಕ ನಿಸರ್ಗ ತಾಣಗಳಲ್ಲಿ, ಸಿನಿಮಾಗಳಲ್ಲಿ, ರಿಯಾಲಿಟಿ ಶೋಗಳಲ್ಲಿ ಹುಡುಕುತ್ತಿದ್ದಾನೆ. ಇಂದಿನ ನ್ಯೂಕ್ಲಿಯರ್ ಕುಟುಂಬಗಳಿಗೆ ಸಿನಿಮಾಗಳೆ ಕುಟುಂಬ ಸಂಬಂಧಗಳ ಪಾಠವನ್ನು ಬೋಧಿಸುವ ಶಾಲೆಗಳಾಗಿವೆ. ಅವಿಭಕ್ತ ಕುಟುಂಬ, ಮನೆಗೊಬ್ಬ ಹಿರಿಯ ಯಜಮಾನ, ಕಡಿದುಹೋದ ಸಂಬಂಧಗಳ ಬೆಸೆಯುವಿಕೆ, ಮದುವೆಕಾರ್ಯದ ವೈಭವೊಪೇತ ದೃಶ್ಯಗಳು, ಒಂದಿಷ್ಟು ನಗು-ಅಳು-ಖುಷಿ ಈ ರೀತಿಯ ಸಿನಿಮಾಗಳು ಸಂಬಂಧಗಳ ಕುರಿತಾದ ಮನುಷ್ಯನ ಭಾವನಾತ್ಮಕ ಹಸಿವನ್ನು ತಣಿಸುತ್ತಿವೆ. ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಘಟಕಗಳಾಗಿ ರೂಪಾಂತರ ಹೊಂದುತ್ತಿರುವ ಈ ಸಂದರ್ಭ ಸಿನಿಮಾದ ಮೂಲಕ ನಮ್ಮ ಯುವಪೀಳಿಗೆಗೆ ಕುಟುಂಬದ ಸಂಬಂಧಗಳನ್ನು ಪರಿಚಯಿಸುವ ಸನ್ನಿವೇಶ ಎದುರಾಗಿದೆ. 

ಇತ್ತೀಚಿನ ದಿನಗಳಲ್ಲಿ ಪ್ರಕೃತಿಯ ಸುಂದರ ಮತ್ತು ರಮಣೀಯ ತಾಣಗಳನ್ನು ಕೃತಕವಾಗಿ ನಿರ್ಮಿಸಿ ಸಾರ್ವಜನಿಕರನ್ನು ಆಕರ್ಷಿಸಲಾಗುತ್ತಿದೆ. ನಾಲ್ಕೈದು ಎಕರೆಯಷ್ಟು ವಿಶಾಲವಾದ ಜಾಗದಲ್ಲಿ ನಿರ್ಮಾಣಗೊಳ್ಳುವ ಕೃತಕ ನಿಸರ್ಗ ತಾಣಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಸಾರ್ವಜನಿಕರು ಸಾವಿರಾರು ರೂಪಾಯಿಗಳನ್ನು ಖರ್ಚುಮಾಡಿ ಇಂಥ ಕೃತಕ ತಾಣಗಳಿಗೆ ಭೇಟಿ ನೀಡಿ ನಿಜವಾದ ಪರಿಸರದಲ್ಲೇ ತಾವು ನಿಂತಿರುವೆವೇನೋ ಎಂದು ಪುಳಕಗೊಳ್ಳುವರು. ಈ ಕೃತಕ ತಾಣಗಳಲ್ಲಿ ಜಲಪಾತಗಳು ಸೃಷ್ಟಿಯಾಗುತ್ತವೆ, ನೀರು ನದಿಯಂತೆ ಹರಿಯುತ್ತದೆ, ಗಿಡ-ಮರಗಳು ತೊನೆದಾಡುತ್ತವೆ, ಮಳೆ ಸುರಿಯುತ್ತದೆ, ಪಕ್ಷಿಗಳ ಕಲರವ ಕಿವಿಗಳನ್ನು ಇಂಪಾಗಿಸುತ್ತದೆ. ಹಳ್ಳಿಯ ಪರಿಸರದಲ್ಲೆ ಓಡಾಡುತ್ತಿರುವ ಭಾವಹುಟ್ಟಿಸುವ ಹಳ್ಳಿಮನೆಗಳು ನಿರ್ಮಾಣಗೊಳ್ಳುತ್ತವೆ. ಗೌಡರ ಮನೆ, ಜಗಲಿ, ಅಂಗಳ, ದನದ ಕೊಟ್ಟಿಗೆ, ಪಂಚಾಯಿತಿ ಕಟ್ಟೆ, ಹರಟೆಕಟ್ಟೆ, ನೀರುಸೇದುವ ಭಾವಿ ಇರುವ ಹಳ್ಳಿಯ ಮರುಸೃಷ್ಟಿಯಾಗುತ್ತದೆ. ಹಳ್ಳಿಗಳೆಂದರೆ ಮಾರು ದೂರ ಸರಿಯುವವರು ಸಾವಿರಾರು ರೂಪಾಯಿಗಳನ್ನು ಪಾವತಿಸಿ ಕೃತಕವಾಗಿ ನಿರ್ಮಿಸಲಾದ ಹಳ್ಳಿಮನೆಗಳಲ್ಲಿ ವಾರಾಂತ್ಯದ ರಜೆಯ ಮೋಜು ಅನುಭವಿಸುತ್ತಾರೆ. 

ಸಿಟ್ಟು, ದ್ವೇಷ, ಪ್ರೀತಿ, ನಗು, ಅಳು, ಖುಷಿ ಇಂಥ ಮನುಷ್ಯ ಸಹಜವಾದ ಭಾವನೆಗಳನ್ನು ಕೂಡ ರಿಯಾಲಿಟಿ ಶೋ ಎನ್ನುವ ಹೆಸರಿನಲ್ಲಿ ಕೃತಕವಾಗಿ ಸೃಷ್ಟಿಸಿ ಪ್ರೇಕ್ಷಕರನ್ನು ಭಾವಾವೇಶಕ್ಕೆ ಒಳಗಾಗಿಸುತ್ತಿರುವರು. ನಿರ್ಧಿಷ್ಟ ಸಂಖ್ಯೆಯ ಸ್ಪರ್ಧಿಗಳನ್ನು ಒಂದೆಡೆ ಸೇರಿಸಿ ಅಖಾಡಕ್ಕೆ ಇಳಿಸುವ ಕಾರ್ಯಕ್ರಮದ ನಿರ್ವಾಹಕರು ಅವರನ್ನು ಬಗೆಬಗೆಯ ಚಟುವಟಿಕೆಗಳಲ್ಲಿ ತೊಡಗಿಸಿ ವಿಭಿನ್ನ ಭಾವನೆಗಳು ಅಭಿವ್ಯಕ್ತಗೊಳ್ಳುವಂತೆ ನೋಡಿಕೊಳ್ಳುತ್ತಾರೆ. ಸ್ಪರ್ಧಿಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಡುತ್ತದೆ. ಗೆಲ್ಲಬೇಕೆಂಬ ತುಡಿತ, ಎದುರಾಳಿಯನ್ನು ಹಣಿಯುವ ತಂತ್ರ, ಪ್ರತಿತಂತ್ರ, ಪರಸ್ಪರ ಅವಮಾನಿಸುವ ಮಾನಸಿಕ ಕ್ರೌರ್ಯ ಹೀಗೆ ಇಡೀ ಕಾರ್ಯಕ್ರಮದುದ್ದಕ್ಕೂ ಮನುಷ್ಯನ ರಾಗ-ದ್ವೇಷದ ಗುಣಗಳು ಅನಾವರಣಗೊಳ್ಳುತ್ತಹೋಗುತ್ತವೆ. ಈ ಒಟ್ಟು ಕ್ರಿಯೆ ನಿರ್ದೇಶಕನ ಆಣತಿಯಂತೆ ಜರುಗುತ್ತ ಪ್ರೇಕ್ಷಕರನ್ನು ಸಮ್ಮೋಹಿನಿಯಂತೆ ತನ್ನತ್ತ ಸೆಳೆಯುತ್ತದೆ. ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ಪ್ರೇಕ್ಷಕ ಆ ಸ್ಪರ್ಧಿಗಳಲ್ಲಿ ತನ್ನನ್ನು ಒಬ್ಬನಾಗಿ ಕಲ್ಪಿಸಿಕೊಂಡು ಸ್ಪರ್ಧಿಯೊಬ್ಬ ಅನುಭವಿಸುವ ಎಲ್ಲ ಮಾನಸಿಕ ವೇದನೆಗಳಿಗೆ ತಾನು ಒಳಗಾಗುತ್ತಾನೆ. ವಿಪರ್ಯಾಸವೆಂದರೆ ನಿಜವಾದ ಬದುಕಿನಲ್ಲಿ ಭಾವನೆಗಳಿಲ್ಲದೆ ಯಂತ್ರದಂತೆ ಬದುಕುತ್ತಿರುವ ಮನುಷ್ಯ ರಿಯಾಲಿಟಿ ಶೋನಂಥ ಕಾರ್ಯಕ್ರಮವನ್ನು ವೀಕ್ಷಿಸುತ್ತ ತನ್ನ ಭಾವನೆಗಳನ್ನು ಉದ್ದೀಪನಗೊಳಿಸುತ್ತಾನೆ.  

ತನ್ನ ದೈನಂದಿನ ವಾಸ್ತವದ ಬದುಕಿನಲ್ಲಿ ಹುಡುಕಬೇಕಾದ ಈ ಎಲ್ಲ ಸಂಗತಿಗಳನ್ನು ಮನುಷ್ಯ ಕೃತಕ ವಾತಾವರಣದಲ್ಲಿ ಕಂಡುಕೊಳ್ಳುತ್ತಿರುವನು. ಆ ಕೃತಕತೆಯನ್ನೇ ನಿಜವಾದ ಬದುಕು ಎಂದು ಭಾವಿಸಿ ತನ್ನ ವಾಸ್ತವದ ಬದುಕನ್ನು ಒಂದು ಯಂತ್ರದಂತೆ ಬಾಳುತ್ತಿರುವನು. ಮನುಷ್ಯನ ಯಾಂತ್ರೀಕೃತ ಬದುಕಿಗೆ ಕಾರಣವಾದ ಸಂಗತಿಯನ್ನು ತತ್ವಜ್ಞಾನಿ ಕಾರ್ಲ್‍ಮಾರ್ಕ್ಸ್ ಅವರು ಗುರುತಿಸಿದ್ದು ಹೀಗೆ- ‘ಮನುಷ್ಯನ ದುಡಿಮೆ ಹಾಗೂ ಬಿಡುವು ಎರಡೂ ಒಂದಕ್ಕೊಂದು ತೆಕ್ಕೆ ಹಾಕಿಕೊಂಡಿರುವಂಥ, ಒಂದನ್ನೊಂದು ಪ್ರಭಾವಿಸುವಂಥ ಕ್ಷೇತ್ರಗಳಾಗಿವೆ. ಮಾನವನ ಅಂತ:ಕರಣಕ್ಕೆ ಮತ್ತು ಮನಸ್ಸಿಗೆ ಸಂತೋಷ ಕೊಡುವಂಥ ಅವನ ಸೃಜನಶೀಲತೆಗೆ ಎಡೆಕೊಡಬಲ್ಲ ‘ಕೆಲಸ’ವನ್ನೇ ಅಸಾಧ್ಯ ಮಾಡಿರುವಂಥ ದುಡಿಮೆಯ ಕ್ಷೇತ್ರ ಕ್ರಮೇಣ ಮನುಷ್ಯನ ಆತ್ಮ-ಮನಸ್ಸುಗಳನ್ನು ಕೊಲ್ಲುವ ಬೇನೆಯ ತಾಣವಾಗುತ್ತಿದೆ’. ಮಾರ್ಕ್ಸ್ ವ್ಯಕ್ತಪಡಿಸಿದ ಈ ಅಭಿಪ್ರಾಯವನ್ನಾಧರಿಸಿ ಯಶವಂತ ಚಿತ್ತಾಲರು ಹೇಳುವುದು ಹೀಗೆ ‘ದುಡಿಮೆಯ ಕ್ಷೇತ್ರದಿಂದ ಪ್ರಭಾವಿತಗೊಂಡ ಮನಸ್ಸನ್ನು ಅಲ್ಲೆ ಬಿಟ್ಟುಬರುವುದು ಸಾಧ್ಯವಿದ್ದಿದ್ದರೆ- ಬಿಟ್ಟುಬರುವುದುಳಿಯಲಿ, ನಮ್ಮೊಳಗಿನ ಅತ್ಯಂತ ಮಹತ್ವದ್ದೇನೋ ಅಲ್ಲಿ ನಾಶವಾಗುತ್ತಿದೆ ಎಂಬ ಅರಿವೂ ನಮಗೆ ಇಲ್ಲದಿರುವುದು ಇಂದಿನ ನಮ್ಮ ಬದುಕಿನ ದುರದೃಷ್ಟವಾಗಿದೆ’. ಒಟ್ಟಾರೆ ಬದುಕು ಹೆಚ್ಚು ಹೆಚ್ಚು ಯಾಂತ್ರೀಕವಾಗುತ್ತ ಹೋದಂತೆ ಕೃತಕತೆಯೇ ವಾಸ್ತವವೆನಿಸುವ ಅಪಾಯದ ದಿನಗಳು ದೂರವಿಲ್ಲ. 

-ರಾಜಕುಮಾರ ಕುಲಕರ್ಣಿ


Saturday, June 3, 2023

ರಾಜಕಾರಣಕ್ಕೆ ಓದಿನ ದೀಕ್ಷೆಯಾಗಲಿ

 



(ಪ್ರಜಾವಾಣಿ 24.02.2023)

   ರಾಜಕಾರಣಿಗಳಿಗೆ ಘನತೆಯಿಂದ ಮಾತಾಡಲು ಗೊತ್ತಿಲ್ಲ ಎಂದು ಕೆಲವರು ಆಗಾಗ ಆತಂಕ ವ್ಯಕ್ತಪಡಿಸುತ್ತಾರೆ. ರಾಜಕಾರಣದಲ್ಲಿ ಭಾಷೆಯನ್ನು ದ್ವೇಷದ ನುಡಿಗಟ್ಟಾಗಿ ಪರಿವರ್ತಿಸಿರುವುದಕ್ಕೆ ನಮ್ಮ ಬಹಳಷ್ಟು ರಾಜಕಾರಣಿಗಳಿಗೆ ಪುಸ್ತಕ ಪ್ರೀತಿ ಇಲ್ಲದಿರುವುದೇ ಕಾರಣ. ಸೃಜನಶೀಲತೆಗೂ ಮತ್ತು ರಾಜಕಾರಣಕ್ಕೂ ಎಣ್ಣೆ-ಸೀಗೆಕಾಯಿ ಸಂಬಂಧ. ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಯ ಮೇಲೂ ನಮ್ಮ ರಾಜಕಾರಣಿಗಳು ಸಾಹಿತ್ಯವನ್ನು ಬದಿಗೆ ಸರಿಸಿ ರಾಜಕೀಯದ ಮಾತುಗಳನ್ನಾಡುತ್ತಾರೆ. ಸಾಹಿತ್ಯ ಅಕಾಡೆಮಿ ಮತ್ತು ಪರಿಷತ್ತಿನ ಅಧ್ಯಕ್ಷರ ಹಾಗೂ ಸದಸ್ಯರ ನೇಮಕಾತಿಯಲ್ಲೂ ರಾಜಕಾರಣಿಗಳ ಶಿಫಾರಸು ಮಹತ್ವದ ಪಾತ್ರವಹಿಸುತ್ತದೆ. 

ಪುಸ್ತಕ ಪ್ರೀತಿಯನ್ನು ಮೈಗೂಡಿಸಿಕೊಂಡಿದ್ದ ರಾಜಕಾರಣದ ಪರಂಪರೆ ನಮ್ಮ ಕಣ್ಣೆದುರಿಗಿದೆ. ಜವಹರಲಾಲ ನೆಹರು ‘ಡಿಸ್ಕವರಿ ಆಫ್ ಇಂಡಿಯಾ’ ಕೃತಿ ರಚಿಸಲು ಅವರಿಗಿದ್ದ ಓದಿನ ಅಪಾರ ಅನುಭವವೇ ಕಾರಣವಾಯಿತು. ನರಸಿಂಹರಾವ್ ತಮ್ಮ ಓದಿನ ಬಲದಿಂದ ಭಾರತದ ಅನೇಕ ಭಾಷೆಗಳನ್ನೊಳಗೊಂಡಂತೆ ವಿದೇಶಿ ಭಾಷೆಗಳಲ್ಲೂ ವ್ಯವಹರಿಸಬಲ್ಲವರಾಗಿದ್ದರು. ಪುಸ್ತಕಗಳ ಓದಿನ ಜ್ಞಾನ ರಾಜಕೀಯದಲ್ಲಿದ್ದೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ವಾಗ್ಮಿ ಮತ್ತು ಸೂಕ್ಷ್ಮಸಂವೇದನೆಯ ಕವಿಯಾಗಿ ರೂಪಿಸಿತು. ಸೋಮನಾಥ ಚಟರ್ಜಿ, ಪ್ರಣಬ್ ಮುಖರ್ಜಿ, ಕರಣಸಿಂಗ್, ಅಡ್ವಾಣಿ ತಮ್ಮ ಓದಿನ ವಿದ್ವತ್ತಿನಿಂದ ಅತ್ಯುತ್ತಮ ಸಂಸದೀಯಪಟುಗಳೆಂಬ ಗೌರವಕ್ಕೆ ಪಾತ್ರರಾದರು. ಕರ್ನಾಟಕದ ರಾಜಕಾರಣದಲ್ಲಿ ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರು, ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ, ಎಂ.ಪಿ.ಪ್ರಕಾಶ್ ಇನ್ನು ಅನೇಕ ರಾಜಕಾರಣಿಗಳು ತಮ್ಮ ಬಿಡುವಿಲ್ಲದ ರಾಜಕಾರಣದ ನಡುವೆಯೂ ಪುಸ್ತಕ ಪ್ರೀತಿಯನ್ನು ಕಾಪಿಟ್ಟುಕೊಂಡಿದ್ದರು. ಎಂ.ಪಿ.ಪ್ರಕಾಶ್ ಓದಿನ ಪ್ರೀತಿಯೊಂದಿಗೆ ಕಲಾವಿದರಾಗಿಯೂ ಈ ನೆಲದ ಸಾಂಸ್ಕೃತಿಕ ಹಿರಿಮೆಯನ್ನು ಎತ್ತರಕ್ಕೆ ಕೊಂಡೊಯ್ದರು. ವೀರಪ್ಪ ಮೊಯ್ಲಿ ಬರಹಗಾರರಾಗಿ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿರುವರು. ಚಂದ್ರಶೇಖರ್ ಮತ್ತು ಸುರೇಶ್ ಕುಮಾರ ಇವತ್ತಿಗೂ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆಯುತ್ತಾರೆ.

ಭಾಷೆ ಸುಧಾರಿಸಲು ಸಾಹಿತ್ಯದ ಓದು ಒಂದು ಪರ್ಯಾಯ ಮಾರ್ಗ. ಜೊತೆಗೆ ಓದು ಮನುಷ್ಯನ ಹೃದಯಾಂತರಾಳದಲ್ಲಿ ಪ್ರೀತಿ, ಅನುಕಂಪ ಮತ್ತು ಕರುಣೆಯನ್ನು ಹುಟ್ಟಿಸುವ ಕೆಲಸ ಮಾಡುತ್ತದೆ. ಲೋಕಾಂತದಲ್ಲೂ ಏಕಾಂತವನ್ನು ಒದಗಿಸುವ ಶಕ್ತಿ ಓದಿಗಿದೆ. ಆದರೆ ಸದಾ ಲೋಕಾಂತದ ಬದುಕಿನಲ್ಲೇ ಧನ್ಯತೆ ಅನುಭವಿಸುವ ರಾಜಕಾರಣಿಗಳಿಗೆ ಮೌನದ ಸುಖ ಅರ್ಥವಾಗುವುದಾದರೂ ಹೇಗೆ?. ಗ್ರಂಥಾಲಯ ಇಲಾಖೆ ಎನ್ನುವ ಒಂದು ಸಾಂಸ್ಕೃತಿಕ ಇಲಾಖೆ ಇವತ್ತು ರಾಜಕಾರಣದ ಅವಕೃಪಗೆ ಮತ್ತು ನಿರ್ಲಕ್ಷ್ಯಕ್ಕೆ ಒಳಗಾಗಿರುವ ದೃಷ್ಟಾಂತ ನಮ್ಮ ಕಣ್ಣೆದುರಿಗಿದೆ.  

‘ರಾಜಕಾರಣದಲ್ಲಿ ಸದ್ದನ್ನೇ ತುಂಬ ನೆಚ್ಚಿಕೊಂಡ ಭಾಷೆಗೆ ಮೌನದ ಪರಿಚಯವಿಲ್ಲ. ಶಬ್ದ ಮತ್ತು ಆವೇಶ ರಾಜಕಾರಣದ ಪ್ರಧಾನ ಮೆಚ್ಚುಗೆಗಳಾಗಿವೆ. ಮೌನ ಅರ್ಥವಾಗಲು ರಾಜಕಾರಣಿಗಳಿಗೆ ಓದಿನಲ್ಲಿ ಆಸಕ್ತಿ ಹುಟ್ಟುವಂತಾಗಬೇಕು, ರಾಜಕಾರಣಕ್ಕೆ ಸಾಹಿತ್ಯದ ದೀಕ್ಷೆಯಾಗಬೇಕು’ ಎಂದು ಯಶವಂತ ಚಿತ್ತಾಲರು ‘ಸಾಹಿತ್ಯದ ಸಪ್ತಧಾತುಗಳು’ ಪುಸ್ತಕದಲ್ಲಿ ಹೇಳಿರುವರು. ನೊಬೆಲ್ ಬಹುಮಾನ ಸ್ವೀಕರಿಸುವಾಗ ಕವಿ ಬ್ರಾಡ್‍ಸ್ಕೀ ತನ್ನ ಭಾಷಣದಲ್ಲಿ ಹೀಗೆ ಹೇಳುತ್ತಾನೆ ‘ನಾವು ನಮ್ಮ ನಾಯಕರುಗಳನ್ನು ಅವರ ರಾಜಕೀಯ ಕಾರ್ಯಸೂಚಿಗಿಂತ ಅವರ ಓದಿನ ಅನುಭವವನ್ನು ಆಧರಿಸಿ ಆಯ್ಕೆ ಮಾಡಿದ್ದಲ್ಲಿ ಭೂಮಿಯ ಮೇಲೆ ಅತ್ಯಂತ ಕಡಿಮೆ ದು:ಖವಿರುತ್ತಿತ್ತು’.

ಓದಿನ ಅನುಭವದ ಕೊರತೆಯಿಂದ ಸಭೆ ಸಮಾರಂಭಗಳಲ್ಲಿ, ಶಾಸನ ಸಭೆಗಳಲ್ಲಿ, ಚುನಾವಣೆ ಪ್ರಚಾರದ ಸಂದರ್ಭ ನಮ್ಮ ರಾಜಕಾರಣಿಗಳು ಭಾಷೆಯನ್ನು ಕೀಳುಮಟ್ಟಕ್ಕಿಳಿಸಿ ಮಾತನಾಡುವುದು ಸಾಮಾನ್ಯವಾಗಿದೆ. ರಾಜಕಾರಣವೇ ಸಾರ್ವಜನಿಕರ ನಡೆ ನುಡಿಯನ್ನು ನಿರ್ಧರಿಸುತ್ತಿರುವ ಇಂಥ ಹೊತ್ತಿನಲ್ಲಿ ಸಹಜವಾಗಿಯೇ ರಾಜಕಾರಣಿಗಳು ಯುವಪೀಳಿಗೆಗೆ ಐಕಾನ್‍ಗಳಾಗಿ ಕಾಣಿಸುತ್ತಿರುವರು. ಹೀಗಾಗಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಕಾರಿಡಾರ್‍ಗಳಲ್ಲಿ ರಾಜಕಾರಣದ ಭಾಷೆಯೇ ಹೆಚ್ಚು ಹೆಚ್ಚು ಬಳಕೆಯಾಗುತ್ತಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಕೂಡಿಯೇ ಶಿಕ್ಷಣಕ್ಕೆ ರಾಜಕಾರಣದ ವೇಷ ತೊಡಿಸುತ್ತಿರುವುದು ಇವತ್ತಿನ ಶಿಕ್ಷಣ ವ್ಯವಸ್ಥೆಯ ದುರಂತ.

ಹಿರಿಯರ ಸದನವೆಂದೇ ಪರಿಗಣಿಸಲ್ಪಟ್ಟಿರುವ ವಿಧಾನ ಪರಿಷತ್ತಿಗೆ ಒಂದುಕಾಲದಲ್ಲಿ ಸಾಹಿತಿಗಳು, ಕಲಾವಿದರು, ಚಿಂತಕರು ಸರ್ಕಾರದಿಂದ ನೇಮಕಗೊಳ್ಳುತ್ತಿದ್ದರು. ಚಿಂತಕರು ಮತ್ತು ಬುದ್ಧಿಜೀವಿಗಳಿಂದ ತುಂಬಿರುತ್ತಿದ್ದ ವಿಧಾನ ಪರಿಷತ್ ಒಂದರ್ಥದಲ್ಲಿ ವಿಧಾನ ಸಭೆಯಲ್ಲಿನ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡುವ ಹಿರಿಯಣ್ಣನಂತೆ ಕೆಲಸ ಮಾಡುತ್ತಿತ್ತು. ಶಾಸನ ಸಭೆಯಲ್ಲಿನ ಭಾಷಣಗಳು ಐತಿಹಾಸಿಕ ದಾಖಲೆಗಳಾಗಿ ಉಳಿದುಕೊಂಡಿರುವುದರ ಹಿಂದೆ ಅಂದಿನ ರಾಜಕಾರಣಿಗಳ ಓದಿನ ವಿಸ್ತಾರವಾದ ಅನುಭವವೇ ಕಾರಣ. ಇಂದು ವಿಧಾನ ಪರಿಷತ್ತಿಗೂ ಫುಲ್‍ಟೈಮ್ ರಾಜಕಾರಣಿಗಳೇ ಸಾಹಿತ್ಯ, ಕಲೆ, ಸಮಾಜ ಸೇವೆಯ ಕೋಟಾದಡಿ ಪ್ರವೇಶ ಪಡೆಯುತ್ತಿರುವುದರಿಂದ ಶಾಸನ ಸಭೆಯ ಮಾತುಗಳು ವಿದ್ವತ್‍ನ್ನು ಕಳೆದುಕೊಂಡು ಅಲ್ಲಿ ವಾಚಾಳಿತನ ಗೋಚರಿಸುತ್ತಿದೆ. ಇನ್ನೊಂದು ಆತಂಕದ ಸಂಗತಿ ಎಂದರೆ ವಿಧಾನ ಪರಿಷತ್ತನ್ನೆ ರದ್ದುಗೊಳಿಸಲು ಕೆಲವು ರಾಜ್ಯಗಳಲ್ಲಿ ಪ್ರಯತ್ನಿಸಲಾಗುತ್ತಿದೆ. 

ಅಮೆರಿಕಾ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ರಾಜಕಾರಣಿಗಳು ನಿವೃತ್ತಿಯ ನಂತರ ಪುಸ್ತಕಗಳ ಓದಿನಲ್ಲಿ ಮತ್ತು ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ತಮ್ಮ ರಾಜಕೀಯದ ಅನುಭವವನ್ನು ಪುಸ್ತಕದ ರೂಪದಲ್ಲಿ ಪ್ರಕಟಿಸುತ್ತಾರೆ. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತ ತಮ್ಮ ಅನುಭವ ಮತ್ತು ಓದಿನ ಜ್ಞಾನವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಸಧ್ಯದ ರಾಜಕಾರಣವನ್ನು ನೋಡಿದಾಗ ಭಾರತದ ರಾಜಕಾರಣದಲ್ಲಿ ಇಂಥದ್ದೊಂದು ಪ್ರಬುದ್ಧ ಮತ್ತು ವಿದ್ವತ್ತಿನ ನಡೆಯನ್ನು ನಿರೀಕ್ಷಿಸುವುದು ಅಸಾಧ್ಯದ ಸಂಗತಿ. 

---000---

-ರಾಜಕುಮಾರ ಕುಲಕರ್ಣಿ

Monday, May 15, 2023

ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ (ಕಥಾಸಂಕಲನ)

 

ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ (ಕಥಾಸಂಕಲನ)





ಇತ್ತೀಚಿಗೆ ನನ್ನ ‘ದೊಕಾಚಿ ಮೇಷ್ಟ್ರ ಶಾಂತಿ-ಕ್ರಾಂತಿ’ ಕಥಾಸಂಕಲನ ಪ್ರಕಟವಾಯಿತು. ಇದು 2023 ರಲ್ಲಿ ಪ್ರಕಟವಾದ ನನ್ನ ಕಥಾಸಂಕಲನ. ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶಕರು ಈ ಕಥಾಸಂಕಲನವನ್ನು ಪ್ರಕಟಿಸಿರುವರು. ಚೇತನ್ ಕಣಬೂರ ಅವರು ಪ್ರೀತಿಯಿಂದ ಪ್ರಕಟಿಸಿರುವರು. ಅವರಿಗೆ ನನ್ನ ಧನ್ಯವಾದಗಳು.
ಈ ಕಥಾಸಂಕಲನದಲ್ಲಿ 15 ಕಥೆಗಳಿವೆ. ಮಯೂರ, ತರಂಗ, ತುಷಾರ, ಕನ್ನಡಪ್ರಭ ಮತ್ತು ಮಾನಸ ಪತ್ರಿಕೆಗಳ ಸಂಪಾದಕರು ಈ ಕಥೆಗಳನ್ನು ಪ್ರಕಟಿಸಿ ನನ್ನನ್ನು ಕನ್ನಡದ ಕಥಾಲೋಕಕ್ಕೆ ಪರಿಚಿಯಿಸಿರುವರು. ಎಲ್ಲ 15 ಕಥೆಗಳನ್ನು ಸೇರಿಸಿ ಈಗ ಕಥಾಸಂಕಲನ ಪ್ರಕಟವಾಗಿದೆ. 
 ನಾನು ಕಥೆಗಳನ್ನು ಬರೆಯುತ್ತೇನೆಂದು ಭಾವಿಸಿರಲಿಲ್ಲ. ಈ ಸೃಜನಶೀಲ ಸಾಹಿತ್ಯದ ಸೃಷ್ಟಿಗೆ ಮೂಲ ಪ್ರೇರಣೆ ಅಮ್ಮನ ಕಥೆಗಳ ಓದು. ಮನೆಗೆಲಸದ ಬಿಡುವಿನ ವೇಳೆ ಅಕ್ಕಪಕ್ಕದ ಮನೆಯ ಹೆಂಗಸರೆಲ್ಲ ಪಟ್ಟಾಂಗ ಕುಳಿತು ಮಾತುಕತೆಯಲ್ಲಿ ತೊಡಗಿರುವಾಗ ನನ್ನ ಅಮ್ಮ ಕಥೆಯ ಪುಸ್ತಕ ಕೈಯಲ್ಲಿ ಹಿಡಿದು ಓದಿನಲ್ಲಿ ಮೈಮರೆಯುತ್ತಿದ್ದಳು. ಹೀಗೆ ಅಮ್ಮನ ಓದಿಗಾಗಿ ಮನೆಗೆ ಬಂದು ಸೇರಿದ ಕಥಾ ಪುಸ್ತಕಗಳು ನನ್ನನ್ನೂ ಬಾಚಿತಬ್ಬಿಕೊಂಡವು. ಈಗ ಅನಿಸುತ್ತದೆ ಅಮ್ಮ ಆ ಕಥೆಗಳಲ್ಲಿ ತನ್ನ ಬದುಕನ್ನು ಹುಡುಕುತ್ತಿದ್ದಳೇನೋ ಎಂದು. ಎಷ್ಟೆಂದರೂ ಕಥೆ ಎನ್ನುವುದು ಒಬ್ಬರ ಬದುಕಲ್ಲದೆ ಮತ್ತೆನಲ್ಲವಲ್ಲ. ಅಮ್ಮ ನನಗೂ ಒಂದಿಷ್ಟು ಕಥೆಯ ಓದಿನ ಗೀಳು ಅಂಟಿಸಿ ಸಾಹಿತ್ಯದ ಮೂಲಕವೇ ಬದುಕಿನ ಅರ್ಥ ಅರಿಯುವ ಪಯಣದ ದಾರಿ ತೋರಿಸಿಕೊಟ್ಟಳು. ಹಾಗೆಂದೆ ಈ ಕಥಾಸಂಕಲನ ನನ್ನಮ್ಮನಿಗೆ, ಭಾವದಲ್ಲಿ ನೆಲೆ ನಿಂತಿರುವ ಅವಳ ನೆನಪುಗಳಿಗೆ ಸಮರ್ಪಿಸಿದ್ದೇನೆ.
-ರಾಜಕುಮಾರ ಕುಲಕರ್ಣಿ

Tuesday, May 2, 2023

ರೈತನಲ್ಲಿವೆ ಪ್ರಶ್ನೆ: ಉತ್ತರದಾಯಿ ಯಾರು?

 



(೧೦.೦೨.೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟ)

   ಈ ವರ್ಷ ಜೋಳದ ಉತ್ಪಾದನೆ ಕ್ಷೀಣಿಸಲಿದೆ ಎನ್ನುವ ಆತಂಕ ಬಾಗಲಕೋಟೆ ಜಿಲ್ಲೆಯ ಸಾರ್ವಜನಿಕರಲ್ಲಿ ಮನೆಮಾಡಿದೆ. ಈ ಬಾರಿ ಜಿಲ್ಲೆಯಲ್ಲಿ 60 ಸಾವಿರ ಹೆಕ್ಟೇರ್ ಕೃಷಿಭೂಮಿಯಲ್ಲಿ ಜೋಳ ಬಿತ್ತನೆಯಾಗಿದೆ. ಕಳೆದ ವರ್ಷ ಬಿತ್ತನೆಯಾದ 1.20 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ಹೋಲಿಸಿದರೆ ಈ ವರ್ಷ ಪ್ರತಿಶತ 50 ರಷ್ಟು ಕಡಿಮೆ ಪ್ರಮಾಣ ಜೋಳ ಬಿತ್ತನೆಯಾಗಿದೆ. ರೈತರು ವಾಣಿಜ್ಯ ಬೆಳೆಗಳಾದ ಕಬ್ಬು, ರೇಷ್ಮೆ, ಮೆಣಸಿನಕಾಯಿ ಬೆಳೆಗಳನ್ನು ಹೆಚ್ಚು ನೆಚ್ಚಿಕೊಂಡಿರುವುದೇ ಇದಕ್ಕೆ ಕಾರಣ. ಇನ್ನೊಂದು ಸಂಗತಿ ಎಂದರೆ ಒಣಬೇಸಾಯವನ್ನು ಆಶ್ರಯಿಸಿರುವ ರೈತರು ಮಾತ್ರ ಜೋಳದ ಬಿತ್ತನೆ ಮಾಡುತ್ತಿರುವರು. ನೀರಾವರಿ ಸೌಲಭ್ಯ ಹೊಂದಿರುವ ರೈತರು ಹೆಚ್ಚಾಗಿ ಬೆಳೆಯುತ್ತಿರುವುದು ವಾಣಿಜ್ಯ ಬೆಳೆಗಳನ್ನು. ಜೋಳ ಮುಖ್ಯ ಆಹಾರ ಬೆಳೆಯಾಗಿರುವುದರಿಂದ ಜೋಳದ ಉತ್ಪಾದನೆ ಕ್ಷೀಣಿಸುತ್ತಿರುವುದು ಸಹಜವಾಗಿಯೇ ಜಿಲ್ಲೆಯ ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಆತಂಕ ಕೇವಲ ಬಾಗಲಕೋಟೆ ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ, ಅದು ಇಡೀ ಉತ್ತರ ಕರ್ನಾಟಕ ಭಾಗಕ್ಕೆ ಅನ್ವಯಿಸುತ್ತದೆ. 

ಒಂದರ್ಥದಲ್ಲಿ ನಾನೇಕೆ ಆರ್ಥಿಕ ನಷ್ಠ ಅನುಭವಿಸಿ ಬೇರೆಯವರ ಹಸಿವು ತಣಿಸಲಿ ಎಂದು ಅನ್ನದಾತ ಮುನಿಸಿಕೊಂಡಂತಿದೆ. ಸಾರ್ವಜನಿಕರ ಆತಂಕವನ್ನೆ ಆಧಾರವಾಗಿಟ್ಟುಕೊಂಡು ರೈತರಿಗೆ ಆಹಾರ ಬೆಳೆಗಳನ್ನೇ ಗಣನೀಯ ಪ್ರಮಾಣದಲ್ಲಿ ಬೆಳೆಯುವಂತೆ ಆಗ್ರಹಿಸುವಂತಿಲ್ಲ. ಆ ಒಂದು ನೈತಿಕತೆಯನ್ನು ಸರ್ಕಾರ ಮತ್ತು ಸಾರ್ವಜನಿಕರು ಅದೆಂದೊ ಕಳೆದುಕೊಂಡಾಗಿದೆ. ದಶಕದ ಹಿಂದೆ ಆಂಧ್ರಪ್ರದೇಶದಲ್ಲಿ ಕೃಷಿಗೆ ಸಂಬಂಧಿಸಿದಂತೆ ವಿಚಿತ್ರ ಸನ್ನಿವೇಶ ಎದುರಾಗಿತ್ತು. 2011 ರಲ್ಲಿ ಪೂರ್ವಗೋದಾವರಿ ಪ್ರಾಂತ್ಯದಲ್ಲಿನ ಎಲ್ಲ ಜಿಲ್ಲೆಗಳ ರೈತರು ಸಾಮೂಹಿಕವಾಗಿ ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದರು. ಒಂದು ವರ್ಷದ ಕಾಲ ವ್ಯವಸಾಯ ಮಾಡದಿರಲು ನಿರ್ಧರಿಸಿದ್ದರು. ಒಂದು ವರ್ಷ ಕಾಲಾವಧಿಯ ಆ ಸಾಮೂಹಿಕ ಸ್ಥಗಿತವನ್ನು ಅವರು ರಜೆ ಎಂದು ಘೋಷಿಸಿಕೊಂಡರು. ನಿರಂತರ ಕೃಷಿ ಚಟುವಟಿಕೆಯಿಂದ ಬಳಲಿರುವ ತಮಗೆ ವಿಶ್ರಾಂತಿಯ ಅಗತ್ಯವಿದೆ ಎನ್ನುವುದು ಅವರ ಬೇಡಿಕೆಯಾಗಿತ್ತು. ಪರಿಣಾಮವಾಗಿ ಆ ರಾಜ್ಯದ ಮುಖ್ಯಆಹಾರ ಬೆಳೆಯಾದ ಭತ್ತದ ಕೊರತೆ ಎದುರಾಗಲಿದೆ ಎನ್ನುವ ಆತಂಕ ಜನರಲ್ಲಿ ಮೂಡಿ ಅನಂತರ ಸರ್ಕಾರವೇ ಮುಂದಾಗಿ ರೈತರ ಮನವೊಲಿಸಬೇಕಾದ ಸಂದರ್ಭ ಸೃಷ್ಟಿಯಾಗಿತ್ತು. 

  ರೈತರು ಹೀಗೆ ಕಾಲಕಾಲಕ್ಕೆ ಮುನಿದುಕೊಳ್ಳಲು ಅನೇಕ ಕಾರಣಗಳಿವೆ. ರೈತರಿಗೆ ಕೃಷಿ ಚಟುವಟಿಕೆಯಿಂದ ಅದರಲ್ಲೂ ಒಣಬೇಸಾಯವನ್ನೇ ಆಶ್ರಯಿಸಿರುವವರಿಗೆ ಹೇಳಿಕೊಳ್ಳುವಂಥ ಆದಾಯ ದೊರೆಯುತ್ತಿಲ್ಲ. ಕಳಪೆ ಬೀಜಗಳ ಬಳಕೆ, ಅಧಿಕ ಬೆಲೆಗೆ ಖರೀದಿಸಿದ ರಸಗೊಬ್ಬರ, ಸಕಾಲಕ್ಕೆ ಆಗದ ಮಳೆ, ಕ್ರಿಮಿ ಕೀಟಗಳಿಂದ ಹಾನಿಗೊಳಗಾಗುವ ಬೆಳೆ ಇಷ್ಟೆಲ್ಲ ತೊಂದರೆಗಳನ್ನೆದುರಿಸಿ ಬೆಳೆ ಕೈಗೆ ಬರುವ ಹೊತ್ತಿಗೆ ದೇಶದ ಬಡ ರೈತರ ಸ್ಥಿತಿ ಚಿಂತಾಜನಕವಾಗಿರುತ್ತದೆ. ಸಾಲದ ಹೊರೆಯಿಂದ ಬೆನ್ನು ಬಾಗಿರುತ್ತದೆ. ಬೆಳೆದ ಬೆಳೆಯನ್ನು ಹೊಲದಿಂದಲೇ ನೇರವಾಗಿ ಮಾರುಕಟ್ಟೆಗೆ ಸಾಗಿಸುವ ಪರಿಸ್ಥಿತಿ ರೈತನದು. ಗಗನಕ್ಕೆರಿದ್ದ ಬೆಲೆ ಬೆಳೆ ರೈತನ ಕೈಗೆ ಬರುವ ಹೊತ್ತಿಗೆ ಪಾತಾಳಕ್ಕಿಳಿದಿರುತ್ತದೆ. ರೈತ ತನ್ನ ಬೆಳೆಯನ್ನು ಮಧ್ಯವರ್ತಿಗಳು ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಬೇಕು. ಅನೇಕ ಮಾರಾಟಗಾರರು ರೈತರಿಂದ ಕಡಿಮೆ ಬೆಲೆಗೆ ದವಸ ಧಾನ್ಯಗಳನ್ನು ಖರೀದಿಸಿ ನಂತರ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಸಾರ್ವತ್ರಿಕ ಸತ್ಯ.

ಒಂದೆಡೆ ಮಧ್ಯವರ್ತಿಗಳ ಹಾವಳಿ ಇನ್ನೊಂದೆಡೆ ರೈತರಿಂದಲೇ ನೇರವಾಗಿ ಖರೀದಿಸಲು ಸಿದ್ಧರಿಲ್ಲದ ಗ್ರಾಹಕರು. ಈ ನಡುವೆ ರೈತರ ಬೆಂಬಲಕ್ಕೆ ನಿಲ್ಲದ ಆಯಾ ಕಾಲಕ್ಕೆ ಆಡಳಿತ ನಡೆಸುವ ಸರ್ಕಾರ. ಉದ್ಯಮಿಗಳನ್ನು ರತ್ನಗಂಬಳಿ ಹಾಸಿ ಸ್ವಾಗತಿಸುವ ಸರ್ಕಾರ ತನ್ನದೆ ನೆಲದ ರೈತರ ಸಮಸ್ಯೆಗಳಿಗೆ ಕಿವುಡಾಗುತ್ತದೆ. ಕೈಗಾರಿಕೆಗಳಿಗೆ ಉಚಿತ ವಿದ್ಯುತ್, ಉಚಿತ ನೀರು ಜೊತೆಗೆ ಅತ್ಯುತ್ತಮ ರಸ್ತೆ ಸೌಲಭ್ಯ ಒದಗಿಸುವ ಸರ್ಕಾರ ತನ್ನದೇ ನಾಡಿನ ರೈತರ ಸಮಸ್ಯೆಗಳನ್ನು ಪರಿಹರಿಸಲು ಅಸಾಹಾಯಕವಾಗಿದೆ. ರಾತ್ರಿಯೆಲ್ಲ ನಿದ್ದೆ ಇಲ್ಲದೆ ಹೊಲಗಳಿಗೆ ನೀರು ಉಣಿಸುವ ರೈತರ ಸಂಖ್ಯೆ ಹೇರಳವಾಗಿದೆ. ಅದೆಷ್ಟೋ ರೈತರು ರಾತ್ರಿ ವೇಳೆ ವಿಷಜಂತುಗಳಿಗೆ ಬಲಿಯಾಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಉಂಟು.

ವ್ಯವಸಾಯ ಮಾಡಿಕೊಂಡು ಹಳ್ಳಿಗಳಲ್ಲಿ ಬದುಕುತ್ತಿರುವ ರೈತರ ಮಕ್ಕಳಿಗೆ ಅಲ್ಲಿ ಉತ್ತಮ ಶೈಕ್ಷಣಿಕ ಸೌಲಭ್ಯ ದೊರೆಯುತ್ತಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯರ ಕೊರತೆಯಿಂದಾಗಿ ದೊರೆಯಬೇಕಾದ ಆರೋಗ್ಯ ಸೌಲಭ್ಯಗಳಿಂದಲೂ ಅವರು ವಂಚಿತರಾಗಿರುವರು. ರಸ್ತೆ ಸಂಪರ್ಕದ ಕೊರತೆಯಿಂದಾಗಿ ಅನೇಕ ಹಳ್ಳಿಗಳು ಮಳೆಗಾಲದಲ್ಲಿ ದ್ವೀಪಗಳಾಗುತ್ತಿವೆ. ಹಳ್ಳಿಗರೆಲ್ಲ ದಿನಗೂಲಿಗಳಾಗಿ ನಗರ ಪ್ರದೇಶಗಳಿಗೆ ವಲಸೆ ಬರುತ್ತಿರುವುದರಿಂದ ಹಳ್ಳಿಗಳಲ್ಲಿ ಕೃಷಿ ಚಟುವಟಿಕೆಗಾಗಿ ಕೆಲಸಗಾರರು ದೊರೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದು ಪ್ರವಾಹಕ್ಕೆ ಬೆಳೆ ಕೊಚ್ಚಿ ಹೋದಾಗ ಇಲ್ಲವೆ ಮಳೆ ಬಾರದೆ ಭೀಕರ ಬರಗಾಲ ತಲೆದೂರಿದಾಗ ಆಗಲೂ ಸಂಕಷ್ಟಕ್ಕೊಳಗಾಗುವುದು ರೈತನ ಬದುಕೇ. ಬೆಳೆ ಬೆಳೆದು ಸಕಾಲದಲ್ಲಿ ಲಾಭವಾಗದೇ ಇದ್ದರೆ ರಸಗೊಬ್ಬರಗಳ ಸಾಲ ಗಂಭೀರ ಸಮಸ್ಯೆಯನ್ನು ತಂದೊಡ್ಡುತ್ತದೆ. ರಸಗೊಬ್ಬರಗಳ ವಿತರಕರ ಕಿರುಕುಳ ತಾಳದೆ ಅನೇಕ ರೈತರು ಸಾವಿಗೆ ಶರಣಾಗುವುದುಂಟು. ಮನೆಯ ಯಜಮಾನನನ್ನು ಕಳೆದುಕೊಂಡ ರೈತ ಕುಟುಂಬದ ಬದುಕು ಬೀದಿ ಪಾಲಾಗುತ್ತದೆ.

ಈಗ ಕೃಷಿಭೂಮಿ ವಸತಿ ಪ್ರದೇಶವಾಗಿ ಪರಿವರ್ತನೆಯಾಗುತ್ತಿದೆ. ನಗರ ಪ್ರದೇಶಗಳಿಗೆ ಹೊಂದಿಕೊಂಡಿರುವ ರೈತರ ಹೊಲಗಳಲ್ಲಿ ವಸತಿ ಸಮುಚ್ಛಯಗಳು ತಲೆ ಎತ್ತುತ್ತಿವೆ. ರಿಯಲ್ ಎಸ್ಟೇಟ್ ಉದ್ದಿಮೆಯಿಂದ ರೈತರ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಅದೆಷ್ಟೋ ರೈತರು ಬಂಡವಾಳದಾರರಿಗೆ ಕೃಷಿಭೂಮಿಯನ್ನು ಮಾರಾಟಮಾಡಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವರು. ಇಲ್ಲಿ ಸಾರ್ವಜನಿಕರದೂ ಅನೇಕ ತಪ್ಪುಗಳಿವೆ. ರೈತನಿಂದ ಒಂದು ಕಟ್ಟು ಸೊಪ್ಪು ಖರೀದಿಸಲು ನೂರೆಂಟು ಚೌಕಾಸಿ ಮಾಡುತ್ತಾರೆ. ರೈತನೆದುರು ತೂಕದಲ್ಲಿ ಮೋಸ, ಕಳಪೆ ತರಕಾರಿ ಎಂದು ಗಂಟೆಗಟ್ಟಲೆ ಉಪನ್ಯಾಸ ನೀಡುತ್ತಾರೆ. ಇದೇ ಜನ ಬೃಹದಾಕಾರದ ಮಾಲ್‍ಗಳಲ್ಲಿ ನಿಗದಿಪಡಿಸಿದ ಬೆಲೆಗೆ ಯಾವ ತಕರಾರು ಇಲ್ಲದೆ ಪದಾರ್ಥಗಳನ್ನು ಖರೀದಿಸುತ್ತಾರೆ.

ಈಗಾಗಲೇ ಜಗತ್ತಿನಲ್ಲಿ ಆಹಾರ ಕೊರತೆ ಉಂಟಾಗಿದೆ. ಜೊತೆಗೆ ಕೃಷಿಭೂಮಿ ಕ್ಷೀಣಿಸುತ್ತಿರುವುದು ನೋವಿನ ಮೇಲೆ ಬರೆ ಎಳೆದಂತಾಗಿದೆ. ಈ ಗಂಭೀರ ಸಮಸ್ಯೆಯನ್ನು ಹೋಗಲಾಡಿಸಲು ಮೊದಲು ರೈತರ ಸಮಸ್ಯೆಗಳು ಪರಿಹಾರ ಕಾಣುವಂತಾಗಬೇಕು. ಕೇವಲ ವೇದಿಕೆಗಳಲ್ಲಿನ ಚರ್ಚೆ ಮತ್ತು ಸಂವಾದಗಳಿಂದಾಗಲಿ, ಪ್ರದರ್ಶನ ಮೇಳಗಳಿಂದಾಗಲಿ ರೈತರ ಸಮಸ್ಯೆಗಳು ಪರಿಹಾರವಾಗಲಾರವು. ಸರ್ಕಾರ ಮತ್ತು ಸಾರ್ವಜನಿಕರು ಜೊತೆಗೂಡಿ ರೈತರ ಪ್ರಶ್ನೆಗಳಿಗೆ ಮತ್ತು ಸಮಸ್ಯೆಗಳಿಗೆ ಉತ್ತರದಾಯಿಯಾಗಬೇಕಿದೆ. 

-ರಾಜಕುಮಾರ ಕುಲಕರ್ಣಿ


Monday, April 3, 2023

ಸಂಕಲ್ಪಿಸುವ ಮನಸ್ಸು ದೃಢವಾಗಿರಲಿ

 





(೦೪. ೦೧. ೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟ)

       ಹೊಸ ವರ್ಷದ ಅಂಗವಾಗಿ ಸಾರ್ವಜನಿಕರು ಅನೇಕ ಸಂಕಲ್ಪಗಳನ್ನು ತೊಡುತ್ತಾರೆ. ಕೆಟ್ಟ ಹವ್ಯಾಸಗಳನ್ನು ತ್ಯಜಿಸುವ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ, ವರ್ತನೆಯನ್ನು ತಿದ್ದಿಕೊಳ್ಳುವ, ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ತರಹೇವಾರಿ ಸಂಕಲ್ಪಗಳು ಆಚರಣೆಗೆ ಬರುತ್ತವೆ. ಜನರು ತಮ್ಮ ನಿರ್ಧಾರಗಳನ್ನು ಎಷ್ಟರಮಟ್ಟಿಗೆ ಕಾರ್ಯಗತಗೊಳಿಸುವರು ಎನ್ನುವುದು ಅದು ಅವರವರ ಮನಸ್ಸಿನ ದೃಢತೆಯನ್ನು ಅವಲಂಬಿಸಿದೆ. ಹೆಚ್ಚಿನ ನಿರ್ಣಯಗಳು ಕೆಲವು ದಿನಗಳ ಕಾಲ ಕಾಟಾಚಾರಕ್ಕೆ ರೂಢಿಯಲ್ಲಿದ್ದು ಅನಂತರ ಮರೆತು ಹೋಗುವುದು ಸಾಮಾನ್ಯ ಸಂಗತಿಯಾಗಿದೆ. 

ಇತ್ತೀಚೆಗೆ ನನ್ನ ಮಿತ್ರರೋರ್ವರು ತಮ್ಮ ಮಗಳ ಮದುವೆಯನ್ನು ಅತ್ಯಂತ ಸರಳವಾಗಿ ನೆರವೇರಿಸಿದರು. ಯಾವ ಆಡಂಬರ, ಅದ್ದೂರಿ ಆಚರಣೆಗಳಿಲ್ಲದೆ ಮದುವೆ ಕಾರ್ಯಕ್ರಮ ಕೆಲವೇ ಗಂಟೆಗಳಲ್ಲಿ ಕೊನೆಗೊಂಡಿತು. ವಧು-ವರರ ಕುಟುಂಬ ಸದಸ್ಯರಷ್ಟೇ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಆಹಾರ ಕೂಡ ಮಿತವಾಗಿ ಬಳಕೆಯಾಗಿತ್ತು. ‘ಜಗತ್ತಿನಲ್ಲಿ ಆಹಾರ ಕೊರತೆಯ ಸಮಸ್ಯೆ ಉಲ್ಬಣಿಸುತ್ತಿರುವಾಗ ಅದ್ದೂರಿ ಮದುವೆ ಸಮಾರಂಭವನ್ನು ಏರ್ಪಡಿಸುವುದಕ್ಕೆ ಮನಸ್ಸು ಒಪ್ಪಲಿಲ್ಲ. ಇನ್ನುಮುಂದೆ ಕುಟುಂಬದ ಎಲ್ಲ ಕಾರ್ಯಕ್ರಮಗಳನ್ನು ಸರಳವಗಿ ಆಚರಿಸಬೇಕೆಂದು ಸಂಕಲ್ಪ ಮಾಡಿದ್ದೇನೆ. ಆ ಸಂಕಲ್ಪದ ಮೊದಲ ಹೆಜ್ಜೆಯಾಗಿ ಮಗಳ ಮದುವೆಯನ್ನು ಸರಳವಾಗಿ ನೆರವೇರಿಸಿದ್ದು ತೃಪ್ತಿ ನೀಡಿದೆ’ ಎಂದು ನುಡಿದ ಮಿತ್ರರ ಮಾತಿನಲ್ಲಿ ಹೆಮ್ಮೆ ಇತ್ತು. ದೇಶದ ಆಹಾರ ಕೊರತೆಯನ್ನು ನೀಗಿಸಲು ಪ್ರತಿಯೊಬ್ಬ ಪ್ರಜೆ ವಾರಕ್ಕೊಮ್ಮೆ ಉಪವಾಸವಿರುವಂತೆ ಲಾಲ ಬಹಾದ್ದೂರ ಶಾಸ್ತ್ರಿ ಅವರು ಪ್ರಧಾನ ಮಂತ್ರಿಯಾಗಿದ್ದ ಸಂದರ್ಭ ಕರೆ ನೀಡಿದ್ದರು. ಈ ಸಂಕಲ್ಪವನ್ನು ಸ್ವತ: ಶಾಸ್ತ್ರಿ ಅವರು ತಾವು ರೂಢಿಗೆ ತರುವುದರ ಮೂಲಕ ಜನರಿಗೆ ಆದರ್ಶವೂ ಮತ್ತು ಮಾದರಿಯೂ ಆಗುಳಿದರು.

ಆಹಾರ ಕೊರತೆಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಅದ್ದೂರಿ, ಆಡಂಬರವನ್ನು ತ್ಯಜಿಸಿ ಸರಳ ಬದುಕನ್ನು ರೂಢಿಸಿಕೊಳ್ಳುವುದು ನಾವು ಮಾಡಬೇಕಾದ ಅತ್ಯಂತ ಅಗತ್ಯದ ಸಂಕಲ್ಪವಾಗಿದೆ. ಮದುವೆ ಮತ್ತಿತರ ಕಾರ್ಯಕ್ರಮಗಳಲ್ಲಿ ಆಹಾರ ವ್ಯಯವಾಗುವುದು ಸಾಮಾನ್ಯ ಚಿತ್ರಣವಾಗಿದೆ. ವೈಯಕ್ತಿಕ ಮತ್ತು ಕೌಟುಂಬಿಕ ಸಮಾರಂಭಗಳು ಸಮಾಜದಲ್ಲಿ ಸಾರ್ವಜನಿಕ ಸಮಾರಂಭಗಳಂತೆ ಆಚರಿಸಲ್ಪಡುತ್ತಿವೆ. ಸಾವಿರಾರು ಜನರನ್ನು ಆಮಂತ್ರಿಸಿ ಭೂರಿ ಭೋಜನ ಉಣಬಡಿಸುವ ಮನೋವ್ಯಾಧಿ ಸೋಂಕಿನಂತೆ ಆವರಿಸಿಕೊಂಡಿದೆ. ಹಿತಮಿತವಾಗಿ ಬಳಕೆಯಾಗಬೇಕಾದ ಆಹಾರ ಕೌಟುಂಬಿಕ ಸಮಾರಂಭಗಳಲ್ಲಿ ಹಳಸಿ ಹಾಳಾಗಿ ತಿಪ್ಪೆಗುಂಡಿಗಳನ್ನು ಸೇರುತ್ತಿದೆ. ಸಮಾಜದಲ್ಲಿ ಅದೆಷ್ಟೋ ಜನರಿಗೆ ದಿನದ ಒಂದು ಹೊತ್ತಿನ ಊಟ ಕೂಡ ದೊರೆಯುತ್ತಿಲ್ಲ. ಆಹಾರ ಉತ್ಪಾದನೆಯ ಕೃಷಿಭೂಮಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿರುವಾಗ ಅದ್ದೂರಿ ಸಮಾರಂಭಗಳ ಅಗತ್ಯವಿದೆಯೇ ಎಂದು ನಾವು ಯೋಚಿಸಬೇಕಿದೆ. ಅದ್ದೂರಿಯಾಗಿ ಆಚರಿಸುತ್ತಿರುವ ಕೌಟುಂಬಿಕ ಸಮಾರಂಭಗಳಲ್ಲಿ ಆಹಾರದ ಜೊತೆಗೆ ನೀರು ಮತ್ತು ವಿದ್ಯುತ್ ಕೂಡ ದುರ್ಬಳಕೆಯಾಗುತ್ತಿವೆ.

ವರ್ಷದಿಂದ ವರ್ಷಕ್ಕೆ ಕೃಷಿಭೂಮಿ ಕ್ಷಿಣಿಸುತ್ತಿರುವುದು ಮುಂದೊಂದು ದಿನ ತೀವ್ರ ಆಹಾರ ಕ್ಷಾಮವನ್ನು ಸೃಷ್ಟಿಸಲಿದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿರುವರು. ದಿನನಿತ್ಯದ ಎರಡು ಹೊತ್ತಿನ ಊಟಕ್ಕೆ ಅಗತ್ಯವಾದ ಆಹಾರ ದೊರೆಯದ ಸಮಸ್ಯೆ ಭವಿಷ್ಯದಲ್ಲಿ ಎದುರಾಗಲಿದೆ. ತಮ್ಮ ನಂತರದ ಪೀಳಿಗೆಗೆ ಸಕಲ ಐಶ್ವರ್ಯಗಳನ್ನು ಕೊಟ್ಟು ಹೋಗುವ ಧಾವಂತದಲ್ಲಿ ಮನುಷ್ಯರು ಬದುಕಿಗೆ ಮೂಲ ಸೆಲೆಯಾದ ಆಹಾರದಂಥ ಅತಿಮುಖ್ಯವಾದ ಅವಶ್ಯಕತೆಯನ್ನೆ ಮರೆತಿರುವರು. ಶಿವರಾಮ ಕಾರಂತರು ತಮ್ಮ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಕೃತಿಯ ಮುನ್ನುಡಿಯಲ್ಲಿ ಹೀಗೆ ಹೇಳುತ್ತಾರೆ ‘ನಾವು ಭೂಮಿಗೆ ಬಂದ ದಿನ ನಮ್ಮ ಸುತ್ತಣ ಬದುಕು ಇದಕ್ಕಿಂತ ಒಂದಿಷ್ಟು ಹೆಚ್ಚು ಚಂದವಾಗುವಂತೆ ಮಾಡಿ ಇಲ್ಲಿಂದ ಹೊರಡಬೇಕು ಎಂಬ ಭಾವನೆ ನನ್ನದು. ಜಾತ್ರೆಗೆ ಬಂದವರು ಜಾತ್ರೆ ಮುಗಿಸಿ ಹೊರಡುವಾಗ ತಾವು ನಲಿದು ಉಂಡು ಹೋದ ನೆಲದ ಮೇಲೆ ಎಲ್ಲೆಲ್ಲೂ ತಮ್ಮ ಉಚ್ಚಿಷ್ಟವನ್ನು ಚೆಲ್ಲಿ ಹೋದರೆ ಹೇಗಾದಿತು? ಅಲ್ಲಿಗೆ ನಾವು ತಿರುಗಿ ಬಾರದಿದ್ದರೇನಾಯಿತು? ಅಲ್ಲಿಗೆ ಬರುವ ನಮ್ಮ ಮಕ್ಕಳು ಏನೆಂದುಕೊಂಡಾರು? ಅಷ್ಟನ್ನಾದರೂ ಯೋಚಿಸುವ ಬುದ್ಧಿ ಈ ದೇಶವನ್ನು ನಡೆಸುವ ಹಿರಿಯರಿಗೆ ಇಲ್ಲದೆ ಹೋದರೆ ಹೇಗೆ?’. 

ತನ್ನ ಹಕ್ಕುಗಳನ್ನು ಪ್ರತಿಪಾದಿಸುತ್ತಿರುವ ಮನುಷ್ಯ ತಾನು ನಿರ್ವಹಿಸಬೇಕಾದ ಕರ್ತವ್ಯಗಳನ್ನು ಮರೆಯುತ್ತಿರುವನು. ಆಹಾರ, ನೀರು, ವಿದ್ಯುತ್ ಇವುಗಳನ್ನು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಲಾಗಿದೆ. ಖರೀದಿಸುವ ಸಾಮರ್ಥ್ಯ ತನಗಿದೆ ಎಂದ ಮಾತ್ರಕ್ಕೆ ರಾಷ್ಟ್ರೀಯ ಸಂಪತ್ತನ್ನು ದುರ್ಬಳಕೆ ಮಾಡುವ ಅಧಿಕಾರ ಮನುಷ್ಯನಿಗಿಲ್ಲ. ಪ್ರಕೃತಿಯು ನೀಡುತ್ತಿರುವ ಅಮೂಲ್ಯ ಕೊಡುಗೆಗಳಲ್ಲಿ ಮನುಷ್ಯನಿಗಷ್ಟೇ ಅಲ್ಲ ಈ ಭೂಮಿಯ ಮೇಲಿನ ಸಕಲ ಚರಾಚರ ಜೀವಿಗಳಿಗೂ ಪಾಲಿದೆ. ಆದರೆ ಅತಿಯಾದ ಅಹಂಕಾರ ಮತ್ತು ಹಣದ ದರ್ಪದಿಂದ ಮನುಷ್ಯ ತನ್ನ ಹಕ್ಕನ್ನು ಹೆಚ್ಚು ಹೆಚ್ಚು ಪ್ರತಿಪಾದಿಸುತ್ತಿರುವನು. 

ಎಚ್.ಎಸ್.ವೆಂಕಟೇಶಮೂರ್ತಿ ತಮ್ಮ ‘ಇರಬೇಕು ಇರುವಂತೆ’ ಕವಿತೆಯಲ್ಲಿ ಪ್ರಕೃತಿಯ ಉದಾತ್ತ ಗುಣಗಳನ್ನು ವರ್ಣಿಸುತ್ತ ಮನುಷ್ಯ ಕೂಡ ಪ್ರಕೃತಿಯಂತೆ ಬಾಳಬೇಕು ಎನ್ನುವ ಸದಾಶಯವನ್ನು ವ್ಯಕ್ತಪಡಿಸುತ್ತಾರೆ. ಕವಿತೆಯ ಒಂದು ಸಾಲು ಹೀಗಿದೆ-‘ತಾನು ಬಿಸಿಲಲಿ ನಿಂತು/ತನ್ನ ಬಳಿ ಬರುವವಗೆ/ತಣ್ಣಗಿನ ಆಸರೆಯ ನೆರಳ ಕೊಟ್ಟು/ಹೇಗೆ ಗೆಲುವಾಗುವುದೊ/ಹಸಿರೆಲೆಯ ಹೊಂಗೆಮರ/ಹಾಗೆ ಬಾಳಿಸು ಗುರುವೇ ಪ್ರೀತಿಯಿಟ್ಟು’. ಮನುಷ್ಯ ತಾನು ಪ್ರಕೃತಿಯಂತೆ ಬಾಳುವ ಸಂಕಲ್ಪ ತೊಟ್ಟು ಬದುಕನ್ನು ಇನ್ನಷ್ಟು ಚೆಂದಗೊಳಿಸಬೇಕಿದೆ. ಆದರೆ ಮನುಷ್ಯ ಪ್ರಕೃತಿಯ ಕೊಡುಗೆಗಳನ್ನು ತನ್ನ ಸ್ವಾರ್ಥಕ್ಕೆ ಬಳಸಿಕೊಂಡು ಅದೇ ಪ್ರಕೃತಿಯ ಮೇಲೆ ಅಟ್ಟಹಾಸ ಗೈಯುತ್ತಿರುವನು.  

ಬದುಕನ್ನು ಸರಳತೆಯ ನೆಲೆಯಲ್ಲಿ ಜೀವಿಸುವ ಮನುಷ್ಯನಿಗೆ ಸಮಾಜ ಗುರುತಿಸಿ ಗೌರವಿಸುತ್ತಿದೆಯೇ ಎನ್ನುವ ಪ್ರಶ್ನೆ ಎದುರಾಗುತ್ತದೆ. ಸಮಾಜಕ್ಕೆ ಉಪಯುಕ್ತವಾದ ಗುಣಗಳನ್ನು ಮೈಗೂಡಿಸಿಕೊಂಡು ಬದುಕುತ್ತಿರುವವರಿಗೆ ಇದೇ ಸಮಾಜ ಶತಮೂರ್ಖ ಎನ್ನುವ ಹಣೆಪಟ್ಟಿ ಕಟ್ಟುತ್ತದೆ. ಬದುಕುವ ಕಲೆ ಗೊತ್ತಿಲ್ಲದವರೆಂದು ಹಿಯ್ಯಾಳಿಸುತ್ತದೆ. ನಿಂದನೆಯ ಮಾತುಗಳಿಗೆ ಹೆದರಿ ಸಮಾಜೋಪಯೋಗಿ ಗುಣಗಳನ್ನು ತ್ಯಜಿಸಿ ಬದುಕುವುದು ತಪ್ಪು ನಡೆಯಾಗುತ್ತದೆ. ಕೆಲವೊಮ್ಮೆ ಮನುಷ್ಯ ನಿಂದನೆ, ಅವಮಾನಗಳನ್ನು ಮೀರಿ ಅಂತರಂಗದ ಧ್ವನಿಗೆ ಆದ್ಯತೆ ನೀಡಬೇಕು. ಸಂಕಲ್ಪಿಸುವ ಮನಸ್ಸು ದೃಢವಾಗಿದ್ದರೆ ಯಾವ ಅವಮಾನ, ನಿಂದನೆಗಳು ನಮ್ಮ ಧೃತಿಗೆಡಿಸಲಾರವು. 

-ರಾಜಕುಮಾರ ಕುಲಕರ್ಣಿ