Saturday, August 17, 2019

ಶಿಕ್ಷಣದ ಉದಾರೀಕರಣ ಮತ್ತು ಗುಣಮಟ್ಟದ ಕುಸಿತ

    

    ನಮ್ಮ ರಾಷ್ಟ್ರದಲ್ಲಿ ಶಿಕ್ಷಣವೆನ್ನುವುದು ಅದೊಂದು ಪ್ರಯೋಗಾತ್ಮಕ ಕ್ಷೇತ್ರವಾಗಿದೆ. ಕಾಲಕಾಲಕ್ಕೆ ಜನರಿಂದ ಆಯ್ಕೆಯಾಗಿ  ಬರುವ ಚುನಾಯಿತ ಪ್ರತಿನಿಧಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಮಾರ್ಪಾಡುಗಳನ್ನು ಮಾಡುತ್ತಿರುವರು. ಈ ಮಂತ್ರಿಮಹೋದಯರ ತಾಳಕ್ಕೆ ತಕ್ಕಂತೆ ಕುಣಿಯುವ ಸರ್ಕಾರಿ ಅಧಿಕಾರಿಗಳು ಕೂಡ ಏನೊಂದೂ ಯೋಚಿಸದೆ ಬದಲಾವಣೆಗಳನ್ನು ತರುತ್ತಿರುವರು. ದಿನಕ್ಕೊಂದು ಹೊಸ ನಿಯಮಗಳು ಶಿಕ್ಷಣ ಕ್ಷೇತ್ರದಲ್ಲಿ ಜಾರಿಯಾಗುತ್ತವೆ. ಹಳೆಯ ನಿಯಮಗಳು ಮರೆಯಾಗುತ್ತವೆ. ಪಾಠ ಕಲಿಸುವವರಿಗೂ ಮತ್ತು ಕಲಿಯುವವರಿಗೂ ಒಂದರ್ಥದಲ್ಲಿ ಕಣ್ಣುಕಟ್ಟಿ ಕಾಡಿನಲ್ಲಿ ಬಿಟ್ಟ ಸ್ಥಿತಿ. ಪರಿಣಾಮವಾಗಿ ಶಿಕ್ಷಣದ ಗುಣಮಟ್ಟ ಇಲ್ಲಿ ಹಂತಹಂತವಾಗಿ ಕುಸಿಯುತ್ತಿದೆ. ಹೊಸ ಹೊಸ ನಿಯಮಗಳನ್ನು ಜಾರಿಗೆ ತರುವ ಭರದಲ್ಲಿ ಮಕ್ಕಳನ್ನು ಇವತ್ತಿಗೂ ಮೆಕಾಲೆಯ ಶಿಕ್ಷಣಕ್ಕೆ ಜೋತು ಬೀಳಿಸುವಂಥ ವ್ಯವಸ್ಥೆ ಇಲ್ಲಿದೆ. ಶಿಕ್ಷಣವೆನ್ನುವುದು ಮಗುವಿನ ಆಸಕ್ತಿಗನುಗುಣವಾಗಿ ದೊರೆತು ಆ ಮೂಲಕ ಸರ್ವಾಂಗೀಣ ಬೆಳವಣಿಗೆಗೆ ಕಾರಣವಾಗಬೇಕು. ಶಿಕ್ಷಣದ ಮೂಲಕವೇ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತಾಗಬೇಕು. ಶಾಲಾ ಕಾಲೇಜುಗಳಲ್ಲಿನ ಓದಿನಿಂದ ಕೇವಲ ಗುಮಾಸ್ತರು, ಶಿಕ್ಷಕರು, ವೈದ್ಯರು, ಇಂಜಿನಿಯರರು ಮಾತ್ರ ರೂಪುಗೊಳ್ಳದೆ ರೈತರೂ ಹುಟ್ಟಿಬರಬೇಕು ಆಗ ಮಾತ್ರ ಶಿಕ್ಷಣದ ಘನವಾದ ಉದ್ದೇಶ ಈಡೇರಲು ಸಾಧ್ಯ. ಆದರೆ ಶಾಲೆ ಕಾಲೇಜುಗಳ ಸ್ಥಾಪನೆಯಲ್ಲಿ ಹೆಚ್ಚಿನ ಮುತುವರ್ಜಿವಹಿಸುವ ಸರ್ಕಾರ ಶಿಕ್ಷಣದ ಮೂಲ ಉದ್ದೇಶವನ್ನೇ ಮರೆತು ಬಿಟ್ಟಿದೆ. ಇಲ್ಲಿ ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಅನೇಕ ವಿಪರ್ಯಾಸಗಳಿರುವುದು ಸತ್ಯ. 

ಪ್ರಾಥಮಿಕ ಶಿಕ್ಷಣ

ಉದಾಹರಣೆಗೆ ಪ್ರಾಥಮಿಕ ಶಿಕ್ಷಣವನ್ನೇ ತೆಗೆದುಕೊಳ್ಳಿ. ಒಂದೆಡೆ ಸರ್ಕಾರದ ಕನ್ನಡ ಮಾಧ್ಯಮ ಶಾಲೆಗಳ ಕುರಿತು ತುಂಬ ಕಾಳಜಿ ಇರುವಂತೆ ಮಾತನಾಡುವ ಜನಪ್ರತಿನಿಧಿಗಳು ಇನ್ನೊಂದೆಡೆ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸ್ಥಾಪನೆಗೆ ಹೆಚ್ಚಿನ ಒಲವು ತೋರುತ್ತಾರೆ. ಶಿಕ್ಷಣದ ನೀತಿ ನಿಯಮಗಳನ್ನು ಸಡಿಲಗೊಳಿಸಿ ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸ್ಥಾಪನೆಗೆ ಒಪ್ಪಿಗೆ ನೀಡುತ್ತಾರೆ. ಈ ಮೊದಲಿನ ಕಾನ್ವೆಂಟ್ ಶಾಲೆಗಳೆಲ್ಲ ಈಗ ಕೇಂದ್ರೀಯ ಪಠ್ಯಕ್ರಮದ ಶಾಲೆ ಎನ್ನುವ ಹೊಸ ರೂಪವನ್ನು ತೆಳೆದು ಪಾಲಕರನ್ನು ಆಕರ್ಷಿಸುತ್ತಿವೆ. ಆರಂಭದಲ್ಲಿ ಜಿಲ್ಲೆಗೊಂದರಂತಿದ್ದ ಸಿ.ಬಿ.ಎಸ್.ಇ  ಶಾಲೆಗಳನ್ನು ಈಗ ಹೊಬಳಿಗಳಲ್ಲೂ ನಾವು ಕಾಣಬಹುದು. ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರೀಯ ಪಠ್ಯಕ್ರಮದ ಶಾಲೆಗಳು ಸ್ಥಾಪನೆಯಾಗುತ್ತಿರುವುದರಿಂದ ಪಾಲಕರಿಗೆ ತಮ್ಮ ಮಕ್ಕಳನ್ನು ಇಂಥ ಶಾಲೆಗಳಿಗೆ ಸೇರಿಸುವುದು ಅತ್ಯಂತ ಸುಲಭವಾಗಿದೆ. ಒಂದೆರಡು ದಶಕಗಳ ಹಿಂದೆ ಊರಿನಲ್ಲಿನ ಕೆಲವೇ ಆರ್ಥಿಕವಾಗಿ ಸ್ಥಿತಿವಂತರಾಗಿರುವ ಕುಟುಂಬವರ್ಗದವರು ತಮ್ಮ ಮಕ್ಕಳನ್ನು ದೂರದ ವಸತಿ ಶಾಲೆಗಳಿಗೆ ಸೇರಿಸುತ್ತಿದ್ದರು. ಉಳಿದವರೆಲ್ಲ ತಮ್ಮ ಮಕ್ಕಳನ್ನು  ಊರಿನಲ್ಲೇ ಇರುವ ಕನ್ನಡ ಮಾಧ್ಯಮದ ಶಾಲೆಗಳಿಗೆ ಕಳುಹಿಸುತ್ತಿದ್ದರು. ಬದಲಾದ ಕಾಲಘಟ್ಟದಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳು ಅದರಲ್ಲೂ ಸಿ.ಬಿ.ಎಸ್.ಇ  ಎನ್ನುವ ಹಣೆಪಟ್ಟಿಯೊಂದಿಗೆ ಜಿಲ್ಲೆ, ತಾಲೂಕುಗಳಲ್ಲಿ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲೂ ಅಸ್ತಿತ್ವಕ್ಕೆ ಬರಲಾರಂಭಿಸಿದ ಪರಿಣಾಮ ಗ್ರಾಮಗಳ ಬಹುತೇಕ ಕುಟುಂಬಗಳ ಮಕ್ಕಳು ಈ ಹೊಸ ಖಾಸಗಿ ಶಾಲೆಗಳ ಫಲಾನುಭವಿಗಳಾದರು. ಜೊತೆಗೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಿಂದ ಮಾತ್ರ ಮಕ್ಕಳು ವೈದ್ಯಕೀಯ ಮತ್ತು ಇಂಜಿನಿಯರಿಂಗ್‍ನಂಥ ವೃತ್ತಿಪರ ಕೋರ್ಸುಗಳಿಗೆ ಸುಲಭವಾಗಿ ಪ್ರವೇಶ ಪಡೆಯಲು ಸಾಧ್ಯ ಎನ್ನುವ ಆಸೆ ಹುಟ್ಟಿಸುವ ಆಡಳಿತ ಮಂಡಳಿಗಳ ಹುನ್ನಾರ ಕೂಡ ಇಲ್ಲಿ ಕೆಲಸ ಮಾಡಿತು. ಇರಲಿ ಕೇವಲ ಕೆಲವೇ ಕುಟುಂಬಗಳ ಕೈಗೆ ದಕ್ಕುತ್ತ ಉಳಿದವರಿಗೆ ಮರೀಚಿಕೆಯಾಗಿಯೇ  ಉಳಿದಿದ್ದ ಈ ಹೊಸ ರೂಪದ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಎಲ್ಲರಿಗೂ ದೊರಕುವಂತಾದದ್ದು ಸಂತೋಷದ ಸಂಗತಿ. ಆದರೆ ಹೀಗೆ ಗ್ರಾಮಾಂತರ ಪ್ರದೇಶಗಳಲ್ಲೂ ಕೇಂದ್ರೀಯ ಪಠ್ಯಕ್ರಮದ ಶಾಲೆಗಳ ಸ್ಥಾಪನೆಗೆ ಒತ್ತು ನೀಡಿದ ಸರ್ಕಾರ ಅಲ್ಲಿನ ಗುಣಮಟ್ಟವನ್ನು ನಿರ್ಲಕ್ಷಿಸಿದ್ದು ಮನ್ನಿಸಲಾಗದ ಅಪರಾಧ. ಈ ಶಾಲೆಗಳಲ್ಲಿನ ಪಠ್ಯಕ್ರಮ ಮೊದಲೇ ವಿದ್ಯಾರ್ಥಿಗಳಿಗೆ ಅದೊಂದು ಕಬ್ಬಿಣದ ಕಡಲೆ. ಪರಿಸ್ಥಿತಿ ಹೀಗಿರುವಾಗ ಅಲ್ಲಿ ಪಾಠ ಮಾಡುವ ಶಿಕ್ಷಕರ ಶೈಕ್ಷಣಿಕ ಅರ್ಹತೆಯ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. ಶಿಕ್ಷಕರ ನೇಮಕಾತಿಗೆ ನಿರ್ಧಿಷ್ಟ ಮಾನದಂಡಗಳಿಲ್ಲದಿರುವುದರಿಂದ ಈ ಶಾಲೆಗಳಲ್ಲಿ ಪಿ.ಯು.ಸಿ ವಿದ್ಯಾರ್ಹತೆಯಿಂದ ಸ್ನಾತಕೋತ್ತರ ಪದವಿ ಪಡೆದವರವರೆಗೆ ಯಾರೂ ಬೇಕಾದರೂ ಪಾಠ ಮಾಡಬಹುದು. ಕಡಿಮೆ ವಿದ್ಯಾರ್ಹತೆ ಇರುವ ಶಿಕ್ಷಕರನ್ನು ಪೂರ್ವಪ್ರಾಥಮಿಕಕ್ಕೂ ಮತ್ತು ಹೆಚ್ಚಿನ ವಿದ್ಯಾರ್ಹತೆಯ ಶಿಕ್ಷಕರನ್ನು ಮಾಧ್ಯಮಿಕ ಮತ್ತು ಪ್ರೌಢಶಿಕ್ಷಣಕ್ಕೂ ನೇಮಕಾತಿ ಮಾಡುವುದುಂಟು. ಕೆಲವೊಮ್ಮೆ ವಿದ್ಯಾರ್ಹತೆಗಿಂತ ಅನುಭವವೇ ಮುಖ್ಯವಾಗುವುದುಂಟು. ಬಿ.ಇಡಿ ಮತ್ತು ಎಮ್.ಇಡಿ ವಿದ್ಯಾರ್ಹತೆಗೆ ಇಲ್ಲಿ ಹೆಚ್ಚಿನ ಪ್ರಾಧಾನ್ಯತೆ ಇಲ್ಲ. ಜೊತೆಗೆ ಸರ್ಕಾರದ ನಿಯಂತ್ರಣವಿಲ್ಲದಿರುವುದರಿಂದ ಖಾಸಗಿ ಸಂಸ್ಥೆಗಳ ಆಡಳಿತ ವರ್ಗದವರು ಕಡಿಮೆ ಸಂಬಳಕ್ಕೆ ಅರ್ಹರಲ್ಲದವರನ್ನು ಶಿಕ್ಷಕರನ್ನಾಗಿ ನೇಮಿಸುವ ಪರಿಪಾಠವಿದೆ. ಒಟ್ಟಾರೆ ಈ ಎಲ್ಲ ವೈರುಧ್ಯಗಳ ಪರಿಣಾಮ ಇಂಗ್ಲಿಷ್ ಮಾಧ್ಯಮದ ಪ್ರಾಥಮಿಕ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. 

ಇಂಜಿನಿಯರಿಂಗ್ ಕಾಲೇಜುಗಳು

ನಿಮಗೆ ನೆನಪಿರಬಹುದು ಕೆಲವು ವರ್ಷಗಳ ಹಿಂದೆ ಅಂದಿನ ಸರ್ಕಾರ ತಾಲೂಕಿಗೊಂದರಂತೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡಿ ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಿತು. ಕೆಲವು ತಾಲೂಕುಗಳಲ್ಲಿ ಇನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ ಎನ್ನುವುದು ಬೇರೆ ವಿಷಯ. ಆದರೆ ಸರ್ಕಾರದ ಈ ಹೊಸ ನೀತಿಯಿಂದಾಗಿ ಸಾಕಷ್ಟು ಸಂಖ್ಯೆಯಲ್ಲಿ ಹೊಸ ಇಂಜಿನಿಯರಿಂಗ್ ಕಾಲೇಜುಗಳು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದವು. ಗಮನಿಸಬೇಕಾದ ಸಂಗತಿ ಎಂದರೆ ಆ ವೇಳೆಗಾಗಲೇ ವಿದ್ಯಾರ್ಥಿಗಳ ಕೊರತೆಯನ್ನು ಅನುಭವಿಸುವಷ್ಟು ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳು ರಾಜ್ಯದಲ್ಲಿ ಸ್ಥಾಪನೆಯಾಗಿದ್ದವು. ಹೀಗಿದ್ದೂ ಸರ್ಕಾರ ಖಾಸಗಿ ಕಾಲೇಜುಗಳಿಗೆ ಅನುಮತಿ ನೀಡುವುದರೊಂದಿಗೆ ಸರ್ಕಾರಿ ಕಾಲೇಜುಗಳ ಸ್ಥಾಪನೆಗೂ ಮುಂದಾಯಿತು. ಹೀಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಲೇಜುಗಳನ್ನು ಸ್ಥಾಪಿಸುವ ಮತ್ತು ಅನುಮತಿ ನೀಡುವ ಸರ್ಕಾರಕ್ಕೆ ಅಲ್ಲಿನ ಗುಣಮಟ್ಟವನ್ನು ಕುಸಿಯದಂತೆ ನೋಡಿಕೊಳ್ಳುವ ಮಹತ್ವದ ಜವಾಬ್ದಾರಿಯೂ ಇದೆ. ಹೀಗೆ ಪ್ರಾಥಮಿಕ ಶಾಲೆಗಳಂತೆ ಊರಿಗೊಂದು ವೃತ್ತಿಪರ ಕಾಲೇಜುಗಳನ್ನು ಸ್ಥಾಪಿಸುವುದರಿಂದ ನಿರುದ್ಯೋಗ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಹುದು ಎನ್ನುವುದು ಮೂರ್ಖತನವಾಗುತ್ತದೆ. ಇವತ್ತು ಪ್ರವೇಶಕ್ಕೆ ವಿದ್ಯಾರ್ಥಿಗಳು ದೊರೆಯದಷ್ಟು ಸಂಖ್ಯೆಯಲ್ಲಿ ಇಂಜಿನಿಯರಿಂಗ್ ಕಾಲೇಜುಗಳು ರಾಜ್ಯದಲ್ಲಿವೆ. ಈ ವರ್ಷ ಪ್ರತಿಶತ 50 ರಷ್ಟು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಶೂನ್ಯವಾಗಿದೆ ಎಂದು ತಾಂತ್ರಿಕ ಶಿಕ್ಷಣ ಮಂಡಳಿಯೇ  ಹೇಳಿಕೊಂಡಿದೆ. ಐ.ಐ.ಟಿ ಮತ್ತು ಕೆಲವೇ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳನ್ನು ಹೊರತುಪಡಿಸಿದರೆ ಇನ್ನುಳಿದ ಕಾಲೇಜುಗಳಲ್ಲಿನ ಶಿಕ್ಷಣದ ಗುಣಮಟ್ಟ ಅಷ್ಟೊಂದು ಆಶಾದಾಯಕವಾಗಿಲ್ಲ. ಪರಿಣಾಮವಾಗಿ ಇಂಥ ವಿದ್ಯಾಲಯಗಳಿಂದ ಹೊರಬರುತ್ತಿರುವ ಇಂಜಿನಿಯರಿಂಗ್ ಪದವಿಧರರು ನಿರುದ್ಯೋಗದ ಭೀತಿಯನ್ನು ಎದುರಿಸುತ್ತಿರುವರು. 

ವೈದ್ಯಕೀಯ ಶಿಕ್ಷಣ

ಕೇಂದ್ರ ಸರ್ಕಾರ ವೈದ್ಯಕೀಯ ಶಿಕ್ಷಣದ ನೀತಿ ನಿಯಮಗಳನ್ನು ರೂಪಿಸುತ್ತಿದ್ದ ‘ಭಾರತೀಯ ವೈದ್ಯಕೀಯ ಮಂಡಳಿ’ಯನ್ನು 2018 ನೇ ವರ್ಷಕ್ಕೆ ಅನ್ವಯಿಸುವಂತೆ ವಿಸರ್ಜಿಸಿದೆ. ಇನ್ನು ಮುಂದೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅನುಮತಿ ನೀಡುವುದು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಸುಪರ್ದಿಗೆ ಒಳಪಡಲಿದೆ. ವೈದ್ಯಕೀಯ ಶಿಕ್ಷಣವೆನ್ನುವುದು ಖಾಸಗಿ ಒಡೆತನಕ್ಕೆ ಒಳಪಟ್ಟು ಬಂಡವಾಳ ಹೂಡುವ ಉದ್ದಿಮೆಯಾಗುವುದನ್ನು ತಪ್ಪಿಸಲು ಭಾರತ ರತ್ನ ಡಾ.ಬಿ.ಸಿ.ರಾಯ್  ಅವರ ಮಾರ್ಗದರ್ಶನದಲ್ಲಿ 1939 ರಲ್ಲಿ ‘ಭಾರತೀಯ ವೈದ್ಯಕೀಯ ಮಂಡಳಿ’ಯನ್ನು ಸ್ಥಾಪಿಸಲಾಯಿತು.   ಭಾರತೀಯ ವೈದ್ಯಕೀಯ ಮಂಡಳಿ ವೈದ್ಯಕೀಯ ಶಿಕ್ಷಣದ ಉದ್ದೇಶಗಳನ್ನು ರೂಪಿಸಿದೆ. ಆ ಉದ್ದೇಶಗಳು ಹೀಗಿವೆ;
1. ವೈದ್ಯಕೀಯ ಶಿಕ್ಷಣವು ರಾಷ್ಟ್ರೀಯ ಆರೋಗ್ಯ ಜಾಗೃತಾ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಟಾನಕ್ಕೆ ತರಲು ಪ್ರಯತ್ನಿಸುವುದು.
2. ವೈದ್ಯಕೀಯ ಶಿಕ್ಷಣದ ಮೇಲೆ ರಾಷ್ಟ್ರ ಮತ್ತು ಜನರು ಇಟ್ಟಿರುವ ನಿರೀಕ್ಷೆಗಳನ್ನು ಸಾಕಾರಗೊಳಿಸುವುದು.
3. ವೈದ್ಯನಾದವನಲ್ಲಿ ತನ್ನ ವೃತ್ತಿಯ ಹೊರತಾಗಿಯೂ ಆದಾಯದ ಮೂಲವನ್ನು ಕಂಡು ಕೊಂಡು ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸುವ ಸಾಮಥ್ರ್ಯವನ್ನು ಬೆಳೆಸುವುದು.
ಹೀಗೆ ಒಂದು ಘನ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಭಾರತೀಯ ವೈದ್ಯಕೀಯ ಮಂಡಳಿಯು ಕಾಲಕ್ರಮೇಣ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ಬಂದು ನಿಂತಿತು. ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು ಕೂಡಿಯೇ  ಹಣಮಾಡುವ ದಂಧೆಗಿಳಿದರು. ಒಂದೆಡೆ ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಕಾಪಾಡುವ ಮಾತನಾಡುತ್ತ ಇನ್ನೊಂದೆಡೆ ಸೌಲಭ್ಯಗಳ ಕೊರತೆಯ ನಡುವೆಯೂ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ಅನುಮತಿ ನೀಡುತ್ತ ಬಂದಿದ್ದು ವಿಪರ್ಯಾಸ. ವೈದ್ಯಕೀಯ ಶಿಕ್ಷಣದಂಥ ವೃತ್ತಿಪರ ಶಿಕ್ಷಣವನ್ನು ಬಂಡವಾಳದಾರರ ಕುಟುಂಬದ ಕಸುಬಾಗಿಸುವುದನ್ನು ತಪ್ಪಿಸಬೇಕಿದ್ದ ಮಂಡಳಿಯೇ  ವೈದ್ಯಕೀಯ ಶಿಕ್ಷಣದ ಮೇಲೆ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡತೊಡಗಿತು. ಪರಿಣಾಮವಾಗಿ ನೂರಾರು ಕೊರತೆಗಳ ನಡುವೆಯೂ ಅಸ್ಥಿತ್ವಕ್ಕೆ ಬಂದ ವೈದ್ಯಕೀಯ ಕಾಲೇಜುಗಳಿಂದಾಗಿ ಇವತ್ತು ಶಿಕ್ಷಣದ ಗುಣಮಟ್ಟ ಗಮನಾರ್ಹವಾಗಿ ಕುಸಿದಿದೆ. ಈ ಸಂದರ್ಭ ಭಾರತೀಯ ವೈದ್ಯಕೀಯ ಮಂಡಳಿಯನ್ನು ವಿಸರ್ಜಿಸಿದ ಸರ್ಕಾರದ ನಡೆ ಮೆಚ್ಚುವಂತಹದ್ದು. ಆದರೆ ಮುಂದೊಂದು ದಿನ ಸರ್ಕಾರವೇ ವೈದ್ಯಕೀಯ ಶಿಕ್ಷಣದ ಅಧ:ಪತನಕ್ಕೆ ಕಾರಣವಾಗಲಾರದೆನ್ನುವ ಭರವಸೆ ಇಲ್ಲ. ವೈದ್ಯಕೀಯ ಕಾಲೇಜುಗಳ ಅನುಮತಿ ನೇರವಾಗಿ ಸರ್ಕಾರದ ನಿಯಂತ್ರಣಕ್ಕೆ ಒಳಪಡುವುದರಿಂದ ಇಲ್ಲಿ ಜಾತಿ, ವರ್ಗ, ಧರ್ಮ, ರಾಜಕೀಯ ಪಕ್ಷಗಳು ಮುನ್ನೆಲೆಗೆ ಬರುತ್ತವೆ. ವಿವಿಧ ಕೋಟಾದಡಿ ವೈದ್ಯಕೀಯ ಕಾಲೇಜುಗಳ ಅನುವ್ಮತಿಗೆ ಅವಕಾಶ ದೊರೆತು ಮುಂದೊಂದು ದಿನ ಈ ಹಿಂದಿನ ವೈದ್ಯಕೀಯ ಮಂಡಳಿಯನ್ನು ಮೀರಿಸಿದ ಅವ್ಯವಹಾರ ಕಾಣಿಸಿಕೊಳ್ಳುತ್ತದೆ. ವೈದ್ಯಕೀಯ ಕಾಲೇಜುಗಳೇನೋ ಸಂಖ್ಯೆಯಲ್ಲಿ ವೃದ್ಧಿಸಬಹುದು ಆದರೆ ಶಿಕ್ಷಣದ ಗುಣಮಟ್ಟ ಕುಸಿಯುವುದು ನಿಶ್ಚಿತ.

ಡೀಮ್ಡ್ ವಿಶ್ವವಿದ್ಯಾಲಯಗಳು

ದೇಶದಲ್ಲಿ ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಠಿಯಿಂದ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಿಶ್ವವಿದ್ಯಾಲಯದ ಸ್ಥಾನ ಮಾನವನ್ನು ನೀಡುವ ನಿರ್ಧಾರ ಕೈಗೊಂಡಿತು. ಪರಿಣಾಮವಾಗಿ ಖಾಸಗಿ ಕಾಲೇಜುಗಳು ವಿಶ್ವವಿದ್ಯಾಲಯ ಎನ್ನುವ ಹಣೆಪಟ್ಟಿ ಹಚ್ಚಿಕೊಳ್ಳಲಾರಂಭಿಸಿವೆ. ಖಾಸಗಿ ಕಾಲೇಜುಗಳು ವಿಶ್ವವಿದ್ಯಾಲಯದ ಸ್ಥಾನಮಾನ ಪಡೆಯುತ್ತಿದ್ದಂತೆ ಶಿಕ್ಷಣ ಮತ್ತಷ್ಟು ದುಬಾರಿಯಾಗತೊಡಗಿತು ಮತ್ತು ಶಿಕ್ಷಣದಲ್ಲಿನ ಗುಣಾತ್ಮಕತೆ ಕುಸಿಯತೊಡಗಿತು. ಯಾವಾಗ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಡೀಮ್ಡ್ ವಿಶ್ವವಿದ್ಯಾಲಯದ ಗೌರವಕ್ಕೆ ಪಾತ್ರವಾಗುತ್ತದೆಯೋ ಆಗ ಅದು ತನ್ನ ಮೊದಲಿನ ವಿಶ್ವವಿದ್ಯಾಲಯದಿಂದ ಹೊರಬಂದು ತನ್ನದೇ ಪ್ರತ್ಯೇಕ ನೀತಿ ನಿಯಮಗಳನ್ನು ರೂಪಿಸಿಕೊಳ್ಳುತ್ತದೆ. ಪ್ರವೇಶ, ಬೋಧನೆ, ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಎಲ್ಲವೂ ಆ ಸಂಸ್ಥೆಯ ಸುಪರ್ದಿಯಲ್ಲೇ ನಡೆಯುತ್ತವೆ. ಯಾವ ಡೀಮ್ಡ್ ವಿಶ್ವವಿದ್ಯಾಲಯವು ತನ್ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅನುತ್ತೀರ್ಣರಾಗುವುದನ್ನು ಬಯಸಲಾರದು. ಆದ್ದರಿಂದ ಇಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯೂ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗುವನು. ಒಂದು ರೀತಿಯಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯಲು ಈ ಡೀಮ್ಡ್ ವಿಶ್ವವಿದ್ಯಾಲಯಗಳು ಕಾರಣವಾಗುತ್ತಿವೆ. ಹೀಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನ ನೀಡುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಉದಾಹರಣೆಗೆ 150 ದಾಖಲಾತಿ ಸೌಲಭ್ಯವಿರುವ ಖಾಸಗಿ ವೈದ್ಯಕೀಯ ಕಾಲೇಜೊಂದು ಡೀಮ್ಡ್ ವಿಶ್ವವಿದ್ಯಾಲಯದ ಮಾನ್ಯತೆ ಪಡೆದರೆ ಆಗ ಸರ್ಕಾರಕ್ಕೆ 60 ವೈದ್ಯಕೀಯ ಸೀಟುಗಳ ಕೊರತೆ ಉಂಟಾಗುತ್ತದೆ. ಅಂದರೆ 60 ಪ್ರತಿಭಾವಂತ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ವಂಚಿತರಾಗಬೇಕಾಗುತ್ತದೆ. ವಿದ್ಯಾರ್ಥಿಗಳು ಡೀಮ್ಡ್ ವಿಶ್ವವಿದ್ಯಾಲಯದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ವಿರೋಧಿಸಲು ಇಂಥದ್ದೊಂದು ಅನ್ಯಾಯವೇ ಬಹುಮುಖ್ಯ ಕಾರಣ. 

ಮುಕ್ತ ವಿಶ್ವವಿದ್ಯಾಲಯಗಳು

ಭಾರತದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಸ್ಥಾಪನೆಯೊಂದಿಗೆ ಅಂಚೆ ಮೂಲಕ ಪಡೆಯುವ ಶಿಕ್ಷಣಕ್ಕೆ ಅಡಿಪಾಯ ಹಾಕಲಾಯಿತು. ಸಾಮಾನ್ಯವಾಗಿ ಉನ್ನತ ಶಿಕ್ಷಣದಿಂದ ವಂಚಿತರಾದವರಿಗೆ ಈ ಒಂದು ಪದ್ಧತಿ ವರದಾನವಾಯಿತು. ನೌಕರ ವರ್ಗದವರು ಮಾತ್ರವಲ್ಲದೆ ಗೃಹಿಣಿಯರು ಕೂಡ ಈ ಮುಕ್ತ ವಿಶ್ವವಿದ್ಯಾಲಯಗಳ ಮೂಲಕ ಶಿಕ್ಷಣ ಪಡೆಯತೊಡಗಿದರು. ಈ ವಿಶ್ವವಿದ್ಯಾಲಯಗಳಲ್ಲಿ ಹಾಜರಾತಿಯ ಅವಶ್ಯಕತೆ ಇಲ್ಲದೆ ಪರೀಕ್ಷೆಗೆ ಮಾತ್ರ ಹಾಜರಾಗುವ ವ್ಯವಸ್ಥೆ ಇರುವುದರಿಂದ ಅನೇಕರಿಗೆ ಇದು ಅನುಕೂಲವಾಗಿ ಪರಿಣಮಿಸಿತು. ಪ್ರಾರಂಭದಲ್ಲಿ ವಿದ್ಯಾಕಾಂಕ್ಷಿಗಳ ನೆಲೆಯಾದ ಮುಕ್ತ ವಿಶ್ವವಿದ್ಯಾಲಯಗಳು ನಂತರದ ದಿನಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಬದಲಾಗತೊಡಗಿದವು. ನೌಕರಿ ಮತ್ತು ಬಡ್ತಿಗಾಗಿ ಅಗತ್ಯವಾದ ಪ್ರಮಾಣ ಪತ್ರಗಳನ್ನು ಮುಕ್ತ ವಿಶ್ವವಿದ್ಯಾಲಯಗಳಿಂದ ಸುಲಭವಾಗಿ ಪಡೆಯಬಹುದೆನ್ನುವ ಯೋಚನೆ ವಿದ್ಯಾರ್ಥಿಗಳಲ್ಲಿ ಮೂಡಿದಾಗ ಅದಕ್ಕೆ ತಕ್ಕಂತೆ ವಿಶ್ವವಿದ್ಯಾಲಯಗಳೂ ವರ್ತಿಸತೊಡಗಿದವು. ಆರಂಭದಲ್ಲಿ ಕೆಲವೇ ವಿಷಯಗಳಿಗೆ ಸೀಮಿತವಾಗಿದ್ದ ಶಿಕ್ಷಣ ನಂತರ ಅನೇಕ ವಿಷಯಗಳಿಗೆ ವಿಸ್ತರಿಸಿತು. ಪ್ರಾಯೋಗಿಕವಾಗಿ ಕಲಿಯಬೇಕಾದ ವಿಷಯಗಳ ಅಧ್ಯಯನಕ್ಕೂ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಅವಕಾಶವಿರುವುದು ಶಿಕ್ಷಣ ಕ್ಷೇತ್ರದ ಬಹುದೊಡ್ಡ ದುರಂತ. ಪ್ರವೇಶ ಪಡೆದ ಆರು ತಿಂಗಳಲ್ಲೇ ಅಂಕಪಟ್ಟಿ ಕೊಡುವ ಈ ವಿಶ್ವವಿದ್ಯಾಲಯಗಳಲ್ಲಿ ಪ್ರಮಾಣ ಪತ್ರಗಳು ಮಾರಾಟವಾಗುತ್ತಿವೆ. ಕೆಲವು ವರ್ಷಗಳ ಹಿಂದೆ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಯುಜಿಸಿ ವೇತನ ಶ್ರೇಣಿಯ ಅಧ್ಯಾಪಕರ ನೇಮಕಾತಿಗಾಗಿ ಎಂ.ಫಿಲ್ ಪದವಿಯನ್ನು ನಿಗದಿಪಡಿಸಿತು. ಆಗ ಪ್ರಾರಂಭವಾಯಿತು ನೋಡಿ ಮುಕ್ತ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶದ ನೂಕು ನುಗ್ಗಲು. ವಿಶ್ವವಿದ್ಯಾಲಯಗಳು ಪದವಿ ನೀಡಿ ಕೃತಾರ್ಥವಾದರೆ ಪ್ರಮಾಣ ಪತ್ರ ಪಡೆದವರು ಧನ್ಯರಾದರು. ಬೆಚ್ಚಿ ಬಿದ್ದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ನೇಮಕಾತಿಗಾಗಿ ನಿಗದಿಪಡಿಸಿದ ಎಂ.ಫಿಲ್ ಅರ್ಹತೆಯನ್ನೇ ರದ್ದುಗೊಳಿಸಬೇಕಾಯಿತು. ಒಟ್ಟಾರೆ ಶಿಕ್ಷಣ ಕ್ಷೇತ್ರವನ್ನು ಅತ್ಯಂತ ಹೀನ ಸ್ಥಿತಿಗೆ ತಂದು ನಿಲ್ಲಿಸಿದ ಕೀರ್ತಿ ಮುಕ್ತ ವಿಶ್ವವಿದ್ಯಾಲಯಗಳಿಗೆ ಸಲ್ಲಬೇಕು. 

-ರಾಜಕುಮಾರ. ವ್ಹಿ . ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment