Tuesday, February 11, 2025

ಇಲ್ಲಿದೆ ಜ್ಞಾನಧಾರೆ, ಸವಿಯಬನ್ನಿ





(ಪ್ರಜಾವಾಣಿ, ೦೬.೦೯.೨೦೨೪)

 ಪ್ರಿಯ ಓದುಗ ನಮಸ್ಕಾರಗಳು,

ಪ್ರತಿವರ್ಷ ಅಗಸ್ಟ್ 12 ರಂದು ನನ್ನ ಕುರಿತು ವಿಚಾರಸಂಕೀರಣ, ಉಪನ್ಯಾಸ, ನನ್ನಲ್ಲಿರುವ ಪುಸ್ತಕಗಳ ಪ್ರದರ್ಶನದಂತಹ ಕಾರ್ಯಕ್ರಮಗಳನ್ನು ದೇಶದಾದ್ಯಂತ ಆಯೋಜಿಸುವರು. ಭಾರತದಲ್ಲಿ ಗ್ರಂಥಾಲಯಗಳ ಬೆಳವಣಿಗೆಯ ಜನಕ ಎಂದೇ ಖ್ಯಾತರಾದ ಡಾ.ಎಸ್.ಆರ್.ರಂಗನಾಥನ್‍ರ ಜನ್ಮದಿನದ ನಿಮಿತ್ಯ ಈ ಎಲ್ಲ ಸಂಭ್ರಮ ಮತ್ತು ಸಡಗರ. ಭಾರತದಲ್ಲಿ ಗ್ರಂಥಾಲಯ ವ್ಯವಸ್ಥೆಗೆ ಒಂದು ವೈಜ್ಞಾನಿಕ ತಳಹದಿಯನ್ನು ನಿರ್ಮಿಸಿದವರು ಅವರು. ಗ್ರಂಥಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿಟ್ಟು ಆಸಕ್ತ ಓದುಗರಿಗೆ ಒದಗಿಸುವ ಗ್ರಂಥಾಲಯ ವ್ಯವಸ್ಥೆಯ ರೂಪುರೇಷೆಯ ಹಿಂದೆ ರಂಗನಾಥನ್‍ರ ಅಗಾಧ ಪರಿಶ್ರಮ ಮತ್ತು ಪ್ರತಿಭೆ ಪರಿಣಾಮಕಾರಿಯಾಗಿ ಕೆಲಸ ಮಾಡಿ

ಜನಸಾಮಾನ್ಯರಿಗೂ ಓದಲು ಪುಸ್ತಕಗಳು ದೊರೆಯುವಂತಾಗಬೇಕು ಎನ್ನುವುದು ರಂಗನಾಥನ್‍ರ ಆಲೋಚನೆಯಾಗಿತ್ತು. ಗ್ರಂಥಾಲಯಗಳ ಮೂಲಕ ಜ್ಞಾನ ಪ್ರಸಾರದ ಕಾರ್ಯ ಅತ್ಯಂತ ಸುಲಲಿತವಾಗಿ ನಡೆಯಲಿ ಎನ್ನುವ ಮಹತ್ವಾಕಾಂಕ್ಷೆಯಿಂದ ರಂಗನಾಥನ್ ನನ್ನ (ಸಾರ್ವಜನಿಕ ಗ್ರಂಥಾಲಯಗಳ) ಕಾರ್ಯನಿರ್ವಹಣೆಗೆ ಒಂದು ವೈಜ್ಞಾನಿಕ ವ್ಯವಸ್ಥೆಯನ್ನು ನಿರ್ಮಿಸಿದರೇನೋ ಸರಿ. ಆದರೆ ಕಾಲಾನಂತರದಲ್ಲಿ ನಾನು ಸಮಸ್ಯೆಗಳ ಆಗರವಾದೆ. ಗುಣಮಟ್ಟದ ಪುಸ್ತಕಗಳ ಕೊರತೆ, ಪೀಠೋಪಕರಣಗಳ ಕೊರತೆ, ವ್ಯವಸ್ಥಿತ ಕಟ್ಟಡ ಇಲ್ಲದಿರುವುದು, ಸಿಬ್ಬಂದಿಯ ಕೊರತೆ ಮತ್ತು ಅವರ ಅಸಮರ್ಪಕ ಕಾರ್ಯನಿರ್ವಹಣೆ, ತಂತ್ರಜ್ಞಾನವನ್ನು ಬಳಸಿಕೊಳ್ಳದೇ ಇರುವುದು ಹೀಗೆ ಸಮಸ್ಯೆಗಳ ಸರಮಾಲೆಯನ್ನೇ ಪೆÇಣಿಸಲಾಗುತ್ತಿದೆ. 

ಪ್ರಿಯ ಓದುಗ ಈ ಮೇಲಿನ ಸಮಸ್ಯೆಗಳೆಲ್ಲ ನಿರಾಧಾರವಾದವುಗಳೆಂದು ನಾನು ವಾದಿಸುತ್ತಿಲ್ಲ. ಸಮಸ್ಯೆಗಳ ಹುತ್ತದಲ್ಲಿ ನಾನು ಮುಳುಗಿ ಹೋಗಿದ್ದೇನೆ. ಪುಸ್ತಕಗಳ ವಿಷಯವಾಗಿ ಹೇಳುವುದಾದರೆ ಓದಲು ಗುಣಾತ್ಮಕ ಪುಸ್ತಕಗಳು ನನ್ನಲ್ಲಿರುವುದು ಶೇಕಡಾ 30 ರಿಂದ 40 ಮಾತ್ರ. ಉಳಿದ ಪ್ರತಿಶತ 60 ರಷ್ಟು ಪುಸ್ತಕಗಳು ಸಂಖ್ಯಾತ್ಮಕ ದೃಷ್ಟಿಯಿಂದ ಖರೀದಿಸಿದವುಗಳೇ ವಿನಾ ಓದಲು ಯೋಗ್ಯವಾಗಿಲ್ಲ. ನನ್ನಲ್ಲಿರುವ ಪುಸ್ತಕಗಳ ರಾಶಿಯನ್ನು ನೋಡಿ ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪುಸ್ತಕಗಳನ್ನು ತಕ್ಕಡಿಯಲ್ಲಿ ತೂಗಿ ಖರೀದಿಸುವರೆಂಬ ವಿಡಂಬನಾತ್ಮಕ ಹೇಳಿಕೆ ಚಾಲ್ತಿಯಲ್ಲಿದೆ. ಈ ಮಾತು ಕೇಳಿದಾಗಲೆಲ್ಲ ನಾನು ಅದೆಷ್ಟು ವೇದನೆಯಿಂದ ನರಳಿದ್ದೇನೆಂದು ಗೊತ್ತೇ ನಿನಗೆ?. 

ಓದಲು ಯೋಗ್ಯವಲ್ಲದ ಪುಸ್ತಕಗಳ ರಾಶಿಯನ್ನು ನನ್ನ ಒಡಲಲ್ಲಿ ತುಂಬುತ್ತಿರುವವರು ಯಾರು ಎಂದು ದೂಷಿಸಲು ನನ್ನಲ್ಲಿ ದೀರ್ಘ ಪಟ್ಟಿಯೇ ಇದೆ. ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟಕ್ಕಾಗಿ ರಾಜ್ಯದ ರಾಜಧಾನಿ, ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಾತ್ರವಲ್ಲದೆ ಹೊಬಳಿ ಮತ್ತು ಹಳ್ಳಿಗಳಲ್ಲೂ ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಜೊತೆಗೆ ಲೇಖಕರೆ ಪ್ರಕಾಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಪರಿಣಾಮವಾಗಿ ಪ್ರತಿವರ್ಷ ಅಸಂಖ್ಯಾತ ಪುಸ್ತಕಗಳು ಕನ್ನಡ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿವೆ. ಕೆಲವು ಪ್ರಕಾಶಕರಂತೂ ಎರಡು ಮೂರು ಪ್ರಕಾಶನ ಸಂಸ್ಥೆಗಳ ಹೆಸರಿನಡಿ ಪುಸ್ತಕಗಳನ್ನು ಪ್ರಕಟಿಸಿ ಲಾಭ ಮಾಡಿಕೊಳುತ್ತಿರುವರೆಂಬ ಆರೋಪ ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಸಂಬಂಧಿಸಿದ ಇಲಾಖೆ ಮತ್ತು ಸರ್ಕಾರ ಕಣ್ಣಿದ್ದು ಕುರುಡಾಗಿವೆ. ಹಾಗೆಂದು ನಾನು ಎಲ್ಲ ಪ್ರಕಾಶಕರನ್ನು ಕಾಮಾಲೆ ಕಣ್ಣಿನಿಂದ ನೋಡುತ್ತಿಲ್ಲ. ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರು ನನ್ನಿಂದ ದೂರವೇ ಉಳಿದಿರುವರು.

ಪ್ರಕಾಶಕರ ಹುನ್ನಾರದ ಹಿಂದೆ ನನ್ನ ಇಲಾಖೆಯ ಅಧಿಕಾರಿಗಳ ಪಾತ್ರವಿದೆ ಎನ್ನುವುದು ಪಾರದರ್ಶಕ ಸತ್ಯ. ಪ್ರಕಾಶನ ಸಂಸ್ಥೆಗಳೊಂದಿಗೆ ಒಳಒಪ್ಪಂದಕ್ಕಿಳಿದು ಕಸದ ರಾಶಿಯನ್ನೆಲ್ಲ ನನ್ನ ಒಡಲಲ್ಲಿ ತುಂಬುತ್ತಿರುವರು. ಪುಸ್ತಕ ಆಯ್ಕೆ ಸಮಿತಿಯವರು ತಮಗೆ ನಿಗದಿಪಡಿಸಿದ ಅಲ್ಪ ಸಮಯದಲ್ಲೆ ರಾಶಿ ರಾಶಿ ಪುಸ್ತಕಗಳನ್ನು ನನಗಾಗಿ ಆಯ್ಕೆ ಮಾಡುವರು. ಒಂದೆರಡು ದಿನಗಳಲ್ಲಿ ಸಾವಿರಾರು ಪುಸ್ತಕಗಳನ್ನು ಓದುವುದಾದರೂ ಹೇಗೆ ಸಾಧ್ಯ?. ಇನ್ನು ಇರುವ ಅಲ್ಪ ಸಂಖ್ಯೆಯ ಗುಣಾತ್ಮಕ ಪುಸ್ತಕಗಳಾದರೂ ಓದಲು ಓದುಗರಿಗೆ ದೊರೆಯುತ್ತಿವೆಯೆ ಎನ್ನುವ ಪ್ರಶ್ನೆಗೆ ಮತ್ತದೆ ನಿರಾಶಾದಾಯಕ ಉತ್ತರ.  ಪುಸ್ತಕಗಳ ಉಪಯೋಗ ಹೆಚ್ಚಿಸಲು ಗ್ರಂಥಾಲಯ ಸಿಬ್ಬಂದಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿಲ್ಲವೆಂಬ ಕೂಗು ಕೇಳಿ ಬರುತ್ತಿದೆ. ಗ್ರಂಥಾಲಯದಲ್ಲಿ ಕೆಲಸದ ವೇಳೆ  ಸಿಬ್ಬಂದಿಯ ಅನುಪಸ್ಥಿತಿ ಸಾಮಾನ್ಯವಾಗಿದೆ. ಓದುಗರ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದಿಲ್ಲ. ಅದೆಷ್ಟೋ ಸಿಬ್ಬಂದಿಗೆ ನನ್ನಲ್ಲಿರುವ ಪುಸ್ತಕಗಳ ಹೆಸರೇ ಗೊತ್ತಿರುವುದಿಲ್ಲ. 

ಹಳ್ಳಿ ಪ್ರದೇಶಗಳಲ್ಲಿನ ಜನರಿಗೂ ಪುಸ್ತಕ ಓದುವ ಭಾಗ್ಯ ದೊರೆಯಲೆಂದು ನನ್ನನ್ನು ಗ್ರಾಮೀಣ ಪ್ರದೇಶಗಳಲ್ಲೂ ಒಯ್ದು ಪ್ರತಿಷ್ಠಾಪಿಸಿರುವರು. ಪುಸ್ತಕಗಳ ಸಂಗ್ರಹಣಾ ವಿಷಯವಾಗಿ ಆಯಾ ಗ್ರಾಮೀಣ ಪ್ರದೇಶಗಳಲ್ಲಿ ಅಗತ್ಯವಾದ ಓದಿನ ಬೇಕು-ಬೇಡಗಳನ್ನು ಸಮೀಕ್ಷೆ ಮಾಡಬೇಕು. ಗ್ರಾಮೀಣ ಗ್ರಂಥಾಲಯಗಳ ಮೇಲ್ವಿಚಾರಕರಿಂದ ಬೇಡಿಕೆಯ ಪಟ್ಟಿಯನ್ನು ಪಡೆಯಬೇಕು. ಆದರೆ ಇಲ್ಲಿಯೂ ಇಲಾಖೆಯದು ಸರ್ವಾಧಿಕಾರಿ ಧೋರಣೆ. ದೂರದ ನಗರದಲ್ಲಿ ಕುಳಿತು ತಾವು ಆಯ್ಕೆ ಮಾಡಿ ಕಳುಹಿಸಿದ ಪುಸ್ತಕಗಳನ್ನೆ ನನ್ನಲ್ಲಿನ ಅಲ್ಮೆರಾಗಳಲ್ಲಿ ತುಂಬುತ್ತಿರುವರು. ಅರೆಕಾಲಿಕ ನೌಕರಿ ಮತ್ತು ಸೀಮಿತ ಸಂಬಳದಿಂದ ಮೇಲ್ವಿಚಾರಕರು ನನ್ನನ್ನು ಸರಿಯಾಗಿ ಪೆÇೀಷಿಸುತ್ತಿಲ್ಲ. ಸ್ಥಳೀಯರು ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಪರಿಣಾಮ ಅದೆಷ್ಟೋ ಗ್ರಾಮೀಣ ಪ್ರದೇಶಗಳಲ್ಲಿ ನನ್ನ ಬಾಗಿಲುಗಳು ಸದಾಕಾಲ ಮುಚ್ಚಿರುತ್ತವೆ.

ಶಿಕ್ಷಣ ಸಂಸ್ಥೆಗಳಲ್ಲಿರುವ ನನ್ನ ಸಹೋದರ/ಸಹೋದರಿಯರದೂ ಇದೇ ಅವಸ್ಥೆ. ಅಲ್ಲಿ ಕೂಡ ವಿದ್ಯಾರ್ಥಿಗಳಾಗಲಿ, ಶಿಕ್ಷಕರಾಗಲಿ ಪುಸ್ತಕಗಳತ್ತ ಕಣ್ಣೆತ್ತಿಯೂ ನೋಡುತ್ತಿಲ್ಲವಂತೆ. ಅಧ್ಯಾಪನಕ್ಕೆ ಅಧ್ಯಯನವೇ ಬಂಡವಾಳವಾಗಿರುವ ಸರಸ್ವತಿ ಮಂದಿರಗಳಲ್ಲೇ ಪುಸ್ತಕಗಳು ಅನಾದರಕ್ಕೆ ಒಳಗಾಗಿವೆ. ಹೀಗಿರುವಾಗ ಶ್ರೀಸಾಮಾನ್ಯರನ್ನೇ ನಂಬಿಕುಳಿತಿರುವ ನನ್ನದಂತೂ ಶೋಚನೀಯ ಸ್ಥಿತಿ. 

ಇಷ್ಟೆಲ್ಲ ಅಸಂಗತಗಳ ನಡುವೆ ನಾನಿನ್ನೂ ಉಸಿರಾಡುತ್ತಿರುವೆ. ನಾನು ದೀರ್ಘಕಾಲ ಬದುಕುಳಿಯಲು ಈಗ ನನಗಿರುವ ಏಕೈಕ ಆಸರೆ ಎಂದರೆ ಓದುಗ ದೊರೆ ನೀನು ಮಾತ್ರ. ಮೊಬೈಲ್ ವ್ಯಸನಿಯಾದ ನೀನು ಈಗ ನನ್ನನ್ನು ನಿರ್ಲಕ್ಷಿಸುತ್ತಿರುವುದು ಸತ್ಯಕ್ಕೆ ಹತ್ತಿರವಾದ ಮಾತು. ತಂತ್ರಜ್ಞಾನದ ಹೊಡೆತಕ್ಕೆ ನಾನು ನಲುಗಿಹೋಗಿದ್ದೇನೆ. ನಾನು ನಶಿಸಿ ಹೋಗುವ ಮೊದಲು ನನ್ನ ಒಡಲಲ್ಲಿರುವ ಜ್ಞಾನಾಮೃತದ ಧಾರೆಯನ್ನು ಸವಿಯಲು ಬಾ. ನಿನ್ನ ಆಗಮನಕ್ಕಾಗಿ ಕಾದಿರುವೆ.

ಇಂತಿ ನಿನ್ನ ಗ್ರಂಥಾಲಯ 

-ರಾಜಕುಮಾರ ಕುಲಕರ್ಣಿ

Tuesday, January 7, 2025

ಕಂಡಿರಾ, ನಾಗರಿಕನೆಂಬ ‘ದ್ವೀಪ?

 


(೧೮.೦೭.೨೦೨೪ ರ ಪ್ರಜಾವಾಣಿಯ ಸಂಗತ ಅಂಕಣದಲ್ಲಿ ಪ್ರಕಟ)

  ನಟಿ ನಿರೂಪಕಿ ಅಪರ್ಣಾ ಅವರ ನಿಧನದ ಸಂದರ್ಭ ಒಂದು ನಿರ್ಧಿಷ್ಟ ಸಮುದಾಯದ ಅಭಿಮಾನಿಯೊಬ್ಬರು ಈ ಸಾವು ತಮ್ಮ ಸಮುದಾಯಕ್ಕಾದ ತುಂಬಲಾರದ ನಷ್ಟವೆಂದು ವಾಟ್ಸ್‍ಆ್ಯಪ್‍ನಲ್ಲಿ ಶೋಕ ಸಂದೇಶವನ್ನು ಹಂಚಿಕೊಂಡಿದ್ದು ಓದಿ ದಿಗ್ಭ್ರಮೆಯಾಯಿತು. ಅಪರ್ಣಾ ಅವರ ನಿಧನ ಇಡೀ ಕನ್ನಡ ನಾಡು ಮತ್ತು ನುಡಿಗೆ ಆದ ನಷ್ಟವದು. ತಮ್ಮ ನಿರೂಪಣೆಯಿಂದ ಕನ್ನಡ ಭಾಷೆಗೆ ಘನತೆ ಮತ್ತು ಹಿರಿಮೆಯನ್ನು ತಂದುಕೊಟ್ಟವರು ಅವರು. ನಾಡಿನ ವಿವಿಧ ಕ್ಷೇತ್ರಗಳ ಗಣ್ಯರು ಮತ್ತು ಸಾರ್ವಜನಿಕರು ಅಪರ್ಣಾ ಅವರ ಸಾವಿಗೆ ಕಂಬನಿ ಮಿಡಿದರು. ಹೀಗಿರುವಾಗ ತಮ್ಮ ಸಮುದಾಯಕ್ಕೆ ಸೇರಿದವರೆಂಬ ಅಭಿಮಾನದಿಂದ ಸಮುದಾಯಕ್ಕಾದ ನಷ್ಟವೆಂದು ಕಲಾವಿದೆಯನ್ನು ಒಂದು ಗುಂಪಿಗೆ ಸೀಮಿತಗೊಳಿಸುವುದು ಸರಿಯಲ್ಲ. 

ಕಲಾವಿದರಿಗೆ ಜಾತಿ ಮತ್ತು ಧರ್ಮದ ಹಂಗಿಲ್ಲ ಎಂದು ರಾಜಕುಮಾರಾದಿಯಾಗಿ ಎಲ್ಲ ಕಲಾವಿದರು ತಮ್ಮ ಅಭಿನಯದ ಮೂಲಕ ಕಾಲಕಾಲಕ್ಕೆ ಸಾಬೀತುಪಡಿಸುತ್ತಲೆ ಬಂದಿರುವರು. ಜಾತಿ ಎನ್ನುವ ಸೀಮಿತವಲಯವನ್ನು ದಾಟಿದ್ದರಿಂದಲೇ ರಾಜಕುಮಾರ ಅವರಿಗೆ ಕನಕದಾಸ, ಕುಂಬಾರ, ಕಬೀರ, ತುಕಾರಾಮ, ರಾಘವೇಂದ್ರಸ್ವಾಮಿ, ರಾಮ, ಕೃಷ್ಣ, ಕಾಳಿದಾಸ ಈ ಎಲ್ಲ ಪಾತ್ರಗಳಲ್ಲಿ ಲೀಲಾಜಾಲವಾಗಿ ಅಭಿನಯಿಸಲು ಸಾಧ್ಯವಾಯಿತು. ಪ್ರೇಕ್ಷಕವರ್ಗ ಕೂಡ ಯಾವ ಸಂಕುಚಿತ ಭಾವನೆಗಳಿಲ್ಲದೆ ರಾಜಕುಮಾರ ಅವರನ್ನು ಈ ಎಲ್ಲ ಪಾತ್ರಗಳಲ್ಲಿ ನೋಡಿ ಆನಂದಿಸಿದರು. ರಾಜಕುಮಾರ ಈ ನೆಲದ ಮತ್ತು ಭಾಷೆಯ ಹೆಮ್ಮೆ ಹಾಗೂ ಅಭಿಮಾನವಾಗಿ ರೂಪುಗೊಂಡರು. ಅವರನ್ನು ಯಾವುದೆ ಒಂದು ಸಮುದಾಯಕ್ಕೆ ಕಟ್ಟಿಹಾಕದೆ ಇಡೀ ನಾಡಿನ ಸಾಂಸ್ಕೃತಿಕ ನಾಯಕನೆನ್ನುವ ಗೌರವದಿಂದ ನೋಡಲಾಯಿ

ಮನುಷ್ಯ ಸುಶಿಕ್ಷಿತನಾದಷ್ಟು ಅವನ ಮನಸ್ಸು ಮತ್ತು ಭಾವನೆಗಳು ಸಂಕುಚಿತಗೊಳ್ಳುತ್ತಿವೆ. ಈ ಜಾತಿ, ಧರ್ಮ ಮತ್ತು ವರ್ಗಗಳ ಪ್ರೇಮ ಗಾಢವಾಗುತ್ತಿದೆ. ಇತ್ತೀಚೆಗೆ ನನ್ನ ಸ್ನೇಹಿತ ಶಿಕ್ಷಕನಾಗಿರುವ ಶಾಲೆಗೆ ಭೇಟಿ ನೀಡಿದ ಹಿರಿಯರೊಬ್ಬರು ತಮ್ಮ ಜಾತಿಗೆ ಸೇರಿದ ವಿದ್ಯಾರ್ಥಿಗಳನ್ನು ಮಾತನಾಡಿಸಿ ವಿದ್ಯಾಭ್ಯಾಸದ ಪ್ರಗತಿಯ ಬಗ್ಗೆ ವಿಚಾರಿಸಿದರಂತೆ. ಸಮುದಾಯದ ಮುಖಂಡರಿಂದ ಹಣಕಾಸಿನ ನೆರವು ಒದಗಿಸುವ ಆಶ್ವಾಸನೆ ನೀಡಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿ ಎಂದು ಆಶೀರ್ವದಿಸಿರಂತೆ. ಹೀಗೆ ಹೇಳುವಾಗ ಆ ಶಾಲೆಯಲ್ಲಿ ಬೇರೆ ಜಾತಿ ಮತ್ತು ಸಮುದಾಯಗಳ ವಿದ್ಯಾರ್ಥಿಗಳು ಸಹ ಓದುತ್ತಿರುವರೆಂದು ಕಿಂಚಿತ್ ಪ್ರಜ್ಞೆ ಕೂಡ ಅವರಲ್ಲಿಲ್ಲದಿದ್ದುದು ಆಶ್ಚರ್ಯದ ಸಂಗತಿ. ಮನುಜಜಾತಿ ತಾನೊಂದೆ ವಲಂ ಎಂದು ತರಗತಿಗಳಲ್ಲಿ ಬೋಧಿಸಿ ಜಾತಿಯ ಸಂಕೋಲೆಯನ್ನು ಹರಿದೊಗೆಯಬೇಕೆಂದು ಯಾವ ಮಕ್ಕಳಿಗೆ ಪಾಠ ಮಾಡಿದ್ದೇವೋ ಆ ಮಕ್ಕಳೆದುರು ಮುಜುಗರಕ್ಕೊಳಗಾಗಬೇಕಾಯಿತು ಎಂದು ಸ್ನೇಹಿತ ನೋವು ತೋಡಿಕೊಂಡ.    

ಪ್ರತಿ ನಗರಗಳಲ್ಲಿ ಸಮುದಾಯಕ್ಕೊಂದು ಮಠ, ದೇವಸ್ಥಾನ ಮತ್ತು ಸ್ಮಶಾನ ಭೂಮಿ ನಿರ್ಮಾಣವಾಗುತ್ತಿವೆ. ಸಭಾಭವನ ಹಾಗೂ ಕಲ್ಯಾಣ ಮಂಟಪಗಳು ಕೂಡ ಸಮುದಾಯದ ಹೆಸರಲ್ಲಿ ಸ್ಥಾಪನೆಯಾಗುತ್ತಿವೆ. ಉತ್ತರ ಕರ್ನಾಟಕದಲ್ಲಿ ಹೊಟೆಲ್ ಮತ್ತು ಖಾನಾವಳಿಗಳ ಹೆಸರುಗಳಲ್ಲಿ ಜಾತಿ ಸೂಚಕ ಪದಗಳನ್ನು ಕಾಣಬಹುದು. ಕಿತ್ತೂರ ಕರ್ನಾಟಕ ಭಾಗದಲ್ಲಿ (ಮುಂಬೈ ಕರ್ನಾಟಕ) ಅಪರಿಚಿತರು ಬೇಟಿಯಾದಾಗ ಅವರ ಹೆಸರಿನ ಬದಲು ಜಾತಿಸೂಚಕವಾದ ಮನೆತನದ ಹೆಸರನ್ನು ಕೇಳುವುದು ಇಂದಿಗೂ ರೂಢಿಯಲ್ಲಿದೆ. ಮನೆತನದ ಹೆಸರು ಜಾತಿಸೂಚಕವೆಂದು ತಮ್ಮ ಶಿಷ್ಯರನ್ನು ಅವರುಗಳ ಊರಿನ ಹೆಸರಿನಿಂದ ಕರೆಯುತ್ತಿದ್ದ ಗದುಗಿನ ಪುಣ್ಯಾಶ್ರಮದ ಪುಟರಾಜ ಗವಾಯಿಗಳ ನಡೆ ಸಮಾಜಕ್ಕೆ ಮಾದರಿಯಾಗಬೇಕಿದೆ. 

ಪುರಸ್ಕಾರ, ಗೌರವಗಳು ಕೂಡ ಜಾತಿ ಪ್ರೇಮದ ಕಬಂದ ಬಾಹುಗಳಲ್ಲಿ ಸಿಲುಕಿ ನರಳುತ್ತಿವೆ. ಸಾಧಕರನ್ನು ಗುರುತಿಸಿ ಗೌರವಿಸುವಲ್ಲಿ ಸ್ವಜಾತಿ ಪ್ರೇಮ ಮುನ್ನೆಲೆಗೆ ಬರುತ್ತಿದೆ. ಶಿಕ್ಷಕರು, ಸಾಹಿತಿಗಳು, ಸಮಾಜಸೇವಕರು, ವಿದ್ಯಾರ್ಥಿಗಳನ್ನು ವಿವಿಧ ಸಮುದಾಯ ಮತ್ತು ಪಂಗಡಗಳಾಗಿ ವಿಭಜಿಸಲಾಗಿದೆ. ಪ್ರತಿಯೊಂದು ಸಮುದಾಯ ತನ್ನದೆ ಸಮುದಾಯದ ಸಾಧಕರನ್ನು ಮಾತ್ರ ಗೌರವಿಸುವ ಪರಿಪಾಟ ಚಾಲನೆಗೆ ಬಂದಿದೆ. ಒಟ್ಟಾರೆ ಮನುಷ್ಯ ನಾಗರಿಕನಾದಂತೆ ಅವನೊಂದು ದ್ವೀಪವಾಗುತ್ತಿರುವನು.

ಸಾವಿನಂತಹ ಸೂತಕಕ್ಕೂ ಕೂಡ ಈಗ ಜಾತಿ, ಧರ್ಮ, ಭಾಷೆಯ ಭೂತ ಬೆನ್ನುಹತ್ತಿದೆ. ಮನುಷ್ಯ ತನ್ನ ಅಂತ:ಕರಣ ಮತ್ತು ಸಂವೇದನೆಯನ್ನು ಜಾತಿ, ಧರ್ಮ, ಭಾಷೆಯ ಚೌಕಟ್ಟಿನಲ್ಲಿ ಬಂಧಿಸಿಟ್ಟಿರುವನು. ಇಂತಿಂಥ ಜಾತಿ, ಧರ್ಮ, ಭಾಷೆಗೆ ಸೇರಿದ ಮನುಷ್ಯರ ಸಾವು ಮಾತ್ರÀ ಅಂತ:ಕರಣವನ್ನು ತಟ್ಟುವ, ಮನಸ್ಸನ್ನು ವೇದನೆಗೊಳಿಸುವ ಸ್ಥಿತಿ ನಿರ್ಮಾಣವಾಗಿದೆ. ಸಾವು ಯಾರದಾದರೇನು ಅದು ಮನುಷ್ಯನದು ಎನ್ನುವ ಭಾವನೆ ನಮ್ಮನ್ನು ಕಾಡುತ್ತಿಲ್ಲ. ಯಶವಂತ ಚಿತ್ತಾಲರ ಕಥೆಯಲ್ಲಿ ಪಾತ್ರವೊಂದು ಹೀಗೆ ಪ್ರಶ್ನಿಸುತ್ತದೆ-‘ಸತ್ತವಳು ಯಾವ ಜಾತಿಯವಳಾಗಿ ಕೊಂದವರು ಯಾವ ಜಾತಿಯವರಾದರೆ, ಇಲ್ಲ ಧರ್ಮದವರಾದರೆ, ಇಲ್ಲ ವರ್ಗದವರಾದರೆ ಈ ‘ಸಾವು’ ಮಹತ್ವಪೂರ್ಣವಾದೀತು? ಸಮಕಾಲೀನ ಸಾಹಿತ್ಯದ ವಸ್ತುವಾಗುವ ಯೋಗ್ಯತೆ ಪಡೆದು ನಾವು ಸುರಿಸಬಹುದಾದ ಕಣ್ಣೀರಿಗೆ ಸಾರ್ಥಕತೆ ತಂದುಕೊಟ್ಟೀತು?’. ಈ ಮಾತು ಮನುಷ್ಯ ಅಸಂವೇದಿಯಾಗುವುದರತ್ತ ಹೆಜ್ಜೆ ಹಾಕುತ್ತಿರುವನು ಎನ್ನುವುದಕ್ಕೊಂದು ದೃಷ್ಟಾಂತ. 

ನಾಗರಿಕ ಮನುಷ್ಯರ ಸಂಕುಚಿತ ವರ್ತನೆ ನೋಡಿದಾಗಲೆಲ್ಲ ನನಗೆ ನನ್ನೂರಿನ ಬಾಲ್ಯದ ದಿನಗಳು ನೆನಪಾಗುತ್ತವೆ. ರಾಮನವಮಿ, ಯುಗಾದಿ, ಮೊಹರಂ, ರಂಜಾನ್ ಹಬ್ಬಗಳ ಸುಂದರ ನೆನಪುಗಳು ಮನಸ್ಸನ್ನು ಆವರಿಸುತ್ತವೆ. ದೀಪಾವಳಿ, ಹೋಳಿ ಹುಣ್ಣಿಮೆ, ಕಾರ ಹುಣ್ಣಿಮೆ, ಮೊಹರಂ, ರಂಜಾನ್, ಸಂಕ್ರಾಂತಿ ಹಬ್ಬಗಳಲ್ಲಿ ಜಾತಿ ಧರ್ಮದ ಹಂಗಿಲ್ಲದಂತೆ ಊರಿನವರೆಲ್ಲ ಅತ್ಯಂತ ಉಮೇದಿ ಮತ್ತು ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ದೀಪಾವಳಿ ಹಬ್ಬದ ಆ ಮೂರು ದಿನಗಳಂದು ಎಲ್ಲರ ಮನೆಗಳಲ್ಲೂ ಪಟಾಕಿ ಸಿಡಿಯುತ್ತಿದ್ದವು. ಹೋಳಿ ಹುಣ್ಣಿಮೆಯಂದು ಪರಸ್ಪರ ಓಕುಳಿ ಎರಚಿ ಸಂಭ್ರಮಿಸುತ್ತಿದ್ದರು. ರಂಜಾನ್ ಹಬ್ಬದಂದು ಕುಡಿದ ಹಾಲಿನ ಖಾದ್ಯದ ಘಮಲು ಇದೇ ಈಗ ಆಘ್ರಾಣಿಸಿದಂತಿದೆ. ಊರಿನ ಯಾರದಾದರೂ ಮನೆಯಲ್ಲಿ ಸಾವು ಸಂಭವಿಸಿದರೆ ಇಡೀ ಊರಿಗೇ ಸೂತಕದ ಛಾಯೆ ಆವರಿಸುತ್ತಿತ್ತು. ಸಾವು ಸಂಭವಿಸಿದ ಮನೆಯವರ ದು:ಖದಲ್ಲಿ ಎಲ್ಲ ಜಾತಿ-ವರ್ಗ-ಸಮುದಾಯದ ಜನ ಭಾಗಿಯಾಗುತ್ತಿದ್ದರು. 

ಹಿಂದಿದ್ದ ಸೌಹಾರ್ದ ವಾತಾವರಣ ಇಂದಿಲ್ಲ. ಇಂದು ಮನಸ್ಸು ಮನಸ್ಸುಗಳ ನಡುವೆ ಗೋಡೆಗಳು ನಿರ್ಮಾಣಗೊಳ್ಳುತ್ತಿವೆ. ಮನುಷ್ಯ ಭಾವನೆಗಳು ಸಂಕುಚಿತಗೊಳ್ಳುತ್ತಿವೆ. ಜಾತಿ ಮತ್ತು ಧರ್ಮದ ಅಮಲು ಮನುಷ್ಯನ ಅಂತ:ಕರಣವನ್ನು ಕ್ಷೀಣವಾಗಿಸಿ ಅವನನ್ನು ಸಂವೇದನಾರಹಿತನನ್ನಾಗಿ ಮಾಡಿದೆ. ಸ್ವಜಾತಿ, ಸ್ವಧರ್ಮದ ಕುರುಡು ಮೋಹಕ್ಕೆ ಒಳಗಾದ ನಾಗರಿಕ ಮನುಷ್ಯ ಅನ್ಯಜಾತಿ, ಧರ್ಮಗಳ ನಿಂದನೆಗೆ ವಾಟ್ಸ್‍ಆ್ಯಪ್, ಫೇಸ್‍ಬುಕ್‍ಗಳೆಂಬ ಹತಾರಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿರುವನು. ಇಂತಹ ಅಸಹನೀಯ ವಾತಾವರಣದಿಂದ ಹೊರಬರಲು ಹಿಂದಿನ ಸೌಹಾರ್ದದ ದಿನಗಳು ಮತ್ತೆ ಮರುಕಳಿಸಬೇಕಾದದ್ದು ಇಂದಿನ ತುರ್ತು ಅಗತ್ಯ

--ರಾಜಕುಮಾರ ಕುಲಕರ್ಣಿ