Friday, December 6, 2024

ಅಭಿಮಾನ ಅತಿರೇಕಕ್ಕೆ ಹೋಗದಿರಲಿ

 



(ಪ್ರಜಾವಾಣಿಯ  04.07.2024 ರ ಸಂಗತ ಅಂಕಣದಲ್ಲಿ ಪ್ರಕಟ)

ಪ್ರೌಢಶಾಲಾ ಶಿಕ್ಷಕರೊಬ್ಬರು ತಮ್ಮ ರಕ್ತದಿಂದ ಕ್ರಿಕೇಟ್ ಆಟಗಾರನ ಚಿತ್ರ ರಚಿಸಿದ ವಿಷಯ ಪತ್ರಿಕೆಯಲ್ಲಿ ಪ್ರಕಟವಾಗಿ ಸಾರ್ವಜನಿಕರ ಗಮನಸೆಳೆಯಿತು. ಅಭಿಮಾನವನ್ನು ಈ ರೀತಿ ವ್ಯಕ್ತಪಡಿಸುವ ಅಗತ್ಯವೇನಿತ್ತು ಎನ್ನುವುದು ಪ್ರಜ್ಞಾವಂತರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಏಕೆಂದರೆ ಅಭಿಮಾನದ ಅಭಿವ್ಯಕ್ತಿಗಾಗಿ ರಕ್ತದಂತಹ ಅಮೂಲ್ಯ ದ್ರವ್ಯವನ್ನು ವ್ಯರ್ಥಗೊಳಿಸಿದ್ದು ಅದು ತಪ್ಪು ನಡೆಯಾಗುತ್ತದೆ. ಬೇರೆ ವಿಧಾನದಲ್ಲಿ ಅಭಿಮಾನವನ್ನು ವ್ಯಕ್ತಪಡಿಸುವ ಹಲವು ಅವಕಾಶಗಳಿರುವಾಗ ರಕ್ತವನ್ನು ಹಾಳುಮಾಡಿದ್ದು ಅಭಿಮಾನದ ಅತಿರೇಕ ಎಂದು ಸಹಜವಾಗಿಯೇ ಸಾರ್ವಜನಿಕರ ಟೀಕೆಯನ್ನು ಶಿಕ್ಷಕ ಎದುರಿಸಬೇಕಾಯಿತು. 

ರಕ್ತವನ್ನು ಜನರ ಜೀವ ಉಳಿಸುವ ಅಮೂಲ್ಯ ದ್ರವ್ಯವೆಂದು ಪರಿಗಣಿಸಲಾಗಿದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಸ್ವಯಂ ಪ್ರೇರಣೆಯಿಂದ ರಕ್ತವನ್ನು ಕೊಡಲು ಮುಂದೆ ಬರುವ ದಾನಿಗಳಿಂದ ಮಾತ್ರ ರಕ್ತಪಡೆಯಲು ಸಾಧ್ಯ. ಅದೆಷ್ಟೋ ಸಂದರ್ಭಗಳಲ್ಲಿ ಅಗತ್ಯದ ರಕ್ತ ದೊರೆಯದೆ ರೋಗಿಗಳು ಸಾವನ್ನಪ್ಪುವುದು ಸಾಮಾನ್ಯವಾಗಿದೆ. ಪರಿಸ್ಥಿತಿ ಹೀಗಿರುವಾಗ ರಕ್ತವನ್ನು ಚಿತ್ರ ರಚಿಸಲು ಬಳಸಿ ವ್ಯರ್ಥಗೊಳಿಸಿದ್ದು ತಪ್ಪು ಸಂದೇಶಕ್ಕೆ ಎಡೆಮಾಡುತ್ತದೆ. ಇಂಥದ್ದೊಂದು ಅಸಂಗತ ವರ್ತನೆಗೆ ಪ್ರಜ್ಞಾವಂತ ಶಿಕ್ಷಕ ಕಾರಣನಾಗಿದ್ದು ಆತಂಕದ ಸಂಗತಿ. ಮಕ್ಕಳಿಗೆ ಪಾಠ ಮಾಡಿ ಆದರ್ಶನಾಗಬೇಕಿರುವ ಶಿಕ್ಷಕ ರಕ್ತದಂತಹ ಅಮೂಲ್ಯ ದ್ರವ್ಯದ ಮಹತ್ವವನ್ನು ಅರಿಯದೇ ಹೋದದ್ದು ಇಡೀ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನೇ ಅನುಮಾನದಿಂದ ನೋಡಲು ಕಾರಣವಾಗಬಹುದು. 

ಈಗಾಗಲೇ ಶಿಕ್ಷಣ ಕ್ಷೇತ್ರ ಅನೇಕ ಆಪಾದನೆಗಳನ್ನು ಎದುರಿಸುತ್ತಿದೆ. ಶಿಕ್ಷಕರ ಬೌದ್ಧಿಕ ಗುಣಮಟ್ಟದ ಕುರಿತು ಪಾಲಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲವೆಂಬ ಕಾರಣವನ್ನು ಮುಂದೆ ಮಾಡಿ ಮಕ್ಕಳನ್ನು ಶಾಲಾ ಅವಧಿಯ ನಂತರ ಮನೆಪಾಠಕ್ಕೆ ಕಳುಹಿಸುವ ವ್ಯವಸ್ಥೆ ಬಹುಪಾಲು ಕುಟುಂಬಗಳನ್ನು ವ್ಯಾಪಿಸಿಕೊಂಡಿದೆ. ಪರಿಸ್ಥಿತಿ ಹೀಗಿರುವಾಗ ಶಿಕ್ಷಕರ ಇಂತಹ ಅತಿರೇಕದ ಅಭಿಮಾನದ ನಡೆ ಶಿಕ್ಷಣ ವ್ಯವಸ್ಥೆ ಕುರಿತು ಸಾರ್ವಜನಿಕರಲ್ಲಿರುವ ಅಸಮಾಧಾನವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಒಂದು ರೀತಿಯಲ್ಲಿ ಇದು ಗಾಯದ ಮೇಲೆ ಬರೆ ಎಳೆದಂ

ಅಭಿಮಾನದ ಅತಿರೇಕಕ್ಕೆ ನಾಂದಿ ಹಾಡಿದ್ದು ಸಿನಿಮಾ ಮಾಧ್ಯಮ ಎಂದರೆ ತಪ್ಪಾಗಲಾರದು. ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯ ದಿನ ಮೆರವಣಿಗೆ, ಬೃಹತ್ ಗಾತ್ರದ ಕಟೌಟ್‍ಗಳಿಗೆ ಹಾಲಿನ ಅಭಿಷೇಕ, ಪಟಾಕ್ಷಿಗಳ ಸಿಡಿತ ಇತ್ಯಾದಿ ಚಟುವಟಿಕೆಗಳ ಮೂಲಕ ಅಭಿಮಾನಿಗಳು ತಮ್ಮ ಅಭಿಮಾನ ಮೆರೆಯುವರು. ಆರೋಗ್ಯಕ್ಕೆ ಅಗತ್ಯವಾದ ಹಾಲಿನಂತಹ ಪೌಷ್ಟಿಕ ಪದಾರ್ಥವನ್ನು ಸಿನಿಮಾ ತಾರೆಯರ ಕಟೌಟ್‍ಗಳ ಮೇಲೆ ಸುರಿದು ಹಾಳು ಮಾಡುತ್ತಾರೆ. ಅದೆಷ್ಟೋ ಕುಟುಂಬಗಳಲ್ಲಿ ಅಪೌಷ್ಟಿಕ ಆಹಾರ ಸೇವನೆಯಿಂದ ಮಕ್ಕಳು ಅಶಕ್ತರಾಗಿ ಹಲವಾರು ರೋಗಗಳಿಗೆ ತುತ್ತಾಗುತ್ತಿರುವರು. ಬಡ ಕುಟುಂಬಗಳಿಗೆ ತಮ್ಮ ಮಕ್ಕಳಿಗೆ ಅಗತ್ಯವಾದ ಎರಡು ಹೊತ್ತಿನ ಪೌಷ್ಟಿಕಾಂಶಗಳಿರುವ ಊಟವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಆದರೆ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರ ಮೇಲಿನ ಅಭಿಮಾನದಿಂದ ಹಾಲಿನಂತಹ ಅತ್ಯುತ್ತಮ ಆಹಾರವನ್ನು ಚರಂಡಿಗೆ ಸುರಿಯುತ್ತಿರುವರು.  

ಸಿನಿಮಾ ನಟರ ಜನ್ಮದಿನದಂದು ಅವರು ವಾಸಿಸುವ ಬಡಾವಣೆ ಅಕ್ಷರಶ: ಇರುವೆ ಕೂಡ ನುಸುಳಲು ಜಾಗವಿಲ್ಲದಷ್ಟು ಜನಸಂದಣಿಯಿಂದ ಕೂಡಿರುತ್ತದೆ. ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳ ಕುರಿತು ಅಭಿಮಾನಿ ಬಳಗ ಯೋಚಿಸುವುದಿಲ್ಲ. ರಾತ್ರಿಯಿಂದಲೇ ಅಭಿಮಾನದ ನಟನ ಮನೆಯ ಮುಂದೆ ಜಮಾಯಿಸುವ ಅಭಿಮಾನಿ ಪಡೆ ತಮ್ಮ ಗೌಜು ಗದ್ದಲಗಳಿಂದ ಸುತ್ತಮುತ್ತಲಿನ ನಿವಾಸಿಗಳ ನಿದ್ರೆಯನ್ನು ಹಾಳುಗೆಡವಿ ಅಶಾಂತಿಯನ್ನುಂಟು ಮಾಡುತ್ತಾರೆ. ಅದೆಷ್ಟೋ ಮನೆಗಳಲ್ಲಿ ವೃದ್ಧರು, ಮಕ್ಕಳು, ಕಾಯಿಲೆಗಳಿಂದ ಬಳಲುತ್ತಿರುವವರು, ಪರೀಕ್ಷೆಗಾಗಿ ಓದಿಕೊಳ್ಳುತ್ತಿರುವವರು, ಇಡೀ ಹಗಲು ದುಡಿದು ಹೈರಾಣಾಗಿ ವಿಶ್ರಾಂತಿ ಪಡೆಯುತ್ತಿರುವವರು ಇರುವರೆಂಬ ಕಿಂಚಿತ್ ಪ್ರಜ್ಞೆ ಕೂಡ ಇಲ್ಲದಂತೆ ವರ್ತಿಸುತ್ತಾರೆ. ಕೆಲವೊಮ್ಮೆ ಅತಿರೇಕದ ಅಭಿಮಾನವೇ ಪ್ರಾಣಕ್ಕೆ ಅಪಾಯವಾಗಿ ಪರಿಣಮಿಸುವುದುಂಟು. ಕೆಲವು ತಿಂಗಳುಗಳ ಹಿಂದೆ ಸಿನಿಮಾ ನಟರೊಬ್ಬರ ಜನ್ಮದಿನದ ಸಂದರ್ಭ ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಷಿಸಿ ಎರಡು ಜೀವಗಳು ಬಲಿಯಾದ ದುರ್ಘಟನೆ ಇನ್ನೂ ಸಾರ್ವಜನಿಕರ ನೆನಪಿನಲ್ಲಿ ಹಸಿರಾಗಿದೆ.

ಒಂದುಕಾಲದಲ್ಲಿ ಸಿನಿಮಾ ನಟರ ಅಭಿಮಾನಿಗಳ ನಡುವೆ ಜಗಳ, ಕಾದಾಟ ಸಾಮಾನ್ಯವಾಗಿದ್ದವು. ಸಿನಿಮಾ ಬಿಡುಗಡೆಯ ದಿನ ಅಭಿಮಾನಿ ಗುಂಪುಗಳ ನಡುವಿನ ದ್ವೇಷ ತಾರಕ್ಕೇರುತ್ತಿತ್ತು. ರಸ್ತೆಗಳಲ್ಲಿ ಕೈಮಿಲಾಯಿಸಿ ಹೊಡೆದಾಟಕ್ಕಿಳಿಯುತ್ತಿದ್ದರು. ವಿರೋಧಿ ನಟರ ಪೆÇೀಸ್ಟರ್‍ಗಳಿಗೆ ಸಗಣಿ ಬಳಿಯುವ, ಹರಿದು ಹಾಕುವ, ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನದ ವೇಳೆ ಗಲಾಟೆ ಮಾಡುವಂತಹ ಅತಿರೇಕದ ವರ್ತನೆಗಳನ್ನು ಅಭಿಮಾನಿ ಬಳಗ ತೋರುತ್ತಿತ್ತು. ಕೆಲವೊಮ್ಮೆ ಅಭಿಮಾನಿಗಳ ವರ್ತನೆಯಿಂದ ಸ್ವತ: ಕಲಾವಿದರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಮುಜುಗರವಾಗುವುದುಂಟು. ಮೇರುನಟನ ಅಂತ್ಯಕ್ರಿಯೆಯ ಸಂದರ್ಭ ಅಂತಿಮ ವಿದಿವಿಧಾನಗಳನ್ನು ಮಾಡಲು ಕುಟುಂಬ ವರ್ಗದವರಿಗೆ ಆಸ್ಪದಕೊಡದೆ ನೂಕುನುಗ್ಗಲು, ತಳ್ಳಾಟ ಮಾಡಿದ್ದು ಅಭಿಮಾನಿಗಳ ಅತಿರೇಕದ ವರ್ತನೆಗೆ ಒಂದು ನೈಜ ದೃಷ್ಟಾಂತವಾಗಿದೆ.

ಇತ್ತೀಚೆಗೆ ಘಟನೆಯೊಂದರಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟನ ಅಭಿಮಾನಿಗಳ ಹುಚ್ಚಾಟ ಎಲ್ಲೆ ಮೀರಿದೆ. ತಮ್ಮ ಮೆಚ್ಚಿನ ನಟನ ವಿರುದ್ಧ ಹೇಳಿಕೆ ನೀಡುವ ಕಲಾವಿದರನ್ನು ಗೋಳುಹೊಯ್ದುಕೊಳ್ಳುತ್ತಿರುವರು. ಅತಿಯಾದ ಅಭಿಮಾನ ಮತ್ತು ಆರಾಧಾನಾ ಭಾವನೆ ಅಭಿಮಾನಿಗಳನ್ನು ಅಂಧರನ್ನಾಗಿಸಿದೆ. ನಡೆದ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ತೀರ್ಪು ನೀಡಲು ನ್ಯಾಯಾಲಯವಿದೆ. ಆದರೆ ಅಭಿಮಾನಿಗಳೇ ಸ್ವಯಂ ಘೋಷಿತ ನ್ಯಾಯಾಧೀಶರಾಗಿ ತಮ್ಮ ಆರಾಧ್ಯದೈವದ ನಟನನ್ನು ಆರೋಪ ಮುಕ್ತಗೊಳಿಸಿರುವರು. ಅದೆಷ್ಟೋ ಅಭಿಮಾನಿಗಳು ನಟನಿಗೆ ಜೈಲಿನಲ್ಲಿ ನೀಡಲಾದ ಖೈದಿಸಂಖ್ಯೆಯನ್ನು ತಮ್ಮ ವಾಹನಗಳ ಮೇಲೆ ಬರೆದುಕೊಂಡು ಧನ್ಯರಾಗಿರುವರು. 

ಯುವಪೀಳಿಗೆಯಲ್ಲಿ ತಾವು ಆರಾಧಿಸುವ ನಟ ನಟಿಯರ ಮತ್ತು ಕ್ರೀಡಾಪಟುಗಳ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳುವ, ನಡೆ-ನುಡಿಯಲ್ಲಿ ಅವರನ್ನು ಅನುಕರಿಸುವ ಚಾಳಿ ಸೋಂಕಿನಂತೆ ಆವರಿಸಿಕೊಂಡಿದೆ. ತಾವು ಆರಾಧಿಸುವ ಐಕಾನ್‍ಗಳ ಮೇಲಿನ ಅತಿಯಾದ ಪ್ರೀತಿ ಮತ್ತು ಅಭಿಮಾನ ಯುವ ಜನತೆಯನ್ನು ತಪ್ಪು ದಾರಿಗೆ ಕರೆದೊಯ್ಯುತ್ತಿದೆ. ಈ ತಪ್ಪು ನಡೆ ರಕ್ತದಲ್ಲಿ ಚಿತ್ರ ಬರೆಯುವುದು, ಹಾಲಿನ ಅಭಿಷೇಕ, ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ತರುವಂತಹ ವರ್ತನೆಗಳಲ್ಲಿ ವ್ಯಕ್ತವಾಗುತ್ತಿದೆ. ಇದೇ ಯುವಪೀಳಿಗೆ ವಿಜ್ಞಾನಿಗಳು, ಶಿಕ್ಷಕರು, ಸಮಾಜ ಸೇವಕರನ್ನು ಆರಾಧಿಸುತ್ತಿಲ್ಲವೇಕೆ? ಎನ್ನುವುದು ಪ್ರಜ್ಞಾವಂತರನ್ನು ಕಾಡುತ್ತಿರುವ ಈ ಸಂದರ್ಭದ ಬಹುಮಹತ್ವದ ಪ್ರಶ್ನೆಯಾಗಿದೆ.

-ರಾಜಕುಮಾರ ಕುಲಕರ್ಣಿ 

Wednesday, November 13, 2024

ಲೋಕಾಂತದಲ್ಲೂ ಏಕಾಂತಕ್ಕಿರಲಿ ಜಾಗ

      



(೦೪.೦೬.೨೦೨೪ ರ ಪ್ರಜಾವಾಣಿಯ  'ಸಂಗತ' ಅಂಕಣದಲ್ಲಿ ಪ್ರಕಟ)

    ಮನೆಯ ಕುಟುಂಬದ ಸದಸ್ಯರ ನಡುವಣ ಜಗಳಗಳು, ಕಚೇರಿಯಲ್ಲಾದ ಗಲಾಟೆ, ಮೇಲಧಿಕಾರಿ ಕುರಿತು ಒಂದಿಷ್ಟು ಅಸಹನೆಯ ಮಾತುಗಳು, ಸಹೋದ್ಯೋಗಿಗಳ ನಡುವಳಿಕೆಯ ವಿಶ್ಲೇಷಣೆ, ದಾಯಾದಿಗಳೊಂದಿಗಿನ ಕಾದಾಟ, ಪಕ್ಕದ ಮನೆಯವರ ಉಪದ್ರವ ಈ ಎಲ್ಲ ಸಂಗತಿಗಳ ಕುರಿತು ಸಂಭಾಷಣೆಗಳು ಬೇಡವೆಂದರೂ ಬೆಳಗ್ಗಿನ ವಾಕಿಂಗ್ ವೇಳೆ ಕಿವಿಯ ಮೇಲೆ ಬೀಳುತ್ತವೆ. ಮಹಿಳೆಯರ ಸಂಭಾಷಣೆಯಲ್ಲಿ ಅತ್ತೆ, ನಾದಿನಿ, ವಾರಗಿತ್ತಿಯರ ಕುರಿತು ಅತ್ಯಂತ ಕೆಟ್ಟ ಬೈಗುಳಗಳು ಮಾರ್ದನಿಸುತ್ತವೆ. ತಾವು ರಸ್ತೆಯ ಮೇಲೆ ನಡೆಯುತ್ತಿದ್ದೇವೆ ಎನ್ನುವುದನ್ನು ಮರೆತು ಜೋರು ಧ್ವನಿಯಿಂದ ತಮಗಾಗದವರನ್ನು ನಿಂದಿಸುತ್ತ, ಹೀಯಾಳಿಸುತ್ತ, ಬೈಯುತ್ತ ಪ್ರತಿಕಾರ ತೀರಿಸಿಕೊಳ್ಳುತ್ತಿರುವ ಉದ್ವೇಗದಲ್ಲಿ ಹೆಜ್ಜೆ ಹಾಕುವ ಪರಿ ಅಚ್ಚರಿ ಮೂಡಿಸುತ್ತದೆ. 

ಬೆಳಗಿನ ಆಹ್ಲಾದಕರವಾದ ವಾತಾವರಣದಲ್ಲಿ ಶುದ್ಧಗಾಳಿ ಸೇವಿಸುತ್ತ ದೇಹ ಮತ್ತು ಮನಸ್ಸು ಎರಡನ್ನೂ ಶುದ್ಧಿಯಾಗಿಸಿಕೊಳ್ಳವುದು ವಾಯುವಿಹಾರದ ಹಿಂದಿರುವ ಉದ್ದೇಶ. ಆದರೆ ಹಲವರ ಜೊತೆಗೂಡಿ ಮಾತನಾಡುತ್ತಾ ನಡಿಗೆಯಲ್ಲಿ ತೊಡಗುವ ಈ ಸಂದರ್ಭ ಮನುಷ್ಯನ ಮನಸ್ಸು ಅನ್ಯರ ನಿಂದನೆಯ ಸುತ್ತ ಗಿರಕಿ ಹೊಡೆಯುತ್ತ ಅನಾರೋಗ್ಯಗೊಳ್ಳುತ್ತಿದೆ. ದೇಹದಷ್ಟೇ ಮನಸ್ಸಿನ ಆರೋಗ್ಯ ಕೂಡ ಮಹತ್ವದ್ದಾಗಿದೆ. ‘ಮನುಷ್ಯ ಏಕಾಂಗಿಯಾಗಿದ್ದಾಗ ಅದು ಆತ್ಮದ ವಿಶ್ಲೇಷಣೆಗೆ ದಾರಿ ಮಾಡಿಕೊಡುತ್ತದೆ. ಇನ್ನೊಬ್ಬ ಜೊತೆಗೂಡಿದಾಗ ಬೇರೆಯವರನ್ನು ನಿಂದಿಸುವುದು ಶುರುವಾಗುತ್ತದೆ. ಮೂರು ಜನ ಕಲೆತಾಗ ಅದು ಜಗಳಕ್ಕೆ ನಾಂದಿ ಹಾಡುತ್ತದೆ’ ಎಂದಿರುವರು ಅನುಭಾವಿಗಳು

ವಾಯುವಿಹಾರ, ಯೋಗ, ದ್ಯಾನ, ಆಧ್ಯಾತ್ಮ ಪ್ರವಚನ, ದೇವಸ್ಥಾನಗಳ ಭೇಟಿ ಈ ಎಲ್ಲ ಸಂದರ್ಭಗಳಲ್ಲೂ ಮನುಷ್ಯ ಮನಸ್ಸಿನ ಶುದ್ಧತೆಗೆ ಆದ್ಯತೆ ಕೊಡುತ್ತಿಲ್ಲ. ಅಲೌಕಿಕ ವಾತಾವರಣದಲ್ಲೂ ಮನುಷ್ಯನು ರಾಗದ್ವೇಷಗಳು, ಮದ, ಮೋಹ, ಮತ್ಸರ ಇತ್ಯಾದಿ ಅರಿಷಡ್ವರ್ಗಗಳಿಂದ ಬಂಧಿತನಾಗುತ್ತಿರುವನು.   ಬದುಕಿನಲ್ಲಿ ಭೌತಿಕ ಸಂಗತಿಗಳೇ ಮುನ್ನೆಲೆಗೆ ಬರುತ್ತಿರುವ ಇಂದಿನ ದಿನಗಳಲ್ಲಿ ವಾಯುವಿಹಾರ, ಯೋಗ, ಧ್ಯಾನದಂತಹ ಕ್ರಿಯೆಗಳು ಕೇವಲ ತೋರಿಕೆಯಾಗುತ್ತಿವೆ.

ಸದಾಕಾಲ ಲೋಕಾಂತದ ವ್ಯವಹಾರಗಳಲ್ಲಿ ಮುಳುಗಿರುವವರಿಗೆ ಏಕಾಂತಕ್ಕೆ ಲಗ್ಗೆ ಇಡುವುದು ಕಷ್ಟದ ಕೆಲಸ. ಆಗಾಗ ಏಕಾಂತವನ್ನು ಪ್ರವೇಶಿಸಿ ತನ್ನನ್ನು ತಾನು ಆತ್ಮವಿಮರ್ಶೆಗೆ ಮತ್ತು  ಆತ್ಮವಿಶ್ಲೇಷಣೆಗೆ ಒಳಗಾಗಿಸಿಕೊಳ್ಳುವುದು ಭಾವಶುದ್ಧತೆಯ ದೃಷ್ಟಿಯಿಂದ ತುಂಬ ಅಗತ್ಯವಾಗಿದೆ. ಇಂದಿನ ದಿನಗಳಲ್ಲಿ ಯೋಗ, ಧ್ಯಾನದಂಥ ಏಕಾಂತದ ಕ್ರಿಯೆಗಳಿಗೆ ಮಾರುಕಟ್ಟೆಯ ಮೌಲ್ಯ ಪ್ರಾಪ್ತವಾಗಿದೆ. ಎಲ್ಲವನ್ನೂ ಲಾಭ ಮತ್ತು ನಷ್ಟದ ದೃಷ್ಟಿಯಲ್ಲೇ ಅಳೆಯುತ್ತ ಯೋಗ ಮತ್ತು ಧ್ಯಾನದಂತಹ ಏಕಾಂತದ ಕ್ರಿಯೆಗಳನ್ನು ಲೋಕಾಂತದಲ್ಲಿ ಮಾರಾಟದ ಸರಕುಗಳಾಗಿ ಪರಿವರ್ತಿಸಲಾಗಿದೆ. ತನ್ನ ನಡೆ-ನುಡಿ, ತನ್ನೊಳಗಿನ ಸರಿ-ತಪ್ಪುಗಳ ವಿವೇಚನೆ ಮತ್ತು ವಿಶ್ಲೇಷಣೆ ಇದೆಲ್ಲ ಸಾಧ್ಯವಾಗುವುದು ಏಕಾಂತದಲ್ಲಿ ಮಾತ್ರ. ಲೋಕಾಂತದಲ್ಲಿ ಕಳೆದು ಹೋಗಿರುವ ಮನುಷ್ಯನಿಗೆ ಏಕಾಂತದ ಸುಖದ ಅರಿವಿಲ್ಲವಾಗಿದೆ. 

  ಶರಣರು ಲೋಕಾಂತದಲ್ಲೇ  ಬದುಕಿನ ಸತ್ಯವನ್ನು ಶೋಧಿಸಿದರು ಮತ್ತು ಮೋಕ್ಷವನ್ನು ಸಾಧಿಸಿದರು. ಕಾಯಕ ಎನ್ನುವುದು ಕಾಯವನ್ನು ಶುದ್ಧವಾಗಿಸುವ ಕ್ರಿಯೆಯಾಗಿತ್ತು ಅವರಿಗೆ. ಏಕಕಾಲಕ್ಕೆ ದೇಹವನ್ನು ಕಾಯಕದಲ್ಲಿ ಮನಸ್ಸನ್ನು ಆಧ್ಯಾತ್ಮದಲ್ಲಿ ತೊಡಗಿಸುತ್ತಿದ್ದರು. ಅಂತರಂಗ ಮತ್ತು ಬಹಿರಂಗ ಎರಡನ್ನೂ ಏಕತ್ರಗೊಳಿಸಿ ಲೋಕಾಂತದಲ್ಲೂ ಏಕಾಂತವನ್ನು ಪ್ರವೇಶಿಸುತ್ತಿದ್ದ ಅನುಭಾವಿಗಳ ಬದುಕು ನಿಜಕ್ಕೂ ಅದೊಂದು ಪವಾಡವೇ ಸರಿ. ‘ದಿಟದಿಂದ ತನ್ನ ತಾ ಕಾಣಬೇಕು, ದಿಟದಿಂದ ತನ್ನ ತಾ ಕೇಳಬೇಕು, ದಿಟದಿಂದ ತನ್ನ ತಾ ಮಾತಾಡಬೇಕು’ ಎಂದಿರುವ ಅಲ್ಲಮಪ್ರಭು ಬಹಿರಂಗಕ್ಕಿಂತ ಅಂತರಂಗ ಶುದ್ಧಿ ಮೇಲು ಎನ್ನುತ್ತಾರೆ. 

ಪುಸ್ತಕಗಳ ಓದು ಮನುಷ್ಯನನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುತ್ತದೆ. ಏಕಾಂತದಲ್ಲಿ ಕೃತಿಯೊಂದನ್ನು ಓದುತ್ತಿರುವ ಗಳಿಗೆ ಓದುಗ ತನ್ನೊಂದಿಗೆ ತಾನು ಸಂಭಾಷಣೆಗಿಳಿಯುತ್ತಾನೆ. ಪುಸ್ತಕಗಳಲ್ಲಿ ಅಂತರಂಗವನ್ನು ಶುದ್ಧವಾಗಿಸುವ ವಿಚಾರಗಳು ಹೇರಳವಾಗಿ ಲಭಿಸುತ್ತವೆ. ಶಾಂತಿನಾಥ ದೇಸಾಯಿ ಅವರ ‘ಓಂ ಣಮೋ’ ಕಾದಂಬರಿಯಲ್ಲಿ ಮೋಕ್ಷಕ್ಕೆ ದಾರಿ ಮಾಡಿಕೊಡುವ ಐದು ತತ್ವಗಳನ್ನು ಪಾತ್ರವೊಂದು ರೂಢಿಸಿಕೊಳ್ಳುವುದು ಹೀಗಿದೆ-‘ನಾನಂತೂ ಮರಣದ ಮುಖ ನೋಡಿದ ಮೇಲೆ ನಿರ್ಲಿಪ್ತನಾಗಿಬಿಟ್ಟಿದ್ದೇನೆ. ಇದಕ್ಕೆ ನಾವು ಅಪರಿಗ್ರಹ ಅಂತೀವಿ. ಹೆಂಡತಿಯಿಂದಲೂ ನಿರ್ಲಿಪ್ತ. ಅದಕ್ಕೆ ಬ್ರಹ್ಮಚರ್ಯೆ ಅಂತಾರೆ. ಬಿಜಿನಸ್ಸನ್ನೆಲ್ಲ ಮಗನ ಕೊರಳಿಗೆ ಕಟ್ಟೀನಿ-ಅದಕ್ಕಂತಾರೆ ಆಸ್ತೇಯ. ಯಾವ ಪ್ರಾಣಿಗೂ ತ್ರಾಸ ಕೊಡೋಲ್ಲ-ಅದಕ್ಕಂತಾರೆ ಅಹಿಂಸಾ. ಇನ್ನು ಸತ್ಯ, ಎಂದಾದರೂ ಸಾಯೋದೇ ಸತ್ಯ’. ಆದರೆ ಇಂದಿನ ದಿನಗಳಲ್ಲಿ ಪುಸ್ತಕಗಳನ್ನು ಓದುವ ಓದುಗರ ಸಂಖ್ಯೆ ಗಣನೀಯವಾಗಿ ಕ್ಷೀಣಿಸುತ್ತಿದ್ದು ಪುಸ್ತಕಗಳ ಓದು ಸೃಷ್ಟಿಸುವ ಧ್ಯಾನಸ್ಥದ ಸುಖದಿಂದ ಮನುಷ್ಯ ವಂಚಿತನಾಗುತ್ತಿರುವನು. 

ಕಥೆಗಾರ್ತಿ ಕಸ್ತೂರಿ ಬಾಯರಿ ತಮ್ಮ ಸಂದರ್ಶನದಲ್ಲಿ ಬದುಕಿನ ಕುರಿತು ತುಂಬ ಅರ್ಥಪೂರ್ಣವಾದ ಒಂದು ಮಾತು ಹೇಳಿರುವರು-‘ಅಸಹಾಯಕತೆ, ಹಸಿವು ನಮಗೆ ಕಾಡಲಿಲ್ಲ ಅಂದರೆ, ಹೌ ಮಚ್ ವಿ ಆರ್ ಸ್ಟ್ರಾಂಗ್ ಇನ್‍ಫ್ರಂಟ್ ಆಫ್ ಹಂಗರ್? ಅಂತ ಹ್ಯಾಂಗ ಗೊತ್ತಾಗೋದು. ಯಾರು ನಮ್ಮನ್ನು ನೋಡಿದರೂ ಒಂದು ಕೆಟ್ಟ ಭಾವ ಬರದಂಗ ಘನತೆಯ ಬದುಕು ಬದುಕೀವಿ ಅಂದರ ಅದು ಸಣ್ಣ ಮಾತಲ್ಲ’. ಲೋಕಾಂತದಲ್ಲೂ ಏಕಾಂತಕ್ಕೆ ಲಗ್ಗೆ ಇಡುವ ಅನುಭಾವಿಗಳ ಆಧ್ಯಾತ್ಮವಿದು. ಬದುಕಿನ ಪಯಣವೇ ಮನುಷ್ಯನಿಗೆ ಅಗತ್ಯವಾದ ಏನೆಲ್ಲ ಪಾಠಗಳನ್ನು ಕಲಿಸುತ್ತದೆ ಎಂದು ಅರ್ಥೈಸುತ್ತದೆ ಈ ಮಾತು.

ಏಕಮುಖವಾದ ಬದುಕಿನ ಪಯಣದಲ್ಲಿ ಕಿಂಚಿತ್ ಏರುಪೇರಾದರೂ ಮನುಷ್ಯ ಹತಾಶೆ, ಖಿನ್ನತೆ, ಉದ್ವಿಗ್ನತೆಗಳಿಗೆ ದೂಡಲ್ಪಡುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಮುಳುಗುವವನಿಗೆ ಹುಲ್ಲುಕಡ್ಡಿ ಆಸರೆ ಎನ್ನುವಂತೆ ಬದುಕುವುದನ್ನು ಕಲಿಸಲು ಯೋಗ ಮತ್ತು ಆಧ್ಯಾತ್ಮದ ಕೇಂದ್ರಗಳು ನಾಯಿಕೊಡೆಗಳಂತೆ ತಲೆ ಎತ್ತುತ್ತಿವೆ. ಮನುಷ್ಯನ ದೌರ್ಬಲ್ಯವನ್ನೇ ಬಂಡವಾಳವಾಗಿಸಿಕೊಂಡು ಹಣಗಳಿಸುತ್ತಿವೆ. ಆದರೆ ಮನುಷ್ಯ ತನ್ನನ್ನು ತಾ ಅರಿಯಲು ಇಂಥ ತರಬೇತಿ ಶಾಲೆಗಳ ಅಗತ್ಯವಿಲ್ಲ. ಜೀವನವೇ ಒಂದು ಪಾಠಶಾಲೆ. ಬದುಕಿನ ತನ್ನ ಪಯಣದ ದಾರಿಯಲ್ಲೇ ಮನುಷ್ಯ ಜೀವನದ ಪಾಠಗಳನ್ನು ಕಲಿಯಬೇಕಿದೆ. ಲೋಕಾಂತದ ನಡುವೆಯೂ ಏಕಾಂತಕ್ಕೆ ಲಗ್ಗೆ ಇಟ್ಟು ಬದುಕನ್ನು ಅರ್ಥ ಮಾಡಿಕೊಳ್ಳುವ ಮನಸ್ಥಿತಿಯನ್ನು ರೂಢಿಸಿಕೊಳ್ಳಬೇಕಿದೆ. 

-ರಾಜಕುಮಾರ ಕುಲಕರ್ಣಿ



Friday, October 4, 2024

ರಾಜಕಾರಣಕ್ಕೆ ಆಗಲಿ ನೀತಿಯ ದೀಕ್ಷೆ



(ಪ್ರಜಾವಾಣಿ, 18.05.2024

ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ನೈತಿಕ ಅಧ:ಪತನ ಸಮಾಜದಲ್ಲಿ ಆತಂಕದ ವಾತಾವರಣವನ್ನು ನಿರ್ಮಾಣ ಮಾಡಿದೆ. ದಿನಬೆಳಗಾದರೆ ಪತ್ರಿಕೆಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ರಾಜಕಾರಣಿಗಳ ಕಳಂಕಿತ ಚಾರಿತ್ರ್ಯದ ಸುದ್ಧಿಗಳು ಸಾರ್ವಜನಿಕರಲ್ಲಿ ಜಿಗುಪ್ಸೆ ಮೂಡಿಸಿವೆ. ರಾಜಕಾರಣಿಗಳ ನಡೆ ಮತ್ತು ನುಡಿ ಬಹು ಚರ್ಚಿತ ಸಂಗತಿಗಳಾಗಿವೆ. ಕಳಂಕಿತ ರಾಜಕಾರಣಿಗಳನ್ನು ನಮ್ಮ ಶಾಸಕರು ಮತ್ತು ಸಂಸದರೆಂದು ಹೇಳಿಕೊಳ್ಳಲು ಮುಜುಗರಕ್ಕೊಳಗಾಗುವ ಅಸಹಾಯಕ ಸ್ಥಿತಿಯಲ್ಲಿ ಶ್ರೀಸಾಮಾನ್ಯನಿರುವನು. ರಾಜಕಾರಣಿಗಳ ಅಧಿಕಾರ ಲಾಲಸೆ, ಕುಟುಂಬ ಪ್ರೇಮ, ತಪ್ಪುನಡೆ,  ಲೈಂಗಿಕ ಹಗರಣಗಳಿಂದ ಸಾರ್ವಜನಿಕರು ತಲೆತಗ್ಗಿಸುವಂತಾಗಿದೆ. ಒಟ್ಟಾರೆ ರಾಜಕಾರಣದಲ್ಲಿ ನಿರ್ಲಜ್ಜ ವ್ಯವಸ್ಥೆಯೊಂದು ನಿಧಾನವಾಗಿ ರೂಪುಗೊಳ್ಳುತ್ತಿದೆ.

ರಾಜಕಾರಣವು ಸಮಾಜಸೇವೆ ಎನ್ನುವುದಕ್ಕಿಂತ ಅದು ಆದಾಯದ ಮೂಲ ಎನ್ನುವ ಪರಿಕಲ್ಪನೆ ಬಲವಾಗುತ್ತಿದೆ. ಈ ಮಾತಿಗೆ ಪುಷ್ಟಿ ನೀಡುವಂತೆ ಚುನಾವಣೆಯಿಂದ ಚುನಾವಣೆಗೆ ರಾಜಕಾರಣಿಗಳ ಸಂಪತ್ತಿನಲ್ಲಿ ಗಮನಾರ್ಹವಾದ ಪ್ರಗತಿ ಕಂಡುಬರುತ್ತಿದೆ. ಕಾನೂನಿನ ಕಣ್ಣಿಗೆ ಮಣ್ಣೆರೆಚಿ ಅಕ್ರಮವಾಗಿ ಹಣಗಳಿಸುತ್ತಿರುವರೆಂಬ ಆರೋಪ ರಾಜಕಾರಣಿಗಳ ಮೇಲಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳಿಂದ ಹಣದ ಹೊಳೆ ಹರಿಯುತ್ತದೆ. ಅಭ್ಯರ್ಥಿಗಳು ಕೋಟ್ಯಾಂತರ ರೂಪಾಯಿಗಳನ್ನು ಚುನಾವಣೆಗಾಗಿ ಖರ್ಚು ಮಾಡುತ್ತಾರೆ. ರಾಜಕಾರಣವು ಬಂಡವಾಳ ಹೂಡಿ ಲಾಭ ಗಳಿಸುವ ಕ್ಷೇತ್ರವಾಗಿದೆ. ಲಾಭ ಮತ್ತು ನಷ್ಟದ ಸಂಗತಿಗಳು ಪರಿಗಣನೆಗೆ ಬಂದಾಗ ಸಮಾಜಸೇವೆ ಹಿಂದೆ ಸರಿಯುತ್ತದೆ.

ರಾಜಕಾರಣದ ಮೇಲಿರುವ ಇನ್ನೊಂದು ಗುರುತರವಾದ ಆರೋಪ ಅದು ಅವರ ಕುಟುಂಬ ಪ್ರೇಮ. ಇಂದಿನ ಕುಟುಂಬ ರಾಜಕಾರಣವನ್ನು ನೋಡಿದರೆ ಆಳರಸರ ರಾಜಪ್ರಭುತ್ವದ ವ್ಯವಸ್ಥೆ ಮತ್ತೆ ಮರುಕಳಿಸುತ್ತಿರುವಂತೆ ಭಾಸವಾಗುತ್ತಿದೆ. ರಾಜಕಾರಣಿಗಳು ತಮ್ಮ ಮಕ್ಕಳನ್ನು ಭವಿಷ್ಯದ ನೇತಾರರನ್ನಾಗಿ ತಯ್ಯಾರು ಮಾಡುತ್ತಿರುವರು. ಮತಕ್ಷೇತ್ರಗಳು ಅಪ್ಪನಿಂದ ಮಕ್ಕಳಿಗೆ ಸಲೀಸಾಗಿ ಉಡುಗೊರೆಯ ರೂಪದಲ್ಲಿ ಬಳುವಳಿಯಾಗಿ ದೊರೆಯುತ್ತಿವೆ. ಯಾವುದೇ ರಾಜಕೀಯ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ದೊರೆಯುವುದು ಬಹಳ ವಿರಳ. ಒಂದರ್ಥದಲ್ಲಿ ರಾಜಕಾರಣ ಎನ್ನುವುದು ಕುಟುಂಬದ ಪಿತ್ರಾರ್ಜಿತ ಆಸ್ತಿಯಂತಾಗಿದೆ. ಪಕ್ಷದ ಏಳ್ಗೆಗಾಗಿ ಒಂದು ಹನಿ ಬೆವರು ಹರಿಸದ ರಾಜಕಾರಣಿಗಳ ಸಂತಾನ ಅಧಿಕಾರದ ಗದ್ದುಗೆ ಏರುತ್ತಿದೆ.  

ಅಧಿಕಾರ ಪ್ರಾಪ್ತಿ ರಾಜಕಾರಣದ ಮೂಲ ಧ್ಯೇಯವಾಗಿದೆ. ಅಧಿಕಾರಕ್ಕಾಗಿ ಚುನಾವಣೆಯ ಸಂದರ್ಭ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗುತ್ತಾರೆ. ಬೇರೆ ಬೇರೆ ಪಕ್ಷಗಳಲ್ಲಿದ್ದು ಒಬ್ಬರನ್ನೊಬ್ಬರು ವಾಚಾಮಗೋಚರವಾಗಿ ಬೈಯ್ದುಕೊಂಡುವರು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಒಂದೇ ಪಕ್ಷದವರಾಗಿ ಆತ್ಮೀಯರಾಗುತ್ತಾರೆ. ಯಾರನ್ನು ನಂಬುವುದೆಂದು ಮತದಾರ ಗೊಂದಲಕ್ಕೊಳಗಾಗುತ್ತಾನೆ. ಅದೆಷ್ಟೋ ಸಂದರ್ಭಗಳಲ್ಲಿ ಅಧಿಕಾರದ ಆಸೆಯಿಂದ ಶಾಸಕ ಅಥವಾ ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿ ಬೇರೊಂದು ಪಕ್ಷವನ್ನು ಸೇರುವ ರಾಜಕಾರಣಿಗಳು ಮತದಾರರ ಮತಗಳನ್ನು ಅಪಮೌಲ್ಯಗೊಳಿಸುತ್ತಿರುವರು. ಮೌಲ್ಯ ಮತ್ತು ಸಿದ್ಧಾಂತಗಳು ಹಿನ್ನೆಲೆಗೆ ಸರಿದು ಅಧಿಕಾರ ಮತ್ತು ಹಣ ಮುನ್ನೆಲೆಗೆ ಬರುತ್ತಿವೆ. ಯುದ್ಧ ಮತ್ತು ಪ್ರೀತಿಯಲ್ಲಿ ಎಲ್ಲವೂ ನ್ಯಾಯಸಮ್ಮತ ಎನ್ನುವುದು ರಾಜಕಾರಣಕ್ಕೂ ಅನ್ವಯಿಸುತ್ತಿದೆ.  

ಇಂಥ ವಿಷಮ ಪರಿಸ್ಥಿತಿಯಲ್ಲಿ ರಾಜಕಾರಣವು ವಿದ್ಯಾರ್ಥಿಗಳು, ಶಿಕ್ಷಕರು, ಚಿಂತಕರು, ಸಾಹಿತಿಗಳಿಗೆ ಆದರ್ಶ ಮತ್ತು ಮಾದರಿಯಾಗುತ್ತಿರುವುದು ದುರಂತದ ಸಂಗತಿ. ಕೆಲವು ದಿನಗಳ ಹಿಂದೆ ನನ್ನ ಪರಿಚಿತರೊಬ್ಬರು ವೈದ್ಯಳಾಗಿರುವ ತಮ್ಮ ಮಗಳಿಗೆ ರಾಜ್ಯದ ಮಂತ್ರಿಯೊಬ್ಬರಿಗೆ ಚಿಕಿತ್ಸೆ ನೀಡುವ ಭಾಗ್ಯ ಪ್ರಾಪ್ತವಾಯಿತೆಂದು ತುಂಬ ಅಭಿಮಾನದಿಂದ ವಾಟ್ಸ್‍ಆ್ಯಪ್‍ನಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದರು. ರಾಜಕಾರಣವು ಸಮಾಜವನ್ನು ಹೇಗೆ ಪ್ರಭಾವಿಸುತ್ತಿದೆ ಎನ್ನುವುದಕ್ಕೆ ಇದೊಂದು ನಿದರ್ಶನ. ವೃತ್ತಿಗೆ ರಾಜಿನಾಮೆ ನೀಡಿ ರಾಜಕಾರಣವನ್ನು ಪ್ರವೇಶಿಸುವವರ ಸಂಖ್ಯೆ ಹೆಚ್ಚುತ್ತಿದೆ. ರಾಜಕಾರಣವು ಸಮಾಜವನ್ನು ಪ್ರಭಾವಿಸುತ್ತಿರುವ ಇಂಥ ಹೊತ್ತಿನಲ್ಲಿ ಅದು ನೈತಿಕವಾಗಿ ಕೆಳಮಟ್ಟಕ್ಕಿಳಿಯುವುದು ಜನಜೀವನದ ಅಧೋಗತಿಗೆ ಕಾರಣವಾಗುತ್ತದೆ.

ಯೇಟ್ಸ್ ಹೇಳಿದ ಮಾತು ಹೀಗಿದೆ- ‘ಬೇರೆಯವರ ಜೊತೆ ಜಗಳವಾಡುವವನು ರಾಜಕಾರಣಿ ಆಗುತ್ತಾನೆ. ತನ್ನ ಜೊತೆಗೇ ಜಗಳ ಮಾಡಿಕೊಳ್ಳುವವನು ಕವಿ ಆಗುತ್ತಾನೆ’. ತನ್ನೊಂದಿಗೇ ಜಗಳ ಮಾಡುವುದೆಂದರೆ ಆತ್ಮವಿಶ್ಲೇಷಣೆಗೆ, ಆತ್ಮವಿಮರ್ಶೆಗೆ ಒಳಗಾಗುವುದು ಎಂದರ್ಥ. ಯೇಟ್ಸ್ ಪ್ರಕಾರ ರಾಜಕಾರಣಿ ಎಂದಿಗೂ ಆತ್ಮವಿಮರ್ಶೆಗೆ ಇಳಿಯಲಾರ. ಸದಾಕಾಲ ಲೋಕಾಂತವನ್ನೇ ನೆಚ್ಚಿಕೊಂಡವರಿಗೆ ಏಕಾಂತವನ್ನು ಪ್ರವೇಶಿಸುವ ಎದೆಗಾರಿಕೆ ಇರುವುದಾದರೂ ಹೇಗೆ ಸಾಧ್ಯ?. ಆತ್ಮವಿಮರ್ಶೆ ಮಾಡಿಕೊಳ್ಳದ ರಾಜಕಾರಣಿಗೆ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ಅರಿವಾಗಲಾರದು. ಆಗ ನೈತಿಕತೆ ಮೂಲೆಗುಂಪಾಗಿ ಅನೈತಿಕತೆ ವಿಜೃಂಭಿಸುತ್ತದೆ.

ರಾಜಕಾರಣದಲ್ಲಿ ನೈತಿಕತೆಯನ್ನು ವ್ರತದಂತೆ ಪಾಲಿಸಿಕೊಂಡುಬಂದ ಅನೇಕ ರಾಜಕಾರಣಿಗಳಿರುವರು. ರೈಲು ದುರಂತವಾದಾಗ ಮಂತ್ರಿಗಳಾಗಿದ್ದ ಲಾಲ್‍ಬಹದ್ದೂರ್ ಶಾಸ್ತ್ರಿ ಅವರು ನೈತಿಕೆ ಹೊಣೆ ಹೊತ್ತು ರಾಜಿನಾಮೆ ನೀಡಲು ಮುಂದಾದ ಪ್ರಸಂಗ ಇಂದಿಗೂ ರಾಜಕಾರಣದಲ್ಲಿ ಆದರ್ಶ ನಡೆಯಾಗಿ ಉಳಿದಿದೆ. ಜಯಪ್ರಕಾಶ ನಾರಾಯಣ, ಲೋಹಿಯಾ, ಬಿ.ಸಿ.ರಾಯ್, ಜಾರ್ಜ್ ಫರ್ನಾಂಡಿಸ್, ಕರ್ಪೂರಿ ಠಾಕೂರ, ವಾಜಪೇಯಿ, ಎಸ್.ನಿಜಲಿಂಗಪ್ಪ, ಶಾಂತವೇರಿ ಗೋಪಾಲಗೌಡರು ತಮ್ಮ ಪ್ರಾಮಾಣಿಕತೆಯಿಂದ ರಾಜಕಾರಣಕ್ಕೆ ಒಂದು ಘನತೆ ತಂದುಕೊಟ್ಟರು. ಕುಟುಂಬವರ್ಗವನ್ನು ರಾಜಕಾರಣದಿಂದ ದೂರವೇ ಇಟ್ಟಿದ್ದ ಈ ಮಹನೀಯರು ಸದಾಕಾಲ ಪ್ರಾತ:ಸ್ಮರಣೀಯರಾಗಿ ಸಾರ್ವಜನಿಕರ ಸ್ಮರಣೆಯಲ್ಲಿ ಉಳಿದಿರುವರು. ಆದರೆ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇಂಥ ರಾಜಕಾರಣಿಗಳ ಸಂಖ್ಯೆ ಸಾರ್ವಜನಿಕರು ಆತಂಕಪಡುವಷ್ಟು ಕ್ಷೀಣಿಸಿದೆ.

‘ಪ್ರಕೃತಿ ಸೃಷ್ಟಿಸಿದ ಜೀವಿಗಳಲ್ಲೆಲ್ಲಾ ಅತ್ಯಂತ ನೀಚನೆಂದರೆ ಮನುಷ್ಯ. ಮನುಷ್ಯನಾಗಿಯೇ ಈ ಮಾತು ಹೇಳಬೇಕಾಗಿ ಬಂದಿರುವುದು ಇನ್ನೂ ದೊಡ್ಡ ನೀಚತನ ಅನ್ನಿಸುತ್ತಿದೆ’ ಎಂದು ದಾಸ್ತೋವಸ್ಕಿ ಅಂದಿರುವ ಮಾತು ಇಂದಿನ ರಾಜಕಾರಣವನ್ನು ಕುರಿತೇ ಹೇಳಿದಂತಿದೆ. ನೀತಿ ಇಲ್ಲದ ರಾಜಕಾರಣವನ್ನು ಗಾಂಧೀಜಿ ಸಾಮಾಜಿಕ ಪಾಪ ಎಂದಿರುವರು. ರಾಜಕಾರಣದ ಕುರಿತು ಸಾರ್ವಜನಿಕರಲ್ಲಿ ಮನೆಮಾಡಿರುವ ಭ್ರಮನಿರಸನ ಮತ್ತು ಅಸಹ್ಯ ಭಾವನೆಯನ್ನು ತೊಡೆದುಹಾಕಲು ರಾಜಕಾರಣಕ್ಕೆ ನೀತಿಯ ದೀಕ್ಷೆ ನೀಡುವುದು ಸಧ್ಯದ ತುರ್ತು ಅಗತ್ಯವಾಗಿದೆ. ಆದರೆ ಸಮಸ್ಯೆ ಇರುವುದು ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎನ್ನುವುದರಲ್ಲಿ.

-ರಾಜಕುಮಾರ ಕುಲಕರ್ಣಿ 

 

Thursday, September 5, 2024

ಜೀವನೋತ್ಸಾಹ ಕುಗ್ಗಿಸದಿರಲಿ ದುಡಿಮೆ

    


(ಪ್ರಜಾವಾಣಿ, 03.05.2024)

    ನನ್ನ ಬಂಧುವೊಬ್ಬರು ವೃತ್ತಿಯಿಂದ ನಿವೃತ್ತರಾಗಿ ಎರಡು ವರ್ಷಗಳಾದವು. ವೃತ್ತಿಯಲ್ಲಿದ್ದಾಗ ತುಂಬ ಲವಲವಿಕೆಯಿಂದ ಇದ್ದವರು ನಿವೃತ್ತಿಯ ನಂತರ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡವರಂತೆ ವರ್ತಿಸುತ್ತಿರುವರು. ಸುಮಾರು ಮೂವತ್ತೈದು ವರ್ಷಗಳಷ್ಟು ಕಾಲ ಉದ್ಯೋಗವನ್ನೇ ಬದುಕಾಗಿಸಿಕೊಂಡು ಬಾಳಿದವರು ಅವರು. ದಿನನಿತ್ಯದ ಕಚೇರಿಯ ಕೆಲಸ ಮತ್ತು ಹಣ ಉಳಿತಾಯದ ಯೋಜನೆಯಲ್ಲೇ ಬದುಕಿನ ಬಹುಭಾಗವನ್ನು ಕಳೆದವರಿಗೆ ಈಗ ಸಮಯ ಕಳೆಯುವುದೇ ಕಷ್ಟವಾಗಿದೆ. ವೃತ್ತಿಯಲ್ಲಿದ್ದಾಗ ಕೈತುಂಬ ಸಂಬಳ ತರುವ ಉದ್ಯೋಗವಿದ್ದರೂ ಹಣವನ್ನು ದ್ವಿಗುಣಗೊಳಿಸುವುದರಲ್ಲಿದ್ದ ಆಸಕ್ತಿ ಅವರಿಗೆ ಬೇರೆ ಯಾವ ಸೃಜನಾತ್ಮಕ ಹವ್ಯಾಸಗಳ ಕುರಿತು ಇರಲಿಲ್ಲ. ಪರಿಣಾಮವಾಗಿ ನಿವೃತ್ತಿಯ ನಂತರ ಕೆಲಸ ಇಲ್ಲದಂತಾಗಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ ಜರ್ಜರಿತರಾಗಿರುವರು.

ತತ್ವಜ್ಞಾನಿ ಮತ್ತು ಅರ್ಥಶಾಸ್ತ್ರಜ್ಞ ಕಾರ್ಲ್‍ಮಾರ್ಕ್ಸ್ ‘ನಾವು ಮನುಷ್ಯರಾಗಿ ಬಿಚ್ಚಿಕೊಳ್ಳುವುದೇ ಕಾಯಕದ ಮುಖಾಂತರ’ ಎಂದಿರುವರು. ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದು ಕೆಲಸದ ಮಹತ್ವವನ್ನು ತಿಳಿಹೇಳಿದರು. ಜನಪದರು ತಮ್ಮ ದಿನನಿತ್ಯದ ಕಾಯಕದ ಜೊತೆಗೆ ಹಾಡು, ಲಾವಣಿ, ಒಗಟುಗಳನ್ನು ಹೇಳುತ್ತ ದುಡಿಮೆಯನ್ನು ಸೃಜನಶೀಲ ಕಲೆಯಾಗಿಸುತ್ತಿದ್ದರು. ತತ್ವಜ್ಞಾನಿಗಳು, ಅನುಭಾವಿಗಳು, ಶರಣರು, ಚಿಂತಕರು ‘ಮನುಷ್ಯನು ಕಾಯಕದ ಮೂಲಕ ತನ್ನ ಎಲ್ಲ ಮಾನವೀಯ ಸಾಧ್ಯತೆಗಳನ್ನು ನಿಜಮಾಡಬಲ್ಲವನಾಗುತ್ತಾನೆ’ ಎಂದು ದುಡಿಮೆಯನ್ನು ವಿಶಾಲ ಅರ್ಥದಲ್ಲಿ ವ್ಯಾಖ್ಯಾನಿಸಿರುವರು. ಆದರೆ ಇಂದು ಹಣ ಮತ್ತು ಅಧಿಕಾರವೇ ಕೆಲಸದ ಹಿಂದಿನ ಪ್ರೇರಣೆಗಳಾಗಿರುವ ಸಂದರ್ಭದಲ್ಲಿ ಅತಿಯಾದ ದುಡಿಮೆ ಎನ್ನುವುದು ಅದೊಂದು ರೋಗ ಲಕ್ಷಣವಾಗಿದೆ ಎನ್ನುತ್ತಾರೆ ಸಮಾಜ ವಿಜ್ಞಾನಿ 

ಮನುಷ್ಯರನ್ನು ಬಿಡುವಿಲ್ಲದೆ ದುಡಿಯುವ ಯಂತ್ರಗಳನ್ನಾಗಿಸುವ ಹುನ್ನಾರಕ್ಕೆ ಶಾಲಾ ಶಿಕ್ಷಣದಿಂದಲೇ ಅಡಿಪಾಯ ಹಾಕಲಾಗುತ್ತಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಬಿಡುವಿರದ ಓದಿನ ವಾತಾವರಣಕ್ಕೆ ಒಳಗಾಗುತ್ತಿರುವರು. ವಿಶೇಷವಾಗಿ ವಸತಿಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಸಂಬಂಧಿತ ಓದಿಗಾಗಿ ಹೆಚ್ಚಿನ ಸಮಯವನ್ನು ವ್ಯಯಿಸಬೇಕಾಗಿದೆ. ತರಗತಿಗಳಲ್ಲಿನ ಪಾಠದ ಅವಧಿ ಮಾತ್ರವಲ್ಲದೆ ಬೆಳಗ್ಗೆ ಮತ್ತು ರಾತ್ರಿ ಕೂಡ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಓದಿನಲ್ಲಿ ತಮ್ಮ ಹೆಚ್ಚಿನ ಸಮಯವನ್ನು ವಿನಿಯೋಗಿಸುವಂತೆ ನೋಡಿಕೊಳ್ಳಲಾಗುತ್ತದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಾಚೆ ಯಾವ ಮನೋರಂಜನೆಗೂ ಅವಕಾಶವಿರುವುದಿಲ್ಲ. ಸಹಜವಾಗಿಯೇ ಇಂಥ ವಾತಾವರಣದಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಯಂತ್ರಗಳಂತಾಗುವರು. ಬದುಕಿನಲ್ಲಿ ದುಡಿಮೆ ಮತ್ತು ಆ ಮೂಲಕ ಹಣ ಗಳಿಕೆಯೇ ಬದುಕಿನ ಧ್ಯೇಯವಾಗುವುದು. 

ನನ್ನೂರಿನ ರೈತ ಕುಟುಂಬಗಳವರು ವ್ಯವಸಾಯ ಮಾಡುತ್ತಿದ್ದಾಗ ಶ್ರಾವಣದ ಮಳೆಯ ದಿನಗಳು ಮತ್ತು ಬೇಸಿಗೆ ಕಾಲದ ಬಿಡುವಿನ ವೇಳೆಯಲ್ಲಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ನಿರತವಾಗಿರುತ್ತಿದ್ದರು. ಪುರಾಣ-ಪ್ರವಚನಗಳನ್ನು ಆಲಿಸುವುದು, ನಾಟಕಗಳನ್ನಾಡುವುದು, ಕೋಲಾಟ, ಭಜನೆಯಂತಹ ಸೃಜನಶೀಲ ಚಟುವಟಿಕೆಗಳ ಮೂಲಕ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಆರೋಗ್ಯಪೂರ್ಣವಾದ ದೀರ್ಘಾವಧಿ ಬದುಕನ್ನು ಬದುಕುತ್ತಿದ್ದರು. ಅವರ ನಂತರದ ಪೀಳಿಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ರೀಯಲ್ ಏಸ್ಟೇಟ್ ಕುಳಗಳಿಗೆ ಕೃಷಿಭೂಮಿಯನ್ನು ಪರಭಾರೆ ಮಾಡಿ ಈಗ ಅದೇ ಕಂಪನಿಗಳಲ್ಲಿ ಉದ್ಯೋಗಿಗಳಾಗಿ ದುಡಿಯುವ ಯಂತ್ರದಂತಾಗಿರುವರು. ಜೀವನೋತ್ಸಾಹವನ್ನು ಕಳೆದುಕೊಂಡು ಬದುಕುತ್ತಿರುವವರನ್ನು ಮಧ್ಯವಯಸ್ಸಿನಲ್ಲೇ ವೃದ್ಧಾಪ್ಯದ ಚಹರೆ ಆವರಿಸಿಕೊಂಡಿದೆ. ಈ ಸಮಸ್ಯೆ ಕೇವಲ ಕೃಷಿಕರದು ಮಾತ್ರವಲ್ಲ ಅದು ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿದೆ.

ಕಾಪೆರ್Çೀರೇಟ್ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ ಯುವಜನಾಂಗ ಇತ್ತೀಚಿನ ದಿನಗಳಲ್ಲಿ ಉದ್ಯೋಗ ತ್ಯಜಿಸಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ತಮ್ಮೊಳಗಿನ ಸೃಜನಶೀಲತೆ ಅತಿಯಾದ ದುಡಿಮೆಯಿಂದ ನಶಿಸುತ್ತಿದೆ ಎನ್ನುವ ಆತಂಕವೇ ಅವರ ಈ ನಿರ್ಧಾರಕ್ಕೆ ಕಾರಣ. ಕೃಷಿಕ್ಷೇತ್ರದ ದುಡಿಮೆಯ ಬಿಡುವಿನ ವೇಳೆಯಲ್ಲಿ ಬರವಣಿಗೆ, ಕಲೆ, ಸಂಗೀತದಂತಹ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಸೃಜನಾತ್ಮಕವಾಗಿ ಬದುಕನ್ನು ರೂಪಿಸಿಕೊಳ್ಳುತ್ತಿರುವರು. ಹಣ ಮತ್ತು ದುಡಿಮೆಯೇ ಪ್ರಧಾನವಾದ ಸಮಾಜದಲ್ಲಿ ಇಂಥ ಪರಿವರ್ತನೆಗಳು ಆಗಾಗ ಸಂಭವಿಸುತ್ತ ಬದುಕಿಗೆ ಸೃಜನಶೀಲತೆಯ ಅಗತ್ಯವನ್ನು ಮನಗಾಣಿಸಿಕೊಡುತ್ತಿವೆ.

ದುಡಿಮೆ ಎನ್ನುವುದು ಕೇವಲ ಕಚೇರಿ ಮತ್ತು ಕಾರ್ಖಾನೆಗೆ ಸಿಮೀತವಾಗದೆ ಅದು ಮನೆಯನ್ನೂ ಪ್ರವೇಶಿಸಿದೆ. ಕೋವಿಡ್ ಸಂದರ್ಭದಲ್ಲಿ ಅನಿವಾರ್ಯವಾಗಿದ್ದ ವರ್ಕ್ ಫ್ರಾಮ್ ಹೋಮ್ ಎನ್ನುವ ಪರಿಕಲ್ಪನೆಯನ್ನು ಈಗ ಉದ್ಯೋಗಿಗಳು ಹೆಚ್ಚು ಇಷ್ಟಪಡುತ್ತಿರುವರು. ಮನೆಯೇ ಕಚೇರಿಯಾಗಿ ರೂಪಾಂತರಗೊಳ್ಳುತ್ತಿರುವ ಈ ಪ್ರಕ್ರಿಯೆ ಮನುಷ್ಯನೊಳಗಿನ ಸೃಜನಶೀಲತೆಯನ್ನು ಮಾತ್ರ ನಷ್ಟಪಡಿಸುತ್ತಿಲ್ಲ ಅದು ಸಂಬಂಧಗಳ ಸ್ವರೂಪವನ್ನೂ ಪರಿವರ್ತಿಸುತ್ತಿದೆ. ಅನೇಕ ಕುಟುಂಬಗಳಲ್ಲಿ ಮಕ್ಕಳೊಂದಿಗೆ ಕಾಲಕಳೆಯಲು ಸಮಯವಿಲ್ಲದಷ್ಟು ಪಾಲಕರು ದುಡಿಮೆಗೆ ಅಂಟಿಕೊಂಡಿರುವರು. ಈ ಸಂದರ್ಭ ಗ್ರೀಕ್ ತತ್ವಜ್ಞಾನಿ ಪ್ಲೇಟೋನ ಪರಿಕಲ್ಪನೆಯ ಆದರ್ಶರಾಜ್ಯದಲ್ಲಿ ಕಲೆ ಮತ್ತು ಸಾಹಿತ್ಯಕ್ಕೂ ಜಾಗವಿದೆ ಎನ್ನುವುದನ್ನು ನಾವು ಸ್ಮರಿಸಿಕೊಳ್ಳಬೇಕಿದೆ. ತನ್ನ ಅತಿಯಾದ ರಾಜಕೀಯ ಕಾರ್ಯವ್ಯಾಪ್ತಿಯಿಂದಾಗಿ ಸೃಜನಶೀಲತೆಯಿಂದ ಸದಾಕಾಲ ದೂರವೇ ಇರುವ ರಾಜಕಾರಣಕ್ಕೆ ಪಾಠಕಲಿಸಲೆಂಬಂತೆ ಚಾಪ್ಲಿನ್ ತನ್ನ ‘ಗ್ರೇಟ್ ಡಿಕ್ಟೇಟರ್’ ಸಿನಿಮಾದಲ್ಲಿ ಹಿಟ್ಲರ್‍ನನ್ನು ನಗಲು ಅರ್ಹವಾದ ಪಾತ್ರವಾಗಿಸಿದ. 

ದುಡಿಮೆಯ ಅನಾರೋಗ್ಯ ಆ ಕ್ಷೇತ್ರಕ್ಕಷ್ಟೇ ಸೀಮಿತವಾಗಿ ಉಳಿಯದೆ ಅದು ನಮ್ಮ ವಿರಾಮ, ವಿಶ್ರಾಂತಿಯ ಕಾಲಕ್ಕೂ ಹಬ್ಬಿದೆ ಎಂದಿರುವ ಯಶವಂತ ಚಿತ್ತಾಲರು ‘ದುಡಿಮೆಯ ಕ್ಷೇತ್ರದಿಂದ ಪ್ರಭಾವಿತಗೊಂಡ ಮನಸ್ಸನ್ನು ಅಲ್ಲೇ ಬಿಟ್ಟು ಬರುವುದು ಸಾಧ್ಯವಿದ್ದಿದ್ದರೆ, ಬಿಟ್ಟುಬರುವುದುಳಿಯಲಿ ನಮ್ಮೊಳಗಿನ ಅತ್ಯಂತ ಮಹತ್ವದ್ದೇನೋ ಅಲ್ಲಿ ನಾಶವಾಗುತ್ತಿದೆ ಎಂಬ ಅರಿವೂ ನಮಗೆ ಇಲ್ಲದಿರುವುದು ಇಂದಿನ ನಮ್ಮ ಬದುಕಿನ ದುರದೃಷ್ಟವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿರುವರು. ಪರಿಸರದಲ್ಲಿ ಮನುಷ್ಯನೊಬ್ಬನನ್ನು ಹೊರತುಪಡಿಸಿ ಬೇರೆ ಯಾವ ಜೀವಸಂತತಿಯೂ ಅತಿಯಾದ ದುಡಿಮೆಗೆ ಅಂಟಿಕೊಂಡಿಲ್ಲ. ಆದರೆ ನಾಗರಿಕನೆನಿಸಿಕೊಂಡ ಮನುಷ್ಯಸಮಾಜದಲ್ಲಿ ಮಾತ್ರ ದುಡಿಮೆಯ ಕ್ಷೇತ್ರ ಆತನ ಆತ್ಮ ಮತ್ತು ಮನಸ್ಸನ್ನು ಕೊಲ್ಲುವ ಬೇನೆಯ ತಾಣವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ನಮ್ಮಲ್ಲೇ ಇದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ. 

-ರಾಜಕುಮಾರ ಕುಲಕರ್ಣಿ 



Friday, August 2, 2024

ಸದ್ದನ್ನೇ ನೆಚ್ಚಿದವರಿಗೆ ಮೌನದ ಹಂಗಿಲ್ಲ

 




      (ಪ್ರಜಾವಾಣಿ, ೧೬.೦೪.೨೦೨೪)

    ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರದ ಭರಾಟೆ ತಾರಕಕ್ಕೇರಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ಆರೋಪ, ಪ್ರತ್ಯಾರೋಪ, ವೈಯಕ್ತಿಕ ನಿಂದನೆ ಅವ್ಯಾಹತವಾಗಿ ಮುಂದುವರೆದಿದೆ. ರಾಜಕಾರಣದಲ್ಲಿ ಭಾಷೆ ಹೇಗೆ ದುರ್ಬಳಕೆಯಾಗುತ್ತದೆ ಎನ್ನುವುದಕ್ಕೆ ಚುನಾವಣೆಯೇ ಅತ್ಯುತ್ತಮ ನಿದರ್ಶನ. ಭಾಷೆಯನ್ನು ಬೈಗುಳವಾಗಿಸುವ ನಮ್ಮ ರಾಜಕಾರಣಿಗಳು ‘ಭಾಷೆಯಲ್ಲಿ ಮಾತನಾಡಲು ತೊಡಗಿದ್ದೇ ಮನುಷ್ಯ ಸುಳ್ಳು ಹೇಳಲು ತೊಡಗುತ್ತಾನೆ’ ಎನ್ನುವ ಝೆನ್ ಸಾಹಿತ್ಯದಲ್ಲಿನ ಮಾತನ್ನು ನಿಜವಾಗಿಸಿರುವರು. ಬದುಕಿನ ಅಸ್ತಿತ್ವದ ಅರ್ಥವನ್ನು ಗ್ರಹಿಸುವ ಸಮರ್ಥ ಮಾಧ್ಯಮವಾಗಿರುವ ಭಾಷೆಯನ್ನು ವ್ಯತಿರಿಕ್ತ ಉದ್ದೇಶಗಳಿಗಾಗಿ ಬಳಸುತ್ತಿರುವ ಶಕ್ತಿಯಾಗಿ ರಾಜಕಾರಣವು ವಿಜೃಂಭಿಸುತ್ತಿದೆ

ಸದ್ದನ್ನೇ ತುಂಬ ನೆಚ್ಚಿಕೊಂಡ ರಾಜಕಾರಣಕ್ಕೆ ಮೌನದ ಪರಿಚಯವಿಲ್ಲ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ಚುನಾವಣಾ ಪ್ರಚಾರದ ಸಂದರ್ಭ ರಾಜಕಾರಣಿಗಳಿಂದ ಮಾತಿನ ವಾಗ್ಝರಿ ಅವ್ಯಾಹತವಾಗಿ ಹರಿಯುತ್ತದೆ. ತಮ್ಮ ಮಾತಿನ ವಾಗ್ಬಾಣಗಳಿಂದ ಎದುರಾಳಿಗಳ ಚಾರಿತ್ರ್ಯ ಹರಣಗೊಳಿಸುತ್ತಾರೆ. ಪ್ರತಿಸ್ಪರ್ಧಿಗಳ ತೇಜೋವಧೆಗಾಗಿ ಸಾರ್ವಜನಿಕ ವೇದಿಕೆಗಳಲ್ಲಿ ಮಾತ್ರವಲ್ಲದೆ ಫೇಸ್‍ಬುಕ್ ಮತ್ತು ವಾಟ್ಸ್‍ಆ್ಯಪ್‍ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿಯೂ ರಾಜಕಾರಣಿಗಳಿಂದ ಭಾಷೆಯ ದುರ್ಬಳಕೆಯಾಗುತ್ತಿದೆ. ಜೊತೆಗೆ ರಾಜಕಾರಣದಲ್ಲಿ ಭಾಷೆ ಭ್ರಷ್ಟವಾಗುತ್ತದೆ. ರಾಜಕಾರಣಿಗಳು ಚುನಾವಣೆ ಸಂದರ್ಭ ಮತದಾರರಿಗೆ ಅನೇಕ ಆಶ್ವಾಸನೆಗಳನ್ನು ನೀಡಿ ನಂತರ ವಚನಭ್ರಷ್ಟರಾಗುವುದು ಸಹಜವಾಗಿದೆ. ವಚನ ಎಂದರೆ ಕೊಟ್ಟಮಾತು ಎಂದರ್ಥ. ಮಾತಿನಲ್ಲಿ ಸಂವಹನದ ವಾಹಕವಾಗಿ ಭಾಷೆ ಇದೆ. ಕೊಟ್ಟ ಮಾತಿನಂತೆ ನಡೆದುಕೊಳ್ಳದ ರಾಜಕಾರಣಿಗಳು ಭಾಷೆಯನ್ನು ಭ್ರಷ್ಟವಾಗಿಸುತ್ತಿರುವರು. 

ಯಾವ ಮಾರಕಾಸ್ತ್ರಗಳಿಲ್ಲದೆ ರಾಜಕಾರಣವು ಹಿಂಸೆಯನ್ನು ಭಾಷೆಯ ಮೂಲಕ ಹರಡುತ್ತಿದೆ. ರಾಜಕಾರಣದಲ್ಲಿ ಹಿಂಸೆಯ ಪದಗಳು ಪುಂಖಾನುಪುಂಖವಾಗಿ ಬಳಕೆಯಾಗುತ್ತಿವೆ. ಹೊಡಿ, ಬಡಿ, ಕಡಿ, ಕತ್ತರಿಸು, ತುಂಡರಿಸುನಂತಹ ಪದಗಳನ್ನು ರಾಜಕಾರಣಿಗಳು ಎಗ್ಗಿಲ್ಲದೆ ಬಳಸುತ್ತಾರೆ. ಒಂದರ್ಥದಲ್ಲಿ ಭಾಷೆಯನ್ನು ದ್ವೇಷ ಸಾಧನೆಯ ವಾಹಕವಾಗಿ ಬಳಸುತ್ತಿರುವವರಲ್ಲಿ ರಾಜಕಾರಣಿಗಳ ಸಂಖ್ಯೆ ಅಧಿಕವಾಗಿದೆ. ಸಾರ್ವಜನಿಕ ವೇದಿಕೆಗಳಲ್ಲಿ ಈ ರೀತಿಯ ಹಿಂಸಾಪದಗಳನ್ನು ನೇತಾರರು ಉಚ್ಚರಿಸುತ್ತಿರುವುದರಿಂದ ಇಂದಿನ ನವಪೀಳಿಗೆಯಲ್ಲಿ ಭಾಷೆ ಎನ್ನುವುದು ದ್ವೇಷ ಬಿತ್ತುವ ಸಾಧನ ಎನ್ನುವ ಮನೋಭಾವ ಬಲವಾಗುತ್ತಿದೆ. ಈಗಾಗಲೇ ನಾಡಿನ ಭಾಷೆ ಮತ್ತು ಯುವಜನಾಂಗದ ನಡುವೆ ಬಹುದೊಡ್ಡ ಕಂದಕ ನಿರ್ಮಾಣವಾಗಿರುವಾಗ ಭಾಷೆಯನ್ನು ಕೆಟ್ಟ ಪದಗಳ ಮೂಲಕ ಪರಿಚಯಿಸುವುದರಿಂದ ಮತ್ತಷ್ಟು ಅಪಾಯವನ್ನು ಆಹ್ವಾನಿಸಿದಂತೆ ಆಗುತ್ತದೆ.   

ರಾಜಕಾರಣವು ಭಾಷೆಯನ್ನು ದುರ್ಬಳಕೆ ಮಾಡುವ ವಿಷಯದಲ್ಲಿ ತನ್ನ ಸುತ್ತಲಿನ ಪರಿಸರವನ್ನು ಕೂಡ ಪ್ರಭಾವಿಸುತ್ತಿದೆ. ಪರಿಣಾಮವಾಗಿ ವಿಶ್ವವಿದ್ಯಾಲಯಗಳ ವಿಶ್ವವಿದ್ಯಾಲಯಗಳ ಸೆನೆಟ್, ಸಿಂಡಿಕೇಟ್‍ನಂತಹ  ಅಕಾಡೆಮಿಕ್ ವಲಯಗಳಿಗೂ ಅದು ವ್ಯಾಪಿಸಿದೆ. ಸಾಹಿತ್ಯ ಪರಿಷತ್ತಿನಂತಹ ಪ್ರಾತಿನಿಧಿಕ ಸಂಸ್ಥೆಯ ಚುನಾವಣೆಗೂ ತನ್ನದೇ ಆದ ಛಾಪು ಉಳ್ಳ ರಾಜಕಾರಣದ ಕಳೆ ಆವರಿಸಿದೆ. ಬುದ್ಧಿಜೀವಿಗಳು ಮತ್ತು ಸಾಹಿತಿಗಳು ಸಹ ರಾಜಕಾರಣಿಗಳಂತೆ ಬೇರೆಯವರ ಅಪಮಾನ ಮತ್ತು ತೇಜೋವಧೆಗೆ ಕಾರಣವಾಗುವ ಸನ್ನಿವೇಶಗಳು ಮೇಲಿಂದ ಮೇಲೆ ಹುಟ್ಟಿಕೊಳ್ಳುತ್ತಿವೆ. ಬುದ್ಧಿಜೀವಿಗಳು ಮತ್ತು ಸಾಹಿತಿಗಳು ರಾಜಕಾರಣದ ಭಾಷೆಯನ್ನೇ ಬಳಸುತ್ತ ಭಾಷೆಯನ್ನು ಕ್ರೂರ ಬೈಗುಳಾಗಿಸುತ್ತಿರುವುದು ಅದು ಭಾಷೆಯೊಂದರ ಬಹುದೊಡ್ಡ ದುರಂತವಾಗಿದೆ. 

ಉತ್ತರರಾಮ ಚರಿತದಲ್ಲಿ ಭವಭೂತಿ ‘ಮಾತು’ ಕುರಿತು ಹೇಳಿದ್ದು ಹೀಗಿದೆ-‘ನಿತ್ಯದ ಬಳಕೆಯ ಸಜ್ಜನರ ನುಡಿಗಳಲ್ಲಿ ಅರ್ಥವನ್ನು ಅನುಸರಿಸಿ ಪದಗಳು ಹೊರಬರುತ್ತವೆ. ಆದರೆ ಹಿರಿಯರಾದ ಮಹಾಮಹಿಮರ ಮಾತುಗಳಲ್ಲಿ ಮಾತನ್ನೇ ಅರ್ಥವು ಹಿಂಬಾಲಿಸುತ್ತದೆ’. ಬಸವಣ್ಣನವರು ‘ನುಡಿದರೆ ಮುತ್ತಿನಹಾರದಂತಿರಬೇಕು, ಮಾಣಿಕ್ಯದ ದೀಪ್ತಿಯಂತಿರಬೇಕು’ ಎಂದು ಮಾತನ್ನು ಮುತ್ತು ಮತ್ತು ಮಾಣಿಕ್ಯಕ್ಕೆ ಹೋಲಿಸಿರುವರು. ಅನುಭಾವಿಗಳು ಹೇಳಿದಂತೆ ಮಾತಿಗೆ ಅಥವಾ ಭಾಷೆಗೆ ಒಂದು ಘನತೆ ತಂದುಕೊಡುವ ಬದಲು ರಾಜಕಾರಣಿಗಳು ಭಾಷೆಯ ಘನತೆಯನ್ನೇ ಹಾಳುಗೆಡುವುತ್ತಿರುವರು.

ರಾಜಕಾರಣಿಗಳು ಭಾಷೆಯನ್ನು ಮಾತಿನಲ್ಲಿ ಮಾತ್ರವಲ್ಲದೆ ಬರವಣಿಗೆಯಲ್ಲೂ ದುರ್ಬಳಕೆ ಮಾಡುತ್ತಿರುವರು. ರಾಜಕೀಯ ಬದುಕಿನ ಸಂಧ್ಯಾಕಾಲದಲ್ಲಿ ಆತ್ಮಚರಿತ್ರೆಯ ಬರವಣಿಗೆಗೆ ಕೈಹಾಕುವ ರಾಜಕಾರಣಿಗಳ ಸಂಖ್ಯೆ ಬಹಳಷ್ಟಿದೆ. ಪುಸ್ತಕಗಳ ಓದಿನಿಂದ ದೂರವೇ ಇರುವವರು ಅದುಹೇಗೆ ಭಾಷೆಯನ್ನು ಬರವಣಿಗೆಗೆ ಒಗ್ಗಿಸಿಕೊಳ್ಳುವರು ಎನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಇಂಥ ಕೆಲಸಕ್ಕೆಂದೇ ಬಾಡಿಗೆ ಬರಹಗಾರರು ಅಧಿಕ ಸಂಖ್ಯೆಯಲ್ಲಿರುವಾಗ ರಾಜಕಾರಣಿಗಳಿಗೆ ಬರವಣಿಗೆಯ ಕೆಲಸ ಸಲೀಸಾಗುತ್ತಿದೆ. ರಾಜಕಾರಣಿಯೊಬ್ಬರ ಆತ್ಮಕಥೆ ಪ್ರಕಟವಾದರೆ ವಿರೋಧಿಗಳ ತೇಜೋವಧೆಗೆ ವೇದಿಕೆ ನಿರ್ಮಾಣವಾದಂತೆ. ಹಿಂದೆಲ್ಲ ರಾಜಕೀಯ ನಾಯಕರ ಆತ್ಮಚರಿತ್ರೆಯಲ್ಲಿ ಒಂದು ಕಾಲದ ಸಾಮಾಜಿಕ ಬದುಕು, ಸ್ವಾತಂತ್ರ್ಯ ಹೋರಾಟ, ಭಾಷಾ ಚಳವಳಿಗಳು ಅನಾವರಣಗೊಳ್ಳುತ್ತಿದ್ದವು. ಆತ್ಮಚರಿತ್ರೆ ಎನ್ನುವುದು ನಾಡಿನ ಮತ್ತು ಭಾಷೆಯ ಚರಿತ್ರೆಯಾಗಿರುತ್ತಿತ್ತು. ಆದರೆ ಇಂದಿನ ರಾಜಕಾರಣಿಗಳ ಆತ್ಮಚರಿತ್ರೆಗಳಲ್ಲಿ ವೈಯಕ್ತಿಕ ಹಿತಾಸಕ್ತಿ ಮುನ್ನೆಲೆಗೆ ಬಂದು ನಾಡಿನ ಹಿರಿಮೆ ಹಿನ್ನೆಲೆಗೆ ಸರಿದಿದೆ. 

ಭಾಷೆಯನ್ನು ದ್ವೇಷದ ಮಾಧ್ಯಮವಾಗಿ ಪರಿವರ್ತಿಸಿರುವ ರಾಜಕಾರಣಿಗಳಿಗೆ ಸಾಹಿತ್ಯದ ಸಾಂಗತ್ಯ ಪ್ರಾಪ್ತವಾಗಬೇಕಿದೆ. ಸಾಹಿತ್ಯದ ಓದಿನ ಮೂಲಕವೇ ನಮ್ಮ ರಾಜಕೀಯ ನಾಯಕರು ಪ್ರೀತಿ ಮತ್ತು ಅಂತ:ಕರಣ ತುಂಬಿರುವ ಭಾಷೆಯನ್ನು ಕಲಿಯಬೇಕಿದೆ. ಏಕೆಂದರೆ ನೊಬೆಲ್ ಪ್ರಶಸ್ತಿ ಪುರಸ್ಕೃತ ಕವಿ ಜೋಸೆಫ್ ಬ್ರಾಡ್‍ಸ್ಕಿ ಸಾಹಿತ್ಯದಲ್ಲಿ ಭಾಷೆ ಬಳಕೆಯಾಗುವುದಿಲ್ಲ, ಸೃಷ್ಟಿಯಾಗುತ್ತದೆ ಎಂದಿರುವರು. ಭಾಷೆಯನ್ನು ಸದಾಕಾಲ ಆರೋಪ, ಪ್ರತ್ಯಾರೋಪಕ್ಕಾಗಿ ಬಳಸುತ್ತಿರುವ ರಾಜಕಾರಣಿಗಳಿಗೆ ಸಾಹಿತ್ಯದಲ್ಲಿ ಸೃಷ್ಟಿಯಾಗುವ ಭಾಷೆಯ ಪರಿಚಯವಾಗಬೇಕು. ‘ಜೀವನಕ್ಕೆ ಧನ್ಯತೆಯನ್ನು ತಂದುಕೊಡಬಹುದಾದಂಥ ಮೌಲ್ಯಗಳನ್ನೇ ಕಳೆದುಕೊಂಡು ಅಮಾನವೀಯವಾಗುತ್ತ ನಡೆದ ನಮ್ಮ ಜಗತ್ತಿನಲ್ಲಿ ಹಣಕ್ಕಾಗಿ ಅಧಿಕಾರವನ್ನು, ಅಧಿಕಾರಕ್ಕಾಗಿ ಹಣವನ್ನು ಹೀಗೆ ಒಂದು ಇನ್ನೊಂದನ್ನು ಬೆನ್ನಟ್ಟುವಂಥ ಆತ್ಮಹೀನವೂ ಅರ್ಥಶೂನ್ಯವೂ ಆದ ಕ್ರಿಯೆಯಲ್ಲಿ ತೊಡಗಿಕೊಂಡಿರುವ ನಮ್ಮನ್ನು ಆಗೀಗಲಾದರೂ ಮನುಷ್ಯರಾಗಿ ಚೇತರಿಸುವ ಬಲ ಬಹುಶ: ನಮ್ಮ ಸಾಹಿತ್ಯ ಮತ್ತು ಕಲೆಗಳಿಗಷ್ಟೇ ಇದೆಯೇನೋ’ ಎಂದಿರುವ ಯಶವಂತ ಚಿತ್ತಾಲರ ಮಾತು ಇಂದಿನ ರಾಜಕಾರಣಕ್ಕೆ ಹೆಚ್ಚು  ಅನ್ವಯಿಸುತ್ತದೆ.

-ರಾಜಕುಮಾರ ಕುಲಕರ್ಣಿ



Thursday, July 4, 2024

ಸಲ್ಲದ ಹೋಲಿಕೆ ಮಾಡುವುದೇಕೆ?




(ಪ್ರಜಾವಾಣಿ, 04.04.2024)

 ಸಮಾರಂಭವೊಂದರಲ್ಲಿ ಭೇಟಿಯಾದ ಸ್ನೇಹಿತರು ತುಂಬ ವ್ಯಥೆಯಲ್ಲಿರುವಂತೆ ತೋರಿತು. ದಾಯಾದಿಗಳು ಹೊಸಮನೆ ಕಟ್ಟಿಸಿದ್ದು, ಸಂಬಂಧಿಕರ ಮಗನಿಗೆ ಅಮೆರಿಕದಲ್ಲಿ ನೌಕರಿ ಸಿಕ್ಕಿದ್ದು, ಸಹೋದ್ಯೋಗಿಗೆ ಕೆಲಸದಲ್ಲಿ ಬಡ್ತಿ, ಪಕ್ಕದ ಮನೆಯವರು ಕಾರುಕೊಂಡಿದ್ದು ಹೀಗೆ ಮಾತಿನುದ್ದಕ್ಕೂ ಬೇರೆಯವರ ಪ್ರಗತಿ ವಿವರಿಸುತ್ತ ತಮ್ಮಿಂದ ಇದೆಲ್ಲ ಸಾಧ್ಯವಾಗುತ್ತಿಲ್ಲವೆಂದು ಅಸಹಾಯಕತೆ ವ್ಯಕ್ತಪಡಿಸಿದರು. ನನಗೆ ತಿಳಿದಿರುವಂತೆ ನನ್ನ ಸ್ನೇಹಿತರದು ಸಾಕಷ್ಟು ಅನುಕೂಲವಿರುವ ಕುಟುಂಬ. ಸರ್ಕಾರಿ ಉದ್ಯೋಗದಲ್ಲಿದ್ದು ಕೈತುಂಬ ಸಂಬಳ ಪಡೆಯುತ್ತಿರುವರು. ಹೀಗಿದ್ದೂ ಬೇರೆಯವರ ಬದುಕಿನೊಂದಿಗೆ ತಮ್ಮದನ್ನು ಹೋಲಿಸಿ ವ್ಯಥೆಪಟ್ಟುಕೊಳ್ಳುವ ಖಯಾಲಿ ಅವರಿಗೆ ಚಟದಂತೆ ಅಂಟಿಕೊಂಡಿದೆ. ಉಂಡರೂ ಹಸಿವು, ಉಟ್ಟರೂ ಬೆತ್ತಲೆ ಎನ್ನುವಂಥ ಮನಸ್ಥಿತಿಯಿಂದ ಬದುಕಿನ ಸಂತೋಷದ ಕ್ಷಣಗಳನ್ನು ಅನುಭವಿಸಲು ಅವರಿಂದ ಸಾಧ್ಯವಾಗುತ್ತಿಲ್ಲ.

‘ಹುಲಿ ಮೈಬಣ್ಣ ನೋಡಿ ನರಿ ಮೈ ಸುಟಗೊಂಡಿತ್ತಂತ’ ಇಂಥದ್ದೊಂದು ಮಾತು ಜನಪದದಲ್ಲಿ ಚಾಲ್ತಿಯಲ್ಲಿದೆ. ಹುಲಿಯ ಮೈ ಬಣ್ಣಕ್ಕೆ ಮರುಳಾದ ನರಿಯೊಂದು ತಾನು ಅದರಂತಾಗಲು ಮೈಯನ್ನು ಸುಟ್ಟುಕೊಂಡು ಜೀವವನ್ನೇ ಬಲಿಕೊಟ್ಟ ಕಾಲ್ಪನಿಕ ಪ್ರಸಂಗವನ್ನು ಈ ಹೇಳಿಕೆ ಅರ್ಥೈಸುತ್ತದೆ. ಬೇರೆಯವರೊಂದಿಗೆ ತಮ್ಮನ್ನು ಹೋಲಿಸುವವರನ್ನು ಕುರಿತು ಮಾತನಾಡುವ ಸಂದರ್ಭದಲ್ಲೆಲ್ಲ ಈ ಹೇಳಿಕೆ ಒಂದು ಉಪಮೆಯಾಗಿ ಬಳಕೆಯಾಗುತ್ತದೆ. ಹೋಲಿಕೆ ಬದುಕನ್ನು ನಾಶಗೊಳಿಸುತ್ತದೆ ಎನ್ನುವ ಎಚ್ಚರಿಕೆಯ ಬುದ್ಧಿಮಾತು ಹೇಳುವಾಗ ಹಳ್ಳಿಗರು ಈ ಗಾದೆಮಾತನ್ನು ಹೆಚ್ಚಾಗಿ ಬಳಸುವರು.

ಸಾಮಾಜಿಕ ಬದುಕಿನಲ್ಲಿ ಮನುಷ್ಯ ಮನುಷ್ಯರ ನಡುವೆ ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಅನೇಕ ರೀತಿಯ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು ವೈವಿಧ್ಯತೆಗಳೆಂದು ಭಾವಿಸಿ ಮನುಷ್ಯ ಮುನ್ನಡೆದರೆ  ಅವನ ಪಯಣದ ಪಥದಲ್ಲಿ ಯಾವ ಆತಂಕಗಳಾಗಲಿ ವಿರೋಧಾಭಾಸಗಳಾಗಲಿ ಎದುರಾಗಲಾರವು. ದುರಂತವಿರುವುದು ಮನುಷ್ಯನು ವ್ಯತ್ಯಾಸಗಳನ್ನು ವೈವಿಧ್ಯತೆಗಳೆಂದು ನೋಡದೆ ಸಂಕಷ್ಟಗಳೆಂದು ಭಾವಿಸುವುದರಲ್ಲಿದೆ. ಪರಿಣಾಮವಾಗಿ ಮನುಷ್ಯ ಇನ್ನೊಬ್ಬರ ಬದುಕಿನೊಂದಿಗೆ ತನ್ನದನ್ನು ಹೋಲಿಸಿಕೊಂಡು ಬದುಕನ್ನು ನರಕಗೊಳಿಸುತ್ತಿರುವನು. ಮನುಷ್ಯನ ಈ ಸ್ವಭಾವವನ್ನು ನೋಡಿಯೇ ಡಿವಿಜಿ ‘ಇರುವ ಭಾಗ್ಯವ ನೆನೆದು ಬಾರನೆಂಬುದನ್ನು ಬಿಡು ಹರುಷಕ್ಕಿದೆ ದಾರಿ’ ಎಂದಿರುವರು.  

ಇತ್ತೀಚೆಗೆ ಮದುವೆ ಮನೆಯಲ್ಲಿ ತಾಯಂದಿರಿಬ್ಬರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕುರಿತು ಬಂಧುಗಳೊಡನೆ ಮಾತನಾಡುತ್ತಿರುವಾಗ ಪರಸ್ಪರ ಸ್ಪರ್ಧೆಗೆ ಇಳಿದಿರುವಂತೆ ಭಾಸವಾಗುತ್ತಿತ್ತು. ಸಂತೋಷದಿಂದ ಆಟವಾಡಿಕೊಂಡಿದ್ದ ಮಕ್ಕಳಿಬ್ಬರನ್ನೂ ಕರೆದು ಅವರ ಪ್ರತಿಭೆಯನ್ನು ಅಲ್ಲಿ ನೆರೆದಿದ್ದವರೆದುರು ಬಲವಂತವಾಗಿ ಪ್ರದರ್ಶಿಸಲಾಯಿತು. ಸಹಜವೆನ್ನುವಂತೆ ಒಂದು ಮಗುವಿನ ಶೈಕ್ಷಣಿಕ ಪ್ರಗತಿ ಇನ್ನೊಂದು ಮಗುವಿನ ಪ್ರಗತಿಗಿಂತ ಒಂದಿಷ್ಟು ಹಿಂದಿತ್ತು. ಇದು ಆ ಮಗುವಿನ ತಾಯಿಗೆ ನಿರೀಕ್ಷಿಸಲಾಗದ ಸೋಲಿನಂತೆ ಭಾಸವಾಯಿತು. ವಾಚಾಮಗೋಚರವಾಗಿ ಬೈಯುತ್ತ ತನಗೆ ಬಂಧುಗಳೆದುರು ಅಪಮಾನವಾಯಿತೆಂದು ಮದುವೆ ಮನೆಯಲ್ಲೇ ಮಗುವನ್ನು ದೈಹಿಕವಾಗಿ ಶಿಕ್ಷಿಸಿದಳು. ಈ ಘಟನೆಯಿಂದ ಅದುವರೆಗೂ ಸಂಭ್ರಮದಿಂದ ಕೂಡಿದ್ದ ವಾತಾವರಣಕ್ಕೆ ಸೂತಕದ ಕಳೆ ಆವರಿಸಿದಂತಾಯಿತು. 

ಮಕ್ಕಳ ಆಟ, ಪಾಠ, ಶಾಲೆ, ವೃತ್ತಿ ಹೀಗೆ ಪ್ರತಿಯೊಂದು ಹಂತದಲ್ಲಿ ಪಾಲಕರು ಬೇರೆಯವರೊಂದಿಗೆ ಹೋಲಿಸಿ ನಿರ್ಧಾರ ತೆಗೆದುಕೊಳ್ಳುತ್ತಿರುವರು. ಮಕ್ಕಳ ಸಾಮರ್ಥ್ಯ ಮತ್ತು ಆಸಕ್ತಿಗೆ ಪೂರಕವಾದ ಶಿಕ್ಷಣವನ್ನು ಕೊಡಿಸಬೇಕಾದ ಪಾಲಕರು ಬೇರೆಯವರ ನಿರ್ಧಾರಗಳ ಪ್ರಭಾವಕ್ಕೆ ಒಳಗಾಗುತ್ತಿರುವರು. ದಾಯಾದಿಗಳ, ನೆರೆಹೊರೆಯವರ, ಬಂಧುಗಳ, ಪರಿಚಿತರ ಮಕ್ಕಳು ಏನನ್ನು ಕಲಿಯುತ್ತಿರುವರು ಎಂದು ಗಮನಿಸಿ ಅದನ್ನೇ ತಮ್ಮ ಮಕ್ಕಳಿಗೂ ಒದಗಿಸಲು ಮುಂದಾಗುವರು. ತಮಗೆ ಇಷ್ಟವಿರಲಿ ಇಲ್ಲದಿರಲಿ ಪಾಲಕರ ಆಸೆಯನ್ನು ಪೂರೈಸಲು ಮಕ್ಕಳು ತಮ್ಮ ಆಸಕ್ತಿಯನ್ನು ಬಲಿಕೊಡಬೇಕು. ಪಾಲಕರು ಅಪೇಕ್ಷಿಸಿದಂತೆ ಶೈಕ್ಷಣಿಕವಾಗಿ ಹೆಚ್ಚಿನದನ್ನು ಸಾಧಿಸಲು ವಿಫಲರಾಗುವ ಮಕ್ಕಳ ಬದುಕು ಕೆಲವೊಮ್ಮೆ ಆತ್ಮಹತ್ಯೆಯಲ್ಲಿ ಪರ್ಯಾವಸನಗೊಳ್ಳುವುದು ಸಾಮಾನ್ಯವಾಗಿದೆ. 

ಮನುಷ್ಯನಿಗೆ ತೃಪ್ತಿ ಎನ್ನುವುದಿಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವ ನಾಣ್ಣುಡಿ ಈಗ ಅರ್ಥಕಳೆದುಕೊಂಡು ಸವಕಲಾಗಿದೆ. ‘ಉಳ್ಳವರು ಶಿವಾಲಯವ ಮಾಡುವರು/ನಾನೇನು ಮಾಡಲಯ್ಯ/ಬಡವನಯ್ಯ’ ಬಸವಣ್ಣನವರ ಈ ವಚನ ಮನುಷ್ಯನಲ್ಲಿ ಸ್ಥಿತಪ್ರಜ್ಞೆಯನ್ನು ಮೂಡಿಸುವಂತಿದೆ. ಇದೇ ವಚನದ ಮುಂದಿನ ಸಾಲುಗಳು- ‘ಎನ್ನ ಕಾಲೇ ಕಂಬ/ದೇಹವೇ ದೇಗುಲ/ಶಿರವೇ ಹೊನ್ನ ಕಳಸವಯ್ಯ’ ಸ್ಥಿತಪ್ರಜ್ಞೆಯ ನಡುವೆಯೂ ಹೊಸ ಸಾಧ್ಯತೆಯನ್ನು ಕಂಡುಕೊಳ್ಳುವತ್ತ ಮನುಷ್ಯ ಹೆಜ್ಜೆ ಹಾಕಬೇಕೆಂದು ಹೇಳುತ್ತವೆ. ಬೇರೆಯವರು ನಡೆದ ಜಾಡನ್ನು ತೊರೆದಾಗಲೇ ಹೊಸದೊಂದು ದಾರಿ ಸಿಗುವ ಸಾಧ್ಯತೆ ಇರುತ್ತದೆ.

ಕವಿ ಕೆ.ಎಸ್.ನರಸಿಂಹಸ್ವಾಮಿ ತಮ್ಮ ಕಾವ್ಯವನ್ನು ಅಡಿಗರ ಕಾವ್ಯದೊಂದಿಗೆ ಹೋಲಿಸಿ ಹೀಗೆ ಹೇಳಿರುವರು-‘ಅಡಿಗರು ಒಮ್ಮೆ ಹೇಳಿದರು ನನ್ನ ಅನುಭವ ತೆಳುವೆಂದು, ಒಪ್ಪುತ್ತೇನೆ. ಅವರ ದನಿ ಯಕ್ಷಗಾನದ ರೀತಿ, ನನ್ನ ದನಿ ತಂಪಾದ ಸಂಜೆಯಲಿ ಗೆಳೆಯರಿಬ್ಬರು ಕೂತು ಎತ್ತರಕ್ಕೇರದೆಯೇ ಮಾತನಾಡುವ ರೀತಿ’. ಹೀಗೆ ಹೇಳುವುದರ ಮೂಲಕ ಹೋಲಿಕೆ ನಗಣ್ಯ ಎನ್ನುವ ನಿರ್ಧಾರಕ್ಕೆ ಕವಿ ಬಂದಂತಿದೆ. ತನ್ನ ತನವನ್ನು ಬಿಟ್ಟುಕೊಡದ ಕಠಿಣ ನಿಲುವು ಈ ಮಾತಿನಲ್ಲಿ ವ್ಯಕ್ತವಾಗುತ್ತದೆ.

ಪರಿಸರದಲ್ಲಿ ಮನುಷ್ಯನೊಬ್ಬನನ್ನು ಹೊರತುಪಡಿಸಿ ಬೇರೆ ಯಾವ ಪ್ರಾಣಿ, ಪಕ್ಷಿ, ಮರಗಿಡಗಳು ಒಂದು ಇನ್ನೊಂದನ್ನು ಹೋಲಿಸಿಕೊಂಡು ಸ್ಪರ್ಧೆಗಿಳಿಯಲಾರವು. ಯಶವಂತ ಚಿತ್ತಾಲರ ಕಥೆಯಲ್ಲಿ ಹೀಗೊಂದು ಮಾತಿದೆ-‘ಸೃಷ್ಟಿಯೊಳಗಿನ ಪ್ರತಿಯೊಂದು ಜೀವಸಂಗತಿ ಉಳಿದೆಲ್ಲ ಜೀವಸಂಗತಿಗಳೊಡನೆ ನಿಶ್ಯಬ್ದ ಮೌನದಲ್ಲಿ ಸಂವಾದ ನಡೆಸಿರುವಂಥದ್ದು-ಹುಟ್ಟುವಂತೆ, ಬೆಳೆಯುವಂತೆ, ಆರೋಗ್ಯ ಕಾಪಾಡಿಕೊಳ್ಳುವಂತೆ ಒಂದು ಇನ್ನೊಂದರ ಜೀವನೋತ್ಸಾಹವನ್ನು ಎತ್ತಿಹಿಡಿಯುವಂತೆ ಸತತ ಕ್ರಿಯೆಯಲ್ಲಿ ತೊಡಗಿಸಿಕೊಂಡಿರುವಂಥದ್ದು ಎಂಬ ಕಲ್ಪನೆಗೆ ಮೈನವಿರಿಗೊಳಗಾಯಿತು. ಮನುಷ್ಯ ಮಾತ್ರ ಈ ಕ್ರಿಯೆಗೆ ಹೇಗೆ ಹೊರತಾದನೋ ಎಂದು ದಿಗಿಲುಗೊಂಡೆ’. ಈ ಆತಂಕ ನಮ್ಮೆಲ್ಲರ ಆತಂಕವಾಗಬೇಕು. ವಿವೇಚನಾಶಕ್ತಿ ಇರುವ ಮನುಷ್ಯನ ಬದುಕು ಹೋಲಿಕೆಯಿಂದ ನರಕವಾಗಬಾರದು.  ಈ ವಿಷಯದಲ್ಲಿ ಮನುಷ್ಯ ಪರಿಸರದಲ್ಲಿರುವ ಉಳಿದೆಲ್ಲ ಜೀವಸಂಗತಿಗಳಿಂದ ಪಾಠ ಕಲಿಯಬೇಕಾದದ್ದು ಬಹಳಷ್ಟಿದೆ. 

-ರಾಜಕುಮಾರ ಕುಲಕರ್ಣಿ 



Tuesday, June 4, 2024

ಮೇಲ್ಮಟ್ಟದಲ್ಲೇ ಇರಲಿ ಮೇಲ್ಮನೆ

    




(ಪ್ರಜಾವಾಣಿ, ೦೭.೦೩.೨೦೨೪)

     ಇತ್ತೀಚೆಗೆ ವಾಚಕರ ವಾಣಿಯಲ್ಲಿ (ಪ್ರ.ವಾ., ಮಾರ್ಚ್ 1 ಮತ್ತು 5) ವಿಧಾನಪರಿಷತ್ತಿಗೆ ವಿವಿಧ ಕ್ಷೇತ್ರಗಳ ಪರಿಣತರು, ಬುದ್ಧಿಜೀವಿಗಳು ಮತ್ತು ಪ್ರಜ್ಞಾವಂತರನ್ನು ಆಯ್ಕೆ ಮಾಡುತ್ತಿಲ್ಲವೆಂದು ಆತಂಕ ವ್ಯಕ್ತಪಡಿಸಿರುವ ಎರಡು ಪತ್ರಗಳು ಪ್ರಕಟವಾದವು. ತಮ್ಮ ನಡೆ ನುಡಿಯಿಂದ ಸಾರ್ವಜನಿಕರ ಮನಗೆಲ್ಲಬೇಕೆಂಬುದಕ್ಕಿಂತ ಪಕ್ಷದ ವರಿಷ್ಠರನ್ನು ಮೆಚ್ಚಿಸಬೇಕೆಂಬ ಧೋರಣೆ ರಾಜಕಾರಣಿಗಳಲ್ಲಿ ಮೇಲುಗೈ ಸಾಧಿಸಿದೆ. ಆದಕಾರಣ ಪ್ರಜ್ಞಾವಂತರ ಸದನವೆಂಬ ಹಿರಿಮೆಗೆ ಪಾತ್ರವಾದ ಮೇಲ್ಮನೆಯಲ್ಲಿ ಕೂಗಾಟ, ಕಿರುಚಾಟ, ನಿಂದನೆ, ತೊಡೆತಟ್ಟುವಂತಹ ಸಾಮಾನ್ಯ ರಾಜಕಾರಣದ ವರ್ತನೆ ಪದೆ ಪದೆ ಪುನರಾವರ್ತನೆಯಾಗುತ್ತಿದೆ. ಸದ್ದನ್ನೇ ತುಂಬ ನೆಚ್ಚಿಕೊಂಡ ರಾಜಕಾರಣಕ್ಕೆ ಮೌನದ ಪರಿಚಯವಿಲ್ಲ ಎಂದ ಯಶವಂತ ಚಿತ್ತಾಲರ ಮಾತು ಸತ್ಯಕ್ಕೆ ಹತ್ತಿರವಾಗಿದೆ.

ಮೇಲ್ಮನೆಗಳೆಂದು ಹಿರಿಮೆಗಳಿಸಿರುವ ರಾಜ್ಯಸಭೆ ಮತ್ತು ವಿಧಾನಪರಿಷತ್ತಿಗೆ ಕಲಾವಿದರು, ಸಾಹಿತಿಗಳು ಮತ್ತು ಚಿಂತಕರನ್ನು ಸದಸ್ಯರನ್ನಾಗಿ ಆಯ್ಕೆ ಮಾಡುವ ಪರಿಪಾಟ ಈ ಹಿಂದೆ ಚಾಲ್ತಿಯಲ್ಲಿತ್ತು. ಆಳುವ ಸರ್ಕಾರದ ನೀತಿ-ನಿಲುವುಗಳನ್ನು ನಿಕಷಕ್ಕೆ ಒಡ್ಡುವ ಮತ್ತು ಜನವಿರೋಧಿ ನಡೆಯನ್ನು ತಿದ್ದುವ, ಸಂದರ್ಭ ಎದುರಾದರೆ ಟೀಕಿಸುವ ಹಾಗೂ ಸಮಾಜದ ಸಮಸ್ಯೆಗಳನ್ನು ಕಾಲಕಾಲಕ್ಕೆ ಎತ್ತಿ ತೋರಿಸುವ ಮಹತ್ವದ ಜವಾಬ್ದಾರಿ ಮೇಲ್ಮನೆಗೆ ಆಯ್ಕೆಯಾದ ಸದಸ್ಯರ ಮೇಲಿದೆ. ಸಧ್ಯದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸದನದಲ್ಲಿ ತಮ್ಮ ಪಕ್ಷದ ನಡೆಯನ್ನು ಸಮರ್ಥಿಸಿಕೊಳ್ಳಲು ಕೂಗಾಡುವವರು, ಕಿರುಚಾಡುವವರು ಮತ್ತು ತೊಡೆತಟ್ಟುವವರನ್ನು ಮೇಲ್ಮನೆಗೆ ಆಯ್ಕೆ ಮಾಡುತ್ತಿವೆ. 

ಸರ್ಕಾರದಿಂದ ನಾಮಕರಣ ಹೊಂದಿದ ಸದಸ್ಯರಾಗಿಯೂ ವಿಧಾನಪರಿಷತ್ತಿನಲ್ಲಿ ಸರ್ಕಾರದ ಅನೇಕ ಧೋರಣೆಗಳನ್ನು ಟೀಕಿಸುತ್ತಿದ್ದುದನ್ನು ರಾಜ್ಯಪಾಲರು ಆಕ್ಷೇಪಿಸಿದಾಗ ‘ನಾನು ನ್ಯಾಯನಿಷ್ಠುರಿ, ದಾಕ್ಷಿಣ್ಯಪರನಲ್ಲ’ ಎನ್ನುವುದು ಅಂಬೇಡ್ಕರರ ಪ್ರತಿಕ್ರಿಯೆಯಾಗಿತ್ತು. ಆದರೆ ಇಂದಿನ ರಾಜಕಾರಣದಲ್ಲಿ ವೈಯಕ್ತಿಕ ಹಿತಾಸಕ್ತಿ ಮುನ್ನೆಲೆಗೆ ಬಂದು ಸಮಾಜದ ಹಿತಾಸಕ್ತಿ ಹಿನ್ನೆಲೆಗೆ ಸರಿದಿದೆ. ಜೊತೆಗೆ ರಾಜಕೀಯ ಪಕ್ಷಗಳು ತಮ್ಮನ್ನು ಪ್ರಶ್ನಿಸುವುದನ್ನು ಮತ್ತು ವಿರೋಧಿಸುವುದನ್ನು ಸಹಿಸಲಾರವು. ಹೊಗಳಿಕೆ, ಮುಖಸ್ತುತಿ ಮತ್ತು ಓಲೈಕೆಯನ್ನು ರಾಜಕೀಯ ಪಕ್ಷಗಳು ಇಚ್ಛಿಸುತ್ತಿವೆ. ಪರಿಣಾಮವಾಗಿ ಮೇಲ್ಮನೆಗಳಾದ ವಿಧಾನಪರಿಷತ್ ಹಾಗೂ ರಾಜ್ಯಸಭೆಗಳಲ್ಲಿ ಬುದ್ಧಿಜೀವಿಗಳು ಮತ್ತು ಪ್ರಜ್ಞಾವಂತರ ಬದಲು ರಾಜಕೀಯ ಪಕ್ಷಗಳ ಮುಖವಾಣಿಗಳೇ ಕಣ್ಣಿಗೆ ಗೋಚರಿಸುತ್ತಿವೆ 

ಭಾರತದ ರಾಜಕಾರಣದಲ್ಲಿನ ಮಹತ್ವದ ಘಟನೆಯೊಂದು ಹೀಗಿದೆ, 1958 ರಲ್ಲಿ ಜವಹರಲಾಲ್ ನೆಹರು ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ ವಿಶ್ವಸಂಸ್ಥೆಯ ಮಹಾ ಅಧಿವೇಶನಕ್ಕೆ ತೆರಳುತ್ತಿದ್ದ ಭಾರತದ ನಿಯೋಗದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಸದಸ್ಯರಾಗಿದ್ದರು. ಆ ಸಂದರ್ಭ ವಾಜಪೇಯಿ ಅವರನ್ನು ವಿಶ್ವ ನಾಯಕರಿಗೆ ಪರಿಚಯಿಸುವಂತೆ ಅಮೆರಿಕದಲ್ಲಿ ಭಾರತದ ಖಾಯಂ ನಿಯೋಗದ ಅಧಿಕಾರಿಯಾಗಿದ್ದ ಎಮ್.ಕೆ.ರಸ್ಗೋತ್ರ ಅವರಿಗೆ ನೆಹರು ಸೂಚಿಸಿದ್ದರು. ತಮ್ಮ ಕಟು ಟೀಕಾಕಾರರಾದ ವಾಜಪೇಯಿ ಅವರನ್ನು ವಿದೇಶಿ ಗಣ್ಯರಿಗೆ ಪರಿಚಯಿಸುವ ಸಂದರ್ಭಗಳಲ್ಲೆಲ್ಲ ‘ಈ ತರುಣ ಮುಂದೊಂದು ದಿನ ಭಾರತದ ಪ್ರಧಾನ ಮಂತ್ರಿಯಾಗುವುದು ಖಚಿತ’ ಎಂದು ನೆಹರು ಹೇಳುತ್ತಿದ್ದ ಮಾತು ಇಂದಿಗೂ ಜನಮಾನಸದಲ್ಲಿ ಚಲಾವಣೆಯಲ್ಲಿದೆ. ಇಂಥದ್ದೊಂದು ನಡೆ ಇಂದು ಯಾವ ಪಕ್ಷದಲ್ಲೂ ಗೋಚರಿಸುತ್ತಿ

ಸರ್ಕಾರ ಬದಲಾದಾಗ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರೂ ಕೂಡ ಬದಲಾಗುವುದು ಅದೊಂದು ಸಂಪ್ರದಾಯದಂತಾಗಿದೆ. ನಾಟಕ, ಸಿನಿಮಾ, ಸಾಹಿತ್ಯದಂಥ ಸಾಂಸ್ಕೃತಿಕ ಅಕಾಡೆಮಿಗಳಿಗೆ ಪ್ರಜ್ಞಾವಂತರ ಬದಲು ರಾಜಕೀಯ ಪಕ್ಷನಿಷ್ಠರನ್ನೇ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತಿದೆ. ಈ ಹಿಂದೆ ಸಾಂಸ್ಕೃತಿಕ ಕ್ಷೇತ್ರಗಳ ಸಾಧಕರು ಅಕಾಡೆಮಿಗಳ ಅಧ್ಯಕ್ಷ ಅಥವಾ ಸದಸ್ಯರಾಗಿ ನಿಯುಕ್ತಿಗೊಂಡ ಕ್ಷಣದಿಂದಲೇ ಆಳುವ ಪಕ್ಷದಿಂದ ಅಂತರವನ್ನು ಕಾಯ್ದುಕೊಂಡು ಸಂದರ್ಭ ಎದುರಾದಾಗಲೆಲ್ಲ ಪ್ರಭುತ್ವದ ಸಮಾಜ ವಿರೋಧಿ ನಡೆಯನ್ನು ಖಂಡಿಸಿದ ಸಾಕಷ್ಟು ಉದಾಹರಣೆಗಳಿವೆ. ಈಗ ಕಲಾವಿದರು ಮತ್ತು ಸಾಹಿತಿಗಳು ಫುಲ್‍ಟೈಮ್ ರಾಜಕಾರಣಿಗಳಾಗಿ ಅಕಾಡೆಮಿಗಳ ಮಹತ್ವದ ಸ್ಥಾನಗಳನ್ನು ಅಲಂಕರಿಸುತ್ತಿರುವಾಗ ಅವರಿಂದ ಸಮಾಜಹಿತದ ನಡೆಯನ್ನು ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ. 

ರಾಜಕಾರಣವು ವಿಶ್ವವಿದ್ಯಾಲಯಗಳ ಬೌದ್ಧಿಕವಲಯವನ್ನು ಕೂಡ ಮಲೀನಗೊಳಿಸಿದೆ. ಮುಕ್ತ ವಾತಾವರಣ, ಬೌದ್ಧಿಕ ಅನ್ವೇಷಣೆ, ಸಂಶೋಧನೆ, ಚರ್ಚೆ, ಸಂವಾದಗಳಿಗೆ ಅವಕಾಶ ಕಲ್ಪಿಸಿಕೊಡುವ ವಿಶ್ವವಿದ್ಯಾಲಯಗಳು ಒಂದು ಕಾಲದಲ್ಲಿ ಅತ್ಯುತ್ತಮ ರಾಜಕಾರಣಿಗಳನ್ನು ಸೃಷ್ಟಿಸಿವೆ. ವಿಶ್ವವಿದ್ಯಾಲಯಗಳ ಮಹತ್ವವನ್ನರಿತು ಆಯಾ ಅವಧಿಯ ಸರ್ಕಾರಗಳು ತಮ್ಮ ಪಕ್ಷಗಳ ಧೋರಣೆಯನ್ನು ಈ ಉನ್ನತ ಶಿಕ್ಷಣದ ಕೇಂದ್ರಗಳ ಮೇಲೆ  ಬಲವಂತವಾಗಿ ಹೇರುತ್ತಿವೆ. ಕೆಲವು ರಾಜ್ಯಗಳಲ್ಲಿ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಪೈಪೆÇೀಟಿ ಏರ್ಪಟ್ಟಿದೆ. ಅಧಿಕಾರದ ಲಾಲಸೆಯಿಂದ ವಿಶ್ವವಿದ್ಯಾಲಯಗಳ ಬುದ್ಧಿಜೀವಿಗಳು ಕೂಡ ರಾಜಕೀಯ ಪಕ್ಷಗಳ ಕೈಗೊಂಬೆಗಳಂತೆ ವರ್ತಿಸುತ್ತಿರುವರು.

ವಿಶ್ವವಿದ್ಯಾಲಯಗಳು, ಮೇಲ್ಮನೆಗಳು, ಅಕಾಡೆಮಿಗಳು ತಮ್ಮ ಮೊದಲಿನ ಘನತೆ ಮತ್ತು ನೈತಿಕತೆಯನ್ನು ಉಳಿಸಿಕೊಂಡಿವೆಯೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ವೈಯಕ್ತಿಕ ಹಿತಾಸಕ್ತಿಗಾಗಿ ಸಾಹಿತಿಗಳು, ಕಲಾವಿದರು, ಚಿಂತಕರು ರಾಜಕಾರಣದತ್ತ ವಲಸೆ ಹೋಗುತ್ತಿರುವ ಇವತ್ತಿನ ಸನ್ನಿವೇಶದಲ್ಲಿ ಇಂಥದ್ದೊಂದು ಪ್ರಶ್ನೆಯೇ ಅಪ್ರಸ್ತುತವೆನಿಸುತ್ತದೆ. ರಾಜಕೀಯ ಪಕ್ಷಗಳ ಮುಖವಾಣಿಯಾಗುವ ಮತ್ತು ಪ್ರಭುತ್ವದ ನಡೆಯನ್ನು ಎತ್ತಿ ಹಿಡಿಯುವ ಧಾವಂತದಲ್ಲಿರುವ ಬೌದ್ಧಿಕ ಮತ್ತು ಸಾಂಸ್ಕೃತಿಕವಲಯ ಸಮಾಜದ ಹಿತವನ್ನು ಕಡೆಗಣಿಸುವ ಸರ್ಕಾರ ಮತ್ತು ಪಕ್ಷಗಳ ನಡೆಯನ್ನು ಪ್ರತಿಭಟಿಸುವ ಕಾವನ್ನು ಕಳೆದುಕೊಂಡಿವೆ. ಪ್ರಭುತ್ವ ಮತ್ತು ಪ್ರತಿಭಟನಾಕಾರರ ಚಹರೆ ಒಂದೇ ಆದಾಗ ಅಲ್ಲಿ ಪ್ರತಿಭಟನೆ ಮೂಲೆಗುಂಪಾಗುತ್ತದೆ. ಗೆದ್ದ ಪ್ರಭುತ್ವವು ಬಹುತ್ವದ ಚಹರೆಯನ್ನು ಅಳಿಸುತ್ತ ತನ್ನ ಚಹರೆಯನ್ನು ವಿಸ್ತರಿಸಿ ಬೆಳೆಯತೊಡಗುತ್ತದೆ. 

-ರಾಜಕುಮಾರ ಕುಲಕರ್ಣಿ

Friday, May 3, 2024

ನೈತಿಕ ನೆಲೆಗಟ್ಟು: ಶಿಕ್ಷಕರದೂ ಪಾಲಿದೆ

     



    (ಪ್ರಜಾವಾಣಿ, ೨೪.೦೨.೨೦೨೪)

    ಇತ್ತೀಚೆಗೆ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ರೋಗಿಗಳೆದುರು ವಿವಿಧ ಭಾಷೆಗಳ ಸಿನಿಮಾ ಹಾಡುಗಳಿಗೆ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಸುದ್ಧಿಯಾಗಿತ್ತು. ಈ ಘಟನೆಯ ಹಿಂದೆಯೇ ಸರ್ಕಾರಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರೊಬ್ಬರು ತಮ್ಮೊಂದಿಗೆ ಮದುವೆ ನಿಶ್ಚಯವಾದ ವೈದ್ಯೆ ಜೊತೆಗೆ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಪ್ರೀ ವೆಡ್ಡಿಂಗ್ ಚಿತ್ರೀಕರಣ ಮಾಡಿದ ಘಟನೆ ಪತ್ರಿಕೆಯಲ್ಲಿ ಪ್ರಕಟವಾಗಿ ಸಾರ್ವಜನಿಕರಿಂದ ಟೀಕೆಗಳು ವ್ಯಕ್ತವಾದವು. ಶಾಲೆಯೊಂದರಲ್ಲಿ ತನಗೆ ಮಧ್ಯಾಹ್ನದ ಊಟ ತಂದುಕೊಡಲಿಲ್ಲವೆಂದು ಕೋಪಗೊಂಡ ಶಿಕ್ಷಕಿ ವಿದ್ಯಾರ್ಥಿಗಳನ್ನು ತರಗತಿಯ ಕೋಣೆಯಲ್ಲಿ ಕೂಡಿಹಾಕಿ ಥಳಿಸಿದ ಅಮಾನವೀಯ ಕೃತ್ಯ ಪಾಲಕರನ್ನು ಆತಂಕಕ್ಕೊಳಗಾಗಿಸಿದೆ.

ಈ ಮೇಲಿನ ಘಟನೆಗಳು ಇಂದಿನ ಯುವ ವಿದ್ಯಾವಂತರ ಅನಾರೋಗ್ಯಕರ ಮನಸ್ಥಿತಿಗೆ ಕನ್ನಡಿ ಹಿಡಿಯುವಂತಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿಗಳ ಅನಾಗರಿಕ ವರ್ತನೆ, ಯುವವೈದ್ಯರ ಸಂವೇದನಾರಹಿತ ನಡೆ ಮತ್ತು ಶಾಲೆಯಲ್ಲಿ ಶಿಕ್ಷಕಿಯ ದುರ್ನಡತೆಗೆ ಯಾರನ್ನು ಹೊಣೆಯಾಗಿಸಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಸಹಜವಾಗಿಯೇ ಸಮಾಜ ವಿದ್ಯಾವಂತರ ಆಕ್ಷೇಪಾರ್ಹ ವರ್ತನೆಗೆ ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಹೊಣೆಯಾಗಿಸುತ್ತದೆ. ವಿದ್ಯಾ ಕೇಂದ್ರಗಳಾದ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಅನುಚಿತ ವರ್ತನೆ ಹಾಗೂ ಹಿಂಸಾಪ್ರವೃತ್ತಿಗಳು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿವೆ. 

ಸಮಾಜದಲ್ಲಿ ನಾಗರಿಕರ ಅನುಚಿತ ವರ್ತನೆಗೆ ಶಿಕ್ಷಣ ವ್ಯವಸ್ಥೆಯನ್ನು ಗುರಿಯಾಗಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸುವ ಶಿಕ್ಷಕರ ಸಂಖ್ಯೆ ಬಹಳಷ್ಟಿದೆ. ವ್ಯಕ್ತಿಯ ನಡೆ, ನುಡಿಯನ್ನು ರೂಪಿಸುವಲ್ಲಿ ಶಿಕ್ಷಣವೇ ನೆಲೆಗಟ್ಟು. ಪ್ರತಿಯೊಬ್ಬ ಮನುಷ್ಯ ತನ್ನ  ವಿದ್ಯಾರ್ಥಿ ಬದುಕಿನಲ್ಲಿ ದಿನದ ಬಹುಪಾಲು ಸಮಯವನ್ನು ಕಳೆಯುವುದು ಶಾಲೆ, ಕಾಲೇಜುಗಳ ವಾತಾವರಣದಲ್ಲಿ ಎನ್ನುವುದು ಸತ್ಯಕ್ಕೆ ಹತ್ತಿರವಾದ ಮಾತು. ಹೀಗಾಗಿ ಶಿಕ್ಷಕರು ತಮ್ಮ ಕರ್ತವ್ಯ ಕೇವಲ ಪಾಠ ಬೋಧಿಸುವುದಕ್ಕೆ ಮಾತ್ರ ಸೀಮಿತ ಎಂದು ನುಣುಚಿಕೊಳ್ಳುವಂತಿಲ್ಲ. ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆ ಶಿಕ್ಷಣದ ಉದ್ದೇಶವಾಗಿರುವುದರಿಂದ ಪಾಠ ಬೋಧನೆಯ ಜೊತೆಗೆ ಮಕ್ಕಳ ನಡೆ, ನುಡಿಯನ್ನು ತಿದ್ದುವ ಕೆಲಸ ಶಿಕ್ಷಕರು ಮಾಡಬೇಕಾಗುತ್ತದೆ 

ಪ್ರಾಮಾಣಿಕರಾಗಿ ಶಿಕ್ಷಕ ವೃತ್ತಿಯಲ್ಲಿ ತೊಡಗಿಸಿಕೊಂಡವರ ನಡುವೆ ಅಪ್ರಾಮಾಣಿಕರು ಮತ್ತು ಅನೀತಿವಂತರೂ ಸೇರಿಕೊಂಡಿರುವುದರಿಂದ ಶಿಕ್ಷಕ ವೃತ್ತಿ ಸಮಾಜದಲ್ಲಿ ತನ್ನ ಮೊದಲಿನ ಗೌರವವನ್ನು ಕಳೆದುಕೊಳ್ಳುತ್ತಿದೆ. ಶಾಲೆಯಲ್ಲಿ ಪಾಠ ಮಾಡಬೇಕಾದ ಶಿಕ್ಷಕರು ಪಡೆಯುತ್ತಿರುವ ಅತ್ಯಾಕರ್ಷಕ ಸಂಬಳದ ಹೊರತಾಗಿಯೂ ಹಣಗಳಿಸುವ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರ್ಶ ಶಿಕ್ಷಕರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿರುವುದು ಇವತ್ತಿನ ಶಿಕ್ಷಣ ಕ್ಷೇತ್ರದ ಬಹುಮುಖ್ಯ ಸಮಸ್ಯೆಯಾಗಿದೆ. ಹಿಂದಿನ ದಿನಗಳಲ್ಲಿ ಶಾಲಾ ಅವಧಿಯ ನಂತರವೂ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಮಯ ಕಳೆಯುತ್ತಿದ್ದರು. ಪಠ್ಯಕ್ರಮದಾಚೆ ಬದುಕಿನ ಮೌಲ್ಯಗಳನ್ನು ಬೋಧಿಸುತ್ತಿದ್ದರು. ಆದರೆ ಅಂಥ ಮನೋಭಾವದ ಶಿಕ್ಷಕರು ಇಂದು ನೋಡಲು ಸಿಗುತ್ತಿಲ್ಲ. 

ಇರುವೆಯೊಂದು ಪಾರಿವಾಳದ ಜೀವ ಉಳಿಸಿದ್ದು, ಶಿಬಿ ಚಕ್ರವರ್ತಿಯ ತ್ಯಾಗ, ಪುಣ್ಯಕೋಟಿಯ ಪ್ರಾಮಾಣಿಕತೆ, ಗಾಂಧೀಜಿಯ ಸತ್ಯಸಂಧತೆ ಇಂತಹ ಕಥೆಗಳನ್ನೆಲ್ಲ ಆಗ ನೀತಿಶಿಕ್ಷಣದ ಮೂಲಕ ಬೋಧಿಸಲಾಗುತ್ತಿತ್ತು. ನೀತಿಶಿಕ್ಷಣಕ್ಕೆ ವೇಳಾಪಟ್ಟಿಯಲ್ಲಿ ಆದ್ಯತೆ ನೀಡಲಾಗುತ್ತಿತ್ತು. ಒಟ್ಟಾರೆ ಮಕ್ಕಳಲ್ಲಿ ನೈತಿಕ ಮತ್ತು ವೈಚಾರಿಕ ಪ್ರಜ್ಞೆಯನ್ನು ಬೆಳೆಸಲು ಪೂರಕವಾದ ಶೈಕ್ಷಣಿಕ ವಾತಾವರಣವಿರುತ್ತಿತ್ತು. ಆದರೆ ಇಂದು ನೀತಿಶಿಕ್ಷಣ ಶಾಲಾ ಕಾಲೇಜುಗಳ ವೇಳಾಪಟ್ಟಿಯಲ್ಲಿ ಸ್ಥಾನ ಕಳೆದುಕೊಂಡಿದೆ. ವ್ಯಾಪಾರೀಕರಣ ಶಿಕ್ಷಣವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಮೇಲೆ ಶಿಕ್ಷಣದ ಉದ್ದೇಶಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಇಂದು ಶಿಕ್ಷಣದಿಂದ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗುತ್ತಿಲ್ಲ. ಶಿಕ್ಷಕರು ಪಠ್ಯಕ್ರಮದಾಚೆ ಏನನ್ನೂ ಬೋಧಿಸುತ್ತಿಲ್ಲ. ವಾರ್ಷಿಕ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ತಯಾರುಗೊಳಿಸುವುದರಲ್ಲೇ ತಮ್ಮ ಪೂರ್ಣ ಸಮಯವನ್ನು ವಿನಿಯೋಗಿಸುತ್ತಿರುವ ಶಿಕ್ಷಕರು ವಿದ್ಯಾರ್ಥಿಗಳ ನಡತೆಯನ್ನು ನಿರ್ಲಕ್ಷಿಸುತ್ತಿರುವರು.

ಶಾಲಾ ಕಾಲೇಜುಗಳಲ್ಲಿನ ಶೈಕ್ಷಣಿಕ ವಾತಾವರಣ ಹದಗೆಡುತ್ತಿರುವುದರಲ್ಲಿ ಸಿನಿಮಾ ಮಾಧ್ಯಮದ ಪಾತ್ರವನ್ನು ಅಲ್ಲಗಳೆಯುವಂತಿಲ್ಲ. ‘ಸ್ವಾಮಿದೇವನೆ ಲೋಕಪಾಲನೆ’ ಎನ್ನುವ ಸಿನಿಮಾ ಹಾಡು ಒಂದು ಕಾಲದಲ್ಲಿ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿತ್ತು. ಮುಂದೊಂದು ದಿನ ಇದೇ ಸಿನಿಮಾ ಮಾಧ್ಯಮ ‘ಒಓಔಅಂ...ಆ:...’ ಎಂದು ಶಿಕ್ಷಕಿ ಪಾತ್ರದ ನಟಿಯ ಮೂಲಕ ಮಾದಕವಾಗಿ ಹಾಡಿಸಿ ಹೆಜ್ಜೆ ಹಾಕಿಸಿದ್ದನ್ನು ಮರೆಯುವಂತಿಲ್ಲ. ಇಂದು ಶಾಲೆ ಮತ್ತು ಕಾಲೇಜುಗಳ ಆವರಣಗಳಲ್ಲಿ ಲೀಲಾಜಾಲವಾಗಿ ಹರಿದಾಡುತ್ತಿರುವ ಮತ್ತು ಶಬ್ದಕೋಶದಲ್ಲಿ ನೋಡಲು ಸಿಗದ ಪದಗಳು ಸಿನಿಮಾ ಮಾಧ್ಯಮದ ಕೊಡುಗೆಗಳಾಗಿವೆ ಎಂದರೆ ತಪ್ಪಾಗಲಾರದು.  

ಗಾಂಧೀಜಿ ಅವರು ಸಪ್ತ ಸಾಮಾಜಿಕ ಪಾಪಗಳಲ್ಲಿ ಶಿಕ್ಷಣದ ಕುರಿತು ಪ್ರಸ್ತಾಪಿಸಿರುವರು. ಚಾರಿತ್ರ್ಯವಿಲ್ಲದ ಜ್ಞಾನ ಅದು ಪಾಪಕ್ಕೆ ಸಮಾನವೆಂದು ಹೇಳಿ ಜ್ಞಾನದ ಜೊತೆಗೆ ಚಾರಿತ್ರ್ಯ ಕೂಡ ಉತ್ತಮವಾಗಿರಬೇಕು ಎಂದಿರುವರು.  ಚಾರಿತ್ರ್ಯ ಮತ್ತು ಜ್ಞಾನ ವ್ಯಕ್ತಿಯ ಹೃದಯ ಮತ್ತು ಆತ್ಮಗಳಿದ್ದಂತೆ. ತತ್ವಬದ್ಧವಾದ ಚಾರಿತ್ರ್ಯವಿಲ್ಲದೆ ಬರೀ ಜ್ಞಾನ ಹೊಂದಿರುವುದು ಅತ್ಯಂತ ಅಪಾಯಕಾರಿ. ಒಂದರ್ಥದಲ್ಲಿ ಅದು ಹೃದಯವಿಲ್ಲದ ಆತ್ಮವಿದ್ದಂತೆ. ಮೌಲ್ಯ ಪರಿಷ್ಕರವಾಗದೆ ಯಾವುದೇ ಮಟ್ಟದ ಜ್ಞಾನವು ಉದಿಸುವುದು ಸಾಧ್ಯವೇ ಇಲ್ಲ ಎನ್ನುವುದು ತತ್ವಶಾಸ್ತ್ರಜ್ಞರ ನಿಲುವಾಗಿದೆ. ಅದಕ್ಕೆಂದೇ ಗಾಂಧೀಜಿ ಶಿಕ್ಷಣದಲ್ಲಿ ಮೌಲ್ಯದ ಅವಶ್ಯಕತೆಗೆ ಮಹತ್ವ ನೀಡಿದರು.  

  ಭೈರಪ್ಪನವರ ‘ತಂತು’ ಕಾದಂಬರಿಯಲ್ಲಿ ಹೀಗೊಂದು ಮಾತಿದೆ- ‘ಜನರು ಮೂಲತ: ಒಳ್ಳೆಯವರು, ಕೆಟ್ಟೋರು ಅನ್ನೂ ವಿಂಗಡಣೆ ಸರಿಯಲ್ಲ. ಅವರು ಗೊಬ್ಬರದ ಥರ ಇದ್ದಾರೆ. ಗೊಬ್ಬರ ಒಯ್ದು ತೆಂಗಿನ ಮರಕ್ಕೆ ಹಾಕಿದರೆ ಅದೂ ಫಲ ಕೊಡುತ್ತೆ. ಪಾಪಾಸುಕಳ್ಳಿಗೆ ಹಾಕಿದರೆ ಅದೂ ಹೊರವಾಗಿ ಬೆಳೆಯುತ್ತೆ. ಗೊಬ್ಬರದ ಹಂಗಿರೊ ಅವರನ್ನು ನಿಜವಾದ ಜನರ ಹಂಗೆ ಮನುಷ್ಯರ ಹಂಗೆ ಮಾಡೂದೇ ಮೂಲ ಪ್ರಶ್ನೆ’. ವಿದ್ಯಾರ್ಥಿಗಳನ್ನು ಪಾಪಾಸುಕಳ್ಳಿಗಳನ್ನಾಗಿಸದೆ ಅವರನ್ನು ತೆಂಗಿನ ಮರದಂತೆ ಮಾಡುವುದು ಇಂದಿನ ಶಿಕ್ಷಣ ವ್ಯವಸ್ಥೆ, ಶಿಕ್ಷಕರು ಮತ್ತು ಪಾಲಕರ ಜವಾಬ್ದಾರಿಯಾಗಿದೆ. ಪರಿಣಾಮವಾಗಿ ಶಿಕ್ಷಕರು ಮತ್ತು ಪಾಲಕರು ಜೊತೆಗೂಡಿ ಶಿಕ್ಷಣದ ನೈತಿಕ ನೆಲೆಗಟ್ಟನ್ನು ಗಟ್ಟಿಗೊಳಿಸಬೇಕಾದದ್ದು ಇಂದಿನ ತುರ್ತು ಅಗತ್ಯವಾಗಿದೆ.

-ರಾಜಕುಮಾರ ಕುಲಕರ್ಣಿ

Thursday, April 4, 2024

ಬರವಣಿಗೆ ಹಿಂದಿನ ಬವಣೆ

     



(ಪ್ರಜಾವಾಣಿಯ ಸಂಗತ ಅಂಕಣದಲ್ಲಿ ೫.೨.೨೦೨೪ ರಂದು ಪ್ರಕ

     ಇತ್ತೀಚೆಗೆ ನನ್ನ ಸ್ನೇಹಿತರದೂ ಸೇರಿದಂತೆ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಪ್ರಕಾಶಕರು ತುಂಬ ಅದ್ದೂರಿಯಾಗಿ ಆಯೋಜಿಸಿದ್ದರು. ಅಂದು ಹಲವು ಪುಸ್ತಕಗಳನ್ನು ಗಣ್ಯಅತಿಥಿಗಳಿಂದ ಲೋಕಾರ್ಪಣೆಗೊಳಿಸಲಾಯಿತು. ಸಮಾರಂಭದ ವೇದಿಕೆಯಲ್ಲಿ  ಲೇಖಕರಿಗೆ ಹಾರ, ಫಲತಾಂಬೂಲು, ಶಾಲು ಮತ್ತು ಪುಸ್ತಕದ ಇಪ್ಪತ್ತೈದು ಪ್ರತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಕೊನೆಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದವರು ತಮ್ಮ ತಮ್ಮ ಪರಿಚಯದ ಲೇಖಕರಿಂದ ಗೌರವ ಪ್ರತಿಗಳನ್ನು ಪಡೆದು ಸುಗ್ರಾಸು ಭೋಜನ ಸವಿದು ತೆರಳಿದರು. ಸಭಾಂಗಣದ ಬಾಗಿಲಬಳಿ ಮಾರಾಟಕ್ಕೆಂದು ಪ್ರದರ್ಶನಕ್ಕಿಟ್ಟಿದ್ದ ಅಂದು ಬಿಡುಗಡೆಗೊಂಡ ಪುಸ್ತಕಗಳತ್ತ ಯಾರೊಬ್ಬರೂ ಕಣ್ಣು ಹಾಯಿಸಲಿಲ್ಲ. ಪುಸ್ತಕದ ಪ್ರತಿಗಳನ್ನೇ ಲೇಖಕರು ತಮಗೆ ದೊರೆತ ಗೌರವಧನವೆಂದು ತೃಪ್ತಿಪಟ್ಟುಕೊಳ್ಳಬೇಕಾಯಿತು.

ಕನ್ನಡದಲ್ಲಿ ಬರವಣಿಗೆಯಿಂದಲೇ ಬದುಕು ಕಟ್ಟಿಕೊಂಡ ಲೇಖಕರ ಸಂಖ್ಯೆ ಬಲು ವಿರಳ. ಶಿವರಾಮ ಕಾರಂತ, ಅನೃಕ, ತರಾಸು ಅಂಥವರು ಈ ಮಾತಿಗೆ ಅಪವಾದವಾಗಿರಬಹುದು. ಹಾಗೆಂದು ಅಂತಹ ಲೇಖಕರ ಸಂಖ್ಯೆ ಕನ್ನಡಿಗರು ಹೆಮ್ಮೆಪಡುವಷ್ಟೆನಿಲ್ಲ. ಇಲ್ಲಿ ಲೇಖಕ ತನ್ನ ಪುಸ್ತಕ ಪ್ರಕಟಣೆಗಾಗಿ ಪ್ರಕಾಶಕರನ್ನು ಅವಲಂಬಿಸಬೇಕಾದ ಅನಿವಾರ್ಯತೆಯಿದೆ. ಪ್ರಕಾಶಕರು ಪುಸ್ತಕಗಳ ಮಾರಾಟಕ್ಕಾಗಿ ಪುಸ್ತಕ ವ್ಯಾಪಾರಿಗಳು, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಗ್ರಂಥಾಲಯ ಇಲಾಖೆ ಮತ್ತು ಓದುಗರನ್ನು ಅವಲಂಬಿಸಿರುವರು. ಶಿಕ್ಷಣ ಸಂಸ್ಥೆಗಳು ಪಠ್ಯೇತರ ಪುಸ್ತಕಗಳನ್ನು ಖರೀದಿಸುವುದು ಕಡಿಮೆ. ಪುಸ್ತಕ ವ್ಯಾಪಾರಿಗಳು ಮುಂಗಡ ಹಣ ನೀಡಿ ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಲಾರರು. ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಲು ಅನೇಕ ಪಟ್ಟುಗಳನ್ನು ಕರಗತ ಮಾಡಿಕೊಂಡಿರಬೇಕು. ಓದುಗರು ಪುಸ್ತಕಗಳನ್ನು ಖರೀದಿಸಿ ಓದುವ ಔದಾರ್ಯ ತೋರುತ್ತಿಲ್ಲ. ಇನ್ನು ಲೇಖಕನೇ ಪ್ರಕಾಶಕನಾಗಿ ಪುಸ್ತಕ ಪ್ರಕಟಿಸಲು ಮುಂದಾಗುವುದಾದರೆ ಪುಸ್ತಕ ಮಾರಾಟದ ವಿಭಿನ್ನ ತಂತ್ರಗಳ ಅರಿವಿರಬೇಕು. ಒಟ್ಟಿನಲ್ಲಿ ಸನ್ನಿವೇಶ ಲೇಖಕ ಗೌರವಧನವನ್ನು ಅಪೇಕ್ಷಿಸದಷ್ಟು ಪ್ರಕಾಶಕರಿಗೆ ಪೂರಕವಾಗಿದೆ.

ಕೃತಿಸ್ವಾಮ್ಯ ಕಾಯ್ದೆ ಪ್ರಕಾರ ಬೌದ್ಧಿಕಸ್ವತ್ತಿನ ಕಾನೂನಾತ್ಮಕ ಹಕ್ಕು ಲೇಖಕನಿಗೆ ಸೇರಿದ್ದು. ಕೆಲವು ಪ್ರಕಾಶಕರು ನಿಯಮಬಾಹೀರವಾಗಿ ಕೃತಿಸ್ವಾಮ್ಯವನ್ನು ತಮ್ಮದಾಗಿಸಿಕೊಳ್ಳುತ್ತಿರುವರು. ಪ್ರಕಾಶಕರು ಪುಸ್ತಕದ ಹಕ್ಕನ್ನು ತಮ್ಮದಾಗಿಸಿಕೊಳ್ಳುತ್ತಿರುವುದರ ಹಿಂದೆ ಆರ್ಥಿಕ ಲಾಭದ ಸಂಗತಿ ಅಡಕವಾಗಿದೆ. ಪುಸ್ತಕದ ಮೊದಲ ಆವೃತ್ತಿಯನ್ನು ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟಮಾಡುವ ಪ್ರಕಾಶಕರು ಅದರ ಎರಡನೇ ಆವೃತ್ತಿಯನ್ನೂ ಪ್ರಕಟಿಸಿ ಮಾರಾಟ ಮಾಡುವ ಉದ್ದೇಶದಿಂದ ಪುಸ್ತಕದ ಹಕ್ಕನ್ನು ತಮ್ಮದಾಗಿಸಿಕೊಳ್ಳುವರು. ಒಂದು ಪುಸ್ತಕ ಪ್ರಕಟವಾದ ಹತ್ತು ವರ್ಷಗಳ ನಂತರ ಅದರ ಎರಡನೇ ಆವೃತ್ತಿಯನ್ನು ಪ್ರಕಟಿಸಿ ಸಾರ್ವಜನಿಕ ಗ್ರಂಥಾಲಯಕ್ಕೆ ಮಾರಾಟ ಮಾಡಬಹುದು ಎಂದು ನಿಯಮವೇ ಹೇಳುತ್ತದೆ. ಒಮ್ಮೆ ಪುಸ್ತಕದ ಹಕ್ಕು ಪ್ರಕಾಶಕರ ಪಾಲಾದರೆ ಆಗ ಲೇಖಕನ ಒಪ್ಪಿಗೆ ಇಲ್ಲದೆ ಅದರ ಎರಡನೇ ಆವೃತ್ತಿಯನ್ನು ಪ್ರಕಟಿಸಲು ಯಾವ ಅಡೆತಡೆಯೂ ಎದುರಾಗದು. ಒಂದರ್ಥದಲ್ಲಿ ಪ್ರಕಾಶಕರು ಲೇಖಕರನ್ನು ಆರ್ಥಿಕವಾಗಿ ಶೋಷಣೆಗೊಳಪಡಿಸುತ್ತಿರುವರು. ಹಾಗೆಂದು ಎಲ್ಲ ಪ್ರಕಾಶಕರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ತಪ್ಪು ನಿರ್ಧಾರವಾಗುತ್ತದೆ. ಆದರೆ ಲೇಖಕರನ್ನು ಪೋಷಿಸಿ ಬೆಳೆಸುವ ಪ್ರಕಾಶಕರ ಸಂಖ್ಯೆ ಕ್ಷೀಣಿಸುತ್ತಿದೆ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ.

ಪ್ರಕಾಶಕರಿಂದ ಲೇಖಕನ ಶೋಷಣೆ ಒಂದು ಬಗೆಯಾದರೆ, ಅವನ ವೈಚಾರಿಕ ಪ್ರತಿಭೆಯನ್ನು ದಮನಗೊಳಿಸುವ ಪ್ರಭುತ್ವದ ಶೋಷಣೆ ಇನ್ನೊಂದು ಬಗೆ. ಪ್ರಭುತ್ವ ಎಂದಿಗೂ ತನ್ನನ್ನು ಪ್ರಶ್ನಿಸುವುದನ್ನು ಸಹಿಸಲಾರದು. ಬರಹಗಾರನ ವೈಚಾರಿಕ ಚಿಂತನೆಯನ್ನು ಕತ್ತುಹಿಸುಕಿ ಸಾಯಿಸುವ ಮತ್ತು ಅವನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ ಹುನ್ನಾರ ಕಾಲಕಾಲಕ್ಕೆ ಸಾಹಿತ್ಯ ಕ್ಷೇತ್ರದಲ್ಲಿ ತನ್ನ ಅಟ್ಟಹಾಸವನ್ನು ಮೆರೆಯುತ್ತ ಬಂದಿದೆ. ‘ಸದಾಕಾಲ ಸಮಾಜಕ್ಕೆ ಪ್ರಿಯವಾದದ್ದನ್ನೇ ಹೇಳುವುದು ಲೇಖಕನ ಕೆಲಸವಲ್ಲ. ಪ್ರತಿರೋಧದ ಮೂಲಕವೇ ನಿಜವಾದ ಸತ್ವಯುತ ಬರವಣಿಗೆ ಹೊರಹೊಮ್ಮುತ್ತದೆ. ಆದ್ದರಿಂದ ಓದುಗರನ್ನು ನಾವು ಬದುಕುತ್ತಿರುವ ಪರಿಸರದಲ್ಲಿನ ಜ್ವಲಂತ ಸಮಸ್ಯೆಗಳಿಗೆ ಮುಖಾಮುಖಿಯಾಗಿಸುವ ದಿಸೆಯಲ್ಲಿ ಬರವಣಿಗೆಯು ಪ್ರತಿರೋಧದ ನಡುವೆ ಹುಟ್ಟಿಕೊಳ್ಳುವ ಸೃಜನಶೀಲ ಸೃಷ್ಟಿ ಎನ್ನುವ ನಂಬಿಕೆ ನನ್ನದು’ ಎನ್ನುತ್ತಾರೆ ಲೇಖಕ ಅಮಿತಾವ್ ಘೋಷ್.   

ತಸ್ಲಿಮಾ ನಸ್ರೀನ್, ಸಲ್ಮಾನ್ ರಶ್ದಿ, ಪೆರುಮಾಳ್ ಮುರುಗನ್, ಅರುಂಧತಿ ರಾಯ್ ಇವರೆಲ್ಲ ಪ್ರಭುತ್ವದ ದಮನಕಾರಿ ನೀತಿಗೆ ಒಳಗಾದ ಬರಹಗಾರರು. ಪೆರುಮಾಳ್ ಮುರುಗನ್ ಪ್ರಭುತ್ವದ ಶೋಷಣೆಗೆ ಬೇಸತ್ತು ಒಂದು ಹಂತದಲ್ಲಿ ತನ್ನೊಳಗಿನ ಲೇಖಕ ಸತ್ತು ಹೋದ ಇನ್ನುಮುಂದೆ ನಾನು ಬರೆಯುವುದಿಲ್ಲ ಎಂದು ಘೋಷಿಸಿಕೊಂಡರು. ತಸ್ಲಿಮಾ ನಸ್ರೀನ್ ‘ಲಜ್ಜಾ’ ಕಾದಂಬರಿ ಬರೆದು ತಮ್ಮ ದೇಶವನ್ನೇ ತ್ಯಜಿಸಿದರು. ಸಲ್ಮಾನ್ ರಶ್ದಿ ಹಲ್ಲೆಗೆ ಒಳಗಾಗಿ ಒಂದು ಕಣ್ಣು ಕಳೆದುಕೊಂಡರು. ಸಂಸ್ಕಾರ ಕಾದಂಬರಿ ಬರೆದ ಆರಂಭದ ದಿನಗಳಲ್ಲಿ ಅನಂತಮೂರ್ತಿ ಅವರು ಒಂದು ಸಮುದಾಯದ ವಿರೋಧವನ್ನು ಎದುರಿಸಬೇಕಾಯಿತು. ಸಾರಾ ಅಬೂಬಕ್ಕರ್ ಧಾರ್ಮಿಕ ಮುಖಂಡರ ಕೋಪಕ್ಕೆ ಗುರಿಯಾಗಬೇಕಾಯಿತು. 

ಪ್ರಕಾಶಕ ಮತ್ತು ಪ್ರಭುತ್ವದ ಶೋಷಣೆಯ ಜೊತೆಗೆ ಲೇಖಕ ವಿಮರ್ಶೆ ಎಂಬ ಅಗ್ನಿದಿವ್ಯವನ್ನು ಹಾಯ್ದು ಬರಬೇಕು. ಈಗ ವಿಮರ್ಶೆಗೆ ಕೊಡುಕೊಳ್ಳುವಿಕೆಯ ಮಾರುಕಟ್ಟೆ ಮೌಲ್ಯ ಪ್ರಾಪ್ತವಾಗಿದೆ. ವಿಮರ್ಶಕ ಎಂತಹ ಗಟ್ಟಿ ಸಾಹಿತ್ಯವನ್ನೂ ಪ್ರಪಾತಕ್ಕೆ ತಳ್ಳಬಹುದು ಮತ್ತು ಕೆಟ್ಟ ಸಾಹಿತ್ಯವನ್ನು ಮೇಲ್ಪಂಕ್ತಿಗೆ ತರಬಹುದು. ಈಗೀಗ ವಿಮರ್ಶೆಯಲ್ಲಿ ಜಾತಿ, ಧರ್ಮದ ವಾಸನೆ ಢಾಳಾಗಿ ಮೂಗಿಗೆ ಬಡಿಯುತ್ತಿದೆ. ಲೇಖಕನನ್ನು ವೈಚಾರಿಕವಾಗಿ ಹಣಿಯುವ ಷಡ್ಯಂತ್ರದಲ್ಲಿ ವಿಮರ್ಶಾಲೋಕದ ಪಾಲಿದೆ ಎನ್ನುವ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕುವಂತಿಲ್ಲ.  

ಒಟ್ಟಾರೆ ಆರ್ಥಿಕ ಶೋಷಣೆ, ಪ್ರಭುತ್ವದ ಹಿಂಸೆ ಮತ್ತು ವಿಮರ್ಶೆಯ ಕಾಕದೃಷ್ಟಿಗೆ ಲೇಖಕ ಏಕಕಾಲಕ್ಕೆ ಒಳಗಾಗುತ್ತಿರುವನು. ಈ ನಡುವೆ ಕಥೆ, ಕವಿತೆ, ಪ್ರಬಂಧ, ಪುಸ್ತಕ ಸ್ಪರ್ಧೆಗಳ ಅಖಾಡದಲ್ಲಿ ಲೇಖಕ ಪ್ರತಿಸ್ಪರ್ಧಿಗಳ ವಿರುದ್ಧ ತೊಡೆತಟ್ಟಬೇಕು. ಪ್ರಶಸ್ತಿ, ಪುರಸ್ಕಾರಗಳಿಗಾಗಿ ಲಾಬಿಮಾಡುತ್ತ ಶಿಫಾರಸಿಗಾಗಿ ರಾಜಕಾರಣಿಗಳ ಹಾಗೂ ಅಧಿಕಾರಗಳ ಓಲೈಕೆಗೆ ತೊಡಗಬೇಕು. ತನ್ನ ನಡೆ, ನುಡಿಯನ್ನು ಹದ್ದಿನ ಕಣ್ಣಿನಿಂದ ಅವಲೋಕಿಸುತ್ತಿರುವ ಕುಟುಂಬ ಮತ್ತು ಸಮಾಜದ ದೃಷ್ಟಿಗೆ ಬಲಿಪಶುವಾಗಬೇಕು. ಇಂತಹ ಸನ್ನಿವೇಶದಲ್ಲಿ ನಿಜವಾದ ಸತ್ವಯುತ ಬರವಣಿಗೆ ಸೃಷ್ಟಿಯಾಗುವುದಾದರೂ ಹೇಗೆ?. ಯಶವಂತ ಚಿತ್ತಾಲರು ಹೇಳಿದಂತೆ ಲೇಖಕನ ಸೃಷ್ಟಿಕಾರ್ಯಕ್ಕೆ ಬೇಕಾದದ್ದು ‘ನಿನ್ನ ಬರವಣಿಗೆ ಬೇಕು’ ಎನ್ನುವ ಇಷಾರೆ, ‘ಬರೆಯುವುದನ್ನು ನಿಲ್ಲಿಸಬೇಡ’ ಎನ್ನುವಂಥ ಪುಸಲಾಯಿಸುವಿಕೆ. ಇಂತಹ ವಾತಾವರಣ ನಿರ್ಮಾಣವಾಗುವುದೇ ಎನ್ನುವುದು ಸಧ್ಯದ ಸಂದರ್ಭದಲ್ಲಿ ಅದೊಂದು ಯಕ್ಷಪ್ರಶ್ನೆಯಾಗಿದೆ.

-ರಾಜಕುಮಾರ ಕುಲಕರ್ಣಿ  

Thursday, March 7, 2024

ಶೈಕ್ಷಣಿಕ ಸಮ್ಮೇಳನ: ಉದ್ದೇಶ ನೇಪಥ್ಯಕ್ಕೆ?

 



(೧೮.೦೧.೨೦೨೪ ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ ಪ್ರಕಟ)

    ಬೆಳಿಗ್ಗೆ ವಾಕಿಂಗ್ ವೇಳೆ ಎದುರಾದ ಸ್ನೇಹಿತರು ಇತ್ತೀಚೆಗೆ ತಮ್ಮ ಬೋಧನಾ ವಿಷಯದ ಸಮ್ಮೇಳನದಲ್ಲಿ ಪಾಲ್ಗೊಂಡ ಅನುಭವವನ್ನು ಹಂಚಿಕೊಂಡರು. ಮಾತಿನುದ್ದಕ್ಕೂ ತಾವು ಭೇಟಿ ನೀಡಿದ ನಗರದ ವಿಶೇಷತೆ, ಸುತ್ತಲಿನ ಪ್ರೇಕ್ಷಣಿಯ ಸ್ಥಳಗಳು, ಕಡಲ ಕಿನಾರೆ, ಅಲ್ಲಿನ ಜನಪ್ರಿಯ ತಿಂಡಿ ತಿನುಸುಗಳು ಮತ್ತು  ದೇವಸ್ಥಾನಗಳ ಕುರಿತು ತುಂಬ ಆಸಕ್ತಿಯಿಂದ ಹೇಳಿದರು. ಸಮ್ಮೇಳನದಲ್ಲಿನ ಚರ್ಚೆ, ಸಂವಾದ, ಗೋಷ್ಠಿಗಳ ಕುರಿತು ಏನನ್ನು ಹೇಳಲಿಲ್ಲ. ನಾನೇ ಮುಂದಾಗಿ ವಿಚಾರಿಸಿದಾಗ, ‘ಅಯ್ಯೋ ಅದೇನು ಹೇಳಿಕೊಳ್ಳುವಂತಹದ್ದಲ್ಲ. ಸಮ್ಮೇಳನಕ್ಕೆ ಬಂದವರಲ್ಲಿ ಹೆಚ್ಚಿನವರು ಪ್ರವಾಸಕ್ಕೆಂದೇ ಬಂದಿದ್ದರು. ಕೆಲವರು  ಕುಟುಂಬಸಮೇತರಾಗಿ ಬಂದು ಮೋಜು ಮಸ್ತಿ ಮಾಡಿದರು’ ಎಂದು ನುಡಿದರು.  

ಶೈಕ್ಷಣಿಕ ಸಮ್ಮೇಳನಗಳ ಉದ್ದೇಶ ವಿಫಲವಾಗುತ್ತಿರುವುದಕ್ಕೆ ಪ್ರತಿನಿಧಿಗಳು ತಮ್ಮ ಪೂರ್ಣ ಸಮಯವನ್ನು ಸಮ್ಮೇಳನದ ಚಟುವಟಿಕೆಗಳಿಗೆ ವಿನಿಯೋಗಿಸುತ್ತಿಲ್ಲದಿರುವುದೇ ಕಾರಣವಾಗಿದೆ. ಆಯೋಜಕರು ಕೂಡ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸಬೇಕೆಂದು ಹಾಜರಾತಿಯಲ್ಲಿ ವಿನಾಯಿತಿ ಕೊಡುವುದರಿಂದ ಸಮ್ಮೇಳನಗಳು ಪ್ರವಾಸ ಕೇಂದ್ರಿತವಾಗುತ್ತಿವೆ. ಸಾಮಾನ್ಯವಾಗಿ ಸಮ್ಮೇಳನಗಳ ಆಯೋಜಕರು ಪ್ರತಿನಿಧಿಗಳಿಗೆ ಕುಟುಂಬದ ಸದಸ್ಯರನ್ನು ಜೊತೆಗೆ ಕರೆತರಲು ಅವಕಾಶಕೊಡುವುದುಂಟು. ಇಂಥ ಸಂದರ್ಭಗಳಲ್ಲಿ ಪ್ರತಿನಿಧಿಗಳು ಹೆಚ್ಚುವರಿ ಶುಲ್ಕ ಪಾವತಿಸಿ ತಮ್ಮೊಂದಿಗೆ ಪತ್ನಿ ಮತ್ತು ಮಕ್ಕಳನ್ನು ಕರೆದೊಯ್ಯುವರು. ಹೀಗೆ ಕುಟುಂಬಸಮೇತರಾಗಿ ಸಮ್ಮೇಳನಗಳಿಗೆ ಆಗಮಿಸುವವರು ತಮ್ಮ ಸಂಪೂರ್ಣ ಸಮಯವನ್ನು ಸಮ್ಮೇಳನದ ಕಾರ್ಯಕಲಾಪಗಳಿಗೆ ಮೀಸಲಾಗಿಡುವುದಿಲ್ಲ. ಸುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಿ ಕೊನೆಯ ದಿನ ವೇದಿಕೆಯಲ್ಲಿ ಪ್ರಮಾಣಪತ್ರವನ್ನು ಸ್ವೀಕರಿಸುವುದರೊಂದಿಗೆ ಸಮ್ಮೇಳನಕ್ಕೆ ಆಗಮಿಸಿದ ಪ್ರತಿನಿಧಿಗಳ ಉದ್ದೇಶ ಸಫಲಗೊಳ್ಳುತ್ತದೆ.   

ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ಭಾರತೀಯ ತಾಂತ್ರಿಕ ಶಿಕ್ಷಣ ಆಯೋಗದಂಥ ಉನ್ನತ ಶಿಕ್ಷಣ ಸಮಿತಿಗಳು ಬೋಧಕರು ಸಮ್ಮೇಳನಗಳಲ್ಲಿ ಭಾಗವಹಿಸುವುದನ್ನು ಮತ್ತು ಸಂಶೋಧನಾ ಲೇಖನ ಮಂಡಿಸುವುದನ್ನು ಕಡ್ಡಾಯಗೊಳಿಸಿವೆ. ವೇತನ ಬಡ್ತಿ ಮತ್ತು ಹುದ್ದೆಯ ಬಡ್ತಿಗೆ ಸಂಬಂಧಿಸಿದಂತೆ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯ ಶಿಕ್ಷಕರು ಇದನ್ನೊಂದು ಅನಿವಾರ್ಯ ನಿಯಮವೆನ್ನುವಂತೆ ಪಾಲಿಸುತ್ತಾರೆಯೇ ವಿನಾ ಸ್ವಯಂ ಆಸಕ್ತಿಯಿಂದ ತಮ್ಮನ್ನು ತೊಡಗಿಸಿಕೊಳ್ಳುವುದು ತುಂಬಾ ವಿರಳ. ಇನ್ನು ವೃತ್ತಿನಿರತರ ಸಂಘಗಳು ಆಯೋಜಿಸುವ ಸಮ್ಮೇಳನಗಳು ಜಗಳ, ಕಿರುಚಾಟ, ಪರಸ್ಪರ ನಿಂದನೆಗಳಲ್ಲಿ ಕೊನೆಗೊಳ್ಳುವುದೇ ಹೆಚ್ಚು. ಸಮ್ಮೇಳನದ ಮೊದಲದಿನ ಮಾತ್ರ ಒಂದಿಷ್ಟು ಶೈಕ್ಷಣಿಕ ವಾತಾವರಣ ನೆಲೆಗೊಂಡಿರುತ್ತದೆ. ಕೊನೆಯ ದಿನ ತಮ್ಮ ವೃತ್ತಿ ಸಂಬಂಧಿತ ಸಂಘದ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಪದಾಧಿಕಾರಿಗಳ ಆಯ್ಕೆ ಹಾಗೂ ನೇಮಕಾತಿಯ ಪ್ರಕ್ರಿಯೆಗೆ ಸಂಪೂರ್ಣ ಸಮಯ ಮೀಸಲಾಗಿರುವುದು. ವರ್ಷದ ಖರ್ಚು-ವೆಚ್ಚದ ವರದಿ ಓದುವ ಸಂದರ್ಭ ಸಮ್ಮೇಳನದ ವೇದಿಕೆ ಅಕ್ಷರಶ: ರಣಾಂಗಣದ ರೂಪುತಳೆಯುತ್ತದೆ. ಸದಸ್ಯರು ಮತ್ತು ಪದಾಧಿಕಾರಿಗಳ ನಡುವೆ ವಾಗ್ವಾದ ತಾರಕಕ್ಕೇರಿ ಕೈ ಕೈ ಮಿಲಾಯಿಸುವ ಹಂತಕ್ಕೆ ಪರಿಸ್ಥಿತಿ ವಿಕೋಪಗೊಂಡು ಸಮ್ಮೇಳನದ ಮೂಲ ಉದ್ದೇಶವೇ ಮೂಲೆಗುಂಪಾಗುತ್ತದೆ.

ಪುಸ್ತಕ ಪ್ರಕಾಶಕರು ಮತ್ತು ಶೈಕ್ಷಣಿಕ ಸಾಮಗ್ರಿಗಳ ಉತ್ಪಾದಕರು ತಮ್ಮ ಉತ್ಪಾದನೆಯ ಪ್ರಚಾರಕ್ಕಾಗಿ ಸಮ್ಮೇಳನಗಳಿಗೆ ಸಂಬಂಧಿಸಿದಂತೆ ಪ್ರಾಯೋಜಕರಾಗಿ ವ್ಯವಹರಿಸುವುದುಂಟು. ಸಮ್ಮೇಳನದ ನೋಂದಣಿ ಶುಲ್ಕ ಸೇರಿದಂತೆ ಪಾಲ್ಗೊಳ್ಳಲು ತಗಲುವ ಇಡೀ ವೆಚ್ಚವನ್ನು ಪ್ರಾಯೋಜಕರು ಭರಿಸುವುದರಿಂದ ಶಿಕ್ಷಕರು ಮತ್ತು ಸಂಶೋಧಕರು ಇದರ ಲಾಭ ಪಡೆದು ಧನ್ಯರಾಗುವರು. ಕೆಲವೊಮ್ಮೆ ಈ ಉಚಿತ ಪ್ರಾಯೋಜಕತ್ವದಿಂದ ವಿದೇಶಗಳಿಗೂ ಪಯಣಿಸುವ ಭಾಗ್ಯ ಪ್ರಾಪ್ತವಾಗುವುದುಂಟು. ಒಟ್ಟಾರೆ ಉಚಿತ ಪ್ರಾಯೋಜಕತ್ವದ ಪರಿಣಾಮ ಶೈಕ್ಷಣಿಕ ಆಸಕ್ತಿ ಹಿನ್ನೆಲೆಗೆ ಸರಿದು ಪ್ರವಾಸದ ಉಮೇದು ಮುನ್ನೆಲೆಗೆ ಬರುತ್ತದೆ.  

ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಪದವಿ ಕಾಲೇಜುಗಳಲ್ಲಿ ಶೈಕ್ಷಣಿಯ ಗುಣಮಟ್ಟದ ಸುಧಾರಣೆಗಾಗಿ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ಪ್ರತಿವರ್ಷ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ಸಮ್ಮೇಳನಗಳ ಆಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ. ಉಪನ್ಯಾಸಕರು ವರ್ಷದಲ್ಲಿ ನಿರ್ಧಿಷ್ಟ ಸಂಖ್ಯೆಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವುದು ಮತ್ತು ಸಂಶೋಧನಾ ಲೇಖನ ಮಂಡಿಸುವುದು ಅಗತ್ಯವಾಗಿದೆ. ಪರಿಣಾಮವಾಗಿ ಮಂಡಳಿಯ ನಿಯಮಗಳನ್ನು ಅನುಸರಿಸುವ ಒತ್ತಡದಲ್ಲಿ ಸಮ್ಮೇಳನಗಳ ಆಯೋಜನೆ ಮತ್ತು ಪಾಲ್ಗೊಳ್ಳುವಿಕೆಯು ಅನಿವಾರ್ಯ ಎನ್ನುವಂತಾಗಿರುವುದು ದುರ್ದೈವದ ಸಂಗತಿ. ಈ ನಡುವೆ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಆಯೋಜಿಸುವ ವ್ಯಾಮೋಹ ಈಗ ಸೋಂಕಿನಂತೆ ವ್ಯಾಪಕವಾಗಿ ವಿಸ್ತರಿಸುತ್ತಿದೆ. ನ್ಯಾಕ್ ನಿಯಮಗಳ ಪ್ರಕಾರ ಅಂತರರಾಷ್ಟ್ರೀಯ ಸಮ್ಮೇಳನದ ಆಯೋಜನೆಗೆ ಹೆಚ್ಚು ಅಂಕಗಳು ಲಭ್ಯವಾಗುವುದೆ ಈ ವ್ಯಾಮೋಹಕ್ಕೆ ಕಾರಣವಾಗಿದೆ. ನೆರೆಯ ಶ್ರೀಲಂಕಾ, ನೇಪಾಳ, ಸಿಂಗಪೂರ್‍ನಿಂದ ಒಂದೆರಡು ಪ್ರತಿನಿಧಿಗಳು ಭಾಗವಹಿಸಿದರೂ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಪ್ರಾಪ್ತವಾಗುತ್ತದೆ. ಪರಿಣಾಮವಾಗಿ ಜಿಲ್ಲಾಕೇಂದ್ರಗಳಲ್ಲಿ ಮಾತ್ರವಲ್ಲದೆ ಹೊಬಳಿಯಂಥ ಸಣ್ಣ ಊರುಗಳಲ್ಲಿರುವ ಪದವಿ ಕಾಲೇಜುಗಳಲ್ಲಿ ಕೂಡ ಈಗ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಏರ್ಪಡಿಸಲಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಶೈಕ್ಷಣಿಕ ಸಮ್ಮೇಳನಗಳನ್ನು ಆನ್‍ಲೈನ್ ಮೂಲಕ ಆಯೋಜಿಸಲಾಯಿತು. ವೆಬಿನಾರ್ ಪದ ಪ್ರಾಥಮಿಕ ಶಾಲಾ ಮಕ್ಕಳಿಗೂ ಪರಿಚಿತವಾಗುವಷ್ಟು ವ್ಯಾಪಕವಾಗಿ ಆನ್‍ಲೈನ್ ಮೂಲಕ ಶೈಕ್ಷಣಿಕ ಸಮ್ಮೇಳನಗಳು ಆಯೋಜನೆಗೊಂಡವು. ಪ್ರತಿನಿಧಿಗಳಿಗೂ ನೋಂದಣಿ ಶುಲ್ಕ ಹಾಗೂ ಮತ್ತಿತರ ಖರ್ಚುಗಳಿಲ್ಲದೆ ಇರುವುದರಿಂದ ಬಹಳ ಉಮೇದಿಯಿಂದಲೇ ಈ ವೆಬಿನಾರ್‍ಗಳಲ್ಲಿ ಪಾಲ್ಗೊಂಡರು. ಕೆಲವೊಮ್ಮೆ ಏಕಕಾಲಕ್ಕೆ ಎರಡು ಅಥವಾ ಮೂರು ವೆಬಿನಾರ್‍ಗಳಲ್ಲಿ ಪಾಲ್ಗೊಂಡು ಪ್ರಮಾಣಪತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡರೆ ವಿನಾ ಶೈಕ್ಷಣಿಕವಾಗಿ ಯಾವ ಉನ್ನತಿಯನ್ನೂ ಸಾಧಿಸಲಿಲ್ಲ.

‘ಈ ನೆಲದ ಮೇಲಿನ ಅತಿದೊಡ್ಡ ಕಸವೆಂದರೆ ಪ್ರಶ್ನಿಸುವ ಸಾಮರ್ಥ್ಯವನ್ನು ಕಳೆದುಕೊಂಡ ಮೆದುಳು’ ಎಂದಿರುವರು ವಿಜ್ಞಾನಿ ಆಲ್ಬರ್ಟ್ ಐನ್‍ಸ್ಟೀನ್. ಪ್ರಶ್ನೆ, ಚರ್ಚೆ, ಸಂವಾದದ ಮೂಲಕವೇ ಹೊಸ ಚಿಂತನೆಗಳು ಮತ್ತು ಸಾಧ್ಯತೆಗಳು ಹುಟ್ಟುವವು. ವಿಪರ್ಯಾಸವೆಂದರೆ ಚರ್ಚೆ ಮತ್ತು ಸಂವಾದ ಇಂದಿನ ಬಹುಪಾಲು ಶೈಕ್ಷಣಿಕ ಸಮ್ಮೇಳನಗಳಲ್ಲಿ ಗೋಚರಿಸುತ್ತಿಲ್ಲ. ಹೊಸ ಹೊಳಹುಗಳು ಮತ್ತು ಚಿಂತನೆಗಳು ಸಮ್ಮೇಳನಗಳ ಫಲಶ್ರುತಿಯಾಗಬೇಕು. ಆಗಮಾತ್ರ ಶೈಕ್ಷಣಿಕ ಸಮ್ಮೇಳನಗಳ ಉದ್ದೇಶ ಸಾಕಾರಗೊಂಡು ಅವುಗಳಿಗೆ ಒಂದು ಘನತೆ ಮತ್ತು ಅರ್ಥ ಪ್ರಾಪ್ತವಾಗುತ್ತದೆ.

-ರಾಜಕುಮಾರ ಕುಲಕರ್ಣಿ

Sunday, February 4, 2024

ಲಯ ತಪ್ಪಿದ ವಿಶ್ವವಿದ್ಯಾಲಯ

  




(೧೯.೧೨.೨೦೨೩ ರ ಪ್ರಜಾವಾಣಿಯಲ್ಲಿ ಪ್ರಕಟ)

   ‘ಪ್ರಪಾತಕ್ಕೆ ಸರ್ಕಾರಿ ವಿಶ್ವವಿದ್ಯಾಲಯಗಳು’ ವಿಶೇಷ ವರದಿ (ಪ್ರ.ವಾ., ಡಿ. 10) ವಿಶ್ವವಿದ್ಯಾಲಯಗಳ ದುಸ್ಥಿತಿಗೆ ಕನ್ನಡಿ ಹಿಡಿದಂತಿದೆ. ಅನುದಾನದ ಕೊರತೆ, ಹಣಕಾಸಿನ ದುರ್ಬಳಕೆ, ಸರ್ಕಾರದ ಹಸ್ತಕ್ಷೇಪ ಇತ್ಯಾದಿ ಸಮಸ್ಯೆಗಳು ವಿಶ್ವವಿದ್ಯಾಲಯಗಳನ್ನು ಪ್ರಪಾತಕ್ಕೆ ತಳ್ಳಿವೆ. ಇಂಥ ಸನ್ನಿವೇಶದಲ್ಲಿ ಗುಣಮಟ್ಟದ ಸಂಶೋಧನೆ ಮತ್ತು ದಕ್ಷ, ಪ್ರಾಮಾಣಿಕ ಹಾಗೂ ಸಾಮಾಜಿಕ ಕಾಳಜಿಯುಳ್ಳ ಭವಿಷ್ಯದ ನೇತಾರರನ್ನು ರೂಪಿಸುವಂತಹ ಮಹತ್ವದ ಜವಾಬ್ದಾರಿಯನ್ನು ವಿವಿಗಳು ನಿರ್ವಹಿಸುವುದಾದರೂ ಹೇಗೆ?. ಈ ಎರಡು ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ವಿಶ್ವವಿದ್ಯಾಲಯ ಸಹಜವಾಗಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರೇಷ್ಠ ವಿಶ್ವವಿದ್ಯಾಲಯಗಳೆಂದು ಆಯ್ಕೆಯಾಗುವ ಬಹುತೇಕ ವಿಶ್ವವಿದ್ಯಾಲಯಗಳು ಸಂಶೋಧನೆ ಮತ್ತು ಭವಿಷ್ಯದ ನೇತಾರರ ತಯ್ಯಾರಿಗೆ ಹೆಚ್ಚು ಒತ್ತು ಕೊಡುವುದನ್ನು ಕಾಣಬಹುದು. 

ನಾನು ಸ್ನಾತಕೋತ್ತರ ಪದವಿ ಪಡೆದ ವಿಶ್ವವಿದ್ಯಾಲಯದ ವಿಭಾಗಕ್ಕೆ ಕೆಲವು ದಿನಗಳ ಹಿಂದೆ ಭೇಟಿ ನೀಡುವ ಸಂದರ್ಭ ಎದುರಾಯಿತು. ಒಂದು ಕಾಲದಲ್ಲಿ ಏಳೆಂಟು ಜನ ಪೂರ್ಣಕಾಲಿಕ ಬೋಧಕರು ಬೋಧನೆ ಮತ್ತು ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ವಿಭಾಗದಲ್ಲಿ ಇಂದು ಪೂರ್ಣಕಾಲಿಕ ಬೋಧಕರ ಸಂಖ್ಯೆ ಸೊನ್ನೆ. ಅರೆಕಾಲಿಕ ಉಪನ್ಯಾಸಕರಿಂದ ಸ್ನಾತಕೋತ್ತರ ಕೋರ್ಸಿನ ಎರಡು ತರಗತಿಗಳ ಪಾಠ ಪ್ರವಚನ ನಿರ್ವಹಿಸಬೇಕಾದ ಸನ್ನಿವೇಶ ಎದುರಾಗಿದೆ. ಪೂರ್ಣಕಾಲಿಕ ಬೋಧಕರಿಲ್ಲದ ಕಾರಣ ಸಂಶೋಧನೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಪರಿಣಾಮವಾಗಿ ಶೈಕ್ಷಣಿಕ ಗುಣಮಟ್ಟ ಇಳಿಮುಖವಾಗಿ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿರುವರು. 

ಇದು ಕೇವಲ ಒಂದು ವಿಶ್ವವಿದ್ಯಾಲಯದ ಚಿತ್ರಣವಲ್ಲ. ರಾಜ್ಯದ ಬಹಳಷ್ಟು ವಿಶ್ವವಿದ್ಯಾಲಯಗಳು ಇಂದು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿವೆ. ಅನೇಕ ವಿಭಾಗಗಳಲ್ಲಿ ಪೂರ್ಣಕಾಲಿಕ ಬೋಧಕರಿಲ್ಲದೆ ಅರೆಕಾಲಿಕ ಬೋಧಕರನ್ನು ನೆಚ್ಚಿಕೂಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ವಿಶ್ವವಿದ್ಯಾಲಯಗಳ ಸಿಬ್ಬಂದಿಗೆ ನಿಯಮಿತವಾಗಿ ವೇತನ ಪಾವತಿಯಾಗುತ್ತಿಲ್ಲ ಎನ್ನುವ ದೂರು ಸಾಮಾನ್ಯವಾಗಿದೆ. ಕೆಲವು ವಿಶ್ವವಿದ್ಯಾಲಯಗಳು ಕಟ್ಟಡ ಮತ್ತು ಅಗತ್ಯದ ಪೀಠೋಪಕರಣಗಳಿಲ್ಲದೆ ಮುಚ್ಚಬೇಕಾದ ಸ್ಥಿತಿಗೆ ಬಂದು ನಿಂತಿವೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳಲ್ಲಿನ ಸಮಸ್ಯೆಗಳೇ ಬೆಟ್ಟದಷ್ಟಿರುವಾಗ ಇನ್ನು ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸುವುದು ಆತುರದ ನಿರ್ಧಾರವಾಗುತ್ತದೆ. ವೃತ್ತಿಪರ ಕೋರ್ಸುಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿರುವುದರಿಂದ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಕೋರ್ಸುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಸಂದರ್ಭ ವಿಶ್ವವಿದ್ಯಾಲಯಗಳ ಸಂಖ್ಯೆಯನ್ನು ಹೆಚ್ಚಿಸುವುದು ಸರಿಯಲ್ಲ. ಹೊಸ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಬದಲು ಈಗ ಕಾರ್ಯನಿರ್ವಹಿಸುತ್ತಿರುವ ವಿಶ್ವವಿದ್ಯಾಲಯಗಳನ್ನು ಬಲಪಡಿಸಬೇಕಾದದ್ದು ಅಗತ್ಯವಾಗಿದೆ. ಹೊಸ ವಿವಿಗಳ ಸ್ಥಾಪನೆ ಸಧ್ಯಕ್ಕಿಲ್ಲ ಎಂದಿರುವ ಉನ್ನತ ಶಿಕ್ಷಣ ಸಚಿವರ ನಿರ್ಧಾರ ಸ್ವಾಗತಾರ್ಹ.

ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಎನ್ನುವುದು ನಿಂತ ನೀರಾಗಿದೆ. ಸಂಶೋಧನೆಯಲ್ಲಿ ಗುಣಮಟ್ಟದ ಕೊರತೆಯು ಎದ್ದು ಕಾಣುತ್ತಿದೆ. ಇತ್ತೀಚೆಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಸ್ನಾತಕೋತ್ತರ ಸಂಶೋಧನಾ ಪ್ರಬಂಧದ (ಥೀಸಿಸ್) ಬರವಣಿಗೆ ಸಂಬಂಧಿತ ಶೀರ್ಷಿಕೆಗಳ ಪಟ್ಟಿಯನ್ನು ತಯ್ಯಾರಿಸಿದೆ. 24 ವೈದ್ಯಕೀಯ ವಿಷಯಗಳಿಗೆ ಸಂಬಂಧಪಟ್ಟ ಸುಮಾರು 1400 ಕ್ಕಿಂತ ಹೆಚ್ಚು ಶೀರ್ಷಿಕೆಗಳು ಈ ಪಟ್ಟಿಯಲ್ಲಿವೆ. ಪ್ರಸ್ತುತ ವೈದ್ಯಕೀಯ ವಿದ್ಯಾರ್ಥಿಗಳು ಆಯ್ಕೆಮಾಡಿಕೊಳ್ಳುತ್ತಿರುವ ಸಂಶೋಧನಾ ಶೀರ್ಷಿಕೆಗಳು ಗುಣಮಟ್ಟದ್ದಾಗಿಲ್ಲ ಎನ್ನುವ ಕಾರಣದಿಂದ ಆಯೋಗವೇ ಮುಂದಾಗಿ ಶೀರ್ಷಿಕೆಗಳನ್ನು ತಯ್ಯಾರಿಸಿದೆ. ಈ ಮಾತು ಬರೀ ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಗೆ ಮಾತ್ರವಲ್ಲ ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ಒಟ್ಟಾರೆ ವೇತನ ಬಡ್ತಿ ಮತ್ತು ಉದ್ಯೋಗ ಬಡ್ತಿ ಸಂಶೋಧನೆಯ ಮೊದಲ ಆದ್ಯತೆಯಾಗಿದೆ. ಒಮ್ಮೆ ಸಂಶೋಧನೆ ಪೂರ್ಣಗೊಳಿಸಿ ಡಾಕ್ಟರೇಟ್ ಪದವಿ ಪಡೆದವರು ಮತ್ತೆ ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದು ವಿರಳ.

ಭವಿಷ್ಯದ ನೇತಾರರನ್ನು ರೂಪಿಸುವ ಜವಾಬ್ದಾರಿಯಲ್ಲೂ ವಿಶ್ವವಿದ್ಯಾಲಯಗಳು ಎಡವುತ್ತಿವೆ. ಸಂವಾದ, ಚರ್ಚೆ, ಗೋಷ್ಠಿಗಳಿಗೆ ಮುಕ್ತವೇದಿಕೆಯಾಗಬೇಕಾದ ವಿಶ್ವವಿದ್ಯಾಲಯಗಳು ಆಳುವ ಸರ್ಕಾರಗಳ ಕೈಗೊಂಬೆಯಂತೆ ವರ್ತಿಸುತ್ತಿವೆ. ಚರ್ಚೆ ಮತ್ತು ಸಂವಾದಗಳು ಆಳುವ ಸರ್ಕಾರಗಳ ಮುಖಸ್ತುತಿಗೆ ಸೀಮಿತವಾಗುತ್ತಿವೆ. ಕಾಲಕಾಲಕ್ಕೆ ಅಸ್ತಿತ್ವಕ್ಕೆ ಬರುವ ಸರ್ಕಾರಗಳ ಚಹರೆ ಅಥವಾ ಮುಖವಾಡ ವಿಶ್ವವಿದ್ಯಾಲಯಗಳಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿದೆ. ಆಯಾ ಸರ್ಕಾರಗಳು ತಮ್ಮ ಸೈದ್ಧಾಂತಿಕ ನೆಲೆಯನ್ನು ವಿಸ್ತರಿಸಲು ವಿಶ್ವವಿದ್ಯಾಲಯಗಳನ್ನು ವೇದಿಕೆಯಾಗಿ ಬಳಸಿಕೊಳ್ಳುತ್ತಿವೆ. ಇದಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯಗಳ ಆಯಕಟ್ಟಿನ ಸ್ಥಾನಗಳನ್ನು ಕಾಲಕಾಲಕ್ಕೆ ಅಧಿಕಾರದ ಚುಕ್ಕಾಣಿ ಹಿಡಿಯುವ ರಾಜಕೀಯ ಪಕ್ಷಗಳ ಹಿಂಬಾಲಕರು ಆಕ್ರಮಿಸಿಕೊಳ್ಳುತ್ತಿರುವರು. ಕೆಲವು ರಾಜ್ಯಗಳಲ್ಲಿ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಪೈಪೆÇೀಟಿ ಏರ್ಪಟ್ಟಿದೆ. ಇದು ಆರೋಗ್ಯಕರ ಬೆಳೆವಣಿಗೆಯಲ್ಲ. ಇಂಥ ಸನ್ನಿವೇಶದಲ್ಲಿ ದಕ್ಷ, ಪ್ರಾಮಾಣಿಕ ಮತ್ತು ಸಾಮಾಜಿಕ ಕಳಕಳಿಯುಳ್ಳ ಭವಿಷ್ಯದ ನೇತಾರರನ್ನು ರೂಪಿಸುವಲ್ಲಿ ವಿಶ್ವವಿದ್ಯಾಲಯಗಳು ವಿಫಲವಾಗುತ್ತಿವೆ. 

ವಿಶ್ವವಿದ್ಯಾಲಯಗಳನ್ನು ಆವರಿಸಿಕೊಂಡಿರುವ ಜಡತ್ವದಲ್ಲಿ ಬೋಧಕರ ಪಾತ್ರವನ್ನು ಕೂಡ ಕಡೆಗಣಿಸುವಂತಿಲ್ಲ. ಪಾಠ ಮತ್ತು ಸಂಶೋಧನೆಗಿಂತ ಸೆನೆಟ್, ಸಿಂಡಿಕೇಟ್‍ಗಳ ಚುನಾವಣೆ ಹಾಗೂ ಉನ್ನತ ಹುದ್ದೆಗಳ ಲಾಬಿಗಾಗಿ ಸರ್ಕಾರದ ಓಲೈಕೆಯಲ್ಲಿ ಬೋಧಕರ ಹೆಚ್ಚಿನ ಸಮಯ ವಿನಿಯೋಗವಾಗುತ್ತಿದೆ. ಜಾತಿ ಮತ್ತು ಧರ್ಮ ವಿಶ್ವವಿದ್ಯಾಲಯದ ಬೋಧಕ ಹಾಗೂ ವಿದ್ಯಾರ್ಥಿ ಗಣವನ್ನು ವ್ಯವಸ್ಥಿತವಾಗಿ ವಿಭಾಗಿಸುತ್ತಿವೆ. ಅಧ್ಯಾಪಕರು ವಿಶ್ವಮಾನವ ಪ್ರಜ್ಞೆಯ ಭವಿಷ್ಯದ ನೇತಾರರನ್ನು ರೂಪಿಸುವ ಬದಲು ಜಾತಿ ಮತ್ತು ಧರ್ಮಗಳ ಚೌಕಟ್ಟಿಗೆ ಸೀಮಿತಗೊಳ್ಳುತ್ತಿರುವ ಸಂಕುಚಿತ ಮನಸ್ಸಿನ ನಾಗರಿಕರನ್ನು ಸೃಷ್ಟಿಸುತ್ತಿರುವರು.

ಪ್ರಸ್ತುತ ಸಂದರ್ಭದಲ್ಲಿ ವಿಶ್ವವಿದ್ಯಾಲಯಗಳನ್ನು ಆರ್ಥಿಕವಾಗಿ ಸದೃಢಗೊಳಿಸುವುದು, ಭ್ರಷ್ಟಾಚಾರ ಮುಕ್ತಗೊಳಿಸುವುದು, ಆವರಿಕೊಂಡಿರುವ ಪ್ರಭುತ್ವದ ಚಹರೆಯನ್ನು ತೆಗೆದುಹಾಕುವುದು, ಬೋಧಕಗಣವನ್ನು ಜಾತಿ-ಧರ್ಮದ ಸಂಕೋಲೆಯಿಂದ ಹೊರತರುವುದು ಮತ್ತು ಬೋಧನೆ ಹಾಗೂ ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸುವುದು ತುರ್ತು ಅಗತ್ಯವಾಗಿದೆ. ವಿಶ್ವವಿದ್ಯಾಲಯಗಳು ಮುಕ್ತವಾಗಿ ಕಾರ್ಯನಿರ್ವಹಿಸಲು ತೊಡಗಿದಾಗ ಸಂಶೋಧನೆಯ ಗುಣಮಟ್ಟ ಹೆಚ್ಚುತ್ತದೆ ಮತ್ತು ಭವಿಷ್ಯದ ಪ್ರಜ್ಞಾವಂತ ನೇತಾರರು ರೂಪುಗೊಳ್ಳುತ್ತಾರೆ. ಸಧ್ಯದ ನಿರೀಕ್ಷೆ ಕೂಡ ಇದೇ ಆಗಿದೆ.

-ರಾಜಕುಮಾರ ಕುಲಕರ್ಣಿ


Tuesday, January 23, 2024

ಗ್ರಂಥಾಲಯ ಸಪ್ತಾಹ: ನಿತ್ಯದ ಹಬ್ಬವಾಗಲಿ


       

(೧೭.೧೧.೨೦೨೩ ರ ಪ್ರಜಾವಾಣಿಯ 'ಸಂಗತ' ಅಂಕಣದಲ್ಲಿ ಪ್ರಕಟ)

     ಪ್ರತಿವರ್ಷ ನವೆಂಬರ್ 14 ರಿಂದ 20 ರ ವರೆಗೆ ಭಾರತದಲ್ಲಿ ‘ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ’ವನ್ನು ಆಚರಿಸಲಾಗುತ್ತದೆ. ವಾರಪೂರ್ತಿ ಪುಸ್ತಕ ಪ್ರದರ್ಶನ, ವಿಶೇಷ ಉಪನ್ಯಾಸ ಇತ್ಯಾದಿ ಕಾರ್ಯಕ್ರಮಗಳನ್ನು ಗ್ರಂಥಾಲಯಗಳಲ್ಲಿ ಆಯೋಜಿಸಲಾಗುವುದು. ಗ್ರಂಥಾಲಯ ಸಪ್ತಾಹ ಆಚರಿಸುವುದರ ಮೂಲಕ ಗ್ರಂಥಾಲಯ ಮತ್ತು ಪುಸ್ತಕಗಳ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸಿಕೊಡಲಾಗುವುದು. ವಿಶೇಷವಾಗಿ ಗ್ರಂಥಾಲಯ ಸಪ್ತಾಹದ ಆಚರಣೆಗೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ತುಂಬ ಮಹತ್ವವಿದೆ. ವಿವಿಧ ವಯೋಮಾನದ ಮತ್ತು ಹಿನ್ನೆಲೆಯ ಓದುಗರು ಭೇಟಿನೀಡುವ ತಾಣ ಸಾರ್ವಜನಿಕ ಗ್ರಂಥಾಲಯಗಳಾಗಿವೆ. ಅಗತ್ಯದ ಪುಸ್ತಕಗಳನ್ನು ವೈಯಕ್ತಿಕವಾಗಿ ಖರೀದಿಸಿ ಓದುವುದು ಆರ್ಥಿಕವಾಗಿ ಕಷ್ಟಸಾಧ್ಯವಾದ ಕೆಲಸ. ಅದಕ್ಕೆಂದೆ ಓದುಗರ ಅಭಿರುಚಿ ಮತ್ತು ಅಗತ್ಯಕ್ಕನುಗುಣವಾಗಿ ಪುಸ್ತಕಗಳು ದೊರೆಯುವ ವ್ಯವಸ್ಥೆ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಮಾಡಲಾಗಿದೆ. ಜನರಲ್ಲಿ ಓದಿನಂತಹ ಸುಸಂಸ್ಕೃತ ಹವ್ಯಾಸವನ್ನು ಬೆಳೆಸುವ ದಿಸೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳ ಪಾತ್ರ ಮತ್ತು ಸೇವೆ ಪ್ರಶಂಸಾರ್ಹವಾಗಿದೆ. 

ಸಾರ್ವಜನಿಕ ಗ್ರಂಥಾಲಯಗಳನ್ನು ಜನಸಾಮಾನ್ಯರ ವಿಶ್ವವಿದ್ಯಾಲಯಗಳೆಂದು ಪರಿಗಣಿಸಲಾಗಿದೆ. ಸಾರ್ವಜನಿಕ ಗ್ರಂಥಾಲಯಗಳ ಮಹತ್ವವನ್ನರಿತು ಅವುಗಳನ್ನು ಆರ್ಥಿಕವಾಗಿ ಸದೃಢಗೊಳಿಸಲು ಭಾರತದಲ್ಲಿ ಗ್ರಂಥಾಲಯ ಕಾಯ್ದೆಯನ್ನು ರಚಿಸಲಾಯಿತು. ಕರ್ನಾಟಕದಲ್ಲಿ 1965 ರಲ್ಲಿ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಜಾರಿಗೆ ಬಂದಿತು. ಈ ಕಾಯ್ದೆಯಲ್ಲಿ ಸಾರ್ವಜನಿಕರಿಂದ ಸಂಗ್ರಹವಾಗುವ ಆಸ್ತಿ ತೆರಿಗೆ ಹಣದಲ್ಲಿ ಶೇಕಡಾ 6 ರಷ್ಟನ್ನು ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿಗಾಗಿ ಖರ್ಚು ಮಾಡಬೇಕೆಂದು ಉಲ್ಲೇಖಿಸಲಾಗಿದೆ. ಇಂದು ಭಾರತದ ಎಲ್ಲ ರಾಜ್ಯಗಳಲ್ಲಿ ಸಾರ್ವಜನಿಕ ಗ್ರಂಥಾಲಯ ಕಾಯ್ದೆ ಬಳಕೆಯಲ್ಲಿದೆ.

ಸಾರ್ವಜನಿಕರ ಓದಿನ ಹವ್ಯಾಸಕ್ಕೆ ಅಗತ್ಯವಾದ ಒಂದು ಪೂರಕ ವಾತಾವರಣವನ್ನು ನಿರ್ಮಿಸುವ ಉದ್ದೇಶದಿಂದ ಸ್ಥಾಪನೆಯಾದ ಸಾರ್ವಜನಿಕ ಗ್ರಂಥಾಲಯಗಳು ಇಂದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎನ್ನುವ ಆರೋಪ ಕೇಳಿಬರುತ್ತಿದೆ. ಕೆಲವು ದಶಕಗಳ ಹಿಂದಿನ ಗ್ರಂಥಾಲಯಗಳ ಭೌತಿಕ ಚಿತ್ರಣದೊಂದಿಗೆ ಹೋಲಿಸಿದರೆ ಇಂದು ಕಟ್ಟಡ ಮತ್ತು ಪೀಠೋಪಕರಣಗಳು ಆಧುನೀಕರಣಗೊಂಡಿರುವುದು ಕಣ್ಣಿಗೆ ಢಾಳಾಗಿ ಗೋಚರಿಸುತ್ತದೆ. ಗ್ರಂಥಾಲಯಗಳಿಗೆ ಕಂಪ್ಯೂಟರ್‍ಗಳನ್ನು ಮತ್ತು ಇಂಟರ್‍ನೆಟ್ ಸೌಲಭ್ಯ ಕೂಡ ಒದಗಿಸಲಾಗಿದೆ. ವಿಪರ್ಯಾಸದ ಸಂಗತಿ ಎಂದರೆ ಓದುಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಇದಕ್ಕೆ ಗ್ರಂಥಾಲಯಗಳಲ್ಲಿ ಗುಣಾತ್ಮಕ ಪುಸ್ತಕಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿಲ್ಲದಿರುವುದೇ ಕಾರಣ ಎನ್ನುವುದು ಓದುಗರ ಅಭಿಪ್ರಾಯವಾಗಿದೆ.

ಕೇವಲ ಕಟ್ಟಡವನ್ನು ನವೀಕರಿಸಿ ಆಧುನಿಕ ಪೀಠೋಪಕರಣಗಳನ್ನು ಒದಗಿಸಿದ ಮಾತ್ರಕ್ಕೆ ಗ್ರಂಥಾಲಯಗಳಲ್ಲಿ ಗಮನಾರ್ಹ ಸುಧಾರಣೆಯಾಗಿದೆ ಎನ್ನುವ ನಿರ್ಧಾರಕ್ಕೆ ಬರುವುದು ಆತುರದ ನಡೆಯಾಗುತ್ತದೆ. ಓದುಗರ ಅಭಿರುಚಿ ಮತ್ತು ಅಗತ್ಯಕ್ಕೆ ಅನುಗುಣವಾದ ಪುಸ್ತಕಗಳು ಗ್ರಂಥಾಲಯಗಳಲ್ಲಿ ದೊರೆಯುವಂತಾಗಬೇಕು. ಕಳೆದ ಮೂರು ವರ್ಷಗಳಿಂದ (2020-2022) ಸಾರ್ವಜನಿಕ ಗ್ರಂಥಾಲಯಗಳಿಗಾಗಿ ಪುಸ್ತಕಗಳನ್ನು ಖರೀದಿಸಿಲ್ಲವೆಂದು ಪ್ರಕಾಶಕರು ತಮ್ಮ ಅಳಲು ತೋಡಿಕೊಂಡಿರುವರು. 2020 ನೇ ಸಾಲಿನ ಆಯ್ಕೆಯಾದ ಪುಸ್ತಕಗಳನ್ನು ಖರೀದಿಸಲು ಇದುವರೆಗೂ ಸರ್ಕಾರ ಅನುಮೋದನೆ ನೀಡದಿರುವುದು ಖಂಡನಾರ್ಹ. ಓದಿನ ಸಂಸ್ಕೃತಿ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಪುಸ್ತಕಗಳ ಖರೀದಿಗೆ ನೆರವು ನೀಡುವಲ್ಲಿ ವಿಳಂಬ ಮಾಡುವುದು ಈಗಾಗಲೇ ಸೃಷ್ಟಿಯಾಗಿರುವ ಓದುಗರು ಮತ್ತು ಪುಸ್ತಕಗಳ ನಡುವಣ ಕಂದಕವನ್ನು ಮತ್ತಷ್ಟು ವಿಸ್ತರಿಸಲು ಆಹ್ವಾನ ನೀಡಿದಂತಾಗುತ್ತದೆ.   

ಕಟ್ಟಡ, ಪೀಠೋಪಕರಣಗಳು ಮತ್ತು ಪುಸ್ತಕಗಳಷ್ಟೆ ಅಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಯ ಪಾತ್ರ ಕೂಡ ಮಹತ್ವದ್ದಾಗಿದೆ. ಓದುಗರ ಸಂಖ್ಯೆ ಹೆಚ್ಚಿಸುವುದರ ಜೊತೆಗೆ ಪುಸ್ತಕಗಳ ಉಪಯೋಗ ವ್ಯಾಪಕವಾಗಿ ವಿಸ್ತರಿಸುವ ವಾತಾವರಣವನ್ನು ಗ್ರಂಥಾಲಯದಲ್ಲಿ ನಿರ್ಮಾಣಮಾಡಬೇಕು. ಪುಸ್ತಕಗಳು ಕಣ್ಣಿಗೆ ಚೆಂದ ಕಾಣುವಂತೆ ಜೋಡಿಸಿಡುವುದಕ್ಕಿಂತ ಓದಿಸಿಕೊಂಡು ಜೀರ್ಣವಾಗಲು ಅವಕಾಶ ಮಾಡಿಕೊಡಬೇಕು. ಪುಸ್ತಕವೊಂದು ಎಷ್ಟೊಂದು ಪ್ರಮಾಣದಲ್ಲಿ ಓದಿಸಿಕೊಂಡಿದೆ ಎನ್ನುವುದನ್ನು ದಾಖಲೆಗಳ ಮೂಲಕ ಹೇಳಲು ಸಾಧ್ಯವಿಲ್ಲ. ಪುಸ್ತಕದ ಭೌತಿಕ ಸ್ವರೂಪವೇ ಅದನ್ನು ಹೇಳುತ್ತದೆ. ಕಥೆಗಾರ ಎಸ್.ದಿವಾಕರ್ ಪುಸ್ತಕ ಓದಿದ್ದಕ್ಕೆ ಪುಸ್ತಕವೇ ಸಾಕ್ಷಿ ಎನ್ನುವ ತಮ್ಮ ಪ್ರಬಂಧದಲ್ಲಿ ಹೀಗೆ ಹೇಳಿರುವರು-‘ಪುಸ್ತಕಗಳ ರಟ್ಟು ಕಿತ್ತುಹೋಗಿರಬಹುದು, ಅವುಗಳ ಪುಟಗಳು ನಾಯಿಕಿವಿಗಳಾಗಿರಬಹುದು, ಹೊಲಿಗೆಯೋ ಅಂಟೋ ಬಿಚ್ಚಿಕೊಂಡು ಕೆಲವು ಹಾಳೆಗಳೇ ಸಡಿಲವಾಗಿರಬಹುದು. ಅವು ಮತ್ತೆ ಮತ್ತೆ ಓದಿಸಿಕೊಂಡು ತಮ್ಮ ಸುಸ್ವರೂಪ ಕಳೆದುಕೊಂಡ ಪುಸ್ತಕಗಳು. ಅಂಥ ಪುಸ್ತಕಗಳ ಮಾರ್ಜಿನ್ನಿನ ತುಂಬ ಪೆನ್ಸಿಲಿನಲ್ಲೋ ಪೆನ್ನಲ್ಲೋ ಗೀಚಿರುವ ಬರಹಗಳಿದ್ದರೆ ಆಶ್ಚರ್ಯವಿಲ್ಲ’.

ಹಿಂದೆಲ್ಲ ಮನೆಬಾಗಿಲಿಗೆ ಪುಸ್ತಕಗಳನ್ನು ಕೊಂಡೊಯ್ದು ಓದುಗರಿಗೆ ಒದಗಿಸುವ ‘ಸಂಚಾರಿ ಗ್ರಂಥಾಲಯ’ ಸೇವೆ ಚಾಲ್ತಿಯಲ್ಲಿತ್ತು. ವಿಶೇಷವಾಗಿ ಗೃಹಿಣಿಯರಿಗೆ ತಮ್ಮ ಮನೆಗೆಲಸದ ಬಿಡುವಿನ ವೇಳೆ ಸಂಚಾರಿ ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆದು ಓದಲು ಹೆಚ್ಚು ಅನುಕೂಲವಾಗುತ್ತಿತ್ತು. ಆದರೆ ಇಂದು ಸಂಚಾರಿ ಗ್ರಂಥಾಲಯ ಸೇವೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಸೇವೆಯನ್ನು ಮತ್ತೆ ಪುನರಾರಂಭಿಸುವುದು ಓದಿನ ಅಭಿರುಚಿಯನ್ನು ಹೆಚ್ಚಿಸುವ ದೃಷ್ಟಿಯಿಂದ ಅಗತ್ಯವಾಗಿದೆ. ಸಾರ್ವಜನಿಕರು ಕೂಡ ಪುಸ್ತಕ ಪ್ರೀತಿಯನ್ನು ಮೈಗೂಡಿಸಿಕೊಳ್ಳುವುದು ಮುಖ್ಯವಾಗಿದೆ. ಸಾರ್ವಜನಿಕ ಸಭೆ ಸಮಾರಂಭಗಳು ಮಾತ್ರವಲ್ಲದೆ ಕುಟುಂಬದ ಖಾಸಗಿ ಸಮಾರಂಭಗಳಲ್ಲೂ ಪುಸ್ತಕಗಳನ್ನು ಉಡುಗೊರೆಯಾಗಿ ನೀಡುವ ಪದ್ಧತಿ ಆಚರಣೆಗೆ ಬರಬೇಕು.

ಮೊಬೈಲ್‍ನ ವ್ಯಾಪಕ ಬಳಕೆ ಓದಿನ ಆಸಕ್ತಿ ಕ್ಷೀಣಿಸುತ್ತಿರುವುದಕ್ಕೆ ಪ್ರಬಲ ಕಾರಣಗಳಲ್ಲೊಂದು. ಎಲ್ಲ ವಯೋಮಾನದವರಲ್ಲಿ ಮೊಬೈಲ್ ಬಳಕೆಯ ವ್ಯಾಮೋಹ ಸೋಂಕಿನಂತೆ ಹರಡುತ್ತಿದೆ. ಪುಸ್ತಕಗಳ ಓದಿನ ಹವ್ಯಾಸವನ್ನು ಹೆಚ್ಚಿಸುವುದೇ ಈ ಸಮಸ್ಯೆಯ ಪರಿಹಾರಕ್ಕಿರುವ ಪರ್ಯಾಯ ಮಾರ್ಗವಾಗಿದೆ. ಈ ದಿಸೆಯಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಸಾರ್ವಜನಿಕರಲ್ಲಿ ಪುಸ್ತಕ ಪ್ರೀತಿಯನ್ನು ಹೆಚ್ಚಿಸಲು ಅಗತ್ಯದ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಯೋಜನೆಗಳನ್ನು ಅನುಷ್ಠಾನಗೊಳಿಸಲು ಗ್ರಂಥಾಲಯ ಇಲಾಖೆಗೆ ಆರ್ಥಿಕ ನೆರವು ನೀಡುವುದು ಸರ್ಕಾರದ ಸಾಂಸ್ಕೃತಿಕ ಜವಾಬ್ದಾರಿಯಾಗಬೇಕು. ಜೊತೆಗೆ ಗ್ರಂಥಾಲಯ ಸಪ್ತಾಹ ಕೇವಲ ಏಳು ದಿನಗಳ ಆಚರಣೆಯಾಗದೆ ಅದು ದಿನನಿತ್ಯದ ಹಬ್ಬವಾಗಬೇಕು.

-ರಾಜಕುಮಾರ ಕುಲಕರ್ಣಿ