Wednesday, February 29, 2012

ನಾನೇಕೆ ಬರೆಯುತ್ತೇನೆ

    ಬರವಣಿಗೆ ನನಗೆ ಅತ್ಯಂತ ಖುಷಿ ಕೊಡುವ ಸಂಗತಿ. ಆದ್ದರಿಂದ ನಾನು ಬರವಣಿಗೆಯಲ್ಲಿ ನನ್ನನ್ನು ತೊಡಗಿಸಿಕೊಳ್ಳುತ್ತೇನೆ. ಪ್ರತಿ ಬರವಣಿಗೆಯ ನಂತರ ಯಾವುದೊ ಒಂದು ಖುಷಿ, ಆನಂದ ಮನಸ್ಸನ್ನು ಆವರಿಸಿಕೊಂಡು ಇನ್ನು ಬರೆಯ ಬೇಕೆನ್ನುವ ಪ್ರೇರಣೆ ನೀಡುತ್ತದೆ. ಬರವಣಿಗೆ ಅನೂಚಾನವಾಗಿ ಮುಂದುವರೆಸಿಕೊಂಡು ಹೋಗಲು ಅದರೊಂದಿಗೆ ಓದು ಸಹ ಅವಶ್ಯಕವಾಗುತ್ತದೆ. ಹೀಗಾಗಿ ಹೊಸ ಪುಸ್ತಕಗಳ ಓದು ಅನಿವಾರ್ಯವಾಗುತ್ತದೆ. ನಾನು ಓದಿದ ಇತ್ತಿಚಿನ ಹೊಸ ಪುಸ್ತಕಗಳೆಂದರೆ 'ನನ್ನ ತೇಜಸ್ವಿ' ಮತ್ತು 'ಅಮ್ಮ ಸಿಕ್ಕಿದಳು'. ಈ ಎರಡು ಕೃತಿಗಳಲ್ಲಿನ ಭಾವ ತೀವ್ರತೆ ಯಾವುದೊ ಒಂದು ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋದ ಅನುಭವ ಕೊಡುತ್ತದೆ. 'ನನ್ನ ತೇಜಸ್ವಿ' ಪುಸ್ತಕದಲ್ಲಿ ತೇಜಸ್ವಿ ಅವರ ಅನೇಕ ಮುಖಗಳು ಅನಾವರಣಗೊಂಡಿವೆ. ನಮಗೆ ಗೊತ್ತಿಲ್ಲದ ಹೊಸ ತೇಜಸ್ವಿ ಅವರನ್ನು ಶ್ರೀಮತಿ ರಾಜೇಶ್ವರಿ ಅವರು ನಮ್ಮೆದುರು ತಂದು ನಿಲ್ಲಿಸಿದ್ದಾರೆ. ಅದೇ ರೀತಿ ಅಮ್ಮ ಸಿಕ್ಕಿದಳು ಪುಸ್ತಕ ನಮ್ಮನ್ನು ನೇರವಾಗಿ ಅಮ್ಮನ ಬಳಿಗೆ ಕೊಂಡೊಯ್ಯುತ್ತದೆ. ಪುಸ್ತಕ ಓದಿ ಮುಗಿಸುತ್ತಿದ್ದಂತೆ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಮನಸ್ಸು ಪೂರ್ತಿ ಅತ್ತು ಬಿಡುವ ಮನಸ್ಸಾಗುತ್ತದೆ.
  ಇಂಥ ಪುಸ್ತಕಗಳನ್ನು ಓದಿದ ನಂತರ ನನ್ನೊಳಗಿನ ಬರಹಗಾರ ಚುರುಕಾಗುತ್ತಾನೆ. ಬರೆಯಲೇ ಬೇಕೆನ್ನುವ ತುಡಿತ ಪ್ರಾರಂಭವಾಗುತ್ತದೆ. ಸೂಕ್ಷ್ಮ ಸಂವೆದನೆಯೊಂದು ಕೈಹಿಡಿದು ಬರೆಯಲು ಹಚ್ಚುತ್ತದೆ. ಅನೇಕ ಸಲ ನನ್ನನ್ನು ನಾನು ಕೇಳಿಕೊಂಡಿದ್ದೇನೆ ಬರೆಯುವಂಥ ಅನಿವಾರ್ಯತೆ ನನಗೇಕೆ. ಹಾಗೆ ನಾನು ಬರೆದದ್ದನ್ನು ಅದೆಷ್ಟು ಜನ ಓದುತ್ತಾರೆ. ನನ್ನ ಬರವಣಿಗೆ ನನಗೆ ಅನಿವಾರ್ಯವೇ ಹೊರತು ಅದು ಬೇರೆಯವರಿಗಲ್ಲ ಎನ್ನುವ ವಿಷಯವೂ ನನಗೆ ತಿಳಿದಿದೆ. ಹೀಗಿದ್ದು ಬರೆಯುವಂಥ ಕೆಲಸಕ್ಕೆ ನಾನು ಆಗಾಗ ಕೈ ಹಾಕುತ್ತಲೇ ಇರುತ್ತೇನೆ. ಏಕೆಂದರೆ ಯಾರು ಓದುತ್ತಿದ್ದಾರೆ ಎನ್ನುವುದು ನನಗೆ ಮುಖ್ಯವಲ್ಲ. ಬೇರೆಯವರು  ಓದಲಿ ಎನ್ನುವ ಹಟದಿಂದ ನಾನು ಬರೆಯುವುದಿಲ್ಲ. ಬೇರೆಯವರು ಓದಲೇ ಬೇಕೆನ್ನುವ ಅನಿವಾರ್ಯತೆ ನನಗಿಲ್ಲ.ಅದೆಲ್ಲವನ್ನು ಮೀರಿ ಬರವಣಿಗೆ ನನಗೆ ಖುಷಿ ಕೊಡುತ್ತದೆ. ಅದಕ್ಕೆಂದೇ ನಾನು ಬರೆಯುತ್ತೇನೆ. ಆದರೆ ಎಲ್ಲಿಯವರೆಗೆ ಬರೆಯಬಲ್ಲೆ ಎಂದು ನನಗೆ ಗೊತ್ತಿಲ್ಲ. ಬರೆಯಲೇ ಬೇಕೆನ್ನುವ ತುಡಿತ ನನ್ನಲ್ಲಿ ಜೀವಂತವಾಗಿರುವವರೆಗೆ ನಾನು ಬರೆಯಬಲ್ಲೆ.

-ರಾಜಕುಮಾರ ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

2 comments:

  1. Manasina Bhavanegalege imbu koduva maarga, Neevu neemagagi bareyeri.

    Plz...... Write Write Write...........Keeps your Mind Cool and Fresh

    ReplyDelete