Saturday, April 18, 2020

ಮೂರು ದೃಶ್ಯಗಳು (ಕಥೆ)

--ದೃಶ್ಯ 1--
`ಅಮ್ಮಾ' ಅವನ ಆರ್ತನಾದ ಕೇಳಿದವರ ಹೃದಯ ಹಿಂಡುವಂತಿತ್ತು. `ನೋಡಮ್ಮಾ ನಾನು ನಿನ್ನ ಮಗ ಶಂಕರ ಬಂದಿದ್ದಿನಿ. ಈ ಸಂತೋಷದ ವಿಷಯ ಮೊದಲು ನಿನಗೆ ಹೇಳ್ಬೇಕು ಅಂತ ಓಡೋಡಿ ಬಂದಿದ್ದಿನಿ. ಅಮ್ಮಾ ಇನ್ಮುಂದೆ ನೀನು ಕಷ್ಟ ಪಡಬೇಕಾಗಿಲ್ಲ. ನನಗೆ ಕೆಲಸ ಸಿಕ್ಕಿದೆ ಕೈ ತುಂಬ ಸಂಬಳ ತರುವ ಕೆಲಸ. ಇವತ್ತಿನಿಂದ ನಮ್ಮ ಕಷ್ಟದ ದಿನಗಳು ಮುಗಿದು ಸುಖದ ದಿನಗಳು ಪ್ರಾರಂಭವಾದ್ವು. ನಿನ್ನನ್ನ ದೇವತೆ ಹಾಗೆ ನೋಡಿಕೊಳ್ತಿನಮ್ಮ. ಮಾತಾಡಮ್ಮ ಕಣ್ತೇರೆದು ನೋಡಮ್ಮ' ಮಲಗಿದ್ದ ತಾಯಿಯ ಎರಡೂ ಭುಜಗಳನ್ನು ಹಿಡಿದು ಅಲುಗಿಸಿದ. `ಶಂಕ್ರು ಸಮಾಧಾನ ಮಾಡ್ಕೊ ನೀನು ಎಷ್ಟು ದು:ಖಿಸಿದರೂ ಹೋದ ಜೀವ ಮರಳಿ ಬರಲ್ಲ' ಹಿರಿಯರೊಬ್ಬರು ಸಾಂತ್ವನ ಹೇಳಿದರು. ಅವನ ದು:ಖ ಮತ್ತಷ್ಟು ಹೆಚ್ಚಿತು. `ಇಲ್ಲಮ್ಮ ನೀನು ಸಾಯಬಾರದು. ನೀನು ಇಲ್ದಿದ್ರೆ ನನ್ನ ಬದುಕಿಗೆ ಅರ್ಥಾನೇ  ಇಲ್ಲ. ಅಮ್ಮಾ ನೀನಿಲ್ದೆ ನಾನಾದ್ರೂ ಹೇಗೆ ಬದುಕಿರಲಿ. ನಾನೂ ನಿನ್ನ ಹಿಂದೆನೆ ಬರ್ತಿದ್ದಿನಮ್ಮ' ಎಂದವನೆ ತಾಯಿಯ ಪಾದದ ಮೇಲೆ ಕುಸಿದು ಬಿದ್ದ. ನಿರ್ದೇಶಕ ರವಿವರ್ಮ  ಕಟ್ ಎನ್ನುತ್ತಿದ್ದಂತೆ ಸುತ್ತಲೂ ದೀಪ ಬೆಳಗಿದವು. ಹತ್ತು ನಿಮಿಷಗಳವರೆಗೆ ಕಿವಿಗಡಚಿಕ್ಕುವ ಚಪ್ಪಾಳೆ. `ಮಾರ್ವಲಸ್ ' `ಫೆಂಟಾಸ್ಟಿಕ್' `ಅದ್ಭುತ' `ವ್ಹಾವ್' ಒಬ್ಬೊಬ್ಬರದು ಒಂದೊಂದು ರೀತಿಯ ಉದ್ಗಾರ. `ಮಿ.ಶರತ್‍ಕುಮಾರ ಕ್ಯಾಮರಾ ಎದುರು ನಿಂತ್ರೆ ಪರಕಾಯ ಪ್ರವೇಶ ಮಾಡಿಬಿಡ್ತಿರಿ. ಈ ಚಿತ್ರದ ನಿಮ್ಮ ಪಾತ್ರಕ್ಕೆ ಪ್ರಶಸ್ತಿ ಗ್ಯಾರಂಟಿ' ನಿರ್ದೇಶಕ ರವಿವರ್ಮ ನಟ ಶರತ್‍ಕುಮಾರನನ್ನು ಬಿಗಿದಪ್ಪಿ ಅಭಿನಂದಿಸಿದರು. ಪ್ರತಿಯೊಬ್ಬರೂ ಅಭಿನಂದಿಸುವವರೆ. ದೂರದಿಂದಲೇ ಇದನ್ನೆಲ್ಲ ನೋಡುತ್ತ ನಿಂತಿದ್ದ ಚಿತ್ರದ ಹಿರೋಯಿನ್ ಮಾಲಾ ಕಣ್ಣಲ್ಲೇ ಮೆಚ್ಚುಗೆ ಸೂಚಿಸಿದಳು. ಈ ಅಭಿನಂದನೆಗಾಗಿಯೇ ಆತ ಕಾತರದಿಂದ ಕಾಯುತ್ತಿದ್ದ. ಶರತ್‍ಗಿಂತ ಒಂದೆರಡು ವರ್ಷ ದೊಡ್ಡವಳಾದ ಮಾಲಾ ಐವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಳು. ಪ್ರಾರಂಭದಲ್ಲಿ ಪೋಷಕ  ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ನಟ ಶರತ್ ಕುಮಾರ ಮಾಲಾಳ ಸಹಾಯದಿಂದ ನಾಯಕನಟನಾಗಿ ಚಿತ್ರರಂಗದಲ್ಲಿ ಗಟ್ಟಿಯಾಗಿ ನಿಲ್ಲುವ ಭರವಸೆ ಮೂಡಿಸಿದ್ದ. ಸಧ್ಯ ಅಭಿನಯಿಸುತ್ತಿರುವ `ತಾಯಿ' ಚಿತ್ರ ಆತನದು ನಾಯಕನಟನಾಗಿ ಇಪ್ಪತ್ತೈದನೆ ಚಿತ್ರ. ಸುಮಾರು ಹತ್ತು ಚಿತ್ರಗಳಲ್ಲಿ ಜೊತೆಯಾಗಿ ಅಭಿನಯಿಸಿದ ಶರತ್ ಮತ್ತು ಮಾಲಾ ಅತ್ಯಂತ ಹಿಟ್ ಜೋಡಿ ಎಂದೇ ಹೆಸರಾಗಿದ್ದರು. ಅವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದ ವಿಷಯ ಇಡೀ ಇಂಡಸ್ಟ್ರಿಗೆ ಗೊತ್ತಿತ್ತು. `ತಾಯಿ' ಚಿತ್ರದ ಬಿಡುಗಡೆ ನಂತರ ಮದುವೆಯಾಗಿ ಸ್ವಿಟ್ಜರ್‍ಲ್ಯಾಂಡಿಗೆ ಹನಿಮೂನ್‍ಗೆ ಹೋಗುವ ವಿಷಯ ಗುಟ್ಟಾಗಿ ಉಳಿದಿರಲಿಲ್ಲ. ನಿರ್ದೇಶಕ ರವಿವರ್ಮ  ತಮ್ಮ ಅನುಭವವನ್ನೆಲ್ಲ ಧಾರೆ ಎರೆದು ಚಿತ್ರವನ್ನು ಯಶಸ್ವಿಯಾಗಿಸಲು ಪಣತೊಟ್ಟಿದ್ದರು. ಇವತ್ತಿನ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ಅವರಿಗೆ ತೃಪ್ತಿ ತಂದಿತ್ತು. ವಿದೇಶದಲ್ಲಿ ಒಂದೆರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಉಳಿದಿತ್ತು. ಸಂಕ್ರಾಂತಿ ಹಬ್ಬದಂದು ಚಿತ್ರ ಬಿಡುಗಡೆಯೆಂದು ಪ್ರಕಟಿಸಿದ್ದರಿಂದ ಪ್ರೇಕ್ಷಕರು ಸಿನಿಮಾ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದರು.
--ದೃಶ್ಯ 2--
ರಾಜ್ಯ ಪ್ರಶಸ್ತಿಯ ವರ್ಣರಂಜಿತ  ಸಮಾರಂಭದ ವೇದಿಕೆಯದು. ಪ್ರಶಸ್ತಿ ವಿತರಣೆಗಾಗಿ ಮುಖ್ಯಮಂತ್ರಿಗಳು ಬರುತ್ತಿರುವುದರಿಂದ ವೇದಿಕೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಕೈ ಕೈ ಹಿಡಿದು ಸಮಾರಂಭಕ್ಕೆ ಆಗಮಿಸಿದ ಶರತ್‍ಕುಮಾರ ಮಾಲಾ ನವದಂಪತಿಗಳು ಅಂದಿನ ಸಮಾರಂಭದ ವಿಶೇಷ ಆಕರ್ಷಣೆಯಾಗಿದ್ದರು. ನಿರೀಕ್ಷಿಸಿದಂತೆ `ತಾಯಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಶರತ್‍ಕುಮಾರಗೆ ಅತ್ಯುತ್ತಮ ನಟ ಎಂದು ರಾಜ್ಯ ಪ್ರಶಸ್ತಿ ದೊರೆತಿತ್ತು. ಚಿತ್ರ ಬಿಡುಗಡೆಯಾದ ಎಲ್ಲ ಕೇಂದ್ರಗಳಲ್ಲಿ ಇಪ್ಪತ್ತೈದು ವಾರಗಳನ್ನು ಪೂರೈಸಿ ನಭೂತೋ ನಭವಿಷ್ಯತಿ ಎನ್ನುವಂತೆ ಯಶಸ್ವಿಯಾಗಿತ್ತು. ತಮ್ಮ ಆರಾಧ್ಯದೈವ ಶರತ್‍ಕುಮಾರನನ್ನು ನೋಡಲು ಲಕ್ಷಾಂತರ ಅಭಿಮಾನಿಗಳು ಸಮಾರಂಭಕ್ಕೆ ಆಗಮಿಸಿದ್ದರು. ಪ್ರಶಸ್ತಿ ಸ್ವೀಕರಿಸಲು ಶರತ್‍ಕುಮಾರ ವೇದಿಕೆಗೆ ಬರುತ್ತಿದ್ದಂತೆ ನೆರೆದಿದ್ದ ಜನರೆಲ್ಲ ಹರ್ಷೋದ್ಗಾರಗಳಿಂದ ಚಪ್ಪಾಳೆ ತಟ್ಟಿದರು. ಮುಖ್ಯಮಂತ್ರಿಗಳಿಂದ ಪ್ರಶಸ್ತಿ ಸ್ವೀಕರಿಸಿ  ಚಿತ್ರದ ಯಶಸ್ಸಿಗೆ ಕಾರಣರಾದ ಎಲ್ಲರನ್ನೂ ಅಭಿನಂದಿಸಿ ಮಾತನಾಡಿದ ಶರತ್‍ಕುಮಾರ ಮಾತಿನಲ್ಲಿನ ಒಂದೊಂದು ಶಬ್ದ ಸಮುದ್ರದಾಳದಿಂದ ಹೆಕ್ಕಿ ತೆಗೆದ ಮುತ್ತುಗಳಂತಿದ್ದವು. ಅದುವರೆಗೂ ತಡೆಹಿಡಿದಿದ್ದ ಮನಸ್ಸಿನ ನೋವು ಶಬ್ದಗಳ ರೂಪದಲ್ಲಿ ಹೊರಬರುತ್ತಿತ್ತು. `ಚಿಕ್ಕಂದಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡ ಅನಾಥ ನಾನು. ನನ್ನ ಇವತ್ತಿನ ಈ ಸಾಧನೆಯ ಹಿಂದೆ ನೋವಿದೆ, ವೇದನೆಯಿದೆ, ಅವಮಾನ ಅಪಮಾನಗಳಿವೆ. ಊಟಕ್ಕೂ ಗತಿಯಿಲ್ಲದ ಕಾಲವೊಂದಿತ್ತು. ಉಪವಾಸ ಬಿದ್ದ ದಿನಗಳೆಷ್ಟೋ ಲೆಕ್ಕವೇ ಇಲ್ಲ. ಪ್ರತಿ ಕ್ಷಣ ತಾಯಿ ಪ್ರೀತಿಗಾಗಿ ವಾತ್ಸಲ್ಯಕ್ಕಾಗಿ ಹಂಬಲಿಸಿದೆ. ಮುಂದಿನ ಜನ್ಮವೊಂದಿದ್ದರೆ ಆಗಲಾದರೂ ಭಗವಂತ ನನಗೆ ತಾಯಿ ಪ್ರೀತಿಯನ್ನು ಕರುಣಿಸಲಿ. ಈ ಅನಾಥ ಭಾವನೆ ಕಾಡದಿರಲೆಂದೇ ಪ್ರತಿವರ್ಷ  ನನ್ನ ತಾಯಿ ಸಾವನ್ನಪ್ಪಿದ ದಿನದಂದು ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಆ ದಿನ ಅನಾಥ ತಾಯಂದಿರೊಂದಿಗೆ ಸಮಯ ಕಳೆಯುತ್ತೇನೆ' ದು:ಖ ಉಮ್ಮಳಿಸಿ ಬಂದು ಮಾತುಗಳು ಹೊರಬರಲಿಲ್ಲ. ನೆರೆದಿದ್ದ ಜನರ ಕಣ್ಣಾಲಿಗಳು ತುಂಬಿ ಬಂದಿದ್ದವು. ಇನ್ನು ಮಾತು ಅಸಾಧ್ಯ ಎಂದೆನಿಸಿ ಶರತ್‍ಕುಮಾರ ಕಣ್ಣೀರು ಒರೆಸಿಕೊಳ್ಳುತ್ತ ನಿಧಾನವಾಗಿ ವೇದಿಕೆಯ ಮೆಟ್ಟಿಲು ಇಳಿಯುತ್ತಿರುವಂತೆ ಪ್ರೇಕ್ಷಕರೆಲ್ಲ ಎದ್ದು ನಿಂತು ದೀರ್ಘ ಕರತಾಡನದ ಮೂಲಕ ಗೌರವ ತೋರಿಸಿದರು. ಆ ದಿನ ಎಲ್ಲೆಲ್ಲಿಯೂ ಶರತ್‍ಕುಮಾರನದೇ ಮಾತು. ಇಂಥ ಅದ್ಭುತ ನಟನಿಗೆ ಜನ್ಮ ನೀಡಿದ ತಾಯಿ ಪುಣ್ಯವಂತಳೆಂದು ಜನ ಮಾತನಾಡಿಕೊಂಡರು.
--ದೃಶ್ಯ 3—
`ರ್ರೀ ಕಮಲಮ್ಮ ಇಲ್ನೋಡ್ರಿ ಇವತ್ತಿನ ಪತ್ರಿಕೆತುಂಬ ಶರತ್‍ಕುಮಾರನದೆ ಸುದ್ಧಿ' ಗಿರಿಜಮ್ಮ ಆತುರಾತುರವಾಗಿ ಕಮಲಮ್ಮನವರನ್ನು ಹುಡುಕಿಕೊಂಡು ಹೊರಟರು. ಅದೊಂದು ವೃದ್ಧಾಶ್ರಮ. ಮಕ್ಕಳಿಲ್ಲದವರು, ಮಕ್ಕಳನ್ನು ಕಳೆದುಕೊಂಡು ಅನಾಥರಾದವರು, ಮಕ್ಕಳಿಂದ ಹೊರಹಾಕಲ್ಪಟ್ಟವರು ಅಲ್ಲಿ ವಾಸಿಸುತ್ತಿದ್ದರು. ಬದುಕಿನ ಸಂಧ್ಯಾಕಾಲದಲ್ಲಿರುವ ನೂರಾರು ವೃದ್ಧರಿಗೆ ಆ ಆಶ್ರಮ ಆಸರೆಯಾಗಿತ್ತು. `ಇಲ್ಲಿದ್ದಿರೇನ್ರಿ ಕಮಲಮ್ಮ ನಿಮ್ಮ ಮೆಚ್ಚಿನ ಹಿರೋ ಶರತ್‍ಕುಮಾರ ನಿನ್ನೆ ಪ್ರಶಸ್ತಿ ಪಡೆದ ಸುದ್ಧಿ ಪತ್ರಿಕೆಯಲ್ಲಿ ಬಂದಿದೆ ನೋಡಿ' ಪತ್ರಿಕೆಯನ್ನು ಕಮಲಮ್ಮನವರ ಕೈಗಿತ್ತು ಹೇಳಿದರು ಗಿರಿಜಮ್ಮ. ಶರತ್‍ಕುಮಾರನ ಭಾವಚಿತ್ರವನ್ನು ಮೃದುವಾಗಿ ಸವರಿದ ಕಮಲಮ್ಮನವರ ಮನಸ್ಸಿನಲ್ಲಿ ಅದೆನೋ ವೇದನೆ ಹೇಳಿಕೊಳ್ಳಲಾಗದ ಸಂಕಟ. ಬೇರೆಯವರಿಗೂ ಈ ವಿಷಯ ತಿಳಿಸಬೇಕಿದ್ದರಿಂದ ಗಿರಿಜಮ್ಮ ಪತ್ರಿಕೆಯನ್ನು ತೆಗೆದುಕೊಂಡು ಅವಸರವಸರವಾಗಿ ಅಲ್ಲಿಂದ ನಡೆದು ಹೋದರು. ಕಮಲಮ್ಮನವರ ಮನಸ್ಸು ಗತಕಾಲದ ನೆನಪುಗಳನ್ನು ಮೆಲುಕು ಹಾಕುತ್ತಿತ್ತು. ಒಂದು ವರ್ಷದ  ಮಗನನ್ನು ಮಡಿಲಲ್ಲಿಟ್ಟು ಪತಿ ಸಾವನ್ನಪ್ಪಿದಾಗ ಕಮಲಮ್ಮನವರಿಗಿನ್ನೂ ಇಪ್ಪತ್ತರ ಹರೆಯ. ಮಗನನ್ನು ಅತ್ತೆ ಮಾವನಿಗೊಪ್ಪಿಸಿ ಮರು ಮದುವೆಯಾಗುವಂತೆ ಅನೇಕರು ಸಲಹೆ ನೀಡಿದರೂ ಕಮಲಮ್ಮನವರು ಒಪ್ಪಿರಲಿಲ್ಲ. ಹತ್ತಾರು ಮನೆಗಳಲ್ಲಿ ಮುಸುರೆ ತೊಳೆದು ಮಗನನ್ನು ಓದಿಸಿ ವಿದ್ಯಾವಂತನನ್ನಾಗಿ ಮಾಡಿದರು. ಮುಂದೊಂದುದಿನ ಮಗ ಸಿನಿಮಾದಲ್ಲಿ ಅಭಿನಯಿಸುವ ತರಬೇತಿಗಾಗಿ ಬೆಂಗಳೂರಿಗೆ ಹೋಗುತ್ತೆನೆಂದಾಗ ಕೂಡಿಟ್ಟ ಹಣವನ್ನೆಲ್ಲ ಕೊಟ್ಟು ಕಳಿಸಿದ್ದರು. ಅಂದೇ ಕೊನೆ ಮುಂದೆ ಮಗ ಖ್ಯಾತನಟ ಶರತ್‍ಕುಮಾರನಾಗಿಯೇ ಮನೆಗೆ ಬಂದಿದ್ದು. ಅದು ಯಾರಿಗೂ ಗೊತ್ತಾಗದಂತೆ ಅಪರಾತ್ರಿಯಲ್ಲಿ ಬಂದಿದ್ದ. ಬಂದವನೆ ಎದೆಯೊಡೆದು ಸಾಯುವಂತೆ ಮಾತನಾಡಿದ್ದ. `ಅಮ್ಮಾ ಹೇಗೂ ನಿನಗೆ ವಯಸ್ಸಾಗಿದೆ. ನಾನಿನ್ನೂ ಬದುಕಿ ಬಾಳಬೇಕಾದವನು. ನಾನೊಬ್ಬ ಅನಾಥನೆಂದು ನಂಬಿಸಿ ಮಾಲಾಳಿಂದ ಸಹಾಯ ಪಡೆದಿದ್ದೇನೆ. ಇಷ್ಟರಲ್ಲೇ ನಾವಿಬ್ರೂ ಮದುವೆಯಾಗುತ್ತಿದ್ದೇವೆ. ಈಗ ನನಗೆ ತಾಯಿಯಿರುವ ವಿಷಯ ಗೊತ್ತಾದರೆ ಅವಳಿಗೆ ಆಘಾತವಾಗುತ್ತೆ. ನೀನು ಇರೊದಕ್ಕೆ ವೃದ್ಧಾಶ್ರಮದಲ್ಲಿ ಎಲ್ಲ ಅನುಕೂಲ ಮಾಡಿದ್ದಿನಿ. ಪ್ರತಿ ತಿಂಗಳು ಹಣ ಕಳಿಸ್ತಿನಿ. ದಯವಿಟ್ಟು ಯಾರಿಗೂ ನೀನು ನನ್ನ ತಾಯಿಯೆಂದು ಹೇಳಬೇಡ' ಎಂದವನೆ ವೃದ್ಧಾಶ್ರಮದ ವಿಳಾಸಕೊಟ್ಟು ಹೊರಟುಹೋಗಿದ್ದ. ಆ ದಿನದ ನಂತರ ಮತ್ತೆ ಬಂದು ತಾಯಿಯನ್ನು ಕಂಡಿರಲಿಲ್ಲ. ಕಮಲಮ್ಮನವರ ಮನಸ್ಸು ರೋಧಿಸುತ್ತಿತ್ತಾದರೂ ಅವರ ಮಾತೃ ಹೃದಯ ಮಗ ಸುಖವಾಗಿರಲೆಂದು ಹರಸುತ್ತಿತ್ತು.

(ನಾನು ಬರೆದ ಈ ಮಿನಿ  ಕಥೆ ೨೦೦೭ ರ  ಆಗಸ್ಟ್ ತುಷಾರ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಇದು ನಾನು ಬರೆದ ಮೊದಲ ಕಥೆ. ಈ ಕಥೆ ಪ್ರಕಟವಾದ ಮೇಲೆ ನಾನೂ  ಕಥೆ ಬರೆಯಬಲ್ಲೆನೆನ್ನುವ ಆತ್ಮವಿಶ್ವಾಸ ಮೂಡಿದ್ದು. ನಂತರ ಹಲವು ಕಥೆಗಳನ್ನು ಬರೆದೆ. ಹೀಗೆ ಬರೆದ ಕಥೆಗಳು ಕರ್ಮವೀರ, ತುಷಾರ, ಮಯೂರ, ತರಂಗ, ಕನ್ನಡ ಪ್ರಭ, ಮಾನಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 'ಬೇರಿಗಂಟಿದ ಮರ' ಮತ್ತು 'ಚಹರೆ' ಎನ್ನುವ ಎರಡು ಕಥಾಸಂಕಲನಗಳನ್ನು ಭವಿಷ್ಯದಲ್ಲಿ ಪ್ರಕಟಿಸುವ ಇರಾದೆ ಇದೆ. ಹಲವು ಕಥೆಗಳ ಕಥಾವಸ್ತು ಮನಸ್ಸಿನಲ್ಲಿ ಹೊಳೆದು ಭ್ರೂಣದ ರೂಪದಲ್ಲಿದೆ. ಬೆಳೆದು ಸ್ಪಷ್ಟ ರೂಪ ತಳೆಯುವ ಘಳಿಗೆಗಾಗಿ ಕಾಯುತ್ತಿದ್ದೇನೆ. ಕಾಯುವುದರಲ್ಲಿಯೂ ಒಂದು ಸುಖವಿದೆ ಎನ್ನುವ ಮನೋಭಾವ ನನ್ನದು.)

--೦೦೦--

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment