Wednesday, August 1, 2018

ಸಿನಿಮಾ ಮತ್ತು ಸಾಹಿತ್ಯ





     







                  ಸಿನಿಮಾ ಮತ್ತು ಸಾಹಿತ್ಯ ಒಂದು ಭಾಷೆಯ ಅತ್ಯಂತ ಸಶಕ್ತ ಅಭಿವ್ಯಕ್ತಿ ಮಾಧ್ಯಮಗಳೆಂದು ಪರಿಗಣಿಸಲ್ಪಟ್ಟಿವೆ. ಒಂದು ನೆಲದ ಶೋಷಿತರ ಧ್ವನಿಯಾಗಿ ಅನೇಕ ಕೃತಿಗಳು ರಚನೆಯಾದಂತೆ ಇಲ್ಲಿ ಹಲವಾರು ಸಿನಿಮಾಗಳೂ ನಿರ್ಮಾಣಗೊಂಡಿವೆ. ಒಡಲಾಳ, ಚೋಮನ ದುಡಿ, ಗ್ರಾಮಾಯಣ ಕೃತಿಗಳು ಈ ನೆಲದ ಒಂದು ವರ್ಗದ ಶೋಷಣೆಯ ಬದುಕನ್ನು ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟ ಕಾದಂಬರಿಗಳಾದರೆ, ಸಿನಿಮಾ ಮಾಧ್ಯಮ ಒಂದಾನೊಂದು ಕಾಲದಲ್ಲಿ, ಮುನಿಯನ ಮಾದರಿ, ದೂರದ ಬೆಟ್ಟ ಇತ್ಯಾದಿ ಸಿನಿಮಾಗಳ ಮೂಲಕ ಶೋಷಣೆಯ ಬದುಕನ್ನು ಅತ್ಯಂತ ಕಲಾತ್ಮಕವಾಗಿ ಬೆಳ್ಳಿಪರದೆಯ ಮೇಲೆ ಕಟ್ಟಿಕೊಟ್ಟಿದೆ. ಹಲವಾರು ಕಾದಂಬರಿಗಳು ಸಿನಿಮಾಗಳಾಗಿಯೂ ರೂಪುಗೊಂಡಿದ್ದು ಸಿನಿಮಾ ಮತ್ತು ಸಾಹಿತ್ಯಕ್ಕಿರುವ ಸಂಬಂಧಕ್ಕೊಂದು ನಿದರ್ಶನವಾಗಿದೆ.

ಕಾದಂಬರಿ ಆಧಾರಿತ ಸಿನಿಮಾಗಳು

‘ಕರುಣೆಯೇ  ಕುಟುಂಬದ ಕಣ್ಣು’ ಕನ್ನಡದ ಪ್ರಥಮ ಕಾದಂಬರಿ ಆಧಾರಿತ ಸಿನಿಮಾ ಎನ್ನುವ ಹೆಗ್ಗಳಿಕೆಯೊಂದಿಗೆ ಅಪಾರ ಯಶಸ್ಸನ್ನು ಪಡೆದು ನಂತರದ ದಿನಗಳಲ್ಲಿ ಕಾದಂಬರಿ ಆಧಾರಿತ ಸಿನಿಮಾಗಳ ನಿರ್ಮಾಣಕ್ಕೆ ವೇದಿಕೆಯನ್ನು ರೂಪಿಸಿತು. ಕುಟುಂಬ ಪ್ರಧಾನ ಕಥನದ ಈ ಸಿನಿಮಾ ರಾಜಕುಮಾರ ಮತ್ತು ಲೀಲಾವತಿ ಅವರ ಅಭಿನಯದಿಂದ ಪ್ರೇಕ್ಷಕರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಪರಿಣಾಮವಾಗಿ ಕನ್ನಡ ಸಿನಿಮಾ ಮಾಧ್ಯಮ ಕನ್ನಡ ಕಾದಂಬರಿಗಳತ್ತ ನೋಡುವಂಥ ಹೊಸ ಆಶಾದಾಯಕ ಬೆಳವಣಿಗೆ ಕಾಣಿಸಿಕೊಂಡಿತು. ನಿರ್ಮಾಪಕರು ಮತ್ತು ನಿರ್ದೇಶಕರು ಮಾತ್ರವಲ್ಲದೆ ಜನಪ್ರಿಯ ಕಲಾವಿದರೂ ಕಾದಂಬರಿ ಆಧಾರಿತ ಸಿನಿಮಾಗಳಿಗೆ ಆದ್ಯತೆ ನೀಡತೊಡಗಿದರು. ಗಮನಿಸಬೇಕಾದ ಸಂಗತಿ ಎಂದರೆ ಆ ದಿನಗಳಲ್ಲಿನ ಸದಭಿರುಚಿಯ ಪ್ರೇಕ್ಷಕ ವರ್ಗ ಕೂಡ ಕಾದಂಬರಿ ಆಧಾರಿತ ಉತ್ತೇಜನ ನೀಡುತ್ತ ಗೆಲುವನ್ನು ತಂದುಕೊಡತೊಡಗಿದರು. ಟಿ.ಕೆ.ರಾಮರಾವ ಅವರ ‘ಬಂಗಾರದ ಮನುಷ್ಯ’ ಕಾದಂಬರಿ ಆಧಾರಿತ ಅದೇ ಹೆಸರಿನ ಸಿನಿಮಾ ರಾಜಕುಮಾರ ಅಭಿನಯದಲ್ಲಿ ನಿರ್ಮಾಣಗೊಂಡು ದಾಖಲೆಯ ಪ್ರದರ್ಶನ ಕಂಡಿತು. ಅಂಬರೀಶ್‍ಗೆ ನಾಯಕನಟನಾಗಿ ಬಡ್ತಿ ನೀಡಿದ ‘ಅಂತ’ ಸಿನಿಮಾ ಎಚ್.ಕೆ.ಅನಂತರಾಮ್ ಅವರ ಕಾದಂಬರಿ ಆಧಾರಿತ ಸಿನಿಮಾ ಎನ್ನುವುದು ಕನ್ನಡ ಕಾದಂಬರಿಗಳ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಅನಂತ ನಾಗ್ ಮತ್ತು ಲಕ್ಷ್ಮಿ ಅನೇಕ ಕುಟುಂಬ ಪ್ರಧಾನ ಕಥಾವಸ್ತುವಿನ ಸಿನಿಮಾಗಳಲ್ಲಿ ಅಭಿನಯಿಸಿ ಜನಪ್ರಿಯ ಜೋಡಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲು ಕಾದಂಬರಿ ಆಧಾರಿತ ಸಿನಿಮಾಗಳೇ ಪ್ರಮುಖ ಕಾರಣ ಎನ್ನುವುದು ಸಿನಿಮಾ ವಿಮರ್ಶಕರ ಅಭಿಮತ. 

ಕನ್ನಡ ಸಿನಿಮಾ ಮಾಧ್ಯಮದಲ್ಲಿ ಕೌಟುಂಬಿಕ ಕಥಾವಸ್ತುವಿನ ಸಿನಿಮಾಗಳಿಗೆ ಆದ್ಯತೆ ನೀಡಿದ ರಾಜಕುಮಾರ ಹಲವಾರು ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ನಟಿಸಿ ತಮ್ಮ ಬೇರೆ ಕಲಾವಿದರಿಗೆ ಮಾದರಿಯಾದರು. ಕನ್ನಡದ ಪ್ರಥಮ ಕಾದಂಬರಿ ಆಧಾರಿತ ‘ಕರುಣೆಯೇ ಕುಟುಂಬದ ಕಣ್ಣು’ ಸಿನಿಮಾದಲ್ಲಿ ಅಭಿನಯಿಸಿದ ಹೆಗ್ಗಳಿಕೆಯೊಂದಿಗೆ ರಾಜಕುಮಾರ ನಂತರದ ದಿನಗಳಲ್ಲಿ ಬಾಂಡ್ ಪಾತ್ರಗಳೆಡೆ ವಲಸೆ ಹೋದರೂ ಕನ್ನಡ ಸಾಹಿತ್ಯದ ಮೇಲಿನ ಪ್ರೀತಿಯನ್ನು ಬಿಟ್ಟು ಕೊಡಲಿಲ್ಲ. ನಿರ್ಮಾಪಕಿ ಪಾರ್ವತಮ್ಮನವರ ಸಮೃದ್ಧ ಓದಿನ ಹಿನ್ನೆಲೆಯಲ್ಲಿ ಆಗಾಗ ರಾಜಕುಮಾರ ಕಾದಂಬರಿ ಆಧಾರಿತ ಸಿನಿಮಾಗಳಲ್ಲಿ ಅಭಿನಯಿಸಿದರು. ಅನುರಾಗ ಅರಳಿತು, ಆಕಸ್ಮಿಕ, ಸಂಧ್ಯಾರಾಗ, ಚೆಂದವಳ್ಳಿಯ ತೋಟ, ದ್ರುವತಾರೆ, ಎರಡು ಕನಸು, ಹಣ್ಣೆಲೆ ಚಿಗುರಿದಾಗ ಇತ್ಯಾದಿ ಸಿನಿಮಾಗಳು ರಾಜಕುಮಾರ ಅಭಿನಯದ ಕಾದಂಬರಿ ಆಧಾರಿತ ಸಿನಿಮಾಗಳಿಗೆ ಕೆಲವು ಉದಾಹರಣೆಗಳು. ರಾಜಕುಮಾರ ಅಭಿನಯದ ಐತಿಹಾಸಿಕ ಸಿನಿಮಾಗಳಾದ ಹುಲಿಯ ಹಾಲಿನ ಮೇವು ಮತ್ತು ಮಯೂರ ಕಾದಂಬರಿ ಆಧಾರಿತ ಸಿನಿಮಾಗಳೆನ್ನುವುದು ವಿಶೇಷ. ಮೂರು ವರ್ಷಗಳ ಅಜ್ಞಾತವಾಸದ ನಂತರ ರಾಜಕುಮಾರ ಮತ್ತೆ ಅಭಿನಯಕ್ಕಾಗಿ ಬಣ್ಣ ಹಚ್ಚಿದ ಸಿನಿಮಾ ‘ಜೀವನ ಚೈತ್ರ’ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಅವರ ಕಾದಂಬರಿ ಆಧಾರಿತವಾಗಿತ್ತು. ಶಿವರಾಮ ಕಾರಂತರ ‘ಚಿಗುರಿದ ಕನಸು’ ಕಾದಂಬರಿಯನ್ನು ಬೆಳ್ಳಿತೆರೆಗೆ ತರಬೇಕೆನ್ನುವ ಕೈಗೂಡದೆ ಹೋದ ರಾಜಕುಮಾರ ಅವರ ಕನಸನ್ನು ನಾಗಾಭರಣ ನಿರ್ದೇಶನದಲ್ಲಿ ಶಿವರಾಜಕುಮಾರ ಅಭಿನಯದ ಮೂಲಕ ನನಸಾಗಿಸಿದ್ದು ಪಾರ್ವತಮ್ಮನವರ ಸಾಹಿತ್ಯ ಪ್ರೀತಿಗೊಂದು ದೃಷ್ಟಾಂತ.  

ಆರಂಭದ ದಿನಗಳಲ್ಲಿ ಖಳ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಅಂಬರೀಶ್‍ಗೆ ಎಚ್.ಕೆ.ಅನಂತರಾಮ್ ಅವರ ಕಾದಂಬರಿ ಆಧಾರಿತ ‘ಅಂತ’ ಸಿನಿಮಾ ನಾಯಕನಟನಾಗಿ ಬಡ್ತಿ ನೀಡಿದರೆ, ತ.ರಾಸು ಅವರ ಕಾದಂಬರಿ ಆಧಾರಿತ ‘ನಾಗರ ಹಾವು’ ಸಿನಿಮಾ ಭರ್ಜರಿ ಯಶಸ್ಸನ್ನು ಗಳಿಸುವುದರೊಂದಿಗೆ ಕನ್ನಡಕ್ಕೆ ವಿಷ್ಣುವರ್ಧನ್ ಎನ್ನುವ ಸ್ಪುರದ್ರೂಪಿ ನಟನ ಆಗಮನವಾಯಿತು. ನಿರ್ದೇಶಕ ಸಿದ್ಧಲಿಂಗಯ್ಯ ತಮ್ಮ ಪುತ್ರ ಮುರಳಿಯನ್ನು ನಾಯಕ ನಟನಾಗಿ ಪರಿಚಯಿಸಿದ ಸಿನಿಮಾ ‘ಪ್ರೇಮ ಪರ್ವ’ ಬಿ.ಎಲ್.ವೇಣು ಅವರ ಕಾದಂಬರಿ ಆಧಾರಿತ ಎನ್ನುವುದು ಮರೆಯುವಂತಿಲ್ಲ. ಕನ್ನಡ ಸಿನಿಮಾ ಮಾಧ್ಯಮಕ್ಕೆ ಶಂಕರನಾಗ ಅವರಂಥ ಪ್ರಯೋಗಶೀಲ ನಟ ಮತ್ತು ನಿರ್ದೇಶಕನನ್ನು ಕೊಡುಗೆಯಾಗಿ ನೀಡಿದ ‘ಒಂದಾನೊಂದು ಕಾಲದಲ್ಲಿ’ ಕೂಡ ಕನ್ನಡ ಸಾಹಿತ್ಯ ಕೃತಿಯಾಧಾರಿತ ಸಿನಿಮಾ. 

ಕನ್ನಡ ಸಿನಿಮಾ ಮಾಧ್ಯಮ ಹೆಣ್ಣಿನ ತಲ್ಲಣ ಮತ್ತು ಒಳತೋಟಿಯನ್ನು ಸಶಕ್ತವಾಗಿ ಸಿನಿಮಾ ಪರದೆಗೆ ತಂದದ್ದು ಕಾದಂಬರಿಗಳ ಮೂಲಕವೇ ಸಾಧ್ಯವಾಯಿತು ಎನ್ನುವುದು ಗಮನಾರ್ಹ. ಎಂ.ಕೆ.ಇಂದಿರಾ, ವಾಣಿ, ಸಾಯಿಸುತೆ, ಹೆಚ್.ಜಿ.ರಾಧಾದೇವಿ, ತ್ರಿವೇಣಿ ಅವರ ಕಾದಂಬರಿಗಳು ಸಿನಿಮಾಗಳಾಗಿ ನಿರ್ಮಾಣಗೊಂಡು ಶೋಷಣೆಗೆ ಒಳಗಾದ ಹೆಣ್ಣಿನ ಬದುಕನ್ನು ಬೆಳ್ಳಿ ಪರದೆಯ ಮೇಲೆ ಅನಾವರಣಗೊಳಿಸಿದವು. ಶುಭ ಮಂಗಳ, ಬೆಸುಗೆ, ಶರ ಪಂಜರ, ಹೊಂಬಿಸಿಲು, ಗೆಜ್ಜೆ ಪೂಜೆ, ಬೆಳ್ಳಿ ಮೋಡ, ಹೂವು ಹಣ್ಣು ಇತ್ಯಾದಿ ಕಾದಂಬರಿ ಆಧಾರಿತ ಸಿನಿಮಾಗಳು ಹೆಣ್ಣಿನ ಸಂವೇದನೆಯನ್ನು ಅಭಿವ್ಯಕ್ತಿಸುವುದರೊಂದಿಗೆ ಕನ್ನಡದಲ್ಲಿ ಮಹಿಳಾ ಪ್ರಧಾನ ಸಿನಿಮಾಗಳ ನಿರ್ಮಾಣಕ್ಕೆ ನಾಂದಿ ಹಾಡಿದವು. ತ್ರಿವೇಣಿ ಅವರ ಕಾದಂಬರಿಗಳು ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದಲ್ಲಿ ಸಿನಿಮಾಗಳಾಗಿ ಕನ್ನಡ ಚಿತ್ರರಂಗದ ವಿಶಿಷ್ಠ ಮಹಿಳಾ ಪ್ರಧಾನ ಸಿನಿಮಾಗಳೆಂಬ ಹಿರಿಮೆಗೆ ಪಾತ್ರವಾದವು. ಕಲ್ಪನಾ, ಆರತಿ, ಲಕ್ಷ್ಮಿ ಯಶಸ್ವಿ ಕಲಾವಿದೆಯರಾಗಿ ಪ್ರವರ್ಧಮಾನಕ್ಕೆ ಬರಲು ಕಾದಂಬರಿ ಆಧಾರಿತ ಸಿನಿಮಾಗಳ ಕೊಡುಗೆಯೂ ಬಹಳಷ್ಟಿದೆ. ಲಂಕೇಶ್ ಅವರ ‘ಸಂಕ್ರಾಂತಿ’, ‘ದೇವೆರಿ’, ಗೀತಾ ನಾಗಭೂಷಣರ ‘ಹಸಿಮಾಂಸ ಮತ್ತು ಹದ್ದುಗಳು’, ನಾ.ಡಿಸೋಜಾರ ‘ದ್ವೀಪ’ ಕಾದಂಬರಿಗಳು ಸಿನಿಮಾಗಳಾಗಿ ಹೆಣ್ಣನ್ನು ಬಂಡಾಯದ ಹಿನ್ನೆಲೆಯಲ್ಲಿ ದಿಟ್ಟ ಹೋರಾಟಗಾರ್ತಿಯಾಗಿ ಚಿತ್ರಿಸಿದವು.

ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದ ಅನೇಕ ಕಲಾತ್ಮಕ ಸಿನಿಮಾಗಳಿಗೆ ಕನ್ನಡ ಸಾಹಿತ್ಯದ ಕಾದಂಬರಿ ಲೋಕ ಒತ್ತಾಸೆಯಾಗಿ ನಿಂತಿದ್ದು ಉಲ್ಲೇಖಿಸಲೆಬೇಕಾದ ಸಂಗತಿಯಾಗಿದೆ. ಅನಂತಮೂರ್ತಿ, ಎಸ್.ಎಲ್.ಭೈರಪ್ಪ, ಪೂರ್ಣಚಂದ್ರ ತೇಜಸ್ವಿ, ಶ್ರೀಕೃಷ್ಣ ಆಲನಹಳ್ಳಿ ಇತ್ಯಾದಿ ಲೇಖಕರ ಕಾದಂಬರಿಗಳು ಕಲಾತ್ಮಕ ಸಿನಿಮಾಗಳಾಗಿ ನಿರ್ಮಾಣಗೊಂಡು ಗೌರವ ಮತ್ತು ಮನ್ನಣೆಗೆ ಪಾತ್ರವಾಗಿವೆ. ಕಾದಂಬರಿ ಆಧಾರಿತ ಸಿನಿಮಾಗಳಾದ ಸಂಸ್ಕಾರ, ಅವಸ್ಥೆ, ಬರ, ನಾಯಿ ನೆರಳು, ತಬ್ಬಲಿಯು ನೀನಾದೆ ಮಗನೆ, ತಬರನ ಕಥೆ, ಕಾಡು, ಘಟಶ್ರಾದ್ಧ ಕಲಾತ್ಮಕ ಸಿನಿಮಾ ಲೋಕದ ಮಹತ್ವದ ಮೈಲಿಗಲ್ಲುಗಳು ಎನ್ನುವ ಕೀರ್ತಿಗೆ ಭಾಜನವಾಗಿವೆ. ಕನ್ನಡದ ಅನೇಕ ಕಾದಂಬರಿಗಳು ಕಲಾತ್ಮಕ ಸಿನಿಮಾಗಳಾಗಿ ನಿರ್ಮಾಣಗೊಳ್ಳುವುದರ ಮೂಲಕ ಸದಭಿರುಚಿಯ ಪ್ರೇಕ್ಷಕ ವರ್ಗವೊಂದು ಬೆಳೆಯಲು ಕನ್ನಡ ಸಾಹಿತ್ಯ ಪ್ರಪಂಚ ಕಾರಣವಾಗಿದೆ ಎನ್ನುವುದು ಮರೆಯುವಂತಿಲ್ಲ.

ಕನ್ನಡದ ಕವಿತೆಗಳು

ಸಿನಿಮಾಗಳ ನಿರ್ಮಾಣಕ್ಕೆ ಕನ್ನಡ ಕಾದಂಬರಿಗಳು ಬಳಕೆಯಾದಷ್ಟು ಸಿನಿಮಾಗಳಲ್ಲಿ ಕನ್ನಡ ಕವಿತೆಗಳನ್ನು ಉಪಯೋಗಿಸಿದ್ದು ಬಹಳಷ್ಟು ಕಡಿಮೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಮನೋರಂಜನೆಯೇ  ಪ್ರಧಾನವಾದ ಸಿನಿಮಾ ಮಾಧ್ಯಮದಲ್ಲಿ ಪ್ರೇಕ್ಷಕರನ್ನು ಸಿನಿಮಾ ಮಂದಿರಗಳತ್ತ ಸೆಳೆಯುವುದೇ ಸಿನಿಮಾ ಹಾಡುಗಳ ಉದ್ದೇಶವಾಗಿರುವುದರಿಂದ ಇಲ್ಲಿ ನಿರ್ದೇಶಕರು ಕನ್ನಡ ಕವಿತೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಿಕೊಳ್ಳುತ್ತಿಲ್ಲ. ಜೊತೆಗೆ ರಾಗಕ್ಕೆ ಅನುಗುಣವಾಗಿ ಸಿನಿಮಾ ಹಾಡುಗಳನ್ನು ಬರೆಯುವ ಸಂಪ್ರದಾಯವಿರುವುದರಿಂದ ಈ ಮೊದಲೆ ರಚನೆಯಾದ ಕನ್ನಡ ಕವಿತೆಗಳು ಸಂಗೀತ ನಿರ್ದೇಶಕರ ರಾಗಗಳಿಗೆ ಹೊಂದಿಕೊಳ್ಳದೇ ಹೋದದ್ದು ಕೂಡ ಒಂದು ಕಾರಣವಾಗಿರಬಹುದು. ಸಿನಿಮಾ ಹಾಡುಗಳಲ್ಲಿ ಪದಗಳಿಗಿಂತ ಸಂಗೀತಕ್ಕೇ ಹೆಚ್ಚಿನ ಪ್ರಾಧಾನ್ಯತೆಯಿರುವುದರಿಂದ ಅನೇಕ ಸಾಹಿತಿಗಳು ಸಿನಿಮಾ ಹಾಡುಗಳನ್ನು ಬರೆಯಲು ಒಪ್ಪಿಕೊಳ್ಳದೇ ಇರುವುದು ಇನ್ನೊಂದು ಕಾರಣವಾಗಿದೆ. ಈ ಎಲ್ಲ ವಿಪರ್ಯಾಸಗಳ ನಡುವೆಯೂ ಕನ್ನಡದ ಕೆಲವು ಮಹತ್ವದ ಕವಿತೆಗಳನ್ನು ಸಿನಿಮಾ ಮಾಧ್ಯಮ ಉಪಯೋಗಿಸಿಕೊಂಡಿದ್ದು ಪ್ರಶಂಸನೀಯ. ಕುವೆಂಪು, ದ.ರಾ.ಬೇಂದ್ರೆ, ಜಿ,ಎಸ್.ಶಿವರುದ್ರಪ್ಪ, ಪಿ.ಲಂಕೇಶ್, ದೊಡ್ಡರಂಗೇಗೌಡರ ಕೆಲವು ಕವಿತೆಗಳು ಸಿನಿಮಾ ಹಾಡುಗಳಾಗಿ ಜನಪ್ರಿಯವಾಗಿವೆ. ಬೆಳ್ಳಿಮೋಡ, ಶರಪಂಜರ, ಹೊಸಬೆಳಕು, ಮಿಸ್ ಲೀಲಾವತಿ, ಆಲೆಮನೆ, ಕಾಕನ ಕೋಟೆ, ಎಲ್ಲಿಂದಲೋ ಬಂದವರು, ಮಾನಸ ಸರೋವರ ಸಿನಿಮಾಗಳಲ್ಲಿ ಕನ್ನಡ ಕವಿತೆಗಳನ್ನು ಸಂದರ್ಭಕ್ಕನುಗುಣವಾಗಿ ಚಿತ್ರಿಸಿ ಸಿನಿಮಾ ಮಾಧ್ಯಮ ತನ್ನ ಸೃಜನಶೀಲತೆಯನ್ನು ಮೆರೆದಿದೆ. ಮೂಡಲ ಮನೆಯ ಮುತ್ತಿನ ನೀರಿನ, ಹಾಡು ಹಳೆಯದಾದರೇನು, ತೆರೆದಿದೆ ಮನೆ ಓ ಬಾ ಅತಿಥಿ, ದೋಣಿ ಸಾಗಲಿ ಮುಂದೆ ಹೋಗಲಿ, ನೇಸರ ನೋಡು, ನಮ್ಮೂರ ಮಂದಾರ ಹೂವೆ, ಕೆಂಪಾದವೋ ಎಲ್ಲ ಕೆಂಪಾದವೋ ಕವಿತೆಗಳು ಸಿನಿಮಾ ಹಾಡುಗಳಾಗಿ ಚಿತ್ರರಸಿಕರ ನೆನಪಿನಲ್ಲಿ ಹಚ್ಚ ಹಸಿರಾಗಿವೆ. ಕೆ.ಎಸ್.ನರಸಿಂಹ ಸ್ವಾಮಿ ಅವರ ‘ಮೈಸೂರು ಮಲ್ಲಿಗೆ’ ಕವನ ಸಂಕಲನ ಆಧರಿಸಿ ಅದೇ ಹೆಸರಿನ ಸಿನಿಮಾ ನಿರ್ಮಾಣಗೊಂಡದ್ದು ಕನ್ನಡದಲ್ಲಿ ಅದೊಂದು ವಿಶಿಷ್ಠ ಪ್ರಯೋಗ ಎನಿಸಿತು.

ಸಾಹಿತಿಗಳ ಸಿನಿಮಾ ಪ್ರೀತಿ

ಕನ್ನಡ ಸಾಹಿತ್ಯದಲ್ಲಿ ಸಿನಿಮಾವನ್ನು ಒಂದು ಸೃಜನಶೀಲ ಮಾಧ್ಯಮವೆಂದು ಒಪ್ಪಿಕೊಳ್ಳುವ ಬರಹಗಾರರ ಸಂಖ್ಯೆ ಬಹಳಷ್ಟು ಕಡಿಮೆ. ಸಿನಿಮಾ ಅದೊಂದು ಮನೋರಂಜನಾ ಮಾಧ್ಯಮ, ಸೃಜನಶೀಲತೆಗಿಂತ ಜನಪ್ರಿಯತೆಯೇ  ಇಲ್ಲಿ ಮಾನದಂಡ, ಕಲೆ ಎನ್ನುವುದು ಬಿಕರಿಯಾಗುತ್ತಿರುವ ಸರಕು ಹೀಗೆ ಹಲವು ಕಾರಣಗಳಿವೆ. ಈ ಎಲ್ಲ ಕಾರಣಗಳ ನಡುವೆಯೂ ಲಂಕೇಶ್, ಶೇಷಗೀರಿರಾವ್, ದೊಡ್ಡರಂಗೇಗೌಡ, ಬರಗೂರು ರಾಮಚಂದ್ರಪ್ಪ, ನಾಗತಿಹಳ್ಳಿ ಚಂದ್ರಶೇಖರ ಇತ್ಯಾದಿ ಸಾಹಿತಿಗಳ ಸಿನಿಮಾ ಪ್ರೀತಿ ಮತ್ತು ಒಲವು ಶ್ಲಾಘನೀಯ. ನಿರ್ದೇಶಕ ಮನುಷ್ಯನ ಅನಿರೀಕ್ಷಿತ ಪದರುಗಳಿಗೆ ತನ್ನ ಒಳನೋಟವನ್ನು ಹರಿಸಿದಾಗ ಮಾತ್ರ ಅತ್ಯುತ್ತಮ ಸಿನಿಮಾಗಳ ಕಾಣ್ಕೆ ಸಾಧ್ಯ ಎನ್ನುತ್ತಾರೆ ಲಂಕೇಶ್. 1969 ರಲ್ಲಿ ಲಂಕೇಶ್ ‘ಸಂಸ್ಕಾರ’ ಸಿನಿಮಾದಲ್ಲಿ ಅಭಿನಯಿಸುವುದರೊಂದಿಗೆ ಸಿನಿಮಾದೊಂದಿಗಿನ ಅವರ ನಂಟು ಪ್ರಾರಂಭವಾಯಿತು. ‘ಸಂಸ್ಕಾರ ನನ್ನ ಆಳದಲ್ಲಿ ಟಿಪ್ಪಣಿಗಳಾಗಿ, ಹಲವಾರು ಶಾಟ್‍ಗಳ ತುಣುಕುಗಳಾಗಿ ನನ್ನಲ್ಲಿ ನಿಂತು ಹೋಯಿತು. ಆದರೆ ನನ್ನ ಅಂತರಾಳ ಏನನ್ನೂ ಸೃಷ್ಟಿಸಲಾಗದ ಹತಾಶೆಯಿಂದ ಅಲ್ಲೋಲಕಲ್ಲೋಲವಾಗಿತ್ತು’ ಎಂದೆನ್ನುವ ಲಂಕೇಶ್ ಮುಂದೆ ‘ಪಲ್ಲವಿ’, ‘ಅನುರೂಪ’, ‘ಎಲ್ಲಿಂದಲೋ ಬಂದವರು’ ಸಿನಿಮಾಗಳ ಮೂಲಕ ತನ್ನೊಳಗಿನ ಹತಾಶೆಯನ್ನು ಶಮನಗೊಳಿಸಲು ಪ್ರಯತ್ನಿಸಿದರು. ಬರವಣಿಗೆಯಷ್ಟೇ ಸಿನಿಮಾವನ್ನು ಉತ್ಕಟವಾಗಿ ಪ್ರೀತಿಸುವ ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶಕರಾಗಿ ಇವತ್ತಿಗೂ ಸಿನಿಮಾ ಮಾಧ್ಯಮದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವರು. ಸಿನಿಮಾ ಮಾಧ್ಯಮದ ಸಿದ್ಧಸೂತ್ರವನ್ನು ಮುರಿದು ಸೃಜನಶೀಲತೆಯ ನೆಲೆಯಲ್ಲಿ ಸಿನಿಮಾ ರೂಪಿಸುವ ನಾಗತಿಹಳ್ಳಿ ಚಂದ್ರಶೇಖರ ಅವರ ಮನೋಭಾವಕ್ಕೆ ಅವರು ನಿರ್ದೇಶಿಸಿದ ಅನೇಕ ಸಿನಿಮಾಗಳು ಸಾಕ್ಷಿಯಾಗಿವೆ. ವ್ಯಾಪಾರಿ ಸಿನಿಮಾಗಳ ಮಾನದಂಡಕ್ಕೆ ಒಳಪಡದೇ ನಿರ್ಮಾಣಗೊಂಡ ‘ದೊರೆ’ ಮತ್ತು ‘ಹಗಲು ವೇಷ’ ಸಿನಿಮಾ ಮಾಧ್ಯಮಕ್ಕೆ ಬರಗೂರು ರಾಮಚಂದ್ರಪ್ಪನವರ ವಿಶಿಷ್ಠ ಕೊಡುಗೆಗಳಾಗಿವೆ.

ಗೋಕಾಕ ಚಳವಳಿ

ಕನ್ನಡ ನಾಡು ನುಡಿಗೆ ಸಂಕಷ್ಟ ಎದುರಾದಾಗಲೆಲ್ಲ ಬರಹಗಾರರು ಮತ್ತು ಸಿನಿಮಾ ಕಲಾವಿದರು ಒಂದಾಗಿ ನಿಂತಿದ್ದು ಬಹಳ ಅಪರೂಪ. ಗೋಕಾಕ ಚಳವಳಿ ಮಾತ್ರ ಈ ಮಾತಿಗೆ ಅಪವಾದವೆನ್ನುವಂತೆ ಈ ನೆಲದಲ್ಲಿ ರೂಪುಗೊಂಡ ಹೋರಾಟವಾಗಿದೆ. ಕನ್ನಡ ಭಾಷೆ ಮತ್ತು ನೆಲಕ್ಕೆ ಸಂಕಷ್ಟವೆದುರಾದ ಆ ಸಂದಿಗ್ಧ ಸ್ಥಿತಿಯಲ್ಲಿ ಸಿನಿಮಾ ಕಲಾವಿದರು ಮತ್ತು ಬರಹಗಾರರು ಒಂದಾಗಿ ಹೋರಾಟಕ್ಕಿಳಿದಿದ್ದು ಕರ್ನಾಟಕದ ಇತಿಹಾಸದಲ್ಲಿ ಅದೊಂದು ಅವಿಸ್ಮರಣೀಯ ಘಟನೆ. ಇದು ನಡೆದದ್ದು 1982 ರಲ್ಲಿ. ಕನ್ನಡ ಭಾಷೆಗೆ ಸಂಬಂಧಿಸಿದಂತೆ ಗೋಕಾಕ ಸಮಿತಿಯ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ಕನ್ನಡ ಸಾಹಿತಿಗಳೆಲ್ಲ ಚಳವಳಿಗೆ ಮುಂದಾದರು. ಆದರೆ ಅಂದು ಅವರ ಮುಂದಿದ್ದ ಪ್ರಶ್ನೆ ಜನರನ್ನು ಹೇಗೆ ಒಂದುಗೂಡಿಸುವುದು ಎನ್ನುವುದಾಗಿತ್ತು. ಆಗ ಸಾಹಿತ್ಯ ಲೋಕಕ್ಕೆ ಗೋಚರಿಸಿದ್ದು ರಾಜಕುಮಾರ ಅವರ ಹೆಸರು. ಸಾಹಿತಿಗಳ ಕರೆಗೆ ಓಗೊಟ್ಟು ರಾಜಕುಮಾರ ಸಿನಿಮಾ ಕಲಾವಿದರೊಂದಿಗೆ ಚಳವಳಿಗೆ ಧುಮಿಕಿದರು. ನ ಭೂತೋ ನ ಭವಿಷ್ಯತಿ ಎನ್ನುವಂತೆ ಚಳವಳಿ ಯಶಸ್ವಿಯಾಯಿತು. ನಾಡಿನ ಮೂಲೆ ಮೂಲೆಗೂ ಹೋದ ಚಳವಳಿಗಾರರು ಕನ್ನಡ ಪ್ರೇಮವನ್ನು ಜಾಗೃತಗೊಳಿಸಿದರು. ರಾಜಕುಮಾರ ಅವರ ಹಿಂದೆ ಇಡೀ ಚಿತ್ರರಂಗ ಮತ್ತು ಸಾಹಿತ್ಯ ವಲಯ ಬೆಂಗಾವಲಾಗಿ ನಿಂತಿತ್ತು. ಚಳವಳಿಯ ತೀವ್ರತೆಗೆ ಮಣಿದ ಸರ್ಕಾರ ಗೋಕಾಕ ಸಮಿತಿಯಲ್ಲಿನ ಎಲ್ಲ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವ ಭರವಸೆ ನೀಡಿತು.

ಕಾಲ ಬದಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಸೃಜನಶೀಲ ಮನಸ್ಸುಗಳು ಕಣ್ಮರೆಯಾಗಿವೆ. ಸಿನಿಮಾ ಮಾಧ್ಯಮ ಉದ್ಯಮವಾಗಿ ಬದಲಾಗಿ ಬಂಡವಾಳ ಹೂಡಿ ಲಾಭ ಗಳಿಸಬೇಕೆನ್ನುವ ವ್ಯಾಪಾರಿ ಮನೋಭಾವ ಢಾಳುಢಾಳಾಗಿ ಗೋಚರಿಸುತ್ತಿದೆ. ಒಂದು ವರ್ಗದ ಸದಭಿರುಚಿಯ ಪ್ರೇಕ್ಷಕರು ಅಂತರರಾಷ್ಟ್ರೀಯ ಸಿನಿಮಾಗಳೆಡೆ ವಲಸೆ ಹೋಗಿರುವರು. ಸಿನಿಮಾದ ಜನಪ್ರಿಯತೆ ಮತ್ತು ಜನಾಕರ್ಷಣೆಯ ನಡುವೆಯೂ ಸೃಜನಶೀಲ ಬರಹಗಾರರು ಸಿನಿಮಾದಿಂದ ಒಂದು ಅಂತರವನ್ನು ಕಾಯ್ದುಕೊಳ್ಳುತ್ತಿರುವರು. ಸೃಜನಶೀಲತೆ ಇನ್ನು ಉಳಿಸಿಕೊಂಡಿದ್ದ ಕಾಲದಲ್ಲೇ ತರಾಸು ಅವರಿಂದ ‘ನನ್ನ ನಾಗರ ಹಾವನ್ನು ಕೆರೆಯ ಹಾವಾಗಿ ಮಾಡಿರುವಿರಿ’ ಎಂದು ತೆಗಳಿಸಿಕೊಂಡಿದ್ದ ಸಿನಿಮಾ ಮಾಧ್ಯಮದಲ್ಲಿ ಇಂದು ಮನೋರಂಜನೆಯೇ  ಮುನ್ನೆಲೆಗೆ ಬರುತ್ತಿರುವಾಗ ಕಾದಂಬರಿ ಆಧಾರಿತ ಸಿನಿಮಾಗಳು ನಿರ್ಮಾಣಗೊಳ್ಳುವುದು ದೂರದ ಮಾತು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


2 comments:

  1. ಹೊಸ ಸಾಹಿತ್ಯದ ಸೃಜನಶೀಲ ಸಿನಿಮಾದ ಬಗ್ಗೆ ವಿಶ್ಲೇಷಣಸಿದ್ದಕ್ಕೆ ದಯವಂದನೆಗಳು.

    ReplyDelete
  2. Sir... it's wonderful article... because the disappearance of novels based movies in kannada..

    ReplyDelete