Wednesday, August 5, 2020

ಮನದ ಬೆಸುಗೆಗೇಕೆ ಪ್ರತಿಷ್ಠೆಯ ಗೊಡವೆ?

       




(ದಿನಾಂಕ ೧೪.೦೭.೨೦೨೦ ರ ಪ್ರಜಾವಾಣಿ ಪತ್ರಿಕೆಯ ಸಂಗತ ಅಂಕಣದಲ್ಲಿ ಪ್ರಕಟ)

ಕೊರೊನಾ ವೈರಾಣು ತಂದೊಡ್ಡಿರುವ ಆತಂಕದ ಕಾರಣ ಬಾಗಲಕೋಟ ಜಿಲ್ಲೆಯಲ್ಲಿ ಈ ಸಂದರ್ಭ ಸಾರ್ವಜನಿಕ ಸ್ಥಳಗಳಲ್ಲಿ ಮದುವೆ ಮತ್ತಿತರ ಖಾಸಗಿ ಕಾರ್ಯಕ್ರಮಗಳನ್ನು ನಿಷೇಧಿಸಿರುವ ಜಿಲ್ಲಾಡಳಿತ ರಿಜಿಸ್ಟರ್ ಮದುವೆಗೆ ಮಾತ್ರ ಅನುಮತಿಯನ್ನು ನೀಡಿದೆ. ಈ ಮೊದಲು ಮದುವೆ ಇತ್ಯಾದಿ ಕಾರ್ಯಕ್ರಮಗಳಲ್ಲಿ 50 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಜನರು ಪಾಲ್ಗೊಳ್ಳುವಂತಿಲ್ಲ ಎನ್ನುವ ಆದೇಶ ಜಾರಿಯಲ್ಲಿದ್ದಾಗೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕೋವಿಡ್ ರೋಗದ ವ್ಯಾಪಕ ವಿಸ್ತರಣೆಗೆ ಕಾರಣವಾಗುತ್ತಿರುವುದರಿಂದ ಈಗ ಜಿಲ್ಲಾಡಳಿತ ಈ ನಿರ್ಣಯವನ್ನು ಕೈಗೊಂಡಿದೆ. ಜೊತೆಗೆ ನಾಮಕರಣ, ಸೀಮಂತದಂಥ ಕಾರ್ಯಕ್ರಮಗಳನ್ನು ಸಾರ್ವಜನಿಕ ಸಭಾಗೃಹಗಳಲ್ಲಿ ಆಚರಿಸುವುದಕ್ಕೆ ತಡೆಯೊಡ್ಡಿದೆ. ಸರ್ಕಾರದ ಈ ಕ್ರಮ ಸ್ವಾಗತಾರ್ಹ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಹೊತ್ತಿನಲ್ಲೇ ಕೆಲವರು ಈ ಕ್ರಮವನ್ನು ಟೀಕಿಸುತ್ತಿರುವುದು ಸಂಕುಚಿತ ಮನಸ್ಸುಗಳಿಗೆ ಹಿಡಿದ ಕೈಗನ್ನಡಿಯಾಗಿದೆ.

    ಮದುವೆ ಎನ್ನುವುದು ಎರಡು ಮನಸ್ಸುಗಳ ಬೆಸುಗೆ ಮತ್ತು ಎರಡು ಕುಟುಂಬಗಳ ನಡುವಣ ಹೊಸ ಸಂಬಂಧವೊಂದರ ಚಿಗುರೊಡೆಯುವಿಕೆ. ಅದೊಂದು ಎರಡು ಕುಟುಂಬಗಳಿಗೆ ಸಂಬಂಧಿಸಿದ ಖಾಸಗಿ ಕಾರ್ಯಕ್ರಮವೇ ವಿನ: ಅದೇನು ಸಾರ್ವಜನಿಕ ಕಾರ್ಯಕ್ರಮವಲ್ಲ. ಕುವೆಂಪು ಮದುವೆಯ ದುಂದುವೆಚ್ಚಕ್ಕೆ ಕಡಿವಾಣ ಹಾಕಲು ತಮ್ಮ ಮದುವೆಯ ಸಂದರ್ಭದಲ್ಲಿ ಮಂತ್ರಮಾಂಗಲ್ಯ ಪದ್ಧತಿಗೆ ನಾಂದಿ ಹಾಡಿದರು ಮತ್ತು ತಮ್ಮ ಮಕ್ಕಳ ವಿವಾಹ ಸಂದರ್ಭದಲ್ಲೂ ಅದೇ ವಿಧಾನವನ್ನು ಅನುಸರಿಸಿದರು. ಮದುವೆಯಂಥ ಖಾಸಗಿ ಕಾರ್ಯಕ್ರಮದಲ್ಲಾಗುವ ದುಂದುವೆಚ್ಚವನ್ನು ನಿಯಂತ್ರಿಸುವುದೇ ಈ ಮಂತ್ರಮಾಂಗಲ್ಯ ವಿಧಾನದ ಹಿಂದಿನ ಆಶಯವಾಗಿತ್ತು. ಕುವೆಂಪು ಅವರ ಅನೇಕ ವಿದ್ಯಾರ್ಥಿಗಳು ಮತ್ತು ಅಭಿಮಾನಿಗಳು ಇಂಥ ಸರಳ ವಿಧಾನವನ್ನು ಅನುಸರಿಸಿದ್ದು ಅದೊಂದು ಬಹುಮುಖ್ಯವಾದ ಚಾರಿತ್ರಿಕ ಘಟನೆ ಎನ್ನಬಹುದು. ಉತ್ತರ ಕರ್ನಾಟಕದ ಹಲವು ಮಠಗಳಲ್ಲಿ ಮದುವೆಯ ಸಂದರ್ಭ ಅಕ್ಕಿಕಾಳುಗಳನ್ನು ಅಕ್ಷತೆಯ ರೂಪದಲ್ಲಿ ವಧು ವರರ ಮೇಲೆ ಪ್ರೋಕ್ಷಿಸುವ  ಬದಲು ಹೂವಿನ ಎಸಳುಗಳನ್ನು ಪ್ರೋಕ್ಷಿಸುವ  ರೂಢಿಯನ್ನು ಅನುಸರಿಸುತ್ತಿರುವುದು ಒಂದರ್ಥದಲ್ಲಿ ಆಹಾರ ಪದಾರ್ಥವೊಂದು ಅನಾವಶ್ಯಕವಾಗಿ ವ್ಯಯವಾಗುವುದನ್ನು ತಡೆಗಟ್ಟುವ ಒಂದು ಉತ್ತಮ ಬೆಳವಣಿಗೆ.

           ಇವತ್ತು ಸಮಾಜದಲ್ಲಿ ಮದುವೆ ಎನ್ನುವುದು ಅದೊಂದು ಪ್ರತಿಷ್ಠೆಯ ಸಂಗತಿಯಾಗಿದೆ. ಐಷಾರಾಮಿ ಕಲ್ಯಾಣ ಮಂಟಪ, ವಿದ್ಯುದ್ದೀಪಗಳ ಅಲಂಕಾರ, ಆಕಾಶದಲ್ಲಿ ಬಾಣಬಿರುಸುಗಳ ಚಿತ್ತಾರ, ಕಿವಿಗಡಚಿಕ್ಕುವ ವಾದ್ಯಮೇಳ, ಹಲವು ಬಗೆಯ ಖಾದ್ಯಗಳ ತಯ್ಯಾರಿ, ಊಟದ ನಂತರ ಹಣ್ಣು, ಐಸ್‍ಕ್ರೀಮ್, ಬೀಡಾಗಳ ವಿತರಣೆ ಹೀಗೆ ಲಕ್ಷ ಲಕ್ಷ ರೂಪಾಯಿಗಳನ್ನು ಖರ್ಚುಮಾಡಿದಾಗಲೇ ಅದೊಂದು ಮದುವೆ ಮತ್ತು ಗಂಡು-ಹೆಣ್ಣಿನ ದಾಂಪತ್ಯಕ್ಕೆ ಸಮಾಜದ ಒಪ್ಪಿಗೆಯ ಮುದ್ರೆ ಲಭ್ಯವಾದಂತೆ ಎನ್ನುವ ಭಾವನೆ ಅನೇಕ ತಂದೆ ತಾಯಿಗಳಲ್ಲಿ ಮನೆಮಾಡಿದೆ. ಇನ್ನು ಕೆಲವರಿಗೆ ಮದುವೆ ಎನ್ನುವುದು ಅದೊಂದು ಪ್ರತಿಷ್ಠೆಯ ಮತ್ತು ಗೌರವದ ಸಂಕೇತ. ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಮದುವೆ ಮಾಡಿದಾಗಲೇ ಸಮಾಜದಲ್ಲಿ ತಮ್ಮ ಪ್ರತಿಷ್ಠೆ ಹೆಚ್ಚುವುದೆನ್ನುವ ಮನೋಭಾವ. ಸಮಾಜದಲ್ಲಿ ತಮ್ಮ ಶ್ರೀಮಂತಿಕೆಯನ್ನು ಪ್ರದರ್ಶಿಸಿ ಜನರ ದೃಷ್ಟಿಯಲ್ಲಿ ಪ್ರತಿಷ್ಠಿತರಾಗಿ ಮೆರೆಯಲು ಕೆಲವರು ಈ ಮದುವೆಯ ದುಂದುವೆಚ್ಚಕ್ಕೆ ಮುಂದಾಗುತ್ತಾರೆ. ಅಚ್ಚರಿಯ ಸಂಗತಿ ಎಂದರೆ ಈಗೀಗ ಮದುವೆ ಮಾತ್ರವಲ್ಲದೆ ನಿಶ್ಚಿತಾರ್ಥ, ನಾಮಕರಣ, ಸೀಮಂತ, ಹುಟ್ಟುಹಬ್ಬದಂಥ ಕಾರ್ಯಕ್ರಮಗಳನ್ನು ಕೂಡ ಐಷಾರಾಮಿ ಕಲ್ಯಾಣ ಮಂಟಪಗಳಲ್ಲಿ ಆಚರಿಸಲಾಗುತ್ತಿದೆ. ವೈಕುಂಠ ಸಮಾರಾಧನೆಯಂಥ ಶೋಕಕ್ಕೂ ಕಲ್ಯಾಣ ಮಂಟಪಗಳು ವೇದಿಕೆಯಾಗುತ್ತಿವೆ.

    ಈ ವರ್ಷದ ಆರಂಭದ ತಿಂಗಳಲ್ಲಿ ನನ್ನ ಪರಿಚಿತರ ಒಂದು ವರ್ಷದ ಮಗುವಿನ ಮೊದಲ ಹುಟ್ಟು ಹಬ್ಬವಿತ್ತು. ನಗರದ ಭವ್ಯ ಹೋಟೆಲ್ ಒಂದರಲ್ಲಿ ಏರ್ಪಡಿಸಿದ್ದ ಆ ಔತಣಕೂಟಕ್ಕೆ ಸರಿಸುಮಾರು 500 ಜನರನ್ನು ಆಹ್ವಾನಿಸಿದ್ದರು. ಅವರೇ ಹೇಳಿದಂತೆ ಅಲ್ಲಿ ಪ್ರತಿ ಊಟಕ್ಕೆ ಸುಮಾರು 300 ರೂಪಾಯಿಗಳ ಬೆಲೆಯಿದ್ದು ಒಟ್ಟಾರೆ ಆ ದಿನದ ಎರಡು ಗಂಟೆಗಳ ಔತಣಕೂಟಕ್ಕೆ ಏನಿಲ್ಲವೆಂದರೂ ಎರಡು ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗಿತ್ತು. ಊಟದ ನಂತರ ಆಹ್ವಾನಿತ ಅತಿಥಿಗಳಿಗೆ ಹೈದರಾಬಾದಿನಿಂದ ಕರೆತಂದ ಸುಂದರ ತರುಣಿ ಬೀಡಾ ತಯ್ಯಾರಿಸಿ ಕೊಡುತ್ತಿದ್ದ ದೃಶ್ಯ ನಯನ ಮನೋಹರವಾಗಿತ್ತು. ಅತ್ಯಂತ ಸಣ್ಣ ಊರಾಗಿರುವುದರಿಂದ ಇಲ್ಲಿ ಇದಕ್ಕಿಂತ ಹೆಚ್ಚು ಅದ್ದೂರಿಯಾಗಿ ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಕೊರಗು ಪಾಲಕರದಾಗಿತ್ತು. ಇನ್ನು ಅಚ್ಚರಿಯ ಸಂಗತಿ ಎಂದರೆ ಆಹ್ವಾನ ಪತ್ರದ ಹೊರತಾಗಿಯೂ ದಿನಪತ್ರಿಕೆಗಳಲ್ಲಿ ಮತ್ತು ಟಿ.ವಿ ಚಾನೆಲ್‍ಗಳಲ್ಲಿ ಆಹ್ವಾನ ಪತ್ರ ಪ್ರಕಟವಾಗುವುದರ ಜೊತೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ಮಗುವಿನ ಭಾವಚಿತ್ರವಿರುವ ಫ್ಲೆಕ್ಸ್‍ಗಳನ್ನೂ ತೂಗುಹಾಕಿದ್ದರು.

    ಈ ರೀತಿ ಖಾಸಗಿ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಲಕ್ಷಾಂತರ ರೂಪಾಯಿಗಳನ್ನು ಖರ್ಚುಮಾಡಿ ಆಚರಿಸುವಾಗ ಅದರಿಂದಾಗುವ ಸಮಸ್ಯೆಗಳ ಕುರಿತು ನಾವು ಯೋಚಿಸಬೇಕು. ಇಂಥ ಕಾರ್ಯಕ್ರಮಗಳಲ್ಲಿ ನೀರು, ವಿದ್ಯುತ್, ಆಹಾರ ವ್ಯಯವಾಗುವುದು ಸರ್ವೇಸಾಮಾನ್ಯ. ಹಾಗೆಂದು ತಮ್ಮ ಖಾಸಗಿ ಕಾರ್ಯಕ್ರಮಗಳನ್ನು ಸಾರ್ವಜನಿಕವಾಗಿ ಆಚರಿಸುತ್ತಿರುವ ಕುಟುಂಬ ವರ್ಗದವರು ನಾವು ಪರ್ಯಾಯವಾಗಿ ಹಣವನ್ನು ಸಂದಾಯ ಮಾಡುತ್ತಿದ್ದೇವೆ ಎಂದು ವಾದಿಸಬಹುದು. ನೆನಪಿರಲಿ ನೀರು, ವಿದ್ಯುತ್, ಆಹಾರ ಇದೆಲ್ಲ ರಾಷ್ಟ್ರದ ಸಂಪತ್ತು. ಹಣವಿದೆ ಎಂದ ಮಾತ್ರಕ್ಕೆ ಇದನ್ನೆಲ್ಲ ಅತಿಯಾದ ಪ್ರಮಾಣದಲ್ಲಿ ಉಪಯೋಗಿಸುವ ಅಧಿಕಾರ ನಮಗಿಲ್ಲ. ರಾಷ್ಟ್ರದ ಈ ನೈಸರ್ಗಿಕ ಸಂಪತ್ತಿನ ಮೇಲೆ ಎಲ್ಲರಿಗೂ ಸಮಾನವಾದ ಅಧಿಕಾರವಿದೆ ಮತ್ತು ಅದು ಪ್ರತಿಯೊಬ್ಬರಿಗೂ ಲಭ್ಯವಾಗಬೇಕು.

      ಇದೇ ಸಂದರ್ಭ ಖಾಸಗಿ ಕಾರ್ಯಕ್ರಮಗಳನ್ನು ದುಂದುವೆಚ್ಚ ಮಾಡಿ ಸಾರ್ವಜನಿಕವಾಗಿ ಆಚರಿಸಿಕೊಳ್ಳುತ್ತಿರುವ ನಾವು ಸಾರ್ವತ್ರಿಕವಾಗಿ ಆಚರಿಸಬೇಕಾದ ಕಾರ್ಯಕ್ರಮಗಳನ್ನೇಕೆ ವೈಯಕ್ತಿಕವಾಗಿಸುತ್ತಿದ್ದೇವೆ? ಎನ್ನುವ ಪ್ರಶ್ನೆ ಎದುರಾಗುತ್ತದೆ.  ಗಾಂಧಿ ಜಯಂತಿ, ಅಂಬೇಡ್ಕರ್ ಜಯಂತಿ, ರೈತರ ದಿನ, ಸ್ವಾತಂತ್ರ್ಯ ದಿನ, ಗಣರಾಜ್ಯ ದಿನ ಇಂಥ ಯಾವ ದಿನಗಳಲ್ಲಿ ನಾವುಗಳೆಲ್ಲ ಸಾಮೂಹಿಕವಾಗಿ ಪಾಲ್ಗೊಳ್ಳುತ್ತಿದ್ದೇವೆ ಎಂದು ನಮ್ಮನ್ನೆ ನಾವು ಪ್ರಶ್ನಿಸಿಕೊಳ್ಳಬೇಕಾಗಿದೆ. ನಮ್ಮ ಕೌಟಂಬಿಕ ವ್ಯಾಪ್ತಿಗೆ ಮಾತ್ರ ಸೀಮಿತವಾಗಿರಬೇಕಾದ ಕಾರ್ಯಕ್ರಮಗಳನ್ನು ಅತ್ಯಂತ ಉಮೇದಿಯಿಂದ ಸಾರ್ವಜನಿಕವಾಗಿ ಆಚರಿಸಿಕೊಳ್ಳುವ ಅನೇಕರಿಗೆ ಸ್ವಾತಂತ್ರ್ಯ ದಿನದಂದು ಕಡ್ಡಾಯವಾಗಿ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಳ್ಳುವ ಕನಿಷ್ಠ ಪ್ರಜ್ಞೆಯೂ ಇರುವುದಿಲ್ಲ. ಅಕ್ಟೋಬರ್ 2 ದೇಶ ಕಂಡ ಪ್ರಾಮಾಣಿಕ ಪ್ರಧಾನ ಮಂತ್ರಿ ಲಾಲಬಹಾದ್ದೂರ ಶಾಸ್ತ್ರಿ ಅವರ ಜನ್ಮದಿನವೆಂದು ಅದೆಷ್ಟು ಜನರಿಗೆ ಗೊತ್ತಿದೆ?. ಸಿನಿಮಾ ಜಗತ್ತಿನ ನಟನ ಹುಟ್ಟುಹಬ್ಬದಂದು ಆಳೆತ್ತರದ ಕಟೌಟ್ ನಿಲ್ಲಿಸಿ ಕ್ಷೀರಾಭಿಷೇಕ ಮಾಡುವ ನಮಗೆ ಜನೆವರಿ 30 ರಂದು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ವೀರಮರಣವನ್ನಪ್ಪಿದ ಹುತಾತ್ಮರನ್ನು ಸ್ಮರಿಸಿಕೊಳ್ಳುವ ದಿನವೆಂದು ನೆನಪಿಗೇ ಬರುವುದಿಲ್ಲ. 

     ಕೊರೊನಾ ಎಲ್ಲ ಖಾಸಗಿ ಆಚರಣೆಗಳ ದುಂದುವೆಚ್ಚಕ್ಕೆ ಕಡಿವಾಣ ಹಾಕಿದೆ. ಈ ಅವಧಿಯಲ್ಲಿ ಸಾರ್ವಜನಿಕರು ತಮ್ಮ ತಮ್ಮ ಕುಟುಂಬಗಳ ಖಾಸಗಿ ಕಾರ್ಯಕ್ರಮಗಳನ್ನು ಕುಟುಂಬ ವರ್ಗಕ್ಕಷ್ಟೆ ಸೀಮಿತಗೊಳಿಸಿಕೊಳ್ಳುತ್ತಿರುವರು. ಈ ಅವಧಿಯಲ್ಲಿ ಯಾವ ಸಿನಿಮಾ ಕಲಾವಿದರ ಮತ್ತು ರಾಜಕಾರಣಿಗಳ ಹುಟ್ಟುಹಬ್ಬಗಳನ್ನು ಅವರ ಅಭಿಮಾನಿಗಳು ಸಾರ್ವಜನಿಕವಾಗಿ ಆಚರಿಸಲಿಲ್ಲ ಮತ್ತು ಕಟೌಟ್‍ಗಳ ಮೇಲೆ ಸುರಿಯಬೇಕಿದ್ದ ಲಕ್ಷಾಂತರ ಲೀಟರ್‍ಗಳಷ್ಟು ಹಾಲು ವ್ಯರ್ಥವಾಗಿ ಹಾಳಾಗುವುದು ತಪ್ಪಿತು. ಕೊರೊನಾ ವೈರಾಣು ಸೃಷ್ಟಿಸಿದ ಆತಂಕದ ಪರಿಣಾಮ ಖಾಸಗಿ ಮತ್ತು ಸಾರ್ವಜನಿಕ ಕಾರ್ಯಕ್ರಮಗಳ ಅರಿವು ಸಾರ್ವಜನಿಕರಲ್ಲಿ ಮೂಡಿದೆ. ಆದರೆ ಆ ಅರಿವು ಈ ಲಾಕ್‍ಡೌನ್ ಅವಧಿಗೆ ಮಾತ್ರ ಸೀಮಿತವಾಗದೆ ಭವಿಷ್ಯದಲ್ಲೂ ಸದಾಕಾಲ ನಮ್ಮೊಳಗಿರಬೇಕು.  
---000---

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Tuesday, July 7, 2020

ಗ್ರಂಥಾಲಯ: ತಪ್ಪಿದ್ದೇಕೆ ಲಯ?

       


     
    (೨೭.೦೬.೨೦೨೦ ರ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿದೆ)

      ಕೆಲವು ದಿನಗಳ ಹಿಂದೆ ಪ್ರಜಾವಾಣಿಯ ‘ವಾಚಕರ ವಾಣಿ’ ಯಲ್ಲಿ ಕೊರೋನಾ ಕಾರಣದಿಂದ ಪ್ರವೇಶವನ್ನು ನಿರ್ಬಂಧಿಸಿರುವ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಓದುಗರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕೆಂದು ವಿನಂತಿಸಿಕೊಂಡ ಎರಡು ಪತ್ರಗಳು ಪ್ರಕಟವಾದವು. ಸಾರ್ವಜನಿಕ ಗ್ರಂಥಾಲಯಗಳಿಂದ ಓದುಗರ ಸಮೂಹ ವಿಮುಖವಾಗುತ್ತಿದೆ ಎನ್ನುವ ಆತಂಕದ ಸಮಯದಲ್ಲಿ ಓದುಗರು ಈ ರೀತಿಯ ಅಹವಾಲು ಮಾಡಿಕೊಳ್ಳುತ್ತಿರುವುದು ಒಂದೆಡೆ ಸಂತಸಕ್ಕೆ ಕಾರಣವಾದರೆ ಅದು ಒಂದು ಪ್ರಶ್ನೆಯನ್ನು ಕೂಡ ನಮ್ಮ ಮುಂದಿಡುತ್ತಿದೆ. ಹೀಗೆ ಅಹವಾಲು ಮಾಡಿಕೊಳ್ಳುತ್ತಿರುವ ಓದುಗರು ಯಾವ ವಯೋಮಾನದವರು? ಮತ್ತು ಅವರು ಸಾರ್ವಜನಿಕ ಗ್ರಂಥಾಲಯ ವ್ಯವಸ್ಥೆಯನ್ನು ಉಪಯೋಗಿಸುತ್ತಿರುವುದು ಯಾವ ಉದ್ದೇಶಕ್ಕಾಗಿ?. ಪ್ರಕಟವಾದ ಆ ಎರಡು ಪತ್ರಗಳಲ್ಲಿ ಓದುಗರೇ ನಿವೇದಿಸಿಕೊಂಡಂತೆ ಸ್ಪರ್ಧಾತ್ಮಕ ಪರೀಕ್ಷಾವಧಿ ಹತ್ತಿರ ಬರುತ್ತಿರುವುದರಿಂದ ಓದಲು ಅನುಕೂಲಕರವಾದ ಸ್ಥಳ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳ ಅಗತ್ಯದ ಕಾರಣ ಅವರಿಗೆ ಸಾರ್ವಜನಿಕ ಗ್ರಂಥಾಲಯಗಳ ಅವಶ್ಯಕತೆ ಎದುರಾಗಿದೆ. ಸಾರ್ವಜನಿಕ ಗ್ರಂಥಾಲಯದ ಒಬ್ಬ ನಿಯಮಿತ ಓದುಗನಾಗಿ ಈ ದಿನಗಳಲ್ಲಿ ಸಾರ್ವಜನಿಕ ಗ್ರಂಥಾಲಯಗಳನ್ನು ಉಪಯೋಗಿಸುತ್ತಿರುವ ಓದುಗರ ವಯೋಮಾನ ಮತ್ತು ಅವರ ಉದ್ದೇಶಗಳು ನನ್ನ ಅನುಭವಕ್ಕೆ ಬಂದಿವೆ.

    ಭಾರತದಲ್ಲಿ ಮಾತ್ರವಲ್ಲದೆ ಇಡೀ ಪ್ರಪಂಚದಾದ್ಯಂತ ಗ್ರಂಥಾಲಯ ವ್ಯವಸ್ಥೆಯನ್ನು ಸಾರ್ವಜನಿಕ, ಶೈಕ್ಷಣಿಕ, ವಿಶಿಷ್ಠ ಮತ್ತು ರಾಷ್ಟ್ರೀಯ ಎಂದು ನಾಲ್ಕು ಘಟಕಗಳನ್ನಾಗಿ ವಿಭಾಗಿಸಲಾಗಿದೆ. ಶೈಕ್ಷಣಿಕ ಮತ್ತು ವಿಶಿಷ್ಠ ಗ್ರಂಥಾಲಯಗಳು ಅಕಾಡೆಮಿಕ್ ವಲಯಕ್ಕೆ ಸೇರಿದರೆ ಸಾರ್ವಜನಿಕ ಗ್ರಂಥಾಲಯಗಳನ್ನು ಶ್ರೀಸಾಮಾನ್ಯರ ವಿಶ್ವವಿದ್ಯಾಲಯಗಳೆಂದು ಪರಿಗಣಿಸಲಾಗಿದೆ. ಶೈಕ್ಷಣಿಕ ಹಾಗೂ ವಿಶಿಷ್ಠ ಗ್ರಂಥಾಲಯಗಳಲ್ಲಿ ಓದುಗರ ಪ್ರವೇಶಕ್ಕೆ ನಿರ್ಧಿಷ್ಟ ಮಾನದಂಡಗಳಿವೆ. ಒಂದು ಪ್ರಾಂತ್ಯದ ಎಲ್ಲ ಓದುಗರೂ ಆ ನಿರ್ಧಿಷ್ಟ ಮಾನದಂಡಗಳಿಗೆ ಒಳಪಡಲಾರರು. ಆದ್ದರಿಂದ ಸಾಮಾನ್ಯ ಜನರ ಓದಿನ ಅಭಿರುಚಿ ಮತ್ತು ಜ್ಞಾನದ ಹಸಿವನ್ನು ತಣಿಸಲು ಸಾರ್ವಜನಿಕ ಗ್ರಂಥಾಲಯಗಳು ಅಸ್ತಿತ್ವಕ್ಕೆ ಬಂದವು. ಸಾರ್ವಜನಿಕ ಗ್ರಂಥಾಲಯದ ಕಾರ್ಯಯೋಜನೆ ಪ್ರತಿ ಮನೆ ಮನೆಗೂ ಮುಟ್ಟಬೇಕೆನ್ನುವ ಸದಾಶಯದಿಂದ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಂಚಾರಿ ಗ್ರಂಥಾಲಯ ಎನ್ನುವ ಯೋಜನೆ ಕೂಡ ಚಾಲ್ತಿಗೆ ಬಂತು. 1980 ರ ದಶಕದಲ್ಲಿ ಆಗಿನ್ನೂ ಕಾಲೇಜು ವಿದ್ಯಾರ್ಥಿಯಾಗಿದ್ದ ನನಗೆ ಸಾರ್ವಜನಿಕ ಗ್ರಂಥಾಲಯ ಸಿಬ್ಬಂದಿಯು ವಾಹನದಲ್ಲಿ ಪುಸ್ತಕಗಳನ್ನು ಹೇರಿಕೊಂಡು ಬಂದು ಪ್ರತಿ ಕಾಲೋನಿಯ ನಿರ್ಧಿಷ್ಟ ಜಾಗದಲ್ಲಿ ಸೇರಿದ್ದ ಓದುಗರಿಗೆ ವಿತರಿಸುತ್ತಿದ್ದ ದೃಶ್ಯ ಇವತ್ತಿಗೂ ನೆನಪುಗಳಲ್ಲಿ ಹಸಿರಾಗಿದೆ.   

       ಕರ್ನಾಟಕದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರು ಕಬ್ಬನ್ ಪಾರ್ಕ್‍ನ ಶೇಷಾದ್ರಿ ಮೆಮೊರಿಯಲ್ ಹಾಲ್‍ನಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕರಿಗಾಗಿ ಗ್ರಂಥಾಲಯವನ್ನು ಸ್ಥಾಪಿಸಿದರು. ಇದು ಸ್ಥಾಪನೆಯಾದದ್ದು 1914 ರಲ್ಲಿ. ಭಾರತ ಸ್ವಾತಂತ್ರ್ಯಾ ನಂತರ ಡಾ.ಎಸ್.ಆರ್.ರಂಗನಾಥನ್ ಮತ್ತು ಅಂದಿನ ಶಿಕ್ಷಣ ಮಂತ್ರಿ ಶ್ರೀ ಎಸ್.ಆರ್.ಕಂಠಿ ಅವರ ಪ್ರಯತ್ನದ ಫಲವಾಗಿ 1965 ರಲ್ಲಿ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಗೆ ಬಂದಿತು. ಸಾರ್ವಜನಿಕ ಗ್ರಂಥಾಲಯಗಳಿಗೆ ಅಗತ್ಯದ ಹಣಕಾಸಿನ ನೆರವು ದೊರೆಯುವಂತಾಗಲು ಈ ಕಾಯ್ದೆಯ ರಚನೆ ಅವಶ್ಯಕವಾಗಿತ್ತು. ಈ ಕಾಯ್ದೆಯನ್ವಯ ಆಸ್ತಿ ತೆರಿಗೆಯಿಂದ ಸಂಗ್ರಹವಾಗುವ ಹಣದಲ್ಲಿ ಪ್ರತಿ ಒಂದು ರೂಪಾಯಿಗೆ ಆರು ಪೈಸೆಯಷ್ಟು ಹಣವನ್ನು ಸಾರ್ವಜನಿಕ ಗ್ರಂಥಾಲಯಗಳಿಗಾಗಿ ಮೀಸಲಾಗಿಡಲಾಗುತ್ತದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲಿನ ಸಾರ್ವಜನಿಕ ಗ್ರಂಥಾಲಯಗಳು ಆಯಾ ಜಿಲ್ಲೆಯಲ್ಲಿ ಸಂಗ್ರಹವಾದ ಭೂಕಂದಾಯದಿಂದ ಪ್ರತಿಶತ 6 ರಷ್ಟು ಹಣವನ್ನು ಸರ್ಕಾರದಿಂದ ಅನುದಾನದ ರೂಪದಲ್ಲಿ ಪಡೆಯುತ್ತವೆ. ಕೊಲ್ಕತ್ತದ ರಾಜಾ ರಾಮಮೋಹನ ರಾಯ್ ಲೈಬ್ರರಿ ಫೌಂಡೆಶನ್‍ನಿಂದಲೂ ಸಾರ್ವಜನಿಕ ಗ್ರಂಥಾಲಯಗಳಿಗೆ ವಿಶೇಷ ಅನುದಾನ ದೊರೆಯುತ್ತಿದೆ. ಸಾರ್ವಜನಿಕ ಗ್ರಂಥಾಲಯವೇ ಒದಗಿಸಿದ ಅಂಕಿಅಂಶಗಳ ಪ್ರಕಾರ ಇಂದು ರಾಜ್ಯದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯಗಳು, ನಗರ ಕೇಂದ್ರ ಗ್ರಂಥಾಲಯಗಳು, ಸಂಚಾರಿ ಗ್ರಂಥಾಲಯಗಳು, ಗ್ರಾಮೀಣ ಗ್ರಂಥಾಲಯಗಳಿವೆ. ಇವುಗಳ ಜೊತೆಗೆ ಶಾಖಾ ಗ್ರಂಥಾಲಯಗಳು ನಗರ ಮತ್ತು ಜಿಲ್ಲಾ ಕೇಂದ್ರಗಳಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕಾಲಾನಂತರದಲ್ಲಿ ಸಂಚಾರಿ ಗ್ರಂಥಾಲಯ ವ್ಯವಸ್ಥೆಯು ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿ ಅದಕ್ಕೆ ತನ್ನದೆ ಆದ ಕಾರಣಗಳನ್ನು ನೀಡಿದೆ. ಸಂಖ್ಯಾ ದೃಷ್ಟಿಯಿಂದ ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಸೌಲಭ್ಯ ಸಮೃದ್ಧವಾಗಿದೆ. ಆದರೆ ಗುಣಾತ್ಮಕ ಸೇವೆಯನ್ನು ಪರಿಗಣಿಸಿದಾಗ ಇವುಗಳ ಸಾಧನೆ ಶೂನ್ಯ. ಜನ ಸಾಮಾನ್ಯರ ವಿಶ್ವವಿದ್ಯಾಲಯಗಳೆನ್ನುವ ಘನ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದ ಸಾರ್ವಜನಿಕ ಗ್ರಂಥಾಲಯಗಳು ಕ್ರಮೇಣ ಜನಸಾಮಾನ್ಯರಿಂದಲೇ ದೂರವಾಗುತ್ತಿರುವುದು ವಿಪರ್ಯಾಸ. 

      ಸಾರ್ವಜನಿಕ ಗ್ರಂಥಾಲಯಗಳಿಂದ ಓದುಗರು ವಿಮುಖರಾಗುತ್ತಿರುವುದಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಅನೇಕ ಕಾರಣಗಳನ್ನು ಮುಂದಿಡುತ್ತದೆ. ಅತಿಯಾದ ಮೊಬೈಲ್ ಬಳಕೆ, ಟೀವಿ ಚಾನೆಲ್‍ಗಳ ಹಾವಳಿ, ಮಾಹಿತಿಯ ಡಿಜಿಟಲೀಕರಣ ಹೀಗೆ ಕಾರಣಗಳ ಪಟ್ಟಿ ಬೆಳೆಯುತ್ತ ಹೋಗುತ್ತದೆ. ಹೀಗೆ ತಪ್ಪನ್ನೆಲ್ಲ ತಂತ್ರಜ್ಞಾನದ ಮೇಲೆ ಹೊರಿಸುವುದು ಅದು ಇಲಾಖೆ ತನ್ನ ಜವಾಬ್ದಾರಿಯಿಂದ ನುಣಿಚಿಕೊಳ್ಳುವುದಕ್ಕೊಂದು ಸುಲಭವಾದ ಮಾರ್ಗೋಪಾಯ. ಇಲಾಖೆ ಮೊದಲು ಗಮನಹರಿಸಬೇಕಾದದ್ದು ಸಾರ್ವಜನಿಕ ಗ್ರಂಥಾಲಯಗಳಲ್ಲಿ ಎಂಥ ಪುಸ್ತಕಗಳು ಓದಲು ದೊರೆಯುತ್ತಿವೆ ಮತ್ತು ಇಂಥ ಪುಸ್ತಕಗಳಿಂದ ಓದುಗರವಲಯ ಸಂತೃಪ್ತವಾಗಿದೆಯೇ ಎನ್ನುವುದು. ಹರಿದು ಓದಲಾರದಂಥ ಸ್ಥಿತಿಗೆ ಬಂದ ಪುಸ್ತಕಗಳ ಸಂಖ್ಯೆಯೇ ಅಲ್ಲಿ ಸಿಂಹಪಾಲು. ಇರುವ ಕೆಲವೇ ಉತ್ತಮ ಪುಸ್ತಕಗಳು ಸಹ ಹಲವು ಓದುಗರ ಕೈಸೇರಿ ಹಾಳಾಗಿ ಓದಲು ಉಪಯುಕ್ತವಾಗಿರುವುದಿಲ್ಲ. ಸಾಮಾನ್ಯವಾಗಿ ಸಾರ್ವಜನಿಕ ಗ್ರಂಥಾಲಯಗಳಿಗೆ ಅಧಿಕಾರಿಗಳು ತಮಗೆ ಬೇಕಾದ ಲೇಖಕರಿಂದ ಪುಸ್ತಕಗಳನ್ನು ಬರೆಸಿ ಮತ್ತು ಬೇಕಾದ ಪ್ರಕಾಶಕರಿಂದ ಪುಸ್ತಕಗಳನ್ನು ಪ್ರಕಟಿಸಿ ಖರೀದಿಸುವರೆಂಬ ದೂರಿದೆ. ಅಧಿಕಾರಿಗಳು ಈ ಮಾತನ್ನು ಅಲ್ಲಗಳೆದರೂ ಅಲ್ಲಿನ ಪುಸ್ತಕಗಳನ್ನು ನೋಡಿದಾಗ ಆ ಮಾತು ನಿಜವೆಂದು ತೋರುತ್ತದೆ. ಅಧಿಕಾರಿಗಳು,  ಪ್ರಕಾಶಕರು ಮತ್ತು ಲೇಖಕರ ನಡುವೆ ಕಮಿಷನ್ ರೂಪದಲ್ಲಿ ಹಣ ಹರಿದಾಡಿ ಅವರವರ ಜೇಬು ಭರ್ತಿಯಾಗುತ್ತದೆ ಎನ್ನುವ ಮಾತಿಗೆ ಅಲ್ಲಿನ ಪುಸ್ತಕಗಳೇ ಸಾಕ್ಷಿ ಒದಗಿಸುತ್ತವೆ. ಕುವೆಂಪು, ಬೇಂದ್ರೆ, ಕಾರಂತ, ಅಡಿಗ ಇತ್ಯಾದಿ ಕನ್ನಡದ ಮಹತ್ವದ ಲೇಖಕರ ಪುಸ್ತಕಗಳನ್ನು ದುರ್ಬೀನು ಹಾಕಿಕೊಂಡು ಹುಡುಕಬೇಕು. ಒಬ್ಬರೆ ಪ್ರಕಾಶಕರು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳ ಹೆಸರಿನಿಂದ ಪುಸ್ತಕಗಳನ್ನು ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಮಾರಾಟ ಮಾಡುವುದು ಅದೊಂದು ಬಹಿರಂಗ ಸತ್ಯವಾಗಿದೆ. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ತೂಕ ಮಾಡಿ ಖರೀದಿಸುವರು ಎನ್ನುವ ವ್ಯಂಗ್ಯೊಕ್ತಿಯೊಂದು ಬಹಳ ಹಿಂದಿನಿಂದಲೂ ಜನಮತದಲ್ಲಿ ಚಲಾವಣೆಯಲ್ಲಿದೆ.

     ಗ್ರಾಮಾಂತರ ಪ್ರದೇಶದ ಜನರಿಗೂ ಪತ್ರಿಕೆ ಮತ್ತು ಪುಸ್ತಕಗಳನ್ನೊದುವ ಸೌಲಭ್ಯ ದೊರೆಯಲಿ ಎನ್ನುವ ಉದ್ದೇಶದಿಂದ ಗ್ರಾಮೀಣ ಗ್ರಂಥಾಲಯಗಳ ಸ್ಥಾಪನೆಗೆ ಮುಂದಾದ ಸರ್ಕಾರದ ಕ್ರಮ ಸ್ವಾಗತಾರ್ಹ.  ಈ ಕಾರಣದಿಂದ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮೀಣ ಗ್ರಂಥಾಲಯಗಳನ್ನು ಸ್ಥಾಪಿಸುವ ಯೋಜನೆ ಹಮ್ಮಿಕೊಳ್ಳಲಾಯಿತು. ಇದುವರೆಗೆ ಸಾವಿರಾರು ಗ್ರಾಮೀಣ ಗ್ರಂಥಾಲಯಗಳನ್ನು ಕರ್ನಾಟಕ ರಾಜ್ಯದಾದ್ಯಂತ ಸ್ಥಾಪಿಸಲಾಗಿದೆ. ಇಲ್ಲಿಯೂ ಕಟ್ಟಡ, ಪಿಠೋಪಕರಣಗಳು, ಸಿಬ್ಬಂದಿ ಮತ್ತು ಪುಸ್ತಕಗಳದ್ದೇ ಸಮಸ್ಯೆ. ಜಿಲ್ಲಾ ಮತ್ತು ನಗರ ಕೇಂದ್ರ ಗ್ರಂಥಾಲಯಗಳಲ್ಲಿ ಮುರಿದು ದುರಸ್ಥಿಯಾದ ಪಿಠೋಪಕರಣಗಳನ್ನೆ ಗ್ರಾಮೀಣ ಗ್ರಂಥಾಲಯಗಳಿಗೆ ಕೊಡಲಾಗುವುದು. ಪುಸ್ತಕಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೆನಿರುವುದಿಲ್ಲ. ಮುಖ್ಯ ಗ್ರಂಥಾಲಯಗಳಲ್ಲಿ ಓದಿ ಹಾಳಾದ ಪುಸ್ತಕಗಳೇ ಇಲ್ಲಿ ಓದಲು ಸಿಗುತ್ತವೆ. ಗ್ರಾಮೀಣ ಪರಿಸರದ ಓದುಗರಿಗೆ ಅವರ ಅಭಿರುಚಿಗನುಗುಣವಾದ ಪುಸ್ತಕಗಳು ಇಲ್ಲಿ ಓದಲು ಸಿಗುವುದಿಲ್ಲ. ಮಲೆನಾಡಿನ ‘ನೀರಾ’ ಕೊಯ್ಲಿನ ಮಾಹಿತಿ ಉತ್ತರ ಕರ್ನಾಟಕದ ಬಯಲು ಸೀಮೆಯ ರೈತರಿಗೆ ಒದಗಿಸುವ ಅಸಂಗತ ಸಂಗತಿಯನ್ನು ಇಲ್ಲಿ ಕಾಣಬಹುದು. ಗ್ರಂಥಾಲಯಕ್ಕೆ ದಿನಪತ್ರಿಕೆಗಳು ಮತ್ತು ನಿಯತಕಾಲಿಕೆಗಳು ಬರುತ್ತವೆಯಾದರೂ ಅವುಗಳು ಸ್ಥಳೀಯ ರಾಜಕೀಯ ನಾಯಕರುಗಳ ಮನೆಯ ಪಡಸಾಲೆಯ ಅಲಂಕಾರಿಕ ವಸ್ತುಗಳಾಗುತ್ತಿವೆ. ಓದುಗರಿಲ್ಲದೆ ಗ್ರಂಥಾಲಯಗಳು ಹಾಳು ಹರಟೆಯ ಇಲ್ಲವೇ ಇಸ್ಪೀಟ್ ಆಟದ ಕೇಂದ್ರಗಳಾಗಿವೆ.

     ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸರ್ಕಾರದ ಮಟ್ಟದಲ್ಲಿ ಅವಗಣನೆಗೆ ಒಳಗಾಗಿರುವುದು ಸತ್ಯಕ್ಕೆ ಹತ್ತಿರವಾದ ಮಾತು. ಸರ್ಕಾರದ ಈ ನಿರ್ಲಕ್ಷ್ಯದ ಧೋರಣೆಗೆ ಇಲಾಖೆಯ ಸಿಬ್ಬಂದಿಯೇ ಹೇಳುವಂತೆ ಈ ಇಲಾಖೆ ಸರ್ಕಾರಕ್ಕೆ ಆರ್ಥಿಕವಾಗಿ ಹೊರೆಯಾಗಿದೆ ಎನ್ನುವುದು ಒಂದು ಕಾರಣವಾದರೆ ಎರಡನೆಯ ಮಹತ್ವದ ಕಾರಣ ಇದು ಅನುತ್ಪಾದನಾ ಇಲಾಖೆ ಎನ್ನುವ ಭಾವನೆ ಸರ್ಕಾರಿ ಅಧಿಕಾರಿಗಳಲ್ಲಿ ದಟ್ಟವಾಗಿದೆ. ಎಲ್ಲವನ್ನೂ ಲಾಭ ಮತ್ತು ನಷ್ಟಗಳ ವ್ಯವಹಾರಿಕ ದೃಷ್ಟಿಕೋನದಲ್ಲೇ ನೋಡುವುದು ಸಮಂಜಸವಲ್ಲ. ಸಾರ್ವಜನಿಕ ಗ್ರಂಥಾಲಯ ಇಲಾಖೆ ಓದಿನ ಅಭಿರುಚಿಯನ್ನು ಬೆಳೆಸುವ ಒಂದು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕಾದ ಉದಾತ್ತ ಧ್ಯೇಯ ಹೊಂದಿರುವಾಗ ಸರ್ಕಾರ ಅದನ್ನು ಆರ್ಥಿಕ ಹೊರೆಯೆಂದು ಪರಿಗಣಿಸುವುದಾಗಲಿ ಮತ್ತು ಅನುತ್ಪಾದನಾ ಕ್ಷೇತ್ರವೆಂದು ನಿರ್ಲಕ್ಷಿಸುವುದಾಗಲಿ ಸರಿಯಲ್ಲ. ಏಕೆಂದರೆ ಆರ್ಥಿಕ ಪ್ರಗತಿಯೊಂದೇ ದೇಶದ/ನಾಡಿನ ಬೆಳವಣಿಗೆಯಲ್ಲ. ಆರ್ಥಿಕ ಪ್ರಗತಿಯ ಜೊತೆಗೆ ಸಾಂಸ್ಕೃತಿಕ ಪ್ರಗತಿ ಕೂಡ ಒಂದು ನಾಡಿನ/ದೇಶದ ಬೆಳವಣಿಗೆಯಲ್ಲಿ ಬಹುಮಹತ್ವದ ಪಾತ್ರವನ್ನು ವಹಿಸುತ್ತದೆ.  

  ಈ ಎಲ್ಲ ಸಮಸ್ಯೆಗಳ ನಡುವೆಯೂ ಸಾರ್ವಜನಿಕ ಗ್ರಂಥಾಲಯ ಇಲಾಖೆ ತನ್ನಲ್ಲಿನ ಪುಸ್ತಕಗಳ ಡಿಜಿಟಲೀಕರಣಗೊಳಿಸುವ ಕಾರ್ಯಕ್ಕೆ ಮುಂದಾಗಿದೆ. ಇಲಾಖೆಯ ಈ ನಿರ್ಧಾರವನ್ನು ಸ್ವಾಗತಿಸುವ ಹೊತ್ತಿನಲ್ಲೇ ಅದು ಡಿಜಿಟಲೀಕರಣಗೊಳಿಸುತ್ತಿರುವ ಪುಸ್ತಕಗಳ ಕುರಿತು ಮತ್ತೆ ಪ್ರಶ್ನೆ ಎದುರಾಗುತ್ತದೆ. ಕೆ.ಜಿಗಳ ಲೆಕ್ಕದಲ್ಲಿ ತೂಗಿ ಖರೀದಿಸಿದ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸುತ್ತಿದ್ದರೆ ಅದು ಆರ್ಥಿಕವಾಗಿ ಇಲಾಖೆಗೆ ಹೊರೆಯ ಕೆಲಸ. ಜೊತೆಗೆ ಗಣಕೀಕೃತ ಪುಸ್ತಕಗಳನ್ನು ಓದುವ ಓದುಗರು ಯಾರು ಎಂದು ಕೂಡ ಈ ಸಂದರ್ಭ ಯೋಚಿಸಬೇಕಾಗಿದೆ. ಮಧ್ಯವಯಸ್ಸಿನ ಮತ್ತು ವಯೋವೃದ್ಧ ಓದುಗರನ್ನು ಈ ಹೊಸ ವ್ಯವಸ್ಥೆಗೆ ಹೊಂದಿಕೊಳ್ಳುವಂತೆ ಮಾಡುವುದು ಅದೊಂದು ಸವಾಲಿನ ಕೆಲಸ. ಇನ್ನು ಯುವ ಓದುಗರಾದ ಕಾಲೇಜು ವಿದ್ಯಾರ್ಥಿಗಳ ಓದು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳಿಗಷ್ಟೇ ಸೀಮಿತ. ಆದ್ದರಿಂದ ಕೋಟ್ಯಾಂತರ ರೂಪಾಯಿಗಳನ್ನು ಡಿಜಿಟಲೀಕರಣಕ್ಕಾಗಿ ಖರ್ಚು ಮಾಡುವುದಕ್ಕಿಂತ ಅದೇ ಹಣವನ್ನು ಅತ್ಯುತ್ತಮ ಪುಸ್ತಕಗಳ ಖರೀದಿ ಮತ್ತು ಪಿಠೋಪಕರಣಗಳಿಗಾಗಿ ಖರ್ಚು ಮಾಡಬಹುದು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬೇಕಾದ ಅಧಿಕಾರಿಗಳೇ ಇಂಥದ್ದೊಂದು ಯೋಜನೆಯ ಫಲಾನುಭವಿಗಳಾಗುತ್ತಿರುವುದು ವ್ಯವಸ್ಥೆಯೊಂದರ ದುರಂತಕ್ಕೆ ಸಾಕ್ಷಿ. ಒಟ್ಟಿನಲ್ಲಿ ಸಮಸ್ಯೆ ಕೇಂದ್ರಿತವಾದ ಸಾರ್ವಜನಿಕ ಗ್ರಂಥಾಲಯಗಳನ್ನು ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾಗಬೇಕು. ಸಂಬಂಧ ಪಟ್ಟ ಮಂತ್ರಿಗಳು ಈ ಬಗ್ಗೆ ಗಮನಹರಿಸಬೇಕು. ಸಾರ್ವಜನಿಕ ಗ್ರಂಥಾಲಯಗಳು ಜನಸಾಮಾನ್ಯರ ವಿಶ್ವವಿದ್ಯಾಲಯಗಳೆನ್ನುವ ನಂಬಿಕೆ ನಿಜವಾಗಬೇಕು. ಸರ್ಕಾರ ಅಗತ್ಯದ ಕ್ರಮಗಳನ್ನು ಕೈಗೊಳ್ಳದೆ ಹೋದರೆ ಸಾರ್ವಜನಿಕ ಗ್ರಂಥಾಲಯಗಳು ಬಹುದೊಡ್ಡ ಓದುಗರ ಸಮೂಹದಿಂದ ವಿಮುಖವಾಗಿ ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವ ವಿದ್ಯಾರ್ಥಿಗಳ ನೆಲೆಗಳಾಗುವ ದಿನಗಳು ಬಹಳ ದೂರವಿಲ್ಲ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Thursday, June 11, 2020

ಭವಿಷ್ಯದ ಬದುಕಿಗೆ ವರ್ತಮಾನದಲ್ಲೊಂದು ಪಾಠ

       ಪ್ರಕೃತಿಯ ಮೇಲೆ ಮನುಷ್ಯನ ಅಟ್ಟಹಾಸ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇದು ಇವತ್ತು ನಿನ್ನೆಯ ಮಾತಲ್ಲ. ವಿಪರ್ಯಾಸವೆಂದರೆ ಹೀಗೆ ಪ್ರಕೃತಿಯ ಮೇಲೆ ಅಟ್ಟಹಾಸ ಗೈಯುತ್ತಿರುವ ಮನುಷ್ಯನೇ ಹಿಂದೊಮ್ಮೆ ಅದನ್ನು ದೇವರೆಂದು ಪೂಜಿಸುತ್ತಿದ್ದ. ಇತಿಹಾಸದ ಕಾಲಗರ್ಭದಲ್ಲೊಮ್ಮೆ ಹಣಿಕಿಕ್ಕಿದಾಗ ಈ ಮನುಷ್ಯನ ಪೂರ್ವಜರು ಪ್ರಕೃತಿಯನ್ನೇ ದೇವರೆಂದು ಪೂಜಿಸಿದ ಸಾಕಷ್ಟು ಉದಾಹರಣೆಗಳಿವೆ. ಮಳೆ, ಗಾಳಿ, ಬೆಂಕಿ, ಬೆಟ್ಟ, ಗುಡ್ಡ, ನದಿ, ನೀರನ್ನೆ ಅವರೆಲ್ಲ ದೇವರೆಂದು ಪೂಜಿಸಿದ್ದುಂಟು. ಹೀಗೆ ಪೂಜಿಸುವುದರಲ್ಲೂ ಅದಕ್ಕೊಂದು ಅರ್ಥವಿದೆ. ಏಕೆಂದರೆ ಮನುಷ್ಯ ಜೀವಂತವಾಗಿರಲು ಅಗತ್ಯವಾದದ್ದನ್ನೆಲ್ಲ ಆತ ಪಡೆಯುವುದು ಪ್ರಕೃತಿಯಿಂದ. ಕುಡಿಯಲು ನೀರು, ಉಸಿರಾಡಲು ಗಾಳಿ, ತಿನ್ನಲು ಆಹಾರ ಮನುಷ್ಯನ ಈ ಎಲ್ಲ ಮೂಲಭೂತ ಅವಶ್ಯಕತೆಗಳು ಅವನಿಗೆ ಪ್ರಾಪ್ತವಾಗುವುದು ಪ್ರಕೃತಿಯಿಂದಲೇ. ಹೀಗಾಗಿ ಪ್ರಕೃತಿಯನ್ನು ದೇವರೆಂದು ಪೂಜಿಸುವುದರಲ್ಲಿ ತುಂಬ ವಿಶಾಲವಾದ ಅರ್ಥವಿದೆ.

    ದೇವರೆಂದೇ ಪರಿಗಣಿಸಲ್ಪಟ್ಟ ಪ್ರಕೃತಿ ಮುಂದೊಂದು ದಿನ ಅದೇ ಮನುಷ್ಯನ ಕ್ರೌರ್ಯಕ್ಕೆ ಒಳಗಾದದ್ದು ಮಾತ್ರ ಇತಿಹಾಸದ ವ್ಯಂಗ್ಯಗಳಲ್ಲೊಂದು. ಮಾತು, ಭಾಷೆ, ಅಕ್ಷರ, ವಿದ್ಯೆಯನ್ನು ಕಲಿತ ಮನುಷ್ಯ ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಪ್ರಕೃತಿಯ ಮೇಲೆ ಪ್ರಚಂಡ ಯಶಸ್ಸು ಸಾಧಿಸಿದ್ದೆನೆಂಬ ಭ್ರಮೆಗೆ ಒಳಗಾದ. ಮನುಷ್ಯನ ಈ ಭ್ರಮೆಯೇ  ಅವನು ಪ್ರಕೃತಿಯ ಮೇಲೆ ಅಟ್ಟಹಾಸ ಮೆರೆಯಲು ಕಾರಣವಾಯಿತು. ಹೀಗೆ ಭ್ರಮೆಗೆ ಒಳಗಾದ ಮನುಷ್ಯನಿಗೆ ಪ್ರಕೃತಿ ಮಾತ್ರ ಕಾಲಕಾಲಕ್ಕೆ ತಕ್ಕ ಉತ್ತರವನ್ನೇ ನೀಡುತ್ತ ಬಂದಿದೆ. ಸುನಾಮಿ, ಚಂಡಮಾರುತ, ನೆರೆಹಾವಳಿ, ಪ್ರವಾಹ, ಭೀಕರ ಬರಗಾಲ ಇಂಥ ಸನ್ನಿವೇಶಗಳನ್ನು ಸೃಷ್ಟಿಸುತ್ತ ಪ್ರಕೃತಿಯು ಮನುಷ್ಯರ ಬದುಕನ್ನು ತಲ್ಲಣಗೊಳಿಸಿದೆ ಮತ್ತು ಎಚ್ಚರಿಕೆಯ ಪಾಠವನ್ನೂ ಕಲಿಸುತ್ತ ಬಂದಿದೆ. ಈಗ ಪ್ರಕೃತಿ ಮತ್ತೊಮ್ಮೆ ತನ್ನ ಮಗ್ಗಲು ಬದಲಿಸಿ ಕೊರೋನಾ ವೈರಾಣುವಿನ ಮೂಲಕ ಭೀಕರ ಕಾಯಿಲೆಯನ್ನು ಸೃಷ್ಟಿಸಿ ಇಡೀ ವಿಶ್ವವನ್ನೇ ನಡುಗಿಸಿದೆ. 

      ಎಷ್ಟು ವಿಚಿತ್ರ ನೋಡಿ ಬೀಸುವ ಗಾಳಿ, ಹರಿಯುವ ನೀರು, ಆಕಾಶದೆತ್ತರದ ಬೆಟ್ಟಗಳ ಮೇಲೆಲ್ಲ ದಿಗ್ವಿಜಯ ಸಾಧಿಸಿದ ಮನುಷ್ಯನನ್ನು ಸಣ್ಣದೊಂದು ಕ್ರಿಮಿ (ವೈರಸ್) ತಲ್ಲಣಗೊಳಿಸಿದೆ. ಮಾಸ್ಕ್, ಗ್ಲೌಜ್, ಸಾಮಾಜಿಕ ಅಂತರ, ಲಾಕ್‍ಡೌನ್, ಸೀಲ್‍ಡೌನ್ ಎನ್ನುವಂಥ ದೊಡ್ಡ ದೊಡ್ಡ ಪದಗಳನ್ನು ಬಳಸುತ್ತ ಆ ಸಣ್ಣದೊಂದು ಕ್ರಿಮಿಯನ್ನು ಎದುರಿಸಲು ಇಡೀ ವಿಶ್ವ ಸನ್ನದ್ದುಗೊಂಡು ನಿಂತಿತು. ವಿಶ್ವದ ದೊಡ್ಡಣ್ಣನೆಂದೇ ಖ್ಯಾತಿ ಪಡೆದ ಅಮೆರಿಕಾದಂಥ ಬಲಿಷ್ಠ ರಾಷ್ಟ್ರ ಕೂಡ ಅಕ್ಷರಶ: ಹತಾಶೆಯಿಂದ ಕೈಚೆಲ್ಲಿ ಕೂಡಬೇಕಾಯಿತು. ರೋಗದ ವಿಸ್ತರಣೆ, ಹೆಚ್ಚುತ್ತಿರುವ ಸಾವಿನ ಸಂಖ್ಯೆ, ವ್ಯಾಪಾರು ವಹಿವಾಟು ಸ್ಥಗಿತಗೊಂಡು ಕುಸಿದ ಆರ್ಥಿಕ ಮಟ್ಟ, ಭಯದ ನೆರಳಲ್ಲಿ ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಸ್ಥಿತಿ, ದಿನನಿತ್ಯದ ಎರಡು ಹೊತ್ತಿನ ಊಟಕ್ಕೂ ದಿನದ ದುಡಿಮೆಯನ್ನೇ ಅವಲಂಬಿಸಿದವರ ಪರದಾಟ, ಭವಿಷ್ಯದ ಅನಿಶ್ಚಿತತೆ ಹೀಗೆ ಅನೇಕ ಆತಂಕದ ಕ್ಷಣಗಳನ್ನು ಎದುರಿಸಬೇಕಾಯಿತು.

     ಕೊರೋನಾವನ್ನು ವೈದ್ಯಕೀಯ ಹಿನ್ನೆಲೆಯಲ್ಲಿ ವಿಶ್ಲೇಷಿಸಿ ನೋಡುವುದು ನನ್ನ ಈ ಲೇಖನದ ಉದ್ದೇಶವಲ್ಲ ಮತ್ತು ಅದು ನನ್ನ ತಿಳುವಳಿಕೆಯ ಮಟ್ಟವನ್ನು ಮೀರಿದ ಸಂಗತಿ ಕೂಡ ಹೌದು. ನನ್ನ ತಿಳುವಳಿಕೆಯ ಇತಿ ಮಿತಿಯನ್ನು ಎಚ್ಚರದ ಪ್ರಜ್ಞೆಯಲ್ಲಿಟ್ಟುಕೊಂಡು ನಾನು ಕೊರೋನಾ ವೈರಾಣು ಸೃಷ್ಟಿಸಿದ ಈ ಸನ್ನಿವೇಶ ಬದುಕಿಗೆ ಅದು ಹೇಗೆ ಧನಾತ್ಮಕವಾಗಿ ಪ್ರಯೋಜನವಾಯಿತು ಎನ್ನುವುದನ್ನು ಈ ಮುಂದೆ ಹೇಳಲು ಬಯಸುತ್ತೇನೆ.

      ಕೊರೋನಾ ಎನ್ನುವ ಭೀಕರ ವೈರಾಣು ಕಾಣಿಸಿಕೊಂಡಿದ್ದೆ ತಡ ಜನರೆಲ್ಲ ತಮ್ಮ ತಮ್ಮ ಮನೆಗಳೆನ್ನುವ ನಾಲ್ಕು ಗೋಡೆಗಳ ನಡುವೆ ಬಂಧಿತರಾದರು. ರಸ್ತೆಗಳೆಲ್ಲ ಜನಸಂಚಾರವಿಲ್ಲದೆ ಬಿಕೋ ಎನ್ನತೊಡಗಿದವು. ರಸ್ತೆಗಿಳಿದರೆ ಸಾವು ಎನ್ನುವ ಹೆಮ್ಮಾರಿ ತನ್ನ ಕಬಂದ ಬಾಹುಗಳಿಂದ ನಮ್ಮನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದೆನ್ನುವ ಭೀತಿ ಅಬಾಲ ವೃದ್ಧರಾದಿಯಾಗಿ ಎಲ್ಲ ವಯೋಮಾನದವರನ್ನು ಕಾಡಲಾರಂಭಿಸಿತು. ಬಡವ-ಶ್ರೀಮಂತ, ಸ್ತ್ರೀ-ಪುರುಷ, ಮೇಲು-ಕೀಳು ಎನ್ನುವ ಯಾವ ಬೇಧಗಳಿಲ್ಲದೆ ಪ್ರತಿಯೊಬ್ಬರೂ ಕೊರೋನಾ ವೈರಾಣುವಿನ ಭೀತಿಗೆ ಒಳಗಾದರು. ಹೀಗೆ ಜನರೆಲ್ಲ ತಮ್ಮ ತಮ್ಮ ಮನೆಗಳಲ್ಲಿ ಬಂಧಿತರಾದದ್ದು ಒಂದರ್ಥದಲ್ಲಿ ಕುಟುಂಬದ ಸದಸ್ಯರ ನಡುವಣ ಪರಸ್ಪರ ಸಂಬಂಧ ಹೊಸ ಅರ್ಥದಲ್ಲಿ ಚಿಗುರೊಡೆಯಲು ಕಾರಣವಾಯಿತು. ಒಂದೇ ಸೂರಿನಡಿ ವಾಸಿಸುತ್ತಿದ್ದರೂ ಮಾನಸಿಕವಾಗಿ ಪರಸ್ಪರ ಅಪರಿಚಿತರಂತೆ ಬದುಕುತ್ತಿದ್ದವರಿಗೆ ಈ ಗೃಹಬಂಧನ ಸಂಬಂಧಗಳನ್ನು ಹೊಸ ಬೆಳಕಿನಡಿ ವಿಶ್ಲೇಷಿಸಿ ನೋಡಲು ಅನುವು ಮಾಡಿಕೊಟ್ಟಿತು. ಅಪ್ಪ, ಅಮ್ಮ, ಗಂಡ, ಹೆಂಡತಿ, ಮಕ್ಕಳು, ಅಜ್ಜ, ಅಜ್ಜಿ ಈ ಎಲ್ಲ ಸಂಬಂಧಗಳು ಪರಸ್ಪರ ಅರ್ಥಮಾಡಿಕೊಂಡು ಮತ್ತಷ್ಟು ಗಾಢವಾಗಲು ಸಾಧ್ಯವಾಯಿತು. ಎಲ್ಲರೂ ಜೊತೆಯಾಗಿ ಆಡುವುದು, ನಲಿಯುವುದು, ಊಟ ಮಾಡುವುದು, ಕಥೆ ಹೇಳುವುದು ಹೀಗೆ ಕುಟುಂಬದ ಸದಸ್ಯರೆಲ್ಲ ಜೊತೆಯಾಗಿ ಒಂದು ಗುಣಾತ್ಮಕ ಸಮಯವನ್ನು ಕಳೆಯಲು ಈ ಸನ್ನಿವೇಶ ಅನುಕೂಲ ಮಾಡಿಕೊಟ್ಟಿತು. ಆಧುನಿಕತೆಯ ಅನ್ವೇಷಣೆಯಾದ ತಂತ್ರಜ್ಞಾನವು ಮನುಷ್ಯ ಮನುಷ್ಯರ ಮಧ್ಯೆ ಕಂದಕ ಸೃಷ್ಟಿಸಿ ಪರಸ್ಪರ ಅಪರಿಚಿತರಂತೆ ಬದುಕುತ್ತಿರುವ ಈ ಸಂಕ್ರಮಣದ ಕಾಲದಲ್ಲಿ ಮನುಷ್ಯ ಸಂಬಂಧವನ್ನು ಹೊಸ ಪರಿವೇಷದಲ್ಲಿ ನೋಡುವಂತಾಯಿತು.   

     ನಾವೆಲ್ಲರೂ ಏಕಾಂತಕ್ಕಿಂತ ಲೋಕಾಂತ ಪ್ರಿಯರು. ಎಷ್ಟೇ ಲೋಕಾಂತ ಪ್ರಿಯರಾಗಿದ್ದರೂ ಪ್ರತಿಯೊಬ್ಬ ಮನುಷ್ಯನಲ್ಲಿ ಅವನದೆ ಆದ ಏಕಾಂತದ ಪ್ರದೇಶವೊಂದಿರುತ್ತದೆ ಎನ್ನುತಾರೆ ಕಥೆಗಾರ ಕೆ.ಸತ್ಯನಾರಾಯಣ. ಹೀಗಾಗಿ ಮನುಷ್ಯ ಆಗಾಗ ತನ್ನೊಳಗಿನ ಆ ಏಕಾಂತದ ಪ್ರದೇಶವನ್ನು ಪ್ರವೇಶಿಸಿ ತನ್ನೊಂದಿಗೆ ತಾನು ಮಾತನಾಡುತ್ತಿರಬೇಕು. ಒಂದರ್ಥದಲ್ಲಿ ಅದನ್ನು ಆತ್ಮಾವಲೋಕನ ಇಲ್ಲವೇ ಆತ್ಮ ವಿಮರ್ಶೆ ಎಂದೂ ಕರೆಯುವುದುಂಟು. ಹೀಗೆ ಮನುಷ್ಯ ಏಕಾಂತದಲ್ಲಿದ್ದಾಗಲೇ ಮಾತ್ರ ತನ್ನೊಂದಿಗೆ ತಾನು ಮಾತನಾಡಿಕೊಳ್ಳಲು ಸಾಧ್ಯವೆಂದೂ ಹಾಗೂ ತನ್ನೊಂದಿಗೆ ತಾನು ಮಾತನಾಡಿಕೊಳ್ಳುವಾಗ ಮಾತ್ರ ಮನುಷ್ಯ ಸತ್ಯ ನುಡಿಯುವನೆಂದೂ ಅನೇಕ ಮನೋವೈಜ್ಞಾನಿಕ ಸಂಶೋಧನೆಗಳು ರುಜುವಾತು ಪಡಿಸಿವೆ. ಇವತ್ತಿನ ಈ ಧಾವಂತದ ಬದುಕಿನಲ್ಲಿ ಮನುಷ್ಯನಿಗೆ ಏಕಾಂತಕ್ಕೆ ಅವಕಾಶವೇ ಇಲ್ಲದಂತಾಗಿದೆ. ಪ್ರತಿಕ್ಷಣ, ಪ್ರತಿಸಂದರ್ಭವನ್ನು ಅದೊಂದು ಸ್ಪರ್ಧೆ ಎನ್ನುವಂತೆ ಮನುಷ್ಯ ಬದುಕಬೇಕಾಗಿದೆ. ಅಸ್ತಿತ್ವಕ್ಕಾಗಿ ಹೋರಾಟದ ಈ ಬದುಕಿನಲ್ಲಿ ಬಲಶಾಲಿಯಾದವನು ಮಾತ್ರ ಬದುಕುಳಿಯುವ ಎನ್ನುವ ನಿಯಮ ಚಾಲ್ತಿಯಲ್ಲಿರುವ ಈ ಸಮಾಜದಲ್ಲಿ ಬಹಿರಂಗವೇ ಸತ್ಯವಾಗಿರುವಾಗ ಇನ್ನು ಅಂತರಂಗದ ಬದುಕಿಗೆ ಗಮನ ಕೊಡುವಷ್ಟು ವ್ಯವಧಾನವಾಗಲಿ, ಸಮಯ ಮತ್ತು ಸಂಯಮವಾಗಲಿ ಮನುಷ್ಯನಿಗೆಲ್ಲಿದೆ?. ಇದನ್ನು ಅರಿತೆ ಪ್ರಕೃತಿ ಕೊರೋನಾದ ಮೂಲಕ ಮನುಷ್ಯನಿಗೆ ಏಕಾಂತಕ್ಕೆ ಅವಕಾಶ ಕಲ್ಪಿಸಿ ಅವನೊಮ್ಮೆ ತನ್ನ ಅಂತರಂಗದ ಒಳಹೊಕ್ಕು ತನ್ನೊಂದಿಗೆ ತಾನು ಮಾತನಾಡಿಕೊಳ್ಳಲು ಉತ್ತಮ ಸಂದರ್ಭವನ್ನು ಒದಗಿಸಿತು. ಇನ್ನೊಂದು ಸಂತಸದ ಸಂಗತಿ ಎಂದರೆ ಹೀಗೆ ಒದಗಿದ ಏಕಾಂತ ಮನುಷ್ಯ ತನ್ನೊಳಗೆ ಅಡಗಿ ಕುಳಿತಿದ್ದ ಅನೇಕ ಉತ್ತಮ ಹವ್ಯಾಸಗಳತ್ತ ಮುಖ ಮಾಡಲು ಸೂಕ್ತ ಅವಕಾಶವನ್ನೊದಗಿಸಿತು. ತಮ್ಮ ಏಕಾಂತದ ಈ ಘಳಿಗೆಯಲ್ಲಿ ಅನೇಕರು ಪುಸ್ತಕಗಳನ್ನೊದಿದರು, ಸಂಗೀತ ಆಲಿಸಿದರು, ಚಿತ್ರ ಬಿಡಿಸಿದರು, ಸಿನಿಮಾ ನೋಡಿದರು ಹೀಗೆ ಸೃಜನಶೀಲ ಕ್ರಿಯೆಯಲ್ಲಿ ತೊಡಗಿಸಿಕೊಂಡು ಧನ್ಯತೆ ಅನುಭವಿಸಿದರು. ಕಪಾಟಿನಲ್ಲಿದ್ದ ಪುಸ್ತಕಗಳು ಧೂಳು ಕೊಡವಿಕೊಂಡು ಓದುಗರ ಕೈಸೇರಿದವು, ಕುವೆಂಪು, ಕಾರಂತ, ಚಿತ್ತಾಲ, ಭೈರಪ್ಪ ಆದಿಯಾಗಿ ಕನ್ನಡದ ಅನೇಕ ಮಹತ್ವದ ಲೇಖಕರು ಓದುಗರ ಮರುಓದಿಗೆ ಒಳಗಾದರು, ಪುಸ್ತಕಗಳ ಓದು ಹೊಸ ಹೊಸ ಚಿಂತನೆಗಳಿಗೆ ಕಾರಣವಾಯಿತು ಆ ಮೂಲಕ ಬದುಕನ್ನು ಹೊಸ ಅರ್ಥದಲ್ಲಿ ಗ್ರಹಿಸಲು ಸಾಧ್ಯವಾಯಿತು. ಜನಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ, ಚಿಂತಕರು, ರಾಜಕಾರಣಿಗಳು ಪ್ರತಿಯೊಬ್ಬರು ಈ ಏಕಾಂತದ ಬಿಡುವಿನ ವೇಳೆಯಲ್ಲಿ ತಮಗೆ ಪುಸ್ತಕಗಳು ಉತ್ತಮ ಸಾಂಗತ್ಯ ಒದಗಿಸಿದವು ಎಂದಿರುವರು. ಅನೇಕ ಪುಸ್ತಕ ಪ್ರಕಾಶಕರು ಮತ್ತು ಮಾರಾಟಗಾರರನ್ನು ಓದುಗರು ಸಂಪರ್ಕಿಸಿ ಪುಸ್ತಕಗಳನ್ನು ಪೂರೈಸುವಂತೆ ಬೇಡಿಕೆ ಇಟ್ಟರು. ಕರ್ನಾಟಕದ ಪ್ರಮುಖ ಪುಸ್ತಕ ಪ್ರಕಾಶಕರಾದ ನವಕರ್ನಾಟಕ, ಛಂದ, ಅಂಕಿತ, ಸಪ್ನ, ಅಭಿನವ ಓದುಗರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿ ಲಾಕ್‍ಡೌನ್ ತೆರವಾದ ನಂತರ ಪುಸ್ತಕಗಳನ್ನು ಪೂರೈಸುವ ಭರವಸೆ ನೀಡಿದರು. ಛಂದ ಪುಸ್ತಕ ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಪ್ರಕಟಿತ ಪುಸ್ತಕಗಳನ್ನು ಡಿಜಿಟಿಲೀಕರಣಗೊಳಿಸಿ ಪ್ರತಿಶತ 50 ರ ರಿಯಾಯಿತಿ ದರದಲ್ಲಿ ಓದಲು ಅವಕಾಶ ಮಾಡಿಕೊಟ್ಟಿತು. ಒಟ್ಟಿನಲ್ಲಿ ಜನರಲ್ಲಿ ಇದೇ ಓದಿನ ಅಭಿರುಚಿ ಭವಿಷ್ಯದಲ್ಲೂ ಮುಂದುವರೆದಲ್ಲಿ ಪುಸ್ತಕ ಪ್ರಕಾಶಕರಿಗೆ ಅದೊಂದು ವರದಾನವಾಗಿ ಪರಿಣಮಿಸಬಹುದು.

      ಕೊರೋನಾ ಭೀತಿಯಿಂದ ಸಾಮಾನ್ಯವಾಗಿ ಬಹುತೇಕ ಖಾಸಗಿ ಆಸ್ಪತ್ರೆಗಳು ಬಾಗಿಲು ಹಾಕಿದವು ಮತ್ತು ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್ ರೋಗಿಗಳಿಗಾಗಿ ಎಂದು ಪರಿವರ್ತಿಸಲಾಯಿತು. ಕೋವಿಡ್ ಹೊರತುಪಡಿಸಿದ ಇತರ ಸಾಮಾನ್ಯ ಕಾಯಿಲೆಗಳಿಗೆ ವೈದ್ಯಕೀಯ ಚಿಕಿತ್ಸೆ ದೊರೆಯುವುದು ಅಸಾಧ್ಯವಾಯಿತು. ಆರೋಗ್ಯಕ್ಕೆ ಮಹತ್ವಕೊಡುವ ಮತ್ತು ಸಣ್ಣಪುಟ್ಟ ಕಾಯಿಲೆಗಳಿಗೂ ಆಸ್ಪತ್ರೆಗಳ ಬಾಗಿಲು ತಟ್ಟುವ ನಾವು ಈ ಗೃಹಬಂಧನದ ಸಂದರ್ಭ ಆಸ್ಪತ್ರೆಗಳ ವೈದ್ಯಕೀಯ ನೆರವಿಲ್ಲದೆ ಸಣ್ಣಪುಟ್ಟ ಕಾಯಿಲೆಗಳಿಗೆ ಗೃಹ ಔಷಧಿಯನ್ನೇ ಅವಲಂಬಿಸಬೇಕಾಯಿತು. ಆಶ್ಚರ್ಯವೆಂದರೆ ಈ ಸಂದರ್ಭ ಬೇರೆ ಯಾವ ರೋಗರುಜಿನಗಳು ನಮ್ಮನ್ನು ಕಾಡಲಿಲ್ಲ ಕಂಗೆಡಿಸಲಿಲ್ಲ. ಸಾರ್ವಜನಿಕರ ಆರೋಗ್ಯದಲ್ಲಿ ಗಮನಾರ್ಹವಾದ ಪ್ರಗತಿ ಕಂಡುಬಂದಿತು. ಕುಟುಂಬ ಪ್ರೀತಿ, ಹಿತಮಿತವಾದ ಆಹಾರ, ಪುಸ್ತಕಗಳ ಓದು, ಸದಭಿರುಚಿಯ ಸಿನಿಮಾಗಳ ವೀಕ್ಷಣೆ ಒಟ್ಟಿನಲ್ಲಿ ಇಂಥ ದೈನಂದಿನ ಚಟುವಟಿಕೆಗಳ ಮೂಲಕ ನಾವೆಲ್ಲ ಆರೋಗ್ಯವನ್ನು ತುಂಬ ಉತ್ತಮವಾಗಿಯೇ  ಕಾಪಾಡಿಕೊಂಡು ಬಂದೆವು. ಇದಕ್ಕೆಲ್ಲ ಕಾರಣ ಜಂಕ್ ಫುಡ್‍ಗಳಿಂದ ದೂರವಿದ್ದುದು, ದೈಹಿಕ ಶ್ರಮಕ್ಕೆ ಒತ್ತು ನೀಡಿದ್ದು, ಹಿತಮಿತವಾದ ಆಹಾರ ಸೇವನೆ, ಮಾನಸಿಕ ಒತ್ತಡದಿಂದ ದೂರವಿದ್ದುದ್ದು ಕೂಡ ಮುಖ್ಯ ಸಂಗತಿಗಳು. ವಾಹನಗಳು ರಸ್ತೆಗಿಳಿಯದೇ ಇದ್ದದ್ದು, ಕಡಿಮೆ ಜನಸಂಚಾರ, ಕಾರ್ಖಾನೆಗಳ ಮಾಲಿನ್ಯ ಕಡಿಮೆಯಾದದ್ದು ಅಪರೋಕ್ಷವಾಗಿ ಪರಿಸರದ ನೈರ್ಮಲ್ಯಕ್ಕೆ ಕಾರಣಗಳಾದವು. ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಅದೆಷ್ಟೋ ಕುಟುಂಬಗಳು ಈ ಸಂದರ್ಭ ನಗರಗಳನ್ನು ತೊರೆದು ಹಳ್ಳಿಗಳತ್ತ ಮುಖಮಾಡಿದರು. ಗಾಂಧೀಜಿ ಅವರ ಗ್ರಾಮೀಣ ಭಾರತದ ಪರಿಕಲ್ಪನೆ ಈ ಮೂಲಕವಾದರೂ ಪ್ರಯೋಜನಕ್ಕೆ ಬಂದದ್ದು ಅದೊಂದು ಮಹತ್ವದ ಸಾಮಾಜಿಕ ಪಲ್ಲಟ. 

ಗಾಂಧಿ ನೆನಪಾದರು


ಗಾಂಧೀಜಿ ಅವರ ವ್ಯಕ್ತಿತ್ವ ಮತ್ತು ವಿಚಾರಗಳು ಎಲ್ಲ ಕಾಲಕ್ಕೂ ಪ್ರಸ್ತುತ ಏಕೆ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಂಡ ಸಂದರ್ಭವಿದು. ಗಾಂಧಿಯ ವ್ಯಕ್ತಿತ್ವವೇ ಹೀಗೆ ಸುಖದ ಸಂದರ್ಭದಲ್ಲೆಂದೂ ಅವರು ನೆನಪಾಗುವುದಿಲ್ಲ. ಸಂಕಟದ ಸಂದಿಗ್ಧ ಸನ್ನಿವೇಶದಲ್ಲೇ ನಮಗೆ ಗಾಂಧಿ ಮತ್ತೆ ಮತ್ತೆ ನೆನಪಾಗುತ್ತಾರೆ. ಕೊರೋನ ವೈರಾಣು ಸೃಷ್ಟಿಸಿದ ಈ ಆತಂಕಕಾರಿ ವಾತಾವರಣದಲ್ಲಿ ಸನ್ನಿವೇಶವನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಲು ನಮಗೆ ನೆರವಾದದ್ದು ಇದೇ ಗಾಂಧೀಜಿಯ ವಿಚಾರಧಾರೆಗಳು ಎನ್ನುವುದು ಮಹತ್ವದ ಸಂಗತಿ. ಹಿತಮಿತವಾದ ಆಹಾರ ಸೇವನೆ, ದೈಹಿಕ ಪರಿಶ್ರಮ, ಸರಳ ಬದುಕು, ಆಧುನಿಕತೆಯ ಅನ್ವೇಷಣೆಯಾದ ಐಷಾರಾಮಿ ಬದುಕಿನಿಂದ ಕಾಯ್ದುಕೊಂಡ ಅಂತರ, ಏಕಾಂತದ ಪ್ರವೇಶ ಗಾಂಧೀಜಿಯ ಈ ಗುಣಗಳನ್ನೆಲ್ಲ ನಾವು ಬಲವಂತವಾಗಿಯಾದರೂ ಈ ಸಂದರ್ಭ ಮೈಗೂಡಿಸಿಕೊಳ್ಳಬೇಕಾಯಿತು. ಏಕೆಂದರೆ ಅದು ನಮಗೆ ಬದುಕು ಮತ್ತು ಸಾವು ಈ ಎರಡರಲ್ಲಿ ಒಂದನ್ನು ಆಯ್ದುಕೊಳ್ಳುವ ಅನಿವಾರ್ಯತೆಯಾಗಿತ್ತು. ಕೊನೆಗೂ ನಾವು ಆಯ್ದುಕೊಂಡಿದ್ದು ಗಾಂಧಿಯನ್ನು ಅಂದರೆ ಬದುಕನ್ನು. ಆದ್ದರಿಂದಲೇ ಗಾಂಧಿಯೆಂದರೆ  ಕೇವಲ ಮನುಷ್ಯನಲ್ಲ ಅವರೊಂದು ತತ್ವ, ಸಿದ್ಧಾಂತ, ಧರ್ಮ ಇದೆಲ್ಲವನ್ನೂ ಮೀರಿದ ಒಂದು ಜೀವಸೆಲೆ ಅವರು. ವಿಪರ್ಯಾಸ ನೋಡಿ ಯಾವ ವ್ಯಕ್ತಿಯನ್ನು ಅತ್ಯಂತ ಸರಳೀಕೃತಗೊಳಿಸಿ ನಾವು ನೋಡುತ್ತೇವೆಯೋ ಅದೇ ವ್ಯಕ್ತಿಯ ವಿಚಾರಧಾರೆಗಳನ್ನು ನಾವು ಈ ಆತಂಕದ ಕ್ಷಣಗಳನ್ನು ಎದುರಿಸಲು ಮೈಗೂಡಿಸಿಕೊಳ್ಳಬೇಕಾಯಿತು.

    ಕೊರೋನಾ ವೈರಾಣು ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವುದು ಅದೊಂದು ವಾಸ್ತವ ಸತ್ಯ. ಈ ವಾಸ್ತವದೊಂದಿಗೆ ಎಚ್ಚರಿಕೆಯಿಂದ ಹೆಜ್ಜೆಹಾಕಬೇಕಾಗಿದೆ. ಈ ಸಂದರ್ಭ ನಮ್ಮ ಸಾಮಾಜಿಕ ಮತ್ತು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳು ಕಾಣಿಸಿಕೊಂಡು ಬದುಕನ್ನು ಮತ್ತು ಸುತ್ತಲಿನ ಸಮಾಜವನ್ನು ಹೊಸ ಅರ್ಥದಲ್ಲಿ ಗ್ರಹಿಸಲು ತೊಡಗಿದ್ದೇವೆ. ಪ್ರಕೃತಿಯೊಂದಿಗೆ ಹೇಗೆ ಸಮರಸದಿಂದ ಬದುಕಬೇಕೆಂಬುದು ಮನುಷ್ಯನಿಗೆ ಅರ್ಥವಾಗಿದೆ. ಮನುಷ್ಯನಿಗೆ ಪ್ರಕೃತಿ ಅನಿವಾರ್ಯವೇ ವಿನ: ಪ್ರಕೃತಿಗೆ ಮನುಷ್ಯ ಅನಿವಾರ್ಯವಲ್ಲ ಎನ್ನುವ ಸತ್ಯ ಮನದಟ್ಟಾಗಿದೆ. ಒಂದೊಮ್ಮೆ ಪ್ರಕೃತಿಯ ಮೇಲೆ ಇದೇ ಅಟ್ಟಹಾಸ ಮುಂದುವರೆದಲ್ಲಿ ಭವಿಷ್ಯದಲ್ಲಿ ಬದುಕು ಮತ್ತಷ್ಟು ಆತಂಕದ ಕ್ಷಣಗಳನ್ನು ಎದುರಿಸಬೇಕಾದಿತು ಎನ್ನುವ ಮುನ್ನೆಚ್ಚರಿಕೆಯೂ ಇದಾಗಿದೆ. ಒಟ್ಟಾರೆ ಪ್ರಕೃತಿಯು ನಮ್ಮ ಭವಿಷ್ಯದ ಬದುಕಿಗಾಗಿ ವರ್ತಮಾನದಲ್ಲಿ ಅತಿ ಮಹತ್ವದ ಪಾಠವನ್ನು ಕಲಿಸಿದೆ. ಇದೇ ಸಂದರ್ಭ ಕೊರೋನಾ ಅನೇಕ ಸತ್ಯಗಳ ಮೇಲೆ ಬೆಳಕು ಚೆಲ್ಲಿತು. ಒಂದೆಡೆ ಬಡವರು ಮತ್ತು ವಲಸಿಗರು ದುಡ್ಡಿಲ್ಲದೆ ತಮ್ಮ ತಮ್ಮ ಊರುಗಳಿಗೆ ತೆರಳಲು ಸಾವಿರಾರು ಕಿಲೋಮಿಟರ್ ದಾರಿಯನ್ನು ನಡೆದುಕೊಂಡು ಕ್ರಮಿಸಬೇಕಾಯಿತು. ಇನ್ನೊಂದೆಡೆ ಇಂದೂರಿನ ಉದ್ಯಮಿಯೊಬ್ಬರು ತಮ್ಮ ಮಗಳು, ಇಬ್ಬರು ಮೊಮ್ಮಕ್ಕಳು ಮತ್ತು ಒಬ್ಬ ಕೆಲಸದಾಯಕೆಯನ್ನು ದೆಹಲಿಗೆ ಕಳುಹಿಸಿಕೊಡಲು 20 ಲಕ್ಷ ರೂಪಾಯಿಗಳನ್ನು ವೆಚ್ಚಮಾಡಿ ಖಾಸಗಿ ವಿಮಾನವನ್ನು ಬಾಡಿಗೆಗೆ ಪಡೆದರು. ವ್ಯಾಪಾರಿಗಳು ಇದೇ ತಕ್ಕ ಸಮಯವೆಂದು ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿ ಹಣ ಮಾಡಿಕೊಂಡರು. ದೈಹಿಕ ತೊಂದರೆಯಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಹುಡುಗಿಯೊಬ್ಬಳು ಸೈಕಲ್ ಮೇಲೆ ಕರೆದೊಯ್ಯುತ್ತಿರುವಾಗ ಅದೆಷ್ಟು ಜನ ಸಮಸ್ಯೆಗೆ ಸ್ಪಂದಿಸಿದರು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಇವು ನಾವು ಬದುಕುತ್ತಿರುವ ಸಮಾಜದಲ್ಲಿನ ವೈರುಧ್ಯಗಳು. ಇಂಥ ಅನೇಕ ವೈರುಧ್ಯಗಳನ್ನು ಕೊರೋನಾ ತಂದೊಡ್ಡಿದ ಆತಂಕದ ವಾತಾವರಣದಲ್ಲಿ ನಾವೆಲ್ಲ ನೋಡುವಂತಾಯಿತು.

      ಯಶವಂತ ಚಿತ್ತಾಲರ ಕಥೆಯಲ್ಲಿ ಪಾತ್ರವೊಂದರ ಸಂಭಾಷಣೆ ಹೀಗಿದೆ ‘ಸೃಷ್ಟಿಯೊಳಗಿನ ಪ್ರತಿಯೊಂದು ಜೀವಂತ ಸಂಗತಿ ಉಳಿದೆಲ್ಲ ಜೀವಂತ ಸಂಗತಿಗಳೊಡನೆ ನಿಶ್ಯಬ್ದ ಮೌನದಲ್ಲಿ ಸಂವಾದ ನಡೆಸಿರುವಂಥದ್ದು-ಹುಟ್ಟುವಂತೆ, ಬೆಳೆಯುವಂತೆ, ಆರೋಗ್ಯ ಕಾಪಾಡಿಕೊಳ್ಳುವಂತೆ ಒಂದು ಇನ್ನೊಂದರ ಜೀವನೋತ್ಸಾಹವನ್ನು ಎತ್ತಿ ಹಿಡಿಯುವ, ಹುರಿದುಂಬಿಸುವ ಸತತ ಕ್ರಿಯೆಯಲ್ಲಿ ತೊಡಗಿರುವಂಥದ್ದು ಎಂಬ ಕಲ್ಪನೆಗೆ ಜೀವ ಝಲ್ಲೆನಿಸಿ ಮೈನವಿರಿಗೊಳಗಾಯಿತು. ಮನುಷ್ಯನು ಮಾತ್ರ ಈ ಕ್ರಿಯೆಗೆ ಹೇಗೆ ಹೊರತಾದನೋ ಎಂದು ದಿಗಿಲುಗೊಂಡೆ’. ಭವಿಷ್ಯದಲ್ಲಿ ಕೊರೋನಾದಂಥ ಮಾರಣಾಂತಿಕ ವೈರಾಣುಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳಲಿವೆ ಎನ್ನುವ ಆತಂಕ ತಂದೊಡ್ಡಿರುವ ಈ ಸಂದಿಗ್ಧ ಸನ್ನಿವೇಶದಲ್ಲಿ ಒಂದು ನೆಮ್ಮದಿಯ ಬದುಕಿಗಾಗಿ ಮನುಷ್ಯ ಚಿತ್ತಾಲರು ಹೇಳಿದಂತೆ ಪ್ರಕೃತಿಯ ಉದಾತ್ತ ಗುಣಗಳನ್ನು ಮೈಗೂಡಿಸಿಕೊಳ್ಳಬೇಕಾಗಿದೆ.

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 


Saturday, May 2, 2020

ಸಾವಿಲ್ಲದ ಮನೆಯ ಸಾಸಿವೆ (ಕಥೆ)

     





(ಕಥೆ ಮೇ-೨೦೨೦ ರ 'ಮಯೂರ' ದಲ್ಲಿ ಪ್ರಕಟವಾಗಿದೆ) 


       ಬಿ.ಡಿ.ಶರ್ಮಾ, ಗೋವಿಂದರಾವ್ ದೇಶಮುಖ, ಸುಕುಮಾರನ್ ಡಿಸೋಜಾ ಮತ್ತು ನಾನು ಎಲ್ಲರೂ ಒಂದೇ ಕಾಲೋನಿಯ ನಿವಾಸಿಗಳು. ಹಾಗೆಂದು ನಮ್ಮ ಮನೆಗಳೇನು ಒಂದಕ್ಕೊಂದು ಹತ್ತಿರದಲ್ಲಿಲ್ಲ. ಆದರೆ ಪ್ರತಿನಿತ್ಯ ಬೆಳಗ್ಗೆ ಮತ್ತು ಸಾಯಂಕಾಲ ವಾಕಿಂಗ್ ಹೋಗುವಾಗ ನಾವೆಲ್ಲ ಜೊತೆಯಾಗಿಯೇ ಹೋಗುವುದು ಬಹಳ ದಿನಗಳಿಂದ ರೂಢಿಸಿಕೊಂಡುಬಂದ ಪದ್ಧತಿಯಾಗಿದೆ. ಖಚಿತವಾಗಿ ಇಂತಹ ದಿನದಂದು ನಮ್ಮ ನಡುವೆ ಪರಿಚಯ ಅಥವಾ ಸ್ನೇಹ ಆರಂಭಗೊಂಡಿತು ಎಂದು ಹೇಳುವುದು ಅಸಾಧ್ಯದ ಸಂಗತಿಯಾದರೂ ಕಳೆದ ಹತ್ತು ವರ್ಷಗಳಿಂದ ನಾವು ಪರಸ್ಪರ ಪರಿಚಿತರು ಎನ್ನುವುದನ್ನು ನಿಖರವಾಗಿ ಹೇಳಬಹುದೇನೋ. ನಾವೇನೂ ಒಂದೇ ಕಚೇರಿಯಲ್ಲಿ ಕೂಡಿ ಕೆಲಸ ಮಾಡುವವರೇನಲ್ಲ. ನಾನು ಪಿ.ಡಬ್ಲ್ಯು.ಡಿನಲ್ಲಿ ನೌಕರನಾದರೆ ಶರ್ಮಾ ಎಲ್.ಐ.ಸಿನಲ್ಲಿ, ದೇಶಮುಖ ಕಾಲೇಜ್ ಲೆಕ್ಚರರ್ ಮತ್ತು ಡಿಸೋಜಾ ಬ್ಯಾಂಕ್ ಮ್ಯಾನೇಜರ್ ಹೀಗೆ ಬೇರೆ ಬೇರೆ ಇಲಾಖೆಗಳಲ್ಲಿ ಉದ್ಯೋಗಿಗಳಾಗಿದ್ದೇವೆ. ವಿಭಿನ್ನ ವೃತ್ತಿಯ ಮನೋಧರ್ಮದವರಾಗಿದ್ದರೂ ಕೂಡ ನಮ್ಮ ಅಭಿರುಚಿ ಹಾಗೂ ಆಸಕ್ತಿಗಳಲ್ಲಿ ಸಾಕಷ್ಟು ಸಾಮ್ಯತೆ ಇರುವುದರಿಂದಲೇ ಕಳೆದ ಹತ್ತುವರ್ಷಗಳ ನಮ್ಮ ಸ್ನೇಹದ ನಡುವೆ ಯಾವ ಬಿರುಕು ಕಾಣಿಸಿಕೊಂಡಿಲ್ಲ. ಅಚ್ಚರಿಯ ವಿಷಯವೆಂದರೆ ಈ ಹತ್ತು ವರ್ಷಗಳಲ್ಲಿ ನಾವು ಪರಸ್ಪರರ ಮನೆಗಳಿಗೆ ಒಮ್ಮೆಯೂ ಭೇಟಿ ನೀಡಿಲ್ಲದಿರುವುದು ಮತ್ತು ಆ ಕುರಿತು ಅದೊಂದು ವಿಚಿತ್ರ ಸಂಗತಿ ಎನ್ನುವಂತೆ ಒಮ್ಮೆಯೂ ನಾವು ಮಾತನಾಡಿಕೊಂಡಿಲ್ಲದಿರುವುದು. ಹಾಗೆ ಭೇಟಿ ನೀಡುವ ಕಾರಣ ಕೂಡಿ ಬರದೆ ಇರುವುದಕ್ಕೆ ನಮ್ಮ ನಮ್ಮ ವೃತ್ತಿ ಬೇರೆಯಾಗಿರುವುದು ಒಂದು ಕಾರಣವಾದರೆ ಇನ್ನೊಂದು ನಮ್ಮ ಜಾತಿ ಮತ್ತು ಸಂಪ್ರದಾಯಗಳ ಹಿನ್ನೆಲೆಯೂ ಬೇರೆ ಬೇರೆಯಾಗಿರುವುದೂ ಕಾರಣವಾಗಿರಬಹುದೆಂದು ನಾನು ಅನೇಕ ಸಲ ಯೋಚಿಸಿದ್ದೇನೆ. ಭೌಗೋಳಿಕವಾಗಿಯೂ ನಾವು ವಿಭಿನ್ನ ಪ್ರದೇಶಗಳಿಂದ ಬಂದದ್ದು ಮತ್ತೊಂದು ಮಹತ್ವದ ಕಾರಣವಾಗಿರಬೇಕು. ಶರ್ಮಾ ಉತ್ತರ ಭಾರತದವನಾದರೆ, ದೇಶಮುಖ ಮಹಾರಾಷ್ಟ್ರದವನು, ಡಿಸೋಜಾ ಗೋವಾ ರಾಜ್ಯದ ಮೂಲೆಯ ಹಳ್ಳಿಯೊಂದರಿಂದ ಬಂದಿದ್ದ ಮತ್ತು ನಾನು ಕರ್ನಾಟಕದವನು. ನಮ್ಮೆಲ್ಲರ ನಡುವೆ ಇದ್ದಿರಬಹುದಾದ ಒಂದೇ ಸಾಮ್ಯತೆ ಎಂದರೆ ಸಧ್ಯ ನಾವೆಲ್ಲ ವಾಸಿಸುತ್ತಿರುವುದು ಕರ್ನಾಟಕದಲ್ಲಿ ಮತ್ತು ನಾಲ್ವರಿಗೂ ಕನ್ನಡ ಭಾಷೆ ಓದಲು ಹಾಗೂ ಬರೆಯಲು ಬರುತ್ತದೆನ್ನುವ ಸಂಗತಿ. ಒಂದರ್ಥದಲ್ಲಿ ಭಾಷೆಯೇ ನಮ್ಮ ನಾಲ್ವರನ್ನು ಒಂದು ಸೇರಿಸಿದೆಯೆಂದು ಹೇಳಬಹುದು. ನಂತರ ನಮ್ಮ ನಮ್ಮ ಆಸಕ್ತಿ ಮತ್ತು ಅಭಿರುಚಿ ಒಂದೇರೀತಿ ಇರುವುದು ತಿಳಿದು ನಮ್ಮ ನಡುವಣ ಅನ್ಯೋನ್ಯತೆ ಮತ್ತಷ್ಟು ಗಾಢವಾಗಲು ಕಾರಣವಾಯಿತು.

     ಕಳೆದ ಹದಿನೈದು ದಿನಗಳಿಂದ ಶರ್ಮಾ ನಮ್ಮ ದಿನನಿತ್ಯದ ಬೆಳಗ್ಗೆ ಮತ್ತು ಸಾಯಂಕಾಲದ ವಾಕಿಂಗ್‍ನಲ್ಲಿ  ನಮ್ಮೊಂದಿಗೆ ಕಾಣಿಸಿಕೊಳ್ಳದಿರುವುದು ಬೇರೆಯವರಲ್ಲಿ ಚರ್ಚೆಯ ಮುಖ್ಯ ವಿಷಯವಾಗಿದೆ ಎಂದು ನಮಗೆ ಗೊತ್ತಾದದ್ದು ಮೊನ್ನೆ ಪಾರ್ಕ್‍ನಲ್ಲಿ ಸುಮಾರು ವಯಸ್ಸಾದ ಯಜಮಾನರೊಬ್ಬರು ನಮ್ಮನ್ನು ಕರೆದು ಆ ಕುರಿತು ಮಾತನಾಡಿಸಿದಾಗ. ಶರ್ಮಾನ ಅನುಪಸ್ಥಿತಿ ಹೀಗೆ ನಮ್ಮ ಎರಡು ಹೊತ್ತಿನ ವಾಯುವಿಹಾರದ ಪರಿಸರದಲ್ಲಿ ನಮಗೆ ಗೊತ್ತಿಲ್ಲದೆ ಚರ್ಚೆಗೆ ಒಳಗಾದ ವಿಷಯವಾಗಿದೆ ಎನ್ನುವುದೇ ನಮ್ಮ ಗುಂಪಿನಲ್ಲಿ ಪುಳಕಕ್ಕೆ ಕಾರಣವಾಗಿತ್ತು. ನಮ್ಮ ನಾಲ್ವರಲ್ಲಿ ಸ್ವಲ್ಪ ಹೆಚ್ಚು ಮಾತನಾಡುವವನೆಂದರೆ ಅದು ಶರ್ಮಾ ಮಾತ್ರ. ತಾನು ಕೇಳಿದ ಮತ್ತು ನೋಡಿದ ಸಂಗತಿಗಳನ್ನು ಅತೀ ರಂಜಕವಾಗಿ ಶರ್ಮಾ ಬಣ್ಣಿಸುವಾಗಲೆಲ್ಲ ನಾವು ಏನನ್ನೂ ಮಾತನಾಡದೆ ಕೇವಲ ಕೇಳುಗರಾಗುತ್ತಿದ್ದೇವು. ಹಾಗೆಂದು ಶರ್ಮಾ ನಮ್ಮನ್ನು ಮೆಚ್ಚಿಸಬೇಕೆಂದು ಮಾತನಾಡುತ್ತಿರಲಿಲ್ಲ. ಅವನು ಹೇಳುವ ಸಂಗತಿಗಳಲ್ಲಿ ಬಹುಮಟ್ಟಿಗೆ ಸತ್ಯಾಂಶವಿರುತ್ತಿತ್ತು. ಪರಿವಾರದೊಂದಿಗೆ ಉತ್ತರ ಭಾರತದ ತನ್ನೂರಿಗೆ ಹೋಗಿರುವ ಶರ್ಮಾ ಈ ವಾಯುವಿಹಾರದ ಸ್ನೇಹಿತರ ಬಳಗಕ್ಕೆ ಹೇಳಬೇಕಾದ ಯಾವುದಾದರೊಂದು ಬಹುಮುಖ್ಯವಾದ ವಿಷಯವನ್ನು ಮರಳಿ ಬರುವಾಗ ತನ್ನೊಂದಿಗೆ ತಂದೇ ತರುತ್ತಾನೆ ಎನ್ನುವ ವಿಶ್ವಾಸ ನಮ್ಮ ಗುಂಪಿನ ಮೂರೂ ಜನರಲ್ಲಿತ್ತು.

 ಹದಿನೈದು ದಿನಗಳ ನಂತರ ಇವತ್ತು ನಮ್ಮೊಂದಿಗೆ ವಾಕಿಂಗ್ ದಾರಿಯಲ್ಲಿ ಜೊತೆಯಾದ ಶರ್ಮಾನ ಮುಖವೇ ನಮ್ಮೊಂದಿಗೆ ಅವನು ಬಹಳಷ್ಟು ಹೇಳಲಿಕ್ಕಿದೆ ಎನ್ನುವುದನ್ನು ಬಿಂಬಿಸುತ್ತಿತ್ತು. ನಾವುಗಳು ಕೂಡ ಅವನ ಮಾತುಗಳನ್ನು ಕೇಳಲು ಕಾತರರಾಗಿದ್ದೇವು. ರೂಢಿಯಂತೆ ಈ ದಿನ ಪಾರ್ಕ್‍ನತ್ತ ಹೆಜ್ಜೆ ಹಾಕದೆ ಶರ್ಮಾನ ಸಲಹೆ ಮೇರೆಗೆ ಊರ ಹೊರಗಿನ ಗುಡ್ಡದ ಕಡೆ ನಡೆಯತೊಡಗಿದೇವು. ದಿನನಿತ್ಯದ ನಡಿಗೆಯ ಮಾರ್ಗವನ್ನು ಬದಲಾಯಿಸಿದಾಗಲೇ ಶರ್ಮಾ ಯಾವುದೋ ಗಹನವಾದ ವಿಷಯವನ್ನು ನಮ್ಮೊಂದಿಗೆ ಮಾತನಾಡಲು ಬಯಸುತ್ತಿರುವನೆಂದು ನಮಗೆಲ್ಲ ಆ ಕ್ಷಣ ಅನ್ನಿಸಿ ಸಹಜವಾಗಿಯೇ ಅವನ ಮಾತುಗಳನ್ನು ಕೇಳಬೇಕೆನ್ನುವ ನಮ್ಮೊಳಗಿನ ಕುತೂಹಲ ಇಮ್ಮಡಿಸಿತು. ಬೆಟ್ಟ ಹತ್ತಿ ಮಧ್ಯದಲ್ಲಿರುವ ಗಿಡದ ಕೆಳಗೆ ಕುಳಿತದ್ದೆ ಶರ್ಮಾ ಮಾತಿಗೆ ಶುರುವಿಟ್ಟುಕೊಂಡ. ‘ಮೊನ್ನೆ ನನ್ನೂರಿಗೆ ಹೋದಾಗ ವಿಚಿತ್ರ ಸಂಗತಿಯೊಂದು ಕೇಳಿದೆ. ಕೇಳಿದೆ ಅನ್ನುವುದಕ್ಕಿಂತ ಅಂಥದ್ದೊಂದು ಘಟನೆಗೆ ಸಾಕ್ಷಿಯಾದ ಮನುಷ್ಯನನ್ನು ಮುಖತ: ಭೇಟಿ ಮಾಡಿದೆ ಅನ್ನಬಹುದೇನೋ. ನಾನು ಕೇಳಿದ ಸಂಗತಿ ನನಗೆ ಎಷ್ಟು ಆಶ್ಚರ್ಯವನ್ನುಂಟು ಮಾಡಿದೆಯೋ ಅಷ್ಟೇ ಆಶ್ಚರ್ಯ ಕೇಳಿದ ನಂತರ ನಿಮಗೂ ಆಗಲಿದೆ ಎನ್ನುವ ವಿಶ್ವಾಸ ನನಗಿದೆ. ನನ್ನಲ್ಲಿ ಆಶ್ಚರ್ಯಕ್ಕೆ ಕಾರಣನಾದ ಆ ಮನುಷ್ಯನ ಹೆಸರು ಬ್ರಹ್ಮದತ್ತ ಎಂದು. ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ ಎನ್ನುವುದಕ್ಕಿಂತ ಆ ಬ್ರಹ್ಮದತ್ತನೇ ನಿಮ್ಮೆದುರು ಕುಳಿತು ಹೇಳುತ್ತಿದ್ದಾನೆ ಎಂದು ನೀವು ಭಾವಿಸಿಕೊಳ್ಳಿ. ಓವರ್ ಟು ಬ್ರಹ್ಮದತ್ತ’ ಎಂದು ಹೇಳಿ ಪರಕಾಯ ಪ್ರವೇಶ ಮಾಡಿದವನಂತೆ ಶರ್ಮಾ ಹೇಳಲಾರಂಭಿಸಿದ.
● ● ●
 ಬ್ರಹ್ಮದತ್ತ ಉತ್ತರ ಭಾರತದ ಒಂದು ಹಳ್ಳಿಯವನು. ಸಾವಿಲ್ಲದ ಮನೆಯ ಸಾಸಿವೆಕಾಳು ತೆಗೆದುಕೊಂಡು ಬಾ ಎಂದು ಬುದ್ಧನಿಂದ ಉಪದೇಶ ಪಡೆದ ಕಿಸಾ ಗೌತಮಿಯ ಮನೆತನದ ಕುಡಿ ತಾನು ಎನ್ನುವ ಹೆಮ್ಮೆ ಅವನದು. ಇದಕ್ಕೆ ಪೂರಕವಾಗಿ ಅವನ ಪೂರ್ವಜರು ಸಂಗ್ರಹಿಸಿಟ್ಟ ದಾಖಲೆಗಳು ಬ್ರಹ್ಮದತ್ತನ ಬಳಿ ಇರುವುದರಿಂದ ಅವನು ಹೇಳುವ ಮಾತನ್ನು ಸುಳ್ಳು ಎನ್ನುವ ನಿರ್ಣಯಕ್ಕೆ ಬರುವುದಾಗಲಿ ಮತ್ತು ಹಾಗೆ ಹೇಳಿಕೊಳ್ಳುವುದರಿಂದ ಬ್ರಹ್ಮದತ್ತನಿಗೆ ಯಾವುದೇ ಲಾಭವಿಲ್ಲ ಎನ್ನುವುದಾಗಲಿ ಅವನನ್ನು ಬಲ್ಲವರೆಲ್ಲರಿಗೂ ಗೊತ್ತಿದೆ. ಬ್ರಹ್ಮದತ್ತ ತನ್ನ ಉನ್ನತ ಶಿಕ್ಷಣವನ್ನು ಬೆಂಗಳೂರಿನ ಪ್ರತಿಷ್ಠಿತ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಪೂರೈಸಿ ಮುಂದೆ ಕರ್ನಾಟಕದಲ್ಲೇ ನೌಕರಿಗೆ ಆಯ್ಕೆಯಾಗಿ ಇಲ್ಲೇ ನೆಲೆ ನಿಂತ. ಕಿಸಾ ಗೌತಮಿಯ ವಂಶಕ್ಕೆ ಸೇರಿದವರು ಸಾವಿಲ್ಲದ ಮನೆಯನ್ನು ಹುಡುಕುವ ತಮ್ಮ ಪ್ರಯತ್ನವನ್ನು ಪೀಳಿಗೆಯಿಂದ ಪೀಳಿಗೆಗೆ ದಾಟಿಸಿಕೊಂಡು ಬರುತ್ತಿರುವರೆಂದು ಈ ಮಾತನ್ನು ಬ್ರಹ್ಮದತ್ತ ತನ್ನ ಸಹೋದ್ಯೋಗಿಗಳೆದುರು ಆಗಾಗ ಹೇಳುವಾಗ ಅವರೆಲ್ಲ ಇವನಿಗೆಲ್ಲೊ ತಲೆಕೆಟ್ಟಿರಬೇಕೆಂದು ಅವನ ಹಿಂದೆ ಮುಸಿ ಮುಸಿ ನಗುತ್ತಿದ್ದರಂತೆ. ಹಾಗೆಂದು ಅವನೇನೂ ಹೇಳಿಕೊಳ್ಳುವುದನ್ನು ಬಿಟ್ಟಿರಲಿಲ್ಲ. ಬುದ್ಧನಿಂದ ಸಾವು ಅನಿವಾರ್ಯ ಎನ್ನುವ ಜ್ಞಾನೋದಯ ಕಿಸಾಗೌತಮಿಗಾಗಿದ್ದರೂ ಮನುಷ್ಯ ಸಹಜ ದೌರ್ಬಲ್ಯಗಳನ್ನು ದಾಟಲು ಅವಳ ಮುಂದಿನ ಪೀಳಿಗೆಗೆ ಸಾಧ್ಯವಾಗಿರಲಿಲ್ಲವೇನೋ. ಕಿಸಾ ಗೌತಮಿಯ ಗಂಡ ಮತ್ತು ಮೈದುನರು ಕೂಡ ಸಾವಿಲ್ಲದ ಮನೆಯನ್ನು ಹುಡುಕಲು ಸಾಕಷ್ಟು ಪ್ರಯತ್ನಿಸಿ ಯಶ ಕಾಣದೆ ಸಾವನ್ನಪ್ಪಿದರಂತೆ. ಮುಂದೆ ಆ ಕೆಲಸವನ್ನು ಅವರ ಮಕ್ಕಳು ನಂತರ ಮೊಮ್ಮಕ್ಕಳು ಆಮೇಲೆ ಮರಿಮೊಮ್ಮಕ್ಕಳು ಅದೊಂದು ಸಂಪ್ರದಾಯದಂತೆ ಪಾಲಿಸಿಕೊಂಡು ಬಂದು ಆ ಪ್ರಯತ್ನ ಬ್ರಹ್ಮದತ್ತನ ಕಾಲದವರೆಗೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಬ್ರಹ್ಮದತ್ತ ಕೂಡ ಸಾವಿಲ್ಲದ ಮನೆಯನ್ನು ಹುಡುಕಲು ಸಾಕಷ್ಟು ಪ್ರಯತ್ನಿಸುತ್ತಿರುವಾಗಲೇ ಇಂಟರ್‍ನೆಟ್‍ನಲ್ಲಿ ಅವನಿಗೆ ಅಂಥದ್ದೊಂದು ಮನೆಯೇನು ಊರೇ ಇರುವುದಾಗಿ ಮಾಹಿತಿ ದೊರೆತು ಅವನು ಪುಳುಕಿತನಾದ. ಆ ಊರು ಕರ್ನಾಟಕದ ಪಶ್ಚಿಮ ಘಟ್ಟಗಳ ಕಾಡಿನಲ್ಲಿರುವ ಸಂಗತಿ ಅವನನ್ನು ಮತ್ತಷ್ಟು ರೋಮಾಂಚನಗೊಳಿಸಿತು. ತನ್ನ ಪೂರ್ವಜರ ಆಸೆಯನ್ನು ಪೂರೈಸುವ ಅವಕಾಶ ಇಲ್ಲೆ ಹತ್ತಿರದಲ್ಲಿದೆ ಎಂದು ಮತ್ತು ಅದು ತನ್ನಿಂದ ಪೂರ್ಣಗೊಳ್ಳುತ್ತಿದೆಯೆಂದು ಬ್ರಹ್ಮದತ್ತ ಸಂಭ್ರಮಿಸಿದ. ಆ ಒಂದು ಖುಷಿಯಲ್ಲಿ ತನ್ನ ಕೆಲಸಕ್ಕೆ ಹದಿನೈದು ದಿನಗಳ ರಜೆ ಪಡೆದು ಪಶ್ಚಿಮ ಘಟ್ಟಗಳ ಸೆರಗಿನಲ್ಲಿ ಅಡಗಿ ಕುಳಿತಿದ್ದ ಆ ಸಾವನ್ನೆ ಕಾಣದ ಊರನ್ನು ಹುಡುಕಿ ಹೊರಟ.  
● ● ●
ಬ್ರಹ್ಮದತ್ತ ಬಸ್ಸಿನಿಂದಿಳಿದಾಗ ಅದೇ ಆಗ ಸೂರ್ಯ ಪಶ್ಚಿಮ ಘಟ್ಟದ ಬೆಟ್ಟಗಳಲ್ಲಿ ಅಸ್ತಮಿಸುತ್ತಿದ್ದ. ಬಸ್ಸಿನ ನಿರ್ವಾಹಕ ಇಲ್ಲಿಂದ ನಾಲ್ಕೈದು ಕಿಲೋಮೀಟರ್ ನಡೆದುಕೊಂಡು ಹೋದರೆ ಆ ಸಾವಿಲ್ಲದ ಊರು ಸಿಗುವುದಾಗಿ ಹೇಳಿ ಬ್ರಹ್ಮದತ್ತನನ್ನು ಬಸ್ಸಿನಿಂದ ಇಳಿಸಿ ಜೊತೆಗೆ ಕಾಡು ದಾರಿಯಾಗಿರುವುದರಿಂದ ಕ್ರೂರ ಮೃಗಗಳಿರುತ್ತವೆ ಎನ್ನುವ ಎಚ್ಚರಿಕೆ ನೀಡಿ ಹೊರಟು ಹೋದ. ಈಗ ಬಸ್ಸಿನ ಸಪ್ಪಳವೂ ಇಲ್ಲದಂತಾಗಿ ಜೋರಾಗಿ ಬೀಸುವ ಗಾಳಿಯ ಸದ್ದು ಬಿಟ್ಟರೆ ಮನುಷ್ಯ ಮತ್ತು ಪ್ರಾಣಿಯ ಸಂಪರ್ಕವೇ ಇಲ್ಲವೇನೋ ಎನ್ನುವಷ್ಟು ಆ ಜಾಗದಲ್ಲಿ ನೀರವ ಮೌನ ಮನೆ ಮಾಡಿತ್ತು. ಬ್ರಹ್ಮದತ್ತ ನಿರ್ವಾಹಕ ಸೂಚಿಸಿದ ಕಾಲುದಾರಿಯನ್ನು ಹಿಡಿದು ಕತ್ತಲಾಗುವ ಮುಂಚೆ ಊರು ಸೇರಿಕೊಳ್ಳಬೇಕೆಂದು ಅವಸರವಸರವಾಗಿ ಹೊರಟ. ಅವನು ಹಾಗೆ ಸ್ವಲ್ಪ ದೂರ ನಡೆದಿರಬಹುದು ಹಿಂದಿನಿಂದ ಹೆಜ್ಜೆಯ ಸಪ್ಪಳ ಕೇಳಿಸಿದಂತಾಗಿ ಹಿಂತಿರುಗಿ ನೋಡಿದವನಿಗೆ ಮನುಷ್ಯಾಕೃತಿಯೊಂದು ತನ್ನತ್ತಲೇ ನಡೆದು ಬರುತ್ತಿರುವುದು ಕಾಣಿಸಿ ಹೆಜ್ಜೆಯನ್ನು ನಿಧಾನಗೊಳಿಸಿದ. ಹತ್ತಿರ ಬಂದ ವ್ಯಕ್ತಿ ಬ್ರಹ್ಮದತ್ತನನ್ನು ನೋಡಿ ಮುಗುಳ್ನಕ್ಕು ತನ್ನ ಹೆಸರು ವೆಂಕಟ್ರಮಣನೆಂದು ಸಾವಿಲ್ಲದ ಊರಲ್ಲಿ ಸಣ್ಣ ದಿನಸಿ ಅಂಗಡಿಯನ್ನು ನಡೆಸುತ್ತಿರುವುದಾಗಿಯೂ ಪೇಟೆಯಲ್ಲಿ ಕೆಲಸವಿದ್ದು ಮುಗಿಸಿಕೊಂಡು ಊರಿಗೆ ಹಿಂತಿರುಗುತ್ತಿರುವುದಾಗಿ ಪರಿಚಯಿಸಿಕೊಂಡ. ಪೀಚುಪೀಚಾದ ಸಣಕಲು ದೇಹದ ವೆಂಕಟ್ರಮಣನನ್ನು ನೋಡುತ್ತಿದ್ದರೆ ಬ್ರಹ್ಮದತ್ತನಿಗೆ ತನ್ನೂರಿನ ಅರ್ಚಕರ ನೆನಪಾಯಿತು. ದಾರಿಯಲ್ಲಿ ಮಾತನಾಡುವುದಕ್ಕೆ ಜೊತೆಯಾಯಿತೆಂದು ಖುಷಿಪಟ್ಟ ಬ್ರಹ್ಮದತ್ತ ತನ್ನ ಪರಿಚಯ ಮಾಡಿಕೊಂಡು ಇಲ್ಲಿಗೆ ಬರುತ್ತಿರುವ ಉದ್ದೇಶವನ್ನು ಹೇಳಿದ. ‘ಅಂತೂ ನನ್ನೂರು ನಿಮಗೆಲ್ಲ ಕುತೂಹಲದ ಕೇಂದ್ರವಾಗಿದೆ ಅನ್ನಿ’ ಎಂದ ವೆಂಕಟ್ರಮಣ ಬ್ರಹ್ಮದತ್ತನ ಅನೇಕ ಅನುಮಾನಗಳಿಗೆ ಉತ್ತರಿಸುತ್ತ ಅವರಿಬ್ಬರೂ ಊರು ಸಮೀಪಿಸುವಷ್ಟರಲ್ಲಿ ಬೆಳಕು ಮರೆಯಾಗಿ ಇಡೀ ಊರು ಕತ್ತಲಿನ ಸೆರಗಿನಲ್ಲಿ ಅವುಚಿ ಕುಳಿತುಕೊಂಡಿತ್ತು.

ಊರಿಗೆ ಹೊಸಬನಾಗಿದ್ದ ಬ್ರಹ್ಮದತ್ತನನ್ನು ವೆಂಕಟ್ರಮಣ ತನ್ನೊಂದಿಗೆ ತನ್ನ ಮನೆಗೆ ಕರೆದೊಯ್ದ. ಕುಡಿಯಲು ನೀರು ಕೇಳಿದ ಬ್ರಹ್ಮದತ್ತನಿಗೆ ಅದೇಕೋ ವೆಂಕಟ್ರಮಣ ಅನುಮಾನಿಸುತ್ತಿರುವಂತೆ ಅನಿಸಿತು. ತೀರ ಸಂಪ್ರದಾಯಸ್ಥ ಕುಟುಂಬವಾಗಿರುವುದರಿಂದ ನನ್ನನ್ನು ಸತ್ಕರಿಸಲು ಸಹಜವಾಗಿಯೇ ಹಿಂಜರಿದಿರಬಹುದು ಎಂದು ಭಾವಿಸಿದವನಿಗೆ ಮುಂದಿನ ಕೆಲವೇ ಕ್ಷಣಗಳಲ್ಲಿ ಆ ಮನೆಯಲ್ಲಿ ದೊರೆತ ಅತಿಥಿ ಸತ್ಕಾರದಿಂದ ತಾನು ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ ಅವನೊಳಗೇ ಒಂದುರೀತಿಯ ನಾಚಿಕೆಯ ಭಾವ ಆವರಿಸಿತು. ಊಟದ ನಂತರ ಮಹಡಿಯಲ್ಲಿ ಹಾಸಿಗೆ ಹಾಸಿಕೊಟ್ಟು ಬ್ರಹ್ಮದತ್ತನಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ ವೆಂಕಟ್ರಮಣ ‘ಈಗಾಗಲೇ ಪ್ರಯಾಣದಿಂದ ನಿಮಗೆ ಆಯಾಸವಾಗಿದೆ. ಬೇಗ ಮಲಗಿಕೊಳ್ಳಿ. ಬೆಳಗ್ಗೆ ಮಾತನಾಡಿದರಾಯ್ತು. ಈ ಊರನ್ನು ರಾತ್ರಿ ನೋಡುವುದಕ್ಕಿಂತ ಹಗಲಿನ ಬೆಳಕಲ್ಲೇ ನೀವು ನೋಡಬೇಕು’ ಎಂದು ಕೆಳಗಿಳಿದು ಹೋದ. ಪ್ರಯಾಣದ ಆಯಾಸ ಮತ್ತು ಹೊಟ್ಟೆ ತುಂಬಿದ ಊಟದಿಂದ ಬ್ರಹ್ಮದತ್ತನಿಗೆ ನಿದ್ದೆ ಬೇಗ ಹತ್ತಿತು.

ಬೆಳಗ್ಗೆ ಎಚ್ಚರವಾಗಿ ಕೆಳಗೆ ಇಳಿದು ಹೋದ ಬ್ರಹ್ಮದತ್ತನಿಗೆ ಮನೆಯ ಅಂಗಳದಲ್ಲಿ ಸಾಲಾಗಿ ಹತ್ತರಿಂದ ಹದಿನೈದು ವೃದ್ಧರು ಬಿಸಿಲಿಗೆ ಮೈ ಕಾಯಿಸುತ್ತ ಕುಳಿತಿರುವ ದೃಶ್ಯ ಕಣ್ಣಿಗೆ ಬಿತ್ತು. ಹಣ್ಣಾದ ದೇಹ, ಮಡಿಕೆಗಟ್ಟಿ ಸುಕ್ಕಾದ ಚರ್ಮ, ಕಾಂತಿಕಳೆದುಕೊಂಡ ಕಣ್ಣುಗಳು, ಹಲ್ಲಿಲ್ಲದೆ ವಕ್ರವಾದ ಬೊಚ್ಚುಬಾಯಿ, ಗುಳಿಬಿದ್ದ ಗಲ್ಲ, ಬೋಳುಬೋಳಾದ ತಲೆ, ಎಲುಬಿನ ಹಂದರವಾದ ಎದೆಗೂಡು, ನಡಗುತ್ತಿರುವ ಸೊರಗಿದ ಕೈಗಳು ತಾನು ನೋಡುತ್ತಿರುವುದು ರಕ್ತಮಾಂಸ ತುಂಬಿಕೊಂಡು ಉಸಿರಾಡುವ ಜೀವಂತ ಮನುಷ್ಯರೊ ಅಥವಾ ಜೀವಚ್ಛವಗಳೊ ಎಂದೆನಿಸಿತು ಬ್ರಹ್ಮದತ್ತನಿಗೆ. ಅಲ್ಲಿ ಕುಳಿತಿರುವ ಎಲ್ಲರ ಮುಖದ ಚಹರೆ ಒಂದೇ ರೀತಿಯಾಗಿದೆ ಎಂದೆನಿಸಿ ಅವನಿಗೆ ಅಚ್ಚರಿ ಎನಿಸಿತು. ಬ್ರಹ್ಮದತ್ತನ ಹಿಂದೆಯೇ ಬಂದ ವೆಂಕಟ್ರಮಣ ‘ಈಗ ನೀವು ನೋಡುತ್ತಿದ್ದಿರಲ್ಲ ಇದು ಈ ಊರಿನ ಎಲ್ಲ ಮನೆಗಳಲ್ಲಿ ಕಾಣುವ ಸಾಮಾನ್ಯ ದೃಶ್ಯ ನೋಡಿ. ಈಗ ಇಲ್ಲಿ ಕುಳಿತಿರುವವರಲ್ಲಿ ಕೆಲವರಿಗೆ ನಾಲ್ಕುನೂರು ವರ್ಷ ವಯಸ್ಸು ಕೆಲವರಿಗೆ ಮೂರು ನೂರು ವರ್ಷಗಳು ಇನ್ನು ಕೆಲವರಿಗೆ ಎರಡುನೂರು ಸಣ್ಣವಯಸ್ಸಿನವರೆಂದರೆ ಅದೋ ಅಲ್ಲಿ ಕೆಂಪು ಸೀರೆ ಉಟ್ಟು ಕುಳಿತಿದ್ದಾರಲ್ಲ ನನ್ನ ಅಜ್ಜಿ ಆಕೆಗೆ ನೂರುವರ್ಷ ವಯಸ್ಸು. ಅಪ್ಪ ಅಮ್ಮನಿಗೆ ಇನ್ನು ಆರೋಗ್ಯ ಸರಿ ಇರುವುದರಿಂದ ಅವರು ಹೊಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಮ್ಮೊಮ್ಮೆ ಇವರನ್ನು ವೈಯಕ್ತಿಕವಾಗಿ ಗುರುತಿಸಲು ನನಗೇ ಅದೆಷ್ಟೋ ಸಲ ಗೊಂದಲವಾಗುತ್ತದೆ. ಬದುಕಿಗೆ ಒಂದು ಕಾಲಮಿತಿ ಬೇಕು ನೋಡಿ. ಹೀಗೆ ದೀರ್ಘವಾದರೆ, ದೀರ್ಘವಾಗುವುದೇನು ಬಂತು ಬದುಕಿಗೆ ಇಲ್ಲಿ ಕೊನೆ ಎಂಬುದೇ ಇಲ್ಲ. ಗ್ರೀಕ್ ಪುರಾಣದಲ್ಲಿನ ರಾಜಕುಮಾರ ಟೆಥಾನಸ್‍ನ ಕಥೆಯಂತಾಗಿದೆ ನಮ್ಮ ಬದುಕು. ಸಾವೇ ಬೇಡವೆಂದು ವರ ಪಡೆದ ಟೆಥಾನಸ್ ವಯಸ್ಸಾಗಿ ಶರೀರ ಶಿಥಿಲಗೊಂಡಾಗ ಸಾವು ಬೇಕೆಂದು ಹಂಬಲಿಸಿದನಂತೆ. ಕೊನೆಗೆ ಬಯಸಿ ಬಯಸಿ ಸಾವು ಪಡೆದನಂತೆ. ನೋಡಿ ಸಾವಿಗೆ ಎಷ್ಟೊಂದು ಮಹತ್ವವಿದೆ’ ವೆಂಕಟ್ರಮಣ ಒಂದು ಕ್ಷಣ ಮಾತು ನಿಲ್ಲಿಸಿ ದೂರದ ದಿಗಂತದತ್ತ ತನ್ನ ದೃಷ್ಟಿ ಹರಿಸಿದ. ಆ ಕ್ಷಣಕ್ಕೆ ಬ್ರಹ್ಮದತ್ತನಿಗೂ ಮಾತು ಬೇಡವೆನಿಸಿತು.

‘ಸುಮಾರು ನಾಲ್ಕುನೂರು ವರ್ಷಗಳಹಿಂದೆ ಕೆಲವು ಕುಟುಂಬಗಳು ದುಡಿಮೆ ಅರಸುತ್ತ ಈ ಜಾಗಕ್ಕೆ ಬಂದವಂತೆ. ಇಲ್ಲಿನ ಫಲವತ್ತಾದ ಮಣ್ಣು, ಕಾಡು, ಗಿಡಮರಗಳ ಸಮೃದ್ಧಿಯಿಂದ ಇಲ್ಲೆ ನೆಲೆನಿಲ್ಲಲು ಬಯಸಿದರು. ಪುಟ್ಟ ಪುಟ್ಟ ಗುಡಿಸಿಲುಗಳು ನಿರ್ಮಾಣವಾದವು. ಹತ್ತಿರದಲ್ಲೆ ಗುಡ್ಡ ಕೊರೆದು ಭಾವಿ ನಿರ್ಮಿಸಿದರು. ಬದುಕು ಸಮೃದ್ಧವಾಯಿತು. ಕ್ರಮೇಣ ಕುಟುಂಬಗಳು ಬೆಳೆದು ಇವತ್ತು ನೂರಕ್ಕೂ ಹೆಚ್ಚು ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಅಚ್ಚರಿಯ ಸಂಗತಿ ಎಂದರೆ ಅಲ್ಲಿಂದ ಇಲ್ಲಿಯವರೆಗೆ ಈ ಊರಲ್ಲಿ ಒಂದೇ ಒಂದು ಸಾವು ಸಂಭವಿಸಿಲ್ಲ. ಇದೇ ಕಾರಣದಿಂದ ಬೇರೆ ಯಾವ ಊರಿನವರೂ ನಮ್ಮೊಂದಿಗೆ ನೆಂಟಸ್ತನಕ್ಕೆ ಮುಂದಾಗುತ್ತಿಲ್ಲ. ಇಲ್ಲಿನ ಕುಟುಂಬಗಳಲ್ಲೇ ಪರಸ್ಪರ ಹೆಣ್ಣು ಗಂಡುಗಳನ್ನು ಕೊಟ್ಟು ತೆಗೆದುಕೊಳ್ಳುವ ಪದ್ಧತಿಯನ್ನು ರೂಢಿಸಿಕೊಂಡಿರುವುದರಿಂದ ಕುಟುಂಬ ಘಟಕ ಬೆಳೆಯುತ್ತಿದೆ. ನಮಗಿರುವ ಸಮಸ್ಯೆ ಎಂದರೆ ಯಾವ ಮನೆಯಲ್ಲೂ ಸಾವು ಸಂಭವಿಸದೆ ಇರುವುದು. ಹಾಗೆಂದು ರೋಗರುಜಿನಗಳು ಮತ್ತು ವೃದ್ಧಾಪ್ಯದಿಂದ ಊರು ಮುಕ್ತವಾಗಿದೆಯೆಂದು ಅರ್ಥವಲ್ಲ. ದಿನಬೆಳಗಾದರೆ ಪ್ರತಿಕುಟುಂಬದಲ್ಲಿನ ವಯಸ್ಸಾದವರ ಕಾಯಿಲೆಗಳು ಮತ್ತು ಅವರ ಗೋಳು, ನರಳಾಟಗಳಿಂದ ಊರು ಅಶಾಂತಿಯ ತಾಣವಾಗಿದೆ. ಸ್ಮಶಾನ ಸದೃಶ್ಯವಾದ ಈ ಬದುಕಿಗೆ ಅರ್ಥವೇ ಇಲ್ಲದಂತಾಗಿದೆ. ಈಗ ಈ ಊರಿನಲ್ಲಿನ ಪ್ರತಿ ಮನೆಯೂ ಸಾವಿಗಾಗಿ ಕಾಯುತ್ತಿದೆ ಅದು ಎಂದು ಬರುವುದೆಂದು. ನಿಮ್ಮಂಥವರನ್ನು ನೋಡಿದಾಗಲೆಲ್ಲ ನೀವು ಎಷ್ಟೊಂದು ಪುಣ್ಯವಂತರೆಂದು ನಮಗೆ ಅಸೂಯೆ ಆಗುತ್ತದೆ. ನಿಮ್ಮ ಬದುಕು ಸುಂದರವಾಗಿರುವುದಕ್ಕೆ ಆ ಸಾವು ಎನ್ನುವ ವಾಸ್ತವವೇ ಕಾರಣ ನೋಡಿ. ಮನುಷ್ಯ ಸತ್ತು ಹೋಗದೇ ಇದ್ದರೆ ಈ ಜಗತ್ತು ಎಷ್ಟೊಂದು ಅಸಹ್ಯ ಅನಿಸುತ್ತೆ ಅನ್ನೊದಕ್ಕೆ ನಮ್ಮೂರೇ ಒಂದು ಸಾಕ್ಷಿ. ಬಿಡಿ ಇದೆಲ್ಲ ನಮ್ಮ ದುರಾದೃಷ್ಟ’ ಎಂದು ಮಾತು ನಿಲ್ಲಿಸಿದ ವೆಂಕಟ್ರಮಣ.

ಬ್ರಹ್ಮದತ್ತ ವೆಂಕಟ್ರಮಣನ ಜೊತೆಗೂಡಿ ಇಡೀ ಊರು ಸುತ್ತಿ ಬಂದ. ತಾನು ನೋಡಿದ ಪ್ರತಿ ಮನೆಯೂ ಒಂದು ಮತ್ತೊಂದರ ಛಾಯೆಯಂತೆ ಗೋಚರಿಸಿತು. ಎಲ್ಲ ಮನೆಗಳಲ್ಲೂ ವಯಸಾದ ವೃದ್ಧರು, ಕಾಯಿಲೆಗಳಿಂದ ನರಳುವ ಅವರ ಗೋಳಾಟ, ಬದುಕಿನಲ್ಲಿ ಭರವಸೆಯನ್ನೇ ಕಳೆದುಕೊಂಡಂತಿದ್ದ ಕಾಂತಿಹೀನ ಮುಖಗಳ ಜನರು ಇದನ್ನೆಲ್ಲ ನೋಡುತ್ತ ಬ್ರಹ್ಮದತ್ತನಿಗೆ ಒಂದು ತೆರನಾದ ಜಿಗುಪ್ಸೆ ಮೂಡಲಾರಂಭಿಸಿತು. ಇನ್ನಷ್ಟು ಹೊತ್ತು ತಾನಿಲ್ಲಿದ್ದರೆ ತನಗೆ ಹುಚ್ಚೆ ಹಿಡಿಯಬಹುದೆಂದು ಅನ್ನಿಸಿ ಬ್ರಹ್ಮದತ್ತ ತನ್ನ ಯೋಚನೆಗೆ ತಾನೇ ಬೆಚ್ಚಿಬಿದ್ದ. ಹೌದು ಈ ಪರಿಸರದಿಂದ ದೂರ ಹೋಗಿ ಇವರೇಕೆ ಬದುಕು ಕಟ್ಟಿಕೊಳ್ಳಬಾರದು ಎನ್ನುವ ಯೋಚನೆ ಹೊಳೆದು ಅದನ್ನು ವೆಂಕಟ್ರಮಣನಿಗೆ ಕೇಳಿಯೂ ಬಿಟ್ಟ. ‘ನಮ್ಮ ಹಿಂದಿನ ಒಂದು ತಲೆಮಾರಿನವರು ನೀವು ಹೇಳಿದಂತೆ ಒಂದೊಮ್ಮೆ ಇಂಥದ್ದೊಂದು ಪ್ರಯೋಗ ಮಾಡಿ ನೋಡಿದ್ದರಂತೆ. ಹುಟ್ಟುವ ಮಗುವಿಗೆ ಇಲ್ಲಿನ ನೆರಳು ಕೂಡ ಸೋಕಬಾರದೆಂದು ಸಾವಿರಾರು ಮೈಲಿ ದೂರ ಹೋದರೂ ಕೂಡ ಸಾವು ಅವರನ್ನು ಸ್ಪರ್ಷಿಸಲಿಲ್ಲ. ನಮ್ಮ ವಂಶಾಣುವಿನಲ್ಲೇ ಅಂಥದ್ದೊಂದು ದೋಷ ಬೇರುಬಿಟ್ಟಿರುವಾಗ ಯಾವ ಪ್ರಯೋಗವೂ ಪ್ರಯೋಜನವಾಗಲಿಲ್ಲ’ ವೆಂಕಟ್ರಮಣ ನಿಟ್ಟುಸಿರು ಬಿಟ್ಟ.
ವೆಂಕಟ್ರಮಣನ ಬಲವಂತಕ್ಕೆ ಮಧ್ಯಾಹ್ನ ಒಂದೆರಡು ತುತ್ತು ಊಟ ಮಾಡಿ  ಬ್ರಹ್ಮದತ್ತ ಸಾಯಂಕಾಲ ಬೆಂಗಳೂರಿಗೆ ಹಿಂದಿರುಗಲು ಸಿದ್ಧನಾದ. ಕಾಡಿನ ದಾರಿಯೆಂದು ವೆಂಕಟ್ರಮಣ ಮುಖ್ಯರಸ್ತೆಯವರೆಗೂ ಒಬ್ಬನನ್ನು ಜೊತೆಮಾಡಿ ಕಳುಹಿಸಿದ. ಬ್ರಹ್ಮದತ್ತನ ಮನಸ್ಸು ಇಡೀ ಘಟನೆಯಿಂದ ಒಂದುರೀತಿಯ ಕ್ಷೋಭೆಗೆ ಒಳಗಾಗಿತ್ತು. ದಾರಿಯಲ್ಲಿ ಜೊತೆಯವನೊಡನೆ ಯಾವ ಮಾತನ್ನು ಆಡದೆ ಮೌನವಾಗಿ ಹೆಜ್ಜೆ ಹಾಕಿದ. ಮುಖ್ಯ ರಸ್ತೆಗೆ ಬಂದ ಕೆಲವೇ ನಿಮಿಷಗಳಲ್ಲಿ ಬಸ್ಸು ಬಂದು ನಿಂತಿತು. ಬಸ್ ಪೂರ್ಣ ಖಾಲಿಯಾಗಿತ್ತು. ಚಾಲಕ ಮತ್ತು ಕಂಡಕ್ಟರ್ ಸಿಗರೇಟು ಸೇದಲೆಂದು ರಸ್ತೆಯ ಬದಿಯಲ್ಲಿದ್ದ ಗೂಡಂಗಡಿ ಹೊಕ್ಕರು. ಜೊತೆಗೆ ಬಂದವನು ಪಕ್ಕದಲ್ಲಿ ಕುಳಿತು ಬ್ರಹ್ಮದತ್ತನ ಕಿವಿಯಲ್ಲಿ ಉಸುರಿದ ‘ನನ್ನೂರಿನ ನೀರಿನ ಗುಣ ನೋಡಿ ಒಮ್ಮೆ ಇಲ್ಲಿನ ನೀರು ಕುಡಿದರೆ ಸಾಕು ಅವರಿಗೆ ಸಾವೆಂಬುದೇ ಇಲ್ಲ’. ‘ಯಾವ ನೀರು ಅದೆಲ್ಲಿದೆ’ ಬ್ರಹ್ಮದತ್ತ ಕೇಳಿದ. ಆ ವ್ಯಕ್ತಿ ಆಶ್ಚರ್ಯದಿಂದ ಬ್ರಹ್ಮದತ್ತನನ್ನು ನೋಡುತ್ತ ‘ನನ್ನೂರಿನಲ್ಲಿರುವುದು ಒಂದೇ ಭಾವಿ. ನಾಲ್ಕುನೂರು ವರ್ಷಗಳ ಹಿಂದೆ ನಮ್ಮ ಪೂರ್ವಿಕರು ತೆಗೆಸಿದ್ದು. ಇವತ್ತಿಗೂ ನಾವೆಲ್ಲ ಅದೇ ಭಾವಿಯ ನೀರನ್ನು ಉಪಯೋಗಿಸುವುದು. ಆ ಭಾವಿಯ ನೀರು ಒಮ್ಮೆ ಕುಡಿದರೆ ಸಾಕು ನೀರು ಕುಡಿದ ವ್ಯಕ್ತಿಯ ವಂಶಾಣುವಿನಲ್ಲಿ ಚಿರಂಜೀವಿತ್ವ ಎನ್ನುವುದು ಬೇರುಬಿಟ್ಟು ಕುಳಿತುಕೊಳ್ಳುತ್ತದೆ. ವಂಶವೇ ಮೃತ್ಯುಂಜಯವಾಗುತ್ತದೆ. ಆ ಭಾವಿ ಬಿಟ್ಟರೆ ನಮಗೆ ಬೇರೆ ಗತಿಯೇ ಇಲ್ಲ. ಯಾಕೆ ವೆಂಕಟ್ರಮಣ ನಿಮಗೆ ಇದನ್ನೆಲ್ಲ ಹೇಳಿಲ್ಲವೆ’ ಎಂದು ಅಚ್ಚರಿ ವ್ಯಕ್ತಪಡಿಸಿದ. ಬ್ರಹ್ಮದತ್ತನ ಮೈ ಬೆವರೊಡೆದು ಕಣ್ಣುಗಳಿಗೆ ಕತ್ತಲಾವರಿಸಿದಂತಾಗಿ ಎದುರು ಸೀಟಿನ ಕಬ್ಬಿಣದ ಸಲಾಕೆಯನ್ನು ಬಿಗಿಯಾಗಿ ಹಿಡಿದುಕೊಂಡ. ಸ್ವಲ್ಪ ಹೊತ್ತಿನ ನಂತರ ತಣ್ಣನೆಯ ಗಾಳಿ ಮೈಯನ್ನು ಸೋಕಿದಂತಾಗಿ ಕಣ್ಣು ಬಿಟ್ಟು ನೋಡಿದ. ಬಸ್ ಮುಂದೆ ಚಲಿಸುತ್ತಿತ್ತು. ಪಕ್ಕದಲ್ಲಿ ಸೀಟು ಖಾಲಿ ಇತ್ತು.
● ● ●

      ಶರ್ಮಾ ಹೇಳುವುದನ್ನು ನಿಲ್ಲಿಸಿ ದೀರ್ಘವಾಗಿ ಉಸಿರೆಳೆದುಕೊಂಡ. ನಮ್ಮೆಲ್ಲರನ್ನು ವಿಚಿತ್ರವಾದ ಅನುಭವವೊಂದು ಆವರಿಸಿತ್ತು. ಶರ್ಮಾ ಹೇಳಿದ ವಿಷಯಕ್ಕೆ ಹೇಗೆ ಪ್ರತಿಕ್ರಿಯಿಸಬೇಕೆಂದು ತೋಚದೆ ಮೌನವಾಗಿ ಎದ್ದು ಗುಡ್ಡ ಇಳಿಯತೊಡಗಿದೇವು. ನಾವು ಹಿಂತಿರುಗುವ ದಾರಿಯಲ್ಲಿ ಮೊದಲ ಮನೆಯೇ ಶರ್ಮಾನದು. ಕಾಂಪೌಂಡ್ ಗೇಟ್ ತೆರೆದು ಒಳ ಹೋಗುತ್ತಿದ್ದ ಶರ್ಮಾನನ್ನು ನಿಲ್ಲಿಸಿ ನಾನು ಕೇಳಿದೆ ‘ಹೌದು ಆ ಬ್ರಹ್ಮದತ್ತನ ಪರಿಚಯ ನಿನಗೆ ಹೇಗಾಯಿತು’. ಶರ್ಮಾ ಒಮ್ಮೆ ಆಕಾಶದತ್ತ ದೃಷ್ಟಿ ಹರಿಸಿ ಒಂದುತೆರನಾದ ನಿರ್ಲಿಪ್ತ ಭಾವದಿಂದ ‘ಹತ್ತು ವರ್ಷಗಳಿಂದ ನಿಮಗೆಲ್ಲ ಪರಿಚಿತನಿರುವ ಈ ಬಿ.ಡಿ.ಶರ್ಮಾನೆ ಆ ನತದೃಷ್ಟ ಬ್ರಹ್ಮದತ್ತ ಶರ್ಮಾ’ ಎಂದು ಹೇಳಿದವನೆ ಮನೆ ಒಳಗೆ ಸೇರಿಕೊಂಡು ಬಾಗಿಲು ಹಾಕಿದ. ಶರ್ಮಾ ಮುಚ್ಚಿದ ಬಾಗಿಲನ್ನೆ ಬೆರಗಾಗಿ ನೋಡುತ್ತ ನಾವು ಎಷ್ಟೋ ಹೊತ್ತಿನವರೆಗೆ ಅಲ್ಲಿ ನಿಂತಿದ್ದೇವು.

---000---

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ