Tuesday, July 5, 2022

ಪಯಣ ಪಥದ ಪಥಿಕರಾಗಿ

 


(೧೯.೫.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)

ಇತ್ತೀಚೆಗೆ ಅಂತಿಮ ಪದವಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ಹಾಸ್ಟೆಲಿನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮನಸ್ಸಿಗೆ ತುಂಬ ದು:ಖವನ್ನುಂಟುಮಾಡಿತು. ಖಿನ್ನತೆಯೇ ಅವನು ಆತ್ಮಹತ್ಯೆಯಂಥ ಹೇಯ ಮಾರ್ಗವನ್ನು ಆಯ್ದುಕೊಳ್ಳಲು ಕಾರಣವಾಗಿತ್ತು ಎನ್ನುವ ಮಾತುಗಳು ಕೇಳಿಬಂದವು. ಬದುಕಿ ಸಾಧಿಸಬೇಕಾದ ವಿಪುಲ ಅವಕಾಶ ಅವನೆದುರಿಗಿದ್ದರೂ ಅವನು ಸಾವನ್ನೇ ಆಯ್ಕೆ ಮಾಡಿಕೊಂಡ. ಆ ನಿರ್ಧಾರಕ್ಕೆ ಬಂದ ಗಳಿಗೆ ತಂದೆ-ತಾಯಿಯನ್ನು ಆತ ಜ್ಞಾಪಿಸಿಕೊಳ್ಳಬೇಕಿತ್ತು. ಜೀವನದ ಸವಾಲುಗಳಲ್ಲಿ ಗೆದ್ದು ನಿಂತ ಸಾಧಕರನ್ನು ಸ್ಮರಿಸಿಕೊಳ್ಳಬೇಕಿತ್ತು. ದೇಹದ ಅಂಗವೈಕಲ್ಯವನ್ನು ಮೆಟ್ಟಿನಿಂತು ಪ್ರಪಂಚಕ್ಕೇ ಮಾದರಿಯಾದ ಪ್ರಾತ:ಸ್ಮರಣೀಯರನ್ನು ನೆನಪಿಸಿಕೊಳ್ಳಬೇಕಿತ್ತು. ಕ್ಷಣಮಾತ್ರದ ನಿರ್ಧಾರ ಬದುಕನ್ನೇ ಬಲಿ ತೆಗೆದುಕೊಂಡಿತು. ಅಪ್ಪ ಅಮ್ಮನಿಗೆ ಮಗನ ಸಾವು ಅವರು ಬದುಕಿರುವವರೆಗೆ ಕಾಡುವ, ಕಂಗೆಡಿಸುವ ನೋವಾಗಿ ಉಳಿದು ಹೋಯಿತು. 

ಪ್ರಾಣಿವರ್ಗಗಳಲ್ಲೇ ಮನುಷ್ಯ ಅತ್ಯಂತ ಶ್ರೇಷ್ಠ ಪ್ರಾಣಿ ಎಂದು ಪರಿಗಣಿಸಲ್ಪಟ್ಟಿರುವನು. ಭೂಮಿಯ ಮೇಲಿನ ಉಳಿದ ಯಾವ ಪ್ರಾಣಿಗಳಿಗೂ ಇಲ್ಲದ ಯೋಚನಾಶಕ್ತಿ ಎಂಬ ವೈಶಿಷ್ಟ್ಯತೆ ಮನುಷ್ಯನಿಗಿದೆ. ತನ್ನ ಬುದ್ಧಿಶಕ್ತಿಯ ಬಲದಿಂದಲೇ ಮನುಷ್ಯ ಭೂಮಿ, ಆಕಾಶ, ಅಗ್ನಿ, ನೀರು, ವಾಯು ಈ ಪಂಚಭೂತಗಳ ಮೇಲೆ ತನ್ನ ನಿಯಂತ್ರಣ ಸಾಧಿಸಿರುವನು. ವಿಜ್ಞಾನವನ್ನು ಮಾನವ ಜಗತ್ತಿನ ಏಳ್ಗೆಗೆ ಏಣಿಯಾಗಿಸಿಕೊಂಡು ಹೊಸ ಹೊಸ ಅವಿಷ್ಕಾರಗಳಿಂದ ಅಭಿವೃದ್ಧಿಯ ಪಥದತ್ತ ನಾಗಾಲೋಟದಿಂದ ಮುನ್ನಡೆಯುತ್ತಿರುವನು. ಈ ವಿಜ್ಞಾನ ಮತ್ತು ತಂತ್ರಜ್ಞಾನದ ಯುಗದಲ್ಲಿ ವಿದ್ಯಾವಂತ ಯುವಜನಾಂಗ ಪ್ರೇಮ ವೈಫಲ್ಯ, ಅಭ್ಯಾಸದ ಹೊರೆ, ಪರೀಕ್ಷೆಯಲ್ಲಿ ಅನುತ್ತೀರ್ಣ, ಇಚ್ಛಿಸಿದ ಕೋರ್ಸಿಗೆ ದೊರೆಯದ ಪ್ರವೇಶ ಇಂತಹ ಕಾರಣಗಳನ್ನು ನೀಡಿ ಆತ್ಮಹತ್ಯೆಗೆ ಶರಣಾಗುತ್ತಿರುವುದು ಇಡೀ ಮಾನವ ಕುಲವೇ ನಾಚಿಕೆಯಿಂದ ತಲೆತಗ್ಗಿಸಬೇಕಾದ ಸಂಗತಿ.

ಈ ಸಂದರ್ಭ ಪಾಲಕರು ಎಚ್ಚೆತ್ತುಕೊಳ್ಳುವುದೊಳಿತು. ಏಕೆಂದರೆ ಪಾಲಕರ ಅತಿಯಾದ ಮಹತ್ವಾಕಾಂಕ್ಷೆ ಮಕ್ಕಳನ್ನು ಸಾವಿನಂಚಿಗೆ ದೂಡುತ್ತಿದೆ. ಅಪ್ಪ, ಅಮ್ಮನ ಒತ್ತಾಯಕ್ಕೆ ತಮಗೆ ಇಷ್ಟವಿಲ್ಲದ ಕಾಲೇಜು, ಕೋರ್ಸಿಗೆ ಪ್ರವೇಶ ಪಡೆಯುವ ಯುವಜನಾಂಗ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳದೆ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಪ್ರಯತ್ನಿಸುವುದುಂಟು. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್, ಸರ್ಕಾರಿ ಅಧಿಕಾರಿಗಳನ್ನಾಗಿ ಮಾಡಬೇಕೆನ್ನುವ ಮಹತ್ವಾಕಾಂಕ್ಷೆಯಲ್ಲಿ ಬಹಳಷ್ಟು ಪಾಲಕರು ಮಕ್ಕಳ ಆಸಕ್ತಿ ಮತ್ತು ಬುದ್ಧಿಮತ್ತೆಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮಕ್ಕಳು ಬಹುಪಾಲು ಸಮಯವನ್ನು ಶೈಕ್ಷಣಿಕ ಪರಿಸರದಲ್ಲಿ ಕಳೆಯುವಂಥ ವಾತಾವರಣವನ್ನು ಪಾಲಕರೇ ನಿರ್ಮಿಸಿಕೊಡುತ್ತಿರುವರು. ವಸತಿಶಾಲೆ, ಬೇಸಿಗೆ ಶಿಬಿರ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳೆಂದು ಮಕ್ಕಳು ಮನೆಯ ಪರಿಸರದಿಂದ ಹೊರಗೇ ಉಳಿಯುತ್ತಿರುವರು. ಮನೆ ಮತ್ತು ಕುಟುಂಬದ ಸದಸ್ಯರೊಂದಿಗಿನ ಈ ಭಾವನಾತ್ಮಕ ಮತ್ತು ಮಾನಸಿಕ ಅಂತರ ಅದೆಷ್ಟೋ ವಿದ್ಯಾರ್ಥಿಗಳನ್ನು ಖಿನ್ನತೆಗೆ ಒಳಗಾಗಿಸುತ್ತಿದೆ.  

ಇಂದಿನ ಶಿಕ್ಷಣ ಪದ್ಧತಿಯಲ್ಲೂ ಲೋಪದೋಷಗಳಿವೆ. ವ್ಯಾಪಾರೀಕರಣ ಶಿಕ್ಷಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಶಿಕ್ಷಣದ ಉದ್ದೇಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಶಿಕ್ಷಣದಿಂದ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗುತ್ತಿಲ್ಲ. ಶಿಕ್ಷಕರು ಪಠ್ಯಕ್ರಮದಾಚೆ ಏನನ್ನೂ ಬೋಧಿಸುತ್ತಿಲ್ಲ. ನೀತಿಶಿಕ್ಷಣ ಎನ್ನುವುದು ಶಾಲಾ ಕಾಲೇಜುಗಳ ವೇಳಾಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ. ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವುದರಲ್ಲೇ ತಮ್ಮ ಪೂರ್ಣ ಸಮಯವನ್ನು ವಿನಿಯೋಗಿಸುತ್ತಿರುವ ಶಿಕ್ಷಕರು ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳುತ್ತಿಲ್ಲ. ಹಿಂದಿನ ದಿನಗಳಲ್ಲಿ ಶಾಲಾ ಅವಧಿಯ ನಂತರವೂ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ಪಠ್ಯಕ್ರಮದಾಚೆ ಬದುಕಿನ ತತ್ವಗಳನ್ನು ಬೋಧಿಸುತ್ತಿದ್ದರು. ಪ್ರತಿವಿದ್ಯಾರ್ಥಿಯ ಯೋಗಕ್ಷೇಮ ವಿಚಾರಿಸುತ್ತಿದ್ದರು. ದಾರಿ ತಪ್ಪಿದಾಗ ಕಿವಿ ಹಿಂಡಿ ಬುದ್ಧಿ ಹೇಳುತ್ತಿದ್ದರು. ಇಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಧ್ಯದ ಸಂಬಂಧ ನಾಲ್ಕು ಗೋಡೆಗಳ ನಡುವಣ ಪಠ್ಯಕ್ರಮದ ಬೋಧನೆಗೆ ಮಾತ್ರ ಸೀಮಿತವಾಗಿದೆ.

ಬದುಕು ಒಡ್ಡಿದ ಸವಾಲುಗಳನ್ನು ಎದುರಿಸಿ ಅಪ್ರತಿಮ ಸಾಧನೆಗೈದವರು ನಮ್ಮ ನಡುವಿರುವರು. ಸ್ಟೀಫನ್ ಹಾಕಿಂಗ್, ಪುಟ್ಟರಾಜ ಗವಾಯಿಗಳು, ಸುಧಾಚಂದ್ರನ್, ಜಾನ್ ಮಿಲ್ಟನ್ ಈ ಸಾಧಕರು ತಮ್ಮ ದೈಹಿಕ ವೈಕಲ್ಯವನ್ನು ಮೀರಿನಿಂತು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅದ್ಭುತವಾದದ್ದನ್ನು ಸಾಧಿಸಿದರು. ಈ ಸಾಧಕರು ಕ್ರಮಿಸಿದ ದಾರಿ ಅದು ಹೂವಿನ ಹಾದಿಯಾಗಿರಲಿಲ್ಲ. ಪಯಣದ ಪಥದಲ್ಲಿ ಎದುರಾದ ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿ ತಾವು ನಡೆಯಬೇಕಾದ ದಾರಿಯನ್ನು ಸ್ವತ: ತಾವೇ ನಿರ್ಮಿಸಿಕೊಂಡ ಪಥಿಕರಿವರು. ಒಂದೊಮ್ಮೆ ಅವರು ಸಮಸ್ಯೆಗಳಿಗೆ ಹೆದರಿ ಸಾಧನೆಯ ಪಥದಿಂದ ವಿಮುಖರಾಗಿದ್ದರೆ ಇಂದು ಜಗತ್ತು ಅವರನ್ನು ನೆನಪಿಟ್ಟುಕೊಳ್ಳುತ್ತಿರಲಿಲ್ಲ. ಪ್ರಪಂಚ ಸದಾ ಸ್ಮರಿಸುವುದು ಸಾಧಕರನ್ನೇ ವಿನಾ ಆತ್ಮಹತ್ಯೆಗೆ ಶರಣಾಗುವ ಹೇಡಿಗಳನ್ನಲ್ಲ. ಅಮೆರಿಕಾದ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗುವ ಪೂರ್ವದಲ್ಲಿ ಅಬ್ರಾಹಂ ಲಿಂಕನ್‍ಗೆ ವಿವಿಧ ಚುನಾವಣೆಗಳಲ್ಲಿ ಸತತ ಒಂಬತ್ತು ಸೋಲುಗಳು ಎದುರಾಗಿದ್ದವು. ಇಂಥ ಸಾಧಕರ ಬದುಕು ಮಕ್ಕಳಿಗಷ್ಟೇ ಅಲ್ಲ ಪಾಲಕರಿಗೂ ಸ್ಪೂರ್ತಿಯಾಗಬೇಕು. ಕೇವಲ ಬೇಸಿಗೆ ಶಿಬಿರ, ವಸತಿ ಶಾಲೆಗಳು ಮತ್ತು ತರಬೇತಿ ಕೇಂದ್ರಗಳಲ್ಲಷ್ಟೇ ಮಕ್ಕಳ ಭವ್ಯ ಭವಿಷ್ಯ ನಿರ್ಮಾಣಗೊಳ್ಳುತ್ತಿದೆ ಎನ್ನುವ ಭ್ರಮೆಯಿಂದ ಪಾಲಕರು ಹೊರಬರಬೇಕಿದೆ. 

ಯಶವಂತ ಚಿತ್ತಾಲರು ಮನುಷ್ಯನ ಬದುಕಬೇಕೆನ್ನುವ ಉತ್ಸಾಹವನ್ನು ವಿವರಿಸುತ್ತ ‘ಜೀವಕೋಟಿಯ ವಿಕಾಸದಲ್ಲಿ ‘ಬದುಕಬೇಕು’ ಎಂಬ ಅಭೀಪ್ಸೆಯ ಹಿಂದೆ ಕೋಟಿ ವರ್ಷಗಳ ಇತಿಹಾಸವಿದ್ದರೆ ‘ಯಾಕೆ ಬದುಕಬೇಕು?’ ಎಂದು ಕೇಳಿಕೊಳ್ಳುವ ಪ್ರಜ್ಞೆ ತೀರ ಸಧ್ಯದ್ದು. ಬದುಕುವುದರಲ್ಲಿ ಅದಮ್ಯ ಉತ್ಸಾಹವಿರುವ ಜೀವಕ್ಕೆ ಯಾಕೆ ಬದುಕಬೇಕು? ಎಂಬ ಪ್ರಶ್ನೆಗಿಂತ ಹೇಗೆ ಬದುಕಬೇಕು? ಎಂಬ ಪ್ರಶ್ನೆಯೇ ಹೆಚ್ಚು ಸಹಜವಾದದ್ದು. ನಿವೇಕೆ ಬದುಕಿದ್ದೀರಾ? ಎಂಬ ಪ್ರಶ್ನೆಗೆ ಬದುಕಿನಲ್ಲಿ ವಿಶ್ವಾಸವಿದ್ದ ಜೀವಿಯಿಂದ ಉತ್ತರವಿಲ್ಲ. ಆದರೆ ನೀವು ನಂಬಿಕೆ ಇಟ್ಟುಕೊಂಡ ಜೀವನ ಮೌಲ್ಯಗಳಾವುವು? ಯಾವ ಸಂಗತಿಗಳಿಂದಾಗಿ ನಿಮಗೆ ಬದುಕು ಅರ್ಥಪೂರ್ಣವೆನ್ನಿಸಿದೆ? ಎಂಬ ಪ್ರಶ್ನೆಗೆ ಉತ್ತರ ಸಿಗಬಹುದು’ ಎಂದಿರುವರು.

‘ಕಹಾ ಮೈನೆ ಕಿತನಾ ಹೈ ಗುಲ್ ಕಾ ಸಬಾತ್/ಕಾಲಿನೆ ಯೆ ಸುನ್ಕರ್ ತಬಸ್ಸೂಂ ಕಿಯಾ’ (‘ಎಷ್ಟು ಕಾಲ?’ ನಾನು ಕೇಳಿದೆ ಗುಲಾಬಿಯ ಆಯಸ್ಸು. ಮೊಗ್ಗು ಮೊಗವೆತ್ತಿ ಮುಗುಳ್ನಕ್ಕಿತ್ತಷ್ಟೆ)- ಬದುಕಿನ ಮಹತ್ವವನ್ನು ಅತ್ಯಂತ ಅರ್ಥಪೂರ್ಣವಾಗಿ ವಿವರಿಸುವ ಮಿರ್ಜಾ ಗಾಲಿಬ್‍ನ ಗಝಲ್ ಸಾಲುಗಳಿವು. ಅರಳಿ ನಿಂತ ಹೂವು ತನ್ನ ಬದುಕು ಕ್ಷಣಿಕವೆಂದು ಎಂದಿಗೂ ಶೋಕಿಸುವುದಿಲ್ಲ. ಅದು ಬದುಕಿರುವವರೆಗೂ ತನ್ನ ಪರಿಮಳವನ್ನು ಸುತ್ತಲೂ ಬೀರುತ್ತದೆ. ಕಲ್ಲುಬಂಡೆ ಕೆಳಗಿನ ಗರಿಕೆ ಹುಲ್ಲು ಸಿಕ್ಕ ಅವಕಾಶದಲ್ಲೇ ಹೊರಚಾಚಿ ಚಿಗುರೊಡೆಯುತ್ತದೆ. ಬಚ್ಚಲಿನ ಕೊಳೆಯ ನೀರಲ್ಲಿ ಬೆಳೆದು ನಿಲ್ಲುವ ಮಲ್ಲಿಗೆ ಬಳ್ಳಿ ಗಿಡದ ಕೊನೆಗೆ ಘಮಘಮಿಸುವ ಹೂಗಳನ್ನು ಬಿಡುತ್ತದೆ. ಆದರೆ ದೇಹದಲ್ಲಿ ದೊಡ್ಡ ಮೆದುಳಿರುವ ಮನುಷ್ಯ ಮಾತ್ರ ಸೋಲುಗಳಿಗೆ ಅಧೀರನಾಗಿ ಸಾವಿನಲ್ಲಿ ಪರಿಹಾರ ಹುಡುಕುತ್ತಿರುವುದು ಎಷ್ಟು ನ್ಯಾಯ?. 

-ರಾಜಕುಮಾರ ಕುಲಕರ್ಣಿ

Wednesday, June 8, 2022

ಸಾಧನೆ: ಬೌದ್ಧಿಕವೋ? ಭೌತಿಕವೋ?



(೨೮.೦೪.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟ)

 ಇತ್ತೀಚೆಗೆ ಮದುವೆ ಸಮಾರಂಭವೊಂದರಲ್ಲಿ ಭೇಟಿಯಾದ ಪರಿಚಿತರೋರ್ವರು ತಮ್ಮ ಬದುಕಿನ ಸಾಧನೆಗಳನ್ನು ಕುರಿತು ಹೇಳಿಕೊಂಡರು. ನಿವೃತ್ತಿಯ ಅಂಚಿನಲ್ಲಿರುವ ಅವರು ಮಾತಿನ ನಡುವೆ ನನಗೆ ಹೇಳಿದ್ದಿಷ್ಟು-‘ಎಂಬತ್ತು x ನಲವತ್ತು ಅಳತೆಯ ದೊಡ್ಡ ಸೈಟಿನಲ್ಲಿ ಮೂರಂತಸ್ತಿನ ಮನೆ ಕಟ್ಟಿಸಿದ್ದೀನಿ, ಲಂಚಕೊಟ್ಟು ಮಗನಿಗೆ ಸರ್ಕಾರಿ ನೌಕರಿ ಕೊಡಿಸಿದ್ದೀನಿ, ಬೀಗರ ನಿರೀಕ್ಷೆಗಿಂತ ಹೆಚ್ಚು ವರದಕ್ಷಿಣೆ ಕೊಟ್ಟು ಮಗಳ ಮದುವೆ ಮಾಡಿದ್ದೀನಿ, ಹೆಂಡತಿ ಹೆಸರಲ್ಲಿ ಮೂರು ಸೈಟುಗಳಿವೆ, ಊರಿನಲ್ಲಿ ಹತ್ತೆಕರೆ ಜಮೀನು ಖರೀದಿಸಿ ತೋಟ ಮಾಡಿದ್ದೀನಿ. ಮನೆ ಎದುರು ಎರಡು ದುಬಾರಿ ಬೆಲೆಯ ಕಾರುಗಳಿವೆ ಅಂತೂ ಬದುಕು ಪರಿಪೂರ್ಣವಾಯಿತು ನೋಡಿ’ ಎಂದು ಮುಖದಲ್ಲಿ ಧನ್ಯತೆಯ ಭಾವವನ್ನು ತುಂಬಿಕೊಂಡು ನುಡಿದರು. ಅವರ ಸಾಧನೆ ಕೇಳಿ ದಂಗಾಗಿ ಹೋದೆ. ಮಾತಿನುದ್ದಕ್ಕೂ ಭೌತಿಕ ಸಂಗತಿಗಳೇ ಮುನ್ನೆಲೆಗೆ ಬಂದು ನಾನು ನಿರೀಕ್ಷಿಸುತ್ತಿದ್ದ ಅವರ ವೃತ್ತಿ ಸಂಬಂಧಿತ ಬೌದ್ಧಿಕ ಸಾಧನೆಗಳ ಕುರಿತು ಯಾವ ವಿಚಾರವಾಗಲಿ, ಹೇಳಿಕೆಯಾಗಲಿ ಮಾತಿನಲ್ಲಿ ಗೋಚರಿಸಲಿಲ್ಲ. ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀಯುತರು ತಮ್ಮ ಅಕಾಡೆಮಿಕ್ ಸಾಧನೆಗಳ ಬಗ್ಗೆ ಹೇಳಿಕೊಳ್ಳಬಹುದೆಂದು ಒಂದಿಷ್ಟು ಹೊತ್ತು ಕಾದುಕುಳಿತ ನನಗೆ ಅವರಿಂದ ಅಂಥ ಯಾವ ಪ್ರತಿಕ್ರಿಯೆ ಬರದೆಯಿದ್ದಾಗ ನಿರಾಸೆಯಾಯಿತು. ಬೀಳ್ಕೊಡುವಾಗ ಸಧ್ಯದಲ್ಲೆ ಅಭಿಮಾನಿಗಳು ಮತ್ತು ವಿದ್ಯಾರ್ಥಿಗಳು ತಮ್ಮನ್ನು ಅಭಿನಂದಿಸಿ ಅಭಿನಂದನಾ ಗ್ರಂಥವನ್ನು ಸಮರ್ಪಿಸುತ್ತಿದ್ದು ಆ ಕಾರ್ಯಕ್ರಮಕ್ಕೆ ಬರುವಂತೆ ನನ್ನನ್ನು ಆಹ್ವಾನಿಸಿದರು. 

ಭೌತಿಕವೇ ಪ್ರಧಾನವಾಗುತ್ತಿರುವ ಬದುಕಿನಲ್ಲಿ ಸಾಧನೆ ಎನ್ನುವುದು ಕೂಡ ಮನೆ, ಸೈಟು, ಬ್ಯಾಂಕ್ ಬ್ಯಾಲೆನ್ಸ್, ಚಿನ್ನಾಭರಣಗಳ ರೂಪದಲ್ಲಿ ಢಾಳಾಗಿ ಕಣ್ಣಿಗೆ ಕಾಣಿಸುವಂತಿರಬೇಕು ಎಂದು ಮನುಷ್ಯರು ಅಪೇಕ್ಷಿಸುತ್ತಿದ್ದಾರೆ. ಅದಕ್ಕೆಂದೆ ಇಲ್ಲಿ ಆಕಾಶದೆತ್ತರಕ್ಕೆ ಮನೆಗಳು ನಿರ್ಮಾಣಗೊಳ್ಳುತ್ತವೆ, ಸೈಟುಗಳ ಬೆಲೆ ಗಗನಕ್ಕೆರುತ್ತದೆ, ಚಿನ್ನಾಭರಣಗಳ ಖರೀದಿ ಬಡವರಿಗೆ ಕನಸಿನ ಮಾತಾಗುತ್ತದೆ. ‘ಎಲ್ಲಿಯೂ ನಿಲ್ಲದಿರು, ಮನೆಯನೆಂದೂ ಕಟ್ಟದಿರು, ಕೊನೆಯನೆಂದೂ ಮುಟ್ಟದಿರು’ ಸಾಲುಗಳ ಮೂಲಕ ಕುವೆಂಪು ಲೌಕಿಕ ಬದುಕಿನ ಆದ್ಯತೆಗಳಾಚೆ ಬದುಕು ಮತ್ತು ಸಾಧನೆ ವಿಸ್ತರಿಸಲಿ ಎಂದು ಹೇಳಿದರು. ವಿಪರ್ಯಾಸವೆಂದರೆ ಹೀಗೆ ಉಪದೇಶಿಸಿದ ಕುವೆಂಪು ಅವರನ್ನು ಶಾಲೆ, ಕಾಲೇಜುಗಳಲ್ಲಿ ಬೋಧಿಸುವ ಅದೇ ಶಿಕ್ಷಕಗಣ ಬೌದ್ಧಿಕ ಸಾಧನೆಗಿಂತ ಭೌತಿಕ ಸಾಧನೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವರು.

ದಿನದಿಂದ ದಿನಕ್ಕೆ ಮನುಷ್ಯ ಮಟೆರಿಯಲಿಸ್ಟಿಕ್ ಆಗುತ್ತಿರುವನು. ‘ನಾನು ವಸ್ತುಗಳನ್ನು ಪ್ರೀತಿಸುತ್ತೇನೆ, ಮನುಷ್ಯರನ್ನು ಉಪಯೋಗಿಸುತ್ತೇನೆ’ ಎನ್ನುವುದು ಬದುಕಿನ ಧ್ಯೇಯ ವಾಕ್ಯವಾಗಿದೆ. ಸಮಾಜ ಕೂಡ ಸಾಧಕರನ್ನು ಗುರುತಿಸಿ ಗೌರವಿಸುವಲ್ಲಿ ಎಡವುತ್ತಿದೆ. ನಿಜವಾದ ಸಾಧಕರಿಗಿಂತ ಇಲ್ಲಿ ಭೌತಿಕ ಸಾಧಕರೇ ಗೌರವಕ್ಕೆ, ಅಭಿಮಾನಕ್ಕೆ ಪಾತ್ರರಾಗುತ್ತಿರುವರು. ಜಾತಿ, ಧರ್ಮ, ಹಣ ಮತ್ತು ತೋಳ್ಬಲದೆದುರು ನಿಜವಾದ ಬೌದ್ಧಿಕ ಸಾಧಕರು ಸಮಾಜದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವರು. ಒಂದರ್ಥದಲ್ಲಿ ಮನುಷ್ಯ ಮನುಷ್ಯನನ್ನು ಉಪಯೋಗಿಸುತ್ತಿರುವನು ಮತ್ತು ಶೋಷಣೆಗೆ ಒಳಪಡಿಸುತ್ತಿರುವನು.

ಬೌದ್ಧಿಕವೆಂದು ಪರಿಗಣಿತವಾಗಿರುವ ಕ್ಷೇತ್ರಗಳಲ್ಲೂ ಭೌತಿಕ ಸಾಧನೆಯ ವ್ಯಾಮೋಹ ಕಾಡುತ್ತಿದೆ. ತೊಂಬತ್ತೈದು ಪುಸ್ತಕಗಳನ್ನು ಪ್ರಕಟಿಸಿರುವ ಸಾಹಿತಿ ಮಿತ್ರರೋರ್ವರಿಗೆ ತನ್ನ ಈ ಸಾಹಿತ್ಯದ ಸಾಧನೆ ನೂರನ್ನು  ಮುಟ್ಟಲಿ ಎನ್ನುವ ಆಸೆ. ಈ ಸಂಖ್ಯಾತ್ಮಕ ಸಾಧನೆ ಎದುರು ಗುಣಾತ್ಮಕತೆಯು ಮೂಲೆಗುಂಪಾಗಿದೆ. ಅಭಿನಂದನ ಗ್ರಂಥಗಳ ಸಂಪಾದಕತ್ವವನ್ನು ಗುತ್ತಿಗೆ ಹಿಡಿದಿರುವವರು ಸಮಾಜದಲ್ಲಿ ಶ್ರೇಷ್ಠ ಸಾಹಿತಿ ಎನ್ನುವ ಗೌರವಕ್ಕೆ ಪಾತ್ರರಾಗುತ್ತಾರೆ. ಅರವತ್ತು, ಎಂಬತ್ತು ವರ್ಷಗಳ ದೈಹಿಕ ವಯೋಮಾನವನ್ನೆ ಮಾನದಂಡವಾಗಿಟ್ಟುಕೊಂಡು ಅಭಿನಂದನೆಗೆ ಒಳಗಾಗಲು ಹಪಹಪಿಸುವ ಸಾಧಕರ ಸಂಖ್ಯೆಯೇನೂ ಕಡಿಮೆ ಇಲ್ಲ. ಅನೇಕ ಪ್ರಕಾಶನ ಸಂಸ್ಥೆಗಳು ಪ್ರತಿವರ್ಷ ಸಾಮೂಹಿಕ ವಿವಾಹದ ರೀತಿ ನೂರು, ಎರಡು ನೂರು ಪುಸ್ತಕಗಳನ್ನು ಪ್ರಕಟಿಸುತ್ತಿವೆ. ಹೀಗೆ ಪ್ರಕಟವಾಗುತ್ತಿರುವ ಪುಸ್ತಕಗಳು ಸಾರ್ವಜನಿಕ ಗ್ರಂಥಾಲಯಗಳ ಅಲ್ಮೆರಾಗಳಿಗೆ ಶೋಭೆ ತರುತ್ತಿವೆಯೇ ವಿನ: ಓದುಗನ ಏಕಾಂತಕ್ಕೆ ಲಗ್ಗೆ ಇಡುತ್ತಿಲ್ಲ. ಹಾಡುಗಾರ ಕಣ್ಮುಚ್ಚಿ ತನ್ನನ್ನು ತಾನು ಮೈಮರೆತು ಹಾಡಿದರೆ ಅದು ತಾದ್ಯಾತ್ಮ ಅನಿಸಿಕೊಳ್ಳುತ್ತದೆ. ಪ್ರೇಕ್ಷಕರನ್ನು ಆಕರ್ಷಿಸಲೆಂದು ಕಣ್ಬಿಟ್ಟು ಆಂಗೀಕ ಅಭಿನಯಕ್ಕಿಳಿದರೆ ಆಗ ಸಂಗೀತ ಎನ್ನುವುದು ಭೌತಿಕ ಪ್ರದರ್ಶನವಾಗಿ ಪರಿಣಮಿಸುತ್ತದೆ.

ವಿವಿಧ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರ ಕೂಡ ಇಂದು ಈ ಭೌತಿಕ ಸಾಧನೆಯ ವ್ಯಾಮೋಹದಿಂದ ಕಲುಷಿತಗೊಂಡಿದೆ. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಅದೆಷ್ಟೋ ಶಿಕ್ಷಕರ ಮನೆಗಳಲ್ಲಿ ಕಣ್ಣಿಗೆ ದುರ್ಬೀನು ಹಾಕಿಕೊಂಡು ಹುಡುಕಿದರೂ ಒಂದು ಪುಸ್ತಕ ಗೋಚರಿಸುವುದಿಲ್ಲ. ಶಿಕ್ಷಕರು ಬೌದ್ಧಿಕ ಸಾಧನೆಯನ್ನು ನಿರ್ಲಕ್ಷಿಸುತ್ತಿರುವ ಕಾರಣದಿಂದ ‘ಕ್ಲಾಸ್ ಲೆಕ್ಚರ್ ಈಜ್ ಎ ಪ್ರೊಸೆಸ್  ಆಫ್ ಟೀಚರ್ಸ್ ನೋಟ್ಸ್ ಬಿಕಮಿಂಗ್ ಸ್ಟುಡೆಂಟ್ಸ್ ನೋಟ್ಸ್ ವಿದೌಟ್ ಪಾಸಿಂಗ್ ಥ್ರು ದಿ ಮೈಂಡ್ ಆಫ್ ಐದರ್’ ಎನ್ನುವ ಹಾಸ್ಯೋಕ್ತಿ ಶಿಕ್ಷಣವಲಯದಲ್ಲಿ ಚಲಾವಣೆಯಲ್ಲಿದೆ. ಓದು, ಬೋಧನೆ, ಸಂಶೋಧನೆಯಂತಹ ಬೌದ್ಧಿಕ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಾದ ಶಿಕ್ಷಕರು ಹಣಕಾಸಿನ ಲೇವಾದೇವಿಯಂತಹ ವಹಿವಾಟುಗಳಲ್ಲಿ ನಿರತರಾಗಿರುವರು. ಪ್ರಾಧ್ಯಾಪಕರ ಸಂಶೋಧನಾ ಬರವಣಿಗೆ ಕೂಡ ಹುದ್ದೆ ಮತ್ತು ವೇತನ ಬಡ್ತಿಯಂತಹ ಭೌತಿಕ ಪ್ರಗತಿಗೆ ಸಿಮೀತವಾಗುತ್ತಿರುವುದು ದುರದೃಷ್ಟಕರ.  

ಎಲ್ಲವನ್ನೂ ಬಹಿರಂಗದಲ್ಲೇ ಹುಡುಕುತ್ತಿರುವ ಮನುಷ್ಯನಿಗೆ ಇಂದು ಭೌತಿಕ ಪ್ರಗತಿಯೇ ಪ್ರಧಾನವಾಗಿ ಕಾಣಿಸುತ್ತಿದೆ. ಬದುಕಿನ ಕ್ಷಣಿಕತೆಯ ಅರಿವು ಇವತ್ತಿನ ಮನುಷ್ಯನಿಗಿಲ್ಲ. ಸಾವಿನ ಪ್ರಜ್ಞೆ ಇಲ್ಲದೆ ಚಿರಂಜೀವಿತ್ವದ ಭಾವನೆಯನ್ನು ಅಂತರ್ಗತಗೊಳಿಸಿಕೊಂಡು ಬದುಕು ಶಾಶ್ವತ ಎನ್ನುವಂತೆ ವರ್ತಿಸುತ್ತಿರುವನು. ಆತ್ಮಾವಲೋಕನಕ್ಕಾಗಲಿ, ಆತ್ಮವಿಮರ್ಶೆಗಾಗಲಿ ಇಳಿಯುವಷ್ಟು ವ್ಯವಧಾನ ಇಂದಿನವರಿಗಿಲ್ಲ. ಪರಿಣಾಮವಾಗಿ ಬದುಕಿನ ಪ್ರಗತಿ-ಸಾಧನೆ ಎನ್ನುವುದು ನಗ, ನಾಣ್ಯ, ಮನೆ, ತೋಟಗಳಂತಹ ಭೌತಿಕ ವಸ್ತುಗಳ ರೂಪದಲ್ಲೇ ಗೋಚರಿಸುತ್ತಿದೆ. 

ಯಶವಂತ ಚಿತ್ತಾಲರು ಅಸ್ತಿತ್ವವಾದೀ ದಾರ್ಶನಿಕ ಮಾರ್ಟಿನ್ ಹೈಡೆಗರ್ ಸಿದ್ಧಾಂತವನ್ನು ವಿವರಿಸುತ್ತ ‘ಮನುಷ್ಯ ತನ್ನ ಅಸ್ತಿತ್ವದ ಅಸಂಖ್ಯ ಸಾಧ್ಯತೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವಾಗ ತನ್ನ ಸಾವು ಕೂಡ ಈ ಎಲ್ಲ ಸಾಧ್ಯತೆಗಳಲ್ಲಿ ಒಂದು ಮಾತ್ರವಲ್ಲ, ಎಲ್ಲ ಸಾಧ್ಯತೆಗಳಲ್ಲಿ ಇದೊಂದೆ ನಿಶ್ಚಿತವಾದದ್ದು ಎಂಬುದನ್ನು ಮನಗಾಣುತ್ತಾನೆ. ತನ್ನ ಸಾವನ್ನು ತಾನೇ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ಯಾವಾಗ ಬರುತ್ತದೊ ಆಗ ಮಾತ್ರ ಎಲ್ಲವನ್ನೂ ನಿಚ್ಚಳವಾಗಿ, ಸ್ವಚ್ಛವಾಗಿ ನೋಡುವ ದೃಷ್ಟಿಯುಳ್ಳವನಾಗುತ್ತಾನೆ. ಇಂಥ ದೃಷ್ಟಿಯ ಮೂಲಕವೇ ಲಕ್ಷ್ಯಕ್ಕೆ ಬರುವ ತನ್ನ ಬದುಕಿನ ಅಪರಿಪೂರ್ಣತೆಯನ್ನು, ಕುಂದುಕೊರತೆಗಳನ್ನು ಕುರಿತು ತೀವ್ರ ಅಸಮಾಧಾನಕ್ಕೆ, ಪಾಪಪ್ರಜ್ಞೆಗೆ ಒಳಗಾಗುತ್ತಾನೆ. ಮನುಷ್ಯನ ಪ್ರಜ್ಞೆಯ ಬೆಳವಣಿಗೆಯಲ್ಲಿ ಸಾವಿಗೆ ಅತ್ಯಂತ ಮಹತ್ವದ ಸ್ಥಾನವಿದ್ದುದನ್ನು ಹೈಡೆಗರ್‍ನ ದರ್ಶನ ಗುರುತಿಸುತ್ತದೆ’ ಎಂದಿರುವರು. ಹೈಡೆಗರ್ ಪ್ರಕಾರ ಬದುಕಿನ ಅಪರಿಪೂರ್ಣತೆ ಎನ್ನುವುದು ಭೌತಿಕವಲ್ಲ. ಆತ ಹೇಳುವುದು ಸಾವಿನ ಪ್ರಜ್ಞೆಯಿರುವ ಮನುಷ್ಯ ತನ್ನ ಬದುಕಿನ ಬೌದ್ಧಿಕ ಅಪರಿಪೂರ್ಣತೆ ಕುರಿತು ಚಿಂತಿಸುತ್ತಾನೆ. ದುರಾದೃಷ್ಟವೆಂದರೆ ಬಹಿರಂಗದ ಬದುಕಿಗೆ ಆದ್ಯತೆ ನೀಡುತ್ತಿರುವ ಮನುಷ್ಯ ತನ್ನ ಅಂತರಂಗದ ಪಿಸುಧ್ವನಿಯನ್ನು ಕೇಳಿಸಿಕೊಳ್ಳದಷ್ಟು ಅಸಂವೇದಿಯಾಗುತ್ತಿರುವನು.

-ರಾಜಕುಮಾರ ಕುಲಕರ್ಣಿ


Tuesday, May 17, 2022

ಮುಖವಾಡ (ಕಥೆ)




      ಪ್ರೇಮಚಂದನಿಗೆ ಅವನು ಕೆಲಸ ಮಾಡುತ್ತಿದ್ದ ಕಂಪನಿಯ ಪ್ರಧಾನ ಕಚೇರಿಯಿಂದ ಬಂದ ಪತ್ರದ ಒಕ್ಕಣೆ ಹೀಗಿತ್ತು- ‘ಕಂಪನಿಯ ಆಡಳಿತ ಮಂಡಳಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೊಸ ಆಡಳಿತ ಮಂಡಳಿಯು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯ ವಿಶ್ವಾಸಾರ್ಹತೆಯನ್ನು ಪರಿಶೀಲಿಸಲು ಬಯಸಿದೆ. ಕಂಪನಿಯ ನಿಯಮಗಳು ಮತ್ತು ಸಿಬ್ಬಂದಿಯ ವ್ಯಕ್ತಿತ್ವ ಹಾಗೂ ಮುಖಚಹರೆ ನಡುವಣ ಹೊಂದಾಣಿಕೆಯನ್ನು ಗುರುತಿಸುವುದೇ ಈ ಪರಿಶೀಲನೆಯ ಉದ್ದೇಶವಾಗಿದೆ. ಉಲ್ಲೇಖಿಸಿದ ದಿನಾಂಕದಂದು ತಾವು ಮುಖ್ಯಕಚೇರಿಯಲ್ಲಿ ಚಹರೆ ಪರಿಶೀಲನಾ ಸಂದರ್ಶನಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಆಡಳಿತ ಮಂಡಳಿಯ ನೀತಿನಿಯಮಗಳಿಗೆ  ಅನುಗುಣವಾದ ಮುಖಚಹರೆ ತಮ್ಮದಾಗಿದ್ದಲ್ಲಿ ತಮ್ಮನ್ನು ಕೆಲಸದಲ್ಲಿ ಮುಂದುವರೆಸಲಾಗುವುದು. ಒಂದುವೇಳೆ ತಮ್ಮ ಮುಖಚಹರೆ ಆಡಳಿತ ಮಂಡಳಿ ಇಚ್ಛೆಗೆ ವಿರುದ್ಧವಾಗಿದ್ದಲ್ಲಿ ತಮ್ಮನ್ನು ಮುಂದುವರೆಸುವ ಇಲ್ಲವೇ ಕೆಲಸದಿಂದ ವಜಾಗೊಳಿಸುವ ನಿರ್ಧಾರ ಕಂಪನಿಗೆ ಸೇರಿದ್ದು. ಪತ್ರದಲ್ಲಿ ಉಲ್ಲೇಖಿಸಿದ ದಿನದಂದು ತಾವು ಸಂದರ್ಶನಕ್ಕೆ ಹಾಜರಾಗದಿದ್ದ ಪಕ್ಷದಲ್ಲಿ ತಮ್ಮ ಗೈರುಹಾಜರಿಯನ್ನು ಅಸಮ್ಮತಿಯೆಂದು ಪರಿಗಣಿಸಿ ತಮ್ಮನ್ನು ಕೆಲಸದಿಂದ ವಜಾಗೊಳಿಸುವ ಹಕ್ಕು ಆಡಳಿತ ಮಂಡಳಿಗಿದೆ’. ಪತ್ರವನ್ನೊದಿ ಪ್ರೇಮಚಂದನಿಗೆ ಒಂದುಕ್ಷಣ ಕಣ್ಣಿಗೆ ಕತ್ತಲಾವರಿಸಿದಂತಾಗಿ ತಾನು ಯಾವುದೋ ಒಂದು ಷಡ್ಯಂತ್ರದಲ್ಲಿ ಸಿಕ್ಕಿಬಿದ್ದ ವಿಚಿತ್ರ ಅನುಭವವಾಗಿ ಹೊಟ್ಟೆ ತೊಳಿಸಿದಂತೆನಿಸಿ ಎದ್ದು ವಾಶ್‌ರೂಮಿನತ್ತ ಹೆಜ್ಜೆ ಹಾಕಿದ.    ತೂಗುಹಾಕಿದ್ದ ಕನ್ನಡಿಯಲ್ಲಿ ತನ್ನ ಮುಖವನ್ನು ದಿಟ್ಟಿಸಿ ನೋಡುತ್ತ ನಿಂತವನಿಗೆ ಕೆಲವು ದಿನಗಳ ಹಿಂದಷ್ಟೆ ಹೆಂಡತಿ ಆಡಿದ ಮಾತುಗಳು ತಲೆಯಲ್ಲಿ ಗಿರಗಿಟ್ಲೆ ಆಡಲಾರಂಭಿಸಿದವು. ಅಂದು ಊಟ ಬಡಿಸುವಾಗ ಸರಳಾಬಾಯಿ ತನ್ನ ಮನದ ಬೇಗುದಿಯನ್ನು ಸಿಟ್ಟಿನಿಂದಲೇ ಹೊರಹಾಕಿದ್ದಳು, ‘ನಿಮ್ಮ ಮಾರಿ ಮ್ಯಾಲಿನ ಕಳ್ಯಾಕ ಈಗಿದ್ದ ನೌಕರಿ ಸಿಕ್ಕಿದ್ದೆ ದೊಡ್ಡ ಪುಣ್ಯ. ಪಕ್ಕದ ಮನಿ ಮಾಧುರಿ ಹೇಳ್ಲಿಕತ್ತಿದ್ದಳು ಹೊಸ ಆಡಳಿತ ಮಂಡಳಿ ಬರೊದದಾ. ಹಾಗೇನಾದ್ರೂ ಬಂದ್ರ ಈಗಿದ್ದ ಎಷ್ಟೋ ಮಂದಿ ನೌಕರಿ ಕಳ್ಕೊತಾರಂತ. ಯಾಕಂದ್ರ ಹೊಸ ಆಡಳಿತ ಮಂಡಳಿಗೂ ನೌಕರಿ ಮಾಡೊವರ ಮಾರಿ ಚಹರಾಕ್ಕೂ ಹೊಂದಿಕಿ ಆಗ್ಬೇಕಂತ. ಹಾಂಗ ಹೊಂದಿಕಿ ಆಗ್ಲಿಲ್ಲಂದ್ರ ನೌಕರಿನಿಂದ ತೆಗೆದು ಹಾಕ್ತಾರಂತ. ಎಷ್ಟ ಸಲ ಬಡ್ಕೊಂಡಿನಿ ಸಮಯ ಸಂದರ್ಭಕ್ಕ ತಕ್ಕಂಗ ಬದುಕೊದು ರೂಢಿಸಿಕೊಳ್ರಿ ಅಂತ. ಎಲ್ಲಿ ನನ್ನ ಮಾತು ಕಿವ್ಯಾಗ ಹಾಕೊತಿರಿ. ಮದವಿ ಆದಾಗ್ಲಿಂದ ನೋಡ್ಲಿಕತ್ತಿನಿ ಈ ಮುಖದಾಗ ಒಂದಷ್ಟರೆ ಬದಲಾವಣಿ ಆಗ್ಯಾದೇನು. ಅದೇ ಗುಡ್ಡದ ಮ್ಯಾಲ ನಿಂತ ಗೊಮ್ಮಟನಂಗÀ’. ಹೆಂಡತಿ ಆಡಿದ ಮಾತುಗಳು ನೆನಪಾಗಿ ಪ್ರೇಮಚಂದನ ಆತಂಕ ಮತ್ತಷ್ಟು ಹೆಚ್ಚಿತು. 

* * *

ಕಳೆದ ಇಪ್ಪತ್ತೈದು  ವರ್ಷಗಳಿಂದ ಬಹುರಾಷ್ಟ್ರೀಯ ಕಂಪನಿಯೊಂದರ ಶಾಖಾ ಕಚೇರಿಯಲ್ಲಿ ಲೆಕ್ಕ ಪರಿಶೋಧಕನಾಗಿ ಕೆಲಸ ಮಾಡುತ್ತಿರುವ ಪ್ರೇಮಚಂದ ಗಲಗಲಿಯದು ಯಾವ ಏರಿಳಿತಗಳಿಲ್ಲದ ಸರಳ ಬದುಕು. ಪತ್ನಿ ಸರಳಾಬಾಯಿ, ಇಂಜಿನಿಯರಿಂಗ್ ಫೈನಲ್ ಸೆಮಿಸ್ಟರ್‌ನಲ್ಲಿ ಓದುತ್ತಿರುವ ಮಗ ವಿಜೇತ, ಎರಡನೆ ಪಿಯುಸಿ ಓದುತ್ತಿರುವ ಮಗಳು ವೀಣಾ ಒಟ್ಟಾರೆ ಚಿಕ್ಕ ಮತ್ತು ಚೊಕ್ಕ ಸಂಸಾರ. ತಲೆಯ ಮೇಲೊಂದು ಸೂರಿದೆ ಎನ್ನುವುದಕ್ಕೆ ಸಾಕ್ಷಿಯಾಗಿ ಮಧ್ಯಮ ವರ್ಗದವರೇ ಹೆಚ್ಚಾಗಿ ವಾಸಿಸುತ್ತಿರುವ ನಗರದ ಬಡಾವಣೆಯೊಂದರಲ್ಲಿ ಅಪ್ಪ ಕಟ್ಟಿಸಿದ ಮನೆಯಿದೆ. ಅಪ್ಪ ಅಮ್ಮ ಇಹಲೋಕ ತ್ಯಜಿಸಿ ಹತ್ತಿರ ಹತ್ತಿರ ಹತ್ತು ವರ್ಷಗಳಾಗುತ್ತ ಬಂತು. ಹೆತ್ತವರ ಸಾವಿನ ನಂತರ ಪ್ರೇಮಚಂದನೇ ಸಂಬಂಧಿಕರಿಂದ ದೂರಾದನೋ ಇಲ್ಲ ಅವರೇ ಇವನಿಂದ ದೂರಾದರೋ ಅಂತೂ ಯಾವ ನೆಂಟರಿಷ್ಟರ ರಗಳೆ ತಾಪತ್ರಯಗಳಿಲ್ಲದೆ ತಾನಾಯ್ತು ತನ್ನ ಕೆಲಸವಾಯ್ತು ಎಂದು ಬದುಕುತ್ತಿರುವ ನಿರುಪದ್ರವಿ ಜೀವಿ ಈತ. ಬೆಳಗ್ಗೆ ಐದಕ್ಕೆ ಎದ್ದು ಒಂದಿಷ್ಟು ವಾಕಿಂಗ್ ಮುಗಿಸಿ ಸ್ನಾನ ಸಂದ್ಯಾವಂದನೆ ಮಾಡಿ ಹೆಂಡತಿ ಮಾಡಿಟ್ಟ ಉಪ್ಪಿಟ್ಟೊ ಅವಲಕ್ಕಿನೊ ತಿಂದು ಎರಡು ಚಪಾತಿಗಳನ್ನು ಡಬ್ಬಿಯಲ್ಲಿ ಸುತ್ತಿಕೊಂಡು ಮನೆಯಿಂದ ಹೊರಬಿದ್ದು ಸಮೀಪದ ಪಿಕಪ್ ಪಾಯಿಂಟ್‌ನಲ್ಲಿ ಕಂಪನಿಯ ಕ್ಯಾಬ್ ಹತ್ತಿ ಆಫೀಸ್ ಸಮೀಪಿಸುವವರೆಗೂ ಕ್ಯಾಬ್‌ನಲ್ಲೇ ಒಂದು ಸಣ್ಣ ನಿದ್ದೆ ತೆಗೆದು ಕ್ಯಾಬ್ ನಿಂತಿದ್ದೆ  ಅವಸವಸರವಾಗಿ ಆಫೀಸ್ ಬಿಲ್ಡಿಂಗ್ ಪ್ರವೇಶಿಸಿ ತನ್ನ ದಿನನಿತ್ಯದ ಜಾಗದಲ್ಲಿ ಕುಳಿತುಕೊಂಡರೆ ಹೊರಗೆ ಕಾಲಿಡುವುದು ಮತ್ತೆ ಮನೆಗೆ ಮರಳುವಾಗಲೇ. ಸಂಸಾರ ಮತ್ತು ನೌಕರಿಯ ತಾಪತ್ರಯಗಳ ನಡುವೆಯೂ ಓದು ಬರವಣಿಗೆ ಎಂದು ಹವ್ಯಾಸಗಳನ್ನು ಮೈಗೂಡಿಸಿಕೊಂಡಿರುವ ಪ್ರೇಮಚಂದನ ನಾಲ್ಕಾರು ಪುಸ್ತಕಗಳನ್ನು ಪ್ರಕಾಶಕರೊಬ್ಬರು ಪ್ರಕಟಿಸಿದ್ದರಿಂದ ಮನೆಯ ಕಪಾಟಿನಲ್ಲಿ ಹೆಸರಾಂತ ಸಾಹಿತಿಗಳ ಪುಸ್ತಕಗಳ ಸಾಲಿನಲ್ಲಿ ತನ್ನ ಪುಸ್ತಕಗಳನ್ನು ಜೋಡಿಸಿಟ್ಟು ಆಗಾಗ ಅವುಗಳ ಮೈಸವರಿ ಪುಳಕಗೊಳ್ಳುತ್ತಾನೆ.

ಈ ಹತ್ತುದಿನಗಳನ್ನು ಪ್ರೇಮಚಂದ ತುಂಬ ಆತಂಕದಿಂದಲೇ ಕಳೆದ. ಕಂಪನಿಯ ಬ್ರಾ÷್ಯಂಚ್ ಆಫೀಸಿನಲ್ಲಿ ತನ್ನೊಂದಿಗೆ ಕೆಲಸ ಮಾಡುತ್ತಿರುವ ಸಹೋದ್ಯೋಗಿಗಳು ಈ ಮೊದಲಿನಂತೆ ಸ್ನೇಹದಿಂದ ವರ್ತಿಸುತ್ತಿಲ್ಲ ಎನ್ನುವ ಗುಮಾನಿ ಮನಸ್ಸಿನಲ್ಲಿಮೂಡಿದ್ದೆ ಪ್ರೇಮಚಂದ ಮತ್ತಷ್ಟು ದಿಗಿಲುಗೊಂಡ. ಅಲ್ಲಲ್ಲಿ ಇಬ್ಬಿಬ್ಬರೆ ಜೊತೆಯಾಗಿ ನಿಂತು ಮೇಲುಧ್ವನಿಯಲ್ಲಿ ಮಾತನಾಡುವುದು, ಯಾರಾದರೂ ಬರುತ್ತಿರುವ ಸೂಚನೆ ಸಿಕ್ಕಿದ್ದೆ ಮಾತು ನಿಲ್ಲಿಸಿ ಅವರತ್ತ ಅನುಮಾನದಿಂದ ನೋಡುವುದು, ಕೆಲಸದಲ್ಲಿ ಆಸಕ್ತಿಯನ್ನೆ ಕಳೆದುಕೊಂಡ ಕಳಾಹೀನ ಮುಖಗಳು, ನಾಳೆ ಏನಾಗುವುದೋ ಎನ್ನುವ ಆತಂಕ ಒಟ್ಟಾರೆ ಆಫೀಸಿನ ವಾತಾವರಣದಲ್ಲಿ ಈ ಮೊದಲಿನ ಲವಲವಿಕೆ ಇಲ್ಲದೆ ಎಲ್ಲವೂ ಅಯೋಮಯ ಅಗೋಚರ ಅನಿಸತೊಡಗಿತು. ಸಂದರ್ಶನದ ದಿನ ಹತ್ತಿರವಾಗುತ್ತಿದ್ದಂತೆ ಪ್ರೇಮಚಂದನ ಆತಂಕ ಮತ್ತು ದಿಗಿಲು ಉಲ್ಬಣಗೊಂಡು ಬೆಡ್ ರೂಮಿನಲ್ಲಿದ್ದ ಅಲ್ಮೆರಾಕ್ಕೆ ಅಂಟಿಸಿದ ಆಳೆತ್ತರದ ಕನ್ನಡಿ ಎದುರು ನಿಂತು ತನ್ನ ಪ್ರತಿಬಿಂಬದ ಜೊತೆ ಗಂಟೆಗಟ್ಟಲೆ ಸ್ವಗತದಲ್ಲಿ ಮಾತನಾಡತೊಡಗಿದ. ಗಂಡನ ವರ್ತನೆ  ಹೆಂಡತಿ ಸರಳಾಬಾಯಿಗೆ ಏಕಕಾಲಕ್ಕೆ ಒಗಟಾಗಿಯೂ ಮತ್ತು ಸಮಸ್ಯೆಯಾಗಿ ಕಾಡತೊಡಗಿತು.

ಸಂದರ್ಶನದ ದಿನ ಸರಿಯಾಗಿ ಬೆಳಗ್ಗಿನ ಹತ್ತುಗಂಟೆಗೆ ಪ್ರೇಮಚಂದ ಕಂಪನಿಯ ಹೆಡ್ ಆಫೀಸಿನಲ್ಲಿದ್ದ. ಸಂದರ್ಶನದ ಕೊಠಡಿ ಎದುರಿನ ಉದ್ದನೆಯ ಸಾಲಿನತ್ತ ದೃಷ್ಟಿ ಹರಿಸಿದವನಿಗೆ ನಿಂತಿದ್ದವರಲ್ಲಿ ಒಂದೆರಡು ಪರಿಚಿತ ಮುಖಗಳು ಕಣ್ಣಿಗೆ ಕಾಣಿಸಿ ಮನಸ್ಸಿಗೆ ಸಮಾಧಾನವಾಯಿತು. ರಿಸೆಪ್ಷನ್ ಕೌಂಟರ್‌ನಲ್ಲಿ ಹೆಸರು ನೋಂದಾಯಿಸಿ ತನ್ನ ದಾಖಲೆಗಳನ್ನು ಪರಿಶೀಲನೆಗೆ ಕೊಟ್ಟು ಅವರಿಂದ ಚೆಕ್‌ಲಿಸ್ಟ್ ಪಡೆದು ಉದ್ದನೆಯ ಸರತಿ ಸಾಲಿನಲ್ಲಿ ತಾನೂ ಒಬ್ಬನಾಗಿ ನಿಂತ. ಪ್ರೇಮಚಂದ ಸಂದರ್ಶನದ ಕೊಠಡಿಯೊಳಗೆ ಕಾಲಿಡುವ ವೇಳೆಗಾಗಲೇ ಹೊತ್ತು ಮಧ್ಯಾಹ್ನದ ಹನ್ನೆರಡು ದಾಟಿತ್ತು. ವಾತಾನುಕೂಲ ಸೌಲಭ್ಯದ ಕೊಠಡಿಯಲ್ಲಿ ಅಂಥ ರಣಗುಟ್ಟುವ ಭಯಂಕರ ಬೇಸಿಗೆಯಲ್ಲೂ ತಂಪಾದ ಗಾಳಿ ತುಂಬಿಕೊಂಡಿತ್ತು. ಕೂಡಲು ಮೆತ್ತನೆಯ ಸುಖಾಸೀನಗಳು, ಕಿಟಕಿಗಳಿಂದ ಒಳಗೆ ತೂರದಂತೆ ಪ್ರಖರ ಬಿಸಿಲನ್ನು ಮರೆಮಾಚಿದ ಆಕರ್ಷಕ ಪರದೆಗಳು, ಹೂದಾನಿಯಲ್ಲಿ ಅರಳಿನಿಂತಿರುವ ಬಣ್ಣಬಣ್ಣದ ಹೂಗಳು, ಮೈಸೋಕುತ್ತಿರುವ ತಂಪಾದ ಹವೆ ಅರೆಕ್ಷಣ ಪ್ರೇಮಚಂದನಿಗೆ ತಾನು ನಿಂತಿರುವ ಆ ಜಾಗ ಇಂದ್ರನ ಅಮರಾವತಿಯಂತೆ ಭಾಸವಾಯಿತು. ತಾನು ನಿಂತಿರುವ ಜಾಗಕ್ಕೆ ಎದುರಾಗಿ ಮೆತ್ತನೆಯ ಕುರ್ಚಿಗಳ ಮೇಲೆ ಆಸೀನಗೊಂಡಿದ್ದ ಮೂರು ಅಪರಿಚಿತ ಮುಖಗಳು ಗೋಚರಿಸಿದವು. ಅವರಿಗೆದುರಾಗಿ ಇಟ್ಟಿದ್ದ ಖಾಲಿ ಕುರ್ಚಿಯಲ್ಲಿ ಕುಳಿತವನು ಕೇಶವರಾವ್ ಸಾಳುಂಕೆ ಕಾಣಿಸಬಹುದೇನೋ ಎಂದು ಸುತ್ತಲೂ ಕಣ್ಣಾಡಿಸಿದ. ಕಂಪನಿಯ ಹೆಡ್ ಆಫೀಸಿನ ಈ ಜಾಗಕ್ಕೆ ಐದು ವರ್ಷಗಳ ಹಿಂದೆ ಬಂದಿದ್ದ ನೆನಪು ಪ್ರೇಮಚಂದನ ಮನಸ್ಸಿನಲ್ಲಿ ಇನ್ನೂ ಮಾಸಿರಲಿಲ್ಲ. ಕಂಪನಿಯ ಇಪ್ಪತ್ತೆöÊದನೆ ವರ್ಷಾಚರಣೆಯ ನಿಮಿತ್ಯ ಅಂದಿನ ಕಂಪನಿಯ ಮುಖ್ಯಸ್ಥರಾಗಿದ್ದ ಕೇಶವರಾವ್ ಸಾಳುಂಕೆ ಅವರನ್ನು ಸಂದರ್ಶನ ಮಾಡಲು ಮ್ಯಾನೇಜರ್ ರಾಮನಾಥ ಚಿದ್ರಿ ತನ್ನನ್ನು ಹೆಡ್ ಆಫೀಸಿಗೆ ಕಳುಹಿಸಿದ್ದು ನೆನಪಾಯಿತು. ಅಂದು ಇಡೀ ಅರ್ಧದಿನ ಕೇಶವರಾವ್ ಸಾಳುಂಕೆ ಪ್ರೇಮಚಂದನೊಂದಿಗೆ ಕಳೆದಿದ್ದರು. ಚೇಂಬರಿಗೆ ಊಟ ತರಿಸಿ ಪ್ರೇಮಚಂದನೊಂದಿಗೆ ನಗುನಗುತ್ತ ಊಟ ಮಾಡಿದ್ದರು. ಮರುದಿನ ಸಾಳುಂಕೆ ಅವರ ಸಂದರ್ಶನದೊಂದಿಗೆ ಪ್ರೇಮಚಂದ ಬರೆದ ವಿವರವಾದ ಲೇಖನ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಿ ಅವನಲ್ಲಿ ಧನ್ಯತೆಯ ಭಾವವನ್ನು ಮೂಡಿಸಿತ್ತು. ಇನ್ನುಮುಂದೆ ಕಂಪನಿಯ ಮುಖ್ಯಸ್ಥರ ನೆನಪಿನಲ್ಲಿ ತನ್ನ ಚಿತ್ರ ಸ್ಥಿರವಾಗಿ ನೆಲೆಸುತ್ತದೆ ಎಂದು ಭಾವಿಸಿದ್ದ ಪ್ರೇಮಚಂದನಿಗೆ ಮುಂದೊಮ್ಮೆ ಕೇಶವರಾವ್ ಸಾಳುಂಕೆ ಬ್ರಾ÷್ಯಂಚ್ ಆಫೀಸಿಗೆ ಬೇಟಿ ನೀಡಿದ ಸಂದರ್ಭ ಯಾರು ನೀನು ಎಂದು ಪ್ರಶ್ನಿಸಿ ಅವನ ಅಸ್ತಿತ್ವವನ್ನೇ ಅಲುಗಾಡಿಸಿದ್ದರು. ಈ ಘಟನೆಯ ನಂತರ ಪ್ರೇಮಚಂದ ಇನ್ನುಮುಂದೆ ದೊಡ್ಡವರ ಸಹವಾಸವೇ ಸಾಕು ಎನ್ನುವಂತೆ ತಾನಾಯ್ತು ತನ್ನ ಕೆಲಸವಾಯ್ತು ಎನ್ನುತ್ತ ಯಾವ ಉಸಾಬರಿಗೂ ಹೋಗದೆ ಬದುಕುವುದನ್ನು ರೂಢಿಸಿಕೊಂಡಿದ್ದ.

ಹಿಂದಿನದೆಲ್ಲ ನೆನಪಾಗಿ ಈಗ ಸಾಳುಂಕೆ ಅಮೆರಿಕದಲ್ಲಿ ವಾಸಿಸುತ್ತಿರುವ ಸಂಗತಿ ಮನಸ್ಸಿಗೆ ಹೊಳೆದು ಪ್ರೇಮಚಂದ ತಾನು ಸಂದರ್ಶನದ ಕೊಠಡಿಯಲ್ಲಿ ಕುಳಿತಿರುವುದನ್ನು ಸ್ಮರಣೆಗೆ ತಂದುಕೊಂಡ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆಳುವ ಪಕ್ಷದ ಕಿರುಕುಳದಿಂದ ಬೇಸತ್ತು  ಕೇಶವರಾವ್ ಸಾಳುಂಕೆ ಕಂಪನಿಯನ್ನು ವಿಲೇವಾರಿಮಾಡಿ ಪತ್ನಿಸಮೇತ ಅಮೆರಿಕಕ್ಕೆ ಹೋಗಿ ನೆಲೆಸಿದ್ದರು. ಹೊಸ ಆಡಳಿತ ಮಂಡಳಿ ಕಂಪನಿಯ ಆಮೂಲಾಗ್ರ ಬದಲಾವಣೆಗಾಗಿ ಹೊಸ ನಿಯಮಗಳನ್ನು ಜಾರಿಗೆ ತಂದಿತ್ತು. ಆಡಳಿತ ಮಂಡಳಿಯ ಹೊಸ ನಿಯಮಗಳಿಗೆ ಹೊಂದಿಕೊಳ್ಳುವವರನ್ನು ಮಾತ್ರ ಕೆಲಸದಲ್ಲಿ ಮುಂದುವರೆಸುವುದು, ಹೊಂದಿಕೊಳ್ಳದವರನ್ನು ನೌಕರಿಯಿಂದ ವಜಾಗೊಳಿಸುವ ಯೋಜನೆಯ ಮೊದಲಹಂತವಾಗಿ ಈ ಸಂದರ್ಶನವನ್ನು ಏರ್ಪಡಿಸಲಾಗಿತ್ತು. ನೀವು ಯಾವ ಮತಸ್ಥರು, ನಿಮ್ಮ ಮಠ ಯಾವುದು, ನೀವು ನಮೂದಿಸಿರುವ ಸಮುದಾಯಕ್ಕೂ ಮತ್ತು ನಿಮ್ಮ ಹೆಸರು ಹಾಗೂ ಚಹರೆಗೂ ತಾಳೆ ಆಗುತ್ತಿಲ್ಲ, ನೀವು ಒದಗಿಸಿದ ಮಾಹಿತಿ ಸುಳ್ಳು ಎಂದು ಸಾಬೀತಾದಲ್ಲಿ ನಿಮ್ಮ ಮೇಲೆ ಕ್ರಿಮಿನಲ್ ದಾವೆ ಹೂಡುವ ಎಲ್ಲ ಹಕ್ಕುಗಳು ಕಂಪನಿಗಿವೆ ಸಂದರ್ಶನ ಸಮಿತಿಯ ಸದಸ್ಯರ ಒಂದಾದ ಮೇಲೊಂದು ಪ್ರಶ್ನೆಗಳಿಂದ ಪ್ರೇಮಚಂದ ವಿಚಲಿತನಾದ. ಉತ್ತರಿಸುವಾಗ ತಡವರಿಸಿದ. ತಂಪು ವಾತಾವರಣದಲ್ಲೂ ಹಣೆ ಮತ್ತು ಕುತ್ತಿಗೆಯ ಸುತ್ತ ಸಣ್ಣಗೆ ಬೆವರು ಜಿನುಗತೊಡಗಿತು.  

ಪ್ರೇಮಚಂದನ ಮೌನಕ್ಕೆ ಪ್ರತಿಕ್ರಿಯೆಯಾಗಿ ಮಧ್ಯದ ಕುರ್ಚಿಯಲ್ಲಿ ಕುಳಿತ ವ್ಯಕ್ತಿ ಬಹುಶ: ಸಂದರ್ಶನ ಸಮಿತಿಯ ಚೇರ್ಮನ್ ಇರಬಹುದು ಆತ ಸಂದರ್ಶನವು ಅಂತಿಮ ಘಟಕ್ಕೆ ಬಂದಿರುವ ಸೂಚನೆಯೆಂಬಂತೆ ವಿವರಣೆ ನೀಡಿದ ‘ನೀವು ಸಮಿತಿಯ ಯಾವ ಪ್ರಶ್ನೆಗೂ ಉತ್ತರಿಸುತ್ತಿಲ್ಲ. ನಿಮ್ಮ ವರ್ತನೆ ಮತ್ತು ನೀವು ಒದಗಿಸಿದ ಮಾಹಿತಿ ಅನುಮಾನಾಸ್ಪದವಾಗಿ ಕಂಡುಬರುತ್ತಿದೆ. ಸಮಿತಿಯು ಮತ್ತೊಮ್ಮೆ ಸಭೆಸೇರಿ ನಿಮ್ಮನ್ನು ಕೆಲಸದಲ್ಲಿ ಮುಂದುವರೆಸಬೇಕೋ ಅಥವಾ ಇಲ್ಲವೋ ಎನ್ನುವುದನ್ನು ನಿರ್ಧರಿಸಲಿದೆ. ಸಮಿತಿಯ ಅಂತಿಮ ನಿರ್ಧಾರದವರೆಗೂ ನೀವು ಕೆಲಸಕ್ಕೆ ಹಾಜರಾಗುವಂತಿಲ್ಲ. ಈ ಅವಧಿಯ ನಿಮ್ಮ ಗೈರುಹಾಜರನ್ನು ತಾತ್ಕಾಲಿಕ ರಜೆ ಎಂದು ಪರಿಗಣಿಸಲಾಗುವುದು. ನಿಮ್ಮ ನೌಕರಿಯ ವಿಷಯದಲ್ಲಿ ಆಡಳಿತ ಮಂಡಳಿಯದೇ ಅಂತಿಮ ನಿರ್ಧಾರ. ಯಾವುದಕ್ಕೂ ಇನ್ನೆರಡು ದಿನಗಳಲ್ಲಿ ಕಂಪನಿಯ ನಿರ್ಧಾರ ರಿಜಿಸ್ಟರ್ಡ್ ಪೋಸ್ಟ್ ಮೂಲಕ ನಿಮ್ಮ ಕೈಸೇರಲಿದೆ. ಗುಡ್‌ಲಕ್’ ಎಂದು ಹೇಳಿ ಮಾತು ಮುಗಿಸಿದ. 

* * *

‘ನಿಮ್ಮ ಅಪ್ಪ ಮಾಡಿದ ಕಿತಾಪತಿಯಿಂದ ಈಗ ನಾವು ಅನುಭವಿಸಬೇಕಾಗಿ ಬಂದದ ನೋಡ್ರಿ. ಯಾಕ ಆ ವೆಂಕೋಬರಾಯಗ ಬೇರೆ ಯಾವ ಹೆಸರೂ ಸಿಗ್ಲಿಲ್ಲೇನು. ಇದೇ ಹೆಸರು ಬೇಕಾಗಿತ್ತೇನು. ತನಗೇನೋ ಕಥಿ ಮನಸ್ಸಿಗಿ ಹಿಡಿಸಿತು ಅಂತ ಆ ಕಥಿ ಬರೆದವನ ಹೆಸರು ನಿಮಗಿಟ್ಟು ಎಲ್ಲ ಹಾಳ್ಮಾಡಿ ಬಿಟ್ಟ. ನೀವೋ ಗುಡ್ಯಾಗ ಲಿಂಗದ ಎದುರು ಕೂತ ಬಸವಣ್ಣನಂಗ. ಅಪ್ಪ ಇಟ್ಟ ಹೆಸರಿಗಿ ಯಾವ ಕಳಂಕಾನೂ ಬರದಂಗ ವೆಂಕೋಬರಾಯನ ಮಾನ ಕಾಪಾಡ್ಲಿಕತ್ತಿರಿ. ಧೋಬಿ ಕಾ ಕುತ್ತಾ ನ ಘರ್ ಕಾ ನ ಘಾಟ್ ಕಾ ಅನ್ನೊಹಂಗ ಪರಿಸ್ಥಿತಿ ತಂದಿಟ್ಟೀರಿ. ನನ್ನ ಜೀವ ಅಂತೂ ಸೋತು ಸುಣ್ಣ ಆಗ್ಯಾದ. ಹಾಳಾದ ಹೆಸರು ಸುಟ್ಟು ಹೋಗಲಿ’ ಕಂಪನಿಯ ಹೆಡ್ ಆಫೀಸಿನಿಂದ ಬಂದ ಪತ್ರ ಓದಿದ್ದೆ ಸರಳಾಬಾಯಿ ಗಂಡ ಪ್ರೇಮಚಂದನನ್ನು ತರಾಟೆಗೆ ತೆಗೆದುಕೊಂಡಿದ್ದಳು. ಸಂದರ್ಶನದ ನಾಲ್ಕು ದಿನಗಳ ನಂತರ ಕಂಪನಿಯ ಪತ್ರ ರಿಜಿಸ್ಟರ್ಡ್ ಪೋಸ್ಟ್ ಮೂಲಕ ಕೈಸೇರಿದಾಗ ಪ್ರೇಮಚಂದ ಮಧ್ಯಾಹ್ನದ ಊಟ ಮುಗಿಸಿ ಒಂದು ಸಣ್ಣ ನಿದ್ದೆ ತೆಗೆಯಲೆಂದು ಹಾಸಿಗೆಯ ಮೇಲೆ ಅಡ್ಡಾಗುವ ತಯ್ಯಾರಿಯಲ್ಲಿದ್ದ. ಅದೇಕೋ ಸಂದರ್ಶನದ ನಂತರ ನೌಕರಿಯಿಂದ ವಜಾಗೊಂಡೆ ಎಂದೇ ಭಾವಿಸಿದ್ದ ಪ್ರೇಮಚಂದನಲ್ಲಿ ಒಂದುರೀತಿಯ ನಿರಾಳತೆ ಮನೆಮಾಡಿತ್ತು. ಈ ನಾಲ್ಕು ದಿನಗಳನ್ನು ಅವನು ಯಾವ ಆತಂಕವಿಲ್ಲದೆ ಕಳೆದಿದ್ದರೂ ಸರಳಾಬಾಯಿ ಮಾತ್ರ ಕಂಪನಿಯಿಂದ ಬರಬೇಕಿದ್ದ ಪತ್ರಕ್ಕಾಗಿ ಕ್ಷಣವನ್ನು ಯುಗವಾಗಿಸಿ ಕಾಯ್ದಿದ್ದಳು. ಪತ್ರ ಓದಿದ್ದೆ ಸರಳಾಬಾಯಿ ತಲೆ ಮೇಲೆ ಕೈಹೊತ್ತು ಚಿಂತಾಕ್ರಾಂತಳಾಗಿ ಕುಳಿತಳು. ಪತ್ರ ಓದಿದ ಪ್ರೇಮಚಂದನಿಂದ ಯಾವ ಪ್ರತಿಕ್ರಿಯೆಯೂ ಬಾರದಿದ್ದಾಗ ಸಹಜವಾಗಿಯೇ ಕೋಪಗೊಂಡವಳು ಗಂಡನನ್ನು ತರಾಟೆಗೆ ತೆಗೆದುಕೊಂಡಿದ್ದಳು. 

ಸಾರಂಶ ರೂಪದಲ್ಲಿ ಹೇಳುವುದಾದರೆ ಕಂಪನಿಯ ನಿರ್ಧಾರ ಹೀಗಿತ್ತು- ‘ಕಂಪನಿಯ ಹೊಸ ಆಡಳಿತ ಮಂಡಳಿಯ ನಿಯಮಗಳಿಗೆ ಹೊಂದಿಕೊಳ್ಳಬಹುದಾದ ಮುಖಚಹರೆ ನಿಮಗಿಲ್ಲ. ನಿಮ್ಮ ಹೆಸರು, ನಿಮ್ಮ ಮುಖದ ಚಹರೆ ಮತ್ತು ನಿಮ್ಮ ಸಮುದಾಯ ಇವುಗಳ ನಡುವೆ ಯಾವ ಹೊಂದಾಣಿಕೆಯೂ ನಮಗೆ ಕಾಣಿಸುತ್ತಿಲ್ಲ. ಸಮುದಾಯದ ಹಲವು ಶ್ರೀಮಠಗಳನ್ನು ಸಂಪರ್ಕಿಸಿ ನಿಮ್ಮ  ಹೆಸರಿನ ಕುರಿತು ಇರಬಹುದಾದ ಗೋಜಲನ್ನು ಸ್ಪಷ್ಟಪಡಿಸಿಕೊಳ್ಳಲು ಸಂದರ್ಶನ ಸಮಿತಿಯು ಪ್ರಯತ್ನಿಸಿತು. ಸಮುದಾಯದ ರೀತಿರಿವಾಜುಗಳನ್ನು ಅಭಿವ್ಯಕ್ತಿಸುವ ಹೆಸರು ನಿಮ್ಮದಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿರುವ ಮಠಗಳ ಯತಿಗಳು ತಮ್ಮ ಜಾತಿಯನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ನಿಮ್ಮ ಮೇಲೇಕೆ ದಾವೆ ಹೂಡಬಾರದೆಂದು ನಮ್ಮನ್ನು ಪ್ರಶ್ನಿಸಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಕಂಪನಿಯಲ್ಲಿ ಸೇವೆ ಸಲ್ಲಿಸುತ್ತಿರುವ ನಿಮ್ಮನ್ನು ಇದ್ದಕ್ಕಿದ್ದಂತೆ ನೌಕರಿಯಿಂದ ವಜಾಗೊಳಿಸಲು ಆಡಳಿತ ಮಂಡಳಿಗೂ ಇಚ್ಛೆಯಿಲ್ಲ. ಹಾಗೆಂದು ಮಂಡಳಿಯ ನಿಯಮಗಳಿಗೆ ವಿರುದ್ಧವಾಗಿ ನಿಮ್ಮನ್ನು ಕೆಲಸದಲ್ಲಿ ಮುಂದುವರೆಸುವಂತೆಯೂ ಇಲ್ಲ. ಹದಿನೈದು ದಿನಗಳ ಕಾಲಾವಕಾಶವನ್ನು ನಿಮಗೆ ನೀಡಲಾಗಿದೆ. ಈ ಹದಿನೈದು ದಿನಗಳಲ್ಲಿ ನೀವು ಅರ್ಜಿಯಲ್ಲಿ ನಮೂದಿಸಿರುವ ಸಮುದಾಯಕ್ಕೆ ಸೇರಿದವರೆಂದು ರುಜುವಾತು ಪಡಿಸಬೇಕು ಮತ್ತು ಕಂಪನಿಯ ನೀತಿ ನಿಯಮಗಳು ನಿಮ್ಮ ಮುಖದ ಚಹರೆಯಲ್ಲಿ ಪ್ರತಿಬಿಂಬಿಸಬೇಕು. ಹಾಗೊಂದು ವೇಳೆ ಮೇಲೆ ಉಲ್ಲೇಖಿಸಿದ ಸಂಗತಿಗಳನ್ನು ನೀವು ಸಾಬೀತು ಪಡಿಸದೆ ಹೋದಲ್ಲಿ ಈ ಪತ್ರವನ್ನೇ ನಿಮ್ಮನ್ನು ನೌಕರಿಯಿಂದ ವಜಾಗೊಳಿಸಿದ ಆದೇಶ ಪತ್ರವೆಂದು ಪರಿಗಣಿಸತಕ್ಕದ್ದು’. 

ಆ ರಾತ್ರಿ ಸರಳಾಬಾಯಿಗೆ ಭವಿಷ್ಯ ಅಂಧಕಾರದಲ್ಲಿ ಮುಳುಗಿದಂತಾಗಿ ನಿದ್ದೆ ಹತ್ತಿರ ಸುಳಿಯದೆ ಅವಳ ಮನಸ್ಸು ಒಂದುರೀತಿಯ ಕ್ಷೋಭೆಯಿಂದ ನರಳಿತು. ರಾತ್ರಿಯೆಲ್ಲ ನಿದ್ದೆಗೆಟ್ಟು ಯೋಚಿಸಿದವಳಿಗೆ ಶೇಷಗಿರಿ ಪುರೋಹಿತನನ್ನು ಪ್ರೇಮಚಂದ ಭೇಟಿ ಮಾಡಿದರೆ ಸಮಸ್ಯೆಗೆ ಪರಿಹಾರ ಸಿಗಬಹುದೆಂಬ ಭರವಸೆ ಮನಸ್ಸಿನಲ್ಲಿ ಮೂಡಿದ್ದೆ ಅದನ್ನು ಮರುದಿನ ಬೆಳಗ್ಗೆ ಗಂಡನ ಮನವೊಲಿಸಿ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾದಳು.

* * *

ಇಪ್ಪತ್ತೈದು  ವರ್ಷಗಳಿಂದ ಶೇಷಗಿರಿ ಪುರೋಹಿತ ಮತ್ತು ಪ್ರೇಮಚಂದ ಕಂಪನಿಯ ಬ್ರ್ಯಾಂಚ್  ಆಫೀಸಿನಲ್ಲಿ ಕೂಡಿಯೇ ಕೆಲಸ ಮಾಡುತ್ತಿದ್ದರೂ ಅವರಿಬ್ಬರ ನಡುವೆ ಹೇಳಿಕೊಳ್ಳುವಂತಹ ಗೆಳೆತನವೇನಿರಲಿಲ್ಲ. ನಗರಸಭೆ ಎಲೆಕ್ಶನ್‌ನಲ್ಲಿ ಕೇಶವರಾವ್ ಸಾಳುಂಕೆ ಅವರ ಅಳಿಯನ ಗೆಲುವಿಗಾಗಿ ತನ್ನ ಸಮುದಾಯದ ಮತಗಳನ್ನು ಕ್ರೋಢಿಕರಿಸುವಲ್ಲಿ ನೆರವಾಗಿದ್ದ ಶೇಷಗಿರಿ ಪುರೋಹಿತ ಆ ಒಂದು ಕಾರಣದಿಂದ ಕಂಪನಿಯ ಮುಖ್ಯಸ್ಥರಿಗೆ ಹತ್ತಿರವಾಗಿದ್ದ. ಅಂತರಂಗದಲ್ಲಿ ಮಾತ್ರವಲ್ಲದೆ ಬಾಹ್ಯನೋಟದಲ್ಲೂ ತನ್ನ ಸಮುದಾಯದ ಎಲ್ಲ ಲಕ್ಷಣಗಳನ್ನು ರೂಢಿಸಿಕೊಂಡಿದ್ದ ಶೇಷಗಿರಿ ಸಮಾಜದಲ್ಲೂ ತಕ್ಕಮಟ್ಟಿಗೆ ಹೆಸರು ಸಂಪಾದಿಸಿದ್ದ. ಬಾಗಿಲು ತೆರೆದು ಹೊರಬಂದ ಶೇಷಗಿರಿ ಪುರೋಹಿತನನ್ನು ಗುರುತಿಸಲು ಪ್ರೇಮಚಂದನಿಗೆ ಕೆಲವು ಕ್ಷಣಗಳೇ ಹಿಡಿದವು. ಸದಾಕಾಲ ಭ್ರೂಮಧ್ಯದಲ್ಲಿ ಪ್ರತಿಷ್ಠಾಪಿತಗೊಂಡಿರುತ್ತಿದ್ದ ಮಂತ್ರಾಕ್ಷತೆ ಸಹಿತ ಉದ್ದನೆಯ ತಿಲಕ, ಹಣೆಯ ಎಡಬಲದಲ್ಲಿ ಗಂಧದಿಂದ ನಿರ್ಮಾತೃಗೊಂಡಿರುತ್ತಿದ್ದ ಶಂಖ ಮತ್ತು ಚಕ್ರ, ತಲೆಯ ಹಿಂಭಾಗದಲ್ಲಿ ದೃಷ್ಟಿಗೆ ಗೋಚರವಾಗುತ್ತಿದ್ದ ಶಿಖೆ ಕಳೆದ ಇಪ್ಪತ್ತೈದು ವರ್ಷಗಳಿಂದ ಶೇಷಗಿರಿ ಪುರೋಹಿತನ ಮುಖಚಹರೆ ಮನಸ್ಸಲ್ಲಿ ಅಚ್ಚೊತ್ತು ನಿಂತಿತ್ತು. ಆದರೆ ಈ ದಿನ ಆ ಪರಿಚಿತ ಚಹರೆ ಬದಲು ಅಪರಿಚಿತ ಚಹರೆ ಎದುರು ನಿಂತಂತೆ ಭಾಸವಾಯಿತು. ಮುಖದಲ್ಲಿ ತಿಲಕ, ಶಂಖ, ಚಕ್ರ ಮಾಯವಾಗಿದ್ದವು. ತಲೆಯ ಹಿಂದಿನ ಶಿಖೆ ತುಂಡಾಗಿತ್ತು.

‘ಬಾರಯ್ಯ ಪ್ರೇಮಚಂದ ಕಾಲಕ್ಕೆ ತಕ್ಕಂತೆ ವೇಷ ಧರಿಸದಿದ್ದರೆ ಬದುಕೋದು ಕಷ್ಟ ಕಣಯ್ಯಾ ಈ ಜಗತ್ತಿನಲ್ಲಿ. ಐದು ವರ್ಷಗಳ ಹಿಂದೆ ಮಧ್ಯಾರಾಧನೆ ದಿನ ಮಠದಿಂದ ಸನ್ಮಾನಿತರಾಗುವವರ ಪಟ್ಟಿಯಲ್ಲಿ ನಿನ್ನ ಹೆಸರು ಸೇರಿಸೊದಕ್ಕ ಹರಸಾಹಸ ಮಾಡಬೇಕಾಯ್ತು. ಕೊನೆಗೂ ಮಠದವರು ನೀನು ನಮ್ಮ ಸಮುದಾಯದವನೇ ಅಲ್ಲ ಅಂತ ಹಟ ಹಿಡಿದು ಪಟ್ಟಿಯಿಂದ ನಿನ್ನ ಹೆಸರು ತೆಗೆದುಬಿಟ್ಟರು. ನಿನ್ನ ಹೆಸರು, ಮುಖದ ಚಹರೆ ಸಮುದಾಯದೊಂದಿಗೆ ಸ್ವಲ್ಪನೂ ಮ್ಯಾಚ್ ಆಗ್ತಿಲ್ಲ. ಈಗ ನೌಕರಿಗೇ ಕಂಟಕ ಬಂದು ಬಿಟ್ಟಿದೆ ಅಲ್ಲೋ ಮಾರಾಯಾ. ನಿನ್ನ ಮರ‍್ಯಾಗ ಯಾವ ಬದಲಾವಣಿನೂ ಕಾಣಿಸ್ತಿಲ್ಲ. ಊರಾಗ ಮುಖಾರವಿಂದ ಅಂತ ಹೊಸ ಅಂಗಡಿ ಬಂದದಂತ. ಅವರು ಎಂಥದ್ದು ಬೇಕು ಅಂಥದ್ದು ಚಹರಾ ರೂಪಿಸಿ ಕೊಡ್ತಾರಂತ. ಚಹರಾ ಬದಲಾವಣೆ ವಿದ್ಯಾ ನನಗ ಸಿದ್ಧಿಸಿರೊದರಿಂದ ನಾನೇನೂ ಆ ಅಂಗಡಿಗಿ ಭೇಟಿ ಕೊಟ್ಟಿಲ್ಲ. ನೀನು ಹೋಗಿ ಒಂದಿಷ್ಟು ಚಹರಾ ಬದಲಾಯಿಸಿಕೊಂಡು ಬಾ’ ಎಂದ ಶೇಷಗಿರಿ ಪುರೋಹಿತ ಅಂಗಡಿಯ ವಿಳಾಸ ಹೇಳಿ ಪ್ರೇಮಚಂದನನ್ನು ಸಾಗುಹಾಕಿದ್ದ.

* * *

ಆಟೋದಿಂದ ಕೆಳಗಿಳಿದ ಪ್ರೇಮಚಂದನ ಕಣ್ಣಿಗೆ ಕಾಮತ್ ಹೋಟೆಲಿನ ಮೇಲಿನ ಅಂತಸ್ತಿನಲ್ಲಿ ತೂಗುಹಾಕಿದ್ದ ಆಳೆತ್ತರದ ‘ಮುಖಾರವಿಂದ’ ಎನ್ನುವ ಬೋರ್ಡ್ ಗೋಚರಿಸಿತು. ಮುಖಾರವಿಂದ ಶೀರ್ಷಿಕೆಯ ಕೆಳಗೆ ಸಣ್ಣ ಅಕ್ಷರಗಳಲ್ಲಿದ್ದ ಬದುಕು ಬದಲಿಸುತ್ತೇವೆ ಎನ್ನುವ ಅಡಿ ಟಿಪ್ಪಣಿ ಪ್ರೇಮಚಂದನನ್ನು ವಿಶೇಷವಾಗಿ ಆಕರ್ಷಿಸಿತು. ಜನನಿಬಿಡ ಪ್ರದೇಶದ ಆಯಕಟ್ಟಿನ ಜಾಗದಲ್ಲಿ ಆರಂಭಗೊಂಡ ಮಳಿಗೆ ಕಳೆದ ಹದಿನೈದು ದಿನಗಳಿಂದ ನಗರದ ಪ್ರಮುಖ ಆಕರ್ಷಣೆಯಾಗಿತ್ತು. ಮೊದಲೇ ಅಪಾಯಿಂಟ್‌ಮೆಂಟ್ ತೆಗೆದುಕೊಂಡಿದ್ದರಿಂದ ರಿಸೆಪ್ಷನ್ ಕೌಂಟರ್‌ನಲ್ಲಿ ಕುಳಿತಿದ್ದ ಮಹಿಳೆ ಪ್ರೇಮಚಂದನನ್ನು ನೋಡುತ್ತಲೇ ಎದ್ದು ನಿಂತು ಸ್ವಾಗತಿಸಿ ಕರೆದೊಯ್ದು ಗೆಸ್ಟ್ ರೂಮಿನಲ್ಲಿ ಕೂಡಿಸಿದಳು. ಈಗಾಗಲೇ ಗೆಸ್ಟ್ ರೂಮಿನಲ್ಲಿ ನಾಲ್ಕೈದು  ಜನ ಮೊದಲೆ ಅಪಾಯಿಂಟ್‌ಮೆಂಟ್ ಪಡೆದು ಮುಖಚಹರೆಯ ಬದಲಾವಣೆಯ ಚಿಕಿತ್ಸೆಗೆಂದು ಬಂದು ಕುಳಿತಿದ್ದರು. ಅಲ್ಲಿ ಪ್ರೊಫೆಸರ್ ಕಾಳಪ್ಪ ಅವರನ್ನು ನೋಡಿ ಪ್ರೇಮಚಂದನಿಗೆ ಅಚ್ಚರಿಯಾಯಿತು. ಕಲಬುರಗಿಯ ಎಸ್.ಬಿ ಕಾಲೇಜಿನಲ್ಲಿ ಪ್ರೇಮಚಂದ ಡಿಗ್ರಿ ಓದುತ್ತಿದ್ದಾಗ ಅಲ್ಲಿ ಕಾಳಪ್ಪ ಇಂಗ್ಲಿಷ್ ಬೋಧಿಸುತ್ತಿದ್ದರು. ಯೇಟ್ಸ್, ಶೇಕ್‌ಸ್ಪಿಯರ್, ಕಮೂ, ಕಾಫ್ಕಾರನ್ನು ಬೋಧಿಸುವಾಗಲೆಲ್ಲ ಕಾಳಪ್ಪ ಅಕ್ಷರಶ: ಅವರನ್ನೆಲ್ಲ ತಮ್ಮೊಳಗೆ ಆವಾಹಿಸಿಕೊಂಡಿರುವರೇನೋ ಎಂದು ಭಾಸವಾಗುತ್ತಿತ್ತು. ಬೋದಿಲೇರನ ದಿ ಫ್ಲಾವರ್ಸ್ ಆಫ್ ಈವಿಲ್ ಕವನ ಸಂಕಲನದಿಂದ ಕವಿತೆ ಓದುವಾಗ ಇದೇ ಕಾಳಪ್ಪ ಕ್ಲಾಸ್ ರೂಮಿನಲ್ಲಿ ವಿದ್ಯಾರ್ಥಿಗಳೆದುರು ಬಿಕ್ಕಿ ಬಿಕ್ಕಿ ಅತ್ತಿದ್ದು ಇವತ್ತಿಗೂ ಪ್ರೇಮಚಂದನ ಕಣ್ಣಿಗೆ ಕಟ್ಟಿದಂತಿದೆ. ನಿವೃತ್ತರಾಗಿ ಮೂವತ್ತು ವರ್ಷಗಳಾದರೂ ತೊಂಬತ್ತರ ಇಳಿ ವಯಸ್ಸಿನಲ್ಲೂ ಲಾಭಿ ಶಿಫಾರಸುಗಳ ಸಹಾಯದಿಂದ ವಿಶ್ವವಿದ್ಯಾಲಯದ ಆಯಕಟ್ಟಿನ ಜಾಗವನ್ನು ಭದ್ರವಾಗಿ ವಕ್ಕರಿಸಿಕೊಂಡಿರುವರೆಂದು ಆಗಾಗ ಅವರ ಹಳೆಯ ವಿದ್ಯಾರ್ಥಿಗಳ ಮಾತಿನ ನಡುವೆ ಈ ವಿಷಯ ಚರ್ಚೆಗೆ ಬರುತ್ತಿತ್ತು. 

ಪ್ರೇಮಚಂದ ಹತ್ತಿರ ಹೋಗಿ ನಮಸ್ಕರಿಸಿ ತನ್ನ ಪರಿಚಯ ಹೇಳಿಕೊಂಡ. ಪ್ರೊಫೆಸರ್ ಕಾಳಪ್ಪ ತಮ್ಮ ಗತದ ನೆನಪುಗಳನ್ನು ಉತ್ಖನನಗೊಳಿಸಿ ಅಲ್ಲಿ ಪ್ರೇಮಚಂದನ ಚಿತ್ರಕ್ಕಾಗಿ ಹುಡುಕಾಡಿ ಸೋತರು. ಪ್ರೇಮಚಂದ ತನ್ನ ಬ್ಯಾಚಿನ ನಾಲ್ಕಾರು ವಿದ್ಯಾರ್ಥಿಗಳ ಹೆಸರು ಹೇಳಿದ. ಆಗಲೂ ಪ್ರೊಫೆಸರ್ ನೆನಪು ಕೈಕೊಟ್ಟಿತು. ಈ ನಡುವೆ ವಿಶ್ವವಿದ್ಯಾಲಯಕ್ಕೆ ನಾಮಧಾರಿ ವ್ಯಕ್ತಿ ವೈಸ್‌ಚಾನ್ಸಲರ್‌ರಾಗಿ ಬರುತ್ತಿರುವುದರಿಂದ ತಮ್ಮ ಸ್ಥಾನಕ್ಕೆ ಧಕ್ಕೆ ಉಂಟಾಗಲಿದ್ದು ಅದಕ್ಕೆಂದೆ ಹೊಸ ವೈಸ್‌ಚಾನ್ಸಲರ್ ಸಮುದಾಯದ ಚಹರೆಯನ್ನು ತಮ್ಮ ಮುಖದಲ್ಲಿ ಆವಿರ್ಭವಿಸಿಕೊಳ್ಳಲು ಬಂದಿರುವುದಾಗಿ ಹೇಳಿದರು. ಅಷ್ಟರಲ್ಲಿ ರಿಸೆಪ್ಶನ್ ಕೌಂಟರ್‌ನಲ್ಲಿದ್ದ ಮಹಿಳೆ ಪರಿಣಿತರು ಕರೆಯುತ್ತಿರುವರೆಂದು ಇಬ್ಬರನ್ನೂ ಒಳಗೆ ಕರೆದೊಯ್ದಳು. ಪ್ರೇಮಚಂದ ತನ್ನ ಕಂಪನಿಯ ನಿಯಮಗಳಿದ್ದ ಕೈಪಿಡಿಯನ್ನು ಪರಿಣಿತ ವ್ಯಕ್ತಿಗೆ ಕೊಟ್ಟು ಅವರು ತೋರಿಸಿದ ಕುರ್ಚಿಯಲ್ಲಿ ಕುಳಿತ. ಎದುರಿನ ವಿಶಾಲವಾದ ಕನ್ನಡಿಯಲ್ಲಿ ತನ್ನ ಪಕ್ಕದ ಕುರ್ಚಿಯಲ್ಲಿ ಪ್ರೊಫೆಸರ್ ಕಾಳಪ್ಪ ಕುಳಿತಿರುವುದು ಗೋಚರಿಸಿ ಪ್ರೇಮಚಂದ ಮುಗುಳುನಕ್ಕ. ಕಾಳಪ್ಪನವರ ಮುಖದ ತುಂಬೆಲ್ಲ ಚಿತ್ರವಿಚಿತ್ರವಾದ ಕಾಗದಗಳನ್ನು ಅಂಟಿಸಿದ್ದರಿಂದ ಪ್ರೇಮಚಂದ ತಮ್ಮನ್ನು ನೋಡಿ ಮುಗುಳುನಕ್ಕಿದ್ದು ಅವರ ಗಮನಕ್ಕೆ ಬರಲಿಲ್ಲ.

ಮೂರು ಗಂಟೆಗಳ ಸತತ ಪ್ರಯತ್ನದ ನಂತರವೂ ಪ್ರೇಮಚಂದನ ಮುಖದಲ್ಲಿ ಹೊಸ ಚಹರೆಯನ್ನು ರೂಪಿಸಲು ಪರಿಣಿತರು ವಿಫಲರಾದರು. ಅಚ್ಚರಿಯ ಸಂಗತಿ ಎಂದರೆ ಪ್ರೊಫೆಸರ್ ಕಾಳಪ್ಪನವರ ಮುಖದಲ್ಲಿ ಹೊಸಚಹರೆಯೊಂದು ಆವಿರ್ಭವಿಸಿ ಅವರು ಹೊಸ ವ್ಯಕ್ತಿಯಾಗಿ ಕಾಣಿಸತೊಡಗಿದರು. ಪ್ರೇಮಚಂದನಿಗೆ ಎಲ್ಲವೂ ಅಯೋಮಯವೆನಿಸಿತು. ಅಂಗಡಿಯ ಮುಖ್ಯಸ್ಥ ಪ್ರೇಮಚಂದನನ್ನು ತನ್ನ ಚೇಂಬರಿಗೆ ಕರೆದೊಯ್ದು ಹೇಳಿದ ‘ನಿಮ್ಮಲ್ಲಿ ಯಾವ ಪ್ರಲೋಭನೆಗಳೂ ಇದ್ದಂತೆ ತೋರುತ್ತಿಲ್ಲ. ವೈರಾಗ್ಯವೇ ನಿಮ್ಮ ಮೈ ಮತ್ತು ಮನಸ್ಸನ್ನು ಆವರಿಸಿಕೊಂಡಿರಬಹುದು. ಈ ಕಾರಣದಿಂದ ನಿಮ್ಮ ಮುಖದಲ್ಲಿ ಹೊಸ ಚಹರೆಯನ್ನು ರೂಪಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಅದೇ ಪ್ರೊಫೆಸರ್ ಕಾಳಪ್ಪ ಅವರನ್ನು ನೋಡಿ. ಮುಖದ ಸ್ನಾಯುಗಳು ಸಡಿಲುಗೊಂಡು ಚರ್ಮ ಸುಕ್ಕುಗಟ್ಟಿ ಜೊತು ಬಿದ್ದಿದ್ದರೂ ಅವರ ಮುಖದಲ್ಲಿ ಹೊಸ ಚಹರೆ ರೂಪಿಸಲು ಸಾಧ್ಯವಾಯಿತು. ಇದರರ್ಥ ಈ ಇಳಿ ವಯಸ್ಸಿನಲ್ಲೂ ಅವರಲ್ಲಿ ಬತ್ತದ ಮಹತ್ವಾಕಾಂಕ್ಷೆ ಇದೆ, ಪ್ರಶಸ್ತಿ ಗೌರವಗಳ ವಾಂಛೆ ಇದೆ, ಬೇರೆಯವರನ್ನು ತುಳಿದಾದರೂ ಸರಿ ತಾನು ಬೆಳೆಯಬೇಕೆಂಬ ಹಂಬಲವಿದೆ ಎಂದು. ಈ ಗುಣಗಳಿಂದಾಗಿ ಅವರ ಮುಖದಲ್ಲಿ ಹೊಸ ಚಹರೆ ಹುಟ್ಟಲು ಕೇವಲ ಅರ್ಧಗಂಟೆ ಸಾಕಾಯಿತು’.

* * *

ಉಪಸಂಹಾರ: ಸಂದರ್ಶನ ಸಮಿತಿಯು ಪತ್ರದಲ್ಲಿ ಉಲ್ಲೇಖಿಸಿದ ಸಂಗತಿಗಳನ್ನು ಸಾಬೀತು ಪಡಿಸಲು ವಿಫಲನಾದ ಹಿನ್ನೆಲೆಯಲ್ಲಿ ಕಂಪನಿಯು ಪ್ರೇಮಚಂದನನ್ನು ನೌಕರಿಯಿಂದ ವಜಾಗೊಳಿಸಿದೆ. ಮಠವೊಂದರ ಆಡಳಿತ ಮಂಡಳಿಯು ಜಾತಿಯ ಹೆಸರನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಕೋರ್ಟಿನಲ್ಲಿ ದಾವೆ ಹೂಡಿದೆ. ಸರಳಾಬಾಯಿಯ ಆತಂಕ ದಿನೆದಿನೆ ಹೆಚ್ಚುತ್ತಿದ್ದು ಗಂಡನ ಮುಖದಲ್ಲಿ ಹೊಸ ಚಹರೆ ಆವಿರ್ಭವಿಸುವ ಕ್ಷಣಕ್ಕಾಗಿ ಕಾತುರದಿಂದ ಕಾದುಕುಳಿತಿದ್ದಾಳೆ. ಈ ನಡುವೆ ಶೇಷಗಿರಿ ಪುರೋಹಿತನ ಸಲಹೆಯಂತೆ ಸರಳಾಬಾಯಿ ಗಂಡನ ಹೆಸರನ್ನು ಬದಲಿಸುವ ಸಾಧ್ಯವಾದರೆ ಮುಖದಲ್ಲಿ ಕೃತಕ ಚಹರೆ ಸೃಷ್ಟಿಸಲು ಶಸ್ತ್ರಚಿಕಿತ್ಸೆ ಮಾಡಿಸುವ ಹವಣಿಕೆಯಲ್ಲಿರುವಳು. ಈ ಎಲ್ಲ ಆತಂಕ, ಗೊಂದಲಗಳ ನಡುವೆಯೂ ಪ್ರೇಮಚಂದ ಹೊಸ ನೌಕರಿ ಹುಡುಕುತ್ತ ಓದು ಬರಹದಲ್ಲಿ ತೊಡಗಿಸಿಕೊಂಡು ನೆಮ್ಮದಿಯಿಂದಿರುವನು.

* * *

-ರಾಜಕುಮಾರ ಕುಲಕರ್ಣಿ

Monday, April 4, 2022

ಅಂತರವಿರಲಿ... ಅದು ಅಂತರಂಗದ ಸಂಗತಿ

      


       ಬೆಳಗ್ಗಿನ ವಾಕಿಂಗ್ ಮುಗಿಸಿ ಮನೆಗೆ ಮರಳಿ ಬರುತ್ತಿರುವಾಗ ನನ್ನೆದುರು ನಡೆದುಕೊಂಡು ಹೋಗುತ್ತಿದ್ದ ಮಹನಿಯರಿಬ್ಬರು ತಾವಿರುವುದು ರಸ್ತೆಯಲ್ಲಿ ಎಂಬುದನ್ನೂ ಮರೆತು ಗಹನವಾದ ಮಾತುಗಳಲ್ಲಿ ತೊಡಗಿಕೊಂಡಿದ್ದರು. ಅವರ ಇಡೀ ಮಾತಿನುದ್ದಕ್ಕೂ ಬೇರೆ ವ್ಯಕ್ತಿಯ ಕುರಿತು ಅಸಹನೆ, ದ್ವೇಷ, ಸಿಟ್ಟು, ಭರ್ತ್ಸನೆ ವ್ಯಕ್ತವಾಗುತ್ತಿದವು. ತಮ್ಮ ಕೋಪಕ್ಕೆ ಕಾರಣನಾದ ವ್ಯಕ್ತಿಯನ್ನು ಅಪಮಾನಗೊಳಿಸಲು ಸೂಕ್ತ ಸಂದರ್ಭಕ್ಕಾಗಿ ಅವರು ಕಾಯುತ್ತಿದ್ದದ್ದು ಅವರಿಬ್ಬರ ಸಂಭಾಷಣೆಯಿಂದ ಅರ್ಥವಾಗುತ್ತಿತ್ತು. ಮಾತಿನ ನಡುವೆ ಅವರಿಬ್ಬರು ಅದೇ ಆಗ ಆಧ್ಯಾತ್ಮದ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮರಳಿ ಬರುತ್ತಿರುವರೆಂದು ಗೊತ್ತಾಯಿತು. ಕೆಲವು ಕ್ಷಣಗಳ ಹಿಂದಷ್ಟೆ ಆಧ್ಯಾತ್ಮದ ವಿಚಾರಗಳನ್ನು ಆಲಿಸಿದವರು ಎಷ್ಟು ಬೇಗ ಲೌಕಿಕ ಬದುಕಿನ ತಾಮಸ ಗುಣಗಳಿಗೆ ಮರಳಿದರೆಂದು ನನಗೆ ಖೇದವಾಯಿತು.

ಇತ್ತೀಚೆಗೆ ನನ್ನ ಸ್ನೇಹಿತನ ಊರಿನಲ್ಲಿ ಆಧ್ಯಾತ್ಮ ಪ್ರಸಾರ ಮಂಡಳಿಯೊಂದು ಹತ್ತು ದಿನಗಳ ಆಧ್ಯಾತ್ಮ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿತ್ತು. ಊರ ಮಧ್ಯದ ವಿಶಾಲವಾದ ಶಾಲಾ ಮೈದಾನದಲ್ಲಿ ಸಾವಿರಾರು ಜನ ಕೂಡಬಹುದಾದ ಬೃಹತ್ ಸಭಾಂಗಣವನ್ನು ನಿರ್ಮಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಸಾರ್ವಜನಿಕರಿಗೆ ಉಚಿತ ಆಧ್ಯಾತ್ಮ ತರಬೇತಿ ನೀಡಲಾಯಿತು. ದಿನದ ತರಬೇತಿಯ ಕೊನೆಯಲ್ಲಿ ಸಭಾಂಗಣದ ಪ್ರವೇಶ ಬಾಗಿಲ ಹತ್ತಿರದ ಮಳಿಗೆಯಲ್ಲಿ ಜನರು ಆಧ್ಯಾತ್ಮ ಸಂಬಂಧಿತ ಪುಸ್ತಕಗಳನ್ನು ಮತ್ತು ಸಿ.ಡಿಗಳನ್ನು ಮುಗಿಬಿದ್ದು ಖರೀದಿಸಿದರು. ಜೊತೆಗೆ ಮಾರಾಟಕ್ಕಿಟ್ಟಿದ್ದ ತರೆವಾರಿ ತಿಂಡಿಗಳನ್ನು ತಿಂದು ಧನ್ಯರಾದರು. ಸಾರ್ವಜನಿಕರು ಈ ತರಬೇತಿ ಕಾರ್ಯಕ್ರಮದಿಂದ ಆಧ್ಯಾತ್ಮವನ್ನು ಅದೆಷ್ಟು ಪ್ರಮಾಣದಲ್ಲಿ ಮೈಗೂಡಿಸಿಕೊಂಡರೆಂಬುದಕ್ಕಿಂತ ಆಯೋಜಕರು ಮಾತ್ರ ನಿವ್ವಳ ಲಾಭದೊಂದಿಗೆ ಮುಂದಿನ ಊರಿಗೆ ಪ್ರಯಾಣ ಬೆಳೆಸಿದರು ಎನ್ನುವುದು ಚರ್ಚೆಯ ಸಂಗತಿಯಾಗಿತ್ತು.

ಇವತ್ತು ಆಧ್ಯಾತ್ಮ ಮತ್ತು ಯೋಗಕ್ಕೆ ಮಾರುಕಟ್ಟೆಯ ಮೌಲ್ಯ ಪ್ರಾಪ್ತವಾಗಿದೆ. ಒಂದರ್ಥದಲ್ಲಿ ಈ ಎರಡು ಸಂಗತಿಗಳು ಬಿಕರಿಗಿಟ್ಟ ಮಾರಾಟದ ಸರಕುಗಳಾಗಿವೆ. ಅದಕ್ಕೆಂದೆ ಇಲ್ಲಿ ಢೊಂಗಿ ಬಾಬಾಗಳು ಮತ್ತು ಝಟಕಾ ಸ್ವಾಮಿಗಳು ಹುಟ್ಟಿಕೊಳ್ಳುತ್ತಾರೆ. ಪಂಚತಾರಾ ಹೊಟೇಲುಗಳನ್ನು ಮೀರಿಸುವ ಐಷಾರಾಮಿ ಸವಲತ್ತುಗಳ ಯೋಗ ಮತ್ತು ಆಧ್ಯಾತ್ಮದ ಕೇಂದ್ರಗಳು ಅಸ್ತಿತ್ವಕ್ಕೆ ಬರುತ್ತವೆ. ಸಾವಿರಾರು ರೂಪಾಯಿಗಳನ್ನು ಪಾವತಿಸಿ ಸಾರ್ವಜನಿಕರು ಆಧ್ಯಾತ್ಮವನ್ನು ಮೈಗೂಡಿಸಿಕೊಳ್ಳಲು ಹಪಹಪಿಸುತ್ತಾರೆ. 

ಅರಿವೆಗುರು ಎಂದಿರುವರು ಅನುಭಾವಿಗಳು. ಈ ನಾಡಿನಲ್ಲಿ ಶರಣರು, ಸಂತರು, ಸೂಫಿಗಳು ಲೌಕಿಕ ಬದುಕಿನ ನಡುವೆಯೂ ಅಲೌಕಿಕವನ್ನು ಸಾಧಿಸಿದರು. ತಮ್ಮ ದಿನ ನಿತ್ಯದ ಕಾಯಕದಲ್ಲೇ ಶರಣತ್ವವನ್ನು ಪಾಲಿಸಿದರು. ಕಳಬೇಡ/ಕೊಲಬೇಡ/ಹುಸಿಯ ನುಡಿಯಲುಬೇಡ/ಮುನಿಯಬೇಡ/ಅನ್ಯರಿಗೆ ಅಸಹ್ಯಪಡಬೇಡ/ತನ್ನ ಬಣ್ಣಿಸಬೇಡ/ಇದಿರ ಹಳಿಯಲುಬೇಡ/ಇದೇ ಅಂತರಂಗಶುದ್ಧಿ/ಇದೇ ಬಹಿರಂಗಶುದ್ಧಿ ಎಂದು ಇಡೀ ಬದುಕನ್ನೇ ಆಧ್ಯಾತ್ಮದ ನೆಲೆಯಲ್ಲಿ ನೋಡಿದರು. ಅಂತರಂಗ ಮತ್ತು ಬಹಿರಂಗ ಎಂದು ಎರಡು ಪ್ರತ್ಯೇಕ ಬದುಕುಗಳನ್ನು ಬದುಕದೆ ಎರಡನ್ನೂ ಏಕತ್ರವಾಗಿಸಿ ಇಹ ಮತ್ತು ಪರ ಎರಡನ್ನೂ ಒಂದಾಗಿಸಿದರು. 

ಬದುಕಿನ ಪಯಣ ಎನ್ನುವುದು ಅದೇನು ಹೂವು ಹಾಸಿದ ಹಾದಿಯ ಮೇಲಿನ ನಡಿಗೆಯಲ್ಲ. ಕಲ್ಲು ಮುಳ್ಳುಗಳನ್ನು ಬದಿಗೆ ಸರಿಸಿ ತಾನು ನಡೆಯಬೇಕಾದ ದಾರಿಯನ್ನು ಪಥಿಕ ತಾನೇ ಸೃಷ್ಟಿಸಿಕೊಳ್ಳಬೇಕು. ಬದುಕೆಂದ ಮೇಲೆ ಸವಾಲುಗಳು, ಸಮಸ್ಯೆಗಳು ಸಹಜ. ಕಥೆಗಾರ್ತಿ ಕಸ್ತೂರಿ ಬಾಯರಿ ತಮ್ಮ ಸಂದರ್ಶನದಲ್ಲಿ ಬದುಕಿನ ಕುರಿತು ತುಂಬ ಅರ್ಥಪೂರ್ಣವಾದ ಒಂದು ಮಾತು ಹೇಳಿರುವರು-‘ಅಸಹಾಯಕತೆ, ಹಸಿವು ನಮಗೆ ಕಾಡಲಿಲ್ಲ ಅಂದರೆ, ಹೌ ಮಚ್ ವಿ ಆರ್ ಸ್ಟ್ರಾಂಗ್ ಇನ್‍ಫ್ರಂಟ್ ಆಫ್ ಹಂಗರ್? ಅಂತ ಹ್ಯಾಂಗ ಗೊತ್ತಾಗೋದು. ಯಾರು ನಮ್ಮನ್ನು ನೋಡಿದರೂ ಒಂದು ಕೆಟ್ಟ ಭಾವ ಬರದಂಗ ಘನತೆಯ ಬದುಕು ಬದುಕೀವಿ ಅಂದರ ಅದು ಸಣ್ಣ ಮಾತಲ್ಲ’. ಯಾವ ಆಧ್ಯಾತ್ಮಿಕ ತರಬೇತಿ ಕೇಂದ್ರದಲ್ಲೂ ಕೇಳಲು ಸಿಗದ ಬದುಕಿನ ಅರ್ಥ ಮತ್ತು ಅನ್ವೇಷಣೆ ಇದು.

ಇವತ್ತು ಆಧ್ಯಾತ್ಮಕ್ಕೆ ಮಾರುಕಟ್ಟೆ ಮೌಲ್ಯ ಪ್ರಾಪ್ತವಾಗಿರುವುದಕ್ಕೆ ಸಾರ್ವಜನಿಕರ ಕೊಡುಗೆ ಸಾಕಷ್ಟಿದೆ. ಬದಲಾಗುತ್ತಿರುವ ಕುಟುಂಬ ಘಟಕ ಮತ್ತು ಬದುಕಿನ ಮೌಲ್ಯಗಳು ಜೀವನದ ರೀತಿ ನೀತಿಗಳನ್ನು ನಿಯಂತ್ರಿಸುತ್ತಿವೆ. ಅವಿಭಕ್ತ ಕುಟುಂಬಗಳು ಒಡೆದು ಸಣ್ಣ ಸಣ್ಣ ಕುಟುಂಬಗಳು ತಲೆ ಎತ್ತುತ್ತಿವೆ. ಕೂಡುಕುಟುಂಬಗಳಿಂದ ದೂರಾಗುತ್ತಿರುವ ಮನುಷ್ಯ ಒಂಟಿಯಾಗುತ್ತಿದ್ದಾನೆ. ತಬ್ಬಲಿತನದ ಭಾವ ಕಾಡುತ್ತಿದೆ. ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅನಿಶ್ಚಿತತೆ ಮತ್ತು ಸ್ಪರ್ಧೆ ಬಹುದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ. ಏಕಮುಖವಾದ ಬದುಕಿನ ಪಯಣದಲ್ಲಿ ಕಿಂಚಿತ್ ಏರುಪೇರಾದರೂ ಮನುಷ್ಯ ಹತಾಶೆ, ಖಿನ್ನತೆ, ಉದ್ವಿಗ್ನತೆಗಳಿಗೆ ದೂಡಲ್ಪಡುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎನ್ನುವಂತೆ ಢೊಂಗಿ ಬಾಬಾಗಳು ಮತ್ತು ಝಟಕಾ ಸ್ವಾಮಿಗಳು ಅವತಾರ ಪುರುಷರಾಗಿ ಹುಟ್ಟಿಕೊಳ್ಳುತ್ತಿದ್ದಾರೆ. ಯೋಗ ಮತ್ತು ಆಧ್ಯಾತ್ಮದ ಕೇಂದ್ರಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಜನರ ಮಾನಸಿಕ ದೌರ್ಬಲ್ಯವನ್ನೆ ಬಂಡವಾಳವಾಗಿಸಿಕೊಂಡು ಆಧ್ಯಾತ್ಮದ ಕೇಂದ್ರಗಳು ಹಣ ಮಾಡುತ್ತಿವೆ,

ಆಧ್ಯಾತ್ಮವೆನ್ನುವುದು ಸಾವಿರಾರು ಜನರ ನಡುವೆ ವಿಶಾಲವಾದ ಮೈದಾನದಲ್ಲಿ ಕುಳಿತು ಸಾಧಿಸುವ ಸಾಧನೆಯಲ್ಲ. ನಿಶ್ಯಬ್ದ ಮತ್ತು ನೀರವ ವಾತಾವರಣದಲ್ಲಿ ಒಬ್ಬಂಟಿಯಾಗಿ ಕುಳಿತು ಮನಸ್ಸನ್ನು ನಿಗ್ರಹಿಸಿಕೊಳ್ಳುವ ಸಾಧನೆಯದು. ಆತ್ಮಪರೀಕ್ಷೆ, ಆತ್ಮವಿಮರ್ಶೆಗೆ ಇವತ್ತು ಮನುಷ್ಯ ಒಳಗಾಗುತ್ತಿಲ್ಲ. ಭೌತಿಕವೆ ಪ್ರಧಾನವಾದ ಬದುಕಿನಲ್ಲಿ ಅಂತರಂಗಕ್ಕಿಳಿಯುವ ಸಮಯವಾಗಲಿ ಸಂಯಮವಾಗಲಿ ಇವತ್ತಿನ ಮನುಷ್ಯನಿಗಿಲ್ಲ. ಎಲ್ಲವನ್ನೂ ಬಹಿರಂಗದಲ್ಲೆ ಹುಡುಕುತ್ತಿರುವನು. ಪ್ರತಿಯೊಂದು ಅವನಿಗೆ ಹೊರಗಿನಿಂದಲೇ ಪ್ರಾಪ್ತವಾಗಬೇಕು. ಅದಕ್ಕೆಂದೆ ಆಧ್ಯಾತ್ಮದಂಥ ಅಂತರಂಗದ ಸಂಗತಿ ಕೂಡ ಇಂದು  ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಸರಕಿನಂತೆ ಗೋಚರಿಸುತ್ತಿದೆ.

 ಬದುಕಿನ ಅರ್ಥವನ್ನು ವಿಶ್ಲೇಷಿಸಲು, ಬದುಕಿಗೆ ಆಧ್ಯಾತ್ಮದ ರೂಪ ನೀಡಲು ಕುವೆಂಪು, ಕಾರಂತ, ಚಿತ್ತಾಲ, ಬೇಂದ್ರೆ ಅವರ ಸಾಹಿತ್ಯ ಕೃತಿಗಳಿಗಿರುವ ಶಕ್ತಿ ಈ ಮಾರಾಟಕ್ಕಿಟ್ಟ ಆಧ್ಯಾತ್ಮಿಕ ಸರಕಿಗಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

-ರಾಜಕುಮಾರ ಕುಲಕರ್ಣಿ


Thursday, March 3, 2022

ಎಲ್ಲೆ ಮೀರುವ ನಾಗರಿಕರು

     


(ದಿನಾಂಕ ೧೫.೦೨.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ)

       ಇತ್ತೀಚೆಗೆ ನಮ್ಮ ಪಕ್ಕದ ಮನೆಯಲ್ಲಿ ಮಗುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅತ್ಯಂತ ಸಡಗರದಿಂದ ಆಚರಿಸಿದರು. ಮನೆಯ ಮಾಳಿಗೆ ಮೇಲಿನ ಖಾಲಿ ಜಾಗವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿ ಜನ್ಮದಿನದ ಆಚರಣೆಗೆ ಸುಂದರ ವೇದಿಕೆಯನ್ನು ಸಜ್ಜುಗೊಳಿಸಿದ್ದರು. ರಾತ್ರಿ ಏಳು ಗಂಟೆಗೆ ಆರಂಭಗೊಂಡ ಜನ್ಮದಿನದ ಆಚರಣೆ ಬೆಳಗಿನ ಎರಡು ಗಂಟೆಯವರೆಗೆ ಹಾಡು, ಕುಣಿತ ಇತ್ಯಾದಿ ಮನೋರಂಜನೆಗಳಿಂದ ಅವ್ಯಾಹತವಾಗಿ ಸಾಗಿತು. ಧ್ವನಿವರ್ಧಕ ಮತ್ತು ಅಲ್ಲಿ ನೆರೆದಿದ್ದವರ ಜೋರಾದ ಸದ್ದುಗದ್ದಲಕ್ಕೆ ಅಕ್ಕಪಕ್ಕದ ಮನೆಯವರು ಬೆಳಗಿನ ಎರಡು ಗಂಟೆಯವರೆಗೆ ನಿದ್ದೆ ಇಲ್ಲದೆ ಜಾಗರಣೆ ಮಾಡಬೇಕಾಯಿತು. ಪಕ್ಕದ ಕೆಲವು ಮನೆಗಳಲ್ಲಿ ಮಕ್ಕಳು ವಾರದ ಪರೀಕ್ಷೆಗಾಗಿ ಓದಿಕೊಳ್ಳುತ್ತಿದ್ದರು. ಮತ್ತೊಂದು ಮನೆಯಲ್ಲಿ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ ಎಂಬತ್ತು ವಯಸ್ಸಿನ ಅಜ್ಜ ಆಸ್ಪತ್ರೆಯಿಂದ ಮರಳಿಬಂದು ವಿಶ್ರಾಂತಿ ಪಡೆಯುತ್ತಿದ್ದರು. ಒಂದಿಷ್ಟು ಮನೆಗಳಲ್ಲಿ ದಿನವಿಡೀ ದುಡಿದು ಹೈರಾಣಾದವರು ಹಾಸಿಗೆಗೆ ಮೈಚಾಚಿ ಮಲಗುವ ಸಿದ್ಧತೆಯಲ್ಲಿದ್ದರು. ಮಗುವಿನ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಮೈಮರೆತಿದ್ದವರಿಗೆ ಈ ಯಾವ ಸಂಗತಿಗಳೂ ನೆನಪಿಗೆ ಬರಲಿಲ್ಲ. ತಮ್ಮ ವೈಯಕ್ತಿಕ ಖುಷಿಯ ಆದ್ಯತೆಯೊಂದೆ ಮುನ್ನೆಲೆಗೆ ಬಂದು ಆ ಸಂದರ್ಭ ಬೇರೆಯವರಿಗಾಗುತ್ತಿದ್ದ ಹಿಂಸೆಯ ಅರಿವು ಹಿನ್ನೆಲೆಗೆ ಸರಿದಿತ್ತು.

ನಿವೃತ್ತಿಯ ಅಂಚಿಗೆ ತಲುಪಿರುವ ನಮ್ಮ ಓಣಿಯಲ್ಲಿನ ಹಿರಿಯರೋರ್ವರು ಪ್ರತಿನಿತ್ಯ ತಾವು ಕೆಲಸ ಮಾಡುತ್ತಿರುವ ಕಚೇರಿಯಿಂದ ಸಾಯಂಕಾಲ ಮನೆಗೆ ನಡೆದುಕೊಂಡು ಬರುವುದನ್ನು ರೂಢಿಸಿಕೊಂಡಿರುವರು. ಸಮೀಪದ ಕೆಲಸ ಕಾರ್ಯಗಳಿಗೂ ಅವರು ಕಾಲ್ನಡಿಗೆಯನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಅವರು ಕಚೇರಿಯಿಂದ ಹಿಂದಿರುಗುವ ವೇಳೆ ಓಣಿಯಲ್ಲಿ ಯಾರಾದರೂ ಎದುರಾದರೆ ಇವತ್ತು ಜೀವಂತವಾಗಿ ಮನೆಗೆ ಬಂದೆ ನೋಡಿ ಎಂದು ನುಡಿದು ಮುಗುಳ್ನಗುತ್ತಾರೆ. ಆ ಹಿರಿಯರು ಹೀಗೆ ಹೇಳುವುದಕ್ಕೂ ಕಾರಣವಿದೆ. ವಾಹನ ಸವಾರರು ಅದರಲ್ಲೂ ವಿಶೇಷವಾಗಿ ಈ ಯುವಕರು ರಸ್ತೆಯ ಮೇಲೆ ವಾಹನ ಓಡಿಸುವುದನ್ನು ನೋಡಿಯೇ ಆನಂದಿಸಬೇಕು. ದ್ವಿಚಕ್ರ ವಾಹನದ ಮೇಲೆ ಸಂಚರಿಸುವ ಯುವಕರಂತೂ ಇನ್ನೇನು ಪಾತಾಳವನ್ನೇ ಸ್ಪರ್ಷಿಸುತ್ತಿರುವರೇನೋ ಎನ್ನುವಂತೆ ವಾಹನವನ್ನು ಡೊಂಕಾಗಿಸಿ ಓಡಿಸುವುದು ಸಾಮಾನ್ಯ ದೃಶ್ಯವಾಗಿದೆ. ಇಂಥ ಸಂದರ್ಭದಲ್ಲೆಲ್ಲ ರಸ್ತೆಯ ಮೇಲಿನ ಪಾದಚಾರಿಗಳಿಗೆ ಆ ಯುವಕರು ತಾವು ಅಪಘಾತಕ್ಕೆ ಒಳಗಾಗುವುದರೊಂದಿಗೆ ನಮ್ಮನ್ನೂ ಅಪಘಾತಕ್ಕೆ ಒಳಗಾಗಿಸುವರೇನೋ ಎನ್ನುವಷ್ಟು ಭಯ ಮುತ್ತಿಕೊಳ್ಳುತ್ತದೆ. ಈ ನಡುವೆ ಮಧ್ಯಪಾನ ಸೇವಿಸಿ ಇಲ್ಲವೇ ಮೊಬೈಲ್‍ನಲ್ಲಿ ಮಾತನಾಡುತ್ತ ಸಂಚರಿಸುವ ವಾಹನ ಸವಾರರ ಸಂಖ್ಯೆಯೇನೂ ಕಡಿಮೆ ಇರುವುದಿಲ್ಲ. ಸಾರ್ವಜನಿಕ ರಸ್ತೆಯನ್ನೇ ಸರ್ಕಸ್ಸಿನ ಡೇರೆಯಾಗಿಸಿಕೊಂಡು ಎರಡೂ ಕೈಗಳನ್ನು ಹಿಂದೆಕಟ್ಟಿಕೊಂಡು ವಾಹನ ಓಡಿಸುವ ಸಾಹಸಿಗರನ್ನು ಕಡೆಗಣಿಸುವಂತಿಲ್ಲ. ತಮ್ಮ ಎಂಟ್ಹತ್ತು ವರ್ಷದ ಪುಟಾಣಿಯ ಕೈಗೆ ವಾಹನದ ಲಗಾಮು ಕೊಟ್ಟು ಹಿಂದೆ ಕುಳಿತು ಅತ್ಯಂತ ಉಮೇದಿಯಿಂದ ನಿರ್ದೇಶಿಸುವ ಪಾಲಕರೂ ಆಗಾಗ ದೃಷ್ಟಿಗೆ ಗೋಚರಿಸುತ್ತಾರೆ. ರಸ್ತೆಯ ಮೇಲೆ ವಾಹನ ಸವಾರಿಯ ಇಂಥ ವಿಭಿನ್ನ ಸಂಗತಿಗಳು ಜರುಗುತ್ತಿರುವಾಗ ಸದಾಕಾಲ ಕಾಲ್ನಡಿಗೆಯನ್ನೆ ತಮ್ಮ ಸಂಚಾರದ ಅಭ್ಯಾಸವಾಗಿಸಿಕೊಂಡಿರುವ ನನ್ನ ಹಿರಿಯ ಮಿತ್ರರು ರಸ್ತೆಯಲ್ಲಿ ಯಾವ ಅಪಘಾತಕ್ಕೂ ಒಳಗಾಗದೆ ಸಧ್ಯ ಈ ದಿನ ಬದುಕುಳಿದೆ ಎಂದು ನಿಟ್ಟುಸಿರು ಬಿಡುವುದರಲ್ಲೂ ಅರ್ಥವಿದೆ.

ನನ್ನ ಇನ್ನೊಬ್ಬ ಮಿತ್ರನಿಗಾದ ಅನುಭವ ತುಂಬ ವಿಭಿನ್ನವಾದದ್ದು. ನೀಟಾಗಿ ಡ್ರೆಸ್ ಮಾಡಿಕೊಂಡು ತನ್ನ ದ್ವಿಚಕ್ರ ವಾಹನದ ಮೇಲೆ ಪ್ರತಿದಿನದಂತೆ ಆಫೀಸಿಗೆ ಹೊರಟವನಿಗೆ ದಾರಿ ಮಧ್ಯದಲ್ಲಿ ತಲೆ ಮೇಲೆ ನೀರಿನ ಸಿಂಚನವಾದ ಅನುಭವವಾಯಿತು. ಮೋಡವಿಲ್ಲದ ಶುಭ್ರವಾದ ಆಕಾಶ, ಕಣ್ಣುಕೊರೈಸುವ ಬೀಸಿಲು ಇಂಥ ವಾತಾವರಣದಲ್ಲಿ ಇದೆಂಥ ಮಳೆ ಎಂದು ತಲೆ ಎತ್ತಿ ಪಕ್ಕಕ್ಕೆ ನೋಡಿದವನಿಗೆ ಸರ್ಕಾರಿ ಬಸ್ಸಿನ ಕಿಟಕಿಯೊಳಗಿಂದ ಹೊರಗೆ ಚಾಚಿದ ಮುಖ ಗೋಚರಿಸಿತು. ಹೊರಚಾಚಿದ ಆ ಮುಖದ ಬಾಯಿಯೊಳಗಿಂದ ಪಿಚಕಾರಿಯಂತೆ ಸಿಡಿದುಬಂದ ರಸೋತ್ಪತ್ತಿ ಮತ್ತೊಮ್ಮೆ ನನ್ನ ಸ್ನೇಹಿತನ ಶಿರದ ಮೇಲೆ ಶಿವನ ಜಡೆಯಲ್ಲಡಗಿ ಕುಳಿತ ಗಂಗೆಯಂತೆ ಶಿರಸ್ಥಾಯಿಯಾಯಿತು. ಕ್ಷಣಮಾತ್ರದಲ್ಲಿ ಗುಟಕಾಪ್ರೀಯ ತನ್ನ ಬಾಯಿಯೊಳಗೆ ತುಂಬಿದ್ದ ಎಂಜಲನ್ನು ನನ್ನ ಸ್ನೇಹಿತನ ತಲೆಯ ಮೇಲೆ ಪ್ರೋಕ್ಷಣೆಗೈದು ಮುಂದೆ ಸಾಗಿದ್ದ. ಅರ್ಧದಾರಿವರೆಗೂ ಬಂದಿದ್ದ ನನ್ನ ಸ್ನೇಹಿತನ ಪರಿಸ್ಥಿತಿ ವರ್ಣಿಸಲಸದಳವಾಗಿತ್ತು. ತಾನಿರುವ ಸ್ಥಿತಿಯಲ್ಲೇ ಕಚೇರಿಗೆ ಹೋಗುವಂತಿಲ್ಲ, ಮನೆಗೆ ಹಿಂತಿರುಗಿ ಬಟ್ಟೆ ಬದಲಿಸಿಕೊಂಡು ಬರಲು ಸಮಯದ ಕೊರತೆ. ಜೊತೆಗೆ ಸಾರ್ವಜನಿಕ ರಸ್ತೆಯಲ್ಲಿ ತನ್ನದಲ್ಲದ ತಪ್ಪಿಗೆ ಎದುರಿಸಬೇಕಾದ ಅಪಮಾನದ ಭಾವ ಮನಸ್ಸನ್ನು ಆವರಿಸಿ ಆ ಕ್ಷಣಕ್ಕೆ ಭೂಮಿಯೊಳಗೆ ಹೂತುಹೋದ ಅನುಭವ ಅವನದಾಗಿತ್ತು.

ಖಾಸಗಿ ಸಮಾರಂಭಕ್ಕಾಗಿ ಮನೆಯ ಎದುರಿನ ಸಾರ್ವಜನಿಕ ರಸ್ತೆಯನ್ನು ಅತಿಕ್ರಮಿಸಿಕೊಳ್ಳುವುದು, ಖಾಸಗಿ ಸಮಾರಂಭದ ಮೆರವಣಿಗೆ ಸಂದರ್ಭ ರಸ್ತೆಮೇಲೆ ಸಾರ್ವಜನಿಕರ ಓಡಾಟಕ್ಕೆ ತೊಂದರೆಯನ್ನುಂಟು ಮಾಡುವುದು, ಅಮವಾಸೆ-ಹಬ್ಬಗಳ ದಿನಗಳಂದು ವಾಹನಗಳನ್ನು ತೊಳೆಯಲು ಸಾವಿರಾರು ಲೀಟರ್ ನೀರು ವ್ಯರ್ಥಮಾಡುವುದು, ವಿದ್ಯುತ್ ಯಂತ್ರದಿಂದ ಸಾರ್ವಜನಿಕ ನಲ್ಲಿಯಿಂದ ಒಂದು ತೊಟ್ಟೂ ಬಿಡದಂತೆ ನೀರನ್ನು ಹೀರಿ ಉಳಿದ ಮನೆಗಳಲ್ಲಿ ನೀರಿನ ಕೊರತೆ ಹುಟ್ಟಿಸುವುದು ಹೀಗೆ ಅದೆಷ್ಟೋ ಸಮಾಜ ವಿರೋಧಿ ಕೆಲಸಗಳಲ್ಲಿ ಮನುಷ್ಯರು ತೊಡಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ತನ್ನ ಇಂಥ ಅನಾಗರಿಕ ವರ್ತನೆಯಿಂದ ಬೇರೆಯವರ ಬದುಕಿಗೆ ತೊಂದರೆಯಾಗುತ್ತಿದೆ ಎನ್ನುವ ಕಿಂಚಿತ್ ಪ್ರಜ್ಞೆಯೂ ಇಲ್ಲದಂತೆ ಮನುಷ್ಯ ಅಸಂವೇದಿಯಾಗುತ್ತಿರುವನು.

ಭೈರಪ್ಪನವರ ‘ತಂತು’ ಕಾದಂಬರಿಯಲ್ಲಿ ಹೀಗೊಂದು ಮಾತಿದೆ ‘ಜನರು ಮೂಲತ: ಒಳ್ಳೆಯವರು, ಕೆಟ್ಟೋರು ಅನ್ನೂ ವಿಂಗಡಣೆ ಸರಿಯಲ್ಲ. ಅವರು ಗೊಬ್ಬರದ ಥರ ಇದ್ದಾರೆ. ಗೊಬ್ಬರ ಒಯ್ದು ತೆಂಗಿನ ಮರಕ್ಕೆ ಹಾಕಿದರೆ ಅದೂ ಫಲ ಕೊಡುತ್ತೆ. ಪಾಪಾಸುಕಳ್ಳಿಗೆ ಹಾಕಿದರೆ ಅದೂ ಹೊರವಾಗಿ ಬೆಳೆಯುತ್ತೆ. ಗೊಬ್ಬರದ ಹಂಗಿರೊ ಅವರನ್ನು ನಿಜವಾದ ಜನರ ಹಂಗೆ ಮನುಷ್ಯರ ಹಂಗೆ ಮಾಡೂದೇ ಮೂಲ ಪ್ರಶ್ನೆ’. ಆದ್ದರಿಂದ ಮನುಷ್ಯನ ಆಲೋಚನಾ ಮಟ್ಟದಲ್ಲಿ, ಅವನ ವರ್ತನೆಯಲ್ಲಿ, ಬದುಕಿನ ರೀತಿಯಲ್ಲಿ, ಸಮಾಜವನ್ನು ನೋಡುವ ಕ್ರಮದಲ್ಲಿ ಸಾಕಷ್ಟು ಸುಧಾರಣೆಯಾಗಬೇಕಿದೆ.

ಮನುಷ್ಯ ಸಂಘಜೀವಿ ಎಂದು ತತ್ವಜ್ಞಾನಿ ಅರಿಸ್ಟಾಟಲ್ ಹೇಳಿರುವನು. ಸಂಘಜೀವಿಯಾದ ಮನುಷ್ಯನಿಗೆ ತನ್ನ ವೈಯಕ್ತಿಕ ಆದ್ಯತೆಗಳ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕಾದ ಹೊಣೆಗಾರಿಕೆಯೂ ಇದೆ. ತನ್ನ ವೈಯಕ್ತಿಕ ಆದ್ಯತೆಗಳಿಂದ ಸಮಾಜದ ಸ್ವಾಸ್ಥ್ಯ ಕೆಡದಂತೆ ಮತ್ತು ತನ್ನಂತೆ ಸಮಾಜದಲ್ಲಿ ಬದುಕುತ್ತಿರುವ ಬೇರೆಯವರ ಬದುಕಿನ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಬದುಕುವುದನ್ನು ಮನುಷ್ಯ ರೂಢಿಸಿಕೊಳ್ಳಬೇಕಿದೆ. ಬದುಕುವ ಸ್ವಾತಂತ್ರ್ಯವನ್ನು ನೀಡಲಾಗಿದೆ ಎಂದರೆ ಅದು ಸ್ವೇಚ್ಛಾಚಾರವೆಂದರ್ಥವಲ್ಲ. ತಾನು ಬದುಕಿ ಬೇರೆಯವರು ಬದುಕಲು ಅಗತ್ಯವಾದ ವಾತಾವರಣವನ್ನು ನಿರ್ಮಿಸಿಕೊಡುವುದೇ ಮನುಷ್ಯ ನಿರ್ವಹಿಸಬೇಕಾಗಿರುವ ಅತ್ಯಂತ ಮಹತ್ವದ ಸಾಮಾಜಿಕ ಜವಾಬ್ದಾರಿಯಾಗಿದೆ. ಆದ್ದರಿಂದ ನಾವುಗಳೆಲ್ಲ ನಮ್ಮ ನಮ್ಮ ಬದುಕಿನ ವೈಯಕ್ತಿಕ ಆದ್ಯತೆಗಳನ್ನು ಒಂದುಕ್ಷಣ ಬದಿಗಿಟ್ಟು ನಾವು ಬದುಕುತ್ತಿರುವ ಸಮಾಜದ ಬಗ್ಗೆ ಅರೆಕ್ಷಣ ಯೋಚಿಸುವುದೊಳಿತು.

-ರಾಜಕುಮಾರ ಕುಲಕರ್ಣಿ


Thursday, February 3, 2022

ಬಿತ್ತಿದಂತಲ್ಲದೆ ಬೆಳೆ ಇನ್ನೇನಾಗಬೇಕು?

 


(೭.೧೨.೨೦೨೧ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)

       ‘ನಮ್ಮಪ್ಪಗ ನಾವು ಆರು ಮಕ್ಕಳು. ಸಣ್ಣವರಿದ್ದಾಗ ಒಂದು ದಿವಸರೆ ನಮ್ಮಪ್ಪ ನಮ್ಮನ್ನು ಎತ್ತಿಕೊಂಡು ಆಡಿಸಿದ್ದು ನೆನಪಿಲ್ಲ. ತಪ್ಪು ಮಾಡಿದರ ದನಕ್ಕ ಬಡಿದಂಗ ಬಡಿತಿದ್ದ. ನಾವು ಏನು ಓದ್ಲಿಕತ್ತಿವಿ ಅಂತ ವಿಚಾರಿಸಿದವನೇ ಅಲ್ಲ. ಕೂಡು ಕುಟುಂಬ ಇರೊದರಿಂದ ಎಲ್ಲಾ ಜವಾಬ್ದಾರಿ ನಮ್ಮ ದೊಡ್ಡಪ್ಪಂದೆ ಆಗಿತ್ತು. ನಮಗೂ ನಮ್ಮಪ್ಪ ನಮ್ಮನ್ನ ವಿಚಾರಿಸ್ತಿಲ್ಲ ಅನ್ನೊದು ಮನಸ್ಸಿಗಿ ಅಂಥ ಹಳಹಳಕಿ ಸಂಗತಿ ಆಗಿರಲಿಲ್ಲ. ಆದರ ಮುಪ್ಪಿನ ಕಾಲಕ್ಕ ಅಪ್ಪಗ ಬ್ಯಾನಿ ಬ್ಯಾಸರಕಿ ಬಂದರ ಕರಳ ಕಿವುಚಿದಂಗ ಆಗ್ತಿತ್ತು. ಹಿರಿಜೀವ ಆರಾಮಾಗಿರಲಿ ಅಂತ ಮನಸ ಬಯಿಸ್ತಿತ್ತು. ಅದೇ ನನ್ನ ಮಗನ ವಿಷಯಕ್ಕ ಬಂದರ ಇದ್ದೊಬ್ಬ ಮಗ ಅಂತ ಅಂಗೈದಾಗ ಇಟಗೊಂಡು ಬೆಳೆಸೀನಿ. ಒಂದು ದಿವಸ ಕೂಡ ಸಿಟ್ಟಿನಿಂದ ಗದರಿಸಿಲ್ಲ. ನಡೆದರ ಕಾಲು ನೋವಾಗ್ತಾವಂತ ಸ್ಕೂಲ್‍ತನಕ ಎತಕೊಂಡು ಹೋಗೀನಿ. ರೆಕ್ಕಿ ಬಲಿತ ಮ್ಯಾಗ ಈಗ ಅಮೆರಿಕಾಕ ಹೋಗಿ ಕೂತಾನ. ವಿಡಿಯೋ ಕಾಲ್ ಮಾಡದಾಗಷ್ಟೇ ನೋಡಿ ಖುಷಿ ಪಡಬೇಕು. ಆ ಚೋಟುದ್ದ ಮೊಮ್ಮಗ ಈ ಆಯಿ ಮುತ್ತ್ಯಾಗ ಹಾಯ್ ಗಾಯ್ಸ್ ಅಂತ ಕರೀತದ. ಕಾಲನ ಪ್ರವಾಹದಾಗ ಕುಟುಂಬ ಪ್ರೀತಿ, ವಾತ್ಸಲ್ಯ ಅನ್ನೋವು ಕೊಚ್ಚಿ ಹೋಗ್ಯಾವ’ ನಿವೃತ್ತಿಯ ಅಂಚಿನಲ್ಲಿರುವ ಹಿರಿಯ ಮಿತ್ರರೊಬ್ಬರು ತಮ್ಮ ಅಳಲು ತೋಡಿಕೊಂಡರು.

ನ್ಯೂಕಿಯರ್ ಕುಟುಂಬಗಳ ಸಂಖ್ಯೆ ವೃದ್ಧಿಸುತ್ತಿರುವ ಈ ಕಾಲದಲ್ಲಿ ಕುಟುಂಬ ಪ್ರೇಮ ಎನ್ನುವುದು ಕಥೆ, ಕಾದಂಬರಿಗಳಲ್ಲಿನ ಶಬ್ದವಾಗಿಯೂ ಸಿನಿಮಾ ಪರದೆಯ ಮೇಲಿನ ದೃಶ್ಯವಾಗಿಯೂ ಗೋಚರಿಸುತ್ತಿದೆ. ಹಿಂದೆಲ್ಲ ಅವಿಭಕ್ತ ಕುಟುಂಬಗಳಲ್ಲಿ ಮನೆಯ ಒಂದೇ ಸೂರಿನಡಿ ಹಲವು ಸಂಬಂಧಗಳು ಅನ್ಯೋನ್ಯತೆಯಿಂದ ಬಾಳುತ್ತಿದ್ದವು. ಅಜ್ಜ, ಅಜ್ಜಿ, ಅಪ್ಪ, ಅಮ್ಮ, ದೊಡ್ಡಪ್ಪ, ಚಿಕ್ಕಪ್ಪ, ಅತ್ತೆ, ಅಣ್ಣ, ತಂಗಿ ಹೀಗೆ ಹತ್ತು ಹಲವು ಸಂಬಂಧಗಳ ಪರಿಚಯ ಪ್ರತಿ ಕುಟುಂಬದಲ್ಲಿನ ಮಗುವಿಗಾಗುತ್ತಿತ್ತು. ಮಗು ತನ್ನ ದಿನನಿತ್ಯದ ಅಗತ್ಯಗಳಿಗಾಗಿ ಅಪ್ಪ ಅಮ್ಮನನ್ನೇ ಆಶ್ರಯಿಸಬೇಕಾಗುತ್ತಿರಲಿಲ್ಲ. ಯಾರದೋ ಮಗು ಇನ್ನಾರದೋ ಕಂಕುಳಲ್ಲಿ ಕುಳಿತು ಊಟ ಮಾಡುತ್ತಿತ್ತು, ಬೇರೆ ಯಾರದೋ ತೊಡೆಯ ಮೇಲೆ ನಿದ್ರಿಸುತ್ತಿತ್ತು, ಅಜ್ಜಿಯ ಮಗ್ಗುಲಲ್ಲಿ ಮಲಗಿ ಕಥೆ ಕೇಳುತ್ತಿತ್ತು, ಸೋದರ ಸಂಬಂಧಿಗಳ ಜೊತೆ ಆಡಿ ನಲಿಯುತ್ತಿತ್ತು. ಇಂಥ ಕೂಡುಕುಟುಂಬಗಳಲ್ಲಿ ಮಕ್ಕಳಿಗೆ ಪ್ರೀತಿ, ವಾತ್ಸಲ್ಯದ ಜೊತೆಗೆ ಸುರಕ್ಷತೆಯ ಭರವಸೆ ಅಗಣಿತವಾಗಿ ಸಿಗುತ್ತಿತ್ತು.

ಕಾಲಕ್ರಮೇಣ ಕುಟುಂಬ ಘಟಕ ಒಡೆದು ನ್ಯೂಕ್ಲಿಯರ್ ಕುಟುಂಬಗಳು ಅಸ್ತಿತ್ವಕ್ಕೆ ಬಂದು ಈಗ ಮಕ್ಕಳಿಗೆ ಅಪ್ಪ ಅಮ್ಮನನ್ನು ಹೊರತುಪಡಿಸಿ ಕುಟುಂಬದ ಉಳಿದ ಸದಸ್ಯರ ಪ್ರೀತಿ, ವಾತ್ಸಲ್ಯ ಎನ್ನುವುದು ಮರೀಚಿಕೆಯಾಗಿದೆ. ಅದೆಷ್ಟೋ ಕುಟುಂಬಗಳಲ್ಲಿ ಗಂಡ ಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುವುದರಿಂದ ಇನ್ನೂ ಅಂಬೆಗಾಲಿಕ್ಕುವ ವಯಸ್ಸಿನಲ್ಲೇ ಮಕ್ಕಳ ಹೊಣೆ ಮನೆಯಲ್ಲಿ ಕೆಲಸ ಮಾಡುವ ಆಯಾಗಳಿಗೋ ಇಲ್ಲವೇ ಈ ಕೆಲಸಕ್ಕೆಂದೇ ಅಸ್ತಿತ್ವಕ್ಕೆ ಬಂದಿರುವ ಮಕ್ಕಳ ಪಾಲನಾ ಕೇಂದ್ರಗಳಿಗೋ ವರ್ಗಾವಣೆಗೊಳ್ಳುತ್ತದೆ. ತಮ್ಮ ಬಾಲ್ಯ ಜೀವನದ ಅತಿ ಮಹತ್ವದ ಸಮಯವನ್ನು ಬೇರೆಯವರ ಆಶ್ರಯದಲ್ಲಿ ಕಳೆಯುವ ಮಕ್ಕಳಲ್ಲಿ ಅನಾಥ ಪ್ರಜ್ಞೆ ಬೆಳೆಯುತ್ತಿದೆ. ಇಂಥ ಮಕ್ಕಳಿಗೆ ಒಂದು ಕುಟುಂಬ ವ್ಯವಸ್ಥೆಯಲ್ಲಿನ ವಿವಿಧ ಸಂಬಂಧಗಳ ಅರಿವೇ ಇರುವುದಿಲ್ಲ. ಅದಕ್ಕೆಂದೆ ಇವತ್ತಿನ ಮಕ್ಕಳಿಗೆ ಎಲ್ಲ ಸಂಬಂಧಗಳೂ ಅಂಕಲ್ ಆಂಟಿಗಳೆ.

ಹಿಂದೆಲ್ಲ ಅಮ್ಮಂದಿರು ಆಕಾಶದಲ್ಲಿನ ಹೊಳೆಯುವ ಚಂದ್ರ, ಮಿನುಗುತ್ತಿರುವ ನಕ್ಷತ್ರಗಳು, ಗಿಡ, ಮರ, ಬಳ್ಳಿ, ಹೂವುಗಳನ್ನು ತೋರಿಸಿ ಮಕ್ಕಳಿಗೆ ಉಣಿಸುತ್ತಿದ್ದರು. ನನ್ನ ವಯೋಮಾನದವರು ಅಮ್ಮನ ಕಂಕುಳಲ್ಲಿ ಕುಳಿತು ಚಂದ್ರ, ನಕ್ಷತ್ರಗಳನ್ನು ನೋಡುತ್ತ ಕೈತುತ್ತು ತಿಂದು ಬಾಲ್ಯವನ್ನು ಕಳೆದವರು. ಆದರೆ ಈಗಿನ ಮಕ್ಕಳಿಗೆ ಆ ಸೌಭಾಗ್ಯವಿಲ್ಲ. ಇಂದಿನ ಮಮ್ಮಿಗಳು ಲ್ಯಾಪ್‍ಟಾಪ್ ಎದುರಿಟ್ಟು ಕಾರ್ಟೂನ್ ತೋರಿಸಿ ಮುಳ್ಳುಚಮಚದಿಂದ ಜಂಕ್ ಫುಡ್ ತಿನ್ನಿಸುವ ಕಾಲವಿದು. ಮಗು ತನ್ನೆದುರಿರುವ ಲ್ಯಾಪ್‍ಟಾಪನ್ನೆ ಸರ್ವಸ್ವ ಎಂದು ಭಾವಿಸಿ ರಕ್ತಸಂಬಂಧಗಳ ಪ್ರೀತಿ ವಾತ್ಸಲ್ಯದಿಂದ ದೂರಾಗುತ್ತಿದೆ. 

ಭವಿಷ್ಯವನ್ನು ರೂಪಿಸುವ ಹುನ್ನಾರದಲ್ಲಿ ಪಾಲಕರು ಮಕ್ಕಳ ಸಹಜ ಬಾಲ್ಯ ಜೀವನವನ್ನೇ ಹೊಸಕಿಹಾಕುತ್ತಿರುವರು. ಸಹಜ ಶಿಕ್ಷಣಕ್ಕೆ ಒತ್ತು ನೀಡುವುದಕ್ಕಿಂತ ಪಾಲಕರು ತಮ್ಮ ಮಕ್ಕಳನ್ನು ಸ್ಪರ್ಧೆಗೆ ಸಿದ್ಧಗೊಳಿಸಲು ನೆರವಾಗುವ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವರು. ಇಂದಿನ ದಿನಗಳಲ್ಲಿ ಮಕ್ಕಳು ತಮ್ಮ ಎರಡನೇ ವಯಸ್ಸಿನಿಂದಲೇ ಶಾಲೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಮೆಟ್ರೊಪಾಲಿಟನ್ ನಗರಗಳಲ್ಲಿ ಮಗು ತಾಯಿಯ ಗರ್ಭದಲ್ಲಿರುವಾಗಲೇ ಶಾಲೆಗೆ ಪ್ರವೇಶ ದೊರಕಿಸುವ ವ್ಯವಸ್ಥೆ ಇದೆ. ಮಕ್ಕಳನ್ನು ಡಾಕ್ಟರ್, ಎಂಜಿನಿಯರ್, ಐಎಎಸ್, ಐಪಿಎಸ್‍ಗಳನ್ನಾಗಿಸಬೇಕೆನ್ನುವ ಧಾವಂತಕ್ಕೆ ಕಟ್ಟು ಬೀಳುವ ಪಾಲಕರು ಮಗುವಿನ ಶಿಶುವಿಹಾರದ ಅನೌಪಚಾರಿಕ ಶಿಕ್ಷಣದಿಂದಲೇ ತಮ್ಮ ಪ್ರಯತ್ನ ಆರಂಭಿಸುವರು. ಪಾಲಕರ ವಾಂಛೆಯ ಪರಿಣಾಮ ಮಗು ಸ್ಪರ್ಧಾತ್ಮಕ ಜಗತ್ತಿಗೆ ಇಷ್ಟವಿರಲಿ, ಇಲ್ಲದಿರಲಿ ತನ್ನನ್ನು ಒಡ್ಡಿಕೊಳ್ಳಲೇ ಬೇಕು. ಶಾಲೆ, ಮನೆಪಾಠದ ಬಿಡುವಿರದ ಚಟುವಟಿಕೆಗಳ ನಡುವೆ ಮಕ್ಕಳು ತಮ್ಮ ಸಹಜ ಬಾಲ್ಯ ಜೀವನದಿಂದ ವಂಚಿತರಾಗುತ್ತಿರುವರು. ದೊರೆಯುವ ಅಲ್ಪವಿರಾಮದ ವೇಳೆ ಕೂಡ ನೃತ್ಯ, ಸಂಗೀತ, ಅಬ್ಯಾಕಸ್‍ದಂಥ ತರಬೇತಿಗಳಿಗೆ ವಿನಿಯೋಗವಾಗುತ್ತಿದೆ. ಆರ್ಥಿಕವಾಗಿ ಸ್ಥಿತಿವಂತರಾಗಿರುವ ಪಾಲಕರು ಮಕ್ಕಳನ್ನು ವಸತಿ ಶಾಲೆಗಳಿಗೆ ದಾಖಲಿಸಿ ಓದಿಸುವರು. ಈ ವ್ಯವಸ್ಥೆಯಲ್ಲಿ ಮಕ್ಕಳು ವರ್ಷಪೂರ್ತಿ ಕುಟುಂಬ ವಾತಾವರಣದಿಂದ ದೂರವಿರಬೇಕಾದ ಅನಿವಾರ್ಯತೆ. ಪರಿಣಾಮವಾಗಿ ಮಕ್ಕಳಲ್ಲಿ ಪ್ರೀತಿ ವಾತ್ಸಲ್ಯದ ಭಾವನೆಗಳು ಬರಡಾಗುತ್ತಿವೆ.

ನನ್ನ ಹಿರಿಯ ಮಿತ್ರರ ಮಗ ಭಾರತಕ್ಕೆ ಬಂದಿದ್ದ ಸಂದರ್ಭ ಭೇಟಿಯಾಗುವ ಪ್ರಸಂಗ ಎದುರಾಯಿತು. ಅವನು ಮಾತಿನ ನಡುವೆ ಹೇಳಿದ್ದು ಹೀಗೆ ‘ಹಳ್ಳಿಯಲ್ಲಿ ಎಲ್ಲ ಸೌಕರ್ಯವಿರುವ ಮನೆ ಕಟ್ಟಿಸಿದ್ದೀನಿ. ಕೆಲಸಕ್ಕೆ ಆಳುಗಳಿವೆ. ಕಾಲಕಾಲಕ್ಕೆ ಹಣ ಕಳಿಸ್ತೀನಿ. ಓಡಾಡೊಕೆ ಕಾರಿದೆ. ಅಮೆರಿಕಾದಿಂದಲೇ ಕಾಲ್ ಮಾಡಿ ಡಾಕ್ಟರ್‍ನ ಮನೆಗೆ ಕರೆಯಿಸಿ ಚಿಕಿತ್ಸೆ ಕೊಡಿಸ್ತೀನಿ. ಇನ್ನೇನು ಬೇಕು ಇವರಿಗೆ ಬದುಕೊಕೆ?’. ಇದು ಇವತ್ತಿನ ಮಕ್ಕಳ ಮನಸ್ಥಿತಿ. ಹಣವೇ ಪ್ರಧಾನ ಎಂದು ಭಾವಿಸಿದವರಿಗೆ ಬದುಕಲು ಹಣಕ್ಕಿಂತ ಪ್ರೀತಿ ವಾತ್ಸಲ್ಯದ ಅಗತ್ಯವಿದೆ ಎಂದು ತಿಳಿಸಿ ಹೇಳುವುದಾದರೂ ಹೇಗೆ? ಹಾಗೆ ಹೇಳುವ ನೈತಿಕ ಸ್ಥೈರ್ಯವನ್ನೆ ಪಾಲಕರು ಕಳೆದುಕೊಂಡಿರುವಾಗ ಯಾರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದು. ಸ್ಪರ್ಧಾತ್ಮಕ ಯುಗದಲ್ಲಿ ನಾವು ಮಕ್ಕಳನ್ನು ಬಿತ್ತುತ್ತಿದ್ದೇವೆ. ಸ್ಪರ್ಧಾತ್ಮಕ ಬೆಳವಣಿಗೆಗೆ ಅಗತ್ಯವಾದ ಎಲ್ಲ ರಸಗೊಬ್ಬರಗಳನ್ನು ಬಿತ್ತಿದ ಬೆಳೆಗೆ ಉಣಿಸುತ್ತಿದ್ದೇವೆ. ಬಿತ್ತಿದಂತೆ ಬೆಳೆ ಎನ್ನುವುದು ನಿಸರ್ಗದ ಸಹಜ ಧರ್ಮವೇ ಆಗಿರುವಾಗ ಇನ್ನು ಮಕ್ಕಳು ಯಂತ್ರಗಳಂತಾಗದೆ ಇನ್ನೇನಾಗಬೇಕು?  

-ರಾಜಕುಮಾರ ಕುಲಕರ್ಣಿ 


Tuesday, January 4, 2022

ರೂಪದರ್ಶಿ: ಮನುಷ್ಯ ಸಂಬಂಧಗಳ ಹುಡುಕಾಟ (ಉಪನ್ಯಾಸ)

 ದಿನಾಂಕ ೨೬.೧೨.೨೦೨೧ ರಂದು ಭಾವೈಸಿರಿ ಕಾರ್ಯಕ್ರಮದವರು ರೂಪದರ್ಶಿ ಕಾದಂಬರಿ ಕುರಿತು ನನ್ನ ಉಪನ್ಯಾಸವನ್ನು ಆಯೋಜಿಸಿದ್ದರು. ಉಪನ್ಯಾಸ ಕಾರ್ಯಕ್ರಮ ಈಗ ಯೂಟೂಬ್ ಚಾನೆಲ್‌ನಲ್ಲಿ ಲಭ್ಯವಿದ್ದು ಈ ಕೆಳಗಿನ ಕೊಂಡಿಯನ್ನು ಬಳಸಿಕೊಂಡು ಉಪನ್ಯಾಸವನ್ನು ಕೇಳಬಹುದು.

https://www.youtube.com/watch?v=2NIKkkXhMLc

ರೂಪದರ್ಶಿ: ಮನುಷ್ಯ ಸಂಬಂಧಗಳ ಹುಡುಕಾಟ ಎನ್ನುವ ನನ್ನ ಲೇಖನದ ಓದಿಗಾಗಿ ಈ ಕೆಳಗಿನ ಕೊಂಡಿಯನ್ನು ಉಪಯೋಗಿಸಿ

https://manadamatu-rvk.blogspot.com/2016/12/blog-post.html


-ರಾಜಕುಮಾರ ಕುಲಕರ್ಣಿ