Friday, March 4, 2016

ಅಸಹಿಷ್ಣುತೆ ಮತ್ತು ಭಾರತ


       









           ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ ಎನ್ನುವುದು ಅತ್ಯಂತ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾದ ಪದವಾಗಿದೆ. ಸ್ವಾತಂತ್ರ್ಯಾ ನಂತರ ಭಾರತದಲ್ಲಿ ಕಳೆದ ಅರವತ್ತು ವರ್ಷಗಳಿಂದ ಹೀಗೆ ಪ್ರಧಾನ ಭೂಮಿಕೆಯಲ್ಲಿ  ಕಾಣಿಸಿಕೊಳ್ಳದಿದ್ದ ಈ ಅಸಹಿಷ್ಣುತೆ ಈಗ ಚರ್ಚೆ, ಸಂವಾದ ಮತ್ತು ಸಂಘರ್ಷದ ಮೂಲಕ ನಮ್ಮಗಳ ಬದುಕನ್ನು ಪ್ರವೇಶಿಸಿದೆ. ದಿನನಿತ್ಯ ಬೆಳಗಾದರೆ ಸುದ್ದಿ ಮಾಧ್ಯಮಗಳಲ್ಲಿ ಈ ಅಸಹಿಷ್ಣುತೆಯದೆ ಮಾತು ಮತ್ತು ಚರ್ಚೆ. ಈ ಅಸಹಿಷ್ಣುತೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡ ಹೊಸ ಪರಿಕಲ್ಪನೆಯಾಗಲಿ ಅಥವಾ ಪರಿಭಾಷೆಯಾಗಲಿ ಅಲ್ಲ. ನೂರಾರು ವರ್ಷಗಳ ಕಾಲ ಕೇವಲ ಜಾತಿಗೆ ಮಾತ್ರ ಸೀಮಿತವಾಗಿದ್ದ ಈ ಪದ ಜಾಗತೀಕರಣ ಮತ್ತು ಆಧುನೀಕರಣದ ಪರಿಣಾಮ ತನ್ನ ವ್ಯಾಪ್ತಿಯನ್ನು ಜಾತಿಯಿಂದ ಧರ್ಮಕ್ಕೆ ಹಿಗ್ಗಿಸಿಕೊಂಡಿದೆ. ಹಿಂದೆಯೆಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಮುಂದುವೆರೆದ ಜಾತಿಗೆ ಸೇರಿದ ಜನರು ಹಿಂದುಳಿದ ಜಾತಿಯವರನ್ನು ಒಂದಿಷ್ಟು ಹೆಚ್ಚೇ ಎನ್ನುವಷ್ಟು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಮತ್ತು ಅವಮಾನಿಸುತ್ತಿದ್ದ ಹಾಗೂ ಕೀಳಾಗಿ ಕಾಣುತ್ತಿದ್ದ ಸನ್ನಿವೇಶಗಳು ಮತ್ತು ಸಂದರ್ಭಗಳಿಗೆ ನಾವುಗಳು ಸಾಕ್ಷಿಯಾಗಿದ್ದುಂಟು. ಒಂದರ್ಥದಲ್ಲಿ ಅದು ಅಸಹಿಷ್ಣುತೆ ಅಲ್ಲದೆ ಬೇರೇನಲ್ಲ. ಶಿಕ್ಷಣ ಮತ್ತು ನಗರೀಕರಣದ ಪರಿಣಾಮ ಇವತ್ತು ನಮ್ಮ ಸಾಮಾಜಿಕ ಬದುಕಿನಲ್ಲಿ ಸಾಕಷ್ಟು ಸ್ಥಿತ್ಯಂತರಗಳಾಗಿ ನಾವುಗಳು ಬದುಕುವ ರೀತಿ ನೀತಿಗಳು ಬದಲಾಗಿವೆ. ಜಾಗತೀಕರಣ ನಮ್ಮ ನಮ್ಮ ಊರುಗಳಿಗೆ ಕಾಲಿಟ್ಟ ನಂತರವಂತೂ ನಾವು ವಾಸಿಸುತ್ತಿರುವ ನಾಲ್ಕು ಗೋಡೆಗಳ ಮನೆಗಳಲ್ಲೇ ಪರಸ್ಪರ ಅಪರಿಚಿತರಾಗುತ್ತಿರುವಾಗ ನಮ್ಮ ನೆರೆಯ ಮನೆಯಲ್ಲೋ ಇಲ್ಲವೇ ನಮ್ಮ ಊರಿನಲ್ಲೋ ಯಾರು ಹೇಗೆ ಬದುಕುತ್ತಿರುವರು ಮತ್ತು ಏನನ್ನು ತಿನ್ನುತ್ತಿರುವರು ಎಂದು ವಿಚಾರಿಸುವಷ್ಟು ಸಮಯ ಹಾಗೂ ವ್ಯವಧಾನವಾದರೂ ನಮಗೆಲ್ಲಿದೆ. ಪರಿಸ್ಥಿತಿ ಹೀಗಿರುವಾಗ ಈ ಅಸಹಿಷ್ಣುತೆ ಕುರಿತು ಗಲಭೆ ಮತ್ತು ಪುಕಾರು ಎಬ್ಬಿಸುತ್ತಿರುವವರಲ್ಲಿ ಹೆಚ್ಚಿನವರು ಈ  ಬರಹಗಾರರು ಮತ್ತು ಸೋಕಾಲ್ಡ್ ಬುದ್ಧಿಜೀವಿಗಳು. ಇವರೊಂದಿಗೆ ನಮ್ಮನ್ನಾಳುವ ರಾಜಕಾರಣಿಗಳೂ ಜೊತೆಗೂಡಿರುವುದರಿಂದ ಅಸಹಿಷ್ಣುತೆಯ ಚರ್ಚೆಗೆ ವ್ಯಾಪಕ ಪ್ರಚಾರ ದೊರೆಯುತ್ತಿದೆ. ದಿನನಿತ್ಯದ ಬದುಕೇ ಒಂದು ಸವಾಲು ಮತ್ತು ಬಹುದೊಡ್ಡ ಸಮಸ್ಯೆಯಾಗಿ ಕುಳಿತಿರುವಾಗ ಭಾರತದ ಬಹುಸಂಖ್ಯಾತ ಬಡ ಮತ್ತು ಮಧ್ಯಮ ವರ್ಗದವರಿಗೆ ಈ ಅಸಹಿಷ್ಣುತೆ ಕುರಿತು ಚರ್ಚಿಸುವ ಮತ್ತು ಸಂವಾದಕ್ಕಿಳಿಯುವ ತಾಳ್ಮೆಯಾಗಲಿ ಇಲ್ಲವೇ ಆಸಕ್ತಿಯಾಗಲಿ ಅವರಲ್ಲಿಲ್ಲ.

ಅಸಹಿಷ್ಣುತೆ ಮತ್ತು ಸಾಹಿತ್ಯ 


      ಅಸಹಿಷ್ಣುತೆಯನ್ನು ವ್ಯಾಪಕ ಚರ್ಚೆಗೆ  ಒಳಪಡಿಸಿದವರಲ್ಲಿ ಬರಹಗಾರರು ಪ್ರಮುಖರು. ಹೀಗೆ ಇಂಥದ್ದೊಂದು ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲು ಪ್ರಸ್ತುತ ಪರಿಸ್ಥಿತಿ ಎಷ್ಟು ಅನಿವಾರ್ಯಯಾಗಿತ್ತು ಎನ್ನುವುದಕ್ಕಿಂತ ನಮ್ಮ ಸಾಹಿತ್ಯ ಕ್ಷೇತ್ರದಲ್ಲಿನ ಎಡಪಂಥೀಯ ಮತ್ತು ಬಲಪಂಥೀಯ ಎನ್ನುವ ಈ ಎರಡು ಗುಂಪುಗಳೇ ಚರ್ಚೆಯ ಹಿಂದಿನ ಪ್ರಬಲ ಕಾರಣಗಳು ಎನ್ನುವ ಸಂಗತಿ ನಿರ್ವಿವಾದ. ಚರ್ಚೆಗೆ ಅವರಿಗೊಂದು ವಿಷಯ ಬೇಕು.  ಅದು ದೇಶದ ಅಖಂಡತೆಯನ್ನಾಗಲಿ ಇಲ್ಲವೇ ಭದ್ರತೆಯನ್ನಾಗಲಿ ಸಡಿಲಗೊಳಿಸಲಿ, ಜನ ಸಮುದಾಯವನ್ನು ಸೀಳಿ ಇಬ್ಭಾಗವಾಗಿಸಲಿ, ರಾಷ್ಟ್ರದ ಆರ್ಥಿಕತೆಗೆ ದೊಡ್ಡ ಪೆಟ್ಟು ಬೀಳಲಿ ಆ  ಕುರಿತು ಅವರೆಂದೂ ಚಿಂತಿಸಲಾರರು. ಮೊನ್ನೆ ಧಾರವಾಡದಲ್ಲಿ ನಡೆದ ಸಾಹಿತ್ಯ ಸಂಭ್ರಮದಲ್ಲಿ ನಮ್ಮ ಬರಹಗಾರರ ಚರ್ಚೆಗೆ ಹೆಚ್ಚು ಗ್ರಾಸವಾಗಿದ್ದು ಈ ಅಸಹಿಷ್ಣುತೆಯೇ.  ಕೆಲವು ಲೇಖಕರು ಚರ್ಚೆಯ ಜೊತೆಗೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮಗೆ ದೊರೆತ ಪ್ರಶಸ್ತಿಯನ್ನೇ ಹಿಂತಿರುಗಿಸಿ ಇತರರಿಗೆ ಮಾದರಿಯೂ ಮತ್ತು ಅನೇಕರ ಟೀಕೆಗೂ ಏಕಕಾಲಕ್ಕೆ ಒಳಗಾಗಬೇಕಾಯಿತು. ಹೀಗೆ ಸಾಹಿತ್ಯವಲಯ ಅಸಹಿಷ್ಣುತೆಯನ್ನು ವ್ಯಾಪಕ ಚರ್ಚೆಗೆ ಒಳಪಡಿಸುತ್ತಿರುವ ಸಂದರ್ಭದಲ್ಲಿ ಬರಹಗಾರರ ಈ ನಡೆ ಅನೇಕ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ. ಹೀಗೆ ಪ್ರಶಸ್ತಿಯನ್ನು ಮರಳಿಸುತ್ತಿರುವ ಲೇಖಕರು ಅಸಹಿಷ್ಣುತೆಯನ್ನು ವಿರೋಧಿಸುತ್ತಿರುವರೋ ಇಲ್ಲವೇ ಪ್ರಭುತ್ವವನ್ನೋ ಎನ್ನುವ ಅನುಮಾನ ಹಲವರದು. ಏಕೆಂದರೆ ಪ್ರಶಸ್ತಿಯನ್ನು ಹಿಂತಿರುಗಿಸಿದ ಲೇಖಕರಲ್ಲಿ ಬಹುಪಾಲು ಲೇಖಕರು ಎಡಪಂಥೀಯರು ಎನ್ನುವುದು ಇಲ್ಲಿ ಗಮನಿಸಬೇಕಾದ ಸಂಗತಿ. ಆದ್ದರಿಂದ ಈ ಲೇಖಕರಲ್ಲಿ ಪ್ರಭುತ್ವವನ್ನು ವಿರೋಧಿಸುವ ಭಾವನೆಯೇ ಅಧಿಕವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಹೀಗೆ ಪ್ರಭುತ್ವದ ವಿರೋಧವನ್ನೇ ತಮ್ಮ ಚರ್ಚೆ ಮತ್ತು ಬರವಣಿಗೆಯ ಮುಖ್ಯ ಅಜೆಂಡಾ ಮಾಡಿಕೊಂಡ ಈ ಬರಹಗಾರರು ಸಮಾಜದಲ್ಲಿನ ಇನ್ನಿತರ ಸಮಸ್ಯೆಗಳಿಗೆ ಕುರುಡಾಗುತ್ತಿರುವರು. ವಿಮರ್ಶಕ ಟಿ ಪಿ ಅಶೋಕ ತಮ್ಮ ಒಂದು ಲೇಖನದಲ್ಲಿ ಹೇಳಿದ 'ಮೋದಿ ಮೇನಿಯಾ ಅನಂತಮೂರ್ತಿ ಅವರೊಳಗಿನ ಸೃಜನಶೀಲತೆಯನ್ನೇ ಮುಕ್ಕಾಗಿಸಿತು' ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಹಾಗೆಂದು ಅವರು ಎಸ್ ಎಲ್ ಭೈರಪ್ಪನವರನ್ನು ಸಮರ್ಥಿಸುತ್ತಾರೆ ಎಂದರ್ಥವಲ್ಲ. 'ಈ ದಿನಗಳಲ್ಲಿ ಭೈರಪ್ಪನವರಲ್ಲಿ ತೀರ ಮತೀಯ ಭಾವನೆಗಳೇ ತುಂಬಿರುವ ಪರಿಣಾಮ ಅವರಿಗೆ ಹಿಂದಿನಂತೆ ಸೃಜನಶೀಲ ಸಾಹಿತ್ಯ ಸೃಷ್ಟಿಸಲು ಸಾಧ್ಯವಾಗುತ್ತಿಲ್ಲ' ಎಂದು ವಿಮರ್ಶಿಸುತ್ತಾರೆ. ಹೀಗೆ ಸಾಹಿತ್ಯವಲಯದಲ್ಲಿನ ಈ ಗುಂಪುಗಾರಿಕೆಯ ಪರಿಣಾಮ ಇದೆ ಈಗ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವ ಹೊಸ ಬರಹಗಾರರು ಏನನ್ನು ಬರೆಯಬೇಕೆನ್ನುವ ಗೊಂದಲದಲ್ಲಿದ್ದಂತೆ ಕಾಣುತ್ತದೆ. ಯಾವುದೇ ಒಂದು ಗುಂಪಿನೊಂದಿಗೆ ಗುರುತಿಸಿಕೊಳ್ಳದೆ ಹೋದಲ್ಲಿ ತಮ್ಮ ಬರವಣಿಗೆಗೆ ಓದುಗರು ದಕ್ಕಲಾರರು ಎನ್ನುವ ಸಂಗತಿ ಅನೇಕ ಹೊಸ ಪೀಳಿಗೆಯ ಲೇಖಕರಿಗೆ ಮನದಟ್ಟಾಗಿದೆ. ಪರಿಣಾಮವಾಗಿ ಈ ನವ ಲೇಖಕರು ಕೂಡ ಧರ್ಮ, ಅಸಹಿಷ್ಣುತೆಯ ಬೆನ್ನು ಬಿದ್ದು ಅಸಹಿಷ್ಣುತೆಯ ಚರ್ಚೆಯ ವ್ಯಾಪ್ತಿಯನ್ನು ಮತ್ತಷ್ಟು ಹಿಗ್ಗಿಸುತ್ತಿರುವರು.

ಯುವಜನರ ಭಾವನಾತ್ಮಕತೆ 


          ನಮ್ಮ ಇಂದಿನ ರಾಜಕಾರಣಿಗಳು ಮತ್ತು ಬರಹಗಾರರು ಯುವಜನರ ಭಾವನೆಗಳನ್ನೇ ಬಂಡವಾಳ ಮಾಡಿಕೊಂಡು ಅಸಹಿಷ್ಣುತೆಯ  ವ್ಯಾಪ್ತಿಯನ್ನು ಹಿಗ್ಗಿಸುತ್ತಿರುವರು. ಒಂದು ಧರ್ಮದ ಇಲ್ಲವೇ ಸಮುದಾಯದ ವಿರುದ್ಧ ಯುವಜನರಲ್ಲಿ ಸುಲಭವಾಗಿ ದ್ವೇಷದ ಭಾವನೆಗಳನ್ನು ಬೇರೂರಿಸಬಹುದು. ಇವತ್ತು ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ದೇಶದ ಯುವಜನತೆ ತಮಗಾಗದ ಧರ್ಮ ಮತ್ತು ಸಮುದಾಯಗಳ ವಿರುದ್ಧ ಬಹುದೊಡ್ಡ ಸಮರವನ್ನೇ  ಸಾರಿರುವ ಉದಾಹರಣೆ ನಮ್ಮೆದುರಿಗಿದೆ. ಧರ್ಮದಿಂದಲೇ ಒಂದು ರಾಷ್ಟ್ರವನ್ನು ಕಟ್ಟುವುದು ಸಾಧ್ಯವಾಗುವಂತಿದ್ದರೆ ೧೯೭೧ ರಲ್ಲಿ ಪೂರ್ವಪಾಕಿಸ್ತಾನ ತನ್ನ ರಾಷ್ಟ್ರದಿಂದ ಹೊರಬಂದು ಹೊಸ ರಾಷ್ಟ್ರವೊಂದು ಉದಯಿಸುವ ಅನಿವಾರ್ಯತೆ ಎದುರಾಗುತ್ತಿರಲಿಲ್ಲ. ವಿಶ್ಲೇಷಣೆ ಮತ್ತು ವಿಮರ್ಶೆ ರಹಿತ ಮನಸ್ಥಿತಿಯ ಯುವಜನರು  ನಮ್ಮ ಬುದ್ಧಿಜೀವಿಗಳ, ಧಾರ್ಮಿಕ ಮುಖಂಡರ  ಹಾಗೂ ರಾಜಕೀಯ ನಾಯಕರ ಮಾತುಗಳನ್ನೇ ನಿಜವೆಂದು ನಂಬಿ ತಮ್ಮನ್ನು  ರಾಷ್ಟ್ರ ವಿಭಜಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವರು. ಅವಿದ್ಯಾವಂತ ಯುವಕರಿಗಿಂತಲೂ ಸುಶಿಕ್ಷಿತ ಯುವಕರು ರಾಷ್ಟ್ರ ವಿಭಜಕ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ದುರಂತದ ಸಂಗತಿ. ಕೆಲವೊಂದು ಧರ್ಮ ಮತ್ತು ಸಮುದಾಯದ ಯುವಜನತೆಗೆ ದೇಶಪ್ರೇಮಕ್ಕಿಂತ ಅವರಿಗೆ ಧರ್ಮವೇ ಮುಖ್ಯವಾಗಿ ಕಾಣಿಸುತ್ತಿದೆ. ತೀರ ಧರ್ಮಾಂಧತೆಯ ಪರಿಣಾಮ ರಾಷ್ಟ್ರದಲ್ಲಿ ಹಿಂಸಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿರುವುದು ಕೂಡ ಯುವಜನತೆಯೇ. ಹೀಗೆ ಯುವಜನತೆಯ ಭಾವನೆಗಳನ್ನು ತಮ್ಮ ಲಾಭಕ್ಕೆ ಉಪಯೋಗಿಸಿಕೊಳ್ಳುವ ಈ ಧಾರ್ಮಿಕ ಮುಖಂಡರುಗಳು, ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಅಸಹಿಷ್ಣುತೆ ನೆಪದಲ್ಲಿ ಯುಜನರನ್ನು ದಾರಿತಪ್ಪಿಸುತ್ತಿರುವರು. ಅತ್ಯಂತ ಭಾವಾವೇಶದಲ್ಲಿ ಈ ಯುವಜನತೆ  ಪಾರ್ಲಿಮೆಂಟಿನ ಮೇಲೆ ದಾಳಿಯ ಸಂಚು ರೂಪಿಸಿದ ಉಗ್ರ ಅಫ್ಜಲ್ ಗುರುನ ಗಲ್ಲು ಶಿಕ್ಷೆಯ ದಿನವನ್ನು ಹುತಾತ್ಮ ದಿನವಾಗಿ ಆಚರಿಸುತ್ತಾರೆ. ಆ ಸಂದರ್ಭ ಭಾರತದ ವಿರುದ್ಧದ ಘೋಷಣೆಗಳನ್ನು ಕೂಗುತ್ತಾರೆ. ಕಾಶ್ಮೀರದ ಪ್ರತ್ಯೇಕತೆಗಾಗಿ ಒತ್ತಾಯಿಸುತ್ತಾರೆ.  ಜೊತೆಗೆ ಗಾಂಧೀಜಿ ಹತ್ಯೆಯನ್ನು ಒಂದು ಗುಂಪಿನ ಯುವಕರು ಸಮರ್ಥಿಸಿಕೊಳ್ಳುವುದು ಕೂಡ ಖಂಡನೀಯ. ಆತಂಕದ ಸಂಗತಿ ಎಂದರೆ ಕೆಲವು ರಾಜಕೀಯ ಪಕ್ಷಗಳು ಯುವಜನತೆಯ ಈ ನಡೆಯನ್ನು ತಮ್ಮ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತವೆ. ಬುದ್ಧಿಜೀವಿಗಳು, ರಾಜಕಾರಣಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್ಸಿಗೆ ಭೇಟಿ ನೀಡಿ ಯುವಕರನ್ನು ಇನ್ನಷ್ಟು ಪ್ರಚೋದಿಸುವ ಮಾತನಾಡುತ್ತಾರೆ. ಇಂಥದ್ದೊಂದು ಗೂಡಾರ್ಥದ ಅರಿವಿಲ್ಲದ ಯುವಜನತೆ ತಮ್ಮದೇ ರಾಷ್ಟ್ರದ ವಿರುದ್ಧ ತಿರುಗಿಬಿದ್ದು ಹಿಂಸಾತ್ಮಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವರು.

ಜನಪ್ರಿಯತೆಯ ಅಸ್ತ್ರ

         ಅಸಹಿಷ್ಣುತೆಯನ್ನು ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಂಡು ಬೆಳೆದ ಬರಹಗಾರರ ಮತ್ತು ರಾಜಕಾರಣಿಗಳ ಸಂಖ್ಯೆ ಭಾರತದಲ್ಲಿ ಬಹಳಷ್ಟಿದೆ. ಪರಿಣಾಮವಾಗಿ ಇಲ್ಲಿ ಇವರುಗಳಿಗೆ ಅಸಹಿಷ್ಣುತೆ ಎಂದಿಗೂ ಅದೊಂದು ಸಮಸ್ಯೆಯಾಗಿ ಕಾಡಿದ್ದು ತುಂಬ ಅಪರೂಪ. ಅಸಹಿಷ್ಣುತೆಯನ್ನು ಜನಪ್ರಿಯತೆಯ ಅಸ್ತ್ರವಾಗಿ ಬಳಸಿಕೊಂಡು ಈ ಬುದ್ಧಿಜೀವಿಗಳು, ರಾಜಕಾರಣಿಗಳು, ಸಾಹಿತಿಗಳು ಮತ್ತು ಸೋಕಾಲ್ಡ್ ಚಿಂತಕರು ತಮ್ಮ ತಮ್ಮ ಬದುಕನ್ನು ಹಸನಾಗಿಸಿಕೊಂಡಿದ್ದೆ ಹೆಚ್ಚು. ಜೊತೆಗೆ ಈ ಬರಹಗಾರರಿಗೆ ಬರವಣಿಗೆಗೆ ಬಂಡವಾಳದ ಕೊರತೆ ಎದುರಾದಾಗಲೆಲ್ಲ ಅವರಿಗೆ ಈ ಅಸಹಿಷ್ಣುತೆ ನೆನಪಾಗುತ್ತದೆ. ಇನ್ನು ಕೆಲವು ಲೇಖಕರು ಬರವಣಿಗೆ ಬದುಕಿನಿಂದ ಮತ್ತು ಬುದ್ಧಿಜೀವಿಗಳು ಹೋರಾಟ, ಚಳವಳಿಗಳಿಂದ ನಿವೃತ್ತರಾಗಿ ದಶಕಗಳೇ ಕಳೆದು ಹೋಗಿವೆ. ಜನರ ನೆನಪುಗಳಿಂದ ದೂರವಾಗಿರುವ ಅವರಿಗೆ ಮತ್ತೆ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕೆನ್ನುವ ಹಂಬಲ ಮತ್ತು ಚಪಲ  ಅವರನ್ನು ಈ ಅಸಹಿಷ್ಣುತೆ ಕಡೆಗೆ ಮುಖಮಾಡಿ ನಿಲ್ಲಿಸಿದೆ. ಯಾವ ಸಮಸ್ಯೆಗಳ ಪರವಾಗಿ ನಿಂತರೆ ತಾವು ಜನಪ್ರಿಯರಾಗಬಹುದು ಮತ್ತು ಜನರ ಗೌರವಾದಾರಗಳಿಗೆ ಪಾತ್ರರಾಗಬಹುದು ಎನ್ನುವ ತಿಳುವಳಿಕೆ ಇವರಿಗಿದೆ. ಅಲ್ಲದೆ ಇಂಥದ್ದೇ ನೀತಿ ಮತ್ತು ಸಿದ್ಧಾಂತವನ್ನು  ತಮ್ಮ ಪಕ್ಷಗಳ ಪ್ರಣಾಳಿಕೆಯಾಗಿ ಮಾಡಿಕೊಂಡ ರಾಜಕೀಯ ಪಕ್ಷಗಳಿಗೆ ಹತ್ತಿರವಾಗಿ ಮುಂದೊಂದು ದಿನ ಕಳೆದುಹೋದ ಅಧಿಕಾರ ಮತ್ತು ಆಯಕಟ್ಟಿನ ಸ್ಥಾನವನ್ನು ಮತ್ತೆ ಮರಳಿ ಪಡೆಯಬಹುದೆನ್ನುವ ದೂರದ ಆಸೆ ಹಾಗೂ ಇರಾದೆ ಈ ಬುದ್ಧಿಜೀವಿಗಳದು. ಅದಕ್ಕೆಂದೇ ಅವರು ಸದಾಕಾಲ ಚಲಾವಣೆಯಲ್ಲಿರಲು ಮತ್ತು ಜನರ ನೆನಪುಗಳಲ್ಲಿ ಹಸಿರಾಗಿರಲು ಬಯಸುತ್ತಾರೆ. ಹೀಗಾಗಿ ಇವರುಗಳಿಗೆ ಜಾತಿ ಮತ್ತು ಧರ್ಮಗಳ ನಡುವೆ ನಡೆಯುವ ಸಣ್ಣ ಘರ್ಷಣೆಗಳು ಕೂಡ ಬಹುದೊಡ್ಡ ಸಮಸ್ಯೆಗಳಾಗಿ ಕಾಣಿಸುತ್ತವೆ. ನೆರೆಹಾವಳಿಯಿಂದಾದ ಸಮಸ್ಯೆಗಳನ್ನು ವರದಿ ಮಾಡಲು ಕಳುಹಿಸಿದ ಕನ್ನಡದ ದೊಡ್ಡ ಬರಹಗಾರರೊಬ್ಬರು ಅಲ್ಲಿನ ಜನರ ಬವಣೆಗಳನ್ನು ವರದಿ ಮಾಡುವುದಕ್ಕಿಂತ ಅವರು ಪುನಶ್ಚೇತನ ಶಿಬಿರಗಳಲ್ಲಿ ಇಂಥ ಧರ್ಮ ಮತ್ತು ಸಮುದಾಯದವರಿಗೆ ಅನ್ಯಾಯವಾಗುತ್ತಿದೆ ಎಂದು ನುಡಿಯುತ್ತಾರೆ. ಇದರರ್ಥ ಸೂತಕದ ಮನೆಯಲ್ಲೂ ಅಸಹಿಷ್ಣುತೆಯನ್ನು ಹುಡುಕುವ ಚಟ ನಮ್ಮ ಬುದ್ಧಿಜೀವಿಗಳದು.

ವಿಶ್ವವಿದ್ಯಾಲಯಗಳು


     ನಮ್ಮ ವಿಶ್ವವಿದ್ಯಾಲಯಗಳು ಬೋಧನೆಗಿಂತ   ಧರ್ಮ ಧರ್ಮಗಳ ನಡುವೆ ಮತ್ತು ಜಾತಿ ಸಮುದಾಯಗಳ ಮಧ್ಯೆ ಬಿರುಕು ಮೂಡಿಸುವ ಕೆಲಸವನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿವೆ. ಅಸಹಿಷ್ಣುತೆಯೊಂದು ಮೊದಲು ಹುಟ್ಟುವುದೇ  ವಿಶ್ವವಿದ್ಯಾಲಯಗಳಲ್ಲಿ ಪಾಠ ಮಾಡುತ್ತಿರುವ ನಮ್ಮ ಪ್ರಭೃತಿಗಳ ಪ್ರಚೋದನೆಯಿಂದ.  ವಿಶ್ವವಿದ್ಯಾಲಯಕ್ಕೆ ಕಾಲಿಟ್ಟ ತಕ್ಷಣ ನಮ್ಮ ವಿದ್ಯಾರ್ಥಿಗಳಲ್ಲಿ ಸಮಾಜವನ್ನು ಗ್ರಹಿಸುವ ರೀತಿಯೇ ಬದಲಾಗುತ್ತಿದೆ. ಅಲ್ಲಿರುವ ಪ್ರಾಧ್ಯಾಪಕರು ಪಾಠ ಮಾಡುವುದಕ್ಕಿಂತ ವಿದ್ಯಾರ್ಥಿಗಳ ಮೇಲೆ ತಾವು ನಂಬಿಕೊಂಡು ಬಂದಿರುವ ತತ್ವ ಮತ್ತು ಸಿದ್ಧಾಂತಗಳನ್ನು ಬಲವಂತವಾಗಿ ಹೇರುತ್ತಿರುವರು. ಸ್ನಾತಕೋತ್ತರ ಶಿಕ್ಷಣ ಪಡೆದ ಯುವಜನತೆ ಇವತ್ತು ನಕ್ಸಲೈಟ್ ಗುಂಪಿನೊಂದಿಗೆ ಗುರುತಿಸಿಕೊಳ್ಳುತ್ತಿರುವುದು ಮತ್ತು ಹಿಂಸಾತ್ಮಕ ಮಾರ್ಗವನ್ನು ಹಿಡಿದಿರುವುದರ ಹಿಂದೆ ವಿಶ್ವವಿದ್ಯಾಲಯಗಳ ಪ್ರಭಾವ ಸಾಕಷ್ಟಿದೆ. ವಿಶ್ವವಿದ್ಯಾಲಯಗಳ  ಅದೆಷ್ಟೋ ಅಧ್ಯಾಪಕರ ಮೇಲೆ  ಯುವ ವಿದ್ಯಾರ್ಥಿಗಳನ್ನು ನಕ್ಸಲೈಟ್ ಗುಂಪಿಗೆ ಸೇರಿಸುತ್ತಿರುವ ಮತ್ತು ಸೇರುವಂತೆ ಪ್ರೋತ್ಸಾಹಿಸುತ್ತಿರುವ ಕಾರಣಕ್ಕಾಗಿ ಕೇಸ್ ಗಳು ಕೂಡ ದಾಖಲಾಗಿವೆ. ಮೊನ್ನೆ ಮೊನ್ನೆ ಆತ್ಮಹತ್ಯೆ ಮಾಡಿಕೊಂಡ ರೋಹಿತ್ ವೆಮುಲಾ ದುರಂತ ನಾಯಕನಾಗಿಯೂ ಮತ್ತು ಯುವಜನತೆಗೆ ಆದರ್ಶವಾಗಿಯೂ ಪ್ರತಿಷ್ಥಾಪನೆಗೊಂಡಿದ್ದರ ಹಿಂದೆ ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರ ಪ್ರೋಚದನಕಾರಿ ಮಾತುಗಳೇ ಕಾರಣ. ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಮತ್ತು ದಲಿತ ಸಂಘರ್ಷ ಸಮಿತಿಯ ಸದಸ್ಯರು  ಕೈ ಕೈಹಿಡಿದು ಹೊಡೆದಾಡುವ ತಾಣಗಳಾಗಿವೆ ಈ ವಿಶ್ವವಿದ್ಯಾಲಯಗಳು.   ಭಾರತ ಸ್ವಾತಂತ್ರ್ಯಾ ನಂತರದ ದಿನಗಳಿಂದ ಎಡಪಂಥೀಯರ ವಿಚಾರ ಧಾರೆಯ ಪ್ರಬಲ ಶಕ್ತಿ ಕೇಂದ್ರಗಳಾಗಿದ್ದ ವಿಶ್ವವಿದ್ಯಾಲಯಗಳು ಕೇಂದ್ರದಲ್ಲಿ    ಹಿಂದುತ್ವದ ಪರವಾದ ಪಕ್ಷ ಅಧಿಕಾರದ ಗದ್ದುಗೆ ಏರಿದಾಗ ಸಹಜವಾಗಿಯೇ ಅವುಗಳು ಬಲಪಂಥೀಯರ ಕಾರ್ಯಕ್ಷೇತ್ರಗಳಾಗಿ ರೂಪಾಂತರಗೊಂಡವು. ಪರಿಣಾಮವಾಗಿ ಇದುವರೆಗೂ ವಿಶ್ವವಿದ್ಯಾಲಯಗಳಂಥ ಆಯಕಟ್ಟಿನ ಸ್ಥಳಗಳಲ್ಲಿ ಕುಳಿತು ರಾಷ್ಟ್ರದ ಯುವಜನತೆಯ ನಡೆಯನ್ನು ನಿರ್ಧರಿಸುತ್ತಿದ್ದ ಎಡಪಂಥೀಯರಿಗೆ  ಅಭದ್ರತೆ ಕಾಡತೊಡಗಿತು. ಇಂಥದ್ದೊಂದು ಅಭದ್ರತೆಯಿಂದ ಹೊರಬರಲು ಅವರು ಸಹಜವಾಗಿಯೇ ಅಸಹಿಷ್ಣುತೆಯನ್ನು ಒಂದು ಪ್ರಬಲ ಅಸ್ತ್ರವಾಗಿ ಉಪಯೋಗಿಸಿಕೊಳ್ಳಲಾರಂಭಿಸಿರುವರು. ಹಾಗೆಂದು ವಿಶ್ವವಿದ್ಯಾಲಯಗಳು ಈ ಎಲ್ಲ ರಾಷ್ಟ್ರ ವಿಭಜಕ ಚಿಂತನೆಗಳಿಂದ ಮುಕ್ತಿ ಹೊಂದಿ ನಮ್ಮ ವಿದ್ಯಾರ್ಥಿಗಳಿಗೆ ಶಿಸ್ತಿನಿಂದ ಪಾಠ ಮಾಡುವ ದಿನಗಳು ಮರುಕಳಿಸಿವೆ ಎಂದು ನಾವು ಸಂಭ್ರಮಪಡುವಂತಿಲ್ಲ. ಏಕೆಂದರೆ ವಿಶ್ವವಿದ್ಯಾಲಯಗಳು ಧಾರ್ಮಿಕ ಕೇಂದ್ರಗಳಾಗಿ ರೂಪಾಂತರ ಹೊಂದುವ ದಿನಗಳೇನೂ ದೂರವಿಲ್ಲ. ಕಾಲ ಚಕ್ರ ಉರಿಳಿರುವುದರಿಂದ ವಿಶ್ವವಿದ್ಯಾಲಯಗಳ ಆವರಣದೊಳಗಿನ ಚಿಂತನೆಯ ಕ್ರಮ ಬದಲಾಗಿದೆಯೇ ಹೊರತು ಅವುಗಳು ಸೋಕಾಲ್ಡ್ ಬುದ್ಧಿಜೀವಿಗಳಿಂದ ಮುಕ್ತವಾಗಿಲ್ಲ. ಈ ಲೇಖನ ಬರೆಯುತ್ತಿರುವ ಸಂದರ್ಭದಲ್ಲೇ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಮೂರು ವರ್ಷಗಳ ಹಿಂದೆ ಉಗ್ರ  ಅಫ್ಜಲ್ ಗುರುನನ್ನು ಗಲ್ಲಿಗೆರಿಸಿದ್ದನ್ನು ಪ್ರತಿಭಟಿಸಿ ಮೆರವಣಿಗೆ ನಡೆಸಿದ ಘಟನೆಯೊಂದು ನಡೆದು ಹೋಗಿದೆ. ಭಾರತದಲ್ಲಿ ವಿದ್ಯಾರ್ಥಿ ಪ್ರತಿಭಟನೆಗಳು ಹೊಸದಲ್ಲವಾದರೂ ಹೀಗೆ ವಿದ್ಯಾರ್ಥಿಗಳು ಪ್ರತಿಭಟಿಸುತ್ತಿರುವುದಕ್ಕೆ ಕಾರಣವಾದ ಹಿನ್ನೆಲೆ ಅತಿ ಮುಖ್ಯ ಎನಿಸಿಕೊಳ್ಳುತ್ತದೆ. ರಾಷ್ಟ್ರೀಯತೆಗೆ ಮಾರಕವಾಗುವ ಇಂಥ ಪ್ರತಿಭಟನೆಗಳನ್ನು ನಿಯಂತ್ರಿಸದೆ ಇರುವುದು  ವಿಶ್ವವಿದ್ಯಾಲಯಗಳನ್ನು ಸಂಶಯದ ದೃಷ್ಟಿಯಿಂದ ನೋಡುವಂತಾಗುತ್ತದೆ. ಭಿನ್ನ ಸೈದ್ಧಾಂತಿಕ ಬೌದ್ಧಿಕ ಸಂಘರ್ಷದ ಮೂಲಕವೇ ಹೊಸ ಹೊಸ ಚಿಂತನೆಗಳು ಮೊಳೆಯಲು ಸಾಧ್ಯ ಎನ್ನುವ ಮಾತು  ಒಪ್ಪಿಕೊಳ್ಳುವಂಥದ್ದು ಹಾಗೆಂದು  ಉಗ್ರನ ಗಲ್ಲುಶಿಕ್ಷೆಯನ್ನೇ ಪ್ರತಿರೋಧಿಸುವುದನ್ನು ಭಿನ್ನ ಸೈದ್ಧಾಂತಿಕ ಸಂಘರ್ಷ ಎನ್ನಬಹುದೇ?

ಬಹುತ್ವದ ಭಾರತ 


       ಭಾರತ ವೈವಿಧ್ಯಮಯ ಸಂಸ್ಕೃತಿ ಮತ್ತು ಸಾಮಾಜಿಕ ಜೀವನವನ್ನು ಒಳಗೊಂಡಿರುವ ಬಹು ವಿಶಿಷ್ಠ ರಾಷ್ಟ್ರ. ಜೊತೆಗೆ ವಿಭಿನ್ನ ಧರ್ಮೀಯರು ಮತ್ತು ಸಮುದಾಯಗಳು ಒಟ್ಟಾಗಿ ಬಾಳಲು ಅವಕಾಶ ಒದಗಿಸಿರುವ ವಿಶ್ವದ ಬಹುದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿರುವ ದೇಶ ಎನ್ನುವ ಹೆಗ್ಗಳಿಕೆ ಬೇರೆ. ಧರ್ಮ, ಜಾತಿ, ಭಾಷೆ, ಸಂಸ್ಕೃತಿ, ಆಚಾರ ಮತ್ತು ಸಂಪ್ರದಾಯದಲ್ಲಿ ನಮ್ಮದು  ಬಹುತ್ವದ ಭಾರತ. ಇಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಜನರ ಬದುಕಿನ ರೀತಿ ನೀತಿಗಳು, ಸಂಪ್ರದಾಯ, ಮಾತನಾಡುವ ಭಾಷೆ, ಜಾತಿ ಬೇರೆ ಬೇರೆಯಾಗಿವೆ. ಭಾರತದಲ್ಲಿ ಬಹುಸಂಖ್ಯಾತ ಹಿಂದು ಧರ್ಮೀಯರಿದ್ದರೂ ಇಲ್ಲಿ ಅಲ್ಪಸಂಖ್ಯಾತರೆಂದೇ ಗುರುತಿಸಲ್ಪಡುತ್ತಿರುವ ಇಸ್ಲಾಂ, ಕ್ರೈಸ್ತ, ಜೈನ, ಬೌದ್ಧ ಧರ್ಮೀಯರಿಗೂ ನೆಮ್ಮದಿಯ ಬದುಕಿಗೆ ಅವಕಾಶಗಳಿವೆ. ಅಲ್ಪಸಂಖ್ಯಾತರಿಗೆ ಸರ್ಕಾರದ ವಿಶೇಷ ಕಾಯ್ದೆಯಡಿ ಹಲವಾರು ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ಅನ್ಯಧರ್ಮಿಯರಿಗೆ ಪ್ರತ್ಯೇಕ ಕಾಯ್ದೆ ಕಾನೂನುಗಳನ್ನು ರೂಪಿಸಿ ಎಲ್ಲ ಧರ್ಮದವರ ಭಾವನೆಗಳನ್ನು ಇಲ್ಲಿ ಗೌರವಿಸಲಾಗಿದೆ. ಈ ಪರಧರ್ಮ ಸಹಿಷ್ಣುತಾ ಭಾವನೆಯ ಕಾರಣದಿಂದಲೇ ಭಾರತದ ನೆಲದಲ್ಲಿ ಮತಾಂತರದ ಚಟುವಟಿಕೆಗಳು ಯಾವ ಅಡೆತಡೆಗಳಿಲ್ಲದೆ ನಿರಾತಂಕವಾಗಿ  ನಡೆಯುತ್ತಿವೆ. ಹಿಂದುಳಿದ ಸಮುದಾಯದವರನ್ನು ಮತ್ತು ಆರ್ಥಿಕವಾಗಿ ದುರ್ಬಲರಾದವರನ್ನು ಒಂದಿಷ್ಟು ಹಣದ ಇಲ್ಲವೇ ಉದ್ಯೋಗದ ಆಮೀಷವೊಡ್ಡಿ ಮತಾಂತರಿಸುವ ಪ್ರಯತ್ನ ಬಹಳ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಇಂಥ ಪ್ರಯತ್ನಗಳಿಗೆ ಪ್ರತಿರೋಧ ತೋರಿದಾಗ ಇಲ್ಲವೇ ವಿರೋಧಿಸಿದಾಗ ಅದನ್ನು ಮತಾಂಧತೆ ಮತ್ತು ಅಸಹಿಷ್ಣುತೆ ಎಂದು ಅಪಪ್ರಚಾರ ಮಾಡಿ ದೇಶದ ಒಂದು ಧರ್ಮದ ಜನರ ಕುರಿತು ಇತರರಲ್ಲಿ ಅಸಹನೀಯ ಭಾವನೆಯನ್ನು ಮೂಡಿಸುವ ವ್ಯವಸ್ಥಿತ ಹುನ್ನಾರ ನಮ್ಮ ಬುದ್ಧಿಜೀವಿಗಳದು. ಹೀಗೆ ಅಪಪ್ರಚಾರ ಮಾಡುವವರು ವಿಶ್ವದ ಯಾವ ದೇಶದಲ್ಲಿ ಹೀಗೆ ಬಹುತ್ವವು ಸಾವಿರಾರು ವರ್ಷಗಳಿಂದ ಜೀವಂತವಾಗಿದೆ ಮತ್ತು ಅನ್ಯಧರ್ಮ ಸಹಿಷ್ಣುತೆಯನ್ನು ಇದುವರೆಗೂ ಜತನದಿಂದ ಕಾಪಿಟ್ಟುಕೊಂಡು ಬಂದ ದೇಶ ಭಾರತ ಬಿಟ್ಟರೆ ಬೇರೆ ಯಾವುದಿದೆ ಎಂದು ಉತ್ತರಿಸಲಿ.

ಭಾರತದ ರಾಜಕಾರಣ 


         ಭಾರತ ಬಹುತ್ವದ ರಾಷ್ಟ್ರವಾಗಿರುವುದರಿಂದ ಇಲ್ಲಿ ಪ್ರಜಾಪ್ರಭುತ್ವವಿದೆ ಮತ್ತು ಈ ಕಾರಣದಿಂದ ಇಲ್ಲಿ ಅನೇಕ ರಾಜಕೀಯ ಪಕ್ಷಗಳು ಅಸ್ತಿತ್ವದಲ್ಲಿವೆ. ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳು ಮಾತ್ರವಲ್ಲದೆ ಪ್ರಾದೇಶಿಕ ಪಕ್ಷಗಳು ಸಹ ಭಾರತದ ರಾಜಕಾರಣದಲ್ಲಿ ಗಮನಾರ್ಹ ಪಾತ್ರವಹಿಸುತ್ತಿವೆ. ಜೊತೆಗೆ ಯಾವ ಪಕ್ಷಗಳಿಗೂ ಅಂಟಿಕೊಳ್ಳದೆ ವ್ಯಕ್ತಿಯೋರ್ವ ಪಕ್ಷೇತರನಾಗಿ ಸ್ಪರ್ಧಿಸುವ ಆ ಮೂಲಕ ಭಾರತದ ಕಾರ್ಯಾಂಗದಲ್ಲಿ ಪಾಲ್ಗೊಳ್ಳುವ ಅವಕಾಶ ಇಲ್ಲಿದೆ. ಹೀಗೆ ಭಾರತದ ರಾಜಕಾರಣ ಪ್ರಜಾಪ್ರಭುತ್ವದ ಕಾರಣದಿಂದ ಮುಕ್ತ ಸ್ವಾತಂತ್ರ್ಯವನ್ನು ಹೊಂದಿ ತನ್ನ ಅಸ್ತಿತ್ವವನ್ನು ಕಟ್ಟಿಕೊಳ್ಳುವ ವಿಪುಲ ಅವಕಾಶವನ್ನು ಹೊಂದಿದೆ. ಆದರೆ ಈ ವಿಪುಲ ಅವಕಾಶ ಮತ್ತು ಮುಕ್ತ ಸ್ವಾತಂತ್ರ್ಯ ನಮ್ಮ ರಾಜಕಾರಣವನ್ನು ಭ್ರಷ್ಟಾಚಾರವಾಗಿಯೂ ಹಾಗೂ ಜನರು ಅದರ ಮೇಲಿಟ್ಟ  ಭರವಸೆಯನ್ನು ಕಳೆದುಕೊಳ್ಳುವಂತೆಯೂ ಮಾಡಿವೆ. ಏಕೆಂದರೆ ಈ ರಾಜಕಾರಣಿಗಳು ತಮಗೆ ದೊರೆತ ಮುಕ್ತ ಸ್ವಾತಂತ್ರ್ಯವನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಬಳಸಿಕೊಳ್ಳುತ್ತಿರುವರು. ಧರ್ಮ ಧರ್ಮದ ನಡುವೆ ಮತ್ತು ಜಾತಿ ಸಮುದಾಯಗಳ ನಡುವೆ ಬಹುದೊಡ್ಡ ಕಂದಕವನ್ನು ನಿರ್ಮಿಸಿ ಆ ಮೂಲಕ ತಮ್ಮ ರಾಜಕಾರಣದ ಬದುಕನ್ನು ಕಟ್ಟಿಕೊಂಡ ರಾಜಕೀಯ ನಾಯಕರುಗಳಿಗೆ ಇಲ್ಲಿ ಕೊರತೆಯಿಲ್ಲ. ಧರ್ಮ ಮತ್ತು ಜಾತಿಗಳ ನಡುವಣ ಅಸಹಿಷ್ಣುತೆಯನ್ನು ತಮ್ಮ ರಾಜಕೀಯ ಬದುಕನ್ನು ಹಸನಾಗಿಸಿಕೊಳ್ಳಲು ವ್ಯವಸ್ಥಿತವಾಗಿ ದುಡಿಸಿಕೊಂಡ ರಾಜಕಾರಣಿಗಳೇ ಇಲ್ಲಿ ಹೆಚ್ಚು. ಆಳುವ ಪಕ್ಷ ಮತ್ತು ವಿರೋಧ ಪಕ್ಷಗಳು ಜೊತೆಗೂಡಿ ದೇಶದ ಅಭಿವೃದ್ಧಿಗಾಗಿ ಚಿಂತಿಸಿದ್ದು ಮತ್ತು ದುಡಿದದ್ದು ತುಂಬ ವಿರಳ. ಸಮಸ್ಯೆ ಮತ್ತು ಸಂಘರ್ಷಗಳಿಂದ ಮುಕ್ತವಾದ ಸಮಾಜವನ್ನು ಅವರೆಂದೂ ಬಯಸಲಾರರು. ಅದಕ್ಕೆಂದೇ ಪಾರ್ಲಿಮೆಂಟಿನ ಮೇಲೆ ದಾಳಿಯ ಸಂಚು ರೂಪಿಸಿದ ಉಗ್ರನನ್ನು ಸಹ ಇವರು ಕರುಣೆಯ ದೃಷ್ಟಿಯಿಂದ ನೋಡುತ್ತಾರೆ. ಗಲ್ಲು ತಡೆಯುವಂತೆ ಮನವಿ ಮಾಡುತ್ತಾರೆ ಆ ಮೂಲಕ ತಮ್ಮದೇ ವೋಟ್ ಬ್ಯಾಂಕೊಂದನ್ನು ಸೃಷ್ಟಿಸಿಕೊಳ್ಳುತ್ತಾರೆ. 'ಪ್ರಭುತ್ವಗಳು ಧರ್ಮದ ಹೆಸರೆತ್ತುವುದೇ ತನ್ನ ದಮನಕಾರಿ ಮತ್ತು ಅಪ್ರಾತಿನಿಧಿಕವಾದ ಆಡಳಿತವನ್ನು ಸಮರ್ಥಿಸಿಕೊಳ್ಳಲು' ಎಂಬ ಎಡ್ವರ್ಡ್ ಸಯೀದ್ ನ ಚಿಂತನೆಯನ್ನು ನಮ್ಮ ರಾಜಕಾರಣಿಗಳು ಅರ್ಥಮಾಡಿಕೊಳ್ಳಬೇಕು. 



Monday, February 1, 2016

ಸೃಜನಶೀಲತೆ ಮತ್ತು ನಾನು


                                         


             ಪುಸ್ತಕಗಳ ಓದು, ಸಿನಿಮಾ ವೀಕ್ಷಣೆ ಮತ್ತು ಬರವಣಿಗೆ ನನ್ನಲ್ಲಿ ಒಂದಿಷ್ಟು ಸೃಜನಶೀಲತೆಯ ಸೆಲೆ ಜಿನುಗಲು ಕಾರಣವಾಗಿರುವ ಪ್ರಮುಖ ಸಂಗತಿಗಳು ಎನ್ನುವ ನಂಬಿಕೆ ನನ್ನದು. ಪುಸ್ತಕಗಳ ಓದು ಅದೊಂದು ಹವ್ಯಾಸವಾಗಿ ರೂಪಾಂತರಗೊಂಡಿದ್ದು ಅದು ಬಾಲ್ಯದಲ್ಲಿದ್ದ ಮನೆಯ ವಾತಾವರಣದಿಂದ. ಈ ಮೊದಲು ಅನೇಕ ಸಂದರ್ಭಗಳಲ್ಲಿ ನಾನು ಹೇಳಿಕೊಂಡಂತೆ ಓದು  ನನಗೆ ಅಮ್ಮನಿಂದ ಬಂದ ಬಳುವಳಿ. ಅಮ್ಮ ತನ್ನ    ಮನೆಯ ಕೆಲಸದ ಬಿಡುವಿನ ನಡುವೆ ಕುಳಿತು ಓದುತ್ತಿದ್ದ ಪುಸ್ತಕಗಳೇ ನನ್ನಲ್ಲಿ ಓದಿನ ಅಭಿರುಚಿ ಹೆಚ್ಚಲು ಕಾರಣವಾದವು. ನನ್ನ ಅಮ್ಮ ಒಂದೋ ಕೆಲಸ ಮಾಡುತ್ತ ಇಲ್ಲವೇ ಓದುತ್ತ ಕುಳಿತಿರುತ್ತಿದ್ದ ಚಿತ್ರ ನನ್ನ ಚಿತ್ತ ಭಿತ್ತಿಯಲ್ಲಿ ಮಾಸದ ಚಿತ್ರವಾಗಿ ನೆಲೆ ನಿಂತಿದೆ. ತನ್ನ ಬಿಡುವಿನ ವೇಳೆಯನ್ನು ಯಾವ ಹಾಳು ಹರಟೆಯಲ್ಲಿ ಕಳೆಯದೆ ಓದಿನಂಥ ಸೃಜನಾತ್ಮಕ ಹವ್ಯಾಸದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ ಅಮ್ಮ ನನ್ನ ಆದರ್ಶ ಮತ್ತು ಗುರು. ಕೇವಲ ನಾಲ್ಕನೆಯ ತರಗತಿಯವರೆಗೆ ಓದಿದ್ದ ಆಕೆ ರಾಮಾಯಣ, ಮಹಾಭಾರತ ಮತ್ತು ತ್ರಿವೇಣಿ ಅವರ ಕಾದಂಬರಿಗಳನ್ನು ಅತ್ಯಂತ ಆಸಕ್ತಿಯಿಂದ ಓದುತ್ತಿದ್ದಳು. ತ್ರಿವೇಣಿ ಅವರ ಶರಪಂಜರ, ಬೆಕ್ಕಿನ ಕಣ್ಣು, ಹೂವು ಹಣ್ಣು ಕಾದಂಬರಿಗಳು ನನ್ನ ಓದಿಗೆ ದಕ್ಕಿದ್ದು ನನ್ನ ಬಾಲ್ಯದ ದಿನಗಳಲ್ಲೇ. ಹೀಗೆ ಅಮ್ಮನ ಪುಸ್ತಕಗಳ ಓದಿನ ಒಡನಾಟದಿಂದ ನನ್ನ ಓದು ಸಹ ಒಂದು ಸದಭಿರುಚಿಯ ಹವ್ಯಾಸವಾಗಿ ರೂಪುಗೊಂಡಿತು. ನಂತರದ ದಿನಗಳಲ್ಲಿ ನಾಟಕಗಳು, ಕಥಾ ಸಂಕಲನಗಳು, ಕಾದಂಬರಿಗಳು, ಜೀವನ ಚರಿತ್ರೆಗಳು ಹೀಗೆ ಓದಿಗೆ ಹೇರಳ ಪುಸ್ತಕಗಳು ಲಭ್ಯವಾಗಿ ಓದು ಅತ್ಯಂತ ಖುಷಿ ಕೊಡುವ ಕ್ರಿಯೆಯಾಗಿ ನನ್ನೊಳಗೆ ಅಂತರ್ಗತಗೊಂಡಿತು. ಎಸ್ ಎಲ್ ಭೈರಪ್ಪ, ಅನಂತಮೂರ್ತಿ, ದೇವನೂರ ಮಹಾದೇವ, ಲಂಕೇಶ್, ತೇಜಸ್ವಿ, ಕುಂವೀ, ನಾಗತಿಹಳ್ಳಿ, ವೈದೇಹಿ, ಎಮ್ ಕೆ ಇಂದಿರಾ ಮೊದಲಾದ ಬರಹಗಾರರು ನನ್ನ ಅನುಭವದ ವ್ಯಾಪ್ತಿಗೆ ದಕ್ಕಿದ್ದು ಪುಸ್ತಕಗಳ ಓದಿನಿಂದಲೇ. ಜೊತೆಗೆ ಸಾಹಿತ್ಯದ ಓದನ್ನು ನಾನು ಯಾವತ್ತೂ ನವ್ಯ, ನವೋದಯ, ಎಡ, ಬಲ, ಬಂಡಾಯ ಎಂದು ವರ್ಗಿಕರಿಸದೆ ಓದಿದ್ದರ ಪರಿಣಾಮ ನನ್ನ ಓದಿನ ವ್ಯಾಪ್ತಿಯಲ್ಲಿ ಅನೇಕ ಬರಹಗಾರರ ಪುಸ್ತಕಗಳು ಸೇರ್ಪಡೆಯಾದವು. ಅದಕ್ಕೆಂದೇ ಅನಂತಮೂರ್ತಿ ಅವರ 'ಸಂಸ್ಕಾರ' ದಷ್ಟೇ ಭೈರಪ್ಪನವರ 'ವಂಶ ವೃಕ್ಷ' ಕೂಡ ನನಗೆ ಇಷ್ಟವಾದ ಕೃತಿ. ಅನೇಕ ಪುಸ್ತಕಗಳನ್ನು ಅತ್ಯಂತ ಆಸಕ್ತಿಯಿಂದ ಒಂದೇ ಗುಕ್ಕಿಗೆ ಓದಿಕೊಂಡು ಹೋಗಿದ್ದೇನೆ. ಇನ್ನು ಕೆಲವು ಸಂದರ್ಭಗಳಲ್ಲಿ ಆಸಕ್ತಿಯನ್ನೇ ಕೆರಳಿಸದ ಪುಸ್ತಕಗಳ ಓದನ್ನು ಅರ್ಧಕ್ಕೆ ಬಿಟ್ಟ ಉದಾಹರಣೆಯೂ ಉಂಟು. ಓದಲೇ ಬೇಕೆನ್ನುವ ಹಟದಿಂದ ನಾನು ಓದಿಗೆ ಕುಳಿತುಕೊಳ್ಳುವುದಿಲ್ಲ. ಬದಲಾಗಿ ಓದು ನನಗೆ ಅತ್ಯಂತ ಖುಷಿ ಕೊಡುವ ಅನುಭವ ಎನ್ನುವ ಮಾನಸಿಕ ಸಿದ್ಧತೆ ನನ್ನ ಪ್ರತಿ ಓದಿನ ಸಂದರ್ಭದಲ್ಲೂ ನನ್ನಲ್ಲಿ ಜಾಗೃತವಾಗಿರುತ್ತದೆ.


               ಪುಸ್ತಕಗಳ ಓದಿನ ಜೊತೆಗೆ ಸಿನಿಮಾ ಕೂಡ ನನ್ನನ್ನು ಪ್ರಭಾವಿಸಿದ ಮಾಧ್ಯಮಗಳಲ್ಲೊಂದು. ಸಿನಿಮಾ ವೀಕ್ಷಣೆ ಸಹ ನನಗೆ ಅಮ್ಮನಿಂದಲೇ ಬಂದ ಬಳುವಳಿ. ಕಪ್ಪು ಬಿಳುಪಿನ ಕಾಲದ ಸಿನಿಮಾಗಳನ್ನು ಅತ್ಯಂತ ಆಸಕ್ತಿಯಿಂದ ದೂರದರ್ಶನದ ಪರದೆಯ ಮೇಲೆ ವೀಕ್ಷಿಸುತ್ತಿದ್ದ ಅಮ್ಮನೊಂದಿಗೆ ಒಂದೆರಡು ಬಣ್ಣದ ಸಿನಿಮಾಗಳನ್ನು ದೊಡ್ಡ ಪರದೆಯ ಮೇಲೆ ನೋಡಿದ್ದು ನನ್ನ  ನೆನಪುಗಳಲ್ಲಿ ಇನ್ನು ಹಸಿರಾಗಿದೆ. ನಾನು ಶಾಲೆಗ ಹೋಗುತ್ತಿದ್ದ ದಿನಗಳಿಂದಲೂ ಸಿನಿಮಾ ಥೇಟರಿನಲ್ಲಿ ಕೆಲಸ ಮಾಡುತ್ತಿದ್ದ ಅಣ್ಣ ಅಶೋಕ ತಾನು ನೋಡಿದ ಸಿನಿಮಾಗಳನ್ನು ವರ್ಣಿಸಿ ಕಥೆ ಹೇಳುತ್ತಿದ್ದ ಸಂದರ್ಭ ನನ್ನಲ್ಲಿ ಈ ಸಿನಿಮಾದ ಕುರಿತು ಬೆರಗು ಮತ್ತು ಕುತೂಹಲ ಮೂಡುತ್ತಿತ್ತು. ನನ್ನ ಕುತೂಹಲವನ್ನು ಗುರುತಿಸಿದ ಅಣ್ಣ ಸಿನಿಮಾಗಳ ಟಿಕೇಟ್ ನ್ನು ಮನೆಗೆ ತಂದು ಕೊಟ್ಟು ನನ್ನನ್ನು ಸಿನಿಮಾ ನೋಡುವಂತೆ ಪ್ರೇರೆಪಿಸದೆ ಹೋಗಿದ್ದರೆ ನನ್ನಲ್ಲಿ ಬರವಣಿಗೆಯಂಥ ಸೃಜನಶೀಲ ಪ್ರಕ್ರಿಯೆ ಮೂಡಲು ಸಾಧ್ಯವಾಗುತ್ತಿರಲಿಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು ಎನ್ನುವ ತಾರತಮ್ಯವಿಲ್ಲದೆ ಕಲಾತ್ಮಕ ಕಮರ್ಷಿಯಲ್ ಎನ್ನುವ ವ್ಯತ್ಯಾಸ ತೋರುಗೊಡದೆ ನೂರಾರು ಸಿನಿಮಾಗಳನ್ನು ನಾನು ನೋಡಿದ್ದೇನೆ. ಸಿನಿಮಾವೊಂದನ್ನು ನೂರಾರು ಜನರ ಜನಜಂಗುಳಿಯ ನಡುವೆ ಕುಳಿತು ನೋಡುವುದಕ್ಕಿಂತ ಕೆಲವೇ ಕೆಲವು ಸದಭಿರುಚಿಯ ಪ್ರೇಕ್ಷಕರ ನಡುವೆ ಕುಳಿತು ನೋಡುವುದು ನನಗೆ ಅತ್ಯಂತ ಇಷ್ಟದ ಸಂಗತಿ. ಅದಕ್ಕೆಂದೇ ನನ್ನ ವಿದ್ಯಾರ್ಥಿ ಜೀವನದ ದಿನಗಳಲ್ಲಿ ನಾನು ಸಿನಿಮಾಗಳ ವೀಕ್ಷಣೆಗೆ ಅತ್ಯಂತ ಪ್ರಶಾಂತ ಸಮಯವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಈ ಕಾರಣದಿಂದಲೇ ಸಿನಿಮಾ ಮಾಧ್ಯಮ ನನ್ನನ್ನು ಹೆಚ್ಚು  ಪ್ರಭಾವಿಸಿತು. ಜೊತೆಗೆ ನಾಯಕನ ಸಿನಿಮಾ ನೋಡುವುದಕ್ಕಿಂತ ನಿರ್ದೇಶಕನ ಸಿನಿಮಾ ನೋಡುವುದು ನನ್ನ ಆಯ್ಕೆಗಳಲ್ಲೊಂದು. ಸಿನಿಮಾ ಎಂದಾಕ್ಷಣ ನನಗೆ ಪುಟ್ಟಣ್ಣ ಕಣಗಾಲ್, ರಾಜೇಂದ್ರ ಸಿಂಗ್, ದಿನೇಶ್ ಬಾಬು, ಹೃಷಿಕೇಶ್ ಮುಖರ್ಜಿ, ಗಿರೀಶ್ ಕಾಸರವಳ್ಳಿ, ಶಂಕರ್, ಚಂದ್ರಮೌಳಿಯಂಥ ನಿರ್ದೇಶಕರು ಮೊದಲು ನೆನಪಾಗುತ್ತಾರೆ ನಂತರ ಕಲಾವಿದರು. ನಮ್ಮ ಕನ್ನಡದ ರಾಜಕುಮಾರ ಅವರಿಗಿಂತಲೂ ಕಲಾವಿದನಾಗಿ ನನಗೆ ಅನಂತನಾಗ್ ಇಷ್ಟವಾದರೆ ರಜನಿಕಾಂತ್ ಗಿಂತಲೂ ಕಮಲ್ ಹಾಸನ್ ಮೆಚ್ಚಿನ ಕಲಾವಿದ. ಶೋಲೆ, ಶಂಕರ್ ಗುರು, ರೊಬೋಟ್ ಸಿನಿಮಾಗಳು  ಹಣ ಗಳಿಕೆಯಿಂದ ಜನಪ್ರಿಯ ಸಿನಿಮಾಗಳಾಗಿರಬಹುದು. ಆದರೆ ಬ್ಲ್ಯಾಕ್, ಆಕ್ಸಿಡೆಂಟ್ ನಂತಹ ಹಣ ಗಳಿಕೆಯಲ್ಲಿ ಸೋತ ಸಿನಿಮಾಗಳು ತಮ್ಮ ಕಥಾ ಹಂದರ ಮತ್ತು ಕಲಾವಿದರ ಅಭಿನಯದಿಂದ ನನ್ನನ್ನು ಹೆಚ್ಚು ಹೆಚ್ಚು ಚಿಂತನೆಗೆ ಹಚ್ಚಿವೆ. ಸಿನಿಮಾ ಯಾವತ್ತೂ ಹಾಡು, ಹೊಡೆದಾಟ, ವಿದೇಶಿ ಚಿತ್ರೀಕರಣದಿಂದ ನನ್ನನ್ನು ಆಕರ್ಷಿಸಲಾರದು ಹಾಗೂ ಅದು ಸಮಯ ಕಳೆಯಲೆಂದು ಕುಳಿತು ನೋಡುವ ಮನೋರಂಜನಾ ಮಾಧ್ಯಮವೂ ಅಲ್ಲ. ಸಿನಿಮಾ ನಮ್ಮನ್ನು ಒಂದಿಷ್ಟು ಚಿಂತಿಸುವಂತೆ, ವಿವೇಚಿಸುವಂತೆ ಮಾಡುವ ಮತ್ತು ನಮ್ಮೊಳಗಿನ ಸಂವೇದನೆ  ಮತ್ತೆ ಮತ್ತೆ ಮರುಹುಟ್ಟು ಪಡೆಯುವಂತೆ ಪ್ರೇರೇಪಿಸುವ ಅತ್ಯಂತ ಪರಿಣಾಮಕಾರಿಯಾದ ದೃಶ್ಯ ಮಾಧ್ಯಮ. ಇಂಥ ಸೃಜನಶೀಲ ಮಾಧ್ಯಮವೊಂದು ಅಪಾತ್ರರ ಕೈಗೆ ಸಿಕ್ಕು ವಿಕಾರ ಮತ್ತು ವಿರೂಪಗೊಳ್ಳುತ್ತಿರುವಾಗ ನಾನು ಆತಂಕ, ತಲ್ಲಣ ಮತ್ತು ವೇದನೆಯಿಂದ ನರಳಿದ್ದೇನೆ.


               ಪುಸ್ತಕಗಳ ಓದು ಮತ್ತು ಸಿನಿಮಾಗಳ ವೀಕ್ಷಣೆ ನನ್ನಲ್ಲಿ ಬರವಣಿಗೆಯಂಥ ಸೃಜನಶೀಲತೆಯೊಂದು ಹುಟ್ಟು ಪಡೆಯಲು ಕಾರಣವಾದ ಬಹುಮುಖ್ಯವಾದ ಎರಡು ಸಂಗತಿಗಳು ಎನ್ನುವ ನಂಬಿಕೆ ನನ್ನದು. ಪುಸ್ತಕವೊಂದನ್ನು ಓದಿದಾಗ ಮತ್ತು ಸಿನಿಮಾವೊಂದನ್ನು ನೋಡಿದಾಗ ಮನಸ್ಸಿನ ಭಾವಕೋಶದಲ್ಲಿ ಹರಳುಗಟ್ಟುವ ವಿಚಾರಗಳನ್ನು ಅಕ್ಷರ ರೂಪಾಕ್ಕಿಳಿಸಲು ನಾನು ಹಂಬಲಿಸುತ್ತೇನೆ. ಈ ಹಂಬಲದೊಂದಿಗೆ ಆತಂಕ ಮತ್ತು ತಲ್ಲಣಗಳೂ ಜೊತೆಗೂಡಿ ಬರೆಯಲು ನನ್ನನ್ನು ಪ್ರೇರೇಪಿಸುತ್ತವೆ. ಸಾಧನೆ, ಪೂರ್ಣ ಸತ್ಯ, ಅನಾವರಣ, ಮನದ ಮಾತು, ಮಹಾಚೇತನ ಮತ್ತು ಅನ್ವೇಷಣೆ ಹೀಗೆ ಇದುವರೆಗೆ ನಾನು ಬರೆದ ಪುಸ್ತಕಗಳ ಸಂಖ್ಯೆ ಆರು. ಬರವಣಿಗೆ ಅದು ನನ್ನ ಖಾಸಗಿ ವಿಷಯ ಮತ್ತು ವೈಯಕ್ತಿಕವಾಗಿ ಖುಷಿ ಕೊಡುವ ಸಂಗತಿ ಎನ್ನುವ ಪ್ರಜ್ಞೆ ನನ್ನಲ್ಲಿ ಸದಾಕಾಲ ಜಾಗೃತವಾಗಿದೆ. ನಾನು ಬರೆದದ್ದನ್ನು ಬೇರೆಯವರು ಓದಬೇಕೆನ್ನುವ ಹಠಮಾರಿತನದ ಧೋರಣೆಯಾಗಲಿ ಮತ್ತು ಸಾಹಿತ್ಯ ಲೋಕದ ವಿಮರ್ಶಕರು ಮೆಚ್ಚಬೇಕೆನ್ನುವ ಆಸಕ್ತಿಯಾಗಲಿ ನನಗಿಲ್ಲ. ನನ್ನ ಬರವಣಿಗೆ ಸಮಾಜ ಪರಿವರ್ತನೆಗೆ ಎನ್ನುವ ಒಣ ಆದರ್ಶವಂತೂ ಮೊದಲೇ ನನ್ನಲ್ಲಿಲ್ಲ. ಬರವಣಿಗೆಯಿಂದಲೇ ಬದುಕನ್ನು ರೂಪಿಸಿಕೊಳ್ಳುವಷ್ಟು ದೊಡ್ಡ ಬರಹಗಾರನೂ ನಾನಲ್ಲ. ಈ ಎಲ್ಲವೂಗಳಿಗಿಂತ ಭಾಷೆಯೊಂದು ಅಪಾಯವನ್ನು ಎದುರಿಸುತ್ತಿರುವ ಸಂದರ್ಭ ಓದು  ಮತ್ತು ಬರವಣಿಗೆಯ ಮೂಲಕ ಕನ್ನಡವನ್ನು ಹೃದಯದ ಭಾಷೆಯಾಗಿ ಮಾಡಿಕೊಂಡಿರುವ ತೃಪ್ತಿ ಮತ್ತು ಖುಷಿ ನನಗಿದೆ.

ಕೊನೆಯ ಮಾತು 



               ಓದು ಮತ್ತು ಸಿನಿಮಾ ವೀಕ್ಷಣೆಯ ಜೊತೆಗೆ ನನ್ನಲ್ಲಿ ಬರವಣಿಗೆಯಂಥ ಸೃಜನಶೀಲತೆಯೊಂದು ಅಭಿವ್ಯಕ್ತಗೊಳ್ಳಲು ಕಾರಣವಾದ ಅನೇಕ ಸಂಗತಿಗಳಿವೆ. ನನಗೆ ಗಾಂಧಿಯಷ್ಟೇ ದಿನಬೆಳಗಾದರೆ ಎದುರಾಗುವ ಪೇಪರ್ ಮಾರುವ ಹುಡುಗ  ಕೂಡ ಬರೆಯಲು ಪ್ರೇರಣೆಯಾಗಬಲ್ಲ. ಕಲಾಮ್ ರಷ್ಟೇ ಬೀದಿ ಬದಿಯಲ್ಲಿ ಮಗನ ಭವಿಷ್ಯದ ಕನಸು ಕಾಣುತ್ತ ಚಪ್ಪಲಿ ಹೊಲಿಯುತ್ತ ಕುಳಿತ ತಂದೆಯೊಬ್ಬ ಸ್ಪೂರ್ತಿಯಾಗಬಲ್ಲ. ಭೈರಪ್ಪನವರ  ಕಾದಂಬರಿಗಳಷ್ಟೇ ತಳ್ಳು ಗಾಡಿಯಲ್ಲಿ ತರಕಾರಿ ಮಾರುವ ವೃದ್ಧ ನನ್ನೊಳಗೆ ಸಂವೇದನೆ ಹುಟ್ಟಿಸಬಲ್ಲ. ಜಿಎಸ್ಸೆಸ್ ಕಾವ್ಯದ ಓದಿನಷ್ಟೇ ಚಿಂದಿ ಆಯುವ ಹೆಂಗಸು ಕೂಡ ನನ್ನನ್ನು ಸೂಕ್ಷ್ಮಜ್ಞನನ್ನಾಗಿಸಬಲ್ಲಳು. ಹೀಗೆ ಬದುಕಿನ ಪ್ರತಿ ಘಳಿಗೆ ಎದುರಾಗಿ ನನ್ನೊಳಗೆ ಸೃಜನಶೀಲತೆಯ ಸೆಲೆ ಜಿನುಗಲು ಕಾರಣರಾದವರೆಲ್ಲರಿಗೂ ನಾನು ಋಣಿಯಾಗಿದ್ದೇನೆ.


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


    

Tuesday, December 29, 2015

ಅನ್ವೇಷಣೆ: ಪುಸ್ತಕ ಬಿಡುಗಡೆ


  




ದಿನಾಂಕ ೨೭. ೧೨. ೨೦೧೫ ರಂದು ನನ್ನ ಆರನೇ ಕೃತಿ 'ಅನ್ವೇಷಣೆ' ಬಿಡುಗಡೆಯಾಯಿತು. ಕಲಬುರಗಿಯ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಸಂಸ್ಥೆ ಪ್ರಕಟಿಸುತ್ತಿರುವ ನನ್ನ ನಾಲ್ಕನೇ ಕೃತಿಯಿದು. ಇನ್ನುಳಿದ ಎರಡು ಪುಸ್ತಕಗಳು ಬಾಗಲಕೋಟೆಯಲ್ಲಿ ಪ್ರಕಟವಾಗಿವೆ. ಇನ್ನು ಅನ್ವೇಷಣೆ ಕೃತಿಯ ಕುರಿತು ಹೇಳುವುದಾದರೆ ಇಲ್ಲಿನ ಎಲ್ಲ ಲೇಖನಗಳು ನಾನು ನನ್ನ ಬ್ಲಾಗಿಗೆ ಬರೆದವುಗಳು. ಈ ಬ್ಲಾಗಿಗೆ ಬರೆಯುವಾಗಲೆಲ್ಲ ನಾನು ಪತ್ರಿಕೆಯೊಂದಕ್ಕೆ ಬರೆಯುವ ಬದ್ಧತೆಯಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಬ್ಲಾಗ್ ಬರವಣಿಗೆಯನ್ನು ಸಮಾಜಕ್ಕೆ ಮುಖಾಮುಖಿಯಾಗಿ ನಿಲ್ಲಿಸುವ ಕಾಳಜಿ ನನ್ನದು. 

ಇನ್ನು ನನ್ನ ಪುಸ್ತಕಗಳ ಪ್ರಕಟಣೆಯ ವಿಷಯವಾಗಿ ನಾನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕಾದ ವ್ಯಕ್ತಿತ್ವ ಶ್ರೀ ಬಸವರಾಜ ಕೊನೇಕ ಅವರದು. ಕಲಬುರಗಿಯಲ್ಲಿ ಪ್ರಕಾಶನ ಸಂಸ್ಥೆ ಮತ್ತು ಬೃಹತ್ ಪುಸ್ತಕ ಮಳಿಗೆಯನ್ನು ಸ್ಥಾಪಿಸಿ ಅವರು ಮಾಡುತ್ತಿರುವ ಕನ್ನಡದ ಈ ಕೆಲಸ ನಿಜಕ್ಕೂ ಅಭಿನಂದನಾರ್ಹ. ಅವರ ಈ ಕನ್ನಡದ ಸೇವಾ ಕೈಂಕರ್ಯ ನಿರಂತರವಾಗಿ ಮುಂದುವರೆಯಲಿ. 

ನನ್ನ ಬರವಣಿಗೆಯ ಬದುಕಿನಲ್ಲಿ ನನ್ನ ಜೊತೆಗೆ ನಿಂತು ಸಹಕರಿಸುತ್ತಿರುವವರಿಗೆಲ್ಲ ನಾನು ಈ ಸಂದರ್ಭ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. 








-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


Sunday, November 1, 2015

ಕನ್ನಡ ಭಾಷೆಯ ಆತಂಕಗಳು



        ಕನ್ನಡ ಭಾಷೆ ತುಂಬ ಆತಂಕದಲ್ಲಿರುವ ದಿನಗಳಿವು. ಸಾವಿರಾರು ವರ್ಷಗಳ ಇತಿಹಾಸವಿರುವ ಮತ್ತು ಬಹುದೊಡ್ಡ ರಾಜ್ಯದ ನಾಡ ಭಾಷೆಯಾಗಿರುವ ಕನ್ನಡ ಭಾಷೆ ಈಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾಷೆಯ ಮಟ್ಟಿಗೆ ಬೆಳವಣಿಗೆ ಎನ್ನುವುದು ಅದು ನಿರಂತರವಾಗಿ ಪ್ರವಹಿಸುತ್ತಿರಬೇಕು. ಏಕೆಂದರೆ ಭಾಷೆ ಕೇವಲ ಸಂವಹನದ ಮಾಧ್ಯಮ ಮಾತ್ರವಲ್ಲ. ಅದು ಒಂದು ನೆಲದ ಹಾಗೂ ಅನೇಕ ತಲೆಮಾರುಗಳ ಸಂಸ್ಕೃತಿಯನ್ನು ಅತ್ಯಂತ ಜತನದಿಂದ ಕಾಪಿಟ್ಟುಕೊಂಡು ಬಂದ ಮಾಧ್ಯಮ. ಆದ್ದರಿಂದ ಭಾಷೆಗೂ ಮತ್ತು ನೆಲದ ಸಂಸ್ಕೃತಿಗೂ ನಿಕಟವಾದ ಸಂಬಂಧವಿದೆ. ಇಂಥದ್ದೊಂದು ಸಂಬಂಧವಿಲ್ಲದೆ ಹೋದಲ್ಲಿ ಭಾಷೆ ಕೇವಲ ಮಾತನಾಡುವ ಸಂಕೇತ ಮಾತ್ರವಾಗಿ ಉಳಿದು ಜನಮಾನಸದಿಂದ ಬಹುಬೇಗ ಮರೆಯಾಗಿ ಹೋಗುತ್ತದೆ. ಇದಕ್ಕೆ ಉದಾಹರಣೆಯಾಗಿ ಲಿಪಿಯಿಲ್ಲದ ಭಾಷೆಗಳಾದ ಲಂಬಾಣಿ, ತುಳು, ಕೊಡವ ಇತ್ಯಾದಿ ಭಾಷೆಗಳನ್ನು ಉದಾಹರಣೆಯಾಗಿ ಹೇಳಬಹುದು. ಭಾಷೆಯೊಂದು ಗಟ್ಟಿಯಾಗಿ ತಳವೂರಿ ಬೆಳೆಯಲು ಆ ಭಾಷೆಯನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳಲಾಗಿದೆ ಎನ್ನುವುದು ಮುಖ್ಯವಾಗುತ್ತದೆ. ಈ ದೃಷ್ಟಿಯಿಂದ ಕನ್ನಡ ಭಾಷೆಯನ್ನು ಈ ನಾಡಿನಲ್ಲಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಅದಕ್ಕೆಂದೇ ಕನ್ನಡ ಭಾಷೆಯಲ್ಲಿ ಸಾಹಿತ್ಯ ಮತ್ತಿತರ ಸೃಜನಶೀಲತೆಯ ಫಸಲು ಸಮೃದ್ಧವಾಗಿ ಬೆಳೆಯಲು ಸಾಧ್ಯವಾಯಿತು. ಅಮೋಘವರ್ಷ ನೃಪತುಂಗನ ಕಾಲದಿಂದ ಕುವೆಂಪು, ಕಾರಂತ, ಬೇಂದ್ರೆ ಮತ್ತು ನವೋದಯದ ಅಡಿಗರು, ಅನಂತಮೂರ್ತಿ, ಲಂಕೇಶ್, ಭೈರಪ್ಪನವರವರೆಗೆ ಕನ್ನಡ ಭಾಷೆಯಲ್ಲಿ ಉತ್ಕೃಷ್ಟ ಕೃತಿಗಳು ರಚನೆಯಾದವು. ಹಳೆಗನ್ನಡ, ಹೊಸಗನ್ನಡ, ನವ್ಯ, ನವೋದಯ, ಬಂಡಾಯ ಹೀಗೆ ವಿವಿಧ ಕಾಲಘಟ್ಟದಲ್ಲಿ ಕನ್ನಡ ಭಾಷೆ ಅನೇಕ ಅಗ್ನಿದಿವ್ಯಗಳನ್ನು ಹಾದು ತನ್ನತನ ಮತ್ತು ಸಮೃದ್ಧತೆಯನ್ನು ಉಳಿಸಿಕೊಂಡು ಬಂದಿದೆ. ಆದರೆ ಕಳೆದ ಮೂರು ದಶಕಗಳಿಂದ  ಕನ್ನಡ ಭಾಷೆಗೆ ಎದುರಾದ ಸಮಸ್ಯೆಗಳು ಮಾತ್ರ ಈ ನೆಲದ ಭಾಷೆಯನ್ನು ಜರ್ಜರಿತಗೊಳಿಸಿವೆ. ಪರಭಾಷೆಗಳ ಪೈಪೋಟಿ, ಶಿಕ್ಷಣದ ಮಾಧ್ಯಮವಾಗಿ ಬೇರೂರಿರುವ ಇಂಗ್ಲಿಷ್ ಭಾಷೆ, ಕನ್ನಡ ಪುಸ್ತಕಗಳನ್ನು ಖರೀದಿಸಿ ಓದುವ ಓದುಗರ ಕೊರತೆ, ರಾಜಕಾರಣಿಗಳ ಸ್ವಹಿತಾಸಕ್ತಿ ಈ ಎಲ್ಲ ಸಮಸ್ಯೆಗಳ ನಡುವೆ ಕನ್ನಡ ಭಾಷೆ ತನ್ನ ನೆಲದಲ್ಲೇ ಅಪರಿಚಿತವಾಗುತ್ತಿದೆ.

ಕನ್ನಡ ಮಾಧ್ಯಮದ ಅವನತಿ 


          ಇವತ್ತು ರಾಜ್ಯದಲ್ಲಿ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತಿವೆ. ಜಾಗತೀಕರಣದ ಪರಿಣಾಮ ಇಂಗ್ಲಿಷ್ ಭಾಷೆ ಮಹತ್ವ ಪಡೆದಿರುವುದರಿಂದ ಅದನ್ನು ಭಾಷೆ ಮಾತ್ರವಾಗಿ ಕಲಿಯದೆ ಅದನ್ನೇ ಶಿಕ್ಷಣದ ಮಾಧ್ಯಮವಾಗಿ ಮಾಡಿಕೊಳ್ಳಲಾಗಿದೆ. ಹೀಗೆ ಇಂಗ್ಲಿಷ್ ಭಾಷೆ ಶಿಕ್ಷಣದ ಮಾಧ್ಯಮವಾಗಿ ಬಳಕೆಯಾಗುತ್ತಿರುವ ಈ ದಿನಗಳಲ್ಲಿ ಈ ನೆಲದ ಭಾಷೆ ಕನ್ನಡವನ್ನು ಶಾಲೆಗಳಲ್ಲಿ ಭಾಷೆಯಾಗಿ ಕಲಿಸುವ ದುರಂತ ಎದುರಾಗಿದೆ. ವಿಪರ್ಯಾಸ ನೋಡಿ ಮಾತನಾಡುವ ಭಾಷೆಯಾಗಿ ಕನ್ನಡ ನಮಗೆಲ್ಲ ಚಿರಪರಿಚಿತ ಹೀಗಿದ್ದೂ ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಯುವ ದಿನಗಳು ಬಂದಿವೆ. ಯಾವ ಭಾಷೆಯನ್ನು ಶಿಕ್ಷಣದ ಮಾಧ್ಯಮವಾಗಿ ಬಳಸಿಕೊಳ್ಳಬೇಕೋ ಅದನ್ನು ಕೇವಲ ಭಾಷೆಯಾಗಿ ನಮ್ಮ ಮಕ್ಕಳು ಕಲಿಯುತ್ತಿರುವರು. ಭಾಷೆಯಾಗಿ ಕಲಿಯುವ ಅಗತ್ಯವಿರುವ ಇಂಗ್ಲಿಷ್ ಇಂದು ಶಿಕ್ಷಣದ ಮಾಧ್ಯಮವಾಗಿ ಬಹುಮುಖ್ಯ ಸ್ಥಾನವನ್ನು ಆಕ್ರಮಿಸಿಕೊಂಡಿದೆ. ಮಕ್ಕಳು ತಮ್ಮ  ಮಾತ್ರಭಾಷೆ ಮೂಲಕ ವಿವಿಧ ವಿಷಯಗಳನ್ನು ಸುಲಭವಾಗಿ ಕಲಿಯಬಲ್ಲರು ಎನ್ನುವ ವೈಜ್ಞಾನಿಕ ಸತ್ಯವನ್ನು ಕಡೆಗಣಿಸಿ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಮಣೆ ಹಾಕಲಾಗುತ್ತಿದೆ. ಪರಿಣಾಮವಾಗಿ ರಾಜ್ಯದಲ್ಲಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಉದ್ಯಮದ ರೂಪ ಪಡೆದು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಿಗೂ ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ತಮ್ಮ ಮಕ್ಕಳನ್ನು ಜಾಗತೀಕರಣಕ್ಕೆ ಮುಖಾಮುಖಿಯಾಗಿಸುವ ಧಾವಂತದಲ್ಲಿ ಉಳ್ಳವರು ಮತ್ತು ಉಳ್ಳದವರು ಎಲ್ಲರೂ ಕೂಡಿಯೇ ಇಂಗ್ಲಿಷ್ ಶಾಲೆಗಳ ಪ್ರವೇಶಕ್ಕೆ ಮುಗಿಬಿಳುತ್ತಿರುವರು. ಪಾಲಕರ ಇಂಗಿತವನ್ನು ತಮ್ಮ ಸ್ವಾರ್ಥ ಮತ್ತು ಧನದಾಹಕ್ಕೆ ಬಳಸಿಕೊಳ್ಳುತ್ತಿರುವ ಖಾಸಗಿ ಇಂಗ್ಲಿಷ್ ಶಾಲೆಗಳ ಆಡಳಿತ ಮಂಡಳಿಗಳು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಇನ್ನೊಂದೆಡೆ ಕನ್ನಡ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿ ಹೋಗುವ ದುಸ್ಥಿತಿಗೆ ಬಂದು ನಿಂತಿವೆ. ಯಾವಾಗ ಇಂಗ್ಲಿಷ್ ಭಾಷೆ ಶಿಕ್ಷಣದ ಮಾಧ್ಯಮವಾಗಿ ತನ್ನ ಪಾರುಪತ್ಯವನ್ನು ಮೆರೆಯತೊಡಗಿತೋ ಆಗ ನಿಜವಾಗಿ ಸಂಕಷ್ಟದಲ್ಲಿ ಸಿಲುಕಿದ್ದು ಕನ್ನಡ ಭಾಷೆ.

ಸಾಹಿತ್ಯ ವಲಯದ ಗುಂಪುಗಾರಿಕೆ 


         ಕನ್ನಡದ ವೈಚಾರಿಕ ವಲಯ ವಿಶೇಷವಾಗಿ ಸಾಹಿತ್ಯ ವಲಯ ಇಂದು ವಿವಿಧ ಗುಂಪುಗಳಾಗಿ ಒಡೆದು ಹೋಳಾಗಿದೆ. ಭಿನ್ನಾಭಿಪ್ರಾಯ ಅದು ಪ್ರಜಾಪ್ರಭುತ್ವದ ಜೀವಂತ ಲಕ್ಷಣ ನಿಜ ಆದರೆ ನಾವು ತಿಳಿದುಕೊಂಡಂತೆ ಡೆಮಾಕ್ರೆಟಿಕ್ ವಾತಾವರಣ ಇವತ್ತಿನ ಕನ್ನಡ ಸಾಹಿತ್ಯ ವಲಯದಲ್ಲಿಲ್ಲ. ಅಸಹನೆ, ವರ್ಗತಾರತಮ್ಯ, ಅಸೂಯೆ, ಗುಂಪುಗಾರಿಕೆ, ರಾಜಕಾರಣ, ಅಧಿಕಾರದ ಲಾಲಸೆ, ಪ್ರಶಸ್ತಿ ಪುರಸ್ಕಾರಗಳ ವಾಂಛೆ ಇವತ್ತಿನ ಸಾಹಿತ್ಯವಲಯದ ವಾತಾವರಣವನ್ನು ಅಸಹನೀಯಗೊಳಿಸಿವೆ. ಸಾಹಿತ್ಯ ವಲಯ ಎಡಪಂಥಿಯ ಮತ್ತು ಬಲಪಂಥಿಯ ಎಂದು ಎರಡು ವಿಭಿನ್ನ ವರ್ಗಗಳಲ್ಲಿ ಗುರುತಿಸಿಕೊಂಡಿದೆ. ಒಬ್ಬ ಬರಹಗಾರ ಈ ಯಾವುದಾದರು ಒಂದು ಗುಂಪಿನೊಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ಆತ ತನ್ನದೇ ಆದ ಐಡೆಂಟಿಟಿ ಹೊಂದಲು ಸಾಧ್ಯ ಎನ್ನುವಂಥ ವಾತಾವರಣ ಸಾಹಿತ್ಯ ಕ್ಷೇತ್ರದಲ್ಲಿ ನಿರ್ಮಾಣವಾಗಿದೆ. ಪ್ರತಿ ಗುಂಪಿಗೂ ಬರೆಯಲು ಅವರದೇ ಆದ ಅಜೆಂಡಾಗಳಿವೆ. ಅಂಥದ್ದೊಂದು ಸ್ಥಾಪಿತ ಅಜೆಂಡಾದ ಚೌಕಟ್ಟಿನಲ್ಲೇ ಬರೆಯಬೇಕಾದ ಅನಿವಾರ್ಯತೆ ಲೇಖಕನದು. ಒಂದು ಗುಂಪಿನ ಬರಹಗಾರರ ವಿರುದ್ಧ ಇನ್ನೊಂದು ಗುಂಪಿನವರು ಇಲ್ಲಿ ಕತ್ತಿ ಮಸೆಯುತ್ತಾರೆ. ಅದಕ್ಕೆಂದೇ ಭೈರಪ್ಪನವರ ಆವರಣದ ವಿರುದ್ಧ ಇಲ್ಲಿ ಅನಾವರಣ  ಕೃತಿ ಪ್ರಕಟವಾಗುತ್ತದೆ. ಸಂಸ್ಕಾರದ ಎದುರು ವಂಶವೃಕ್ಷವನ್ನು ಹತಾರವಾಗಿಸುತ್ತಾರೆ. ಅಕಾಡೆಮಿಗಳ ಅಧ್ಯಕ್ಷರಾಗುವ ಸೃಜನಶೀಲರು ಪ್ರಶಸ್ತಿ ಪುರಸ್ಕಾರಗಳಿಗಾಗಿ ತಮ್ಮದೇ ಗುಂಪಿನ ಲೇಖಕರಿಗೆ ಮಣೆಹಾಕುತ್ತಾರೆ. ಗುಂಪುಗಾರಿಕೆ, ದ್ವೇಷಾಸೂಯೆಗಳ ಪರಿಣಾಮ ಇಲ್ಲಿ ಭಾಷೆಯ ಕುರಿತಾದ ಕಾಳಜಿ ಮೂಲೆಗುಂಪಾಗುತ್ತದೆ.

ಭಾಷಾ ಚಳವಳಿ 


           ಕನ್ನಡ ಭಾಷೆಯ ಉಳಿವಿಗಾಗಿ  ಗೋಕಾಕ ಚಳವಳಿಯ ನಂತರ ಮತ್ತೊಂದು ಅಂಥ ಮಹತ್ವದ ಚಳವಳಿ ಕನ್ನಡದ ನೆಲದಲ್ಲಿ ಕಾಣಿಸಿಕೊಂಡಿಲ್ಲ. ಗೋಕಾಕ ಚಳವಳಿ ಕಾಣಿಸಿಕೊಂಡ ೧೯೮೦ ರ ದಶಕದ ಅಂದಿನ ಕನ್ನಡ ಭಾಷೆಯ ಸ್ಥಿತಿಗೂ ಮತ್ತು ಇವತ್ತು ಭಾಷೆ ಎದುರಿಸುತ್ತಿರುವ ಸಮಸ್ಯೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ೧೯೮೦ ರ ದಶಕದಲ್ಲಿ ಆಗಿನ್ನೂ ಜಾಗತೀಕರಣ ಈಗಿನಷ್ಟು ತನ್ನ ಪ್ರಾಬಲ್ಯವನ್ನು ಮೆರೆದಿರಲಿಲ್ಲ ಮತ್ತು ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅದೇ ಆಗ ನೆಲೆಯೂರಲು ಪ್ರಯತ್ನಿಸುತ್ತಿತ್ತು. ಅಂಥ ದಿನಗಳಲ್ಲಿ ಕನ್ನಡದ ಸಾಹಿತ್ಯಿಕ ವಲಯ ಹಾಗೂ ಸಿನಿಮಾ ಕಲಾವಿದರು ಒಟ್ಟಾಗಿ ಪ್ರತಿಭಟನೆಗಿಳಿದು ಬಹುದೊಡ್ಡ ಚಳವಳಿಗೆ ಕಾರಣರಾದರು. ಅಂದಿನ ಸರ್ಕಾರ ಸಹ ಹೋರಾಟಗಾರರ ಪ್ರತಿಭಟನೆಗೆ ಸ್ಪಂದಿಸಿ ಅನೇಕ ಭರವಸೆಗಳನ್ನು ನೀಡಿತು. ಗೋಕಾಕ ಚಳವಳಿಯ ನಂತರದ ಈ ಮೂರು ದಶಕಗಳಲ್ಲಿ ಕನ್ನಡ ಭಾಷೆ ಬಲಾಢ್ಯವಾಗಿ ಬೆಳೆಯುವ ಯಾವ ಅವಕಾಶಗಳಿಲ್ಲದೆ ನಿರ್ಲಕ್ಷಕ್ಕೆ ಒಳಗಾಗಿದೆ. ಇಂಗ್ಲಿಷ್ ಮಾಧ್ಯಮದ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವ ಈ ಘಳಿಗೆ ಕನ್ನಡ ಶಾಲೆಗಳ ಸಂಖ್ಯೆ ಕ್ಷಿಣಿಸುತ್ತಿದೆ. ಗಡಿ ಪ್ರದೇಶಗಳಲ್ಲಿ ಪರಭಾಷೆಗಳ ಪ್ರಾಬಲ್ಯದೆದುರು ಗಡಿನಾಡ ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದೇ ಬಹುದೊಡ್ಡ ಸಾಹಸವಾಗಿದೆ. ಗೋವಾ ರಾಜ್ಯದಲ್ಲಿರುವ ಅನಿವಾಸಿ ಕನ್ನಡಿಗರ ಬದುಕು ತನ್ನ ನೆಲೆಯನ್ನು ಕಳೆದುಕೊಂಡಿದೆ. ಸೃಜನಶೀಲ ಮಾಧ್ಯಮವಾದ ಸಿನಿಮಾ ಇಂದು ಭಾಷೆಯನ್ನು ಅತಿ ಕೆಟ್ಟದಾಗಿ ಬಳಸಿಕೊಳ್ಳುತ್ತಿದೆ. ಈ ಸಮಯದಲ್ಲಿ ಒಂದಾಗಿ ಪ್ರತಿಭಟಿಸಬೇಕಾದ ಮತ್ತು ಚಳವಳಿಯನ್ನು ರೂಪಿಸಬೇಕಾದ ನಮ್ಮ ಸಾಹಿತ್ಯವಲಯ ತನ್ನ ಗುಂಪುಗಾರಿಕೆಯಿಂದ ಚಳವಳಿಗಳಿಗೆ ವಿಮುಖವಾಗುತ್ತಿದೆ.

ಜಾತ್ರೆಯಾಗುತ್ತಿರುವ ಸಮ್ಮೇಳನಗಳು 


         ಕನ್ನಡ ಸಾಹಿತ್ಯ ಸಮ್ಮೇಳನಗಳು ಭಾಷೆಯ ಶ್ರೇಷ್ಠತೆ ಮತ್ತು ಅದು ಎದುರಿಸುತ್ತಿರುವ ಸಮಸ್ಯೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಜನರಿಗೆ ಒಯ್ದು ತಲುಪಿಸುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಸಮ್ಮೇಳನಗಳ ಮೇಲೆ ಮಹತ್ವದ ಜವಾಬ್ದಾರಿಯಿದೆ. ಕನ್ನಡ ಭಾಷೆ ಎದುರಿಸುತ್ತಿರುವ ಸವಾಲುಗಳು ಮತ್ತು ಅದಕ್ಕೆ ಎದುರಾಗಿರುವ ಆತಂಕದ ಕುರಿತು ಸಮ್ಮೇಳನದ ವೇದಿಕೆಯಲ್ಲಿ ಚರ್ಚೆಯಾಗಬೇಕು. ಕನ್ನಡವನ್ನು ಭಾಷೆಯಾಗಿ ಮತ್ತು ಶಿಕ್ಷಣದ ಮಾಧ್ಯಮವಾಗಿ ಉಳಿಸಿಕೊಳ್ಳುವ ಕುರಿತು ಅಭಿಪ್ರಾಯಗಳು ಮತ್ತು ಪರಿಹಾರಗಳು ಮೂಡಬೇಕು. ಕನ್ನಡ ಭಾಷೆಯನ್ನು ಜನ ಸಮೂಹಕ್ಕೆ ಇನ್ನಷ್ಟು ಹತ್ತಿರಗೊಳಿಸುವ ಪ್ರಯತ್ನಗಳಾಗಬೇಕು. ದುರಂತದ ಸಂಗತಿ ಎಂದರೆ ಅಧ್ಯಕ್ಷ ಸ್ಥಾನದ ಲಾಲಸೆ, ವೇದಿಕೆಯಲ್ಲಿ ಅವಕಾಶ ಪಡೆಯುವ ಹುನ್ನಾರ, ಪ್ರಶಸ್ತಿ ಪುರಸ್ಕಾರಗಳಿಗಾಗಿ ಲಾಭಿ, ಸ್ವಜಾತಿ ಸ್ವಧರ್ಮದ ಮೋಹಗಳಿಗೆ ಕಟ್ಟು ಬಿದ್ದು ನಮ್ಮ ಸಾಹಿತ್ಯ ವಲಯ ಸಮ್ಮೇಳನಗಳಿಗೆ  ಅಕ್ಷರಶ: ಜಾತ್ರೆಯ ಸ್ವರೂಪವನ್ನು ತಂದಿರುವರು. ಜೊತೆಗೆ ಸಮ್ಮೇಳನದ ವೇದಿಕೆಯನ್ನು ಸಾಹಿತಿಗಳು ರಾಜಕಾರಣಿಗಳೊಂದಿಗೆ ಹಂಚಿಕೊಳ್ಳುತ್ತಿರುವುದು ಕನ್ನಡ ಭಾಷೆಯ ದೃಷ್ಟಿಯಿಂದ ಇನ್ನೊಂದು ಆತಂಕದ ಸಂಗತಿ. ಹೀಗೆ ರಾಜಕಾರಣಿಗಳನ್ನು ಸಮ್ಮೇಳನಗಳ ವೇದಿಕೆಗೆ ಕರೆತರುತ್ತಿರುವುದರಿಂದ ಸಮ್ಮೇಳನಗಳು ರಾಜಕಾರಣಿಗಳ ಒಡ್ಡೋಲಗದಂತೆ ಭಾಸವಾಗುತ್ತಿದೆ. ಅವರವರ ವೈಯಕ್ತಿಕ ಹಿತಾಸಕ್ತಿಗಳ ನಡುವೆ ನಲುಗಿಹೋಗುತ್ತಿರುವುದು ಮಾತ್ರ ಕನ್ನಡ ಭಾಷೆ ಎನ್ನುವುದು ಅಕ್ಷರಶ: ಸತ್ಯ.

ಕನ್ನಡ ಸಾಹಿತ್ಯ ಪರಿಷತ್ತು 


          ಕನ್ನಡ ಸಾಹಿತ್ಯ ಪರಿಷತ್ತಿಗೆ ಈಗ ನೂರರ ಸಂಭ್ರಮ. ಭಾಷೆ ಮತ್ತು ನಾಡಿನ ರಕ್ಷಣೆಗಾಗಿ ಸ್ಥಾಪನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಕೆಲವು ದಶಕಗಳಿಂದ ತನ್ನ ಮೂಲ ಉದ್ದೇಶದಿಂದ ಕಳಚಿಕೊಂಡು ಸ್ವಾರ್ಥಿಗಳ ಮತ್ತು ಅಧಿಕಾರ ಲಾಲಸೆಯ ಕೇಂದ್ರವಾಗಿ ರೂಪಾಂತರಗೊಂಡಿದೆ. ಈಗ ಅಲ್ಲಿಯೂ ರಾಜಕೀಯ ತಲೆ ಹಾಕಿದೆ. ಪರಿಣಾಮವಾಗಿ ಕಸಾಪದ ರಾಜ್ಯಾಧ್ಯಕ್ಷರ ಮತ್ತು ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರ ಸ್ಥಾನಗಳಿಗಾಗಿ ನಡೆಯುವ ಚುನಾವಣೆ ವಿಶೇಷ ಮಹತ್ವ ಪಡೆದುಕೊಂಡಿದೆ. ಕಸಾಪದ ಚುನಾವಣೆಯಲ್ಲಿ ರಾಜಕಾರಣಿಗಳ ಪ್ರವೇಶದಿಂದಾಗಿ ಅಲ್ಲಿ ಜಾತಿ ಮತ್ತು ಪ್ರಾದೇಶಿಕ ಗುಂಪುಗಾರಿಕೆ ಪರಿಷತ್ತಿನ ನಡೆಯನ್ನು ನಿರ್ಣಯಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ಪುಸ್ತಕಗಳ ಪ್ರಕಟಣೆ, ಪ್ರಶಸ್ತಿ ಪುರಸ್ಕಾರ, ಸಮ್ಮೇಳನದ ಅಧ್ಯಕ್ಷರ ಆಯ್ಕ,  ಗೋಷ್ಠಿಗಳ ಅಧ್ಯಕ್ಷತೆ, ಗೋಷ್ಠಿಗಳಲ್ಲಿ ಕವನಗಳ ವಾಚನ ಮತ್ತು ಪ್ರಬಂಧಗಳ ಮಂಡನೆ ಹೀಗೆ ಪ್ರತಿ ಹಂತದಲ್ಲೂ ಜಾತಿ ಮತ್ತು ಪ್ರಾದೇಶಿಕತೆಯ ಕೋಟಾ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಸಮ್ಮೇಳನದ ಸರ್ವಾಧ್ಯಕ್ಷರ ಮಾತುಗಳನ್ನು ವೇದಿಕೆಯಲ್ಲೇ ಮೊಟಕುಗೊಳಿಸುವಂತೆ ಒತ್ತಾಯಿಸುವಷ್ಟು ಕಸಾಪದ ಕೈಗಳು ಉದ್ದವಾಗಿವೆ. ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಭಾಷೆಯ ಉಳುವಿಗಾಗಿ ಹೋರಾಟಗಳನ್ನು ಸಂಘಟಿಸುತ್ತಿಲ್ಲ ಮತ್ತು ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾದಾಗ ಹೋರಾಟ ಮತ್ತು ಚಳವಳಿಗಳನ್ನು ಸಂಘಟಿಸಬೇಕಾದ ಮಹತ್ವದ ಜವಾಬ್ದಾರಿಯಿದೆ. ಆದರೆ ಪರಿಷತ್ತು ಈ ವಿಷಯವಾಗಿ ನುಣುಚಿಕೊಂಡಿದ್ದೆ ಹೆಚ್ಚು.

ಓದುಗರ ಕೊರತೆ 


       ಕನ್ನಡ ಭಾಷೆಯಲ್ಲಿ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗುತ್ತಿರುವ ಈ ಹೊತ್ತು ಓದುಗರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿದೆ. ಅದರಲ್ಲೂ ವಿಶೇಷವಾಗಿ ಪುಸ್ತಕಗಳನ್ನು ಅವುಗಳ ಮುಖಬೆಲೆಗೆ ಖರೀದಿಸಿ ಓದುವ ಓದುಗರ ಸಂಖ್ಯೆ ಕನ್ನಡದಲ್ಲಿ ಅಷ್ಟೇನೂ ಆಶಾದಾಯಕವಾಗಿಲ್ಲ. ಬೆರಳೆಣಿಕೆಯ ಲೇಖಕರ ಪುಸ್ತಕಗಳು ಹತ್ತಾರು ಬಾರಿ ಮುದ್ರಣಗೊಂಡು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿರುವಾಗ  ಅದನ್ನೇ ಇಡೀ ಕನ್ನಡ ಪುಸ್ತಕೋದ್ಯಮಕ್ಕೆ ಅನ್ವಯಿಸುವುದು ತಪ್ಪು ನಡೆಯಾಗುತ್ತದೆ. ಸಾಹಿತ್ಯದಂತೆ ಓದುಗರ ವಲಯದಲ್ಲಿನ  ಗುಂಪುಗಾರಿಕೆಯ ಪರಿಣಾಮ ಪ್ರಕಟವಾದ ಪುಸ್ತಕವೊಂದು ಅದು ಹೆಚ್ಚಿನ ಸಂಖ್ಯೆಯ ಓದುಗರ ಓದಿಗೆ ದಕ್ಕುವ ಸಾಧ್ಯತೆ ತೀರ ಕಡಿಮೆ. ಅನಂತಮೂರ್ತಿ ಅವರನ್ನು ಓದುವ ಓದುಗ ಭೈರಪ್ಪನವರನ್ನು ಓದಲಾರದಂಥ ವಾತಾವರಣ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಲೆದೂರಿದೆ. ಪರಿಣಾಮವಾಗಿ ಲೇಖಕ ಒಂದು ಗುಂಪಿನೊಂದಿಗೆ ಗುರುತಿಸಿಕೊಂಡಲ್ಲಿ ಮಾತ್ರ ಅವನ ಕೃತಿಗಳ ಓದಿಗೆ ಒಂದಿಷ್ಟು ಓದುಗರು ದಕ್ಕಬಹುದು. ಪರಿಸ್ಥಿತಿ ಹೀಗಿರುವಾಗ ಯಾವ ಗುಂಪಿನೊಂದಿಗೂ ಗುರುತಿಸಿಕೊಳ್ಳದ ಲೇಖಕರ ಪುಸ್ತಕಗಳು ಸಾರ್ವಜನಿಕ ಗ್ರಂಥಾಲಯಗಳಲ್ಲಿನ ಅಲ್ಮೆರಾಗಳಿಗೆ ಅಲಂಕಾರಿಕ ವಸ್ತುಗಳಾಗಿಬಿಡಬಹುದು. ಸಾಹಿತಿ ತಿರುಮಲೇಶ್ ಅವರು ಹೇಳುವಂತೆ ಓದುಗರು ಸಾಹಿತ್ಯದ ಮುಖ್ಯವಾಹಿನಿಯಲ್ಲಿ ಗುರುತಿಸಲ್ಪಟ್ಟ ಲೇಖಕರ ಪುಸ್ತಕಗಳನ್ನು ಮಾತ್ರ ತಮ್ಮ ಓದಿಗಾಗಿ ಆಯ್ಕೆ ಮಾಡುತ್ತಿರುವರು. ಅವರೇ ಹೇಳುವಂತೆ ಇದು ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ತುಂಬ ಅಪಾಯಕಾರಿಯಾದ ನಡೆ. ಏಕೆಂದರೆ ಮುಖ್ಯವಾಹಿನಿ ಎನ್ನುವುದು ಎಲ್ಲರನ್ನೂ ಮತ್ತು ಎಲ್ಲರ ಕೃತಿಗಳನ್ನು ಒಳಗೊಂಡಿರುವ ಸಮಗ್ರವಾಹಿನಿಯಲ್ಲ. ಗಟ್ಟಿಯಾದ ವಿಷಯ ವಸ್ತುವನ್ನು ಒಳಗೊಂಡಿರುವ ಅನೇಕ ಪುಸ್ತಕಗಳು ಮುಖ್ಯವಾಹಿನಿಯಲ್ಲೇ ಕಾಣಿಸಿಕೊಳ್ಳದೆ ಹೋಗಬಹುದು. ಆಗೆಲ್ಲ ಅಂಥ ಪುಸ್ತಕಗಳು ಓದುಗರ ಓದಿನ ವ್ಯಾಪ್ತಿಯಿಂದ ದೂರವೇ ಉಳಿಯುತ್ತವೆ.

ಕನ್ನಡ ಸಿನಿಮಾಗಳು 


        ಸೃಜನಶೀಲ ಮಾಧ್ಯಮವೆಂದೆ ಗುರುತಿಸಿಕೊಂಡಿರುವ ಕನ್ನಡ ಸಿನಿಮಾ ಮಾಧ್ಯಮ ಇವತ್ತು ಭಾಷೆಯನ್ನು ಅತ್ಯಂತ ಕೆಟ್ಟದಾಗಿ ಬಳಸಿಕೊಳ್ಳುತ್ತಿದೆ. ಒಂದು ಕಾಲದಲ್ಲಿ  ಸಿನಿಮಾವನ್ನು ಅದೊಂದು ಸೃಜನಶೀಲ ಮಾಧ್ಯಮವೆಂದು ಭಾವಿಸಿದ್ದ ಕಲಾವಿದರು ಮತ್ತು ತಂತ್ರಜ್ಞರು ಕನ್ನಡ ಸಿನಿಮಾ ಮಾಧ್ಯಮದಲ್ಲಿದ್ದರು. ಆಗ ನಿರ್ಮಾಣಗೊಳ್ಳುತ್ತಿದ್ದ ಸಿನಿಮಾಗಳು ನಾಡು ನುಡಿಯ ಆಶಯಕ್ಕೆ ಪೂರಕವಾಗಿರುತ್ತಿದ್ದವು. ಸಿನಿಮಾವನ್ನು ಸೃಜನಶೀಲ ಮಾಧ್ಯಮವೆಂದು ಭಾವಿಸಿ ಅನೇಕ ಬರಹಗಾರರು ಸಿನಿಮಾಗಳಿಗೆ ಸಂಭಾಷಣೆ ಬರೆದ ಮತ್ತು ಹಾಡುಗಳನ್ನು ರಚಿಸಿದ ಅನೇಕ ಉದಾಹರಣೆಗಳಿವೆ.  ಕಾಲಾನಂತರದಲ್ಲಿ ಸಿನಿಮಾ ಅದೊಂದು ಹಣ ಮಾಡುವ ಉದ್ಯಮ ಎನ್ನುವ ಭಾವನೆ ಬಲವಾದಂತೆ ಸಿನಿಮಾದ ಕಥೆ ಹೆಣೆಯುವ ಮತ್ತು ಸಂಭಾಷಣೆಗಳನ್ನು ಹೇಳಿಸುವ ರೀತಿನೀತಿಗಳು ಬದಲಾದವು. ಸಿನಿಮಾ ಮಾಧ್ಯಮ ತನ್ನದೇ ಭಾಷೆಯನ್ನು ರೂಪಿಸಿಕೊಂಡು ಮನರಂಜನೆಯನ್ನೇ ತನ್ನ ಮೂಲ ಉದ್ದೇಶವಾಗಿಸಿಕೊಂಡಾಗ ಅಲ್ಲಿ ನಿಜವಾಗಿಯೂ ಸಂಕಷ್ಟಕ್ಕೆ ಒಳಗಾಗಿದ್ದು ಈ ನೆಲದ ಭಾಷೆ. ಜೊತೆಗೆ ಕನ್ನಡ ಸಿನಿಮಾದ ಮಾರುಕಟ್ಟೆ ವಿಸ್ತರಿಸಿದಂತೆಲ್ಲ ಕನ್ನಡೇತರ  ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅನ್ಯಭಾಷೆಯ ಪದಗಳಿಗೆ ಸಿನಿಮಾಗಳಲ್ಲಿ ಮುಕ್ತ ಪ್ರವೇಶ ದೊರೆಯಲಾರಂಭಿಸಿತು. ವ್ಯಾಕರಣವೇ ಇಲ್ಲದ ವಾಕ್ಯಗಳು, ಇಂಗ್ಲಿಷ್ ಮಿಶ್ರಿತ ಕನ್ನಡ, ತೆಲಗು ತಮಿಳು ಸಂಭಾಷಣೆ ಹೀಗೆ ಹೊಸ ಹೊಸ ಪ್ರಯೋಗಗಳ ಮೂಲಕ ಕನ್ನಡ ಪ್ರೇಕ್ಷಕರನ್ನು ಹಿಡಿದಿಡಲು ಮಾಡಿದ ಪ್ರಯತ್ನಗಳು ಕನ್ನಡ ಭಾಷೆಗೆ ಬಹುದೊಡ್ಡ ಆತಂಕವನ್ನು ತಂದೊಡ್ಡಿವೆ.

ಪರಭಾಷೆಗಳ ಪ್ರಾಬಲ್ಯ 


           ಇವತ್ತು ಕನ್ನಡ ಭಾಷೆ ತನ್ನದೇ ನೆಲದಲ್ಲಿ ಅನೇಕ ಭಾಷೆಗಳೊಡನೆ ಸೇಣಿಸಬೇಕಿದೆ. ರಾಜ್ಯದ ರಾಜಧಾನಿ ಅದು ಅನೇಕ ಭಾಷೆಗಳ ಮತ್ತು ಸಂಸ್ಕೃತಿಗಳ ಸಂಗಮ. ಅಲ್ಲಿ ಕನ್ನಡಕ್ಕಿಂತ ತಮಿಳು ಮತ್ತು ಮಲೆಯಾಳಂ ಭಾಷಿಕರ ಸಂಖ್ಯೆಯೇ ಹೆಚ್ಚು. ಸಾಫ್ಟ್ ವೇರ್ ಉದ್ಯಮ ಬೆಂಗಳೂರಿಗೆ ಕಾಲಿಟ್ಟು ಅದು ಸಿಲಿಕಾನ್ ವ್ಯಾಲಿ ಎನ್ನುವ ಮನ್ನಣೆಗೆ ಪಾತ್ರವಾದ ಮೇಲೆ ಇಲ್ಲಿ ಇಂಗ್ಲಿಷ್ ಸಹ ಬಹುಮುಖ್ಯ ಸಂವಹನದ ಭಾಷೆ ಎಂದು ಪರಿಗಣಿಸಲ್ಪಟ್ಟಿದೆ. ಹೀಗಾಗಿ ಬೆಂಗಳೂರಿನಲ್ಲಿ ಕನ್ನಡವನ್ನು ಬರಿಕಣ್ಣಿನಿಂದ ಹುಡುಕಿದರೆ ಅದು ನಮಗೆ ಸಿಗದು. ಇನ್ನು ಗಡಿನಾಡಿನ ಪ್ರದೇಶಗಳಲ್ಲಿ ಮಲೆಯಾಳಂ, ತೆಲುಗು  ತಮಿಳು ಮತ್ತು ಮರಾಠಿ ಭಾಷೆಗಳು ಕನ್ನಡಕ್ಕೆ ತೀವ್ರ ಪೈಪೋಟಿ ಒಡ್ಡುತ್ತಿವೆ. ಬೆಳಗಾವಿಯ ಮನೆಗಳ ಮೇಲೆ ಇವತ್ತಿಗೂ ಮರಾಠಿ ಧ್ವಜ ಹಾರಾಡುವುದನ್ನು ಕಾಣಬಹುದು. ಈ  ಜಿಲ್ಲೆಯ ಅದೆಷ್ಟೋ ಹಳ್ಳಿಗಳು ಭೌತಿಕವಾಗಿ ಕರ್ನಾಟಕದಲ್ಲಿದ್ದರೂ ಮಾನಸಿಕವಾಗಿ ಮಹಾರಾಷ್ಟ್ರದೊಂದಿಗೆ ಗುರುತಿಸಿಕೊಂಡಿವೆ. ಬಳ್ಳಾರಿ, ರಾಯಚೂರು ಮತ್ತು ಕೋಲಾರದ ಜನ ತೆಲುಗು  ಸಿನಿಮಾಗಳನ್ನು ಮುಗಿಬಿದ್ದು ನೋಡುತ್ತಾರೆ. ಹೀಗಾಗಿ ಕನ್ನಡ ಭಾಷೆ ಇವತ್ತು ತನ್ನ ಅಸ್ತಿತ್ವವನ್ನು ಹುಡುಕಿ ಅಲೆಯಬೇಕಾದ ಪ್ರಸಂಗ ಎದುರಾಗಿದೆ.

ರಾಜಕೀಯದ ಸ್ವಹಿತಾಸಕ್ತಿ 


        ಚುನಾವಣೆಯ ಸಂದರ್ಭದಲ್ಲಿ ಸ್ವಜಾತಿ, ಸ್ವಧರ್ಮ ಮತ್ತು ಪ್ರಾದೇಶಿಕತೆಯ ಹಿತಾಸಕ್ತಿಯನ್ನು ತಮ್ಮಲ್ಲಿ ಆವಾಹಿಸಿಕೊಳ್ಳುವ ನಮ್ಮ ಜನಪ್ರತಿನಿಧಿಗಳು ಭಾಷೆ ಮತ್ತು ನಾಡಿನ ವಿಷಯವಾಗಿ ಯಾವತ್ತೂ ನಿರಾಸಕ್ತರು. ಈ ವಿಷಯದಲ್ಲಿ ನಾವು ತೆಲಗು, ತಮಿಳು ಮತ್ತು ಮರಾಠಿಗರಿಗೆ ಅನುಕರಣಿಯರಾಗಿರಬೇಕು. ಎಂದಿಗೂ ಪ್ರಾದೇಶಿಕ ನೆಲೆಯಲ್ಲಿ ಚಿಂತಿಸುವ ನಮ್ಮ ನೆರೆಯ ರಾಜ್ಯಗಳ ರಾಜಕಾರಣಿಗಳು ರಾಜ್ಯದ ಹಿತಾಸಕ್ತಿಗೆ ತೊಂದರೆ ಎದುರಾದಾಗ ತಮ್ಮೆಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗುತ್ತಾರೆ. ಆದರೆ ನಮ್ಮ ರಾಜಕಾರಣಿಗಳಲ್ಲಿನ ಅಂಥದ್ದೊಂದು ಮನೋಭಾವದ ಕೊರತೆಯ ಪರಿಣಾಮ ಇವತ್ತು ರಾಜ್ಯ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚು. ಅದು ಕಾವೇರಿ ನದಿಯ ನೀರಿನ ವಿಷಯವಾಗಿರಬಹುದು ಅಥವಾ ಮಹಾದಾಯಿ ನದಿಗೆ ಸಂಬಂಧಿಸಿದ್ದಾಗಿರಬಹುದು. ಆಲಮಟ್ಟಿ ಅಣೆಕಟ್ಟಿನ ಎತ್ತರ, ಪರಭಾಷಾ ಸಿನಿಮಾಗಳ ಬಿಡುಗಡೆಗೆ ನಿಷೇಧ, ಗಡಿನಾಡಿನಲ್ಲಿ ಕನ್ನಡ ಶಾಲೆಗಳ ಸ್ಥಾಪನೆ ಹೀಗೆ ಅನೇಕ ವಿಷಯಗಳಲ್ಲಿ ರಾಜ್ಯಕ್ಕೆ ಸೋಲಾಗಿದೆ. ಈ ಎಲ್ಲದರ  ಹಿಂದೆ ನಮ್ಮನ್ನಾಳುವ ರಾಜಕಾರಣಿಗಳ ಸ್ವಹಿತಾಸಕ್ತಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ.

ಕೊನೆಯ ಮಾತು 


       ಕನ್ನಡ ಭಾಷೆಯ ಗತವೈಭವವನ್ನು ಮತ್ತೆ ಮರಳಿ ತರುವ ಕೆಲಸ ಇವತ್ತಿನ ತುರ್ತು ಅಗತ್ಯಗಳಲ್ಲೊಂದು. ನಮ್ಮ ಪ್ರಯತ್ನಗಳು ರಾಜ್ಯೋತ್ಸವದ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ಕನ್ನಡ ಪುಸ್ತಕಗಳ ಓದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ, ಉತ್ತಮ ಸಿನಿಮಾಗಳ ನಿರ್ಮಾಣ, ಸಮ್ಮೇಳನಗಳಲ್ಲಿ ಭಾಷೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ, ಸಾಹಿತ್ಯವಲಯದ ಸಹಸ್ಪಂದನ, ಸ್ವಹಿತಾಸಕ್ತಿಯನ್ನು ಮರೆತ ರಾಜಕಾರಣ ಹೀಗೆ ಹತ್ತು ಹಲವು ಪ್ರಯತ್ನಗಳ ಮೂಲಕ ಭಾಷೆಯ ಆತಂಕವನ್ನು ದೂರಮಾಡಬೇಕಾಗಿದೆ. ನೆಲದ ಭಾಷೆಯ ಆತಂಕ ಮತ್ತು ತಲ್ಲಣಗಳು ನಮ್ಮ ವೈಯಕ್ತಿಕ ಆತಂಕಗಳಾಗಬೇಕು.  ಜೊತೆಗೆ ಪ್ರಜ್ಞಾಪೂರ್ವಕವಾಗಿ ಕನ್ನಡವನ್ನು  ಹೃದಯದ ಭಾಷೆಯಾಗಿಸಿಕೊಳ್ಳುವತ್ತ  ಹೆಜ್ಜೆಯನ್ನು ನಾವಿಡಬೇಕಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 





Wednesday, October 14, 2015

ಪೂರ್ಣ ಸತ್ಯ: ಪ್ರಚಲಿತ ವಿದ್ಯಮಾನದ ಹೂರಣ








'ಪೂರ್ಣಸತ್ಯ' ನನ್ನ  ಈ ಪುಸ್ತಕದ ವಿಮರ್ಶೆ ಅಕ್ಟೋಬರ್ ೧೧ ರ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಸೌರಭದಲ್ಲಿ ಪ್ರಕಟವಾಗಿದೆ. ವಿಮರ್ಶಿಸಿದ ಪ್ರೊ. ಬಿ. ಜಿ. ಕುಲಕರ್ಣಿ ಅವರಿಗೆ ಕೃತಜ್ಞತೆಗಳು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Saturday, October 3, 2015

ಪಿ. ಸಾಯಿನಾಥ ನೆನಪಾಗುತ್ತಾರೆ

     




                    ಮೊನ್ನೆ ಮೊನ್ನೆ ತೆಹಲ್ಕಾ ನಿಯತಕಾಲಿಕೆಯ ಪ್ರಧಾನ  ಸಂಪಾದಕ ಲೈಂಗಿಕ ಹಗರಣದಲ್ಲಿ ಸಿಲುಕಿದ ಸುದ್ದಿ ಇಡೀ ದೇಶದಾದ್ಯಂತ ಸಂಚಲನ ಮೂಡಿಸಿತು. ಹೆಸರು ಮಾಡಿ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಪತ್ರಕರ್ತನೋರ್ವನ ಈ ಅಸಹ್ಯದ ಕೆಲಸ ಸಾರ್ವಜನಿಕರು ಇಡೀ ಪತ್ರಿಕಾ ಸಮೂಹವನ್ನೇ ಅನುಮಾನದ ಕಣ್ಣುಗಳಿಂದ ನೋಡುವಂತೆ ಮಾಡಿತು. ಇದಕ್ಕಾಗಿಯೇ ಕಾಯುತ್ತಿದ್ದ ಕೆಲವರು ಆತನ ಸಂಪೂರ್ಣ ತೆಜೋವಧೆಗಾಗಿ ಪ್ರಯತ್ನಿಸಿದರು. ನಿಜಕ್ಕೂ ಪತ್ರಕರ್ತನಾದವನು ಪ್ರತಿ ಘಳಿಗೆ ಎಚ್ಚರದಿಂದ ಮೈಯೆಲ್ಲ ಕಣ್ಣಾಗಿರಬೇಕು. ಸಮಾಜದ ಹುಳುಕುಗಳ ಮೇಲೆ ಬೆಳಕು ಚೆಲ್ಲುವ ಆತನಿಗೆ ಒಂದು ಕಪ್ಪು ಹನಿ ಸಿಡಿದರೂ ಅದು ಆತನನ್ನು ಮುಳುಗಿಸಿ ಬಿಡಬಲ್ಲದು. ಕೆಟ್ಟ ವ್ಯವಸ್ಥೆಯನ್ನು ಜನರೆದುರು ಅನಾವರಣಗೊಳಿಸಲು ಹೋಗುವವನು ತಾನೆ ಕೆಟ್ಟ ವ್ಯವಸ್ಥೆಯ ಭಾಗವಾದಾಗ ಅದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು. ಒಂದು ಕಾಲದಲ್ಲಿ ರಾಜಕಾರಣಿಗಳ ಭ್ರಷ್ಟಾಚಾರವನ್ನು ತೆಹಲ್ಕಾ ಪತ್ರಿಕೆಯು ಹೊರಗೆಳೆದಾಗ ಅದು ತೆಹಲ್ಕಾ ಹಗರಣವೆಂದೇ ಖ್ಯಾತಿ ಪಡೆಯಿತು. ಭ್ರಷ್ಟಾಚಾರದಂಥ ಹಗರಣವನ್ನು ಬಯಲಿಗೆಳೆದ ಪತ್ರಕರ್ತ ಸಹಜವಾಗಿಯೇ ಜನರ ದೃಷ್ಟಿಯಲ್ಲಿ ಆದರ್ಶ ವ್ಯಕ್ತಿಯಾದ. ಪತ್ರಿಕೋದ್ಯಮದ ವಿದ್ಯಾರ್ಥಿಗಳು ತಾವುಗಳೂ ಮುಂದೊಂದು ದಿನ ಅಂಥದ್ದೆ ದಿಟ್ಟ ವ್ಯಕ್ತಿತ್ವದ ಪತ್ರಕರ್ತರಾಗಬೇಕೆಂದು ಕನಸಿಸಿದರು. ಅನೇಕರು ತಮ್ಮ ಆದರ್ಶದ ಪತ್ರಕರ್ತನನ್ನು ಅನುಕರಣೆ ಮಾಡತೊಡಗಿದರು. ಒಟ್ಟಿನಲ್ಲಿ ಅಪರೋಕ್ಷವಾಗಿ ಆತ ಅನೇಕರಿಗೆ ಗುರುವಾದ. ಆದರೆ ಯಾವಾಗ ಆತ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡನೋ ಆಗ ಆತನನ್ನು ಪೂಜಿಸಿದ, ಗೌರವಿಸಿದ, ಅನುಕರಿಸಿದ ಅದೇ ಪತ್ರಿಕಾ ಮಾಧ್ಯಮ ತೆಜೋವಧೆಗಾಗಿ ಅವನ ಬೆನ್ನು ಬಿದ್ದಿತು. ಆತನ ವಿಕ್ಷಿಪ್ತ ವ್ಯಕ್ತಿತ್ವದ ಅನೇಕ ಮುಖಗಳನ್ನು ಪರಿಚಯಿಸಲಾರಂಭಿಸಿತು. ಪತ್ರಕರ್ತರು ಆತನದು ಅಕ್ರಮ ಗಳಿಕೆಯ ಸಂಪತ್ತು ಎಂದು ಲೇಖನಗಳನ್ನು ಬರೆಯತೊಡಗಿದರು. ಹಲವು ವರ್ಷಗಳ ಕಾಲ ಸಾರ್ವಜನಿಕ ವಲಯದಲ್ಲಿ ಮತ್ತು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಆದರ್ಶ ಮತ್ತು ಅನುಕರಣೆಗೆ ಯೋಗ್ಯನಾಗಿದ್ದ ವ್ಯಕ್ತಿ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅದೇ ಜನರ ನಿಂದನೆಗೆ ಮತ್ತು ಆಕ್ರೋಶಕ್ಕೆ ಪಾತ್ರನಾದ. ಪತ್ರಿಕೋದ್ಯಮದಿಂದ ದೊರೆತ ಹಣ ಮತ್ತು ಜನಪ್ರಿಯತೆಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಲು ಆತ ವಿಫಲನಾದದ್ದೆ ಅವನ ಅವನತಿಗೆ ಕಾರಣವಾಯಿತು. ಜೊತೆಗೆ ಪತ್ರಕರ್ತನಾದ ತಾನು ಹೇಗೆ ವರ್ತಿಸಿದರೂ ಅದು ತಪ್ಪಲ್ಲ ಎನ್ನುವ ಧಾರ್ಷ್ಟ್ಯ ಮನೋಭಾವ ಕೂಡ ಆತ ತಪ್ಪುದಾರಿ ತುಳಿಯುವಂತೆ ಮಾಡಿತು. ಹೆಚ್ಚಿನ ಪತ್ರಕರ್ತರು ದಾರಿ ತಪ್ಪುತ್ತಿರುವುದು ಈ ಹಂತದಲ್ಲೇ. ಪತ್ರಕರ್ತನಾದವನು ಸಮಾಜದ ತಪ್ಪುಗಳನ್ನು ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕೇ ವಿನ: ತಾನೇ ತಪ್ಪು ದಾರಿ ತುಳಿಯಬಾರದು. ಹೀಗೆ ಪತ್ರಿಕೋದ್ಯಮ ತಪ್ಪು ದಾರಿ ತುಳಿಯುತ್ತಿರುವ ಈ ಹೊತ್ತು ನಮಗೆ ಸಾಯಿನಾಥ ನೆನಪಾಗುತ್ತಾರೆ.

                   ಪತ್ರಿಕೋದ್ಯಮದಿಂದ ದೊರೆತ ಜನಪ್ರಿಯತೆಯ ಅಮಲಿನಿಂದ ಪತ್ರಕರ್ತರು ತಪ್ಪು ದಾರಿಗಿಳಿಯುತ್ತಿದ್ದರೆ ಇನ್ನು ಕೆಲವರಿಗೆ ಈ ಪತ್ರಿಕೋದ್ಯಮವು ಹಣ ಮಾಡುವ ದಂಧೆಯಾಗಿ ಪರಿಣಮಿಸಿದೆ. ಕೆಲವು ದಿನಗಳ ಹಿಂದೆ ಪರಿಚಯದ ಹುಡುಗನೊಬ್ಬ ಭೇಟಿಯಾಗಿದ್ದ. ಈ ಮೊದಲು ಕೆಲಸವಿಲ್ಲದೇ ಅಲೆದಾಡುತ್ತಿದ್ದ ಆತ ಇವತ್ತು ಪತ್ರಿಕೆಯೊಂದರ ವರದಿಗಾರ. ಕೇವಲ ಹತ್ತನೇ ತರಗತಿಯವರೆಗೆ ಓದಿದ ಮತ್ತು ಪತ್ರಿಕೋದ್ಯಮದ ಅನುಭವವೇ ಇಲ್ಲದ ಆತ ಪತ್ರಿಕಾ ವರದಿಗಾರನಾಗಿ ಕೆಲಸ ಮಾಡುತ್ತಿರುವ ವಿಷಯ ಕೇಳಿ ಅಚ್ಚರಿಯಾಯಿತು. ನಾನು ಅಚ್ಚರಿ ಮತ್ತು ಆಶ್ಚರ್ಯದಲ್ಲಿ ಮುಳುಗಿಹೋದ ಆ ಕ್ಷಣ ಆತ ತನ್ನ ಹೆಸರಿನ ವಿಸಿಟಿಂಗ್ ಕಾರ್ಡ್ ಕೊಟ್ಟು ಏನಾದರೂ ಸಮಸ್ಯೆಯಿದ್ದರೆ ಸಂಪರ್ಕಿಸಿ ಎಂದು ಹೇಳಿ ಮರೆಯಾದ. ಆನಂತರ ಗೊತ್ತಾಯಿತು ಪತ್ರಕರ್ತನೆನ್ನುವುದು ಅವನಿಗೆ ಹಣ ಗಳಿಸುವ ಕೆಲಸವಾಗಿತ್ತು. ಸ್ಥಳೀಯ ರಾಜಕಾರಣಿಗಳನ್ನು, ಸರ್ಕಾರಿ ಅಧಿಕಾರಿಗಳನ್ನು ಮತ್ತು ಅಕ್ರಮ ದಂಧೆಯ ವ್ಯಾಪಾರಿಗಳನ್ನು ಆತ ವರದಿಗಾರನ ಹೆಸರಿನಲ್ಲಿ ಹೆದರಿಸಿ ಅವರಿಂದ ಪ್ರತಿ ತಿಂಗಳು ಇಂತಿಷ್ಟು ಹಣವನ್ನು ವಸೂಲಿ ಮಾಡುತ್ತಿದ್ದ. ಒಂದು ಸಂದರ್ಭ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ಸಹಾಯಕ ಪುಸ್ತಕಗಳನ್ನು ಜೋಡಿಸಿಡುತ್ತಿರುವ ಹೊತ್ತು ಖಾಲಿ ಕುರ್ಚಿಯ ಫೋಟೋ ಕ್ಲಿಕ್ಕಿಸಿ ಅವನ ಹುದ್ದೆಗೇ ಸಂಚಕಾರ ತಂದಿದ್ದ. ಅಂದಿನಿಂದ ಸರ್ಕಾರಿ ನೌಕರರು ಮತ್ತು ರಾಜಕಾರಣಿಗಳು ಈ ಪತ್ರಕರ್ತನನ್ನು ಕಂಡರೆ ಹೆದರತೊಡಗಿದರು. ಅವರೊಳಗಿನ ಭಯವನ್ನೇ ಬಂಡವಾಳವಾಗಿಸಿಕೊಂಡು ಈತ ಒಂದಿಷ್ಟು ಹಣ ಗಳಿಸಿ ತಕ್ಕ ಮಟ್ಟಿಗೆ ಆಸ್ತಿಯನ್ನೂ ಮಾಡಿಕೊಂಡಿದ್ದ.

                ಇನ್ನೂ ಅಚ್ಚರಿಯ ಸಂಗತಿ ಎಂದರೆ ಈ ಜಿಲ್ಲಾ ಮತ್ತು ತಾಲೂಕು ಪ್ರದೇಶಗಳಲ್ಲಿ ಹಣ ಗಳಿಕೆಗಾಗಿಯೇ ಪತ್ರಿಕೆಗಳನ್ನು ಪ್ರಕಟಿಸುವ ಪತ್ರಕರ್ತರಿರುವರು. ಒಮ್ಮೆ ಇವರು ಪತ್ರಿಕೆಯ ಪ್ರಥಮ ಸಂಚಿಕೆಯೊಂದನ್ನು ಪ್ರಕಟಿಸಿ ನೊಂದಣಿ ಮಾಡಿಸಿದರೆಂದರೆ ಮತ್ತೆಂದೂ ಪತ್ರಿಕೆಯನ್ನು ಪ್ರಕಟಿಸುವ ಗೊಡವೆಗೆ ಹೋಗುವುದಿಲ್ಲ. ಆದರೆ ತಮ್ಮ ಪ್ರಥಮ ಸಂಚಿಕೆಯನ್ನೇ ಬಗಲಲ್ಲಿಟ್ಟುಕೊಂಡು ತಾವು ಪತ್ರಕರ್ತರೆಂಬ ಫೋಜು ನೀಡುತ್ತಾರೆ. ಅದನ್ನೇ ಈ ಭ್ರಷ್ಟ ರಾಜಕಾರಣಿಗಳಿಗೆ ಮತ್ತು ಅಧಿಕಾರಿಗಳಿಗೆ ತೋರಿಸಿ ಹಣ ವಸೂಲಿಗಿಳಿಯುತ್ತಾರೆ. ಪತ್ರಕರ್ತರ ಇನ್ನೊಂದು ವರ್ಗವಿದೆ ಅವರು ಪತ್ರಿಕೆಗಳನ್ನು ಪ್ರಕಟಿಸುವುದು ಜಾಹಿರಾತುಗಳಿಂದ ಬರುವ ಹಣಕ್ಕಾಗಿ. ಅಂಥ ಪತ್ರಿಕೆಗಳ ಬಹುಪಾಲು ಜಾಗವನ್ನು ಜಾಹಿರಾತುಗಳೇ ಆಕ್ರಮಿಸಿಕೊಂಡಿರುತ್ತವೆ. ಪತ್ರಿಕೆಯೊಂದು ಹಣ ಗಳಿಸುವ ಉದ್ಯಮ ಎನ್ನುವ ಕಾರಣದಿಂದಾಗಿ ಇವತ್ತು ಜಿಲ್ಲಾ ಮತ್ತು ತಾಲೂಕು ಪ್ರದೇಶಗಳಲ್ಲೇ ನೂರಾರು ಪತ್ರಿಕೆಗಳು ಪ್ರಕಟವಾಗುತ್ತಿವೆ. ಹೀಗೆ ಪ್ರಕಟವಾಗುತ್ತಿರುವ ಪತ್ರಿಕೆಗಳಿಗಾಗಲಿ ಮತ್ತು ಅವುಗಳನ್ನು ಪ್ರಕಟಿಸುತ್ತಿರುವ ಪತ್ರಕರ್ತರಿಗಾಗಲಿ ಸಮಾಜದ ಕುರಿತಾದ ಕನಿಷ್ಠ ಕಾಳಜಿಯಾಗಲಿ ಇಲ್ಲವೇ ಸಾಮಾಜಿಕ ಬದ್ಧತೆಯಾಗಲಿ ಇಲ್ಲ. ಅವರೇನಿದ್ದರೂ ಪತ್ರಕರ್ತರ ವೇಷದಲ್ಲಿರುವ ಭ್ರಷ್ಟರು. ಇಂಥ ಭ್ರಷ್ಟರು ಪತ್ರಿಕೋದ್ಯಮವನ್ನು ತಪ್ಪು ದಾರಿಗೆಳೆಯುತ್ತಿರುವ ಈ ಹೊತ್ತಿನಲ್ಲೇ ನಮಗೆ ಸಾಯಿನಾಥ ನೆನಪಾಗುತ್ತಾರೆ.

                   ಮೂವತ್ತು ವರ್ಷಗಳ ಹಿಂದೆ ಗುಲಬರ್ಗಾದಂಥ ಸಣ್ಣ ಊರಿನಲ್ಲಿ (ಈಗ ಅದು ದೊಡ್ಡ ಊರಾಗಿ ಬೆಳೆದಿದೆ) ಸ್ಥಳೀಯ ಪತ್ರಿಕೆಯ ಸಂಪಾದಕನ ಕೊಲೆಯಾಯಿತು. ಅದು ರಾತ್ರಿ ಒಂಬತ್ತರ ವೇಳೆಗೆ ಮುಖ್ಯ ರಸ್ತೆಯ ಮೇಲೆ ಕೊಲೆಯಾದಾಗ ಅನೇಕರಿಗೆ ಪತ್ರಿಕೆಯ ಕೆಲಸ ಅದು ಎಷ್ಟೊಂದು ಅಪಾಯಕಾರಿ ಎಂದೆನಿಸಿತು. ಜೊತೆಗೆ ಅಪಾಯ ಎದುರಾಗದೆ ಇದ್ದಲ್ಲಿ ಪತ್ರಿಕೋದ್ಯಮದ ಕೆಲಸ  ತೀರ ಸಪ್ಪೆಯಾಗುತ್ತದೆ ಎನ್ನುವುದು ಕೆಲವರ ಅಭಿಮತವಾಗಿತ್ತು. ಈ ಎಲೆಕ್ಟ್ರಾನಿಕ್ ಮಾಧ್ಯಮ ಇನ್ನು ಕಣ್ಣು ತೆರೆಯದಿದ್ದ ಆ ದಿನಗಳಲ್ಲಿ ಪತ್ರಿಕೆಗಳು ಸಮಾಜವನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದವು. ಪತ್ರಕರ್ತರು ಪ್ರಾಮಾಣಿಕರಾಗಿದ್ದರು. ತಮ್ಮ ದಿಟ್ಟ ವರದಿಗಳಿಂದ ಭ್ರಷ್ಟರನ್ನು ಎದುರು ಹಾಕಿಕೊಂಡು ಪ್ರಾಣಕೊಟ್ಟ ಪತ್ರಕರ್ತರ ಸಂಖ್ಯೆಗೇನೂ ಕೊರತೆ ಇರಲಿಲ್ಲ. ಆದರೆ ಕಾಲಾನಂತರದಲ್ಲಿ ಭ್ರಷ್ಟತೆಯ ಪ್ರಮಾಣ ಹೆಚ್ಚಿದಂತೆ ಪತ್ರಕರ್ತರೂ ಕೂಡ ಭ್ರಷ್ಟತೆಯ ಭಾಗವಾಗತೊಡಗಿದರು. ಅವರಿಗೆ ಪತ್ರಿಕೋದ್ಯಮವು ಹಣ ಮಾಡುವ ಸುಲಭ ಮತ್ತು ಸರಳ ಮಾರ್ಗೋಪಾಯ ಎಂದೆನಿಸತೊಡಗಿತು. ಈ ಬದಲಾವಣೆಯಿಂದಾಗಿ ಒಂದು ಸಮಯದಲ್ಲಿ ಭ್ರಷ್ಟರನ್ನು ವಿರೋಧಿಸುತ್ತಿದ್ದವರು ಕಾಲಕ್ರಮೇಣ ಭ್ರಷ್ಟರನ್ನೇ ಓಲೈಸಲು ಮುಂದಾದರು. ಈ ಬದಲಾವಣೆಗೆ ಪೂರಕವಾಗಿ ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ತಾವು ಬೆಳೆಯಲು ಮತ್ತು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪತ್ರಕರ್ತರ ಓಲೈಕೆಗೆ ತೊಡಗಿದರು. ಒಟ್ಟಿನಲ್ಲಿ ಪತ್ರಕರ್ತರು ಮತ್ತು ಭ್ರಷ್ಟರ ನಡುವೆ ಕೊಡು ಕೊಳ್ಳುವಿಕೆಯ ಸಂಪ್ರದಾಯ ಕಾಣಿಸಿಕೊಂಡಿತು. ಅನೇಕ ಪತ್ರಕರ್ತರು ಪತ್ರಿಕೆಯ ಹೆಸರಿನಲ್ಲಿ ಗಳಿಸಿದ ಹಣವನ್ನೇ ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿ ಆರ್ಥಿಕವಾಗಿ ಸ್ಥಿತಿವಂತರಾದರು. ಈ ಎಲೆಕ್ಟ್ರಾನಿಕ್ ಮಾಧ್ಯಮ ಕಣ್ಣು ತೆರೆದ ಮೇಲಂತೂ ಹಿಡನ್ ಕ್ಯಾಮೆರಾವನ್ನು ಕಿಸೆಯಲ್ಲಿಟ್ಟು ಕೊಂಡು ಸಮಾಜದಲ್ಲಿನ ಭ್ರಷ್ಟರ ಜೊತೆಗೆ ಗೌರವಸ್ಥರನ್ನೂ ಬ್ಲಾಕ್ ಮೇಲ್ ಮಾಡಿ ಹಣ ಗಳಿಸುವ ಹೊಸ ಪೀಳಿಗೆಯ ಪತ್ರಕರ್ತರ ಪರಂಪರೆಯೇ ಜನ್ಮ ತಳೆಯಿತು. ಪಂಚತಾರಾ ಹೊಟೇಲ್ ಗಳಲ್ಲಿ ವಾಸ, ವರ್ಷಕ್ಕೆ ಒಂದೆರಡು ವಿದೇಶ ಪ್ರಯಾಣ, ಓಡಾಡಲು ಐಶಾರಾಮಿ ಕಾರು ಒಟ್ಟಿನಲ್ಲಿ ಇವತ್ತಿನ ಪತ್ರಕರ್ತರ ಬದುಕಿನ ಶೈಲಿ ಬದಲಾಗಿದೆ. ಹೀಗೆ ನಮ್ಮ ಪತ್ರಕರ್ತರು ಐಶಾರಾಮಿ ಬದುಕನ್ನು ಹುಡುಕಿಕೊಂಡು ಹೋಗುತ್ತಿರುವ ಈ ಘಳಿಗೆ ತಮ್ಮ ಬದುಕಿನ ಬಹುಸಮಯವನ್ನು ಹಳ್ಳಿಗಳಲ್ಲೇ ಕಳೆಯುತ್ತಿರುವ ಭಾರತದ ಪತ್ರಿಕೋದ್ಯಮಕ್ಕೊಂದು ಹೊಸ ಅರ್ಥ ತಂದುಕೊಟ್ಟ ಸಾಯಿನಾಥ ನೆನಪಾಗುತ್ತಾರೆ.

ಪಿ.ಸಾಯಿನಾಥ


                   ಈ ಮೇಲೆ ಹೇಳಿದ ಉದಾಹರಣೆಗಳಿಗೆ ಅಪವಾದ ಎನ್ನುವಂತೆ  ಅನೇಕ ಪತ್ರಕರ್ತರು ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವರು. ಅಂಥ ಹೆಸರುಗಳಲ್ಲಿ ತಟ್ಟನೆ ನೆನಪಿಗೆ ಬರುವ ಹೆಸರು ಅದು ಪಿ. ಸಾಯಿನಾಥ ಅವರದು. ಪತ್ರಿಕೆ ಕೆಲಸಕ್ಕಾಗಿ ಮ್ಯಾಗ್ಸಸೆ ಪ್ರಶಸ್ತಿ ಪಡೆದ ಪತ್ರಕರ್ತರಿವರು. ಬರಗಾಲ ಮತ್ತು ರೈತರ ಬವಣೆಗಳನ್ನು ಕುರಿತು ಅಧ್ಯಯನ ಮಾಡುವ ಆಸಕ್ತಿ ಅವರದು. ೧೯೯೩ ರಲ್ಲಿ ಟೈಮ್ಸ್ ಆಫ್ ಇಂಡಿಯಾ ಫೆಲೋಶಿಪ್ ನೊಂದಿಗೆ ತಮ್ಮ ಅಧ್ಯಯನವನ್ನಾರಂಭಿಸಿದ ಸಾಯಿನಾಥ ೧೮ ತಿಂಗಳುಗಳ  ಅವಧಿಯಲ್ಲಿ ಒಂದು ಲಕ್ಷ ಕಿಲೋ ಮೀಟರ್ ಸಂಚರಿಸಿರುವರು. ಅದರಲ್ಲಿ ಸುಮಾರು ಐದು ಸಾವಿರ ಕಿಲೋ ಮೀಟರ್ ಗಳಷ್ಟು ದಾರಿಯನ್ನು ನಡೆದುಕೊಂಡೇ ಸಂಚರಿಸಿದರು. ತಮ್ಮ ಅಧ್ಯಯನಕ್ಕಾಗಿ ಭಾರತದ ಐದು ರಾಜ್ಯಗಳಲ್ಲಿನ ಹತ್ತು ಜಿಲ್ಲೆಗಳನ್ನು ಆಯ್ದುಕೊಂಡ ಅವರು ಈ ಅವಧಿಯಲ್ಲಿ ಒಟ್ಟು ೮೪ ವರದಿಗಳನ್ನು ಪ್ರಕಟಿಸಿದರು. ಅವರ ಪ್ರತಿಯೊಂದು ವರದಿ ರೈತರ ಸಮಸ್ಯೆಗಳನ್ನು ಮತ್ತು ಅವರು ಅನುಭವಿಸುತ್ತಿರುವ ಬದುಕಿನ ದಾರುಣತೆಯನ್ನು ಕಟ್ಟಿಕೊಡುತ್ತದೆ. ಈ ೮೪ ವರದಿಗಳನ್ನೇ ಆಧರಿಸಿ ಸಾಯಿನಾಥ 'ಎವರಿ ಬಡಿ ಲವ್ಸ್ ಎ ಗುಡ್ ಡ್ರಾಟ್' ಎನ್ನುವ ಪುಸ್ತಕ ಪ್ರಕಟಿಸಿರುವರು. ಈ ಪುಸ್ತಕಕ್ಕೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸೇರಿ ೧೮ ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ಭಾರತದ ಪತ್ರಿಕೋದ್ಯಮದಲ್ಲಿ ಬರಗಾಲ ಮತ್ತು ರೈತರ ಸಮಸ್ಯೆಗಳನ್ನು ಸಾಯಿನಾಥರಷ್ಟು ಆಳವಾಗಿ ಅಧ್ಯಯನ ಮಾಡಿದ ಪತ್ರಕರ್ತ ಬೇರೊಬ್ಬರಿಲ್ಲ.  ಪತ್ರಕರ್ತರೆಲ್ಲ ರಾಜಕೀಯ, ಕ್ರೀಡೆ, ಭ್ರಷ್ಟಾಚಾರ, ಸಿನಿಮಾ ಅಪರಾಧ ಪ್ರಕರಣ ಇತ್ಯಾದಿ ರೋಚಕ ಸುದ್ದಿಗಳ ಸುತ್ತ ಗಿರಕಿ ಹೊಡೆಯುತ್ತಿರುವಾಗ ಸಾಯಿನಾಥ ಹಳ್ಳಿಗಳತ್ತ ಮುಖ ಮಾಡುತ್ತಾರೆ. ರೈತರ ಸಮಸ್ಯೆಗಳನ್ನು ತಮ್ಮ ಲೇಖನಗಳ ಮೂಲಕ ಒಂದೊಂದಾಗಿ ಸರ್ಕಾರದ ಮುಂದಿಡುತ್ತಾರೆ. ಆಂಧ್ರ ಪ್ರದೇಶ, ರಾಜಸ್ಥಾನ, ಒರಿಸ್ಸಾ ರಾಜ್ಯಗಳಲ್ಲಿನ ರೈತರ ಆತ್ಮಹತ್ಯೆಯ ಮಾಹಿತಿಯನ್ನು ಸ್ಪಷ್ಟ ಅಂಕಿ ಸಂಖ್ಯೆಗಳೊಂದಿಗೆ ಪ್ರಕಟಿಸಿದ ಸಾಯಿನಾಥ ಸರ್ಕಾರಕ್ಕೆ ರೈತರ ಸಮಸ್ಯೆಗಳನ್ನು ಮನಗಾಣಿಸಿ ಕೊಟ್ಟಿರುವರು. ವರ್ಷದಲ್ಲಿ ೨೭೦ ರಿಂದ ೩೦೦ ದಿನಗಳನ್ನು ಹಳ್ಳಿಗಳಲ್ಲಿ ಕಳೆಯುವ ಅವರು ರೈತರ ಸಮಸ್ಯೆಗಳಿಗೆ ಧ್ವನಿಯಾಗಿರುವರು. ಪತ್ರಿಕೆಗಳಿಂದ ಹಣಕಾಸಿನ ನೆರವು ದೊರೆಯದಿದ್ದಾಗ ತಮ್ಮ ಉಳಿತಾಯದ ಹಣ, ಪ್ರಾವಿಡೆಂಟ್ ಫಂಡ್, ಪ್ರಶಸ್ತಿಗಳಿಂದ ದೊರೆತ ಹಣವನ್ನೆಲ್ಲ ಅಧ್ಯಯನಕ್ಕಾಗಿ ಖರ್ಚು ಮಾಡುವರು. ಬರವಣಿಗೆ ಅವರಿಗೆ ಹಣ ಮಾಡುವ ದಂಧೆ ಅಲ್ಲ. ಈ ವೃತ್ತಿ ರೈತರ, ಬಡವರ, ಅಸಾಹಾಯಕರ ಧ್ವನಿಯಾಗಬೇಕೆನ್ನುವುದು ಸಾಯಿನಾಥರ ಪ್ರಬಲ ಇಚ್ಛೆಯಾಗಿದೆ.

ಸಾಯಿನಾಥ ಬರೆಯುತ್ತಾರೆ 


               ಭಾರತದ ಗ್ರಾಮೀಣ ಬದುಕನ್ನು ಆಳವಾಗಿ ಕೆದಕಿ ನೋಡಿದ ಪತ್ರಕರ್ತರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಹೆಸರು ಪಿ. ಸಾಯಿನಾಥ ಅವರದು. ಗ್ರಾಮೀಣ ಬದುಕಿನ ಅದರಲ್ಲೂ ರೈತರ ಸಮಸ್ಯೆಗಳ ಹಸಿಹಸಿ ಚಿತ್ರಣವನ್ನು ತಮ್ಮ ವರದಿಗಳ ಮೂಲಕ ತೋರಿಸಿಕೊಟ್ಟ ಅನನ್ಯ ಪತ್ರಕರ್ತ. ಸಾಯಿನಾಥ ರೈತರ ಆತ್ಮಹತ್ಯೆ, ಬತ್ತುತ್ತಿರುವ ಬಾವಿಗಳು, ನೀರಿನ ಖಾಸಗೀಕರಣ, ಭೂಕಬಳಿಕೆ, ಸಾಲದ ಗಂಡಾಂತರ, ಕಳಪೆ ಬೀಜದ ಸಮಸ್ಯೆಗಳು, ಕುಸಿಯುತ್ತಿರುವ ಕೃಷಿ ಆದಾಯ ಹೀಗೆ ರೈತರ ಬದುಕಿನ ಅನೇಕ ಸಂಕಟಗಳನ್ನು ತಮ್ಮ ಬರಹದ ಮೂಲಕ ಅನಾವರಣಗೊಳಿಸಿರುವರು. ಅವರ ಬರಹದಲ್ಲಿ ಆಡಂಬರವಾಗಲಿ ಇಲ್ಲವೇ ಅತಿಶಯೋಕ್ತಿಯಾಗಲಿ ಇರುವುದಿಲ್ಲ. ರೈತರ ಸಮಸ್ಯೆಗಳನ್ನು ಅತ್ಯಂತ ಸರಳ ಪದಗಳು ಮತ್ತು ವಾಕ್ಯಗಳ ಮೂಲಕ ಹೇಳುವ ಸಾಯಿನಾಥರಿಗೆ ಮಣ್ಣಿನ ಮಕ್ಕಳ ಕುರಿತು ಪ್ರಾಮಾಣಿಕ ಕಾಳಜಿ ಇದೆ. ಅದಕ್ಕೆಂದೇ ವರ್ಷದ ೧೨ ತಿಂಗಳಲ್ಲಿ ಹೆಚ್ಚಿನ ಸಮಯವನ್ನು ಅವರು ಹಳ್ಳಿಗಳಲ್ಲೇ ಕಳೆಯುತ್ತಾರೆ. ಬಸ್, ಲಾರಿ, ಜೀಪು, ಸೈಕಲ್ ಇದಾವುದೂ ಇಲ್ಲದಿದ್ದರೆ ನಡೆದುಕೊಂಡೇ ಹಳ್ಳಿಗಳನ್ನು ಸಂಚರಿಸುತ್ತಾರೆ. ರೈತರನ್ನು ನೇರವಾಗಿ ಭೇಟಿಮಾಡಿ ಅವರೊಂದಿಗೆ ಮಾತಿಗಿಳಿಯುತ್ತಾರೆ. ರೈತರ ಹೊಲಗಳಿಗೆ ಹೋಗಿ ಪರೀಕ್ಷಿಸುತ್ತಾರೆ. ಸಮಸ್ಯೆಯ ಮೂಲ ಎಲ್ಲಿದೆ ಎಂದು ಹುಡುಕುತ್ತಾರೆ. ಪತ್ರಕರ್ತರೆಂದರೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಹಳ್ಳಿಗಳಿಗೆ ಭೇಟಿ ನೀಡುವರು ಎನ್ನುವ ಅಪವಾದವನ್ನು ಪಿ. ಸಾಯಿನಾಥ ತಮ್ಮ ಹಳ್ಳಿಗಳ ಸುತ್ತಾಟ ಮತ್ತು ಅಧ್ಯಯನದಿಂದ ಸುಳ್ಳಾಗಿಸಿರುವರು. ಪ್ರಾದೇಶಿಕ ಭಾಷೆಯ ಪತ್ರಕರ್ತರೇ ಹಳ್ಳಿಗಳಿಗೆ ಹೋಗಲು ಹಿಂದೇಟು ಹಾಕುತ್ತಿರುವಾಗ ಇಂಗ್ಲಿಷ್ ಪತ್ರಕರ್ತರೋರ್ವರು ಹೀಗೆ ಹಳ್ಳಿಹಳ್ಳಿಗಳನ್ನು ಸುತ್ತುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿಗಳಲ್ಲೊಂದು. ಹೆಚ್ಚಿನ ಪತ್ರಕರ್ತರೆಲ್ಲ ರಾಜಕೀಯ, ಸಿನಿಮಾ, ಕ್ರೀಡೆ, ಕ್ರೈಮ್ ಈ ರೋಚಕ ಮತ್ತು ವರ್ಣರಂಜಿತ ಸುದ್ದಿಗಳ ಸುತ್ತ ಸುತ್ತುತ್ತಿರುವಾಗ ಪಿ. ಸಾಯಿನಾಥ ಆ ಎಲ್ಲ ರೋಚಕ ಸುದ್ದಿಗಳಿಗೆ ಬೆನ್ನುಮಾಡಿ ಹಳ್ಳಿಗಳತ್ತ ಮುಖಮಾಡುತ್ತಾರೆ. ೧೯೯೭-೨೦೦೫ ರ ಈ ೯ ವರ್ಷಗಳ ಅವಧಿಯಲ್ಲಿ ಭಾರತದಲ್ಲಿ ಒಂದೂವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡ ಅಧಿಕೃತ ಅಂಕಿಅಂಶಗಳನ್ನು ತಮ್ಮ ವರದಿಯ ಮೂಲಕ ಸರ್ಕಾರದೆದುರು ಇಟ್ಟು ಅದಕ್ಕೆ ಕಾರಣ ಕೇಳುತ್ತಾರೆ. ಈ ಅವಧಿಯಲ್ಲಿ ಭಾರತದಲ್ಲಿ ಪ್ರತಿ ಅರ್ಧಗಂಟೆಗೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿರುವನೆಂಬ ಸಾಯಿನಾಥರ ವರದಿ ನಮ್ಮನ್ನು ಬೆಚ್ಚಿ ಬಿಳಿಸುತ್ತದೆ. ಇಂಡಿಯನ್ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಗಳ ಮನೋರಂಜನಾ ತೆರಿಗೆಯ ಕೋಟ್ಯಾಂತರ ರೂಪಾಯಿಗಳನ್ನು ಮನ್ನಾ ಮಾಡುವ ಸರ್ಕಾರ ರೈತರ ಸಾಲ ಮನ್ನಾ ಮಾಡದೆ ವಂಚಿಸುತ್ತಿದೆ ಏಕೆ ಎಂದು ಪ್ರಶ್ನಿಸುತ್ತಾರೆ.

                  ದೇಶದ ಜಲ ಸಂಪನ್ಮೂಲ ಅದು ಹೇಗೆ ದುರ್ಬಳಕೆಯಾಗುತ್ತಿದೆ ಎನ್ನುವುದರ ಮೇಲೂ ಸಾಯಿನಾಥರ ವರದಿಗಳು ಬೆಳಕು ಚೆಲ್ಲುತ್ತವೆ. ಮುಂಬೈನ ಕೊಳೆಗೇರಿಗಳು ಮತ್ತು ಚಾಲ್ ಗಳಲ್ಲಿ ವಾಸಿಸುವ ಅಸಂಖ್ಯಾತ ಮಹಿಳೆಯರು ಕೇವಲ ೨೦ ಲೀಟರ್ ನೀರಿಗಾಗಿ ಗಂಟೆಗಟ್ಟಲೇ ಸರತಿಯಲ್ಲಿ ಕಾಯುತ್ತಿರುವ ಇದೇ ಸಮಯದಲ್ಲಿ ಮುಂಬೈ ಸುತ್ತಮುತ್ತಲಿನ ಖಾಸಗಿ ಮನೋರಂಜನಾ ಪಾರ್ಕ್ ಗಳು ಪ್ರತಿನಿತ್ಯ ೫೦ ಶತಕೋಟಿ ನೀರನ್ನು ಬಳಸುತ್ತಿವೆ ಎಂದು ಬರೆದು ಸರ್ಕಾರದ ಕಣ್ಣು ತೆರೆಸುತ್ತಾರೆ. ಹತ್ತು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರನ್ನು ಪೂರೈಸುತ್ತಿರುವ ಅನೇಕ ಹಳ್ಳಿಗಳ ಪಕ್ಕದಲ್ಲೇ ದಿನಕ್ಕೆ ಹತ್ತಾರು ಲಕ್ಷ ಲೀಟರ್ ನೀರನ್ನು ವ್ಯರ್ಥಗೊಳಿಸುತ್ತಿರುವ ಫನ್ ಅಂಡ್ ಫುಡ್ ವಿಲೇಜ್ ಗಳಿವೆ ಎನ್ನುವ ವಿಪರ್ಯಾಸವನ್ನು ಸಾಯಿನಾಥ ಸಾರ್ವಜನಿಕರ ಗಮನಕ್ಕೆ ತರುತ್ತಾರೆ.

               ಇನ್ನೊಂದೆಡೆ ರೈತರ ಊಟ ಖೈದಿಗಳಿಗಿಂತಲೂ ಕಳಪೆಯಾಗಿದೆ ಎಂದು ಬರೆಯುವ ಸಾಯಿನಾಥ ಸರ್ಕಾರದ ವೈಫಲ್ಯವನ್ನು ಬಿಚ್ಚಿಡುತ್ತಾರೆ. ಮಂಡ್ಯ ಜಿಲ್ಲೆಯ ಹುಲುಗನ ಹಳ್ಳಿಯ ಜಯಲಕ್ಷ್ಮಮ್ಮ ಒಬ್ಬ ರೈತ ವಿಧವೆ. ರೈತನಾಗಿದ್ದ ಆಕೆಯ ಗಂಡ ೨೦೦೩ ರಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ಆಕೆಗೆ ಪ್ರತಿತಿಂಗಳು ೪ ಕೆ ಜಿ ಅಕ್ಕಿ ಸಬ್ಸಿಡಿ ದರದಲ್ಲಿ ಸರ್ಕಾರದಿಂದ ಸಿಗುತ್ತಿದೆ. ಆಕೆ ಪ್ರತಿನಿತ್ಯ ಮೂರು ಹೊತ್ತು ಊಟ ಮಾಡುತ್ತಾಳೆಂದರೆ ಪ್ರತಿಹೊತ್ತಿನ ಆಹಾರ ಕೇವಲ ೪೫ ಗ್ರಾಂ ಅನ್ನ ಮಾತ್ರ. ಅದೇ ಶಿಕ್ಷೆಗೆ ಒಳಗಾಗಿರುವ ಒಬ್ಬ ಖೈದಿಯು ಒಂದು ಹೊತ್ತಿನ ಊಟದಲ್ಲಿ ೭೧೦ ಗ್ರಾಂ ಅನ್ನ ಪಡೆಯುತ್ತಾನೆ. ಅಂದರೆ ರೈತರ ಊಟ ಖೈದಿಗಳ ಊಟಕ್ಕಿಂತಲೂ ಕಳಪೆಯಾಗಿದೆ ಎನ್ನುವ ಸತ್ಯ  ಓದುಗರ ಮನಸ್ಸನ್ನು ಕಲಕುತ್ತದೆ. ಆತ್ಮಹತ್ಯೆಗೆ ಯತ್ನಿಸಿದ ರೈತನೋರ್ವನನ್ನು ಗೆಳೆಯರು ಸಕಾಲದಲ್ಲಿ ಆಸ್ಪತ್ರೆಗೆ ಸೇರಿಸಿ ಅವನ ಜೀವ ಉಳಿಸುತ್ತಾರೆ. ಬದುಕುಳಿದ ರೈತ ನೆರವಾದ ಗೆಳೆಯರನ್ನೇ ಬಯ್ಯುತ್ತಾನೆ. ಕಾರಣವಿಷ್ಟೇ ಒಂದೂವರೆ ;ಲಕ್ಷ ಸಾಲ ತೀರಿಸಲು ಆಗುವುದಿಲ್ಲವೆಂದು ಆತ  ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈಗ ಬದುಕುಳಿಯಲು ೪೫,೦೦೦ ರೂಪಾಯಿ ಆಸ್ಪತ್ರೆಗೆ ಖರ್ಚಾಗಿತ್ತು. ಇನ್ನೂ ಹೆಚ್ಚು ಸಾಲ ತೀರಿಸಬೇಕಲ್ಲ ಎನ್ನುವ ಆತಂಕ ಅವನದು. ಇದು ಅನಂತಪುರ ಜಿಲ್ಲೆಯ ನಲ್ಲಮಡ ಗ್ರಾಮದ ರೈತ ಕುಟುಂಬದ ಕಥೆ ಎಂದು ಸಾಯಿನಾಥ ಹೇಳುತ್ತಾರೆ.

               ಕೃಷಿ ಪರಿಸ್ಥಿತಿ ಹದಗೆಟ್ಟಾಗ ರೈತರು ಮಾತ್ರವಲ್ಲ ಎಲ್ಲರ ಪರಿಸ್ಥಿತಿಯೂ ಬಿಗಡಾಯಿಸುತ್ತದೆ ಎನ್ನುತ್ತಾರೆ ಸಾಯಿನಾಥ. ಅದಕ್ಕೆ ನಲಗೊಂಡದ ಬಡಗಿ ರಾಮಾಚಾರಿಯ ಉದಾಹರಣೆ ನೀಡುತ್ತಾರೆ. ರಾಮಾಚಾರಿ ರೈತನಲ್ಲ ಆದರೆ ಅವನ ಬದುಕು ನಲಗೊಂಡದ ಹಳ್ಳಿಯಲ್ಲಿ ಕೃಷಿ ಹೇಗಿದೆ ಎನ್ನುವುದರ ಮೇಲೆ ನಿಂತಿತ್ತು. ಕಳೆದ ಮೂರು ವರ್ಷಗಳಲ್ಲಿ ನೇಗಿಲನ್ನಾಗಲಿ, ಕೊಡಲಿಯ ಅಥವಾ ಪಿಕಾಸಿಯ ಹಿಡಿಯನ್ನಾಗಲಿ ಮಾಡಿಸಲು ಯಾರೂ ಬರಲಿಲ್ಲ. ಪರಿಣಾಮವಾಗಿ ರಾಮಾಚಾರಿ ಕೆಲಸವಿಲ್ಲದೆ ತೊಂದರೆಗೆ ಸಿಲುಕಿದ. ತೊಂದರೆ ಹೆಚ್ಚಾಗಿ ಅವನು ಒಂದು ದಿನ ಹಸಿವಿನಿಂದ ಸತ್ತು ಹೋದ. ಅನೇಕ ತಲೆಮಾರುಗಳಿಂದ ಕೃಷಿಯೊಂದಿಗೆ ಬೆಸೆದುಕೊಂಡ ವೃತ್ತಿಗಳೆಲ್ಲ ಈಗ ತೀವ್ರ ಸಂಕಷ್ಟಕ್ಕೆ ಒಳಗಾಗಿವೆ ಎನ್ನುವ ಸಂಗತಿ ಆತಂಕವನ್ನುಂಟು ಮಾಡುತ್ತದೆ.

              ಹೀಗೆ ಸಾಯಿನಾಥರ ವರದಿಗಳನ್ನು ಓದುತ್ತ ಹೋದಂತೆ ಅವರೊಳಗಿನ ಪ್ರಾಮಾಣಿಕ ಮತ್ತು ರೈತಪರ ಕಾಳಜಿಯಿರುವ ಲೇಖಕ ನಮ್ಮೆದುರು ನಿಲ್ಲುತ್ತಾನೆ. ನಿಜಕ್ಕೂ ರೈತರ ಸಮಸ್ಯೆಗಳಿಗೆ ಮುಖಾಮುಖಿಯಾಗಿ ನಿಲ್ಲುವ ಪತ್ರಕರ್ತನ ಅವಶ್ಯಕತೆಯಿತ್ತು. ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಆ ಮೂಲಕ ಸರ್ಕಾರವೊಂದನ್ನು ಜಾಗೃತ ಸ್ಥಿತಿಗೆ ತಂದು ನಿಲ್ಲಿಸುವ ತುರ್ತು  ಪತ್ರಿಕೋದ್ಯಮಕ್ಕೆ ಬೇಕಿತ್ತು. ಇಂಥದ್ದೊಂದು ಅಗತ್ಯದ ನಡುವೆ ಪಿ.ಸಾಯಿನಾಥರ ಆಗಮನ ಅದೊಂದು ಆಶಾಕಿರಣದಂತೆ ಗೋಚರಿಸುತ್ತದೆ. ರೈತರ ಸಮಸ್ಯೆಗಳೂ ಪತ್ರಿಕೆಗಳ ಪುಟಗಳಲ್ಲಿ ಜಾಗಪಡೆಯತೊಡಗುತ್ತವೆ. ಸರ್ಕಾರ ಒಂದಿಷ್ಟು ಎಚ್ಚೆತ್ತುಕೊಳ್ಳುತ್ತದೆ. ಮುಂದೆ ಆಗಬೇಕಿರುವ ಕೆಲಸ ಪಿ.ಸಾಯಿನಾಥರ ವಾರಸುದಾರರ ಸಂಖ್ಯೆ ಹೆಚ್ಚಬೇಕು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

Thursday, September 3, 2015

ಕತ್ತಿಯಂಚಿನ ದಾರಿ: ಸಾಹಿತ್ಯ ಮತ್ತು ಸಂಸ್ಕೃತಿ





              ರಹಮತ್ ತರೀಕೆರೆ ಕನ್ನಡದ ಸಮಕಾಲೀನ ಬರಹಗಾರರಲ್ಲಿ ಅತ್ಯಂತ ವಿಶಿಷ್ಠ ಬರಹಗಾರ. ಕನ್ನಡದ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕುರಿತು ನೂರಾರು ಲೇಖನಗಳನ್ನು ಬರೆದಿರುವ ಶ್ರೀಯುತರು ಅಂಕಣ ಬರಹಗಾರರಾಗಿಯೂ ಕನ್ನಡದ ಓದುಗರಿಗೆ ಪರಿಚಿತರು. ಸಂಶೋಧನಾ ಮತ್ತು ವಿಮರ್ಶಾ ಲೇಖನಗಳನ್ನೂ ಸಾಮಾನ್ಯ ಓದುಗರಿಗೂ ಸುಲಭವಾಗಿ ಅವರ ಓದಿಗೆ ದಕ್ಕುವಂತೆ ಬರೆಯುವ ಶೈಲಿ ರಹಮತ್ ತರೀಕೆರೆ ಅವರಿಗೆ ಸಿದ್ಧಿಸಿದೆ. ವಿಶ್ವವಿದ್ಯಾಲಯಗಳಲ್ಲಿನ ಪಂಡಿತೊತ್ತಮರು ಸಾಮಾನ್ಯ ಓದುಗರನ್ನು ಕಡೆಗಣಿಸಿ ಗಂಭೀರ ಸಾಹಿತ್ಯದಲ್ಲಿ ಮುಳುಗಿರುವ ಈ ವೇಳೆ ವಿಶ್ವವಿದ್ಯಾಲಯದ ಉನ್ನತ ಹುದ್ದೆಯಲ್ಲಿದ್ದುಕೊಂಡೇ ರಹಮತ್ ತರೀಕೆರೆ ತಮ್ಮ ಸಾಹಿತ್ಯ ವಿಮರ್ಶೆಯನ್ನು ಪಾಂಡಿತ್ಯಪೂರ್ಣವೂ ಶುದ್ಧಶಾಸ್ತ್ರವೂ ಆಗದಂತೆ ಬರೆಯುತ್ತಾರೆ. ತಮ್ಮ ಬರಹ ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳಲ್ಲದ ಓದುಗರಿಗೂ ತಲುಪಲಿ ಎನ್ನುವ ತುಡಿತ ಅವರದು. ಇದು ನಿಜವಾದ ಬರಹಗಾರನಲ್ಲಿರಬೇಕಾದ ಸಮಾಜದ ಕುರಿತಾದ ಕಾಳಜಿ. ಹೀಗೆ ಬರವಣಿಗೆ ಸಾಹಿತ್ಯದ ಗಂಭೀರ ವಿದ್ಯಾರ್ಥಿಗಳಲ್ಲದವರಿಗೂ ಹೋಗಿ ಮುಟ್ಟುವುದರಲ್ಲಿ ಬರಹಗಾರನ ಮತ್ತು ಆತನ ಬರವಣಿಗೆಯ ಸಾರ್ಥಕತೆ ಅಡಗಿದೆ. ಈ ಕಾರಣದಿಂದಲೇ ರಹಮತ್ ತರೀಕೆರೆ ಅವರ ಬರವಣಿಗೆಯ ಕೃಷಿ ಅನೇಕ ಕ್ಷೇತ್ರಗಳಿಗೆ ಚಾಚಿಕೊಂಡಿದೆ. ವಿಶ್ವವಿದ್ಯಾಲಯಗಳ ಪಂಡಿತೊತ್ತಮರು ಮಡಿವಂತಿಕೆ ಎಂದು ಮೂಗು ಮುರಿದು ದೂರ ಸರಿಸಿದ್ದನ್ನೆಲ್ಲ ರಹಮತ್ ತಮ್ಮ ತೆಕ್ಕೆಗೆ ತೆಗೆದುಕೊಂಡಿರುವರು. ಅವರೇ ಹೇಳಿಕೊಂಡಂತೆ ಸಾಹಿತ್ಯ ಕೃತಿಯೊಂದಕ್ಕೆ ಪ್ರತಿಕ್ರಿಯಿಸುವುದು, ಪಂಥಗಳನ್ನು ಅಧ್ಯಯನ ಮಾಡುವುದು, ಮೂಲಭೂತವಾದಗಳಿಗೆ ಪ್ರತಿರೋಧಿಸುವುದು, ಕಣ್ಮರೆಯಾದ ಲೇಖಕನಿಗೆ ಸ್ಪಂದಿಸುವುದು, ಕಲಾವಿದನ ಸಾವಿಗೆ ಪ್ರತಿಕ್ರಿಯಿಸುವುದು ಹೀಗೆ ಅನೇಕ ಸಂದರ್ಭಗಳಲ್ಲಿ ಅವರಿಂದ ಸಾಹಿತ್ಯ ಸೃಷ್ಟಿಯಾಗಿದೆ. ಜನರ ನೆನಪುಗಳಿಂದ ಮಾಸಿಹೋದ ಕಲಾವಿದೆಯೋರ್ವಳ ಬದುಕನ್ನು ಸತತ ಐದು ವರ್ಷಗಳ ಹುಡುಕಾಟದಿಂದ ಸಂಗ್ರಹಿಸಿ ಬರೆದ 'ಅಮೀರಬಾಯಿ ಕರ್ನಾಟಕಿ' ರಹಮತ್ ತರೀಕೆರೆ ಅವರ ಅತ್ಯುತ್ತಮ ಕೃತಿಗಳಲ್ಲೊಂದು. ೨೦೦೬ ರಲ್ಲಿ ಪ್ರಕಟವಾದ ಅವರ 'ಕತ್ತಿಯಂಚಿನ ದಾರಿ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

                'ಕತ್ತಿಯಂಚಿನ ದಾರಿ' ಈ ಪುಸ್ತಕದಲ್ಲಿ ಒಟ್ಟು ೨೦ ಲೇಖನಗಳಿವೆ. ಈ ಎಲ್ಲ ಲೇಖನಗಳನ್ನು ಲೇಖಕರು ಸಾಹಿತ್ಯ ಮತ್ತು ಸಂಸ್ಕೃತಿ ಲೇಖನಗಳೆಂದು ಕರೆದಿರುವರು. ಲೇಖಕನಿಗೆ  ಎದುರಾಗುವ  ಬಹುಮುಖ್ಯ ಸವಾಲು  ಎಂದರೆ ಆತ ವರ್ತಮಾನದ ಸಮಸ್ಯೆಗಳಿಂದ ದೂರನಿಂತು  ಬರೆಯುವಂತಿಲ್ಲ. ತಾನು ಬದುಕುತ್ತಿರುವ ವರ್ತಮಾನದ ಸಮಸ್ಯೆಗಳಿಗೆ ಸ್ಪಂದಿಸಿ ಲೇಖಕ ಬರೆಯಬೇಕಾದ ಅನಿವಾರ್ಯತೆ ಇದೆ. ಸ್ಪಂದಿಸಿ ಬರೆದರೆ ಬರೆದ ಬರಹ ಪ್ರಶ್ನೆಯಾಗಿ ಎದುರು ನಿಂತು ಕಾಡುತ್ತದೆ. ಇದನ್ನೇ ಲೇಖಕರು ಕತ್ತಿಯಂಚಿನ ದಾರಿಯಲ್ಲಿ ನಡೆಯುವ ಕಷ್ಟ ಎಂದು ಭಾವಿಸಿರುವರು. ಅಂಥದ್ದೊಂದು ಎಚ್ಚರಿಕೆಯಿಂದಲೇ ಅವರು ಕನ್ನಡ ಸಾಹಿತ್ಯದ ವಿಮರ್ಶೆ ಹಾಗೂ ಬರಹಗಾರರ ಮತ್ತು ಚಿಂತಕರ ನೆನಪಿಗಿಳಿಯುತ್ತಾರೆ. ಪುಸ್ತಕದ ಕೆಲವು ಲೇಖನಗಳು ಸಾಹಿತ್ಯ ವಿಮರ್ಶೆಯಾಗಿವೆ ಮತ್ತು ತಮ್ಮ ಆಪ್ತ ಲೇಖಕರನ್ನು ಸ್ಮರಿಸಿಕೊಂಡು ಬರೆದ ಲೇಖನಗಳು ಕೆಲವಿವೆ. ಇನ್ನುಳಿದಂತೆ ಆಯಾ ಸಂದರ್ಭಕ್ಕೆಹಾಗೂ ವಿದ್ಯಮಾನಗಳಿಗೆ  ಲೇಖಕರು ಪ್ರತಿಕ್ರಿಯಿಸಿ ಬರೆದ ಲೇಖನಗಳು ಒಂದಿಷ್ಟಿವೆ.

          ಪುಸ್ತಕದ ಪ್ರಾರಂಭದಲ್ಲಿ ಕುವೆಂಪು ಕುರಿತು ಲೇಖಕರು ಅಭಿಮಾನದಿಂದ ಬರೆದ ಲೇಖನವಿದೆ. ಲೇಖಕರು ವಿವರಿಸುವಂತೆ ಕುವೆಂಪು ಕೇವಲ ಬರಹಗಾರ ಮಾತ್ರವಲ್ಲ ಅವರು ಕರ್ನಾಟಕದ ಸಾಂಸ್ಕೃತಿಕ ನಾಯಕ. ಕನ್ನಡದಲ್ಲಿ ಅನೇಕ ಸಮುದಾಯಗಳನ್ನು ವೈಚಾರಿಕವಾಗಿ ಪ್ರಭಾವಿಸಿದ ಕುವೆಂಪು ಅವರನ್ನು ರಹಮತ್ ಬಸವಣ್ಣನೊಂದಿಗೆ ಹೋಲಿಸುತ್ತಾರೆ. ಕನ್ನಡದ ಅನೇಕ ಲೇಖಕರು, ಹೋರಾಟಗಾರರು, ರಾಜಕೀಯ ನೇತಾರರು ಕುವೆಂಪು ಅವರಿಂದ ಪ್ರಭಾವಿತರಾಗಿರುವುದರಿಂದ ಅವರೊಬ್ಬ ಬಹುಮುಖಿಗಳು, ಬಹುಪ್ರಕಾರಿಗಳು ಮತ್ತು ಬಹುವಿಷಯ ಚಿಂತಕರು ಎಂದು ಲೇಖಕರು ಕುವೆಂಪು ಅವರ ವ್ಯಕ್ತಿತ್ವವನ್ನು ವಿಶ್ಲೇಷಿಸುತ್ತಾರೆ. ಇಲ್ಲಿ ಕುವೆಂಪು ಅವರಲ್ಲಿದ್ದ ಮಾನವೀಯತೆ ಮತ್ತು ತಾಯ್ತನದ ಗುಣವನ್ನು 'ಕುವೆಂಪು ಹಾದಿಬದಿಯ ಹೂವನ್ನು ಬಾಗಿ ಎತ್ತಿಕೊಳ್ಳುತ್ತಾರೆ' ಎಂಬ ರೂಪಕದಲ್ಲಿ ವರ್ಣಿಸುತ್ತಾರೆ. ಅಂಥದ್ದೊಂದು ತಾಯ್ತನದ ಗುಣದಿಂದಲೇ ಕುವೆಂಪು ಅವರಿಗೆ ಈ ಲೋಕ ದಮನಿಸಿದ ಜಗತ್ತನ್ನು, ನಿರ್ಲಕ್ಷಿಸಿದ ಸಂಗತಿಗಳನ್ನು ಪ್ರೀತಿಯಿಂದ ಕುತೂಹಲದಿಂದ ನೋಡಲು ಸಾಧ್ಯವಾಯಿತು. ಹಾಗಾದರೆ ಕುವೆಂಪು ಅವರನ್ನು ಕನ್ನಡದ ವಿಮರ್ಶಾಲೋಕ ಹೇಗೆ ಪರಿಭಾವಿಸಿದೆ. ಇಲ್ಲಿ ಲೇಖಕರು ಕುವೆಂಪು ವಿಮರ್ಶಾ ಲೋಕಕ್ಕೆ ದಕ್ಕಿದ ಪರಿಯನ್ನು ವಿಶ್ಲೇಷಿಸಲು ಮುಂದಾಗುತ್ತಾರೆ. ಸಂಸ್ಕೃತ ಭಾಷೆ ಮತ್ತು ಆಧ್ಯಾತ್ಮಿಕತೆಗೆ ಹತ್ತಿರವಾಗಿದ್ದ ಕುವೆಂಪು ವಚನ ಸಾಹಿತ್ಯ ಹಾಗೂ ಜನಪದ ಭಾಷೆಯಿಂದ ದೂರವಾಗಿ ಉಳಿದದ್ದೇ ಅವರನ್ನು ಕನ್ನಡದ ವಿಮರ್ಶಕರು ಅಪಾರ್ಥಮಾಡಿಕೊಳ್ಳಲು ಕಾರಣವಾಯಿತು ಎನ್ನುವುದು ಲೇಖಕರ ಅಭಿಮತ. ಈ ಸಂದರ್ಭ  ಲೇಖಕರಿಗೆ ಬೇಂದ್ರೆ ನೆನಪಾಗುತ್ತಾರೆ. ಬೇಂದ್ರೆ ಜನಪದ ಭಾಷೆಯನ್ನು ಪಳಗಿಸುತ್ತಿದ್ದರು ಎಂದು ಸ್ಮರಿಸಿಕೊಳ್ಳುತ್ತಾರೆ. ಯಾವ ಸಾಂಸ್ಕೃತಿಕ ಸಂದರ್ಭ ಕುವೆಂಪು ಬೇಂದ್ರೆಯವರಿಗೆ ಇಂಥ 'ವಿರುದ್ಧ' ನೆಲೆಗಳತ್ತ ಹೋಗಲು ಪ್ರೇರೇಪಿಸಿತು ಎಂದು ತಮಗೆ ತಾವೇ ಪ್ರಶ್ನೆ ಹಾಕಿಕೊಳ್ಳುತ್ತಾರೆ. ಕುವೆಂಪು ದಲಿತ ಬದುಕಿನ ಆಳಕ್ಕೆ ಇಳಿಯದಿರುವುದು ಹಾಗೂ ತಮ್ಮ ಕೃತಿಗಳಲ್ಲಿ ಮುಸ್ಲಿಂ ಮತ್ತು ಕ್ರೈಸ್ತರನ್ನು ಕೇಡಿಗಳನ್ನಾಗಿ ಚಿತ್ರಿಸಿರುವರು ಎಂದ ವಿಮರ್ಶಕರ ಆರೋಪವನ್ನು ಲೇಖಕರು  ಇಲ್ಲಿ ಉಲ್ಲೇಖಿಸುವಾಗ ಆ ಸಂದರ್ಭದ ವರ್ತಮಾನ ಕುವೆಂಪು ಅವರಿಗೆ ಹೀಗೆ ಪ್ರೇರೇಪಿಸಿರಬಹುದು ಎಂದು ರಾಷ್ಟ್ರಕವಿಯ ಪರ ಮೆದು ಧೋರಣೆ ತಾಳುತ್ತಾರೆ. ಒಟ್ಟಾರೆ ಕುವೆಂಪು ಸಾಹಿತ್ಯವನ್ನು ಹೊಸ ದೃಷ್ಟಿಕೋನದ ಬೆಳಕಿನಲ್ಲಿ ಪುನರ್ವಿಮರ್ಶಿಸುವ ಕೆಲಸವಾಗಬೇಕಿದೆ ಮತ್ತು ಕನ್ನಡದ ಪರಂಪರೆ ಇಂತಹ ಹುಡುಕಾಟದಲ್ಲಿ ತೊಡಗಿಸಿಕೊಂಡಿದೆ ಎನ್ನುವ ಆಶಯ ಲೇಖಕರದು.

    'ಶೂನ್ಯಸಂಪಾದನೆ ಹಾಗೂ ಡೆಮಾಕ್ರಸಿ' ಲೇಖನದಲ್ಲಿ ಲೇಖಕರು ತಮ್ಮ ವಿಮರ್ಶೆಗಾಗಿ ವಚನಗಳನ್ನು  ಕೈಗೆತ್ತಿಕೊಳ್ಳುತ್ತಾರೆ. ವಚನಗಳ ಸೃಷ್ಟಿ ಕನ್ನಡ ಸಾಹಿತ್ಯದ ಬಹುಮುಖ್ಯವಾದ ಬೆಳವಣಿಗೆ. ೧೨ ನೇ ಶತಮಾನದಲ್ಲಿ ಕನ್ನಡದ ನೆಲದಲ್ಲಿ ಕಾಣಿಸಿಕೊಂಡ ಸಾಮಾಜಿಕ ಪಲ್ಲಟಗಳಿಗೆ ವಚನಗಳ ಕೊಡುಗೆ ಅಪಾರವಾಗಿದೆ. ಅಲ್ಲಮ, ಬಸವಣ್ಣ, ಚೆನ್ನಬಸವಣ್ಣ, ಅಕ್ಕಮಹಾದೇವಿ, ಮುಕ್ತಾಯಕ್ಕ, ಮೋಳಿಗೆ ಮಾರಯ್ಯ, ಹಡಪದ ಅಪ್ಪಣ್ಣ, ಡೋಹರ ಕಕ್ಕಯ್ಯ ಅನೇಕ ವಚನಕಾರರು ಮತ್ತು ವಚನಕಾರ್ತಿಯರು ವಚನಗಳ ಮೂಲಕ ಬಹುದೊಡ್ಡ ಸಾಮಾಜಿಕ ಪರಿವರ್ತನೆಗೆ ಕಾರಣರಾದರು. ಮೇಲ್ವರ್ಗದ ಹಾಗೂ ಕೆಳವರ್ಗದ ವಚನಕಾರರು ಜೊತೆಯಾಗಿಯೇ ಸಾಮಾಜಿಕ ಅಸಮಾನತೆ ವಿರುದ್ಧ ಚಳವಳಿಯನ್ನು ಸಂಘಟಿಸಿದ್ದು ೧೨ನೇ ಶತಮಾನದಲ್ಲಿ ಕಾಣಿಸಿಕೊಂಡ ಹೋರಾಟದ ವೈಶಿಷ್ಥ್ಯತೆಗಳಲ್ಲೊಂದು. ಆ ಕಾಲದಲ್ಲಿ ರಚನೆಯಾದ ವಚನಗಳ ಉದ್ದೇಶ ಹಾಗೂ ಅವುಗಳು ಉಂಟುಮಾಡಬಹುದಾದ ಪರಿಣಾಮದಲ್ಲಿ ಸಮನ್ವಯತೆ ಇದ್ದಂತೆ ಅಲ್ಲಿ ವೈರುಧ್ಯಗಳೂ ಇವೆ. ಇದಕ್ಕೆಲ್ಲ ವಚನಗಳು ಅನೇಕ ಜಾತಿ, ಸಮುದಾಯಗಳಿಗೆ ಸೇರಿದ ನೂರಾರು ಜನರಿಂದ ರಚನೆಯಾದದ್ದೇ ಬಹುಮುಖ್ಯ ಕಾರಣ. ವಿಶೇಷವಾಗಿ ವಚನಗಳಲ್ಲಿ ಕೆಳವರ್ಗದ ವಚನಕಾರರು ಪ್ರಶ್ನೆಗಳನ್ನೆತ್ತುತ್ತಾರೆ. ಅದಕ್ಕೆ ಉದಾಹರಣೆಯಾಗಿ ನಾವು ಮಡಿವಾಳಯ್ಯನ ಈ ನುಡಿಯನ್ನು ಗಮನಿಸಬೇಕು 'ಮರಳುಗೊಂಡೆಯಲ್ಲಾ ಬಸವಣ್ಣಾ ಪಿತ್ತತಲೆಗೇರಿತೆ ನಿನಗೆ'. ವಚನ ಸಾಹಿತ್ಯದಲ್ಲಿ ಈ ವೈವಿಧ್ಯತೆಯನ್ನೇ ಲೇಖಕ ರಹಮತ್ ತರೀಕೆರೆ ಅವರು ಸಂವಾದ ಅಥವಾ ವಾಗ್ವಾದವೆಂದು ಗುರುತಿಸುತ್ತಾರೆ. ತಮ್ಮ ಈ ಹೇಳಿಕೆಗೆ ನಿದರ್ಶನವಾಗಿ ಅವರು ಅಲ್ಲಮ-ಬಸವಣ್ಣ, ಅಲ್ಲಮ-ಸಿದ್ಧರಾಮ, ಅಲ್ಲಮ-ಅಕ್ಕಮಹಾದೇವಿ, ಅಲ್ಲಮ-ಮುಕ್ತಾಯಕ್ಕ ಅವರ ನಡುವಿನ ವಾಗ್ವಾದಗಳನ್ನು ಹೆಸರಿಸುತ್ತಾರೆ. ಹೀಗೆ ಚರ್ಚೆ, ಸಂವಾದ, ಭಿನ್ನಮತದ ಹಿನ್ನೆಲೆಯಲ್ಲಿ ರಚನೆಯಾದ ವಚನಗಳನ್ನು ಆಧಾರವಾಗಿಟ್ಟುಕೊಂಡು  ೪೦೦ ವರ್ಷಗಳ ನಂತರ ಅಂದರೆ ೧೬ ನೇ ಶತಮಾನದಲ್ಲಿ ಶಿವಗಣಪ್ರಸಾದಿ 'ಶೂನ್ಯಸಂಪಾದನೆ' ಕೃತಿಯನ್ನು ರಚಿಸುತ್ತಾನೆ. ಮೂಲವಚನಗಳ ಮುಖ್ಯ ಆಶಯ ಹಾಗೂ ಅವುಗಳ ನಡುವಣ ವೈರುಧ್ಯವನ್ನು ಆಧಾರವಾಗಿಟ್ಟುಕೊಂಡು 'ಶೂನ್ಯಸಂಪಾದನೆ' ಕೃತಿಯನ್ನು ವಿಮರ್ಶಿಸುವ ಲೇಖಕರಿಗೆ ಈ ಕೃತಿ ಚರ್ಚೆ ಬೆಳೆಸುವ ಡೆಮಾಕ್ರಟಿಕ್ ಗುಣದ ಭಾಗವಾಗಿ ಕಾಣಿಸುತ್ತದೆ. 'ಶೂನ್ಯಸಂಪಾದನೆ' ಯ ಡೆಮಾಕ್ರಟಿಕ್ ಗುಣಕ್ಕೆ ಲೇಖಕರು ಕೊಡುವ ಕಾರಣಗಳು ಹೀಗಿವೆ

೧. ಶೂನ್ಯಸಂಪಾದನೆಯದು ಪ್ರಜಾಪ್ರಭುತ್ವ ಸತ್ವವುಳ್ಳ ಸಂವಾದದ ಸ್ವರೂಪ.
೨. ಶೂನ್ಯಸಂಪಾದನೆಯಲ್ಲಿರುವ ಜಾನಪದ ಪರಂಪರೆಯ ಗುಣ. ಅಂದರೆ ಹಠಮಾರಿಯಾಗದೆ ಸಹಿಸುವ, ಸರಿಕಂಡಿದ್ದೆಲ್ಲವನ್ನೂ ಒಳಗೊಳ್ಳುವ ಗುಣ. ಹಾಗೆ ಒಳಗೊಂಡದ್ದನ್ನು ಅರಗಿಸಿಕೊಂಡು ಮೂರನೆಯದೊಂದನ್ನು ಹುಟ್ಟಿಸಲು ಯತ್ನಿಸುವ ಸಮನ್ವಯ ಗುಣ.
೩. 'ಸೇರುವೆ ತಪ್ಪುಳ್ಳೊಡೆ ನಿಮ್ಮ ಪರಿಜ್ಞಾನದಿಂದ ತಿದ್ದಿ' ಎಂದು ಶಿವಗಣಪ್ರಸಾದಿ ತನ್ನ ಕೃತಿಗೆ ಕೊಡುವ ಡೆಮಾಕ್ರಟಿಕ್ಕಾದ ಕೊನೆ.

               ಆದರೆ ಲೇಖಕರ ವಿರೋಧವಿರುವುದು ಡೆಮಾಕ್ರಟಿಕ್ ಗುಣವಿರುವ 'ಶೂನ್ಯ ಸಂಪಾದನೆ' ಕೃತಿಯನ್ನು ವೀರಶೈವ ಸಮುದಾಯದ ಧರ್ಮಶಾಸ್ತ್ರವೆಂದು ಸೀಮಿತಗೊಳಿಸುತ್ತಿರುವ ಬೆಳವಣಿಗೆ ಕುರಿತು. ತಮಗೊಂದು ಸೂಕ್ತವಾದ ಧರ್ಮಶಾಸ್ತ್ರವಿಲ್ಲವೆಂದು ಕೊರಗುತ್ತಿದ್ದ ವೀರಶೈವ ಮತದವರಿಗೆ 'ಶೂನ್ಯ ಸಂಪಾದನೆ' ಒಂದು ದಾರಿದೀಪವಾಗಿ ಕಂಡಿತು. ಪರಿಣಾಮವಾಗಿ ಆಧುನಿಕ ವೀರಶೈವ ವಿದ್ವಾಂಸರು 'ಶೂನ್ಯ ಸಂಪಾದನೆ'ಯನ್ನು ವೀರಶೈವ ಧರ್ಮದ ಧರ್ಮಗ್ರಂಥವೆಂದು ಉದ್ಘೋಷಿಸಿದರು. ಅನೇಕ ಸಮುದಾಯಗಳಿಗೆ ಸೇರಿದ ವಚನಕಾರರು ರಚಿಸಿದ ವಚನಗಳಲ್ಲಿನ ಮುಕ್ತತೆ ಯಾವುದೇ ಒಂದು ಧಾರ್ಮಿಕ ಸಮುದಾಯವನ್ನು ಸಂಘಟಿಸುವಲ್ಲಿ ತೊಡಕಾಗಿರುವುದರಿಂದ 'ಶೂನ್ಯ ಸಂಪಾದನೆ' ಕೃತಿಯನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸುವುದನ್ನು ಲೇಖಕರು ಒಪ್ಪುವುದಿಲ್ಲ. ವೀರಶೈವ ಧರ್ಮಕ್ಕೆ ವ್ಯತಿರಿಕ್ತವಾದ ಅನೇಕ ಸಂಗತಿಗಳು ಶೂನ್ಯ ಸಂಪಾದನೆ ಕೃತಿಯಲ್ಲಿರುವುದನ್ನು ಲೇಖಕರು ತಮ್ಮ ವಿರೋಧದ ನಿಲುವಿಗೆ ಪ್ರಮುಖ ಕಾರಣಗಳಾಗಿ ಉದಾಹರಿಸುವರು.

೧. ಸಿದ್ಧರಾಮ ಲಿಂಗದೀಕ್ಷೆ ಪ್ರಕರಣದಲ್ಲಿ ಇಷ್ಟಲಿಂಗ ಅಗತ್ಯವಿಲ್ಲ ಎಂಬ ವಾದವು ಕೊನೆಗೆ ಗೆಲ್ಲುವುದು.
೨. ಅಲ್ಲಮನನ್ನು ಕೃತಿಯ ನಾಯಕನನ್ನಾಗಿ ಮಾಡಿರುವುದು. ಅಲ್ಲಮನನ್ನು ಇಟ್ಟುಕೊಂಡು ವೀರಶೈವ ಸಿದ್ಧಾಂತ ಕಟ್ಟುತ್ತೇನೆ ಎಂಬುದೆ ಕಷ್ಟದ ಕೆಲಸ. ಏಕೆಂದರೆ ಅಲ್ಲಮನೊಬ್ಬ ಮಹಾ ತಿರುಗಾಡಿ. ತಿರುಗಾಟಕ್ಕೂ ಮತ್ತು ಸಾಂಸ್ಥಿಕವಲ್ಲದ ಧರ್ಮಕ್ಕೂ ಸಂಬಂಧವಿದೆ (ಆದರೆ ವೀರಶೈವ ಸಾಂಸ್ಥಿಕ ಧರ್ಮ).
 
         ಹೀಗಿದ್ದೂ ಶಿವಗಣಪ್ರಸಾದಿ ತನ್ನ 'ಶೂನ್ಯ ಸಂಪಾದನೆ'ಯನ್ನು ವೀರಶೈವ ಸಮುದಾಯದ ಧರ್ಮಗ್ರಂಥವೆಂದು ಬಿಂಬಿಸಲು ಪ್ರಯತ್ನಿಸಿರುವನು ಎನ್ನುವುದು ಲೇಖಕರ ಆರೋಪ. ಅದಕ್ಕೆ ಉದಾಹರಣೆಯಾಗಿ ಕೃತಿಯಲ್ಲಿನ ಕೆಲವು ನ್ಯೂನ್ಯತೆಗಳನ್ನು ಪಟ್ಟಿ ಮಾಡುತ್ತಾರೆ.

೧. ಕೆಳವರ್ಗದ ವಚನಕಾರರಿಗೆ ಈ ಕೃತಿಯಲ್ಲಿ ತಮ್ಮ ವಾದವನ್ನು ಮಂಡಿಸಲು ಅವಕಾಶ ದೊರೆತಿಲ್ಲ.
೨. ೯೫೯ ವಚನಗಳಲ್ಲಿ ೮೦೦ ವಚನಗಳು ಮೇಲ್ವರ್ಗದ ವಚನಕಾರರದಾಗಿವೆ.
೩. ಬಸವಣ್ಣನ ಸಂಗಾತಿಗಳಾಗಿದ್ದ ನೂರಾರು ಕೆಳವರ್ಗದ ವಚನಕಾರರು ಇಲ್ಲಿಲ್ಲ.

     ನಿಸಾರ್ ಅಹ್ಮದ್, ಪೂರ್ಣಚಂದ್ರ ತೇಜಸ್ವಿ, ಶಾಂತಿನಾಥ ದೇಸಾಯಿ, ಶಿವರಾಮ ಕಾರಂತರ ಬರವಣಿಗೆಯ ವಿಮರ್ಶೆ ಕೃತಿಯ ಮುಖ್ಯ ಭಾಗಗಳಲ್ಲೊಂದು. ಮುಸ್ಲಿಂ ಬರಹಗಾರರ ಬರವಣಿಗೆಯನ್ನು  ಒಂದಿಷ್ಟು ಅನುಮಾನದಿಂದ ನೋಡುವುದು ವಿಮರ್ಶಾ ಲೋಕದಲ್ಲಿ ಸಾಮಾನ್ಯವಾಗಿ ಬೆಳೆದು ಬಂದಿರುವ ಸಂಗತಿಗಳಲ್ಲೊಂದು. ಇಂಥದ್ದೊಂದು ಅನುಮಾನವನ್ನು ತನ್ನದಲ್ಲದ ಜಾತಿ ಸಮುದಾಯದ ಕುರಿತು ಲೇಖಕ ಬರೆದಾಗಲೂ ಆತ ಎದುರಿಸಬೇಕಾಗುತ್ತದೆ. ಈ ಸಂದರ್ಭ ಚೋಮನ ದುಡಿ ಬರೆದ ಕಾರಂತರನ್ನು ನೆನಪಿಸಿಕೊಳ್ಳಬಹುದು. ಗಾಂಧಿಯಂಥ ಅಪ್ರತಿಮ ಹೋರಾಟಗಾರನನ್ನೇ ಅಸ್ಪೃಶ್ಯತಾ ಆಚರಣೆಯ ವಿರುದ್ಧದ ಹೋರಾಟ ಹಾಗೂ ಹರಿಜನರ ಕುರಿತಾದ ಆತನ ಬರವಣಿಗೆಯನ್ನು ಗುಮಾನಿಯಿಂದ ನೋಡಿದ ಅನೇಕ ಉದಾಹರಣೆಗಳಿವೆ. ಈ ನೆಲದ ಭಾಷೆ ಸಂಸ್ಕೃತಿ ಕುರಿತು ಬರೆಯುವಾಗ ನಿಸಾರ್ ಅಹ್ಮದ್ ಅವರ ಕಾವ್ಯ ಒಂದು ಬಗೆಯ ಸಾಂಸ್ಕೃತಿಕ ಕಷ್ಟಗಳಿಗೆ ಸಿಲುಕುತ್ತದೆ. ಲೇಖಕನಾದವನು ತನ್ನ ಧಾರ್ಮಿಕ ಸಮುದಾಯದ ಅನುಭವದ ಜೊತೆ ಅನುಸಂಧಾನ ಮಾಡಲು ಕೆಲವೊಮ್ಮೆ ಹಿಂಜರಿಯಬಹುದು. ಇದನ್ನೇ ಲೇಖಕ ರಹಮತ್ ತರೀಕೆರೆ ಸೃಜನಶೀಲತೆಯ ಕಷ್ಟ ಹಾಗೂ ಸಾಂಸ್ಕೃತಿಕ ಬಿಕ್ಕಟ್ಟು ಎಂದು ಕರೆಯುತ್ತಾರೆ. ಜೊತೆಗೆ ಕನ್ನಡದಲ್ಲಿ ಇತರ ಮುಸ್ಲಿಂ ಬರಹಗಾರರಿಗೆ ಎದುರಾಗದ ಸಾಂಸ್ಕೃತಿಕ ಕಷ್ಟ ನಿಸಾರ್ ಅವರಿಗೇ ಎದುರಾಗಲು ಕಾರಣಗಳಾದರೂ ಏನು ಎಂದು ಹುಡುಕಲು ಹೊರಟಾಗ ಅವರು ಕಂಡುಕೊಂಡ ಉತ್ತರ ಉಳಿದವರು ನಿಸಾರರಂತೆ ಕವಿಗಳಲ್ಲ ಎಂದು. ಇತರ ಮುಸ್ಲಿಂ ಲೇಖಕರು ಕಥೆ ಕಾದಂಬರಿ ಪ್ರಕಾರಗಳ ಮೂಲಕ ಮುಸ್ಲಿಂ ಸಂವೇದನೆಯನ್ನು ಅಭಿವ್ಯಕ್ತಗೊಳಿಸಲು ಯಾವುದೇ ಮುಜುಗರಕ್ಕೆ ಒಳಗಾಗಲಿಲ್ಲ. ಜೊತೆಗೆ ನಿಸಾರ್ ಅಹ್ಮದ್ ಬರೆಯಲು ಪ್ರಾರಂಭಿಸಿದ ಮೊದಲ ದಿನಗಳಲ್ಲಿ ಮುಸ್ಲಿಂ ಲೇಖಕರು ಬಹಳ ಇರಲಿಲ್ಲ. ಹೀಗಾಗಿ ತನ್ನ ಸಮುದಾಯದ ಅನುಭವವನ್ನು ಬಳಸಿಕೊಳ್ಳುವುದಕ್ಕೆ ಮುಜುಗರ ಪಡುವ ಸನ್ನಿವೇಶವಿತ್ತು ಎನ್ನುವುದು ಲೇಖಕರ ಅಭಿಮತ. ಕಾಲಾನಂತರದಲ್ಲಿ ನಿಸಾರ್ ಅಹ್ಮದ್ ಅವರ ಬರವಣಿಗೆ ಸಾಂಸ್ಕೃತಿಕ ಕಷ್ಟಗಳಿಂದ ಪಾರಾಯಿತು ಎನ್ನುವುದಕ್ಕೆ ರಹಮತ್ ಅವರು ಕೊಡುವ ಉದಾಹರಣೆಯನ್ನು ಗಮನಿಸಬೇಕು, 'ಹಲವೆನ್ನದ ಹಿರಿಮೆಯೆ ಕುಲವೆನ್ನದ ಗರಿಮೆಯೆ' ಎಂದು ಸಂಭ್ರಮಿಸಿದ ಕವಿಯಲ್ಲಿ ಮುಂದೊಂದು ದಿನ 'ನಾಡ ದೇವಿಯೇ ನಿನ್ನ ಮಡಿಲಲ್ಲಿ ಕಂಡೆ ಎಂಥ ದೃಶ್ಯ ಒಂದೆದೆಯ ಹಾಲು ಕುಡಿದವರ ನಡುವೆ ಎಷ್ಟೊಂದು ಭೇದ ತಾಯೆ' ಎಂಬ ದುಗುಡವು ತನ್ನ ಶ್ರದ್ಧೆಯನ್ನು ತಾನೇ ಭಗ್ನಗೊಳಿಸಿಕೊಂಡು ಹುಟ್ಟುತ್ತದೆ.

   ಪೂರ್ಣಚಂದ್ರ ತೇಜಸ್ವಿ ಅವರ ಬರವಣಿಗೆಯ ವೈರುಧ್ಯಗಳನ್ನು ರಹಮತ್ ತರೀಕೆರೆ ಅತ್ಯಂತ ತೀಕ್ಷ್ಣವಾಗಿ ಪ್ರಶ್ನಿಸುತ್ತಾರೆ. ಮನುಷ್ಯನ ಕಲ್ಪನೆಗೂ ಎಟುಕದ ಪ್ರಕೃತಿಯ ಒಳಗನ್ನು ತೇಜಸ್ವಿ ಅತ್ಯಂತ ನಿರಾಯಾಸವಾಗಿ ಪ್ರವೇಶಿಸಿ ಅದರೊಳಗಿನ ಅಚ್ಚರಿ ಮತ್ತು ಅದ್ಭುತಗಳನ್ನು ತಮ್ಮ ತಮ್ಮ ಬರವಣಿಗೆಯ ವಸ್ತುವಾಗಿಸಿಕೊಂಡು ಅತ್ಯುತ್ತಮ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದರು. ತೇಜಸ್ವಿ ಅವರ ಒಟ್ಟಾರೆ ಬರವಣಿಗೆಯ ಕ್ರಮವನ್ನು ಲೇಖಕರು ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಸಂಗತಿ, ಒಂದು ವಸ್ತುವಿನ ಹಿಂದೆ ವಿಸ್ತಾರವಾದ ಸಮಾಜವಿದೆ ಎನ್ನುವ ಅರಿವಿನಲ್ಲಿ ಹುಟ್ಟುವ ಕಥನ ಮತ್ತು ಮನುಷ್ಯರ ಜೊತೆ ಪ್ರಾಣಿ, ಗಿಡ, ಬಳ್ಳಿ, ಹಳ್ಳ, ಕೀಟ, ಮಳೆ, ಗಾಳಿ ಸಮಸ್ತ ಚರಾಚರಗಳನ್ನು ಒಟ್ಟಿಗೆ ನೋಡುತ್ತ ಬರೆಯುವ ಕಥನ ಎಂದು ವಿಭಾಗಿಸುತ್ತಾರೆ. ಈ ಹಿನ್ನೆಲೆಯಲ್ಲಿ ತೇಜಸ್ವಿ ಅವರ 'ಮಾಯಾಲೋಕ' ಕೃತಿ ಇಲ್ಲಿ ವಿಮರ್ಶೆಗೆ ಒಳಪಡುತ್ತದೆ. ತೇಜಸ್ವಿ ನಿಸರ್ಗಕ್ಕೆ ಮುಖಾಮುಖಿಯಾಗಿ ನಿಂತು 'ಮಾಯಾಲೋಕ' ದಂಥ ಕೃತಿ ರಚಿಸಲು ಸಾಮಾಜಿಕ ಬದುಕಿನ ಅನುಭವದ ಒಳಹರಿವು ಅವರಿಗೆ ಕಡಿಮೆಯಾದದ್ದೆ ಬಹುಮುಖ್ಯ ಕಾರಣ ಎಂದು ಅಭಿಪ್ರಾಯಪಡುತ್ತಾರೆ. ಅಂಥದ್ದೊಂದು ಅನುಭವದ ಕೊರತೆ ತುಂಬಿಕೊಳ್ಳಲು ತೇಜಸ್ವಿ ಹೊಸ ಉಪಾಯಗಳನ್ನು ಕಂಡುಕೊಳ್ಳುತ್ತಲೇ ಬಂದರು ಎಂದೆನ್ನುವ ರಹಮತ್ ಒಟ್ಟಾರೆ ಈ ಹೊಸ ಅನುಭವ ಅವರ ಕಥನಕ್ಕೆ ಹೊಸ ದೃಷ್ಟಿಕೋನಗಳನ್ನು ಪಡೆದುಕೊಳ್ಳಲು ಕಾರಣವಾಯಿತು ಎನ್ನುತ್ತಾರೆ. ಅವರು ತೇಜಸ್ವಿ ಅವರ ಒಟ್ಟು ಬರವಣಿಗೆಯಲ್ಲಿನ ಕೊರತೆಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ

೧. ಜುಗಾರಿ ಕ್ರಾಸಿನಲ್ಲಿ ಬರುವ ಒಂದು ಸಾಂಕೇತಿಕ ಪಾತ್ರ ಬಿಟ್ಟರೆ ತೇಜಸ್ವಿ ಕಥನದ ಯಾವ ಶೋಧದಲ್ಲಿಯೂ ಸ್ತ್ರೀಯಿಲ್ಲ.
೨. ತೇಜಸ್ವಿ ತಮ್ಮ  ಕಥನದಲ್ಲಿ ಹಾಗೂ ಶೋಧದಲ್ಲಿ ಗಂಡು ಪ್ರಧಾನ ಮನೋಭಾವದಿಂದ ಹೊರಬರಲು ಆಗುತ್ತಿಲ್ಲ.
೩. ತೇಜಸ್ವಿ ಅವರ ಬರಹದಲ್ಲಿ ಸಮಾಜದ ವರ್ಗವೈರುಧ್ಯಗಳು ತೀವ್ರ ಪ್ರಶ್ನೆಗೆ ಒಳಗಾಗುವುದಿಲ್ಲ.
೪. ವಿಜ್ಞಾನ ಮತ್ತು ತಂತ್ರಜ್ಞಾನದ ಮೇಲಿನ ಮಹಾಸೆಳೆತ ಅವರನ್ನು ಪಶ್ಚಿಮ ಆಧುನಿಕತೆಯನ್ನು ಅವಿಮರ್ಶಾತ್ಮಕವಾಗಿ ನೋಡುವಂತೆ ಮಾಡಿದೆ.

      ಶಾಂತಿನಾಥ ದೇಸಾಯಿ ಅವರ ಕುರಿತು ವಿಮರ್ಶಿಸುವಾಗ ಲೇಖಕರು ಕನ್ನಡದ ನವ್ಯ ಲೇಖಕರಲ್ಲೊಬ್ಬರಾದ ಇವರು ಯಾವ ತಾತ್ವಿಕ ಇಕ್ಕಟ್ಟುಗಳಿಗೂ ಸಿಲುಕದೆ ಆಧುನಿಕತೆಯ ಪರವಾಗಿ ನಿಂತರು ಎಂದು ಮೆಚ್ಚುಗೆಯ ನುಡಿಗಳನ್ನಾಡುತ್ತಾರೆ. ಹೀಗೆ ಹೇಳುವಾಗ ಅವರಿಗೆ ವೈದಿಕ ಸನಾತನತೆಯ ವಿರುದ್ಧ ದಂಗೆ ಎಳುವಂತಹ (ಸಂಸ್ಕಾರ) ಅಥವಾ ಆಧುನಿಕತೆ ವಿರೋಧಿಸುತ್ತ ಸಾಂಪ್ರದಾಯಿಕ ಸಮಾಜವನ್ನು ಸಮರ್ಥಿಸುವಂತಹ (ಸೂರ್ಯನ ಕುದುರೆ) ತಾತ್ವಿಕ ಇಕ್ಕಟ್ಟುಗಳ ನಡುವೆ ಬರೆದ ಅನಂತಮೂರ್ತಿ ನೆನಪಾಗುತ್ತಾರೆ. ಆದರೆ ಶಾಂತಿನಾಥ ದೇಸಾಯಿಯವರು ಮಾತ್ರ ಯಾವ ಇಕ್ಕಟ್ಟುಗಳಿಗೂ ಸಿಲುಕದೆ ಕೊನೆಯತನಕ ಆಧುನಿಕತೆಯ ಆರಾಧಕರಾಗಿಯೇ ಉಳಿದರು. ಶಾಂತಿನಾಥ ದೇಸಾಯಿ ಅವರ ಬರವಣಿಗೆಯಲ್ಲಿನ ಆಧುನಿಕ ದೃಷ್ಟಿಕೋನವನ್ನು ರಹಮತ್ ಈ ಕೆಳಗಿನ ಸಂಗತಿಗಳ ಮೂಲಕ ಗುರುತಿಸುತ್ತಾರೆ,

೧. ದೇಸಾಯಿಯವರ ಕಥನ ಲೋಕ ಬಿಡುಗಡೆಗೊಳ್ಳಲು ಬಯಸುವ ಸ್ತ್ರೀ ಸಮುದಾಯವನ್ನು ಅತ್ಯಂತ ತೀವ್ರವಾಗಿ ಚಿತ್ರಿಸುತ್ತದೆ.
೨. ದೇಸಾಯಿ ಕಥೆಗಳ ಸ್ತ್ರೀಯರು ಸ್ವತಂತ್ರ ವ್ಯಕ್ತಿತ್ವವುಳ್ಳವರು ಮತ್ತು ಧೀಮಂತಿಕೆ ಉಳ್ಳವರು.
೩. ದೇಸಾಯಿ ಅವರ ಕತೆಗಳಲ್ಲಿ ತಮ್ಮನ್ನು ನಿಯಂತ್ರಿಸುವ ಸಂಪ್ರದಾಯಗಳ ವಿರುದ್ಧ ಸ್ವತಂತ್ರಗೊಂಡ ಕಿರಿಯ ತಲೆಮಾರು ಮುಖಾಮುಖಿಮಾಡುವುದು ಕಡ್ಡಾಯವೆಂಬಂತೆ ಇದೆ.
೪. ದೇಸಾಯಿ ಕತೆಗಳ ಹೆಚ್ಚಿನ ನಾಯಕರು ಕ್ರೈಸ್ತ ಮಹಿಳೆಯರನ್ನು ಸಂಗಾತಿಗಳನ್ನಾಗಿ ಪಡೆದವರು.

        ಪುಸ್ತಕದ ಒಂದು ಭಾಗದಲ್ಲಿ ಕೆ ವಿ ಸುಬ್ಬಣ್ಣ, ಲಂಕೇಶ್, ಶಂಕರ್ ಮೊಕಾಶಿ ಪುಣೇಕರ, ಚೆನ್ನಯ್ಯನವರ ಕುರಿತಾದ ಗಾಢ ನೆನಪುಗಳಿವೆ. ಇಲ್ಲಿ ಅವರ ಬರವಣಿಗೆಯ ವಿಮರ್ಶೆ ಎನ್ನುವುದಕ್ಕಿಂತ ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿರುವರು. ನೀನಾಸಂ ಮೂಲಕ ಹೆಗ್ಗೋಡಿನಂಥ ಸಣ್ಣ ಊರನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೆ ವಿ ಸುಬ್ಬಣ್ಣ ಅವರನ್ನು ನನ್ನ ಮನಸ್ಸನ್ನು ಬೆಳೆಸಿದ ಕನ್ನಡದ ಚಿಂತಕರಲ್ಲೊಬ್ಬರು ಎಂದು ಸ್ಮರಿಸಿಕೊಳ್ಳುತ್ತಾರೆ. ತಾತ್ವಿಕ ಭಿನ್ನಾಭಿಪ್ರಾಯ ಇರಿಸಿಕೊಂಡೂ ಮನುಷ್ಯ ಪ್ರೀತಿ ತೋರುವ ಮತ್ತು ವೈಯಕ್ತಿಕವಾಗಿ ಪರಸ್ಪರ ಗೌರವಿಸುವ ಸುಬ್ಬಣ್ಣನವರ   ಮನೋಭಾವ ಲೇಖಕರಿಗೆ ಮೆಚ್ಚುಗೆ ಯಾಗುವ ಗುಣಗಳಲ್ಲೊಂದು. ಹೀಗಿದ್ದೂ ನೀನಾಸಂ ಶೂದ್ರರು ಹಾಗೂ ದಲಿತರಿಗೆ ಯಾಕೆ ಅದು ನಮ್ಮದು ಎಂದೆನಿಸಿಲ್ಲ. ಎಡಪಂಥಿಯರು ಹಾಗೂ ದಲಿತರು ಯಾಕೆ ಅಲ್ಲಿಗೆ ಹೋಗಲು ಹಿಂಜರಿಯುತ್ತಾರೆ? ಲಂಕೇಶ್, ತೇಜಸ್ವಿ, ದೇವನೂರ ಮುಂತಾದ ಎಷ್ಟೋ ಲೇಖಕರು ಹೆಗ್ಗೋಡಿನ ಜೊತೆ ಗುರುತಿಸಿಕೊಳ್ಳಲು ಯಾಕೆ ಬಯಸಲಿಲ್ಲ? ಎನ್ನುವ ಪ್ರಶ್ನೆಗಳು ಲೇಖಕರನ್ನು ಕಾಡುತ್ತವೆ. ತಮ್ಮ ಗುರುಗಳಾದ ಚನ್ನಯ್ಯನವರನ್ನು ಕುರಿತು ಬರೆಯುವಾಗ  ರಹಮತ್ ಹೆಚ್ಚು ಆರ್ದ್ರರಾಗುತ್ತಾರೆ. ಅಷ್ಟೊಂದು ಮಹತ್ವಾಕಾಂಕ್ಷಿಯಲ್ಲದ, ಅಧಿಕಾರಕ್ಕಾಗಿ ಹಂಬಲಿಸದ, ಯಾರೊಂದಿಗೂ ಸ್ಪರ್ಧೆಗಿಳಿಯದ ಈ ಗುಣಗಳೇ ಚನ್ನಯ್ಯನವರು ನೈತಿಕತೆಯನ್ನು ಕಳೆದುಕೊಳ್ಳದಂತೆ ಬದುಕಲು ಕಾರಣಗಳಾಗಿರಬಹುದು ಎನ್ನುವ ಅನಿಸಿಕೆ ಲೇಖಕರದು. ಚನ್ನಯ್ಯನವರ ಮಹತ್ವಾಕಾಂಕ್ಷೆಯಂತೆ ಅವರ ಅವರ ಬರವಣಿಗೆ ಕೂಡ ಬಹಳ ಕಡಿಮೆ. ನಿವೃತ್ತಿಯ ನಂತರ ತೀರ ಒಂಟಿಯಾಗಿ ಬದುಕಿದ ಚನ್ನಯ್ಯನವರಿಗೆ ಸಾವು ಮತ್ತು ಅದರ ಕಠೋರತೆ ಅವರ ಬದುಕಿನ ಕಲ್ಪನೆಯನ್ನು ಗಾಢವಾಗಿ ಪ್ರಭಾವಿಸಿತೆನ್ನುವ ಲೇಖಕರು ಒಟ್ಟಾರೆ ಅವರು ಸಾವನ್ನು ಧೇನಿಸುತ್ತಿದ್ದ ಲೇಖಕನಾಗಿದ್ದರು ಎನ್ನುತ್ತಾರೆ.

    ಲಂಕೇಶ್ ೨೦ ನೇ ಶತಮಾನದ ಕರ್ನಾಟಕ ಸೃಷ್ಟಿಸಿದ ಮುಖ್ಯ ಸಾಂಸ್ಕೃತಿಕ ವ್ಯಕ್ತಿಗಳಲ್ಲಿ ಒಬ್ಬರು ಎಂದೆನ್ನುವ ರಹಮತ್ ಲಂಕೇಶ್ ಅವರನ್ನು ಮೆಚ್ಚುವಂತೆ ಅವರಲ್ಲಿನ ವೈರುಧ್ಯಗಳತ್ತಲೂ ಬೆರಳು ಮಾಡುತ್ತಾರೆ. ಅನ್ಯರ ಭಿನ್ನಾಭಿಪ್ರಾಯಗಳನ್ನು ಕೇಳಿಸಿಕೊಳ್ಳುವ ಸಂಯಮವಾಗಲಿ ಮತ್ತು ಸಂವಾದವನ್ನು ಮುಂದುವರೆಸಲು ಬೇಕಾದ ತಾಳ್ಮೆಯಾಗಲಿ ಲಂಕೇಶ್ ಅವರಲ್ಲಿ ಇರಲಿಲ್ಲ ಎನ್ನುವ ತಕರಾರು ಲೇಖಕರದು. ಹೀಗಿದ್ದೂ ಲಂಕೇಶ್ ತನ್ನ ಕಾಲದ ಎಲ್ಲ ಯಜಮಾನಿಕೆ, ಬೂಟಾಟಿಕೆ, ಓಲೈಸಿಕೆಗಳ ವಿರುದ್ಧ ಬಹುದೊಡ್ಡ ನೈತಿಕಶಕ್ತಿಯಾಗಿದ್ದರು ಎಂದು ಬರೆಯುತ್ತಾರೆ. ನಮ್ಮಲ್ಲಿ ಲೇಖಕರು ಎಂದರೆ ಬರೆಯುವವರು ಮಾತ್ರ, ಮತ್ತೊಬ್ಬರು ಬರೆದದ್ದನ್ನು ಓದಬೇಕಾದವರಲ್ಲ ಎಂಬ ಗ್ರಹಿಕೆ ಇರುವಾಗ ಕನ್ನಡದಲ್ಲಿ ತಮ್ಮ ಕಾಲದ ಎಲ್ಲ ತಲೆಮಾರಿನ ಬರಹಗಾರರು ಬರೆದುದನ್ನು ಗಂಭೀರವಾಗಿ ಓದಿ ಪ್ರತಿಕ್ರಿಯಿಸುತ್ತಿದ್ದ ಕೆಲವೇ ಲೇಖಕರಲ್ಲಿ ಲಂಕೇಶ್ ಒಬ್ಬರಾಗಿದ್ದರು ಎಂದು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಾರೆ. ಶಂಕರ್ ಮೊಕಾಶಿ ಪುಣೇಕರ್ ಅವರ ಕುರಿತು ಬರೆಯುವಾಗ ಯಾವ ಟೀಕೆ ಟಿಪ್ಪಣೆಗೂ ಆಸ್ಪದವಿಲ್ಲದಂತೆ ಅವರ ವಿದ್ವತ್ತು ಮತ್ತು ಅವರೊಳಗಿನ ಭೋಳೆತನವನ್ನು ಅತ್ಯಂತ ಆಪ್ತವಾಗಿ ಬರೆಯುತ್ತಾರೆ. ಪುಣೇಕರರ 'ಗಂಗವ್ವ ಗಂಗಾಮಾಯಿ' ಕನ್ನಡದ ಶ್ರೇಷ್ಠ ಕಾದಂಬರಿ ಎಂದೆನ್ನುವ ಲೇಖಕರು ಅವರು ತಮ್ಮ ಬರಹದ ಬಗ್ಗೆ ಯಾವ ಮಮಕಾರವನ್ನೂ ಬೆಳೆಸಿಕೊಂಡಿರಲಿಲ್ಲ ಎನ್ನುತ್ತಾರೆ.

     ಪುಸ್ತಕದ ಕೊನೆಯ ಭಾಗದಲ್ಲಿ ಲೇಖಕರು ವಿವಿಧ ಸಾಹಿತ್ಯಕ ವಿದ್ಯಮಾನಗಳಿಗೆ ಪ್ರತಿಕ್ರಿಯೆಯಾಗಿ ಬರೆದ ಟಿಪ್ಪಣಿಗಳಿವೆ. ಲೇಖನದ ಪ್ರಾರಂಭದಲ್ಲಿ ಹೂವಿನಹಡಗಲಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ತಮ್ಮ ಅಧ್ಯಕ್ಷಿಯ ಭಾಷಣದಲ್ಲಿ ಕುಂವೀ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸುತ್ತ ರಹಮತ್ ಹಲವು ಪ್ರಶ್ನೆಗಳನ್ನೆತ್ತುತ್ತಾರೆ. ಹಗರಿಸೀಮೆಯ ಲೋಕ ಲೇಖಕನನ್ನು ಸೃಷ್ಟಿಸಬಲ್ಲದು ಎಂದು ಸಾಹಿತ್ಯಕ ಕಾರಣದಿಂದ ಮೆಚ್ಚುವಾಗ ಲೇಖಕ ಅದನ್ನು ವೈಭವೀಕರಿಸುತ್ತಿದ್ದಾನೆಯೋ ಅಥವಾ ಇದು ಬದಲಾಗಬೇಕು ಎಂಬ ದನಿಯನ್ನು ಹೊರಡಿಸುತ್ತಿದ್ದಾನೆಯೋ ಎಂದು ಪ್ರಶ್ನಿಸುತ್ತಾರೆ. ರಹಮತ್ ಅವರ ಪ್ರಕಾರ ವಿಶಿಷ್ಠ ಅನುಭವ ನೀಡುವ ಲೋಕವೊಂದೇ ಲೇಖಕನನ್ನು ರೂಪಿಸಲಾರದು. ಒಬ್ಬನನ್ನು ಕಥೆಗಾರನಾಗಿಸುವ ಪರಿಸರ ಮತ್ತು ಆ ಪರಿಸರವನ್ನು ಕತೆಯಾಗಿಸುವ ಮನುಷ್ಯ ಎರಡೂ ತಮ್ಮ ಒಳ ಅವಶ್ಯಕತೆಯಲ್ಲಿ ಏಕೀಭವಿಸಿದಾಗ ಮಾತ್ರ ಸಾಹಿತ್ಯ ಸೃಷ್ಟಿಯಾಗಬಲ್ಲದು. ಅಂಥದ್ದೊಂದು ಪ್ರಜ್ಞೆ ರೂಪುಗೊಳ್ಳುವುದು ಹೊರಗಿನ ನಾಗರಿಕ ಜಗತ್ತಿನಲ್ಲಿ ಎನ್ನುವ ಸ್ಪಷ್ಟ ನಿಲುವು ಅವರದು. ತಾನು ಲೇಖಕನಾಗಿ ರೂಪುಗೊಳ್ಳಲು ನೆರವಾಯಿತು ಎಂದು ಮೆಚ್ಚುಗೆವ್ಯಕ್ತಪಡಿಸುವಾಗ ಅನೇಕ ಸಲ ಆ ಪರಿಸರ (ಲೋಕ) ಆಧುನಿಕಗೊಳ್ಳಬೇಕಿಲ್ಲ ಎಂಬ ಅರ್ಥ ಹೊರಡುವ ಅಪಾಯವನ್ನು ಕುರಿತು ರಹಮತ್ ಇಲ್ಲಿ ಎಚ್ಚರಿಸುತ್ತಾರೆ.

    'ವಿಮರ್ಶೆ ಸೃಜನಶೀಲ ಸಾಹಿತ್ಯದಿಂದ ಕಲಿಯಬೇಕಾಗಿದೆ' ಎಂದ ಕವಿಯೊಬ್ಬರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಲೇಖಕರು  ಯಾರಿಂದ ಯಾರು ಕಲಿಯಬೇಕು ಎಂದು ಪ್ರಶ್ನಿಸುತ್ತಾರೆ. ಈ ಟಿಪ್ಪಣಿಯಲ್ಲಿ ವಿಮರ್ಶೆ ಎನ್ನುವುದು ಹೇಗಿರಬೇಕು ಎಂದು ವಿವರಿಸುತ್ತಾರೆ. ಜೊತೆಗೆ ಕನ್ನಡದಲ್ಲಿ ಸಧ್ಯದ ವಿಮರ್ಶಾ ಬರಹಗಳನ್ನು ವಿಶ್ಲೇಷಿಸಿ ವ್ಯಾಖ್ಯಾನಿಸುತ್ತಾರೆ. ಒಟ್ಟಾರೆ ರಹಮತ್ ಅವರಿಗೆ ಸಧ್ಯದ ವಾತಾವರಣದಲ್ಲಿ ವಿಮರ್ಶೆ ಎನ್ನುವುದು ಏಕಕಾಲಕ್ಕೆ ಬುದ್ಧಿ ಹೇಳಿಸಿಕೊಳ್ಳುವ ದಡ್ದನಂತೆ, ಪರಿಚಾರಿಕೆ ಮಾಡುವ ಊಳಿಗದವನಂತೆ, ಪ್ರಾಡೆಕ್ಟನ್ನು ಪ್ರಚಾರ ಮಾಡುವ ಜಾಹಿರಾತುದಾರನಂತೆ ಬಹುರೂಪಿಯಾಗಿ ಕಾಣುತ್ತದೆ. ತಮ್ಮ ಕೊನೆಯ ಟಿಪ್ಪಣಿಯಲ್ಲಿ ಲೇಖಕರು ಭೈರಪ್ಪನವರ ಕಾದಂಬರಿಗಳು ಹುಟ್ಟು ಹಾಕುವ ಪ್ರತಿಪಾದನೆಯನ್ನು ಕುರಿತು ಪ್ರತಿಕ್ರಿಯಿಸಿರುವರು. ಭೈರಪ್ಪನವರ ಹೆಸರು ಹಾಗೂ ಬದುಕಿನ ಹಿನ್ನೆಲೆಯನ್ನು ಆಧಾರವಾಗಿಟ್ಟುಕೊಂಡು ಇಂಥ ಭೈರಪ್ಪನವರು ಸೈದ್ದಾಂತಿಕವಾಗಿಯಾದರೂ ವರ್ಗವಾದಿ ಚಿಂತಕರಾಗಬೇಕಿತ್ತು ಆದರೆ ಅವರು ಎಡ ಚಿಂತನೆಯನ್ನು ವಿರೋಧಿಸುತ್ತಾರೆ ಎಂದು ವಿಮರ್ಶಿಸುತ್ತಾರೆ. ತಮ್ಮ ಐಡಿಯಾಲಜಿ ಮಂಡನೆಗಾಗಿ ಭೈರಪ್ಪನವರು ಪಾತ್ರಗಳನ್ನು ನಿರ್ದಯವಾಗಿ ಕುರೂಪಗೊಳಿಸಬಲ್ಲರು ಎಂದು ನುಡಿಯುವ ಲೇಖಕರು ಇದರಿಂದ ಒಬ್ಬ ಕಥೆಗಾರ ತನ್ನ ಇಂಟಿಗ್ರಿಟಿಯನ್ನು ಕಳೆದುಕೊಳ್ಳುವನು ಎಂದು ಆತಂಕ ವ್ಯಕ್ತಪಡಿಸುವರು. ಭೈರಪ್ಪನವರು ಕುರೂಪಗೊಳಿಸಿದ ಪಾತ್ರಗಳಿಗೆ ಉದಾಹರಣೆಯಾಗಿ ಅವರ ಕಾದಂಬರಿಗಳ ಕೆಲವು ಪಾತ್ರಗಳನ್ನು ಹೆಸರಿಸುವ ಲೇಖಕರು ಭೈರಪ್ಪನವರ ಕಾದಂಬರಿಗಳಿಗೂ ಹಾಗೂ ಸಂಘ ಪರಿವಾರಕ್ಕೂ ಸಂಬಂಧ ಕಲ್ಪಿಸುತ್ತಾರೆ. ಕನ್ನಡಕ್ಕೆ ಶ್ರೇಷ್ಠ ಕಾದಂಬರಿಗಳನ್ನು ಕೊಡುಗೆಯಾಗಿ ನೀಡಿರುವ ಒಬ್ಬ ಕಾದಂಬರಿಕಾರನ ಮೇಲೆ ರಹಮತ್ ಒಂದಿಷ್ಟು ಹೆಚ್ಚೆ ಎನ್ನುವಂತೆ ಪ್ರಹಾರ ಮಾಡಿರುವರು ಎನ್ನುವ ಧೋರಣೆ ನನ್ನದು.

    ಪುಸ್ತಕದಲ್ಲಿ ರಾಮಚಂದ್ರ ಶರ್ಮ, ಕಾರಂತ, ಬಸವಣ್ಣ, ರಾಘವಾಂಕ, ಮುಸ್ಲಿಂ ತತ್ವಪದಕಾರರು, ವಡ್ಡಾರಾಧನೆ ಕುರಿತು ವಿಮರ್ಶಾ ಲೇಖನಗಳಿವೆ. ಒಟ್ಟಿನಲ್ಲಿ ಕನ್ನಡದ ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತು ತಮ್ಮ ವಸ್ತುನಿಷ್ಠ ವಿಮರ್ಶೆಯಿಂದ ಪುಸ್ತಕದ ಎಲ್ಲ ಲೇಖನಗಳು ಓದುಗರಿಗೆ ಮಹತ್ವದ ಮಾಹಿತಿಯನ್ನೊದಗಿಸುತ್ತವೆ. ರಹಮತ್ ತರೀಕೆರೆ ಅವರ ಪ್ರಯತ್ನ, ಪೂರ್ವ ತಯ್ಯಾರಿ, ಆಳವಾದ ಅಧ್ಯಯನ, ಸಂಶೋಧನ ಮನೋಭಾವ, ವಸ್ತುನಿಷ್ಠ ಗ್ರಹಿಕೆ ಪ್ರತಿ ಲೇಖನದ ಓದಿನಲ್ಲೂ ಓದುಗನ ಅನುಭವಕ್ಕೆ ದಕ್ಕುತ್ತವೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ