Monday, January 6, 2020

ಆತ್ಮಹತ್ಯೆಗಾಗಿ ಸಂಪರ್ಕಿಸಿ: ಕಥೆ





           2050 ರ ಜನೆವರಿ ಒಂದನೇ ತಾರಿಖೀನ ದಿನ ಬ್ರಹ್ಮ ಅಲಿಯಾಸ್ ಬ್ರಹ್ಮೇಂದ್ರ ನೀಡಿದ್ದ ಜಾಹೀರಾತು ಬಹುತೇಕ ಎಲ್ಲ ಭಾಷೆಯ ದಿನಪತ್ರಿಕೆಗಳಲ್ಲಿ ಪ್ರಕಟವಾಗಿತ್ತು. ‘ಜೀವನದಲ್ಲಿ ಜಿಗುಪ್ಸೆಗೊಂಡು ಇನ್ನು ಬದುಕುವುದು ಬೇಡ ಎಂದು ನಿಮಗನಿಸಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಅತ್ಯಂತ ಸರಳ ವಿಧಾನಗಳನ್ನು ತಿಳಿಸಿಕೊಡಲಾಗುವುದು. ಮಾಹಿತಿಗಾಗಿ ಈ ವಿಳಾಸಕ್ಕೆ ಸಂಪರ್ಕಿಸಬಹುದು’ ಇದು ಜಾಹೀರಾತಿನ ಒಕ್ಕಣೆಯಾಗಿದ್ದು ಜೊತೆಗೆ ಬ್ರಹ್ಮೇಂದ್ರನ ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ಕೂಡ ನಮೂದಿಸಲಾಗಿತ್ತು. ಈ ಸಂಬಂಧ ಬ್ರಹ್ಮೇಂದ್ರ ಶಹರಿನ ಜನನಿಬಿಡ ಪ್ರದೇಶದ ಸ್ವರ್ಗ ಎಂದು ಕರೆಯಲಾಗುವ ಗಗನಚುಂಬಿ ಕಟ್ಟಡದ 100ನೇ ಅಂತಸ್ತಿನಲ್ಲಿ ಸಣ್ಣದೊಂದು ಕಚೇರಿಯನ್ನು ತೆರೆದಿದ್ದ. ಕಚೇರಿಯಲ್ಲಿ ಎಲ್ಲ ಆಧುನಿಕ ವ್ಯವಸ್ಥೆಗಳಿದ್ದು ಬದುಕಿನಲ್ಲಿ ಜಿಗುಪ್ಸೆಗೊಂಡು ಬರುವವರು ಸಾಯುವ ಕ್ಷಣದಲ್ಲಾದರೂ ಒಂದಿಷ್ಟು ಆಹ್ಲಾದಕರ ವಾತಾವರಣದಲ್ಲಿ ಸಮಯ ಕಳೆಯುವಂತಾಗಲಿ ಎಂದು ಮೆತ್ತನೆಯ ಸುಖಾಸೀನ, ವಾತಾನುಕೂಲ ಮತ್ತು ಹಿನ್ನೆಲೆಯಲ್ಲಿ ಮಧುರ ಸಂಗೀತದ ಧ್ವನಿ ಕೇಳಿ ಬರುವ ವ್ಯವಸ್ಥೆಯನ್ನು ಮಾಡಿದ್ದ. ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ತಾನುಕೊಟ್ಟ ಜಾಹೀರಾತನ್ನು ಓದುತ್ತ ಕುಳಿತಿದ್ದ ಬ್ರಹ್ಮೇಂದ್ರನಿಗೆ ಈ ಹೊಸ ಕೆಲಸದಿಂದ ಕ್ಷಣಕ್ಷಣಕ್ಕೂ ಮೈ ರೋಮಾಂಚನಗೊಂಡು ಅವನು ಪುಳಕಗೊಳ್ಳುತ್ತಿದ್ದ.
   ಬ್ರಹ್ಮೇಂದ್ರನಿಗೆ ಈಗ 25 ವರ್ಷ ವಯಸ್ಸು. ಪ್ರತಿಷ್ಠಿತ ಕಾಲೇಜಿನಲ್ಲಿ ಎಮ್.ಬಿ.ಎ ಪದವಿ ಪಡೆದವನಿಗೆ ಬೇರೆಯವರ ಕೈಕೆಳಗೆ ಕೆಲಸ ಮಾಡುವ ಮನಸ್ಸಿಲ್ಲ. ಪದವಿ ಪೂರ್ಣಗೊಂಡಿದ್ದೆ ಒಂದೆರಡು ವರ್ಷ ಬೇರೆ ಬೇರೆ ಶಹರಗಳು ಮತ್ತು ದೇಶಗಳನ್ನು ನೋಡಿ ಬಂದ. ಅಲ್ಲಿನ ಹೊಸ ಹೊಸ ಕೆಲಸಗಳನ್ನು ಕುರಿತು ಅಧ್ಯಯನ ಮಾಡಿದ. ಕೊನೆಗೆ ತಾನೊಂದು ಸ್ವಂತದ ಕೆಲಸ ಆರಂಭಿಸಬೇಕೆಂದು ನಿರ್ಧರಿಸಿದ. ನಿರ್ಧಾರವನ್ನು ಹಳ್ಳಿಯಲ್ಲಿದ್ದ ಅಪ್ಪ-ಅಮ್ಮನಿಗೆ ಹೇಳಿ ಅವರ ಒಪ್ಪಿಗೆ ಮತ್ತು ಹಣಕಾಸಿನ ನೆರವನ್ನು ಕೂಡ ಪಡೆದ. ಇತ್ತೀಚಿಗೆ ನಗರದಲ್ಲಿ ಆತ್ಮಹತ್ಯೆಗಳು ಹೆಚ್ಚುತ್ತಿದ್ದು ಮತ್ತು ಜನರು ಆತ್ಮಹತ್ಯೆ ಮಾಡಿಕೊಳ್ಳಲು ಚಿತ್ರ-ವಿಚಿತ್ರವಾದ ವಿಧಾನಗಳನ್ನು ಅನುಸರಿಸುತ್ತ ಪೆÇೀಲೀಸ್ ಇಲಾಖೆ, ಕೋರ್ಟು ಮತ್ತು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದರು. ಆತ್ಮಹತ್ಯೆ ಮಾಡಿಕೊಳ್ಳಲು ಹಿಂಜರಿಯುವಷ್ಟು ಕೆಲವು ಆತ್ಮಹತ್ಯೆಗಳು ಭೀಕರವಾಗಿರುತ್ತಿದ್ದವು. ಹೊಸ ಕೆಲಸವನ್ನು ಆರಂಭಿಸಬೇಕೆಂದು ಯೋಚಿಸಿದ್ದ ಬ್ರಹ್ಮೇಂದ್ರನಿಗೆ ಆತ್ಮಹತ್ಯೆಯನ್ನು ಸುಲಭವಾಗಿಸಲು ಪರಿಹಾರವನ್ನು ಒದಗಿಸುವ ಮಾಹಿತಿ ಕೇಂದ್ರವನ್ನೇಕೆ ಆರಂಭಿಸಬಾರದು ಎನ್ನುವ ಆಲೋಚನೆ ಹೊಳೆದದ್ದೆ ಆತ ತಕ್ಷಣವೇ ಕಾರ್ಯತತ್ಪರನಾದ. ಹೊಸ ವರ್ಷದ ಮೊದಲ ದಿನದಂದು ಪತ್ರಿಕೆಗಳಲ್ಲಿ ಜಾಹೀರಾತು ಕೊಟ್ಟು ತನ್ನ ಹೊಸ ಕೆಲಸವನ್ನು ಆರಂಭಿಸಿಯೇ ಬಿಟ್ಟ.
     ಪತ್ರಿಕೆಗಳಲ್ಲಿನ ಜಾಹಿರಾತು ಓದುತ್ತ ತನ್ನ ಕಚೇರಿಯ ಚೇಂಬರಿನಲ್ಲಿ ಕುಳಿತಿದ್ದ ಬ್ರಹ್ಮೇಂದ್ರನ ಮೊಬೈಲ್ ರಿಂಗಣಿಸಿತು. ಬ್ರಹ್ಮೇಂದ್ರ ಕರೆ ಸ್ವೀಕರಿಸಿದ. ಆ ಕಡೆಯಿಂದ ‘ಹಲೋ ನಾನು ಮುಕ್ತಿಧಾಮ ಎಂ.ಡಿ ಬ್ರಹ್ಮೇಂದ್ರ ಅವರೊಂದಿಗೆ ಮಾತನಾಡಬೇಕು’ ಎಂದು ಹೆಣ್ಣು ಧ್ವನಿಯೊಂದು ಉಲಿಯಿತು. ‘ಹೇಳಿ ನಾನು ಬ್ರಹ್ಮೇಂದ್ರ ಮಾತಾಡ್ತಿರೊದು’ ಎಂದ. ‘ಸರ್ ಇವತ್ತಿನ ಪತ್ರಿಕೆಯಲ್ಲಿ ಜಾಹೀರಾತು ನೋಡ್ದೆ. ಆತ್ಮಹತ್ಯೆ ಬಗ್ಗೆ ಮಾರ್ಗದರ್ಶನ ಬೇಕಾಗಿದೆ. ದಯವಿಟ್ಟು ಅಪಾಯಿಂಟ್‍ಮೆಂಟ್ ಕೊಡಿ’ ಎಂದಳು. ‘ನಾಳೆ ಬೆಳಗ್ಗೆ 9 ಗಂಟೆಗೆ ಆಫೀಸಿಗೆ ಬನ್ನಿ’ ಎಂದು ಹೇಳಿ ಕರೆ ಕತ್ತರಿಸಿದ. ಬ್ರಹ್ಮೇಂದ್ರನ ಫೆÇೀನ್ ಮತ್ತೊಮ್ಮೆ ರಿಂಗಣಿಸಿತು. ಈ ಸಲ ಕರೆ ಮಾಡಿದ ವ್ಯಕ್ತಿ ಸುಮಾರು 40 ರಿಂದ 50 ವರ್ಷ ವಯಸ್ಸಿನ ಮಧ್ಯವಯಸ್ಕ ಎಂದು ಧ್ವನಿಯಿಂದಲೇ ಗುರುತಿಸಿದ. ಆ ವ್ಯಕ್ತಿಗೆ ನಾಳೆ ಮಧ್ಯಾಹ್ನ 12 ಗಂಟೆಗೆ ಬರಲು ಸೂಚಿಸಿದ. ಮೊದಲ ದಿನವೇ ತನ್ನ ಜಾಹೀರಾತಿಗೆ ಎರಡು ಪ್ರತಿಕ್ರಿಯೆಗಳು ಬಂದಿದ್ದು ಬ್ರಹ್ಮೇಂದ್ರನ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು. ಅದೇ ಖುಷಿಯಲ್ಲಿ ಕಾಫಿಗೆ ಆರ್ಡರ್ ಮಾಡಿ ತರಿಸಿ ಕುಡಿದ. ಮಧ್ಯಾಹ್ನದ ಲಂಚ್ ನಂತರ ಒಂದು ತಾಸು ಆಫೀಸಿನಲ್ಲೇ ವಿಶ್ರಮಿಸಿದ. ಮತ್ತೆ ಕರೆಬರಬಹುದೆಂದು ಕಾದ. ಆಫೀಸ್ ಬಾಗಿಲು ಹಾಕುವ ವೇಳೆಯಾದರೂ ಮತ್ತೆ ಕರೆ ಬರದೆ ಒಂದಿಷ್ಟು ನಿರಾಶನಾದ. ಕಚೇರಿಯಲ್ಲಿನ ಹಿನ್ನೆಲೆ ಸಂಗೀತದ ಧ್ವನಿ ಮತ್ತು ದೀಪಗಳನ್ನು ಆರಿಸಿ ಬಾಗಿಲು ಮುಚ್ಚುವಾಗ ಅವನ ಮೊಬೈಲ್ ರಿಂಗಣಿಸಿತು. ಕರೆ ಸ್ವೀಕರಿಸಿದವನಿಗೆ ಆ ಕಡೆಯಿಂದ ವೃದ್ಧರೊಬ್ಬರು ಮಾತನಾಡುತ್ತಿರುವುದು ಕೇಳಿಸಿತು. ಅವರದೂ ಸಹ ಆತ್ಮಹತ್ಯೆಗೆ ಸಂಬಂಧಿಸಿದ ಪ್ರಶ್ನೆಯಾಗಿತ್ತು. ನಾಳೆ ಮಧ್ಯಾಹ್ನ ಮೂರುಗಂಟೆಗೆ ಕಚೇರಿಗೆ ಬರುವಂತೆ ತಿಳಿಸಿ ಬಾಗಿಲು ಮುಚ್ಚಿ ಕೆಳಗಿಳಿಯಲು ಲಿಫ್ಟ್ ಪ್ರವೇಶಿಸಿದ.  
●●●
   ಎದುರಿಗೆ ಕುಳಿತಿರುವವಳು 24-25 ವರ್ಷ ವಯಸ್ಸಿನ ಸುಂದರ ತರುಣಿ. ಅವಳ ಹೆಸರು, ವಿದ್ಯಾರ್ಹತೆ, ಕುಟುಂಬದ ಹಿನ್ನೆಲೆಯನ್ನು ವಿಚಾರಿಸಿದ. ಆಕೆ ವಿವಾಹಿತಳು ಎನ್ನುವುದಕ್ಕೆ ಸಾಕ್ಷಿಯಾಗಿ ಕೊರಳಲ್ಲಿ ಚಿನ್ನದ ಮಂಗಳಸೂತ್ರ ಹೊಳೆಯುತ್ತಿತ್ತು. ಅಂಗೈ ಮೇಲಿನ ಗೊರಂಟಿ ಇನ್ನು ಬಣ್ಣ ಕಳೆದುಕೊಂಡಿರಲಿಲ್ಲ. ಕಪ್ಪು ಅಂಚಿನ ತಿಳಿ ಗುಲಾಬಿ ಬಣ್ಣದ ಸೀರೆ ಅದಕ್ಕೊಪ್ಪುವ ಕಪ್ಪು ಬಣ್ಣದ ಬ್ಲೌಜ್ ತೊಟ್ಟಿದ್ದಳು. ಮುಖದಲ್ಲಿ ವಿಚಿತ್ರವಾದ ಆತಂಕ, ಉದ್ವಿಗ್ನತೆ ತುಂಬಿಕೊಂಡಂತೆ ಕಾಣಿಸುತ್ತಿತ್ತು. ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲೆಂದು ಒಂದಿಷ್ಟು ಹೊತ್ತು ಮೌನವಾಗಿ ಕುಳಿತ ಬ್ರಹ್ಮೇಂದ್ರ ಆಕೆ ಹೊಂದಿಕೊಂಡಿದ್ದಾಳೆಂದು ಅನಿಸಿದ್ದೆ ಮಾತಿಗೆ ಶುರುವಿಟ್ಟುಕೊಂಡ. 
‘ನಿಮ್ಮ ಸಮಸ್ಯೆ ಏನು ಹೇಳಿ’.
‘ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ನಿರ್ಧರಿಸಿದ್ದೀನಿ. ಆದರೆ ಜೀವಕ್ಕಾಗಲಿ ದೇಹಕ್ಕಾಗಲಿ ತೊಂದರೆ ಆಗದಂತೆ ಸುಲಭವಾಗಿ ಸಾಯ್ಬೇಕು. ದಯವಿಟ್ಟು ಮಾರ್ಗದರ್ಶನ ಮಾಡಿ’. 
‘ಇತ್ತೀಚಿಗೆ ಮದುವೆಯಾಗಿರುವಂತೆ ಕಾಣುತ್ತೆ. ಸ್ವಲ್ಪ ಯೋಚಿಸಿ’.
‘ಮದುವೆ ಆಗಿರೋದೆ ನನ್ನ ಸಮಸ್ಯೆ’.
‘ಮದುವೆ ಎಲ್ಲರ ಜೀವನದಲ್ಲಿ ಬರುವಂಥ ಘಟ್ಟವೆ. ನಿಮ್ದು ಲವ್ ಮ್ಯಾರೇಜ್ ಅನಿಸುತ್ತೆ’
‘ಹೌದು ನಮ್ದು ಲವ್ ಮ್ಯಾರೇಜ್’
‘ಅಪ್ಪ ಅಮ್ಮನಿಗೆ ಕೋಪ ಬಂದಿರಬಹುದು. ಕೆಲವು ದಿನಗಳಾದ ಮೇಲೆ ಅವರ ಕೋಪ ತಣ್ಣಗಾಗುತ್ತೆ. ಅಷ್ಟಕ್ಕೆ ಆತ್ಮಹತ್ಯೆ ನಿರ್ಧಾರಕ್ಕೆ ಬಂದಿರೊದು ತಪ್ಪು’.
‘ಅಪ್ಪ ಅಮ್ಮ ಅಷ್ಟೆ ಅಲ್ಲ ಈ ಮದುವೆಯಿಂದ ಸಮಾಜಕ್ಕೂ ಮುಖ ತೋರಿಸೊದಕ್ಕೆ ಆಗ್ತಿಲ್ಲ’.
‘ಯಾಕೆ ನೀವು ಮದುವೆಯಾಗಿರೋ ವ್ಯಕ್ತಿ ಏನು ಕಳಂಕಿತನೆ’
‘ಇಲ್ಲ ಅವರು ತುಂಬ ಸಾತ್ವಿಕರು’.
‘ಕೊಲೆಗಾರರೆ’
‘ಅಲ್ಲ’.
‘ಹಾಗಾದರೆ ಬಡವರಾಗಿರಬಹುದು’.
‘ಇಲ್ಲ ಅವರೊಬ್ಬ ದೊಡ್ಡ ಉದ್ಯಮಿ’.
‘ಹಾಗಾದರೆ ಸಮಸ್ಯೆ ಏನು’
‘ನಾನು ಮದುವೆಯಾಗಿರೊದು ವಿರೋಧಿ ಲಿಂಗದವರನ್ನು ಅಂದರೆ ಗಂಡಸನನ್ನು. ಮಹಿಳೆಯಾದವಳು ಗಂಡಸನನ್ನು ಮದುವೆಯಾಗುವುದಕ್ಕೆ ಈ ಸಮಾಜ ಹೇಗೆ ಒಪ್ಪುತ್ತೆ. ನನಗೂ ಈಗ ತಪ್ಪು ಮಾಡಿದ್ದೀನಿ ಅನಿಸ್ತಿದೆ. ಆತ್ಮಹತ್ಯೆ0iÉು ಇದಕ್ಕೆ ಪರಿಹಾರ. ದಯವಿಟ್ಟು ಸಹಾಯ ಮಾಡಿ’.
‘ಹೌದು ನೀವು ಭಾಳ ದೊಡ್ಡ ತಪ್ಪು ಮಾಡಿದ್ದಿರಿ. ನಿಮ್ಮ ಆತ್ಮಹತ್ಯೆ ಮಾಡಿಕೊಳ್ಳಬೇಕೆನ್ನುವ ನಿರ್ಧಾರನ ನಾನು ಗೌರವಿಸ್ತೀನಿ. ನಾಳೆ ಸಾಯಂಕಾಲ ಆರು ಗಂಟೆಗೆ ಬನ್ನಿ ಸಲಹೆ ತಯ್ಯಾರಿರುತ್ತೆ’ ಎಂದು ಹೇಳಿ ಆ ಯುವತಿಯನ್ನು ಬ್ರಹ್ಮೇಂದ್ರ ಬೀಳ್ಕೊಟ್ಟ.
●●●
‘ಈ ಘಟನೆಯಾಗಿ ಮೂರುತಿಂಗಳುಗಳಾಯ್ತು. ಆ ಘಟನೆ ನಡೆದ ದಿನದಿಂದ ರಾತ್ರಿ ನನಗೆ ನಿದ್ದೆನೆ ಬರ್ತಿಲ್ಲ. ಹಾಸಿಗೆಗೆ ಮೈಚಾಚಿದ್ದೆ ಕಣ್ಮುಂದೆ ಆ ಘಟನೆ ಬಿಚ್ಚಿಕೊಳ್ಳುತ್ತ ಹೋಗುತ್ತೆ. ಈ ಹಿಂಸೆಯಿಂದ ಪಾರಾಗಬೇಕು ಅಂದರೆ ಆತ್ಮಹತ್ಯೆ ಒಂದೇ ದಾರಿ. ಸಾವು ಕೂಡ ಸುಖವಾಗಿರಬೇಕು ನೋಡಿ. ಅದಕ್ಕೆ ನಿಮ್ಮ ಹತ್ತಿರ ಬಂದಿರೊದು’ ಮಧ್ಯವಯಸ್ಸಿನ ವ್ಯಕ್ತಿ ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದರೆ ಬ್ರಹ್ಮೇಂದ್ರ ಅವರನ್ನೇ ತದೇಕಚಿತ್ತನಾಗಿ ದಿಟ್ಟಿಸಿ ನೋಡುತ್ತಿದ್ದ. 
‘ನಡೆದದ್ದಾದರೂ ಏನು ವಿವರಿಸಿ ಹೇಳಿ’ ಕೇಳಿದ ಬ್ರಹ್ಮೇಂದ್ರ.
‘ತುಂಬ ವಯಸ್ಸಾದ ವ್ಯಕ್ತಿಯೋರ್ವರು ತಮ್ಮ ಪಿಂಚಣಿಗಾಗಿ ಅರ್ಜಿ ಸಲ್ಲಿಸಿದ್ದರು. ಅವರು ಅರ್ಜಿ ಸಲ್ಲಿಸಿದ ಎರಡೇ ದಿನಗಳಲ್ಲಿ ಕೆಲಸ ಮಾಡಿಕೊಟ್ಟೆ’.
‘ಸಂತೋಷ ಪಡಬೇಕಾದ ವಿಷಯಕ್ಕೆ ಯಾಕೆ ಆತಂಕ ಪಡುತ್ತಿದ್ದೀರಿ’.
‘ನೋಡಿ ಆ ಮುದುಕನ ಕೆಲಸ ಮಾಡಿಕೊಡೊದಕ್ಕೆ ನಾನು ಒಂದು ಪೈಸೆನೂ ಲಂಚವಾಗಿ ತೆಗೆದುಕೊಳ್ಳಲಿಲ್ಲ. ಯಾವುದೋ ಜ್ಞಾನದಲ್ಲಿದ್ದ ನನಗೆ ಲಂಚ ತೊಗೊಬೇಕು ಅನ್ನೊದು ಮರ್ತೆಹೋಗಿತ್ತು. ಆ ಮುದುಕಪ್ಪ ಆದರೂ ನೆನಪು ಮಾಡ್ಬೇಕಿತ್ತು. ಆವತ್ತಿನಿಂದ ನಾನು ನನ್ನ ಸರ್ಕಾರಿ ಕೆಲಸಕ್ಕೆ ದ್ರೋಹ ಮಾಡ್ತಿದ್ದೀನಿ ಅನಿಸೊದಕ್ಕೆ ಶುರುವಾಗಿದೆ. ಎಲ್ಲಿ ನೈತಿಕನಾಗ್ತಿದ್ದಿನೋ ಎನ್ನುವ ಭಯ ಕಾಡ್ತಿದೆ. ಜೀವನದ ಮೇಲೆ ಜಿಗುಪ್ಸೆ ಬಂದಿದೆ. ಹೀಗೆ ನೈತಿಕನಾಗಿ ಉಳಿಯೊದರಲ್ಲಿ ಅರ್ಥವಿಲ್ಲ. ಸಾಯ್ಬೇಕು ದಯವಿಟ್ಟು ಮಾರ್ಗದರ್ಶನ ಮಾಡ್ಬೇಕು’ ಕೈಮುಗಿದು ವಿನಂತಿಸಿದ ಮಧ್ಯವಯಸ್ಕನಿಗೆ ನಾಳೆ ಸಾಯಂಕಾಲ ಆರು ಗಂಟೆಗೆ ಉಪಯುಕ್ತ ಸಲಹೆ ನೀಡುವುದಾಗಿ ಭರವಸೆ ಕೊಟ್ಟ ಬ್ರಹ್ಮೇಂದ್ರ.

●●●

ಸಮಯ ಮಧ್ಯಾಹ್ನದ ಮೂರು ಗಂಟೆ. ಬ್ರಹ್ಮೇಂದ್ರನ ಚೇಂಬರಿನಲ್ಲಿ ಅವನೆದುರು ಸುಮಾರು ಎಪ್ಪತ್ತು ವರ್ಷ ವಯಸ್ಸಿನ ವೃದ್ಧರೊಬ್ಬರು ಕುಳಿತಿದ್ದಾರೆ. ವಯಸ್ಸು ಎಪ್ಪತ್ತಾದರೂ ದೇಹ ದಷ್ಟಪುಷ್ಟವಾಗಿದ್ದು ಮುಖದಲ್ಲಿ ಆರೋಗ್ಯದ ಕಳೆಯಿದೆ. ಆ ಬಿರುಬಿಸಿಲಿನಲ್ಲಿ ಮೂರು ಮೈಲಿ ದೂರದಿಂದ ನಡೆದುಬಂದಿದ್ದರೂ ಅವರ ಮುಖದಲ್ಲಿ ಸ್ವಲ್ಪವೂ ಆಯಾಸದ ಚಿಹ್ನೆಯಿಲ್ಲ. ಬ್ರಹ್ಮೇಂದ್ರ ಬಾಯಿತೆರೆಯುವ ಮೊದಲೇ ಆ ವೃದ್ಧರೆ ತಮ್ಮ ಪರಿಚಯ ಹೇಳಿಕೊಂಡು ತಮ್ಮ ಸಮಸ್ಯೆಯನ್ನು ವಿವರಿಸತೊಡಗಿದರು.
‘ಸರ್ಕಾರಿ ಶಾಲೆಯಲ್ಲಿ ಮೇಷ್ಟ್ರಾಗಿದ್ದೆ. ನಿವೃತ್ತನಾಗಿ ಹತ್ತು ವರ್ಷಗಳಾದ್ವು. ಸರ್ಕಾರಿ ಕೆಲಸದಲ್ಲಿ ಊರೂರಿಗೆ ವರ್ಗಾವಣೆ ಆಗುತ್ತಿದ್ದುದ್ದರಿಂದ ಸ್ವಂತ ಮನೆ, ಜಮೀನು ಅಂತ ಮಾಡ್ಕೊಳ್ಳಲಿಲ್ಲ. ಒಬ್ಬನೆ ಮಗ. ಇದೇ ಶಹರದಲ್ಲಿ ದೊಡ್ಡ ಹುದ್ದೆಯಲ್ಲಿ ಉದ್ಯೋಗದಲ್ಲಿದ್ದಾನೆ. ಸೊಸೆ ಕೂಡ ದೊಡ್ಡ ಅಧಿಕಾರಿಣಿ. ನಾನು ಕೆಲಸದಲ್ಲಿದ್ದಾಗಲೆ ಹೆಂಡತಿ ತೀರಿಕೊಂಡಳು. ನಿವೃತ್ತಿಯ ನಂತರ ಮಗನ ಮನೆಯಲ್ಲೆ ಇದ್ದೀನಿ’ ಇಷ್ಟು ಹೇಳಿ ಮಾತು ನಿಲ್ಲಿಸಿದವರು ಎದುರುಗಡೆ ಇದ್ದ ಗ್ಲಾಸಿನಲ್ಲಿದ್ದ ನೀರನ್ನು ಕುಡಿದರು.
‘ಹಾಗಾದರೆ ಸಾಯುವಂಥ ಸಮಸ್ಯೆ ಏನೂ ಇಲ್ಲ ನಿಮಗೆ’.
‘ಸಮಸ್ಯೆ ಶುರುವಾದದ್ದೆ ನನ್ನ ನಿವೃತ್ತಿಯ ನಂತರ. ರಿಟೈರ್ಡ್ ಆದ ಮೇಲೆ ವೃದ್ಧಾಶ್ರಮಕ್ಕೆ ಹೋಗೊ ತಯ್ಯಾರಿಯಲ್ಲಿದ್ದೆ. ಆದರೆ ಮಗ ಮತ್ತು ಸೊಸೆ ನನ್ನನ್ನು ವೃದ್ಧಾಶ್ರಮಕ್ಕೆ ಹೋಗೊಕೆ ಬಿಡಲೇ ಇಲ್ಲ. ಕಳೆದ ಹತ್ತು ವರ್ಷಗಳಿಂದ ನನ್ನನ್ನು ತಮ್ಮ ಜೊತೆನೆ ಇಟ್ಟುಕೊಂಡಿದ್ದಾರೆ. ಬೆಳಗ್ಗೆ ಟಿಫಿನ್, ಮಧ್ಯಾಹ್ನ ಮತ್ತು ರಾತ್ರಿ ಊಟ ಆಗಾಗ ನಾಲಿಗೆ ರುಚಿಗೆ ತಕ್ಕಂತೆ ತಿಂಡಿ ಎಲ್ಲ ಕೊಟ್ಟು ನನಗೆ ಹಿಂಸಿಸುತ್ತಿದ್ದಾರೆ. ನಾನು ಸ್ವಲ್ಪ ಕೆಮ್ಮಿದರು ಸಾಕು ಡಾಕ್ಟರ್‍ನ ಮನೆಗೇ ಕರಿಸ್ತಾರೆ. ನನ್ನ ಪೆನ್ಶನ್ ಹಣ ಕೊಡೊದಕ್ಕೆ ಹೊದರೆ ಒಂದು ಪೈಸೆ ಮುಟ್ಟೊದಿಲ್ಲ. ಇಷ್ಟೊಂದು ಪ್ರೀತಿ ಕಾಳಜಿ ನಡುವೆ ನನಗೆ ಉಸಿರುಗಟ್ಟಿದಂತಾಗ್ತಿದೆ. ನಮ್ಮ ಕಾಲದಲ್ಲಿ ಆಗೆಲ್ಲ ಎಲ್ಲರೂ ವಯಸ್ಸಾದ ಅಪ್ಪ ಅಮ್ಮಂದಿರನ್ನ ವೃದ್ಧಾಶ್ರಮಕ್ಕೆ ಕಳಿಸುತ್ತಿದ್ದರು. ನಾನೂ ಕೂಡ ಅಪ್ಪ ಅಮ್ಮನ್ನ ವೃದ್ಧಾಶ್ರಮದಲ್ಲಿ ಬಿಟ್ಟು ಕೈತೊಳೆದುಕೊಂಡವನು. ಈಗೀಗ ಊರಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಕಡಿಮೆ ಆಗ್ತಿದೆ ಅಂತಿದ್ದಾರೆ. ಮನುಷ್ಯ ಇಷ್ಟೊಂದು ನೈತಿಕನಾದರೆ ಬದುಕೊದು ತುಂಬ ಕಷ್ಟ ಆಗುತ್ತೆ. ಮಗ ಸೊಸೆ ನನ್ನನ್ನು ವೃದ್ಧಾಶ್ರಮಕ್ಕೆ ಕಳುಹಿಸಲ್ಲ. ಇದಕ್ಕೆ ಆತ್ಮಹತ್ಯೆನೇ ದಾರಿ. ಒಂದು ಸುಖದ ಸಾವಿನ ವಿಧಾನ ತಿಳಿಸಿಕೊಡಿ ಅಂತ ನಿಮ್ಮ ಹತ್ತಿರ ಬಂದಿದ್ದೀನಿ’ ಖಡಕ್ಕಾಗಿ ಹೇಳಿ ಮಾತು ನಿಲ್ಲಿಸಿದರು. ನಾಳೆ ಸಾಯಂಕಾಲ ಆರು ಗಂಟೆಗೆ ಬರುವಂತೆ ಹೇಳಿ ಅವರನ್ನು ಸಾಗಹಾಕಿದ.   
●●●
ಅಪಾರ್ಟಮೆಂಟಿನ ತನ್ನ ವೈಭವೋಪೇತ ಫ್ಲ್ಯಾಟ್‍ನಲ್ಲಿ ತೊಡೆಯಮೇಲೆ ಲ್ಯಾಪ್‍ಟಾಪ್ ಇಟ್ಟುಕೊಂಡು ಯಾವುದೋ ವೆಬ್‍ಸೈಟಿನ ಮೇಲೆ ದೃಷ್ಟಿ ನೆಟ್ಟಿದ್ದ ಬ್ರಹ್ಮೇಂದ್ರನ ಮನಸ್ಸು ಕ್ಷೋಭೆಗೆ ಒಳಗಾಗಿತ್ತು. ಮನುಷ್ಯರು ನೈತಿಕರಾಗಿ ದಾರಿ ತಪ್ಪುತ್ತಿದ್ದಾರೆ ಎಂದಿತು ಅವನ ಮನಸ್ಸು. ಇಂಥ ಕಲುಷಿತ ವಾತಾವರಣದಲ್ಲಿ ಬದುಕುವುದೇ ಹೇಸಿಗೆ ಅನಿಸತೊಡಗಿತು. ಆತ್ಮಹತ್ಯೆಗೆ ಸರಳವಾದ ಮಾರ್ಗೋಪಾಯಕ್ಕಾಗಿ ಇಂಟರ್‍ನೆಟ್ಟಿನಲ್ಲಿ ಗೂಗಲಿಸಿದ. ಲ್ಯಾಪ್‍ಟಾಪ್‍ನ ಪರದೆಯ ಮೇಲೆ ಹಲವಾರು ಪುಟಗಳು ಕಾಣಿಸಿಕೊಂಡವು. ಒಂದು ಪುಟವನ್ನು ತೆರೆದು ಓದತೊಡಗಿದ. ‘ನಗರದ ಕಲುಷಿತ ವಾತಾವರಣಕ್ಕೆ ಹೊಂದಿಕೊಂಡ ದೇಹಕ್ಕೆ ಶುದ್ಧವಾದ ಆಮ್ಲಜನಕ ಸೇರಿದಲ್ಲಿ ಮನುಷ್ಯ ಕೆಲವೇ ಕ್ಷಣಗಳಲ್ಲಿ ಸಾಯುತ್ತಾನೆ. ಬೆಳಗ್ಗೆ ನಗರದ ಹೊರವಲಯದಲ್ಲಿ ಒಂದರ್ಧಗಂಟೆ ವಾಕ್ ಹೋಗಿ ಶುದ್ಧವಾದ ಗಾಳಿಯನ್ನು ಸೇವಿಸಿ ಮನೆಗೆ ಹಿಂದಿರುಗುವಷ್ಟರಲ್ಲಿ ದಾರಿಯಲ್ಲೆ ಹೆಣವಾಗಿ ಬಿದ್ದಿರ್ತಿರಿ’ ಎಂದಿತ್ತು. ಮರುದಿನ ನಸುಕಿನಲ್ಲೆ ಕಾರು ಓಡಿಸಿಕೊಂಡು ಬ್ರಹ್ಮೇಂದ್ರ ನಗರದ ಹೊರವಲಯವನ್ನು ಪ್ರವೇಶಿಸಿದ. ಕಾರಿನಿಂದ ಹೊರಗಿಳಿದವನಿಗೆ ತಣ್ಣನೆಯ ಗಾಳಿ ಸೋಕಿ ಮೈ ಜುಮ್ಮೆಂದಿತು. ದೀರ್ಘವಾದ ಉಸಿರೆಳೆದುಕೊಂಡವನ ಮೂಗಿನ ಎರಡೂ ಹೊಳ್ಳೆಗಳ ಮೂಲಕ ಬೊಗಸೆಯಷ್ಟು ಶುದ್ಧವಾದ ಗಾಳಿ ಎದೆಯನ್ನು ಹೊಕ್ಕಿತು.  
●●●
2050 ಜನೆವರಿ 3 ಸಾಯಂಕಾಲ 6 ಗಂಟೆಗೆ ಸ್ವರ್ಗ ಕಟ್ಟಡದ 100 ನೇ ಅಂತಸ್ತಿನಲ್ಲಿದ್ದ ಮುಕ್ತಿಧಾಮ ಕಚೇರಿಯ ಎದುರು ಯುವತಿ, ಮಧ್ಯ ವಯಸ್ಕ ಮತ್ತು ವೃದ್ಧ ನಿಂತಿದ್ದಾರೆ. ಕಚೇರಿಯ ಬಾಗಿಲು ಮುಚ್ಚಿದೆ. ಮೂರೂ ಜನ ಪ್ರತ್ಯೇಕವಾಗಿ ಬ್ರಹ್ಮೇಂದ್ರನ ಮೊಬೈಲಿಗೆ ಕರೆ ಮಾಡುತ್ತಿದ್ದಾರೆ. ಎಲ್ಲರಿಗೂ ಬರುತ್ತಿರುವುದು ಸ್ವಿಚ್ಡ್ ಆಫ್ ಎನ್ನುವ ಒಂದೇ ಉತ್ತರ. ಇವರು ನಿಂತಿರುವುದನ್ನು ನೋಡಿ ಎದುರು ಕಚೇರಿಯಲ್ಲಿನ ವ್ಯಕ್ತಿ ಹತ್ತಿರ ಬಂದು ಹೇಳಿದ ‘ಬ್ರಹ್ಮೇಂದ್ರ ಇವತ್ತು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡರು’. ‘ಅಯ್ಯೋ ಹೀಗಾಗಬಾರದಾಗಿತ್ತು’ ಮೂವರೂ ಒಮ್ಮಲೇ ಉದ್ಗರಿಸಿದರು.

(೦೫.೦೧.೨೦೨೦ ರ ಕನ್ನಡಪ್ರಭ ಪತ್ರಿಕೆಯ ಭಾನುವಾರದ ಪುರವಣಿಯಲ್ಲಿ ಪ್ರಕಟವಾಗಿದೆ)


---000---

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


1 comment:

  1. ಬೆರಗಾಗುವಂತಾ ಅಧ್ಲ್ಪಬುತ ಕಲ್ಪನೆಯ ಕಥಾ ವಸ್ತು.
    ಬಹಳ ಚಂದದ ಕಥೆ.

    ReplyDelete