Thursday, March 8, 2018

ಭೈರಪ್ಪನವರ ಕಾದಂಬರಿಗಳಲ್ಲಿ ನೈತಿಕ ಪ್ರಜ್ಞೆ




ಎಸ್. ಎಲ್. ಭೈರಪ್ಪ ಕನ್ನಡದ ಅನನ್ಯ ಬರಹಗಾರ. ಅವರು ತಮ್ಮ ಕಾದಂಬರಿಗಳ ಮೂಲಕ ಸಮಾಜಕ್ಕೆ ಅತ್ಯುತ್ತಮ ಸಂದೇಶವನ್ನು ನೀಡುತ್ತಲೇ ಬಂದಿರುವರು. ಓದುಗನಾಗಿ ನನಗೆ ಭೈರಪ್ಪನವರ ಕಾದಂಬರಿಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಮತದಾನ, ಗೃಹಭಂಗ, ದಾಟು, ಪರ್ವ, ಮಂದ್ರ, ಸಾಕ್ಷಿ, ಸಾರ್ಥ, ವಂಶವೃಕ್ಷ  ಮತ್ತು ಯಾನ ಕಾದಂಬರಿಗಳ ಹಾಗೂ ಅವರ  ಆತ್ಮಕಥನ 'ಭಿತ್ತಿ' ಯ ಓದು ನನ್ನ ಅರಿವಿನ ವ್ಯಾಪ್ತಿಯನ್ನು ಒಂದಿಷ್ಟು ವಿಸ್ತರಿಸುವಂತೆ ಮಾಡಿದೆ ಎನ್ನುವುದನ್ನು ನಾನು ಅತ್ಯಂತ ವಿನಮ್ರನಾಗಿ ಒಪ್ಪಿಕೊಳ್ಳುತ್ತೇನೆ. ಭೈರಪ್ಪನವರ ಕಾದಂಬರಿಗಳನ್ನು ಓದಿದ ಮೇಲೆ ಕಥೆಯ ವಸ್ತುವಾಗಿ ನೈತಿಕತೆಗೆ ಲೇಖಕರು ಹೆಚ್ಚು ಒತ್ತು ಕೊಟ್ಟಿದ್ದು ಅದು ಓದುಗರ ಅನುಭವಕ್ಕೆ ಬರುವ ಮುಖ್ಯ ಸಂಗತಿಗಳಲ್ಲೊಂದು. ವಿಶೇಷವಾಗಿ ಅವರ ಸಾಕ್ಷಿ, ಮಂದ್ರ ಮತ್ತು ಯಾನ ಕಾದಂಬರಿಗಳಲ್ಲಿ ಭೈರಪ್ಪನವರು ನೈತಿಕ ಬದುಕನ್ನು ಕುರಿತು ಹೆಚ್ಚು ಹೆಚ್ಚು ಪ್ರಾಸ್ತಾಪಿಸಿರುವರು ಎನ್ನುವುದು ಈ ಮೂರು ಕಾದಂಬರಿಗಳನ್ನು ಓದಿದಾಗ ನನ್ನ ಅನುಭವಕ್ಕೆ ಬಂದ ಸಂಗತಿ. ಅವರ ಸಾಕ್ಷಿ ಮತ್ತು ಮಂದ್ರ ಕಾದಂಬರಿಗಳಲ್ಲಿ ಮೊದಮೊದಲು ಅನೈತಿಕತೆ ವಿಜೃಂಭಿಸಿದರೂ ಅದು  ನೈತಿಕತೆಯೊಂದಿಗೆ ಘರ್ಷಣೆಗಿಳಿದು ಕೊನೆಗೂ ತನ್ನ ಸೋಲನ್ನೊಪ್ಪಿಕೊಳ್ಳುತ್ತದೆ. ಅವರ ಇತ್ತೀಚಿನ ಕಾದಂಬರಿ 'ಯಾನ' ದಲ್ಲಿ ಈ ನೆಲದ ಪಾರಂಪರಿಕ ಮೌಲ್ಯಗಳನ್ನು ಎತ್ತಿಹಿಡಿದಿರುವರು. 

ಸಾಕ್ಷಿ: ಸೌಂದರ್ಯ ಮತ್ತು ಸಂಸ್ಕಾರ 


        'ಎಂದಾದರೂ ಆತ್ಮಶೋಧ ಮಾಡಿಕೊಂಡಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇರಲಿಲ್ಲ. ಹೆಂಡತಿ ಸತ್ತ ಮೇಲೆ ಮನಸ್ಸನ್ನೆಲ್ಲ ಒಳಕ್ಕೆ ಅಂದರೆ ಒಳಗೆ ಇದೆ ಅಂತ ನೀವೆಲ್ಲ ಹೇಳ್ತಿರಲ್ಲ ಆ ಆತ್ಮದೊಳಕ್ಕೆ ತಿರುಗಿಸಿ ಬಿಟ್ಟರು. ಆಗ ಅವರಿಗೆ ಇನ್ನೂ ನಲವತ್ತು ವರ್ಷ. ನನ್ನ ಹಾಗೆ ಹೊಸ ಹೊಸ ಸುಖವನ್ನರಸುಕ್ಕೆ ನಾಚಿಕೆಯಾದರೆ ಹೋಗಲಿ ಇನ್ನೊಂದು ಮದುವೆಯಾದರೂ ಮಾಡಿಕೊಂಡಿದ್ದರೆ ಸದಾ ಒಳಗೆ ನೋಡಿಕೊಳ್ಳುವ ರೋಗ ತಪ್ಪುತ್ತಿತ್ತು. ಕಠಿಣ ಬ್ರಹ್ಮಚರ್ಯದ ಮೇಲೆ ಜೀವನ ನಿಲ್ಲಿಕೊಂಡಿರೋರಿಗೆ ಆತ್ಮಹತ್ಯೆ ಬಿಟ್ಟು ಬೇರೆ ಯಾವ ದಾರಿ ಇದೆ? ನಿಮಗೂ ಅಷ್ಟೇ ಹೆಂಡತಿ ಸತ್ತಾಗ ಕರಾರುವಾಕ್ಕ್ ಇಪ್ಪತ್ತೆಂಟುವರೆ ವರ್ಷ. ನಿಮ್ಮ ಗಾಂಧಿ ಹೇಳಿದ ಅಂತ ಬ್ರಹ್ಮಚರ್ಯಕ್ಕೆ ನಿಂತಿರಿ. ಮದುವೆ ಬೇಡ ಮೇಯುಕ್ಕೆ ಹೊರಟಿದ್ದರೆ ಎಷ್ಟು ಹುಲ್ಲು ಸಿಕ್ತಿತ್ತು? ಏನೂ ಮಾಡಲಿಲ್ಲ. ಸಾಧಿಸಿದ್ದಾದರೂ ಏನು? ಸ್ವಾರ್ಥ. ಮಗನನ್ನು ಬೆಳೆಸಿ ಮದುವೆ ಮಾಡಿ ಎಲ್ಲವನ್ನೂ ಅವನಿಗೊಪ್ಪಿಸಿ ಅವನ ಮನೆಯ ಸಂಬಳವಿಲ್ಲದ ಆಳಾಗಿದೀರಿ. ಹೆಂಗಸಿನ ಸವಾಸ ಮಾಡಿದ್ದರೂ ಆ ಕೆಲಸ ಮಾಡಭೌದಾಗಿತ್ತು. ವೃತವೂ ಇಲ್ಲ ಸುಖವೂ ಇಲ್ಲ. ನಾನು ಹೇಳ್ತೀನಿ ಕೇಳಿ ಯಾವನು ಸಮೃದ್ಧವಾಗಿ ಈ ಸುಖ ಪಡ್ತಾನೆಯೋ ಅವನಲ್ಲಿ ಔದಾರ್ಯವಿರುತ್ತೆ. ಬ್ರಹ್ಮಚರ್ಯ ಪಾಲಿಸೋನಲ್ಲಿ ಕಾಠಿಣ್ಯವಿರುತ್ತೆ. ನಿಮಗೆ ಯಾವತ್ತು ಆಶೆಯಾಗುತ್ತೋ ನನ್ನ ಹುಡಿಕ್ಕಂಡು ಬನ್ನಿ. ನೋಡಿದ ತಕ್ಷಣ ನಿಮಗೇ ಇಪ್ಪತ್ತೆರಡರ ಪ್ರಾಯ ಮರುಕಳಿಸುವ ಮರುಮಾತಿಲ್ಲದೆ ಪರಮಶ್ರದ್ಧೆಯಿಂದ ನೈವೇದ್ಯ ಮಾಡಿಕೊಳ್ಳುವಂಥವಳನ್ನು ಕೊಡಿಸುತಿನಿ' ಸಾಕ್ಷಿ ಕಾದಂಬರಿಯ ಮಂಜಯ್ಯನ ಒಟ್ಟು ವ್ಯಕ್ತಿತ್ವವನ್ನು ಹಿಡಿದಿಡುವ ಸಾಲುಗಳಿವು. ಎತ್ತರದ ನಿಲುವಿನ, ಕೆಂಪು ಮಿಶ್ರಿತ ಬಿಳುಪು ಬಣ್ಣದ, ದೃಢಕಾಯದ ಲಕ್ಷಣವಂತ ಮಂಜಯ್ಯನದು ಜೀವನವಿರುವುದೇ ಸುಖ ಪಡಲು ಎನ್ನುವ ಮನೋಭಾವ. ಪ್ರಾಯ ಅರಳುವ ಹೊತ್ತಿನಲ್ಲೇ ಪರಮೇಶ್ವರಯ್ಯನವರಂಥ ಸಾತ್ವಿಕ ವ್ಯಕ್ತಿಯ ಐದು ಹೆತ್ತು ಮೂರನ್ನು ಉಳಿಸಿಕೊಂಡಿರುವ ಮೂವತ್ತೈದು ವರ್ಷದ ಪತ್ನಿ ಜಾನಕಿಯೊಂದಿಗೆ ಕಾಮ ಸಂಬಂಧವನ್ನು ಬೆಳೆಸುವ ಮಂಜಯ್ಯ ಮುಂದೊಂದುದಿನ ಅದೇ ಜಾನಕಿಯ ಮಗಳು ಸಾವಿತ್ರಿಯನ್ನು ಮದುವೆಯಾಗುತ್ತಾನೆ. ಪ್ರಾಯದ ಸೌಂದರ್ಯವತಿಯಾದ ಪತ್ನಿಯಿದ್ದೂ ಮಂಜಯ್ಯನಿಗೆ ಹೊರಗೆ ಮೇಯುವ ಖಯಾಲಿ. ಅವನ ಈ ಖಯಾಲಿಗೆ ಊರಿನ ಅನೇಕ ಹೆಣ್ಣು ಮಕ್ಕಳು ಬಲಿಯಾಗುತ್ತಾರೆ. ತೋಟದ ಮಧ್ಯದಲ್ಲಿರುವ ಗುಡಿಸಿಲಿನಲ್ಲಿ ನಾಗಿ, ಚಂದ್ರಿ, ರಂಗಿಯರಂಥ ನೂರಾರು ಹೆಣ್ಣುಗಳೊಂದಿಗೆ ಸುಖವನ್ನನುಭವಿಸುವ ಮಂಜಯ್ಯನಿಗೆ ತಾನಾಗಿಯೇ ಒಲಿಯದ ಸರೋಜಳಂಥ ಹೆಣ್ಣಿನ ಮೇಲೂ ಆಸೆ. ಗಂಡನ ಈ ದುರ್ಬುದ್ಧಿಯ ಅರಿವಾಗಿ ಸಾವಿತ್ರಿ ಮಂಜಯ್ಯನಿಂದ ದೂರಾಗುತ್ತಾಳೆ. ದಾಂಪತ್ಯವೆಂದರೆ ಅದು ಹೆಂಡತಿಯೊಂದಿಗೆ ಮಲಗುವುದು ಮಾತ್ರ ಎಂದು ನಿಶ್ಚಯಿಸಿದ್ದ ಮಂಜಯ್ಯ ಮುರಿದು ಹೋದ ಸಂಬಂಧವನ್ನು ಮತ್ತೆ ಬೆಸೆಯಲು ಮುಂದಾಗುವುದಿಲ್ಲ.

       ಈ ನಡುವೆ  ಕಂಡವರ ತೋಟಕ್ಕೆ ನುಗ್ಗಿ ತೆಂಗಿನ ಕಾಯಿ ಕದಿಯುವ ಕಳ್ಳ ಕಂಚಿಯ ಪತ್ನಿ ಲಕ್ಕುವಿನ ಮೇಲೆ ಮಂಜಯ್ಯನಿಗೆ ಮನಸಾಗುತ್ತದೆ. ಹೇಗಾದರೂ ಅವಳನ್ನು ಕೂಡಬೇಕೆಂಬ ಆಸೆಯಿಂದ ಕಂಚಿಯನ್ನು ತನ್ನ ತೋಟಕ್ಕೆ ಕದಿಯಲು ಬರುವಂತೆ ಪುಸುಲಾಯಿಸುತ್ತಾನೆ. ಅದೊಂದು ರಾತ್ರಿ ತೋಟಕ್ಕೆ ಕಾಲಿಡುವ ಕಂಚಿಯನ್ನು ಮಂಜಯ್ಯ ಹೊಂಚುಹಾಕಿ ಕೊಲೆ ಮಾಡುತ್ತಾನೆ. ಅದು ಕೊಲೆಯಲ್ಲ ಕಂಚಿ ಮರದಿಂದ ಬಿದ್ದು ಸತ್ತನೆಂಬ ಸುಳ್ಳನ್ನು ಅವನ ಹೆಂಡತಿ ಲಕ್ಕುವನ್ನು ನಂಬಿಸುವಲ್ಲಿ ಯಶಸ್ವಿಯಾಗುವ ಮಂಜಯ್ಯನಿಗೆ ಲಕ್ಕು ತನ್ನನ್ನೇ ಸಮರ್ಪಿಸಿಕೊಳ್ಳುತ್ತಾಳೆ. ಮಂಜಯ್ಯನಿಂದ ತಾಳಿ ಕಟ್ಟಿಸಿಕೊಂಡು ಹೊಸ ಬದುಕಿಗೆ ಕಾಲಿಡಬೇಕೆನ್ನುವ ಲಕ್ಕುವಿನ ಆಸೆ ಕೊನೆಗೂ ಆಸೆಯಾಗಿಯೇ ಉಳಿಯುತ್ತದೆ. ತೊರೆದು ಹೋದ ಪತ್ನಿಯನ್ನು ಎಷ್ಟೋ ವರ್ಷಗಳ ನಂತರ ಅವಳ  ಮನೆಗೆ ನುಗ್ಗಿ ಅತ್ಯಾಚಾರ ಮಾಡುವ ಮಂಜಯ್ಯನಿಗೆ ಹೆಣ್ಣೆಂದರೆ ಭೋಗದ ವಸ್ತು. ಲಕ್ಕುವಿನ ಮಗಳು ಲತಾಳನ್ನು ಅನುಭವಿಸಿ ಅವಳ ಹೊಟ್ಟೆ ತುಂಬಿಸುವ ಮಂಜಯ್ಯ ತನ್ನ ದುರಂತಕ್ಕೆ ತಾನೇ ನಾಂದಿ ಹಾಡುತ್ತಾನೆ. ಮಗಳು ಲತಾ ಮಂಜಯ್ಯನಿಂದ ಬಸಿರಾದ ಸುದ್ದಿ ತಿಳಿದು ಲಕ್ಕು ಕಂಗಾಲಾಗುತ್ತಾಳೆ. ಮಂಜಯ್ಯನಂಥ ಕ್ರಿಮಿಯಿಂದ ಸಮಾಜಕ್ಕೆ ಕೇಡು ಎಂದರಿತ ಲಕ್ಕು ಅವನ ತೋಟದ ಮನೆಗೆ ನುಗ್ಗಿ ಕಾಮಕೇಳಿಗೆ ಆಹ್ವಾನಿಸಿ ಅವನ ಜನನಾಂಗವನ್ನೇ ಕೊಯ್ದು ಪೋಲೀಸರಿಗೆ ಶರಣಾಗುತ್ತಾಳೆ. ಪೋಲೀಸರು ಬಂದು ನೋಡುವಷ್ಟರಲ್ಲಿ ಕೊಯ್ದ ಜಾಗದಿಂದ ರಕ್ತ ಸುರಿದು ಮಂಜಯ್ಯ ಹೆಣವಾಗಿರುತ್ತಾನೆ.

       ಹೆಣ್ಣುಗಳನ್ನು ಅನುಭವಿಸಿ ಬೀಸಾಕುವ ಮಂಜಯ್ಯನೊಳಗಿನ ಅನೈತಿಕತೆಗೆ ಪ್ರಾರಂಭದಲ್ಲಿ ಗೆಲುವು ದೊರೆತರೂ ಅವನ ಸಾವಿನೊಂದಿಗೆ ಕೊನೆಗೂ ನೈತಿಕತೆ ಮೇಲುಗೈ ಸಾಧಿಸುತ್ತದೆ. ಮಂಜಯ್ಯನ ಅನೈತಿಕತೆಯಲ್ಲಿ ಪಾಲುದಾರರಾದ ಜಾನಕಿ, ಲಕ್ಕು, ಲತಾರ ಬದುಕು ಸಹ ದುರಂತದಲ್ಲಿ ಕೊನೆಗೊಳ್ಳುತ್ತದೆ. ಉಚ್ಚ ಕುಲದ ಹಿನ್ನೆಲೆ, ಆಕರ್ಷಿಸುವ ರೂಪ, ಶ್ರೀಮಂತಿಕೆ, ಜಾಣತನ ಇದ್ದೂ ಅವನೊಳಗಿನ ಲಂಪಟತನದಿಂದ ಮಂಜಯ್ಯನ ಬದುಕು ದುರಂತದಲ್ಲಿ ಅಂತ್ಯಗೊಳ್ಳುತ್ತದೆ. ತನ್ನ ಲಂಪಟ ಗುಣವನ್ನು ಸಂಬಂಧದಲ್ಲಿ ಅಣ್ಣನಾಗುವ ಸತ್ಯಪ್ಪನಿಗೂ ಕಲಿಸಲು ಹೋಗುವ ಮಂಜಯ್ಯ ಒಂದು ಹಂತದಲ್ಲಿ ಗೆದ್ದೆನೆಂದು ಸಂಭ್ರಮಿಸಿದರೂ ಕೊನೆಗೂ ಸೋಲುತ್ತಾನೆ. ಸತ್ಯಪ್ಪನ ಪಾತ್ರದ ಮೂಲಕ ಲೇಖಕರು ನೈತಿಕತೆಯನ್ನು ಅನೈತಿಕತೆಯೊಂದಿಗೆ ಘರ್ಷಣೆಗಿಳಿಸುತ್ತಾರೆ.

      ಪ್ರಾಯದಲ್ಲಿ ಹೆಂಡತಿಯನ್ನು ಕಳೆದುಕೊಂಡು ಇದ್ದೊಬ್ಬ ಮಗನಿಗಾಗಿ ಬದುಕುತ್ತಿರುವ ಸತ್ಯಪ್ಪನದು ಬ್ರಹ್ಮಚರ್ಯದ ಬದುಕು. ಜೊತೆಗೆ ಗಾಂಧೀಜಿಯ ಅನುಯಾಯಿ ಆತ. ಸತ್ಯ, ಪ್ರಾಮಾಣಿಕತೆಯನ್ನೇ ಬದುಕಿನ ಬಹುಮುಖ್ಯ ಧ್ಯೇಯವಾಗಿಸಿಕೊಂಡು ಬದುಕುತ್ತಿರುವ ಸತ್ಯಪ್ಪನಿಗೆ ಡ್ರಾಮಾ ಆರ್ಟಿಸ್ಟ್ ಚಂದ್ರಿಕಾಳನ್ನು ಅನುಭವಿಸುವಂತೆ ಮಂಜಯ್ಯ ಪುಸುಲಾಯಿಸುತ್ತಾನೆ. ಮಂಜಯ್ಯನ ಆಹ್ವಾನವನ್ನು ನಿರಾಕರಿಸುವ ಸತ್ಯಪ್ಪನಿಗೆ ಊರಿಗೆ ಮರಳಿದ ಮೇಲೆ ಚಂದ್ರಿಕಾಳ ನೆನಪು ಕಾಡತೊಡಗುತ್ತದೆ. ಬಯಕೆ ಉತ್ಕಟವಾದಂತೆ ಮಂಜಯ್ಯನನ್ನು ಹುಡುಕಿಕೊಂಡು ಹೋಗುವ ಸತ್ಯಪ್ಪ ಅವನ ತೋಟದ ಮನೆಯಲ್ಲಿ ನಾಗಿಯನ್ನು ಕೂಡುತ್ತಾನೆ. ಯಾವ ಸುಖಕ್ಕಾಗಿ ಆತ ಮೂರು ತಿಂಗಳುಗಳಿಂದ ಹಂಬಲಿಸುತ್ತಿದ್ದನೋ ಯಾವ  ಹೆಣ್ಣಿನ ನಗ್ನ ಶರೀರ ಕಣ್ಣೆದುರು ಬಂದು ನಿಂತು ಕಾಡುತ್ತಿತ್ತೋ ಅದನ್ನು ಕಂಡು ಅನುಭವಿಸಿದ ಕ್ಷಣ ಸತ್ಯಪ್ಪನಿಗೆ ಸಂಪೂರ್ಣ ಶೂನ್ಯ ಕವಿದಂತಾಗುತ್ತದೆ. ಹುಚ್ಚಿನ ಮೂಲ ಕಳೆದು ನಿರ್ವೇದ ಸ್ಥಿತಿಯನ್ನು ಮುಟ್ಟಿದ ಭಾವ ಕವಿಯುತ್ತದೆ. ನಾಚಿಕೆಯಾಗಿ ಆ ಕ್ಷಣವೇ ಅಲ್ಲಿಂದ ಹೊರನಡೆಯುತ್ತಾನೆ. ತಾನು ಮಾಡಿದ್ದು ಹೀನ ಕೆಲಸ ಎಂದೆನಿಸಿ ನೇಣು ಹಾಕಿಕೊಳ್ಳಲು ನಿಶ್ಚಯಿಸುತ್ತಾನೆ. ಸಾವಿನ ಅಂಚನ್ನು ಮುಟ್ಟಿ ಹೊರಬರುವ ಸತ್ಯಪ್ಪ ಸಾವಿತ್ರಿಗೆ ನಡೆದದ್ದೆಲ್ಲವನ್ನು ಹೇಳಿ ಮನಸ್ಸನ್ನು ಹಗುರಾಗಿಸಿಕೊಳ್ಳುವನು. ಊರಿಗೆ ಮರಳುವ ಸತ್ಯಪ್ಪ ಭೂಮಿ ಇಲ್ಲದ ಕುಟುಂಬಗಳಿಗೆ ಆಸರೆಯಾಗುವ ಜೊತೆಗೆ ಮಂಜಯ್ಯನಿಂದ ಮೋಸ ಹೋದ ಸಾವಿತ್ರಿಯ ಬಾಳಿಗೂ ಬೆಳಕಾಗುವನು. ಮಂಜಯ್ಯನ ಮಾತುಗಳಿಂದ ಪ್ರೇರಿತನಾಗಿ ಸತ್ಯಪ್ಪ ಎಡವಿದರೂ ಅವನೊಳಗಿನ ಸಂಸ್ಕಾರ ಅವನನ್ನು ಎಚ್ಚರಿಸಿ ಆತ್ಮಾವಲೋಕನಕ್ಕೆ ಇಳಿಸುತ್ತದೆ. ಗಾಂಧಿ ಚಳುವಳಿ, ಗುರುಕುಲದಲ್ಲಿನ ವ್ಯಾಸಂಗ, ಗಾಂಧಿ ಪುಸ್ತಕಗಳ ಓದು, ಸಾಬರಮತಿ ಆಶ್ರಮದ ಭೇಟಿ, ಗ್ರಾಮೋದ್ಧಾರದ ಕನಸು ಈ ಎಲ್ಲ ಹಿನ್ನೆಲೆ ಸತ್ಯಪ್ಪನನ್ನು ಸಂಸ್ಕಾರವಂತನನ್ನಾಗಿಸಿ ನೈತಿಕತೆ ಮತ್ತು ಅನೈತಿಕತೆಯ ನಡುವಣ ವ್ಯತ್ಯಾಸದ ಅರಿವು ಮೂಡಿಸುತ್ತದೆ. ಶುದ್ಧ ಸಂಸ್ಕಾರದ ಹಿನ್ನೆಲೆ ಇಲ್ಲದ ಮಂಜಯ್ಯನಿಗೆ ತನ್ನ ಲಂಪಟತನವೇ ಸರಿ ಎನಿಸಿ ಅನೈತಿಕತೆ ಎನ್ನುವ ಪಾಪಕೂಪದೊಳಗೆ ಅವನ ಬದುಕು ಮುಳುಗುತ್ತದೆ. ಮಂಜಯ್ಯನ ಪಾತ್ರದ ಮೂಲಕ ಅನೈತಿಕತೆ ಅವಸಾನಗೊಂಡರೆ ಸತ್ಯಪ್ಪನ ಮೂಲಕ ನೈತಿಕತೆ ಗೆಲುವು ಸಾಧಿಸುತ್ತದೆ.

ಮಂದ್ರ: ಪಾಂಡಿತ್ಯ ಮತ್ತು ಸಂಸ್ಕಾರ 


 'ನನ್ನಲಿರುದನ್ನೆಲ್ಲ ನಿರ್ವಂಚನೆಯಿಂದ ಕೊಡ್ತಿದಿನಲ್ಲವೆ ನಾನು?'
 'ಸತ್ಯವಾಗಿಯೂ ಗುರೂಜಿ'
'ಹಾಗಾದರೆ ನೀನೂ ನಿನ್ನಲ್ಲಿರೂದ ನಿರ್ವಂಚನೆಯಿಂದ ಗುರೂಗೆ ಅರ್ಪಿಸಬೇಕು ತಾನೆ?'
'ಏನು ಬೇಕು ಕೇಳಿ ಅರ್ಪಿಸ್ತಿನಿ' ಎಂದು ಉತ್ಸಾಹದಿಂದ ಆಡಿದ ಮೇಲೆ ಅವರ ಮಾತಿನ ಅರ್ಥ  ಹೊಳೆದು ಸಿಕ್ಕಿ     ಹಾಕಿಕೊಂಡೆ   ಎಂಬ ಅರಿವಾಯಿತು.

ಅವರ ಮುಖದಲ್ಲಿ ಗೆಲುವು ಅರಳಿತು. ಕಣ್ಣುಗಳಲ್ಲಿ ಜಿನುಗುತ್ತಿದ್ದ  ಕಾಮನೆಯು ನನಗೆ ಕಾಣಿಸಿತು. ಅವರು ಮಾತನಾಡಿದರು 'ಸ್ಪಷ್ಟವಾಗಿ ತಿಳಕೋ ನಂದೇನೂ ಬಲವಂತವಿಲ್ಲ ನೀನು ಅನುಕೂಲಸ್ಥ ಮನೆಯೊಳು. ನಮ್ಮ ಹುಡುಗಿನ ಇವನು ಕೆಡಸಿದ ಅಂತ ನಾಳೆ ತಕರಾರು ಮಾಡಬಾರದು. ಇದು ನನಗೆ ನಿನಗೆ ಇಬ್ಬರಿಗೆ ಮಾತ್ರ ಗೊತ್ತಿರುವ ಗೊತ್ತಿರಬೇಕಾದ ವಿಷಯ. ನಾನು ನಿರ್ವಂಚನೆಯಿಂದ ನಿನಗೆ ಅರ್ಪಿಸುತ್ತಿರೂ ಹಾಗೆ ನೀನು ನಿನ್ನಲ್ಲಿರೂದ ಅರ್ಪಿಸಿದರೆ ನನಗೆ ಇನ್ನೂ ಉತ್ಸಾಹದಿಂದ ಹೇಳಿಕೊಡುವ ಮನಸ್ಸಾಗುತ್ತೆ. ಇದು ಯಾರಿಗೂ ತಿಳಿಯುಲ್ಲ. ಬೆಳಗ್ಗೆ ಹತ್ತು ಗಂಟೆ ಕಳೆದು ಬಿಟ್ಟರೆ ಸಂಜೆ ನಾಲ್ಕರವರೆಗೆ ಇಲ್ಲಿಗೆ ಯಾರೂ ಬರಲ್ಲ. ಬಂದರೂ ನೀನು ಒಳಗಿನ ಕೋಣೆಯಲ್ಲಿದ್ದರೆ ಯಾರಿಗೂ ಗೊತ್ತಾಗುಲ್ಲ. ಬಸರಿ ಗಿಸರಿ ಆಗುವ ಭಯವಿಲ್ಲ'.

  ಮದುವೆಯಾದರೆ ಸಂಗೀತ ಸತ್ತಂತೆಯೇ ಎಂದು ಭಾವಿಸಿ  ಜೀವನವೆಲ್ಲ ಸಂಗೀತ ಸಾಧನೆಗೆ ಮೀಸಲಾಗಿಡಬೇಕೆಂದು ಸಂಗೀತದ  ಮೇಲಿನ ಉತ್ಕಟ ಪ್ರೀತಿಯಿಂದ ಕಲಿಯಲು ಬಂದ ಮಧುಮಿತಾಳನ್ನು ಸಂಗೀತ ಪ್ರಪಂಚದ ಮೇರು ಚಕ್ರವರ್ತಿ ಎಂದೇ ಖ್ಯಾತನಾದ ಮೋಹನ ಲಾಲ ಆಕೆಯನ್ನು ತನಗೆ ಸಮರ್ಪಿಸಿ ಕೊಳ್ಳುವಂತೆ ಕೇಳುತ್ತಾನೆ. ಮೋಹನ ಲಾಲನ ಮಾತು ಮತ್ತು ಬಯಕೆ ಮುಧುಮಿತಾಳಲ್ಲಿ ಅಸಹ್ಯ ಹುಟ್ಟಿಸಿದರೂ ಬದುಕನ್ನೇ ಸಂಗೀತಕ್ಕೆ ಧಾರೆ ಎರೆಯಬೇಕೆಂದು ಹೊರಟವಳಿಗೆ ಅವನ ಷರತ್ತನ್ನು ಒಪ್ಪಿಕೊಳ್ಳದೆ ಬೇರೆ ದಾರಿ ಇಲ್ಲ. ಮೋಹನಲಾಲನೊಂದಿಗೆ ತನ್ನದು ಗಂಧರ್ವ ವಿವಾಹ ಎಂದೇ ಭಾವಿಸುವ ಮಧುಮಿತಾಳ ಸಂಗೀತ ಕಲಿಕೆ ಶುರುವಾಗುತ್ತದೆ.

    ಕಡು ಬಡತನದಲ್ಲಿ ಹುಟ್ಟಿ ಬೆಳೆದ ಮೋಹನಲಾಲನಿಗೆ ಸಂಗೀತ ಅತ್ಯಂತ ಶ್ರಮದಿಂದ ಒಲಿದ ವಿದ್ಯೆ. ಅವರಿವರ ಮನೆಯಲ್ಲಿ ಕಸಮುಸುರೆ ಮಾಡಿ ತೊಳೆಯುವ ಪಾತ್ರೆಯಲ್ಲಿ ಬಿಟ್ಟಿದ್ದ ಅನ್ನ ಪಲ್ಯೆಗಳನ್ನು ಬಳಿದು ತಂದು ಹತ್ತು  ವರ್ಷದ  ಮಗನ ಹೊಟ್ಟೆಗೆ ಹಾಕುವ ತಾಯಿ. ಚಿಕ್ಕಂದಿನಿಂದಲೇ  ಒಲಿದು ಬಂದ ಸಂಗೀತಾಸಕ್ತಿ ಹುಡುಗನಿಗೆ ದುಡ್ಡು ಗಳಿಸುವ ಕಸುಬು. ಸಂಗಿತದಲ್ಲೇ ಕೃಷಿ ಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಗುರುಗಳನ್ನು ಹುಡುಕಿಕೊಂಡು ಊರೂರು ಅಲೆಯುವಂತೆ ಮಾಡುತ್ತದೆ. ಕೊನೆಗೂ ಆಶ್ರಯ ಸಿಕ್ಕು ಗುರು ತನ್ನದೆಲ್ಲವನ್ನೂ ಧಾರೆ ಎರೆಯುವ ವೇಳೆಗೆ ಮೋಹನಲಾಲನದು ಪ್ರಾಯದ ವಯಸ್ಸು. ಕಾಮದ ಬಯಕೆ ಉತ್ಕಟವಾದಾಗ ದಿನನಿತ್ಯ ಊಟ ತಂದು ಕೊಡುವ ಚುನ್ನಿ ಮೋಹನಲಾಲನ ಸುಡುವ ದೇಹಕ್ಕೆ ತಂಪನೆರೆಯುತ್ತಾಳೆ. ಚುನ್ನಿಯನ್ನು ಬಸಿರಾಗಿಸಿ ಊರು ಬಿಡುವ ಮೋಹನಲಾಲ ತಾನು ಕಲಿತ ಸಂಗೀತ ವಿದ್ಯೆಯಿಂದ ಹಣ ಮತ್ತು ಖ್ಯಾತಿಯನ್ನು ಗಳಿಸುತ್ತಾನೆ. ಹಣ ಮತ್ತು ಜನಪ್ರಿಯತೆಯ ನಶೆ ಮೋಹನಲಾಲನ ಬದುಕಿನ ದಿಕ್ಕನ್ನೇ ಬದಲಿಸಿ ಅವನನ್ನು ನೈತಿಕ ಅಧ:ಪತನಕ್ಕೆ ತಳ್ಳುತ್ತದೆ. ತನ್ನೊಳಗಿನ ವಿದ್ವತ್ತಿನಿಂದ ತನ್ನ ಪರಿಚಯದ ವ್ಯಾಪ್ತಿಗೆ ಬರುವ ಅನೇಕ ಹೆಣ್ಣುಗಳನ್ನು ಆತ ಅನುಭವಿಸುತ್ತಾನೆ. ಸಂಗೀತದೊಳಗಿನ ತನ್ನ ಏಕಾಗ್ರತೆಗೆ ಹೆಣ್ಣುಗಳೊಂದಿಗಿನ ಅಂಥದ್ದೊಂದು ಅನುಭೂತಿಯೇ ಕಾರಣ ಎಂದು ಭಾವಿಸುವ ಮೋಹನಲಾಲ ಭೂಪಾಲಿ, ಲಾರೆನ್, ಮನೋಹರಿದಾಸ, ಗಾನೇವಾಲಿ, ಚಂಪಾಳನ್ನು ಅನುಭವಿಸುತ್ತಾನೆ. ಹೆತ್ತ ಮಗಳೇ ಪ್ರಾಯದವಳಾಗಿ ಎದುರು ಬಂದು ನಿಂತಾಗ ಮೋಹನಲಾಲನ ಕಣ್ಣುಗಳು ಅವಳ ಶರೀರವನ್ನೇ ತಡಕಾಡುತ್ತವೆ.

    ಇನ್ನೊಂದೆಡೆ  ಸಂಗೀತವನ್ನು ಮಾರುಕಟ್ಟೆಯ ಸರಕಾಗಿಸುವ ಮೋಹನಲಾಲ ತಾನು ಕಲಿತ ವಿದ್ಯೆಯನ್ನು ನರ್ತನದ ಗಾಯನಕ್ಕಿಳಿಸುತ್ತಾನೆ. ಮನೋಹರಿದಾಸಳಿಂದ ಅವಮಾನಿತನಾಗಿ ಹೊರದಬ್ಬಿಸಿಕೊಳ್ಳುವ ಆತ ಹಣಗಳಿಕೆಗಾಗಿ ತನ್ನ ವಿದ್ಯೆಯನ್ನೇ ಬಿಕರಿಗಿಡುತ್ತಾನೆ. ಆರು ವರ್ಷಗಳ ಕಾಲ ತನ್ನನ್ನು ಸಮರ್ಪಿಸಿಕೊಂಡ ಮಧುಮಿತಾಳಿಗೆ ಸಂಗೀತ ವಿದ್ಯೆಯನ್ನು ಧಾರೆ ಎರೆದು ಅವಳ ಮದುವೆಯ ನಂತರವೂ ದೇಹ ಸುಖಕ್ಕಾಗಿ ಹಪಹಪಿಸುವ ಮೋಹನಲಾಲನಲ್ಲಿ ಕಿಂಚಿತ್ ನೈತಿಕ ಪ್ರಜ್ಞೆಯೂ ಇಲ್ಲ. ಒಂದು ಕಾಲದಲ್ಲಿ ಸಂಗೀತಕ್ಕಾಗಿ ತನ್ನನ್ನೇ ಸಮರ್ಪಿಸಿಕೊಂಡ ಶಿಷ್ಯೆ ಮದುವೆಯಾದ ಗಂಡನಿಂದ ದೂರಾದಾಗ ಮೋಹನಲಾಲ ಅವಳನ್ನು ಹುಡುಕಿಕೊಂಡು ಹೋಗಿ ತನ್ನ ಸಂಗೀತ ಪರಂಪರೆಯ ವಾರಸುದಾರಳಾಗುವಂತೆ ಕೇಳಿ ಕೊಳ್ಳುತ್ತಾನೆ. ಆ ವೇಳೆಗೆ ಮೋಹನಲಾಲನ ಅಸಹ್ಯ ವ್ಯಕ್ತಿತ್ವದ ಪ್ರಭಾವಳಿಯಿಂದ ಹೊರಬರಲು ಯತ್ನಿಸುತ್ತಿದ್ದ ಮಧುಮಿತಾ ಅವನ ಆಹ್ವಾನವನ್ನು ತಿರಸ್ಕರಿಸುತ್ತಾಳೆ. ಮಧುಮಿತಾಳ   ತಿರಸ್ಕಾರ ಮೋಹನಲಾಲನ  ಅಹಂಕಾರಕ್ಕೆ ದೊಡ್ಡ ಪೆಟ್ಟು ಕೊಡುತ್ತದೆ. ಸಂಗೀತ ಕಾರ್ಯಕ್ರಮದ ವೇದಿಕೆಯಲ್ಲೇ ತಾನು ಕಲಿತ ವಿದ್ಯೆ ಅವನಿಗೆ ಕೈಕೊಡುತ್ತದೆ. ಐವತ್ತು ವರ್ಷಗಳಿಂದ ಹಾಡಿ ಮುಷ್ಟಿಗತವಾಗಿದ್ದ ರಾಗ ಭಾವ ಉದಿಸುತ್ತದೆಂಬ ಖಾತರಿ ಇಲ್ಲವಾಗುತ್ತದೆ. ಅದ್ಭುತವಾಗಿ ಹಾಡಬೇಕೆಂದು ಮಾಡಿಕೊಂಡಿದ್ದ ಸಂಕಲ್ಪ ಸೋಲತೊಡಗುತ್ತದೆ. 'ಇಲ್ಲ ನಾನು ಹಾಡೂದಿಲ್ಲ' ಎನ್ನುತ್ತ ವೇದಿಕೆಯಿಂದ ನಿರ್ಗಮಿಸುವುದರೊಂದಿಗೆ ಸಂಗೀತ ಲೋಕದಲ್ಲಿ ಮೋಹನಲಾಲನ ಪತನದ ಘಳಿಗೆ ಶುರುವಾಗುತ್ತದೆ. ಅದೇ ದಿನ ಶುದ್ಧ ಕಲ್ಯಾಣ ರಾಗದಲ್ಲಿ ಭಾವ ಉದಿಸುವ ಮಧುಮಿತಾ ದೊಡ್ಡ ಗಾಯಕಿಯಾಗಿ ಬೆಳೆಯುವ ಭರವಸೆ ಮೂಡಿಸುತ್ತಾಳೆ. ಅನೈತಿಕತೆ ಪತನಗೊಂಡು ನೈತಿಕತೆ ಕೊನೆಗೂ ಗೆಲುವು ಸಾಧಿಸುತ್ತದೆ.

    ಮೋಹನಲಾಲ ಮತ್ತು ಮಧುಮಿತಾ ಇಬ್ಬರೂ ತಪ್ಪು ದಾರಿಯ ಪಯಣಿಗರಾದರೂ ಮೋಹನಲಾಲನ ವ್ಯಕ್ತಿತ್ವ ಅನೈತಿಕತೆಯ ಪ್ರತೀಕವಾದರೆ ಮಧುಮಿತಾಳದು ನೈತಿಕತೆಯ ಪ್ರತೀಕವಾಗಿ ಕಾಣಿಸುತ್ತದೆ. ರೊಕ್ಕಕ್ಕಾಗಿ ರೈಲು, ಬಸ್ಸುಗಳಲ್ಲಿ ಹಾಡುವ ಹುಡುಗನೊಬ್ಬ ಮುಂದೆ ದೊಡ್ಡ ಸಂಗೀತಗಾರನಾಗಿ ಬೆಳೆದು ಕೂಡ ಅವನ ಮನಸ್ಥಿತಿ ಸಂಸ್ಕಾರ ರಹಿತ ಬಾಲ್ಯದ ಬದುಕಿನ ಪ್ರಭಾವಳಿಯಿಂದ ಹೊರಬರುವುದಿಲ್ಲ. ಸಂಗೀತ ವಿದ್ಯೆಯನ್ನು ಹಣ ಗಳಿಕೆ ಮತ್ತು ತನ್ನ ದೇಹದ ಕಾಮ ತೃಷೆಯನ್ನು ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಾನೆ. ಪಾಂಡಿತ್ಯವಿದ್ದೂ ಮೋಹನಲಾಲನಲ್ಲಿ ಒಂದು ಶುದ್ಧ ಸಂಸ್ಕಾರದ ಕೊರತೆಯಿಂದಾಗಿ ಅವನೊಬ್ಬ ಲಂಪಟನಾಗಿಯೂ ಅನೈತಿಕ ಗುಣಗಳ ದುರ್ಗುಣಿಯಾಗಿಯೂ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾನೆ. ಸಂಗೀತದಲ್ಲಿ ಉನ್ನತವಾದದ್ದನ್ನು ಸಾಧಿಸಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ಮಧುಮಿತ ಮೋಹನಲಾಲನಿಗೆ ತನ್ನ ದೇಹವನ್ನು ಸಮರ್ಪಿಸಿಯೂ ಪವಿತ್ರಳಾಗಿ ಉಳಿಯುತ್ತಾಳೆ. ಆರುವರ್ಷಗಳ ನಂತರ ತನ್ನದೇ ಒಂದು ಬದುಕನ್ನು ಕಟ್ಟಿಕೊಳ್ಳಲು ಮುಂದಾಗುವ ಆಕೆ ಮೋಹನಲಾಲನಿಂದ ಸಂಪೂರ್ಣವಾಗಿ ವಿಮುಖಳಾಗಿ ಪತಿ ವಿಕ್ರಮನ ಸಾಂಗತ್ಯದಲ್ಲಿ ಹೊಸದೊಂದು ಬದುಕಿಗಾಗಿ ಹಂಬಲಿಸುತ್ತಾಳೆ. ಮೋಹನಲಾಲ ಮತ್ತೊಮ್ಮೆ ಅವಳ ವೈವಾಹಿಕ ಜೀವನದಲ್ಲಿ ಪ್ರವೇಶಿಸಿದಾಗ ಮಧುಮಿತ ಗಂಡನಿಗೆ ಎಲ್ಲವನ್ನೂ ತಿಳಿಸಿ ವೈವಾಹಿಕ ಬದುಕಿನಿಂದಲೂ ಮತ್ತು ಮೋಹನಲಾಲನಿಂದಲೂ ದೂರಾಗಿ ಸಂಗೀತ ಸಾಧನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ. ಸಂಗೀತ ಮಧುಮಿತಾಳಿಗೆ ಹಣ ಮಾಡುವ ಕಸುಬಲ್ಲ. ಉದಾತ್ತ ಭಾವವನ್ನು ಉದ್ದೀಪನಗೊಳಿಸುವ ಶುದ್ಧ ರಾಗವದು. ಇಂಥದ್ದೊಂದು ಸಂಸ್ಕಾರದಿಂದಲೇ ಕಾದಂಬರಿಯ ಕೊನೆಯಲ್ಲಿ ಮಧುಮಿತಾಳ ಗೆಲುವು ಅದು ನೈತಿಕತೆಯ ಗೆಲುವಾಗಿ ಪರಿಣಮಿಸುತ್ತದೆ.

ಯಾನ: ವಿಜ್ಞಾನ ಮತ್ತು ಪಾರಂಪರಿಕ ಮೌಲ್ಯಗಳು 


    ' ನೋಡಿ ಈ ವಿಷಯ ಪ್ರಸ್ತಾಪಿಸುಕ್ಕೆ ನನಗೆ ತುಂಬ ಸಂಕೋಚವಾಗುತ್ತೆ. ಆದರೆ ಇದು ಸಂಶೋಧನೆಯ ವಿಷಯ ಮುಂದಿನ ಹಂತದ ಪ್ರಗತಿಯ ವಿಷಯ. ನೀವು ಅವಿವಾಹಿತೆ, ಭಾರತೀಯ ತರುಣಿ ಅಂತ ಗೊತ್ತಿದ್ದೂ ಪ್ರಸ್ತಾಪಿಸಬೇಕಾಗಿದೆ. ಗಂಡು ಹೆಣ್ಣುಗಳ ಶರೀರಕ್ಕೆ ಸಂಬಂಧಿಸಿದ ಹಲವಾರು ಸೂಕ್ಷ್ಮ ಸಂಶೋಧನೆಗಳನ್ನು ಮಾಡಬೇಕು. ಈ ಯಾನಕ್ಕೆ ಒಬ್ಬ ಮಹಿಳೆಯೂ ಬೇಕು ಅಂತ ನಿಶ್ಚಯಿಸಿದ್ದು ಈ ಕಾರಣದಿಂದ. ಇಲ್ಲಿ ನಡೆಯುದೆಲ್ಲ ಅತ್ಯಂತ ಗೋಪ್ಯವಾಗಿರುತ್ತೆ. ನಿಮ್ಮ ಜೊತೆ ಮೇಲೆ ಹೋಗುವ ಮೂವರು ಗಂಡಸರ ಹೆಸರನ್ನು ಈಗಲೇ ಹೇಳಿಬಿಡ್ತೀನಿ. ಅವರಲ್ಲಿ ಫ್ಲೈಯಿಂಗ್ ಆಫೀಸರ್ ಯಾದವ ಒಬ್ಬರು. ಡಾ. ವ್ಯಾಸ, ಡಾ. ಸಾಮಂತ್ ಇನ್ನಿಬ್ಬರು. ಅವರಲ್ಲಿ ಒಬ್ಬರನ್ನ ನೀವು ಸೂಚಿಸಿದರೆ ನಾನು ಅವರೊಡನೆ ಮಾತನಾಡ್ತೀನಿ. ಯಾನದಲ್ಲಿ ಮೇಲೆ ಹೋಗುವ ಎರಡು ತಿಂಗಳ ಮೊದಲೇ ನೀವಿಬ್ಬರೂ ಶರೀರ ಸಂಪರ್ಕ ಮಾಡುತ್ತಿರಬೇಕು. ಇದು ಸಂಶೋಧನೆಗೆ ಅನ್ನೂದನ್ನು ಮರೆತು ಸಹಜವಾಗಿ ಪ್ರೇಮಿಗಳು ಸೇರುವ ಹಾಗೆ ಕೂಡಬೇಕು. ಯಾನದಲ್ಲಂತೂ ಸಾಧ್ಯವಾದಷ್ಟು ಸಲ ಮೈಥುನ ಮಾಡಬೇಕು. ಕೋಪ ಮಾಡಿಕೊಳ್ಳಬೇಡಿ. ಈ ವಿನಂತಿಯನ್ನು ತಿರಸ್ಕರಿಸುವ ಆಯ್ಕೆಯೂ ನಿಮಗಿದೆ. ಆದರೆ ತಿರಸ್ಕರಿಸದಿರುವ ದೇಶಭಕ್ತಿ ನಿಮ್ಮದು ಅಂತ ನನಗೆ ಗೊತ್ತಿದೆ'. ಅಂತರಿಕ್ಷ ಕೇಂದ್ರದ ನಿರ್ದೇಶಕ ಡಾ.ವೆಂಕಟ್ ವಿವರಿಸುತ್ತಿದ್ದರೆ ಫೈಟರ್ ಪೈಲಟ್ ಉತ್ತರಾಳಲ್ಲಿ ಕೋಪ ಕುದಿಯುತ್ತಿತ್ತು. ರಕ್ಷಣಾ ಪಡೆಯ ಶಾಲೆಯಲ್ಲಿ ಓದಿ ಅದೇ ಪಡೆಯ ಕಾಲೇಜಿನ ಅನುಭವವಿದ್ದು ಕಂಟೋನ್ ಮೆಂಟ್ ಜೀವನಕ್ಕೆ ಒಗ್ಗಿದ್ದರೂ ಅವಳದು ಪಾರಂಪರಿಕ ಸಂಸ್ಕಾರವಾಗಿತ್ತು.

     ಕನ್ನಡ ಸಾಹಿತ್ಯದಲ್ಲಿ ಇದುವರೆಗೂ ಕಾಣದಿದ್ದ ಜಗತ್ತೊಂದು ಭೈರಪ್ಪನವರ 'ಯಾನ' ಕಾದಂಬರಿಯಲ್ಲಿ ಅನಾವರಣಗೊಂಡು ಜೀವ ಪಡೆದಿದೆ. ಅಂತರಿಕ್ಷ ಕೇಂದ್ರದವರು ೧೫೦ ಅಡಿ ಅಗಲ ೩೦೦ ಅಡಿ ಉದ್ದದ ಆಕಾಶ ನೌಕೆಯನ್ನು ಕಟ್ಟಿ ಅದರಲ್ಲಿ ಒಬ್ಬ ಗಂಡು ಒಬ್ಬಳು ಹೆಣ್ಣನ್ನು ಜೊತೆಗೂಡಿಸಿ ಅಂತರಿಕ್ಷಕ್ಕೆ ಕಳುಹಿಸುವ ಯೋಜನೆ ಸಿದ್ಧಪಡಿಸುತ್ತಾರೆ. ಇದಕ್ಕೆ ಪೂರ್ವಭಾವಿ ತಯ್ಯಾರಿಗಾಗಿ ನೂರು ದಿನಗಳ ಯೋಜನೆ ರೂಪಿಸಲಾಗುತ್ತದೆ. ಈ ನೂರು ದಿನಗಳ ಕಾಲ ಅಂತರಿಕ್ಷಕ್ಕೆ ಹೋಗುವ ಮೂರುಜನ ಗಂಡಸರಲ್ಲಿ ಒಬ್ಬರೊಡನೆ ಅಂತರಿಕ್ಷಕ್ಕೆ ಹೋಗುವ ಮೊದಲು ಮತ್ತು ನೌಕೆಯಲ್ಲಿ ನಿರಂತರವಾಗಿ ಮೈಥುನದಲ್ಲಿ ತೊಡಗಿಸಿಕೊಳ್ಳುವಂತೆ ಈ ಯೋಜನೆಗಾಗಿ ಆಯ್ಕೆಯಾದ ಪೈಲಟ್ ಉತ್ತರಾಳಲ್ಲಿ ಕೇಳಿ ಕೊಳ್ಳಲಾಗುತ್ತದೆ. ಉತ್ತರಾಳದು ಸಂದಿಗ್ಧ ಪರಿಸ್ಥಿತಿ. ಒಂದೆಡೆ ಪಾರಂಪರಿಕ ಮೌಲ್ಯಗಳು ಇನ್ನೊಂದೆಡೆ ದೇಶ ಸೇವೆಗೆ ದೊರೆತ ಸದಾವಕಾಶ. ಸಂದಿಗ್ಧದಲ್ಲೇ ಪೈಲಟ್ ಯಾದವನನ್ನು ಆಯ್ಕೆ ಮಾಡಿಕೊಳ್ಳುವ ಉತ್ತರಾ ಯಾನಕ್ಕೆ ಮೊದಲು ಅವನೊಡನೆ ವಿವಾಹವಾಗಬೇಕೆಂಬ ಷರತ್ತು ಹಾಕುತ್ತಾಳೆ. ಉತ್ತರಾಳ ಮಾತಿಗೆ ಸಮ್ಮತಿಸುವ ಯಾದವ ದೇವಾಲಯದಲ್ಲಿ ಗೌಪ್ಯವಾಗಿ ಅವಳೊಡನೆ ವಿವಾಹವಾಗುತ್ತಾನೆ. ನೂರು ದಿನಗಳ ಪೂರ್ವಭಾವಿ ಯೋಜನೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.  ಪೂರ್ವಭಾವಿ ಯೋಜನೆಯ  ಯಶಸ್ಸಿನ ನಂತರ  ಒಂದು ಗಂಡು ಮತ್ತು ಹೆಣ್ಣನ್ನು ನೌಕೆಯ ಮೂಲಕ ಶಾಶ್ವತವಾಗಿ ಅಂತರಿಕ್ಷಕ್ಕೆ ಕಳಿಸುವ ಯೋಜನೆ  ಡಾ.ವೆಂಕಟ್ ಅವರದು.
    ಸಂಶೋಧನಾ ಕೇಂದ್ರದಿಂದ ಬಂದು ಕಾಣುವಂತೆ ಪತ್ರ ಬಂದ ಘಳಿಗೆ ಉತ್ತರಾ ಮತ್ತೆ ತನ್ನನ್ನು ಸಂಶೋಧನೆಗೆ ನಿಯೋಜಿಸಲಾಗುತ್ತಿದೆ ಎಂದು ಉತ್ಸುಕಳಾಗಿದ್ದಾಳೆ. ಸಂಶೋಧನೆಯ ವಿವರಗಳನ್ನು ಹೇಳಿದ ಡಾ.ವೆಂಕಟ್ ಅವಳಿಗೆ ಅಂತರಿಕ್ಷಕ್ಕೆ ತೆರಳಲು  ಸಿದ್ಧಳಾಗಿರುವಂತೆ ಸೂಚಿಸಿ ಜೊತೆಗೆ ಉತ್ತರಾಳಿಗೆ ಆಘಾತವಾಗುವಂಥ  ಇನ್ನೊಂದು ಸಂಗತಿಯನ್ನು ತಿಳಿಸುತ್ತಾರೆ. ಅವರ ಪ್ರಕಾರ ಯಾದವ್ ಈ ಸಂಶೋಧನೆಗೆ ಸೂಕ್ತ ವ್ಯಕ್ತಿ ಅಲ್ಲವೆಂದು ಮತ್ತು ಅಂತರಿಕ್ಷದ ತಿಳುವಳಿಕೆ ಅವನಲ್ಲಿಲ್ಲವೆಂದು ಹೇಳುತ್ತಾರೆ. ಹೀಗಾಗಿ ಈ ಬಾರಿಯ ಶಾಶ್ವತ ಅಂತರಿಕ್ಷ ಪ್ರಯಾಣದಲ್ಲಿ ಉತ್ತರಾಳಿಗೆ ಜೊತೆಯಾಗಿ ಒಬ್ಬ ವಿಜ್ಞಾನಿಯ ಅವಶ್ಯಕತೆಯಿದೆ ಎಂದು ವಿವರಿಸುತ್ತಾರೆ. ಉತ್ತರಾ ಯಾದವನ ಹೊರತಾಗಿ ಬೇರೊಬ್ಬರೊಂದಿಗೆ ಹೋಗಲು ನಿರಾಕರಿಸುತ್ತಾಳೆ. ಈ ಮೊದಲು ಪೂರ್ವಭಾವಿ ಯೋಜನೆಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಮೊದಲು ಯಾದವನೊಂದಿಗೆ ಗೌಪ್ಯವಾಗಿ ವಿವಾಹವಾಗಿ ತಾನು ಅಂತರಿಕ್ಷಕ್ಕೆ ಹೋಗಿ ಬಂದಿರುವುದಾಗಿ ಡಾ.ವೆಂಕಟ್ ಅವರಿಗೆ ಹೇಳುತ್ತಾಳೆ. ಯಾದವನಿಗೆ ಒಬ್ಬ ಅಂತರಿಕ್ಷ ವಿಜ್ಞಾನಿಗೆ ಅಗತ್ಯವಾದ ಎಲ್ಲ ವಿಷಯ ಜ್ಞಾನವನ್ನು ಕಲಿಸಿಕೊಟ್ಟು ತನ್ನೊಡನೆ ಕಳುಹಿಸುವಂತೆ ಬೇಡಿಕೆ ಮುಂದಿಡುತ್ತಾಳೆ. ಇದು ಒಂದೆರಡು ವರ್ಷಗಳ ಕೆಲಸವಾದರೂ ಡಾ.ವೆಂಕಟ್ ಉತ್ತರಾಳ ಬೇಡಿಕೆಗೆ ಸ್ಪಂದಿಸುತ್ತಾರೆ. ಕಥೆ ತಿರುವು ಪಡೆಯುವುದೇ ಯಾದವ್ ಉತ್ತರಾಳ ಬೇಡಿಕೆಯನ್ನು ನಿರಾಕರಿಸುವುದರೊಂದಿಗೆ. ತಂದೆ, ತಾಯಿ ಮತ್ತು ತಂಗಿಯರ ಜವಾಬ್ದಾರಿಯ ಕಾರಣ ನೀಡಿ ಯಾದವ್ ಈ ಸಂಶೋಧನೆಯಿಂದ ನುಣುಚಿಕೊಳ್ಳುತ್ತಾನೆ. ಒಂದೆಡೆ ದೇಶ ಸೇವೆಗಾಗಿ ತುಡಿಯುತ್ತಿರುವ ಮನಸ್ಸು ಇನ್ನೊಂದೆಡೆ ಬೇರೆ ಗಂಡಸಿನೊಂದಿಗೆ ದೇಹ ಹಂಚಿಕೊಳ್ಳಬೇಕಲ್ಲ ಎನ್ನುವ ಆತಂಕ. ಉತ್ತರಾಳ ಮನಸ್ಸು ಸಂದಿಗ್ಧತೆಯಲ್ಲಿ ಹೊಯ್ದಾಡುತ್ತದೆ. ಯಾದವ್ ತನಗೆ ಮೋಸಮಾಡಿದನೆನ್ನುವ ಆಕ್ರೋಶ ಉತ್ತರಾಳನ್ನು ಅಂತರಿಕ್ಷಕ್ಕೆ ಹೋಗುವಂತೆ ಪ್ರೇರೇಪಿಸುತ್ತದೆ. ಈ ಶಾಶ್ವತ ಅಂತರಿಕ್ಷ ಪ್ರಯಾಣದಲ್ಲಿ ಈ ಸಾರಿ ಉತ್ತರಾಳಿಗೆ ಜೊತೆಯಾಗಿ ವಿಜ್ಞಾನಿ ಸುದರ್ಶನ್ ಆಯ್ಕೆಯಾಗುತ್ತಾನೆ.

     ಉತ್ತರಾ ಮತ್ತು ಸುದರ್ಶನ್ ಅವರನ್ನು ಹೊತ್ತು ನೌಕೆ ಅಂತರಿಕ್ಷದತ್ತ ಪಯಣ ಬೆಳೆಸುತ್ತದೆ. ಸಂಶೋಧನೆಯ ಮೊದಲ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸಂತೃಪ್ತಿ ಡಾ.ವೆಂಕಟ್ ಅವರದು. ಆದರೆ ನೌಕೆಯಲ್ಲಿನ ಪರಿಸ್ಥಿತಿ ಡಾ.ವೆಂಕಟ್ ಅವರಂದುಕೊಂಡಷ್ಟು ಸರಳವಾಗಿಲ್ಲ. ಉತ್ತರಾ ತನ್ನ ಜೊತೆಗಾರ ಸುದರ್ಶನನೊಂದಿಗೆ ಯಾವ ವಿಷಯದಲ್ಲೂ ಸಹಕರಿಸುತ್ತಿಲ್ಲ. ಆ ನೌಕೆಯಲ್ಲಿ ಇಬ್ಬರದೂ ವಿರುದ್ಧ ದ್ರುವಗಳ ಬದುಕು. ಡಾ.ವೆಂಕಟ್ ಸಂಶೋಧನಾ ಕೇಂದ್ರದಿಂದ ಉತ್ತರಾಳನ್ನು ಸಂಪರ್ಕಿಸಿ ಎಷ್ಟು ಬೇಡಿಕೊಂಡರೂ ಅವರ ಮನವಿಗೆ ಆಕೆ ಸ್ಪಂದಿಸುತ್ತಿಲ್ಲ. ಯಾದವನಿಂದ ಹೇಳಿಸಿದರೂ ಅವಳದು ಅದೇ ನಿರಾಕಾರಭಾವ. ಅಂತರಿಕ್ಷದಲ್ಲಿ ಮನುಷ್ಯ ಸಂತಾನವನ್ನು ಸಾವಿರಾರು ವರ್ಷಗಳ ಕಾಲ ಬೆಳೆಸಬೇಕೆಂಬ ಸಂಶೋಧನೆ ಪೂರ್ಣಗೊಳ್ಳದೆ ಹೋಗುತ್ತಿದೆಯಲ್ಲ ಎನ್ನುವ ಹತಾಶೆ ಡಾ.ವೆಂಕಟ್ ಅವರದು. ಉತ್ತರಾಳ ತಣ್ಣನೆಯ ಪ್ರತಿಕ್ರಿಯೆಯಿಂದ ಸುದರ್ಶನನಲ್ಲೂ ಒಂದು ರೀತಿಯ ವೈರಾಗ್ಯ ಮೂಡಿದೆ. ಹೀಗೆ ನೌಕೆಯಲ್ಲಿ ಹತ್ತು ವರ್ಷಗಳನ್ನು ಕಳೆದ ಉತ್ತರಾಳಿಗೆ ಇದ್ದಕ್ಕಿದ್ದಂತೆ ಒಂದು ದಿನ ತಾನು ದೇಶಕ್ಕೆ ಮೋಸಮಾಡುತ್ತಿದ್ದೇನೆ ಎನ್ನುವ ಆತಂಕದಿಂದ ಸಂತಾನಭಿವೃದ್ಧಿಗೆ ಮುಂದಾಗುತ್ತಾಳೆ. ಆದರೆ ಆ ವೇಳೆಗಾಗಲೇ ಸುದರ್ಶನನ ಮನಸ್ಸು ದೈಹಿಕ ಕಾಮನೆಗಳಿಂದ ಬಹುದೂರ ಸಾಗಿ ಬಂದಿರುತ್ತದೆ. ಮುನ್ನೆಚ್ಚರಿಕೆಯ ಕ್ರಮವಾಗಿ ನೌಕೆಯಲ್ಲಿ ಸಾವಿರಾರು ಗಂಡು ಮತ್ತು ಹೆಣ್ಣುಗಳ ವಿರ್ಯಾಣು ಮತ್ತು ಅಂಡಾಣುಗಳನ್ನು ಸಂಸ್ಕರಿಸಿ ಇಡಲಾಗಿದೆ. ಹೀಗೆ ಸಂಸ್ಕರಿಸಿಟ್ಟ ಒಂದು ವಿರ್ಯಾಣು ಮತ್ತು ಅಂಡಾಣುವನ್ನು ಉತ್ತರಾಳ ಗರ್ಭಕೋಶದಲ್ಲಿ ಬೆಳೆಸಿ ಹೆಣ್ಣು ಮಗುವನು ಪಡೆಯಲಾಗುತ್ತದೆ. ಸಂತಾನಭಿವೃದ್ಧಿಗಾಗಿ ಗಂಡಿನ ಅವಶ್ಯಕತೆಯೂ ಇರುವುದರಿಂದ ಬೇರೆ ವಿರ್ಯಣು ಮತ್ತು ಅಂಡಾಣುವಿನಿಂದ ಉತ್ತರಾ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆಕಾಶ ಮತ್ತು ಮೇದಿನಿ ಒಂದೇ ಗರ್ಭಕೋಶದಿಂದ ಜನಿಸಿದರೂ ಅವರು ಬೇರೆ ಬೇರೆ ವಿರ್ಯಾಣು ಮತ್ತು  ಅಂಡಾಣುಗಳ ಸಂತಾನವಾಗುತ್ತಾರೆ. ಪ್ರಾಯಕ್ಕೆ ಬಂದಾಗ ಆಕಾಶ ಮತ್ತು ಮೇದಿನಿ ಮೊದಲ ಮಗುವನ್ನು ತಮ್ಮ ಸ್ವಂತದ ವಿರ್ಯಾಣು ಮತ್ತು ಅಂಡಾಣುವಿನಿಂದ ಪಡೆಯಬಹುದಾದರೂ ಎರಡನೇ ಮಗುವನ್ನು ನೌಕೆಯಲ್ಲಿ ಸಂಸ್ಕರಿಸಿಟ್ಟ ವಿರ್ಯಾಣು  ಮತ್ತು ಅಂಡಾಣುವಿನಿಂದಲೇ ಪಡೆಯಬೇಕು. ಕಾದಂಬರಿಕಾರರು ಸಂಶೋಧನೆಯಲ್ಲೂ ಪಾರಂಪರಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಕಥೆಗೊಂದು ತಾರ್ಕಿಕ ಅಂತ್ಯವನ್ನು ನೀಡುತ್ತಾರೆ. ಯಾನ ಕಾದಂಬರಿಯಲ್ಲಿನ ನೈತಿಕ ಪ್ರಜ್ಞೆಯನ್ನು ನಾವು ಗುರುತಿಸಲು ಈ ಕೆಳಗಿನ ಸಂಗತಿಗಳು ಆಧಾರವಾಗಿವೆ,

೧. ಉತ್ತರಾ ಪೂರ್ವಭಾವಿ ಯೋಜನೆಯಲ್ಲಿ ಪಾಲ್ಗೊಳ್ಳುವುದಕ್ಕಿಂತ ಮೊದಲು ತನ್ನೊಡನೆ ಬರುವ ಯಾದವನನ್ನು ಮದುವೆಯಾಗಿ ಪಾರಂಪರಿಕ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಾಳೆ. ಎರಡನೇ ಸಂದರ್ಭದಲ್ಲಿ ಸುದರ್ಶನನೊಂದಿಗೆ ಹೋಗುವ ಅನಿವಾರ್ಯತೆ ಎದುರಾದಾಗ ಉತ್ತರಾ ಆತನೊಂದಿಗೆ ದೈಹಿಕ ಸಂಪರ್ಕ ಹೊಂದದೆ ದೂರವೇ ಉಳಿಯುತ್ತಾಳೆ. ಹತ್ತು ವರ್ಷಗಳ ನಂತರ ಕರ್ತವ್ಯ ಪ್ರಜ್ಞೆ ಅವಳಲ್ಲಿ ಜಾಗೃತವಾಗಿ  ಸಂಸ್ಕರಿಸಿಟ್ಟ ವಿರ್ಯಾಣು ಮತ್ತು ಅಂಡಾಣುಗಳಿಂದ ಮಕ್ಕಳಿಗೆ ಜನ್ಮ ನೀಡುತ್ತಾಳೆ.

೨. ಮನುಷ್ಯ ಸಂತಾನವನ್ನು ಸಾವಿರಾರು ವರ್ಷಗಳ ಕಾಲ ಅಂತರಿಕ್ಷದಲ್ಲಿ ಬೆಳೆಸುವುದು ಸಂಶೋಧನೆಯ ಉದ್ದೇಶವಾಗಿರುವುದರಿಂದ ಜನಿಸುವ ಗಂಡು ಮತ್ತು ಹೆಣ್ಣಿನ ಮೇಲೆ  ತಮ್ಮ ಮುಂದಿನ ಸಂತಾನವನ್ನು ಬೆಳೆಸುವ ಜವಾಬ್ದಾರಿ ಇದೆ. ಒಂದೇ ಅಂಡಾಣು ಮತ್ತು ವಿರ್ಯಾಣುವಿನಿಂದ ಜನಿಸುವ ಮಕ್ಕಳು ಸಹೋದರ ಸಹೋದರಿಯಾಗುವುದರಿಂದ ಮೈಥುನದಲ್ಲಿ ತೊಡಗುವುದು ಅನೈತಿಕತೆಯಾಗುತ್ತದೆ. ಇದಕ್ಕೆ ಮೊದಲ ಮಗುವನ್ನು ತಮ್ಮ ಸ್ವಂತದ ವಿರ್ಯಾಣು ಮತ್ತು ಅಂಡಾಣುವಿನಿಂದ ಪಡೆಯಬಹುದಾದರೂ ಎರಡನೇ ಮಗುವನ್ನು ನೌಕೆಯಲ್ಲಿ ಸಂಸ್ಕರಿಸಿಟ್ಟ ವಿರ್ಯಾಣು ಮತ್ತು ಅಂಡಾಣುವಿನಿಂದಲೇ ಪಡೆಯಬೇಕೆನ್ನುವ ಪರಿಹಾರವಿದೆ.

ಕೊನೆಯ ಮಾತು 

    ಇತ್ತೀಚಿನ ದಿನಗಳಲ್ಲಿ ನಮ್ಮ ಎಡಪಂಥಿಯ ಲೇಖಕಿಯರು ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ಹೆಣ್ಣನ್ನು ಅತ್ಯಂತ ಕೀಳಾಗಿ ಚಿತ್ರಿಸುತ್ತಾರೆ ಎಂಬ ತಮ್ಮ ಧೋರಣೆಯನ್ನು ಕನ್ನಡದ ಓದುಗರ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿರುವರು. ಆದರೆ ಭೈರಪ್ಪನವರ ಕಾದಂಬರಿಗಳಲ್ಲಿ ವಿಶೇಷವಾಗಿ ಹೆಣ್ಣಿನ ಬದುಕನ್ನು ಚಿತ್ರಿಸುವಾಗ ಅಲ್ಲಿ ನೈತಿಕ ಪ್ರಜ್ಞೆ ಮಹತ್ವ ಪಡೆಯುತ್ತದೆ. ಈ ಕಾರಣದಿಂದಲೇ ಸಾಕ್ಷಿಯ ಸುಮಿತ್ರಾ, ಮಂದ್ರದ ಮಧುಮಿತ, ಯಾನದ ಉತ್ತರಾ ಈ ಪಾತ್ರಗಳನ್ನು ಓದುಗ  ನೈತಿಕ ಪ್ರಜ್ಞೆಯ ಭಾಗವಾಗಿ  ಪರಿಭಾವಿಸುತ್ತಾನೆ. ಸಾಕ್ಷಿಯ ಮಂಜಯ್ಯ ಹಾಗೂ ಮಂದ್ರದ ಮೋಹನಲಾಲ ಪತನಗೊಳ್ಳುವುದು ಅವರೊಳಗಿನ ಅನೈತಿಕ ಗುಣಗಳಿಂದ ಎನ್ನುವುದು ಇಲ್ಲಿ ಓದುಗ ಗಮನಿಸಬೇಕಾದ ಮುಖ್ಯ ಸಂಗತಿಗಳಲ್ಲೊಂದು. ಆದರೆ ಭೈರಪ್ಪನವರ ಈ ನೈತಿಕ ಪ್ರಜ್ಞೆ, ಪಾರಂಪರಿಕ ಮೌಲ್ಯಗಳ ಮೇಲಿನ ಗೌರವ, ರಾಷ್ಟ್ರ ಭಕ್ತಿಯ ಗುಣ ನಮ್ಮ ಎಡಪಂಥಿಯ ಬರಹಗಾರರಿಗೆ ತಪ್ಪಾಗಿ ಕಾಣಿಸುತ್ತಿರುವುದು ಅದು ಕನ್ನಡ ಸಾಹಿತ್ಯದ ದುರಂತಗಳಲ್ಲೊಂದು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 



       

No comments:

Post a Comment