(ಪ್ರಜಾವಾಣಿ, ೦೬.೦೯.೨೦೨೪)
ಪ್ರಿಯ ಓದುಗ ನಮಸ್ಕಾರಗಳು,
ಪ್ರತಿವರ್ಷ ಅಗಸ್ಟ್ 12 ರಂದು ನನ್ನ ಕುರಿತು ವಿಚಾರಸಂಕೀರಣ, ಉಪನ್ಯಾಸ, ನನ್ನಲ್ಲಿರುವ ಪುಸ್ತಕಗಳ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಯೋಜಿಸುವರು. ಭಾರತದಲ್ಲಿ ಗ್ರಂಥಾಲಯಗಳ ಬೆಳವಣಿಗೆಯ ಜನಕ ಎಂದೇ ಖ್ಯಾತರಾದ ಡಾ.ಎಸ್.ಆರ್.ರಂಗನಾಥನ್‍ರ ಜನ್ಮದಿನದ ನಿಮಿತ್ಯ ಈ ಎಲ್ಲ ಸಂಭ್ರಮ ಮತ್ತು ಸಡಗರ. ಭಾರತದಲ್ಲಿ ಗ್ರಂಥಾಲಯ ವ್ಯವಸ್ಥೆಗೆ ಒಂದು ವೈಜ್ಞಾನಿಕ ತಳಹದಿಯನ್ನು ನಿರ್ಮಿಸಿದವರು ಅವರು. ಗ್ರಂಥಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟು ಆಸಕ್ತ ಓದುಗರಿಗೆ ಒದಗಿಸುವ ಗ್ರಂಥಾಲಯ ವ್ಯವಸ್ಥೆಯ ರೂಪುರೇಷೆಯ ಹಿಂದೆ ರಂಗನಾಥನ್‍ರ ಅಗಾಧ ಪರಿಶ್ರಮ ಮತ್ತು ಪ್ರತಿಭೆ ಪರಿಣಾಮಕಾರಿಯಾಗಿ ಕೆಲಸ ಮಾಡಿ
ಜನಸಾಮಾನ್ಯರಿಗೂ ಓದಲು ಪುಸ್ತಕಗಳು ದೊರೆಯುವಂತಾಗಬೇಕು ಎನ್ನುವುದು ರಂಗನಾಥನ್‍ರ ಆಲೋಚನೆಯಾಗಿತ್ತು. ಗ್ರಂಥಾಲಯಗಳ ಮೂಲಕ ಜ್ಞಾನ ಪ್ರಸಾರದ ಕಾರ್ಯ ಅತ್ಯಂತ ಸುಲಲಿತವಾಗಿ ನಡೆಯಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ರಂಗನಾಥನ್ ನನ್ನ (ಸಾರ್ವಜನಿಕ ಗ್ರಂಥಾಲಯಗಳ) ಕಾರ್ಯನಿರ್ವಹಣೆಗೆ ಒಂದು ವೈಜ್ಞಾನಿಕ ವ್ಯವಸ್ಥೆಯನ್ನು ನಿರ್ಮಿಸಿದರೇನೋ ಸರಿ. ಆದರೆ ಕಾಲಾನಂತರದಲ್ಲಿ ನಾನು ಸಮಸ್ಯೆಗಳ ಆಗರವಾದೆ. ಗುಣಮಟ್ಟದ ಪುಸ್ತಕಗಳ ಕೊರತೆ, ಪೀಠೋಪಕರಣಗಳ ಕೊರತೆ, ವ್ಯವಸ್ಥಿತ ಕಟ್ಟಡ ಇಲ್ಲದಿರುವುದು, ಸಿಬ್ಬಂದಿಯ ಕೊರತೆ ಮತ್ತು ಅವರ ಅಸಮರ್ಪಕ ಕಾರ್ಯನಿರ್ವಹಣೆ, ತಂತ್ರಜ್ಞಾನವನ್ನು ಬಳಸಿಕೊಳ್ಳದೇ ಇರುವುದು ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಪೆÇಣಿಸಲಾಗುತ್ತಿದೆ.
ಪ್ರಿಯ ಓದುಗ ಈ ಮೇಲಿನ ಸಮಸ್ಯೆಗಳೆಲ್ಲ ನಿರಾಧಾರವಾದವುಗಳೆಂದು ನಾನು ವಾದಿಸುತ್ತಿಲ್ಲ. ಸಮಸ್ಯೆಗಳ ಹುತ್ತದಲ್ಲಿ ನಾನು ಮುಳುಗಿ ಹೋಗಿದ್ದೇನೆ. ಪುಸ್ತಕಗಳ ವಿಷಯವಾಗಿ ಹೇಳುವುದಾದರೆ ಓದಲು ಗುಣಾತ್ಮಕ ಪುಸ್ತಕಗಳು ನನ್ನಲ್ಲಿರುವುದು ಶೇಕಡಾ 30 ರಿಂದ 40 ಮಾತ್ರ. ಉಳಿದ ಪ್ರತಿಶತ 60 ರಷ್ಟು ಪುಸ್ತಕಗಳು ಸಂಖ್ಯಾತ್ಮಕ ದೃಷ್ಟಿಯಿಂದ ಖರೀದಿಸಿದವುಗಳೇ ವಿನಾ ಓದಲು ಯೋಗ್ಯವಾಗಿಲ್ಲ. ನನ್ನಲ್ಲಿರುವ ಪುಸ್ತಕಗಳ ರಾಶಿಯನ್ನು ನೋಡಿ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ತಕ್ಕಡಿಯಲ್ಲಿ ತೂಗಿ ಖರೀದಿಸುವರೆಂಬ ವಿಡಂಬನಾತ್ಮಕ ಹೇಳಿಕೆ ಚಾಲ್ತಿಯಲ್ಲಿದೆ. ಈ ಮಾತು ಕೇಳಿದಾಗಲೆಲ್ಲ ನಾನು ಅದೆಷ್ಟು ವೇದನೆಯಿಂದ ನರಳಿದ್ದೇನೆಂದು ಗೊತ್ತೇ ನಿನಗೆ?.
ಓದಲು ಯೋಗ್ಯವಲ್ಲದ ಪುಸ್ತಕಗಳ ರಾಶಿಯನ್ನು ನನ್ನ ಒಡಲಲ್ಲಿ ತುಂಬುತ್ತಿರುವವರು ಯಾರು ಎಂದು ದೂಷಿಸಲು ನನ್ನಲ್ಲಿ ದೀರ್ಘ ಪಟ್ಟಿಯೇ ಇದೆ. ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಕ್ಕಾಗಿ ರಾಜ್ಯದ ರಾಜಧಾನಿ, ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೆ ಹೊಬಳಿ ಮತ್ತು ಹಳ್ಳಿಗಳಲ್ಲೂ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಜೊತೆಗೆ ಲೇಖಕರೆ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಪರಿಣಾಮವಾಗಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಕನ್ನಡ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿವೆ. ಕೆಲವು ಪ್ರಕಾಶಕರಂತೂ ಎರಡು ಮೂರು ಪ್ರಕಾಶನ ಸಂಸ್ಥೆಗಳ ಹೆಸರಿನಡಿ ಪುಸ್ತಕಗಳನ್ನು ಪ್ರಕಟಿಸಿ ಲಾಭ ಮಾಡಿಕೊಳುತ್ತಿರುವರೆಂಬ ಆರೋಪ ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಸಂಬಂಧಿಸಿದ ಇಲಾಖೆ ಮತ್ತು ಸರ್ಕಾರ ಕಣ್ಣಿದ್ದು ಕುರುಡಾಗಿವೆ. ಹಾಗೆಂದು ನಾನು ಎಲ್ಲ ಪ್ರಕಾಶಕರನ್ನು ಕಾಮಾಲೆ ಕಣ್ಣಿನಿಂದ ನೋಡುತ್ತಿಲ್ಲ. ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರು ನನ್ನಿಂದ ದೂರವೇ ಉಳಿದಿರುವರು.
ಪ್ರಕಾಶಕರ ಹುನ್ನಾರದ ಹಿಂದೆ ನನ್ನ ಇಲಾಖೆಯ ಅಧಿಕಾರಿಗಳ ಪಾತ್ರವಿದೆ ಎನ್ನುವುದು ಪಾರದರ್ಶಕ ಸತ್ಯ. ಪ್ರಕಾಶನ ಸಂಸ್ಥೆಗಳೊಂದಿಗೆ ಒಳಒಪ್ಪಂದಕ್ಕಿಳಿದು ಕಸದ ರಾಶಿಯನ್ನೆಲ್ಲ ನನ್ನ ಒಡಲಲ್ಲಿ ತುಂಬುತ್ತಿರುವರು. ಪುಸ್ತಕ ಆಯ್ಕೆ ಸಮಿತಿಯವರು ತಮಗೆ ನಿಗದಿಪಡಿಸಿದ ಅಲ್ಪ ಸಮಯದಲ್ಲೆ ರಾಶಿ ರಾಶಿ ಪುಸ್ತಕಗಳನ್ನು ನನಗಾಗಿ ಆಯ್ಕೆ ಮಾಡುವರು. ಒಂದೆರಡು ದಿನಗಳಲ್ಲಿ ಸಾವಿರಾರು ಪುಸ್ತಕಗಳನ್ನು ಓದುವುದಾದರೂ ಹೇಗೆ ಸಾಧ್ಯ?. ಇನ್ನು ಇರುವ ಅಲ್ಪ ಸಂಖ್ಯೆಯ ಗುಣಾತ್ಮಕ ಪುಸ್ತಕಗಳಾದರೂ ಓದಲು ಓದುಗರಿಗೆ ದೊರೆಯುತ್ತಿವೆಯೆ ಎನ್ನುವ ಪ್ರಶ್ನೆಗೆ ಮತ್ತದೆ ನಿರಾಶಾದಾಯಕ ಉತ್ತರ. ಪುಸ್ತಕಗಳ ಉಪಯೋಗ ಹೆಚ್ಚಿಸಲು ಗ್ರಂಥಾಲಯ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ. ಗ್ರಂಥಾಲಯದಲ್ಲಿ ಕೆಲಸದ ವೇಳೆ ಸಿಬ್ಬಂದಿಯ ಅನುಪಸ್ಥಿತಿ ಸಾಮಾನ್ಯವಾಗಿದೆ. ಓದುಗರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದಿಲ್ಲ. ಅದೆಷ್ಟೋ ಸಿಬ್ಬಂದಿಗೆ ನನ್ನಲ್ಲಿರುವ ಪುಸ್ತಕಗಳ ಹೆಸರೇ ಗೊತ್ತಿರುವುದಿಲ್ಲ.
ಹಳ್ಳಿ ಪ್ರದೇಶಗಳಲ್ಲಿನ ಜನರಿಗೂ ಪುಸ್ತಕ ಓದುವ ಭಾಗ್ಯ ದೊರೆಯಲೆಂದು ನನ್ನನ್ನು ಗ್ರಾಮೀಣ ಪ್ರದೇಶಗಳಲ್ಲೂ ಒಯ್ದು ಪ್ರತಿಷ್ಠಾಪಿಸಿರುವರು. ಪುಸ್ತಕಗಳ ಸಂಗ್ರಹಣಾ ವಿಷಯವಾಗಿ ಆಯಾ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಾದ ಓದಿನ ಬೇಕು-ಬೇಡಗಳನ್ನು ಸಮೀಕ್ಷೆ ಮಾಡಬೇಕು. ಗ್ರಾಮೀಣ ಗ್ರಂಥಾಲಯಗಳ ಮೇಲ್ವಿಚಾರಕರಿಂದ ಬೇಡಿಕೆಯ ಪಟ್ಟಿಯನ್ನು ಪಡೆಯಬೇಕು. ಆದರೆ ಇಲ್ಲಿಯೂ ಇಲಾಖೆಯದು ಸರ್ವಾಧಿಕಾರಿ ಧೋರಣೆ. ದೂರದ ನಗರದಲ್ಲಿ ಕುಳಿತು ತಾವು ಆಯ್ಕೆ ಮಾಡಿ ಕಳುಹಿಸಿದ ಪುಸ್ತಕಗಳನ್ನೆ ನನ್ನಲ್ಲಿನ ಅಲ್ಮೆರಾಗಳಲ್ಲಿ ತುಂಬುತ್ತಿರುವರು. ಅರೆಕಾಲಿಕ ನೌಕರಿ ಮತ್ತು ಸೀಮಿತ ಸಂಬಳದಿಂದ ಮೇಲ್ವಿಚಾರಕರು ನನ್ನನ್ನು ಸರಿಯಾಗಿ ಪೆÇೀಷಿಸುತ್ತಿಲ್ಲ. ಸ್ಥಳೀಯರು ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಪರಿಣಾಮ ಅದೆಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ನನ್ನ ಬಾಗಿಲುಗಳು ಸದಾಕಾಲ ಮುಚ್ಚಿರುತ್ತವೆ.
ಶಿಕ್ಷಣ ಸಂಸ್ಥೆಗಳಲ್ಲಿರುವ ನನ್ನ ಸಹೋದರ/ಸಹೋದರಿಯರದೂ ಇದೇ ಅವಸ್ಥೆ. ಅಲ್ಲಿ ಕೂಡ ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ ಪುಸ್ತಕಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲವಂತೆ. ಅಧ್ಯಾಪನಕ್ಕೆ ಅಧ್ಯಯನವೇ ಬಂಡವಾಳವಾಗಿರುವ ಸರಸ್ವತಿ ಮಂದಿರಗಳಲ್ಲೇ ಪುಸ್ತಕಗಳು ಅನಾದರಕ್ಕೆ ಒಳಗಾಗಿವೆ. ಹೀಗಿರುವಾಗ ಶ್ರೀಸಾಮಾನ್ಯರನ್ನೇ ನಂಬಿಕುಳಿತಿರುವ ನನ್ನದಂತೂ ಶೋಚನೀಯ ಸ್ಥಿತಿ.
ಇಷ್ಟೆಲ್ಲ ಅಸಂಗತಗಳ ನಡುವೆ ನಾನಿನ್ನೂ ಉಸಿರಾಡುತ್ತಿರುವೆ. ನಾನು ದೀರ್ಘಕಾಲ ಬದುಕುಳಿಯಲು ಈಗ ನನಗಿರುವ ಏಕೈಕ ಆಸರೆ ಎಂದರೆ ಓದುಗ ದೊರೆ ನೀನು ಮಾತ್ರ. ಮೊಬೈಲ್ ವ್ಯಸನಿಯಾದ ನೀನು ಈಗ ನನ್ನನ್ನು ನಿರ್ಲಕ್ಷಿಸುತ್ತಿರುವುದು ಸತ್ಯಕ್ಕೆ ಹತ್ತಿರವಾದ ಮಾತು. ತಂತ್ರಜ್ಞಾನದ ಹೊಡೆತಕ್ಕೆ ನಾನು ನಲುಗಿಹೋಗಿದ್ದೇನೆ. ನಾನು ನಶಿಸಿ ಹೋಗುವ ಮೊದಲು ನನ್ನ ಒಡಲಲ್ಲಿರುವ ಜ್ಞಾನಾಮೃತದ ಧಾರೆಯನ್ನು ಸವಿಯಲು ಬಾ. ನಿನ್ನ ಆಗಮನಕ್ಕಾಗಿ ಕಾದಿರುವೆ.
ಇಂತಿ ನಿನ್ನ ಗ್ರಂಥಾಲಯ
-ರಾಜಕುಮಾರ ಕುಲಕರ್ಣಿ