Wednesday, December 7, 2022
ಪ್ರಜಾವಾಣಿ ಕನ್ನಡ ಧ್ವನಿಯಲ್ಲಿ ‘ಹೊತ್ತಿಗೆ ಪ್ರಕಟಣೆಯ ಈ ಹೊತ್ತು’ ಲೇಖನ ಕೇಳಿ
Monday, December 5, 2022
ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ
(೦೪.೧೦.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ)
ಮಕ್ಕಳ ಮೊಬೈಲ್ ಗೀಳು ಕೊರೊನಾ ನಂತರ ಕಾಲದ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕೊರೊನಾ ಸಂದರ್ಭದ ಅನಿವಾರ್ಯತೆ ಈಗ ಸಂಕಷ್ಟವಾಗಿ ರೂಪಾಂತರಗೊಂಡಿದೆ. ಸಧ್ಯದ ಪರಿಸ್ಥಿತಿಯಲ್ಲಿ ಮಕ್ಕಳನ್ನು ಮೊಬೈಲ್ ಗೀಳಿನಿಂದ ಹೊರತರಬೇಕಾದ ಮಹತ್ವದ ಜವಾಬ್ದಾರಿ ಪಾಲಕರ ಮತ್ತು ಶಿಕ್ಷಕರದು ಮಾತ್ರವಲ್ಲದೆ ಸಾಂಸ್ಕೃತಿಕಲೋಕ ಕೂಡ ಈ ಹೊಣೆಗಾರಿಕೆಯನ್ನು ನಿಭಾಯಿಸಬೇಕಾಗಿದೆ. ಅತ್ಯುತ್ತಮ ಪುಸ್ತಕಗಳ ಓದು ಮತ್ತು ಸದಭಿರುಚಿಯ ಸಿನಿಮಾಗಳ ವೀಕ್ಷಣೆಗೆ ಮಕ್ಕಳನ್ನು ಒಳಗಾಗಿಸುವುದು ಈ ಸಮಸ್ಯೆಯ ಪರಿಹಾರಕ್ಕಿರುವ ಸೂಕ್ತ ಮಾರ್ಗವಾಗಿದೆ. ‘ಯೌವನದ ದಿನಗಳಲ್ಲಿ ಮಾಡಿದ ತಪ್ಪನ್ನು ಒಪ್ಪಿಕೊಂಡು ಪ್ರಾಯಶ್ಚಿತಹೊಂದಲು ಬಾಲ್ಯದಲ್ಲಿ ಓದಿದ ಉತ್ತಮ ಪುಸ್ತಕಗಳು ಮತ್ತು ನೋಡಿದ ನಾಟಕಗಳ ಪ್ರಭಾವ ನನಗೆ ನೆರವಾಯಿತು ಎಂದು ಗಾಂಧೀಜಿ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿರುವರು. ಆತಂಕದ ಸಂಗತಿ ಎಂದರೆ ಮಕ್ಕಳ ಮಾನಸಿಕ ವಿಕಾಸಕ್ಕೆ ನೆರವಾಗಬಲ್ಲ ಸಾಹಿತ್ಯಿಕ ಪುಸ್ತಕಗಳ ಮತ್ತು ಸಿನಿಮಾಗಳ ಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ.
ಮಕ್ಕಳ ಮನೋವಿಕಾಸದ ನಿರ್ಮಾಣದಲ್ಲಿ ಸಾಹಿತ್ಯ ಮತ್ತು ಸಿನಿಮಾದ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಾಲೆಯು ನಾಲ್ಕು ಗೋಡೆಗಳ ನಡುವೆ ಮಗುವಿನ ವ್ಯಕ್ತಿತ್ವವನ್ನು ರೂಪಿಸುವ ಒಂದು ವ್ಯವಸ್ಥೆಯಾದರೆ, ಸಿನಿಮಾ ಮತ್ತು ಸಾಹಿತ್ಯ ಆ ನಾಲ್ಕು ಗೋಡೆಗಳ ಹೊರಗೆ ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತವೆ. ಶಾಲೆ ಮತ್ತು ಅಲ್ಲಿನ ಪರಿಸರದಷ್ಟೇ ಸಿನಿಮಾ ಮತ್ತು ಸಾಹಿತ್ಯದ ಜವಾಬ್ದಾರಿ ಕೂಡ ಮಗುವಿನ ಬೆಳವಣಿಗೆಯಲ್ಲಿ ಪರಿಗಣನೆಗೆ ಬರುತ್ತದೆ. ಅತ್ಯುತ್ತಮ ಶಿಕ್ಷಕರಂತೆ ಅತ್ಯುತ್ತಮ ಪುಸ್ತಕಗಳು ಮತ್ತು ಸಿನಿಮಾಗಳು ಸಹ ಮಕ್ಕಳ ಸರ್ವಾಂಗೀಣ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ.
ಮಕ್ಕಳನ್ನು ಸಾಹಿತ್ಯದ ಓದುಗರನ್ನಾಗಿಸುವುದು ಅತ್ಯಂತ ಅವಶ್ಯಕವಾಗಿದೆ. ಸಾಹಿತ್ಯದ ಮೂಲಕವೇ ಮಗು ಪ್ರೀತಿ ಮತ್ತು ಅಂತ:ಕರಣ ತುಂಬಿರುವ ಭಾಷೆಯನ್ನು ಕಲಿಯಬೇಕಿದೆ. ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ಜೋಸೆಫ್ ಬ್ರಾಡ್‍ಸ್ಕೀ ‘ಸಾಹಿತ್ಯದಲ್ಲಿ ಭಾಷೆ ಬಳಕೆಯಾಗುವುದಿಲ್ಲ, ಸೃಷ್ಟಿಯಾಗುತ್ತದೆ’ ಎನ್ನುತ್ತಾರೆ. ಬ್ರಾಡ್‍ಸ್ಕೀಯೇ ಹೇಳಿದಂತೆ ‘ಮೌನದ ಸಂತ ಸಮಾಧಾನದಲ್ಲಿ ಸತ್ಯ ಪ್ರಕಟಗೊಳ್ಳುವ ಹಾಗೆ, ಬದುಕಿನ ಅರ್ಥ ಹೊಳೆಯುವ ಹಾಗೆ ಸಾಹಿತ್ಯದಲ್ಲಿ ಭಾಷೆ ಕಾವ್ಯವಾಗುತ್ತದೆ. ಭಾಷೆ ಕಾವ್ಯವಾಗುವುದು ಮನುಷ್ಯ ಸಾಂಸ್ಕೃತಿಕವಾಗಿ ವಿಕಾಸಗೊಳ್ಳುವ ದಿಕ್ಕನ್ನು ಸೂಚಿಸುವ ಸಂಗತಿ’.
ಭಾಷೆಯ ಈ ಮಹತ್ವವನ್ನರಿತು ಮಕ್ಕಳನ್ನು ಪುಸ್ತಕಗಳ ಓದುಗರನ್ನಾಗಿಸಬೇಕಾದದ್ದು ಶಿಕ್ಷಕರ ಮತ್ತು ಪಾಲಕರ ಜವಾಬ್ದಾರಿಯಾಗಿದೆ. ಒಂದು ಕಾಲದಲ್ಲಿ ಕನ್ನಡ ಭಾಷೆಯಲ್ಲಿ ಸಮೃದ್ಧವಾಗಿ ಮಕ್ಕಳ ಪುಸ್ತಕಗಳು ಪ್ರಕಟಗೊಂಡಿವೆ. ಎಮ್.ಎಸ್.ಪುಟ್ಟಣ್ಣನವರ ‘ನೀತಿ ಚಿಂತಾಮಣಿ’ ಕುವೆಂಪು ಅವರ ‘ಬೊಮ್ಮನಹಳ್ಳಿಯ ಕಿಂದರಿಜೋಗಿ’ ಮತ್ತು ‘ಮೋಡಣ್ಣನ ತಮ್ಮ’ ಮಕ್ಕಳ ಮೆಚ್ಚಿನ ಕೃತಿಗಳಾಗಿವೆ. ಪಂಜೆ ಮಂಗೇಶರಾಯರು, ಶಿವರಾಮ ಕಾರಂತ, ಜೆ.ಪಿ.ರಾಜರತ್ನಂ, ನಾ.ಕಸ್ತೂರಿ, ಚಿ.ಸದಾಶಿವಯ್ಯ, ಸಿಸು ಸಂಗಮೇಶ, ಜಯವಂತ ಕಾಡದೇವರ, ಕಂಚ್ಯಾಣಿ ಶಾಣಪ್ಪ ಕನ್ನಡ ಭಾಷೆಯಲ್ಲಿ ಮಕ್ಕಳ ಸಾಹಿತ್ಯವನ್ನು ಸಮೃದ್ಧಗೊಳಿಸಿದವರಲ್ಲಿ ಪ್ರಮುಖರು. ಎಮ್.ಆರ್.ಕೃಷ್ಣಶಾಸ್ತ್ರಿಗಳ ‘ನಿರ್ಮಲ ಭಾರತಿ’ ಮಕ್ಕಳ ಸಾಹಿತ್ಯಕ್ಕೆ ಶ್ರೇಷ್ಠ ಕೊಡುಗೆ ಎಂದು ಪರಿಗಣಿತವಾಗಿದೆ. ಅನುಪಮಾ ನಿರಂಜನ ಅವರ ‘ದಿನಕ್ಕೊಂದು ಕಥೆ’ ಮಕ್ಕಳಿಗಾಗಿ ಬರೆದ 365 ಕಥೆಗಳ ಸಂಪುಟ. ಶಿವರಾಮ ಕಾರಂತರು ‘ಬಾಲ ಪ್ರಪಂಚ’ದ ಮೂಲಕ ಮಕ್ಕಳಿಗಾಗಿ ವಿಜ್ಞಾನಲೋಕದ ವಿಸ್ಮಯಗಳನ್ನು ಮನೆ ಮನೆಗೂ ಮುಟ್ಟಿಸಿದರು.
ಪರಂಪರೆಯ ಸಮೃದ್ಧ ಹಿನ್ನೆಲೆ ಇರುವ ಮಕ್ಕಳ ಸಾಹಿತ್ಯ ಈಗ ಬೆಳವಣಿಗೆ ಕಾಣದೆ ನಿಂತ ನೀರಾಗಿದೆ. ಜನಪ್ರಿಯ ಮಾದರಿಯನ್ನು ಮೈಗೂಡಿಸಿಕೊಂಡಿರುವ ಕನ್ನಡ ಸಾಹಿತ್ಯವಲಯ ಮಕ್ಕಳ ಆಸಕ್ತಿ ಮತ್ತು ಅಭಿರುಚಿಯ ಕಡೆಗೆ ಗಮನ ನೀಡುತ್ತಿಲ್ಲ. ಪತ್ರಿಕೆಗಳಲ್ಲಿ ಅರ್ಧ ಪುಟಕ್ಕಷ್ಟೇ ಮಕ್ಕಳ ಸಾಹಿತ್ಯ ಸೀಮಿತವಾಗುತ್ತಿದೆ. ಸಾಹಿತ್ಯ ಸಮ್ಮೇಳನಗಳ ಕಾರ್ಯಕ್ರಮಗಳಲ್ಲಿ ಮಕ್ಕಳ ಸಾಹಿತ್ಯಕ್ಕೆ ವೇದಿಕೆ ದೊರೆಯುತ್ತಿಲ್ಲ. ಈ ಮೊದಲು ಪ್ರಕಟವಾದ ಮಕ್ಕಳ ಪುಸ್ತಕಗಳನ್ನು ಪುನರ್ ಮುದ್ರಿಸುವ ಕೆಲಸಕ್ಕೆ ಸಾಹಿತ್ಯ ಪರಿಷತ್ತು ಚಾಲನೆ ನೀಡಬೇಕಿದೆ.
ಇನ್ನು ಮಕ್ಕಳ ಸಿನಿಮಾಗಳ ವಿಷಯದಲ್ಲಿ ಆಶಾದಾಯಕ ಬೆಳವಣಿಗೆ ಕಾಣಿಸುತ್ತಿಲ್ಲ. ಪುಟಾಣಿ ಎಜೆಂಟ್ 123, ಸಿಂಹದ ಮರಿಸೈನ್ಯ, ಮಕ್ಕಳ ಸೈನ್ಯ, ಬೆಟ್ಟದ ಹೂ, ನಾಗರ ಹೊಳೆ, ಚಿನ್ನಾರಿಮುತ್ತದಂತಹ ಅತ್ಯುತ್ತಮ ಮಕ್ಕಳ ಸಿನಿಮಾಗಳು ನಿರ್ಮಾಣಗೊಂಡ ಕನ್ನಡ ಬಾಷೆಯಲ್ಲಿ ಈಗ ಮಕ್ಕಳ ಸಿನಿಮಾಗಳ ಕ್ಷಾಮ ದಟ್ಟವಾಗಿ ಆವರಿಸಿದೆ. ಮಕ್ಕಳ ಸಿನಿಮಾದಲ್ಲಿನ ‘ಸ್ವಾಮಿದೇವನೆ ಲೋಕಪಾಲನೆ’ ಎನ್ನುವ ಹಾಡು ಒಂದು ಕಾಲದಲ್ಲಿ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿತ್ತು. ರಾಜಕುಮಾರ್ ಅವರಂತಹ ಜನಪ್ರಿಯ ಕಲಾವಿದ ಮಕ್ಕಳ ಸಿನಿಮಾದ ಪ್ರಾಮುಖ್ಯತೆಯನ್ನು ಅರಿತು ‘ಭಕ್ತ ಪ್ರಹ್ಲಾದ’ ಮತ್ತು ‘ಎರಡು ನಕ್ಷತ್ರಗಳು’ ಎನ್ನುವ ಮಕ್ಕಳ ಸಿನಿಮಾಗಳಲ್ಲಿ ನಟಿಸಿದರು.
ಇತ್ತೀಚಿನ ಮಕ್ಕಳ ಸಿನಿಮಾಗಳು ಮಕ್ಕಳ ಅಭಿರುಚಿ ಮತ್ತು ಆಸಕ್ತಿಗೆ ಪೂರಕವಾಗಿ ನಿರ್ಮಾಣವಾಗುತ್ತಿಲ್ಲ. ಸಿನಿಮಾಗಳಲ್ಲಿ ಬಾಲಕಲಾವಿದರು ಅಭಿನಯಿಸುತ್ತಿರುವ ಪಾತ್ರಗಳು ವಾಸ್ತವಿಕತೆಗೆ ತುಂಬಾ ದೂರವಾಗಿವೆ. ಅಪ್ರಾಪ್ತ ವಯಸ್ಸಿನ ಬಾಲಕ, ಬಾಲಕಿ ಪರಸ್ಪರ ಪ್ರೀತಿಸುವುದು, ಚಿಕ್ಕವಯಸ್ಸಿನಲ್ಲಿ ಅಪರಾಧ ಪ್ರಪಂಚ ಪ್ರವೇಶಿಸುವುದು, ಅಪಾಯಕಾರಿ ಆಯುಧಗಳನ್ನು ಬಳಸುವುದು ಇಂತಹ ದೃಶ್ಯಗಳಲ್ಲಿ ಅಭಿನಯಿಸಲು ಬಾಲಕಲಾವಿದರನ್ನು ಬಳಸಿಕೊಳ್ಳಲಾಗುತ್ತಿದೆ. ಸಹಜ ಬದುಕಿಗೆ ಹತ್ತಿರವಾದ, ಮಕ್ಕಳ ಮನೋವಿಕಾಸಕ್ಕೆ ಪೂರಕವಾದ ಸಿನಿಮಾಗಳ ಸಂಖ್ಯೆ ಕ್ಷೀಣಿಸುತ್ತಿದೆ. ಸಂವಾದ ಕಾರ್ಯಕ್ರಮದಲ್ಲಿ ‘ಸಿನಿಮಾ ನೋಡಿ ಬಂದ ತಕ್ಷಣ ಕೈಯಲ್ಲಿ ಮಚ್ಚು ಹಿಡಿಯಬೇಕೆನಿಸುತ್ತದೆ’ ಎಂದು ಮಗುವೊಂದು ವ್ಯಕ್ತಪಡಿಸಿದ ಅಭಿಪ್ರಾಯ ಸಧ್ಯದ ಕನ್ನಡ ಸಿನಿಮಾರಂಗದ ದುಸ್ಥಿತಿಗೆ ಕನ್ನಡಿ ಹಿಡಿದಂತಿದೆ.
ಸಾಹಿತ್ಯ ಮತ್ತು ಸಿನಿಮಾ ಮಾಧ್ಯಮದ ನಿಷ್ಕ್ರಿಯತೆಯ ಪರಿಣಾಮ ಈಗ ಮಕ್ಕಳು ಸೋಷಿಯಲ್ ಮೀಡಿಯಾವನ್ನು ವ್ಯಾಪಕವಾಗಿ ಉಪಯೋಗಿಸುತ್ತಿರುವರು. ಮನೋರಂಜನೆಯ ಹೆಸರಿನಲ್ಲಿ ಆಧುನಿಕ ತಂತ್ರಜ್ಞಾನದ ಅವಿಷ್ಕಾರಗಳು ಮಕ್ಕಳನ್ನು ದಾರಿ ತಪ್ಪಿಸುತ್ತಿವೆ. ಈ ಸಮಸ್ಯೆಯ ಪರಿಹಾರಕ್ಕಾಗಿ ಮಕ್ಕಳ ಮನೋವಿಕಾಸಕ್ಕೆ ಸಹಾಯಕವಾಗುವಂತಹ ಮಕ್ಕಳ ಸಾಹಿತ್ಯ ಮತ್ತು ಸಿನಿಮಾಗಳು ಕನ್ನಡ ಭಾಷೆಯಲ್ಲಿ ಸಮೃದ್ಧವಾಗಿ ರಚನೆಯಾಗಬೇಕು. ಅಂತಹ ಸಿನಿಮಾ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸಿ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಬೆಳೆಸುವ ಹೊಣೆಗಾರಿಕೆ ಮತ್ತು ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
-ರಾಜಕುಮಾರ ಕುಲಕರ್ಣಿ
Wednesday, November 9, 2022
ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ‘ಗ್ರಂಥಾಲಯ: ಸಾರ್ವಜನಿಕರ ಕೊರತೆಯೇಕೆ?’ ಲೇಖನವನ್ನು ಕೇಳಿ
Saturday, November 5, 2022
ಸಾವು: ಮಾರಾಟಕ್ಕಿಟ್ಟ ಸರಕು?

(ಪ್ರಜಾವಾಣಿ 08.09.2022)
ಪ್ರತಿಯೊಬ್ಬರ ಬದುಕಿನಲ್ಲಿ ಲೋಕಾಂತ ಮತ್ತು ಏಕಾಂತಗಳೆಂಬ ಎರಡು ಪ್ರದೇಶಗಳಿರುತ್ತವೆ ಎಂದಿದ್ದಾರೆ ತಿಳಿದವರು. ಸದಾಕಾಲ ಲೋಕಾಂತದಲ್ಲೇ ಬದುಕುತ್ತಿರುವ ಮನುಷ್ಯನಿಗೆ ಏಕಾಂತವನ್ನು ಪ್ರವೇಶಿಸುವಷ್ಟು ತಾಳ್ಮೆಯಾಗಲಿ ಮತ್ತು ಪುರುಸೊತ್ತಾಗಲಿ ಇಲ್ಲ. ಇಂದಿನ ವೈಭವದ ಆಧುನಿಕ ಜೀವನಶೈಲಿಯಿಂದಾಗಿ ನಿಶ್ಯಬ್ದ ಮತ್ತು ನೀರವ ವಾತಾವರಣದಲ್ಲಿ ಒಬ್ಬಂಟಿಯಾಗಿ ಕುಳಿತು ಮನಸ್ಸನ್ನು ನಿಗ್ರಹಿಸಿಕೊಳ್ಳುತ್ತ ಏಕಾಂತವನ್ನು ಹೊಕ್ಕು ತನ್ನ ವರ್ತನೆಯನ್ನು ವಿಮರ್ಶಿಸಿಕೊಳ್ಳುವ ಆತ್ಮಾವಲೋಕನದ ಗುಣವನ್ನು ಮನುಷ್ಯ ಕಳೆದುಕೊಂಡಿರುವನು. ಆತ್ಮಪರೀಕ್ಷೆ, ಆತ್ಮವಿಮರ್ಶೆಗೆ ಇವತ್ತು ಮನುಷ್ಯ ಒಳಗಾಗುತ್ತಿಲ್ಲ. ಸಮಾಜದಲ್ಲಿ ಕ್ರೌರ್ಯ ಮತ್ತು ಹಿಂಸೆ ವಿಜೃಂಭಿಸುತ್ತಿವೆ. ಅದಕ್ಕೆಂದೆ ಇಲ್ಲಿ ಸಾವು ಕೂಡ ಮಾರುಕಟ್ಟೆಯಲ್ಲಿ ಮಾರಾಟಕ್ಕಿಟ್ಟ ಸರಕಿನಂತೆ ಗೋಚರಿಸುತ್ತಿದೆ.
ಇತ್ತೀಚೆಗೆ ಒಂದು ವಾರದ ಅವಧಿಯಲ್ಲಿ ನನ್ನ ಅನುಭವಕ್ಕೆ ಬಂದ ಎರಡು ಪ್ರಸಂಗಗಳು ಇದನ್ನು ಸಾಕ್ಷೀಕರಿಸುವಂತಿವೆ. ಬೆಳಗ್ಗಿನ ವಾಕಿಂಗ್‍ನಲ್ಲಿ ಆಗಾಗ ಭೇಟಿಯಾಗುವ ಪರಿಚಯದ ಹಿರಿಯರೊಬ್ಬರು ಇತ್ತೀಚೆಗೆ ಹದಿನೈದು ದಿನಗಳಿಂದ ಕಾಣಿಸದೆಯಿದ್ದವರು ಮೊನ್ನೆ ಧಿಡೀರೆಂದು ಪ್ರತ್ಯಕ್ಷರಾದರು. ಹದಿನೈದು ದಿನಗಳ ಅವರ ಅನುಪಸ್ಥಿತಿಗೆ ಕಾರಣ ಕೇಳಿದಾಗ ಅವರು ಹೇಳಿದ್ದಿಷ್ಟು-‘ಎರಡು ವಾರಗಳ ಹಿಂದೆ ಇದ್ದಕ್ಕಿದ್ದಂತೆ ಕಾಯಿಲೆಯಿಂದ ಆರೋಗ್ಯದಲ್ಲಿ ಏರುಪೇರಾಗಿ ಸಾವಿನ ಭಯ ಮನಸ್ಸನ್ನು ಆವರಿಸಿತು. ಬದುಕಿನಲ್ಲಿ ಇನ್ನು ಅನುಭವಿಸಬೇಕಾದದ್ದು ಸಾಕಷ್ಟಿದೆ. ಸಾವಿನ ಭೀತಿಯಿಂದ ಪಾರಾಗಲು ಅನೇಕ ದೇವಸ್ಥಾನಗಳಿಗೆ ಭೇಟಿ ನೀಡಿ ಕಾಣಿಕೆ ಸಮರ್ಪಿಸಿದೆ. ತಿಮ್ಮಪ್ಪನಿಗೆ ಕಿರೀಟ, ಹನುಮಪ್ಪನಿಗೆ ಗದೆ, ಫಕೀರಪ್ಪನಿಗೆ ಹೂವಿನ ಬುಟ್ಟಿ, ಮಾರಮ್ಮನಿಗೆ ಸೀರೆ ಸಲ್ಲಿಸಿ ಮನೆಯಲ್ಲಿ ಹೋಮ ಹವನಗಳನ್ನು ಮಾಡಿದ್ದಾಯಿತು. ಜೊತೆಗೆ ಆಸ್ಪತ್ರೆಯ ಖರ್ಚು ಬೇರೆ. ಲಕ್ಷಾಂತರ ರೂಪಾಯಿಗಳು ಕೈಬಿಟ್ಟು ಹೋದರೂ ಚಿಂತೆಯಿಲ್ಲ ಸಾವಿನ ಭಯ ಈಗ ದೂರಾಗಿದೆ’.
ಈ ಮೇಲಿನ ಘಟನೆಗೆ ಭಿನ್ನವಾದ ಘಟನೆಯೊಂದು ಸರಿಸುಮಾರು ಇದೇ ಸಂದರ್ಭದಲ್ಲಿ ಜರುಗಿತು. ನನ್ನ ಪಕ್ಕದ ಮನೆಯ ವಯಸ್ಸಾದ ಹಿರಿಯರು ಎದೆನೋವಿನಿಂದ ಹಾಸಿಗೆಹಿಡಿದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿರುವರು. ಅವರ ಆರೋಗ್ಯ ವಿಚಾರಿಸಲೆಂದು ಹೋದಾಗ ಅವರು ನುಡಿದಿದ್ದು ಹೀಗೆ-‘ಈಗೀಗ ಸಾವು ಯಾವ ಸಮಯದಲ್ಲಾದರೂ ಬರಬಹುದೆಂದು ಅನಿಸಲಾರಂಭಿಸಿದೆ. ಆಸ್ಪತ್ರೆಯ ಬೆಡ್ ಮೇಲೆ ಮಲಗಿರುವಾಗ ಬದುಕಿನ ಸತ್ಯ ದರ್ಶನವಾಯಿತು. ನಾನು ಇದುವರೆಗೂ ಬದುಕಿನಲ್ಲಿ ಸಾಧಿಸಿರುವುದೇನು ಎಂದು ಅನಿಸಲಾರಂಭಿಸಿದೆ. ಇದುವರೆಗಿನ ಆಯುಷ್ಯನ್ನು ಸ್ವಂತದ ಬದುಕನ್ನು ಕಟ್ಟಿಕೊಳ್ಳುವುದರಲ್ಲೇ ಕಳೆದದ್ದಾಯಿತು. ಈಗ ಉಳಿದಿರುವ ಆಯುಷ್ಯದಲ್ಲಿ ಬೇರೆಯವರಿಗಾಗಿ ಬದುಕಬೇಕೆನ್ನುವ ಪ್ರಜ್ಞೆ ಮೂಡಿದೆ. ದುಡಿದು ಗಳಿಸಿದ್ದರಲ್ಲಿ ಒಂದಿಷ್ಟನ್ನು ಸಮಾಜಕ್ಕೆ ನೀಡಬೇಕೆನ್ನುವ ಬಯಕೆ ಪ್ರಬಲವಾಗುತ್ತಿದೆ’.
‘ಜಾತಸ್ಯ ಮರಣಂ ಧ್ರುವಂ’ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಹುಟ್ಟು ಆಕಸ್ಮಿಕ ಆದರೆ ಸಾವು ಅನಿವಾರ್ಯ ಎಂದಿರುವರು ಚಿಂತಕರು. ‘ಮೋಹದ ಹೆಂಡತಿ ತೀರಿದ ಬಳಿಕ ಮಾವನ ಮನೆಯ ಹಂಗಿನ್ಯಾತಕೋ’ ಎಂದು ಅನುಭಾವಿಗಳು ಸಾವಿನ ಅನಿವಾರ್ಯತೆಯನ್ನು ತಿಳಿಸಿಕೊಟ್ಟಿರುವರು. ‘ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ’ ಎಂದು ಹಾಡಿರುವರು ಕನಕದಾಸರು. ಇಷ್ಟೆಲ್ಲ ಹಿನ್ನೆಲೆಯಿದ್ದೂ ಮನುಷ್ಯ ಚಿರಂಜೀವಿತ್ವದ ಭಾವನೆಯಿಂದ ಸೇಡು, ದ್ವೇಷ, ಕ್ರೌರ್ಯ, ಶೋಷಣೆಯ ಗುಣಗಳನ್ನು ಮೈಗೂಡಿಸಿಕೊಂಡು ಮೃಗೀಯವರ್ತನೆಯನ್ನು ತೋರಿಸುತ್ತಿರುವನು. ಅಮರತ್ವದ ಭಾವನೆ ಮುನ್ನೆಲೆಗೆ ಬಂದು ಬದುಕಿನ ಕ್ಷಣಿಕತೆಯ ಅರಿವು ಹಿನ್ನೆಲೆಗೆ ಸರಿದಿದೆ. ವಿಮರ್ಶಕ ಜಿ.ಎಸ್.ಆಮೂರ ಅವರು ಹೇಳಿದಂತೆ ಮನುಷ್ಯ ನಾಗರಿಕನಾಗಿ ಎಷ್ಟೇ ಮುಂದುವರೆದರೂ ಅವನ ಮೂಲ ಪ್ರವೃತ್ತಿಗಳಾದ ಕಾಮ, ಕ್ರೋಧ ಮತ್ತು ದ್ವೇಷ ಇವುಗಳಿಂದ ಬಿಡುಗಡೆ ಹೊಂದಲು ಇವತ್ತಿಗೂ ಸಾಧ್ಯವಾಗುತ್ತಿಲ್ಲ. ಒಟ್ಟಾರೆ ನ್ಯಾಯ-ಅನ್ಯಾಯ, ಸತ್ಯ-ಸುಳ್ಳು, ಅಹಿಂಸೆ-ಹಿಂಸೆ, ನೈತಿಕ-ಅನೈತಿಕ ಇವುಗಳ ನಡುವಣ ಗೆರೆ ಬಹಳ ತೆಳುವಾಗುತ್ತಿದ್ದು ಮನುಷ್ಯ ಸಾವಿನ ಪ್ರಜ್ಞೆಯನ್ನು ಕಳೆದುಕೊಳ್ಳುತ್ತಿರುವನು.
ಸಾವೆನ್ನುವುದು ಸತ್ತ ನಂತರವೂ ಬೇರೆಯವರ ಮೂಲಕ ಬದುಕಲು ದಂಡನೆಗೆ ಒಳಗಾದಂತೆ ಎಂದಿರುವ ಫ್ರೆಂಚ್ ಲೇಖಕ ಸಾರ್ತ್ರೆ ಸಾವನ್ನು ಅರ್ಥೈಸಿದ್ದು ಹೀಗೆ- ‘ಸಾವು ವ್ಯಕ್ತಿಯ ಬಾಳಿನ ಭೂತವನ್ನು ಬದಲಾಯಿಸಲು ಒಂದು ನಿರ್ಧಿಷ್ಟತೆ ತಂದುಬಿಡುತ್ತದೆ. ಆದ್ದರಿಂದ ಸತ್ತ ನಂತರದ ಬಾಳು ಬದುಕಿರುವವರ ಸ್ವತ್ತಾಗುತ್ತದೆ. ಅದನ್ನು ಅವರು ಬೇಕಾದರೆ ಉಳಿಸಿಕೊಳ್ಳಬಹುದು ಅಥವಾ ಅದನ್ನು ಕತ್ತಲೆಗೆ ತಳ್ಳುವುದರ ಮೂಲಕ ಅದಕ್ಕೆ ಎರಡನೆಯ ಸಾವನ್ನು ತರಬಹುದು’.
ಸಾವು ಬರಹಗಾರರನ್ನು ಮತ್ತು ಚಿಂತಕರನ್ನು ನಿರಂತರವಾಗಿ ಕಾಡಿದ ವಸ್ತುವಾಗಿದೆ. ಕತೆ, ಕಾದಂಬರಿ, ಆತ್ಮಕಥೆಗಳಲ್ಲಿ ಸಾವು ಮತ್ತೆ ಮತ್ತೆ ಗಾಢವಾಗಿ ಚರ್ಚೆಗೊಳಗಾಗಿದೆ. ಪಿ.ಲಂಕೇಶ್ ತಮ್ಮ ಆತ್ಮಚರಿತ್ರೆ ‘ಹುಳಿಮಾವಿನ ಮರ’ದಲ್ಲಿ ಸಾವಿನ ಕುರಿತು ಹೀಗೆ ಹೇಳಿಕೊಂಡಿರುವರು, ‘ನನ್ನ ಗಾಢ, ದುಗುಡದ ವೇಳೆಯಲ್ಲಿ ಸಾವಿನ ಹತ್ತಿರ ಇದ್ದಂತಿದ್ದಾಗ ಮುತ್ಸದ್ದಿತನ, ಹೊಂದಾಣಿಕೆ, ಖ್ಯಾತಿ, ಪ್ರಶಸ್ತಿ ಮುಂತಾದವೆಲ್ಲ ಬದುಕಿನೆದುರು, ಸಾವಿನೆದುರು ಗೌಣ ಅನ್ನಿಸುತ್ತಿದ್ದಾಗ ನನ್ನ ಬರವಣಿಗೆಯ ರೀತಿಯೂ ಬದಲಾಯಿತು. ಸಾವು ಇನ್ನು ಮೇಲೆ ನನಗೆ ಕೇವಲ ಕತೆಯಾಗದೆ, ಬದುಕುವ ಅಂತ್ಯ ಎಂಬ ಸತ್ಯ ಮಾತ್ರವಾಗದೆ ನನ್ನ ಉಳಿದ ದಿನಗಳಲ್ಲಿ, ಬರೆದ ಸಾಲುಗಳಲ್ಲಿ ನೆಲೆಸಿ ಎಚ್ಚರಿಸುವ ಛಾಯೆ ಅನ್ನಿಸತೊಡಗಿತು’.
ಸಾವಿನ ನೆನಪು ಬದುಕನ್ನು ಅರ್ಥಪೂರ್ಣವಾಗಿಸಿದೆ ಎಂದು ಧನಾತ್ಮಕವಾಗಿ ಯೋಚಿಸುವವರೂ ನಮ್ಮ ನಡುವಿದ್ದಾರೆ. ಮನುಷ್ಯ ಸಾಯದೆ ಇದ್ದರೆ ಈ ಜಗತ್ತು ಎಷ್ಟೊಂದು ಅಸಹ್ಯವಾಗಿರುತ್ತಿತ್ತು ಎಂದು ಚಿಂತಿಸಿದ ಅನಂತಮೂರ್ತಿ ಅವರ ಮಾತಿನಲ್ಲಿ ಸಾವಿನಪ್ರಜ್ಞೆ ಇದೆ. ಸಾವಿಲ್ಲದ ಮನೆಯ ಸಾಸಿವೆಕಾಳು ತರಲು ಹೇಳಿ ಕಿಸಾಗೌತಮಿಗೆ ಸಾವಿನ ಅಸ್ತಿತ್ವದ ಅರಿವು ಮೂಡಿಸಿದ ಬುದ್ಧನ ನಾಡಿನಲ್ಲಿ ಸಾವು ನಮ್ಮನ್ನು ಎಚ್ಚರಿಸುವ ಪ್ರಜ್ಞೆಯಾಗಬೇಕು. ಮೌಲ್ಯಗಳು ಅಪಮೌಲ್ಯಗೊಳ್ಳುತ್ತ ಅನೈತಿಕತೆ, ಅಪ್ರಾಮಾಣಿಕತೆಗಳು ವಿಜೃಂಭಿಸುತ್ತಿರುವಾಗ ಸಾವಿನ ಪ್ರಜ್ಞೆಯಲ್ಲಿ ಬದುಕು ಅರಳಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.
-ರಾಜಕುಮಾರ ಕುಲಕರ್ಣಿ
Thursday, October 6, 2022
ಪ್ರಜಾವಾಣಿ ಕನ್ನಡ ಧ್ವನಿಯಲ್ಲಿ 'ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ' ಲೇಖನವನ್ನು ಕೇಳಿ
ದಿನಾಂಕ ೦೪.೧೦.೨೦೨೨ ರಂದು ಪ್ರಜಾವಾಣಿ ಪತ್ರಿಕೆಯ 'ಸಂಗತ' ಅಂಕಣದಲ್ಲಿ ನನ್ನ 'ಮಕ್ಕಳ ಪಾಲನೆ: ಸಾಂಸ್ಕೃತಿಕ ಲೋಕದ ಹೊಣೆ' ಲೇಖನ ಪ್ರಕಟವಾಯಿತು. ಈ ಲೇಖನ ದಿನಾಂಕ ೦೫.೧೦.೨೦೨೨ ರಂದು ಪ್ರಜಾವಾಣಿಯ ಕನ್ನಡ ಧ್ವನಿಯಲ್ಲಿ ಬಿತ್ತರವಾಯಿತು. ಕೇಳಲು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಥವಾ ವೆಬ್ ವಿಳಾಸವಾಗಿ ಉಪಯೋಗಿಸಿ.
https://open.spotify.com/
-ರಾಜಕುಮಾರ ಕುಲಕರ್ಣಿ
Monday, October 3, 2022
ಗಾಳಕ್ಕೆ ಸಿಲುಕುವುದು ಬೇಡ
(ಪ್ರಜಾವಾಣಿ 04.08.2022 ರಲ್ಲಿ ಪ್ರಕಟ)
ಲೇಖಕ ಎಂಥೋನಿ ಸ್ಟೊರ್ ಮನುಷ್ಯನ ಕ್ರೂರತ್ವವನ್ನು ಕುರಿತು ಹೇಳಿದ್ದು ಹೀಗೆ-‘ರೋಡೆಂಟ್ ಜಾತಿಯ ಕೆಲವು ಪ್ರಾಣಿಗಳನ್ನು ಬಿಟ್ಟರೆ ಕಶೇರುಕ ವರ್ಗದ ಯಾವ ಪ್ರಾಣಿಯೂ ತನ್ನದೇ ವರ್ಗದ ಇನ್ನೊಂದು ಪ್ರಾಣಿಯನ್ನು ಅಭ್ಯಾಸ ಬಲದಿಂದ ಕೊಲ್ಲುವ ಉದಾಹರಣೆಯಿಲ್ಲ. ಕೊಲ್ಲುವ ಸುಖಕ್ಕಾಗಿಯೇ ಕೊಲ್ಲುವ ಪ್ರಾಣಿ ಮನುಷ್ಯನನ್ನು ಬಿಟ್ಟು ಇನ್ನೊಂದಿಲ್ಲ. ನಮ್ಮ ವಿಷಾದಕ್ಕೆ ಕಾರಣವಾಗುವ ಸಂಗತಿಯೆಂದರೆ ಪೃಥ್ವಿಯ ಮೇಲಿನ ಪ್ರಾಣಿವರ್ಗಗಳಲ್ಲೇ ಅತ್ಯಂತ ಕ್ರೂರ ಹಾಗೂ ನಿಷ್ಠುರವಾದದ್ದೆಂದರೆ ಮನುಷ್ಯ ಜಾತಿಯೇ’.
ಮನುಷ್ಯ ಮನುಷ್ಯನನ್ನೇ ಬೇಟೆಯಾಡುವ, ಕೊಲ್ಲುವ, ಹಿಂಸಿಸುವ, ಶೋಷಿಸುವ ಪ್ರವೃತ್ತಿ ಇಂದು ನಿನ್ನೆಯದಲ್ಲ. ಅನಾದಿಕಾಲದಿಂದಲೂ ಮನುಷ್ಯನಲ್ಲಿ ಈ ಗುಣಗಳು ಅವ್ಯಾಹತವಾಗಿ ಮುಂದುವರೆದುಕೊಂಡು ಬಂದಿವೆ. ಪ್ರೀತಿ, ಕರುಣೆ, ಅಂತ:ಕರಣಗಳಿರಬೇಕಾದ ಜಾಗದಲ್ಲಿ ದ್ವೇಷ, ಸೇಡು, ಹಿಂಸೆಗಳು ವಿಜೃಂಭಿಸುತ್ತಿವೆ. ಮನುಷ್ಯ ನಾಗರಿಕನಾದಂತೆಲ್ಲ ಅವನ ಬುದ್ಧಿ, ಭಾವಗಳು ಸಂಕುಚಿತಗೊಳ್ಳುತ್ತಿವೆ. ಮನುಷ್ಯ ಮನುಷ್ಯರ ನಡುವಣ ಸಂಬಂಧಗಳನ್ನು ಲಾಭ, ನಷ್ಟಗಳ ಲೆಕ್ಕಾಚಾರದಿಂದ ನೋಡಲಾಗುತ್ತಿದೆ. ಬದುಕಿನಲ್ಲಿ ವ್ಯಾಪಾರ ಮನೋಧರ್ಮ ಮುನ್ನೆಲೆಗೆ ಬಂದು ತ್ಯಾಗ, ಪ್ರೀತಿ, ಸಹಿಷ್ಣುತೆಯ ಗುಣಗಳು ಹಿನ್ನೆಲೆಗೆ ಸರಿದಿವೆ.
ಮನಸ್ಸಿಗೆ ನೋವು ನೀಡುವ ಪ್ರವೃತ್ತಿ ನಾಗರಿಕ ಸಮಾಜದಲ್ಲೇ ಹೆಚ್ಚುತ್ತಿದೆ. ದೈಹಿಕ ನೋವಿಗಿಂತ ಮಾನಸಿಕ ನೋವು ಅತ್ಯಂತ ಅಪಾಯಕಾರಿ. ಮನುಷ್ಯ ತನ್ನ ದೇಹದ ಮೇಲಿನ ಗಾಯಗಳನ್ನು ಮರೆಯಬಹುದು ಆದರೆ ಮನಸ್ಸಿಗಾಗುವ ಗಾಯ ಬೇಗನೆ ಮಾಯುವಂತಹದ್ದಲ್ಲ. ಅಸಂವೇದಿಯಾಗುತ್ತಿರುವ ಮನುಷ್ಯ ನಗುವಿನ ಮುಖವಾಡದ ಹಿಂದೆ ಹಲ್ಲುಮಸೆತದ ಕ್ರೌರ್ಯವನ್ನು ಪ್ರದರ್ಶಿಸುತ್ತಿರುವನು.
ಮನಶಾಸ್ತ್ರಜ್ಞ ಎರಿಕ್ ಬರ್ನ್ ಪರಿಚಯಿಸಿದ ‘ಟ್ರಾನ್ಸಾಕ್ಷನಲ್ ಆ್ಯನಾಲಿಸಿಸ್’ ಎನ್ನುವ ಪರಿಕಲ್ಪನೆ ಮನುಷ್ಯನೇ ಸೃಷ್ಟಿಸಿಕೊಂಡಿರುವ ಈ ಕ್ರೂರ ವ್ಯವಸ್ಥೆಯಲ್ಲಿ ಮನುಷ್ಯ ಮನುಷ್ಯನಂತೆ ಬದುಕುವುದನ್ನು ಹೇಳಿಕೊಡುತ್ತದೆ. ಈ ಪರಿಕಲ್ಪನೆಯನ್ವಯ ಮನುಷ್ಯ ಬೇರೆಯವರೊಂದಿಗೆ ಮಾತನಾಡುವ ಪೂರ್ವದಲ್ಲಿ ವರ್ತನೆ, ಆಲೋಚನೆ, ತನ್ನೊಳಗಿನ ಸಂಘರ್ಷ ಇವುಗಳ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು ಎನ್ನುತ್ತಾರೆ ಮನೋವಿಜ್ಞಾನಿಗಳು. ಸಂಭಾಷಣೆಯ ಸಂದರ್ಭ ತನ್ನ ಮಾತು ಮತ್ತು ವರ್ತನೆ ಎದುರಿಗಿರುವ ವ್ಯಕ್ತಿಗೆ ನೋವನ್ನುಂಟು ಮಾಡದಂತೆ ಪೂರ್ವಸಿದ್ಧತೆಯೊಂದಿಗೆ ಮಾತಿಗಿಳಿಯುವುದೆ ‘ಟ್ರಾನ್ಸಾಕ್ಷನಲ್ ಆ್ಯನಾಲಿಸಿಸ್’ನ ಪ್ರಮುಖ ಲಕ್ಷಣ. ನಾಗರಿಕತೆಯ ವೇಷ ತೊಟ್ಟು ಅನಾಗರಿಕರಂತೆ ಮನುಷ್ಯರು ವರ್ತಿಸುತ್ತಿರುವ ಇವತ್ತಿನ ದಿನಗಳಲ್ಲಿ ಎರಿಕ್ ಬರ್ನ್ ಪರಿಚಯಿಸಿದ ಈ ಪರಿಕಲ್ಪನೆಯನ್ನು ಅರಿಯುವುದು ತುಂಬ ಅಗತ್ಯವಾಗಿದೆ.
ನನ್ನ ಪರಿಚಯದ ಹಿರಿಯರೊಬ್ಬರು ಆಗಾಗ ಹೇಳುವ ಮಾತಿದು-‘ನನ್ನ ಮನಸ್ಸಿಗೆ ನೋವಾದಾಗ ಅಥವಾ ಮಾಡಬೇಕೆಂದಿರುವ ಕೆಲಸದಲ್ಲಿ ಸೋಲು ಎದುರಾದಾಗ ನಾನು ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಪುಸ್ತಕವನ್ನು ಓದುತ್ತೇನೆ. ಆಗ ನೋವು ಮತ್ತು ಸೋಲನ್ನು ಮೆಟ್ಟಿ ನಿಲ್ಲುವ ಶಕ್ತಿಯನ್ನು ಈ ಪುಸ್ತಕದ ಓದು ನನಗೆ ತಂದು ಕೊಡುತ್ತದೆ. ನನಗೇ ಗೊತ್ತಿಲ್ಲ ಈ ಪುಸ್ತಕವನ್ನು ನಾನು ಅದೆಷ್ಟು ಬಾರಿ ಓದಿರುವೆನೆಂದು’. ಈ ಮಾತು ಸಾಹಿತ್ಯಕ್ಕಿರುವ ಶಕ್ತಿಗೊಂದು ದೃಷ್ಟಾಂತ. ಅನುದಿನದ ಅಂತರಗಂಗೆಯಂತೆ ಸಾಹಿತ್ಯ ಜನಮಾನಸದಲ್ಲಿ ಹಾಸುಹೊಕ್ಕಾಗಿ ಪ್ರವಹಿಸುತ್ತಲೇ ಇದೆ. ಅದಕ್ಕಾಗಿಯೇ ಓದು ಬಹುಮುಖ್ಯ. ಅದನ್ನು ಎಲ್ಲರೂ ರೂಢಿಸಿಕೊಳ್ಳಬೇಕು.
ಸಾರ್ವಜನಿಕ ಜೀವನದಲ್ಲಿ ಟೀಕೆ-ಟಿಪ್ಪಣೆಗಳ ಗುಣಮಟ್ಟ ಕುಸಿದಿರುವುದಕ್ಕೆ ಓದಿನ ಕೊರತೆಯೂ ಒಂದು ಪ್ರಮುಖ ಕಾರಣ. ಶಾಸನಸಭೆ ಕಲಾಪದ ಗುಣಮಟ್ಟ ಕೆಟ್ಟಿರುವುದಕ್ಕೆ ಕೂಡ ಇದೇ ಕಾರಣ. ಭಾಷೆಗೆ ಇರುವ ಸೊಬಗು ಮತ್ತು ಘನತೆಯನ್ನು ಅರಿಯದವರು ಅದನ್ನು ಹೇಗೆ ಬೇಕಾದರೂ ಬಳಸಬಲ್ಲರು. ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎನ್ನುವ ಬಸವಣ್ಣನವರ ವಚನವು ನಮ್ಮ ನುಡಿ ಹೇಗಿರಬೇಕು ಮತ್ತು ಮನುಷ್ಯ ಹೇಗೆ ಬಾಳಬೇಕು ಎನ್ನುವುದನ್ನು ಸೂಚಿಸುತ್ತದೆ. ದಿನಕರ ದೇಸಾಯಿ ಅವರ ‘ಹಚ್ಚುವುದಾದರೆ ದೀಪ ಹಚ್ಚು, ಬೆಂಕಿ ಹಚ್ಚಬೇಡ. ಆರಿಸುವುದಾದರೆ ಬೆಂಕಿ ಆರಿಸು, ದೀಪ ಆರಿಸಬೇಡ’ ಎಂಬ ಈ ಸಾಲು ಬದುಕಿನ ಸಾರ್ಥಕ್ಯದ ಬಗೆಗೆ, ಬದುಕನ್ನು ಗ್ರಹಿಸುವ ದೃಷ್ಟಿಕೋನ ಹೇಗಿರಬೇಕು ಎಂಬುದರ ಕುರಿತ ಹೇಳುತ್ತದೆ.
ಕಾಮನ್‍ವೆಲ್ತ್ ಕ್ರೀಡಾಕೂಟ ನಡೆಯುತ್ತಿದೆ. ಅಲ್ಲಿನ ಆಟೋಟಗಳಿಂದ ಸ್ಫೂರ್ತಿ ಪಡೆಯೋಣ. ಮಕ್ಕಳನ್ನು ಆ ದಾರಿಯಲ್ಲಿ ನಡೆಯುವಂತೆ ಹುರಿದುಂಬಿಸೋಣ. ಕನ್ನಡದ ಸಿನಿಮಾಗಳು ರಾಷ್ಟ್ರಮಟ್ಟದಲ್ಲಿ ಸುದ್ಧಿಯಾಗುತ್ತಿವೆ. ಒಳ್ಳೆಯ ಸಿನಿಮಾ ನೋಡಿ ಖುಷಿಪಡೋಣ. ರಾಜಕಾರಣವನ್ನು ಸಹನೀಯಗೊಳಿಸಿದ ಮಹನೀಯರನ್ನು ನೆನೆದು ಅಂತಹವರಿಗಾಗಿ ಹುಡುಕೋಣ. ಇದು ಈ ಕ್ಷಣದ ಅಗತ್ಯ.
‘ಮೊಳಕೆಯೊಡೆಯಬೇಕು, ಸಸಿಯಾಗಿ-ಗಿಡವಾಗಿ-ಹೂವಾಗಿ ಕಣ್ತೆರೆಯಬೇಕು. ಮೇಲಿನ ಸೂರ್ಯನ ಬೆಳಕು ಕಾಣುತ್ತ ತಾನೇ ಬೆಳಕಾಗಬೇಕು ಎನ್ನುವ ಬೀಜದ ಬಯಕೆಯ ಸುಳಿವು ಬೀಜ ಬಿದ್ದ ಮಣ್ಣಿಗಿರುವುದು ಸಾಧ್ಯವೆ?’ ಸಾಹಿತ್ಯದ ಇಂಥ ಸಾಲುಗಳೇ ಬದುಕಬೇಕು, ಸಾಧಿಸಬೇಕೆಂಬ ನಮ್ಮೊಳಗಿನ ಜೀವಸೆಲೆ ಬತ್ತದಂತೆ ನಿರಂತರ ನೀರಹನಿ ಹೊಯ್ದು ಪೋಷಿಸುತ್ತಿವೆ.
‘ನಾವು ಎಷ್ಟೇ ಸಮರ್ಥಿಸಿಕೊಂಡರೂ ನಮ್ಮ ಬೈಗುಳಕ್ಕೆ-ದ್ವೇಷಕ್ಕೆ ಪಾತ್ರವಾದ ವ್ಯಕ್ತಿಯಾಗಲಿ, ವಸ್ತುವಾಗಲಿ ಜಗತ್ತಿನಲ್ಲಿ ಇಲ್ಲ. ದ್ವೇಷಕ್ಕೆ ಅಧಿಕಾರಿ ಇದ್ದಾನೆ, ವಸ್ತು ಇಲ್ಲ. ಇಲ್ಲಿ ಎಲ್ಲವೂ ಪ್ರೀತಿಗೆ ಯೋಗ್ಯವಾದದ್ದೇ ಪ್ರೀತಿಸುವ ತಾಕತ್ತು ನಮಗೆ ಇದ್ದಲಿ’ ಎಂದಿರುವರು ಯಶವಂತ ಚಿತ್ತಾಲರು.
ರಾಜಕೀಯ ಲಾಭಕ್ಕಾಗಿ ಕೆಲವರು ಒಡಕಿನ ಬೀಜಗಳನ್ನು ಬಿತ್ತುತ್ತಾರೆ. ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ರಾಜಕೀಯದಾಟಗಳು ಮತ್ತೂ ಹೆಚ್ಚಬಹುದು. ಮತಗಳಿಕೆಯ ಗಾಳಕ್ಕೆ ನಾವು ಸಿಲುಕುವುದು ಬೇಡ. ಮನದ ನೋವಿಗೆ ಮುಲಾಮು ಹಚ್ಚುವ ಕೆಲಸ ಮಾಡೋಣ.
-ರಾಜಕುಮಾರ ಕುಲಕರ್ಣಿ
Friday, September 2, 2022
ಮೆದುಳಿಗೆ ಇಳಿಯುತ್ತಿದೆಯೇ ಮಾಹಿತಿ?
(೦೫.೦೭.೨೦೨೨ ರ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ)
ಇದು ಎರಡು ದಶಕಗಳ ಹಿಂದಿನ ಮಾತು-ಪದವಿ ತರಗತಿಯ ವಿದ್ಯಾರ್ಥಿಗಳಿಗೆ ನಾನು ಆಕ್ಸ್‍ಫರ್ಡ್ ಇಂಗ್ಲಿಷ್ ನಿಘಂಟುವಿನ ಸಂಪಾದಕ ಜೇಮ್ಸ್ ಮರ್ರೆ ಕುರಿತು ಪಾಠ ಮಾಡಬೇಕಿತ್ತು. ಬೃಹತ್ ಗಾತ್ರದ ಆಕ್ಸ್‍ಫರ್ಡ್ ಇಂಗ್ಲಿಷ್ ನಿಘಂಟುವಿನ ಯಾವ ಪುಟದಲ್ಲೂ ಅದರ ಸಂಪಾದಕ ಜೇಮ್ಸ್ ಮರ್ರೆ ಕುರಿತು ಹೆಚ್ಚಿನ ಮಾಹಿತಿ ಇರಲಿಲ್ಲ. ಕೊನೆಗೆ ಎರಡು ದಿನಗಳ ಕಾಲ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಭೇಟಿ ನೀಡಿ ಹಲವಾರು ಪರಾಮರ್ಶನ ಪುಸ್ತಕಗಳನ್ನು ಪರಿಶೀಲಿಸಿ ಮಾಹಿತಿಯನ್ನು ಹೆಕ್ಕಿ ತೆಗೆದಾಗ ಸಿಕ್ಕ ಮಾಹಿತಿ ಅರ್ಧಪುಟದಷ್ಟಿತ್ತು.
ಇಂಟರ್‍ನೆಟ್ ಹೆಚ್ಚು ಬಳಕೆಯಿಲ್ಲದ ಕಾಲದಲ್ಲಿ ಮಾಹಿತಿಯ ಶೋಧನೆ ಹೆಚ್ಚು ಸಮಯ ಮತ್ತು ಶ್ರಮವನ್ನು ತೆಗೆದುಕೊಳ್ಳುತ್ತಿತ್ತು. ಆದರೆ ಆ ಎರಡು ದಿನಗಳ ಅನೇಕ ಪುಸ್ತಕಗಳ ಓದು ಹಲವು ವಿಷಯಗಳನ್ನು ತಿಳಿದುಕೊಳ್ಳಲು ಸಹಾಯವಾಯಿತು. ಇಂದು ಪರಿಸ್ಥಿತಿ ಹಿಂದಿನಂತಿಲ್ಲ- ಇಂಟರ್‍ನೆಟ್ ಬಳಕೆ ವ್ಯಾಪಕವಾಗಿದ್ದು ಜಾಲತಾಣದಲ್ಲಿ ಜೇಮ್ಸ್ ಮರ್ರೆ ಹೆಸರು ಟೈಪಿಸಿದ ಕ್ಷಣಾರ್ಧದಲ್ಲಿ ಹತ್ತಾರು ಪುಟಗಳ ಮಾಹಿತಿ ಕಂಪ್ಯೂಟರ್ ಪರದೆಯ ಮೇಲೆ ತೆರೆದುಕೊಳ್ಳುತ್ತದೆ. ಒಂದರ್ಥದಲ್ಲಿ ಮಾಹಿತಿಯು ಓದುಗನ ಬೆರಳ ತುದಿಯಲ್ಲಿದೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ.
ಸಾಮಾನ್ಯ ಮಾಹಿತಿ ಮಾತ್ರವಲ್ಲದೆ ಇಂದು ಸಂಶೋಧನಾ ಲೇಖನಗಳು ಕೂಡ ಓದುಗರಿಗೆ ಉಚಿತವಾಗಿ ಲಭ್ಯವಾಗುತ್ತಿವೆ. ಸ್ಕಿ-ಹಬ್ ಹೆಸರಿನ ಜಾಲತಾಣ ಸಂಶೋಧನಾ ಲೇಖನವೊಂದು ಪ್ರಕಟವಾದ ಕೆಲವೇ ದಿನಗಳಲ್ಲಿ ಓದುಗರ ಕೈಸೇರುವಂತೆ ಮಾಹಿತಿ ಪಡೆಯುವಿಕೆಯನ್ನು ಸರಳಗೊಳಿಸಿದೆ. ಸಾಮಾನ್ಯವಾಗಿ ಸಂಶೋಧನಾ ನಿಯತಕಾಲಿಕೆಗಳ ಜಾಲತಾಣದಿಂದ ಲೇಖನವನ್ನು ಪಡೆಯಲು ಓದುಗ ನಿರ್ಧಿಷ್ಟ ಮೊತ್ತದ ಹಣವನ್ನು ಭರಿಸಬೇಕು. ಆದರೆ ಸ್ಕಿ-ಹಬ್ ಜಾಲತಾಣದ ಮೂಲಕ ಹೊಸ ಸಂಶೋಧನಾ ಲೇಖನಗಳನ್ನು ಕೂಡ ಉಚಿತವಾಗಿ ಪಡೆಯುವ ಸೌಲಭ್ಯವುಂಟು. ಈ ಮಾಹಿತಿ ಸೋರುವಿಕೆಯನ್ನು ತಡೆಗಟ್ಟಲು ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಅಂತರರಾಷ್ಟ್ರೀಯ ನ್ಯಾಯÁಲಯದಲ್ಲಿ ಸ್ಕಿ-ಹಬ್ ಮೇಲೆ ದಾವೆ ಹೂಡಿವೆ.
ಮಾಹಿತಿಯು ಸುಲಭವಾಗಿ ಮತ್ತು ಹೆಚ್ಚಿನ ಪರಿಶ್ರಮವಿಲ್ಲದೆ ದೊರೆಯುತ್ತಿರುವುದರಿಂದ ಇಂದು ಬರವಣಿಗೆಯಲ್ಲಿ ‘ಕತ್ತರಿಸು ಮತ್ತು ಅಂಟಿಸು’ (ಕಟ್ ಆ್ಯಂಡ್ ಪೇಸ್ಟ್) ಸಂಸ್ಕೃತಿಯು ಮುನ್ನೆಲೆಗೆ ಬಂದಿದೆ. ಅತಿಹೆಚ್ಚಿನ ಬರಹಗಾರರು ತಮ್ಮ ಅಧ್ಯಯನದ ವಿಷಯದಲ್ಲಿ ಪ್ರಕಟವಾದ ವಿವಿಧ ಲೇಖನಗಳನ್ನು ಸಂಗ್ರಹಿಸಿ ಪ್ರತಿ ಲೇಖನದಿಂದ ಒಂದಿಷ್ಟು ಮಾಹಿತಿಯನ್ನು ಪಡೆದುಕೊಂಡು ಹೀಗೆ ಕಲೆಹಾಕಿದ ಮಾಹಿತಿಗೆ ಹೊಸ ಲೇಖನದ ಸ್ವರೂಪ ನೀಡುತ್ತಿರುವರು. ಬರಹಗಾರರ ಈ ನಕಲು ಸಂಸ್ಕೃತಿಗೆ ತಡೆ ಹಾಕಲು ಪ್ರಕಾಶಕರು ನಕಲು ಅಥವಾ ಕೃತಿಚೌರ್ಯವನ್ನು ಪತ್ತೆ ಹಚ್ಚಲು ತಂತ್ರಾಂಶಗಳನ್ನು ಉಪಯೋಗಿಸುತ್ತಿರುವರು. ಇಲ್ಲಿ ಜಾಣ ಬರಹಗಾರ ಮೂಲ ಲೇಖನದ ವಾಕ್ಯದಲ್ಲಿನ ಒಂದೆರಡು ಶಬ್ದಗಳನ್ನು ಕೈಬಿಡುವುದರಿಂದಲೊ ಅಥವಾ ಹೊಸ ಶಬ್ದಗಳ ಸೇರ್ಪಡೆಯಿಂದ ತಂತ್ರಾಂಶದ ನಕಲು ಶೋಧನೆಯ ಕಾರ್ಯವನ್ನೇ ಕಷ್ಟಸಾಧ್ಯಗೊಳಿಸುತ್ತಿರುವನು.
ತಂತ್ರಜ್ಞಾನ ಕೊಡಮಾಡುತ್ತಿರುವ ಸೌಲಭ್ಯಗಳಿಂದ ವಿದ್ಯಾರ್ಥಿಗಳು ಶಿಕ್ಷಕರ ಸಹಾಯವಿಲ್ಲದೆ ಅಭ್ಯಾಸಕ್ಕೆ ಅಗತ್ಯವಾದ ಸಾಮಗ್ರಿಗಳನ್ನು ಸುಲಭವಾಗಿ ಕಲೆಹಾಕುತ್ತಿರುವರು. ಪ್ರಾಯೋಗಿಕ ತರಗತಿಗಳಿಗೆ ಹಾಜರಾದರೆ ಸಾಕು ಥಿಯರಿಗೆ ಸಂಬಂಧಿಸಿದ ಸಾಮಗ್ರಿಯನ್ನು ತರಗತಿಗೆ ಹಾಜರಾಗದೇ ಕಲೆಹಾಕಬಹುದೆನ್ನುವ ಆತ್ಮವಿಶ್ವಾಸ ವಿದ್ಯಾರ್ಥಿಗಳಲ್ಲಿ ಇಂದು ನಾವು ಕಾಣುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತಂತ್ರಜ್ಞಾನದ ಮೊರೆ ಹೋಗುತ್ತಿರುವುದರಿಂದ ಕಲಿಕೆ ಎನ್ನುವುದು ಶಿಕ್ಷಕ ಮತ್ತು ವಿದ್ಯಾರ್ಥಿ ಜೊತೆಯಾಗಿ ಪಾಲ್ಗೊಳ್ಳುವ ಚಟುವಟಿಕೆ ಎನ್ನುವ ಮಾತು ಸವಕಲಾಗಿ ಈಗ ಕಲಿಕೆಯು ಏಕಮುಖವಾದ ಕ್ರಿಯೆಯಾಗಿ ಬದಲಾಗುತ್ತಿದೆ.
ತಂತ್ರಜ್ಞಾನ ಅಗಾಧ ಪ್ರಮಾಣದಲ್ಲಿ ಮಾಹಿತಿಯನ್ನು ಉತ್ಪಾದಿಸಲು ಮತ್ತು ಓದುಗರಿಗೆ ಸುಲಭವಾಗಿ ದೊರೆಯಲು ನೆರವಾಗುತ್ತಿರುವ ಸಂದರ್ಭದಲ್ಲೇ ಗುಣಾತ್ಮಕ ಸಂಶೋಧನೆಗಳಾಗುತ್ತಿಲ್ಲ ಎಂದು ಚರ್ಚಿಸುವ ವಿಲಕ್ಷಣ ಸನ್ನಿವೇಶದಲ್ಲಿ ನಾವಿದ್ದೇವೆ. ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಸಮಿತಿ, ಭಾರತೀಯ ತಾಂತ್ರಿಕ ಶಿಕ್ಷಣ ಮಂಡಳಿ ಈ ಉನ್ನತ ಶಿಕ್ಷಣ ಸಮಿತಿಗಳು ಶಿಕ್ಷಕರು ಉದ್ಯೋಗಬಡ್ತಿ ಮತ್ತು ವೇತನಬಡ್ತಿಗಾಗಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದನ್ನು ಕಡ್ಡಾಯಗೊಳಿಸಿವೆ. ಶಿಕ್ಷಕರ ಈ ಅಗತ್ಯವನ್ನು ಮನಗಂಡು ಅನೇಕ ಸಂಶೋಧನಾ ನಿಯತಕಾಲಿಕೆಗಳು ಲೇಖನಗಳನ್ನು ಪ್ರಕಟಿಸಲು ನಿರ್ಧಿಷ್ಟ ಮೊತ್ತದ ಶುಲ್ಕವನ್ನು ನಿಗದಿಪಡಿಸಿವೆ. ಕೆಲವೊಮ್ಮೆ ತುರ್ತುಪರಿಸ್ಥಿತಿಗನುಗುಣವಾಗಿ ಶಿಕ್ಷಕರು ಹೆಚ್ಚುವರಿ ಶುಲ್ಕವನ್ನು ಪಾವತಿಸಿ ತರಾತುರಿಯಲ್ಲಿ ತಮ್ಮ ಸಂಶೋಧನಾ ಲೇಖನಗಳನ್ನು ಶೀಘ್ರವಾಗಿ ಪ್ರಕಟಿಸುತ್ತಿರುವರು. ಶಿಕ್ಷಕರ ವೇತನ ಮತ್ತು ಉದ್ಯೋಗದ ಬಡ್ತಿಯನ್ನೇ ಬಂಡವಾಳವಾಗಿಸಿಕೊಂಡು ಅನೇಕ ನಿಯತಕಾಲಿಕೆಗಳು ಹೆಚ್ಚಿನ ಹಣ ಪಡೆದು ಲೇಖನಗಳನ್ನು ಪ್ರಕಟಿಸುತ್ತಿವೆ. ಈ ಬೆಳವಣಿಗೆಯನ್ನು ನಿಯಂತ್ರಿಸಲು ವಿಶ್ವವಿದ್ಯಾಲಯ ಧನಸಹಾಯ ಆಯೋಗ ನಿರ್ಧಿಷ್ಟ ನಿಯತಕಾಲಿಕೆಗಳಲ್ಲೇ ಲೇಖನಗಳನ್ನು ಪ್ರಕಟಿಸಬೇಕೆನ್ನುವ ನಿಯಮವನ್ನು ಜಾರಿಗೆ ತಂದಿದೆ.
ವಿವಿಧ ಉನ್ನತ ಶಿಕ್ಷಣ ಸಮಿತಿಗಳ ಕಠಿಣ ನಿಯಮಗಳಿಂದಾಗಿ ಸಂಶೋಧನೆಯ ಪ್ರಮಾಣದಲ್ಲಿ ಏರುಗತಿ ಕಂಡುಬರುತ್ತಿದೆಯಾದರೂ ಗುಣಾತ್ಮಕ ಸಂಶೋಧನೆ ಎನ್ನುವುದು ಇನ್ನೂ ಮರಿಚಿಕೆಯಾಗಿಯೆ ಉಳಿದಿದೆ. ವೇತನಬಡ್ತಿ, ಉದ್ಯೋಗಬಡ್ತಿ, ಹುದ್ದೆಯ ನೇಮಕಾತಿಯ ನಿಯಮಗಳ ಚೌಕಟ್ಟಿಗೊಳಪಡಲು ಇಲ್ಲಿ ಬಹುಪಾಲು ಸಂಶೋಧನೆಗಳು ನಡೆಯುತ್ತಿವೆಯೇ ವಿನಾ ರಾಷ್ಟ್ರದ ಪ್ರಗತಿಗೆ ನೆರವಾಗಬಲ್ಲ ನಿಜವಾದ ಅರ್ಥದ ಸಂಶೋಧನೆಗಳು ನಿರೀಕ್ಷಿತ ಪ್ರಮಾಣದಲ್ಲಾಗುತ್ತಿಲ್ಲ. ಸಂಶೋಧನಾ ಪ್ರಬಂಧಗಳು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿನ ಗ್ರಂಥಾಲಯಗಳ ಅಲ್ಮೆರಾಗಳಿಗೆ ಶೋಭೆ ತರುತ್ತಿವೆಯೇ ಹೊರತು ಸಂಶೋಧಕರ ವಲಯದಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿಲ್ಲ.
ಇನ್ನು ಸಾಹಿತ್ಯ ಕೃತಿಗಳನ್ನೂ ಡಿಜಿಟಲೀಕರಣಗೊಳಿಸಿ ಓದುಗರಿಗೆ ಒದಗಿಸುವ ಕಾರ್ಯಕ್ಕೆ ಸಾರ್ವಜನಿಕ ಗ್ರಂಥಾಲಯ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಚಾಲನೆ ದೊರೆತಿದೆ. ಏಕಕಾಲಕ್ಕೆ ಸಾಹಿತ್ಯ ಕೃತಿಯೊಂದು ಡಿಜಿಟಲೀಕರಣದ ರೂಪದಲ್ಲಿ ಹಲವು ಓದುಗರಿಗೆ ಲಭ್ಯವಾಗುವ ಈ ಸೌಲಭ್ಯವನ್ನು ಓದುಗರ ವಲಯ ಒಕ್ಕೊರಲಿನಿಂದ ಸ್ವಾಗತಿಸುತ್ತಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಓದುವ ಸಾಹಿತ್ಯ ಕೃತಿಯೊಂದು ಪುಸ್ತಕ ಓದಿದಂತೆ ಸರಾಗವಾಗಿ ಮನಸ್ಸಿಗಿಳಿಯಲಾರದು ಎನ್ನುವ ಸಮಸ್ಯೆ ಅನೇಕ ಓದುಗರದು. ಎಲೆಕ್ಟ್ರಾನಿಕ್ ಮಾಧ್ಯಮದ ವ್ಯಾಪಕ ಬಳಕೆಯಿಂದ ಪುಸ್ತಕ ಸಂಸ್ಕೃತಿ ನಶಿಸಿಹೋಗಬಹುದೆನ್ನುವ ಆತಂಕ ಒಂದುವರ್ಗದ ಓದುಗರನ್ನು ಕಾಡುತ್ತಿದೆ. ಈ ನಡುವೆ ಮಾಹಿತಿಯ ಸುಲಭ ಪ್ರಾಪ್ತಿ ಕೃತಿಚೌರ್ಯವನ್ನು ಸುಗಮವಾಗಿಸಿರುವುದರಿಂದ ಶಿಕ್ಷಕರ, ಸಂಶೋಧಕರ ಮತ್ತು ವಿದ್ಯಾರ್ಥಿಗಳ ಅರಿವಿನ ವ್ಯಾಪ್ತಿ ವಿಸ್ತರಿಸುತ್ತಿಲ್ಲ ಎನ್ನುವ ಆರೋಪ ಶೈಕ್ಷಣಿಕ ವಲಯದಲ್ಲಿ ಕೇಳಿಬರುತ್ತಿದೆ.