Friday, April 27, 2012

ತಾಳ್ಮೆ ಯಶಸ್ಸಿನ ಬಹು ದೊಡ್ಡ ಸೂತ್ರ


       ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನನ್ನ ಸಂಬಂಧಿಕರ ಮಗನಿಗೆ ಇತ್ತೀಚಿಗೆ ಸಮಸ್ಯೆಯೊಂದು ಕಾಡಲಾರಂಭಿಸಿದೆ. ಅದು ಮನೆಯಲ್ಲಿನ ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಅವನ ಸಮಸ್ಯೆ ಏನೆಂದರೆ ಕಂಪನಿಯ ಮಾಲೀಕರು ಆತನ ಸಾಮರ್ಥ್ಯವನ್ನು ಗುರುತಿಸುತ್ತಿಲ್ಲ ಎನ್ನುವುದು. ಅಲ್ಲಿ ವಿಪರೀತ ಪಕ್ಷಪಾತವಿದೆ, ನನ್ನ ವಿದ್ಯಾರ್ಹತೆ ಮತ್ತು ಸಾಮರ್ಥ್ಯಕ್ಕೆ ತಕ್ಕುದಾದ ಕೆಲಸ ಕೊಡುತ್ತಿಲ್ಲ. ಸಂಬಳವೂ ನನ್ನ ಯೋಗ್ಯತಾನುಸಾರ  ದೊರೆಯುತ್ತಿಲ್ಲ. ನನಗಿಂತ ಕಡಿಮೆ ವಿದ್ಯಾರ್ಹತೆ ಇರುವವರ ಕೈಕೆಳಗೆ ನಾನು ಕೆಲಸ ಮಾಡಬೇಕಾಗಿದೆ. ಪರಿಸ್ಥಿತಿ ಇದೆ ರೀತಿ ಮುಂದುವರೆದಲ್ಲಿ ನಾನು ಆ ಕಂಪನಿಯಿಂದ ಕೆಲವೇ ದಿನಗಳಲ್ಲಿ ಕೆಲಸಕ್ಕೆ ರಾಜಿನಾಮೆ ಕೊಟ್ಟು ಹೊರ ಬರಬಹುದು. ಹೀಗೆ ಅನೇಕ ಸಮಸ್ಯೆಗಳನ್ನು ಹೇಳಿಕೊಂಡ. ಅಷ್ಟಕ್ಕೂ ಅವನು ಅಲ್ಲಿ ಕೆಲಸಕ್ಕೆ ಸೇರಿ ಕೇವಲ ಮೂರು ತಿಂಗಳುಗಳಾಗಿವೆ. ಮೂರು ತಿಂಗಳುಗಳಲ್ಲಿಯೇ ಅವನಲ್ಲಿ ಈ ಎಲ್ಲ ಸಮಸ್ಯೆಗಳು ಹುಟ್ಟಿಕೊಂಡಿವೆ. ಕೆಲಸಕ್ಕೆ ಸೇರಿದ ಅತಿ ಕಡಿಮೆ ಅವಧಿಯಲ್ಲಿ ಕಂಪನಿಯ ಒಡೆತನದವರು ತನ್ನ ಸಾಮರ್ಥ್ಯವನ್ನು ಗುರುತಿಸಿ ದೊಡ್ಡ ಹುದ್ದೆಯೊಂದನ್ನು ನಿಡಬೇಕಿತ್ತು ಎಂದ ಅವನ ಆಲೋಚನೆಯ ಕ್ರಮ ಸರಿಯಲ್ಲ  ಎಂದೆನಿಸಿತು. ಆತನಿಗಿನ್ನೂ ೨೬ರ ಹರೆಯ. ಇದೆ ಈಗ ಶಿಕ್ಷಣವನ್ನು ಪೂರ್ಣಗೊಳಿಸಿ ಉದ್ಯೋಗಕ್ಕೆ ಸೇರಿರುವ ಅವನಿಗೆ ಸಾಮರ್ಥ್ಯವನ್ನು ತೋರಿಸಲು ಸಾಕಷ್ಟು ಕಾಲಾವಕಾಶವಿದೆ. ಬಿಸಿ ರಕ್ತದ ಯುವಕನಾಗಿರುವುದರಿಂದ ತನ್ನ ಹೊಸ ಆಲೋಚನೆಗಳನ್ನು ಮತ್ತು ಕನಸುಗಳನ್ನು ಕಂಪನಿಯ ಬೆಳವಣಿಗೆಗಾಗಿ ಆತ ವಿನಿಯೋಗಿಸಬೇಕಿದೆ. ಅದಕ್ಕೆ ಒಂದಿಷ್ಟು ಸಮಯ ಬೇಕು. ಜೊತೆಗೆ ತಾಳ್ಮೆಯ ಗುಣವೂ ಅವನಲ್ಲಿರಬೇಕು. ಹೀಗೆ ಧಿಡೀರನೆ ಯಶಸ್ಸಿನ ಮೆಟ್ಟಿಲು ಹತ್ತ ಬೇಕೆನ್ನುವ ಅವನೊಳಗಿನ ವಾಂಛೆ ಮುಂದಿನ ದಿನಗಳಲ್ಲಿ ತಪ್ಪು ಹೆಜ್ಜೆ ಇಡಲು ಪ್ರೆರೇಪಿಸಬಹುದು.

        ಒಂದಿಷ್ಟು ಉದಾಹರಣೆಗಳನ್ನು ಕೊಟ್ಟು ಅವನ ಮನಸ್ಥಿಯನ್ನು ಬದಲಿಸುವುದು ಅಗತ್ಯವಾಗಿತ್ತು. ಇವತ್ತು ಕ್ರಿಕೇಟ್ ಲೋಕದ ಅನರ್ಘ್ಯರತ್ನವಾಗಿ ಹೊಳೆಯುತ್ತಿರುವ ಸಚಿನ್ ತೆಂಡೂಲ್ಕರ್ ಗೆ ಜನಪ್ರಿಯತೆ ಎನ್ನುವುದು ಏಕಾಏಕಿ ಬಂದದ್ದಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಆತ ಉದಯೋನ್ಮುಖ ಆಟಗಾರನೆಂದು ಹೆಸರುಗಳಿಸಲಿಲ್ಲ. ಆತನ ಇವತ್ತಿನ ಎಲ್ಲ ಸಾಧನೆಗಳ ಹಿಂದೆ ಸತತ ಇಪ್ಪತ್ತು ವರ್ಷಗಳ ಶ್ರಮವಿದೆ. ಈ ಇಪ್ಪತ್ತು ವರ್ಷಗಳಿಂದ ಕ್ರಿಕೇಟ್ ಆಟವನ್ನೇ ಆತ ಉಸಿರಾಡುತ್ತಿರುವನು. ಈ ಆಟವೇ ಆತನ ಬದುಕಿನ ಸರ್ವಸ್ವವೂ ಹೌದು. ಕ್ರಿಕೇಟ್ ಆಟಕ್ಕಾಗಿ ಆತ ಅನೇಕ ಸಂದರ್ಭಗಳಲ್ಲಿ ಕುಟುಂಬದ ಸದಸ್ಯರಿಂದ ದೂರವೇ ಉಳಿಯಬೇಕಾಯಿತು. ಆತನ ತಂದೆ ತೀರಿಕೊಂಡಾಗ ಸಚಿನ್ ವಿದೇಶದಲ್ಲಿ ವಿಶ್ವಕಪ್ ಆಡುತ್ತಿದ್ದ. ಜೊತೆಗೆ ಬದುಕಿನ ಅನೇಕ ಸಂತಸದ ಸಮಯಗಳನ್ನು ಈ ಆಟಕ್ಕಾಗಿ ಕಳೆದುಕೊಳ್ಳಬೇಕಾಯಿತು. ಪ್ರಯತ್ನ, ಸತತ ಪರಿಶ್ರಮ, ತಾಳ್ಮೆ, ಸಹನಶೀಲತೆ ಒಟ್ಟಾರೆ ಇವೆಲ್ಲವುಗಳ ಫಲಶ್ರುತಿಯೇ ಆತನ ಇವತ್ತಿನ ಸಾಧನೆ.

    ಸಚಿನ್ ಆಟದಲ್ಲಿನ ಸ್ಥಿರತೆ ನಿಜಕ್ಕೂ ಅಚ್ಚರಿಯ ಸಂಗತಿ. ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಒಬ್ಬ ಕ್ರಿಕೆಟಿಗ ನಿರಂತರವಾಗಿ ಸ್ಥಿರತೆಯನ್ನು ಕಾಪಾಡಿಕೊಂಡು ಬರುವುದು ಸಣ್ಣ ಸಂಗತಿಯಲ್ಲ. ಕ್ರಿಕೆಟ್ ಆಟದಿಂದ ದೊರೆಯುತ್ತಿರುವ ಜನಪ್ರಿಯತೆ ಮತ್ತು ಶ್ರೀಮಂತಿಕೆಯಿಂದ ಆಟಗಾರರು ಉನ್ಮತ್ತರಾಗುತ್ತಿರುವರು. ಪರಿಣಾಮವಾಗಿ ಆಟದಲ್ಲಿನ ಕನ್ಸಿಸ್ಟೆನ್ಸಿಯನ್ನು ಅವರು ಬಹಳ ಬೇಗನೆ ಕಳೆದುಕೊಳ್ಳುತ್ತಿರುವರು. ಆದರೆ ಸಚಿನ್ ಹಾಗಲ್ಲ. ಈ ಜನಪ್ರಿಯತೆ ಮತ್ತು ಹಣ ಅವನನ್ನು ಉನ್ಮತ್ತನನ್ನಾಗಿಸಿಲ್ಲ. ದಾಖಲೆ ಮೇಲೆ ದಾಖಲೆ ಬರೆಯುತ್ತಿದ್ದರೂ ಆತನ ತಲೆ ಭುಜದ ಮೇಲೇ ಇದೆ. ರೂಪಸಿಂಗ್ ಮೈದಾನದಲ್ಲಿ ದ್ವಿಶತಕದ ಆಟ ಆಡಿದಾಗ ಆತ ಕುಣಿಯಲಿಲ್ಲ, ಕುಪ್ಪಳಿಸಲಿಲ್ಲ, ಪಿಚ್ ಗೆ ನಮಿಸಲಿಲ್ಲ, ಬ್ಯಾಟ್ ಗೆ ಮುತ್ತಿಕ್ಕಲಿಲ್ಲ, ಕ್ರೀಡಾಂಗಣದ ತುಂಬ ಓಡಾಡಲಿಲ್ಲ. ಪ್ರತಿ ಬಾರಿ ಅರ್ಧ ಶತಕ, ಶತಕ ದಾಖಲಿಸಿದಾಗ ಆತನ ಪ್ರತಿಕ್ರಿಯೆ ಹೇಗಿರುತ್ತಿತ್ತೋ ಆ ದಿನ ಕೂಡ ಅವನ ಪ್ರತಿಕ್ರಿಯೆ ಹಾಗೆ ಇತ್ತು.

        ಹೊಗಳಿಕೆ ಮತ್ತು ಟೀಕೆ ಎರಡನ್ನೂ ಸಮಾನವಾಗಿ ಸ್ವೀಕರಿಸುವ ಮನೋಭಾವ ಆತನದು. ಸಚಿನ್ ವೃತ್ತಿ ಬದುಕಿನ ಈ ಎರಡು ದಶಕಗಳಲ್ಲಿ ಅನೇಕರು ಅನೇಕ ರೀತಿಯ ಟೀಕೆಗಳನ್ನು ಮಾಡಿರುವರು. ಸಚಿನ್ ಗೆ ವಯಸ್ಸಾಗಿದೆ, ಆತನ ದೇಹ ಆಟಕ್ಕೆ ಸ್ಪಂದಿಸುತ್ತಿಲ್ಲ, ಆತ ಒಳ್ಳೆಯ ಫಿನಿಶರ್ ಅಲ್ಲ, ಸಚಿನ್ ಒತ್ತಡದಲ್ಲಿ ಆಡಲಾರ, ಆತ ಕೇವಲ ದಾಖಲೆಗಾಗಿ ಆಡುವನು, ಸಚಿನ್ ನಿವೃತ್ತಿ ಹೊಂದಬೇಕು ಹೀಗೆ ಹಲವು ಬಗೆಯ ಟೀಕೆಗಳನ್ನು ಸಚಿನ್ ಎದುರಿಸಿರುವನು. ಆದರೆ ಆತ ಯಾವ ಟೀಕೆಗಳಿಗೂ ಉತ್ತರಿಸಲಾರ. ಯಾವ ಟೀಕೆಯೂ ಆಟದ ಬಗೆಗಿನ ಆತನ ಬದ್ಧತೆಯನ್ನು ಹಾಳುಗೆಡವಲಿಲ್ಲ. ಪ್ರತಿಯೊಂದು ಟೀಕೆ ಬಂದಾಗಲೂ ಅವನೊಬ್ಬ ಪ್ರಬುದ್ಧ ಆಟಗಾರನಾಗಿ ಬೆಳೆಯುತ್ತಲೇ ಹೋದ.  ಅವನು ಕಟ್ಟಿಕೊಂಡ ಈ ಆಟದ ಮತ್ತು ವೈಯಕ್ತಿಕ ಬದುಕುಗಳೆರಡೂ ಒಂದು ಕಪ್ಪು ಚುಕ್ಕೆಯೂ ಇಲ್ಲದ ಹಸನಾದ ಬದುಕದು. ಆದರೆ ಅವನದೇ ಸಮಕಾಲೀನ ಆಟಗಾರನೊಬ್ಬ ಪ್ರತಿಭೆ ಇದ್ದೂ ಮೂಲೆಗುಂಪಾದ. ಹಣ ಮತ್ತು ಜನಪ್ರಿಯತೆಯ ನಶೆ ಅವನ ಇಡೀ ಕ್ರಿಕೇಟ್ ಬದುಕನ್ನೇ ನಾಶಗೊಳಿಸಿತು.

        ಧಿರೂಭಾಯಿ ಅಂಬಾನಿಯಂಥ ಸಾಮಾನ್ಯ ಗುಮಾಸ್ತನೋರ್ವ ದೇಶದ ಬಹುದೊಡ್ಡ ಉದ್ಯಮಿಯಾಗಿ ಬೆಳೆದು ನಿಂತದ್ದು, ಸಾಮಾನ್ಯ ನಾಟಕಕಾರನೊಬ್ಬ ತನ್ನ ಪ್ರತಿಭೆಯಿಂದ ಕನ್ನಡ ಚಿತ್ರರಂಗದ ರಾಜಕುಮಾರನಾಗಿ ಬೆಳೆದದ್ದು, ಬಡ ಕುಟುಂಬದ ಹುಡುಗನೊಬ್ಬ ರಾಷ್ಟ್ರಪತಿಯಾಗುವ ಅರ್ಹತೆ ಗಳಿಸಿಕೊಂಡಿದ್ದು ಈ ಎಲ್ಲ ಸಾಧನೆಗಳಿಗೆ ಹಿಡಿದ ವರ್ಷಗಳು ಒಂದೆರಡಲ್ಲ. ಧಿಡೀರ್ ಹೆಸರು ಗಳಿಸುವ ಹಪಾಹಪಿಗೆ ಬಿದ್ದಿದ್ದರೆ ಸಚಿನ್, ಅಂಬಾನಿ, ರಾಜಕುಮಾರ, ಅಬ್ದುಲ್ ಕಲಾಮ್ ಈ ಸಾಧಕರೆಲ್ಲ ಇವತ್ತು ನಮಗೆ ಆದರ್ಶಪ್ರಾಯರಾಗಿ ಕಾಣಿಸುತ್ತಿರಲಿಲ್ಲ.

       ಯಶಸ್ಸು ಎನ್ನುವುದು ಒಂದೇ ದಿನದಲ್ಲಿ ಕಟ್ಟಿಕೊಳ್ಳುವ ಬದುಕಲ್ಲ. ಅದು ಅನೇಕ ವರ್ಷಗಳ ಸಾಧನೆಯ ಫಲ. ನಿರಂತರ ಪ್ರಯತ್ನ, ಶ್ರಮ, ತಾಳ್ಮೆಯೇ ಯಶಸ್ಸಿನ ಮೂಲ ಮಂತ್ರಗಳು. ಅದಕ್ಕಾಗಿಯೇ ಅಲ್ಲವೆ ನಮ್ಮ ಹಿರಿಯರು ಹೇಳಿದ್ದು 'ತಾಳಿದವನು ಬಾಳಿಯಾನು' ಎಂದು.

ಬರೆದ  ಬಹಳ ದಿನಗಳ ನಂತರ 

         ಮೊನ್ನೆ ಒಲಂಪಿಕ್ಸ್ ನಲ್ಲಿ ಪದಕ ಗೆದ್ದು ಬಂದ ಸೈನಾ ನೆಹವಾಲ್ ಳನ್ನು ಅಭಿನಂದಿಸಲು ಏರ್ಪಡಿಸಿದ ಔತಣಕೂಟದಲ್ಲಿ ಅವಳ ತಂದೆ ಮಾತನಾಡುತ್ತಿದ್ದರು. ಮಗಳ ಸಾಧನೆ ಆ ತಂದೆಗೆ ಅಭಿಮಾನದ ವಿಷಯವಾಗಿತ್ತು. ಇವತ್ತಿನ ಈ ಸಾಧನೆಗಾಗಿ ಮಗಳು ಪಟ್ಟ ಶ್ರಮವನ್ನು ಅವರು ಎಳೆಎಳೆಯಾಗಿ ಬಿಡಿಸಿಟ್ಟರು. ಒಂದು ಹಂತದಲ್ಲಿ ಅತ್ಯಂತ ಭಾವುಕರಾಗಿ ಹೀಗೆ ನುಡಿದರು 'ತನ್ನ ವಯಸ್ಸಿನ ಮಕ್ಕಳೆಲ್ಲ ಮುಂಜಾನೆ ಸುಖ ನಿದ್ದೆ ಮಾಡುತ್ತ, ಪಾರ್ಕಿನಲ್ಲಿ ಆಟವಾಡುತ್ತ, ಐಸ್ ಕ್ರೀಮ್ ತಿನ್ನುತ್ತ, ಟಾಮ್ ಆಯಿಂಡ್ ಜೆರ್ರಿ ನೋಡುತ್ತ ಬಾಲ್ಯವನ್ನು ಕಳೆಯುತ್ತಿದ್ದರೆ ನನ್ನ ಮಗಳು ಪ್ರತಿನಿತ್ಯ ನಸುಕಿನಲ್ಲೇ ಎದ್ದು ಕೈಯಲಿ ರಾಕೇಟ್ ಹಿಡಿದು ತರಬೇತಿಗಾಗಿ ನೂರಾರು ಕಿಲೋಮಿಟರ್ ಓಡಬೇಕಾಗುತ್ತಿತ್ತು. ಒಮ್ಮೊಮ್ಮೆ ಅವಳು ಸಹಜ ಬಾಲ್ಯ ಜೀವನದ ಖುಷಿಯಿಂದ ವಂಚಿತಳಾಗುತ್ತಿರುವ ಕುರಿತು ನನಗೆ ವೇದನೆಯಾಗುತ್ತಿತ್ತು'. 

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

2 comments: