God
and the Doctor we alike adore
But
only when in danger, not before;
The
danger over, both are alike requited,
God
is forgotten, and the Doctor slighted. — Robert Owen
ಭಾರತದಲ್ಲಿ ಪ್ರತಿವರ್ಷ ಜುಲೈ 1 ರಂದು ‘ವೈದ್ಯರ ದಿನ’ ಆಚರಿಸಲಾಗುತ್ತದೆ. ಮನುಷ್ಯನ ಜೀವ ಉಳಿಸುವ ವೈದ್ಯ ವೃತ್ತಿಯನ್ನು ಅತ್ಯಂತ ಪವಿತ್ರವೆಂದು ಭಾವಿಸಿದ ನೆಲವಿದು. ‘ವೈದ್ಯೋ ನಾರಾಯಣ ಹರಿ’ ಎಂದು ವೈದ್ಯರನ್ನು ದೇವರಿಗೆ ಸಮಾನವಾಗಿ ಪೂಜಿಸುವ ಭಾವನಾತ್ಮಕ ಹೃದಯ ಭಾರತೀಯರದು. ಖಾಸಗಿ ಆಸ್ಪತ್ರೆಗಳು ಮತ್ತು ಕಾರ್ಪೊರೇಟ್ ಆಸ್ಪತ್ರೆಗಳು ವೈದ್ಯಕೀಯ ವೃತ್ತಿಯನ್ನು ಬಂಡವಾಳ ಹೂಡಿ ಹಣಗಳಿಕೆಯ ಉದ್ಯಮವಾಗಿ ಪರಿಗಣಿಸಿರುವ ಈ ಸಂದರ್ಭ ‘ವೈದ್ಯೋ ನಾರಾಯಣ ಹರಿ’ ಎನ್ನುವ ಹೇಳಿಕೆ ಸವಕಲಾಗಿದೆ ಎನ್ನುವ ಸಿನಿಕತನ ಅನೇಕರಲ್ಲಿ ಮನೆ ಮಾಡಿಕೊಂಡಿದೆ. ಈ ಮಾತನ್ನು ಪೂರ್ಣವಾಗಿ ಅಲ್ಲಗಳೆಯುವಂತಿಲ್ಲ. ಮಹಾನಗರಗಳಲ್ಲಿ ಬೃಹತ್ ಕಟ್ಟಡಗಳಲ್ಲಿ ತಲೆ ಎತ್ತಿ ನಿಂತಿರುವ ಸುಸಜ್ಜಿತ ಆಸ್ಪತ್ರೆಗಳು ಇವತ್ತು ರೋಗಿಗಳಿಂದ ಹಣ ವಸೂಲಿಗಿಳಿದಿವೆ. ಇನ್ನೊಂದೆಡೆ ಸೌಲಭ್ಯಗಳಿಲ್ಲದ ಸರ್ಕಾರಿ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಆರೋಗ್ಯಕರ ಸೇವೆ ಎನ್ನುವುದು ಮರೀಚಿಕೆಯಾಗಿ ಗೋಚರವಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ಬಡವರು, ಅಸಹಾಯಕರು, ನಿರ್ಗತಿಕರು ಸಮಯಕ್ಕೆ ಸರಿಯಾಗಿ ಅಗತ್ಯದ ವೈದ್ಯಕೀಯ ಸೇವೆ ದೊರೆಯದೇ ಸಾಯುತ್ತಿರುವುದು ಸಹಜ ದೃಶ್ಯವಾಗಿ ಕಾಣಿಸುತ್ತಿದೆ. ಹಾಗೆಂದು ತೀರ ನಿರಾಶಾದಾಯಕ ವಾತಾವರಣ ಇಲ್ಲಿದೆ ಎಂದು ಭಾವಿಸುವಂತಿಲ್ಲ. ಕೆಲವು ಖಾಸಗಿ ಆಸ್ಪತ್ರೆಗಳಲ್ಲಿನ ವೈದ್ಯರಲ್ಲಿ ಬಡಜನರ ಸಮಸ್ಯೆಗಳಿಗೆ ಮಿಡಿಯುವ ಹೃದಯವಿದೆ. ಅನೇಕ ಸಂಘ ಸಂಸ್ಥೆಗಳು ಹಣ ದಾಹದಿಂದ ದೂರನಿಂತು ಜನ ಸೇವೆಯೇ ಜನಾರ್ಧನನ ಸೇವೆಯೆಂದು ತಿಳಿದು ಆಸ್ಪತ್ರೆಗಳನ್ನು ಸ್ಥಾಪಿಸಿ ಆ ಮೂಲಕ ಕೈಗೆಟುಕುವ ದರದಲ್ಲಿ ಮತ್ತು ಉಚಿತವಾಗಿ ಸಾರ್ವಜನಿಕರಿಗೆ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವ ಹಲವು ಉದಾಹರಣೆಗಳಿವೆ. ಅತ್ಯಂತ ಪವಿತ್ರವೂ ಮತ್ತು ಪೂಜ್ಯನೀಯವೂ ಆದ ವೈದ್ಯ ವೃತ್ತಿ ಹಣದಾಹಿಗಳ ಕೈಗೆ ಸಿಲುಕಿ ತನ್ನ ಮೂಲ ಸೇವಾ ಮನೋಭಾವವನ್ನೇ ಕಳೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಭಾರತದಲ್ಲಿ ವೈದ್ಯ ವೃತ್ತಿಗೆ ಒಂದು ಘನತೆ ತಂದಿತ್ತ ಡಾ.ಬಿ.ಸಿ.ರಾಯ್ ಅವರನ್ನು ಸ್ಮರಿಸಿಕೊಳ್ಳುವುದು ಇವತ್ತಿನ ತುರ್ತು ಅಗತ್ಯವಾಗಿದೆ. ಜುಲೈ 1 ಡಾ.ಬಿ.ಸಿ.ರಾಯ್ ಅವರ ಜನ್ಮ ದಿನವೂ ಹೌದು.
ಡಾ.ಬಿ.ಸಿ.ರಾಯ್ ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಈ ಹೆಸರು ಅಜರಾಮರ. ಡಾ.ಬಿಧಾನಚಂದ್ರ ರಾಯ್ ಜನಿಸಿದ್ದು ಜುಲೈ 1, 1882 ರಂದು ಬಿಹಾರದ ಪಾಟ್ನಾದಲ್ಲಿ. ಸುಸಂಸ್ಕೃತ ಮತ್ತು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಕುಟುಂಬದಲ್ಲಿ ಜನಿಸಿದ ಬಿಧಾನಚಂದ್ರ ರಾಯ್ ಅವರಿಗೆ ಬಾಲ್ಯದಿಂದಲೇ ಸಾರ್ವಜನಿಕ ಸೇವೆಯಲ್ಲಿ ಆಸಕ್ತಿಯಿತ್ತು. ಗಣೀತಶಾಸ್ತ್ರದಲ್ಲಿ ಪದವಿ ಶಿಕ್ಷಣ ಪೂರೈಸಿ ನಂತರ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಈ ಎರಡೂ ವಿಷಯಗಳಲ್ಲಿ ಅರ್ಹತೆಯ ಆಧಾರದ ಮೇಲೆ ಪ್ರವೇಶ ಪಡೆದ ಬಿಧಾನಚಂದ್ರ ರಾಯ್ ತಮ್ಮ ವ್ಯಾಸಂಗಕ್ಕಾಗಿ ಆರಿಸಿಕೊಂಡಿದ್ದು ವೈದ್ಯಕೀಯ ಕ್ಷೇತ್ರವನ್ನು. ತಮ್ಮೊಳಗಿನ ಸೇವಾಮನೋಭಾವವನ್ನು ಕಾರ್ಯರೂಪಕ್ಕೆ ತರಲು ವೈದ್ಯರಾಗಲು ಬಯಸಿದ ಬಿಧಾನಚಂದ್ರ ರಾಯ್ 1901 ರಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ಕಲ್ಕತ್ತದ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದರು. ಒಂದು ವೇಳೆ ರಾಯ್ ಅವರು ಇಂಜಿನಿಯರಿಂಗ್ ಕ್ಷೇತ್ರವನ್ನು ಆರಿಸಿಕೊಂಡಿದ್ದಲ್ಲಿ ಭಾರತ ಒಬ್ಬ ಸೇವಾ ಮನೋಭಾವದ ವೈದ್ಯನನ್ನು ಕಳೆದುಕೊಳ್ಳುತ್ತಿತ್ತು. ಕಲ್ಕತ್ತ ವೈದ್ಯಕೀಯ ಕಾಲೇಜಿನ ಪ್ರವೇಶ ದ್ವಾರದ ಬಳಿ ತೂಗುಹಾಕಿದ್ದ ಫಲಕದಲ್ಲಿನ ‘Whatever your hand finds to do, do it with all your might’ ಬರಹ ಬಿಧಾನಚಂದ್ರ ರಾಯ್ ಅವರ ಬದುಕಿನ ಗತಿಯನ್ನೇ ಬದಲಿಸಿತು. ವಿದ್ಯಾರ್ಥಿ ದೆಸೆಯಲ್ಲೇ ವೈದ್ಯಕೀಯ ಶಿಕ್ಷಣದ ನಂತರ ತಮ್ಮ ಬದುಕನ್ನೇ ಬಡವರ ಸೇವೆಗೆ ಮುಡುಪಾಗಿಡಲು ನಿರ್ಧರಿಸಿದರು. ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿ ಕೆಲವು ವರ್ಷಗಳ ಕಾಲ ಕಲ್ಕತ್ತದ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು. ಈ ಮಧ್ಯೆ ವಿರಾಮ ಸಮಯದಲ್ಲಿ ಖಾಸಗಿಯಾಗಿ ಕೇವಲ 2 ರೂಪಾಯಿಗಳ ಶುಲ್ಕ ಪಡೆದು ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಅತ್ಯಂತ ಜನಾನುರಾಗಿ ವೈದ್ಯರೆಂದು ಖ್ಯಾತಿ ಪಡೆದರು. ನಂತರದ ದಿನಗಳಲ್ಲಿ ಉನ್ನತ ಶಿಕ್ಷಣಕ್ಕಾಗಿ 1909 ರಲ್ಲಿ ಇಂಗ್ಲೆಂಡಿಗೆ ತೆರಳಿದ ಡಾ.ಬಿ.ಸಿ.ರಾಯ್ ವಿದೇಶದಲ್ಲಿ ಎಮ್.ಆರ್.ಪಿ.ಸಿ ಮತ್ತು ಎಫ್.ಆರ್.ಸಿ.ಎಸ್ ಪದವಿ ಪಡೆದು 1911 ರಲ್ಲಿ ಬಡಜನರಿಗೆ ಆರೋಗ್ಯ ಸೇವೆ ಒದಗಿಸಬೇಕೆನ್ನುವ ಮಹತ್ವಾಕಾಂಕ್ಷೆಯೊಂದಿಗೆ ತಾಯ್ನಾಡಿಗೆ ಮರಳಿದರು.
ಡಾ.ಬಿ.ಸಿ.ರಾಯ್ ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಯಾಗಿದ್ದ ಆ ದಿನಗಳು ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ದಟ್ಟವಾಗಿದ್ದ ಕಾಲವದು. ಗಾಂಧೀಜಿ ಅವರ ನೇತೃತ್ವದಲ್ಲಿ ಭಾರತೀಯರೆಲ್ಲ ಬ್ರಿಟಿಷರ ವಿರುದ್ಧ ‘ಮಾಡು ಇಲ್ಲವೆ ಮಡಿ’ ಎನ್ನುವ ಮನೋಭಾವದಿಂದ ತಮ್ಮನ್ನು ಭಾರತಾಂಬೆಗೆ ಸಮರ್ಪಿಸಿಕೊಂಡಿದ್ದರು. ಡಾ.ಬಿ.ಸಿ.ರಾಯ್ ಅವರಲ್ಲೂ ದೇಶ ಪ್ರೇಮ ದಟ್ಟವಾಗಿತ್ತು. ವಿದ್ಯಾರ್ಥಿ ದೆಸೆಯಲ್ಲೇ ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಆ ಸಂದರ್ಭ ಭಾರತೀಯರು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾದರೆ ಮಾತ್ರ ಸ್ವರಾಜ್ಯ ಭಾರತದ ಕಲ್ಪನೆ ಸಾಧ್ಯವೆಂದು ಅವರು ನಂಬಿದ್ದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾದ ಭಾರತೀಯರೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮನ್ನು ಸಮರ್ಪಿಸಿಕೊಂಡರೆ ದೇಶ ಸ್ವತಂತ್ರವಾಗುವ ದಿನಗಳೇನೂ ದೂರವಿಲ್ಲ ಎನ್ನುವ ನಂಬಿಕೆ ಡಾ.ಬಿ.ಸಿ.ರಾಯ್ ಅವರದಾಗಿತ್ತು. ಇದಕ್ಕಿರುವ ಏಕೈಕ ಪರಿಹಾರ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳನ್ನು ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಬೇಕೆನ್ನುವುದಾಗಿತ್ತು. ಪರಿಣಾಮವಾಗಿ ಪಶ್ಚಿಮ ಬಂಗಾಳದಲ್ಲಿ ಜಾಧವಪೂರ ಕ್ಷಯರೋಗ ಆಸ್ಪತ್ರೆ, ಚಿತ್ತರಂಜನ್ ಸೇವಾಸದನ, ಆರ್.ಜಿ.ಖಾರ್ ವೈದ್ಯಕೀಯ ಕಾಲೇಜು, ಕಮಲಾ ನೆಹರು ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆ ಹೀಗೆ ಹಲವಾರು ವೈದ್ಯಕೀಯ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿದರು. ಮಹಿಳೆಯರು ಮತ್ತು ಮಕ್ಕಳಿಗಾಗಿ 1926 ರಲ್ಲಿ ಪ್ರತ್ಯೇಕ ಆಸ್ಪತ್ರೆಯನ್ನೇ ಸ್ಥಾಪಿಸಿದರು. ಭಾರತದಲ್ಲಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗಾಗಿ ನಿಯಮಗಳನ್ನು ರೂಪಿಸಲು ಮತ್ತು ವೈದ್ಯಕೀಯ ಶಿಕ್ಷಣದ ಗುಣಮಟ್ಟವನ್ನು ಕಾಪಾಡಲು ಡಾ.ಬಿ.ಸಿ.ರಾಯ್ 1939 ರಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಿ 1945 ರ ವರೆಗೆ ಈ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ರಾಯ್ ಅವರು ಮಹೋನ್ನತ ಉದ್ದೇಶದಿಂದ ಸ್ಥಾಪಿಸಿದ ಮಂಡಳಿ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರದ ಕೂಪಕ್ಕೆ ಸಿಲುಕಿ ತನ್ನ ಮೂಲ ಉದ್ದೇಶವನ್ನೆ ಮರೆತದ್ದು ಬಹುದೊಡ್ಡ ದುರಂತ.
ಡಾ.ಬಿ.ಸಿ.ರಾಯ್ ದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಆ ಮೂಲಕ ಗಾಂಧೀಜಿ ಅವರಿಗೆ ನಿಕಟವರ್ತಿಯಾದರು. 1942 ರಲ್ಲಿ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿದ್ದ ಗಾಂಧೀಜಿ ಅವರು ಪೂನಾದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿದಾಗ ಅವರ ಆರೋಗ್ಯವನ್ನು ನೋಡಿಕೊಳ್ಳಲು ಡಾ.ಬಿ.ಸಿ.ರಾಯ್ ಕೂಡ ಈ ಚಳವಳಿಯಲ್ಲಿ ಭಾಗವಹಿಸಿದರು. ಪ್ರಾರಂಭದಲ್ಲಿ ಗಾಂಧೀಜಿ ಭಾರತೀಯ ಬಡ ಜನತೆಗೆ ಲಭ್ಯವಿರದ ವೈದ್ಯಕೀಯ ಸೇವೆಯನ್ನು ತಾವು ಪಡೆಯಲು ನಿರಾಕರಿಸುತ್ತಾರೆ. ‘ನಾನೇಕೆ ನಿಮ್ಮಿಂದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲಿ. ನನ್ನ ದೇಶದ ನಲವತ್ತು ಕೋಟಿ ಜನರಿಗೆ ನೀವು ಉಚಿತ ಚಿಕಿತ್ಸೆಯನ್ನು ನೀಡುವಿರಾ?’ ಎಂದ ಗಾಂಧೀಜಿ ಪ್ರಶ್ನೆಗೆ ಡಾ.ಬಿ.ಸಿ.ರಾಯ್ ಉತ್ತರಿಸಿದ್ದು ಹೀಗೆ ‘ಇಲ್ಲ ಬಾಪೂ ನಾನು ಎಲ್ಲ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡದೆ ಇರಬಹುದು. ಆದರೆ ನಾನು ಇಲ್ಲಿ ಬಂದಿರುವುದು ಮೋಹನದಾಸ ಕರಮಚಂದ ಗಾಂಧಿ ಎನ್ನುವ ವ್ಯಕ್ತಿಗೆ ಚಿಕಿತ್ಸೆ ನೀಡಲು ಅಲ್ಲ. ನಾನು ಚಿಕಿತ್ಸೆ ನೀಡುತ್ತಿರುವುದು ನನ್ನ ದೇಶದ ನಲವತ್ತು ಕೋಟಿ ಜನರನ್ನು ಪ್ರತಿನಿಧಿಸುತ್ತಿರುವ ಪರಮ ಪೂಜ್ಯ ಮನುಷ್ಯನಿಗೆ’ ಬಿ.ಸಿ.ರಾಯ್ ಅವರ ಮಾತುಗಳಿಂದ ಭಾವಪರವಶರಾದ ಗಾಂಧೀಜಿ ವೈದ್ಯಕೀಯ ಚಿಕಿತ್ಸೆಯನ್ನು ಸ್ವೀಕರಿಸಲು ಅನುಮತಿ ನೀಡುತ್ತಾರೆ. ಗಾಂಧೀಜಿ ಅವರೊಂದಿಗಿನ ಈ ನಿಕಟ ಒಡನಾಟವೇ ಡಾ.ಬಿ.ಸಿ.ರಾಯ್ ಅವರು ರಾಜಕೀಯ ಪ್ರವೇಶಿಸಲು ಪ್ರೇರಣೆಯಾಯಿತು.
ಭಾರತದ ಸ್ವಾತಂತ್ರ್ಯಾ ನಂತರ ಗಾಂಧೀಜಿ ಅವರ ಸಲಹೆ ಮೇರೆಗೆ ಡಾ.ಬಿ.ಸಿ.ರಾಯ್ 1948 ಜನೆವರಿ 23 ರಂದು ಪಶ್ಚಿಮ ಬಂಗಾಳದ ಎರಡನೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಡಾ.ಬಿ.ಸಿ.ರಾಯ್ ಮುಖ್ಯ ಮಂತ್ರಿಯಾದ ಆ ಸಂದರ್ಭ ಕೋಮು ದಳ್ಳುರಿ, ಆಹಾರದ ಕೊರತೆ, ನಿರುದ್ಯೋಗ, ಪೂರ್ವ ಪಾಕಿಸ್ತಾನದಿಂದ ವಲಸೆ ಬರುವ ನಿರಾಶ್ರಿತರು ಹೀಗೆ ಅನೇಕ ಸಮಸ್ಯೆಗಳು ಪಶ್ಚಿಮ ಬಂಗಾಳ ರಾಜ್ಯವನ್ನು ಕಾಡುತ್ತಿದ್ದವು. ಡಾ.ಬಿ.ಸಿ.ರಾಯ್ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಈ ಎಲ್ಲ ಸಮಸ್ಯೆಗಳನು ಹತ್ತಿಕ್ಕಿ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು. ಅನೇಕ ಯಶಸ್ವಿ ಕಾರ್ಯಯೋಜನೆಗಳ ಮೂಲಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಎಂದು ಸಾರ್ವಜನಿಕರ ಗೌರವಕ್ಕೆ ಪಾತ್ರರಾದರು. ತಮ್ಮ ಪ್ರಾಮಾಣಿಕ ಮತ್ತು ದಕ್ಷ ಆಡಳಿತದಿಂದ 1948 ರಿಂದ ತಮ್ಮ ಬದುಕಿನ ಕೊನೆಯ ದಿನಗಳವರೆಗೆ ಸುಮಾರು 14 ವರ್ಷಗಳ ಕಾಲ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ವೈದ್ಯಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಅನುಪಮ ಸೇವೆಗಾಗಿ 1961 ರಲ್ಲಿ ಡಾ.ಬಿ.ಸಿ.ರಾಯ್ ಅವರನ್ನು ಭಾರತ ಸರ್ಕಾರ ದೇಶದ ಅತ್ಯುನ್ನತ ಗೌರವ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು.
ಸ್ವಾತಂತ್ರ್ಯ ಹೋರಾಟಗಾರರಾಗಿ, ವೈದ್ಯರಾಗಿ, ವೈದ್ಯಕೀಯ ವಿಜ್ಞಾನದ ಶಿಕ್ಷಕರಾಗಿ, ಕಲ್ಕತ್ತ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿ, ಹಲವಾರು ಆಸ್ಪತ್ರೆಗಳ ಮತ್ತು ವೈದ್ಯಕೀಯ ಕಾಲೇಜುಗಳ ಸ್ಥಾಪಕರಾಗಿ, ಮುಖ್ಯ ಮಂತ್ರಿಯಾಗಿ ಹೀಗೆ ಹಲವು ಸಮಾಜೋದ್ಧಾರ ಕಾರ್ಯಗಳನ್ನು ನಿರ್ವಹಿಸಿದ ಡಾ.ಬಿ.ಸಿ.ರಾಯ್ 1962 ರ ಜುಲೈ 1 ರಂದು ನಿಧನರಾದರು. ತಮ್ಮ 80 ನೇ ಜನ್ಮದಿನದಂದು ಬೆಳಿಗ್ಗೆ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆ ನೀಡಿ ನಂತರ ಮುಖ್ಯಮಂತ್ರಿ ಕಚೇರಿಯಲ್ಲಿ ಆ ದಿನದ ರಾಜ್ಯದ ಕಾರ್ಯಭಾರವನ್ನು ನಿರ್ವಹಿಸಿ ರಾತ್ರಿ ಇಹಲೋಕವನ್ನು ತ್ಯಜಿಸಿದ ರಾಯ್ ತಮ್ಮ ಸಾವಿನ ದಿನದಂದೂ ಕರ್ತವ್ಯ ಪ್ರಜ್ಞೆಯನ್ನು ಮೆರೆದರು. ರಾಯ್ ಸಾವಿಗಿಂತ ಮೊದಲು ನಿಧನಾನಂತರ ತಮ್ಮ ಮನೆಯನ್ನು ಬಡವರ ಮತ್ತು ದೀನದಲಿತರ ಸೇವೆಗಾಗಿ ಆಸ್ಪತ್ರೆಯಾಗಿ ಉಪಯೋಗಿಸಬೇಕೆಂದು ಸರ್ಕಾರಕ್ಕೆ ದೇಣಿಗೆಯಾಗಿ ನೀಡಿದರು. ಅವರ ಆಸೆಯಂತೆ ಪಶ್ಚಿಮ ಬಂಗಾಳ ಸರ್ಕಾರ ರಾಯ್ ಅವರ ತಾಯಿಯ ಹೆಸರಿನಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿತು. ಈ ಮಹಾನ್ ಸಾಧಕನ ಸ್ಮರಣಾರ್ಥ ಭಾರತ ಸರ್ಕಾರ 1976 ರಿಂದ ವೈದ್ಯಕೀಯ, ಸಾಮಾಜಿಕ, ಸಾಹಿತ್ಯ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ‘ಡಾ.ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿ’ಯನ್ನು ಪ್ರತಿವರ್ಷ ನೀಡಿ ಗೌರವಿಸುತ್ತಿದೆ. ಡಾ.ಬಿ.ಸಿ.ರಾಯ್ ಅವರ ಜನ್ಮದಿನವಾದ ಜುಲೈ 1 ರಂದು ಭಾರತದಾದ್ಯಂತ ‘ವೈದ್ಯರ ದಿನ’ ಆಚರಿಸುವುದರ ಮೂಲಕ ಆ ವೈದ್ಯ ಬ್ರಹ್ಮನಿಗೆ ಗೌರವ ಸೂಚಿಸಲಾಗುತ್ತಿದೆ.
ಶಿಕ್ಷಣ ಕ್ಷೇತ್ರದಲ್ಲಿ ವ್ಯಾಪಾರೀಕರಣದ ಮನೋಭಾವ ದಟ್ಟವಾಗಿ ಬೆಳೆಯುತ್ತಿರುವ ಈ ಸಂದರ್ಭ ವಿದ್ಯಾರ್ಥಿಗಳಿಗೆ ವಿಶೇಷವಾಗಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಡಾ.ಬಿ.ಸಿ.ರಾಯ್ ಅವರಂಥ ಸೇವಾ ಮನೋಭಾವದ ಉನ್ನತ ವ್ಯಕ್ತಿತ್ವವನ್ನು ಪರಿಚಯಿಸುವ ಕೆಲಸ ಪ್ರತಿ ವೈದ್ಯಕೀಯ ಕಾಲೇಜುಗಳಲ್ಲಿ ಹಮ್ಮಿಕೊಳ್ಳುವುದು ಅಗತ್ಯವಾಗಿದೆ. ಇಂಥ ಸಾಧಕರ ಸ್ಮರಣೆಯಿಂದ ಕಲುಷಿತಗೊಳ್ಳುತ್ತಿರುವ ವ್ಯವಸ್ಥೆಯನ್ನು ಒಂದಿಷ್ಟಾದರೂ ಹಸನಾಗಿಸಲು ಸಾಧ್ಯ. ಈ ಮಹಾನ್ ಸಾಧಕನ ಸ್ಮರಣೆ ಕೇವಲ ‘ವೈದ್ಯರ ದಿನ’ಕ್ಕೆ ಮಾತ್ರ ಸೀಮಿತವಾಗದೆ ನಮ್ಮ ಪ್ರತಿ ನಿತ್ಯದ ಬದುಕಿನಲ್ಲಿ ಅವರು ದಾರಿದೀಪವಾಗಬೇಕು. ಇಂಥ ನಿಸ್ವಾರ್ಥ ಸಾಧಕರು ಹಾಕಿಕೊಟ್ಟ ಮಾರ್ಗದಲ್ಲಿ ನಾವುಗಳೆಲ್ಲ ನಡೆಯುವುದೇ ಡಾ.ಬಿ.ಸಿ.ರಾಯ್ ಅವರಂಥ ಮಹಾಚೇತನಕ್ಕೆ ನಾವು ಸಲ್ಲಿಸುವ ಗೌರವವಾಗಿದೆ.

- ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ , 9945975403
(ಜುಲೈ ೧, ೨೦೧೮ ರ ಸಂಯುಕ್ತ ಕರ್ನಾಟಕದಲ್ಲಿ ಪ್ರಕಟವಾಗಿದೆ)
No comments:
Post a Comment