Tuesday, March 13, 2012

ಎಲ್ಲವನ್ನೂ ಧಿಕ್ಕರಿಸಿ ನಡೆಯುವ ಪರಿ


    ಮೊನ್ನೆ ಮುಕ್ತ ಮುಕ್ತ ಧಾರಾವಾಹಿಯ ದೃಶ್ಯವೊಂದನ್ನು ನೋಡುತ್ತಿದ್ದಾಗ ನಿರ್ದೇಶಕ ಟಿ.ಏನ್.ಸೀತಾರಾಂ ನೆನಪಾದರು. ಅನೇಕ ವರ್ಷಗಳ ಹಿಂದೆ ಆಗಿನ್ನೂ ಖಾಸಗಿ ಟಿ.ವಿ ಚಾನೆಲ್ಲಗಳ ಹಾವಳಿ ಇಷ್ಟೊಂದು ಇರದಿದ್ದ ದಿನಗಳಲ್ಲಿ ದೂರದರ್ಶನಕ್ಕಾಗಿ ಇದೇ ಸೀತಾರಾಂ ಮಾಯಾ ಮೃಗ ಧಾರಾವಾಹಿ ನಿರ್ದೇಶಿಸಿ ಕೊಟ್ಟಿದ್ದರು. ಅದು ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ಅದುವರೆಗೂ ನೋಡಿದಂಥ ಕಥೆಗಳನ್ನೇ ಮತ್ತೆ ಮತ್ತೆ ನೋಡಿ ಬೇಸತ್ತಿದ್ದ ಪ್ರೇಕ್ಷಕ ವರ್ಗಕ್ಕೆ ಮಾಯಾ ಮೃಗ ಧಾರವಾಹಿ ಹೊಸ ಲೋಕವೊಂದನ್ನು ಅವರೆದುರು ತೆರೆದಿಟ್ಟಿತು. ಆಗಲೇ ಅನಿಸಿದ್ದು ಈ ನಿರ್ದೇಶಕನಲ್ಲಿ ಏನೋ ಒಂದು ವಿಶೇಷತೆ ಇದೆ ಎಂದು. 
      ಟಿ.ಏನ್.ಸೀತಾರಾಂ ರಾಜಕೀಯ, ಸಿನಿಮಾ, ಸಮಾಜ ಸೇವೆ, ಕಿರುತೆರೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ ಅವರು ಅಭಿವ್ಯಕ್ತಿಯ ಮಾಧ್ಯಮವಾಗಿ ಆರಿಸಿಕೊಂಡಿದ್ದು ದೃಶ್ಯ ಮಾಧ್ಯಮವನ್ನು. ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿದ್ದರೂ ಅದೇಕೋ ಏನೋ ಹಿರಿತೆರೆಯಲ್ಲಿ ಯಶಸ್ಸು ಅವರಿಗೆ ಕೈಹಿಡಿಯಲಿಲ್ಲ. ಅಥವಾ ಸಿನಿಮಾ ಪ್ರೇಕ್ಷಕರ ಅಭಿರುಚಿಯನ್ನು ಅರಿತುಕೊಳ್ಳಲು ಟಿ.ಏನ್.ಸೀತಾರಾಂ ವಿಫಲರಾಗಿರಬಹುದು. ಸಿನಿಮಾ ಪ್ರೇಕ್ಷಕರ  ಅಭಿರುಚಿಯಲ್ಲಿ ಮನೋರಂಜನೆಯದೇ ಸಿಂಹ ಪಾಲಿರುವುದರಿಂದ ಆ ಕ್ಷೇತ್ರ ಟಿಏನ್ಎಸ್ ಗೆ ಒಗ್ಗದೆ ಇರುವುದೂ ಒಂದು ಕಾರಣವಾಗಿರಬಹುದು. ಅವರ ನಿರ್ದೇಶನದ ಎರಡು ಸಿನಿಮಾಗಳು ಈ ಸಿನಿಮಾ ಲೋಕದ ಜನ ಹಾಕಿಕೊಂಡ ಚೌಕಟ್ಟಿನ ಹೊರಗೇ ಉಳಿದು ಹೋದವು.
     ಇನ್ನು ಕಿರುತೆರೆಯ ವಿಷಯಕ್ಕೆ ಬಂದರೆ ಟಿ.ಏನ್.ಸೀತಾರಾಂ ಸ್ಟಾರ್ ನಿರ್ದೇಶಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಮದುವೆಯಾಚೆಯ ಸಂಬಂಧಗಳು, ವರದಕ್ಷಿಣೆ ಕಿರುಕುಳ, ಅತ್ತೆ ಸೊಸೆ ಜಗಳ ಅದೇ ಚರ್ವಿತ ಚರ್ವಣ ಕಥೆಗಳನ್ನು ನೋಡಿ ಬೇಸತ್ತಿದ್ದ ಪ್ರೇಕ್ಷಕ ವರ್ಗಕ್ಕೆ ಹೊಸದೊಂದು ಲೋಕವನ್ನು ತೋರಿಸಿದ ಇವರು ಕಿರುತೆರೆಯ ಪ್ರೇಕ್ಷಕರ ವಿಶೇಷವಾಗಿ ಮಹಿಳಾ ಪ್ರೇಕ್ಷಕರ ಅಭಿರುಚಿಯನ್ನೇ ಬದಲಿಸಿದರು. ನಮ್ಮ ನಡುವಿನ ಇಲ್ಲವೇ ನಮ್ಮದೇ ಬದುಕಿನ ದಿನನಿತ್ಯದ ಸಮಸ್ಯೆಗಳೇ ಇವರ ಧಾರಾವಾಹಿಗಳ ಕಥಾವಸ್ತು. ಅದರಲ್ಲೂ ರೈತರ ಬದುಕಿನ ಬವಣೆಗಳನ್ನು ಧಾರಾವಾಹಿ ರೂಪದಲ್ಲಿ ತೋರಿಸಿದ ನಿರ್ದೇಶಕ ಟಿ.ಏನ್.ಸೀತಾರಾಂ ಅವರನ್ನು ಬಿಟ್ಟರೆ ಬೇರೊಬ್ಬರಿಲ್ಲ. ಅದುವರೆಗೂ ರೈತರ ಸಮಸ್ಯೆಗಳನ್ನು ಡಾಕ್ಯುಮೆಂಟರಿ ರೂಪದಲ್ಲಿ ನೋಡಿದ್ದ ಅನೇಕರಿಗೆ ಟಿಏನ್ಎಸ್ ಅವರ ಧಾರಾವಾಹಿಗಳು ಹೊಸ ಅನುಭವವನ್ನೇ ನೀಡಿದವು. ಜಾಗತೀಕರಣದ ಹೊಡೆತಕ್ಕೆ ಸಿಲುಕಿರುವ ರೈತನ ಬದುಕಿನ ಸಂಕಟವನ್ನು ಅತ್ಯಂತ ಪ್ರಾಮಾಣಿಕವಾಗಿ ಚಿತ್ರಿಸಿ ದೃಶ್ಯ ಮಾಧ್ಯಮದ ಮೂಲಕ ಪ್ರೇಕ್ಷಕರೆದುರು ಇಟ್ಟಾಗಲೇ ಆ ಬದುಕು ಅದೆಷ್ಟು ಸಂಕಟಗಳ ಸರಮಾಲೆ ಎಂದು ಅನೇಕರಿಗೆ ಅರಿವಾಗಿದ್ದು. ರಾಜಕೀಯ ಕ್ಷೇತ್ರದ ಕೆಟ್ಟತನ, ನಗರ ಬದುಕಿನ ಸಂಕಿರ್ಣತೆ, ಜಾಗತೀಕರಣ ತಂದೊಡ್ಡುತ್ತಿರುವ ಅಪಾಯಗಳು ಹೀಗೆ ಅನೇಕ ಸಮಸ್ಯೆಗಳು ಅವರ ಧಾರಾವಾಹಿಗಳಲ್ಲಿ ಬಿಚ್ಚಿಕೊಳ್ಳುತ್ತ ಹೋಗುತ್ತವೆ.
     ಮೊನಚು ಮತ್ತು ವ್ಯಂಗ್ಯ ಸಂಭಾಷಣೆಗಳೇ ಅವರ ಧಾರಾವಾಹಿಗಳ ಜೀವಾಳ. ಸರ್ಕಾರಿ ಅಧಿಕಾರಿಗಳನ್ನು, ರಾಜಕೀಯ ನಾಯಕರುಗಳನ್ನು ಅವರ ಪಾತ್ರಗಳ ಮೂಲಕ ತರಾಟೆಗೆ ತೆಗೆದುಕೊಳ್ಳುವ ರೀತಿ ಅನೇಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ. ತಾನು ತನ್ನ ದೈನಂದಿನ ಬದುಕಿನಲ್ಲಿ ಹೀಗೆ ಮಾಡಲಾಗದ ಅಸಾಹಾಯಕತೆಯನ್ನು ಮರೆತ ಪ್ರೇಕ್ಷಕ ಪಾತ್ರವೇ ತಾನಾಗಿ ಖುಷಿ ಪಡುತ್ತಾನೆ. ಜನಸಾಮಾನ್ಯನೆ ಟಿಏನ್ ಎಸ್ ಅವರ ಧಾರಾವಾಹಿಗಳ ನಿಜವಾದ ನಾಯಕ. ಅದೇ ಕಾರಣಕ್ಕೆ ಇರಬೇಕು ರಾತ್ರಿಯಾಗುತ್ತಿದ್ದಂತೆ ಅನೇಕ ಮನೆಗಳಿಂದ ಮುಕ್ತ ಮುಕ್ತ ಹಾಡಿನ ಸಾಲುಗಳು ಅಲೆ ಅಲೆಯಾಗಿ ತೇಲಿ ಬಂದು ಮನಸ್ಸನ್ನು ತುಂಬಿ ಕೊಳ್ಳುತ್ತವೆ. ಕಿರುತೆರೆಗೆ ಅಂಟಿಕೊಂಡಿದ್ದ ಧಾರವಾಹಿ ಎಂದರೆ ಹೀಗೆ ಇರಬೇಕು ಎನ್ನುವ ಸಿದ್ದ ಸೂತ್ರವನ್ನೇ ಬದಲಿಸಿ ಹೊಸದೊಂದು ವ್ಯಾಖ್ಯಾನ ನೀಡಿದ ಟಿ.ಏನ್.ಸೀತಾರಾಂ ಎಲ್ಲವನ್ನೂ ಧಿಕ್ಕರಿಸಿ ನಡೆಯುವ ಪರಿ ನಮ್ಮಲ್ಲಿ ಬೆರಗು ಹುಟ್ಟಿಸುತ್ತದೆ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment