Thursday, November 2, 2017

ಬರಹಗಾರರಿಗೊಂದು ಬಹಿರಂಗ ಪತ್ರ

ಕನ್ನಡದ ಎಲ್ಲ ಲೇಖಕರಿಗೆ ವಂದನೆಗಳು,
ಇದಕ್ಕಿಂದ್ದಂತೆ ಇಂಥದ್ದೊಂದು ಪತ್ರ ನೋಡಿ ದಯವಿಟ್ಟು ಬೆರಗಾಗದಿರಿ ಎಂದು ಮೊದಲೇ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಕನ್ನಡ ಸಾಹಿತ್ಯದ ಒಬ್ಬ ಓದುಗನಾಗಿ ಇವತ್ತು ಸಾಹಿತ್ಯ ಕ್ಷೇತ್ರದಲ್ಲಿನ ಗುಂಪುಗಾರಿಕೆ, ಜಾತಿಪ್ರೇಮ, ಪ್ರಶಸ್ತಿ ಗೌರವಗಳಿಗಾಗಿ ಮಾಡುತ್ತಿರುವ ಲಾಭಿ, ಶಕ್ತಿ ರಾಜಕಾರಣದ ಓಲೈಕೆ, ಚಳವಳಿಗಳಿಗೆ ವಿಮುಖರಾಗುತ್ತಿರುವುದು, ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ಪ್ರಾಪ್ತವಾಗಿರುವ ರಾಜಕೀಯದ ಖದರು ಈ ಎಲ್ಲವುಗಳು ನಾನು ಅತಿ ಹತ್ತಿರದಿಂದ ನೋಡಿ ಅನುಭವಕ್ಕೆ ಬಂದ ಸಂಗತಿಗಳು. ಬರವಣಿಗೆಯೊಂದನ್ನು ಬಿಟ್ಟು ನಮ್ಮ ಬರಹಗಾರರು ಈ ಮೇಲೆ ಹೇಳಿದ ವಿಭಿನ್ನ ದಾರಿಗಳನ್ನು ಹಿಡಿದಿರುವುದರಿಂದ ಕನ್ನಡ ಸಾಹಿತ್ಯ ತನ್ನ ಮೊದಲಿನ ಪ್ರಖರತೆಯನ್ನು ಕಳೆದುಕೊಂಡಿದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಈ ಸಂದರ್ಭ ನಮ್ಮ ಬರಹಗಾರರಿಗೆ ನಾನು ನೊಬೆಲ್ ಪ್ರಶಸ್ತಿ ಪುರಸ್ಕೃತ ಲೇಖಕ ಮಾರಿಯೋ ವರ್ಗಾಸ್ ಯೋಸಾನ ಸಾಹಿತ್ಯದ ಕುರಿತಾದ ಅಭಿಪ್ರಾಯವನ್ನು ನೆನಪಿಸಲು ಬಯಸುತ್ತೇನೆ. ಯೋಸಾ ಸಾಹಿತ್ಯದ ಮಹತ್ವವನ್ನು ಹೀಗೆ ಹೇಳುತ್ತಾನೆ “ಬಹುಕಾಲ ಬಾಳುವಂಥ ಯಾವುದನ್ನು ರಾಜಕಾರಣ ಮಾಡಲಾಗುವುದಿಲ್ಲವೋ ಅದನ್ನು ಸಾಹಿತ್ಯ ಮಾಡಬೇಕು. ಲೇಖಕ ಕೇವಲ ವರ್ತಮಾನಕ್ಕಾಗಿ ಮಾತ್ರ ಪುಸ್ತಕ ಬರೆಯುವುದಿಲ್ಲ. ಟೀಕಿಸುವ ಮೂಲಕವೋ ತಮ್ಮ ಆಲೋಚನೆಗಳನ್ನು ಬಳಸಿ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೂಲಕವೋ ಲೇಖಕರಾದವರು ಕಾರ್ಯಪ್ರವೃತ್ತರಾಗುವುದು ತುಂಬಾ ಮುಖ್ಯ. ಕೆಲವು ಸಂದರ್ಭಗಳಲ್ಲಿ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಬೇಕಾಗಿ ಬರುವಂಥ ಯಾವುದೇ ಅಭಿಪ್ರಾಯಕ್ಕೂ ಲೇಖಕ ಜಗ್ಗ ಕೂಡದು. ಒಂದು ಅಗತ್ಯದಂತೆ ಲೇಖಕರು ತಮ್ಮ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು. ನನ್ನ ಅಂತ:ಸಾಕ್ಷಿ ತುಂಬಾ ಗಡಸಾದದ್ದು. ಸಾಯುವ ಕೊನೆಯ ದಿನದವರೆಗೂ ನಾನು ಬರೆಯಬಲ್ಲೆ ಅನ್ನೊದು ನನಗೆ ಗೊತ್ತು. ಬರವಣಿಗೆಯೇ  ನನ್ನ ಧರ್ಮ ಬರವಣಿಗೆಯೇ  ನನ್ನ ಬದುಕು”. 

ಈಗ ನಾನು ಮತ್ತೆ ನಮ್ಮ ಲೇಖಕರ ವಿಷಯಕ್ಕೆ ಬರುತ್ತೇನೆ. ಯೋಸಾನಂತೆ ಬರವಣಿಗೆಯೇ  ಧರ್ಮ ಮತ್ತು ಬರವಣಿಗೆಯೇ  ಬದುಕು ಎಂದು ಭಾವಿಸಿರುವ ಲೇಖಕರ ಸಂಖ್ಯೆ ಕನ್ನಡ ಭಾಷೆಯಲ್ಲಿ ಎಷ್ಟಿದೆ?. ಜೊತೆಗೆ ತಮ್ಮ ಸ್ವಾತಂತ್ರ್ಯ ಮತ್ತು ಸ್ವಂತದ ಅಭಿಪ್ರಾಯವನ್ನು ಕಾಪಾಡಿಕೊಂಡಿರುವ ಬರಹಗಾರರು ನಮ್ಮಲ್ಲಿರುವರೇ ಎನ್ನುವ ಪ್ರಶ್ನೆ ನನ್ನದು. ಈ ಮಾತನ್ನು ನಾನು ಹೇಳಲು ಕಾರಣ ಇವತ್ತಿನ ಬಹುಪಾಲು ಯುವ ಲೇಖಕರಿಗೆ ತಮ್ಮ ಸ್ವಂತದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶವಿಲ್ಲದಂತೆ ಕನ್ನಡ ಸಾಹಿತ್ಯ ಕ್ಷೇತ್ರ ಎಡಪಂಥೀಯ ಮತ್ತು ಬಲಪಂಥೀಯ ಎಂದು ಎರಡು ಗುಂಪುಗಳಾಗಿ ವಿಭಜನೆಗೊಂಡಿದೆ. ಹೀಗಾಗಿ ಲೇಖಕನಾದವನು ಯಾವುದಾದರೂ ಒಂದು ಗುಂಪಿನೊಂದಿಗೆ ಗುರುತಿಸಿಕೊಳ್ಳಬೇಕಾದ ಮತ್ತು ಆ ಗುಂಪಿನ ವಿಚಾರಗಳಲ್ಲೇ ತನ್ನ ಬರವಣಿಗೆಯನ್ನು ರೂಪಿಸಿಕೊಳ್ಳುವ ಅನಿವಾರ್ಯತೆಗೆ ಒಳಗಾಗಿರುವನು. ಹೀಗಾಗಿ ಇವತ್ತಿನ ಈ ವಾತಾವರಣದಲ್ಲಿ ಲೇಖಕನಾದವನು ನಿರ್ಧಿಷ್ಟ ಸಿದ್ಧಾಂತಗಳ ಕೈಗೊಂಬೆಯಾಗಿರುವನು. ಆತನಿಗೆ ತನ್ನ ಸ್ವಂತದ ಅಭಿಪ್ರಾಯವನ್ನಾಗಲಿ ಇಲ್ಲವೇ ಅನಿಸಿಕೆಯಾಗಲಿ ವ್ಯಕ್ತಪಡಿಸುವ ಸ್ವಾತಂತ್ರ್ಯ ಇಲ್ಲವಾಗಿದೆ. ನಮ್ಮ ವಿಶ್ವವಿದ್ಯಾಲಯಗಳಂತೂ ಮುಕ್ತ ಮನಸ್ಸಿನ ಬರಹಗಾರರನ್ನು ರೂಪಿಸುವುದಕ್ಕಿಂತ ಇಂಥದ್ದೆ ತತ್ವ ಮತ್ತು ಸಿದ್ಧಾಂತಗಳಿಗೆ ಬದ್ಧರಾಗಿ ಬರೆಯುವ ಲೇಖಕರನ್ನು ಹುಟ್ಟಿಸುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ಮೊಳಕೆಯೊಡೆಯುತ್ತಿರುವ ಇಂಥ ಲೇಖಕರನ್ನು ರಾಜಕೀಯ ಪಕ್ಷಗಳು ತಮ್ಮ ತಮ್ಮ ತೆಕ್ಕೆಗೆ ತೆಗೆದುಕೊಳ್ಳುತ್ತಿರುವುದರಿಂದ ನಮ್ಮ ಯುವ ಲೇಖಕರು ಬಹುಬೇಗ ಬುದ್ಧಿಜೀವಿಗಳಾಗಿಯೋ ಅಥವಾ ರಾಜಕಾರಣಿಗಳಾಗಿಯೋ ಪರಿವರ್ತನೆ ಹೊಂದುತ್ತಿರುವರು. ಕಮೂ, ಕಾಫ್ಕಾ, ಮಾರ್ಕ್ಸನನ್ನು  ಓದಿಕೊಂಡವರೆಲ್ಲ ಕ್ರಮೇಣ ತಮ್ಮ ಸಾಹಿತ್ಯಕ ಬದುಕಿಗೆ ವಿಮುಖರಾಗಿ ಜನನಾಯಕರ ಪರಿವೇಷದಲ್ಲಿ ಕಾಣಿಸಿಕೊಳ್ಳುತ್ತಿರುವರು. ಅಚ್ಚರಿಯ ಸಂಗತಿ ಎಂದರೆ ತನ್ನ ಬರವಣಿಗೆಯನ್ನು ತಾನು ಬದುಕುತ್ತಿರುವ ವ್ಯವಸ್ಥೆಯ ವಿರುದ್ಧದ ಹೋರಾಟವೆಂದು ನಂಬಿದ್ದ ಕಮೂನನ್ನು ಆದರ್ಶವಾಗಿಟ್ಟುಕೊಂಡು ಬರವಣಿಗೆಯನ್ನು ರೂಢಿಸಿಕೊಂಡ ನಮ್ಮ ಬಹುಪಾಲು ಲೇಖಕರು ಅದೇ ವ್ಯವಸ್ಥೆಯ ಒಂದು ಭಾಗವಾದದ್ದು ಮತ್ತು ಆಸ್ಥಾನಕವಿಗಳಾಗಿ ರೂಪಾಂತರ ಹೊಂದಿದ್ದು. ಬರವಣಿಗೆಯನ್ನುವುದು ಒಂದರ್ಥದಲ್ಲಿ ನಮ್ಮ ಲೇಖಕರಿಗೆ ಒಂದು ಹಸನಾದ ಬದುಕನ್ನು ಕಟ್ಟಿಕೊಳ್ಳುವ ಪ್ರಕ್ರಿಯೆಯಾಗಿದೆ.

ಇನ್ನು ನನ್ನನ್ನು ಕಾಡುತ್ತಿರುವ ಇನ್ನೊಂದು ಮಹತ್ವದ ಪ್ರಶ್ನೆ ಅದು ಬರವಣಿಗೆಯ ಶ್ರೇಷ್ಠತೆಯ ಮಾನದಂಡವೇನು ಎನ್ನುವುದು. ಕೃತಿಯೊಂದರ ಶ್ರೇಷ್ಠತೆ ಅದನ್ನು ಓದುಗವರ್ಗ ಹೇಗೆ ಸ್ವೀಕರಿಸಿದೆ ಎನ್ನುವುದೋ ಅಥವಾ ಕೃತಿಗೆ ದೊರೆತ ಪ್ರಶಸ್ತಿ ಪುರಸ್ಕಾರವೋ ಎನ್ನುವ ಜಿಜ್ಞಾಸೆ ಅನೇಕರದು. ಜೊತೆಗೆ ವಿಮರ್ಶಾಲೋಕ ಕೃತಿಯೊಂದನ್ನು ಮೆಚ್ಚಿಕೊಂಡಲ್ಲಿ ಅದನ್ನು ಶ್ರೇಷ್ಠ ಅಥವಾ ಜನಪ್ರಿಯ ಕೃತಿ ಎಂದು ಪರಿಗಣಿಸಬೇಕೇ ಎನ್ನುವ ಪ್ರಶ್ನೆ ಕೂಡ ಈ ಸಂದರ್ಭ ಎದುರಾಗುತ್ತದೆ. ಇನ್ನು ಪ್ರಶಸ್ತಿ ಮತ್ತು ವಿಮರ್ಶೆ ಕುರಿತು ಚರ್ಚಿಸುವುದಾದರೆ ಪ್ರತಿವರ್ಷ ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಎಷ್ಟು ಪುಸ್ತಕಗಳು ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗುತ್ತಿವೆ ಮತ್ತು ವಿಮರ್ಶಕರ ಕಣ್ಣಿಗೆ ಗೋಚರಿಸುತ್ತಿವೆ ಎನ್ನುವ ಮತ್ತೊಂದು ಪ್ರಶ್ನೆ ದುತ್ತನೆ ಎದುರಾಗುತ್ತದೆ. ಲೇಖಕ ತಿರುಮಲೇಶ ಅವರು ಹೇಳುವಂತೆ ಓದಲು ಯೋಗ್ಯವಾದದ್ದೆಲ್ಲವೂ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳದೆ ಹೋಗಬಹುದು.  ಹಾಗಾದರೆ ಪ್ರಶಸ್ತಿ ಪಡೆಯದ ಮತ್ತು ವಿಮರ್ಶೆಗೆ ಒಳಗಾಗದ ಇನ್ನು ಮುಂದುವರೆದು ಹೇಳುವುದಾದರೆ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳದೇ ಹೋದ ಕೃತಿಗಳೆಲ್ಲವೂ ಓದಲು ಯೋಗ್ಯವಲ್ಲ ಎನ್ನುವ ನಿರ್ಧಾರವನ್ನು ಓದುಗವರ್ಗ ತಳೆಯುವುದು ಎಷ್ಟು ಸಮಂಜಸ. ಕೃತಿಯೊಂದಕ್ಕೆ ದೊರೆಯುವ ಪ್ರಶಸ್ತಿಯಾಗಲಿ ಅಥವಾ ಪುಸ್ತಕದ ಕುರಿತು ಮೂಡಿ ಬರುವ ವಿಮರ್ಶೆಯಾಗಲಿ ಅವು ಅನೇಕ ಸಂದರ್ಭಗಳಲ್ಲಿ ಅನುಮಾನಗಳಿಗೆ ಒಳಗಾಗಿವೆ. ರಾಜಕಾರಣಿಗಳ ಮತ್ತು ಅಧಿಕಾರಿ ವರ್ಗದ ಬೆನ್ನು ಬಿದ್ದು ತಮ್ಮ ಕೃತಿಗಳಿಗೆ ಪ್ರಶಸ್ತಿ ಪಡೆದು ಧನ್ಯತಾಭಾವ ಅನುಭವಿಸುವ ಲೇಖಕರ ದಂಡೆ ನಮ್ಮಲ್ಲಿದೆ. ಜೊತೆಗೆ ಇವತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಮರ್ಶೆ ಎನ್ನುವುದು ಕೊಟ್ಟು ತೆಗೆದುಕೊಳ್ಳುವ ವಹಿವಾಟಾಗಿದೆ. ಅದೆಷ್ಟೋ ಲೇಖಕರು ವಿಮರ್ಶಕರಿಂದ ತಮ್ಮ ಪುಸ್ತಕಕ್ಕೆ ಅನುಕೂಲವಾಗುವಂತೆ ವಿಮರ್ಶೆಯನ್ನು ಬರಿಸಿಕೊಂಡು ಅದನ್ನೇ ಪುಸ್ತಕ ಮಾರಾಟದ ಮತ್ತು ಪ್ರಶಸ್ತಿಯ ಬಂಡವಾಳ ಮಾಡಿಕೊಳ್ಳುವುದು ಗುಟ್ಟಿನ ವಿಷಯವೇನಲ್ಲ. ವಿಮರ್ಶಕರು ಕೂಡ ಎಡ ಮತ್ತು ಬಲ ಎಂದು ಪ್ರತ್ಯೇಕ ಗುಂಪುಗಳಾಗಿ ಒಡೆದುಹೋಗಿರುವುದರಿಂದ ಆಯಾ ವರ್ಗದ ವಿಮರ್ಶಕರು ತಮ್ಮ ವರ್ಗದ ಲೇಖಕರ ಕೃತಿಗಳನ್ನು ಹಾಡಿ ಹೊಗಳುವುದು ಮತ್ತು ವಿರುದ್ಧ ವರ್ಗದ ಲೇಖಕರ ಕೃತಿಗಳನ್ನು ವಿನಾಕಾರಣ ಟೀಕಿಸುವುದು ಸಾಮಾನ್ಯ ಸಂಗತಿಯಾಗಿದೆ. ಕೆಲವೊಮ್ಮೆ ವಿಮರ್ಶಕರಿಂದಲೇ ಸಾಮಾನ್ಯವೆನ್ನುವಂಥ ಕೃತಿಗಳು ಸಹ ಶ್ರೇಷ್ಠ ಕೃತಿಗಳೆಂಬ ಮನ್ನಣೆಗೆ ಪಾತ್ರವಾಗಿ ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನವಾದ ಅನೇಕ ಉದಾಹರಣೆಗಳಿವೆ. ಪರಿಸ್ಥಿತಿ ಹೀಗಿರುವಾಗ ಸಾಹಿತ್ಯ ಕೃತಿಯೊಂದರ ಗುಣಾವಗುಣಗಳನ್ನು ನಿರ್ಧರಿಸುವಲ್ಲಿ ಓದುಗರ ಪಾತ್ರವೇನು ಎನ್ನುವ ಪ್ರಶ್ನೆ ಮೂಡುವುದು ಸಹಜವಾಗಿದೆ. ಲೇಖಕ ಕೆ.ಸತ್ಯನಾರಾಯಣ ತಮ್ಮ ಲೇಖನವೊಂದರಲ್ಲಿ ಹೀಗೆ ಹೇಳುತ್ತಾರೆ ‘ಮನುಷ್ಯರಾದ ನಮ್ಮೆಲ್ಲರೂ ನಮ್ಮ ಕಾಲದ ಸಾಮಾಜಿಕ ವ್ಯಕ್ತಿತ್ವವಿರುವಂತೆ ಎಲ್ಲ ಕಾಲಕ್ಕೂ ಸೇರಿದ ಸಾಮಾಜಿಕ-ರಾಜಕೀಯ ಪ್ರಭಾವಗಳಿಂದ ದೂರವಾದ ಪುಟ್ಟದಾದ ಆದರೆ ಅನೂಹ್ಯವಾದ ಒಂದು ಸಣ್ಣ ಜಾಗವೂ ಇರುತ್ತದೆ. ಇದನ್ನು ಓದುಗನ solitude ಎಂದು ಗುರುತಿಸುತ್ತಾರೆ. ಈ ಅನೂಹ್ಯ ಜಾಗದಲ್ಲಿ ಪುಳಕ ಹುಟ್ಟಿಸುವ ಕೃತಿಗಳು ಮಾತ್ರ ನಿಜವಾದ ಕಲಾಕೃತಿಗಳು’. ಹೀಗೆ ಓದುಗನ ಏಕಾಂತವನ್ನು ಪ್ರವೇಶಿಸಬಲ್ಲ ಕೃತಿಗಳು ಮಾತ್ರ ದೊಡ್ಡ ಪಲ್ಲಟಗಳಿಗೆ ಮತ್ತು ಜಿಗಿತಕ್ಕೆ ಕಾರಣವಾಗುತ್ತವೆ ಎಂದು ಅವರು ನುಡಿಯುತ್ತಾರೆ. ಹಾಗಾದರೆ ಕೃತಿಯೊಂದರ ಶ್ರೇಷ್ಠತೆಯ ಮಾನದಂಡ ಅದು ಓದುಗನಿಂದ ಪಡೆಯುವ ಮೆಚ್ಚುಗೆ ಎನ್ನುವ ಸತ್ಯವನ್ನು ನಮ್ಮ ಲೇಖಕರು ಮರೆಯುತ್ತಿರುವುದೇಕೆ?.

ಕನ್ನಡ ಭಾಷೆಯಲ್ಲಿ ಆತ್ಮಕಥನಗಳು ಮತ್ತು ಅಭಿನಂದನಾ ಗ್ರಂಥಗಳು ಪ್ರತಿವರ್ಷ ಸಾಕಷ್ಟು ಸಂಖ್ಯೆಯಲ್ಲಿ ಪ್ರಕಟವಾಗುತ್ತಿವೆ. ಆತ್ಮಕಥನಗಳು ಮತ್ತು ಅಭಿನಂದನಾ ಗ್ರಂಥಗಳು ಓಂದು ಕಾಲಘಟ್ಟದ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಬದುಕನ್ನು ಕಟ್ಟಿಕೊಡಬೇಕು. ಒಂದುರೀತಿಯಲ್ಲಿ ಈ ಪ್ರಕಾರದ ಸಾಹಿತ್ಯ ಕೃತಿಗಳು ಮುಂದಿನ ಜನಾಂಗಕ್ಕೆ ಅಧ್ಯಯನಕ್ಕೆ ಅಗತ್ಯವಾದ ಮಾಹಿತಿಯನ್ನೊದಗಿಸುವ ಆಕರ ಗ್ರಂಥಗಳಾಗಬೇಕು. ಆದರೆ ಸಧ್ಯ ಪ್ರಕಟವಾಗುತ್ತಿರುವ ಆತ್ಮಕಥನಗಳು ಮತ್ತು ಅಭಿನಂದನಾ ಗ್ರಂಥಗಳು ವ್ಯಕ್ತಿಕೇಂದ್ರಿತವಾಗಿ, ಹೊಗಳಿಕೆ ಹಾಗೂ ಸ್ವಹೊಗಳಿಕೆಯ ಪ್ರವಾಹದಲ್ಲಿ ಕೊಚ್ಚಿಹೋಗುತ್ತಿವೆ. ಸಾಮಾನ್ಯವಾಗಿ ಆತ್ಮಕಥನವನ್ನು ಬರೆದುಕೊಳ್ಳುವ ವ್ಯಕ್ತಿಗೆ ತನ್ನ ಗುಣಾವಗುಣಗಳನ್ನು ಹೇಳುವ ಧೈರ್ಯ ಮತ್ತು ಸ್ವವಿಮರ್ಶೆಗೆ ಒಳಗಾಗುವ ಮನೋಭಾವಬೇಕು. ಶಿವರುದ್ರಪ್ಪನವರು ಆತ್ಮಕಥನವನ್ನು ಕುರಿತು ಒಂದು ಕಡೆ ಹೀಗೆ ಹೇಳುತ್ತಾರೆ `ತನ್ನ ಬದುಕಿನ ಒಂದು ಹಂತದಲ್ಲಿ ಒಬ್ಬ ವ್ಯಕ್ತಿ ತನ್ನ ಜೀವನವನ್ನು ತಾನೇ ಅವಲೋಕಿಸಿಕೊಂಡು, ನೇರವಾಗಿ ಬರೆದುಕೊಳ್ಳುವ ಆತ್ಮ ಕಥನ ಎಂಬ ಈ ಪ್ರಕಾರ ಕನ್ನಡಕ್ಕೆ ಹೊಸತು. ಆತ್ಮ ಕಥನವನ್ನು ಬರೆಯುವುದು ತೀರಾ ಕಷ್ಟದ ಕೆಲಸ. ಆತ್ಮ ಕಥೆಯನ್ನು ಬರೆಯಲು ಮುಖ್ಯವಾಗಿ ನೈತಿಕ ಧೈರ್ಯ ಬೇಕು. ತನ್ನ ಬದುಕನ್ನು ತಾನೇ ಪರೀಕ್ಷಿಸಿಕೊಳ್ಳುವ ಧೈರ್ಯ ಬೇಕು. ತನ್ನ ಇತಿ ಮಿತಿಗಳನ್ನು ಕುರಿತ ವಿವೇಚನೆ ಬೇಕು. ಮುಚ್ಚು ಮರೆಯ ಮನಸ್ಸು ನಿಜವಾದ ಆತ್ಮಕಥೆಯನ್ನು ಬರೆದುಕೊಳ್ಳಲಾರದು’. ನನ್ನ ಓದಿನ ಅನುಭವವನ್ನು ಆಧರಿಸಿ ಹೇಳುವುದಾದರೆ ಕನ್ನಡದಲ್ಲಿ ಪ್ರಕಟವಾದ ಬಹಳಷ್ಟು ಆತ್ಮಕಥೆಗಳಲ್ಲಿ ವಾಸ್ತವಿಕೆತೆ ಎನ್ನುವುದು ಮರೆಯಾಗಿ ಅಲ್ಲೆಲ್ಲ ಕಲ್ಪನೆ ಮತ್ತು ಸ್ವಹೊಗಳಿಕೆಯೇ  ಮುನ್ನೆಲೆಗೆ ಬಂದಿರುವುದು. ಕೆಲವೊಮ್ಮೆ ಆತ್ಮಕಥೆಯ ಕಥಾನಾಯಕ ತನ್ನ ಸಾಮಾಜಿಕ ಮತ್ತು ವೈಯಕ್ತಿಕ ಬದುಕಿಗೆ ಎರವಾಗಬಲ್ಲ ಘಟನೆಗಳನ್ನು ಹೇಳುವಾಗ ಅಲ್ಲೆಲ್ಲ ಸತ್ಯವನ್ನು ಮರೆಮಾಚಿ ತಾನು ಆತ್ಮವಂಚನೆಗೆ ಒಳಗಾಗುವುದರೊಂದಿಗೆ ಓದುಗರನ್ನು ಕೂಡ ವಂಚಿಸುತ್ತಾನೆ. ಹೀಗಾಗಿ ಆತ್ಮಕಥೆಗಳಲ್ಲಿ ಅವುಗಳ ನಾಯಕರು ಅತ್ಯಂತ ವರ್ಣರಂಜಿತ ವ್ಯಕ್ತಿಗಳಾಗಿ ಬೆಳ್ಳಿತೆರೆಯ ನಾಯಕರುಗಳಂತೆ ಕಾಣಿಸಿಕೊಳ್ಳುವುದೇ ಹೆಚ್ಚು. ಈಗೀಗ ಪ್ರತಿಯೊಬ್ಬ ಲೇಖಕರಿಗೂ ಒಂದಲ್ಲ ಒಂದುಹಂತದಲ್ಲಿ ತಮ್ಮ ಬದುಕಿನ ಕುರಿತು ಆತ್ಮಕಥೆಯನ್ನು ಬರೆದುಕೊಳ್ಳುವ ವಾಂಛೆ ಹೆಚ್ಚುತ್ತಿದೆ. ಪರಿಣಾಮವಾಗಿ ಪ್ರತಿವರ್ಷ ಸಾಕಷ್ಟು ಸಂಖ್ಯೆಯಲ್ಲಿ ಕನ್ನಡ ಭಾಷೆಯಲ್ಲಿ ಆತ್ಮಕಥೆಗಳು ಪ್ರಕಟವಾಗುತ್ತಿವೆ. ಹಾಗೆಂದು ಎಲ್ಲ ಆತ್ಮಕಥೆಗಳನ್ನು ಅನುಮಾನದ ದೃಷ್ಟಿಯಿಂದ ನೋಡುವುದು ಕೂಡ ಸರಿಯಲ್ಲ. ಹೋರಾಟದ ಹಾದಿ, ಸುರಗಿಯಂಥ ಕೆಲವು ಆತ್ಮಕಥೆಗಳು ಒಂದು ಕಾಲದ ಬದುಕನ್ನು ಅತ್ಯಂತ ಅರ್ಥಪೂರ್ಣವಾಗಿ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿವೆ. ಇನ್ನು ಅಭಿನಂದನಾ ಗ್ರಂಥಗಳ ವಿಷಯಕ್ಕೆ ಬಂದರೆ ಪ್ರತಿ ವರ್ಷ ರಾಶಿ ರಾಶಿ ಅಭಿನಂದನಾ ಗ್ರಂಥಗಳು ಕನ್ನಡ ಭಾಷೆಯಲ್ಲಿ ಪ್ರಕಟವಾಗುತ್ತಿದ್ದು ಅವುಗಳಲ್ಲಿ ಜೊಳ್ಳೆ ಹೆಚ್ಚು. ದೈಹಿಕ ವಯೋಮಾನವನ್ನೇ ಮಾನದಂಡವಾಗಿಟ್ಟುಕೊಂಡು ಅಭಿನಂದನಾ ಗ್ರಂಥಗಳನ್ನು ಪ್ರಕಟಿಸುತ್ತಿರುವುದರಿಂದ ಅವುಗಳಿಂದ ಒಂದು ಕಾಲಘಟ್ಟದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತ್ಯಂತರವನ್ನು ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ. ನೀನು ನನ್ನ ಅಭಿನಂದನಾ ಗ್ರಂಥಕ್ಕೆ ಸಂಪಾದಕ ನಾನು ನಿನ್ನ ಅಭಿನಂದನಾ ಗ್ರಂಥಕ್ಕೆ ಸಂಪಾದಕ ಎನ್ನುವ ಈ ಕೊಟ್ಟು-ಕೊಳ್ಳುವ ಸಂಪ್ರದಾಯ ಇಲ್ಲಿಯೂ ಇದೆ. ಇನ್ನೂ ಅಚ್ಚರಿಯ ಸಂಗತಿ ಎಂದರೆ ರಾಜಕೀಯ ನಾಯಕರುಗಳ ಮತ್ತು ಕೈಗಾರಿಕೋದ್ಯಮಿಗಳ ಅಭಿನಂದನಾ ಗ್ರಂಥಗಳಿಗೆ ಸಂಪಾದಕರಾಗಲು ಬರಹಗಾರರ ನಡುವೆಯೇ  ಒಂದು ರೀತಿಯ ಸ್ಪರ್ಧೆ ಮತ್ತು ಪೈಪೋಟಿ ಏರ್ಪಡುತ್ತದೆ. ಕೆಲವರು ಸಾಹಿತ್ಯಲೋಕದಲ್ಲಿ ಲೇಖಕರೆಂದು ಪ್ರವರ್ಧಮಾನಕ್ಕೆ ಬರುವುದು ಈ ಅಭಿನಂದನಾ ಗ್ರಂಥಗಳ ಸಂಪಾದಕರಾಗಿ ಎನ್ನುವುದು ಇನ್ನೂ ವಿಚಿತ್ರವಾದ ಸಂಗತಿ. ಅಭಿನಂದನಾ ಗ್ರಂಥಗಳ ಕಥಾನಾಯಕರುಗಳನ್ನು ಸಕಲ ಕಲಾವಲ್ಲಭರಂತೆ ಚಿತ್ರಿಸುವಲ್ಲೇ ನಮ್ಮ ಬಹಳಷ್ಟು ಬರಹಗಾರರ ಸೃಜನಶೀಲತೆ ವ್ಯಯವಾಗುತ್ತಿರುವುದು ಕನ್ನಡ ಸಾಹಿತ್ಯದ ದುರಂತಗಳಲ್ಲೊಂದು. 

ಇನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವಿಷಯಕ್ಕೆ ಬಂದರೆ ನಮ್ಮ ಬರಹಗಾರರು ಪರಿಷತ್ತಿನ ಚುನಾವಣೆಗೆ ರಾಜಕೀಯದ ಖದರು ತಂದುಕೊಟ್ಟಿರುವರು. ಚುನಾವಣೆಯ ಸಂದರ್ಭ ಸಾಹಿತಿಗಳು ಮಾಡುವ ಆರೋಪ ಮತ್ತು ಪ್ರತ್ಯಾರೋಪಗಳು ಯಾವ ರಾಜಕಾರಣಿಗಳಿಗೂ ಕಮ್ಮಿಯಿಲ್ಲ. ಸುಮಾರು ನೂರುವರ್ಷಗಳಷ್ಟು ಹಳೆಯದಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಒಂದು ಉನ್ನತ ಸಂಸ್ಥೆಯಾಗಿ ರೂಪಿಸುವ ಹೊಣೆಗಾರಿಕೆಯಿಂದ ನುಣಿಚಿಕೊಳ್ಳುವ ನಮ್ಮ ಬರಹಗಾರರು ಪರಿಷತ್ತಿನಿಂದ ಮಾತ್ರ ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಪೂರೈಸಿಕೊಳ್ಳುತ್ತಿರುವುದು ಸುಳ್ಳಲ್ಲ. ಪರಿಷತ್ತಿನಿಂದ ಜರುಗುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ, ಪರಿಷತ್ತಿನಿಂದ ತಮ್ಮ ಪುಸ್ತಕಗಳ ಪ್ರಕಟಣೆ ಹೀಗೆ ಫಲಾನುಭವಿಗಳಾಗುತ್ತಿರುವ ಬಹುತೇಕ ಸಾಹಿತಿಗಳು ಪರಿಷತ್ತಿನ ಅಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ಓಲೈಸುತ್ತ ಆಸ್ಥಾನದ ಭಟ್ಟಂಗಿಗಳಂತೆ ವರ್ತಿಸುತ್ತಿರುವರು. ಕನ್ನಡ ಸಾಹಿತ್ಯ ಪರಿಷತ್ತು ಅತ್ಯಂತ ಜಡವಾಗಿದ್ದು ಈ ನೂರು ವರ್ಷಗಳಲ್ಲಿ ಪರಿಷತ್ತಿನಿಂದ ಕನ್ನಡ ನಾಡು ನುಡಿಯ ಕುರಿತಾಗಿ ಆಗಬೇಕಾದ ಕೆಲಸ ಕಾರ್ಯಗಳು ಸಾಕಷ್ಟು ಪ್ರಮಾಣದಲ್ಲಿ ಆಗಿಲ್ಲವೆನ್ನುವ ಕೂಗು ಎಲ್ಲ ಕಡೆಯಿಂದ ಕೇಳಿಬರುತ್ತಿದೆ. ಕೆಲವೊಮ್ಮೆ ಸಾಹಿತ್ಯದ ಬಗ್ಗೆ ಆಸಕ್ತಿ ಮತ್ತು ನಾಡು ನುಡಿಯ ಕಾಳಜಿ ಇಲ್ಲದ ವ್ಯಕ್ತಿಗಳು ಪರಿಷತ್ತಿನ ಅಧ್ಯಕ್ಷರಾದ ಉದಾಹರಣೆಗಳಿವೆ. ಪರಿಷತ್ತು ಕೇವಲ ಕೆಲವೇ ವ್ಯಕ್ತಿಗಳ ವೈಯಕ್ತಿಕ ಹಿತಾಸಕ್ತಿಯನ್ನು ಪೂರೈಸುವ ತಾಣವಾಗಬಾರದು ಎನ್ನುವ ಕಾಳಜಿಯಿಂದ ನಾನು ಈ ಮಾತನ್ನು ಉಲ್ಲೇಖಿಸುತ್ತಿದ್ದೇನೆ. 

ಮೊನ್ನೆ ಸಾಹಿತ್ಯ ಸಮಾರಂಭವೊಂದರಲ್ಲಿ ಪ್ರೇಕ್ಷಕರೊಬ್ಬರು ಲೇಖಕರು ಚಳವಳಿ ಮತ್ತು ಹೋರಾಟಗಳಲ್ಲಿ ಏಕೆ ಭಾಗವಹಿಸುತ್ತಿಲ್ಲ ಎನ್ನುವ ಅತಿ ಮಹತ್ವದ ಪ್ರಶ್ನೆಯೊಂದನ್ನು ಎತ್ತಿದರು. ಸಮಾರಂಭದಲ್ಲಿ ಹೋರಾಟದ ಕುರಿತು ಒಂದು ಗೋಷ್ಠಿಯನ್ನು ಕೂಡ ಏರ್ಪಡಿಸಲಾಗಿತ್ತು ಮತ್ತು ಆ ಗೋಷ್ಠಿಯಲ್ಲಿ ಮಾತನಾಡಲು ಆಹ್ವಾನಿತರಾಗಿದ್ದವರು ಲೇಖಕರಾಗಿರದೆ ಅವರು ಹೋರಾಟಗಾರರಾಗಿದ್ದು ಗಮನಿಸಬೇಕಾದ ಸಂಗತಿಯಾಗಿತ್ತು. ಚಳವಳಿ ಮತ್ತು ಹೋರಾಟದ ಕುರಿತು ಮಾತನಾಡಲು ನಮ್ಮ ಬರಹಗಾರರಿಗೆ ಸಾಧ್ಯವಾಗದೇ ಇರಲು ಬಹುಮುಖ್ಯ ಕಾರಣ ಅವರು ಆ ಒಂದು ಪ್ರಕ್ರಿಯೆಯ ಭಾಗವಾಗದೇ ಇರುವುದು. ನದಿ ನೀರಿನ ಸಮಸ್ಯೆ ಅದು ರೈತರದು, ಪರಭಾಷಾ ಸಿನಿಮಾಗಳ ಹಾವಳಿ ಅದು ಸಿನಿಮಾದವರ ಸಮಸ್ಯೆ, ಇಂಗ್ಲಿಷ್ ಮಾಧ್ಯಮದ ಶಾಲೆಗಳು ಅದು ಪಾಲಕರ ಸಂಕಟ, ಅನ್ಯಭಾಷೆಗಳ ಪ್ರಭಾವ ಗಡಿನಾಡಿನವರ ಆತಂಕ ಹೀಗೆ ನಾಡು ನುಡಿಗೆ ಸಂಬಂಧಿಸಿದ ಸಮಸ್ಯೆಗಳೆಲ್ಲ ಹೀಗೆ ವಿಭಜನೆಗೊಂಡಿರುವುದರಿಂದ ನಮ್ಮ ಸಾಹಿತಿಗಳು ಯಾವ ಚಳವಳಿ ಮತ್ತು ಹೋರಾಟಗಳೊಂದಿಗೆ ತಮ್ಮನ್ನು ಗುರುತಿಸಿಕೊಳ್ಳುತ್ತಿಲ್ಲ. ಮೂರು ದಶಕಗಳ ಹಿಂದೆ ಭಾಷೆಯ ಉಳಿವಿಗಾಗಿ ಗೋಕಾಕ ಚಳವಳಿಯಲ್ಲಿ ಒಂದಾಗಿ ಬೀದಿಗಿಳಿದ ನಮ್ಮ ಬರಹಗಾರರು ಇವತ್ತು ಭಾಷೆಯ ಅಸ್ತಿತ್ವಕ್ಕಾಗಿ ಒಗ್ಗಟ್ಟನ್ನು ತೋರಿಸುತ್ತಿಲ್ಲದಿರುವುದು ಖಂಡನಾರ್ಹ. ಯೇಟ್ಸ್ ತನ್ನ ಸುಪ್ರಸಿದ್ಧ ಕವಿತೆ ‘ದ’ಸೆಕೆಂಡ್ ಕಮಿಂಗ್’ನಲ್ಲಿ ಯುರೋಪಿನ ಸನ್ನಿವೇಶವನ್ನು ವರ್ಣಿಸುತ್ತ the best lack conviction and the worst are full of passionate intensity  ಎಂದು ಆತಂಕದಿಂದ ಬರೆಯುತ್ತಾನೆ. ಯೇಟ್ಸ್ ನ  ಈ ಹೇಳಿಕೆಯನ್ನು ಆಧರಿಸಿ ಹೇಳುವುದಾದರೆ ಬರಹಗಾರರು ಮೌನವಾಗಿರದೆ ಮಾತನಾಡುವುದನ್ನು ಮತ್ತು ಪ್ರತಿಭಟಿಸುವುದನ್ನು ಕಲಿಯಬೇಕು. ಅಧಿಕಾರದ  ಶಕ್ತಿಕೇಂದ್ರ ಮತ್ತು ರಾಜಕಾರಣವನ್ನು ಓಲೈಸದೆ ಬರಹಗಾರರು ಹೋರಾಟ ಮತ್ತು ಚಳವಳಿಯಂಥ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಮಾಜದ ಹಿತದ ದೃಷ್ಟಿಯಿಂದ ಬಹಳ ಮುಖ್ಯವಾಗಿದೆ. 

ಇನ್ನು ಬರವಣಿಗೆ ಕುರಿತು ರಷ್ಯನ್ ಲೇಕಕಿ ಲ್ಯೂಮಿಡಿಲಾ ಅವರ ಮಾತುಗಳೊಂದಿಗೆ ನಾನು ಈ ಲೇಖನವನ್ನು/ಪತ್ರವನ್ನು ಪೂರ್ಣಗೊಳಿಸುತ್ತಿದ್ದೇನೆ ‘ಬದುಕಿನ ಹಾದಿಯಲ್ಲಿ ನಮಗೇ ಅರಿವಿಲ್ಲದಂತೆ ಅನುಭವಗಳ ಮೂಲಕ ಹಾದು ಬಂದಿರುತ್ತೇವೆ. ಹೀಗೆ ಪಯಣಿಸುವಾಗ ಎದುರಾಗುವ ಅನುಭವಗಳ ಅರಿವು ನಮಗಾಗುವುದಿಲ್ಲ. ಆದರೆ ಬರವಣಿಗೆಗೆ ಕೂತಾಗ ಆ ಅನುಭವಗಳನ್ನು ಅವುಗಳಿಂದ ಹೊರನಿಂತು ನೋಡುವುದು ಸಾಧ್ಯವಾಗುತ್ತದೆ. ಆ ಮೂಲಕ ಒಂದು ಕಾಲಘಟ್ಟದ ಬದುಕನ್ನು ನಾನು ಮತ್ತೆ ಕಟ್ಟುತ್ತಿರುತ್ತೇನೆ. ಹಾಗಾಗಿ ಬರವಣಿಗೆ ಬಗ್ಗೆ ಎಲ್ಲ ಬರಹಗಾರರಿಗೂ ಸತ್ಯಕ್ಕೆ ಎದುರಾಗುವ ಭೀತಿ ಇರುತ್ತದೆ’. ನಿಜಕ್ಕೂ ಬರವಣಿಗೆಯ ಸಾರ್ಥಕೆ ಇರುವುದು ಅದು ಸತ್ಯಕ್ಕೆ ಎದುರಾದಾಗ.

ಹೀಗೊಬ್ಬ ಕನ್ನಡ ಸಾಹಿತ್ಯದ ಓದುಗ


-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

No comments:

Post a Comment