Friday, November 2, 2018

ಭಾಷೆಯ ಅಸ್ತಿತ್ವದ ವಿವಿಧ ನೆಲೆಗಳು





              ಭಾಷೆಯ ಅಸ್ಮಿತೆಯ ಪ್ರಶ್ನೆ ನಮಗೆ ಎದುರಾಗುತ್ತಲೆ ಇರುತ್ತದೆ. ಭಾಷಾತಜ್ಞರ ಅಧ್ಯಯನಗಳ ಪ್ರಕಾರ ಪ್ರಪಂಚದಲ್ಲಿ ಸಾವಿರಾರು ಭಾಷೆಗಳು ಸಂವಹನದ ಕೊರತೆಯಿಂದ ನಾಶ ಹೊಂದಿವೆ. ಜೊತೆಗೆ ಪ್ರತಿವರ್ಷ ಹಲವಾರು ಭಾಷೆಗಳು ಮರೆಯಾಗುತ್ತಿವೆ. ಕನ್ನಡ ಭಾಷೆಗೆ ಅಂಥದ್ದೊಂದು ಸಮಸ್ಯೆ ಎದುರಾಗುವ ಕಾಲ ಇನ್ನೂ ದೂರವಿದೆ. ಏಕೆಂದರೆ ಕನ್ನಡ ಸಂವಹನದ ಭಾಷೆಯಾಗಿ ಇನ್ನೂ ಚಾಲ್ತಿಯಲ್ಲಿದೆ ಮತ್ತು ರಾಜ್ಯದ ಹಳ್ಳಿಗಳಲ್ಲಿ ಶಿಕ್ಷಣದ ಮಾಧ್ಯಮವಾಗಿ ಬಳಕೆಯಲ್ಲಿದೆ. ಹಾಗೆಂದು ಮೈಮರೆತು ಕೂಡುವಂತಿಲ್ಲ. ಈಗಾಗಲೇ ಒಂದು ತಲೆಮಾರಿನ ಯುವಜನಾಂಗ ಕನ್ನಡ ಭಾಷೆಯೊಂದಿಗಿನ ತಮ್ಮ ಕರುಳು ಸಂಬಂಧವನ್ನು ಕಡಿದುಕೊಂಡಾಗಿದೆ. ಅವರಿಗೆ ಇಂಗ್ಲಿಷ್ ಬದುಕಿನ ಭಾಷೆಯಾಗುವುದರ ಜೊತೆಗೆ ಅದು ಹೃದಯದ ಭಾಷೆಯಾಗಿಯೂ ಮಹತ್ವ ಪಡೆದುಕೊಳ್ಳುತ್ತಿದೆ. ಪ್ರಾಥಮಿಕ ಶಿಕ್ಷಣವನ್ನಾದರೂ ಕನ್ನಡ ಭಾಷೆಯಲ್ಲಿ ಪಡೆದ ನನ್ನ ವಯೋಮಾನದ ನಂತರದ ಪೀಳಿಗೆ ತಮ್ಮ ಮಕ್ಕಳನ್ನು ಕನ್ನಡದ ಪರಿಸರಕ್ಕೆ ಸಂಪೂರ್ಣವಾಗಿ  ಬೆನ್ನು ಮಾಡಿಸಿ ನಿಲ್ಲಿಸಿರುವರು. ಈ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣ, ಇಂಗ್ಲಿಷ್ ಪುಸ್ತಕಗಳು, ಇಂಗ್ಲಿಷ್ ವಾತಾವರಣ ಜೊತೆಗೆ ಬದುಕುತ್ತಿರುವುದು ಕೂಡ ಮಹಾನಗರಗಳ ಕನ್ನಡೇತರ ಸಂಸ್ಕೃತಿಯ ಆಧುನಿಕತೆಯೇ  ಮೈವೆತ್ತ ಅಪಾರ್ಟಮೆಂಟ್‍ಗಳಲ್ಲಿ. ಹೀಗಾಗಿ ಇಂದಿನ ಮಕ್ಕಳಿಗೆ ಕನ್ನಡ ಪದಗಳೇ ಕಿವಿಯ ಮೇಲೆ ಬೀಳುತ್ತಿಲ್ಲ. ಇಂಥದ್ದೆ ಪರಿಸ್ಥಿತಿ ಒಂದು ದಶಕದ ಕಾಲ ಮುಂದುವರೆದಲ್ಲಿ ನಗರಗಳಲ್ಲಿ ಕನ್ನಡ ಭಾಷೆಯನ್ನು ಮಾತನಾಡುವವರೇ ವಿರಳರಾಗಬಹುದು. ನಾನು ಇಲ್ಲಿ ಉದ್ದೇಶ ಪೂರ್ವಕವಾಗಿ ನಗರ ಎನ್ನುತ್ತಿದ್ದೇನೆ. ಏಕೆಂದರೆ ಇಂದಿನ ಗ್ರಾಮಗಳೆಲ್ಲ ವೃದ್ಧಾಶ್ರಮಗಳಂತಾಗಿದ್ದು ಅಲ್ಲಿ ಕನ್ನಡದ ಅಸ್ಮಿತೆಯನ್ನು ಹುಡುಕುವ ಅವಶ್ಯಕತೆ ಇಲ್ಲ. ನಾವು ಮಹತ್ವ ನೀಡಬೇಕಿರುವುದು ನಗರ ಪ್ರದೇಶಗಳಿಗೆ ಮಾತ್ರ.  ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಮತ್ತು ಸಾಂಸ್ಕೃತಿಕ ಹಿನ್ನೆಲೆ ಇರುವ ಕನ್ನಡ ಭಾಷೆಯನ್ನು ಕುರಿತು ಹೀಗೆ ಆತಂಕ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ತುಂಬ ನೋವಿನ ಸಂಗತಿ. 

ಸಾಹಿತ್ಯ

ಕನ್ನಡದ ಅಸ್ಮಿತೆಯ ಪ್ರಶ್ನೆ ಎದುರಾದಾಗಲೆಲ್ಲ ಸಾಹಿತ್ಯದ ಕುರಿತು ಚರ್ಚೆ ಮುನ್ನೆಲೆಗೆ ಬರುತ್ತದೆ. ಏಕೆಂದರೆ ಭಾಷೆಯ ಅಸ್ತಿತ್ವದ ಪ್ರಧಾನ ನೆಲೆಯಾಗಿ ಮೊದಲು ಕಾಣಿಸುವುದು ನಮಗೆ ಸಾಹಿತ್ಯ. ಕನ್ನಡ ಸಾಹಿತ್ಯದ ಮಟ್ಟಿಗೆ ಅದು ತುಂಬ ಸಶಕ್ತವಾಗಿದೆ ಎನ್ನುವುದು ಹೆಚ್ಚಿನವರ ಅಭಿಪ್ರಾಯ. ಹಾಗೆ ಅವರು ಹೇಳುವುದಕ್ಕೂ ಅನೇಕ ಕಾರಣಗಳಿವೆ. ಪ್ರತಿವರ್ಷ ಲಕ್ಷಾಂತರ ಪುಸ್ತಕಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗುತ್ತಿರುವುದು ಆ ಕಾರಣಗಳಲ್ಲೊಂದು. ಕಥೆ, ಕಾವ್ಯ, ನಾಟಕ, ಕಾದಂಬರಿ, ಗದ್ಯಬರಹ ಹೀಗೆ ವಿವಿಧ ಪ್ರಕಾರಗಳಲ್ಲಿ ಪ್ರತಿವರ್ಷ ಕನ್ನಡ ಪುಸ್ತಕಗಳು ಪ್ರಕಟವಾಗುತ್ತಿವೆ. ಪುಸ್ತಕಗಳ ಪ್ರಕಟಣೆಗಾಗಿಯೇ  ಹಲವು ಪ್ರಕಾಶನ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಜೊತೆಗೆ ಬರಹಗಾರರೇ ಪ್ರಕಾಶಕರಾಗಿಯೂ ತಮ್ಮ ತಮ್ಮ ಪುಸ್ತಕಗಳನ್ನು ಪ್ರಕಟಿಸಿಕೊಳ್ಳುತ್ತಿರುವರು. ಮೊನ್ನೆ ಒಬ್ಬರು ಸುಮಾರು ಸಾವಿರದ ಸಂಖ್ಯೆಯಲ್ಲಿ ಆಧುನಿಕ ವಚನಗಳನ್ನು ಬರೆದು ಸ್ವಂತ ಖರ್ಚಿನಲ್ಲಿ ಪುಸ್ತಕ ಪ್ರಕಟಿಸಿ ಗಿನ್ನಿಸ್ ದಾಖಲೆಗೆ ಭಾಜನರಾದರು. ಇನ್ನು ಅಭಿನಂದನಾ ಗ್ರಂಥಗಳಂತೂ ಪ್ರಕಟವಾಗುತ್ತಿರುವುದಕ್ಕೆ ಲೆಕ್ಕವೇ ಇಲ್ಲ. ಹಿಂದೆಲ್ಲ ಮಹಾನ್ ಸಾಧಕರ ಬಗ್ಗೆ ಮಾತ್ರ ಅಭಿನಂದನಾ ಗ್ರಂಥಗಳು ಪ್ರಕಟವಾಗುತ್ತಿದ್ದವು. ಆದರೆ ಇಂದು ಪ್ರತಿಮನೆಗೆ ಒಬ್ಬರ ಅಥವಾ ಇಬ್ಬರ ಅಭಿನಂದನಾ ಗ್ರಂಥಗಳು ಪ್ರಕಟವಾಗುತ್ತಿವೆ. ಒಂದರ್ಥದಲ್ಲಿ ಅಭಿನಂದನಾ ಗ್ರಂಥಗಳ ಪ್ರಕಟಣೆ ಎನ್ನುವುದು ಕೊಡು-ಕೊಳ್ಳುವ ಸಂಸ್ಕೃತಿಯಾಗಿದೆ. 

ಇನ್ನು ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಜೊಳ್ಳು ಮತ್ತು ಗಟ್ಟಿಯೆಂದು  ವರ್ಗೀಕರಿಸುವ ಅವಶ್ಯಕತೆಯೂ ಇಲ್ಲವಾಗಿದೆ. ಎಡ, ಬಲ, ದಲಿತ, ಸ್ತ್ರೀ, ಆ ಜಾತಿ, ಈ ಜಾತಿ ಎಂದು ಸಮ್ಮೇಳನಗಳನ್ನು ಸಂಘಟಿಸಿ ಆಯಾ ವರ್ಗಕ್ಕೆ ಸೇರುವ ಲೇಖಕರ ಪುಸ್ತಕಗಳಿಗೆ ಬಹುಮಾನ ನೀಡುವ ಸಂಪ್ರದಾಯ ಇಲ್ಲಿದೆ. ಪರಿಣಾಮವಾಗಿ ಪ್ರಕಟವಾಗುವ ಎಲ್ಲ ಪುಸ್ತಕಗಳೂ ಬಹುಮಾನಕ್ಕೆ ಯೋಗ್ಯವಾದವುಗಳೇ. ತನ್ನ ಪುಸ್ತಕಕ್ಕೆ ಬಹುಮಾನ ಪಡೆದ ಲೇಖಕನ ಮೇಲೆ ಸಮಾಜ ಮತ್ತು ಸಂಸ್ಕೃತಿಯ ಋಣವಿರುವುದರಿಂದ ಆತ ಋಣಮುಕ್ತಿಗಾಗಿ ಮತ್ತಷ್ಟು ಪುಸ್ತಕಗಳ ಬರವಣಿಗೆಗೆ ಕೈಹಾಕುತ್ತಾನೆ. ಪ್ರತಿವರ್ಷ ಸಾವಿರಾರು ಪುಸ್ತಕಗಳು ಪ್ರಕಟವಾಗಿ ಸಾಹಿತ್ಯಲೋಕಕ್ಕೆ ಸೇರುವುದರಿಂದ ಕನ್ನಡ ಸಾಹಿತ್ಯ ಸಂಖ್ಯಾತ್ಮಕವಾಗಿ ವೃದ್ಧಿಸುತ್ತ ಹೋಗುತ್ತದೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ ಭಾಷೆಯ ಅಸ್ತಿತ್ವದ ಪ್ರಶ್ನೆ ಎದುರಾದಾಗ  ಕನ್ನಡ ಸಾಹಿತ್ಯದ ಸ್ಪಂದನೆ ಪರಿಣಾಮಕಾರಿಯಾಗಿ ಆಗುತ್ತಿಲ್ಲವೇಕೆ? ಎನ್ನುವ ಪ್ರಶ್ನೆ ಕಾಡುತ್ತದೆ. ಈಗ ಆತ್ಮವಿಮರ್ಶೆ ಮಾಡಿಕೊಳ್ಳುವ ಸರದಿ ನಮ್ಮ ಬರಹಗಾರರ ಗುಂಪಿನದು. ಓದುಗರನ್ನು ಹೋಗಿ ಮುಟ್ಟುವ ಮೌಲಿಕ ಸಾಹಿತ್ಯವನ್ನು ನಾವು ಸೃಷ್ಟಿಸುತ್ತಿದ್ದೇವೆಯೇ  ಎನ್ನುವ ವಿಷಯ ಚರ್ಚೆಗೆ ಒಳಗಾಗಬೇಕು. ಎಡ-ಬಲ ಎನ್ನುವ ಪೂರ್ವಾಗ್ರಹಪೀಡಿತ ಮನೋಭಾವದಿಂದ ಹೊರಬಂದು ಪ್ರತಿವರ್ಷ ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಎಷ್ಟು ಪುಸ್ತಕಗಳು ಓದಲು ಯೋಗ್ಯವಾಗಿವೆ ಎನ್ನುವುದು ಮೌಲ್ಯಮಾಪನಕ್ಕೆ ಒಳಪಡಬೇಕು. ಓದಿನ ರುಚಿ ಹತ್ತಿಸಿ ಓದುಗರನ್ನು ಕನ್ನಡ ಪುಸ್ತಕಗಳ ಕಡೆ ಕರೆತರುವಂಥ ಪುಸ್ತಕಗಳ ಸಂಖ್ಯೆ ಹೆಚ್ಚಬೇಕು. ಒಟ್ಟಾರೆ ಕನ್ನಡ ಸಾಹಿತ್ಯ ಗುಣಾತ್ಮಕವಾಗಿ ಬೆಳೆಯಬೇಕೇ ವಿನ: ಸಂಖ್ಯಾತ್ಮಕವಾಗಿ ಅಲ್ಲ. 

ಸಿನಿಮಾ

ಸಿನಿಮಾ ಎಂದಾಗ ಸಾಹಿತ್ಯಲೋಕದ ಮಡಿವಂತರು ಮೂಗು ಮುರಿಯುವುದೇ ಹೆಚ್ಚು. ಇದು ಅವರ ತಪ್ಪಲ್ಲ. ಈ ಸಿನಿಮಾ ಮಾಧ್ಯಮ ಕನ್ನಡ ಭಾಷೆಯನ್ನು ದುಡಿಸಿಕೊಳ್ಳುತ್ತಿರುವ ರೀತಿ ಆ ಮಡಿವಂತರಲ್ಲಿ ರೇಜಿಗೆ ಹುಟ್ಟಿಸಿದೆ. ಹಾಗೆಂದು ಸಿನಿಮಾ ಮಾಧ್ಯಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತಿಲ್ಲ. ಭಾಷೆಯ ಅವನತಿಗೆ ಕಾರಣವಾಗುವಂತೆ ಭಾಷೆಯ ಉನ್ನತಿಗೂ ಈ ಮಾಧ್ಯಮ ಕಾರಣವಾಗುವಷ್ಟು ಪ್ರಬಲವಾಗಿದೆ. ಭಾಷೆಯ ಉನ್ನತಿ ಎಂದು ನಾನು ಹೇಳುವುದರಲ್ಲಿ ಸತ್ಯಾಂಶವಿದೆ. ಸುಮಾರು ದಶಕಗಳ ಹಿಂದಿನ ಸಿನಿಮಾಗಳನ್ನು ವೀಕ್ಷಿಸುತ್ತಿದ್ದ ಸಿನಿಮಾ ಪ್ರಿಯರಿಗೆ ಈ ಮಾತು ಅರ್ಥವಾಗುತ್ತದೆ. ಅಂದಿನ ಸಿನಿಮಾಗಳಲ್ಲೂ ಹಾಡು, ಹೊಡೆದಾಟಗಳಿದ್ದವು ಆದರೆ ಇಂದಿನ ಸಿನಿಮಾಗಳಲ್ಲಿರುವಷ್ಟು ಅತಿಯಾಗಿರಲಿಲ್ಲ. ಅಂದಿನ ನಿರ್ದೇಶಕರು ಭಾಷೆಯನ್ನು ತಮ್ಮ ಸಿನಿಮಾಗಳಲ್ಲಿ ಅತ್ಯಂತ ಸಶಕ್ತವಾಗಿ ದುಡಿಸಿಕೊಂಡರು. ಭಾಷೆಗೆ ಅಪಚಾರವಾಗದಂತೆ ಸಿನಿಮಾಗಳನ್ನು ರೂಪಿಸಿದರು. ಪ್ರತಿ ಸಿನಿಮಾದಲ್ಲೂ ಕನ್ನಡತನವಿರುತ್ತಿತ್ತು. ನಾಡು-ನುಡಿಯ ಪ್ರೇಮ ಸಿನಿಮಾವೊಂದನ್ನು ನೋಡುತ್ತಿರುವ ಘಳಿಗೆ ಪ್ರೇಕ್ಷಕನ ಅನುಭವಕ್ಕೆ ಬರುತ್ತಿತ್ತು. ಅನೇಕ ಸಾಹಿತ್ಯ ಕೃತಿಗಳು ಸಿನಿಮಾಗಳಾಗಿ ಅಪಾರ ಮನ್ನಣೆಗೆ ಪಾತ್ರವಾದವು. ಕನ್ನಡ ಭಾಷೆಯ ಉಳುವಿಗಾಗಿ ಸಂಘಟಿಸಿದ್ದ ಗೋಕಾಕ್ ಚಳವಳಿಯಲ್ಲಿ ಸಿನಿಮಾ ಮಾಧ್ಯಮದ ಕೊಡುಗೆಯೇ  ಹೆಚ್ಚು. ಅಪಾರ ಅಭಿಮಾನಿ ಬಳಗವನ್ನು ಪಡೆದಿದ್ದ ಸಿನಿಮಾದ ಜನಪ್ರಿಯ ಕಲಾವಿದ ಚಳವಳಿಯ ನೇತೃತ್ವವನ್ನು ವಹಿಸಿದ್ದರಿಂದ ಲಕ್ಷಾಂತರ ಜನ ಸೇರಿದರು. ಭಾಷೆಯ ಅಸ್ಮಿತೆಯ ಪ್ರಶ್ನೆ ಎದುರಾದಾಗ ಸಿನಿಮಾ ಮಾಧ್ಯಮ ಗೋಕಾಕ್ ಚಳವಳಿಯ ಮೂಲಕ ಮೂಗು ಮುರಿಯುವ ಮಡಿವಂತರಿಗೆ ತಕ್ಕ ಉತ್ತರ ನೀಡಿತು. 

ಆದರೆ ಈಗ ಕಾಲ ಬದಲಾಗಿದೆ. ಸಿನಿಮಾ ಮಾಧ್ಯಮ ಎಲ್ಲವನ್ನೂ ಕೂಡಿ ಕಳೆಯುವ ಲೆಕ್ಕದ ಮನೋಭಾವದಿಂದಲೇ ನೋಡುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ವಿಸ್ತರಿಸುವ ಧಾವಂತಕ್ಕೆ ಒಳಗಾಗಿರುವ ಈ ಮಾಧ್ಯಮಕ್ಕೆ ಭಾಷೆ ಗೌಣವಾಗಿ ಕಾಣಿಸುತ್ತದೆ. ಕನ್ನಡದ ಪ್ರೇಕ್ಷಕರನ್ನು ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳ ಪ್ರೇಕ್ಷಕರನ್ನು ತನ್ನತ್ತ ಸೆಳೆಯಬೇಕಾಗಿರುವುದರಿಂದ ಇವತ್ತು ಸಿನಿಮಾಗಳಲ್ಲಿ ಸಂವಹನದ ಭಾಷೆಯಾಗಿ ಇಂಗ್ಲಿಷ್ ಪ್ರಾಬಲ್ಯವನ್ನು ಮೆರೆಯುತ್ತಿದೆ. ಅನ್ಯಭಾಷಾ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಕನ್ನಡವೇ ಗೊತ್ತಿರದ ಕಲಾವಿದರು ಇಲ್ಲಿ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಕಲಾವಿದರೊಂದಿಗೆ ನಿರ್ಮಾಪಕ, ನಿರ್ದೇಶಕರು ಕನ್ನಡ ಸಿನಿಮಾ ಮಾಧ್ಯಮಕ್ಕೆ ವಲಸೆ ಬರುತ್ತಿರುವುದರಿಂದ ಕನ್ನಡತನ ಎನ್ನುವುದು ಇಲ್ಲಿ ಮರೀಚಿಕೆಯಾಗಿದೆ. ಬಂಗಾಳಿ ಮತ್ತು ಮಲೆಯಾಳಿ ಭಾಷೆಗಳಂಥ ಸಣ್ಣ ಮಾರುಕಟ್ಟೆಯ ಸಿನಿಮಾ ಮಾಧ್ಯಮ ಮಾಡುತ್ತಿರುವ ಪ್ರಯೋಗಶೀಲತೆ ಅತಿದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಕನ್ನಡ ಸಿನಿಮಾ ಮಾಧ್ಯಮದಲ್ಲಿ ಕಂಡುಬರುತ್ತಿಲ್ಲ. ಇವತ್ತಿಗೂ ಬಂಗಾಳಿ ಮತ್ತು ಮಲೆಯಾಳಿ ಭಾಷೆಗಳ ಸಿನಿಮಾಗಳಲ್ಲಿ ಅವುಗಳ ನೆಲದ ಮತ್ತು ಭಾಷೆಯ ಅಸ್ಮಿತೆ ಇದೆ. ನೆಲದ ಅಸ್ಮಿತೆಯನ್ನಿಟ್ಟುಕೊಂಡೆ ನಿರ್ಮಾಣವಾಗುವ ಈ ಭಾಷೆಗಳ ಸಿನಿಮಾಗಳು ಪ್ರತಿವರ್ಷದ ರಾಷ್ಟ್ರಿಯ ಪ್ರಶಸ್ತಿಗಳಲ್ಲಿ ಸಿಂಹಪಾಲು ಪಡೆಯುತ್ತವೆ. ಆದರೆ ಕನ್ನಡ ಸಿನಿಮಾ ಮಾಧ್ಯಮದಲ್ಲಿ ನೆಲದ ಅಸ್ಮಿತೆಯನ್ನು ಪ್ರತಿನಿಧಿಸುವ ಸಿನಿಮಾಗಳನ್ನು ಕಲಾತ್ಮಕ ಎಂದು ಹಣೆಪಟ್ಟಿ ಕಟ್ಟಿ ಅವುಗಳನ್ನು ನಿರ್ಲಕ್ಷದಿಂದ ನೋಡಲಾಗುತ್ತಿದೆ. 

ಶಿಕ್ಷಣ

ಇಂಗ್ಲಿಷ್‍ನ್ನು ಭಾಷೆಯಾಗಿ ಮಾತ್ರ ಕಲಿಯಬೇಕೆ ವಿನ: ಅದು ಶಿಕ್ಷಣದ ಮಾಧ್ಯಮವಾಗುವುದು ಸಲ್ಲದು ಎಂದು ಅನಂತಮೂರ್ತಿ ಸದಾಕಾಲ ಹೇಳುತ್ತಿದ್ದ ಮಾತಿದು. ನಾವು ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿಗಳಾಗಿದ್ದಾಗ ಆಗೆಲ್ಲ ಇಂಗ್ಲಿಷ್ ಭಾಷೆಯ ಪಠ್ಯವನ್ನು ಸರಳೀಕರಿಸಿದ ಗೈಡ್ ಮಾದರಿಯ ಪುಸ್ತಕಗಳು ಇರುತ್ತಿದ್ದವು. ಈ ಗೈಡ್‍ಗಳಲ್ಲಿ ಇಂಗ್ಲಿಷ್ ಪಠ್ಯದ ಎಲ್ಲ ಪಾಠಗಳ ಕನ್ನಡ ಭಾವಾರ್ಥವಿರುತ್ತಿತ್ತು ಮತ್ತು ಇಡೀ ಪಾಠವನ್ನು ಕನ್ನಡದ ಅಕ್ಷರಗಳಲ್ಲಿ ಕೊಟ್ಟಿರುತ್ತಿದ್ದರು. ಹೀಗಾಗಿ ನಾವೆಲ್ಲ ಇಂಗ್ಲಿಷ್ ಪಾಠವನ್ನು ಕನ್ನಡ ಅಕ್ಷರಗಳ ಮೂಲಕ ಕಲಿಯುತ್ತಿದ್ದೇವು. ಇಂಗ್ಲಿಷ್ ಭಾಷೆಯ ಪ್ರವೇಶಿಕೆ ಕನ್ನಡದ ಮೂಲಕವೇ ಆಗುತ್ತಿತ್ತು. ಕಾಲಾನಂತರದಲ್ಲಿ ಜಾಗತೀಕರಣದ ಪ್ರಭಾವಕ್ಕೆ ಒಳಗಾದ ಪಾಲಕರು ಇಂಗ್ಲಿಷ್ ಭಾಷೆ ಮಾತ್ರ ಬದುಕಿನ ಭಾಷೆ ಎನ್ನುವ ನಿರ್ಣಯಕ್ಕೆ ಬಂದು ತಮ್ಮ ಮಕ್ಕಳಿಗಾಗಿ ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾರಂಭಿಸಿದರು. ಪಾಲಕರ ಈ ಮನೋಭಾವವನ್ನೇ ತಮ್ಮ ಏಳ್ಗೆಗಾಗಿ ಉಪಯೋಗಿಸಿಕೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಹೆಚ್ಚಿನ ಮಹತ್ವವನ್ನು ನೀಡುತ್ತ ಕನ್ನಡ ಮಾಧ್ಯಮದ ಶಾಲೆಗಳನ್ನು ಅಕ್ಷರಶ: ನಿರ್ಲಕ್ಷಿಸತೊಡಗಿದರು. ಪರಿಣಾಮವಾಗಿ ಇವತ್ತು ಕನ್ನಡ ಮಾಧ್ಯಮದ ಶಿಕ್ಷಣ ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ದೊರೆಯುತ್ತಿದೆ ಎನ್ನುವಂಥ ಸ್ಥಿತಿ ನಿರ್ಮಾಣವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಾತ್ಮಕ ಶಿಕ್ಷಣ ಎನ್ನುವ ವಿಷಯವನ್ನು ಮುಂದೆ ಮಾಡಿ ಇವತ್ತು ಉದ್ಯಮದ ರೂಪವನ್ನು ತಳೆದಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಒಡ್ಡುತ್ತಿರುವ ಪ್ರಬಲ ಪೈಪೋಟಿ  ಎದುರು ಸರ್ಕಾರದ ಕನ್ನಡ ಮಾಧ್ಯಮದ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಶಾಶ್ವತವಾಗಿ ಮುಚ್ಚುತ್ತಿವೆ. ದುರಂತದ ವಿಷಯವೆಂದರೆ ಖಾಸಗಿ ಶಾಲೆಗಳ ಇಂಗ್ಲಿಷ್ ಮಾಧ್ಯಮದ ಶಿಕ್ಷಣದಲ್ಲಿ ರಾಜ್ಯದ ಭಾಷೆಯಾದ ಕನ್ನಡವು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಎಲ್ಲ ವಿಷಯಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಕಲಿಯುತ್ತಿರುವ ಮಗು ಎರಡನೇ ಭಾಷೆಯಾದ ಕನ್ನಡವನ್ನು ಕಾಟಾಚಾರಕ್ಕೆನ್ನುವಂತೆ ಕಲಿಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಇನ್ನು ಇಪ್ಪತ್ತು ವರ್ಷಗಳ ನಂತರ ಕನ್ನಡ ಪುಸ್ತಕಗಳನ್ನು ಓದುವವರಾರು ಎನ್ನುವ ಹಿರಿಯ ಲೇಖಕ ಎಸ್.ಎಲ್.ಭೈರಪ್ಪನವರ ಆತಂಕ ಸಹಜವಾಗಿದೆ. 

ರಾಜಕಾರಣ

ರಾಜಕಾರಣದ ಹಿತಾಸಕ್ತಿ ಕೂಡ ನಾಡಿನ ಭಾಷೆಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತದೆ. ಸದಾಕಾಲ ಸ್ವಹಿತಾಸಕ್ತಿಯ ನೆಲೆಯಲ್ಲೇ ರಾಜಕೀಯ ಮಾಡುವ ನಮ್ಮ ರಾಜಕಾರಣಿಗಳಿಗೆ ಭಾಷೆಯ ಕುರಿತು ಕಿಂಚಿತ್ ಚಿಂತೆಯೂ ಇಲ್ಲ. ಜೊತೆಗೆ ಅನಕ್ಷರಸ್ಥರು, ರೌಡಿಗಳು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುತ್ತಿರುವುದರಿಂದ ಅಂಥ ರಾಜಕಾರಣಿಗಳಿಂದ ಭಾಷೆಯ ಅಭ್ಯುದಯವನ್ನು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಅಕ್ಷರಶ: ನಿಷ್ಕ್ರಿಯಗೊಂಡಿದೆ. ಇವತ್ತು ಭಾಷೆಗೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ನಮ್ಮ ಜನಪ್ರತಿನಿಧಿಗಳೆದುರಿವೆ. ಅವುಗಳಲ್ಲಿ ಗಡಿನಾಡ ಸಮಸ್ಯೆಯೂ ಒಂದು. ಗಡಿನಾಡ ಕರ್ನಾಟಕದಲ್ಲಿ ಮರಾಠಿ, ತೆಲುಗು, ತಮಿಳು ಭಾಷೆಗಳು ಅತ್ಯಂತ ಪ್ರಬಲವಾಗಿವೆ. ಬೀದರ್, ಬೆಳಗಾವಿ, ಕೋಲಾರ, ರಾಯಚೂರು ಜಿಲ್ಲೆಗಳಲ್ಲಿ ಕನ್ನಡಕ್ಕಿಂತ ಅನ್ಯಭಾಷೆಗಳನ್ನೆ ತಮ್ಮ ನೆಲದ ಭಾಷೆಯಂತೆ ಬಳಸುವುದನ್ನು ಕಾಣಬಹುದು. ಇವತ್ತಿಗೂ ಚಿಕ್ಕೊಡಿಯನ್ನು ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸದೆ ಇರುವುದಕ್ಕೆ ಕಾರಣ ಬೆಳಗಾವಿ ಮರಾಠಿಗರ ಪ್ರಾಬಲ್ಯಕ್ಕೆ ಒಳಗಾಗಬಹುದೆನ್ನುವ ಭೀತಿ. ಸದಾಕಾಲ ಪ್ರಾದೇಶಿಕತೆಯ ಹಿತಾಸಕ್ತಿಯ  ನೆಲೆಯಲ್ಲೇ ರಾಜಕಾರಣ ಮಾಡುವ ತಮಿಳು ಮತ್ತು ಮಹಾರಾಷ್ಟ್ರದ ರಾಜಕಾರಣಿಗಳಿಂದ ನಮ್ಮ ರಾಜಕೀಯ ನಾಯಕರು ಕಲಿಯುವುದು ಸಾಕಷ್ಟಿದೆ. ಇತ್ತೀಚಿಗೆ ಸಂದರ್ಶನದಲ್ಲಿ ಹಿರಿಯ ವಿಮರ್ಶಕ ಆಮೂರ ಅವರು ‘ರಾಜಕಾರಣವನ್ನು ಹೊರಗಿಟ್ಟು ಭಾಷೆಯ ಅಭಿವೃದ್ಧಿಯನ್ನು ನಿರೀಕ್ಷಿಸುವುದು ಅಸಾಧ್ಯ. ರಾಜಕಾರಣ ಎನ್ನುವುದು ಅದೊಂದು ಬಹುದೊಡ್ಡ ಶಕ್ತಿಕೇಂದ್ರ. ಆದರೆ ನನ್ನ ವಿರೋಧ ಇರುವುದು ಕೆಟ್ಟ ರಾಜಕಾರಣದ ಕುರಿತು’ ಎಂದ ಮಾತು ರಾಜಕಾರಣದ ಮಹತ್ವಕ್ಕೊಂದು ದೃಷ್ಟಾಂತವಾಗಿದೆ.

ಕನ್ನಡಿಗ ದೊರೆ

ಭಾಷೆ ತನ್ನ ಅಸ್ತಿತ್ವದ ವಿವಿಧ ನೆಲೆಗಳನ್ನು ಕಳೆದುಕೊಳ್ಳುತ್ತಿರುವ ಈ ಘಳಿಗೆ ಕನ್ನಡಕ್ಕೆ ಅದರ ಹಿಂದಿನ ಹಿರಿಮೆಯನ್ನು ತಂದುಕೊಡುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ಭಾಷಾಪ್ರೇಮ ಪ್ರತಿಯೊಬ್ಬರ ಮನೆ ಮತ್ತು ಮನಸ್ಸುಗಳಲ್ಲಿ ಬೆಳೆಯಬೇಕು. ನೆಲ ಮತ್ತು ಭಾಷೆಯಿಂದ ದೂರವಾಗಿ ಬದುಕುತ್ತಿರುವ ಘಳಿಗೆ ನಮಗೆ ಕಾಡುವ ಅನಾಥ ಪ್ರಜ್ಞೆ ನಾವು ಕನ್ನಡದ ನೆಲದಲ್ಲೇ ಬದುಕುತ್ತಿರುವಾಗ ಕಾಡುವುದಿಲ್ಲ. ಆಗೆಲ್ಲ ಭಾಷೆಯನ್ನು ನಿರ್ಲಕ್ಷಿಸುತ್ತೇವೆ. ಇದು ಸರಿಯಲ್ಲ. ಜಾಗತೀಕರಣದ ಈ ದಿನಗಳಲ್ಲಿ ಇಂಗ್ಲಿಷ್ ಬದುಕಿನ ಭಾಷೆಯಾಗುತ್ತಿರುವುದರಿಂದ ಇಂಗ್ಲಿಷ್ ಮಾಧ್ಯಮದ ಶಿಕ್ಷಣ ಅನಿವಾರ್ಯವಾಗುತ್ತಿದೆ. ಸರ್ಕಾರ ಮಕ್ಕಳ ಪ್ರಾಥಮಿಕ ಶಿಕ್ಷಣವನ್ನಾದರೂ ಮಾತೃಭಾಷೆಯಲ್ಲಿ ಕಡ್ಡಾಯಗೊಳಿಸಬೇಕಿತ್ತು. ಆದರೆ ಅಂಥದ್ದೊಂದು ನಿರ್ಧಾರವನ್ನು ತೆಗೆದುಕೊಳ್ಳಲು ಸರ್ಕಾರ ಮನಸ್ಸು ಮಾಡುತ್ತಿಲ್ಲ. ಮಕ್ಕಳ ಶಿಕ್ಷಣದ ಮಾಧ್ಯಮವನ್ನು ಪಾಲಕರ ಆಯ್ಕೆಗೆ  ಬಿಟ್ಟು ಯಾವ ಭಾಷೆಯನ್ನಾದರೂ ಆಯ್ದುಕೊಳ್ಳಲಿ ಎಂದು ಸರ್ಕಾರ ಕೈಕಟ್ಟಿ ಕುಳಿತಿದೆ. ಹೀಗಾಗಿ ಬಹುಸಂಖ್ಯಾತ ಪಾಲಕರು ಇಂಗ್ಲಿಷ್ ಮಾಧ್ಯಮದ ಶಿಕ್ಷಣಕ್ಕೆ ಒತ್ತು ನೀಡುತ್ತಿರುವಾಗ ನಿಮ್ಮ ಮಕ್ಕಳನ್ನು ಕನ್ನಡ ಮಾಧ್ಯಮದ ಶಾಲೆಗಳಿಗೆ ಸೇರಿಸಿ ಎಂದು ಹೇಳುವ ನೈತಿಕ ಹಕ್ಕು ಇವತ್ತು ಯಾರಿಗೂ ಇಲ್ಲ. ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಎಂದು ಕಡ್ಡಾಯಗೊಳಿಸಿದಾಗ ಮಾತ್ರ ಆಗ ಆರ್ಥಿಕ ಸ್ಥಿತಿವಂತರ ಮತ್ತು ದುರ್ಬಲರ ಮಕ್ಕಳು ಕೂಡಿಯೇ  ಕನ್ನಡ ಶಾಲೆಗಳಿಗೆ ಹೋಗುವ ವಾತಾವರಣ ನಿರ್ಮಾಣವಾಗುತ್ತದೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಇಂಥ ವಾತಾವರಣ ನಿರ್ಮಾಣವಾಗುವುದು ಕಷ್ಟಸಾಧ್ಯ. ಆದ್ದರಿಂದ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಕಳುಹಿಸಿದರೂ ಪಾಲಕರು ಮನೆಯಲ್ಲಿ ಕನ್ನಡದ ವಾತಾವರಣವನ್ನು ಸೃಷ್ಟಿಸಬೇಕು. ಮಕ್ಕಳಿಗೆ ಕನ್ನಡ ಪುಸ್ತಕಗಳ ಓದಿನಲ್ಲಿ ಆಸಕ್ತಿ ಮೂಡಿಸಬೇಕು. ಕನ್ನಡದಲ್ಲಿ ಮಾತನಾಡುವುದನ್ನು ಕಲಿಸಬೇಕು. ಒಟ್ಟಿನಲ್ಲಿ ಅವರಲ್ಲಿ ಕನ್ನಡತನವನ್ನು ತುಂಬಬೇಕು. 

ಭಾಷೆಯ ಕುರಿತು ತೀರ ಅಂದಾಭಿಮಾನವೂ ಬೇಡ. ನಮ್ಮ ಭಾಷೆಯ ಜೊತೆಗೆ ಅನ್ಯಭಾಷೆಗಳ ಸೊಗಡನ್ನೂ ನಾವು ಅರಿಯುವುದರಿಂದ ಸಾಂಸ್ಕೃತಿಕವಾಗಿ ಬೆಳೆಯಲು ತುಂಬ ನೆರವಾಗುತ್ತದೆ. ಭಾಷೆಯೊಂದು ಸಾಂಸ್ಕೃತಿಕವಾಗಿ ಬೆಳೆಯಬೇಕಾದರೆ ಅದು ಬೇರೆ ಬೇರೆ ಭಾಷೆಗಳಿಂದ ಪಡೆಯುತ್ತ ಬೆಳೆಯಬೇಕಾಗುತ್ತದೆ. ಸಾಹಿತ್ಯಿಕವಾಗಿ ಇದು ತುಂಬ ಮುಖ್ಯವಾದ ಅಗತ್ಯಗಳಲ್ಲೊಂದು.  ಹಾಗೆಂದು ಬೇರೆ ಭಾಷೆಗಳು ಕನ್ನಡದ ಅಸ್ತಿತ್ವವನ್ನೇ ಪ್ರಶ್ನಿಸುವ ಮಟ್ಟಿಗೆ ತಾಳ್ಮೆ ಮತ್ತು ಔದಾರ್ಯ ಮೆರೆಯುವುದು ಸರಿಯಲ್ಲ. ಬೇರೆ ಭಾಷೆ ಮತ್ತು ಸಂಸ್ಕೃತಿಗಳಿಂದ ಪಡೆಯುತ್ತ ನಾವು ಕನ್ನಡವನ್ನು ಬೆಳೆಸಬೇಕು ಮತ್ತು ಉಜ್ವಲಗೊಳಿಸಬೇಕು. ಜೊತೆಗೆ ಕನ್ನಡದ ಸಾಹಿತ್ಯಿಕ ಮಹತ್ವ ಮತ್ತು ಸಾಂಸ್ಕೃತಿಕ ಪರಂಪರೆ ಅನುವಾದದ ರೂಪದಲ್ಲಿ ಅನ್ಯಭಾಷೆಗಳಿಗೂ ವಿಸ್ತರಿಸಬೇಕು. ಕೊಡು-ಕೊಳ್ಳುವ ಸಂಸ್ಕೃತಿಯ ಮೂಲಕ ಕನ್ನಡ ಭಾಷೆ ಶ್ರೀಮಂತಗೊಳ್ಳಬೇಕು. ಒಟ್ಟಾರೆ ಕನ್ನಡ ಭಾಷೆ ನಮ್ಮ ನಮ್ಮ ಹೃದಯದ ಭಾಷೆಯಾಗಿ ತನ್ನ ಅಸ್ತಿತ್ವದ ನೆಲೆಯನ್ನು ವಿಸ್ತರಿಸಿಕೊಳ್ಳುವುದು ಇವತ್ತಿನ ತುರ್ತು ಅಗತ್ಯವಾಗಿದೆ.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 


No comments:

Post a Comment