(ಪ್ರಜಾವಾಣಿ, 18.05.2024
ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ನೈತಿಕ ಅಧ:ಪತನ ಸಮಾಜದಲ್ಲಿ ಆತಂಕದ ವಾತಾವರಣವನ್ನು ನಿರ್ಮಾಣ ಮಾಡಿದೆ. ದಿನಬೆಳಗಾದರೆ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ರಾಜಕಾರಣಿಗಳ ಕಳಂಕಿತ ಚಾರಿತ್ರ್ಯದ ಸುದ್ಧಿಗಳು ಸಾರ್ವಜನಿಕರಲ್ಲಿ ಜಿಗುಪ್ಸೆ ಮೂಡಿಸಿವೆ. ರಾಜಕಾರಣಿಗಳ ನಡೆ ಮತ್ತು ನುಡಿ ಬಹು ಚರ್ಚಿತ ಸಂಗತಿಗಳಾಗಿವೆ. ಕಳಂಕಿತ ರಾಜಕಾರಣಿಗಳನ್ನು ನಮ್ಮ ಶಾಸಕರು ಮತ್ತು ಸಂಸದರೆಂದು ಹೇಳಿಕೊಳ್ಳಲು ಮುಜುಗರಕ್ಕೊಳಗಾಗುವ ಅಸಹಾಯಕ ಸ್ಥಿತಿಯಲ್ಲಿ ಶ್ರೀಸಾಮಾನ್ಯನಿರುವನು. ರಾಜಕಾರಣಿಗಳ ಅಧಿಕಾರ ಲಾಲಸೆ, ಕುಟುಂಬ ಪ್ರೇಮ, ತಪ್ಪುನಡೆ, ಲೈಂಗಿಕ ಹಗರಣಗಳಿಂದ ಸಾರ್ವಜನಿಕರು ತಲೆತಗ್ಗಿಸುವಂತಾಗಿದೆ. ಒಟ್ಟಾರೆ ರಾಜಕಾರಣದಲ್ಲಿ ನಿರ್ಲಜ್ಜ ವ್ಯವಸ್ಥೆಯೊಂದು ನಿಧಾನವಾಗಿ ರೂಪುಗೊಳ್ಳುತ್ತಿದೆ.
ರಾಜಕಾರಣವು ಸಮಾಜಸೇವೆ ಎನ್ನುವುದಕ್ಕಿಂತ ಅದು ಆದಾಯದ ಮೂಲ ಎನ್ನುವ ಪರಿಕಲ್ಪನೆ ಬಲವಾಗುತ್ತಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಚುನಾವಣೆಯಿಂದ ಚುನಾವಣೆಗೆ ರಾಜಕಾರಣಿಗಳ ಸಂಪತ್ತಿನಲ್ಲಿ ಗಮನಾರ್ಹವಾದ ಪ್ರಗತಿ ಕಂಡುಬರುತ್ತಿದೆ. ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಅಕ್ರಮವಾಗಿ ಹಣಗಳಿಸುತ್ತಿರುವರೆಂಬ ಆರೋಪ ರಾಜಕಾರಣಿಗಳ ಮೇಲಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳಿಂದ ಹಣದ ಹೊಳೆ ಹರಿಯುತ್ತದೆ. ಅಭ್ಯರ್ಥಿಗಳು ಕೋಟ್ಯಾಂತರ ರೂಪಾಯಿಗಳನ್ನು ಚುನಾವಣೆಗಾಗಿ ಖರ್ಚು ಮಾಡುತ್ತಾರೆ. ರಾಜಕಾರಣವು ಬಂಡವಾಳ ಹೂಡಿ ಲಾಭ ಗಳಿಸುವ ಕ್ಷೇತ್ರವಾಗಿದೆ. ಲಾಭ ಮತ್ತು ನಷ್ಟದ ಸಂಗತಿಗಳು ಪರಿಗಣನೆಗೆ ಬಂದಾಗ ಸಮಾಜಸೇವೆ ಹಿಂದೆ ಸರಿಯುತ್ತದೆ.
ರಾಜಕಾರಣದ ಮೇಲಿರುವ ಇನ್ನೊಂದು ಗುರುತರವಾದ ಆರೋಪ ಅದು ಅವರ ಕುಟುಂಬ ಪ್ರೇಮ. ಇಂದಿನ ಕುಟುಂಬ ರಾಜಕಾರಣವನ್ನು ನೋಡಿದರೆ ಆಳರಸರ ರಾಜಪ್ರಭುತ್ವದ ವ್ಯವಸ್ಥೆ ಮತ್ತೆ ಮರುಕಳಿಸುತ್ತಿರುವಂತೆ ಭಾಸವಾಗುತ್ತಿದೆ. ರಾಜಕಾರಣಿಗಳು ತಮ್ಮ ಮಕ್ಕಳನ್ನು ಭವಿಷ್ಯದ ನೇತಾರರನ್ನಾಗಿ ತಯ್ಯಾರು ಮಾಡುತ್ತಿರುವರು. ಮತಕ್ಷೇತ್ರಗಳು ಅಪ್ಪನಿಂದ ಮಕ್ಕಳಿಗೆ ಸಲೀಸಾಗಿ ಉಡುಗೊರೆಯ ರೂಪದಲ್ಲಿ ಬಳುವಳಿಯಾಗಿ ದೊರೆಯುತ್ತಿವೆ. ಯಾವುದೇ ರಾಜಕೀಯ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆಯುವುದು ಬಹಳ ವಿರಳ. ಒಂದರ್ಥದಲ್ಲಿ ರಾಜಕಾರಣ ಎನ್ನುವುದು ಕುಟುಂಬದ ಪಿತ್ರಾರ್ಜಿತ ಆಸ್ತಿಯಂತಾಗಿದೆ. ಪಕ್ಷದ ಏಳ್ಗೆಗಾಗಿ ಒಂದು ಹನಿ ಬೆವರು ಹರಿಸದ ರಾಜಕಾರಣಿಗಳ ಸಂತಾನ ಅಧಿಕಾರದ ಗದ್ದುಗೆ ಏರುತ್ತಿದೆ.
ಅಧಿಕಾರ ಪ್ರಾಪ್ತಿ ರಾಜಕಾರಣದ ಮೂಲ ಧ್ಯೇಯವಾಗಿದೆ. ಅಧಿಕಾರಕ್ಕಾಗಿ ಚುನಾವಣೆಯ ಸಂದರ್ಭ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುತ್ತಾರೆ. ಬೇರೆ ಬೇರೆ ಪಕ್ಷಗಳಲ್ಲಿದ್ದು ಒಬ್ಬರನ್ನೊಬ್ಬರು ವಾಚಾಮಗೋಚರವಾಗಿ ಬೈಯ್ದುಕೊಂಡುವರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಒಂದೇ ಪಕ್ಷದವರಾಗಿ ಆತ್ಮೀಯರಾಗುತ್ತಾರೆ. ಯಾರನ್ನು ನಂಬುವುದೆಂದು ಮತದಾರ ಗೊಂದಲಕ್ಕೊಳಗಾಗುತ್ತಾನೆ. ಅದೆಷ್ಟೋ ಸಂದರ್ಭಗಳಲ್ಲಿ ಅಧಿಕಾರದ ಆಸೆಯಿಂದ ಶಾಸಕ ಅಥವಾ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ ಬೇರೊಂದು ಪಕ್ಷವನ್ನು ಸೇರುವ ರಾಜಕಾರಣಿಗಳು ಮತದಾರರ ಮತಗಳನ್ನು ಅಪಮೌಲ್ಯಗೊಳಿಸುತ್ತಿರುವರು. ಮೌಲ್ಯ ಮತ್ತು ಸಿದ್ಧಾಂತಗಳು ಹಿನ್ನೆಲೆಗೆ ಸರಿದು ಅಧಿಕಾರ ಮತ್ತು ಹಣ ಮುನ್ನೆಲೆಗೆ ಬರುತ್ತಿವೆ. ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯಸಮ್ಮತ ಎನ್ನುವುದು ರಾಜಕಾರಣಕ್ಕೂ ಅನ್ವಯಿಸುತ್ತಿದೆ.
ಇಂಥ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣವು ವಿದ್ಯಾರ್ಥಿಗಳು, ಶಿಕ್ಷಕರು, ಚಿಂತಕರು, ಸಾಹಿತಿಗಳಿಗೆ ಆದರ್ಶ ಮತ್ತು ಮಾದರಿಯಾಗುತ್ತಿರುವುದು ದುರಂತದ ಸಂಗತಿ. ಕೆಲವು ದಿನಗಳ ಹಿಂದೆ ನನ್ನ ಪರಿಚಿತರೊಬ್ಬರು ವೈದ್ಯಳಾಗಿರುವ ತಮ್ಮ ಮಗಳಿಗೆ ರಾಜ್ಯದ ಮಂತ್ರಿಯೊಬ್ಬರಿಗೆ ಚಿಕಿತ್ಸೆ ನೀಡುವ ಭಾಗ್ಯ ಪ್ರಾಪ್ತವಾಯಿತೆಂದು ತುಂಬ ಅಭಿಮಾನದಿಂದ ವಾಟ್ಸ್‍ಆ್ಯಪ್‍ನಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದರು. ರಾಜಕಾರಣವು ಸಮಾಜವನ್ನು ಹೇಗೆ ಪ್ರಭಾವಿಸುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ವೃತ್ತಿಗೆ ರಾಜಿನಾಮೆ ನೀಡಿ ರಾಜಕಾರಣವನ್ನು ಪ್ರವೇಶಿಸುವವರ ಸಂಖ್ಯೆ ಹೆಚ್ಚುತ್ತಿದೆ. ರಾಜಕಾರಣವು ಸಮಾಜವನ್ನು ಪ್ರಭಾವಿಸುತ್ತಿರುವ ಇಂಥ ಹೊತ್ತಿನಲ್ಲಿ ಅದು ನೈತಿಕವಾಗಿ ಕೆಳಮಟ್ಟಕ್ಕಿಳಿಯುವುದು ಜನಜೀವನದ ಅಧೋಗತಿಗೆ ಕಾರಣವಾಗುತ್ತದೆ.
ಯೇಟ್ಸ್ ಹೇಳಿದ ಮಾತು ಹೀಗಿದೆ- ‘ಬೇರೆಯವರ ಜೊತೆ ಜಗಳವಾಡುವವನು ರಾಜಕಾರಣಿ ಆಗುತ್ತಾನೆ. ತನ್ನ ಜೊತೆಗೇ ಜಗಳ ಮಾಡಿಕೊಳ್ಳುವವನು ಕವಿ ಆಗುತ್ತಾನೆ’. ತನ್ನೊಂದಿಗೇ ಜಗಳ ಮಾಡುವುದೆಂದರೆ ಆತ್ಮವಿಶ್ಲೇಷಣೆಗೆ, ಆತ್ಮವಿಮರ್ಶೆಗೆ ಒಳಗಾಗುವುದು ಎಂದರ್ಥ. ಯೇಟ್ಸ್ ಪ್ರಕಾರ ರಾಜಕಾರಣಿ ಎಂದಿಗೂ ಆತ್ಮವಿಮರ್ಶೆಗೆ ಇಳಿಯಲಾರ. ಸದಾಕಾಲ ಲೋಕಾಂತವನ್ನೇ ನೆಚ್ಚಿಕೊಂಡವರಿಗೆ ಏಕಾಂತವನ್ನು ಪ್ರವೇಶಿಸುವ ಎದೆಗಾರಿಕೆ ಇರುವುದಾದರೂ ಹೇಗೆ ಸಾಧ್ಯ?. ಆತ್ಮವಿಮರ್ಶೆ ಮಾಡಿಕೊಳ್ಳದ ರಾಜಕಾರಣಿಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ಅರಿವಾಗಲಾರದು. ಆಗ ನೈತಿಕತೆ ಮೂಲೆಗುಂಪಾಗಿ ಅನೈತಿಕತೆ ವಿಜೃಂಭಿಸುತ್ತದೆ.
ರಾಜಕಾರಣದಲ್ಲಿ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡುಬಂದ ಅನೇಕ ರಾಜಕಾರಣಿಗಳಿರುವರು. ರೈಲು ದುರಂತವಾದಾಗ ಮಂತ್ರಿಗಳಾಗಿದ್ದ ಲಾಲ್‍ಬಹದ್ದೂರ್ ಶಾಸ್ತ್ರಿ ಅವರು ನೈತಿಕೆ ಹೊಣೆ ಹೊತ್ತು ರಾಜಿನಾಮೆ ನೀಡಲು ಮುಂದಾದ ಪ್ರಸಂಗ ಇಂದಿಗೂ ರಾಜಕಾರಣದಲ್ಲಿ ಆದರ್ಶ ನಡೆಯಾಗಿ ಉಳಿದಿದೆ. ಜಯಪ್ರಕಾಶ ನಾರಾಯಣ, ಲೋಹಿಯಾ, ಬಿ.ಸಿ.ರಾಯ್, ಜಾರ್ಜ್ ಫರ್ನಾಂಡಿಸ್, ಕರ್ಪೂರಿ ಠಾಕೂರ, ವಾಜಪೇಯಿ, ಎಸ್.ನಿಜಲಿಂಗಪ್ಪ, ಶಾಂತವೇರಿ ಗೋಪಾಲಗೌಡರು ತಮ್ಮ ಪ್ರಾಮಾಣಿಕತೆಯಿಂದ ರಾಜಕಾರಣಕ್ಕೆ ಒಂದು ಘನತೆ ತಂದುಕೊಟ್ಟರು. ಕುಟುಂಬವರ್ಗವನ್ನು ರಾಜಕಾರಣದಿಂದ ದೂರವೇ ಇಟ್ಟಿದ್ದ ಈ ಮಹನೀಯರು ಸದಾಕಾಲ ಪ್ರಾತ:ಸ್ಮರಣೀಯರಾಗಿ ಸಾರ್ವಜನಿಕರ ಸ್ಮರಣೆಯಲ್ಲಿ ಉಳಿದಿರುವರು. ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇಂಥ ರಾಜಕಾರಣಿಗಳ ಸಂಖ್ಯೆ ಸಾರ್ವಜನಿಕರು ಆತಂಕಪಡುವಷ್ಟು ಕ್ಷೀಣಿಸಿದೆ.
‘ಪ್ರಕೃತಿ ಸೃಷ್ಟಿಸಿದ ಜೀವಿಗಳಲ್ಲೆಲ್ಲಾ ಅತ್ಯಂತ ನೀಚನೆಂದರೆ ಮನುಷ್ಯ. ಮನುಷ್ಯನಾಗಿಯೇ ಈ ಮಾತು ಹೇಳಬೇಕಾಗಿ ಬಂದಿರುವುದು ಇನ್ನೂ ದೊಡ್ಡ ನೀಚತನ ಅನ್ನಿಸುತ್ತಿದೆ’ ಎಂದು ದಾಸ್ತೋವಸ್ಕಿ ಅಂದಿರುವ ಮಾತು ಇಂದಿನ ರಾಜಕಾರಣವನ್ನು ಕುರಿತೇ ಹೇಳಿದಂತಿದೆ. ನೀತಿ ಇಲ್ಲದ ರಾಜಕಾರಣವನ್ನು ಗಾಂಧೀಜಿ ಸಾಮಾಜಿಕ ಪಾಪ ಎಂದಿರುವರು. ರಾಜಕಾರಣದ ಕುರಿತು ಸಾರ್ವಜನಿಕರಲ್ಲಿ ಮನೆಮಾಡಿರುವ ಭ್ರಮನಿರಸನ ಮತ್ತು ಅಸಹ್ಯ ಭಾವನೆಯನ್ನು ತೊಡೆದುಹಾಕಲು ರಾಜಕಾರಣಕ್ಕೆ ನೀತಿಯ ದೀಕ್ಷೆ ನೀಡುವುದು ಸಧ್ಯದ ತುರ್ತು ಅಗತ್ಯವಾಗಿದೆ. ಆದರೆ ಸಮಸ್ಯೆ ಇರುವುದು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎನ್ನುವುದರಲ್ಲಿ.
-ರಾಜಕುಮಾರ ಕುಲಕರ್ಣಿ
No comments:
Post a Comment