'ಡಾ.ಬಿ.ಸಿ.ರಾಯ್'
ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಈ ಹೆಸರು ಅಜರಾಮರ.
ಡಾ.ಬಿಧಾನಚಂದ್ರ ರಾಯ್ ಜನಿಸಿದ್ದು ಜುಲೈ 1, 1882ರಂದು
ಬಿಹಾರದ ಪಾಟ್ನಾದಲ್ಲಿ. ಹದಿನಾಲ್ಕನೇ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಬಿಧಾನನ ಬದುಕಿನಲ್ಲಿ ಅವರ
ತಂದೆಯೇ ತಂದೆ, ತಾಯಿ, ಗುರು
ಎಲ್ಲವೂ ಆಗಿದ್ದರು. ಐದು ಮಕ್ಕಳಲ್ಲಿ ಕೊನೆಯವರಾದ
ಬಿಧಾನ್ ತಾಯಿಯ ಮರಣಾನಂತರ ಅನುಭವಿಸಿದ
ಕಷ್ಟ ಅವರ ಬದುಕಿನ ಮೇಲೆ
ಗಾಢ ಪ್ರಭಾವ ಬಿರಿತು. ಬಾಲ್ಯ
ಜೀವನದ ಈ ಜೀವನಾನುಭವ ಮುಂದೆ
ತಮ್ಮ ವೃತ್ತಿ ಬದುಕಿನಲ್ಲಿ ಬಡವರು
ಮತ್ತು ಅಸಾಹಯಕರ ಸೇವೆಗೆ ಪ್ರೇರಣೆ
ನೀಡಿತು. ಗಣಿತ ಶಾಸ್ತ್ರದಲ್ಲಿ ಪದವಿ
ಪಡೆದ ಬಿಧಾನಚಂದ್ರ ರಾಯ್ 1901 ರಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ
ಕಲ್ಕತ್ತಾದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದರು. ವೈದ್ಯಕೀಯ
ಪದವಿ ಪಡೆದ ನಂತರ ಕೆಲವು
ವರ್ಷ ಕಲ್ಕತ್ತದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ
ಸೇವೆಸಲ್ಲಿಸಿದರು. ಈ ಮಧ್ಯೆ ವಿರಾಮ
ಸಮಯದಲ್ಲಿ ಖಾಸಗಿಯಾಗಿ ಕೇವಲ 2 ರುಪಾಯಿಗಳಿಗೆ ರೋಗಿಗಳನ್ನು
ಪರೀಕ್ಷಿಸುವ ಮೂಲಕ ಅತ್ಯಂತ ಜನಾನುರಾಗಿ
ವೈದ್ಯರೆಂದು ಖ್ಯಾತಿ ಪಡೆದರು. ನಂತರ
ಉನ್ನತ ಶಿಕ್ಷಣಕ್ಕಾಗಿ 1909ರಲ್ಲಿ ಇಂಗ್ಲೆಂಡಿಗೆ ತೆರಳಿದ ಡಾ.ಬಿ.ಸಿ.ರಾಯ್ ಅಲ್ಲಿ
ಎಂ.ಆರ್.ಸಿ.ಪಿ
ಮತ್ತು ಎಪ್.ಆರ್.ಸಿ.ಎಸ್ ಪದವಿ ಪಡೆದು
1911 ರಲ್ಲಿ ತಾಯ್ನಾಡಿಗೆ ಮರಳಿದರು.
ವಿದ್ಯಾರ್ಥಿ ದೆಸೆಯಲ್ಲಿ ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ
ಭಾಗವಹಿಸಿದ್ದ ಡಾ.ಬಿ.ಸಿ.ರಾಯ್ ಭಾರತೀಯರು ಮಾನಸಿಕ
ಮತ್ತು ದೈಹಿಕವಾಗಿ ಆರೋಗ್ಯವಂತರಾದರೆ ಮಾತ್ರ ಸ್ವರಾಜ್ಯ ಭಾರತದ
ಕಲ್ಪನೆ ಸಾಧ್ಯವೆಂದು ನಂಬಿದ್ದರು. ಈ ಕಾರಣಕ್ಕಾಗಿ ಆಸ್ಪತ್ರೆಗಳು
ಮತ್ತು ವೈದ್ಯಕೀಯ ಕಾಲೇಜುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಲು
ಪ್ರಯತ್ನಿಸಿದರು. ಜಾಧವಪುರ ಕ್ಷಯರೋಗ ಆಸ್ಪತ್ರೆ,
ಚಿತ್ತರಂಜನ ಸೇವಾಸದನ, ಆರ್.ಜಿ.ಖಾರ್
ವೈದ್ಯಕೀಯ ಕಾಲೇಜು, ಕಮಲಾ ನೆಹರು
ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಚಿತ್ತರಂಜನ ಕ್ಯಾನ್ಸರ್ ಆಸ್ಪತ್ರೆ ಹೀಗೆ ಹಲವಾರು ಸಂಸ್ಥೆಗಳನ್ನು
ಸ್ಥಾಪಿಸಿದರು. ಮಹಿಳೆಯರು ಮತ್ತು ಮಕ್ಕಳಿಗಾಗಿ 1926 ರಲ್ಲಿ
ಪ್ರತ್ಯೇಕ ಆಸ್ಪತ್ರೆಯನ್ನೇ ತೆರೆದರು.
ಡಾ.ಬಿ.ಸಿ.ರಾಯ್ 1928 ರಲ್ಲಿ 'ಭಾರತೀಯ ವೈದ್ಯಕೀಯ
ಮಂಡಳಿ'ಯನ್ನು ಸ್ಥಾಪಿಸುವುದರ ಮೂಲಕ
ವೈದ್ಯಕೀಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆ
ನೀಡಿದರು. ದೇಶದ ಅತಿ ದೊಡ್ಡ
ವೃತ್ತಿಪರ ಸಂಘಟನೆಯಾದ ಈ ಮಂಡಳಿಯಲ್ಲಿ ಅನೇಕ
ಹುದ್ಧೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು. ಎರಡು ಅವಧಿಗೆ 'ಭಾರತೀಯ
ವೈದ್ಯಕೀಯ ಮಂಡಳಿ'ಯ ಅಧ್ಯಕ್ಷರಾದ
ಹೆಗ್ಗಳಿಕೆ ಅವರದು. ಈ ಮಂಡಳಿಯ
ಮೂಲಕ ಭಾರತದ ವೈದ್ಯಕೀಯ ಶಿಕ್ಷಣದಲ್ಲಿ
ಗಮನಾರ್ಹವಾದ ಬದಲಾವಣೆಗಳಿಗೆ ಕಾರಣರಾದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ವೈದ್ಯರನ್ನು ಗುರುತಿಸುವಂತಾಗಲು
ಅಗತ್ಯವಾದ ಶೈಕ್ಷಣಿಕ ತಳಹದಿಯನ್ನು ಭದ್ರಗೊಳಿಸಿದ ಕೀರ್ತಿ ಡಾ.ಬಿ.ಸಿ.ರಾಯ್ ಅವರಿಗೆ
ಸಲ್ಲುತ್ತದೆ. ಒಂದು ಘನ ಉದ್ದೇಶದೊಂದಿಗೆ
ಸ್ಥಾಪನೆಯಾದ 'ಭಾರತೀಯ ವೈದ್ಯಕೀಯ ಮಂಡಳಿ'
ನಂತರದ ದಿನಗಳಲ್ಲಿ ಭೃಷ್ಟರ ಮತ್ತು ಸಮಾಜ
ಘಾತುಕರ ಕೈಗೆ ಸಿಲುಕಿ ವಿಸರ್ಜನೆಗೊಂಡಿದ್ದು
ಭಾರತದ ವೈದ್ಯಕೀಯ ಕ್ಷೇತ್ರದ ಅತಿ ದೊಡ್ಡ ದುರಂತ.
ಗಾಂಧೀಜಿ ಅವರ ನಿಕಟವರ್ತಿಯಾಗಿದ್ದ
ಡಾ.ಬಿ.ಸಿ.ರಾಯ್
ಬಾಪುಜಿಯವರ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಉಪವಾಸ ಸತ್ಯಾಗ್ರಹಗಳಲ್ಲಿ ಅವರೊಂದಿಗೆ
ತಾವೂ ಭಾಗವಹಿಸುತ್ತಿದ್ದರು. ಗಾಂಧೀಜಿ ಅವರೊಂದಿಗಿನ ಈ
ಸಂಪರ್ಕವೇ ಅವರನ್ನು ರಾಜಕೀಯಕ್ಕೆ ಕರೆತಂದಿತು.
ಭಾರತದ ಸ್ವಾತಂತ್ರ್ಯಾ ನಂತರ ಗಾಂಧೀಜಿ ಅವರ
ಸಲಹೆ ಮೇರೆಗೆ ಡಾ.ಬಿ.ಸಿ.ರಾಯ್ 1948 ಜನೆವರಿ
23 ರಂದು ಪಶ್ಚಿಮ ಬಂಗಾಳದ ಎರಡನೇ
ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದರು. ಡಾ.ಬಿ.ಸಿ.ರಾಯ್
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆ
ಸಮಯ ಕೋಮು ದಳ್ಳುರಿ, ಆಹಾರದ
ಕೊರತೆ, ನಿರುದ್ಯೋಗ, ಪೂರ್ವ ಪಾಕಿಸ್ತಾನದಿಂದ ವಲಸೆ
ಬರುವ ನಿರಾಶ್ರಿತರು ಹೀಗೆ ಅನೇಕ ಸಮಸ್ಯೆಗಳು
ಪಶ್ಚಿಮ ಬಂಗಾಳ ರಾಜ್ಯವನ್ನು ಕಾಡುತ್ತಿದ್ದವು.
ಕೇವಲ ಮೂರು ವರ್ಷಗಳ ಅವಧಿಯಲ್ಲಿ
ಈ ಎಲ್ಲ ಸಮಸ್ಯೆಗಳನ್ನು
ಹತ್ತಿಕ್ಕಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು. ಅನೇಕ
ಯಶಸ್ವಿ ಕಾರ್ಯಯೋಜನೆಗಳ ಮೂಲಕ ಜನಪ್ರಿಯ ಮುಖ್ಯಮಂತ್ರಿ
ಎಂದು ಖ್ಯಾತರಾದರು. ಈ ಕಾರಣದಿಂದಲೇ ಡಾ.ಬಿ.ಸಿ.ರಾಯ್
ಅವರು 1948 ರಿಂದ ತಮ್ಮ ಬದುಕಿನ
ಕೊನೆಯ ದಿನಗಳವರೆಗೆ ಸುಮಾರು 14 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ
ಕಾರ್ಯನಿರ್ವಹಿಸಲು ಸಾಧ್ಯವಾಯಿತು. ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ
ಮಾಡಿದ ಸಾಧನೆಗಾಗಿ 1961 ರಲ್ಲಿ ಅವರನ್ನು 'ಭಾರತ
ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ,
ವೈದ್ಯರಾಗಿ, ವೈದ್ಯಕೀಯ ಶಿಕ್ಷಕರಾಗಿ, ಕಲ್ಕತ್ತಾ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಅನೇಕ ಆಸ್ಪತ್ರೆಗಳು ಮತ್ತು
ವೈದ್ಯಕೀಯ ಕಾಲೇಜುಗಳ ಸ್ಥಾಪಕರಾಗಿ, ಮುಖ್ಯಮಂತ್ರಿಯಾಗಿ ಹತ್ತು ಹಲವು ಜನಪ್ರಿಯ
ಪಾತ್ರಗಳನ್ನು ನಿರ್ವಹಿಸಿದ ಡಾ.ಬಿ.ಸಿ.ರಾಯ್ 1962 ಜುಲೈ 1 ರಂದು ನಿಧನರಾದರು.
ಸಾವಿನ ನಂತರ ತಾವು ವಾಸವಿದ್ದ
ಮನೆಯನ್ನು ಆಸ್ಪತ್ರೆಯಾಗಿ ಉಪಯೋಗಿಸಬೇಕೆಂದು ಬದುಕಿರುವಾಗಲೇ ಮನೆಯನ್ನು ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದ್ದರು. ಅವರ ಸ್ಮರಣಾರ್ಥ ಭಾರತ
ಸರ್ಕಾರ 1977 ರಿಂದ ವೈದ್ಯಕೀಯ, ಸಾಮಾಜಿಕ,
ಕಲೆ, ಸಾಹಿತ್ಯ ಇತ್ಯಾದಿ ಕ್ಷೇತ್ರಗಳಲ್ಲಿ
ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ
'ಡಾ.ಬಿ.ಸಿ.ರಾಯ್
ರಾಷ್ಟ್ರೀಯ ಪ್ರಶಸ್ತಿ'ಯನ್ನು ಪ್ರತಿ ವರ್ಷ
ನೀಡುತ್ತಿದೆ. ಡಾ.ರಾಯ್ ಅವರ
ಜನ್ಮದಿನವಾದ ಜುಲೈ 1 ರಂದು ಭಾರತದಾದ್ಯಂತ
'ವೈದ್ಯರ ದಿನ' ಆಚರಿಸುವುದರ ಮೂಲಕ
ಆ ವೈದ್ಯ ಬೃಹ್ಮನಿಗೆ
ಗೌರವ ಸೂಚಿಸಲಾಗುತ್ತದೆ.
-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ
Hi Raju,
ReplyDeleteI agree with you, you have analysed the current status of the Kannada Education very well.
As you mentioned the the medium of learning/teaching should same and uniform accross the state irrespective the private/Govt/convent institution.
I felt very happy after reading this article, You took me to my KUMSI, while reading this article, I could not recall - the Kalajja.
-Siddharudh C Managunde