ಡಾ.ಸ.ಜ.ನಾಗಲೋಟಿಮಠ ಅವರ ಪರಿಚಯ ನನಗಾದದ್ದು ೨೦೦೧ರಲ್ಲಿ. ಈ ಮೊದಲು ಅವರ ಲೇಖನಗಳನ್ನು ಮತ್ತು ಪುಸ್ತಕಗಳನ್ನು ಓದಿದ್ದೆನಾದರೂ ಅವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ಒದಗಿ ಬಂದಿರಲಿಲ್ಲ. ೨೦೦೧ರಲ್ಲಿ ಬಾಗಲಕೋಟೆಯ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದವರು ತಾವು ಸ್ಥಾಪಿಸಲಿರುವ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಪಾಲಕ ಹುದ್ದೆಗಾಗಿ ಅರ್ಜಿ ಆಹ್ವಾನಿಸಿದ್ದರು. ಆಗ ಡಾ.ಸ.ಜ.ನಾಗಲೋಟಿಮಠ ಅಲ್ಲಿ ವೈದ್ಯಕೀಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಗುಲಬರ್ಗಾದಲ್ಲಿದ್ದ ನಾನು ಗ್ರಂಥಪಾಲಕ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದೆ. ಸಂದರ್ಶನದಲ್ಲಿ ಹೆಚ್ಚು ಅಂಕ ಗಳಿಸಿದ ನಾನು ಸಹಜವಾಗಿಯೇ ವೈದ್ಯಕೀಯ ಮಹಾವಿದ್ಯಾಲಯದ ಗ್ರಂಥಪಾಲಕ ಹುದ್ದೆಗೆ ಆಯ್ಕೆಯಾದೆ. ಆಯ್ಕೆ ಸಮಿತಿಯವರು ಸಂದರ್ಶನದ ದಿನದಂದೇ ನನ್ನ ನೇಮಕಾತಿಯ ವಿಷಯ ತಿಳಿಸಿ ಮಾರನೆ ದಿನ ವೈದ್ಯಕೀಯ ನಿರ್ದೇಶಕರನ್ನು ಕಾಣುವಂತೆ ಸೂಚಿಸಿದರು. ಡಾ.ಸ.ಜ.ನಾಗಲೋಟಿಮಠ ಅವರ ಬಗ್ಗೆ ತಿಳಿದಿದ್ದ ನನಗೆ ಅಂತಹ ಪ್ರಸಿದ್ಧ ವ್ಯಕ್ತಿಯ ಮಾರ್ಗದರ್ಶನದಲ್ಲಿ ಕೆಲಸ ಮಾಡುವ ಅವಕಾಶ ದೊರೆತಿದ್ದಕ್ಕೆ ಬಹಳ ಸಂತೋಷವಾಯಿತು. ಮರುದಿನ ಬೆಳಿಗ್ಗೆ ಸರಿಯಾಗಿ ೯ ಗಂಟೆಗೆ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕರ ಕಚೇರಿಗೆ ಹೋಗಿ ಅವರನ್ನು ನಮಸ್ಕರಿಸಿ ನನ್ನ ಪರಿಚಯ ಮಾಡಿಕೊಂಡೆ. 'ಹಾಂ ಗೊತ್ತಾತು ತಮ್ಮಾ. ಇಲ್ಲಿಗಿ ಬಂದು ಛಲೋ ಮಾಡ್ದಿ. ಒಳ್ಳೆ ಮನಸ್ಸಿಂದ ಕೆಲ್ಸಾ ಮಾಡು ಅಂದ್ರ ನಿನ್ಗ ಜೀವಂದಾಗ ಭಾಳ ಛಲೋ ಆಗ್ತದ ನೋಡು' ಎಂದು ತಮ್ಮ ಟಿಪಿಕಲ್ ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಆ ದಿನ ಡಾ.ಸಜನಾ ಹೇಳಿದ ಮಾತು ನಾನು ಎಂದಿಗೂ ಮರೆಯಲಾರದಂತಹ ಮಾತು. ಅಲ್ಲಿಯೇ ಇದ್ದ ವೈದ್ಯರನ್ನು ಕರೆದು 'ಇಂವ ನಮ್ಮ ಕಾಲೇಜ್ ಲೈಬ್ರರಿಯನ್. ಎಂ.ಎಸ್ಸಿ ಹೋಲ್ಡರ್' ಎಂದು ತುಂಬ ಅಭಿಮಾನದಿಂದ ಪರಿಚಯಿಸಿದರು. ಅಂತರಾಷ್ಟ್ರೀಯ ಮಟ್ಟದ ಕೀರ್ತಿಯನ್ನು ಸಂಪಾದಿಸಿದ ವ್ಯಕ್ತಿ ನನ್ನಂತಹ ಸಣ್ಣ ವ್ಯಕ್ತಿಯನ್ನು ಪರಿಚಯ ಮಾಡಿಕೊಟ್ಟ ಅವರ ದೊಡ್ಡ ಗುಣ ಅವರ ಬಗೆಗಿನ ಗೌರವವನ್ನು ಮತ್ತಷ್ಟು ಹೆಚ್ಚಿಸಿತು. ಹೀಗೆ ೨೦೦೧ರಲ್ಲಿ ಪ್ರಾರಂಭವಾದ ನನ್ನ ಮತ್ತು ಸಜನಾ ಅವರ ಬಾಂಧವ್ಯ ಅವರು ವೈದ್ಯಕೀಯ ನಿರ್ದೇಶಕ ಹುದ್ದೆಗೆ ರಾಜಿನಾಮೆ ಇತ್ತು ಬೆಳಗಾವಿಗೆ ಹೋಗುವವರೆಗೂ ಅವ್ಯಾಹತವಾಗಿ ಮುಂದುವರೆಯಿತು.
ಡಾ.ಸಜನಾ ಅವರ ಸಾಧನೆಯ ಕ್ಷೇತ್ರ ಒಂದೇ ಆಗಿರಲಿಲ್ಲ. ಏಕೆಂದರೆ ಅವರು ಯಾವುದೇ ಒಂದು ಕ್ಷೇತ್ರಕ್ಕೆ ತಮ್ಮನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ವೈದ್ಯಕೀಯ ವಿಜ್ಞಾನದ ರೋಗ ನಿದಾನ ಶಾಸ್ತ್ರದಲ್ಲಿ ಅವರು ಪ್ರಾವಿಣ್ಯತೆ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಹ ಸಾಧನೆಗೈದರು ನಿಜ. ಆದರೆ ವೈದ್ಯಕೀಯ ಕ್ಷೇತ್ರದ ಆಚೆಯೂ ಸಜನಾ ಅವರು ಸಾಧಿಸಿದ ಸಾಧನೆ ಅಪಾರ. ಅವರೊಬ್ಬ ವೈದ್ಯ, ಶಿಕ್ಷಕ, ಸಾಹಿತಿ, ಆಡಳಿತಾಗಾರ, ಸಂಸ್ಥಾಪಕ, ವಾಗ್ಮಿ, ಶರಣ, ಸಂತ, ಸಂಘಟಕ ಮತ್ತು ಇವೆಲ್ಲವುಕ್ಕಿಂತ ಅವರೊಬ್ಬ ನಿಷ್ಕಲ್ಮಶ ಮನಸ್ಸಿನ ವ್ಯಕ್ತಿ. ಸಾಮಾನ್ಯವಾಗಿ ಸಜನಾ ಯಾರನ್ನೂ ಬಹುಬೇಗನೆ ತಮ್ಮ ವಿಶ್ವಾಸದ ವಲಯದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಸಜನಾ ಅವರ ಹೃದಯಕ್ಕೆ ಹತ್ತಿರವಾಗಬೇಕಾದರೆ ಆ ವ್ಯಕ್ತಿ ಪ್ರಾಮಾಣಿಕ ಎನ್ನುವ ನಂಬಿಕೆ ಅವರಿಗೆ ಬರಬೇಕಿತ್ತು. ಒಮ್ಮೆ ಸಜನಾ ಅವರ ನಂಬಿಕೆ ಗಳಿಸಿದರೆ ಅವರೆಂದೂ ತಮ್ಮ ನಂಬಿಕೆಗೆ ಅರ್ಹನಾದ ವ್ಯಕ್ತಿಯನ್ನು ಬಿಟ್ಟು ಕೊಡುತ್ತಿರಲಿಲ್ಲ. ಪ್ರಾಮಾಣಿಕತೆ, ಸಮಯ ಪ್ರಜ್ಞೆ ಮತ್ತು ಪರಿಶ್ರಮ ಈ ಗುಣಗಳು ಇದ್ದರೆ ಮಾತ್ರ ಸಜನಾ ಅವರ ವಿಶ್ವಾಸ ಗಳಿಸಲು ಸಾಧ್ಯವಿತ್ತು. ಅವರೊಡನೆ ಕೆಲಸ ಮಾಡಿದ ಆ ಎರಡು ವರ್ಷಗಳಲ್ಲಿ ನಾನು ಬಹುಬೇಗನೆ ಸಜನಾ ಅವರಿಗೆ ಹತ್ತಿರವಾಗಿದ್ದೆ ಎನ್ನುವುದು ನನಗೆ ಇವತ್ತಿಗೂ ಅತ್ಯಂತ ಹೆಮ್ಮೆಯ ಸಂಗತಿ.
ಲೇಖಕರಾಗಿದ್ದ ಡಾ.ಸ.ಜ.ನಾಗಲೋಟಿಮಠ ಇತರರನ್ನು ಬರೆಯಲು ಪ್ರೇರೆಪಿಸುತ್ತಿದ್ದರು. ಬಾಗಲಕೋಟೆಯ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿಯೊಬ್ಬ ವೈದ್ಯ ಕನ್ನಡದಲ್ಲಿ ಒಂದೊಂದು ಲೇಖನ ಬರೆದು ಕೊಡುವಂತೆ ಕಡ್ಡಾಯ ನಿಯಮ ಜಾರಿಗೆ ತಂದಿದ್ದರು. ಬ.ವಿ.ವಿ.ಸಂಘದವರು ಪ್ರಕಟಿಸುವ 'ಸಮಾಚಾರ' ಪತ್ರಿಕೆಯಲ್ಲಿ ನನ್ನ ಲೇಖನ ಪ್ರಕಟವಾದಾಗ ಓದಿ ಸಂತೋಷಪಟ್ಟು ಇನ್ನು ಹೆಚ್ಹು ಹೆಚ್ಚು ಲೇಖನಗಳನ್ನು ಬರೆಯುವಂತೆ ಹಾರೈಸಿದ್ದರು. ಬರವಣಿಗೆ ಅದೊಂದು ಸೃಜನಶೀಲ ಮಾಧ್ಯಮವೆಂದು ನಂಬಿದ್ದ ಅವರು ಎಲ್ಲರೂ ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಇಚ್ಚಿಸುತ್ತಿದ್ದರು. ಬರವಣಿಗೆಯನ್ನು ಅವರು ಅಷ್ಟೊಂದು ಗಾಢವಾಗಿ ಪ್ರೀತಿಸುತ್ತಿದ್ದುದ್ದರಿಂದಲೇ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಮತ್ತು ನೂರಾರು ಲೇಖನಗಳನ್ನು ಬರೆಯಲು ಸಾಧ್ಯವಾಯಿತು. 'ಅನ್ನ ಮಾರ್ಗದಲ್ಲಿ ಅಪಘಾತಗಳು' ಮತ್ತು 'ಸತ್ತ ಮೇಲೆ ಸಮಾಜ ಸೇವೆ' ಒಬ್ಬ ಸಾಮಾನ್ಯನೂ ಅರ್ಥ ಮಾಡಿಕೊಳ್ಳುವಂತಹ ಪುಸ್ತಕಗಳನ್ನು ಬರೆದು ವೈದ್ಯಕೀಯ ಸಾಹಿತ್ಯವನ್ನು ಶ್ರೀಮಂತಗೊಳಿಸಿದರು. ಅವರ ಆತ್ಮ ಚರಿತ್ರೆ 'ಬಿಚ್ಚಿದ ಜೋಳಿಗೆ' ಒಂದು ಸಂಗ್ರಹಯೋಗ್ಯ ಕೃತಿ. ಸಜನಾ ತಮ್ಮಲ್ಲಿರುವ ಬರಹಗಾರನನ್ನು ಯಾವ ರೀತಿ ದುಡಿಸಿಕೊಂಡಿರುವರು ಎನ್ನುವುದು 'ಬಿಚ್ಚಿದ ಜೋಳಿಗೆ' ಪುಸ್ತಕ ಓದಿದಾಗ ಅರ್ಥವಾಗುತ್ತದೆ. ಅವರ ಆತ್ಮ ಚರಿತ್ರೆ ಕನ್ನಡದ ಅತ್ಯುತ್ತಮ ಕೃತಿಗಳಲ್ಲೊಂದು. ಸಜನಾ ಸಾವಿನ ನಂತರವೂ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ಎರಡು ವಾರ ಅವರ ಅಂಕಣ ಬರಹ ಪ್ರಕಟವಾಯಿತು. ಇದು ಬರವಣಿಗೆಯ ಮೇಲೆ ಅವರಿಗಿರುವ ಪ್ರೀತಿಗೆ ಸಾಕ್ಷಿ.
ಕಡಿಮೆ ಹಣದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸಬೇಕೆನ್ನುವುದು ಸಜನಾ ಅವರ ಇನ್ನೊಂದು ಮಹತ್ವಾಕಾಂಕ್ಷೆಯಾಗಿತ್ತು. ಬಡತನದ ಅರಿವಿದ್ದ ಅವರಿಗೆ ಬಡ ರೋಗಿಗಳ ಬಗ್ಗೆ ಕಾಳಜಿ ಇತ್ತು. ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕೇವಲ ಐದು ರೂಪಾಯಿಗಳಿಗೆ ವೈದ್ಯಕೀಯ ಸೌಲಭ್ಯ ದೊರೆಯುವ ವ್ಯವಸ್ಥೆ ಮಾಡಿದರು. ಸರ್ಕಾರಿ ಆಸ್ಪತ್ರೆಯನ್ನೇ ನಂಬಿದ್ದ ಬಡ ರೋಗಿಗಳಿಗೆ ಇದೊಂದು ವರದಾನವಾಯಿತು. ಇವತ್ತಿಗೂ ಈ ಆಸ್ಪತ್ರೆಯಲ್ಲಿ ಸಜನಾ ಅವರು ಹಾಕಿಕೊಟ್ಟ ಪರಂಪರೆಯನ್ನೇ ಮುಂದುವರೆಸಿಕೊಂಡು ಹೋಗುತ್ತಿರುವರು. ತುರ್ತು ಸಂದರ್ಭದಲ್ಲಿ ರಕ್ತ ದೊರೆಯದೆ ರೋಗಿ ಸಾವನ್ನಪ್ಪುತ್ತಿದ ಬಾಗಲಕೋಟೆಯ ಈ ಸಮಸ್ಯೆಗೆ ಬ್ಲಡ್ ಬ್ಯಾಂಕ್ ಸ್ಥಾಪಿಸಿ ಶಾಶ್ವತ ಪರಿಹಾರ ಕಂಡು ಹಿಡಿದರು. ಡಾ.ಸ.ಜ.ನಾಗಲೋಟಿಮಠ ಅವರ ಪ್ರತಿಭೆ, ದಕ್ಷತೆ ಮತ್ತು ಪ್ರಾಮಾಣಿಕತೆಯ ಮೇಲೆ ನಂಬಿಕೆ ಇದ್ದುದ್ದರಿಂದಲೇ ಸರ್ಕಾರ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ನಿರ್ದೇಶಕರಾಗಿ ನೇಮಿಸಿತು. ಬಡ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ದೊರೆಯಬೇಕಾದ ಎಲ್ಲ ಸೌಲಭ್ಯಗಳು ದೊರೆಯುವಂತೆ ಮಾಡಲು ಅವರು ದುಡಿದ ರೀತಿ ಅನನ್ಯ. ದೌರ್ಭಾಗ್ಯದ ಸಂಗತಿ ಎಂದರೆ ಕೆಲವು ಹಿತಾಸಕ್ತಿಗಳಿಗೆ ಇದು ಬೇಕಾಗಿರಲಿಲ್ಲ. ಹೀಗೆ ಸಜನಾ ತಮ್ಮ ಬದುಕಿನುದ್ದಕ್ಕೂ ಅನೇಕ ಅಡ್ಡಿ ಆತಂಕಗಳನ್ನೆದುರಿಸಿದರು. ಆದರೆ ಯಾವುದೇ ಸಮಸ್ಯೆಗಳು ಸಾಧಕನ ಬದುಕಿಗೆ ಸವಾಲುಗಳಲ್ಲ ಎನ್ನುವುದನ್ನು ಅವರು ಸಾಧಿಸಿ ತೋರಿಸಿದರು.
ಸಜನಾ ಅವರಲ್ಲಿನ ಮೆಚ್ಚುವಂತಹ ಇನ್ನೊಂದು ಗುಣ ಅದು ನಿಷ್ಟುರತೆ. ಇದ್ದದ್ದನ್ನು ಇದ್ದಂತೆ ನೇರವಾಗಿ ಹೇಳುವ ಈ ಗುಣದಿಂದಲೇ ಅವರು ಇನ್ನು ಅನೇಕ ಪ್ರಶಸ್ತಿ, ಪುರಸ್ಕಾರಗಳಿಂದ ವಂಚಿತರಾಗಬೇಕಾಯಿತು. ಪ್ರಶಸ್ತಿ, ಪದವಿಗಳಿಗಾಗಿ ದೊಡ್ಡ ವ್ಯಕ್ತಿಗಳನ್ನು ಓಲೈಸುವ ಗುಣ ಅವರಲ್ಲಿರಲಿಲ್ಲ. ಅವರಿಗೆ ನಂಬಿಕೆ ಇದ್ದದ್ದು ತಮ್ಮಲ್ಲಿರುವ ಪ್ರತಿಭೆ ಮತ್ತು ಪ್ರಾಮಾಣಿಕತೆಯ ಮೇಲೆ. ಯಾರನ್ನೂ ಓಲೈಸದೆ, ಆಶ್ರಯಿಸದೆ, ಅವಕಾಶವಾದಿಯಾಗದೆ ಕೇವಲ ಸ್ವಸಾಮರ್ಥ್ಯದಿಂದ ಒಬ್ಬ ವ್ಯಕ್ತಿ ಹೇಗೆ ಹಂತ ಹಂತವಾಗಿ ಬೆಳೆದು ಸಾಧನೆಯ ಶಿಖರವನ್ನೇರಿ ನಿಲ್ಲಬಹುದು ಎನ್ನುವುದಕ್ಕೆ ಸಜನಾ ಅವರ ಬದುಕೇ ಮಾದರಿ. ಈ ಕಾರಣದಿಂದಲೇ ಅವರೊಬ್ಬ ಅಪರೂಪದ ವ್ಯಕ್ತಿಯಾಗಿ ಕಾಣಿಸುತ್ತಾರೆ.
ಹೇಳುತ್ತ ಹೋದರೆ ಅವರ ಮೇಲೊಂದು ಬೃಹತ್ ಪುಸ್ತಕವನ್ನೇ ಬರೆಯಬಹುದು. ಒಟ್ಟಿನಲ್ಲಿ ಪ್ರತಿಯೊಬ್ಬರೂ ಅನುಕರಿಸುವಂತಹ ವ್ಯಕ್ತಿತ್ವ ಅವರದು. ವೈದ್ಯಕೀಯ ನಿರ್ದೇಶಕ ಹುದ್ದೆಗೆ ರಾಜಿನಾಮೆ ನೀಡಿ ಬೆಳಗಾವಿಗೆ ಹೋಗುವಾಗ ನನ್ನನ್ನು ಕರೆದು ತಮ್ಮ ಹಸ್ತಾಕ್ಷರದೊಂದಿಗೆ 'ಜೀವಧಾರೆ' (ಅವರ ಅಭಿನಂದನಾ ಗ್ರಂಥ) ಪುಸ್ತಕವನ್ನು ಕೊಟ್ಟು ಆಶಿರ್ವದಿಸಿದರು. ಕೊನೆಯ ದಿನಗಳನ್ನು ಬೆಳಗಾವಿಯಲ್ಲಿ ಆರಾಮವಾಗಿ ಕಳೆಯುವುದಾಗಿ ತಿಳಿಸಿ ಯಾವಾಗಲಾದರೂ ಬಂದು ಭೇಟಿಯಾಗುವಂತೆ ಆಗ್ರಹಿಸಿದರು. ಅದೆಕೋ ಅವರ ಬದುಕಿನ ಕೊನೆಯ ದಿನಗಳಲ್ಲಿ ನಾನು ಅವರನ್ನು ಭೇಟಿಯಾಗಲು ಸಾಧ್ಯವಾಗಲೇ ಇಲ್ಲ. ಇವತ್ತಿಗೂ ಬೆಳಗಾವಿ ಎಂದಾಕ್ಷಣ ಸಜನಾ ನೆನಪಾಗುತ್ತಾರೆ. ಆ ನೆನಪಿನ ಹಿಂದೆ ಅವರನ್ನು ಕೊನೆಯ ದಿನಗಳಲ್ಲಿ ಭೇಟಿಯಾಗಲೇ ಇಲ್ಲ ಎನ್ನುವ ನೋವು ಮನಸ್ಸನ್ನು ಕಾಡುತ್ತದೆ. ಬೆಳಗಾವಿ ಎಂದಿನಂತಿದೆ. ಸಜನಾ ಸ್ಥಾಪಿಸಿದ ವಿಶ್ವಶ್ರೇಷ್ಠ ಮ್ಯುಜಿಯಂ ಅಲ್ಲಿದೆ. ಜೊತೆಗೆ ರುಚಿಯಾದ ಕುಂದಾ ಇದೆ. ಆದರೆ ಆ ಸಜ್ಜನ ಅಲ್ಲಿಲ್ಲ. ಅಲ್ಲಿರುವುದು ಅವರ ನೆನಪುಗಳು ಮಾತ್ರ.
('ಸಜನಾ ಸಂಸ್ಮರಣ' ಗ್ರಂಥಕ್ಕಾಗಿ ಬರೆದ ಲೇಖನ)
No comments:
Post a Comment