Wednesday, July 1, 2015

ಮಹಿಳಾ ಅಸ್ತಿತ್ವದ ವಿವಿಧ ನೆಲೆಗಳು






            ರಾಮಾಯಣದಲ್ಲಿ ಊರ್ಮಿಳೆ ಎನ್ನುವ ಪಾತ್ರವೊಂದಿದೆ. ಈಕೆ ಲಕ್ಷ್ಮಣನ ಹೆಂಡತಿ. ರಾಮ ಕಾಡಿಗೆ ಹೋಗುವ ಸಂದರ್ಭ ಅಣ್ಣನನ್ನು ಅನುಸರಿಸಿ ಲಕ್ಷ್ಮಣ ಸಹ ಕಾಡಿಗೆ ತೆರಳುತ್ತಾನೆ. ಕಾಡಿಗೆ ಹೋಗುತ್ತಿರುವ ಲಕ್ಷ್ಮಣನಿಗೆ ತನ್ನನ್ನೇ ನಂಬಿಕೊಂಡ ಜೀವವೊಂದಿದೆ ಎನ್ನುವ ನೆನಪಾಗುವುದಿಲ್ಲ. ಹೆಂಡತಿ ಸೀತೆಯನ್ನೂ ತನ್ನೊಂದಿಗೆ ಕಾಡಿಗೆ ಕರೆದೊಯ್ಯುತ್ತಿರುವ ರಾಮನಿಗೂ ತನ್ನ ತಮ್ಮ ಲಕ್ಷ್ಮಣನಿಗೂ ಪತ್ನಿ ಇರುವ ಸತ್ಯ ಗೋಚರವಾಗುವುದಿಲ್ಲ. ರಾವಣ ಕಾಡಿನಲ್ಲಿ ಸೀತೆಯನ್ನು ಅಪಹರಿಸಿದಾಗ ವಿರಹ ವೇದನೆಯಿಂದ ಬಳಲುವ ರಾಮ ತಮ್ಮ ಲಕ್ಷ್ಮಣನೆದುರು ಸೀತೆಯ ಅಗಲುವಿಕೆಯಿಂದಾದ ದು:ಖವನ್ನು ತೋಡಿಕೊಳ್ಳುತ್ತಾನೆ. ದಾರಿಯಲ್ಲಿ ಎದುರಾಗುವ ಮರ, ಗಿಡ, ಬಳ್ಳಿ, ನದಿ, ಬೆಟ್ಟಗಳನ್ನು ಮಾತನಾಡಿಸಿ ನನ್ನ ಸೀತೆಯನ್ನು ಕಂಡಿರಾ ಎಂದು ಪ್ರಲಾಪಿಸುತ್ತಾನೆ. ಹೀಗೆ ದು:ಖಿಸುತ್ತಿರುವ ರಾಮನಿಗೆ ಲಕ್ಷ್ಮಣನೂ ವಿರಹಾಗ್ನಿಯಿಂದ ಬಳಲುತ್ತಿರಬಹುದೆನ್ನುವ ಕಿಂಚಿತ್ ಸಂದೇಹವೂ ಮನಸ್ಸಿನಲ್ಲಿ ಸುಳಿಯದೇ ಹೋಗುತ್ತದೆ. ರಾಮ ರಾವಣನನ್ನು ಜಯಿಸಿ ಹದಿನಾಲ್ಕು ವರ್ಷಗಳ ವನವಾಸವನ್ನು ಪೂರ್ಣಗೊಳಿಸಿ ಸೀತೆ ಮತ್ತು ಲಕ್ಷ್ಮಣನೊಂದಿಗೆ ಅಯೋಧ್ಯೆಗೆ ಮರಳುತ್ತಾನೆ. ಹಾಗಾದರೆ ಆ ಹದಿನಾಲ್ಕು ವರ್ಷಗಳ ಕಾಲ ಪತಿಯಿಂದ ದೂರಾಗಿ ಊರ್ಮಿಳೆ ಅನುಭವಿಸಿದ ವೇದನೆ ಮತ್ತು ಸಂಕಟಗಳ ಕಥೆ ಏನಾಯಿತು? ರಾಮಾಯಣವನ್ನು ಓದುತ್ತಿರುವ ಘಳಿಗೆ ಓದುಗ ಊರ್ಮಿಳೆಯ ಪಾತ್ರದೊಂದಿಗೆ ಮುಖಾಮುಖಿಯಾಗುವುದೇ ಇಲ್ಲ. ಭಾತೃತ್ವದ   ಪ್ರಶ್ನೆ  ಎದುರಾದಾಗ ಅದಕ್ಕೆ ಶ್ರೇಷ್ಠ ಉದಾಹರಣೆಯಾಗಿ ಲಕ್ಷ್ಮಣನ ಹೆಸರನ್ನು ಹೇಳುವ ನಾವು ಊರ್ಮಿಳೆಯನ್ನು ಮರೆತು ಬಿಡುತ್ತೇವೆ. ಹಾಗಾದರೆ ಊರ್ಮಿಳೆಯದು ಶ್ರೇಷ್ಠ ತ್ಯಾಗವಲ್ಲವೇ? ಹದಿನಾಲ್ಕು ವರ್ಷಗಳ ಕಾಲ ಗಂಡನಿಂದ ದೂರವೇ ಉಳಿದು ಆತನನ್ನು ಅಣ್ಣನ ಸೇವೆಗಾಗಿ ಪ್ರಾಂಜಲ ಮನಸ್ಸಿನಿಂದ ಕಳಿಸಿಕೊಟ್ಟ ಊರ್ಮಿಳೆಯ ವ್ಯಕ್ತಿತ್ವಕ್ಕೆ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ದೊರೆಯಬೇಕಾದ ಮನ್ನಣೆ ಸಿಗಲೇ ಇಲ್ಲ. ಅಂದರೆ ಮಹಿಳೆಯನ್ನು ಪುರುಷ ಪ್ರಧಾನ ನೆಲೆಯಲ್ಲಿ ಶೋಷಣೆಗೊಳಪಡಿಸುತ್ತ ಬಂದಿರುವುದಕ್ಕೆ ನಮ್ಮ ಪ್ರಾಚೀನ ಪರಂಪರೆಯ ಒತ್ತಾಸೆಯಿದೆ ಎಂದರ್ಥ. ರಾಮಾಯಣ ಮತ್ತು ಮಹಾಭಾರತದ ಕಾಲದಿಂದಲೂ ಸ್ತ್ರೀ ಶೋಷಣೆಯ ವಸ್ತುವಾಗಿಯೇ ಬಿಂಬಿತವಾಗುತ್ತ ಬಂದಿರುವಳು.

             ಇತಿಹಾಸದ ಪಾತ್ರವೊಂದು ಸ್ತ್ರೀ ಶೋಷಣೆಯ ವಸ್ತುವಾಗಿ ಪುರುಷ ಪ್ರಧಾನ ವ್ಯವಸ್ಥೆಗೆ ಒತ್ತಾಸೆಯಾಗಿ ನಿಂತಾಗ ಇತಿಹಾಸದ ಮತ್ತೊಂದು ಪಾತ್ರವಾದ ಅಕ್ಕ ಮಹಾದೇವಿಯದು ಪುರುಷ ಪ್ರಧಾನ ವ್ಯವಸ್ಥೆಯನ್ನು ಧಿಕ್ಕರಿಸಿ ಹೊಸ ವ್ಯವಸ್ಥೆಯನ್ನು ಕಟ್ಟುವ ತಹತಹಿಕೆ. ಚೆನ್ನಮಲ್ಲಿಕಾರ್ಜುನನನ್ನೇ ತನ್ನ ಪತಿಯೆಂದು ಮಾನಸಿಕವಾಗಿ ಪರಿಭಾವಿಸಿದ ಅಕ್ಕ ಕೌಶಿಕ ರಾಜನ ಕಾಮನೆಗಳನ್ನು ಮೆಟ್ಟಿನಿಂತು ಮಹಿಳಾ ವಿಮೋಚನೆಗೆ ಹೊಸ ದಾರಿ ತೋರುತ್ತಾಳೆ. ಒಂದು ಪಾತ್ರದ ಮೂಲಕ ಸ್ತ್ರೀ ಶೋಷಣೆಗೆ ಸಾಕ್ಷಿಯಾದ ಇತಿಹಾಸ ಮತ್ತೊಂದು ಪಾತ್ರದ ಮೂಲಕ ಸ್ತ್ರೀ ವಿಮೋಚನೆಗೂ ಸಾಕ್ಷಿಯಾದದ್ದು ಇತಿಹಾಸದ ಮಹತ್ವಗಳಲ್ಲೊಂದು.  ಇತಿಹಾಸದಿಂದ ಬಿಡುವಷ್ಟೇ ಪಡೆಯುವುದು ಕೂಡ ಬಹುಮುಖ್ಯವಾದದ್ದು. ನಮ್ಮ ನೆಲದ ಮಹಿಳೆಯರು ಅಕ್ಕ ಮಹಾದೇವಿಯ ಧೋರಣೆ ಹಾಗೂ ಪುರುಷ ಸಮಾಜವನ್ನು ಧಿಕ್ಕರಿಸಿ ನಿಂತ ಆಕೆಯ ಮನೋಸ್ಥೈರ್ಯವನ್ನು ಬಳುವಳಿಯಾಗಿ ಪಡೆದು ಸ್ತ್ರೀ ವಿಮೋಚನೆಯ ಅನೇಕ ಸ್ಥಿತ್ಯಂತರಗಳಿಗೆ ಪ್ರಯತ್ನಿಸಿದರು. ಒಂದು ರೀತಿಯಲ್ಲಿ ಮಹಿಳೆ ತನ್ನ ಅಸ್ಮಿತೆಯನ್ನು ವಿವಿಧ ನೆಲೆಗಳಲ್ಲಿ ಗುರುತಿಸಿಕೊಳ್ಳಲು ಮಾಡಿದ ಪ್ರಯತ್ನವೂ ಅದಾಗಿತ್ತು.

          ಮಹಿಳೆ ಪುರುಷ ಪ್ರಧಾನ ವ್ಯವಸ್ಥೆಯ ನೆರಳಿನಿಂದ  ಹೊರಬಂದು  ತನ್ನದೇ ಸ್ವತಂತ್ರ ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾಡಿದ ಪ್ರಯತ್ನಗಳಲ್ಲಿ ಆಕೆ ಅತ್ಯಂತ ಸಮರ್ಥನಿಯವಾಗಿ ಬಳಸಿಕೊಂಡಿದ್ದು  ಬರವಣಿಗೆಯನ್ನು ಎನ್ನುವ ನಂಬಿಕೆ ನನ್ನದು. ಅಕ್ಕ ಮಹಾದೇವಿಯ ಜೊತೆಗೆ ಅನೇಕ ವಚನಕಾರ್ತಿಯರು ೧೨ನೇ ಶತಮಾನದಲ್ಲಿ ಬರವಣಿಗೆಯನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡು ಸಾವಿರಾರು ವಚನಗಳನ್ನು ಬರೆದು ಆ ಮೂಲಕ ಹೆಣ್ಣಿನ ತುಮುಲ ಹಾಗೂ ಒಳತೋಟಿಗಳನ್ನು ತೆರೆದಿಡುವ ಪ್ರಯತ್ನ ಮಾಡಿದರು. ವಚನಕಾರ್ತಿಯರ ಆ ಒಂದು ಪ್ರಯತ್ನವನ್ನೇ ಆಧಾರವಾಗಿಟ್ಟುಕೊಂಡು ೧೯ನೇ ಶತಮಾನದಲ್ಲಿ ಅನೇಕ ಮಹಿಳೆಯರು ಬರವಣಿಗೆಯ ಮೂಲಕ ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಯತ್ನಿಸಿದರು. ಪ್ರಾರಂಭದಲ್ಲಿ ಮಹಿಳೆ ತನ್ನ ಗೃಹ ಕೃತ್ಯಗಳ ನಡುವೆ ದೊರೆಯುವ ಬಿಡುವಿನ ಸಮಯವನ್ನು ದೇವರ ಹಾಡು, ಕೀರ್ತನೆ, ಭಜನೆಯಂಥ ಬರವಣಿಗೆಗೆ ವಿನಿಯೋಗಿಸಿಕೊಂಡು ಪುರುಷ ದಬ್ಬಾಳಿಕೆಯಿಂದ ಯಾತನೆಗೊಂಡ ಮನಸ್ಸಿಗೆ ಒಂದಿಷ್ಟು ಸಾಂತ್ವನದ ಸಿಂಚನ ಗೈದಳು. ನಂತರದ ದಿನಗಳಲ್ಲಿ ದೇವರ ಕೋಣೆಯಿಂದ ನಡುಮನೆ ಹಾಗೂ ಹಿತ್ತಲನ್ನು ಪ್ರವೇಶಿಸಿದ ಮಹಿಳಾ ಬರವಣಿಗೆ ದೇವರ ನಾಮ, ಕೀರ್ತನೆಗಳಿಂದ ಕಥೆ ಕವಿತೆಗಳಿಗೆ ವಿಸ್ತರಿಸತೊಡಗಿತು. ಆದರೂ ಮಹಿಳಾ ಸಾಹಿತ್ಯವೆಂದರೆ ಅದು ಅಡುಗೆ ಮನೆಯ ಸಾಹಿತ್ಯ ಎನ್ನುವ ಗೇಲಿಗೆ ಒಳಗಾಗಬೇಕಾಯಿತು. ಅಂಥದ್ದೊಂದು ಗೇಲಿಗೆ ಪುರಾವೆಯಾಗಿ ಕೆಲವು ಬರಹಗಾರ್ತಿಯರ ಬರವಣಿಗೆ ಅಡುಗೆ, ಶೃಂಗಾರ, ಗಂಡ, ಮಕ್ಕಳ ಪಾಲನೆಗೆ ಮಾತ್ರ ಸೀಮಿತವಾಗಿರುತ್ತಿತ್ತು. ಇಂಥದ್ದೊಂದು ಆರೋಪದಿಂದ ಹೊರಬರುವುದು ಆ ದಿನಗಳಲ್ಲಿನ ಮಹಿಳಾ ಸಾಹಿತ್ಯದ ತುರ್ತು ಅಗತ್ಯವಾಗಿತ್ತು. ಅದಕ್ಕೆಂದೇ ಅನೇಕ ಲೇಖಕಿಯರು ತಮ್ಮದೇ ಮನೆಯ ಮಹಿಳೆಯರ ಸಮಸ್ಯೆಗಳನ್ನು ಬರವಣಿಗೆಯ ಮೂಲಕ ತೆರೆದಿಡಲಾರಂಭಿಸಿದರು. ನಡುಮನೆ ಮತ್ತು ಹಿತ್ತಲಿಗೆ ಸೀಮಿತವಾಗಿದ್ದ ಮಹಿಳಾ ಸಾಹಿತ್ಯದ ಬಿಕ್ಕಳಿಕೆ ಮನೆಯ ಅಂಗಳ ಹಾಗೂ ಜಗುಲಿಯನ್ನು ಹೋಗಿ ತಲುಪಿದಾಗಲೇ ಬರವಣಿಗೆ ಮಹಿಳೆಯರ ದು:ಖ ಮತ್ತು ಸಂಕಟಗಳಿಗೆ ವೇದಿಕೆಯಾಗುತ್ತಿದೆ ಎನ್ನುವ ಅನುಮಾನ ಮೊಳಕೆಯೊಡೆಯಲಾರಂಭಿಸಿತು. ಪ್ರಾರಂಭದ ದಿನಗಳಲ್ಲಿನ ಮಹಿಳಾ ಸಾಹಿತ್ಯದ ವಿಷಯವಸ್ತು ಅಡುಗೆ ಕೋಣೆ ಹಾಗೂ ಮಲಗುವ ಕೋಣೆಗಳ ನಾಲ್ಕು ಗೋಡೆಗಳ ನಡುವಿನ ಆಕೆಯ ಬಿಸಿಯುಸಿರು ಮತ್ತು ಬಿಕ್ಕಳಿಕೆಗೆ ಸೀಮಿತವಾಗಿದ್ದರೂ ಒಂದಿಷ್ಟಾದರೂ ಸ್ತ್ರೀ ಸಮಸ್ಯೆಗಳು ಸಮಾಜದ ಮುಖ್ಯಸ್ತರಕ್ಕೆ ಹೋಗಿ ತಲುಪಲು ಸಾಧ್ಯವಾಯಿತು. ಇಂಥದ್ದೊಂದು ಪ್ರಯತ್ನದ ಪರಿಣಾಮ ಮಹಿಳೆ ತನ್ನ ಸುತ್ತಲಿನ ನಿರ್ಬಂಧನೆಗಳಿಂದ ಬಿಡಿಸಿಕೊಂಡು ಹೊರಬಂದು ತನ್ನದಲ್ಲದೆ ಬೇರೆ ಸ್ತ್ರೀಯರ ಬದುಕಿನ ಬವಣೆಗಳನ್ನೂ ಬರಹಕ್ಕಿಳಿಸಲು ಯತ್ನಿಸತೊಡಗಿದಳು.

            ನಂತರದ ದಿನಗಳಲ್ಲಿ ಬರವಣಿಗೆಯ ಮೂಲಕ ಇಂದಿರಾ, ತ್ರಿವೇಣಿ, ಪ್ರೇಮಾ ಭಟ್ಟ, ಉಷಾನವರತ್ನ ರಾಮ್, ಅನುಪಮಾ ಇತ್ಯಾದಿ ಲೇಖಕಿಯರು ಸ್ತ್ರೀ ಸಮಸ್ಯೆಗಳನ್ನು ಅತ್ಯಂತ ಸಮರ್ಥವಾಗಿ ಸಮಾಜದ ಮುಖ್ಯವಾಹಿನಿಗೆ ಒಯ್ದು ಮುಟ್ಟಿಸುವಲ್ಲಿ ಯಶಸ್ವಿಯಾದರು. ಮಹಿಳಾ ಸಂವೇದನೆಯ ಅನೇಕ ಮುಖಗಳು ಈ ಲೇಖಕಿಯರ ಬರಹಗಳಿಂದ ಅನಾವರಣಗೊಂಡವು. ತ್ರಿವೇಣಿ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯ ಮನಸ್ಸಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದರು. ಕನ್ನಡ ಸಾಹಿತ್ಯದಲ್ಲಿ ಮಹಿಳಾ ಲೇಖಕಿಯಿಂದಾದ ಬಹುದೊಡ್ಡ ಬದಲಾವಣೆ ಇದು. ಮಹಿಳಾ ಲೇಖಕಿಯರದು ಅಡುಗೆ ಮನೆಯ ಸಾಹಿತ್ಯ ಎಂದು ಗೇಲಿ ಮಾಡುತ್ತಿದ್ದ ಪುರುಷ ಲೇಖಕ ಬಣದ ಅಹಂಕಾರಕ್ಕೆ ತ್ರಿವೇಣಿ ತಮ್ಮ ಕಾದಂಬರಿಗಳ ಕಥಾವಸ್ತುವಿನ ಮೂಲಕವೇ ದೊಡ್ಡ ಪೆಟ್ಟು ನೀಡಿದರು. ಅವರ ಬೆಕ್ಕಿನ ಕಣ್ಣು, ಶರಪಂಜರ, ಬೆಳ್ಳಿ ಮೋಡ ಕಾದಂಬರಿಗಳು ಹೆಣ್ಣಿನ ಸಂಕಟ ಹಾಗೂ ಸಂವೇದನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟವು. ಆದರೆ ಈ ಮೇಲೆ ಹೆಸರಿಸಿದ ಮಹಿಳಾ ಲೇಖಕಿಯರ ಬಹುತೇಕ ಕಥೆ ಕಾದಂಬರಿಗಳಲ್ಲಿ ಹೆಣ್ಣಿನ ಬದುಕು ಒಂದೋ ಪುರುಷ ಪ್ರಧಾನ ವ್ಯವಸ್ಥೆ ಎದುರು ಸೋಲೊಪ್ಪಿಕೊಳ್ಳುವುದು ಇಲ್ಲವೇ ಆತ್ಮಹತ್ಯೆಯಂಥ ದುರಂತದಲ್ಲಿ ಕೊನೆಗೊಳ್ಳುತ್ತಿತ್ತು. ಅವರ ಕಥೆಯ ನಾಯಕಿಯರು ಶೋಷಣೆಯನ್ನು ವಿರೋಧಿಸಿ ಹೊರಬರುವ ಪ್ರಯತ್ನ ಮಾಡಲಿಲ್ಲವಾದರೂ ಸ್ತ್ರೀ ಶೋಷಿತಳು ಎನ್ನುವುದನ್ನು ತೋರಿಸಿಕೊಟ್ಟಿದ್ದು ನಿಜಕ್ಕೂ ಬಹುದೊಡ್ಡ ಸಾಮಾಜಿಕ ಪಲ್ಲಟಕ್ಕೆ ಕಾರಣವಾಯಿತು. ಇಂಥದ್ದೊಂದು ಪ್ರಯತ್ನದ ಪರಿಣಾಮ ಮಹಿಳಾ ಸಾಹಿತ್ಯಕ್ಕೆ ಮಹತ್ವದ ತಿರುವು ಸಿಕ್ಕು ಶೋಷಣೆಯನ್ನು ವಿರೋಧಿಸಿ ಹೊರಬರುವ ನಾಯಕಿಯರು ನಂತರದ ತಲೆಮಾರಿನ ಲೇಖಕಿಯರ ಬರಹಗಳಲ್ಲಿ ರೂಪುಗೊಳ್ಳತೊಡಗಿದರು.

         ಹೀಗೆ ಮಹಿಳಾ ಸಾಹಿತ್ಯದ ಪರಂಪರೆಯನ್ನೇ ಮುರಿದು ಕಟ್ಟುವ ಪ್ರಯತ್ನಕ್ಕೆ ಮುಂದಾದ ಲೇಖಕಿಯರಲ್ಲಿ ಬಹುಮುಖ್ಯವಾಗಿ ಕೇಳಿಬರುವ ಹೆಸರುಗಳಲ್ಲಿ ಗೀತಾ ನಾಗಭೂಷಣ, ಸಾರಾ ಅಬೂಬಕ್ಕರ, ವೈದೇಹಿ, ಲಲಿತಾ ನಾಯಕ್, ವೀಣಾ ಶಾಂತೇಶ್ವರ ಪ್ರಮುಖವಾದವುಗಳು. ಈ ಲೇಖಕಿಯರು ತಮ್ಮ ಕಥೆ ಕಾದಂಬರಿಗಳ ನಾಯಕಿಯ ಪಾತ್ರದ ಮೂಲಕ ಸಮಾಜದಲ್ಲಿ ಮನೆಮಾಡಿಕೊಂಡಿರುವ ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸತೊಡಗಿದರು. ಇವರು ಸೃಷ್ಟಿಸಿದ ನಾಯಕಿಯರು ಶೋಷಣೆಯನ್ನು ಧಿಕ್ಕರಿಸಿ ಹೊರಬಂದು ಹೊಸಬದುಕನ್ನು ಕಟ್ಟಿಕೊಳ್ಳುವಷ್ಟು ಸಮರ್ಥರು. ಇದುವರೆಗೂ ಮನೆಯ ಹಿತ್ತಲು ಮತ್ತು ಜಗುಲಿಯವರೆಗೆ ಮಾತ್ರ ಓಡಾಡಿಕೊಂಡಿದ್ದ ಮಹಿಳಾ ಸಮಸ್ಯೆಗಳಿಗೆ ರಸ್ತೆಯ ಮುಖ ಕಾಣುವ ಅವಕಾಶ ದೊರೆಯಿತು. ಗೀತಾ ನಾಗಭೂಷಣ ಅವರ ಅನೇಕ ಕಾದಂಬರಿಗಳ ನಾಯಕಿಯರು ರಸ್ತೆಯ ಮೇಲೆ ನಿಂತು ಗಂಡಸಿನ ಕೊರಳುಪಟ್ಟಿ ಹಿಡಿದು ಜಗಳವಾಡುವಷ್ಟು ಗಟ್ಟಿಗರು. ಜೊತೆಗೆ ಗಮನಿಸಬೇಕಾದ ಇನ್ನೊಂದು ಗಮನಾರ್ಹವಾದ ಬೆಳವಣಿಗೆ ಎಂದರೆ ಇದುವರೆಗೂ ಮಧ್ಯಮ ವರ್ಗದ ಮಹಿಳೆಯರ ಸಮಸ್ಯೆಗಳನ್ನು ಮಾತ್ರ ತಮ್ಮ ಬರವಣಿಗೆಯ ವಸ್ತುವಾಗಿಸಿಕೊಳ್ಳುತ್ತಿದ್ದ ಲೇಖಕಿಯರು ಈ ಬಂಡಾಯ ಲೇಖಕಿಯರ ಆಗಮನದ ನಂತರ ಕೆಳವರ್ಗದ ಮಹಿಳೆಯರ ಸಮಸ್ಯೆಗಳನ್ನೂ ತಮ್ಮ ಬರವಣಿಗೆಗೆ ದಕ್ಕಿಸಕೊಳ್ಳತೊಡಗಿದರು. ಇನ್ನು ಕಾರ್ಪೊರೇಟ್ ಸಂಸ್ಕೃತಿಗೆ ಸೇರಿದ ಮಹಿಳೆಯರ ಸಮಸ್ಯೆಗಳನ್ನು ನೇಮಿಚಂದ್ರ, ಸುನಂದಾ ಅವರಂಥ ಉದಯೋನ್ಮುಖ ಬರಹಗಾರ್ತಿಯರು ಸಮರ್ಥವಾಗಿ ಕನ್ನಡ ಸಾಹಿತ್ಯಕ್ಕೆ ಎಳೆದುತಂದರು. ಅಕ್ಷಿತಾ ಹುಂಚನಕಟ್ಟೆ, ಸಬೀಹಾ ಭೂಮಿಗೌಡ, ರೂಪ ಹಾಸನ, ಶಶಿಕಲಾ, ನಾಗವೇಣಿ ಇತ್ಯಾದಿ ಈ ದಿನಗಳಲ್ಲಿನ ಲೇಖಕಿಯರು ಮಹಿಳೆಯನ್ನು ಪುರುಷ ಪ್ರಧಾನ ನೆಲೆಯಿಂದ ಸಂಪೂರ್ಣವಾಗಿ ಹೊರತಂದು ಅವಳದೇ ಒಂದು ಅಸ್ಮಿತೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಿರುವುದು ಕನ್ನಡ ಸಾಹಿತ್ಯದಲ್ಲಿ ಮಹಿಳಾ ಸಾಹಿತ್ಯದಲ್ಲಾಗುತ್ತಿರುವ ಪ್ರಮುಖ ಬೆಳವಣಿಗೆಗಳಲ್ಲೊಂದು. ಅಕ್ಷತಾ ಹುಂಚನಕಟ್ಟೆ ಬರವಣಿಗೆಯೊಂದಿಗೆ ಪುಸ್ತಕ ಪ್ರಕಾಶನಕ್ಕೂ ಕೈಹಾಕಿ ಪ್ರತ್ಯೇಕ ಅಸ್ತಿತ್ವದಿಂದ ಗುರುತಿಸಿಕೊಂಡಿರುವರು.

                ಸ್ತ್ರೀ ತನ್ನ ಅಸ್ಮಿತೆಯ ಹುಡುಕಾಟದಲ್ಲಿ ಸಿನಿಮಾ ಮಾಧ್ಯಮವನ್ನೂ ಒಂದು ನೆಲೆಯಾಗಿ ರೂಪಿಸಿಕೊಂಡಿದ್ದುಂಟು. ಆದರೆ ಸಿನಿಮಾ ಮಾಧ್ಯಮಕ್ಕೆ ಕಾಲಿಡುವುದಕ್ಕಿಂತ ಪೂರ್ವದಲ್ಲಿ ಆಕೆ ಅಭಿನಯದ ಒಂದಿಷ್ಟು ತಾಲೀಮು ಮಾಡಿ ತರಬೇತಿ ಪಡೆದದ್ದು ರಂಗಭೂಮಿಯಲ್ಲಿ. ಆದರೆ ಮಹಿಳೆ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು ರಂಗಭೂಮಿಯನ್ನು ಪ್ರವೇಶಿಸಲು ಸಾಕಷ್ಟು ಕಾಲಾವಕಾಶ ಬೇಕಾಯಿತು. ಜೊತೆಗೆ ಗಮನಿಸಬೇಕಾದ ಸಂಗತಿ ಎಂದರೆ ಮಹಿಳೆ ರಂಗಭೂಮಿಗೆ ಕಲಾವಿದೆಯಾಗಿ ಬಂದದ್ದು ನಟನೆಯನ್ನು ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಳ್ಳಲು ಅಲ್ಲ. ಹೊಟ್ಟೆಪಾಡಿನ ಸಮಸ್ಯೆಗೆ ಪರಿಹಾರವಾಗಿ ಆಕೆ ರಂಗಭೂಮಿಯನ್ನು ಆಶ್ರಯಿಸಿದಳೇ ವಿನ: ಅದನ್ನು ತನ್ನ ಸಮಸ್ಯೆಗಳ ಹಾಗೂ ಸಂವೇದನೆಯ ಅನಾವರಣಕ್ಕಾಗಿ ಉಪಯೋಗಿಸಿಕೊಳ್ಳಬೇಕೆನ್ನುವ ಘನ ಉದ್ದೇಶ ಅವಳದಾಗಿರಲಿಲ್ಲ. ಈ ಕಾರಣದಿಂದಾಗಿ ಆರ್ಥಿಕವಾಗಿ ತೀರ ಸಂಕಷ್ಟದಲ್ಲಿರುವ ಹಾಗೂ ಕೆಳಸಮುದಾಯಗಳ ಮಹಿಳೆಯರೇ ಪ್ರಾರಂಭದ ದಿನಗಳಲ್ಲಿ ರಂಗಭೂಮಿಯನ್ನು ಪ್ರವೇಶಿಸಿದರು. ಈ ಕಾರಣದಿಂದಾಗಿ ಆ ದಿನಗಳಲ್ಲಿನ ಮಹಿಳಾ ಕಲಾವಿದೆಯರ ಅಭಿನಯ ನಾಟಕದ ಮಧ್ಯದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡಲು ಹಾಡು ಮತ್ತು ಕುಣಿತಕ್ಕಷ್ಟೇ ಸೀಮಿತವಾಗಿತ್ತು. ಇದು ಪ್ರೇಕ್ಷಕರನ್ನು ರಂಗಭೂಮಿಯತ್ತ ಸೆಳೆಯುವ ನಾಟಕ ಕಂಪನಿಗಳ ಮಾಲೀಕರ ತಂತ್ರವೂ ಆಗಿತ್ತು. ಪುರುಷ ಕಲಾವಿದರೇ ಸ್ತ್ರೀ ಪಾತ್ರಗಳಲ್ಲೂ ಅಭಿನಯಿಸುತ್ತಿದ್ದುದ್ದರಿಂದ ಮಹಿಳಾ ಕಲಾವಿದರ ಅಭಿನಯವನ್ನು ರಂಗಭೂಮಿ ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಹಾಡು, ಕುಣಿತದಿಂದ ನಾಟಕದ ಮುಖ್ಯ ಪಾತ್ರಗಳಿಗೆ ಮಹಿಳಾ ಕಲಾವಿದರು ಬಡ್ತಿ ಪಡೆದರಾದರೂ ಅವರು ಪುರುಷ ಪ್ರಧಾನ ನಾಟಕಗಳಲ್ಲೇ ಅಭಿನಯಿಸಬೇಕಾಯಿತು. ಇಂಥ ವೈಪರಿತ್ಯಗಳ ನಡುವೆಯೂ ಚಿಂದೋಡಿ ಲೀಲಾ, ಮಾಲತಿ ಸುಧೀರ ಅವರಂಥ ಕೆಲ ನಟಿಯರು ಅಭಿನಯದೊಂದಿಗೆ ನಾಟಕ ಕಂಪನಿಗಳ ಮಾಲೀಕರಾಗುವಷ್ಟು ಎತ್ತರಕ್ಕೆರಿದ್ದೇ ಬಹುದೊಡ್ಡ ಸಾಧನೆ ಎನ್ನಬಹುದು. ಮಹಿಳಾ ಕಲಾವಿದೆಯರನ್ನು ರಂಗಭೂಮಿಯಲ್ಲಿ ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದೆ ವಿದ್ಯಾವಂತ ಮಹಿಳೆಯರು ರಂಗಭೂಮಿಯನ್ನು ಪ್ರವೇಶಿಸಲು ತೊಡಕಾಗಿ ಪರಿಣಮಿಸಿತು. ನಂತರದ ದಿನಗಳಲ್ಲಿ ಹವ್ಯಾಸಿ ನಾಟಕಗಳ ಮೂಲಕ ವಿದ್ಯಾವಂತ ಮಹಿಳೆಯರು ಅಭಿನಯದಲ್ಲಿ ತಮ್ಮ ಅಸ್ಮಿತೆಯ ಹುಡುಕಾಟಕ್ಕೆ ತೊಡಗಿ ಯಶಸ್ವಿಯಾದರು.

            ವೃತ್ತಿ ರಂಗಭೂಮಿ ಹಾಗೂ ಹವ್ಯಾಸಿ ನಾಟಕಗಳಲ್ಲಿ ಅಭಿನಯದ ತರಬೇತಿ ಪಡೆದ ಮಹಿಳಾ ಕಲಾವಿದೆಯರು ಸಿನಿಮಾ ಮಾಧ್ಯಮಕ್ಕೂ ಕಾಲಿಟ್ಟು ಹೆಸರು ಮತ್ತು  ಹಣ  ಸಂಪಾದಿಸಿದರು. ಸಿನಿಮಾ ನಿರ್ಮಾಣದ ಪ್ರಾರಂಭದ ದಿನಗಳಲ್ಲಿ ನಾಯಕ ಪ್ರಧಾನ ಸಿನಿಮಾಗಳಿಗೆ ಮಾತ್ರ ಮಹಿಳಾ ಕಲಾವಿದರ ಅಭಿನಯ ಸೀಮಿತವಾಗಿದ್ದರೂ ನಂತರದ ದಿನಗಳಲ್ಲಿ ನಾಯಕಿ ಪ್ರಧಾನ ಸಿನಿಮಾಗಳೂ ನಿರ್ಮಾಣಗೊಳ್ಳತೊಡಗಿದವು. ಅನೇಕ ಕಲಾವಿದೆಯರು ಮಹಿಳಾ ಪ್ರಧಾನ ಸಿನಿಮಾಗಳಿಗೆ ತಮ್ಮ ಅಭಿನಯದ ಮೂಲಕ ಜೀವತುಂಬಿದರು. ಮಲ್ಲಮ್ಮನ ಪವಾಡ, ಕಿತ್ತೂರು ರಾಣಿ ಚೆನ್ನಮ್ಮ, ಶರಪಂಜರ, ಇಬ್ಬನಿ ಕರಗಿತು, ಗೆಜ್ಜೆಪೂಜೆ ಯಂಥ ಸಿನಿಮಾಗಳ ಮೂಲಕ ಹೆಣ್ಣಿನ ಸಂಕಟ ಹಾಗೂ ಒಳತೋಟಿಗಳು ಸಶಕ್ತವಾಗಿ ಬೆಳ್ಳಿಪರದೆಯ ಮೇಲೆ ಮೂಡಿ ಪ್ರೇಕ್ಷಕ ವರ್ಗವನ್ನು ತಲುಪಲು ಸಾಧ್ಯವಾಯಿತು. ಮಹಿಳಾ ಪ್ರಧಾನ ಸಿನಿಮಾಗಳನ್ನು ಕನ್ನಡ ಸಿನಿಮಾ ರಂಗದಲ್ಲಿ ತಯ್ಯಾರಿಸಿದ್ದು ಪುಟ್ಟಣ್ಣ ಕಣಗಾಲ್, ದೊರೈ ಭಗವಾನ್, ಕೆ ವಿ ಜಯರಾಂ ಅವರಂಥ ಪುರುಷ ನಿರ್ದೇಶಕರು ಎನ್ನುವುದು ಗಮನಾರ್ಹವಾದ ಸಂಗತಿ. ಮಹಿಳೆಯರೇ ನಿರ್ದೇಶಕಿಯಾಗಿ ಮಹಿಳಾ ಪ್ರಧಾನ ಸಿನಿಮಾಗಳನ್ನು ತಯ್ಯಾರಿಸಿದಲ್ಲಿ ಸ್ತ್ರೀ ಸಂವೇದನೆಯನ್ನು ಇನ್ನಷ್ಟು ಸಶಕ್ತವಾಗಿ ಅನಾವರಣಗೊಳಿಸಲು ಸಾಧ್ಯವಾಗುತ್ತಿತ್ತು. ಆದರೆ ನೂರು ವರ್ಷಗಳ ಇತಿಹಾಸವಿರುವ ಸಾವಿರಾರು ಸಿನಿಮಾಗಳು ನಿರ್ಮಾಣಗೊಂಡಿರುವ ಇಲ್ಲಿ ಮಹಿಳೆ ಸಿನಿಮಾ ನಿರ್ದೇಶನವನ್ನು ತನ್ನ ಅಭಿವ್ಯಕ್ತಿ ಮಾಧ್ಯಮವಾಗಿ ಬಳಸಿಕೊಂಡಿದ್ದು ತೀರ ಕಡಿಮೆ.

          ಇನ್ನೊಂದು ಚರ್ಚಿಸಲೇ ಬೇಕಾದ ಮುಖ್ಯ ಸಂಗತಿ ಎಂದರೆ ನಮ್ಮ ಕನ್ನಡ ಸಿನಿಮಾಗಳಲ್ಲಿ ಮುಸ್ಲಿಂ ಮತ್ತು ದಲಿತ ಮಹಿಳೆ ಅವಳು ಅನುಭವಿಸುತ್ತಿರುವ ಸಮಸ್ಯೆಗಳೊಂದಿಗೆ ಚಿತ್ರಿತವಾಗಿರುವುದು ತೀರ ಕಡಿಮೆ. ಈ ಮಾತನ್ನು ನಾವು ಇತರ ವರ್ಗಗಳ ಮಹಿಳೆಯರ ಸಮಸ್ಯೆಗಳಿಗೂ ಅನ್ವಯಿಸಿ ಹೇಳಬಹುದು. ಹೀಗೆ ಹೇಳುವಾಗ ಮಹಿಳೆ ಅನುಭವಿಸುತ್ತಿರುವ ಸಮಸ್ಯೆಗಳು ಒಂದು ವರ್ಗದಿಂದ ಇನ್ನೊಂದು ವರ್ಗಕ್ಕೆ ಬೇರೆ ಬೇರೆಯಾಗಿವೆ ಎನ್ನುವುದನ್ನೂ ನಾವು ಗಮನಿಸಬೇಕು. ಫಣಿಯಮ್ಮ ಸಿನಿಮಾವೊಂದೇ ಎಲ್ಲ ವರ್ಗದ ಮಹಿಳೆಯರನ್ನು ಪ್ರತಿನಿಧಿಸಲಾರದು. ನಮ್ಮದು ವಿಭಿನ್ನ ಜಾತಿ ಸಮುದಾಯಗಳ ಸಮಾಜವಾಗಿರುವುದರಿಂದ ಇಡೀ ಮಹಿಳಾ ಸಮುದಾಯದ ಸಮಸ್ಯೆಗಳನ್ನು ಚಿತ್ರಿಸುವಲ್ಲಿ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ಸೋತಿದೆ ಎನ್ನುವ ಸಂಗತಿಯನ್ನು ನಮ್ಮ ಮಹಿಳಾ ಕಲಾವಿದರು ಅರ್ಥಮಾಡಿಕೊಂಡಿಲ್ಲ.

            ಆಗಾಗ ಮಹಿಳೆಯರು ರಾಜಕಾರಣ ಮತ್ತು ಹೋರಾಟಗಳಲ್ಲೂ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ಪ್ರಯತ್ನ ಮಾಡಿದ ಅನೇಕ ಉದಾಹರಣೆಗಳಿವೆ. ರಾಜಕಾರಣದ ವಿಷಯ ಬಂದಾಗ ನಾಗರತ್ನಮ್ಮ, ಬಸವರಾಜೇಶ್ವರಿ, ಚಂದ್ರಪ್ರಭ ಅರಸು ಲೀಲಾದೇವಿ ಪ್ರಸಾದ  ಇತ್ಯಾದಿ ಮಹಿಳಾ ನಾಯಕಿಯರು ರಾಜ್ಯದ ಮಂತ್ರಿಗಳಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಆದರೂ ಕರ್ನಾಟಕದಲ್ಲಿ ಜಯಲಲಿತಾ, ಮಾಯಾವತಿ, ಮಮತಾ ಬ್ಯಾನರ್ಜಿ ಅವರಂಥ ಇಡೀ ಪಕ್ಷ   ಹಾಗೂ ಸರ್ಕಾರವನ್ನು ನಿಯಂತ್ರಿಸುವ ಧಾಡಸೀತನದ ಮಹಿಳಾ ರಾಜಕಾರಣಿಗಳು ಕಾಣಿಸಿಕೊಳ್ಳಲೇ ಇಲ್ಲ. ಮಹಿಳಾ ಮೀಸಲಾತಿಯ ಮೂಲಕ ಗ್ರಾಮ, ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ರಾಜಕೀಯ ಅಧಿಕಾರ ನೀಡಲಾಗಿದೆಯಾದರೂ ಅಲ್ಲಿ ಅಧಿಕಾರ ನಡೆಸುವವರೆಲ್ಲ ಪುರುಷರೇ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಇನ್ನು ಹೋರಾಟದ ವಿಷಯಕ್ಕೆ ಬಂದರೆ ಇಲ್ಲಿ ಮೇಧಾ ಪಾಟ್ಕರ್ ಅವರಂಥ ಹೋರಾಟಗಾರ್ತಿ ರೂಪುಗೊಳ್ಳಲೇ ಇಲ್ಲ. ಹೋರಾಟ ಮತ್ತು ಚಳವಳಿಯ ಇತಿಹಾಸವನ್ನು ಬಗೆದು ನೋಡಿದಾಗ ಶಾಂತವೇರಿ ಗೋಪಾಲಗೌಡರು, ಗಣಪತಿಯಪ್ಪನವರು, ನಂಜುಂಡ ಸ್ವಾಮಿ, ಕಡಿದಾಳು ಶಾಮಣ್ಣ ಅವರ ಹೆಸರುಗಳ ಸಾಲಿನಲ್ಲಿ ನಿಲ್ಲುವಂಥ ಒಬ್ಬ ಮಹಿಳಾ ಹೋರಾಟಗಾರ್ತಿಯ ಹೆಸರೂ ಸಿಗುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಕೆಲವು ಲೇಖಕಿಯರು ಹೋರಾಟದ ಮುಂಚೂಣಿಗೆ ಬರಲು ಪ್ರಯತ್ನಿಸುತ್ತಿರುವರಾದರೂ ಎಡ ಬಲ ಎನ್ನುವ ಸಿದ್ಧಾಂತಗಳು ಅವರನ್ನು ತಪ್ಪು ದಾರಿಗೆ ಎಳೆಯುತ್ತಿವೆ.

           ಒಟ್ಟಿನಲ್ಲಿ ಮಹಿಳೆ ತನ್ನೊಳಗಿನ ಸಂವೇದನೆಯನ್ನು ಅಭಿವ್ಯಕ್ತಗೊಳಿಸಲು ವಿವಿಧ ನೆಲೆಗಳಲ್ಲಿ ಪ್ರಯತ್ನಿಸಿದಳಾದರೂ ಆಕೆ ಬರವಣಿಗೆ ಮಾಧ್ಯಮವನ್ನು ಸಶಕ್ತವಾಗಿ ಮತ್ತು ಸಮರ್ಥವಾಗಿ ಬಳಸಿಕೊಂಡಷ್ಟು ಬೇರೆ ಮಾಧ್ಯಮಗಳಲ್ಲಿ ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವಲ್ಲಿ ವಿಫಲಳಾಗಿರುವಳು. ಇದಕ್ಕೆಲ್ಲ ಪುರುಷ ಪ್ರಧಾನ ವ್ಯವಸ್ಥೆ ಸೂಕ್ತ ಅವಕಾಶ ನೀಡದೆ ಇರುವುದು ಒಂದು ಕಾರಣವಾದರೆ ಇನ್ನೊಂದು ಬರವಣಿಗೆ ಹೊರತಾಗಿ ಬೇರೆ ನೆಲೆಗಳಿಗೆ ತನ್ನ ಅಸ್ತಿತ್ವವನ್ನು ವಿಸ್ತರಿಸಲು ತಾನು ದುರ್ಬಲಳು ಎನ್ನುವ ಭಾವನೆ ಅವಳದಾಗಿರಬಹುದು.

            ಸಿಂಡ್ರೆಲಾ ಇದು ನಮಗೆಲ್ಲ ಗೊತ್ತಿರುವ ಕಥೆ. ಸುಂದರಿಯೂ ಮತ್ತು ಮುಗ್ಧಳೂ ಆದ ಸಿಂಡ್ರೆಲಾಳದು ಅತ್ಯಂತ ಸಂಕಷ್ಟದ ಬದುಕು. ಅವಳಿಗೆ ಕಷ್ಟಕೊಡಲೆಂದೇ ಮನೆಯಲ್ಲಿ ರಾಕ್ಷಸ ರೂಪದ ಮಲತಾಯಿ ಹಾಗೂ ಮಲ ಸಹೋದರಿಯರಿದ್ದಾರೆ. ಮನೆಯ ಮಗಳಾದರೂ ಅವಳದು ಆಳಿನ ದುಡಿಮೆ. ಅದೊಂದು ದಿನ ರಾಜಕುಮಾರ ಊರಿನವರಿಗಾಗಿ ಔತಣಕೂಟವನ್ನು ಏರ್ಪಡಿಸಿದ್ದಾನೆ. ತನ್ನಿಬ್ಬರು ಮಕ್ಕಳೊಂದಿಗೆ ಔತಣಕೂಟಕ್ಕೆ ಹೊರಡುವ ಮಲತಾಯಿ ಸಿಂಡ್ರೆಲಾಳನ್ನು ಜೊತೆಗೆ ಕರೆದೊಯ್ಯುವುದಿಲ್ಲ. ಸಿಂಡ್ರೆಲಾಳ ಪ್ರಾರ್ಥನೆಗೆ ಪ್ರತ್ಯಕ್ಷನಾಗುವ ದೇವರು ಆಕೆಯನ್ನು ಶೃಂಗರಿಸಿ ಪುಷ್ಪಕ ವಿಮಾನದಲ್ಲಿ ರಾಜಕುಮಾರನ ಅರಮನೆಗೆ ಕರೆದೊಯ್ಯುತ್ತಾನೆ. ಸಿಂಡ್ರೆಲಾಳ ಸೌಂದರ್ಯ ಹಾಗೂ ಮುಗ್ಧತೆಗೆ ಮಾರುಹೋಗುವ ರಾಜಕುಮಾರ ಅವಳನ್ನು ಎಲ್ಲ ಸಂಕಷ್ಟಗಳಿಂದ ಪಾರುಮಾಡಿ ಮದುವೆಯಾಗುವುದರೊಂದಿಗೆ ಆಕೆಯ ಬದುಕಿನ ಕಥೆ ಸುಖಾಂತ್ಯಗೊಳ್ಳುತ್ತದೆ. ಸಿಂಡ್ರೆಲಾಳದು ಮಹಿಳೆಯರಿಂದ ಶೋಷಣೆಗೆ ಒಳಗಾಗುವ ಪಾತ್ರ ಮತ್ತು ಆಕೆಯನ್ನು ಶೋಷಣೆಯಿಂದ ಮುಕ್ತಿಗೊಳಿಸಿ ಅವಳಿಗೊಂದು ಸುಖದ ಬಾಳು ನೀಡುವವನು ಪುರುಷನಾದ ರಾಜಕುಮಾರ. ಮಹಿಳೆ ಮಹಿಳೆಯಿಂದಲೇ ಶೋಷಣೆಗೆ ಒಳಗಾಗುತ್ತಿರುವುದು ಮತ್ತು ಆ ಒಂದು ಶೋಷಣೆಯಿಂದ ಹೊರಬರಲು ಪುರುಷನನ್ನಾಶ್ರಯಿಸುತ್ತಿರುವುದು ವ್ಯಂಗ್ಯವಾದರೂ ಸತ್ಯ. ಆದರೆ ಮಹಿಳೆ ಪರಾವಲಂಬನೆಯಿಂದ ಹೊರಬಂದು ತನ್ನ ಅಸ್ತಿತ್ವದ ನೆಲೆಯನ್ನು ಇನ್ನೂ ವಿಸ್ತರಿಸಿಕೊಳ್ಳಬೇಕಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

    

Monday, June 1, 2015

ಪೀಕೂ: ಅಪ್ಪ ಮಗಳ ಬಾಂಧವ್ಯದ ಕಥನ





          ಪೀಕೂ ಸಿನಿಮಾ ವೀಕ್ಷಣೆಯಿಂದ ಬಹಳ  ದಿನಗಳ ನಂತರ ಒಂದು ಒಳ್ಳೆಯ ಸಿನಿಮಾ ನೋಡಿದ ಅನುಭವವಾಯಿತು. ಹಾಡು ಹೊಡೆದಾಟಗಳಿಗೆ  ಸೀಮಿತವಾಗುತ್ತಿರುವ   ಇತ್ತೀಚಿನ ಸಿನಿಮಾಗಳ ನಡುವೆ ಪೀಕೂ ವಿಶಿಷ್ಠ ಕತೆಯಿಂದ ಒಂದು ಸದಭಿರುಚಿಯ ಸಿನಿಮಾ ಎನ್ನಬಹುದು. ಹಾಡು ಮತ್ತು ಹೊಡೆದಾಟಗಳಿಲ್ಲದೆ ಸಿನಿಮಾ ನಿರ್ಮಾಣ ಮಾಡುವುದು ಅಸಾಧ್ಯ ಎನ್ನುವ ವಾತಾವರಣ ಸ್ಥಾಪಿತವಾಗಿರುವ ಹಿನ್ನೆಲೆಯಲ್ಲಿ ಕೇವಲ ಕಥೆ ಮತ್ತು ಕಲಾವಿದರ ಅಭಿನಯವನ್ನೇ ನೆಚ್ಚಿಕೊಂಡು ಸಿನಿಮಾ ಮಾಡುವುದು ಅದು ನಿರ್ದೆಶಕನಿಗೂ ನಿಜಕ್ಕೂ ಸವಾಲಿನ ಕೆಲಸ. ಜೊತೆಗೆ ಪೀಕೂ ಸಿನಿಮಾದ ಕಥಾವಸ್ತು ಸಹ ಅಷ್ಟೇನೂ ಸಂಕೀರ್ಣವಾದದ್ದಲ್ಲ. ಮಲಬದ್ಧತೆಯಂಥ ಸಣ್ಣ ಮತ್ತು ಈ ವಿಷಯವಾಗಿ ಬೇರೆಯವರೊಂದಿಗೆ ಮಾತನಾಡಲು ಹಿಂಜರಿಯುವಂಥ ಸಮಸ್ಯೆಯನ್ನು ಆಧಾರವಾಗಿಟ್ಟುಕೊಂಡು ಕಥೆ ಹೆಣೆದ ನಿರ್ದೇಶಕನ ಜಾಣ್ಮೆ ಮೆಚ್ಚಲೇ ಬೇಕು. ಆದರೆ ದೈಹಿಕ ಸಮಸ್ಯೆಯನ್ನು ಮನುಷ್ಯ ಸಂಬಂಧಗಳಿಗೆ ತಳುಕು ಹಾಕುವ ನಿರ್ದೇಶಕ ನೇರವಾಗಿ ಕೈಹಾಕುವುದು ಪ್ರೇಕ್ಷಕರ ಮನಸ್ಸುಗಳಿಗೆ. ಇಲ್ಲೇ ನಿರ್ದೇಶಕ ಗೆಲುವು ಸಾಧಿಸುವುದು. ಒಂದರ್ಥದಲ್ಲಿ ಇದು ಹೀರೋ ಹೀರೋಯಿನ್ ಗಳ ಸಿನಿಮಾ ಎನ್ನುವುದಕ್ಕಿಂತ ಇದೊಂದು ನಿರ್ದೇಶಕನ ಸಿನಿಮಾ. ನಾಯಕ ಪ್ರಧಾನ ಸಿನಿಮಾಗಳೇ ಹೆಚ್ಚು ಹೆಚ್ಚು ನಿರ್ಮಾಣವಾಗುತ್ತಿರುವ ಹಿಂದಿ ಚಿತ್ರರಂಗದಲ್ಲಿ ನಿರ್ದೇಶಕನ ಸಿನಿಮಾವೊಂದು ನಿರ್ಮಾಣಗೊಂಡಿರುವುದು ಅದೊಂದು ಆಶಾದಾಯಕ ಬೆಳವಣಿಗೆ ಎನ್ನಬಹುದು. 

           ಇನ್ನು ಪೀಕೂ ಸಿನಿಮಾದ ಕಥೆಯ ಕುರಿತು ಹೇಳುವುದಾದರೆ ಅದು ಹೀಗಿದೆ, ತನ್ನ ಮಗಳು ಪೀಕೂವಿನೊಂದಿಗೆ ವಾಸಿಸುತ್ತಿರುವ ಭಾಸ್ಕೊರ್ ಬ್ಯಾನರ್ಜಿಗೆ (ಆತ ಕೊಲಕತ್ತಾ ಮೂಲದವನು) ಚಿಕ್ಕ ವಯಸ್ಸಿನಿಂದಲೇ ಮಲಬದ್ಧತೆಯ ಸಮಸ್ಯೆ ಇದೆ. ಆ ಒಂದು ಸಮಸ್ಯೆಯನ್ನೇ ಕುರಿತು ಯಾವ ಸಂಕೋಚವೂ ಇಲ್ಲದೆ ಆತ ಎಲ್ಲರೊಡನೆ ಚರ್ಚಿಸಬಲ್ಲ . ದಿನಕ್ಕೆ ಎಷ್ಟು ಸಲ ಮಲವಿಸರ್ಜನೆಗೆ ಹೋದೆ, ಪ್ರತಿಸಾರಿ ಹೇಗಾಯಿತು ಎನ್ನುವುದನ್ನು ಆತ ವಿವರವಾಗಿ ತನ್ನ ಮಗಳಿಗೆ ಮತ್ತು ಕುಟುಂಬದ ವೈದ್ಯರಿಗೆ ಹೇಳುತ್ತಿರುತ್ತಾನೆ. ತನ್ನ ಆರೋಗ್ಯದ ಏರು ಪೇರುಗಳ ಬಗ್ಗೆ ಆತನಿಗೆ ಸದಾ ಎಚ್ಚರಿಕೆ. ಇದೇ ವಿಷಯವಾಗಿ ಅಪ್ಪ ಮತ್ತು ಮಗಳ ನಡುವೆ ಭಾರೀ ಜಗಳ. ದಿನಕ್ಕೆ ಏನಿಲ್ಲವೆಂದರೂ ಹತ್ತಾರು ಬಾರಿ ಅವರು ಜಗಳವಾಡುತ್ತಾರೆ. ಮಗಳು ತನ್ನನ್ನು ನಿರ್ಲಕ್ಷಿಸಬಾರದು ಎನ್ನುವುದು ಅಪ್ಪನ ಇರಾದೆಯಾದರೆ ಅಪ್ಪನಿಗಾಗಿ ತಾನು ತ್ಯಾಗ ಮಾಡುತ್ತಿದ್ದೇನೆ ಎನ್ನುವ ಭಾವನೆ ಮಗಳದು. ಕಣ್ಣೀರು ತರಿಸುವ ತೀರ ಭಾವನಾತ್ಮಕ ಸನ್ನಿವೇಶಗಳೇನೂ ಈ ಸಿನಿಮಾದಲ್ಲಿಲ್ಲ. ಆದರೆ ಅಪ್ಪ ಮತ್ತು ಮಗಳ ನಡುವಣ ಬಾಂಧವ್ಯವೇ ಸಿನಿಮಾದ ಹೈಲೇಟ್. 

         ಮಲಬದ್ಧತೆಯ ಸಮಸ್ಯೆಯ ಜೊತೆಗೆ ಆತನಿಗಿರುವ ಇನ್ನೊಂದು ಸಮಸ್ಯೆ ಎಂದರೆ ಭಾಸ್ಕೊರ್ ಬ್ಯಾನರ್ಜಿ ತೀರ ವಾಚಾಳಿ. ಯಾವದಾದರೊಂದು ವಿಷಯದ ಕುರಿತು ಆತ ಮಾತನಾಡತೊಡಗಿದರೆ ಎದುರಿನವರಿಗೆ ತಲೆ ಚಿಟ್ಟು ಹಿಡಿಯುತ್ತದೆ. ವಾಚಾಳಿತನದೊಂದಿಗೆ ಆತ ಮಹಾ ಜಗಳಗಂಟ. ಬಾತ್ ರೂಮ್ ಸ್ವಚ್ಛಗೊಳಿಸಲಿಲ್ಲವೆಂದು ಆತ ಮನೆಯ ಕೆಲಸದಾಕೆಯೊಂದಿಗೂ ಜಗಳಕ್ಕೆ ನಿಲ್ಲಬಲ್ಲ. ಅಕ್ಕಪಕ್ಕದ ಮನೆಯವರ ಪ್ರಶ್ನೆಗಳಿಗೂ  ವ್ಯಂಗ್ಯವೇ ಅವನ ಉತ್ತರ. ತಾನು ಸಾಯುವವರೆಗೂ ಮಗಳು ತನ್ನ ಸೇವೆ ಮಾಡಬೇಕೆನ್ನುವ ಹಠಮಾರಿ ಆತ. ಅದಕ್ಕೆಂದೇ ಮಗಳನ್ನು  ಮದುವೆ ಮಾಡಿ  ಕಳುಹಿಸಲು ಆತನಿಗೆ ಸುತಾರಾಂ ಇಷ್ಟವಿಲ್ಲ. ಮದುವೆಯನ್ನು ತಪ್ಪಿಸಲು ತನ್ನ ಮಗಳು ಕನ್ಯೆಯಾಗಿ ಉಳಿದಿಲ್ಲ ಎಂದು ಹೇಳಲೂ ಆತ ಹಿಂಜರಿಯಲಾರ. ಮಗಳು ಮಗುವಾಗಿದ್ದಾಗ ಅವಳನ್ನು ನೋಡಿಕೊಂಡ ಆಕೆಗೆ ಈಗ ನಾನೇ ಮಗು ಎನ್ನುವ ಭಾವನೆ ಅವನದು.

             ಕೆಲಸ ಮಾಡುತ್ತ ಅಪ್ಪನನ್ನು ನೋಡಿಕೊಳ್ಳುತ್ತಿರುವ ಪೀಕೂಗೆ ಕೆಲಸದ ಸ್ಥಳದಲ್ಲೂ ಅಪ್ಪನ ವರ್ತನೆಯಿಂದ ಮುಜುಗರ ಪಡುವ ಸ್ಥಿತಿ. ಅಪ್ಪನ ಮಲಬದ್ಧತೆಯ ವಿಷಯ ಪೀಕೂ ಕೆಲಸ ಮಾಡುತ್ತಿರುವ ಕಂಪನಿಯಲ್ಲೂ ಚರ್ಚೆಯ ವಿಷಯ. ಒಮ್ಮೊಮ್ಮೆ ತಾನು ಮಾಡುತ್ತಿರುವ ಕೆಲಸವನ್ನು ಅರ್ಧಕ್ಕೆ ಬಿಟ್ಟು ಮಗಳು ತನ್ನ ಆರೋಗ್ಯ ವಿಚಾರಿಸಲು ಬರಬೇಕೆನ್ನುವ ಅಪ್ಪನ ಸ್ವಾರ್ಥ ಪೀಕೂಗೆ ಅನೇಕ ಸಂದರ್ಭಗಳಲ್ಲಿ ಪೇಚಿಗೆ ಸಿಲುಕಿಸುತ್ತದೆ. ಅದೊಂದು ದಿನ ಕೊಲಕತ್ತಾಗೆ ಹೊರಟು ನಿಲ್ಲುವ ಅಪ್ಪನಿಗಾಗಿ ಮಗಳು ಪೀಕೂ ತನ್ನ ಕೆಲಸವನ್ನು ಬಿಟ್ಟು ಅಪ್ಪನೊಂದಿಗೆ ಜೊತೆಯಾಗುತ್ತಾಳೆ. ಕಾರ್ ಬಾಡಿಗೆ ಪಡೆದು ಹೋಗಬೇಕೆನ್ನುವ ಅಪ್ಪನ ಹಟದ ಎದುರು ಸೋಲುವ ಮಗಳು ಕಾರ್ ಬಾಡಿಗೆಗೆ ಗೊತ್ತು ಮಾಡುತ್ತಾಳೆ. ಡ್ರೈವರ್ ಗಳಿಲ್ಲದೆ ಟ್ಯಾಕ್ಸಿ ಮಾಲೀಕ ರಾಣಾ ಚೌಧರಿ ತಾನೇ ಡ್ರೈವರ್ ಆಗಿ ಬರುವುದುರೊಂದಿಗೆ ಕಥೆ ಮತ್ತಷ್ಟು ರಂಜನೀಯವಾಗುತ್ತದೆ. ಸಿನಿಮಾದ ಕಥೆ ಬಹುಮುಖ್ಯ ತಿರುವು ಪಡೆಯುವುದು ಇಲ್ಲಿಂದಲೇ.  ರಾಣಾ ಚೌಧರಿಗೆ ಅಪ್ಪ ಮಗಳ ಈ ಸಂಬಂಧ ವಿಚಿತ್ರವಾಗಿ ಕಾಣಿಸುತ್ತದೆ. ಒಮ್ಮೊಮ್ಮೆ ಪೀಕೂ ಬ್ಯಾನರ್ಜಿಯ ಮಗಳಲ್ಲವೇನೋ ಎನ್ನುವ ಅನುಮಾನ ಆತನನ್ನು ಕಾಡುತ್ತದೆ. ಅದನ್ನು ಆತ ನೇರವಾಗಿ ಪೀಕೂಗೆ ಕೇಳಿ ತನ್ನ ಅನುಮಾನವನ್ನು ಪರಿಹರಿಸಿಕೊಳ್ಳುತ್ತಾನೆ. ಜೊತೆಗೆ ಬ್ಯಾನರ್ಜಿಯ ಮಲಬದ್ಧತೆಯ ಸಮಸ್ಯೆಗೆ ರಾಣಾ ಹಲವು ಸಲಹೆಗಳನ್ನು ಕೂಡ ನೀಡುತ್ತಾನೆ. ರಸ್ತೆಯ ಮೇಲೆ ಅಪ್ಪ ಮಗಳು ಮತ್ತು ರಾಣಾ ಜಗಳವಾಡುತ್ತಲೇ ಕೊಲಕತ್ತಾ ತಲಪುತ್ತಾರೆ. ಅಲ್ಲಿ ಹೋದ ಕೆಲ ದಿನಗಳಲ್ಲೇ ಒಂದು ದಿನ ತನ್ನ ಮಲಬದ್ಧತೆಯ ಸಮಸ್ಯೆಯಿಂದ ಹೊರಬರುವ ರಾಣಾ ಅದೇ ರಾತ್ರಿ ಸುಖದ ಸಾವನ್ನು ಕಾಣುತ್ತಾನೆ. ಪೀಕೂಗೆ ಅಪ್ಪನ ಸಾವು ಆಘಾತ ತಂದರೂ ಆತ ಬದುಕಿನ ಕೊನೆಯ ದಿನವಾದರೂ ನೆಮ್ಮದಿ ಕಂಡ ಎನ್ನುವ ಸಂತಸ ಅವಳಲ್ಲಿದೆ. ಇಲ್ಲಿ ಸ್ವಾರ್ಥವಿದೆ, ಸಣ್ಣತನವಿದೆ, ಜಗಳ ಕಾಯುವ ಮನಸ್ಸುಗಳಿವೆ, ಬೇಸರದಿಂದ ಸಿಡಿಮಿಡಿ ಗುಟ್ಟುವ ನಿಟ್ಟುಸಿರಿದೆ, ಹಠಮಾರಿತನವಿದೆ ಒಟ್ಟಾರೆ ನಮ್ಮಗಳ ಬದುಕಿನ ಅನೇಕ ಸಣ್ಣ ಸಣ್ಣ ಸಂಗತಿಗಳು ಇಲ್ಲಿವೆ. ಆದರೆ ಅವೆಲ್ಲವನ್ನೂ ಮೀರಿದ ಮನುಷ್ಯ ಸಂಬಂಧ ಇಲ್ಲಿದೆ.

                ಅಪ್ಪ- ಮಗಳು, ತಾಯಿ-ಮಗ, ಪತಿ-ಪತ್ನಿ, ಅಣ್ಣ-ತಂಗಿ ಇಂಥ ಸಂಬಂಧಗಳ ಅನೇಕ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ನಿರ್ಮಾಣಗೊಂಡಿವೆಯಾದರೂ ಅಲ್ಲಿ ವಾಸ್ತವಿಕತೆ ಮರೆಯಾಗಿ ಒಣ ಆದರ್ಶವೇ ಮೇಲುಗೈ ಸಾಧಿಸಿದೆ. ಕರಳು ಹಿಂಡುವ, ಕಣ್ಣೀರು ಸುರಿಸುವ ಸನ್ನಿವೇಶಗಳಿಗೆ ಹೆಚ್ಚಿನ ಒತ್ತು ನೀಡಿ ಜನರ ಭಾವಾನೆಗಳನ್ನೇ ಬಂಡವಾಳವಾಗಿಸಿಕೊಂಡು ಕೋಟಿ ಕೋಟಿ ಹಣ ಮಾಡುತ್ತಿರುವ ಸಿನಿಮಾ ರಂಗದಲ್ಲಿ ಪೀಕೂ ಆ ಯಾವ ಗಿಮಿಕ್ ಗಳಿಗೆ ಆಸ್ಪದೆ ಕೊಡದೆ ತನ್ನ ನೇರ ಮತ್ತು ಸರಳ ಕಥಾ ಹಂದರದಿಂದ ಗಮನ ಸೆಳೆಯುತ್ತದೆ.   ಮನುಷ್ಯ   ಸಂಬಂಧಗಳನ್ನು ವ್ಯಾಪಾರಿ ಮನೋಭಾವದಿಂದ ನೋಡುತ್ತಿರುವ ಅವಕಾಶವಾದಿಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಪೀಕೂ ಸಿನಿಮಾದ   ನಿರ್ದೇಶಕ ನಮ್ಮ ಮನಸ್ಸುಗಳಿಗೆ ಕನ್ನಡಿ ಹಿಡಿಯುವ ಕೆಲಸ ಮಾಡಿದ್ದಾರೆ. ಮನುಷ್ಯ ಸಂಬಂಧವನ್ನು ತೀರ ಆದರ್ಶದ ನೆಲೆಯಲ್ಲಿ ತೋರಿಸಿ ಮನುಷ್ಯರನ್ನು ದೇವತಾ ಸ್ವರೂಪಿಯಾಗಿ ಚಿತ್ರಿಸದೆ ಆ ಎಲ್ಲ ಸಂಬಂಧಗಳನ್ನು ವಾಸ್ತವಿಕತೆಯ ನೆಲೆಗಟ್ಟಿನ ಮೇಲೆ ತೋರಿಸುವುದರ ಮೂಲಕ ಇಲ್ಲಿ ಮನುಷ್ಯ ಮನುಷ್ಯನಾಗಿಯೇ ಚಿತ್ರಿತವಾಗಿರುವನು. ಕೋಪ ತಾಪ ಜಗಳ ಪ್ರೀತಿ ಪ್ರೇಮ ವಾತ್ಸಲ್ಯಗಳೆಲ್ಲ ಮನುಷ್ಯನ ಸಹಜ ಗುಣಗಳೆನ್ನುವ   ಸಿನಿಮಾ ದ ಮೂಲ ಉದ್ದೇಶ ಜನರನ್ನು ಹೋಗಿ ತಲುಪಬೇಕು ಆಗ ನಿರ್ದೇಶಕನ ಪ್ರಯತ್ನ ಸಾರ್ಥಕವಾದಂತೆ.

      ಇಲ್ಲಿ ವಾಸ್ತವಿಕತೆಗೆ ಒತ್ತು ಕೊಟ್ಟರೂ ನಿರ್ದೇಶಕ ಸಂಬಂಧಗಳ ಮಹತ್ವ ಮತ್ತು ಮಕ್ಕಳ ಜವಾಬ್ದಾರಿಯನ್ನು ಕುರಿತು ಪ್ರೇಕ್ಷಕರನ್ನು ವಿವೇಚಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುವರು. ತ್ಯಾಗದಿಂದಲೇ ಸಂಬಂಧಕ್ಕೊಂದು ಅರ್ಥವಿದೆ ಎನ್ನುವ ಒಣ ವೇದಾಂತ ಇಲ್ಲಿಲ್ಲ. ಸಂಬಂಧಗಳ ನಡುವೆಯೂ ಅಲ್ಲಿ ಸ್ವಾರ್ಥವಿದೆ ಮನಸ್ಸುಗಳನ್ನು ನೋಯಿಸುವ ಕೋಪ ತಾಪಗಳಿವೆ. ಆದರೆ ಅದೆಲ್ಲವನ್ನೂ ಮೀರಿ ಕೊನೆಗೆ ಉಳಿಯುವುದು ಮನುಷ್ಯ ಮನುಷ್ಯರ  ನಡುವಿನ ಸಂಬಂಧ ಮಾತ್ರ ಎನ್ನುವ ಅರಿವು ಪ್ರೇಕ್ಷಕನಿಗಾಗುತ್ತದೆ. ನಿರ್ದೇಶಕರ ಉದ್ದೇಶವೇ ಅದು ಸಂಬಂಧಗಳನ್ನು ವಾಸ್ತವಿಕತೆಯ ಮೂಲಕ ಬೆಸುಗೆ ಹಾಕುವ ಪ್ರಯತ್ನ ಅವರದು. ಭಾವನೆಗಳೇ ಮೇಲುಗೈ ಸಾಧಿಸಿದಾಗ ಅಲ್ಲಿ ಮನುಷ್ಯ ದೇವತಾ ಸ್ವರೂಪಿಯಾಗುತ್ತಾನೆ. ಮನುಷ್ಯ ದೇವರಾದಾಗ ಆತ ಕೋಪ ತಾಪ ಸಿಟ್ಟು ರೋಷಗಳಿಂದ ಮುಕ್ತನಾಗಿ ವರ ಕೊಡುವ ಕಾಮಧೇನುವಾಗುತ್ತಾನೆ. ಹೀಗೆ ಮನುಷ್ಯ ದೇವತಾ ಸ್ವರೂಪಿಯಾದಾಗ ಅಲ್ಲಿ ಸಂಬಂಧಗಳ ನಡುವೆ ಬಹುದೊಡ್ಡ ಕಂದಕ ನಿರ್ಮಾಣವಾಗಿ ಸಂಬಂಧಗಳು ಅರ್ಥ ಕಳೆದುಕೊಳ್ಳುತ್ತವೆ. ಮನುಷ್ಯ ಸ್ವಾರ್ಥಿಯಾದಾಗ ಮಾತ್ರ ಸಂಬಂಧಗಳನ್ನು ಹುಡುಕಿ ಹೊರಡುತ್ತಾನೆ. ಹೀಗೆ ಸಂಬಂಧಗಳನ್ನು ಹುಡುಕಿ ಹೊರಟಾಗಲೇ ಆತನಿಗೆ ಸಂಬಂಧಗಳ ಮಹತ್ವದ ಅರಿವಾಗಿ ಆತ ಅವುಗಳೆದುರು ಸೋಲುತ್ತಾನೆ. ಮನುಷ್ಯನ ಸೋಲೇ ಸಂಬಂಧಗಳು ಮತ್ತಷ್ಟು ಗಟ್ಟಿಗೊಳ್ಳಲು ಕಾರಣವಾಗುತ್ತದೆ.

    ಸಿನಿಮಾವೊಂದರ ಸಂದೇಶ ಹೆಚ್ಚು ಜನರನ್ನು ಹೋಗಿ ತಲುಪುವುದು ಮತ್ತು ಅದು ಅನೇಕ ದಿನಗಳವರೆಗೆ ನೆನಪಿನಲ್ಲುಳಿಯುವುದು ಪೀಕೂ ವಿನಂಥ ಸಿನಿಮಾಗಳಿಂದ ಮಾತ್ರ ಸಾಧ್ಯ. ಒಂದೆಡೆ ಹೊಡೆದಾಟ ರಕ್ತಪಾತಗಳಂಥ ಸಿನಿಮಾಗಳು ನಿರ್ಮಾಣಗೊಳ್ಳುತ್ತಿದ್ದರೆ ಇನ್ನೊಂದೆಡೆ ಮನುಷ್ಯ ಸಂಬಂಧಗಳನ್ನು ತೀರ ವೈಭವಿಕರಿಸುತ್ತಿರುವ ಸಿನಿಮಾಗಳು. ಈ ನಡುವೆ ಕೆಲ ನಾಯಕ ನಟರು ಹಾಸ್ಯಪ್ರಧಾನ ಕಥಾವಸ್ತುವಿನ ಸಿನಿಮಾಗಳಲ್ಲಿ ನಟಿಸುತ್ತ ಜನರಿಗೆ ಮನರಂಜನೆ ನೀಡುತ್ತಿರುವರು. ಹೀಗಾಗಿ ಇಲ್ಲಿ ಕಥೆಯೇ ಇಲ್ಲದ ಸಿನಿಮಾಗಳು ಮತ್ತು ಕಥೆಯಿದ್ದೂ ತೀರ ಡ್ರಾಮಾಟಿಕ್ ಆಗಿ ಚಿತ್ರಿತವಾಗುತ್ತಿರುವ ಸಿನಿಮಾಗಳು ಎನ್ನುವ ಎರಡು ವರ್ಗಗಳಿವೆ. ಈ ಎರಡೂ ವರ್ಗದ ಸಿನಿಮಾಗಳು ಪ್ರೇಕ್ಷಕರ ಮನ್ನಣೆ ಮತ್ತು ಜನಾದಾರಕ್ಕೆ ಪಾತ್ರವಾಗುತ್ತಿದ್ದರೂ ಅವುಗಳು  ಸಮಾಜಕ್ಕೊಂದು ಸಂದೇಶ ನೀಡುವಲ್ಲಿ ಎಡುವುತ್ತಿವೆ. ಈ ದೃಷ್ಟಿಯಿಂದ ಪೀಕೂ ಸಿನಿಮಾವನ್ನು ಮೂರನೆಯ ವರ್ಗಕ್ಕೆ ಸೇರಿದ ಸಿನಿಮಾ ಎಂದು ಪರಿಗಣಿಸಬಹುದು. ಆ ಮೂರನೆ ವರ್ಗದ ಸಿನಿಮಾವನ್ನೇ  ನಾವೆಲ್ಲ ಕಲಾತ್ಮಕ ಸಿನಿಮಾ ಎನ್ನುವ ಹಣೆಪಟ್ಟಿ ಕಟ್ಟಿ ನಿರ್ಲಕ್ಷಿಸುತ್ತಿದ್ದೇವೆ. ಒಂದು ವೇಳೆ ಅಮಿತಾಭ್, ದೀಪಿಕಾ ರಂಥ ಜನಪ್ರಿಯ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸದೇ ಹೋಗಿದ್ದರೆ ಪೀಕೂ ಕೂಡ ಕಲಾತ್ಮಕ ಸಿನಿಮಾ ಎನ್ನುವ ನಿರ್ಲಕ್ಷಕ್ಕೆ ಒಳಗಾಗುವ ಅಪಾಯವಿತ್ತು.

                ಇಲ್ಲಿ ಅಮಿತಾಭ್ ಬಚ್ಚನ್ ಬಗ್ಗೆ ಒಂದೆರಡು ಮಾತು ಹೇಳಲೇ ಬೇಕು. ನಾಯಕ ನಟನಿಂದ ಆತ ನಿವೃತ್ತಿ ಪಡೆದು ಪೋಷಕ ಪಾತ್ರಗಳ ನಟನೆಯತ್ತ ಹೊರಳಿದ ನಂತರ ಈ ಕಲಾವಿದನಿಗೆ  ಅನೇಕ ಚಾರಿತ್ರಿಕ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶ ದೊರೆಯಿತು. ನಟನೋರ್ವ ಕಲಾವಿದನಾಗಿ ರೂಪುಗೊಳ್ಳುವುದೇ ಆತ ವಿಭಿನ್ನ ಪಾತ್ರಗಳಲ್ಲಿ ನಟಿಸಿದಾಗ. ಈ ದೃಷ್ಟಿಯಿಂದ ಅಮಿತಾಭ್ ಕೇವಲ ನಟನಲ್ಲ ಅವನೊಬ್ಬ ಪರಿಪೂರ್ಣ ಕಲಾವಿದ. ಹಟಕ್ಕೆ  ಬಿದ್ದಂತೆ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವ ಅಮಿತಾಭ್ ಇನ್ನಷ್ಟು ಚಾರಿತ್ರಿಕ ಪಾತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಹೇರಳವಾಗಿವೆ. ಆತನ ಸಮಕಾಲೀನ ನಟರು ಮರಸುತ್ತುವ ನಾಯಕ ಪಾತ್ರಗಳಿಂದ ನಿವೃತ್ತರಾಗಿ ಮೂಲೆ ಗುಂಪಾಗಿರುವ ಈ ಹೊತ್ತಿನಲ್ಲಿ ಅಮಿತಾಬ್ ಇವತ್ತಿಗೂ ತನ್ನ ನಟನೆಯಿಂದ ನಾಯಕನಿಗೆ ಸಮನಾದ ಪಾತ್ರಗಳಲ್ಲಿ ಅಭಿನಯಿಸುತ್ತಿರುವರು. ಕೇವಲ ಇಮೇಜಿಗೆ ಅಂಟಿಕೊಂಡು ಒಬ್ಬ ಕಲಾವಿದನಾಗಿ ಬೆಳೆಯುವ ಅವಕಾಶದಿಂದ ವಂಚಿತರಾಗುವ ನಟ ನಟಿಯರ ನಡುವೆ ಅಮಿತಾಭ್ ತಮ್ಮ ಅಭಿನಯ ಮತ್ತು ಪಾತ್ರಗಳ ಆಯ್ಕೆಯಿಂದ ವಿಭಿನ್ನರಾಗಿ ನಿಲ್ಲುತ್ತಾರೆ. ಒಟ್ಟಿನಲ್ಲಿ ಅಮಿತಾಭ್ ನಿರ್ದೇಶಕರ ನಟನಾಗಿ ಬದಲಾಗಿ ತಮ್ಮ ಎರಡನೇ ಇನ್ನಿಂಗ್ಸ್ ನ್ನು ಭರ್ಜರಿಯಾಗೇ ಆರಂಭಿಸಿರುವರು. ಇಲ್ಲಿ ಅಮಿತಾಭ್ ನಟಿಸಿರುವ ಅಪ್ಪನ ಪಾತ್ರ ಅದೇನು ಆದರ್ಶದ್ದಲ್ಲ. ಆದರೆ ತನ್ನ ಮನೋಜ್ಞ ಅಭಿನಯದಿಂದ ಅಮಿತಾಭ್ ಸ್ವಾರ್ಥ ಮತ್ತು ವಾಚಾಳಿತನದ ಅಪ್ಪನ ಪಾತ್ರವನ್ನು ಕಥೆಯ ಕೇಂದ್ರವಾಗಿಸಿರುವರು. ಬ್ಲ್ಯಾಕ್, ಪಾ ದಂಥ ಸಿನಿಮಾಗಳಲ್ಲಿನ ಅಮಿತಾಭ್ ಅಭಿನಯ ಇಲ್ಲಿ ನಮಗೆ ಮತ್ತೊಮ್ಮೆ ನೆನಪಾಗುತ್ತದೆ.

                 ಅಮಿತಾಭ್, ದೀಪಿಕಾ ಪಡುಕೋಣೆ, ಇರ್ಫಾನ್ ತಮ್ಮ ಪಾತ್ರಗಳಿಗೆ ಈ ಸಿನಿಮಾದಲ್ಲಿ ಜೀವತುಂಬಿ  ನಟಿಸಿರುವರು. ಸಿನಿಮಾದಲ್ಲಿ ಹಾಡುಗಳು ಇಲ್ಲದೆ ಇರುವುದು ಅದೇನು ದೊಡ್ಡ ಕೊರತೆ ಎನಿಸುವುದಿಲ್ಲ. ಇರ್ಫಾನ್ ರಂಗಭೂಮಿಯಿಂದ ಬಂದ ಕಲಾವಿದನಾಗಿರುವುದರಿಂದ ಆತನ ನಟನೆಯಲ್ಲಿ ಸಹಜತೆ ಇದೆ. ದೀಪಿಕಾಳಂಥ ಕಮರ್ಷಿಯಲ್ ಸಿನಿಮಾಗಳ ನಟಿ  ದೇಹ ಮತ್ತು ಸೌಂದರ್ಯವನ್ನು ಪ್ರದರ್ಶಿಸಲು  ಅವಕಾಶವಿಲ್ಲದಂಥ ಪೀಕೂ ಸಿನಿಮಾದಲ್ಲಿ ನಟಿಸಿದ್ದು ನಿಜಕ್ಕೂ ಆರೋಗ್ಯಕರ ಬೆಳವಣಿಗೆ. ಇಂಥ ಪಾತ್ರಗಳಲ್ಲಿ  ಅಭಿನಯಿಸುವುದರಿಂದಲೇ ನಟ ನಟಿಯರು ಕಲಾವಿದರಾಗಿ ರೂಪುಗೊಳ್ಳುವುದು. ಆದರೆ ಪ್ರೇಕ್ಷಕರು ಮಾತ್ರ ಇಂಥ ಸದಭಿರುಚಿಯ ಸಿನಿಮಾಗಳನ್ನು ಪ್ರೋತ್ಸಾಹಿಸದಿರುವುದು ದುರಾದೃಷ್ಟದ ಸಂಗತಿ. ಬಿಡುಗಡೆಯಾದ ಎರಡನೇ ದಿನಕ್ಕೆ ಅಲ್ಲಿದ್ದ ಪ್ರೇಕ್ಷಕರ ಸಂಖ್ಯೆ  ಬೆರಳೆಣಿಕೆಯಷ್ಟು ಎನ್ನುವುದು ನಮ್ಮ ಸಿನಿಮಾ ನೋಡುಗರ  ಅಭಿರುಚಿಗೆ ಕನ್ನಡಿ ಹಿಡಿಯುತ್ತದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ  


Saturday, May 2, 2015

ಅನಾವರಣ: ಪುಸ್ತಕ ಬಿಡುಗಡೆ

 (ಮೇ ೧, ೨೦೧೫ ರಂದು ನನ್ನ 'ಅನಾವರಣ' ಪುಸ್ತಕ ಬಿಡುಗಡೆಯಾಯಿತು)



ನನಗೆ ನನ್ನ ಬರವಣಿಗೆಯ ಮಿತಿ ಗೊತ್ತು. ನಾನು ಪಂಪ, ರಾಘವಾಂಕ, ಕುಮಾರವ್ಯಾಸರನ್ನು ಓದಿಕೊಂಡವನಲ್ಲ. ಹಳೆಗನ್ನಡ ನನಗೆ ಇವತ್ತಿಗೂ ಅರ್ಥವಾಗದ ಭಾಷೆ. ಅತಿ ಅಲಂಕಾರಿಕ ಪದಗಳನ್ನು ಬಳಸಿ ಬರೆದ ಪುಸ್ತಕಗಳ ಓದು ನನಗೆ ಅಷ್ಟಕಷ್ಟೆ. ಸರಳವಾಗಿ ಓದಿಸಿಕೊಂಡು ಹೋಗುವ ಮತ್ತು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲುವ ಬರಹಗಳ ಓದಿನಲ್ಲಿ ನನಗೆ ಹೆಚ್ಚು ಆಸಕ್ತಿ. ದಿನಪತ್ರಿಕೆಗಳು, ನಿಯತಕಾಲಿಕೆಗಳು, ಕಥೆ, ಕಾದಂಬರಿಗಳು, ಜೀವನ ಚರಿತ್ರೆಗಳು, ಪತ್ರಿಕೋದ್ಯಮದ ಬರಹಗಳ ಓದು ನನ್ನಲ್ಲೊಂದಿಷ್ಟು ಬರವಣಿಗೆಯಂಥ ಸೃಜನಶೀಲತೆಯನ್ನು ಮೂಡಿಸಿದೆ.  ಹಾಗೆಂದು ನನ್ನ ಬರವಣಿಗೆ ಬಗ್ಗೆ ನನಗೆ ಹೆಚ್ಚು ಅಭಿಮಾನವಾಗಲಿ ಇಲ್ಲವೇ ಅಹಂಕಾರವಾಗಲಿ ಇಲ್ಲ. ನಾನು ಬರವಣಿಗೆಯನ್ನು ನನ್ನೊಳಗಿನ ಆತಂಕ, ತಲ್ಲಣ, ಬೇಗುದಿ ಈ ಎಲ್ಲವನ್ನೂ ಅಕ್ಷರ ರೂಪಕ್ಕಿಳಿಸಲು ಬಳಸಿಕೊಂಡಿದ್ದೆ ಹೆಚ್ಚು. ಇಂಥದ್ದೊಂದು ಇತಿ ಮಿತಿಯ ಓದು ಮತ್ತು ಬರವಣಿಗೆಯ ನಡುವೆ ನಾನು ಬರೆದ ಅನಾವರಣ ಇದು ನನ್ನ ನಾಲ್ಕನೇ ಕೃತಿ.


   ಓದು ಮತ್ತು ಸಿನಿಮಾಗಳ ವೀಕ್ಷಣೆ ನನ್ನ ಅತ್ಯುತ್ತಮ  ಹವ್ಯಾಸಗಳು ಎನ್ನುವ ನಂಬಿಕೆ ನನ್ನದು. ಈ ಓದಿನ ಗೀಳು ನನಗೆ ಅಮ್ಮನಿಂದ ಬಂದ ಬಳುವಳಿ. ಸಿನಿಮಾ  ನೋಡುವ ಹುಚ್ಚು ಹತ್ತಿದ್ದು ಅಣ್ಣಂದಿರಿಂದ. ಉತ್ತಮ ಪುಸ್ತಕಗಳ ಓದು ಮತ್ತು ಅತ್ಯುತ್ತಮ ಕಲಾತ್ಮಕ ಹಾಗೂ ಕಮರ್ಷಿಯಲ್ ಸಿನಿಮಾಗಳ ವೀಕ್ಷಣೆಯಿಂದ ನನ್ನೊಳಗೆ ಬರವಣಿಗೆಯಂಥ ಸೃಜನಶೀಲತೆಯ ಸೆಲೆ ನಿರಂತರವಾಗಿ ಒಸರಲು ಕಾರಣವಾಯಿತು. ಜೊತೆಗೆ ನಾನು ಅಕ್ಷರ ಕಲಿತದ್ದು ಪಕ್ಕಾ ಕನ್ನಡ ಭಾಷೆಯಲ್ಲಿ. ಈ ಜಾಗತೀಕರಣ, ಐಟಿ, ಬೀಟಿಗಳು ನನ್ನ ವಿದ್ಯಾರ್ಥಿ ಜೀವನದ ಕಾಲಕ್ಕೆ ಈಗಿನಷ್ಟು ಸದ್ದು ಮಾಡುತ್ತಿರಲಿಲ್ಲವಾದ್ದರಿಂದ ಅಪ್ಪ ಖರ್ಚಾಗದೇ ಕಲಿಸುವ ಸರ್ಕಾರಿ ಕನ್ನಡ ಶಾಲೆಗೆ ಸೇರಿಸಿದರು. ಹಾಗೆಂದು ಬೇಸರವೇನಿಲ್ಲ. ಕಲಿತ ಕನ್ನಡ ಶಾಲೆಗಳು ಪಠ್ಯಕ್ರಮದಾಚೆಯೂ ಕಲಿಸಿಕೊಟ್ಟ ಜೀವನಾನುಭವ ಅಪೂರ್ವ.


   ಬದುಕನ್ನು ಕಟ್ಟಿಕೊಳ್ಳಲು ಬಾಗಲಕೋಟೆಯಂಥ ಸಾಂಸ್ಕೃತಿಕ ನಗರಕ್ಕೆ ಬಂದ ಮೇಲೆ ನನ್ನ ಬರವಣಿಗೆ ಒಂದಿಷ್ಟು ಹದವಾಯಿತು. ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ನನ್ನ ಬರವಣಿಗೆಗೆ ವೇದಿಕೆ ಒದಗಿಸಿತು. ಸಂಘದ ಕಾರ್ಯಾಧ್ಯಕ್ಷರಾದ ಶ್ರೀ ವೀರಣ್ಣ ಚರಂತಿಮಠ ಹಾಗೂ ಶ್ರೀ  ಸಿದ್ದಣ್ಣ ಶೆಟ್ಟರ್, ಪ್ರೊ ಎನ್. ಜಿ. ಕರೂರ, ಡಾ ಅಶೋಕ ಮಲ್ಲಾಪುರ, ಡಾ ಚಿದಾನಂದ ಪಾಟೀಲ, ಶ್ರೀ ಪಿ ಎನ್ ಸಿಂಪಿ ಈ ಎಲ್ಲ ಮಹನೀಯರಿಂದ ನನ್ನ ಬರವಣಿಗೆಯ ಬದುಕಿಗೆ ದೊರೆತ ಪ್ರೋತ್ಸಾಹ ಮತ್ತು ಸಹಕಾರ ಅಪಾರ.


      ಇನ್ನು ಅನಾವರಣ ಕೃತಿಯ ವಿಷಯಕ್ಕೆ ಬರುವುದಾದರೆ ಇಲ್ಲಿನ ಎಲ್ಲ ೧೮ ಲೇಖನಗಳು ನಾನು ಹತ್ತು ತಿಂಗಳ ಅವಧಿಯಲ್ಲಿ ನನ್ನ ಬ್ಲಾಗಿಗೆ ಬರೆದ ಬರಹಗಳು. ಬ್ಲಾಗಿಗೆ ಬರೆಯುವಾಗಲೆಲ್ಲ ನಾನು ಪತ್ರಿಕೆಯೊಂದಕ್ಕೆ ಬರೆಯುವ ಬದ್ಧತೆಯಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಬ್ಲಾಗ್ ಬರವಣಿಗೆಯನ್ನು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲಿಸುವ ಕಾಳಜಿ ನನ್ನದಾಗಿರುವುದರಿಂದ ಕಡಿಮೆ ಅವಧಿಯಲ್ಲಿ ಬ್ಲಾಗ್ ಲೇಖನಗಳನ್ನು ಸಂಕಲಿಸಿ ಎರಡು ಪುಸ್ತಕಗಳನ್ನು ಹೊರತರಲು ಸಾಧ್ಯವಾಯಿತು. ಬ್ಲಾಗ್ ಓದುಗರಿಂದ ನನ್ನ ಲೇಖನಗಳಿಗೆ ದೊರೆಯುತ್ತಿರುವ ಪ್ರತಿಕ್ರಿಯೆಗಳನ್ನು ನೆನಪಿಸಿಕೊಂಡಾಗಲೆಲ್ಲ ಮನಸ್ಸು ಕೃತಜ್ಞತೆಯಿಂದ ಭಾರವಾಗುತ್ತದೆ.


   ನನ್ನ ಕೃತಿಗಳ ಪ್ರಕಟಣೆಯ ವಿಷಯವಾಗಿ ನಾನು ಸ್ಮರಿಸಲೇಬೇಕಾದ ವ್ಯಕ್ತಿತ್ವ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಶ್ರೀ ಬಸವರಾಜ ಕೊನೆಕ್ ಅವರದು. ಅನಾವರಣವನ್ನೊಳಗೊಂಡಂತೆ ನನ್ನ ಮೂರು ಪುಸ್ತಕಗಳು ಸಿದ್ದಲಿಂಗೇಶ್ವರ ಪ್ರಕಾಶನದಿಂದ ಪ್ರಕಟವಾಗಿರುವುದರ ಹಿಂದೆ ಶ್ರೀ ಬಸವರಾಜ ಕೊನೆಕ್ ಅವರ ಪ್ರೀತಿ ಮತ್ತು ಸಹಕಾರವೇ ಕಾರಣ.  ಈ ಸಂದರ್ಭ ಸಹಕಾರ ನೀಡುತ್ತಿರುವ ಎಲ್ಲರನ್ನೂ ನಾನು ಅತ್ಯಂತ ವಿನಮೃತೆಯಿಂದ ಸ್ಮರಿಸಿಕೊಳ್ಳುತ್ತ ನನ್ನ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.

-  ರಾಜಕುಮಾರ . ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Wednesday, April 1, 2015

ಪೂರ್ವಾಪರ: ಚಿಂತಕನ ಒಳನೋಟಗಳು






             ಡಾ. ಯು. ಆರ್. ಅನಂತಮೂರ್ತಿ ಈ ನಾಡಿನ ಅಪೂರ್ವ ಚಿಂತಕ ಮತ್ತು ಬರಹಗಾರರಲ್ಲೊಬ್ಬರು. ಸಾಹಿತ್ಯ, ಸಮಾಜ, ರಾಜಕೀಯ, ಭಾಷೆ, ಸಂಸ್ಕೃತಿ ಹೀಗೆ ಹಲವು ಕ್ಷೇತ್ರಗಳ ಬಗ್ಗೆ ತೀವೃ ಸಂವೇದನೆಯಿಂದ ಮಾತನಾಡಿದ ಮತ್ತು ಬರೆದ ಬರಹಗಾರ ಅವರು. ವರ್ತಮಾನದ ಸಮಸ್ಯೆಗಳಿಗೆ ಅನಂತಮೂರ್ತಿ ಅವರು ಸ್ಪಂದಿಸಿದಷ್ಟು ಬೇರೆ ಲೇಖಕರು ಸ್ಪಂದಿಸಿದ್ದು ಕಡಿಮೆ ಎಂದರೆ ಅತಿಶಯೋಕ್ತಿಯಾಗಲಾರದು. ಕುಟುಂಬದ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು ಸಮಾಜವಾದಿ ಹಿನ್ನೆಲೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ ಅನಂತಮೂರ್ತಿ ಅವರು ೧೯೭೦ ರ ದಶಕದಲ್ಲೇ 'ಸಂಸ್ಕಾರ' ಕಾದಂಬರಿ ಬರೆದು ಕನ್ನಡ ಸಾಹಿತ್ಯಕ್ಕೆ ಅಪೂರ್ವ ಕೊಡುಗೆ ನೀಡಿದವರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನದಿಂದ ಕುವೆಂಪು, ಕಾರಂತ, ಬೇಂದ್ರೆ ಅವರಷ್ಟೇ ಟಾಲ್ ಸ್ಟಾಯ್, ಡಿಕ್ಸನ್, ಸಾರ್ತ್ರ್, ಕಾಫ್ಕಾ, ಏಟ್ಸ್ ಸಹ ಅವರ ಬರವಣಿಗೆ ಮತ್ತು ಚಿಂತನೆಯನ್ನು ಪ್ರಭಾವಿಸಿದರು. ಗಾಂಧಿ ಮತ್ತು ಲೋಹಿಯಾ ಹೋರಾಟಗಾರರಾಗಿ ಅನಂತಮೂರ್ತಿ ಅವರಿಗೆ ತುಂಬ ಆಪ್ತರು. ಅನಂತಮೂರ್ತಿ ಅವರು ತಮ್ಮ ಬರಹ ಹಾಗೂ ಮಾತುಗಳಿಂದ ಒಂದು ವಯೋಮಾನದ ಓದುಗರನ್ನು ತುಂಬ ಪ್ರಭಾವಿಸಿರುವರು. ಸಂಸ್ಕಾರ, ಭವ, ದಿವ್ಯ, ಭಾರತಿಪುರ, ಪೂರ್ವಾಪರ, ವಾಲ್ಮೀಕಿಯ ನೆವದಲ್ಲಿ ಕೃತಿಗಳ ಮೂಲಕ ಓದುಗರನ್ನು ತಾವು ಬದುಕುತ್ತಿರುವ ಸಮಾಜದೊಂದಿಗೆ ನಿರಂತರವಾಗಿ ಮುಖಾಮುಖಿಯಾಗಿಸುತ್ತ ಬಂದ ಕನ್ನಡದ ಈ ಅಪೂರ್ವ ಬರಹಗಾರ ಮತ್ತು ಚಿಂತಕ ಸಾಹಿತ್ಯದೊಂದಿಗಿನ ತಮ್ಮ ಒಡನಾಟದಿಂದ ಅಭಿಮಾನಿ ಓದುಗರನ್ನೂ ಹಾಗೂ  ಅನೇಕರ ವಿರೋಧವನ್ನೂ  ಕಟ್ಟಿಕೊಂಡಿದ್ದುಂಟು. ಓದುಗರ ಒತ್ತಾಸೆಗಿಂತ ಟೀಕೆಗಳೇ ಅವರ ಮಾತುಗಳ ನ್ನಾಡುವ  ಮತ್ತು   ಬರೆಯುವ ಉತ್ಸಾಹವನ್ನು ಇಮ್ಮಡಿಗೊಳಿಸಿದವು.  ಅನಂತಮೂರ್ತಿ ಅವರ ಹೇಳಿಕೆಗಳು ಕೆಲವೊಮ್ಮೆ ವಿರೋಧಾಬಾಸಗಳಿಂದ ಕೂಡಿದ್ದರೂ ವಿರೋಧ ಮತ್ತು ಭಿನ್ನಾಭಿಪ್ರಾಯಗಳಿಗೆ ಮಣೆಹಾಕಿ ಹೊಸ ವಿಚಾರಗಳು ಮತ್ತು ಚಿಂತನೆಗಳು ಹುಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟ ಹೆಗ್ಗಳಿಕೆ ಅವರದು. ಅನಂತಮೂರ್ತಿ ಅವರೇ ಹೇಳಿಕೊಂಡಂತೆ ಯಾರೊಂದಿಗೂ ಅವರು ವ್ಯಕ್ತಿಗತ ನೆಲೆಗಟ್ಟಿನಲ್ಲಿ ವಿರೋಧವನ್ನು ಕಟ್ಟಿಕೊಂಡವರಲ್ಲ. ಅವರ ವಿರೋಧವೆನಿದ್ದರೂ ಅದು ವೈಚಾರಿಕ ನೆಲೆಯಲ್ಲಿ ಮಾತ್ರ. ಅದಕ್ಕೆಂದೇ ಲೇಖಕರೊಂದಿಗೆ ವಾಗ್ವಾದಕ್ಕಿಳಿದಾಗಲೆಲ್ಲ ತನ್ನ ಸೋಲಿನಿಂದಾದರೂ ಹೊಸ ವಿಚಾರಗಳು ಹುಟ್ಟಿಕೊಳ್ಳಲಿ ಎಂದು ಅವರು ಆಶಿಸುತ್ತಿದ್ದರು. 'ವಾಲ್ಮೀಕಿಯ ನೆವದಲ್ಲಿ' ಪುಸ್ತಕವನ್ನು ವಿಮರ್ಶಕರ ಟೀಕೆ ಟಿಪ್ಪಣಿಗಳೊಂದಿಗೆ ಪ್ರಕಟಿಸಿದ್ದು ಕನ್ನಡ ಸಾಹಿತ್ಯದಲ್ಲಿ ಅದೊಂದು ಹೊಸ ಪ್ರಯೋಗವಾಗಿದ್ದು ಇದು ಅನಂತಮೂರ್ತಿ ಅವರು ಭಿನ್ನಾಭಿಪ್ರಾಯಗಳಿಗೆ ಹಾಗೂ ಟೀಕೆಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದರು ಎನ್ನುವುದಕ್ಕೆ ಪುರಾವೆಯಾಗಿದೆ. 

               'ಪೂರ್ವಾಪರ' ಅನಂತಮೂರ್ತಿ ಅವರ ಸಾವಿನ ನಂತರ ನಾನು ಓದಿಗಾಗಿ ಕೈಗೆತ್ತಿಕೊಂಡ ಅವರ ಮಹತ್ವದ ಕೃತಿಗಳಲ್ಲೊಂದು. ೧೯೯೦ ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಅನಂತಮೂರ್ತಿ ಅವರು ವಿವಿಧ ಸಂದರ್ಭಗಳಲ್ಲಿ ಮಾಡಿದ ಭಾಷಣಗಳು ಮತ್ತು ಬರೆದ ಲೇಖನಗಳ ಸಂಗ್ರಹವಿದೆ. ಹೆಚ್ಚಿನ ಲೇಖನಗಳು ಅವರು ಸಂಪಾದಕರಾಗಿ 'ರುಜುವಾತು' ಪತ್ರಿಕೆಗೆ ಬರೆದವುಗಳು. 'ರುಜುವಾತು' ಪತ್ರಿಕೆ ಶುರುವಾದುದ್ದರ ಹಿಂದೆ ಒಂದು ಕಥೆಯಿದೆ. ಈ ಪುಸ್ತಕದ ಪ್ರಾರಂಭದಲ್ಲಿ ಹೇಳಿಕೊಂಡಂತೆ ೧೯೮೦ ರ ದಶಕದ ಪ್ರಾರಂಭದಲ್ಲಿ ಬರವಣಿಗೆಗೆ ಸಂಬಂಧಿಸಿದಂತೆ ಒಂದು ವಿಚಿತ್ರ ಬಗೆಯ ಸೋಮಾರಿತನ ಅನಂತಮೂರ್ತಿ ಅವರಲ್ಲಿ ಕಾಣಿಸಿಕೊಂಡಿತು. ಇಂಥ ಪರಿಸ್ಥಿತಿಯಲ್ಲಿ ಅವರನ್ನು ನೋಡಲು ಬಂದ ಕಿ ರಂ ನಾಗರಾಜ ಮತ್ತು ಸತ್ಯನಾರಾಯಣ ಒಂದು ಪತ್ರಿಕೆಯನ್ನು ಪ್ರಾರಂಭಿಸುವಂತೆ ಒತ್ತಾಯಿಸಿದರ ಪರಿಣಾಮ 'ರುಜುವಾತು' ಪತ್ರಿಕೆ ಶುರುವಾಯಿತು. ಬರವಣಿಗೆಯ ಸೋಮಾರಿತನದಿಂದ ಹೊರಬರುವ ಅನಂತಮೂರ್ತಿ ಅವರು ಒಂದು ದಶಕದ ಕಾಲ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸುವುದರೊಂದಿಗೆ ಅನೇಕ ಬರಹಗಾರರು ಬೆಳೆಯಲು ವೇದಿಕೆ ರೂಪಿಸಿದರು. ಅನಂತಮೂರ್ತಿ ಅವರ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಚಿಂತನೆಗಳು 'ರುಜುವಾತು' ಪತ್ರಿಕೆಯ ಮೂಲಕ ನಾಡಿನ ಓದುಗರನ್ನು ತಲುಪಿದವು. ರುಜುವಾತು ಪತ್ರಿಕೆ ಒಂದು ದಶಕದ ಕಾಲ ಈ ನಾಡಿನ ಓದುಗರನ್ನು ಗಾಂಧಿ, ಲೋಹಿಯಾರಂಥ ಹೋರಾಟಗಾರರಿಗೆ, ಕುವೆಂಪು, ಬೇಂದ್ರೆ, ಡಿಡಿರೋ, ಟಾಲ್ ಸ್ಟಾಯ್ ಅವರಂಥ ಸೃಜನಶೀಲರಿಗೆ, ಕನ್ನಡ ಭಾಷೆ ಎದುರಿಸುತ್ತಿರುವ ಸಮಸ್ಯೆಗಳಿಗೆ, ಈ ನಾಡಿನ ಚಳವಳಿಗಳಿಗೆ ಮುಖಾಮುಖಿಯಾಗಿಸಿತು. 'ರುಜುವಾತು' ಪತ್ರಿಕೆಯಲ್ಲಿ ಪ್ರಕಟವಾದ ಅನಂತಮೂರ್ತಿ ಅವರ ಆ ಎಲ್ಲ ಚಿಂತನೆಗಳು ಇಡೀಯಾಗಿ ಓದುಗರಿಗೆ ತಲುಪುವಂತಾಗಲಿ ಎನ್ನುವ ಆಶಯದಿಂದ ಕೆ ವಿ ಸುಬ್ಬಣ್ಣನವರು ತಮ್ಮ ಅಕ್ಷರ ಪ್ರಕಾಶನದಿಂದ 'ಪೂರ್ವಾಪರ' ಕೃತಿಯನ್ನು ಪ್ರಕಟಿಸಿರುವರು.

ವ್ಯಕ್ತಿ ಚಿತ್ರಣ


                 ಪುಸ್ತಕದ ಅಲ್ಲಲ್ಲಿ ಲೇಖಕರು ಬೇಂದ್ರೆ, ಪುತಿನ, ಕೃಪಲಾನಿ,  ತರಾಸು, ಮಾಸ್ತಿ ಇತ್ಯಾದಿ ಮಹನೀಯರನ್ನು ಸ್ಮರಿಸಿ ಕೊಂಡಿರುವರು. ಕೆಲವರ ಕುರಿತು ಬರೆಯುವಾಗ ಅನಂತಮೂರ್ತಿ ಅವರು ತುಂಬ ಆರ್ದ್ರರಾಗುತ್ತಾರೆ ಮತ್ತು ಇನ್ನು ಕೆಲವರ ಕುರಿತು ಕಠೋರ ನಿಲುವು ತಳೆಯುತ್ತಾರೆ. ವ್ಯಕ್ತಿ ಚಿತ್ರಣದ ವೈಶಿಷ್ಟ್ಯ ವೇ ಅದು.   ತೀರ ಮುಖಸ್ತುತಿಯಾಗಲಿ ಇಲ್ಲವೇ ವೈಯಕ್ತಿಕ ದ್ವೇಷವಾಗಲಿ ಇಲ್ಲದೆ ತಮಗನಿಸಿದ್ದನ್ನು ಲೇಖಕರು ನೇರವಾಗಿ ಹೇಳಿರುವುದರಿಂದ ಬರಹ ಓದುಗನಿಗೆ ಆಪ್ತವಾಗುತ್ತದೆ. ಸಾಹಿತ್ಯದಲ್ಲಿ ರಸಪ್ರಜ್ಞೆ ಹುಟ್ಟುವುದು ಬರಹಗಾರ ಸ್ವಕೇಂದ್ರದಿಂದ ಮುಕ್ತಿ ಪಡೆದಾಗ ಮಾತ್ರ ಎಂದೆನ್ನುವ ಮೂರ್ತಿ ಅವರು ಅದಕ್ಕೆ ಉದಾಹರಣೆಯಾಗಿ ಪುತಿನ ಅವರನ್ನು ಸ್ಮರಿಸಿಕೊಳ್ಳುತ್ತಾರೆ. ಪುತಿನ ತಮ್ಮ ಜೀವನಾನುಭವವನ್ನು ಗಾಢವಾಗಿತೊಡಗಿಸಿಕೊಂಡೆ ಮತ್ತೆ ಹೊಸ ಬಗೆಯಲ್ಲಿ ಸಾಧಿಸಿದ ಕವಿ ಇದಾಗದಿದ್ದಲ್ಲಿ ಅವರ ಕಾವ್ಯ ಎಡೆತಡೆಯಿಲ್ಲದ ಮಾತಿನ ಸ್ವಪ್ರದರ್ಶನರತಿಯಾಗುತ್ತಿತ್ತು ಎಂದು ವಿಮರ್ಶಿಸುತ್ತಾರೆ.  ತನ್ನ ಸ್ವಭಾವದ ಪ್ರದರ್ಶನರತಿಗೆ ತಾನೇ ಮರುಳಾದವನಿಗೆ ಕ್ರಾಂತಿ ಎಂಬುದು ಸರ್ವನಾಶದ ಸುಖ ಕೊಡಬಲ್ಲ ಒಂದು ತೀಟೆಯಾಗಿಬಿಡಬಹುದು ಎಂದು ಆತಂಕ ಪಡುವ ಲೇಖಕರು ಪುತಿನ ಅವರ ಬರಹ ಇಂಥ ಎಲ್ಲ ವಿಪರ್ಯಾಸಗಳಿಂದ ಮುಕ್ತವಾಗಿತ್ತು ಎನ್ನುತ್ತಾರೆ. ಪುತಿನ ಅವರ ಜೊತೆ ಜೊತೆಗೆ ಲಾರೆನ್ಸ್, ಕಾನ್ರಾಡ್, ಬ್ಲೇಕ್, ದಾಸ್ತೊವಸ್ಕಿ, ಬೋದಿಲೇರ್ ಕೂಡ ನಮ್ಮ ಓದಿಗೆ ದಕ್ಕುವುದೇ ಒಂದು ವಿಶಿಷ್ಠ ಅನುಭವ.

                  ಬೇಂದ್ರೆ ಕುರಿತು ಬರೆಯುವಾಗ ಅವರನ್ನು ನಮ್ಮ ಕಾಲದ ದೊಡ್ಡ ಕವಿ ಎಂದು ಹೇಳುವ ಅನಂತಮೂರ್ತಿ ಅವರು ಆತ್ಮಕಾಮಿ ಹಾಗೂ ಜೀವಕಾಮಿಯಾಗಿದ್ದ ಬೇಂದ್ರೆ ಅಲ್ಲಿಂದ ಕೆಳಗಿಳಿದು ಬರಬಲ್ಲವರಾಗಿದ್ದರಿಂದಲೇ ಅವರ ಕಾವ್ಯ ಸೃಜನಶೀಲತೆಯ ಸ್ವರೂಪ ಪಡೆಯಿತು ಎಂದು ಬೇಂದ್ರೆ ಅವರ ವ್ಯಕ್ತಿತ್ವವನ್ನು ವರ್ಣಿಸುತ್ತಾರೆ. ಬೇಂದ್ರೆ ಸಾಮಾನ್ಯರಂತೆ ಬದುಕಿ ಜೀವನಾನುಭವವನ್ನು ಗಾಢವಾಗಿ ಅನುಭವಿಸಿದರು ಎನ್ನುವುದನ್ನು ವಿವರಿಸಲು  ಅವರು ಕೊಡುವ ಉದಾಹರಣೆ ಹೀಗಿದೆ 'ನೊಬೆಲ್ ಪಾರಿತೋಷಕ ಪಡೆದ ನಂತರ ಗೌರವಾನ್ವಿತ ಋಷಿಯಂತೆ ಬದುಕಬೇಕಾಗಿ ಬಂದ ಟ್ಯಾಗೋರ್, ತಾನು ಆಗಬೇಕೆಂಬ ಆದರ್ಶವನ್ನು ಮುಖವಾಡ ಮಾಡಿಕೊಂಡು ಬದುಕಿದ ಏಟ್ಸ್ ಆದರೆ ಬೇಂದ್ರೆ ತನ್ನೆಲ್ಲ ಇಹಪರಗಳ ಪರದಾಟಗಳನ್ನು ಒಟ್ಟಾಗಿ ಬದುಕಲು ಸಾಧ್ಯವಾದದ್ದು ಅವರ ವ್ಯಕ್ತಿತ್ವದ ವಿಶಿಷ್ಠತೆಯಿಂದ'. ಛತ್ರಿ ಚೀಲಗಳನ್ನು ಹಿಡಿದುಕೊಂಡು ಕೋಪ ತಾಪದಿಂದ ಧಾರವಾಡದ ಬೀದಿಗಳಲ್ಲಿ ಓಡಾಡುತ್ತಿದ್ದ ಸಾಮಾನ್ಯನಾಗಿಯೂ ಮತ್ತು ಗಂಗಾವತರಣದ ಅಸಾಮಾನ್ಯನಾಗಿಯೂ ಬೇಂದ್ರೆ ನಮಗೆ ನಿಲುಕುವಂತೆ ಅನಂತಮೂರ್ತಿ ಇಲ್ಲಿ ಬೇಂದ್ರೆ ಅವರನ್ನು ಚಿತ್ರಿಸಿರುವರು.

               ಆಚಾರ್ಯ ಜೆ ಬಿ ಕೃಪಲಾನಿ ನಿಧನರಾದಾಗ ಗಾಂಧಿ ಯುಗದ ಕೊನೆಯ ಕಂಡಿ ಕಳಚಿದಂತಾಯಿತು ಎಂದು ನೋವಿನಿಂದ ನುಡಿಯುತ್ತಾರೆ. ಕೃಶವಾಗುತ್ತ ಹೋಗುತ್ತಿರುವ ರಾಷ್ಟ್ರದ ನೈತಿಕ ಪ್ರಜ್ಞೆಯನ್ನು ಜಾಗೃತವಾಗಿಡಲು ತನ್ನ ಕೊನೆಯ ಘಳಿಗೆಯ ತನಕ ಶ್ರಮಿಸಿದ ಕೃಪಲಾನಿ ಬದುಕಿನಲ್ಲಿ ನಿಷ್ಟುರರಾಗಿಯೂ ಪ್ರಾಮಾಣಿಕನಾಗಿಯೂ ಉಳಿದರು ಎಂದು ಹೇಳುವ ಲೇಖಕರು ಇದನ್ನು ರಾಜಕೀಯದಲ್ಲಿ ಸಾಧಿಸುವುದು ಹೆಚ್ಚು ಕಠಿಣ ಎಂದು ಓದುಗರಿಗೆ ವಾಸ್ತವವನ್ನು ನೆನಪಿಸುತ್ತಾರೆ. ವಿನೋಬಾಭಾವೆ ಕುರಿತು ಬರೆಯುವಾಗ ಅಲ್ಲಿ ಮೆಚ್ಚುಗೆಯ ಜೊತೆಗೆ ಟೀಕೆಯೂ ಇದೆ. ವಿನೋಬಾರ ಅಧಿಕಾರ ವಿಕೇಂದ್ರಿಕರಣದ ಕಲ್ಪನೆಯನ್ನು ಮೆಚ್ಚುವ ಅನಂತಮೂರ್ತಿ ತುರ್ತುಪರಿಸ್ಥಿತಿಗೆ ಬೆಂಬಲ ನೀಡಿದ ಅವರನ್ನು ಸರ್ಕಾರಿ ಸಂತ ಎಂದು ಟೀಕಿಸುತ್ತಾರೆ. ಮೋಹದ ಪ್ರಪಂಚದ ಹಂಗಿಲ್ಲದಂತೆ ಬದುಕುವಾತ ಅರಿಯಬಲ್ಲ ಸತ್ಯಗಳು ಕೇವಲ ಅಮೂರ್ತವಾಗುತ್ತವೆಯೇ? ಕಾವಿಲ್ಲದ ಸತ್ವಹೀನವಾಗುತ್ತವೆಯೇ? ಎನ್ನುವ ಪ್ರಶ್ನೆಗಳು ವಿನೋಬಾರ ಬ್ರಹ್ಮಚರ್ಯದ ಹಿನ್ನೆಲೆಯಲ್ಲಿ ಲೇಖಕರಿಗೆ ಎದುರಾಗುತ್ತವೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಕುರಿತು ಬರೆಯುವಾಗಲೂ ಅನಂತಮೂರ್ತಿ ಒಂದಿಷ್ಟು ಕಠಿಣರಾಗುತ್ತಾರೆ. ಮಧ್ಯಮ ವರ್ಗದ ಪ್ರೇಕ್ಷಕರ ನೀರಸ ಬದುಕಿಗೆ ಕೆಲವು ಕ್ಷಣಗಳ ಉತ್ಕಟತೆಯ ಭ್ರಮೆಯನ್ನು ಉಂಟುಮಾಡುವುದಕ್ಕಾಗಿ ಮಾತ್ರ ಪುಟ್ಟಣ್ಣನವರ ಕಲೆಗಾರಿಕೆ ವ್ಯಯವಾದದ್ದು ಒಂದು ದುರಂತ ಎಂದು ಹಳಹಳಿಸುತ್ತಾರೆ. ಕಾರಂತರ ಬಗ್ಗೆ ಬರೆಯುವಾಗ ಕಾರಂತರ ಪ್ರಭಾವ ಅಜ್ಞಾತವಾಗಿ ನನ್ನ ಬರವಣಿಗೆಯ ಹಿಂದೆ ಕೆಲಸ ಮಾಡಿದೆ ಎನ್ನುವ ಲೇಖಕರು  ಕಾರಂತರ ಸಾಹಿತ್ಯದ ಪ್ರಭಾವ ನವ್ಯರ ಮೇಲಾಗಿದೆ ಎಂದು ಆತ್ಮಶೋಧನೆಗಿಳಿಯುತ್ತಾರೆ. ಕಾರಂತರ ಮರಳಿ ಮಣ್ಣಿಗೆಯ ಲಚ್ಚ ನನ್ನ ಸಂಸ್ಕಾರದ ನಾರಣಪ್ಪನನ್ನು ಪ್ರೇರೇಪಿಸಿದ ಎಂದು ಯಾವ ಮುಚ್ಚು ಮರೆಯಿಲ್ಲದೆ ನುಡಿಯುತ್ತಾರೆ. ತರಾಸು, ಮಾಸ್ತಿ, ಚದುರಂಗ, ನಿರಂಜನರ ಕುರಿತು ಬರೆಯುವ ಸಂದರ್ಭ ಲೇಖಕರು ಹೆಚ್ಚು ಆರ್ದ್ರರಾಗುತ್ತಾರೆ. ಬರವಣಿಗೆಯನ್ನು ಆಕರ್ಷಕ ಕ್ರಿಯೆಯಾಗಿ ಮಾಡಿದ ತರಾಸು ಅವರಷ್ಟೇ ಕನ್ನಡಕ್ಕಾಗಿ ಜೀವ ತೇದ ಮಾಸ್ತಿ ಕೂಡ ಅನಂತಮೂರ್ತಿ ಅವರಿಗೆ ಆಪ್ತರಾಗುತ್ತಾರೆ. ಒಂದು ಸಂದರ್ಭ ನಿರಂಜನರೊಂದಿಗೆ ವಿರೋಧ ಕಟ್ಟಿಕೊಂಡಾಗ ಅಪ್ಪಟ ನಿರಂಜನರನ್ನು ಕಾಣಲು ಶ್ರಮಿಸಬೇಕು ಹಾಗೂ ಅದನ್ನು ಮಾಡಲು ನಾನೂ ಅಪ್ಪಟನಾದ (ಯಾವ ಮುಖವಾಡವೂ ಇಲ್ಲದ)  ಅನಂತಮೂರ್ತಿಯಾಗಬೇಕು ಎನ್ನುವ ಸತ್ಯ ನುಡಿಯಲು ಹಿಂಜರಿಯುವುದಿಲ್ಲ. ನಿಜಕ್ಕೂ ಅವರ ಆತ್ಮಶೋಧನೆಯ ಈ ಗುಣ ಓದುಗರಿಗೆ ಇಷ್ಟವಾಗುತ್ತದೆ. ಒಟ್ಟಾರೆ ತಮ್ಮ ಒಡನಾಟದ ವ್ಯಾಪ್ತಿಗೆ ಬಂದ ಮಹನೀಯರ ಕುರಿತು ಬರೆಯುವಾಗ ಯಾವ ರಾಗ ದ್ವೇಷಗಳಿಗೂ ಒಳಗಾಗದ ಮತ್ತು ಮುಖ ಸ್ತುತಿಗೂ ಇಳಿಯದ ಲೇಖಕರ ಈ ಪ್ರಜ್ಞಾಪೂರ್ವಕ ನಿಲುವಿನಿಂದಾಗಿ ಬರಹ ಓದುಗನಿಗೆ ಹೆಚ್ಚು ಆಪ್ತವಾಗುತ್ತದೆ.

ಜಾತಿ ಮತ್ತು ಸಾಹಿತ್ಯ


              ಜಾತಿ ವ್ಯವಸ್ಥೆ ಕನ್ನಡ ಸಾಹಿತ್ಯವನ್ನು ಹೇಗೆ ಪ್ರಭಾವಿಸಿದೆ ಎಂದು ಅನಂತಮೂರ್ತಿ ಸಾಹಿತ್ಯದ ವಿಶ್ಲೇಷಣೆಗಿಳಿಯುತ್ತಾರೆ. ಲೇಖಕನೋರ್ವ ತನ್ನ ಜಾತಿಯ ಚೌಕಟ್ಟಿನಿಂದ ಹೊರಬಂದು ಜಗತ್ತಿನ ಆಗುಹೋಗುಗಳಿಗೆ ಸ್ಪಂದಿಸದೇ ಹೋದಲ್ಲಿ ಅಂಥ ಸಾಹಿತ್ಯದಿಂದ ಯಾವ ಬದಲಾವಣೆಯೂ ಸಾಧ್ಯವಿಲ್ಲ ಎನ್ನುವ ಅಭಿಪ್ರಾಯ ಲೇಖಕರದು. ಸಾಹಿತ್ಯವೊಂದು ತಲಸ್ಪರ್ಶಿಯಾಗಿ, ಸೂಕ್ಷ್ಮವಾಗಿ ಭಾರತದ ಮನಸ್ಸನ್ನು ಮುಟ್ಟಿ ಬದಲಿಸಬೇಕಾದ ಕಾರ್ಯ ಕನ್ನಡ ನಾಡಿನಲ್ಲಿ ಸ್ವಲ್ಪಮಟ್ಟಿಗೆ ಈ ಜಾತಿಯ ಗೊಂದಲದಿಂದಾಗಿ ಹಿಂಜರಿಯಿತು ಎಂದೆನ್ನುವ ಲೇಖಕರು ತನ್ನ ಜಾತಿಯವನ ಕೃತಿಯನ್ನು ಮೆಚ್ಚುವುದಾಗಲಿ ಬೇರೆ ಜಾತಿಯವರನ್ನು ಟೀಕಿಸುವುದಾಗಲಿ ಮುಜುಗರದ ವಿಷಯವಾಯಿತು ಎಂದೆನ್ನುತ್ತಾರೆ. ಇಂಥದ್ದೊಂದು ವ್ಯವಸ್ಥೆಯ ಪರಿಣಾಮ ಕನ್ನಡದಲ್ಲಿ ವಸ್ತುನಿಷ್ಠ  ವಿಮರ್ಶೆ ಹಿಮ್ಮೆಟ್ಟಿತು ಮತ್ತು ವ್ಯಕ್ತಿನಿಷ್ಠ ವಿಮರ್ಶೆ ಮುಖ್ಯ ವಾಹಿನಿಗೆ ಬಂತು ಎಂದು ಆತಂಕ ಪಡುವರು. ಜಾತಿಯನ್ನು ಆಧಾರವಾಗಿಟ್ಟುಕೊಂಡು  ಮನಬಂದಂತೆ ಕೃತಿಕಾರನ ಮೇಲೆ ಮಾಡುವ ಆರೋಪಗಳೇ ಕೃತಿ ವಿಮರ್ಶೆ ಎಂಬ ಭ್ರಾಂತಿಯಲ್ಲಿ ಅನೇಕ ತರುಣರು ಬರೆಯಲು ಪ್ರಾರಂಭಿಸಿದ್ದು ಕನ್ನಡ ಸಾಹಿತ್ಯದ ಬಹುದೊಡ್ಡ ದುರಂತಗಳಲ್ಲೊಂದು. ಕೆಲವು ಲೇಖಕರು ಎಷ್ಟೇ ಉದಾರ ಧೋರಣೆಯವರಾದರೂ ಬ್ರಾಹ್ಮಣರೆಂಬ ಕಾರಣಕ್ಕೆ ಪ್ರೋತ್ಸಾಹವನ್ನು ಪಡೆಯಲಾರದೆ ಹೋದರು ಮತ್ತು ಕೆಲವು ಬ್ರಾಹ್ಮಣೇತರ ಲೇಖಕರು ಹುಂಬತನದಿಂದ ತಾವು ಬರೆದುದ್ದಕ್ಕೆಲ್ಲ ಪ್ರೋತ್ಸಾಹ ಪಡೆಯುತ್ತಾ ಕಷ್ಟದ ದಾರಿ ತುಳಿದು ಪಕ್ವವಾಗಬೇಕಾದ ಪ್ರಕ್ರಿಯೆಯಿಂದ ವಂಚಿತರಾದರು. ಇದು ಕನ್ನಡ ಸಾಹಿತ್ಯಕ್ಕಾದ ನಷ್ಟ ಎನ್ನುವ ಪ್ರಜ್ಞೆಯಿಂದ ಅನಂತಮೂರ್ತಿ ಬರೆಯುತ್ತಾರೆ. ಜೊತೆಗೆ ಎದುರಾದ ಇನ್ನೊಂದು ಅಪಾಯವೆಂದರೆ ತಾನು ಜಾತಿವಾದಿಯಲ್ಲವೆಂದು ತೋರಿಸಿಕೊಳ್ಳುವುದಕ್ಕಾಗಿ ಎಷ್ಟೋ ವಿಮರ್ಶಕರು ತಮ್ಮ ಜಾತಿಯವರನ್ನು ತೆಗಳಿ ಬೇರೆಯವರನ್ನು ಹೊಗಳಿ ಬರೆಯಲಾರಂಭಿಸಿದರು. ಸಾಹಿತ್ಯ ಲೋಕದಲ್ಲಿ ಮನೆಮಾಡಿಕೊಂಡಿರುವ ಇಂಥದ್ದೊಂದು ಅನುಮಾನದಿಂದ ಹೊರಬರುವ ಪ್ರಯತ್ನವಾಗಿಯೇ ಅನಂತಮೂರ್ತಿ ಅವರು 'ಬ್ರಾಹ್ಮಣನಾಗಿ ನಾನು' ಎಂದು ಬರೆಯುತ್ತಾರೆ. ಬ್ರಾಹ್ಮಣನಾಗಿ ಹುಟ್ಟಿ ಬೆಳೆದ ಲೇಖಕರಿಗೆ (ಅನಂತಮೂರ್ತಿ) ಬ್ರಾಹ್ಮಣರ ಮನಸ್ಸನ್ನು ನೋಯಿಸುವುದು ಅನಿವಾರ್ಯವೇ ಹೊರತು ಇಷ್ಟದ ಸಂಗತಿಯಾಗಿರಲಿಲ್ಲ. ಸಂಸ್ಕಾರ, ಘಟಶ್ರಾದ್ಧ, ಭಾರತೀಪುರ ಕಥೆಗಳು ಬ್ರಾಹ್ಮಣರನ್ನು ತುಂಬ ನೋಯಿಸಿವೆ ಮತ್ತು ಕೆಲವರಿಗೆ ಕೋಪವನ್ನೂ ಉಂಟುಮಾಡಿವೆ ಎನ್ನುವ ವಾಸ್ತವದ ಅರಿವು ಅವರಿಗಿತ್ತು. ಜೊತೆಗೆ ಬ್ರಾಹ್ಮಣರನ್ನು ಟೀಕಿಸುವುದು ಇದೂ ಒಂದು ಬ್ರಾಹ್ಮಣ ತಂತ್ರ ಎಂದು ಸಂದೇಹದಿಂದ ನೋಡುವ ಬ್ರಾಹ್ಮಣೇತರ ಬುದ್ದಿ ಜೀವಿಗಳು ನಮ್ಮನ್ನು ಸುತ್ತುವರಿದ ಪ್ರಜ್ಞೆ ಹಾಗೂ ಎಚ್ಚರಿಕೆ ಅವರಲ್ಲಿದ್ದವು. ಇಂಥದ್ದೊಂದು ಸಂದೇಹ ಮತ್ತು ಅನುಮಾನಕ್ಕೆ ನಮ್ಮ ಮುಸ್ಲಿಂ ಲೇಖಕರೂ ಒಳಗಾಗುತ್ತಿರುವುದು ಚರ್ಚೆಯಾಗಬೇಕಾದ ಬಹುಮುಖ್ಯ ವಿಷಯಗಳಲ್ಲೊಂದು. ಸ್ವಜಾತಿ ಪ್ರೇಮವಾಗಲಿ ಮತ್ತು ತನ್ನದಲ್ಲದ ಜಾತಿಯನ್ನು ದ್ವೇಷಿಸುವ ಗುಣವಾಗಲಿ ಅನಂತಮೂರ್ತಿ ಅವರಲ್ಲಿ ಇಲ್ಲದೆ ಇದ್ದುದ್ದರಿಂದ ಬೇಂದ್ರೆ, ಮಾಸ್ತಿ, ಅನಕೃ ಅವರಂಥ ಬ್ರಾಹ್ಮಣ ಬರಹಗಾರರಷ್ಟೇ ಕುವೆಂಪು, ದೇವನೂರ ಮಹಾದೇವ, ಚದುರಂಗರಂಥ ಬ್ರಾಹ್ಮಣೇತರ ಲೇಖಕರೂ ಅವರಿಗೆ ಪ್ರಿಯರೂ ಮತ್ತು ಆಪ್ತರೂ ಆಗಿ ಉಳಿಯಲು ಸಾಧ್ಯವಾಯಿತು. ದಾಸರ ಕೀರ್ತನೆಗಳು ಮತ್ತು  ಬಸವಣ್ಣ ಅಲ್ಲಮರ ವಚನಗಳೂ ಅವರ ಓದಿನ ಪ್ರಧಾನ ಆದ್ಯತೆಗಳಾದವು.

ಪಾಶ್ಚಿಮಾತ್ಯ ಸಾಹಿತ್ಯದೊಂದಿಗೆ  ಮುಖಾಮುಖಿ


                  ಕನ್ನಡದ ಕೆಲವು ಬರಹಗಾರರು ಪ್ರಜ್ಞಾಪೂರ್ವಕವಾಗಿಯೇ ಜಗತ್ತಿನ ಸಾಹಿತ್ಯಕ್ಕೆ ಮುಖಾಮುಖಿಯಾಗಿದ್ದು ಕನ್ನಡ ಸಾಹಿತ್ಯದ ಓದುಗರಿಗಾದ ಬಹುದೊಡ್ಡ ಲಾಭವಿದು. ಈ ವಿಷಯದಲ್ಲಿ ಲಂಕೇಶ್, ತೇಜಸ್ವಿ ಅವರಷ್ಟೇ ಅನಂತಮೂರ್ತಿ ಅವರ ಕೊಡುಗೆಯೂ ಅಪಾರವಾಗಿದೆ. ಶಿಕ್ಷಣ ಮತ್ತು ವೃತ್ತಿಯ ನಿಮಿತ್ಯ ಭಾರತದಿಂದ ಒಂದಿಷ್ಟು ಕಾಲ ದೂರ ಉಳಿಯಬೇಕಾಗಿಬಂದ ಕಾರಣ ಇಂಗ್ಲಿಷ್ ಸಾಹಿತ್ಯ ಅನಂತಮೂರ್ತಿ ಅವರನ್ನು ಹೆಚ್ಚು ಪ್ರಭಾವಿಸಿತು. ಈ ಕಾರಣದಿಂದಲೇ ಅನಂತಮೂರ್ತಿ ಅವರ ಲೇಖನಗಳನ್ನು ಓದುವಾಗ ಪಾಶ್ಚಾತ್ಯ ಬರಹಗಾರರು ನಮ್ಮ ಓದಿನ ಅನುಭವಕ್ಕೆ ದಕ್ಕುತ್ತಾರೆ. ಟಾಲ್ ಸ್ಟಾಯ್, ಡಿಡೆರೋ, ಬೋದಿಲೇರ್, ಏಟ್ಸ್, ಬ್ಲೇಕ್, ಲಾರೆನ್ಸ್ ಇವರೆಲ್ಲ ನಮ್ಮದೇ ಭಾಷೆಯವರೆನೋ ಎನ್ನುವಷ್ಟು ನಮಗೆ ಆಪ್ತರಾಗುತ್ತಾರೆ. ಕ್ರಾಂತಿಕಾರಿಯೊಬ್ಬ ತನ್ನ ಸ್ವಭಾವದ ಪ್ರದರ್ಶನರತಿಗೆ ತಾನೇ ಮರುಳಾದಾಗ ಎದುರಾಗಬಹುದಾದ ಅಪಾಯವನ್ನು ಕಾನ್ರಾಡ್ ನ 'ದಿ ಸಿಕ್ರೆಟ್ ಏಜೆಂಟ್'   ಕೃತಿಯ ಮೂಲಕ ತೆರೆದಿಡುವರು. ಸ್ವಕೇಂದ್ರದ ವ್ಯಾಮೋಹಕ್ಕೆ ಸಿಲುಕಿದ ಕ್ರಾಂತಿಕಾರಿಯೊಬ್ಬ ತನ್ನ ಹೆಂಡತಿಯ ತಮ್ಮನನ್ನು ಕ್ರಾಂತಿಯ ಉನ್ಮಾದಕ್ಕೆ ಸಿಲುಕಿಸಿ ಅವನನ್ನು ಸಾಯಿಸುತ್ತಾನೆ. ಹೆಂಡತಿ ಇದನ್ನು ತಿಳಿದೊಡನೆ ಮಾಂಸ ಕೊಯ್ಯುವ ಕತ್ತಿಯಿಂದಲೇ ಗಂಡನನ್ನು ಇರಿದು ಸಾಯಿಸುತ್ತಾಳೆ. ಇಲ್ಲಿ ಕಾನ್ರಾಡ್ ಪೋಲೆಂಡಿನ ಅರಾಜಕತೆಯನ್ನು ದುರುಪಯೋಗಪಡಿಸಿಕೊಂಡು ವಿನಾಶವನ್ನು ಪ್ರೀತಿಸುವ ಕ್ರಾಂತಿಕಾರರು ಹೇಗೆ ಕಿಚ್ಚೆಬ್ಬಿಸುತ್ತಾರೆ ಎನ್ನುವುದನ್ನು ಅನನ್ಯವಾಗಿ ಚಿತ್ರಿಸುತ್ತಾನೆ ಎನ್ನುವಲ್ಲಿ ಅನಂತಮೂರ್ತಿ ಅವರ ಮೆಚ್ಚುಗೆ ವ್ಯಕ್ತವಾಗಿದೆ. ದಾಸ್ತೊವಸ್ಕಿ ಮತ್ತು ಬೋದಿಲೇರ್ ತಮ್ಮ ವೇದನೆ ಮತ್ತು ವ್ಯಾಧಿಯಿಂದಲೇ ಲೋಕ ಕಲ್ಯಾಣ ಸಾಧಿಸಬಲ್ಲಂಥ ಸೃಜನಶೀಲರಾದರು ಎನ್ನುವುದನ್ನು ಅನಂತಮೂರ್ತಿ ಸ್ವಪ್ರದರ್ಶನರತಿಯಿಂದ ಹೊರಬಂದ ಬರಹಗಾರರಿಗೆ ಉದಾಹರಣೆಯಾಗಿ ಈ ಇಬ್ಬರು ಲೇಖಕರನ್ನು ಸ್ಮರಿಸುವರು. ಕ್ರೂರ ರಾಜಕೀಯ ವ್ಯವಸ್ಥೆ ಕಲೆ ಸಾಹಿತ್ಯವನ್ನು ಹೊಸಕಿ ಹಾಕುತ್ತಿರುವ ಘಳಿಗೆ ಅನಂತಮೂರ್ತಿ ಓದುಗರನ್ನು ಬ್ರೆಕ್ಟ್ ಗೆ ಮುಖಾಮುಖಿಯಾಗಿಸುತ್ತಾರೆ. ಮೂವತ್ತರ ದಶಕದ ಕ್ರೂರ ರಾಜಕೀಯ ಸನ್ನಿವೇಶದಲ್ಲಿ ಬ್ರೆಕ್ಟ್ ಹೊಟ್ಟೆಯ ಹಸಿವೇ ಎಲ್ಲವನ್ನೂ ಹೇಳುತ್ತಿರುವಾಗ ಫ್ರೆಂಚ್ ಭಾಷೆ ಏಕೆ ಕಲಿಯಬೇಕು ಎಂದು ಪದ್ಯ ಬರೆಯುತ್ತಾನೆ. ಒಂದು ಹಂತದಲ್ಲಿ ಆಫ್ರಿಕದ ಮಹತ್ವದ ಕಾದಂಬರಿಕಾರ ಚಿನುವಾ ಅಚಿಬೆ ಜೊತೆ ಸಂವಾದಕ್ಕಿಳಿಯುವ ಲೇಖಕರು ಓದುಗರನ್ನು ಅಚಿಬೆಯ ವಿಚಾರಗಳ ಮೂಲಕ ಸ್ವದೇಶಿಯತೆ ಮತ್ತು ಸಾರ್ವತ್ರಿಕತೆ ಕುರಿತು ಚಿಂತಿಸುವಂತೆ ಮಾಡುವರು. ಆತ್ಮದಂಡನೆ ಮತ್ತು ಆತ್ಮತೆಗಳಿಕೆಯಿಂದ ಕೆಲವು ಭಾರತೀಯ ಬರಹಗಾರರು ಪಾಶ್ಚಾತ್ಯರಿಗೆ ಅಪ್ಯಾಯಮಾನವಾಗುತ್ತಿರುವರು (ಇಲ್ಲಿ ಮುಖ್ಯವಾಗಿ ಭಾರತಿಯ ಮೂಲದ ನೈಪಾಲ್ ಹೆಸರು ಪ್ರಸ್ತಾಪವಾಗುತ್ತದೆ) ಎಂದು ಚಿನುವಾ ಅಚಿಬೆ ನಮ್ಮನ್ನು ಎಚ್ಚರಿಸುತ್ತಾರೆ.

ಎದುರಾಗುವ ಗಾಂಧಿ 


                  ಗಾಂಧಿ ನಮ್ಮ ಬರಹಗಾರರನ್ನು ಮತ್ತು ಚಿಂತಕರನ್ನು ಹೆಚ್ಚು ಹೆಚ್ಚು ಪ್ರಭಾವಿಸಿದ ಬಹುದೊಡ್ಡ ದಾರ್ಶನಿಕ. ಕನ್ನಡ ಸಾಹಿತ್ಯದಲ್ಲಿ ಅನಂತಮೂರ್ತಿ ಅವರ ಬರಹಗಳಲ್ಲಿ ಗಾಂಧಿ ಚಿಂತನೆಗಳು ಹೆಚ್ಚು ಪ್ರಾಮುಖ್ಯತೆ ಪಡೆದಿವೆ. ಈ ವಿಷಯವಾಗಿ ನಾವು ನೆನಪಿಸಿಕೊಳ್ಳಬಹುದಾದ ಇನ್ನೋರ್ವ ಬರಹಗಾರರೆಂದರೆ ಅದು ದೇವನೂರ ಮಹಾದೇವ. ಅನಂತಮೂರ್ತಿ ಅವರ ಈ ಕೃತಿಯಲ್ಲಿ ನಮಗೆ ಅವಮಾನದಲ್ಲೂ ಸಂತಸದಿಂದಿರುವ ಗಾಂಧಿ ಎದುರಾಗುತ್ತಾರೆ. ತನ್ನನ್ನು ಜೈಲಿಗೆ ಹಾಕಿದ ಜನರಲ್ ಸ್ಮಟ್ಸಿಗೆ ಚಪ್ಪಲಿ ಹೊಲಿದು ಕೊಟ್ಟ ಗಾಂಧೀಜಿ ತಾನು ಪ್ರೀತಿಸಿದವರನ್ನೂ ಅಳಿಸಬಲ್ಲಷ್ಟು ನಿಷ್ಟುರ. ಅನಂತಮೂರ್ತಿ ಅವರು ಹೇಳುವಂತೆ ರಾಜಕೀಯವಾಗಿ ಗಾಂಧೀಜಿ ಸಾಮ್ರಾಜ್ಯಶಾಹಿಯನ್ನು ಬದುಕಿನ ಬಹುದೊಡ್ಡ ಶತ್ರುವಾಗಿ ಕಂಡರು. ಗಾಂಧೀಜಿ ಸಾಮ್ರಾಜ್ಯಶಾಹಿಯನ್ನು ಎಲ್ಲಿಯವರೆಗೆ ತಿರಸ್ಕರಿಸಬೇಕಾಯಿತೆಂದರೆ ಮಂಡಿಯ ಮೇಲೆ ಒಂದು ತುಂಡು ಪಂಚೆಯನ್ನು ಮಾತ್ರ ಉಡುವಷ್ಟು. ಅವರೊಳಗಿನ ಆ ನಿಗ್ರಹದ ಬಿಗಿಗೆ ವ್ಯವಸ್ಥೆಯ ಆಗ್ರಹದ ಹಂಗಿರಲಿಲ್ಲ, ಕಣ್ಣಿಟ್ಟು ಕಾಯುವ ಪ್ರಭು ಇರಲಿಲ್ಲ. ಸಾಮ್ರಾಜ್ಯಶಾಹಿಯಾಗುವ ಪ್ರಲೋಭನೆಯೇ ಇಲ್ಲವಾಗುವ ವ್ಯವಸ್ಥೆ ಗಾಂಧಿಯದು ಎನ್ನುತ್ತಾರೆ ಅನಂತಮೂರ್ತಿ. ಚಿನುವಾ ಅಚಿಬೆಯೊಂದಿಗಿನ ಸಂದರ್ಶನದಲ್ಲಿ ಗಾಂಧಿ ಮತ್ತೊಮ್ಮೆ ಚೆರ್ಚೆಗೆ ಗ್ರಾಸವಾಗುತ್ತಾರೆ. ಇಲ್ಲಿ ಲೇಖಕರು ಗಾಂಧಿಯ 'ಹಿಂದ್ ಸ್ವರಾಜ್ಯ' ಕೃತಿಯನ್ನು ಕಾರ್ಲ್ ಮಾರ್ಕ್ಸ್ ನ 'ದಾಸ್ ಕ್ಯಾಪಿಟಲ್' ನ ಶ್ರೇಷ್ಠತೆಗೆ ಎತ್ತರಿಸುತ್ತಾರೆ. ಜಾಗತೀಕರಣ ಈ ದೇಶದ ಗುಡಿ ಕೈಗಾರಿಕೆಗಳನ್ನು ನಾಶಗೊಳಿಸುತ್ತಿರುವ ಹೊತ್ತು ಅನಂತಮೂರ್ತಿ ಅವರಿಗೆ ಗಾಂಧೀಜಿ ಮತ್ತೆ ನೆನಪಾಗುತ್ತಾರೆ. 'ಬಹು ಉತ್ಪನ್ನವಲ್ಲ ಬಹು ಜನರಿಂದ ಉತ್ಪನ್ನ' ಎಂಬ ಗಾಂಧಿ ಸೂತ್ರ ಕಂಪ್ಯೂಟರ್ ಟೆಕ್ನಾಲಜಿ ಭ್ರಮೆಯಲ್ಲಿ ಮರೆತು ಹೋಗುವ ಚಿಹ್ನೆಗಳು ಕಾಣಿಸಿಕೊಂಡಿವೆ ಎಂದು ಆತಂಕ ವ್ಯಕ್ತಪಡಿಸುವರು. ಭಾರತದ ರಾಜಕಾರಣ ಭ್ರಷ್ಟಾಚಾರದ ರೂಪ ಪಡೆಯುತ್ತಿರುವಾಗ ನಮಗೆ ಮತ್ತೆ ಗಾಂಧಿ ಎದುರಾಗುತ್ತಾರೆ. ಗಾಂಧೀಜಿಯದು ನೈತಿಕ ಅರಿವಿನಿಂದ ಹುಟ್ಟಿದ ರಾಜಕಾರಣವಾದರೆ ಅವರ ನಂತರದ ಭಾರತದಲ್ಲಿ ರಾಜಕಾರಣವೆಂದರೆ ಆಯಾ ವರ್ಗಗಳ, ಜಾತಿಗಳ ಪ್ರತ್ಯೇಕ ಆಸಕ್ತಿಗಳನ್ನು ಗಿಟ್ಟಿಸಿಕೊಳ್ಳುವ ಪೈಪೋಟಿಯಲ್ಲಿ ಕ್ಷಣಿಕ ಹೊಂದಾಣಿಕೆಯನ್ನು ಸಾಧಿಸಿಕೊಳ್ಳುವ ತಂತ್ರಗಾರಿಕೆಯಾಗಿಬಿಟ್ಟಿದೆ ಎನ್ನುವುದು ಅವರ ಅಭಿಮತ. ಕರ್ನಾಟಕದಲ್ಲಿನ ರೈತ ಚಳವಳಿಯನ್ನು ಗಾಂಧೀಜಿ ಅವರ ಹೋರಾಟದೊಂದಿಗೆ ಹೋಲಿಸಿ ನೋಡುವ ಅನಂತಮೂರ್ತಿ ಅವರು  'ರೈತ ಸಂಘದವರು ಹಳ್ಳಿಯ ಶ್ರೀಮಂತನ ಕ್ರೌರ್ಯವನ್ನು ವಿರೋಧಿಸುವಷ್ಟು ಆಧುನಿಕರಣದ ವಾದಿಗಳಿಂದ ಉಂಟಾಗುವ ಕ್ರೌರ್ಯವನ್ನು ಅರ್ಥಮಾಡಿಕೊಂಡಿಲ್ಲ. ಈ ವಿಷಯದಲ್ಲಿ ಗಾಂಧೀಜಿ ಮಾಡಿದ ಕೆಲಸ ತುಂಬ ಅಪೂರ್ವವಾದದ್ದು. ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಡುವಾಗ ಗಾಂಧೀಜಿ ಏಕಕಾಲದಲ್ಲಿ ಇಡೀ ದೇಶದ ವೈರಿಯಾದ ಬ್ರಿಟಿಷರನ್ನೂ ದೇಶದೊಳಗೇ ದಲಿತರ ಏಳಿಗೆಗೆ ಕಂಟಕಪ್ರಾಯವಾದ ಸವರ್ಣಿಯರ ಮುರ್ಖತನವನ್ನೂ ಒಟ್ಟಾಗಿ ವಿರೋಧಿಸಿದರು. ರೈತಸಂಘ ಇಂಥ ಕೆಲಸ ಮಾಡಬಹುದಿತ್ತು ಆದರೆ ಮಾಡಲಿಲ್ಲ' ಎಂದು ಬರೆಯುತ್ತಾರೆ. ಪ್ರಾಚೀನದಲ್ಲಿ ಯಾವುದು ಉಳಿಯಬೇಕು ಯಾವುದು ಬೇಡ ಎನ್ನುವ ಪ್ರಶ್ನೆ ಲೇಖಕರಿಗೆ ಎದುರಾದಾಗ ಇಲ್ಲಿ ಅವರಿಗೆ ಗಾಂಧೀಜಿ ಬದುಕಿನ ಘಟನೆಯೊಂದು ನೆನಪಾಗುತ್ತದೆ. ಜುಟ್ಟು ಮತ್ತು ಜನಿವಾರ ಎರಡನ್ನೂ ಆಯ್ದುಕೊಳ್ಳಬೇಕಾದ ಸಂದರ್ಭ ಗಾಂಧಿ ಭಾರತೀಯ ಸಂಸ್ಕೃತಿಯ ಜುಟ್ಟನ್ನು ಮಾತ್ರ ಆಯ್ದು ಜನಿವಾರವನ್ನು ತ್ಯಜಿಸುತ್ತಾರೆ. ಹೀಗೆ ಮಾಡುವುದರ ಮೂಲಕ ಗಾಂಧಿ ಸಂಸ್ಕೃತಿಯ ಸಜೀವತೆ  ಇರುವುದು ಇಂಥ ಆಯ್ಕೆಗಳ ನೈತಿಕ ಪ್ರಜ್ಞೆ ನಮ್ಮೆಲ್ಲರಲ್ಲೂ ಕೆಲಸ ಮಾಡುತ್ತಿರುವಾಗ ಎಂದು ತೋರಿಸಿ ಕೊಟ್ಟರು. ಒಟ್ಟಾರೆ ಗಾಂಧಿ ವಿಚಾರಗಳು ಮತ್ತು ಅವರ  ಬದುಕಿನ ಮೌಲ್ಯಗಳು  ನಮ್ಮನ್ನು ಕೈಹಿಡಿದು  ನಡೆಸುವ ಬೆಳಕಿನ ಕಿರಣಗಳೆಂಬ ಚಿಂತನೆ ಅನಂತಮೂರ್ತಿ  ಅವರದು.

                ದೇವನೂರರ ಒಡಲಾಳ, ಶೂದ್ರ ಪತ್ರಿಕೆ, ಗೋಕಾಕ ಚಳವಳಿ, ಅವಸ್ಥೆಯನ್ನು ಸಮರ್ಥಿಸಿಕೊಂಡಿದ್ದು, ಫ್ರಾಂಕ್ ಫರ್ಟ್ ಗೆ ಭೇಟಿ, ಅಮೆರಿಕಾದಲ್ಲಿನ ಕನ್ನಡಿಗರ ಮನಸ್ಥಿತಿ, ದಲಿತ ಸಾಹಿತ್ಯ, ಕನ್ನಡ ಮತ್ತು ವಿಕೇಂದ್ರಿಕರಣ ಇನ್ನು ಹಲವು ಲೇಖನಗಳಲ್ಲಿ ಅನಂತಮೂರ್ತಿ ಅವರ ಚಿಂತನೆಗಳು ನಮ್ಮ ಓದಿಗೆ ದಕ್ಕುತ್ತವೆ. ವಿಮರ್ಶಕ ರಾಜಶೇಖರ ತಮ್ಮ ಒಂದು ಲೇಖನದಲ್ಲಿ ಹೇಳಿದಂತೆ ಅನಂತಮೂರ್ತಿ ಅವರು ತಮ್ಮ ಲೇಖನಗಳಲ್ಲಿ ಎಲ್ಲಿಯೂ ಇದೆ ಕೊನೆಯ ಮಾತು ಎಂಬಂತೆ ಏನೂ ಹೇಳುವುದಿಲ್ಲ. ಕಪ್ಪು-ಬಿಳುಪು, ತಪ್ಪು-ಸರಿ, ಅದು-ಇದು ಎಂದು ಜಗತ್ತಿನ ಬಗ್ಗೆ ಸರಳ ತೀರ್ಮಾನಗಳಿಗೆ ಬರುವುದು, ಪಕ್ಷ ವಹಿಸಿ ಮಾತನಾಡುವುದು ಈ ಸಲೀಸು ನಮೂನೆಗಳು ಅನಂತಮೂರ್ತಿ ಅವರ ಜಾಯಮಾನದಲ್ಲೇ ಇಲ್ಲ. ಒಟ್ಟಾರೆ ಅನಂತಮೂರ್ತಿ ಅವರ ಬರಹಗಳಲ್ಲಿ ಎಲ್ಲವನ್ನೂ  ಕ್ಷಮಿಸಿ ಬಿಡುವ ತಾಯ್ತನದ ಗುಣವಿದೆ. ಇದಕ್ಕೆ ಉದಾಹರಣೆಯಾಗಿ ಅವರ ಒಂದು ಲೇಖನದಲ್ಲಿನ ಈ ಮುಂದಿನ ಸಾಲುಗಳನ್ನು ಗಮನಿಸಿ 'ನಮ್ಮ ದೇಶ ಇನ್ನೂ ಎರಡೂ ಮೂರೂ ಶತಮಾನ ಪ್ರಯತ್ನಿಸಿದರೂ ಮುಟ್ಟಲಾರದ ಸಮೃದ್ಧಿಯನ್ನು ಅನಿವಾಸಿ ಭಾರತಿಯರಾದ ನೀವು ಒಂದು ದಿನದ ಪ್ರಯಾಣದಲ್ಲಿ   ಪಡೆದಿರುವಿರಿ. ಭಾರತದ ಅಸಂಖ್ಯಾತ ಬಡವರು ಈ ಕನಸನ್ನು ಸಹ ಕಾಣಲಾರರು. ಆದರೆ ಇಂಡಿಯಾದ ಭವಿಷ್ಯವನ್ನು ರೂಪಿಸುವವರು ನೀವಲ್ಲ ಅವರು. ಯಾಕೆಂದರೆ ನಿಮ್ಮ ಹಾಗೆ ಅವರು ಶತಮಾನಗಳನ್ನು ಜಿಗಿಯಲಾರರು. ಆದ್ದರಿಂದ ಅವರು ಭಾರತಕ್ಕೆ ಬದ್ಧರು. ಅವರು ತುಳಿಯುವ ಹಾದಿ ಕ್ರಾಂತಿಯಾದರೆ, ಹಿಂಸೆಯಾದರೆ ಅದನ್ನು ಟೀಕಿಸುವ ಹಕ್ಕು ನಿಮಗಿಲ್ಲ. ಈ ಮಾತುಗಳನ್ನು ಬರೆಯುತ್ತಿದ್ದಂತೆ ನನಗೆ ಮುಜುಗರವಾಗುತ್ತಿದೆ. ಅಮೆರಿಕಾದಲ್ಲಿರುವ ಈ ಕನ್ನಡಿಗರಲ್ಲಿ ಹಲವರು ವಾರಾನ್ನದಿಂದ ಓದಿದವರು. ತಮ್ಮಂದಿರ ವಿದ್ಯಾಭ್ಯಾಸ, ತಂಗಿಯರ ಮದುವೆ ಇತ್ಯಾದಿ ಜವಾಬ್ದಾರಿಗಳ ನಿರ್ವಹಣೆಗಾಗಿ ವಲಸೆ ಬಂದವರು. ಇಲ್ಲಿ ನನಗೆ ಯಾರನ್ನೂ ಟೀಕಿಸುವ ಅಧಿಕಾರವಿಲ್ಲ'. ಅನಂತಮೂರ್ತಿ ಅವರ ಈ ಮನಸ್ಥಿತಿಯನ್ನು ಕೆಲವು ವಿಮರ್ಶಕರು ದ್ವಂದ್ವ, ಇಬ್ಬಂದಿತನ, ತೊಳಲಾಟ ಎಂದು ಕರೆಯುವುದುಂಟು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಈ ಇಬ್ಬಂದಿತನದಿಂದ ಓದುಗರನ್ನೂ ದಿಕ್ಕು ತಪ್ಪಿಸುತ್ತಾರೆ ಎಂದು ವಿಮರ್ಶಿಸುತ್ತಾರೆ.  ಆದರೆ ಅನಂತಮೂರ್ತಿ ಅವರ ಮನಸ್ಥಿತಿಯನ್ನು ನಾನು ಹೊಸ ವಿಚಾರಗಳ ಹುಟ್ಟಿಗಾಗಿ ಹಂಬಲಿಸಿದ ಚಿಂತಕನ ಒಳನೋಟಗಳು ಎಂದು ಹೇಳಲು ಇಚ್ಚಿಸುತ್ತೇನೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Monday, February 2, 2015

ಅಜಾತಶತ್ರುವಿಗೆ ಅತ್ಯುನ್ನತ ಗೌರವ




          ಅಟಲ್ ಬಿಹಾರಿ ವಾಜಪೇಯಿ ಅವರಿಗೀಗ ೯೦ ವರ್ಷ ವಯಸ್ಸು. ಅವರು ರಾಜಕಾರಣ ಮತ್ತು ಸಾರ್ವಜನಿಕ ಬದುಕಿನಿಂದ ನಿವೃತ್ತರಾಗಿ ಹತ್ತಿರ ಹತ್ತಿರ ಹತ್ತು ವರ್ಷಗಳು ಕಳೆದು ಹೋಗಿವೆ. ಈ ಹತ್ತು ವರ್ಷಗಳ ಅವಧಿಯಲ್ಲಿ ಭಾರತದ ರಾಜಕಾರಣದಲ್ಲಿ ಅನೇಕ ಬದಲಾವಣೆಗಳಾಗಿವೆ. ಕಳೆದ ಹತ್ತು ವರ್ಷಗಳ ರಾಷ್ಟ್ರದ ರಾಜಕಾರಣದಲ್ಲಿ ಕಾಣಿಸಿಕೊಂಡ ಭ್ರಷ್ಟಾಚಾರ, ಅಪ್ರಾಮಾಣಿಕತೆ, ನಿರಂಕುಶ ಪ್ರಭುತ್ವ, ಅಸಮರ್ಥ ಆಡಳಿತ ಸಾರ್ವಜನಿಕರಲ್ಲಿ ದಿಗಿಲು ಮತ್ತು ಆತಂಕ ಮೂಡಿಸಿವೆ. ರಾಜಕೀಯದ ಪಡಸಾಲೆಯಲ್ಲಿ ಪ್ರಾಮಾಣಿಕತೆ, ದಕ್ಷತೆ, ಮೃದುತ್ವ, ಸೃಜನಶೀಲತೆ, ವೈಚಾರಿಕತೆ, ಸರಳತೆ, ಸಜ್ಜನತೆ ನೋಡಲು ಸಿಗುತ್ತಿಲ್ಲ. ರಾಜಕಾರಣ ಎನ್ನುವುದು ಸೇಡು, ದ್ವೇಷ, ಪ್ರತಿಕಾರ, ಜಿದ್ದಾಜಿದ್ದಿನ ಕಣವಾಗಿ ರೂಪಾಂತರಗೊಂಡಿದೆ. ಇವತ್ತಿನ ಈ ರಾಜಕಾರಣ ನಮ್ಮನ್ನೆಲ್ಲ ಭ್ರಮನಿರಸನ ಗೊಳಿಸುತ್ತ ಅದು ವಿರೂಪ ಮತ್ತು ವಿಕಾರಗೊಳ್ಳುತ್ತಿರುವ ಈ ಸಂದರ್ಭ ರಾಜಕಾರಣಕ್ಕೊಂದು ಹೊಸ ವ್ಯಾಖ್ಯಾನ ನೀಡಿದ ರಾಷ್ಟ್ರ ಕಂಡ ಅಪರೂಪದ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಒಂದು ದಶಕದ ನಂತರ ಮತ್ತೊಮ್ಮೆ ನಮಗೆ ನೆನಪಾಗುತ್ತಿರುವರು. ಬದುಕಿನ ಮುಸ್ಸಂಜೆಯಲ್ಲಿರುವ ತೊಂಬತ್ತರ ಇಳಿವಯಸ್ಸಿನ ಕವಿಮನಸ್ಸಿನ ರಾಜಕಾರಣದ ಈ ಅಜಾತುಶತ್ರುವಿಗೆ ಭಾರತ ಸರ್ಕಾರ ಅತ್ಯುನ್ನತ ಗೌರವ ಎಂದೇ ಪರಿಗಣಿತವಾದ 'ಭಾರತ ರತ್ನ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಎಂದೋ ದೊರೆಯಬೇಕಿದ್ದ ಗೌರವ ಬಹಳ ತಡವಾಗಿ ಸಂದಿದೆ. ದೊರೆತ ಗೌರವಕ್ಕೆ ಸ್ಪಂದಿಸುವ ಮತ್ತು ಪ್ರತಿಕ್ರಿಯಿಸುವ ಸ್ಥಿತಿಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರಿಲ್ಲ. ಸುದೀರ್ಘ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ವಾಜಪೇಯಿ ಅವರ ಶರೀರ ಹತ್ತಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳಿಂದ ಬಳಲಿದೆ. ಭಾರತದ ದೌರ್ಭಾಗ್ಯವೇ ಅಂಥದ್ದು ಏಕೆಂದರೆ ಇಲ್ಲಿ ಸಾಧಕರನ್ನು ಯಾವ ರಾಗ ದ್ವೇಷಗಳಿಗೂ ಒಳಗಾಗದೆ, ಯಾವ ಜಾತಿ-ಧರ್ಮಗಳಿಗೂ ಸೀಮಿತಗೊಳಿಸಿದೆ ನೋಡುವ ವಿಶಾಲ ಮನಸ್ಸಿನ ಕೊರತೆ ಇದೆ. ಅದಕ್ಕೆಂದೇ ದೇಶದ ಈ ಮುತ್ಸದ್ದಿ ರಾಜಕಾರಣಿಗೆ ದೇಶದ ಅತ್ಯುನ್ನತ ಗೌರವ  ಸಿಗಲು ಅವರದೇ ಪಕ್ಷ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವವರೆಗೂ ಕಾಯಬೇಕಾಯಿತು. 

           ರಾಜಕಾರಣವನ್ನು ವಿಶಾಲ ಅರ್ಥದಲ್ಲಿ ನೋಡಿದ ಮತ್ತು ಆ ನೋಟವನ್ನು ಕ್ರಿಯೆಯಾಗಿಸಿಕೊಂಡ ಅಟಲ್ ಬಿಹಾರಿ ವಾಜಪೇಯಿ ಅವರು ಹುಟ್ಟಿದ್ದು ಮಧ್ಯಪ್ರದೇಶದ  ಗ್ವಾಲಿಯರ್ ನಲ್ಲಿ ೧೯೨೪ ರ ಡಿಸೆಂಬರ್ ೨೫ ರಂದು ಅಟಲ್ ಬಿಹಾರಿ ಅವರ ತಂದೆ ಮೂಲತ: ಉತ್ತರ ಪ್ರದೇಶದ ಬಟೀಶ್ವರದವರು. ವೃತ್ತಿ ನಿಮಿತ್ಯ ವಲಸೆ ಬಂದು ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನೆಲೆ  ನಿಂತ ಕೃಷ್ಣ ಬಿಹಾರಿ  ವಾಜಪೇಯಿ ಅವರಿಗೆ ನಾಲ್ಕು ಗಂಡು ಮತ್ತು ಮೂವರು ಹೆಣ್ಣು ಮಕ್ಕಳು. ತಾತನ ಅಗಾಧ   ಪಾಂಡಿತ್ಯ ಮತ್ತು ಅವರಲ್ಲಿನ ಸಂಸ್ಕಾರ ಬಾಲ್ಯದಲ್ಲೇ ಅಟಲ್ ಬಿಹಾರಿ ವಾಜಪೇಯಿ ಅವರ ಮೇಲೆ ಗಾಢ ಪ್ರಭಾವ ಬೀರಿದವು. ಮನೆಯಲ್ಲಿ ಪಠಿಸುತ್ತಿದ್ದ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಬದುಕನ್ನು ಪ್ರಾಮಾಣಿಕತೆಯ ನೆಲೆಯಲ್ಲಿ ರೂಪಿಸಿಕೊಳ್ಳಲು ನೆರವಾದವು.  

             ವಿದ್ಯಾರ್ಥಿ ದೆಸೆಯಲ್ಲಿ ಹಿಂದಿ, ಇಂಗ್ಲಿಷ್, ಸಂಸ್ಕೃತ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದ ವಾಜಪೇಯಿ ಅವರು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಮತ್ತು ಕಾನೂನು ಪದವಿಯನ್ನು ಪಡೆದರು. ಅವರು ವಿದ್ಯಾರ್ಥಿಯಾಗಿದ್ದ ಸಂದರ್ಭ ಭಾರತದ ಸ್ವಾತಂತ್ರ್ಯ ಚಳುವಳಿ ಅತ್ಯಂತ ಪ್ರಖರವಾಗಿದ್ದ ದಿನಗಳವು. ಗಾಂಧೀಜಿ  ಕರೆಗೆ ಓಗೊಟ್ಟು ಚಳುವಳಿಗೆ  ಧುಮುಕಿದ ವಾಜಪೇಯಿ ಅವರು ೧೯೪೨ ರಲ್ಲಿ ಸೆರೆಮನೆ ವಾಸವನ್ನು ಅನುಭವಿಸ ಬೇಕಾಯಿತು. ಬಾಲ್ಯದಿಂದಲೇ ರಾಷ್ಟ್ರ ಭಕ್ತಿಯನ್ನು ಮೈಗೂಡಿಸಿಕೊಂಡಿದ್ದ ಪರಿಣಾಮ ತಮ್ಮ ಬದುಕನ್ನೇ ರಾಷ್ಟ್ರ ಸೇವೆಗಾಗಿ ಮುಡುಪಾಗಿಟ್ಟರು. ತಾರುಣ್ಯದ ದಿನಗಳಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು  ಸೇರಿ ವೈಯಕ್ತಿಕ ಬದುಕಿನ ಮಹತ್ವಾಕಾಂಕ್ಷೆಯನ್ನೆಲ್ಲ ಬದಿಗೆ ಸರಿಸಿ ರಾಷ್ಟ್ರದ ಪ್ರಗತಿಗಾಗಿ ತಮ್ಮ ಬದುಕನ್ನೇ ಧಾರೆ ಎರೆದರು.      

            ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರತಿ ಚಟುವಟಿಕೆಯಲ್ಲಿ ವಾಜಪೇಯಿ ಅವರದು ಸಕ್ರಿಯವಾದ ಪಾತ್ರ. ಭಾರತ ಸ್ವಾತಂತ್ರ್ಯಾ ನಂತರ ಅಖಂಡ ಹಿಂದೂಸ್ತಾನ ಒಡೆದು ಇಬ್ಭಾಗವಾಗಿತ್ತು. ಹಿಂದೂ ಮುಸ್ಲಿಂ ಸಂಘರ್ಷದಿಂದ ದೇಶದ ಏಕತೆಗೆ ಗಂಡಾಂತರ ಬಂದೊದಗಿತ್ತು. ಇಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ರಾಷ್ಟ್ರ ಧರ್ಮ ಪತ್ರಿಕೆಯ ಸಂಪಾದಕರಾಗಿ ಅಟಲ್ ಬಿಹಾರಿ ವಾಜಪೇಯಿ ಮೌಲಿಕ ಲೇಖನಗಳನ್ನು ಪ್ರಕಟಿಸಿ ಆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿದರು. ಪಾಂಚಜನ್ಯ, ಕರ್ಮಯೋಗಿ, ಸ್ವದೇಶ, ವೀರ ಅರ್ಜುನ ಪತ್ರಿಕೆಗಳು ಸಹ ಅವರ ಸಂಪಾದಕತ್ವದಲ್ಲಿ ರಾಷ್ಟ್ರ ಪ್ರೇಮವನ್ನು ಜಾಗೃತಗೊಳಿಸುವ ಪತ್ರಿಕೆಗಳಾಗಿ ರೂಪುಗೊಂಡವು. ಪತ್ರಿಕೋದ್ಯಮದಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದ ಸಂದರ್ಭದಲ್ಲೇ ಅಟಲ್ ಬಿಹಾರಿ ವಾಜಪೇಯಿ ಅವರ ಬದುಕು ಬೇರೊಂದು ಮಗ್ಗಲಿಗೆ ಹೊರಳಿಕೊಂಡಿತು. 


ರಾಜಕೀಯ ಪ್ರವೇಶ 


             ಭಾರತದ ರಾಜಕಾರಣದ ಏನೆಲ್ಲಾ ದೌರ್ಭಾಗ್ಯಗಳ ನಡುವೆಯೂ ಇಲ್ಲಿ ವಾಕ್ ಮತ್ತು ಪ್ರತಿರೋಧದ ಸ್ವಾತಂತ್ರ್ಯ ನೀಡಿರುವುದು ಅದು ಪ್ರಜಾಪ್ರಭುತ್ವದ ಹೆಗ್ಗಳಿಕೆಯೂ ಹೌದು. ಭಾರತದ ಸ್ವಾತಂತ್ರ್ಯದ ಪೂರ್ವದಿಂದಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನೊಂದಿಗೆ ಭಿನ್ನಾಭಿಪ್ರಾಯದ ನೆಲೆಯಲ್ಲೇ ಸಂಘರ್ಷಣೆಗಿಳಿಯುತ್ತಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ವಾತಂತ್ರ್ಯಾ ನಂತರವೂ ತನ್ನ ವೈಚಾರಿಕ ಸಂಘರ್ಷವನ್ನು ಮುಂದುವರೆಸಿತು. ತನ್ನ ಹೋರಾಟವನ್ನು ಮತ್ತಷ್ಟು ಪ್ರಖರಗೊಳಿಸಲು ಸಂಘಕ್ಕೆ ರಾಜಕೀಯ ಅಸ್ತಿತ್ವದ ಅನಿವಾರ್ಯತೆ ಎದುರಾಯಿತು. ಅಂಥದ್ದೊಂದು ಅನಿವಾರ್ಯತೆಯ ಪರಿಣಾಮ ೧೯೫೧ ರಲ್ಲಿ ಭಾರತಿಯ ಜನಸಂಘ ಉದಯವಾಯಿತು. ಜನಸಂಘದ ಉದಯದಿಂದ ಅದರ ಜೊತೆಗಿದ್ದ ವಾಜಪೇಯಿ ಅದೇ ಪಕ್ಷವನ್ನು ಅಧಿಕಾರದ ಗದ್ದುಗೆಗೇರಿಸುವವರೆಗೂ ವಿಶ್ರಮಿಸಲಿಲ್ಲ. ೧೯೫೫ ರಲ್ಲಿ ಲೋಕಸಭೆಗೆ ನಡೆದ ಉಪಚುನಾವಣೆಯಲ್ಲಿ ಲಖನೌ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡ ವಾಜಪೇಯಿ ೧೯೫೭ ರಲ್ಲಿ ನಡೆದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಬಲರಾಮಪುರ ಕ್ಷೇತ್ರದಿಂದ ಸ್ಪರ್ಧಿಸಿ ಲೋಕಸಭೆಯನ್ನು ಪ್ರವೇಶಿಸಿದರು. ಪ್ರಥಮ ಅವಧಿಯಲ್ಲೇ ತಮ್ಮ ವಿಶ್ಲೇಷಣಾತ್ಮಕ ಮತ್ತು ತರ್ಕಪೂರ್ಣ ವಿಚಾರ ಹಾಗೂ ಮಾತಿನ ಓಘದಿಂದ ಪ್ರಧಾನಿ ನೆಹರು ಅವರ ಗಮನ ಸೆಳೆದು ಅವರಿಂದ 'ಮುಂದೊಂದು ದಿನ ದೇಶದ ಪ್ರಧಾನಿಯಾಗುವ ಎಲ್ಲ ಅರ್ಹತೆಗಳು ಈ ಯುವಕನಿಗಿವೆ' ಎಂದು ಹೊಗಳಿಸಿಕೊಂಡರು. 

          ಇವತ್ತಿನ ಅನೇಕ ತರುಣ ಪೀಳಿಗೆಗೆ ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದೊಮ್ಮೆ ವಿದೇಶಾಂಗ ಸಚಿವರಾಗಿದ್ದರು ಎನ್ನುವ ಸಂಗತಿ ಗೊತ್ತಿರಲಿಕ್ಕಿಲ್ಲ. ೧೯೭೫ ರ ತುರ್ತು ಪರಿಸ್ಥಿತಿ ಭಾರತದ ರಾಜಕೀಯದಲ್ಲಿ ಮಹತ್ವಪೂರ್ಣ ಬದಲಾವಣೆಗೆ ಕಾರಣವಾಯಿತು. ತುರ್ತುಪರಿಸ್ಥಿತಿಯ ನಂತರ ೧೯೭೭ ರಲ್ಲಿ ನಡೆದ ಚುನಾವಣೆಯಲ್ಲಿ ಮೂರು ದಶಕಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಪರಾಭವಗೊಂಡು ಪ್ರಥಮ ಬಾರಿಗೆ ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಅಂದಿನ ಆ ಸರ್ಕಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಿದೇಶಾಂಗ ಸಚಿವರಾಗಿ ಪದಗ್ರಹಣ ಮಾಡಿದರು. 

            ವಾಜಪೇಯಿ ಅವರು ವಿದೇಶಾಂಗ ಸಚಿವರಾಗಿದ್ದ ಆ  ಅವಧಿ ಭಾರತದ ರಾಜಕೀಯ ಇತಿಹಾಸದಲ್ಲಿ ಸುವರ್ಣ ಯುಗವೆಂದೇ ಬನ್ನಿಸಲ್ಪಟ್ಟಿದೆ. ವಿದೇಶಾಂಗ ಸಚಿವರಾಗಿ ಅವರು ತಳೆದ ನಿಲುವು ಮತ್ತು ಇತರ ರಾಷ್ಟ್ರಗಳೊಂದಿಗಿನ ಸಂಬಂಧ ಸುಧಾರಣೆಗಾಗಿ ಮಾಡಿದ ಪ್ರಯತ್ನ ತುಂಬ ಅಪರೂಪದ್ದು. ನೆರೆಯ ರಾಷ್ಟ್ರಗಳಾದ ಚೀನಾ, ನೇಪಾಳ, ಪಾಕಿಸ್ತಾನದೊಂದಿಗಿನ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ತಮ್ಮ ರಾಜತಾಂತ್ರಿಕ ನೈಪುಣ್ಯವನ್ನು ಮೆರೆದ ವಾಜಪೇಯಿ ಹಲವಾರು ದೀರ್ಘಕಾಲಿಕ ಸಮಸ್ಯೆಗಳು    ಇತ್ಯರ್ಥಗೊಳ್ಳಲು ಕಾರಣರಾದರು. ವಿದೇಶಾಂಗ ಸಚಿವರಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿ ಭಾಷೆಯಲ್ಲಿ ಮಾತನಾಡಿದ ಹೆಗ್ಗಳಿಕೆ ಅವರದು. ತುರ್ತುಪರಿಸ್ಥಿತಿಯಂತಹ ಕರಾಳ  ನೆನಪಿನಿಂದ  ಭಾರತವನ್ನು  ಹೊರತರುವುದು  ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹತೆಯನ್ನು ಎತ್ತಿ ಹಿಡಿಯುವುದು ವಿದೇಶಾಂಗ  ಸಚಿವರಾಗಿ ವಾಜಪೇಯಿ  ಅವರ  ಮುಂದೆ ಬಹುದೊಡ್ಡ ಸವಾಲುಗಳಿದ್ದವು.  ಆ ಎಲ್ಲ ಜವಾಬ್ದಾರಿಗಳನ್ನು ಅವರು ಅತ್ಯಂತ ಆತ್ಮವಿಶ್ವಾಸ ಮತ್ತು   ದಕ್ಷತೆಯಿಂದ  ನಿರ್ವಹಿಸಿದರು.     

            ವಿದೇಶಾಂಗ ಸಚಿವರಾಗಿ ಭಾರತಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಮಹತ್ವದ ಸ್ಥಾನ ಮತ್ತು ಮನ್ನಣೆ ತಂದುಕೊಡಬೇಕೆನ್ನುವ ವಾಜಪೇಯಿ ಅವರ ಹಂಬಲ ಸರ್ಕಾರದ ಪತನದ ಪರಿಣಾಮ ಇಡೇರಲಿಲ್ಲ. ಜನತಾ ಪಕ್ಷದೊಳಗಿನ ನಾಯಕರ ಅಧಿಕಾರದ ಆಸೆ ಹಾಗೂ ಒಳಜಗಳ ಪರಿಣಾಮ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಸರ್ಕಾರ ಬಹುಬೇಗನೆ ಪತನಗೊಂಡಿತು. ಜನತಾ ಪಕ್ಷದವರ ಅಧಿಕಾರದ ಲಾಲಸೆಯಿಂದ ಬೇಸತ್ತು ಅವರೊಂದಿಗೆ ಸರ್ಕಾರ ರಚನೆಯಲ್ಲಿ ಕೈಜೋಡಿಸಿದ್ದ ಭಾರತೀಯ ಜನಸಂಘದ ಸದಸ್ಯರು ಮತ್ತೆ ತಮ್ಮ ಅಸ್ಮಿತೆಯ ಹುಡುಕಾಟದಲ್ಲಿ ತೊಡಗಿದರು. ಅಂಥದ್ದೊಂದು ಹುಡುಕಾಟದ ಪರಿಣಾಮ ೧೯೮೦ ರಲ್ಲಿ ಭಾರತೀಯ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದು ಅಟಲ್ ಬಿಹಾರಿ ವಾಜಪೇಯಿ ಆ ಪಕ್ಷದ ಪ್ರಥಮ ಅಧ್ಯಕ್ಷರಾದರು. ೧೯೮೦ ರಲ್ಲಿ ವಾಜಪೇಯಿ ಅವರ ಸಾರಥ್ಯದಲ್ಲಿ ಚುನಾವಣೆಯನ್ನು ಎದುರಿಸಿದ ಪಕ್ಷ ೧೪ ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ ೧೯೮೪ ರಲ್ಲಿ ಪಕ್ಷಕ್ಕೆ ದೊರೆತಿದ್ದು ಕೇವಲ ಎರಡು ಸ್ಥಾನಗಳು. ಇಂಥ ಶೋಚನಿಯ ಸ್ಥಿತಿಯಲ್ಲಿದ್ದ ಪಕ್ಷ ಮುಂದೊಂದು ದಿನ ವಾಜಪೇಯಿ ಅವರ ಹೋರಾಟ ಮತ್ತು ನಿರಂತರ ಪ್ರಯತ್ನದಿಂದ ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಏರಬಹುದೆನ್ನುವ ಕಲ್ಪನೆಯೇ ಯಾರಿಗೂ ಇರಲಿಲ್ಲ. ವಿಪಕ್ಷದಲ್ಲಿದ್ದುಕೊಂಡೇ ದೇಶದ ಪ್ರಗತಿಯ ಬಗ್ಗೆ ಚಿಂತಿಸಿದ, ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಿದ, ಸರ್ಕಾರದ ಉತ್ತಮ ಕೆಲಸಗಳಿಗೆ ಬೆನ್ನುತಟ್ಟಿದ ಜೊತೆಗೆ ಕರ್ತವ್ಯ ಲೋಪವನ್ನು ಎತ್ತಿತೋರಿಸಿದ ವಾಜಪೇಯಿ ತಮ್ಮ ಸುದೀರ್ಘ ರಾಜಕೀಯ ಅನುಭವದಿಂದ ತಮ್ಮ ಪಕ್ಷವನ್ನು ೧೯೯೬ ರಲ್ಲಿ ಸರ್ಕಾರ ರಚಿಸುವ ಹಂತಕ್ಕೆ ತಂದು ನಿಲ್ಲಿಸಿದರು. 


ಪ್ರಧಾನ ಮಂತ್ರಿಯಾಗಿ ವಾಜಪೇಯಿ 


            ೧೯೯೬ ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಪ್ರಥಮ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಸರ್ಕಾರ ರಚನೆಗೆ ಸ್ಪಷ್ಟ ಬಹುಮತವಿಲ್ಲದಿದ್ದರೂ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪರಿಣಾಮ ರಾಷ್ಟ್ರಪತಿಗಳು ವಾಜಪೇಯಿ ಅವರನ್ನು ಸರ್ಕಾರ ರಚನೆಗೆ ಆಹ್ವಾನಿಸಿದರು. ಬಹುಮತದ ಕೊರತೆಯ ನಡುವೆಯೂ ವಾಜಪೇಯಿ ಪ್ರಧಾನ ಮಂತ್ರಿಯಾದರು. ಆದರೆ ವಾಜಪೇಯಿ ಮತ್ತು ಅವರ ಪಕ್ಷವನ್ನು ಅಧಿಕಾರದಿಂದ ಹೊರಗಿಡಬೇಕೆನ್ನುವ ಪೂರ್ವನಿರ್ಧಾರಿತ ಹುನ್ನಾರದಿಂದ ಯಾವ ಪಕ್ಷವೂ ಅವರನ್ನು ಬೆಂಬಲಿಸಲು ಮುಂದೆ ಬರಲಿಲ್ಲ. ವಿರೋಧ ಪಕ್ಷಗಳ ಹುನ್ನಾರದ ಮುನ್ಸೂಚನೆ ಅರಿತ ವಾಜಪೇಯಿ ಲೋಕಸಭೆಯಲ್ಲಿ ವಿಶ್ವಾಸ ಮತ ಚರ್ಚೆಗೆ ಮೊದಲೇ ರಾಷ್ಟ್ರಪತಿಗಳಿಗೆ ರಾಜಿನಾಮೆ ಸಲ್ಲಿಸಿದರು. ಆ ದಿನ ಪಾರ್ಲಿಮೆಂಟಿನಲ್ಲಿ ವಾಜಪೇಯಿ ಅವರು ಮಾಡಿದ ಭಾಷಣ ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ಜನಾದೇಶ, ಬಹುಮತ, ಸಮ್ಮಿಶ್ರ ಸರ್ಕಾರದ ಅಗತ್ಯ, ಆಳುವ ಪಕ್ಷ ಹಾಗೂ ವಿಪಕ್ಷಗಳು ಜೊತೆಗೂಡಿ ಕೆಲಸ ಮಾಡಬೇಕಾದ ಅನಿವಾರ್ಯತೆ, ಚುನಾವಣೆಯಲ್ಲಿ ಆಗಬೇಕಾದ ಸುಧಾರಣೆ, ಪಕ್ಷಗಳನ್ನು ಒಡೆದು ಆಳುವ ಅನೈತಿಕತೆ ಹೀಗೆ ರಾಜಕಾರಣದ ವಿಶ್ಲೇಷಣಾತ್ಮಕ ಚರ್ಚೆಗಿಳಿದ ವಾಜಪೇಯಿ ಆತ್ಮಮಂಥನದ ಅಗತ್ಯವನ್ನು ಮನಗಾಣಿಸಿಕೊಟ್ಟರು. ಅಧಿಕಾರಕ್ಕೇರಿದ ಕೇವಲ ೧೩ ದಿನಗಳಲ್ಲಿ ಅವರ ಸರ್ಕಾರ ರಾಜಕಾರಣಿಗಳ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗಿ ಪತನಗೊಂಡಿತು. ಅಟಲ್ ಬಿಹಾರಿ ವಾಜಪೇಯಿ ಅವರ ಮಾತಿನ ಓಘ ಮತ್ತು ನಿರ್ಧಾರಕ್ಕೆ ಅಭೂತಪೂರ್ವ ಬೆಂಬಲ ದೊರೆಯಿತು. 'ಸಂಸತ್ತಿನ ಬಲಾಬಲ ಪರೀಕ್ಷೆಯಲ್ಲಿ ವಾಜಪೇಯಿ ಸೋತಿರಬಹುದು ಆದರೆ ಮತದಾರರ ಹೃದಯ ಗೆಲ್ಲುವಲ್ಲಿ ಅವರು ಯಶಸ್ವಿಯಾಗಿರುವರು. ವಾಜಪೇಯಿ ವೈಫಲ್ಯವನ್ನೇ ಗೆಲುವನ್ನಾಗಿಸಿಕೊಂಡ ದುರಂತ ನಾಯಕ' ಎಂದು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಲೇಖನ ಪ್ರಕಟಿಸಿತು. 'ಸಂಖ್ಯಾ ಬಲದಲ್ಲಿ ಸಮರ್ಥ ವ್ಯಕ್ತಿಯೊಬ್ಬ ವಿಫಲವಾಗಿದ್ದು ದುರ್ದೈವದ ಸಂಗತಿ' ಎಂದು ಫ್ರೀ ಪ್ರೆಸ್ ಪತ್ರಿಕೆ ಬಣ್ಣಿಸಿತು. 'ವಾಜಪೇಯಿ ಸರ್ಕಾರದ ನಿರ್ಗಮನ ಬಿಜೆಪಿಯ ಅತ್ಯುತ್ಕೃಷ್ಟ ಘಳಿಗೆ. ಜನರಿಗೆ ಈಗ ತಾವು ಎಂಥ ಧೀಮಂತ ನಾಯಕನನ್ನು ಕಳೆದುಕೊಂಡಿದ್ದೇವೆ ಎನ್ನುವ ಅರಿವಾಗಿದೆ' ಎಂದು ಅಡ್ವಾಣಿ ಪ್ರತಿಕ್ರಿಯಿಸಿದರು. 

         ೧೯೯೮ ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಮತ್ತೊಮ್ಮೆ ಜನಾದೇಶ ದೊರೆತು ಅಟಲ್ ಬಿಹಾರಿ ವಾಜಪೇಯಿ ಎರಡನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾದರು. ದುರಾದೃಷ್ಟಕ್ಕೆ ಪ್ರಾದೇಶಿಕ ಪಕ್ಷವೊಂದರ ವೈಯಕ್ತಿಕ ಹಿತಾಸಕ್ತಿಗೆ ಬಲಿಯಾಗಿ ಸರ್ಕಾರ ಹದಿಮೂರು ತಿಂಗಳುಗಳಲ್ಲೇ ಬಹುಮತ ಕಳೆದುಕೊಂಡಿತು. ನಂತರ ೧೯೯೯ ರಲ್ಲಿ ನಡೆದ ಚುನಾವಣೆಯಲ್ಲಿ ಪಕ್ಷ   ಮತ್ತೊಮ್ಮೆ ಬಹುಮತ ಪಡೆದು ವಾಜಪೇಯಿ ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರದ ಪೂರ್ಣಾವಧಿಯನ್ನು ಪೂರೈಸಿದರು. ಪ್ರಧಾನ ಮಂತ್ರಿಯಾಗಿ ವಾಜಪೇಯಿ ಅವರದು ಅನನ್ಯ ಸಾಧನೆ. ಪೊಖ್ರಾನ್ ಅಣ್ವಸ್ತ್ರ ಸ್ಫೋಟ, ಲಾಹೋರ್   ಶೃಂಗ ಸಭೆ, ಕಾರ್ಗಿಲ್ ಯುದ್ಧದಲ್ಲಿ ಭಾರತದ ಜಯಭೇರಿ, ರಾಷ್ಟ್ರೀಯ ಹೆದ್ದಾರಿ ಯೋಜನೆ, ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಸರ್ವಶಿಕ್ಷಾ ಅಭಿಯಾನ, ಟೆಲಿಕಾಮ್- ಐಟಿ ಬೆಳವಣಿಗೆ, ಪಾಕಿಸ್ತಾನಕ್ಕೆ ಬಸ್ ಸಂಚಾರ ಈ ಬೆಳವಣಿಗೆಗಳು ವಾಜಪೇಯಿ ಅವರ ಸಾಧನೆಯ ಕೆಲವು ಮೈಲಿಗಲ್ಲುಗಳು. 


ಅಜಾತಶತ್ರು 


        ದ್ವೇಷ ಮತ್ತು ಸೇಡಿನ ರಾಜಕಾರಣ ಭಾರತದ ರಾಜಕೀಯ ಕ್ಷೇತ್ರವನ್ನು ಕಲುಷಿತಗೊಳಿಸುತ್ತಿರುವ ಈ ಘಳಿಗೆ ವಾಜಪೇಯಿ ತಮ್ಮ ನಿಷ್ಕಳಂಕ ಹಾಗೂ ದ್ವೇಷ ರಹಿತ ರಾಜಕಾರಣದಿಂದ ನಮಗೆ ಹೆಚ್ಚು ಆಪ್ತರಾಗುತ್ತಾರೆ. 'ರಾಜಕೀಯದಲ್ಲಿ ವಿರೋಧವಿದೆ ಆದರೆ ವಿರೋಧಿಗಳಿರುವುದಿಲ್ಲ' ಎನ್ನುವುದು ವಾಜಪೇಯಿ ಅವರ ಅಚಲ  ನಂಬಿಕೆ. ತಮ್ಮ ಸುದೀರ್ಘ ಐದು ದಶಕಗಳ ರಾಜಕೀಯದ ಬದುಕಿನಲ್ಲಿ ಅವರೆಂದೂ ಯಾವ ರಾಜಕೀಯ ನಾಯಕರನ್ನೂ ದ್ವೇಷಿಸಿದವರಲ್ಲ. ತಮ್ಮ ವಿರೋಧಿಗಳು ಉತ್ತಮ ಕೆಲಸ ಮಾಡಿದಾಗ ಯಾವ ಅಸೂಯೆಗೂ  ಒಳಗಾಗದೆ ಹೊಗಳಿದ ಅನೇಕ  ಉದಾಹರಣೆಗಳಿವೆ. ಉತ್ತಮ ಆಡಳಿತಗಾರರಾಗಿ ವಾಜಪೇಯಿ ಅವರಿಗೆ ಜವಾಹರಲಾಲ ನೆಹರು ಎಂದಿಗೂ ಆದರ್ಶ. ೧೯೭೧ ರಲ್ಲಿ ಪಾಕಿಸ್ತಾನದೊಂದಿಗಿನ ವಿಜಯದ ಬಳಿಕ ಇಂದಿರಾ ಗಾಂಧಿಯನ್ನು ಮುಕ್ತಕಂಠದಿಂದ ಶ್ಲಾಘಿಸಲು ಅವರು ಮರೆಯಲಿಲ್ಲ. ಪಂಡಿತ ನೆಹರು ಅವರು ಸಂಸತ್ತಿನಲ್ಲಿ ಅಳಿಸಲಾಗದ ಗುರುತನ್ನು ಬಿಟ್ಟು ಹೋಗಿರುವರು ಎಂದು ಹೊಗಳುವ ವಾಜಪೇಯಿ ಲಾಲಬಹಾದ್ದೂರ ಶಾಸ್ತ್ರಿ ನೆಹರು ಅವರ ಸಮರ್ಥ ಉತ್ತಾರಾಧಿಕಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮೊರಾರ್ಜಿ ದೇಸಾಯಿ ಅವರು ಕೆಲವು ಅಚಲ ನಂಬಿಕೆ, ನಿಶ್ಚಿತ ಅಭಿಪ್ರಾಯ ಹೊಂದಿದ್ದರು ಎಂದು ವಿಶ್ಲೇಷಿಸುವುದರೊಂದಿಗೆ  ರಾಜೀವ ಗಾಂಧಿ ಅವರಲ್ಲಿ  ಬೇರೆಯವರ ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳುವ ಗುಣವಿತ್ತು ಎಂದು ಹೇಳಲು ಹಿಂಜರಿಯುವುದಿಲ್ಲ. ನರಸಿಂಹರಾವ ದೇಶದ ಆರ್ಥಿಕ ಸುಧಾರಣೆಗೆ ಹೊಸ ದಿಕ್ಕನ್ನು ತೋರಿಸುವ ಮಹಾನ್ ಧೈರ್ಯವನ್ನು ಪ್ರದರ್ಶಿಸಿದರು ಎಂದು ವಿರೋಧ  ಪಕ್ಷದಲ್ಲಿದ್ದೂ ಹೊಗಳುವ ಔದಾರ್ಯತೆಯನ್ನು ಮೆರೆಯುವರು. ರಾಜಕಾರಣದ ಸೋಲು, ಗೆಲುವು ಮತ್ತು ಅಧಿಕಾರದ ಅಸ್ಥಿರತೆಯ ನಡುವೆಯೂ ವಾಜಪೇಯಿ ತಮ್ಮ ಸಮಚಿತ್ತದ ಹಾಗೂ ವಿಶಾಲ  ಮನೋಭಾವದಿಂದ ರಾಜಕೀಯದಲ್ಲಿ ಅಜಾತಶತ್ರು ಎನ್ನುವ ಗೌರವಕ್ಕೆ ಪಾತ್ರರಾಗಿರುವರು. 


ಅವರೊಳಗಿನ ಕವಿ 


        ಅಟಲ್ ಬಿಹಾರಿ ವಾಜಪೇಯಿ ಕವಿ  ಮನಸ್ಸಿನ  ಮೃದು ಹೃದಯದ  ರಾಜಕಾರಣಿ. ರಾಜಕಾರಣದ ಅವಕಾಶವಾದಿತನದ ನಡುವೆಯೂ ಅವರು ತಮ್ಮ ವ್ಯಕ್ತಿತ್ವವನ್ನು ಹಸನಾಗಿ ರೂಪಿಸಿಕೊಂಡಿರಲು ಸಾಧ್ಯವಾಗಿದ್ದು ಅವರೊಳಗಿನ ಬರವಣಿಗೆಯ ಸೃಜನಶೀಲತೆಯಿಂದ. ಇಕ್ಕೀಸ್ ಕವಿತಾಯೇಂ, ಕ್ಯಾ ಖೋಯಾ ಕ್ಯಾ ಪಾಯಾ, ಮೇರಿ ಇಕ್ಯಾವನ್ ಕವಿತಾಯೇಂ, ಶ್ರೇಷ್ಠ ಕವಿತಾ, ನಯೀ ದಿಶಾ, ಸಂವೇದನಾ ಇವು ವಾಜಪೇಯಿ ಅವರ ಕೆಲವು ಪ್ರಮುಖ ಕವನ ಸಂಗ್ರಹಗಳು. ತುರ್ತುಪರಿಸ್ಥಿತಿಯ ಸಂದರ್ಭ ಸೆರೆವಾಸದ ಸಮಯ ತಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಂಡಿದ್ದು ಕವಿತೆಗಳನ್ನು ಬರೆಯುವುದರ ಮೂಲಕ. ಅದಕ್ಕೆಂದೇ ರಾಜಕಾರಣಿಗಿಂತ ಅವರೊಳಗಿನ ಕವಿಯೇ ವಾಜಪೇಯಿ ಅವರಿಗೆ ಹೆಚ್ಚು ಆಪ್ತ. ಈ ಭಾವನಾಜೀವಿಯ ಕವಿತೆಗಳಲ್ಲಿ ಬದುಕಿನ ದಟ್ಟ ಅನುಭವವಿದೆ. ಅವರ  ಕೆಲವೊಂದು  ಕವಿತೆಗಳಲ್ಲಿ  ರಾಷ್ಟ್ರಪ್ರೇಮವೂ ಅನಾವರಣ ಗೊಂಡಿದೆ. ಹದಿಮೂರು ದಿನಗಳಲ್ಲೇ ಅಧಿಕಾರ ಕೈಯಿಂದ ಜಾರಿದಾಗ, ಹದಿಮೂರು ತಿಂಗಳುಗಳಲ್ಲೇ ಅಧಿಕಾರದಿಂದ  ಕೆಳಗಿಳಿದಾಗ, ಉತ್ತಮ ಆಡಳಿತದ ನಂತರವೂ ಜನಾದೇಶ ವಿರುದ್ಧವಾದಾಗ, ಸಕ್ರಿಯ ರಾಜಕಾರಣದಿಂದ ನಿವೃತ್ತರಾದಾಗ ಈ ಎಲ್ಲ ದ್ವಂದ್ವ ಹಾಗೂ ಅನಿಶ್ಚಿತತೆಯ ನಡುವೆಯೂ ಅಟಲ್ ಜೀ ಅಟಲ್ ಜೀಯಾಗಿಯೆ ತಮ್ಮ ವ್ಯಕ್ತಿತ್ವವನ್ನು ಉಳಿಸಿಕೊಳ್ಳಲು ಕಾರಣವಾಗಿರುವುದು   ಅವರೊಳಗಿನ ಬರವಣಿಗೆಯ ಶಕ್ತಿಯಿಂದ. ಬರಹಗಾರ ಕಲಾತ್ಮಕತೆಯ ಬೆನ್ನು ಹತ್ತಿದಾಗ ಆತನ ಬರವಣಿಗೆಯಲ್ಲಿ ಸತ್ಯವನ್ನು ಮರೆಮಾಚುವ ಅಪಾಯ ಎದುರಾಗುತ್ತದೆ. ಆದರೆ ವಾಜಪೇಯಿ ಅವರ ಕವಿತೆಗಳಲ್ಲಿ ಕಲಾತ್ಮಕತೆ ಮತ್ತು ಸತ್ಯ ಎರಡೂ ಒಟ್ಟಾಗಿ ಮೇಳೈಸಿವೆ. ಈ ದೃಷ್ಟಿಯಿಂದ ಅವರೊಬ್ಬ ಅಪರೂಪದ ಕವಿ. 

ಎತ್ತರ ಶಿಖರದ ಮೇಲೆ 
ಮರ ಬೆಳೆಯುವುದಿಲ್ಲ 
ಗಿಡ ಚಿಗುರುವುದಿಲ್ಲ 
ಹುಲ್ಲೂ ಹುಟ್ಟುವುದಿಲ್ಲ 

ಬರೀ ಮಂಜು 
ಗಡ್ಡೆ ಕಟ್ಟುತ್ತದೆ 
ಹೆಣದ  ಹೊದಿಕೆಯಂತೆ ಬೆಳ್ಳಗೆ 
ಹೆಣದಂತೆ ತಣ್ಣಗೆ 

ನನ್ನ ಪ್ರಭುವೇ 
ಅಂಥ ಎತ್ತರವನ್ನು 
ನನಗೆಂದೂ ನೀಡದಿರು 
ಅಂಥ ಎತ್ತರದ ಕಠೋರತೆಯನ್ನೆಂದೂ ನೀಡದಿರು 

(ವಿಶ್ವೇಶ್ವರ ಭಟ್ ಅವರು ಅನುವಾದಿಸಿದ ವಾಜಪೇಯಿ ಅವರ ಕವನದಿಂದ)


ಕೊನೆಯ ಮಾತು 


      ಅಟಲ್ ಬಿಹಾರಿ ವಾಜಪೇಯಿ ಅವರಂಥ ರಾಜಕಾರಣಿ ಭಾರತದ ರಾಜಕೀಯದಲ್ಲಿ ಅತಿ ವಿರಳ. ಉತ್ತಮ ವಾಗ್ಮಿ, ಶ್ರೇಷ್ಠ  ಸಂಸದಿಯ ಪಟು, ದಕ್ಷ ಆಡಳಿತಗಾರ, ಆರ್ದ್ರ ಮನಸ್ಸಿನ ಕವಿ, ಶುದ್ಧ ಚಾರಿತ್ರ್ಯದ ಭಾವನಾ ಜೀವಿ ಈ ಎಲ್ಲ ಗುಣಗಳ ಒಟ್ಟು ವ್ಯಕ್ತಿತ್ವವೇ ಅಟಲ್ ಬಿಹಾರಿ ವಾಜಪೇಯಿ. ರಾಜಕಾರಣ ಎನ್ನುವುದು ಕುಲದ ಇಲ್ಲವೇ ಮನೆತನದ ಕಸುಬಲ್ಲ ಎನ್ನುವುದನ್ನು ಅಕ್ಷರಶ: ಬದುಕಿ ತೋರಿಸಿದ ಪರಿಶುದ್ಧ ರಾಜಕಾರಣಿ ಇವರು. ವೈಯಕ್ತಿಕವಾಗಿ ಯಾರನ್ನೂ ದ್ವೇಷಿಸದ ಮತ್ತು ವಿರೋಧಿಸದ ತಮ್ಮ ನಿಷ್ಕಂಳಕ ವ್ಯಕ್ತಿತ್ವದಿಂದ ರಾಜಕೀಯದಲ್ಲಿ ಅಜಾತಶತ್ರು ಎನ್ನುವ ಗೌರವಕ್ಕೆ ಪಾತ್ರರಾದವರು. ಪತ್ರಕರ್ತ ವೈಎನ್ ಕೆ ಹೇಳುವಂತೆ ಒಬ್ಬ ವ್ಯಕ್ತಿ ನಿಷ್ಕ್ರಿಯನಾಗಿದ್ದಾಗಲೂ ಅಜಾತಶತ್ರುವಾಗಿರುತ್ತಾನೆ. ಆದರೆ ರಾಜಕೀಯದಲ್ಲಿ ಸಕ್ರಿಯರಾಗಿದ್ದುಕೊಂಡು ಅಜಾತಶತ್ರು ಎಂದು ಕರೆಸಿಕೊಳ್ಳುವುದು ಸಣ್ಣ ಸಾಧನೆಯಲ್ಲ. ಅದಕ್ಕೆಂದೇ ಅಟಲ್ ಬಿಹಾರಿ ವಾಜಪೇಯಿ ಭಾರತದ ರಾಜಕಾರಣದಲ್ಲಿ ಅವರೊಂದು ಆದರ್ಶ ಮತ್ತು ಮಾದರಿ. 


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, January 1, 2015

ಓದುಗ ದೊರೆಗೊಂದು ಅಹವಾಲು















                ಜಿ.ಎಸ್.ಶಿವರುದ್ರಪ್ಪನವರ ಸಾವಿನ ನಂತರ ನಾನೊಂದು ಲೇಖನ ಬರೆದೆ. ಅವರು ಶಿಷ್ಯ ಪರಂಪರೆಯನ್ನು ಬೆಳೆಸಿದ ರೀತಿಯನ್ನು ವಿವರಿಸುವಾಗ ಯು.ಆರ್.ಅನಂತಮೂರ್ತಿಯವರ 'ಅವರು ನಮ್ಮ ಕಾಲದ ದ್ರೋಣ' ಎನ್ನುವ ಹೇಳಿಕೆಯನ್ನು ಲೇಖನದ ಒಂದು ಕಡೆ ಬಳಸಿಕೊಂಡಿದ್ದೆ. ಲೇಖನವನ್ನು ಓದಿದ ಪರಿಚಿತರೊಬ್ಬರು ಈ ವಿಷಯವಾಗಿ ನನ್ನನ್ನು ಪ್ರಶ್ನಿಸಿದರು. ಅನಂತಮೂರ್ತಿಯವರು ಜಿಎಸ್ಎಸ್ ಅವರನ್ನು 'ದ್ರೋಣ' ಎಂದೇಕೆ ಕರೆದರು ಎನ್ನುವುದೇ ಅವರ ಪ್ರಶ್ನೆಯಾಗಿತ್ತು. ನಿಜವಾಗಿ ಹೇಳಬೇಕೆಂದರೆ ಶ್ರೀಯುತರಿಗೆ ದ್ರೋಣ ಎನ್ನುವ ವ್ಯಕ್ತಿತ್ವದ ಪರಿಚಯವೇ ಇಂದ್ದಂತಿರಲಿಲ್ಲ. ಅವರ ಮಾತಿನಿಂದ ಅವರು ಮಹಾಭಾರತವನ್ನು ಓದಿಕೊಂಡಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಇಲ್ಲಿ ನಾನು ಅವರಿಗೆ ದ್ರೋಣರನ್ನು ಪರಿಚಯಿಸುವ ಕೆಲಸವನ್ನು ಮಾಡಬೇಕಾಯಿತು. ಮಹಾಭಾರತದಲ್ಲಿ ಬರುವ ಈ ದ್ರೋಣ ಎನ್ನುವ ಪಾತ್ರ ಕೌರವರು ಮತ್ತು ಪಾಂಡವರಿಗೆ ಮಾತ್ರವಲ್ಲದೆ ಏಕಲವ್ಯನಂಥ ಸಾಮಾನ್ಯ ಹುಡುಗನಿಗೂ ಅಪರೋಕ್ಷವಾಗಿ ವಿದ್ಯಾಗುರುವಾಗಿದ್ದರು ಎನ್ನುವುದನ್ನು ವಿವರಿಸಿ ಹೇಳಬೇಕಾಯಿತು. ಅನಂತಮೂರ್ತಿ ಅವರು ಜಿಎಸ್ಎಸ್ ಅವರನ್ನು ಮಹಾಭಾರತದ ದ್ರೋಣ ಪಾತ್ರದೊಂದಿಗೆ ಹೋಲಿಸಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಜಿಎಸ್ಎಸ್ ಅನೇಕರಿಗೆ ಗುರುವಾಗಿದ್ದರು ಎನ್ನುವುದೇ 'ಅವರು ನಮ್ಮ ಕಾಲದ ದ್ರೋಣ' ಎನ್ನುವ ಮಾತಿನ ತಾತ್ಪರ್ಯ ಎಂದು ವಿವರಣೆ ನೀಡಿದಾಗ ಶ್ರೀಯುತರಿಗೆ ಅರ್ಥವಾಯಿತು. 

            ಇಲ್ಲಿ ನಾನು ಬೇರೆ ಯಾರನ್ನೋ ಅವಮಾನಿಸಬೇಕೆನ್ನುವ ಉದ್ದೇಶದಿಂದ ಈ ಮೇಲಿನ ಉದಾಹರಣೆಯನ್ನು ಹೇಳುತ್ತಿಲ್ಲ. ಓದುಗರ ಓದಿನ ವ್ಯಾಪ್ತಿ ಸೀಮಿತವಾಗಿದ್ದರೆ ಆಗ ಓದುಗ ಸಹಜವಾಗಿಯೇ ಓದಿನ ಆಸ್ವಾದನೆಯನ್ನು ಕಳೆದುಕೊಳ್ಳುವನು ಎನ್ನುವುದಕ್ಕೆ ದೃಷ್ಟಾಂತವಾಗಿ ಇದನ್ನು ಹೇಳಬೇಕಾಯಿತು. ಇಂಥದ್ದೇ ಇನ್ನೊಂದು ಪ್ರಸಂಗ ನಾನು 'ಮೈನಾ: ಒಂದು ಸುಂದರ ದೃಶ್ಯಕಾವ್ಯ' ಎನ್ನುವ ಲೇಖನ ಬರೆದ ಘಳಿಗೆಯೂ ಎದುರಿಸಬೇಕಾಯಿತು. ಆಗೆಲ್ಲ ಒಂದಿಷ್ಟು ಓದುಗರು ಲೇಖನದ ಶೀರ್ಷಿಕೆಯನ್ನಷ್ಟೇ ಓದಿ 'ಮೈನಾ' ಅದೊಂದು ಕವಿತೆಯಾಗಿರಬಹುದು ಎನ್ನುವ ಅಭಿಪ್ರಾಯವನ್ನು ನೇರವಾಗಿ ನನ್ನೆದುರೆ ವ್ಯಕ್ತಪಡಿಸಿದ್ದರು. ನಿಜವಾಗಿಯೂ ಅದು ನಾನು 'ಮೈನಾ' ಎನ್ನುವ ಸಿನಿಮಾದ ಕುರಿತು ಬರೆದ ಲೇಖನವಾಗಿತ್ತು. ಲೇಖನದ ಶೀರ್ಷಿಕೆಯಲ್ಲಿ ನಾನು 'ಕಾವ್ಯ' ಎನ್ನುವ ಪದವನ್ನು ಬಳಸಿಕೊಂಡಿದ್ದೇ ತಪ್ಪಾಗಿ ಅರ್ಥೈಸಿಕೊಳ್ಳಲು ಕಾರಣವಾಗಿತ್ತು. ಆದರೆ ಅಚ್ಚರಿಯ ಸಂಗತಿ ಎಂದರೆ 'ದೃಶ್ಯಕಾವ್ಯ' ಎನ್ನುವ ಪದ ಅನೇಕ ಓದುಗರಿಗೆ ಅಪರಿಚಿತ ಪದವಾಗಿತ್ತು. ಆದ್ದರಿಂದ ಅವರು ಕೇವಲ 'ಕಾವ್ಯ' ಪದವನ್ನಾಧರಿಸಿ ಇಡೀ ಲೇಖನ ಒಂದು ಕಾವ್ಯದ ಕುರಿತು ಬರೆದಿರಬಹುದು ಅಂದು ಅರ್ಥೈಸಿಕೊಂಡಿದ್ದರು. ಇಂಥ ಆಭಾಸಗಳಿಗೆಲ್ಲ ಓದುಗರ ಓದಿನ ವ್ಯಾಪ್ತಿ ಸೀಮಿತವಾಗಿರುವುದೇ ಕಾರಣ. ಭೈರಪ್ಪನವರ 'ಸಾರ್ಥ' ಕಾದಂಬರಿಯನ್ನು ಓದುವುದಕ್ಕಿಂತ ಪೂರ್ವದಲ್ಲಿ  ನಾನು ಮಾಡಿದ ಮೊದಲ ಕೆಲಸ ಸಾರ್ಥ ಪದದ ಅರ್ಥವನ್ನು ನಿಘಂಟುವಿನಲ್ಲಿ ಹುಡುಕಿದ್ದು. ಸಧ್ಯದ ವಾತಾವರಣದಲ್ಲಿ ಕನ್ನಡ ಪುಸ್ತಕಗಳ ಓದುಗರ ವಲಯ ಅನೇಕ ಇತಿಮಿತಿಗಳ ನಡುವೆ ಸಿಲುಕಿಕೊಂಡಿದೆ. ಓದುಗರು ತಮ್ಮನ್ನು ತಾವು ನಿರ್ಧಿಷ್ಟ ಓದಿಗೆ ಸೀಮಿತಗೊಳಿಸಿಕೊಳ್ಳುತ್ತಿರುವುದರಿಂದ ಕನ್ನಡ ಸಾಹಿತ್ಯ ಕ್ಷೇತ್ರ ಬಹುದೊಡ್ಡ ಓದುಗರ ಸಮೂಹವನ್ನು ಕಳೆದುಕೊಳ್ಳುತ್ತಿದೆ ಎನ್ನುವ ಭಯ ಅನೇಕ ಪ್ರಜ್ಞಾವಂತ ಲೇಖಕರನ್ನು ಕಾಡುತ್ತಿದೆ. ಸಾಹಿತ್ಯದ ನಿರ್ಧಿಷ್ಟ ಪ್ರಕಾರಗಳಿಗೆ ತಮ್ಮನ್ನು ಸೀಮಿತಗೊಳಿಸಿಕೊಂಡ ಓದುಗರನ್ನು ಅಂಥದ್ದೊಂದು ಸಂಕುಚಿತ ಮನೋಭಾವದಿಂದ ಹೊರತರುವ ಕೆಲಸವಾಗಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ಓದು ತೋರಿಕೆಯಾಗದಿರಲಿ 


                  ನನ್ನ ಪರಿಚಿತರ  ಮನೆಯಲ್ಲಿ ಪುಸ್ತಕಗಳ ದೊಡ್ಡ ಸಂಗ್ರಹವೇ ಇದೆ. ಹೋದ ಕಡೆಯಲ್ಲೆಲ್ಲ ಕಣ್ಣಿಗೆ ಕಾಣಿಸುವ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಖರೀದಿಸಿ ಸಂಗ್ರಹಿಸಿಡುವ ಹವ್ಯಾಸ ಅವರದು. ಅವರ ಸಂಗ್ರಹದಲ್ಲಿ ರಾಮಾಯಣ ದರ್ಶನಂ, ಮಂಕುತಿಮ್ಮನ ಕಗ್ಗ, ಮೂಕಜ್ಜಿಯ ಕನಸುಗಳಂಥ ಶ್ರೇಷ್ಠ ಕೃತಿಗಳಿವೆ. ಮನೆಗೆ ಬಂದವರಿಗೆಲ್ಲ ತಮ್ಮ ಪುಸ್ತಕಗಳ ಸಂಗ್ರಹವನ್ನು ಅತ್ಯಂತ ಅಭಿಮಾನದಿಂದ ತೋರಿಸುವ ಶ್ರೀಯುತರು ಅವುಗಳಲ್ಲಿ ಯಾವೊಂದು ಕೃತಿಯನ್ನೂ ಓದಿಲ್ಲ ಎನ್ನುವುದು ಅತ್ಯಂತ ಅಚ್ಚರಿಯ ವಿಷಯ. ಹಾಗೆಂದು ಅವರು ತಮ್ಮ ಸಂಗ್ರಹದಲ್ಲಿನ ಪುಸ್ತಕಗಳನ್ನು ಬೇರೆಯವರಿಗೆ ಕೊಟ್ಟ ಉದಾಹರಣೆಯೂ ಇಲ್ಲ. ದಶಕದ ಹಿಂದೆ ಖರೀದಿಸಿದ ಪುಸ್ತಕಗಳು ಇವತ್ತಿಗೂ ಹೊಚ್ಚ ಹೊಸ ಪುಸ್ತಕಗಳಂತೆ ಹೊಳೆಯುತ್ತವೆ. ಪುಸ್ತಕಗಳು ಅವರಿಗೆ ಇತರ ಭೌತಿಕ ವಸ್ತುಗಳಿಗೆ ಸಮವೇ ವಿನ: ಅವರೆಂದೂ ಅವುಗಳನ್ನು ವೈಚಾರಿಕ ದೃಷ್ಟಿಕೋನದಿಂದ ನೋಡಿಲ್ಲ. ಅವರು ತಮ್ಮಲ್ಲಿನ ಸಂಗ್ರಹದಿಂದ ಬೇರೆಯವರಿಗೆ ಓದಲು ಕೊಟ್ಟ ಉದಾಹರಣೆಯೂ ಇಲ್ಲ. ಇಂಥ ಮನೋಭಾವದ ಓದುಗರನ್ನು (ಪುಸ್ತಕಗಳ ಸಂಗ್ರಹದಿಂದ ಅವರನ್ನು ಓದುಗರೆನ್ನಬಹುದು) ನಾವು ಅನೇಕ ಕಡೆಗಳಲ್ಲಿ ನೋಡಬಹುದು. ಇಂಥ ಓದುಗರಿಂದ ಕನ್ನಡ ಸಾಹಿತ್ಯ ವಲಯಕ್ಕೆ ಹೆಚ್ಚಿನ ಅಪಾಯವಿಲ್ಲವಾದರೂ ಇವರನ್ನು ತೀರ ನಿರ್ಲಕ್ಷಿಸುವಂತಿಲ್ಲ. ಪುಸ್ತಕಗಳನ್ನು ಪ್ರಾಚೀನ ವಸ್ತುಗಳಂತೆ ಸಂಗ್ರಹಿಸಿಟ್ಟಾಗ ಅವುಗಳಲ್ಲಿನ ವಿಚಾರ ಕೊಳೆತು ಹೋಗುವ ಸಾಧ್ಯತೆಯೇ ಹೆಚ್ಚು. ಪುಸ್ತಕವೊಂದು ಓದುಗರಿಂದ ಓದುಗರಿಗೆ ದಾಟಬೇಕು. ಆದರೆ ಈ ಪ್ರಕಾರದ ಓದುಗರು ಪುಸ್ತಕದಲ್ಲಿನ ವಿಚಾರಗಳನ್ನು ಹಲವಾರು ಮನಸ್ಸುಗಳಿಗೆ ವಿಸ್ತರಿಸುವ ಕೆಲಸವನ್ನು ಮಾಡಲಾರರು.

ಸೀಮಿತ ವ್ಯಾಪ್ತಿಯಿಂದ ಹೊರಬನ್ನಿ 


                   ಸಾಹಿತ್ಯ ಕ್ಷೇತ್ರದಲ್ಲಿ ನವ್ಯ, ನವೋದಯ, ಬಂಡಾಯ, ದಲಿತ ಪ್ರಕಾರಗಳಿದ್ದಂತೆ ಓದುಗರ ವಲಯದಲ್ಲೂ ನಿರ್ಧಿಷ್ಟ ಗುಂಪುಗಳಿವೆ. ಸಾಹಿತ್ಯದ ಒಂದು ಪ್ರಕಾರಕ್ಕೆ ತಮ್ಮ ಓದನ್ನು ಸೀಮಿತಗೊಳಿಸಿಕೊಂಡ ಅನೇಕ ಓದುಗರು ಇನ್ನೊಂದು ಪ್ರಕಾರದತ್ತ ಹೊರಳಿ ನೋಡಲಾರರು. ಉದಾಹರಣೆಯಾಗಿ ಹೇಳುವುದಾದರೆ ಕನ್ನಡದಲ್ಲಿ ದೇವನೂರು, ಲಂಕೇಶ್, ಅನಂತಮೂರ್ತಿ ಅವರ ಕೃತಿಗಳನ್ನು ಓದುವ ಓದುಗರಿಗೆ ಭೈರಪ್ಪನವರ ಕಾದಂಬರಿಗಳು ಇಂದಿಗೂ ಅಪಥ್ಯ. ಇದೇ ಮಾತನ್ನು ನಾವು ಹೀಗೂ ಹೇಳಬಹುದು ಭೈರಪ್ಪನವರ ಕಾದಂಬರಿಗಳ ಓದುಗರಿಗೆ ದೇವನೂರು, ಲಂಕೇಶ್, ಅನಂತಮೂರ್ತಿ ಅವರ ಬರವಣಿಗೆ ರುಚಿಸಲಾರದು. ಓದುಗರ ಈ ಮನೋಭಾವವನ್ನು ಚೆನ್ನಾಗಿಯೇ ಅರ್ಥಮಾಡಿಕೊಂಡಿರುವ ನಮ್ಮ ಲೇಖಕರು ಭೈರಪ್ಪನವರ 'ಆವರಣ' ಕಾದಂಬರಿ ಪ್ರಕಟವಾದಾಗ ಅದನ್ನು ವಿರೋಧಿಸಿ 'ಅನಾವರಣ' ಎನ್ನುವ ಕೃತಿ ರಚಿಸುತ್ತಾರೆ. ಮೊನ್ನೆ ಮೊನ್ನೆ ಕುಂ.ವೀರಭದ್ರಪ್ಪನವರು 'ಜ್ಞಾನಪೀಠ ನಾನ್ಸೆನ್ಸ್' ಎಂದು ಜರೆದಾಗ ಪರ ಮತ್ತು ವಿರೋಧಿಸಿ ಚರ್ಚೆಯಾಗುತ್ತದೆ. ಹೀಗೆ ಚರ್ಚೆಗೆ ಪೀಠಿಕೆ ಹಾಕುವವರಿಗೂ ಮತ್ತು ಚರ್ಚೆಯಲ್ಲಿ ಪಾಲ್ಗೊಳ್ಳುವವರಿಗೂ ಪರ ಮತ್ತು ವಿರೋಧಿ ಓದುಗರ ಗುಂಪುಗಳಿವೆ ಎನ್ನುವುದು ಗೊತ್ತಿದೆ. ಓದುಗರ ಈ ಪ್ರತ್ಯೇಕ ಗುಂಪುಗಳಿಂದಾಗಿ ಚಲಾವಣೆಯಲ್ಲಿರುವ ಲೇಖಕರ ಹೆಸರುಗಳ ಜೊತೆಗೆ ಚಲಾವಣೆಯಲ್ಲಿಲ್ಲದ ಹೆಸರುಗಳೂ ಚರ್ಚೆಗೆ ಬರುತ್ತವೆ. ಒಟ್ಟಿನಲ್ಲಿ ಓದುಗರ ನೆನಪುಗಳಲ್ಲಿ ನಾವಿನ್ನೂ ಮನೆಮಾಡಿಕೊಂಡಿದ್ದೆವೆಂದು ಲೇಖಕ ವರ್ಗ ಸಂಭ್ರಮಿಸುತ್ತದೆ. ಆದರೆ ಇಲ್ಲಿ ನಿಜವಾಗಿಯೂ ಹಾನಿಗೊಳಗಾಗುವುದು ಓದುಗರ ಸಮೂಹ. ಅನಂತಮೂರ್ತಿಯವರ 'ಸಂಸ್ಕಾರ'ವನ್ನು ಓದುವ ಓದುಗ ಭೈರಪ್ಪನವರ 'ದಾಟು'ವನ್ನು ಕೂಡ ಓದಬೇಕು. ಇವೆರಡೂ ಕನ್ನಡದ ಕ್ಲಾಸಿಕ್ ಕೃತಿಗಳು ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಇಲ್ಲಿ ಓದುಗ ಮಾಡುತ್ತಿರುವ ತಪ್ಪೆಂದರೆ ಆತ ಅನಂತಮೂರ್ತಿಯವರ ಆರಾಧನೆಯಲ್ಲಿ ಭೈರಪ್ಪನವರ 'ದಾಟು'ವಿನ ಓದಿನಿಂದ ವಂಚಿತನಾಗುತ್ತಿರುವನು. ನಾವು ಸಾಹಿತ್ಯದ ಒಂದು ಪ್ರಕಾರಕ್ಕೆ ಇಲ್ಲವೇ ನಿರ್ಧಿಷ್ಟ ಲೇಖಕರ ಕೃತಿಗಳಿಗೆ ನಮ್ಮ ಓದನ್ನು ಸೀಮಿತಗೊಳಿಸಿಕೊಂಡರೆ ಅತ್ಯುತ್ತಮ ಪುಸ್ತಕಗಳ ಓದಿನಿಂದ ವಂಚಿತರಾಗುತ್ತೇವೆ ಎನ್ನುವ ಅರಿವು ಓದುಗರಿಗಾಗಬೇಕು. ಅಚ್ಚರಿಯ ಸಂಗತಿ ಎಂದರೆ ಹೀಗೆ ಓದುಗರನ್ನು ನಿರ್ಧಿಷ್ಟ ಪುಸ್ತಕಗಳ ಓದಿಗೆ ಸೀಮಿತಗೊಳಿಸುವ ಕೆಲಸವನ್ನು ನಮ್ಮ ಲೇಖಕರೇ ಮಾಡುತ್ತಿರುವರು.

ಓದು ಮತ್ತು ಅನುವಾದಿತ ಕಾದಂಬರಿಗಳು 


                 ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನುವಾದಿತ ಕಾದಂಬರಿಗಳು ಓದುಗರನ್ನು ಸಮ್ಮೋಹಿನಿಯಂತೆ ಆವರಿಸಿದ್ದ ಸಂದರ್ಭವನ್ನು ಓದುಗನಾಗಿ ನಾನು ಅತಿ ಹತ್ತಿರದಿಂದ ನೋಡಿದ್ದೇನೆ. ಒಂದು ಹಂತದಲ್ಲಿ ಯಂಡಮೂರಿ ವೀರೇಂದ್ರನಾಥ, ಸರಿತಾ ಜ್ಞಾನಾನಂದ, ಮಲ್ಲಾಡಿ ಕೃಷ್ಣಮೂರ್ತಿ ಅವರ ತೆಲುಗು ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಂಡು ದೊಡ್ಡ ಓದುಗರ ಸಮೂಹ ಅನುವಾದಿತ ಕಾದಂಬರಿಗಳೆಡೆ ವಲಸೆ ಹೋಗುವಂತಾಯಿತು. ರೋಚಕ ಕಥಾವಸ್ತುವನ್ನು ಒಳಗೊಂಡಿರುತ್ತಿದ್ದ ಈ ಕಾದಂಬರಿಗಳನ್ನು ಓದಿದ ನಂತರ ಓದುಗನಿಗೆ ಮಸಾಲೆ ಸಿನಿಮಾವೊಂದನ್ನು ನೋಡಿದ ಅನುಭವವಾಗುತ್ತಿತ್ತು. ಒಂದು ವಯೋಮಾನದ ಓದುಗರನ್ನು ತಮ್ಮತ್ತ ಸೆಳೆಯುವಲ್ಲಿ ಈ ಅನುವಾದಿತ ಕಾದಂಬರಿಗಳು ಯಶಸ್ವಿಯಾದವು. ಆಗೆಲ್ಲ ಈ ಓದುಗರಿಗೆ ಅನುವಾದಿತ ಕಾದಂಬರಿಗಳೆದುರು ಕನ್ನಡ ಕೃತಿಗಳ ಓದು ಸಪ್ಪೆಯಾಗಿ ಕಾಣುತ್ತಿತ್ತು. ಪುಸ್ತಕ ಮಳಿಗೆಗಳ ಹಾಗೂ ಸಾರ್ವಜನಿಕ ಗ್ರಂಥಾಲಯಗಳ ಅಲ್ಮೆರಾಗಳಲ್ಲಿನ ಹೆಚ್ಚಿನ ಜಾಗವನ್ನು ಈ ಪ್ರಕಾರದ ಕಾದಂಬರಿಗಳೇ ಆಕ್ರಮಿಸಿಕೊಂಡಿದ್ದವು. ಆಗೆಲ್ಲ ಸಂಕಷ್ಟಕ್ಕೆ ಸಿಲುಕಿದ್ದು ಕನ್ನಡ ಸಾಹಿತ್ಯ ಕ್ಷೇತ್ರ. ಅನುವಾದಿತ ಕಾದಂಬರಿಗಳ ಓದುಗರನ್ನು ಕನ್ನಡದ ಕೃತಿಗಳತ್ತ ಹೊರಳುವಂತೆ ಮಾಡುವುದು ಸವಾಲಿನ ವಿಷಯವಾಗಿತ್ತು. ಕಾಲಕ್ರಮೇಣ ತೆಲುಗು ಕಾದಂಬರಿಗಳು ಕನ್ನಡಕ್ಕೆ ಅನುವಾದಗೊಳ್ಳುವುದು ಕಡಿಮೆಯಾಯಿತು. ಜೊತೆಗೆ ಯಂಡಮೂರಿ ವೀರೇಂದ್ರನಾಥರಂಥ ಲೇಖಕರೆ ರೋಚಕ ಕಾದಂಬರಿಗಳ ಬರವಣಿಗೆಯಿಂದ ಬೇಸತ್ತು ಬರವಣಿಗೆಯ ಬೇರೆ ಮಾರ್ಗವನ್ನು ಕಂಡುಕೊಂಡರು. ವಿಪರ್ಯಾಸದ ಸಂಗತಿ ಎಂದರೆ ಅಂದಿನ ಅನುವಾದಿತ ಕಾದಂಬರಿಗಳ ಓದುಗರು ಕನ್ನಡ ಸಾಹಿತ್ಯ ಕೃತಿಗಳ ಓದಿಗೆ ಮರಳಿ ಬರಲಿಲ್ಲ. ಕೆಲವರು ಸಿನಿಮಾ ಪ್ರೇಕ್ಷಕರಾಗಿ ಬದಲಾದರೆ ಇನ್ನು ಕೆಲವು ಓದುಗರು ಇವತ್ತಿಗೂ ಸಾರ್ವಜನಿಕ ಗ್ರಂಥಾಲಯಗಳ ಅಲ್ಮೆರಾಗಳಲ್ಲಿ ಯಂಡಮೂರಿ, ಸರಿತಾ, ಮಲ್ಲಾಡಿಯವರ ಅನುವಾದಿತ ಕಾದಂಬರಿಗಳನ್ನು ಹುಡುಕುತ್ತಿರುವರು. ಇಂಥ ಓದುಗರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಎಂದಿಗೂ ಅಪಾಯವೇ ಸರಿ. ಏಕೆಂದರೆ ಈ ಪ್ರಕಾರದ ಓದುಗರ ಪ್ರಭಾವದಿಂದ  ಓದುಗರ ಒಂದು ದೊಡ್ಡ ಸಮೂಹವೇ ಅನುವಾದಿತ ಕಾದಂಬರಿಗಳ ಓದಿಗೆ ವಲಸೆ ಹೋಗಬಹುದು.

ಎಲೆಕ್ಟ್ರಾನಿಕ್ ಮಾಧ್ಯಮದಿಂದ ಹೊರಬನ್ನಿ 


                ಇವತ್ತು ಓದುಗರನ್ನು ಪುಸ್ತಕಗಳಿಂದ ವಿಮುಖರನ್ನಾಗಿಸುವಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದ ಕೊಡುಗೆ ಅಪಾರವಾಗಿದೆ. ಈ ಮಾಧ್ಯಮ ದಿನದ ೨೪ ಗಂಟೆಗಳ ಕಾಲ ಮನೋರಂಜನೆಯನ್ನು ಕೊಡುತ್ತಿರುವುದರಿಂದ ಒಂದು ಕಾಲದ ಕಥೆ, ಕಾದಂಬರಿಗಳ ಓದುಗರೆಲ್ಲ ಇವತ್ತು ಪ್ರೇಕ್ಷಕರಾಗಿ ಬದಲಾಗಿರುವರು. ಸಿನಿಮಾ, ಧಾರಾವಾಹಿ, ಹಾಡುಗಳು, ನಗೆ ದೃಶ್ಯಗಳು, ರಿಯಾಲಿಟಿ ಶೋ ಗಳನ್ನು ನಿರಂತರವಾಗಿ ಪ್ರಸಾರ ಮಾಡುವುದರ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮ ಓದುಗರಿಂದ ಪುಸ್ತಕ ಓದಿನ ಸಮಯವನ್ನು ಕಸಿದುಕೊಂಡಿದೆ. ಇಂಟರ್ ನೆಟ್ ಪರಿಣಾಮ ಯುವ ಪೀಳಿಗೆಗೆ ಪುಸ್ತಕಗಳ ಓದೆಂದರೆ ಅಪಥ್ಯವಾಗಿ ಪರಿಣಮಿಸಿದೆ. ಇನ್ನು ಕೆಲವು  ಯುವ ಪೀಳಿಗೆಗೆ ತ್ರೀ ಇಡಿಯಟ್ಸ್, ಹಾಫ್ ಗರ್ಲ್ ಫ್ರೆಂಡ್ ನಂಥ ಮನರಂಜನಾ ಸರಕಿನ ಪುಸ್ತಕಗಳ ಓದಿನಲ್ಲಿರುವಷ್ಟು ಆಸಕ್ತಿ ಗಂಭೀರ ಪುಸ್ತಕಗಳ ಓದಿನಲ್ಲಿಲ್ಲ.  ಓದನ್ನು ಗಂಭೀರವಾಗಿ ಪರಿಗಣಿಸಿರುವ ಓದುಗರು ಮಾತ್ರ ಪುಸ್ತಕ ಪ್ರಕಾಶಕರಿಗೆ ಆಧಾರವಾಗಿರುವರು. ಚಿಂತಿಸಬೇಕಾದ ಸಂಗತಿ ಎಂದರೆ ಎಲೆಕ್ಟ್ರಾನಿಕ್ ಮಾಧ್ಯಮ ನಿರಂತರ ಸುದ್ಧಿ ವಾಹಿನಿಗಳ ಮೂಲಕ ಇಂಥ ಗಂಭೀರ ಓದುಗರನ್ನೂ ತನ್ನತ್ತ ಸೆಳೆಯುವ ಕೆಲಸ ಮಾಡುತ್ತಿದೆ.

ಮಕ್ಕಳನ್ನು ಓದುಗರನ್ನಾಗಿಸಿ 


                       ಕನ್ನಡದಲ್ಲಿ ಮುಂದೊಂದು ದಿನ ಓದುಗರ ಕೊರತೆ ಎದುರಾಗಬಹುದು ಎನ್ನುವ ಆತಂಕವನ್ನು ಹಿರಿಯ ಸಾಹಿತಿ ಭೈರಪ್ಪನವರು ವ್ಯಕ್ತಪಡಿಸಿರುವರು. ನಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಕೊಡಿಸುತ್ತಿರುವುದರಿಂದ ಮುಂದಿನ ಹದಿನೈದಿಪ್ಪತ್ತು ವರ್ಷಗಳ ನಂತರ ಕನ್ನಡದಲ್ಲಿ ಓದುಗರ ಕೊರತೆ ಕಾಣಿಸಿಕೊಳ್ಳಬಹುದೆನ್ನುವ ವಿಚಾರವನ್ನು ಅವರು ಮುಂದಿಡುತ್ತಾರೆ. ನಿಜಕ್ಕೂ ಇದು ನಾವುಗಳೆಲ್ಲ ಆತಂಕ ಪಡಬೇಕಾದ ಸಂಗತಿ. ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಬದುಕನ್ನು ರೂಪಿಸುತ್ತದೆ ಎನ್ನುವ ಭಾವನೆ ದಟ್ಟವಾಗುತ್ತಿರುವ ಈ ಘಳಿಗೆ ಬಹುಪಾಲು  ಮಕ್ಕಳು ಇಂಗ್ಲಿಷ್ ಶಿಕ್ಷಣಕ್ಕೆ ವಲಸೆ ಹೋಗುತ್ತಿರುವರು. ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಉದ್ದಿಮೆಯಾಗಿ ಬೆಳೆಯುತ್ತಿರುವುದರಿಂದ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಮುಂದೊಂದು ದಿನ ಕನ್ನಡ ಶಾಲೆಗಳೆಲ್ಲ ಶಾಶ್ವತವಾಗಿ ಮುಚ್ಚಿ ಹೋಗಬಹುದು. ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿವೆ ಎನ್ನುವ  ಆತಂಕದ ಜೊತೆಗೆ ಕನ್ನಡ ಪುಸ್ತಕಗಳನ್ನು ಓದುವ ಓದುಗರ ಸಂಖ್ಯೆಯೂ ಇದರೊಂದಿಗೆ ಕ್ಷೀಣಿಸಬಹುದೆನ್ನುವ ಆತಂಕ ಎದುರಾಗಿದೆ. ಈಗ ಕನ್ನಡ ಪುಸ್ತಕಗಳ ಓದುಗರ ಮೇಲೆ ತಮ್ಮ ನಂತರದ ಪೀಳಿಗೆಯನ್ನೂ ಓದುಗರನ್ನಾಗಿ ರೂಪಿಸುವ ಮಹತ್ವದ ಜವಾಬ್ದಾರಿ ಇದೆ. ಹಾಗೆಂದ ಮಾತ್ರಕ್ಕೆ ಇಂಗ್ಲಿಷ್ ಮಾಧ್ಯಮದ ಶಿಕ್ಷಣದಿಂದ ಮಕ್ಕಳನ್ನು ದೂರವಾಗಿಸಬೇಕೆ? ಎನ್ನುವ  ಪ್ರಶ್ನೆ ಇಲ್ಲಿ ಉದ್ಭವವಾಗದು. ಮಕ್ಕಳನ್ನು ಜಾಗತೀಕರಣಕ್ಕೆ ಮುಖಮಾಡಿ ನಿಲ್ಲಿಸಬೇಕಾದ ಅಗತ್ಯ ಎದುರಾಗಿರುವುದರಿಂದ ಇಂಗ್ಲಿಷ್ ಮಾಧ್ಯಮದ ಆಯ್ಕೆ ಅನಿವಾರ್ಯವಾಗುತ್ತಿದೆ. ನಾವು ಇಲ್ಲಿ ಮಾಡಬೇಕಾದದ್ದಿಷ್ಟೇ ನಮ್ಮ ಮಕ್ಕಳಲ್ಲಿ  ಕನ್ನಡವನ್ನು ಹೃದಯದ ಭಾಷೆಯನ್ನಾಗಿಸಿ ಅವರನ್ನು ಕನ್ನಡ ಸಾಹಿತ್ಯ ಕೃತಿಗಳ ಓದುಗರನ್ನಾಗಿಸುವುದು.

 ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ 

              ಸಾಮಾನ್ಯವಾಗಿ ಪುಸ್ತಕಗಳನ್ನು ಕೊಳ್ಳುವವರಲ್ಲಿ ಮೂರು ಬಗೆ. ಮೊದಲ ಬಗೆಯವರು ಕಣ್ಣಿಗೆ ಚೆಂದ ಕಾಣುವ ದಪ್ಪ ದಪ್ಪ ಪುಸ್ತಕಗಳನ್ನು ಕೊಂಡು ತಮ್ಮ ಮನೆಯ ದಿವಾನ ಖಾನೆಯನ್ನು ಸಿಂಗರಿಸುವರು. ಎರಡನೆಯ ಬಗೆಯವರು ತುಂಬ ಪುಸ್ತಕಗಳನ್ನು ಖರಿದಿಸಿಟ್ಟುಕೊಂಡಿದ್ದರೂ ಕೆಲವನ್ನು ಮಾತ್ರ ಓದಿ ಹಾಗೆ ಓದಿದ್ದನ್ನೂ ಹಾಳಾಗದಂತೆ ಇಟ್ಟುಕೊಳ್ಳುವವರು. ಮೂರನೆಯ ಬಗೆಯವರಲ್ಲಿ ಕೆಲವೇ ಕೆಲವೋ ಲೆಕ್ಕವಿಲ್ಲದಷ್ಟೋ ಪುಸ್ತಕಗಳಿರಬಹುದು. ಆ ಪುಸ್ತಕಗಳ ರಟ್ಟು ಕಿತ್ತು ಹೋಗಿರಬಹುದು, ಅವುಗಳ ಪುಟಗಳು ನಾಯಿ ಕಿವಿಗಳಾಗಿರಬಹುದು, ಹೊಲಿಗೆಯೋ ಅಂಟು ಬಿಚ್ಚಿಕೊಂಡು ಕೆಲವು ಹಾಳೆಗಳೇ ಸಡಿಲವಾಗಿರಬಹುದು. ಅವು ಮತ್ತೆ ಮತ್ತೆ ಓದಿಸಿಕೊಂಡು ತಮ್ಮ ಸುಸ್ವರೂಪ ಕಳೆದುಕೊಂಡ ಪುಸ್ತಕಗಳು, ಅಂಥ ಪುಸ್ತಕಗಳ ಮಾರ್ಜಿನ್ನಿನ ತುಂಬ ಪೆನ್ಸಿಲಿನಲ್ಲೋ ಪೆನ್ನಿನಲ್ಲೋ ಗೀಚಿರುವ ಬರಹಗಳಿದ್ದರೆ ಆಶ್ಚರ್ಯವಿಲ್ಲ. 

('ಪ್ರಜಾವಾಣಿ' ಯಲ್ಲಿ ಪ್ರಕಟವಾದ ಎಸ್. ದಿವಾಕರ ಅವರ ಲೇಖನದಿಂದ)


ಕೊನೆಯ ಮಾತು 


           ಓದುಗ ಪೂರ್ವಾಗ್ರಹ ಪೀಡಿತ ಮನೋಭಾವದಿಂದ ಹೊರಬರದೇ ಇದ್ದಲ್ಲಿ ಆತ ಹೆಚ್ಚಿನದನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದನ್ನು ನನ್ನದೇ ಅನುಭವದಲ್ಲಿ ಹೇಳುವುದಾದರೆ ನಾನು ರಹಮತ್ ತರಿಕೇರಿ ಅವರನ್ನು ಓದಿದ್ದು ಇತ್ತೀಚಿಗೆ ಮಾತ್ರ. ಅವರ 'ಕತ್ತಿಯಂಚಿನ ದಾರಿ' ಪುಸ್ತಕಕ್ಕೆ ಕೇಂದ್ರ ಅಕಾಡೆಮಿ ಪ್ರಶಸ್ತಿ ಬಂದಾಗ ನಾನು ಆಸಕ್ತಿಯಿಂದ ಅದನ್ನು ಓದಲು ಕೈಗೆತ್ತಿಕೊಂಡೆ. ರಹಮತ್ ತರಿಕೇರಿ ಅವರ ಕುರಿತು ಪ್ರಾರಂಭದಲ್ಲಿ ಒಂದಿಷ್ಟು ತಪ್ಪಾಭಿಪ್ರಯಗಳಿದ್ದ  ಕಾರಣ ಮೊದಲ ಓದಿನಲ್ಲಿ 'ಕತ್ತಿಯಂಚಿನ ದಾರಿ' ಅರ್ಥವೇ ಆಗಲಿಲ್ಲ. ನಂತರ ಅಲ್ಲಲ್ಲಿ ಅವರ ಒಂದೆರಡು ಲೇಖನಗಳನ್ನು ಓದಿದ ಮೇಲೆ ತರಿಕೇರಿ ಅವರ ಬರಹದ ಕುರಿತು  ಆಸಕ್ತಿ ಮೂಡಿತು. ಎರಡನೇ ಬಾರಿಗೆ 'ಕತ್ತಿಯಂಚಿನ ದಾರಿ' ಕೈಗೆತ್ತಿಕೊಂಡಾಗ ನಾನು ಕಳೆದುಕೊಂಡಿದ್ದೆನೆಂದು ತಡವಾಗಿಯಾದರೂ ಅರ್ಥವಾಯಿತು. ನಂತರ ಅವರ 'ವಿತಂಡವಾದಿಗಳೊಂದಿಗೆ' ಮತ್ತು 'ಅಮೀರಬಾಯಿ ಕರ್ನಾಟಕಿ' ಪುಸ್ತಕಗಳನ್ನು ಓದಿದ ನಂತರ ರಹಮತ್ ತರಿಕೇರಿ ಅವರ ಬರಹ ಮತ್ತಷ್ಟು ಆಪ್ತವಾಯಿತು.  ತಪ್ಪು ತಿಳುವಳಿಕೆಯಿಂದ ಹೊರಬರದೇ ಇದ್ದಲ್ಲಿ ಲೇಖಕನಿಗಾಗುವಷ್ಟೇ ನಷ್ಟ  ಓದುಗನಿಗೂ ಆಗುತ್ತದೆ ಎನ್ನುವುದನ್ನು ಓದುಗರು ಅರ್ಥ ಮಾಡಿಕೊಳ್ಳಬೇಕಿದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 



Monday, November 3, 2014

ನೂರರ ಹೊಸ್ತಿಲಲ್ಲಿ ಕನ್ನಡ ಸಾಹಿತ್ಯ ಪರಿಷತ್ತು

     




                     ಕನ್ನಡ ಸಾಹಿತ್ಯ ಪರಿಷತ್ತು ಈಗ ನೂರರ ಹೊಸ್ತಿಲಲ್ಲಿ ನಿಂತಿದೆ. ೧೯೧೫ ರಲ್ಲಿ ಸ್ಥಾಪನೆಯಾದ ಕನ್ನಡ  ಸಾಹಿತ್ಯ ಪರಿಷತ್ತು ಅನೇಕ ಏಳು ಬೀಳುಗಳ ನಡುವೆಯೂ ನೂರು ವರ್ಷಗಳನ್ನು ಪೂರೈಸುತ್ತಿರುವುದು ಕನ್ನಡಿಗರಾದ ನಮಗೆಲ್ಲ ಅತ್ಯಂತ ಅಭಿಮಾನದ ಸಂಗತಿಯಿದು. ಕನ್ನಡ ಭಾಷೆ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ರಕ್ಷಣೆ ಮತ್ತು ಬೆಳವಣಿಗೆಗಾಗಿ ಅಂದಿನ ಮೈಸೂರಿನ ಅರಸರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆಗೆ ಆದ್ಯತೆ ನೀಡಿದರು. ಇಂಥದ್ದೊಂದು ಕನ್ನಡ ಸಂಸ್ಥೆಯ ಸ್ಥಾಪನೆಗೆ   ಆ ದಿನಗಳ ಅನೇಕ ಸಾಹಿತಿಗಳ ಬೇಡಿಕೆಯೂ ಇತ್ತು. ಸರ್ ಎಮ್. ವಿಶ್ವೇಶ್ವರಯ್ಯ ಮತ್ತು ಕರ್ಪೂರ ಶ್ರೀನಿವಾಸ ರಾವ ಕನ್ನಡ ಸಾಹಿತ್ಯದ ರಕ್ಷಣೆಗಾಗಿ ಪರಿಷತ್ತನ್ನು ಸ್ಥಾಪಿಸಲು ಕಂಕಣಬದ್ಧರಾಗಿ ದುಡಿದರು. ಒಟ್ಟಾರೆ ಎಲ್ಲರ ಪ್ರಯತ್ನ ಮತ್ತು ಆಸೆಯಂತೆ ೫. ೫. ೧೯೧೫ ರಂದು ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬಂದಿತು. ಬೆಂಗಳೂರಿನ ಶಂಕರಪುರ ಬಡಾವಣೆಯಲ್ಲಿನ ಸಣ್ಣ ಕೊಠಡಿಯೊಂದರಲ್ಲಿ ಸ್ಥಾಪನೆಯಾದ ಪರಿಷತ್ತಿಗೆ ನಂತರದ ದಿನಗಳಲ್ಲಿ ಮಾಸ್ತಿ, ಉತ್ತಂಗಿ ಚೆನ್ನಪ್ಪ, ಹಂ. ಪಾ. ನಾಗರಾಜಯ್ಯ, ಮೂರ್ತಿರಾವ, ವೆಂಕಟಸುಬ್ಬಯ್ಯ, ಗೊರುಚ, ಚಂಪಾ ಅವರಂಥ ಖ್ಯಾತನಾಮ ಸಾಹಿತಿಗಳ ಅಧ್ಯಕ್ಷತೆ ಲಭ್ಯವಾಯಿತು. ಸಣ್ಣ ಕೊಠಡಿಯಿಂದ ಸ್ವತಂತ್ರ ಕಟ್ಟಡಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಳಾಂತರಗೊಂಡು ಕನ್ನಡ ಸಾಹಿತ್ಯದ ಮತ್ತು ನಾಡಿನ ರಕ್ಷಣೆಯ ಕೆಲಸದಲ್ಲಿ ತನ್ನನ್ನು ತಾನು ಸಕ್ರಿಯವಾಗಿ ತೊಡಗಿಸಿಕೊಂಡಿತು. ಪುಸ್ತಕಗಳ ಪ್ರಕಟಣೆ, ಸಾಹಿತ್ಯ ಸಮ್ಮೇಳನದ ಏರ್ಪಾಡು, ದತ್ತಿ ಉಪನ್ಯಾಸ ಇತ್ಯಾದಿ ಚಟುವಟಿಕೆಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಬಹುಬೇಗ ಜನರಿಗೆ ಹತ್ತಿರವಾಯಿತು. ಪ್ರಾರಂಭದ ದಿನಗಳಲ್ಲಿ ದೊರೆತ ಸಾಹಿತ್ಯಾಸಕ್ತರ ನೆರವು ಮತ್ತು ಅವರುಗಳ ಪ್ರಾಮಾಣಿಕ ದುಡಿಮೆಯ ಪರಿಣಾಮ ಕನ್ನಡ ಸಾಹಿತ್ಯ ಪರಿಷತ್ತು ಬಹಳಷ್ಟು ಕನ್ನಡ ಪರ ಕಾರ್ಯಕ್ರಮಗಳನ್ನು ಸಂಘಟಿಸಲು ಹಾಗೂ ಯಶಸ್ಸನ್ನು ಕಾಣಲು ಸಾಧ್ಯವಾಯಿತು.

                 ಕನ್ನಡ ಸಾಹಿತ್ಯ ಪರಿಷತ್ತು ರಾಜಕಾರಣದ ರೂಪಾಂತರ ಹೊಂದಿದ ಮೇಲೆ ಪರಿಷತ್ತಿನ ನೀತಿ ನಿಲುವುಗಳಲ್ಲಿ ಮತ್ತು ಅದರ ಕಾರ್ಯ ಯೋಜನೆಗಳಲ್ಲಿ ಸಾಕಷ್ಟು ಬದಲಾವಣೆ ಕಾಣಿಸಿಕೊಂಡಿತು. ಕನ್ನಡ ಸಾಹಿತ್ಯ ಪರಿಷತ್ತಿಗೆ ಹರಿದು ಬರುವ ಸರ್ಕಾರದ ನೆರವು ಮತ್ತು ಸಾರ್ವಜನಿಕರ ದೇಣಿಗೆ ಅದು ಅನೇಕರು ಅಧ್ಯಕ್ಷ ಗಾದಿಗೆ ಹಪಾಹಪಿಸುವಂತೆ ಮಾಡಿತು. ಪರಿಷತ್ತಿನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆಯ ಚುನಾವಣೆಯಲ್ಲಿ ರಾಜಕೀಯದ ಖದರು ಗೋಚರಿಸತೊಡಗಿತು. ಈ ಮಾತು  ಜಿಲ್ಲಾ ಮತ್ತು ತಾಲೂಕು ಮಟ್ಟದ ಪರಿಷತ್ತಿನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆಗೂ ಅನ್ವಯಿಸುತ್ತದೆ. ಪರಿಣಾಮವಾಗಿ ಪರಿಷತ್ತಿನ ಸದಸ್ಯರನ್ನು ಹುಡುಕಿಕೊಂಡು ಹೋಗುವ, ಅವರನ್ನು ಓಲೈಸುವ ಹಾಗೂ ಒಂದಿಷ್ಟು ಪ್ರಲೋಭನೆಯನ್ನೊಡ್ಡುವಂಥ ಅನೈತಿಕ ಕೆಲಸಗಳಿಗೆ ನಮ್ಮ ಸಾಹಿತಿಗಳು ಕೈಹಾಕತೊಡಗಿದರು. ಪರಿಷತ್ತಿನ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆಯಲ್ಲಿ ಜಾತಿ ಮತ್ತು ಪಂಗಡಗಳು ನಿರ್ಣಾಯಕ ಪಾತ್ರವಹಿಸತೊಡಗಿದವು. ರಾಜಕಾರಣಿಗಳು ಸಹ ಕನ್ನಡ ಸಾಹಿತ್ಯ ಪರಿಷತ್ತನ್ನು ತಮ್ಮ ಹತೋಟಿಯಲ್ಲಿಟ್ಟುಕೊಳ್ಳಲು ಅನುಕೂಲವಾಗಲೆಂದು ಪರೋಕ್ಷವಾಗಿಯೇ ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸಲಾರಂಭಿಸಿದರು. ಜೊತೆಗೆ ಇನ್ನೊಂದು ಆತಂಕದ ಸಂಗತಿ ಎಂದರೆ ಅದು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧವಿಲ್ಲದವರು ಸಹ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸತೊಡಗಿದ್ದು. ಕೆಲವು ವರ್ಷಗಳ ಇತಿಹಾಸವನ್ನು ಕೆದಕಿ ನೋಡಿದಾಗ ಸಾಹಿತ್ಯ ಪರಿಷತ್ತಿಗೆ ಆಯ್ಕೆಯಾಗುತ್ತಿರುವವರಲ್ಲಿ ಹೆಚ್ಚಿನವರಿಗೆ ಸಾಹಿತ್ಯದ ಗಂಧ ಗಾಳಿಯೂ ಇಲ್ಲ. ಇಂಥ ಪದಾಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ರಾಜಕೀಯದ ಅಖಾಡ  ಮಾಡಿಕೊಂಡಿರುವುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಈ ಮಾತಿಗೆ ಹಾವೇರಿಯಲ್ಲಿ ನಡೆಯಬೇಕಿದ್ದ ೮೧ ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಬೇರೆಡೆ ಸ್ಥಳಾಂತರಗೊಳ್ಳುವ ಸಿದ್ಧತೆಯಲ್ಲಿರುವುದೆ ಒಂದು ಉತ್ತಮ ಉದಾಹರಣೆ. ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಜಿದ್ದಾಜಿದ್ದಿಯ ಪರಿಣಾಮ ಆ ಜಿಲ್ಲೆಯ ಸಾಹಿತ್ಯಾಸಕ್ತರಿಗೆ ಈಗ ನಿರಾಸೆಯಾಗಿದೆ. ಇವರೇನು ಸಾಹಿತಿಗಳೇ ಅಥವಾ ರಾಜಕಾರಣಿಗಳೇ ಎಂದು ಜಿಲ್ಲೆಯ ಜನ ಅನುಮಾನದಿಂದ ನೋಡುವಂತಾಗಿದೆ.

                     ಪ್ರತಿ ವರ್ಷದ  ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಜಕಾರಣಿಗಳಿಂದ ಮುಕ್ತವಾಗಿ ಸಂಘಟಿಸಲು ಇದುವರೆಗೂ ಕನ್ನಡ ಸಾಹಿತ್ಯ ಪರಿಷತ್ತಿಗೆ ಸಾಧ್ಯವಾಗಿಲ್ಲ. ಏಕೆಂದರೆ ಕನ್ನಡ ಸಾಹಿತ್ಯ ಸಮ್ಮೇಳನ ಎನ್ನುವುದು  ನಮ್ಮ ರಾಜಕಾರಣಿಗಳ ಒಡ್ಡೋಲಗವಾಗಿ ಪ್ರತಿಬಿಂಬಿತವಾಗುತ್ತಿದೆ. ಸಾಹಿತ್ಯ ಸಮ್ಮೇಳನದಂಥ ಮಹತ್ವದ ವೇದಿಕೆಯನ್ನು ರಾಜಕಾರಣಿಗಳೇ ಹೆಚ್ಚಾಗಿ ಆಕ್ರಮಿಸಿಕೊಳ್ಳುತ್ತಿರುವರು. ಸಾಹಿತ್ಯ ಸಮ್ಮೇಳನದಂಥ ವೇದಿಕೆಯಲ್ಲಿ ನಾಡು ನುಡಿಗಿಂತ ರಾಜಕಾರಣಿಗಳ ಸ್ವಹಿತಾಸಕ್ತಿಯ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿವೆ. ಚಂಪಾ ಅವರನ್ನು ಹೊರತುಪಡಿಸಿ ಸಾಹಿತ್ಯ ಪರಿಷತ್ತಿನ ಯಾವ ಅಧ್ಯಕ್ಷರೂ ರಾಜಕಾರಣಿಗಳಿಗೆ ಸಮ್ಮೇಳನದ ವೇದಿಕೆ ಹತ್ತಬೇಡಿ ಎಂದು ಗುಡುಗಿಲ್ಲ. ಮುಖ್ಯಮಂತ್ರಿ ಮತ್ತು ಸಂಬಂಧಿಸಿದ ಇಲಾಖೆಯ ಮಂತ್ರಿಗಳು ಬಿಡುಗಡೆ ಮಾಡುವ ಅನುದಾನ ನಮ್ಮ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಅದೊಂದು ಋಣದಂತೆ ಭಾಸವಾಗುತ್ತಿದೆ. ಅದಕ್ಕೆಂದೇ ರಾಜಕಾರಣಿಗಳನ್ನು ಓಲೈಸುವ  ಹಾಗೂ ಅವರುಗಳೊಂದಿಗೆ ವೇದಿಕೆಯನ್ನು ಹಂಚಿಕೊಳ್ಳುವ ಉಮೇದಿಯಲ್ಲಿ  ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ಕನ್ನಡದ ಕೆಲಸ ಗೌಣವಾಗಿ ಕಾಣಿಸುತ್ತಿದೆ. ಈ ಕಾರಣದಿಂದಲೇ ಇರಬೇಕು ತೇಜಸ್ವಿ ಅವರಂಥವರು ಸಾಹಿತ್ಯ ಪರಿಷತ್ತು, ಸಮ್ಮೇಳನ, ಅಕಾಡೆಮಿ ಯಾವ ಗೊಡವೆಯೂ ಬೇಡವೆಂದು ದೂರದ ಕಾಡಿನಲ್ಲಿ ಕುಳಿತು ಸದ್ದಿಲ್ಲದೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡರು. ಆದರೆ ತೇಜಸ್ವಿ ಅವರಲ್ಲಿದ್ದ ಪದವಿ ಮತ್ತು ಪ್ರಶಸ್ತಿಯ ಕುರಿತಾದ ನಿರಾಸಕ್ತಿ ಬೇರೆ ಬರಹಗಾರರಲ್ಲಿ ಇಲ್ಲದೇ ಇದ್ದುದ್ದರಿಂದ ಅವರುಗಳು ಕನ್ನಡ ಸಾಹಿತ್ಯ ಪರಿಷತ್ತನ್ನು ಶುಚಿಗೊಳಿಸುವ ಕೆಲಸಕ್ಕೆ ಕೈಹಾಕಲೇ ಇಲ್ಲ. ಪರಿಣಾಮವಾಗಿ ಬರೆಯದೆ ಇರುವವರು, ಶ್ರೀಮಂತ ಕುಳಗಳು, ಹೋಟೆಲ್ ಉದ್ಯಮಿಗಳೆಲ್ಲ ಸಾಹಿತ್ಯ ಪರಿಷತ್ತಿನ ಆಯಕಟ್ಟಿನ ಜಾಗವನ್ನು  ಆಕ್ರಮಿಸಿಕೊಳ್ಳುವಂತಾಯಿತು.

                      ಕನ್ನಡ ಸಾಹಿತ್ಯ ಪರಿಷತ್ತು ಪುರುಷ ಪ್ರಧಾನ ನೆಲೆಯಲ್ಲೇ ವ್ಯವಹರಿಸುತ್ತ ಬಂದಿರುವುದಕ್ಕೆ  ಪರಿಷತ್ತಿನ ಅಧ್ಯಕ್ಷರ ಆಯ್ಕೆಯೇ ಮಾನದಂಡವಾಗಿದೆ. ನೂರು ವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಇದುವರೆಗೆ ೨೪ ಅಧ್ಯಕ್ಷರ ಸಾರಥ್ಯ ಲಭಿಸಿದೆ. ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಇದುವರೆಗೂ ಒಬ್ಬ ಮಹಿಳಾ ಸಾಹಿತಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷತೆಯ ಸ್ಥಾನ ಅಲಂಕರಿಸದಿರುವುದು. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಸಾಹಿತ್ಯ ಪರಂಪರೆಯನ್ನು ಮೊದಲಿನಿಂದಲೂ ಒಂದು ರೀತಿಯ ಅಸಡ್ಡೆ ಹಾಗೂ ನಿರ್ಲಕ್ಷದಿಂದ ಕಾಣುತ್ತಿರುವ ಮನೋಭಾವಕ್ಕೆ ಇದೊಂದು ದೃಷ್ಟಾಂತ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷಿಯ ಚುನಾವಣೆ ರಾಜಕೀಯ ಚುನಾವಣೆಯ ರೂಪರೇಷೆ ಪಡೆಯುತ್ತಿರುವುದರಿಂದ ಮಹಿಳಾ ಲೇಖಕಿಯರು ಸಾಹಿತ್ಯ ಪರಿಷತ್ತಿನ ಚುನಾವಣಾ ಕಣದಿಂದ ವಿಮುಖರಾಗುತ್ತಿರಬಹುದು. ಇಂಥದ್ದೊಂದು ತಾರತಮ್ಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೂ ಅನ್ವಯಿಸಿ ಹೇಳಬಹುದು. ಏಕೆಂದರೆ ಇದುವರೆಗಿನ ೮೦ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ಲೇಖಕಿಯರ ಸಂಖ್ಯೆ ಕೇವಲ ನಾಲ್ಕು ಮಾತ್ರ. ಜಯದೇವಿತಾಯಿ ಲಿಗಾಡೆ, ಕಮಲಾ ಹಂಪನಾ, ಶಾಂತಾದೇವಿ ಮಾಳವಾಡ ಮತ್ತು ಗೀತಾ ನಾಗಭೂಷಣ ಮಾತ್ರ ಆ ಗೌರವಕ್ಕೆ ಪಾತ್ರರಾದ ಮಹಿಳಾ ಸಾಹಿತಿಗಳು. ಕನ್ನಡ ಸಾಹಿತ್ಯ ಸಮ್ಮೇಳನದಂಥ ಮಹತ್ವದ ಸಮ್ಮೇಳನದ ವೇದಿಕೆಯನ್ನು ಅಧ್ಯಕ್ಷರಾಗಿ ಏರಲು ಮಹಿಳಾ ಲೇಖಕಿಯೊಬ್ಬಳು ತೆಗೆದುಕೊಂಡ ಸಮಯ ಸುದೀರ್ಘ ೬೦ ವರ್ಷಗಳು. ಸಮ್ಮೇಳನದ ಅಧ್ಯಕ್ಷರ ಆಯ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವದ ಜವಾಬ್ದಾರಿಯಾಗಿರುವುದರಿಂದ ಇಂಥದ್ದೊಂದು ಆರೋಪ ಸಹಜವಾಗಿಯೇ ಕಸಾಪದ ಮೇಲಿದೆ. ೧೯೧೫ ರಿಂದಲೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪ್ರತಿವರ್ಷ ಏರ್ಪಡಿಸುವ ಸಂಪ್ರದಾಯಕ್ಕೆ ಚಾಲನೆ ದೊರೆತಮೇಲೆ ಮೊದಲ ಬಾರಿಗೆ ಮಹಿಳಾ ಲೇಖಕಿ ಸಮ್ಮೇಳನದ ಅಧ್ಯಕ್ಷರಾದದ್ದು ೧೯೭೪ ರಲ್ಲಿ ಮಂಡ್ಯದಲ್ಲಿ ನಡೆದ ಸಮ್ಮೇಳನದಲ್ಲಿ. ಪುರುಷ ಲೇಖಕರಷ್ಟೇ ಮಹಿಳಾ ಲೇಖಕಿಯರೂ ಅತ್ಯಂತ ಸಕ್ರಿಯವಾಗಿ ಬರವಣಿಗೆಯ ಕೃಷಿಯಲ್ಲಿ ತೊಡಗಿಸಿಕೊಂಡು ಅತ್ಯತ್ತಮ ಸಾಹಿತ್ಯವನ್ನು ರಚಿಸುತ್ತಿದ್ದರೂ ಕನ್ನಡ ಸಾಹಿತ್ಯ ಪರಿಷತ್ತು ಮಹಿಳಾ ಲೇಖಕಿಯರನ್ನು ಸ್ತ್ರೀ ಎನ್ನುವ ತಾರತಮ್ಯದ ನೆಲೆಯಲ್ಲೇ ನಡೆಸಿಕೊಳ್ಳುತ್ತಿದೆ.

                 ಪುಸ್ತಕ ಪ್ರಕಟಣೆ ಸಾಹಿತ್ಯ   ಪರಿಷತ್ತಿನ  ಬಹುಮುಖ್ಯ   ಚಟುವಟಿಕೆಯಾಗಬೇಕಿತ್ತು. ಆದರೆ ಪರಿಷತ್ತು ಪ್ರಕಟಿಸಿರುವ ಪುಸ್ತಕಗಳ ಸಂಖ್ಯೆಯನ್ನು ಗಮನಿಸಿದಾಗ ಪರಿಷತ್ತಿನಿಂದ ಪ್ರಕಟಣಾ ವಿಷಯವಾಗಿ ಗಮನಾರ್ಹವಾದ ಕೆಲಸ ಆಗುತ್ತಿಲ್ಲ ಎನ್ನುವುದು ತಿಳಿದು ಬರುತ್ತದೆ. ಕನ್ನಡ ಸಾಹಿತ್ಯ   ಪರಿಷತ್ತು ಇದುವರೆಗೂ ಪ್ರಕಟಿಸಿದ ಪುಸ್ತಕಗಳ ಸಂಖ್ಯೆ ೧೫೦೦. ನೂರು ವರ್ಷಗಳ ಇತಿಹಾಸವಿರುವ ಪರಿಷತ್ತು ವರ್ಷಕ್ಕೆ ಸರಾಸರಿ ೧೫ ಪುಸ್ತಕಗಳನ್ನು ಪ್ರಕಟಿಸಿದೆ. ನವಕರ್ನಾಟಕ, ಲೋಹಿಯಾ ಪ್ರಕಾಶನ, ಸಪ್ನಾ, ಗುಲಬರ್ಗಾದ ಸಿದ್ಧಲಿಂಗೇಶ್ವರ ಇತ್ಯಾದಿ ಪ್ರಕಾಶನ ಸಂಸ್ಥೆಗಳು ಪ್ರತಿವರ್ಷ ನೂರಾರು ಪುಸ್ತಕಗಳನ್ನು ಪ್ರಕಟಿಸುತ್ತಿರುವಾಗ ಸರ್ಕಾರಿ ಅನುದಾನದ ಸಂಸ್ಥೆಯೊಂದು ಹೀಗೆ ಕನ್ನಡ ಪುಸ್ತಕಗಳ ಪ್ರಕಟಣೆಯಲ್ಲಿ ನಿರಾಸಕ್ತಿ ತೋರುತ್ತಿರುವುದು ಕನ್ನಡಿಗರು ಯೋಚಿಸಬೇಕಾದ ಸಂಗತಿ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳ ಪ್ರಕಟಣೆಯಲ್ಲಿ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರುಗಳ ಮತ್ತು ಪದಾಧಿಕಾರಿಗಳ ಶಿಫಾರಸ್ಸು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.  ಬಹುತೇಕ ಲೇಖಕರಿಗೆ  ವಸೂಲಿ ಬಾಜಿ ಮೂಲಕ ಪರಿಷತ್ತಿನಿಂದ ಪುಸ್ತಕಗಳ ಪ್ರಕಟಣೆಯ ಭಾಗ್ಯ ಸಿಗುತ್ತಿದೆ. ಈ ವಿಷಯದಲ್ಲಿ ಲೇಖಕರು  ಜಾತಿ, ಸಮುದಾಯ ಮತ್ತು ಪ್ರಾದೇಶಿಕತೆಯ ಕೋಟಾದಡಿ ಫಲಾನುಭವಿಗಳಾಗುತ್ತಿರುವುದು ದುರಂತದ ಸಂಗತಿ. ಜೊತೆಗೆ ಪರಿಷತ್ತು ಕಳೆದ ಹಲವು ದಶಕಗಳಿಂದ  'ಕನ್ನಡ ನುಡಿ' ಎನ್ನುವ ಮಾಸಿಕ ಪತ್ರಿಕೆಯನ್ನು ಪ್ರಕಟಿಸುತ್ತಿದ್ದು ಅದು ನೆಪ ಮಾತ್ರಕ್ಕೆ ಎನ್ನುವಂತೆ ಪ್ರಕಟವಾಗುತ್ತಿದೆ. ಅದರಲ್ಲೂ ಕೆಲವೇ ಕೆಲವು ಲೇಖಕರು ಈ ಪತ್ರಿಕೆಗೆ ಬರೆಯುವ ಗುತ್ತಿಗೆ ತೆಗೆದುಕೊಂಡಂತೆ ಸರಣಿಯಲ್ಲಿ ಲೇಖನಗಳನ್ನು ಬರೆಯುತ್ತಿರುವರು. ಕೆಲವೇ ಪುಟಗಳಲ್ಲಿ ಪ್ರಕಟವಾಗುವ ಪರಿಷತ್ತಿನ ಪತ್ರಿಕೆ  ಸುಧಾ, ತರಂಗ, ಕರ್ಮವೀರ ಪತ್ರಿಕೆಗಳ ಗುಣಮಟ್ಟವನ್ನು ಮುಟ್ಟಲಾರದು. ಇನ್ನೊಂದು ಕಳವಳದ ಸಂಗತಿ ಎಂದರೆ ಈ ಮೊದಲು ಪ್ರತಿತಿಂಗಳು ಪ್ರಕಟವಾಗುತ್ತಿದ್ದ 'ಕನ್ನಡ ನುಡಿ' ಪತ್ರಿಕೆಯನ್ನು ಈಗ ಕೆಲವು ತಿಂಗಳುಗಳಿಂದ ತ್ರೈಮಾಸಿಕವಾಗಿ ಪ್ರಕಟಿಸಲಾಗುತ್ತಿದೆ. ಇದು ಪರಿಷತ್ತಿನ ಆರ್ಥಿಕ ದಾರಿದ್ರ್ಯವೋ ಅಥವಾ ವೈಚಾರಿಕ ದಾರಿದ್ರ್ಯವೋ ಎನ್ನುವುದು ಕನ್ನಡಿಗರಿಗೆ ಅರ್ಥವಾಗುತ್ತಿಲ್ಲ.

                       ಕನ್ನಡ ಸಾಹಿತ್ಯ ಪರಿಷತ್ತಿನ ಇನ್ನೊಂದು ಗಮನಾರ್ಹವಾದ ವಿಫಲತೆ ಎಂದರೆ ಅದು  ನಾಡು ನುಡಿಯ ರಕ್ಷಣೆ ವಿಷಯವಾಗಿ ಪರಿಷತ್ತು ತಳೆದ ದಿವ್ಯ ಮೌನ ಮತ್ತು ನಿರ್ಲಕ್ಷ್ಯ. ಕನ್ನಡ ಭಾಷೆಯ ರಕ್ಷಣೆಗಾಗಿ ಈ ನೆಲದಲ್ಲಿ ಅನೇಕ  ಚಳುವಳಿಗಳನ್ನು ಸಂಘಟಿಸಿ ಯಶಸ್ವಿಯಾದ ಉದಾಹರಣೆಗಳಿವೆ. ಆದರೆ  ಕನ್ನಡ ಸಾಹಿತ್ಯ ಪರಿಷತ್ತು ಯಾವತ್ತೂ ಮುಂಚೂಣಿಯಲ್ಲಿ ನಿಂತು ಚಳುವಳಿಗಳನ್ನು ಸಂಘಟಿಸಿದ ಉದಾಹರಣೆಯೇ ಇಲ್ಲ. ಗೋಕಾಕ ಚಳುವಳಿಯ ಸಂದರ್ಭದಲ್ಲಿ ನಾಡಿನ ಸಮಸ್ತ ಜನತೆ ಚಳುವಳಿಗೆ ಧುಮುಕಿದಾಗ ಕನ್ನಡ ಸಾಹಿತ್ಯ ಪರಿಷತ್ತು ತಟಸ್ಥ ನೀತಿಯನ್ನು ಅನುಸರಿಸಿತು. ಅದು ಕಾವೇರಿ ನೀರಿನ ವಿಷಯವಾಗಿರಬಹುದು, ಅನ್ಯಭಾಷಾ ಸಿನಿಮಾಗಳ ಪ್ರದರ್ಶನದ ವಿರುದ್ಧದ ಚಳುವಳಿಯಾಗಿರಬಹುದು, ಡಬ್ಬಿಂಗ್ ವಿರೋಧಿ ನಿಲುವಾಗಿರಬಹುದು, ಮರಾಠಿಗರ ಕುತಂತ್ರದ ವಿರುದ್ಧದ ಹೋರಾಟವಾಗಿರಬಹುದು ಈ ಎಲ್ಲ ಸಂದರ್ಭಗಳಲ್ಲೂ ಕನ್ನಡ ಸಾಹಿತ್ಯ ಪರಿಷತ್ತು  ಮೌನದ ಮೊರೆಹೊಕ್ಕು ಹೋರಾಟಗಳಿಂದ  ದೂರವೇ ಉಳಿದಿದೆ.  ಒಂದು ರಕ್ಷಣಾ ವೇದಿಕೆಗೆ ಮತ್ತು ಒಬ್ಬ ವಾಟಾಳ್ ನಾಗರಾಜ್ ಗೆ ಕನ್ನಡದ ನೆಲ ಮತ್ತು ನುಡಿಯ ಬಗ್ಗೆ ಇರುವಷ್ಟು ಬದ್ಧತೆ ಪರಿಷತ್ತಿಗೆ ಇಲ್ಲದಿರುವುದು ಅತ್ಯಂತ ನಾಚಿಕೆಯ ಸಂಗತಿ. ವಿಪಾರ್ಯಾಸವೆಂದರೆ ಕೆಲವು ವರ್ಷಗಳ ಹಿಂದೆ ಸರ್ಕಾರಿ  ಇಂಗ್ಲಿಷ್ ಶಾಲೆಗಳು ಪ್ರಾರಂಭವಾಗಬಾರದೆಂದು  ಹೋರಾಟ ಮಾಡಿದ ಪರಿಷತ್ತಿನ ಪದಾಧಿಕಾರಿಗಳ ಮಕ್ಕಳು ಮತ್ತು ಮೊಮ್ಮಕ್ಕಳು ಓದುತ್ತಿದ್ದುದ್ದು  ಇಂಗ್ಲಿಷ್ ಮಾಧ್ಯಮದ ದುಬಾರಿ ಖಾಸಗಿ  ಕಾನ್ವೆಂಟ್ ಶಾಲೆಗಳಲ್ಲಿ. ಸರ್ಕಾರದ ಕೃಪಾಕಟಾಕ್ಷದಲ್ಲಿದ್ದೇನೆ ಎನ್ನುವ ಭಾವನೆಯೇ ಕನ್ನಡ ಸಾಹಿತ್ಯ ಪರಿಷತ್ತು ಚಳುವಳಿಗಳು ಮತ್ತು ಹೋರಾಟಗಳಿಂದ ವಿಮುಖವಾಗಿರುವುದಕ್ಕೆ ಪ್ರಮುಖ ಕಾರಣವಾಗಿರಬಹುದು. ಅದಕ್ಕೆಂದೇ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಪರಿಷತ್ತಿನ ಪದಾಧಿಕಾರಿಗಳು ಶಾಸಕರು ಮತ್ತು ಮಂತ್ರಿಗಳಿಗೆ ಮಣೆಹಾಕುವುದು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ.

                    ಇನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರ ಸಂಖ್ಯೆ ಗಮನಾರ್ಹವಾಗಿ ಬೆಳೆದಿಲ್ಲ. ಈ ವಿಷಯವಾಗಿ ನಾವು ಮತ್ತೆ ದೂಷಿಸುವುದು ಕಸಾಪವನ್ನೇ. ಏಕೆಂದರೆ ಪರಿಷತ್ತು ಚುನಾವಣಾ ಸಂದರ್ಭವನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ಸದಸ್ಯತ್ವದ ನೊಂದಣಿ ವಿಷಯದಲ್ಲಿ ದಿವ್ಯ ನಿರ್ಲಿಪ್ತತೆಯನ್ನು ತಳೆಯುತ್ತ ಬಂದಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ನನ್ನದೇ ಅನುಭವದ ಕುರಿತು ಹೇಳುವುದಾದರೆ ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯನಾದದ್ದು ಹೀಗೆ ಚುನಾವಣೆ ಸಮೀಪಿಸುತ್ತಿರುವ ಘಳಿಗೆಯಲ್ಲಿ. ವಯಸ್ಸಾದ ಹಿರಿಯರೊಬ್ಬರು ನನ್ನನ್ನು ಸಂಪರ್ಕಿಸಿ ಆ ವರ್ಷ ಚುನಾವಣೆಗೆ ಸ್ಪರ್ಧಿಸುತ್ತಿರುವ ವ್ಯಕ್ತಿಯ ಕುರಿತಾಗಿ ಒಂದಿಷ್ಟು ಮಾತನಾಡಿ ತಮ್ಮ ಕೈಚೀಲದಲ್ಲಿರುವ ಅರ್ಜಿಯನ್ನು ನನಗೆ ಹಸ್ತಾಂತರಿಸಿದರು. ಅಚ್ಚರಿಯ ಸಂಗತಿ ಎಂದರೆ ಚುನಾವಣೆ  ಸಂದರ್ಭದಲ್ಲಿ ಸ್ಪರ್ಧಿಸುತ್ತಿರುವ ವ್ಯಕ್ತಿಗಳೇ  ಸದಸ್ಯತ್ವದ ಶುಲ್ಕವನ್ನು ಭರಿಸುವ ಪರಿಪಾಠವಿದೆ. ಹೀಗೆ ತಮ್ಮದೇ ಒಂದು ಮತಬ್ಯಾಂಕ್ ನ್ನು ಸೃಷ್ಟಿಸಿಕೊಳ್ಳುವ ಇರಾದೆಯಿಂದ ಸದಸ್ಯತ್ವದ ಅಭಿಯಾನಕ್ಕೆ ಮುತುವರ್ಜಿವಹಿಸುವ ನಮ್ಮ ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸಾಹಿತಿಗಳು ಚುನಾವಣೆಯ ನಂತರ ನಿಷ್ಕ್ರಿಯರಾಗುತ್ತಾರೆ. ಇಲ್ಲಿ ಸದಸ್ಯತ್ವದ ಸಂಖ್ಯೆಯನ್ನು ಹೆಚ್ಚಿಸಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬಲಪಡಿಸಬೇಕೆನ್ನುವ ಕಾಳಜಿಗಿಂತಲೂ ವೈಯಕ್ತಿಕ ಹಿತಾಸಕ್ತಿ ಬಹುಮುಖ್ಯವಾಗುತ್ತಿದೆ. ಇದೇ ಕಾರಣದಿಂದ ಏಳು ಕೋಟಿ ಕನ್ನಡಿಗರಿದ್ದೂ ಪರಿಷತ್ತಿನ ಸದಸ್ಯರ ಸಂಖ್ಯೆ ಒಂದೂವರೆ ಲಕ್ಷವನ್ನೂ ಮೀರಿಲ್ಲ.

                 ಕನ್ನಡ ಸಾಹಿತ್ಯ ಪರಿಷತ್ತು ನಾಡಿನ ಎಲ್ಲ ವರ್ಗದ ಮತ್ತು ಸಮುದಾಯದ ಸಾಹಿತ್ಯಿಕ ಆಶಯವನ್ನು ಪೂರೈಸುವ ಮತ್ತು ಎಲ್ಲ ಸಮುದಾಯದ ಬರಹಗಾರರ ದನಿಗೆ ವೇದಿಕೆಯಾಗುವ ಅವಕಾಶವನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ನಿರಾಕರಿಸುತ್ತ  ಬಂದಿದೆ ಎನ್ನುವ ಮಾತುಗಳು ಅನೇಕ ಸಂದರ್ಭಗಳಲ್ಲಿ ಕೇಳಿ ಬಂದಿವೆ. ಇದಕ್ಕೆ ಬಹುಮುಖ್ಯ ಕಾರಣ ಪರಿಷತ್ತಿನ ಪದಾಧಿಕಾರಿಗಳ ಸಂಕುಚಿತ ಮನಸ್ಸು ಮತ್ತು ಪೂರ್ವಾಗ್ರಹಪೀಡಿತ ಮನೋಭಾವ. ಸಾಮಾನ್ಯವಾಗಿ ಪರಿಷತ್ತಿನ ಪ್ರಕಟಣೆಯಲ್ಲಿ ಆಯಾ ಕಾಲದ ಪದಾಧಿಕಾರಿಗಳ ಜಾತಿ ಮತ್ತು ಸಮುದಾಯ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ. ತಮ್ಮದೇ ಜಾತಿ ಮತ್ತು ಸಮುದಾಯದ ಬರಹಗಾರರಿಗೆ ಈ ಪದಾಧಿಕಾರಿಗಳು ಮನ್ನಣೆ ನೀಡುವುದು ಹಾಗೂ ಪುಸ್ತಕ ಪ್ರಕಟಣೆಯಲ್ಲಿ ಆದ್ಯತೆ ನೀಡುವುದರಿಂದ ಎಲ್ಲ ವರ್ಗದ ಬರಹಗಾರರ ಆಶಯವನ್ನು ಪರಿಷತ್ತು ಪೂರೈಸುತ್ತಿಲ್ಲ. ಜೊತೆಗೆ ಪ್ರತಿವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ಏರ್ಪಡಿಸಿದಾಗ ಅದಕ್ಕೆ ಪರ್ಯಾಯವಾಗಿ ದಲಿತ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುವುದು ಅದೊಂದು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ. ಪ್ರತಿವರ್ಷದ ಸಾಹಿತ್ಯ ಸಮ್ಮೇಳನದಲ್ಲಿ ದಲಿತ ಸಾಹಿತ್ಯಕ್ಕೆ  ವೇದಿಕೆ ನೀಡದಿರುವುದೇ ಇದಕ್ಕೆ ಕಾರಣ ಎನ್ನುವ ಆರೋಪ ಕೇಳಿಬರುತ್ತಿದೆ. ದಲಿತ ಸಾಹಿತ್ಯ ಕನ್ನಡ ಸಾಹಿತ್ಯ ಪರಂಪರೆಯ ಬಹುಮುಖ್ಯ ಕಾಲಘಟ್ಟಗಳಲ್ಲೊಂದು. ದಲಿತ ಸಾಹಿತ್ಯವನ್ನು ಹೊರಗಿಟ್ಟು ಕನ್ನಡ ಸಾಹಿತ್ಯವನ್ನು ನೋಡುವುದು ಅಪೂರ್ಣ ಎಂದೆನಿಸುತ್ತದೆ. ಶರಣರ ಮತ್ತು ಸಂತರ ಸಾಹಿತ್ಯಕ್ಕೆ ವೇದಿಕೆ ಒದಗಿಸುವ ಪರಿಷತ್ತು ದಲಿತ ಸಾಹಿತ್ಯ ವಿಚಾರವಾಗಿ ದಿವ್ಯ ಮೌನ ತಳೆದಿರುವುದು ಇಡೀ ಕನ್ನಡ ಸಾಹಿತ್ಯಕ್ಕೆ ಮಾಡುತ್ತಿರುವ ಘೋರ ಅಪಚಾರ. ವರ್ಗ ಮತ್ತು ಸಮುದಾಯದ ವಿಚಾರವಾಗಿ ಪರಿಷತ್ತಿನ ಧೋರಣೆಗಳು ಬದಲಾಗಬೇಕಿದೆ.

ಕೊನೆಯ ಮಾತು 


           ಕನ್ನಡ ಸಾಹಿತ್ಯ ಪರಿಷತ್ತು ಇವತ್ತು ರಾಜಕೀಯದ ಅಖಾಡವಾಗಿ  ರೂಪಾಂತರಗೊಂಡಿದೆ ಎನ್ನುವುದಕ್ಕೆ ಈ ದಿನದವರೆಗೂ ೮೧ ನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಎಲ್ಲಿ ಏರ್ಪಡಿಸಬೇಕೆನ್ನುವ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನುವುದೇ ಸಾಕ್ಷಿ. ಇದಕ್ಕೆಲ್ಲ ಕಾರಣ ನಮ್ಮ ಸಾಹಿತಿಗಳ ಮತ್ತು ಪರಿಷತ್ತಿನ ಪದಾಧಿಕಾರಿಗಳ ಸ್ವಾರ್ಥ ಮತ್ತು ಅವಕಾಶವಾದಿತನ. ಕನ್ನಡ ಸಾಹಿತ್ಯ ಪರಿಷತ್ತನ್ನು ನಾಡಿನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ರಕ್ಷಿಸಿ ಬೆಳೆಸುವ ಒಂದು ಸಾಂಸ್ಕೃತಿಕ ಕೇಂದ್ರವಾಗಿಸುವುದಕ್ಕಿಂತ ಅದನ್ನು ತಮ್ಮ ತಮ್ಮ ಹಿತಾಸಕ್ತಿಗೆ ಅನುಕೂಲವಾಗುವಂತೆ ಬಳಸಿಕೊಳ್ಳುವದರಲ್ಲೇ ಇವರಿಗೆ ಹೆಚ್ಚಿನ ಆಸಕ್ತಿ. ಜೊತೆಗೆ ಜಾತಿ ಮತ್ತು ಸಮುದಾಯಗಳು ಪರಿಷತ್ತಿನ ನಡೆಯನ್ನು ನಿರ್ಧರಿಸುತ್ತಿವೆ. ಹೀಗೆ ಅವರವರ ವೈಯಕ್ತಿಕ ಹಿತಾಸಕ್ತಿ ಮತ್ತು ಜಾತಿ ಹಾಗೂ ಸಮುದಾಯಗಳ ನಡುವೆ ಸಿಲುಕಿರುವ ನೂರುವರ್ಷಗಳ ಇತಿಹಾಸವಿರುವ ಕನ್ನಡ ಸಾಹಿತ್ಯ ಪರಿಷತ್ತು ಇವತ್ತು ಶಕ್ತಿಹೀನವಾಗಿದೆ. ಅದರ ವೈಭವವನ್ನು ಮತ್ತೆ ಮರಳಿ ತರುವ ಹಾಗೂ ಪರಿಷತ್ತಿನ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ನಾಡು ನುಡಿಯ ರಕ್ಷಣೆಯ ದೃಷ್ಟಿಯಿಂದ ಇವತ್ತಿನ ತುರ್ತು ಅಗತ್ಯವಾಗಿದೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ