ಯಶವಂತ ಚಿತ್ತಾಲರು ಕನ್ನಡದ ಅನನ್ಯ ಮತ್ತು ಅಪೂರ್ವ ಬರಹಗಾರ. ಕನ್ನಡ ಸಾಹಿತ್ಯಕ್ಕೆ ಅವರದು ಬಹುದೊಡ್ಡ ಕೊಡುಗೆ. ಐದು ದಶಕಗಳ ಕಾಲ ಕನ್ನಡದ ನೆಲದಿಂದ ದೂರವಾದ ಮುಂಬಯಿಯಲ್ಲಿ ಕುಳಿತು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡ ಚಿತ್ತಾಲರು ತಮ್ಮ ಕೃತಿಗಳಲ್ಲಿ ಕಟ್ಟಿಕೊಟ್ಟಿದ್ದು ದಟ್ಟವಾದ ಜೀವನಾನುಭವವನ್ನು. ಮನುಷ್ಯನ ಗುಣ, ಸ್ವಭಾವಗಳನ್ನು ಮನೋವಿಜ್ಞಾನದ ಹಿನ್ನೆಲೆಯಲ್ಲಿ ಚಿತ್ತಾಲರು ವಿಶ್ಲೇಷಿಸಿ ನೋಡಿದಷ್ಟು ಬೇರೆ ಬರಹಗಾರರು ನೋಡಿದ್ದು ಕಡಿಮೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಚಿತ್ತಾಲರ ಕಥೆ, ಕಾದಂಬರಿ, ಪ್ರಬಂಧಗಳಲ್ಲಿ (ಚಿತ್ತಾಲರು ಪ್ರಬಂಧವನ್ನೂ ಕಥೆಯಂತೆ ಬರೆಯುತ್ತಾರೆ ಎನ್ನುತ್ತಾರೆ ಲೇಖಕ ಜೋಗಿ) ಮನುಷ್ಯ ಪ್ರಜ್ಞೆ ಎನ್ನುವುದು ಮತ್ತೆ ಮತ್ತೆ ಓದುಗನ ಅನುಭವಕ್ಕೆ ಒಳಗಾಗುವುದು ತೀರ ಸಹಜವೆಂಬಂತಿದೆ. ಚಿತ್ತಾಲರ ಕೃತಿಗಳಲ್ಲಿ ಮನುಷ್ಯ ಪ್ರಜ್ಞೆ ಎಂಬುದು ಸಾಮಾಜಿಕ ಪ್ರಜ್ಞೆಗೆ ಒಂದು ಪ್ರವೇಶಿಕೆಯಾಗಿ ಗೋಚರಿಸುತ್ತದೆ. ಸಮಾಜ ಎನ್ನುವುದು ಮನುಷ್ಯನಿಂದ ಪ್ರತ್ಯೇಕವಾದ ವ್ಯವಸ್ಥೆಯೇನಲ್ಲ. ಮನುಷ್ಯರಿಂದ ಕೂಡಿದ ಒಂದು ಸಂಘಟನೆಯೇ ಸಮಾಜ. ಈ ಕಾರಣದಿಂದಲೇ ಅರಿಸ್ಟಾಟಲ್ ಮನುಷ್ಯ ಮೂಲತ: ಸಮಾಜ ಜೀವಿ ಎನ್ನುತ್ತಾನೆ. ಪರಿಣಾಮವಾಗಿ ಸಮಾಜ ಪರಿವರ್ತನೆ ಎನ್ನುವುದು ಮನುಷ್ಯ ಪರಿವರ್ತನೆಯಲ್ಲೇ ಅಡಕವಾಗಿದೆ. ಆದ್ದರಿಂದ ಚಿತ್ತಾಲರು ತಮ್ಮ ಕೃತಿಗಳಲ್ಲಿ ನೇರವಾಗಿ ಸಮಾಜಿಕ ಪ್ರಜ್ಞೆಯನ್ನು ಪ್ರವೇಶಿಸದೇ ಮನುಷ್ಯ ಪ್ರಜ್ಞೆಯ ಕಡೆ ಹೊರಳುತ್ತಾರೆ. ನಾನೇಕೆ ಬರೆಯುತ್ತೇನೆ ಎನ್ನುವ ಪ್ರಬಂಧದಲ್ಲಿ ಚಿತ್ತಾಲರು ತಮ್ಮ ಸಾಹಿತ್ಯ ಸೃಷ್ಟಿಯ ಕಾರಣವನ್ನು ಹೀಗೆ ವಿವರಿಸುತ್ತಾರೆ ‘ನೀವೇಕೆ ಬರೆಯುತ್ತೀರಿ ಎನ್ನುವ ಪ್ರಶ್ನೆಗೆ ನನ್ನಲ್ಲಿ ನೇರವಾದ ಉತ್ತರವಿಲ್ಲ. ಬರೆಯುವ ಅನುಭವ ನನ್ನ ಬದುಕಿಗೆ ಅರ್ಥಪೂರ್ಣತೆಯನ್ನು ತಂದುಕೊಟ್ಟ ಅನುಭವಗಳಲ್ಲೇ ಅತ್ಯಂತ ಮಹತ್ವದ್ದೆಂದು ಅನಿಸಿದ್ದುಂಟು. ನನ್ನ ಹುಟ್ಟನ್ನು, ಅಸ್ತಿತ್ವವನ್ನು ಅಲ್ಲಗಳೆಯುವಷ್ಟರ ಮಟ್ಟಿಗೆ ನಿರಾಸಕ್ತವಾದ ಈ ವಿಶಾಲ ವಿಶ್ವದಲ್ಲಿ ನನ್ನ ವೈಯಕ್ತಿಕ ಇರುವಿಕೆಯ ಪ್ರಸ್ತುತತೆಯನ್ನು ಕಂಡುಕೊಳ್ಳುವ ಹಾಗೂ ಆ ಮೂಲಕ ನನ್ನ ಸಮಾಜವನ್ನು ನನಗೆ ಜೀವಂತವಾಗಿಸುವ ಕ್ರಿಯೆಯಲ್ಲಿ ನನನ್ ಬರವಣಿಗೆ ಮಹತ್ವಪೂರ್ಣವಾಗಿ ಭಾಗವಹಿಸಿದೆ ಎಂದು ನನಗನಿಸುತ್ತದೆ. ಒಟ್ಟಿನಲ್ಲಿ ನಾನು ಬರೆಯಲು ಕಾರಣ ನಾನು ನಾನೇ ಆಗಲು, ನಾನು ನಾನೇ ಆಗಿ ಉಳಿದು ಉಳಿದವರೊಂದಿಗೆ ಬೆರೆಯಲು, ಪ್ರೀತಿಸಲು, ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಿಕೊಳ್ಳಲು. ನಾನು ಬರೆಯುವುದು ಬೇರೆಯವರನ್ನು ತಿದ್ದುವುದಕ್ಕಲ್ಲ. ಆ ಯೋಗ್ಯತೆಯಾಗಲಿ, ಅಧಿಕಾರವಾಗಲಿ ನನಗಿಲ್ಲ’. ಒಟ್ಟಾರೆ ಚಿತ್ತಾಲರು ತಮ್ಮ ಬರವಣಿಗೆಯನ್ನು ತಾವೊಬ್ಬ ಮನುಷ್ಯರಾಗಿ ಉಳಿಯಲು ಅಗತ್ಯವಾದ ಸೃಜನಶೀಲ ಕ್ರಿಯೆ ಎನ್ನುವ ಅರ್ಥದಲ್ಲಿ ಭಾವಿಸುತ್ತಾರೆ.
ಸಾಹಿತ್ಯಕ್ಕೂ ಮತ್ತು ಮನುಷ್ಯ ಪ್ರಜ್ಞೆಗೂ ಇರುವ ಸಂಬಂಧದ ಕುರಿತು ಚಿತ್ತಾಲರಿಗಿರುವ ಒಂದು ಸ್ಪಷ್ಟ ಕಲ್ಪನೆಯನ್ನು ನಾವು ಅವರ ಅನೇಕ ಲೇಖನಗಳಲ್ಲಿ ಕಾಣಬಹುದು. ಮನುಷ್ಯನನ್ನು ಮನುಷ್ಯನನ್ನಾಗಿಸುವ ಸಾಧ್ಯತೆಗೆ ಒಳಪಡಿಸುವ ಮಾಧ್ಯಮಗಳಲ್ಲಿ ಸಾಹಿತ್ಯವೇ ಮುಖ್ಯವಾದದ್ದು ಎನ್ನುತ್ತಾರೆ ಚಿತ್ತಾಲರು. ‘ನಾವು ವಿಚಾರ ಮಾಡುವ, ಭಾವಿಸುವ ಹಾಗೂ ನೋಡುವ ಮಟ್ಟಗಳು ಎತ್ತರಗೊಂಡು ನಾವು ಮಾನವರಾಗಿ ಅರಳುವ ಸಾಧ್ಯತೆಯೇ ಸಾಹಿತ್ಯ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯೆಂದು ನಾನು ನಂಬುತ್ತೇನೆ. ಬದುಕಿನ ಬಗ್ಗೆ ನಾವು ಬೆಳೆಸಿಕೊಂಡ ತಪ್ಪು ಅಪೇಕ್ಷೆಗಳಿಂದಾಗಿ ಮನುಷ್ಯ ಜೀವನಕ್ಕೆ ಅರ್ಥ ತಂದುಕೊಡಬಹುದಾದಂಥ ಗಂಭೀರ ಭಾವನೆಗಳೇ ಭ್ರಷ್ಟವಾಗುತ್ತ ನಮ್ಮ ಸಾಮಾಜಿಕ ಜೀವನದ ಮೇಲೆ, ರಾಜಕೀಯ ನಡುವಳಿಕೆಯ ಮೇಲೆ ಅತ್ಯಂತ ದುಷ್ಟವಾದ, ಅನಾರೋಗ್ಯಕರವಾದ ಪರಿಣಾಮ ಉಂಟಾಗುತ್ತಿರುವ ಇಂದಿನ ಕಾಲದಲ್ಲಿ ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವುಗಳನ್ನು ಕಾಪಾಡಿಕೊಳ್ಳುವುದರಲ್ಲಿ ಕಲೆಗಳು ಬಹುಮುಖ್ಯವಾಗಿ ಸಾಹಿತ್ಯ ವಹಿಸಬಹುದಾದ ಪಾತ್ರವನ್ನು ಒತ್ತಿ ಹೇಳಿದಷ್ಟೂ ಕಡಿಮೆಯೆನಿಸುತ್ತದೆ. ಸಾಹಿತ್ಯ ಕಮಿಟ್ ಆಗಬೇಕಾದದ್ದು ಈ ದಿಕ್ಕಿನಲ್ಲೆಂದು ನಾನು ಭಾವಿಸುತ್ತೇನೆ’ ಸಾಹಿತ್ಯವನ್ನು ಮನುಷ್ಯ ಪ್ರಜ್ಞೆಯ ಹಿನ್ನೆಲೆಯಲ್ಲಿ ಚಿತ್ತಾಲರು ವಿಶ್ಲೇಷಿಸಿ ನೋಡುವ ಪರಿಯಿದು.
ಆಧುನಿಕತೆಯ ಈ ಯುಗದಲ್ಲಿ ಬದಲಾಗುತ್ತಿರುವ ಮನುಷ್ಯ ಸ್ವಭಾವ ಮತ್ತು ಹೆಚ್ಚುತ್ತಿರುವ ತಣ್ಣನೆಯ ಕ್ರೌರ್ಯ ಚಿತ್ತಾಲರ ಬರವಣಿಗೆಯಲ್ಲಿ ಮತ್ತೆ ಮತ್ತೆ ವಿಮರ್ಶೆಗೆ ಒಳಗಾಗುತ್ತವೆ. ಮನುಷ್ಯ ಮನುಷ್ಯನನ್ನೇ ತನ್ನ ಸ್ವಾರ್ಥಕ್ಕಾಗಿ, ಸುಖಕ್ಕಾಗಿ ಉಪಯೋಗಿಸಿಕೊಳ್ಳಲು ತೊಡಗಿರುವ ಹಿಂಸಕ ಪ್ರವೃತ್ತಿಯನ್ನು ಚಿತ್ತಾಲರು ತಮ್ಮ ಬರವಣಿಗೆಯಲ್ಲಿ ವಿಶ್ಲೇಷಣೆಗೆ ಒಳಪಡಿಸುತ್ತಾರೆ. ಮಾನವೀಯ ಮೌಲ್ಯಗಳಲ್ಲಿನ ಶ್ರದ್ಧೆ ಕುಸಿಯುತ್ತಿರುವ ರೀತಿಗೆ ಅವರ ಸಾಹಿತ್ಯಿಕ ಮನಸ್ಸು ದಿಗಿಲುಗೊಳ್ಳುತ್ತದೆ. ಮನುಷ್ಯನ ಕ್ರೌರ್ಯ ಹೀಗೆ ಮುಂದುವರೆದಲ್ಲಿ ಮನುಷ್ಯ ಚೇತನ ಬದುಕಿನ ಕ್ರಿಯಾ ಕ್ಷೇತ್ರದಿಂದಲೇ ಪಲಾಯನ ಹೇಳಬಹುದಾದ ಭಯಾನಕ ಸ್ಥಿತಿ ಹುಟ್ಟಿಕೊಳ್ಳಬಹುದೆಂದು ಎಚ್ಚರಿಸುತ್ತಾರೆ.
ಮನುಷ್ಯ ಪ್ರಜ್ಞೆ ಚಿತ್ತಾಲರ ಬರವಣಿಗೆಯಲ್ಲಿ ಒಡಮೂಡುವ ಬಗೆಗೆ ಉದಾಹರಣೆಯಾಗಿ ಅವರ ‘ಸುತ್ತು ಸುತ್ತೋ ಸುತ್ತಾಟ’ ಕಥೆಯನ್ನು ನೋಡಬಹುದು. ತನ್ನ ಹಿಂದೆ ನಡೆದು ಬರುತ್ತಿದ್ದ ಹುಡುಗ ಕಾಣೆಯಾದದ್ದಕ್ಕೂ ಅದೇ ದಾರಿಯಲ್ಲಿದ್ದ ಉಪಯೋಗದಲ್ಲಿಲ್ಲದ ಹಳೆ ಕೊಳವೆ ಬಾವಿಗೂ ಸಂಬಂಧ ಕಲ್ಪಿಸಿ ಹುಡುಗನ ಸಾವಿಗೆ ನಾನೇ ಕಾರಣನೆಂದು ಪರಿತಪಿಸುವ ದಾರಿಹೋಕನ ನೋವು ಮನುಷ್ಯ ಪ್ರಜ್ಞೆಯಾಗಿ ಓದುಗನ ಅಂತ:ಕರಣವನ್ನು ತಟ್ಟುತ್ತದೆ. ‘ಆ ದಿನ ಮನೆಯನ್ನು ತಲುಪುವ ಆತುರದಲ್ಲಿ ಬಸ್ ನಿಲ್ದಾಣದಿಂದ ನಮ್ಮ ಕಟ್ಟಡಕ್ಕೆ ಹೋಗುವ ರಾಜರಸ್ತೆಯನ್ನು ಹಿಡಿಯದೇ ಶೀಘ್ರದಾರಿಯಾದ ಸಮೀಪದ ಕಚ್ಚಾ ನೆಲದ ಬಯಲು ಭೂಮಿಯನ್ನು ಹಾದು ಹೋಗುತ್ತಿದ್ದಾಗ ಯಾವ ಸ್ಪಷ್ಟ ಕಾರಣವೂ ಇಲ್ಲದೇ ಸರಕ್ಕನೆ ಹಿಂತಿರುಗಿ ನೋಡಿದೆ. ಸುಮಾರು ಆರೇಳು ವರ್ಷದ ಹುಡುಗನೊಬ್ಬ ನನ್ನ ಬೆನ್ನ ಹಿಂದೆಯೇ ಬರುತ್ತಿದ್ದದ್ದು ಕಣ್ಣಿಗೆ ಬಿತ್ತು. ಹುಡುಗ ನನ್ನಿಂದ ಸಾಕಷ್ಟು ದೂರದಲ್ಲಿದ್ದ. ಶಾಲೆಗೆ ಹೋಗುವ ಡ್ರೆಸ್‍ನಲ್ಲಿದ್ದ. ನಾನು ತುಳಿಯುತ್ತಿದ್ದ ದಾರಿಯಲ್ಲಿ ದಿನವೂ ದಾಟಿಯೇ ಹೋಗಬೇಕಾಗಿದ್ದ ಉಪಯೋಗದಲ್ಲಿಲ್ಲದ ಹಳೇ ಕೊಳವೆ ಬಾವಿಯಿತ್ತು. ಅದರ ಬಾಯಿಯನ್ನು ಹರಕು ಮುರಕು ಜಂಗು ಹಿಡಿದ ಲೋಹದ ತಗಡಿನಿಂದ ಮುಚ್ಚಿದ್ದರು. ಅದನ್ನು ದಾಟುವಾಗ ಪ್ರತಿಸಾರಿ ಒಂದು ದಿನ ಈ ದರ್ವೇಶಿ ಯಾರದಾದರೂ ಜೀವಕ್ಕೆ ಅಪಾಯ ತರದೇ ಇರಲಾರದು ಎಂದು ಮನಸ್ಸಿನಲ್ಲೇ ಶಪಿಸುತ್ತಿದ್ದೆ. ಬಾವಿಯನ್ನು ದಾಟುವಾಗ ನನ್ನಹಾಗೇ ಮನಸ್ಸಿನಲ್ಲೇ ಬಾವಿಯನ್ನು ಬೈದವರು ಹಲವರಿರಬೇಕು. ಬಾವಿ ದಾಟಿಹೋದ ಕೆಲ ಹೊತ್ತಿನ ಮೇಲೆ ಬಂದ ಒಂದು ವಿಚಾರಕ್ಕೆ ಜೀವ ಝಲ್ ಎಂದು ನಡುಗಿತು. ಹಿಂತಿರುಗಿ ನೋಡಿದೆ. ಇಲ್ಲ ಹುಡುಗ ಇರಲಿಲ್ಲ. ಇಷ್ಟರಲ್ಲೇ ಬಾವಿಯನ್ನು ದಾಟಿ ಬರಬೇಕಾಗಿತ್ತು. ಇನ್ನೂ ದಾಟಿಯೇ ಇಲ್ಲವೋ ಅಥವಾ ನಾವು ಇಷ್ಟು ದಿನ ಯಾವುದು ನಡೆಯಬಹುದೆಂದು ಹೆದರಿದ್ದೆವೋ ಅದು ಎಲ್ಲ ಬಿಟ್ಟು ಇವತ್ತು ಇದೀಗ ನನ್ನನ್ನು ಹಿಂಬಾಲಿಸುತ್ತಿದ್ದಾಗ ನಡೆದು ಹೋಯಿತೇ?’ ಎಂದು ಕ್ಷೋಭೆಗೊಳಗಾಗುವ ದಾರಿಹೋಕ ನಡೆದದ್ದರಲ್ಲಿ ನನ್ನ ಪಾತ್ರವನ್ನು ಕುರಿತು ನೀವು ಕೊಡುವ ತೀರ್ಪು ಕೊನೆಯದೆಂದು ಮೊರೆ ಹೋಗುತ್ತಾನೆ. ಕಾಣೆಯಾದ ಮಗುವಿನ ಬಗ್ಗೆ ಸುದ್ದಿ ಬರಲು ತಡವಾಗಿ ಹುಡುಗ ಬಾವಿಯಲ್ಲಿ ಬಿದ್ದಿರುವ ಬಗೆಗಿನ ಸಂಶಯ ತೀವ್ರವಾಗುತ್ತ ಹೋದಂತೆ ದಾರಿಹೋಕನ ಯಾತನೆ ತನ್ನ ಪರಾಕಾಷ್ಠೆಯನ್ನು ಮುಟ್ಟುತ್ತದೆ. ಹೀಗೆ ಘಟನೆಯೊಂದನ್ನು ಕಲ್ಪಿಸಿಕೊಂಡು ಅದರಲ್ಲಿ ತನ್ನ ಪಾತ್ರವೇನು ಎನ್ನುವ ಮಾನಸಿಕ ಕ್ಷೋಭೆಗೆ ಒಳಗಾಗುವ ಪಾತ್ರದಲ್ಲಿ ನಾವು ಕಾಣುವುದು ಮತ್ತದೇ ಮನುಷ್ಯ ಪ್ರಜ್ಞೆಯನ್ನು. ನಿವೃತ್ತಿಯ ದಿನವೇ ನಡೆಯುವ ಈ ಘಟನೆ ನಂತರದ ಹಲವು ದಿನಗಳ ಕಾಲ ಆತನ ಮಾನಸಿಕ ನೆಮ್ಮದಿಯನ್ನೇ ಕದಡುತ್ತದೆ. ನಡೆದಿದೆ ಎಂದು ಕಲ್ಪಿಸಿಕೊಂಡ ಒಂದು ಅಸಂಗತ ಘಟನೆಗೆ ನಾನು ಕಾರಣನಾದೆ ಎನ್ನುವ ವಿಚಾರ ಆತನನ್ನು ಕಾಡಲು, ಕ್ಷೋಭೆಗೆ ಒಳಪಡಿಸಲು ಅವನೊಬ್ಬ ರಕ್ತ ಮಾಂಸಗಳಿಂದ ಕೂಡಿದ ಮನುಷ್ಯನಾಗಿರುವುದೇ ಕಾರಣವಾಗುತ್ತದೆ. ಚಿತ್ತಾಲರೇ ಹೇಳುವಂತೆ ‘ಪ್ರೀತಿ, ದ್ವೇಷ, ಕ್ರೋಧ ಇವೇ ಮೊದಲಾದವು ಯಾವ ಕಾಲಕ್ಕೂ ಸಲ್ಲಬಹುದಾದ ಭಾವನೆಗಳಾದರೂ ಅವು ನಮ್ಮನ್ನು ತಟ್ಟಲು ಸಾಧ್ಯವಾಗುವುದು ನಿಜವಾದ ಮಾನವೀಯ ಯುಗದಲ್ಲಿ ಬದುಕುತ್ತಿರುವ ರಕ್ತ ಮಾಂಸಗಳ ಜೀವಂತ ವ್ಯಕ್ತಿಗಳಲ್ಲಿ ಉದ್ಭವಿಸಿದಾಗ’.
1971 ರಲ್ಲಿ ಪ್ರಕಟವಾದ ಮತ್ತು ಚಿತ್ತಾಲರಲ್ಲಿ ಒಂದು ರೋಮಾಂಚಕಾರಿ ಅನುಭವವಾಗಿ ಉಳಿದ ಶಿಕಾರಿ ಕಾದಂಬರಿಯಲ್ಲಿ ಮನುಷ್ಯ ಸಂಬಂಧಗಳ ವಿಶ್ಲೇಷಣೆಯಿದೆ. ‘ಶಿಕಾರಿ’ ಅಂದಿನ ದಿನಗಳಲ್ಲಿ ಮೈಯಲ್ಲಿ ಹೊಕ್ಕ ದೆವ್ವವಾಗಿತ್ತು ಎನ್ನುತ್ತಾರೆ ಚಿತ್ತಾಲರು ಕಾದಂಬರಿಯನ್ನು ಬರೆಯುವಾಗಿನ ತಮ್ಮ ಅನುಭವವನ್ನು ಕುರಿತು. ವಿಮರ್ಶಕ ಜಿ.ಎಸ್.ಆಮೂರ ಅವರು ಹೇಳುವಂತೆ ‘ಶಿಕಾರಿ ಕಾದಂಬರಿಯ ಕೇಂದ್ರ ಪ್ರತಿಮೆ ಬೇಟೆ. ಇಲ್ಲಿ ನಡೆಯುವ ಬೇಟೆ ಮನುಷ್ಯನಿಂದ ಪಶು ಪಕ್ಷಿಗಳ ಬೇಟೆಯಾಗಿರದೆ ಮನುಷ್ಯನಿಂದ ಮನುಷ್ಯನ ಬೇಟೆಯಾಗಿದೆ’. ಉತ್ತರ ಕನ್ನಡದ ಹನೇಹಳ್ಳಿಯ ನಾಗಪ್ಪ ‘ಶಿಕಾರಿ’ ಕಾದಂಬರಿಯ ಕಥಾನಾಯಕ. ಅಂತರ್ಮುಖಿ ಮತ್ತು ಭಾವಜೀವಿಯೂ ಆದ ನಾಗಪ್ಪ ನೌಕರಿಯಿಂದ ವಜಾಗೊಂಡ ಅವಧಿಯಲ್ಲಿ ಅನುಭವಿಸುವ ಒಟ್ಟು ಮಾನಸಿಕ ಕ್ಷೋಭೆ ಕಾದಂಬರಿಯ ಮುಖ್ಯ ವಸ್ತುವಾಗಿದೆ.
ಶಿಕಾರಿ ಕಾದಂಬರಿಯಲ್ಲಿ ಮನುಷ್ಯ ಪ್ರಜ್ಞೆಯೊಂದು ಹೇಗೆ ಪ್ರಜ್ಞಾಪೂರ್ವಕವಾಗಿ ಮೈದಾಳಿದೆ ಎನ್ನುವುದನ್ನು ಈ ಕೆಳಗಿನ ಸಾಲುಗಳು ಪುಷ್ಟೀಕರಿಸುತ್ತವೆ.
● ಈ ಮನುಷ್ಯನ ವ್ಯವಹಾರಿಕ ಜಗತ್ತಿನ ಅಸಹ್ಯವಾದ ಅಂದಗೇಡಿತನದಿಂದ ಮನಸ್ಸು ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲೆಂದು ಸೃಜನಶೀಲ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಆ ದೇವರೇ ಕೊಟ್ಟಿರಬೇಕು. ಸಭ್ಯತೆಯ ಮುಖವಾಡದ ಹಿಂದೆ ಎಂತಹ ಕ್ರೌರ್ಯದ ಹಲ್ಲು ಮಸೆತ ನೋಡಿ.
● ಮನುಷ್ಯ ಎಷ್ಟೇ ಪ್ರಾವೀಣ್ಯತೆ ಹೊಂದಿದವನಾಗಿದ್ದರೂ ಅವನೊಬ್ಬ ಭಾವನಾಜೀವಿ, ವ್ಯವಹಾರ ಜ್ಞಾನವಿಲ್ಲದವನು ಎನ್ನುವ ಅಭಿಪ್ರಾಯವೇ ಇಡೀ ವ್ಯವಸ್ಥೆ ಅವನನ್ನು ವ್ಯಂಗ್ಯವಾಗಿ ನೋಡಲು ಕಾರಣವಾಗಬಹುದು.
● ಪ್ರತಿಯೊಬ್ಬನನ್ನು ಅಪನಂಬಿಕೆಯಿಂದ ನೋಡುವುದೇ ಜಾಣತನವಾದರೆ ಬದುಕಿರಬೇಕು ಎನ್ನುವ ಅಭೀಪ್ಸೆಗೆ ಅರ್ಥವಾದರೂ ಏನು?
● ಏನಿರದಿದ್ದರೂ ಬದುಕಬಹುದೇನೋ ಆದರೆ ಪ್ರೀತಿಯಿಲ್ಲದೆ, ಗೆಳೆತನವಿಲ್ಲದೆ, ಮಾನವೀಯ ಅಂತ:ಕರಣವಿಲ್ಲದೆ, ಸಹಾನುಭೂತಿಯಿಲ್ಲದೆ ಬದುಕುವುದು ಸಾಧ್ಯವೇ ಇಲ್ಲವೇನೋ?
ಚಿತ್ತಾಲರ ಒಟ್ಟು ಬರವಣಿಗೆಯ ಪ್ರಧಾನ ಉದ್ದೇಶ ಮನುಷ್ಯ ಬದುಕಿನ ಹುಡುಕಾಟವಾಗಿದೆ. ಹನೇಹಳ್ಳಿಯಾಗರಲಿ ಅಥವಾ ಮುಂಬಯಿ ಮಹಾನಗರವಾಗಿರಲಿ ಅವರು ಸೃಷ್ಟಿಸುವ ಪಾತ್ರಗಳು ಆಯಾ ಪರಿಸರದ ಸಂಕೀರ್ಣ ಬದುಕಿನಲ್ಲಿ ಮನುಷ್ಯತ್ವದ ಹುಡುಕಾಟಕ್ಕೆ ತೊಡಗುತ್ತವೆ. ಸಾಹಿತ್ಯದ ಮೂಲಕವೇ ಮನುಷ್ಯ ಬದುಕಿನ ಹುಡುಕಾಟಕ್ಕೆ ಚಿತ್ತಾಲರು ಕೊಡುವ ಕಾರಣ ಹೀಗಿದೆ ‘ಒಬ್ಬ ಲೇಖಕನಾಗಿ ನನಗೆ ಆಸ್ಥೆಯಿದ್ದದ್ದು ಮನುಷ್ಯನನ್ನು ಅವನ ಮೂಲಕ ಬದುಕನ್ನು ಅರಿಯುವುದರಲ್ಲಿ. ಮನುಷ್ಯನನ್ನು ಅರಿಯುವುದಕ್ಕೆ ನಮಗೆ ಲಭ್ಯವಿದ್ದ ಮಾಧ್ಯಮಗಳಲ್ಲಿ ಸಾಹಿತ್ಯವೂ ಒಂದಾಗಿದೆ ಮಾತ್ರವಲ್ಲ ಇತರ ಮಾಧ್ಯಮಗಳಿಗೆ ಇಲ್ಲದ ಕೆಲವು ಶಕ್ತಿಗಳು ಸಾಹಿತ್ಯಕ್ಕೆ ಮಾತ್ರ ಇವೆ ಎನ್ನುವುದು ನನ್ನ ತಿಳುವಳಿಕೆಯಾಗಿದೆ, ಭರವಸೆಯಾಗಿದೆ’. ಹೀಗೆ ಮನುಷ್ಯ ಬದುಕಿನ ಹುಡುಕಾಟಕ್ಕೆ ತಮ್ಮ ಬರವಣಿಗೆಯನ್ನು ಸಶಕ್ತವಾಗಿ ದುಡಿಸಿಕೊಂಡ ಚಿತ್ತಾಲರು ಓದುಗರು ಸಾಹಿತ್ಯದ ಸೃಷ್ಟಿಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದನ್ನು ಬಯಸುತ್ತಾರೆ. ಏಕೆಂದರೆ ಸ್ಪಿನೋಝಾ ನೈತಿಕ ನಡವಳಿಕೆಯ ಬಗ್ಗೆ ಹೇಳಿದ ಮಾತನ್ನು ಆಧರಿಸಿ ಹೇಳುವುದಾದರೆ ನಾವು ಬದ್ಧರಾಗಬೇಕಾದದ್ದು ಮನುಷ್ಯರ ಹಾಗೆ ಬದುಕುವುದಕ್ಕೆ, ಪ್ರೀತಿಸುವುದಕ್ಕೆ ಮತ್ತು ಮನುಷ್ಯರಾಗುವುದಕ್ಕೆ. ಮನುಷ್ಯ ಸೃಜನಶೀಲನಾದರೆ ಆತ ಮನುಷ್ಯನಾದಂತೆಯೇ. ಏಕೆಂದರೆ ಸೃಜನಶೀಲನಾಗುವುದು, ಪ್ರೀತಿಸುವ ಸಾಮರ್ಥ್ಯವುಳ್ಳವನಾಗುವುದು, ಮನುಷ್ಯನಾಗುವುದು ಇವೆಲ್ಲವುಗಳ ಅರ್ಥ ಒಂದೇ. ಆದ್ದರಿಂದ ಸಾಹಿತ್ಯವನ್ನು ಮನುಷ್ಯತ್ವದ ಅನ್ವೇಷಣೆಗೆ ಉಪಯೋಗಿಸಿಕೊಂಡಲ್ಲಿ ಮನುಷ್ಯ ಪ್ರಜ್ಞೆಯನ್ನು ನಾವು ಪ್ರತಿಯೊಬ್ಬರಲ್ಲಿ ಕಾಣಲು ಸಾಧ್ಯವಾಗುವುದು ಎನ್ನುವ ಆಶಯ ಚಿತ್ತಾಲರದಾಗಿತ್ತು. ಈ ಸಾಧ್ಯತೆಯನ್ನು ಚಿತ್ತಾಲರ ಸಾಹಿತ್ಯದ ಕುರಿತಾದ ಇಲ್ಲಿನ ಹೇಳಿಕೆಯಲ್ಲಿ ಕಾಣಬಹುದು ‘ಮನುಷ್ಯನಿಗೆ ಮನುಷ್ಯತ್ವದ ಸಾಕ್ಷಾತ್ಕಾರವಾಗುವುದು ಕೆಲವೇ ಕೆಲವು ವಿರಳ ಕ್ಷಣಗಳಲ್ಲಿ ಮಾತ್ರ. ಅಂಥ ವಿರಳ ಕ್ಷಣಗಳಲ್ಲಿ ಸಾಹಿತ್ಯಕ್ಕೆ ಮುಖಾಮುಖಿಯಾಗುವ ಕ್ಷಣ ಕೂಡ ಒಂದು. ಆದ್ದರಿಂದ ಸಾಹಿತ್ಯದ ಪ್ರಭಾವಕ್ಕೆ ಒಳಗಾದ ವ್ಯಕ್ತಿ ಮುಕ್ತ ಮನಸ್ಸಿನ, ಜೀವಂತ ಸೃಷ್ಟಿಶೀಲ ವ್ಯಕ್ತಿ ಎನ್ನುವ ನಂಬಿಕೆ ನನ್ನದು’.
‘ಚಿತ್ತಾಲರ ಶಿಕಾರಿ ನಮ್ಮಲ್ಲಿ ತುಂಬುವ ಆತ್ಮವಿಶ್ವಾಸವನ್ನು, ಕಳ್ಳಗಿರಿಯಣ್ಣ ಕಥೆ ನಮಗೆ ತೋರಿಸುವ ಉಲ್ಲಾಸದ ಜಗತ್ತನ್ನು, ಪಯಣ ತೋರಿಸುವ ಸಾವನ್ನು, ಆಟ ಕತೆಯಲ್ಲಿ ಬರುವ ಬುಡಾಣ ಸಾಬರ ಉಲ್ಲಾಸವನ್ನು ಬೇರೆ ಯಾವ ಓದು ಕೂಡ ಕಟ್ಟಿಕೊಡಲಾರದು’ ಎಂದು ಲೇಖಕ ಜೋಗಿ ಚಿತ್ತಾಲರ ಒಟ್ಟು ಸಾಹಿತ್ಯವನ್ನು ಮನುಷ್ಯ ಪ್ರಜ್ಞೆಯ ಹಿನ್ನೆಲೆಯಲ್ಲಿ ತುಂಬ ಅರ್ಥಪೂರ್ಣವಾಗಿ ವಿವರಿಸುತ್ತಾರೆ. ಸಂಖ್ಯಾ ದೃಷ್ಟಿಯಿಂದ ಯಶವಂತ ಚಿತ್ತಾಲರ ಕೃತಿಗಳ ಸಂಕ್ಯೆ ತುಂಬ ಕಡಿಮೆ. ಆದರೆ ಗುಣಾತ್ಮಕವಾಗಿ ಚಿತ್ತಾಲರ ಕೃತಿಗಳಿಗೆ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಠ ಸ್ಥಾನವಿದೆ. ಚಿತ್ತಾಲರ ಒಟ್ಟು ಬರವಣಿಗೆಯ ಸಾರ್ಥಕತೆಯಿರುವುದು ಮನುಷ್ಯನನ್ನು ಮನುಷ್ಯನನ್ನಾಗಿ ರೂಪಿಸುವಲ್ಲಿ. ಅವರ ಕಥೆ, ಕಾದಂಬರಿಗಳ ಪಾತ್ರಗಳು ಮಾನವೀಯ ಪ್ರೀತಿ, ಅಂತ:ಕರಣವನ್ನು ಹುಡುಕುತ್ತ ಅಲೆಯುವುದು ಸಹಜವೆಂಬಂತೆ ಚಿತ್ರಿತವಾಗಿದೆ. ಚಿತ್ತಾಲರು ಸೃಷ್ಟಿಸಿದ ಕಥಾನಾಯಕ ಝೋಪಡಪಟ್ಟಿಗಳಲ್ಲಿ, ಹೂ ಮಾರುವ ಬಾಲಕಿಯಲ್ಲಿ, ರಸ್ತೆ ಬದಿಯಲ್ಲಿನ ನಿರ್ಗತಿಕರಲ್ಲಿ ಹೀಗೆ ತನಗೆ ಎದುರಾಗುವ ಪ್ರತಿಯೊಬ್ಬರಲ್ಲಿ ಮನುಷ್ಯ ಪ್ರೇಮಕ್ಕಾಗಿ ಹಂಬಲಿಸುತ್ತಾನೆ. ಚಿತ್ತಾಲರ ಕಥೆ, ಕಾದಂಬರಿಗಳ ನಾಯಕರು ವ್ಯವಹಾರಿಕ ಬದುಕಿನಲ್ಲಿ ಸೋಲನ್ನನುಭವಿಸಿದರೂ ವೈಯಕ್ತಿಕ ಬದುಕಿನಲ್ಲಿ ಗೆಲುವು ಸಾಧಿಸುವುದು ಆ ಮೂಲಕ ಮನುಷ್ಯ ಪ್ರಜ್ಞೆಯನ್ನು ಗೆಲ್ಲಿಸುವುದು ಅವರ ಒಟ್ಟು ಬರವಣಿಗೆಯ ಪ್ರಧಾನ ನೆಲೆಯಾಗಿದೆ. ಕಥೆಗಾರ ದಿವಾಕರ್ ಅವರು ಹೇಳುವಂತೆ ಚಿತ್ತಾಲರ ಕೃತಿಗಳಲ್ಲಿ ಜೀವಂತ ಮನುಷ್ಯನೊಬ್ಬನ ಬಗ್ಗೆ ಜೀವಂತ ಮನುಷ್ಯನೊಬ್ಬ ಕಿವಿಗೊಟ್ಟು ಕೇಳಿಸಿಕೊಳ್ಳಬೇಕಾದ ಜೀವನ ದರ್ಶನವಿದೆ.
No comments:
Post a Comment