Monday, March 4, 2013

ಆನಂದಿಬಾಯಿ ಜೋಶಿ

     
   
(ಮಾರ್ಚ್ ೮ ಅಂತರಾಷ್ಟ್ರೀಯ ಮಹಿಳಾ ದಿನ. ಆ ನಿಮಿತ್ಯ  ಬರೆದ ಲೇಖನ)

         ಅದು ೧೯ ನೇ ಶತಮಾನದ ೮೦ ರ ದಶಕದ ಸಮಯ. ಆಗಿನ್ನೂ ಭಾರತ ಬ್ರಿಟಿಷರ ಆಡಳಿತದಲ್ಲಿದ್ದ ಕಾಲವದು. ಈಗಿನಂತೆ ಆಗ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ಇರಲಿಲ್ಲ. ಜೊತೆಗೆ ಸಂಪ್ರದಾಯ ಎನ್ನುವ ಚೌಕಟ್ಟಿನೊಳಗೆ ಬಂಧಿಸಲ್ಪಟ್ಟಿದ್ದ ಮಹಿಳೆಯರು ಶಿಕ್ಷಣ ಮತ್ತು ಉದ್ಯೋಗದ ಕನಸು ಕಾಣುವುದು ಸಹ  ಅಸಾಧ್ಯವಾಗಿತ್ತು. ಮಹಿಳೆ ಏನಿದ್ದರೂ ಮನೆ, ಮಕ್ಕಳು, ಗಂಡ ಎನ್ನುವ ಪ್ರಪಂಚಕ್ಕೆ ಮಾತ್ರ ತನ್ನ ಕಾರ್ಯವ್ಯಾಪ್ತಿಯನ್ನು ಸಿಮೀತಗೊಳಿಸಿಕೊಂಡು ಆ ಪ್ರಪಂಚದ ಸುಖವೇ ತನ್ನ ಸುಖವೆಂದು ನಂಬಿ ಬದುಕುತ್ತಿದ್ದ ಕಾಲವದು. ಅಂಥದ್ದೊಂದು ಕರ್ಮಠ ಸಂಪ್ರದಾಯದ ಚೌಕಟ್ಟಿನಿಂದ ಹೊರಬಂದು ಹೆಣ್ಣೊಬ್ಬಳು ವಿದೇಶದಲ್ಲಿ ಶಿಕ್ಷಣ ಪಡೆದು ಭಾರತದ ಪ್ರಥಮ ಮಹಿಳಾ ವೈದ್ಯೆ ಎನ್ನುವ ಕೀರ್ತಿಗೆ ಭಾಜನಳಾದ ಕಥೆ ನಿಜಕ್ಕೂ ಅಚ್ಚರಿಯ ಸಂಗತಿಗಳಲ್ಲೊಂದು. ಹೀಗೆ ಸಾಧನೆಗೈದ ಮಹಿಳೆಯ ಹೆಸರು ಆನಂದಿಬಾಯಿ ಜೋಶಿ ಎಂದು. ಮಹಾರಾಷ್ಟ್ರದ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಈ ಮಹಿಳೆ ಪುರುಷ ಪ್ರಧಾನ ಸಮಾಜದಲ್ಲಿನ ಏನೆಲ್ಲಾ ಅಡ್ಡಿ ಆತಂಕಗಳನ್ನು ಸಮರ್ಥವಾಗಿ ಎದುರಿಸಿ ಭಾರತದ ಗಡಿದಾಟಿ ವಿದೇಶಕ್ಕೆ ಕಾಲಿಟ್ಟು ವೈದ್ಯಕೀಯ ಶಿಕ್ಷಣ ಪಡೆದ ಆಕೆಯ ಬದುಕಿನ ಆ ಯಶೋಗಾಥೆ ನಂತರದ ದಿನಗಳಲ್ಲಿ ಅನೇಕ ಮಹಿಳೆಯರ ಬದುಕಿಗೆ ದಾರಿದೀಪವಾಯಿತು.

         ಆನಂದಿಬಾಯಿಯ ಪಯಣದ ಆ ದಾರಿ ಹೂವಿನ ಹಾಸಿಗೆಯಾಗಿರಲಿಲ್ಲ. ಅಲ್ಲಿ ಬರೀ ಕಲ್ಲು ಮುಳ್ಳುಗಳೇ ತುಂಬಿದ್ದವು. ಸ್ವಲ್ಪ ಎಚ್ಚರ ತಪ್ಪಿ ಹೆಜ್ಜೆ ಇಟ್ಟರೂ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು. ಏಕೆಂದರೆ ಅವಳ ಆ ಪಯಣದ ಹಾದಿ ಅಷ್ಟೊಂದು ದುರ್ಗಮವಾಗಿತ್ತು. ಜೊತೆಗೆ ತೀರ ಚಿಕ್ಕ ವಯಸ್ಸಿನಲ್ಲೇ ಕೈ ಕೊಡಲಾರಂಭಿಸಿದ ಆರೋಗ್ಯ ಸಹ ಆನಂದಿಬಾಯಿಯ ಬದುಕನ್ನು ಜರ್ಜರಿತಗೊಳಿಸಿಬಿಟ್ಟಿತ್ತು. ಸಂಪ್ರದಾಯದ ಬೇಲಿಯ ನಡುವಿನ ಬದುಕು, ತೀರ ಹದಗೆಟ್ಟ ಆರೋಗ್ಯ, ಅಪರಿಚಿತ ದೇಶ, ಆರ್ಥಿಕ ತೊಂದರೆ ಈ ಎಲ್ಲ ಸಮಸ್ಯೆಗಳನ್ನು ಎದುರಿಸುವಾಗ ಆ ಹೆಣ್ಣು ಮಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಎಷ್ಟೊಂದು ಜರ್ಜರಿತಗೊಂಡಿರಬಹುದು ಎನ್ನುವ ಆತಂಕವೊಮ್ಮೆ ಮನಸ್ಸಿನ ಆಳಕ್ಕೆ ಇಳಿದಾಗ ಕಣ್ಣುಗಳು ಹನಿಗೂಡುತ್ತವೆ. ಮನಸ್ಸು ಆರ್ದ್ರವಾಗುತ್ತದೆ. ಹೃದಯ ಭಾರವಾಗುತ್ತದೆ. ನಮಗರಿವಿಲ್ಲದೆ ಆ ಮಹಾತಾಯಿಗೊಂದು ಸಣ್ಣ ಅಭಿನಂದನೆ ಹೇಳಲು ಮನಸ್ಸು ತುಡಿಯುತ್ತದೆ.

         ಆನಂದಿಬಾಯಿ ಜೋಶಿ ಬದುಕಿನ ಆ ಒಂದು ಮಹತ್ಸಾಧನೆಗಾಗಿ ಆಕೆ ಮಾಡಿದ ಹೋರಾಟವೇನು? ಆ ಹೋರಾಟದಲ್ಲಿ ಅವಳು ಪಡೆದದ್ದೆಷ್ಟು? ಹಾಗಾದರೆ ಕಳೆದುಕೊಂಡಿದ್ದೂ ಇರಬಹುದಲ್ಲ. ಅದನ್ನೆಲ್ಲ ಆನಂದಿಬಾಯಿಯ ಮಾತುಗಳಲ್ಲೇ ಕೇಳಿದರೆ ಹೇಗಿರಬಹುದು. ಆಕೆ ಏನೆಂದು ಉತ್ತರಿಸಬಹುದು? ಆ ಮಹಾತಾಯಿಯ ಬದುಕಿನ ಯಶೋಗಾಥೆ ಅದಕ್ಕಾಗಿ ಆಕೆ ಅನುಭವಿಸಿದ ಸಂಕಟಗಳನ್ನೆಲ್ಲ ಆನಂದಿಬಾಯಿಯ ಮಾತುಗಳಲ್ಲೇ ಕೇಳಿ..............................

          'ನಾನು ಆನಂದಿಬಾಯಿ ಜೋಶಿ. ಮಹಾರಾಷ್ಟ್ರದ ಮುಂಬೈ ಎನ್ನುವ ಮಾಯಾನಗರಿಯ ಸಮೀಪದಲ್ಲಿರುವ ಥಾಣೆ ಎಂಬಲ್ಲಿ ೧೮೬೫ ರ ಮಾರ್ಚ್ ೩೧ ರಂದು ಜನಿಸಿದೆ. ನಾನು ಹುಟ್ಟಿದ್ದು ಮಹಾರಾಷ್ಟ್ರದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ. ನಾನು ಹುಟ್ಟಿದಾಗ ನನ್ನ ತಂದೆ ತಾಯಿ ನನ್ನನ್ನು ಯಮುನಾಬಾಯಿ ಎನ್ನುವ ಹೆಸರಿನಿಂದ ಕರೆದರು. ಸಾಕಷ್ಟು ಸ್ಥಿತಿವಂತರಾಗಿದ್ದ ನನ್ನ ಪೋಷಕರು ನಂತರದ ದಿನಗಳಲ್ಲಿ ತಮ್ಮ ಆಸ್ತಿಯನ್ನೆಲ್ಲ ಕಳೆದುಕೊಂಡು  ನಿರ್ಗತಿಕರಾದರು. ಜೊತೆಗೆ ಚಿಕ್ಕ ವಯಸ್ಸಿನಲ್ಲೇ ನಾನು ಸಿಡುಬು ರೋಗಕ್ಕೆ ಬಲಿಯಾಗಿದ್ದು ನನ್ನ ತಂದೆ ತಾಯಿಗೆ ಆಘಾತವನ್ನುಂಟುಮಾಡಿತು. ಆ ಕಾಲದಲ್ಲಿ ಹೆಣ್ಣುಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕಿಂತ ಮದುವೆ  ಮಾಡಿ ಗಂಡನ ಮನೆಗೆ ಕಳುಹಿಸುವುದೇ ಅತಿ ದೊಡ್ಡ ಜವಾಬ್ದಾರಿಯಾಗಿತ್ತು. ನನ್ನ ತಂದೆ ತಾಯಿ ತಮ್ಮ ಮಗಳ ಮದುವೆ ವಿಷಯವಾಗಿ ಯೋಚಿಸಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ.

        ಈ ನಡುವೆ ನಾನು ಮರಾಠಿ ಓದುವುದನ್ನು ಕಲಿತೆ. ಆದರೆ ಶಾಲೆಗೇ ಹೋಗಿ ಶಿಕ್ಷಣ ಪಡೆಯಬೇಕೆನ್ನುವ ನನ್ನ ಆಸೆ ಬಾಲ್ಯದ ದಿನಗಳಲ್ಲಿ ಇಡೇರಲಿಲ್ಲ. ಏಕೆಂದರೆ ಹೆಣ್ಣುಮಕ್ಕಳು ಆಗೆಲ್ಲ ಶಾಲೆಗೆ ಹೋಗುವುದನ್ನು ನಮ್ಮ ಸಂಪ್ರದಾಯಸ್ಥ ಸಮಾಜ ನಿಷೇಧಿಸಿತ್ತು. ಅದನ್ನು ವಿರೋಧಿಸಿ ತಮ್ಮ ಮಗಳನ್ನು ಶಾಲೆಗೆ ಕಳುಹಿಸುವಷ್ಟು ನನ್ನ ಪೋಷಕರು ಪ್ರಗತಿಗಾಮಿಗಳಾಗಿರಲಿಲ್ಲ. ಅದಕ್ಕೆಂದೇ ನಾನು ಸಹ ಮದುವೆಯಾಗಿ ಗಂಡನ ಮನೆಗೆ ಹೋಗುವುದು ಅನಿವಾರ್ಯವಾಗಿತ್ತು.

ವೈವಾಹಿಕ ಬದುಕು 


          ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗ ಆಗಿನ್ನೂ ನನಗೆ ೯ ವರ್ಷ ವಯಸ್ಸು. ಮದುವೆ ಎಂದರೆ ಏನೆಂದು ಗೊತ್ತಿರದ ವಯಸ್ಸು ನನ್ನದು. ಗೋಪಾಲರಾವ ಜೋಶಿ ಎನ್ನುವ ಬ್ರಾಹ್ಮಣ ವಿಧುರನಿಗೆ ನನ್ನನ್ನು ಮದುವೆಮಾಡಿ ಕೊಡಲಾಯಿತು. ವಯಸ್ಸಿನಲ್ಲಿ ಗೋಪಾಲರಾವ ನನಗಿಂತ ೨೦ ವರ್ಷ ಹಿರಿಯರಾಗಿದ್ದರು. ಅಂಚೆ ಇಲಾಖೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ ಗೋಪಾಲರಾವಗೆ ಎರಡನೆ ಹೆಂಡತಿಯಾಗಿ ನಾನು ಗಂಡನ ಮನೆ ಸೇರಿದೆ. ಆ ಕಾಲದಲ್ಲಿನ ಸಂಪ್ರದಾಯದಂತೆ ಈ ಮೊದಲು ಯಮುನಾಬಾಯಿಯಾಗಿದ್ದ ನನ್ನನ್ನು ಗಂಡನ ಮನೆಯಲ್ಲಿ ಆನಂದಿಬಾಯಿ ಎನ್ನುವ ಹೊಸ ಹೆಸರಿನಿಂದ ಕರೆಯತೊಡಗಿದರು. ಹೊಸ ಹೆಸರಿನೊಂದಿಗೆ ಹೊಸ ಪರಿಸರದಲ್ಲಿ ನನ್ನ ವೈವಾಹಿಕ ಬದುಕಿನ ಪುಟಗಳು ಬಿಚ್ಚಿಕೊಳ್ಳ ತೊಡಗಿದವು.

          ನನ್ನ ಪತಿ ಗೋಪಾಲರಾವ ಉನ್ನತಾದರ್ಶಗಳ ವಿಚಾರವಾದಿಯಾಗಿದ್ದರು. ಆ ಕಾಲದಲ್ಲೇ ಅವರು ವಿಧವಾ ವಿವಾಹ ಮತ್ತು ಹೆಣ್ಣುಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುತ್ತಿದ್ದರು. ನಮ್ಮ ಮದುವೆಯ ಪ್ರಾರಂಭದಲ್ಲೇ ನನ್ನ ಶಿಕ್ಷಣಕ್ಕೆ ಅಗತ್ಯವಾದ ಎಲ್ಲ ನೆರವು ಮತ್ತು ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಆ ದಿನಗಳಲ್ಲಿ ಗಂಡನಾದವನು ತನ್ನ ಹೆಂಡತಿಯೊಡನೆ ಕುಟುಂಬದ ಎಲ್ಲ ಸದಸ್ಯರೆದುರು ನಿರ್ಭಿಡೆಯಿಂದ  ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗೆ ವರ್ತಿಸುವುದನ್ನು ಲಜ್ಜೆಗೇಡಿತನವೆಂದು ಹಿಯ್ಯಾಳಿಸುತ್ತಿದ್ದರು. ಕಾರಣ ತನ್ನ ಹೆಂಡತಿಯನ್ನು ವಿದ್ಯಾವಂತಳನ್ನಾಗಿ ಮಾಡಬೇಕೆನ್ನುವ ನನ್ನ ಗಂಡನ ಆಸೆ ನಾವುಗಳು ಕಲ್ಯಾಣದಲ್ಲಿರುವಷ್ಟು ದಿನಗಳು ಕೈಗೂಡಲೇ ಇಲ್ಲ. ಅವರು ಸರ್ಕಾರಿ ನೌಕರರಾಗಿದ್ದರಿಂದ ಒಂದು ಊರಿನಿಂದ ಮತ್ತೊಂದು ಊರಿಗೆ ವರ್ಗವಾಗುವುದು ಸಹಜವಾಗಿತ್ತು. ನಮ್ಮ ಮದುವೆಯಾದ ಕೆಲವು ವರ್ಷಗಳ ನಂತರ ಅವರಿಗೆ ಅಲಿಭಾಗಿಗೆ ವರ್ಗವಾಯಿತು.

          ಈ ನಡುವೆ ನನ್ನ ಬದುಕಿನಲ್ಲಿ ಮತ್ತೊಂದು ದುರಂತ ನಡೆದು ಹೋಯಿತು. ನಾನು ಗಂಡು ಮಗುವಿಗೆ ಜನ್ಮ ನೀಡಿದ್ದು ನನ್ನ ಗಂಡನ ಮನೆಯಲ್ಲಿ ಎಲ್ಲರಿಗೂ ಸಂತಸದ ವಿಷಯವಾಗಿತ್ತು. ಈ ವಿಷಯ ತಿಳಿದು ನನ್ನ ತಂದೆ ತಾಯಿ ಸಹ ತುಂಬ ಹರ್ಷ ಪಟ್ಟರು. ಆ ಮಾತೃತ್ವದ ಸುಖ ನನ್ನ ಪಾಲಿಗೆ ಹೊಸ ಅನುಭವವನ್ನೇ ತಂದು ಕೊಟ್ಟಿತು. ಪಕ್ಕದಲ್ಲಿ ಮಲಗಿ ನಿದ್ರಿಸುತ್ತಿದ್ದ ಪುಟ್ಟ ಕಂದ ಆಗ ನನ್ನ ಬದುಕಾಗಿತ್ತು ಅದುವೇ ನನ್ನ ಉಸಿರಾಗಿತ್ತು. ಮಗುವಿನ ಮುಖ ನೋಡುತ್ತ ನಾನು ನನ್ನ ಬದುಕಿನ ಎಲ್ಲ ವೈರುಧ್ಯಗಳನ್ನು ಮರೆಯುತ್ತಿದ್ದೆ. ಆ ವಿಧಿಗೆ ನನ್ನ ಬದುಕಿನ ಸಂತಸ ಸಹಿಸಲಾಗಲಿಲ್ಲವೇನೋ. ಹತ್ತು  ದಿನಗಳ ನನ್ನ ಹಸುಗಂದ ಕಣ್ಮುಚ್ಚಿ ಶಾಶ್ವತವಾಗಿ ನನ್ನಿಂದ ದೂರವಾದ. ಸರಿಯಾದ ವೈದ್ಯಕೀಯ ಸೌಲಭ್ಯ ದೊರೆಯದೆ ನನ್ನ ಮಗು ಸಾವನ್ನಪ್ಪಿತು. ಆ ಒಂದು ಘಟನೆ ನಾನು ವೈದ್ಯಳಾಗಬೇಕೆನ್ನುವ ನನ್ನ ನಿರ್ಧಾರವನ್ನು ಗಟ್ಟಿಗೊಳಿಸಿತು.

ಹೊಸ ಹೆಜ್ಜೆ 


        ನಾವು ಕಲ್ಕತ್ತಾಗೆ ವರ್ಗವಾಗಿ ಬಂದ  ಮೇಲೆ ನಾನು ಇಂಗ್ಲಿಷ್ ಭಾಷೆಯಲ್ಲಿ ಓದುವುದನ್ನು ಕಲಿತೆ. ನನ್ನ ಪತಿ ನನ್ನನ್ನು ಉನ್ನತ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸತೊಡಗಿದರು. ಆಗ ನನ್ನೆದುರಿದ್ದದ್ದು ನಾನೊಬ್ಬ ವೈದ್ಯಳಾಗಬೇಕೆನ್ನುವ ನಿರ್ಧಿಷ್ಟ ಗುರಿಯೊಂದೆ. ಆಗೆಲ್ಲ ಮಹಿಳಾ ವೈದ್ಯರ ಕೊರತೆಯಿಂದಾಗಿ ಹೆಣ್ಣು ಮಕ್ಕಳು ಪುರುಷ ವೈದ್ಯರನ್ನು ಸಂಪರ್ಕಿಸಲು ಹಿಂಜರಿಯುತ್ತಿದ್ದರು. ಈ ಹಿಂಜರಿಕೆ, ಅವಮಾನಗಳು ಅದೆಷ್ಟೋ ಹೆಣ್ಣು ಮಕ್ಕಳ ಸಾವಿನಲ್ಲಿ ಕೊನೆಗೊಳ್ಳುತ್ತಿದ್ದವು. ಈ ಸಮಸ್ಯೆಯ ಬಿಸಿ ನನ್ನನ್ನು ತಟ್ಟಿತ್ತು. ಆದ್ದರಿಂದ ನಾನು ಉನ್ನತ ಶಿಕ್ಷಣ ಪಡೆದು ವೈದ್ಯಳಾಗಬೇಕೆನ್ನುವ ನಿರ್ಧಾರದ ಹಿಂದೆ ಒಂದು ಸ್ಪಷ್ಟತೆ ಇತ್ತು, ಒಂದು ಸಾಮಾಜಿಕ ತುಡಿತವಿತ್ತು.

          ೧೮೮೦ ರ ದಶಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ನಿರ್ಧರಿಸಿದೆ. ನನ್ನ ಪತಿ ನನ್ನ ಎಲ್ಲ ಪ್ರಯತ್ನಗಳಿಗೆ ಆಸರೆಯಾಗಿ ನಿಂತರು. ಈ ಉದ್ದೇಶಕ್ಕಾಗಿ ಅಮೆರಿಕಾಗೆ ಹೋಗುವ ನಮ್ಮ ನಿರ್ಧಾರ ಗಟ್ಟಿಯಾಗಿತ್ತು. ಅಮೆರಿಕಾದ ಕ್ರೈಸ್ತ ಮಿಷನರಿಯೊಂದಕ್ಕೆ ಈ ಕುರಿತು ವಿವರವಾಗಿ ಪತ್ರ ಬರೆದು ತಿಳಿಸಿದೆವು. ಆ ಪತ್ರದಲ್ಲಿ ನಮ್ಮ ಕನಸುಗಳು, ಉದ್ದೇಶ, ನಾವು ಹಾಕಿಕೊಂಡ ಯೋಜನೆ, ನಮ್ಮ ಸಾಮಾಜಿಕ ಚಿಂತನೆ ಹೀಗೆ ಎಲ್ಲವನ್ನೂ ಸ್ಪಷ್ಟಪಡಿಸಲಾಗಿತ್ತು. ನನ್ನ ಗಂಡನಿಗೊಂದು ಕೆಲಸ ನನಗೆ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ನೀಡಿದಲ್ಲಿ ನಾವು ಕೃತಜ್ಞರು ಎಂದು ಮನವಿ ಮಾಡಿಕೊಂಡಿದ್ದೆವು. ಕ್ರೈಸ್ತ ಮಿಷನರಿಯಿಂದ ಉತ್ತರ ಬಹುಬೇಗನೆ ಬಂದು ನಮ್ಮ ಕೈ ತಲುಪಿತು. ಅವರು ಎಲ್ಲ ರೀತಿಯ ಸಹಾಯ, ಸಹಕಾರ ನೀಡುವುದಾಗಿ ಭರವಸೆ ನೀಡಿದ್ದರು. ಜೊತೆಗೆ ಒಂದು ಷರತ್ತನ್ನು ಕೂಡಾ ಹಾಕಿದ್ದರು. ಅದು ನಾವು ದಂಪತಿಗಳಿಬ್ಬರೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳಬೇಕೆಂದು. ಆದರದು ನಮಗೆ ಇಷ್ಟವಿರಲಿಲ್ಲ. ಮೊದಲ ಪ್ರಯತ್ನದಲ್ಲೇ ಬಹುದೊಡ್ಡ ಸೋಲು ನಮಗೆದುರಾಗಿ ನಮ್ಮ ಉತ್ಸಾಹಕ್ಕೆ ತಣ್ಣೀರೆರಚಿತು.

          ಕ್ರೈಸ್ತ ಮಿಷನರಿ ಮತ್ತು ನಮ್ಮ ನಡುವಿನ ಪತ್ರವ್ಯವಹಾರವನ್ನು ವೈಲ್ದರ್ ಎನ್ನುವ ಪಾದ್ರಿ ತನ್ನ ಪತ್ರಿಕೆಯಲ್ಲಿ ಪ್ರಕಟಿಸಿ ನಮಗೆ ದೊಡ್ಡ ಉಪಕಾರ ಮಾಡಿದ. ಈ ವಿಷಯವನ್ನೋದಿದ ಅಮೆರಿಕಾದ ಕಾರ್ಪೆಂಟರ್ ಎನ್ನುವ ಮಹಿಳೆ ನನ್ನ ವಿಷಯವಾಗಿ ಆಸಕ್ತಿ ತೋರಿಸಿದಳು. ನಾನು ವೈದ್ಯಕೀಯ ಶಿಕ್ಷಣ ಪಡೆದು ಸಾಮಾಜಿಕ ಸೇವೆ ಮಾಡುವ ನನ್ನ ಆಲೋಚನೆ ಅವಳಿಗೆ ಮೆಚ್ಚುಗೆಯ ಸಂಗತಿಯಾಗಿತ್ತು. ಕೂಡಲೇ ಆ ಮಹಿಳೆ ನನಗೆ ಅಮೆರಿಕಾದಲ್ಲಿ ವಸತಿ ಸೌಲಭ್ಯ ಒದಗಿಸುವುದಾಗಿ ಪತ್ರ ಬರೆದು ತಿಳಿಸಿದಳು. ನಂತರದ ದಿನಗಳಲ್ಲಿ ನನ್ನ ಮತ್ತು ಶ್ರೀಮತಿ ಕಾರ್ಪೆಂಟರ್ ನಡುವೆ ಸುದೀರ್ಘ ಪತ್ರವ್ಯವಹಾರ ಮುಂದುವರೆಯಿತು. ನಾನು ಆಕೆಯನ್ನು ಮೌಸಿ ಎಂದೇ ಸಂಬೋಧಿಸಿದೆ. ಆಕೆ ನನ್ನಿಂದ ಹಿಂದೂ ಧರ್ಮ ಮತ್ತದರ ಸಂಸ್ಕೃತಿಯ ಬಗ್ಗೆ ಕೇಳಿ ತಿಳಿದಳು. ಈ ನಡುವೆ ಅಶಕ್ತಿ, ತಲೆನೋವು, ಜ್ವರ, ಉಸಿರಾಟದ ತೊಂದರೆಗಳಿಂದ ನನ್ನ ಆರೋಗ್ಯದಲ್ಲಿ ಏರುಪೇರಾಯಿತು. ಆಗೆಲ್ಲ ಕಾರ್ಪೆಂಟರ್ ಅಮೆರಿಕಾದಿಂದ ನನಗೆ ಅಗತ್ಯದ ಔಷಧಿಗಳನ್ನು ಕಳುಹಿಸಿಕೊಡುತ್ತಿದ್ದಳು. ದಿನದಿಂದ ದಿನಕ್ಕೆ ನಮ್ಮಿಬ್ಬರ ನಡುವಿನ ಗೆಳೆತನ ಗಟ್ಟಿಯಾಗತೊಡಗಿತು.

          ಶ್ರೀಮತಿ ಕಾರ್ಪೆಂಟರ್ ಅವರ ಭರವಸೆಯ ಮಾತುಗಳಿಂದ ವೈದ್ಯಳಾಗಬೇಕೆನ್ನುವ ನನ್ನ ಆಸೆ ಮತ್ತೆ ಚಿಗುರತೊಡಗಿತು. ನನ್ನ ಪತಿ ಗೋಪಾಲರಾವ ನನ್ನನ್ನು ಅಮೆರಿಕಾ ದೇಶಕ್ಕೆ ಕಳುಹಿಸಲೇ ಬೇಕೆನ್ನುವ ನಿರ್ಧಾರಕ್ಕೆ ಬಂದಿದ್ದರು. ಹಿಂದು ಸಮಾಜ ಅವರ ಈ ನಿರ್ಧಾರವನ್ನು ಕಟುವಾಗಿ ಟೀಕಿಸಿತು. ಅನೇಕರು ಅವಹೇಳನ  ಮಾಡಿದರು. ಸಮಾಜದಿಂದ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದರು. ಆದರೆ ನಾವು ಆಗಲೇ ನಿರ್ಧಾರವನ್ನು ಮಾಡಿಯಾಗಿತ್ತು. ಯಾವ ಬೆದರಿಕೆ, ಅಪಮಾನ, ಟೀಕೆಗಳು ನಮ್ಮನ್ನು ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಲಿಲ್ಲ. ನಾನು ಅನೇಕ ಸಭೆಗಳಲ್ಲಿ ಮಾತನಾಡಿ ಭಾರತದಲ್ಲಿ ಮಹಿಳಾ ವೈದ್ಯರ ಅವಶ್ಯಕತೆಯನ್ನು ಜನರಿಗೆ ಮನಗಾಣಿಸಿ ಕೊಟ್ಟೆ. ಇಲ್ಲಿನ ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಕುರಿತು ತಿಳಿ ಹೇಳಿದೆ. ಭಾರತಕ್ಕೆ ಹಿಂತಿರುಗಿ ಬಂದು ಮಹಿಳೆಯರಿಗಾಗಿಯೇ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದೆ. ಹಿಂದು ಧರ್ಮದಿಂದ ಬೇರೆ ಯಾವ ಧರ್ಮಕ್ಕೂ ಮತಾಂತರಗೊಳ್ಳದಿರುವ ನನ್ನ ನಿರ್ಧಾರವನ್ನು ಪ್ರಕಟಿಸಿದೆ. ನನ್ನ ಮಾತುಗಳು ಜನರ ಮೇಲೆ ಸಾಕಷ್ಟು ಪರಿಣಾಮ ಬೀರಿದವು. ಭಾರತದ ಮೂಲೆ ಮೂಲೆಗಳಿಂದ ನೆರವಿನ ಮಹಾಪೂರ ಹರಿದು ಬಂತು. ನಾನು ನನ್ನಲ್ಲಿದ್ದ ಒಡವೆಗಳನ್ನೆಲ್ಲ ಮಾರಿ ಬಂದ ಹಣದಿಂದ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ನಿರ್ಧರಿಸಿದೆ.

ಅಮೆರಿಕಾಗೆ ಪ್ರಯಾಣ 


            ೧೮೮೩ ರ ಜೂನ್ ಒಂದು ದಿನ ನಾನು ಅಮೆರಿಕಾದ ನೆಲದ ಮೇಲೆ ಕಾಲಿಟ್ಟೆ. ಆ ದಿನ ನಾನು ನನ್ನ ಕನಸಿಗೆ ತುಂಬ ಹತ್ತಿರದಲ್ಲಿದ್ದೇನೆ ಎನ್ನುವ ಸಂತಸ ನನ್ನಲ್ಲಿತ್ತು. ನ್ಯೂಯಾರ್ಕಿಗೆ ಶ್ರೀಮತಿ ಕಾರ್ಪೆಂಟರ್ ನನ್ನನ್ನು ಸ್ವಾಗತಿಸಲು ಬಂದಿದ್ದರು. ಅಪರಿಚಿತ ನಾಡಿನಲ್ಲಿ ಅವರ ಪರಿಚಯ ನನ್ನ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು. ಫಿಲ್ದೆಲ್ಫಿಯಾದ ಮಹಿಳಾ ವೈದ್ಯಕೀಯ ಕಾಲೇಜಿನಲ್ಲಿ ನನಗೆ ಸುಲಭವಾಗಿ ಪ್ರವೇಶ ದೊರೆಯಿತು. ನಾನು ಅಲ್ಲಿರುವಷ್ಟು ದಿನಗಳು ಕಾರ್ಪೆಂಟರ್ ನನ್ನನ್ನು ತಮ್ಮ ಮಗಳಂತೆಯೇ ನೋಡಿಕೊಂಡರು. ಕಾಲೇಜಿನ ವಸತಿ ಗೃಹದಲ್ಲಿ ನನ್ನನ್ನು ಬಿಟ್ಟು ಹೋಗುವಾಗ ಆಕೆ ಚಿಕ್ಕ ಮಗುವಿನಂತೆ ಬಿಕ್ಕಿ ಅಳುತ್ತಿದ್ದ ದೃಶ್ಯ ಅನೇಕ ದಿನಗಳವರೆಗೆ ನನ್ನ ನೆನಪುಗಳಲ್ಲಿ ಹಸಿರಾಗಿತ್ತು. ಕಾಲೇಜಿನ ಆಡಳಿತ ವರ್ಗದವರು ನನಗೆ ನೀಡಿದ ಸಹಕಾರ ಅವಿಸ್ಮರಣೀಯ. ನಾನು ದೂರದ ಭಾರತದಿಂದ ವೈದ್ಯಕೀಯ ಶಿಕ್ಷಣ ಪಡೆಯಲು ಬಂದ ಸಂಗತಿ ಅವರಿಗೆ ಅತ್ಯಂತ ಮೆಚ್ಚುಗೆಯಾಗಿತ್ತು. ೬೦೦ ಡಾಲರ್ ಗಳ ಶಿಷ್ಯ ವೇತನ ನೀಡಿದ ಆಡಳಿತ ವರ್ಗದವರ ಪ್ರೋತ್ಸಾಹ ನನ್ನನ್ನು ನನ್ನ ಕನಸಿಗೆ ಮತ್ತಷ್ಟು ಹತ್ತಿರವಾಗಿಸಿತು.

      ಅಮೆರಿಕಾದಲ್ಲಿ ನನ್ನ ವೈದ್ಯಕೀಯ ವಿದ್ಯಾಭ್ಯಾಸವೇನೋ ಪ್ರಾರಂಭವಾಯಿತು. ಆದರೆ ಅಲ್ಲಿನ ಹವಾಮಾನಕ್ಕೆ ಹೊಂದಿಕೊಳ್ಳಲು ನನಗೆ ಸಾಕಷ್ಟು ತೊಂದರೆಯಾಯಿತು. ನಾನು  ಧರಿಸುವ ಬಟ್ಟೆ ಅಲ್ಲಿನ ಮೈ ನಡುಗಿಸುವ ಚಳಿಗೆ ಹೊಂದಿಕೆಯಾಗುತ್ತಿರಲಿಲ್ಲ. ಜೊತೆಗೆ ವಿದೇಶಿಯರಂತೆ ಉಡುಪು ಧರಿಸುವುದು ನನಗೆ ರೂಢಿಯಾಗಿರಲಿಲ್ಲ. ಅದರೊಂದಿಗೆ ನನ್ನ ಕೋಣೆಯಲ್ಲಿ ಚಳಿ ಕಾಯಿಸಿಕೊಳ್ಳುವುದಕ್ಕಾಗಿ ಬೆಂಕಿ ಉರಿಸಲು ಸರಿಯಾದ ವ್ಯವಸ್ಥೆ ಇರಲಿಲ್ಲ. ಬೆಂಕಿಯಿಂದಾಗಿ ನನ್ನ ಕೋಣೆ ತುಂಬೆಲ್ಲ ಹೊಗೆ ತುಂಬಿ ಹೋಗುತ್ತಿತ್ತು. ಆಗೆಲ್ಲ ನನ್ನೆದುರು ಎರಡು ಆಯ್ಕೆಗಳಿದ್ದವು ಒಂದು ಚಳಿಯನ್ನು ಸಹಿಸಿಕೊಳ್ಳಬೇಕು ಇಲ್ಲವೇ ಹೊಗೆಯಿಂದ ಉಸಿರುಗಟ್ಟುವಂತಾಗಬೇಕು. ಇದರ ಪರಿಣಾಮ ನನ್ನ ಆರೋಗ್ಯದ ಮೇಲಾಯಿತು. ಅಲ್ಲಿದ್ದ ಮೂರು ವರ್ಷಗಳ ಅವಧಿಯಲ್ಲಿ ನನ್ನ ಆರೋಗ್ಯದಲ್ಲಿ ಸಾಕಷ್ಟು ಏರುಪೆರಾಯಿತು. ಅನಾರೋಗ್ಯದ ನಡುವೆಯೂ ನಾನು ವೈದ್ಯಕೀಯ ವಿಜ್ಞಾನದ ಅಂತಿಮ ಪರೀಕ್ಷೆ ಬರೆದು ಉತ್ತೀರ್ಣಳಾದೆ.

        ಪದವಿ ಪ್ರಧಾನ ಸಮಾರಂಭದ ದಿನ ನಾನು ಭಾರತದ ಪ್ರಥಮ ಮಹಿಳಾ ವೈದ್ಯೆ ಎಂದು ಘೋಷಿಸಿದಾಗ ಇಡೀ ಸಭಾಂಗಣದ ತುಂಬ ಚಪ್ಪಾಳೆಗಳ ಸುರಿಮಳೆ. ಅಲ್ಲಿ ನೆರೆದಿದ್ದ ಎಲ್ಲರೂ ಎದ್ದು ನಿಂತು ನನಗೆ ಗೌರವ ಸೂಚಿಸಿದರು. ಆ ದಿನ ನನ್ನ ಬದುಕಿನಲ್ಲೇ ಮರೆಯಲಾಗದ ಅವಿಸ್ಮರಣೀಯ ದಿನ. ಅಂಥದ್ದೊಂದು ಗೌರವಕ್ಕೆ ಪಾತ್ರಳಾದ ನನಗೆ ಆಗಿನ್ನೂ ೨೧  ವರ್ಷ ವಯಸ್ಸು.

ಮರಳಿ ಭಾರತಕ್ಕೆ 


         ನನ್ನ ಪತಿಗೆ ನಾನಿನ್ನೂ ಕೆಲವು ವರ್ಷ ಅಮೆರಿಕಾದಲ್ಲಿದ್ದು ಪರಿಣಿತಿ ಹೊಂದಲೆಂಬ ಆಸೆಯಿತ್ತು. ಆದರೆ ನನ್ನ ಅನಾರೋಗ್ಯದ ಕಾರಣ ಅದು ಸಾಧ್ಯವಾಗಲಿಲ್ಲ. ವೈದ್ಯರು ಪರೀಕ್ಷಿಸಿದಾಗ ನಾನು ಕ್ಷಯ ರೋಗದಿಂದ ಬಳಲುತ್ತಿರುವುದು ಗೊತ್ತಾಯಿತು. ಹೀಗಾಗಿ ನಾನು ಭಾರತಕ್ಕೆ ಮರಳಲು ನಿರ್ಧರಿಸಿದೆ. ಪ್ರಯಾಣದ ಮಧ್ಯೆ ಹಡಗಿನಲ್ಲಿ ಅಲ್ಲಿನ ಬಿಳಿಯ ವೈದ್ಯರು ಕಪ್ಪು ಮಹಿಳೆಯಾದ ನನ್ನನ್ನು ಚಿಕಿತ್ಸೆ ನೀಡಲು ನಿರಾಕರಿಸಿದರು. ಭಾರತಕ್ಕೆ ಬಂದ ಮೇಲೂ ಸಂಪ್ರದಾಯದ ಕಟ್ಟಳೆ ಮುರಿದವಳೆನ್ನುವ ಕಾರಣ ನೀಡಿ ಇಲ್ಲಿನ ವೈದ್ಯರು ಸಹ ಚಿಕಿತ್ಸೆ ನೀಡಲಿಲ್ಲ. ಆದ್ದರಿಂದ ನನ್ನ ಅನಾರೋಗ್ಯ ಮತ್ತಷ್ಟು ಉಲ್ಬಣಿಸಿತು. ಆ ಅನಾರೋಗ್ಯದ ನಡುವೆಯೂ ನಾನು ಕೊಲ್ಹಾಪುರದ ಸರ್ಕಾರಿ ಆಸ್ಪತ್ರೆಯ ಮಹಿಳಾ ವಾರ್ಡಿನ ಮುಖ್ಯ ವೈದ್ಯೆಯಾಗಿ ಕೆಲ ಕಾಲ ಕಾರ್ಯನಿರ್ವಹಿಸಿದೆ'.

          ಹೀಗೆ ಹೇಳುವುದರೊಂದಿಗೆ ಆನಂದಿಬಾಯಿ ಜೋಶಿಯ ಕಥೆ ಇಲ್ಲಿಗೆ ಮುಗಿಯುತ್ತದೆ. ತೀವೃ ಅನಾರೋಗ್ಯದ ಕಾರಣ ಫೆಬ್ರುವರಿ ೨೬, ೧೮೮೭ ರಂದು ಆನಂದಿಬಾಯಿ ತೀರಿಕೊಂಡಾಗ ಆಗಿನ್ನೂ ೨೨ ರ ಪ್ರಾಯ. ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರವಾದದ್ದನ್ನು ಸಾಧಿಸಬೇಕೆನ್ನುವ ಅವರ ಕನಸು ಕನಸಾಗಿಯೇ ಉಳಿಯಿತು ನಿಜ. ಆದರೆ ನಂತರದ ದಿನಗಳಲ್ಲಿ ಮಹಿಳೆಯರೂ ವೈದ್ಯರಾಗುವ ಕನಸು ಕಾಣಲು ಅವರು ಹಾಕಿಕೊಟ್ಟ ಮಾರ್ಗ ಮತ್ತು ನೀಡಿದ ಪ್ರೇರಣೆ ಅದು ಎಂದಿಗೂ ಅಜರಾಮರ.

(ಇಂಟರ್ ನೆಟ್ ನಲ್ಲಿ ಸಂಗ್ರಹಿಸಿದ ಇಂಗ್ಲಿಷ್ ಮಾಹಿತಿಯ ಕನ್ನಡ ಭಾವಾನುವಾದ)

-ರಾಜಕುಮಾರ.ವ್ಹಿ.ಕುಲಕರ್ಣಿ (ಕುಮಸಿ), ಬಾಗಲಕೋಟೆ 

1 comment:

  1. ಆನಂದಿಬಾಯಿ ಜೋಶಿ ಅವರಿಗೆ ಹೃತ್ಪೂರ್ವಕ ಪ್ರಣಾಮಗಳು

    ReplyDelete