Friday, December 9, 2016

ರೂಪದರ್ಶಿ: ಮನುಷ್ಯ ಸಂಬಂಧಗಳ ಹುಡುಕಾಟ




             ಕನ್ನಡ ಸಾಹಿತ್ಯದಲ್ಲಿ ಕಾದಂಬರಿ ಪ್ರಕಾರ ಅತಿ ಹೆಚ್ಚಿನ ಓದುಗರನ್ನು ತನ್ನತ್ತ ಸೆಳೆದ ಮತ್ತು ಸೆಳೆಯುತ್ತಿರುವ ಸಾಹಿತ್ಯ ಪ್ರಕಾರವಾಗಿ ಅಪಾರವಾದ ಜನಮನ್ನಣೆ ಪಡೆದಿದೆ. ಈ ಜನಪ್ರಿಯತೆಯ ಕಾರಣದಿಂದಲೇ ಕಾದಂಬರಿ ಪ್ರಕಾರದಲ್ಲಿ ಕೃಷಿ ಮಾಡದ ಲೇಖಕರು ಸಹ ಒಮ್ಮೆಯಾದರೂ ಕಾದಂಬರಿಯ ಬರವಣಿಗೆಗೆ ಕೈಹಾಕಿದ ಉದಾಹರಣೆಗಳು ಬಹಳಷ್ಟಿವೆ. ಇದಕ್ಕೊಂದು ದೃಷ್ಟಾಂತವೆಂದರೆ ಶಬ್ದಗಳ ಗಾರುಡಿಗ ದ ರಾ ಬೇಂದ್ರೆ ತಮ್ಮ ಕವನ ರಚನೆಯ ನಿಷ್ಟೆಯ ನಡುವೆಯೂ ಕಾದಂಬರಿ  ಬರೆಯ ಬೇಕೆಂಬ ಹಂಬಲದಿಂದ ಅಂಥದ್ದೊಂದು ಪ್ರಯತ್ನಕ್ಕೆ ಕೈಹಾಕಿದ್ದರು. ಕನ್ನಡ ಖ್ಯಾತ ಬರಹಗಾರ ಎಸ್. ಎಲ್. ಭೈರಪ್ಪನವರು ಸಣ್ಣ ಕತೆಗಳ ಕಡೆಗೂ ಹೊರಳದೆ ಕಾದಂಬರಿ ಪ್ರಕಾರಕ್ಕೆ ಮಾತ್ರ ನಿಷ್ಟರಾಗಿ ಉಳಿದು ಕಾದಂಬರಿಯ ಓದನ್ನು ಜನಪ್ರಿಯಗೊಳಿಸಿದ ಹಾಗೂ ಈ ಪ್ರಕಾರದ ಸಾಹಿತ್ಯಕ್ಕೆ  ದೊಡ್ಡ ಓದುಗರ ಸಮೂಹವನ್ನೇ ದಕ್ಕಿಸಿಕೊಂಡ ಉದಾಹರಣೆ ನಮ್ಮೆದುರಿಗಿದೆ. ಅನಕೃ, ತರಾಸು, ಶಿವರಾಮ ಕಾರಂತರು ಸಹ ಕಾದಂಬರಿ  ರಚನೆಗೇ ನಿಷ್ಟರಾಗಿ ಉಳಿದರು ಎನ್ನುವುದನ್ನು ನಾನು ನನ್ನ ಓದಿನ ಮಿತಿಯನ್ನು ನೆನಪಿನಲ್ಲಿಟ್ಟುಕೊಂಡು ಹೇಳಲು ಬಯಸುತ್ತೇನೆ. 

         ಕನ್ನಡದ ಕಾದಂಬರಿ ಪ್ರಕಾರದಲ್ಲಿ ಗುಲ್ವಾಡಿ ವೆಂಕಟರಾಯರ ಪ್ರಥಮ ಕಾದಂಬರಿ 'ಇಂದಿರಾ' ದಿಂದ ಇತ್ತೀಚಿನ ಕೃತಿಗಳವರೆಗೆ ಸಾಕಷ್ಟು ಪ್ರಯೋಗಗಳಾಗಿವೆ. ಪಾತ್ರಗಳ ಸೃಷ್ಟಿ, ಕಥನ ಕ್ರಮ, ಬರವಣಿಗೆಯ ಶೈಲಿ, ವಿಷಯದ ಆಯ್ಕೆ ಹೀಗೆ ಕಾದಂಬರಿ ಪ್ರಕಾರ ಕಾಲಕಾಲಕ್ಕೆ ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಲೇ ಬಂದಿದೆ. ಇಲ್ಲಿ ಹಳೆಯದನ್ನು ಭಂಜಿಸಿ ಹೊಸ ಕಥನ ಕ್ರಮವನ್ನು ಕಟ್ಟುವ ಸಾಕಷ್ಟು ಪ್ರಯೋಗಗಳು ನಡೆದಿವೆ ಮತ್ತು ಅಂಥದ್ದೊಂದು ಬದಲಾವಣೆಯನ್ನು ಕನ್ನಡದ ಓದುಗರ ಸಮೂಹ ಕೂಡ ಸ್ವಾಗತಿಸುತ್ತಲೇ ಬಂದಿದೆ. ಒಂದು ಕಾಲದಲ್ಲಿ ಮಹಿಳಾ ಸಾಹಿತಿಗಳು ಜನಪ್ರಿಯತೆಯ ಉತ್ತುಂಗಕ್ಕೆರಿದ್ದು ತಮ್ಮ ಕಾದಂಬರಿ ಬರವಣಿಗೆಯಿಂದ ಎನ್ನುವ ಮಾತು ಸತ್ಯಕ್ಕೆ ಹತ್ತಿರವಾಗಿದೆ. ತ್ರಿವೇಣಿ, ಇಂದಿರಾ ಮುಂತಾದ ಮಹಿಳಾ ಲೇಖಕಿಯರು ಸಾಹಿತ್ಯ ಲೋಕದಲ್ಲಿ ಮುನ್ನೆಲೆಗೆ  ಬಂದಿದ್ದು ಕಾದಂಬರಿಗಳ ಬರವಣಿಗೆಯಿಂದಲೆ ಎನ್ನುವುದನ್ನು ಕನ್ನಡ ಪುಸ್ತಕಗಳ ಸಹೃದಯ ಓದುಗರು ಬಲ್ಲರು. ಈ ಎಲ್ಲ ಮಾತುಗಳನ್ನು ನಾನು ಇತ್ತೀಚಿಗೆ ಓದಿದ 'ರೂಪದರ್ಶಿ' ಕಾದಂಬರಿಯ ಕುರಿತು ಬರೆಯುವುದಕ್ಕೆ ಮುನ್ನಡಿಯಾಗಿ ಹೇಳಬೇಕಾಯಿತು. 

           'ರೂಪದರ್ಶಿ' ೧೯೮೩ ರಲ್ಲಿ ಪ್ರಕಟವಾದ ಕೆ ವಿ ಅಯ್ಯರ್ ಅವರ ಕಾದಂಬರಿ.  ರೂಪದರ್ಶಿ, ನಾಟ್ಯರಾಣಿ ಶಾಂತಲಾ, ಸಮುದ್ಯುತಾ ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡವರು ಕೆ ವಿ ಅಯ್ಯರ್. ಬಡ ಕುಟುಂಬದಲ್ಲಿ ಹುಟ್ಟಿ ಸ್ವಪ್ರಯತ್ನದಿಂದ ಬದುಕನ್ನು ರೂಪಿಸಿಕೊಂಡ ಕೆ ವಿ ಅಯ್ಯರ್ ಅವರದು ಯೋಗ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. ಯೋಗ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಯೋಗ ಕಲಿಸಿದ ಗುರು ಇವರು. ಟಿ ಪಿ ಕೈಲಾಸಂ ಅವರ ಸಂಪರ್ಕಕ್ಕೆ ಬಂದು  ಬರೆಯಲು  ಪ್ರಾರಂಭಿಸಿದ ಅಯ್ಯರ್ ಕನ್ನಡಕ್ಕೆ ವಿಶಿಷ್ಟ ಕೃತಿಗಳನ್ನು ಕೊಡುಗೆಯಾಗಿ ಕೊಟ್ಟಿರುವರು. ಅವರ ಐತಿಹಾಸಿಕ ಕಾದಂಬರಿ 'ನಾಟ್ಯರಾಣಿ ಶಾಂತಲಾ' ಸುಮಾರು ೭೧ ಭಾಷೆಗಳಿಗೆ ಅನುವಾದಗೊಂಡು ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು.

                 ಫ್ಲಾರೆನ್ಸ್, ಪೀಸಾ, ಕರಾರಾ, ವ್ಯಾಟಿಕನ್ ಸಿಟಿ ಈ ಸ್ಥಳಗಳನ್ನು ಕತೆಯ ಕ್ಷೇತ್ರವಾಗಿಟ್ಟು ಕೊಂಡು ರಚನೆಯಾದ 'ರೂಪದರ್ಶಿ' ಕಾದಂಬರಿಯಲ್ಲಿ ಮನುಷ್ಯ ಸಂಬಂಧಗಳ ಹುಡುಕಾಟವಿದೆ. ಕತೆಯ ಕ್ಷೇತ್ರ ದೂರದಲ್ಲೆಲ್ಲೋ ಇದ್ದರೂ ಓದುಗ ಕಾದಂಬರಿಯನ್ನು ಓದುತ್ತ ಹೋದಂತೆ ತನ್ನದೇ ಊರಿನ ಕಥೆಯಿದು ಎಂದು ಪರಿಭಾವಿಸುತ್ತ ಹೋಗುತ್ತಾನೆ. ಪ್ರೀತಿ, ಪ್ರೇಮ, ವಾತ್ಸಲ್ಯದ ಜೊತೆಗೆ ಮೋಸ, ವಂಚನೆ, ದ್ರೋಹ, ಕಪಟತನಗಳು ಕಾದಂಬರಿಯ ಪಾತ್ರಗಳ ಮೂಲಕ ಓದುಗನೆದುರು ಅನಾವರಣಗೊಳ್ಳುತ್ತವೆ. ವಾತ್ಸಲ್ಯದ ಸಿಂಚನ ಗೈಯುವ ಲೀಸ್ಸಾ ತಾಯಿ ಇರುವಂತೆ ಇಲ್ಲಿ ದ್ರೋಹ ವಂಚನೆಗೆ ನಿದರ್ಶನವಾಗಿ ಟಾಯಿಟ್ ಇದ್ದಾನೆ. ಶೋಷಣೆಗೆ ಒಳಗಾದ ಲೀನಾ ಮನಸ್ಸನ್ನು ಆರ್ದ್ರಗೊಳಿಸಿದರೆ ಬೆನೆಟ್ಟೊ ವಿಶ್ವಾಸ ಹಾಗೂ ಪ್ರೀತಿಗೆ ಶ್ರೇಷ್ಠ ಉದಾಹರಣೆಯಾಗಿ ನಿಲ್ಲುತ್ತಾನೆ. ನನ್ನೆಟ್ಟಿಯಂಥ ವಾತ್ಸಲ್ಯಮೂರ್ತಿ ಬದುಕಿ ಬಾಳುತ್ತಿರುವ ಊರಲ್ಲಿ ಜಿಯೋವನಿಯಂಥ ಕ್ರೂರಿ ಕೂಡ ಬದುಕುತ್ತಿರುವುದು ಅದು ಮನುಷ್ಯ ಸಂಬಂಧಗಳ ದುರಂತ ಮತ್ತು ವಿಪರ್ಯಾಸವೂ ಹೌದು. ಈ ಎಲ್ಲ ಪಾತ್ರಗಳ ನಡುವೆ ಕಲಾಕಾರನ ಚಿತ್ರಪಟಕ್ಕೆ ರೂಪದರ್ಶಿಯಾಗುವ ಅರ್ನೆಸ್ಟ್ ಬಹುಕಾಲ ನೆನಪಿನಲ್ಲುಳಿದು ಕಾಡುತ್ತಾನೆ. ಕಾದಂಬರಿಯ ಒಟ್ಟು ಪಾತ್ರಗಳಿಗೆ ಮತ್ತು ಅವುಗಳ ಗುಣಾವಗುಣಗಳಿಗೆ ಪ್ರಸಿದ್ಧ ಚಿತ್ರಕಾರ ಮೈಕಲ್ ಎಂಜಲೋ ಸಾಕ್ಷಿಯಾಗಿ ನಿಲ್ಲುವನು. ಮೈಕಲ್ ಎಂಜಲೋನ ಮೂಲಕವೇ ಕಾದಂಬರಿಯಲ್ಲಿನ ಪ್ರತಿಯೊಂದು ಪಾತ್ರ ಓದುಗನ ಅನುಭವಕ್ಕೆ ದಕ್ಕುತ್ತವೆ.

           ಫ್ಲಾರೆನ್ಸ್ ನಗರದ ಕ್ರೈಸ್ತ ದೇವಾಲಯದಲ್ಲಿ ಪ್ರಸಿದ್ಧ ಕಲಾವಿದ ಮೈಕಲ್ ಎಂಜಲೋ ಕ್ರಿಸ್ತನ ಬದುಕಿಗೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸುವುದರೊಂದಿಗೆ ಕಾದಂಬರಿಯ ಕಥೆ ತೆರೆದುಕೊಳ್ಳುತ್ತದೆ. ದೇವಾಲಯದ ಧರ್ಮದರ್ಶಿಗಳು ಕ್ರಿಸ್ತನ ಜೀವನ ಚರಿತ್ರೆಯನ್ನು ಕುಂಚದಲ್ಲಿ ಸೆರೆಹಿಡಿಯಲು ಆಹ್ವಾನಿಸಿದಾಗ ಸಂತೋಷದಿಂದ ಒಪ್ಪಿಕೊಳ್ಳುವ ಮೈಕಲ್ ಎಂಜಲೋ ತಾನು ಒಪ್ಪಿಕೊಂಡ ಕಾರ್ಯಕ್ಕೆ ಸನ್ನದ್ಧನಾಗುತ್ತಾನೆ. ಇಟಲಿ ದೇಶದ ಈ ಮೈಕಲ್ ಎಂಜಲೋ ಮಹಾ ಉತ್ಸಾಹಶಾಲಿ ಮತ್ತು ಭಾವುಕ. ಕಷ್ಟಸಾಧ್ಯವಾದರೂ ಉದಾತ್ತ ಧ್ಯೇಯಗಳನ್ನು ಹಿಡಿದು ಹೋಗುವಾತ. ಜೊತೆಗೆ ಸ್ಥಿತಪ್ರಜ್ಞ ಕೂಡ ಹೌದು. ಶಿಲ್ಪಕಾರ ಮತ್ತು ಚಿತ್ರಕಾರನಾದ ಅವನೊಳಗೆ ಭಾವುಕ ಗುಣಗಳ ಕವಿಯೂ ಇರುವನು. ತುಂಬು ಗರ್ಭಿಣಿಯಾದ ತಾಯಿ ಮೇರಿ, ದನದ ಕೊಟ್ಟಿಗೆಯಲ್ಲಿ ಕ್ರಿಸ್ತನ ಜನನ, ತಾಯಿಯ ಮಡಿಲಲ್ಲಿ ನಿದ್ರಿಸುತ್ತಿರುವ ಪುಟ್ಟ ಕ್ರಿಸ್ತ ಹೀಗೆ ಮೂರು ಚಿತ್ರಗಳನ್ನು ಬರೆದು ಪೂರ್ಣಗೊಳಿಸಿದ ಮೈಕಲ್ ಎಂಜಲೋ ಮುಂದೆ ಬರೆಯಬೇಕಿರುವುದು ಕ್ರಿಸ್ತನ ಬಾಲ್ಯದ ಚಿತ್ರವನ್ನು. ಬಾಲ ಕ್ರಿಸ್ತನನ್ನು ಬಣ್ಣದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ ಆ ಕ್ಷಣ ಕುಂಚ ಹಿಡಿದ ಆತನ ಕೈ ಹಿಂದೇಟು ಹಾಕುತ್ತದೆ. ಸಾವಿರಾರು ಚಿತ್ರಗಳನ್ನು ಲೀಲಾಜಾಲವಾಗಿ ಕುಂಚದಿಂದ ಅರಳಿಸಿದ ಮೈಕಲ್ ಆ ಒಂದು ಸೋಲಿನಿಂದ ಅಧೀರನಾಗುತ್ತಾನೆ. ಬಾಲಕ್ರಿಸ್ತನ ಬದುಕನ್ನು ಚಿತ್ರಿಸಲು ರೂಪದರ್ಶಿಯ ಅಗತ್ಯವನ್ನು ಮನಗಂಡು ಮೈಕಲ್ ಎಂಜಲೋ ಪುಟ್ಟ ಬಾಲಕನನ್ನು ಅರಸುತ್ತ ಹೊರಡುತ್ತಾನೆ. ಹಲವು ತಿಂಗಳುಗಳ ಕಾಲ ಊರೂರು ಅಲೆದರೂ ಮುಗ್ಧ ಸೌಂದರ್ಯದ ಮುಖಭಾವವುಳ್ಳ ಬಾಲಕ ದೊರೆಯದೆ ಮೈಕಲ್ ನಿರಾಶನಾಗುತ್ತಾನೆ. ಹುಡುಕಾಟದಲ್ಲೇ ಅವನ ಆರೋಗ್ಯ ಕ್ಷೀಣಿಸುತ್ತದೆ. ಕ್ರಿಸ್ತನ ಬದುಕಿನ ಚಿತ್ರಗಳನ್ನು ಬಿಡಿಸುವ ಕೆಲಸ ಅಪೂರ್ಣಗೊಂಡಿತೆಂದು ಮನಸ್ಸು ಕ್ಷೋಭೆಗೊಂಡ ಸಂದರ್ಭ ಪೀಸಾ ನಗರದ ಕೊಳಗೇರಿಯ ಬೀದಿ ಬದಿ ಆಟವಾಡುತ್ತಿರುವ ಮಕ್ಕಳ ಗುಂಪಿನಲ್ಲಿದ್ದ ಅಪಾರ ತೇಜಸ್ಸುಳ್ಳ ಬಾಲಕ ಮೈಕಲ್ ಎಂಜಲೋನ ದೃಷ್ಟಿಗೆ ಬೀಳುತ್ತಾನೆ. ಬಾಲ ಕ್ರಿಸ್ತನ ಚಿತ್ರಕ್ಕೆ ಈ ಬಾಲಕನೇ ತಕ್ಕ ರೂಪದರ್ಶಿ ಎಂದು ನಿರ್ಧರಿಸಿದ ಮೈಕಲ್ ಅವನನ್ನು ತನ್ನೊಡನೆ ಫ್ಲಾರೆನ್ಸ್ ನಗರಕ್ಕೆ ಕರೆದೊಯ್ಯಲು ನಿರ್ಧರಿಸುತ್ತಾನೆ. ತಂದೆ ತಾಯಿಯನ್ನು ಕಳೆದುಕೊಂಡು ಅನಾಥನಾಗಿ ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿರುವ ಬಾಲಕ ಅರ್ನೆಸ್ಟ್ ಗೆ ಹೊಸ ಬದುಕನ್ನು ಕಟ್ಟಿಕೊಳ್ಳುವ ಅವಕಾಶ ಎದುರಾಗುತ್ತದೆ. ಅಜ್ಜಿಯ ಮನವೊಲಿಸಿ ಅವರಿಬ್ಬರನ್ನೂ ತನ್ನೊಡನೆ ಫ್ಲಾರೆನ್ಸ್ ನಗರಕ್ಕೆ ಕರೆದೊಯ್ಯುವಲ್ಲಿ ಮೈಕಲ್ ಎಂಜಲೋ ಯಶ ಕಾಣುತ್ತಾನೆ. ಕಡುಬಡತನ, ಮಗಳು ಅಳಿಯನ ದುರ್ಮರಣ, ಮೊಮ್ಮಗನ ಜವಾಬ್ದಾರಿಯಿಂದ ನೊಂದ ಆ ಜೀವ ಹಣದಾಸೆಗೆ ಮೊಮ್ಮಗ ಅರ್ನೆಸ್ಟ್ ರೂಪದರ್ಶಿಯಾಗಲು ಒಪ್ಪಿಗೆ ನೀಡುತ್ತಾಳೆ. ಅರ್ನೆಸ್ಟ್ ನನ್ನು ರೂಪದರ್ಶಿಯಾಗಿಟ್ಟುಕೊಂಡು ಮೈಕಲ್ ಎಂಜಲೋ ಬಾಲಕ್ರಿಸ್ತನ ಚಿತ್ರಗಳನ್ನು ಅತ್ಯಂತ ಸುಂದರವಾಗಿ ಚಿತ್ರಿಸುತ್ತಾನೆ. ಮೂರು ತಿಂಗಳುಗಳ ಕಾಲ ಫ್ಲಾರೆನ್ಸ್ ನಗರದಲ್ಲಿ ಎಂಜಲೋನ ಆಶ್ರಯದಲ್ಲಿ ಕಳೆದ ಅಜ್ಜಿ ಮತ್ತು ಮೊಮ್ಮಗ ಪೀಸಾ ನಗರಕ್ಕೆ ಹಿಂತಿರುಗುತ್ತಾರೆ.

              ಈಗ ಅರ್ನೆಸ್ಟ್ ಮೊದಲಿನಂತೆ ಬಡವನಲ್ಲ. ಮೈಕಲ್ ಎಂಜಲೋ ದೇವಾಲಯದ ಧರ್ಮದರ್ಶಿಗಳಿಂದ ಅಜ್ಜಿ ಮತ್ತು ಮೊಮ್ಮಗನ ಬದುಕಿಗೆ ಅಗತ್ಯವಾದ ಹಣಕಾಸಿನ ನೆರವನ್ನು ಒದಗಿಸಿಕೊಟ್ಟಿದ್ದಾನೆ. ಅರ್ನೆಸ್ಟ್ ಈಗ ಕೊಳಗೇರಿಯ ಮಕ್ಕಳೊಂದಿಗೆ ಆಡಬೇಕಿಲ್ಲ. ದಿನದ ಎರಡು ಹೊತ್ತಿನ ಊಟಕ್ಕೆ ಚಿಂತಿಸಬೇಕಿಲ್ಲ. ಅವನು ಎಲ್ಲ ಮಕ್ಕಳಂತೆ ಚೆಂದದ ಬಟ್ಟೆ ತೊಟ್ಟು ಶಾಲೆಗೆ ಹೋಗಬಹುದು. ತನಗೆ ಇಷ್ಟವಾದ ಆಟಿಕೆಗಳನ್ನು ಖರೀದಿಸಬಹುದು. ಆದರೆ ಅಜ್ಜಿಯ ಮನಸ್ಸು ಮತ್ತು ವಿಚಾರಗಳು ಬದಲಾಗಿವೆ. ಈ ಮೊದಲು ನಮ್ಮನ್ನು ಕೈಹಿಡಿದು ನಡೆಸುವುದು ಹೇಗೆಂದು ದಯಾಮಯನಾದ ನಿನಗೆ ಗೊತ್ತಿದೆ ನಮಗಾಗಿ ಏನನ್ನೂ ಬೇಡುವುದಿಲ್ಲ ಎಂದು ಪ್ರಾರ್ಥಿಸುತ್ತಿದ್ದವಳು ಈಗ ಸಂಪತ್ತನ್ನು ಉಳಿಸಿಕೊಡು ಎಂದು ಪ್ರಾರ್ಥಿಸುತ್ತಿದ್ದಾಳೆ. ಕೂಡಿಟ್ಟ ಹಣ ಖರ್ಚಾದರೆ ಅರ್ನೆಸ್ಟ್ ನ ಭವಿಷ್ಯದ ಗತಿ ಏನು ಎಂದು ಚಿಂತಿಸುತ್ತಾಳೆ. ಕಳ್ಳಕಾಕರು ಬಂದು ದೋಚಿಕೊಂಡು ಹೋದರೆ ಹೇಗೆಂದು ಭೀತಳಾಗುತ್ತಾಳೆ. ರಾತ್ರಿ ನಿದ್ರೆ ಹತ್ತಿರ ಸುಳಿಯುತ್ತಿಲ್ಲ. ಹೀಗೆ ಬದಲಾದ ಸನ್ನಿವೇಶದಲ್ಲಿ ಮನುಷ್ಯನ ಆಸೆ ದುರಾಸೆಯನ್ನು ಲೇಖಕರು ಅಜ್ಜಿಯ ಪಾತ್ರದ ಮೂಲಕ ಮನೋಜ್ಞವಾಗಿ ಚಿತ್ರಿಸಿರುವರು. ದುಡ್ಡು ಮನುಷ್ಯನ ಬದುಕು ಮತ್ತು ಭಾವನೆಗಳನ್ನು ಹೇಗೆ ಪರಿವರ್ತಿಸುತ್ತದೆ ಎನ್ನುವುದಕ್ಕೆ ಅಜ್ಜಿಯ ಪಾತ್ರ ನಿದರ್ಶನವಾಗುತ್ತದೆ.

        ಅರ್ನೆಸ್ಟ್ ನನ್ನು ಪೀಸಾ ನಗರಕ್ಕೆ ಕಳುಹಿಸಿದ ಮೈಕಲ್ ಎಂಜಲೋ ಕ್ರಿಸ್ತನ ಯೌವನದ  ಹಾಗೂ ಕೊನೆಯ ದಿನಗಳ    ಚಿತ್ರಗಳನ್ನು   ಬಿಡಿಸಲು ಅಣಿಯಾಗುತ್ತಾನೆ. ಇದೇ ವೇಳೆ ಬಾಲ ಕ್ರಿಸ್ತನ ಚಿತ್ರಗಳನ್ನು ನೋಡಿ ಮೆಚ್ಚುವ ಪೋಪ್ ಮೈಕಲ್ ಎಂಜಲೋನನ್ನು ವ್ಯಾಟಿಕನ್ ಸಿಟಿಗೆ ಆಹ್ವಾನಿಸುತ್ತಾರೆ. ಇಲ್ಲಿಂದ ಕಥೆ ಮುಖ್ಯ ತಿರುವು ಪಡೆದುಕೊಳ್ಳುತ್ತದೆ.  ಪೋಪರ ಸಮಾಧಿ ಮತ್ತು ಸುಂದರ ಶಿಲ್ಪಗಳನ್ನು ಕೆತ್ತುತ್ತ ಮೈಕಲ್ ಎಂಜಲೋ ವ್ಯಾಟಿಕನ್ ಸಿಟಿಯಲ್ಲಿ ೨೦ ವರ್ಷಗಳನ್ನು ಕಳೆಯುತ್ತಾನೆ. ಒಪ್ಪಿಕೊಂಡ ಕೆಲಸದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಪರಿಣಾಮ ಆತನ ಆರೋಗ್ಯ ಕ್ಷೀಣಿಸುತ್ತದೆ.  ಮೈಕಲ್ ಎಂಜಲೋ ಈಗ ಅರವತ್ತರ ವಯೋವೃದ್ಧ. ಬಾಲಕ ಅರ್ನೆಸ್ಟ್ ನ ನೆನಪು ಮೈಕಲ್ ಎಂಜಲೋನ ಚಿತ್ತದಲ್ಲಿ  ಬಣ್ಣ ಕಳೆದುಕೊಂಡಿದೆ. ವ್ಯಾಟಿಕನ್ ಸಿಟಿಯಲ್ಲಿನ ಕೆಲಸ ಪೂರ್ಣಗೊಂಡಿದೆ. ಫ್ಲಾರೆನ್ಸ್ ನಗರದಲ್ಲಿ ಅರ್ಧಕ್ಕೆ ಬಿಟ್ಟು ಬಂದ ಕೆಲಸ ಅವನನ್ನು ಕೈಬೀಸಿ ಕರೆಯುತ್ತಿದೆ. ಕರ್ತವ್ಯಕ್ಕೆ ವಿಮುಖನಾಗುವುದು ಮೈಕಲ್ ಎಂಜಲೋನಂಥ ಅಪ್ರತಿಮ ಅದ್ವಿತೀಯ ಕಲಾಕಾರನಿಗೆ ಕಷ್ಟಸಾಧ್ಯವಾದ ಸಂಗತಿ.

               ಇಪ್ಪತ್ತು ವರ್ಷಗಳ ನಂತರ ಫ್ಲಾರೆನ್ಸ್ ನಗರಕ್ಕೆ ಮರಳಿ ಬರುವ ಮೈಕಲ್ ಎಂಜಲೋ ತಾನು ಅರ್ಧಕ್ಕೆ ಬಿಟ್ಟು ಹೋದ ಕೆಲಸವನ್ನು ಮತ್ತೆ ಕೈಗೆತ್ತುಕೊಳ್ಳುತ್ತಾನೆ. ಈಗ ಅವನು ಚಿತ್ರಿಸಬೇಕಿರುವುದು ಕ್ರಿಸ್ತನ ಯೌವನದ ದಿನಗಳ ಚಿತ್ರಗಳನ್ನು. ಜುದಾಸ ಎನ್ನುವ ಕೆಟ್ಟ ಗುಣಗಳ ವ್ಯಕ್ತಿ ಕ್ರಿಸ್ತನಲ್ಲಿ ಆಮಿಷಗಳನ್ನೊಡ್ಡುತ್ತ ತನ್ನೆಡೆಗೆ ಸೆಳೆಯಲು ಮಾಡುವ ಪ್ರಯತ್ನ ಅವನು ಚಿತ್ರಿಸಬೇಕಿರುವ ಚಿತ್ರಪಟದ ಮುಖ್ಯ ವಿಷಯವಸ್ತು. ಮೈಕಲ್ ಎಂಜಲೋ ರಾಕ್ಷಸ ಗುಣದ ಮೋಸ, ವಂಚನೆ, ಕಪಟವೇ ಮೈವೆತ್ತ ವ್ಯಕ್ತಿಯನ್ನು ಜುದಾಸನ ಚಿತ್ರಕ್ಕೆ ರೂಪದರ್ಶಿಯಾಗಿ ಹುಡುಕಲು ತೊಡಗುತ್ತಾನೆ. ಕೊಲೆಗಡುಕರನ್ನು, ಪರಮ ವಂಚಕಿಗಳನ್ನು ಕಟುಕರ ಅಂಗಡಿಗಳಲ್ಲಿ, ಬೇಟಗಾರರ ನಿವಾಸಗಳಲ್ಲಿ, ಹೆಂಡದಂಗಡಿಗಳಲ್ಲಿ, ಕುಡುಕರ ವಿಲಾಸ ಸ್ಥಳಗಳಲ್ಲಿ, ಅತಿ ಹೇಯವಾದ ಸ್ಥಳಗಳಲ್ಲಿ ಹುಡುಕಿಕೊಂಡು ಮೈಕಲ್ ಎಂಜಲೋ ಊರೂರು ಅಲೆಯುತ್ತಾನೆ. ಒಂದೆರಡು ವರ್ಷಗಳಾದರೂ ತಾನು ಅಪೇಕ್ಷಿಸಿದ ಮುಖಭಾವ ಹಾಗೂ ಗುಣಗಳುಳ್ಳ ವ್ಯಕ್ತಿ ಸಿಗದೆ ಎಂಜಲೋ ನಿರಾಸೆ ಅನುಭವಿಸುತ್ತಾನೆ. ಹೀಗೆ ನಿರಾಸೆಗೊಂಡ ಘಳಿಗೆ ಅನಿರೀಕ್ಷಿತವಾಗಿ ಅವನಿಗೆ ರೊಮ್ ಗೆ ಹೋಗುವ ಮಾರ್ಗ ಮಧ್ಯೆ ಎಂಪೊಲಿ ಎಂಬ ಸಣ್ಣ ಊರಿನಲ್ಲಿ ಗರಿಬಾಲ್ಡಿಯ ಭೇಟಿಯಾಗುತ್ತದೆ. ಗರಿಬಾಲ್ದಿಯು ವಿಕಾರವಾದ ರೂಪವುಳ್ಳವನಾಗಿಯೂ, ಕ್ರೂರಿಯಾಗಿಯೂ, ಎಲ್ಲರಿಗಿಂತ ಹೆಚ್ಚು ಕಪಟಿಯಾಗಿಯೂ ಮೈಕಲ್ ನ ಕಣ್ಣಿಗೆ ಕಾಣಿಸುತ್ತಾನೆ. ಪ್ರಪಂಚದಲ್ಲಿನ ಎಲ್ಲ ಮೋಸ, ಪಾಪ, ದೋಷಗಳಿಗೆ ಗರಿಬಾಲ್ದಿಯ ಮುಖ ಮೂರ್ತಿವೆತ್ತಂತೆ ಗೋಚರಿಸುತ್ತದೆ. ಕ್ಷೌರವನ್ನೇ ಅರಿಯದ ಗಡ್ಡ ಮೀಸೆ, ತಲೆಯಲ್ಲಿ ವಿಕಾರವಾಗಿ ಒತ್ತಾಗಿ ಬೆಳೆದ ಕೂದಲು, ಹಣೆಯ ಎಡಭಾಗದಲ್ಲಿ ನಡು ನೆತ್ತಿಯಿಂದ ಕಿವಿಯವರೆಗೆ ಹಳೆಯ ಗಾಯದ ಉದ್ದನೆ ಮಚ್ಚೆ, ಹರಿದ ಎಡಭಾಗದ ಹಲ್ಲುಗಳಿಲ್ಲದ ಮೇಲ್ತುಟಿ, ಗುಡ್ಡೆ ಇಲ್ಲದೆ ಕುಳಿ ಬಿದ್ದು ಹೋಗಿರುವ ಎಡಗಣ್ಣು, ಅತಿಯಾದ ಕುಡಿತದಿಂದ ಕೆಂಪಡರಿದ ಇನ್ನೊಂದು ಕಣ್ಣು, ಒರಟಾದ ಶಕ್ತಿವತ್ತಾದ ಮೈಕಟ್ಟು ಒಟ್ಟಾರೆ ಆ ಎಲ್ಲ ಲಕ್ಷಣಗಳು ಗರಿಬಾಲ್ದಿಗೆ ಬೀಭತ್ಸ ರೂಪವನ್ನು ಕೊಟ್ಟಿದ್ದವು. ಅಂತೂ ಮೈಕಲ್ ಎಂಜಲೋ ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಜುದಾಸನ ಚಿತ್ರಕ್ಕೆ ರೂಪದರ್ಶಿಯೊಬ್ಬ ದೊರೆತ. ಜುದಾಸನ ಚಿತ್ರಕ್ಕೆ ಮೈಕಲ್ ಎಂಜಲೋ ಊಹಿಸಿದ್ದ ಎಲ್ಲ ವಿಕಾರಗಳು ಗರಿಬಾಲ್ಡಿಯಲ್ಲಿದ್ದವು.

             ಗರಿಬಾಲ್ದಿಯನ್ನು ಫ್ಲಾರೆನ್ಸ್ ನಗರಕ್ಕೆ ಕರೆತರುವುದೇ ಮೈಕಲ್ ಎಂಜಲೋಗೆ ಸಾಹಸದ ಕೆಲಸವಾಗುತ್ತದೆ. ಆತ ಲೋಭಿಯಾದ ಗರಿಬಾಲ್ದಿಗೆ ಹಣದ ಆಮಿಷವೊಡ್ಡಿ ತನ್ನೊಂದಿಗೆ ಬರುವಂತೆ ಒಪ್ಪಿಸುತ್ತಾನೆ. ಮಾರ್ಗಮಧ್ಯೆ ಮೈಕಲ್ ಗರಿಬಾಲ್ದಿಯಿಂದ ಅನೇಕ ಕಷ್ಟ ಕೋಟಲೆಗಳನ್ನು ಅನುಭವಿಸುತ್ತಾನೆ. ಅನೇಕ ತೊಂದರೆಗಳ ನಡುವೆಯೂ ಗರಿಬಾಲ್ದಿಯನ್ನು ಫ್ಲಾರೆನ್ಸ್ ನಗರಕ್ಕೆ ಕರೆತರುವ ಮೈಕಲ್ ಎಂಜಲೋನ ಪ್ರಯತ್ನ ಯಶ ಕಾಣುತ್ತದೆ. ನಿರ್ಧರಿಸಿದ ಒಂದು ದಿನ ಮೈಕಲ್ ಎಂಜಲೋ ರೂಪದರ್ಶಿ ಗರಿಬಾಲ್ಡಿಯೊಂದಿಗೆ ಕ್ರಿಸ್ತನ ದೇವಾಲಯವನ್ನು ಪ್ರವೇಶಿಸುತ್ತಾನೆ. ಆವರಣದೊಳಗೆ ಅಡಿಯಿಟ್ಟ ವೇಳೆ ಗರಿಬಾಲ್ದಿಯಲ್ಲಿ ಭಾವನೆಗಳ ತಾಕಲಾಟ. ಆ ದೇವಾಲಯ, ಅಲ್ಲಿನ ಪರಿಸರ, ನೋಡುತ್ತಿರುವ ಕ್ರಿಸ್ತನ ಬಾಲ್ಯದ ಚಿತ್ರಗಳು ಎಲ್ಲವೂ ಎಲ್ಲೋ ನೋಡಿದ ನೆನಪು ಆದರೆ ಎಲ್ಲಿ ಗೊತ್ತಾಗುತ್ತಿಲ್ಲ ಎನ್ನುವ ಅಯೋಮಯ ಸ್ಥಿತಿ. ಮೆದುಳಿನಲ್ಲಿ ಅಲ್ಲಕಲ್ಲೋಲವೆದ್ದು ಹುದುಗಿ ಹೋಗಿದ್ದ ಸಂಗತಿಯನ್ನು ಅತಿಪ್ರಯಾಸದಿಂದ ನೆನಪಿಗೆ ತಂದು ಕೊಳ್ಳಲು ಪ್ರಯತ್ನಿಸಿದ. ಬಹುಕಾಲ ಸುಪ್ತಾವಸ್ಥೆಯಲ್ಲಿ ಸ್ಥಂಭಿಸಿಹೋಗಿದ್ದ ಅವನ ಮೆದುಳಿನಲ್ಲಿ ಜೀವನಾಡಿಯ ಸಂಚಾರ ಉಂಟಾಗಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾನೆ. ಗರಿಬಾಲ್ಡಿಗೆ ಕಳೆದು ಹೋಗಿದ್ದ ಸ್ಮರಣೆ ಮರುಕಳಿಸಿ ತಾನೆ ಆ ಚಿತ್ರಪಟದಲ್ಲಿರುವ  ಬಾಲಕ ಅರ್ನೆಸ್ಟ್ ಎನ್ನುವ ಸಂಗತಿ ಸ್ಮರಣೆಗೆ ಬರುತ್ತದೆ. ಮೈಕಲ್ ಎಂಜಲೋನ ಮನಸ್ಥಿತಿಯಂತೂ ಅವರ್ಣನೀಯ. ಆತನಿಗೆ ಕಾಲವೇ ಭಯಂಕರ ಮುಖವಾಡವೊಂದನ್ನು ಧರಿಸಿ ಕಲೆಯನ್ನೂ ಸೌಂದರ್ಯವನ್ನೂ ಅಣಕಿಸಿದಂತಾಗುತ್ತದೆ. ಈಗ ಓದುಗರದೂ ಸಹ ಮೈಕಲ್ ಎಂಜಲೋನ ಮನಸ್ಥಿತಿಯೇ. ಅರ್ನೆಸ್ಟ್ ಗರಿಬಾಲ್ಡಿಯಾಗಿ ಹೇಗೆ ರೂಪಾಂತರಗೊಂಡ? ಅರ್ನೆಸ್ಟ್ ನ ಈಗಿನ ಪರಿಸ್ಥಿತಿಗೆ ಕಾರಣರಾರು? ಮೈಕಲ್ ಎಂಜಲೋನ ಸಹಾಯ ಏನಾಯಿತು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಅರ್ನೆಸ್ಟ್ ಮೈಕಲ್ ಎಂಜಲೋಗೆ ಹೇಳುವ ತನ್ನ ದಾರುಣ ಬದುಕಿನ ಕಥೆಯಲ್ಲಿ ಅನಾವರಣಗೊಳ್ಳುತ್ತದೆ.

          ಎರಡು ವಿಭಿನ್ನ ಪಾತ್ರಗಳಿಗೆ ಒಬ್ಬನೇ ವ್ಯಕ್ತಿ ರೂಪದರ್ಶಿಯಾಗಿ ಅಭಿನಯಿಸಬೇಕಾದ  ಪ್ರಸಂಗ ಎದುರಾಗುವ ಈ ಕಥೆಯಲ್ಲಿ ಒಂದು ಹಂತದಲ್ಲಿ ಓದುಗ ಮೈಕಲ್ ಎಂಜಲೋನನ್ನೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾನೆ. ಸಂದರ್ಭ ಹಾಗೂ ಸನ್ನಿವೇಶಗಳು ಅರ್ನೆಸ್ಟ್ ಬದುಕನ್ನು ದಾರುಣವಾಗಿ ಅಂತ್ಯಗೊಳಿಸುತ್ತವೆ. ಅರ್ನೆಸ್ಟ್ ನ ಸಾವಿನೊಂದಿಗೆ ಕಥೆಗೆ ತೆರೆ ಬಿಳುತ್ತದೆ. ಅರ್ನೆಸ್ಟ್ ನನ್ನು ಲೇಖಕರು ಸಾಯಿಸುವ ಅಗತ್ಯವೇನಿತ್ತು ಎನ್ನುವ ಜಿಜ್ಞಾಸೆಯ ನಡುವೆಯೂ ಆ ಪಾತ್ರದ ಅಂತ್ಯ ಹೆಚ್ಚು ಅರ್ಥಪೂರ್ಣವೂ ಸಮಂಜಸವೂ ಎಂದು ಓದುಗ ಪರಿಭಾವಿಸುತ್ತಾನೆ. ತನ್ನ ಇವತ್ತಿನ ನಿಕೃಷ್ಟ ಬದುಕಿಗೆ ಮೈಕಲ್ ಎಂಜಲೋನೆ ಕಾರಣನೆಂದು ಸಿಟ್ಟಿನಿಂದ ಅವನನ್ನು ಕೊಲ್ಲಲು ಬರುವ ಅರ್ನೆಸ್ಟ್ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾನೆ. ಒಂದೆಡೆ ಅರ್ನೆಸ್ಟನಾಗಿ ಮತ್ತೆ ಬದುಕನ್ನು ಕಟ್ಟಿಕೊಳ್ಳಲಾಗದ ಅಸಹಾಯಕತೆಯಾದರೆ ಇನ್ನೊಂದೆಡೆ ಗತದ ನೆನಪುಗಳೊಂದಿಗೆ ಗರಿಬಾಲ್ಡಿ ರೂಪದಲ್ಲಿ ಬದುಕುವ ಅಸಹನೀಯತೆ. ಈ ಅಸಹಾಯಕತೆ ಮತ್ತು ಅಸಹನೀಯತೆಗಳ ಮಧ್ಯೆ ಲೇಖಕರು ಮೂರನೆ ದಾರಿಯಾಗಿ ಅರ್ನೆಸ್ಟ್ ಗೆ ಸಾವನ್ನು ಕರುಣಿಸುತ್ತಾರೆ. ಒಂದು ವೇಳೆ ಗತದ ನೆನಪುಗಳೊಂದಿಗೆ ಗರಿಬಾಲ್ಡಿ ಬದುಕುಳಿದಿದ್ದರೆ ಮೈಕಲ್  ಎಂಜಲೋ, ಟಾಯಿಟ್ಟ್, ಜಿಯೋವನಿ, ಕಸಾಯಿ ಖಾನೆಯ ಮಾಲೀಕ ಇನ್ನು ಅದೆಷ್ಟೋ ಜನ ಅವನ ದ್ವೇಷದ ದಳ್ಳುರಿಗೆ ಬಲಿಯಾಗುವ ಸಾಧ್ಯತೆಯಿರುತ್ತಿತ್ತು.

-ರಾಜಕುಮಾರ. ವ್ಹಿ. ಕುಲಕರ್ಣಿ (ಕುಮಸಿ), ಬಾಗಲಕೋಟೆ 

1 comment: