(ಪ್ರಜಾವಾಣಿ, 03.05.2024)
ನನ್ನ ಬಂಧುವೊಬ್ಬರು ವೃತ್ತಿಯಿಂದ ನಿವೃತ್ತರಾಗಿ ಎರಡು ವರ್ಷಗಳಾದವು. ವೃತ್ತಿಯಲ್ಲಿದ್ದಾಗ ತುಂಬ ಲವಲವಿಕೆಯಿಂದ ಇದ್ದವರು ನಿವೃತ್ತಿಯ ನಂತರ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡವರಂತೆ ವರ್ತಿಸುತ್ತಿರುವರು. ಸುಮಾರು ಮೂವತ್ತೈದು ವರ್ಷಗಳಷ್ಟು ಕಾಲ ಉದ್ಯೋಗವನ್ನೇ ಬದುಕಾಗಿಸಿಕೊಂಡು ಬಾಳಿದವರು ಅವರು. ದಿನನಿತ್ಯದ ಕಚೇರಿಯ ಕೆಲಸ ಮತ್ತು ಹಣ ಉಳಿತಾಯದ ಯೋಜನೆಯಲ್ಲೇ ಬದುಕಿನ ಬಹುಭಾಗವನ್ನು ಕಳೆದವರಿಗೆ ಈಗ ಸಮಯ ಕಳೆಯುವುದೇ ಕಷ್ಟವಾಗಿದೆ. ವೃತ್ತಿಯಲ್ಲಿದ್ದಾಗ ಕೈತುಂಬ ಸಂಬಳ ತರುವ ಉದ್ಯೋಗವಿದ್ದರೂ ಹಣವನ್ನು ದ್ವಿಗುಣಗೊಳಿಸುವುದರಲ್ಲಿದ್ದ ಆಸಕ್ತಿ ಅವರಿಗೆ ಬೇರೆ ಯಾವ ಸೃಜನಾತ್ಮಕ ಹವ್ಯಾಸಗಳ ಕುರಿತು ಇರಲಿಲ್ಲ. ಪರಿಣಾಮವಾಗಿ ನಿವೃತ್ತಿಯ ನಂತರ ಕೆಲಸ ಇಲ್ಲದಂತಾಗಿ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಂದ ಜರ್ಜರಿತರಾಗಿರುವರು.
ತತ್ವಜ್ಞಾನಿ ಮತ್ತು ಅರ್ಥಶಾಸ್ತ್ರಜ್ಞ ಕಾರ್ಲ್‍ಮಾರ್ಕ್ಸ್ ‘ನಾವು ಮನುಷ್ಯರಾಗಿ ಬಿಚ್ಚಿಕೊಳ್ಳುವುದೇ ಕಾಯಕದ ಮುಖಾಂತರ’ ಎಂದಿರುವರು. ಬಸವಣ್ಣನವರು ‘ಕಾಯಕವೇ ಕೈಲಾಸ’ ಎಂದು ಕೆಲಸದ ಮಹತ್ವವನ್ನು ತಿಳಿಹೇಳಿದರು. ಜನಪದರು ತಮ್ಮ ದಿನನಿತ್ಯದ ಕಾಯಕದ ಜೊತೆಗೆ ಹಾಡು, ಲಾವಣಿ, ಒಗಟುಗಳನ್ನು ಹೇಳುತ್ತ ದುಡಿಮೆಯನ್ನು ಸೃಜನಶೀಲ ಕಲೆಯಾಗಿಸುತ್ತಿದ್ದರು. ತತ್ವಜ್ಞಾನಿಗಳು, ಅನುಭಾವಿಗಳು, ಶರಣರು, ಚಿಂತಕರು ‘ಮನುಷ್ಯನು ಕಾಯಕದ ಮೂಲಕ ತನ್ನ ಎಲ್ಲ ಮಾನವೀಯ ಸಾಧ್ಯತೆಗಳನ್ನು ನಿಜಮಾಡಬಲ್ಲವನಾಗುತ್ತಾನೆ’ ಎಂದು ದುಡಿಮೆಯನ್ನು ವಿಶಾಲ ಅರ್ಥದಲ್ಲಿ ವ್ಯಾಖ್ಯಾನಿಸಿರುವರು. ಆದರೆ ಇಂದು ಹಣ ಮತ್ತು ಅಧಿಕಾರವೇ ಕೆಲಸದ ಹಿಂದಿನ ಪ್ರೇರಣೆಗಳಾಗಿರುವ ಸಂದರ್ಭದಲ್ಲಿ ಅತಿಯಾದ ದುಡಿಮೆ ಎನ್ನುವುದು ಅದೊಂದು ರೋಗ ಲಕ್ಷಣವಾಗಿದೆ ಎನ್ನುತ್ತಾರೆ ಸಮಾಜ ವಿಜ್ಞಾನಿ
ಮನುಷ್ಯರನ್ನು ಬಿಡುವಿಲ್ಲದೆ ದುಡಿಯುವ ಯಂತ್ರಗಳನ್ನಾಗಿಸುವ ಹುನ್ನಾರಕ್ಕೆ ಶಾಲಾ ಶಿಕ್ಷಣದಿಂದಲೇ ಅಡಿಪಾಯ ಹಾಕಲಾಗುತ್ತಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಬಿಡುವಿರದ ಓದಿನ ವಾತಾವರಣಕ್ಕೆ ಒಳಗಾಗುತ್ತಿರುವರು. ವಿಶೇಷವಾಗಿ ವಸತಿಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷಾ ಸಂಬಂಧಿತ ಓದಿಗಾಗಿ ಹೆಚ್ಚಿನ ಸಮಯವನ್ನು ವ್ಯಯಿಸಬೇಕಾಗಿದೆ. ತರಗತಿಗಳಲ್ಲಿನ ಪಾಠದ ಅವಧಿ ಮಾತ್ರವಲ್ಲದೆ ಬೆಳಗ್ಗೆ ಮತ್ತು ರಾತ್ರಿ ಕೂಡ ವಿದ್ಯಾರ್ಥಿಗಳು ಪಠ್ಯಪುಸ್ತಕಗಳ ಓದಿನಲ್ಲಿ ತಮ್ಮ ಹೆಚ್ಚಿನ ಸಮಯವನ್ನು ವಿನಿಯೋಗಿಸುವಂತೆ ನೋಡಿಕೊಳ್ಳಲಾಗುತ್ತದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಪಠ್ಯಪುಸ್ತಕಗಳಾಚೆ ಯಾವ ಮನೋರಂಜನೆಗೂ ಅವಕಾಶವಿರುವುದಿಲ್ಲ. ಸಹಜವಾಗಿಯೇ ಇಂಥ ವಾತಾವರಣದಲ್ಲಿ ಶಿಕ್ಷಣ ಪಡೆಯುವ ಮಕ್ಕಳು ಯಂತ್ರಗಳಂತಾಗುವರು. ಬದುಕಿನಲ್ಲಿ ದುಡಿಮೆ ಮತ್ತು ಆ ಮೂಲಕ ಹಣ ಗಳಿಕೆಯೇ ಬದುಕಿನ ಧ್ಯೇಯವಾಗುವುದು.
ನನ್ನೂರಿನ ರೈತ ಕುಟುಂಬಗಳವರು ವ್ಯವಸಾಯ ಮಾಡುತ್ತಿದ್ದಾಗ ಶ್ರಾವಣದ ಮಳೆಯ ದಿನಗಳು ಮತ್ತು ಬೇಸಿಗೆ ಕಾಲದ ಬಿಡುವಿನ ವೇಳೆಯಲ್ಲಿ ಸೃಜನಾತ್ಮಕ ಚಟುವಟಿಕೆಗಳಲ್ಲಿ ನಿರತವಾಗಿರುತ್ತಿದ್ದರು. ಪುರಾಣ-ಪ್ರವಚನಗಳನ್ನು ಆಲಿಸುವುದು, ನಾಟಕಗಳನ್ನಾಡುವುದು, ಕೋಲಾಟ, ಭಜನೆಯಂತಹ ಸೃಜನಶೀಲ ಚಟುವಟಿಕೆಗಳ ಮೂಲಕ ಜೀವನೋತ್ಸಾಹವನ್ನು ಇಮ್ಮಡಿಗೊಳಿಸಿಕೊಳ್ಳುತ್ತಿದ್ದರು. ಈ ಕಾರಣದಿಂದಲೇ ಆರೋಗ್ಯಪೂರ್ಣವಾದ ದೀರ್ಘಾವಧಿ ಬದುಕನ್ನು ಬದುಕುತ್ತಿದ್ದರು. ಅವರ ನಂತರದ ಪೀಳಿಗೆ ಬಹುರಾಷ್ಟ್ರೀಯ ಕಂಪನಿಗಳಿಗೆ ಮತ್ತು ರೀಯಲ್ ಏಸ್ಟೇಟ್ ಕುಳಗಳಿಗೆ ಕೃಷಿಭೂಮಿಯನ್ನು ಪರಭಾರೆ ಮಾಡಿ ಈಗ ಅದೇ ಕಂಪನಿಗಳಲ್ಲಿ ಉದ್ಯೋಗಿಗಳಾಗಿ ದುಡಿಯುವ ಯಂತ್ರದಂತಾಗಿರುವರು. ಜೀವನೋತ್ಸಾಹವನ್ನು ಕಳೆದುಕೊಂಡು ಬದುಕುತ್ತಿರುವವರನ್ನು ಮಧ್ಯವಯಸ್ಸಿನಲ್ಲೇ ವೃದ್ಧಾಪ್ಯದ ಚಹರೆ ಆವರಿಸಿಕೊಂಡಿದೆ. ಈ ಸಮಸ್ಯೆ ಕೇವಲ ಕೃಷಿಕರದು ಮಾತ್ರವಲ್ಲ ಅದು ಎಲ್ಲ ಕ್ಷೇತ್ರಗಳನ್ನೂ ವ್ಯಾಪಿಸಿದೆ.
ಕಾಪೆರ್Çೀರೇಟ್ ಜಗತ್ತಿನಲ್ಲಿ ಕೆಲಸ ಮಾಡುತ್ತಿರುವ ಯುವಜನಾಂಗ ಇತ್ತೀಚಿನ ದಿನಗಳಲ್ಲಿ ಉದ್ಯೋಗ ತ್ಯಜಿಸಿ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ತಮ್ಮೊಳಗಿನ ಸೃಜನಶೀಲತೆ ಅತಿಯಾದ ದುಡಿಮೆಯಿಂದ ನಶಿಸುತ್ತಿದೆ ಎನ್ನುವ ಆತಂಕವೇ ಅವರ ಈ ನಿರ್ಧಾರಕ್ಕೆ ಕಾರಣ. ಕೃಷಿಕ್ಷೇತ್ರದ ದುಡಿಮೆಯ ಬಿಡುವಿನ ವೇಳೆಯಲ್ಲಿ ಬರವಣಿಗೆ, ಕಲೆ, ಸಂಗೀತದಂತಹ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಸೃಜನಾತ್ಮಕವಾಗಿ ಬದುಕನ್ನು ರೂಪಿಸಿಕೊಳ್ಳುತ್ತಿರುವರು. ಹಣ ಮತ್ತು ದುಡಿಮೆಯೇ ಪ್ರಧಾನವಾದ ಸಮಾಜದಲ್ಲಿ ಇಂಥ ಪರಿವರ್ತನೆಗಳು ಆಗಾಗ ಸಂಭವಿಸುತ್ತ ಬದುಕಿಗೆ ಸೃಜನಶೀಲತೆಯ ಅಗತ್ಯವನ್ನು ಮನಗಾಣಿಸಿಕೊಡುತ್ತಿವೆ.
ದುಡಿಮೆ ಎನ್ನುವುದು ಕೇವಲ ಕಚೇರಿ ಮತ್ತು ಕಾರ್ಖಾನೆಗೆ ಸಿಮೀತವಾಗದೆ ಅದು ಮನೆಯನ್ನೂ ಪ್ರವೇಶಿಸಿದೆ. ಕೋವಿಡ್ ಸಂದರ್ಭದಲ್ಲಿ ಅನಿವಾರ್ಯವಾಗಿದ್ದ ವರ್ಕ್ ಫ್ರಾಮ್ ಹೋಮ್ ಎನ್ನುವ ಪರಿಕಲ್ಪನೆಯನ್ನು ಈಗ ಉದ್ಯೋಗಿಗಳು ಹೆಚ್ಚು ಇಷ್ಟಪಡುತ್ತಿರುವರು. ಮನೆಯೇ ಕಚೇರಿಯಾಗಿ ರೂಪಾಂತರಗೊಳ್ಳುತ್ತಿರುವ ಈ ಪ್ರಕ್ರಿಯೆ ಮನುಷ್ಯನೊಳಗಿನ ಸೃಜನಶೀಲತೆಯನ್ನು ಮಾತ್ರ ನಷ್ಟಪಡಿಸುತ್ತಿಲ್ಲ ಅದು ಸಂಬಂಧಗಳ ಸ್ವರೂಪವನ್ನೂ ಪರಿವರ್ತಿಸುತ್ತಿದೆ. ಅನೇಕ ಕುಟುಂಬಗಳಲ್ಲಿ ಮಕ್ಕಳೊಂದಿಗೆ ಕಾಲಕಳೆಯಲು ಸಮಯವಿಲ್ಲದಷ್ಟು ಪಾಲಕರು ದುಡಿಮೆಗೆ ಅಂಟಿಕೊಂಡಿರುವರು. ಈ ಸಂದರ್ಭ ಗ್ರೀಕ್ ತತ್ವಜ್ಞಾನಿ ಪ್ಲೇಟೋನ ಪರಿಕಲ್ಪನೆಯ ಆದರ್ಶರಾಜ್ಯದಲ್ಲಿ ಕಲೆ ಮತ್ತು ಸಾಹಿತ್ಯಕ್ಕೂ ಜಾಗವಿದೆ ಎನ್ನುವುದನ್ನು ನಾವು ಸ್ಮರಿಸಿಕೊಳ್ಳಬೇಕಿದೆ. ತನ್ನ ಅತಿಯಾದ ರಾಜಕೀಯ ಕಾರ್ಯವ್ಯಾಪ್ತಿಯಿಂದಾಗಿ ಸೃಜನಶೀಲತೆಯಿಂದ ಸದಾಕಾಲ ದೂರವೇ ಇರುವ ರಾಜಕಾರಣಕ್ಕೆ ಪಾಠಕಲಿಸಲೆಂಬಂತೆ ಚಾಪ್ಲಿನ್ ತನ್ನ ‘ಗ್ರೇಟ್ ಡಿಕ್ಟೇಟರ್’ ಸಿನಿಮಾದಲ್ಲಿ ಹಿಟ್ಲರ್‍ನನ್ನು ನಗಲು ಅರ್ಹವಾದ ಪಾತ್ರವಾಗಿಸಿದ.
ದುಡಿಮೆಯ ಅನಾರೋಗ್ಯ ಆ ಕ್ಷೇತ್ರಕ್ಕಷ್ಟೇ ಸೀಮಿತವಾಗಿ ಉಳಿಯದೆ ಅದು ನಮ್ಮ ವಿರಾಮ, ವಿಶ್ರಾಂತಿಯ ಕಾಲಕ್ಕೂ ಹಬ್ಬಿದೆ ಎಂದಿರುವ ಯಶವಂತ ಚಿತ್ತಾಲರು ‘ದುಡಿಮೆಯ ಕ್ಷೇತ್ರದಿಂದ ಪ್ರಭಾವಿತಗೊಂಡ ಮನಸ್ಸನ್ನು ಅಲ್ಲೇ ಬಿಟ್ಟು ಬರುವುದು ಸಾಧ್ಯವಿದ್ದಿದ್ದರೆ, ಬಿಟ್ಟುಬರುವುದುಳಿಯಲಿ ನಮ್ಮೊಳಗಿನ ಅತ್ಯಂತ ಮಹತ್ವದ್ದೇನೋ ಅಲ್ಲಿ ನಾಶವಾಗುತ್ತಿದೆ ಎಂಬ ಅರಿವೂ ನಮಗೆ ಇಲ್ಲದಿರುವುದು ಇಂದಿನ ನಮ್ಮ ಬದುಕಿನ ದುರದೃಷ್ಟವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿರುವರು. ಪರಿಸರದಲ್ಲಿ ಮನುಷ್ಯನೊಬ್ಬನನ್ನು ಹೊರತುಪಡಿಸಿ ಬೇರೆ ಯಾವ ಜೀವಸಂತತಿಯೂ ಅತಿಯಾದ ದುಡಿಮೆಗೆ ಅಂಟಿಕೊಂಡಿಲ್ಲ. ಆದರೆ ನಾಗರಿಕನೆನಿಸಿಕೊಂಡ ಮನುಷ್ಯಸಮಾಜದಲ್ಲಿ ಮಾತ್ರ ದುಡಿಮೆಯ ಕ್ಷೇತ್ರ ಆತನ ಆತ್ಮ ಮತ್ತು ಮನಸ್ಸನ್ನು ಕೊಲ್ಲುವ ಬೇನೆಯ ತಾಣವಾಗುತ್ತಿದೆ. ಈ ಸಮಸ್ಯೆಗೆ ಪರಿಹಾರ ನಮ್ಮಲ್ಲೇ ಇದೆ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
-ರಾಜಕುಮಾರ ಕುಲಕರ್ಣಿ