(ಪ್ರಜಾವಾಣಿ, ೦೭.೦೩.೨೦೨೪)
ಇತ್ತೀಚೆಗೆ ವಾಚಕರ ವಾಣಿಯಲ್ಲಿ (ಪ್ರ.ವಾ., ಮಾರ್ಚ್ 1 ಮತ್ತು 5) ವಿಧಾನಪರಿಷತ್ತಿಗೆ ವಿವಿಧ ಕ್ಷೇತ್ರಗಳ ಪರಿಣತರು, ಬುದ್ಧಿಜೀವಿಗಳು ಮತ್ತು ಪ್ರಜ್ಞಾವಂತರನ್ನು ಆಯ್ಕೆ ಮಾಡುತ್ತಿಲ್ಲವೆಂದು ಆತಂಕ ವ್ಯಕ್ತಪಡಿಸಿರುವ ಎರಡು ಪತ್ರಗಳು ಪ್ರಕಟವಾದವು. ತಮ್ಮ ನಡೆ ನುಡಿಯಿಂದ ಸಾರ್ವಜನಿಕರ ಮನಗೆಲ್ಲಬೇಕೆಂಬುದಕ್ಕಿಂತ ಪಕ್ಷದ ವರಿಷ್ಠರನ್ನು ಮೆಚ್ಚಿಸಬೇಕೆಂಬ ಧೋರಣೆ ರಾಜಕಾರಣಿಗಳಲ್ಲಿ ಮೇಲುಗೈ ಸಾಧಿಸಿದೆ. ಆದಕಾರಣ ಪ್ರಜ್ಞಾವಂತರ ಸದನವೆಂಬ ಹಿರಿಮೆಗೆ ಪಾತ್ರವಾದ ಮೇಲ್ಮನೆಯಲ್ಲಿ ಕೂಗಾಟ, ಕಿರುಚಾಟ, ನಿಂದನೆ, ತೊಡೆತಟ್ಟುವಂತಹ ಸಾಮಾನ್ಯ ರಾಜಕಾರಣದ ವರ್ತನೆ ಪದೆ ಪದೆ ಪುನರಾವರ್ತನೆಯಾಗುತ್ತಿದೆ. ಸದ್ದನ್ನೇ ತುಂಬ ನೆಚ್ಚಿಕೊಂಡ ರಾಜಕಾರಣಕ್ಕೆ ಮೌನದ ಪರಿಚಯವಿಲ್ಲ ಎಂದ ಯಶವಂತ ಚಿತ್ತಾಲರ ಮಾತು ಸತ್ಯಕ್ಕೆ ಹತ್ತಿರವಾಗಿದೆ.
ಮೇಲ್ಮನೆಗಳೆಂದು ಹಿರಿಮೆಗಳಿಸಿರುವ ರಾಜ್ಯಸಭೆ ಮತ್ತು ವಿಧಾನಪರಿಷತ್ತಿಗೆ ಕಲಾವಿದರು, ಸಾಹಿತಿಗಳು ಮತ್ತು ಚಿಂತಕರನ್ನು ಸದಸ್ಯರನ್ನಾಗಿ ಆಯ್ಕೆ ಮಾಡುವ ಪರಿಪಾಟ ಈ ಹಿಂದೆ ಚಾಲ್ತಿಯಲ್ಲಿತ್ತು. ಆಳುವ ಸರ್ಕಾರದ ನೀತಿ-ನಿಲುವುಗಳನ್ನು ನಿಕಷಕ್ಕೆ ಒಡ್ಡುವ ಮತ್ತು ಜನವಿರೋಧಿ ನಡೆಯನ್ನು ತಿದ್ದುವ, ಸಂದರ್ಭ ಎದುರಾದರೆ ಟೀಕಿಸುವ ಹಾಗೂ ಸಮಾಜದ ಸಮಸ್ಯೆಗಳನ್ನು ಕಾಲಕಾಲಕ್ಕೆ ಎತ್ತಿ ತೋರಿಸುವ ಮಹತ್ವದ ಜವಾಬ್ದಾರಿ ಮೇಲ್ಮನೆಗೆ ಆಯ್ಕೆಯಾದ ಸದಸ್ಯರ ಮೇಲಿದೆ. ಸಧ್ಯದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಸದನದಲ್ಲಿ ತಮ್ಮ ಪಕ್ಷದ ನಡೆಯನ್ನು ಸಮರ್ಥಿಸಿಕೊಳ್ಳಲು ಕೂಗಾಡುವವರು, ಕಿರುಚಾಡುವವರು ಮತ್ತು ತೊಡೆತಟ್ಟುವವರನ್ನು ಮೇಲ್ಮನೆಗೆ ಆಯ್ಕೆ ಮಾಡುತ್ತಿವೆ.
ಸರ್ಕಾರದಿಂದ ನಾಮಕರಣ ಹೊಂದಿದ ಸದಸ್ಯರಾಗಿಯೂ ವಿಧಾನಪರಿಷತ್ತಿನಲ್ಲಿ ಸರ್ಕಾರದ ಅನೇಕ ಧೋರಣೆಗಳನ್ನು ಟೀಕಿಸುತ್ತಿದ್ದುದನ್ನು ರಾಜ್ಯಪಾಲರು ಆಕ್ಷೇಪಿಸಿದಾಗ ‘ನಾನು ನ್ಯಾಯನಿಷ್ಠುರಿ, ದಾಕ್ಷಿಣ್ಯಪರನಲ್ಲ’ ಎನ್ನುವುದು ಅಂಬೇಡ್ಕರರ ಪ್ರತಿಕ್ರಿಯೆಯಾಗಿತ್ತು. ಆದರೆ ಇಂದಿನ ರಾಜಕಾರಣದಲ್ಲಿ ವೈಯಕ್ತಿಕ ಹಿತಾಸಕ್ತಿ ಮುನ್ನೆಲೆಗೆ ಬಂದು ಸಮಾಜದ ಹಿತಾಸಕ್ತಿ ಹಿನ್ನೆಲೆಗೆ ಸರಿದಿದೆ. ಜೊತೆಗೆ ರಾಜಕೀಯ ಪಕ್ಷಗಳು ತಮ್ಮನ್ನು ಪ್ರಶ್ನಿಸುವುದನ್ನು ಮತ್ತು ವಿರೋಧಿಸುವುದನ್ನು ಸಹಿಸಲಾರವು. ಹೊಗಳಿಕೆ, ಮುಖಸ್ತುತಿ ಮತ್ತು ಓಲೈಕೆಯನ್ನು ರಾಜಕೀಯ ಪಕ್ಷಗಳು ಇಚ್ಛಿಸುತ್ತಿವೆ. ಪರಿಣಾಮವಾಗಿ ಮೇಲ್ಮನೆಗಳಾದ ವಿಧಾನಪರಿಷತ್ ಹಾಗೂ ರಾಜ್ಯಸಭೆಗಳಲ್ಲಿ ಬುದ್ಧಿಜೀವಿಗಳು ಮತ್ತು ಪ್ರಜ್ಞಾವಂತರ ಬದಲು ರಾಜಕೀಯ ಪಕ್ಷಗಳ ಮುಖವಾಣಿಗಳೇ ಕಣ್ಣಿಗೆ ಗೋಚರಿಸುತ್ತಿವೆ
ಭಾರತದ ರಾಜಕಾರಣದಲ್ಲಿನ ಮಹತ್ವದ ಘಟನೆಯೊಂದು ಹೀಗಿದೆ, 1958 ರಲ್ಲಿ ಜವಹರಲಾಲ್ ನೆಹರು ಪ್ರಧಾನ ಮಂತ್ರಿಗಳಾಗಿದ್ದ ಅವಧಿಯಲ್ಲಿ ವಿಶ್ವಸಂಸ್ಥೆಯ ಮಹಾ ಅಧಿವೇಶನಕ್ಕೆ ತೆರಳುತ್ತಿದ್ದ ಭಾರತದ ನಿಯೋಗದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಸದಸ್ಯರಾಗಿದ್ದರು. ಆ ಸಂದರ್ಭ ವಾಜಪೇಯಿ ಅವರನ್ನು ವಿಶ್ವ ನಾಯಕರಿಗೆ ಪರಿಚಯಿಸುವಂತೆ ಅಮೆರಿಕದಲ್ಲಿ ಭಾರತದ ಖಾಯಂ ನಿಯೋಗದ ಅಧಿಕಾರಿಯಾಗಿದ್ದ ಎಮ್.ಕೆ.ರಸ್ಗೋತ್ರ ಅವರಿಗೆ ನೆಹರು ಸೂಚಿಸಿದ್ದರು. ತಮ್ಮ ಕಟು ಟೀಕಾಕಾರರಾದ ವಾಜಪೇಯಿ ಅವರನ್ನು ವಿದೇಶಿ ಗಣ್ಯರಿಗೆ ಪರಿಚಯಿಸುವ ಸಂದರ್ಭಗಳಲ್ಲೆಲ್ಲ ‘ಈ ತರುಣ ಮುಂದೊಂದು ದಿನ ಭಾರತದ ಪ್ರಧಾನ ಮಂತ್ರಿಯಾಗುವುದು ಖಚಿತ’ ಎಂದು ನೆಹರು ಹೇಳುತ್ತಿದ್ದ ಮಾತು ಇಂದಿಗೂ ಜನಮಾನಸದಲ್ಲಿ ಚಲಾವಣೆಯಲ್ಲಿದೆ. ಇಂಥದ್ದೊಂದು ನಡೆ ಇಂದು ಯಾವ ಪಕ್ಷದಲ್ಲೂ ಗೋಚರಿಸುತ್ತಿ
ಸರ್ಕಾರ ಬದಲಾದಾಗ ಅಕಾಡೆಮಿಗಳ ಅಧ್ಯಕ್ಷರು ಮತ್ತು ಸದಸ್ಯರೂ ಕೂಡ ಬದಲಾಗುವುದು ಅದೊಂದು ಸಂಪ್ರದಾಯದಂತಾಗಿದೆ. ನಾಟಕ, ಸಿನಿಮಾ, ಸಾಹಿತ್ಯದಂಥ ಸಾಂಸ್ಕೃತಿಕ ಅಕಾಡೆಮಿಗಳಿಗೆ ಪ್ರಜ್ಞಾವಂತರ ಬದಲು ರಾಜಕೀಯ ಪಕ್ಷನಿಷ್ಠರನ್ನೇ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತಿದೆ. ಈ ಹಿಂದೆ ಸಾಂಸ್ಕೃತಿಕ ಕ್ಷೇತ್ರಗಳ ಸಾಧಕರು ಅಕಾಡೆಮಿಗಳ ಅಧ್ಯಕ್ಷ ಅಥವಾ ಸದಸ್ಯರಾಗಿ ನಿಯುಕ್ತಿಗೊಂಡ ಕ್ಷಣದಿಂದಲೇ ಆಳುವ ಪಕ್ಷದಿಂದ ಅಂತರವನ್ನು ಕಾಯ್ದುಕೊಂಡು ಸಂದರ್ಭ ಎದುರಾದಾಗಲೆಲ್ಲ ಪ್ರಭುತ್ವದ ಸಮಾಜ ವಿರೋಧಿ ನಡೆಯನ್ನು ಖಂಡಿಸಿದ ಸಾಕಷ್ಟು ಉದಾಹರಣೆಗಳಿವೆ. ಈಗ ಕಲಾವಿದರು ಮತ್ತು ಸಾಹಿತಿಗಳು ಫುಲ್‍ಟೈಮ್ ರಾಜಕಾರಣಿಗಳಾಗಿ ಅಕಾಡೆಮಿಗಳ ಮಹತ್ವದ ಸ್ಥಾನಗಳನ್ನು ಅಲಂಕರಿಸುತ್ತಿರುವಾಗ ಅವರಿಂದ ಸಮಾಜಹಿತದ ನಡೆಯನ್ನು ನಿರೀಕ್ಷಿಸುವುದು ಶುದ್ಧ ಮೂರ್ಖತನವಾಗುತ್ತದೆ.
ರಾಜಕಾರಣವು ವಿಶ್ವವಿದ್ಯಾಲಯಗಳ ಬೌದ್ಧಿಕವಲಯವನ್ನು ಕೂಡ ಮಲೀನಗೊಳಿಸಿದೆ. ಮುಕ್ತ ವಾತಾವರಣ, ಬೌದ್ಧಿಕ ಅನ್ವೇಷಣೆ, ಸಂಶೋಧನೆ, ಚರ್ಚೆ, ಸಂವಾದಗಳಿಗೆ ಅವಕಾಶ ಕಲ್ಪಿಸಿಕೊಡುವ ವಿಶ್ವವಿದ್ಯಾಲಯಗಳು ಒಂದು ಕಾಲದಲ್ಲಿ ಅತ್ಯುತ್ತಮ ರಾಜಕಾರಣಿಗಳನ್ನು ಸೃಷ್ಟಿಸಿವೆ. ವಿಶ್ವವಿದ್ಯಾಲಯಗಳ ಮಹತ್ವವನ್ನರಿತು ಆಯಾ ಅವಧಿಯ ಸರ್ಕಾರಗಳು ತಮ್ಮ ಪಕ್ಷಗಳ ಧೋರಣೆಯನ್ನು ಈ ಉನ್ನತ ಶಿಕ್ಷಣದ ಕೇಂದ್ರಗಳ ಮೇಲೆ ಬಲವಂತವಾಗಿ ಹೇರುತ್ತಿವೆ. ಕೆಲವು ರಾಜ್ಯಗಳಲ್ಲಿ ವಿಶ್ವವಿದ್ಯಾಲಯಗಳ ಮೇಲೆ ನಿಯಂತ್ರಣ ಸಾಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಪೈಪೆÇೀಟಿ ಏರ್ಪಟ್ಟಿದೆ. ಅಧಿಕಾರದ ಲಾಲಸೆಯಿಂದ ವಿಶ್ವವಿದ್ಯಾಲಯಗಳ ಬುದ್ಧಿಜೀವಿಗಳು ಕೂಡ ರಾಜಕೀಯ ಪಕ್ಷಗಳ ಕೈಗೊಂಬೆಗಳಂತೆ ವರ್ತಿಸುತ್ತಿರುವರು.
ವಿಶ್ವವಿದ್ಯಾಲಯಗಳು, ಮೇಲ್ಮನೆಗಳು, ಅಕಾಡೆಮಿಗಳು ತಮ್ಮ ಮೊದಲಿನ ಘನತೆ ಮತ್ತು ನೈತಿಕತೆಯನ್ನು ಉಳಿಸಿಕೊಂಡಿವೆಯೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ವೈಯಕ್ತಿಕ ಹಿತಾಸಕ್ತಿಗಾಗಿ ಸಾಹಿತಿಗಳು, ಕಲಾವಿದರು, ಚಿಂತಕರು ರಾಜಕಾರಣದತ್ತ ವಲಸೆ ಹೋಗುತ್ತಿರುವ ಇವತ್ತಿನ ಸನ್ನಿವೇಶದಲ್ಲಿ ಇಂಥದ್ದೊಂದು ಪ್ರಶ್ನೆಯೇ ಅಪ್ರಸ್ತುತವೆನಿಸುತ್ತದೆ. ರಾಜಕೀಯ ಪಕ್ಷಗಳ ಮುಖವಾಣಿಯಾಗುವ ಮತ್ತು ಪ್ರಭುತ್ವದ ನಡೆಯನ್ನು ಎತ್ತಿ ಹಿಡಿಯುವ ಧಾವಂತದಲ್ಲಿರುವ ಬೌದ್ಧಿಕ ಮತ್ತು ಸಾಂಸ್ಕೃತಿಕವಲಯ ಸಮಾಜದ ಹಿತವನ್ನು ಕಡೆಗಣಿಸುವ ಸರ್ಕಾರ ಮತ್ತು ಪಕ್ಷಗಳ ನಡೆಯನ್ನು ಪ್ರತಿಭಟಿಸುವ ಕಾವನ್ನು ಕಳೆದುಕೊಂಡಿವೆ. ಪ್ರಭುತ್ವ ಮತ್ತು ಪ್ರತಿಭಟನಾಕಾರರ ಚಹರೆ ಒಂದೇ ಆದಾಗ ಅಲ್ಲಿ ಪ್ರತಿಭಟನೆ ಮೂಲೆಗುಂಪಾಗುತ್ತದೆ. ಗೆದ್ದ ಪ್ರಭುತ್ವವು ಬಹುತ್ವದ ಚಹರೆಯನ್ನು ಅಳಿಸುತ್ತ ತನ್ನ ಚಹರೆಯನ್ನು ವಿಸ್ತರಿಸಿ ಬೆಳೆಯತೊಡಗುತ್ತದೆ.
-ರಾಜಕುಮಾರ ಕುಲಕರ್ಣಿ