(ಪ್ರಜಾವಾಣಿಯ 04.07.2024 ರ ಸಂಗತ ಅಂಕಣದಲ್ಲಿ ಪ್ರಕಟ)
ಪ್ರೌಢಶಾಲಾ ಶಿಕ್ಷಕರೊಬ್ಬರು ತಮ್ಮ ರಕ್ತದಿಂದ ಕ್ರಿಕೇಟ್ ಆಟಗಾರನ ಚಿತ್ರ ರಚಿಸಿದ ವಿಷಯ ಪತ್ರಿಕೆಯಲ್ಲಿ ಪ್ರಕಟವಾಗಿ ಸಾರ್ವಜನಿಕರ ಗಮನಸೆಳೆಯಿತು. ಅಭಿಮಾನವನ್ನು ಈ ರೀತಿ ವ್ಯಕ್ತಪಡಿಸುವ ಅಗತ್ಯವೇನಿತ್ತು ಎನ್ನುವುದು ಪ್ರಜ್ಞಾವಂತರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ಏಕೆಂದರೆ ಅಭಿಮಾನದ ಅಭಿವ್ಯಕ್ತಿಗಾಗಿ ರಕ್ತದಂತಹ ಅಮೂಲ್ಯ ದ್ರವ್ಯವನ್ನು ವ್ಯರ್ಥಗೊಳಿಸಿದ್ದು ಅದು ತಪ್ಪು ನಡೆಯಾಗುತ್ತದೆ. ಬೇರೆ ವಿಧಾನದಲ್ಲಿ ಅಭಿಮಾನವನ್ನು ವ್ಯಕ್ತಪಡಿಸುವ ಹಲವು ಅವಕಾಶಗಳಿರುವಾಗ ರಕ್ತವನ್ನು ಹಾಳುಮಾಡಿದ್ದು ಅಭಿಮಾನದ ಅತಿರೇಕ ಎಂದು ಸಹಜವಾಗಿಯೇ ಸಾರ್ವಜನಿಕರ ಟೀಕೆಯನ್ನು ಶಿಕ್ಷಕ ಎದುರಿಸಬೇಕಾಯಿತು.
ರಕ್ತವನ್ನು ಜನರ ಜೀವ ಉಳಿಸುವ ಅಮೂಲ್ಯ ದ್ರವ್ಯವೆಂದು ಪರಿಗಣಿಸಲಾಗಿದೆ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಸ್ವಯಂ ಪ್ರೇರಣೆಯಿಂದ ರಕ್ತವನ್ನು ಕೊಡಲು ಮುಂದೆ ಬರುವ ದಾನಿಗಳಿಂದ ಮಾತ್ರ ರಕ್ತಪಡೆಯಲು ಸಾಧ್ಯ. ಅದೆಷ್ಟೋ ಸಂದರ್ಭಗಳಲ್ಲಿ ಅಗತ್ಯದ ರಕ್ತ ದೊರೆಯದೆ ರೋಗಿಗಳು ಸಾವನ್ನಪ್ಪುವುದು ಸಾಮಾನ್ಯವಾಗಿದೆ. ಪರಿಸ್ಥಿತಿ ಹೀಗಿರುವಾಗ ರಕ್ತವನ್ನು ಚಿತ್ರ ರಚಿಸಲು ಬಳಸಿ ವ್ಯರ್ಥಗೊಳಿಸಿದ್ದು ತಪ್ಪು ಸಂದೇಶಕ್ಕೆ ಎಡೆಮಾಡುತ್ತದೆ. ಇಂಥದ್ದೊಂದು ಅಸಂಗತ ವರ್ತನೆಗೆ ಪ್ರಜ್ಞಾವಂತ ಶಿಕ್ಷಕ ಕಾರಣನಾಗಿದ್ದು ಆತಂಕದ ಸಂಗತಿ. ಮಕ್ಕಳಿಗೆ ಪಾಠ ಮಾಡಿ ಆದರ್ಶನಾಗಬೇಕಿರುವ ಶಿಕ್ಷಕ ರಕ್ತದಂತಹ ಅಮೂಲ್ಯ ದ್ರವ್ಯದ ಮಹತ್ವವನ್ನು ಅರಿಯದೇ ಹೋದದ್ದು ಇಡೀ ಶಿಕ್ಷಣ ವ್ಯವಸ್ಥೆಯ ಗುಣಮಟ್ಟವನ್ನೇ ಅನುಮಾನದಿಂದ ನೋಡಲು ಕಾರಣವಾಗಬಹುದು.
ಈಗಾಗಲೇ ಶಿಕ್ಷಣ ಕ್ಷೇತ್ರ ಅನೇಕ ಆಪಾದನೆಗಳನ್ನು ಎದುರಿಸುತ್ತಿದೆ. ಶಿಕ್ಷಕರ ಬೌದ್ಧಿಕ ಗುಣಮಟ್ಟದ ಕುರಿತು ಪಾಲಕರಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಶಾಲೆಯಲ್ಲಿ ಶಿಕ್ಷಕರು ಸರಿಯಾಗಿ ಪಾಠ ಮಾಡುತ್ತಿಲ್ಲವೆಂಬ ಕಾರಣವನ್ನು ಮುಂದೆ ಮಾಡಿ ಮಕ್ಕಳನ್ನು ಶಾಲಾ ಅವಧಿಯ ನಂತರ ಮನೆಪಾಠಕ್ಕೆ ಕಳುಹಿಸುವ ವ್ಯವಸ್ಥೆ ಬಹುಪಾಲು ಕುಟುಂಬಗಳನ್ನು ವ್ಯಾಪಿಸಿಕೊಂಡಿದೆ. ಪರಿಸ್ಥಿತಿ ಹೀಗಿರುವಾಗ ಶಿಕ್ಷಕರ ಇಂತಹ ಅತಿರೇಕದ ಅಭಿಮಾನದ ನಡೆ ಶಿಕ್ಷಣ ವ್ಯವಸ್ಥೆ ಕುರಿತು ಸಾರ್ವಜನಿಕರಲ್ಲಿರುವ ಅಸಮಾಧಾನವನ್ನು ಮತ್ತಷ್ಟು ಉಲ್ಬಣಗೊಳಿಸುತ್ತದೆ. ಒಂದು ರೀತಿಯಲ್ಲಿ ಇದು ಗಾಯದ ಮೇಲೆ ಬರೆ ಎಳೆದಂ
ಅಭಿಮಾನದ ಅತಿರೇಕಕ್ಕೆ ನಾಂದಿ ಹಾಡಿದ್ದು ಸಿನಿಮಾ ಮಾಧ್ಯಮ ಎಂದರೆ ತಪ್ಪಾಗಲಾರದು. ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯ ದಿನ ಮೆರವಣಿಗೆ, ಬೃಹತ್ ಗಾತ್ರದ ಕಟೌಟ್‍ಗಳಿಗೆ ಹಾಲಿನ ಅಭಿಷೇಕ, ಪಟಾಕ್ಷಿಗಳ ಸಿಡಿತ ಇತ್ಯಾದಿ ಚಟುವಟಿಕೆಗಳ ಮೂಲಕ ಅಭಿಮಾನಿಗಳು ತಮ್ಮ ಅಭಿಮಾನ ಮೆರೆಯುವರು. ಆರೋಗ್ಯಕ್ಕೆ ಅಗತ್ಯವಾದ ಹಾಲಿನಂತಹ ಪೌಷ್ಟಿಕ ಪದಾರ್ಥವನ್ನು ಸಿನಿಮಾ ತಾರೆಯರ ಕಟೌಟ್‍ಗಳ ಮೇಲೆ ಸುರಿದು ಹಾಳು ಮಾಡುತ್ತಾರೆ. ಅದೆಷ್ಟೋ ಕುಟುಂಬಗಳಲ್ಲಿ ಅಪೌಷ್ಟಿಕ ಆಹಾರ ಸೇವನೆಯಿಂದ ಮಕ್ಕಳು ಅಶಕ್ತರಾಗಿ ಹಲವಾರು ರೋಗಗಳಿಗೆ ತುತ್ತಾಗುತ್ತಿರುವರು. ಬಡ ಕುಟುಂಬಗಳಿಗೆ ತಮ್ಮ ಮಕ್ಕಳಿಗೆ ಅಗತ್ಯವಾದ ಎರಡು ಹೊತ್ತಿನ ಪೌಷ್ಟಿಕಾಂಶಗಳಿರುವ ಊಟವನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಆದರೆ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರ ಮೇಲಿನ ಅಭಿಮಾನದಿಂದ ಹಾಲಿನಂತಹ ಅತ್ಯುತ್ತಮ ಆಹಾರವನ್ನು ಚರಂಡಿಗೆ ಸುರಿಯುತ್ತಿರುವರು.
ಸಿನಿಮಾ ನಟರ ಜನ್ಮದಿನದಂದು ಅವರು ವಾಸಿಸುವ ಬಡಾವಣೆ ಅಕ್ಷರಶ: ಇರುವೆ ಕೂಡ ನುಸುಳಲು ಜಾಗವಿಲ್ಲದಷ್ಟು ಜನಸಂದಣಿಯಿಂದ ಕೂಡಿರುತ್ತದೆ. ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ಸಾರ್ವಜನಿಕರಿಗೆ ಆಗುವ ತೊಂದರೆಗಳ ಕುರಿತು ಅಭಿಮಾನಿ ಬಳಗ ಯೋಚಿಸುವುದಿಲ್ಲ. ರಾತ್ರಿಯಿಂದಲೇ ಅಭಿಮಾನದ ನಟನ ಮನೆಯ ಮುಂದೆ ಜಮಾಯಿಸುವ ಅಭಿಮಾನಿ ಪಡೆ ತಮ್ಮ ಗೌಜು ಗದ್ದಲಗಳಿಂದ ಸುತ್ತಮುತ್ತಲಿನ ನಿವಾಸಿಗಳ ನಿದ್ರೆಯನ್ನು ಹಾಳುಗೆಡವಿ ಅಶಾಂತಿಯನ್ನುಂಟು ಮಾಡುತ್ತಾರೆ. ಅದೆಷ್ಟೋ ಮನೆಗಳಲ್ಲಿ ವೃದ್ಧರು, ಮಕ್ಕಳು, ಕಾಯಿಲೆಗಳಿಂದ ಬಳಲುತ್ತಿರುವವರು, ಪರೀಕ್ಷೆಗಾಗಿ ಓದಿಕೊಳ್ಳುತ್ತಿರುವವರು, ಇಡೀ ಹಗಲು ದುಡಿದು ಹೈರಾಣಾಗಿ ವಿಶ್ರಾಂತಿ ಪಡೆಯುತ್ತಿರುವವರು ಇರುವರೆಂಬ ಕಿಂಚಿತ್ ಪ್ರಜ್ಞೆ ಕೂಡ ಇಲ್ಲದಂತೆ ವರ್ತಿಸುತ್ತಾರೆ. ಕೆಲವೊಮ್ಮೆ ಅತಿರೇಕದ ಅಭಿಮಾನವೇ ಪ್ರಾಣಕ್ಕೆ ಅಪಾಯವಾಗಿ ಪರಿಣಮಿಸುವುದುಂಟು. ಕೆಲವು ತಿಂಗಳುಗಳ ಹಿಂದೆ ಸಿನಿಮಾ ನಟರೊಬ್ಬರ ಜನ್ಮದಿನದ ಸಂದರ್ಭ ಮೆರವಣಿಗೆ ವೇಳೆ ವಿದ್ಯುತ್ ತಂತಿ ಸ್ಪರ್ಷಿಸಿ ಎರಡು ಜೀವಗಳು ಬಲಿಯಾದ ದುರ್ಘಟನೆ ಇನ್ನೂ ಸಾರ್ವಜನಿಕರ ನೆನಪಿನಲ್ಲಿ ಹಸಿರಾಗಿದೆ.
ಒಂದುಕಾಲದಲ್ಲಿ ಸಿನಿಮಾ ನಟರ ಅಭಿಮಾನಿಗಳ ನಡುವೆ ಜಗಳ, ಕಾದಾಟ ಸಾಮಾನ್ಯವಾಗಿದ್ದವು. ಸಿನಿಮಾ ಬಿಡುಗಡೆಯ ದಿನ ಅಭಿಮಾನಿ ಗುಂಪುಗಳ ನಡುವಿನ ದ್ವೇಷ ತಾರಕ್ಕೇರುತ್ತಿತ್ತು. ರಸ್ತೆಗಳಲ್ಲಿ ಕೈಮಿಲಾಯಿಸಿ ಹೊಡೆದಾಟಕ್ಕಿಳಿಯುತ್ತಿದ್ದರು. ವಿರೋಧಿ ನಟರ ಪೆÇೀಸ್ಟರ್‍ಗಳಿಗೆ ಸಗಣಿ ಬಳಿಯುವ, ಹರಿದು ಹಾಕುವ, ಸಿನಿಮಾ ಮಂದಿರಗಳಲ್ಲಿ ಚಿತ್ರ ಪ್ರದರ್ಶನದ ವೇಳೆ ಗಲಾಟೆ ಮಾಡುವಂತಹ ಅತಿರೇಕದ ವರ್ತನೆಗಳನ್ನು ಅಭಿಮಾನಿ ಬಳಗ ತೋರುತ್ತಿತ್ತು. ಕೆಲವೊಮ್ಮೆ ಅಭಿಮಾನಿಗಳ ವರ್ತನೆಯಿಂದ ಸ್ವತ: ಕಲಾವಿದರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಮುಜುಗರವಾಗುವುದುಂಟು. ಮೇರುನಟನ ಅಂತ್ಯಕ್ರಿಯೆಯ ಸಂದರ್ಭ ಅಂತಿಮ ವಿದಿವಿಧಾನಗಳನ್ನು ಮಾಡಲು ಕುಟುಂಬ ವರ್ಗದವರಿಗೆ ಆಸ್ಪದಕೊಡದೆ ನೂಕುನುಗ್ಗಲು, ತಳ್ಳಾಟ ಮಾಡಿದ್ದು ಅಭಿಮಾನಿಗಳ ಅತಿರೇಕದ ವರ್ತನೆಗೆ ಒಂದು ನೈಜ ದೃಷ್ಟಾಂತವಾಗಿದೆ.
ಇತ್ತೀಚೆಗೆ ಘಟನೆಯೊಂದರಲ್ಲಿ ಆರೋಪಿಯಾಗಿ ಜೈಲು ಸೇರಿರುವ ನಟನ ಅಭಿಮಾನಿಗಳ ಹುಚ್ಚಾಟ ಎಲ್ಲೆ ಮೀರಿದೆ. ತಮ್ಮ ಮೆಚ್ಚಿನ ನಟನ ವಿರುದ್ಧ ಹೇಳಿಕೆ ನೀಡುವ ಕಲಾವಿದರನ್ನು ಗೋಳುಹೊಯ್ದುಕೊಳ್ಳುತ್ತಿರುವರು. ಅತಿಯಾದ ಅಭಿಮಾನ ಮತ್ತು ಆರಾಧಾನಾ ಭಾವನೆ ಅಭಿಮಾನಿಗಳನ್ನು ಅಂಧರನ್ನಾಗಿಸಿದೆ. ನಡೆದ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ. ತೀರ್ಪು ನೀಡಲು ನ್ಯಾಯಾಲಯವಿದೆ. ಆದರೆ ಅಭಿಮಾನಿಗಳೇ ಸ್ವಯಂ ಘೋಷಿತ ನ್ಯಾಯಾಧೀಶರಾಗಿ ತಮ್ಮ ಆರಾಧ್ಯದೈವದ ನಟನನ್ನು ಆರೋಪ ಮುಕ್ತಗೊಳಿಸಿರುವರು. ಅದೆಷ್ಟೋ ಅಭಿಮಾನಿಗಳು ನಟನಿಗೆ ಜೈಲಿನಲ್ಲಿ ನೀಡಲಾದ ಖೈದಿಸಂಖ್ಯೆಯನ್ನು ತಮ್ಮ ವಾಹನಗಳ ಮೇಲೆ ಬರೆದುಕೊಂಡು ಧನ್ಯರಾಗಿರುವರು.
ಯುವಪೀಳಿಗೆಯಲ್ಲಿ ತಾವು ಆರಾಧಿಸುವ ನಟ ನಟಿಯರ ಮತ್ತು ಕ್ರೀಡಾಪಟುಗಳ ಹೆಸರುಗಳನ್ನು ಹಚ್ಚೆ ಹಾಕಿಸಿಕೊಳ್ಳುವ, ನಡೆ-ನುಡಿಯಲ್ಲಿ ಅವರನ್ನು ಅನುಕರಿಸುವ ಚಾಳಿ ಸೋಂಕಿನಂತೆ ಆವರಿಸಿಕೊಂಡಿದೆ. ತಾವು ಆರಾಧಿಸುವ ಐಕಾನ್‍ಗಳ ಮೇಲಿನ ಅತಿಯಾದ ಪ್ರೀತಿ ಮತ್ತು ಅಭಿಮಾನ ಯುವ ಜನತೆಯನ್ನು ತಪ್ಪು ದಾರಿಗೆ ಕರೆದೊಯ್ಯುತ್ತಿದೆ. ಈ ತಪ್ಪು ನಡೆ ರಕ್ತದಲ್ಲಿ ಚಿತ್ರ ಬರೆಯುವುದು, ಹಾಲಿನ ಅಭಿಷೇಕ, ಸಾರ್ವಜನಿಕರ ನೆಮ್ಮದಿಗೆ ಧಕ್ಕೆ ತರುವಂತಹ ವರ್ತನೆಗಳಲ್ಲಿ ವ್ಯಕ್ತವಾಗುತ್ತಿದೆ. ಇದೇ ಯುವಪೀಳಿಗೆ ವಿಜ್ಞಾನಿಗಳು, ಶಿಕ್ಷಕರು, ಸಮಾಜ ಸೇವಕರನ್ನು ಆರಾಧಿಸುತ್ತಿಲ್ಲವೇಕೆ? ಎನ್ನುವುದು ಪ್ರಜ್ಞಾವಂತರನ್ನು ಕಾಡುತ್ತಿರುವ ಈ ಸಂದರ್ಭದ ಬಹುಮಹತ್ವದ ಪ್ರಶ್ನೆಯಾಗಿದೆ.
-ರಾಜಕುಮಾರ ಕುಲಕರ್ಣಿ