(ಪ್ರಜಾವಾಣಿ, 21.10.2024)
ಗ್ರಂಥಾಲಯ ಇಲಾಖೆಯಿಂದ 2020ನೇ ಸಾಲಿನಲ್ಲಿ ಆಯ್ಕೆಗೊಂಡು ಪೂರೈಸಿರುವ ಪುಸ್ತಕಗಳ ಹಣ ಪೂರ್ಣಪ್ರಮಾಣದಲ್ಲಿ ಪಾವತಿಯಾಗಿಲ್ಲವೆಂದು ಕೆಲವು ಪ್ರಕಾಶಕರು ಇತ್ತೀಚೆಗೆ ಪತ್ರಿಕೆಯಲ್ಲಿ ತಮ್ಮ ಅಳಲು ತೋಡಿಕೊಂಡಿರುವರು. ಜೊತೆಗೆ ಕೆಲವು ಪಟ್ಟಭದ್ರ ಪ್ರಕಾಶಕರು ಇಲಾಖೆಯ ಪುಸ್ತಕ ಖರೀದಿ ಆದೇಶಪತ್ರ ಎಲ್ಲ ಪ್ರಕಾಶಕರಿಗೆ ತಲುಪುವ ಮೊದಲೆ ಪೂಸ್ತಕಗಳನ್ನು ಪೂರೈಸಿ ಹಣ ಪಡೆಯುತ್ತಿರುವರೆಂದು ಪತ್ರದಲ್ಲಿ ಉಲ್ಲೇಖಿಸಿರುವರು. ಒಟ್ಟಾರೆ ಪ್ರಕಾಶಕರ ಪತ್ರದನ್ವಯ ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸುತ್ತಿರುವ ಪ್ರಕಾಶಕರಲ್ಲಿ ದುರ್ಬಲರು ಮತ್ತು ಸಬಲರು ಎಂದು ಎರಡು ಗುಂಪುಗಳಿರುವ ಸತ್ಯ ಬಹಿರಂಗಗೊಂಡಿದೆ.
2020ನೇ ಸಾಲಿನ ಹಣ ಪೂರ್ಣಪ್ರಮಾಣದಲ್ಲಿ ತಮಗೆ ಪಾವತಿಯಾಗದೆ 2021ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು ವ್ಯಾವಹಾರಿಕ ನೈತಿಕತೆ ಅಲ್ಲ ಎನ್ನುವ ಪ್ರಕಾಶಕರ ಮಾತಿನಲ್ಲಿ ಸತ್ಯವಿದೆ. ಹೀಗೆ ಪೂರ್ಣಪ್ರಮಾಣದಲ್ಲಿ ಹಣ ಪಾವತಿಯಾಗದೇ ಇರುವುದು ಎಲ್ಲ ಪ್ರಕಾಶಕರಿಗಲ್ಲ, ಕೆಲವು ಪ್ರಕಾಶಕರಿಗೆ ಮಾತ್ರ ಎನ್ನುವ ಸಂಗತಿ ಬೆಳಕಿಗೆಬಂದಿದೆ. ಇಂತಹ ತಾರತಮ್ಯದ ವಿರುದ್ಧ ಧ್ವನಿ ಎತ್ತಿರುವ ಪ್ರಕಾಶಕರ ನಡೆ ನಿಜಕ್ಕೂ ಅಭಿನಂದನಾರ್ಹ. ಒಂದು ವರ್ಷದ ಅವಧಿಯಲ್ಲಿ ಪುಸ್ತಕಗಳನ್ನು ಪೂರೈಸಿರುವ ಎಲ್ಲ ಪ್ರಕಾಶಕರಿಗೆ ಹಣವನ್ನು ಪಾವತಿಸಬೇಕಾದದ್ದು ಇಲಾಖೆಯ ನೈತಿಕ ಜವಾಬ್ದಾರಿಯಾಗಿದೆ. ಕೆಲವು ಪಟ್ಟಭದ್ರ ಪ್ರಕಾಶಕರಿಗೆ ಹೆಚ್ಚು ಆದ್ಯತೆ ನೀಡಿ ಉಳಿದ ಪ್ರಕಾಶಕರ ವಿಷಯದಲ್ಲಿ ಮಲತಾಯಿಧೋರಣೆಯ ನಿಲುವು ತಳೆಯುವುದು ಸರಿಯಲ್ಲ.
ಕೆಲವು ಪ್ರಕಾಶಕರನ್ನು ಹೊರತುಪಡಿಸಿ ಹೆಚ್ಚಿನ ಪ್ರಕಾಶಕರು ಪ್ರತಿವರ್ಷ ಸೀಮಿತ ಸಂಖ್ಯೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಇಲಾಖೆಯ ವಿರುದ್ಧ ಧ್ವನಿ ಎತ್ತಿದವರಲ್ಲಿ ಬಹುತೇಕರು ಸೀಮಿತ ಸಂಖ್ಯೆಯಲ್ಲಿ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರು ಎನ್ನುವುದು ಗಮನಿಸಬೇಕಾದ ಸಂಗತಿ. ಸರ್ಕಾರ ತಮಗೆ ಪಾವತಿಸಬೇಕಾದ ಹಣವನ್ನು ಮೊದಲು ಪಾವತಿಸಿ ನಂತರದ ವರ್ಷದ ಪುಸ್ತಕಗಳ ಆಯ್ಕೆಯ ಪ್ರಕ್ರಿಯೆಯನ್ನು ಆರಂಭಿಸಲಿ ಎನ್ನುವುದು ಅವರ ಬೇಡಿಕೆಯಾಗಿದೆ. ಇಂತಹ ಸನ್ನಿವೇಶದಲ್ಲಿ ಪ್ರತಿವರ್ಷ ನೂರಾರು ಶೀರ್ಷಿಕೆಗಳ ಸಾವಿರಾರು ಪುಸ್ತಕಗಳನ್ನು ಪ್ರಕಟಿಸುತ್ತಿರುವ ಪ್ರಕಾಶಕರೇಕೆ ಇಲಾಖೆಯ ವಿರುದ್ಧ ಧ್ವನಿ ಎತ್ತುತ್ತಿಲ್ಲ ಎನ್ನುವ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ. ಪ್ರಕಾಶಕರ ಈ ಮೌನ ಹಲವು ಸಂದೇಹಗಳಿಗೆ ಆಸ್ಪದ ಮಾಡಿಕೊಡುತ್ತದೆ.
ಇಲಾಖೆಯ ತಾರತಮ್ಯದ ವಿರುದ್ಧ ಧ್ವನಿ ಎತ್ತದೆ ಇರುವ ಪ್ರಕಾಶಕರ ನಡೆ ಅವರನ್ನು ಪಟ್ಟಭದ್ರ ಪ್ರಕಾಶಕರ ಸಾಲಿನಲ್ಲಿ ನಿಲ್ಲಿಸುತ್ತದೆ. ಹಾಗೆಂದು ವಿರೋಧಿಸದೆ ಮೌನದಿಂದಿರುವ ಎಲ್ಲ ಪ್ರಕಾಶಕರನ್ನು ಪಟ್ಟಭದ್ರರೆಂದು ಆರೋಪಿಸುವುದು ತಪ್ಪು ಮತ್ತು ಆತುರದ ನಿರ್ಧಾರವಾಗುತ್ತದೆ. ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುವುದರ ಮೂಲಕ ತಮ್ಮದೆ ಓದುಗರ ಬಳಗವನ್ನು ಸೃಷ್ಟಿಸಿಕೊಂಡಿರುವ ಕೆಲವು ಪ್ರಕಾಶಕರು ಗ್ರಂಥಾಲಯ ಇಲಾಖೆಯನ್ನು ನೆಚ್ಚಿಕೊಂಡಿರುವುದು ತುಂಬ ಕಡಿಮೆ. ಗುಣಾತ್ಮಕ ಪುಸ್ತಕಗಳನ್ನು ಖರೀದಿಸುವಲ್ಲಿ ಓದುಗರು ತೋರಿಸುತ್ತಿರುವ ಆಸಕ್ತಿಯೇ ಕೆಲವು ಪ್ರಕಾಶಕರಿಗೆ ನಿಯಮಿತವಾಗಿ ಪುಸ್ತಕಗಳನ್ನು ಪ್ರಕಟಿಸಲು ಪ್ರೇರಣೆಯಾಗಿದೆ. ಹಾಗೆಂದು ಇಲಾಖೆಯ ವಿರುದ್ಧ ಧ್ವನಿ ಎತ್ತಿರುವ ಪ್ರಕಾಶಕರು ಗುಣಾತ್ಮಕ ಪುಸ್ತಕಗಳನ್ನು ಪ್ರಕಟಿಸುತ್ತಿಲ್ಲ ಎಂದರ್ಥವಲ್ಲ. ಹೋರಾಟದ ಕಹಳೆ ಊದಿರುವ ಅಹರ್ನಿಶಿ, ವೈಷ್ಣವಿ, ಸೃಷ್ಟಿ, ಸಂಗಾತ, ಪಲ್ಲವ ಇತ್ಯಾದಿ ಪ್ರಕಾಶಕರು ಪ್ರತಿವರ್ಷ ಗುಣಮಟ್ಟದ ಪುಸ್ತಕಗಳನ್ನು ಪ್ರಕಟಿಸುತ್ತಿರುವರು. ಆದರೆ ತಮ್ಮ ಸೀಮಿತ ಸಂಖ್ಯೆಯ ಪ್ರಕಟಣೆ ಹಾಗೂ ಸೀಮಿತ ಓದುಗರ ಬಳಗದಿಂದಾಗಿ ಒಂದಿಷ್ಟು ಆರ್ಥಿಕವಾಗಿ ಚೇತರಿಸಿಕೊಳ್ಳಲು ಅವರು ಗ್ರಂಥಾಲಯ ಇಲಾಖೆಯನ್ನು ಅವಲಂಬಿಸಿರುವರು.
ಗ್ರಂಥಾಲಯ ಇಲಾಖೆಗೆ ಪುಸ್ತಕಗಳನ್ನು ಪೂರೈಸಲೆಂದೆ ಹಲವಾರು ಪ್ರಕಾಶನ ಸಂಸ್ಥೆಗಳು ಹುಟ್ಟಿಕೊಂಡಿವೆ. ಅನೇಕ ಪ್ರಕಾಶನ ಸಂಸ್ಥೆಗಳು ದಾಖಲೆಗಳಲ್ಲಿ ಮಾತ್ರ ಕಾಣಿಸಿಕೊಂಡು ಗ್ರಂಥಾಲಯ ಇಲಾಖೆಗೆ ಪ್ರತಿವರ್ಷ ಪುಸ್ತಕಗಳನ್ನು ಪೂರೈಸುವ ಕೆಲಸದಲ್ಲಿ ನಿರತವಾಗಿವೆ. ಇನ್ನು ಕೆಲವು ಪ್ರಕಾಶಕರು ಅಸ್ತಿತ್ವದಲ್ಲಿಯೇ ಇಲ್ಲದ ಹತ್ತಾರು ಪ್ರಕಾಶನ ಸಂಸ್ಥೆಗಳ ಹೆಸರಿನಿಂದ ಪುಸ್ತಕಗಳನ್ನು ಪೂರೈಸಿ ಆರ್ಥಿಕವಾಗಿ ಬಲಾಢ್ಯರಾಗುತ್ತಿರುವರು. ಇಂತಹ ಪ್ರಕಾಶಕರೆ ಇಲಾಖೆಯನ್ನು ತಮ್ಮ ಕಪಿಮುಷ್ಟಿಯಲ್ಲಿಟ್ಟುಕೊಂಡು ನಿಯಂತ್ರಿಸುತ್ತಿರುವರು. ಇಲಾಖೆಯ ಮೇಲಧಿಕಾರಿಗಳ ಜೊತೆಗೆ ಒಪ್ಪಂದ ಮಾಡಿಕೊಂಡು ಪುಸ್ತಕ ಪೂರೈಕೆಗೆ ಸಂಬಂಧಿಸಿದ ಮಾಹಿತಿಯನ್ನು ಶೀಘ್ರವೇ ಕಲೆಹಾಕಿ ಪುಸ್ತಕಗಳನ್ನು ಪೂರೈಸುತ್ತಿರುವರು. ಪೂರೈಸಿದ ಪುಸ್ತಕಗಳ ಹಣವನ್ನು ಕೂಡ ಎಲ್ಲರಿಗಿಂತ ಮೊದಲು ಪಡೆಯುತ್ತಿರುವರು. ಇಂತಹ ಪಟ್ಟಭದ್ರ ಪ್ರಕಾಶಕರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ಗ್ರಂಥಾಲಯ ಇಲಾಖೆ ಪುಸ್ತಕಗಳ ಖರೀದಿಯಲ್ಲಿ ಅನುಸರಿಸುತ್ತಿರುವ ವಿಳಂಬನೀತಿ ಇಲಾಖೆಯ ಸೋಮಾರಿತನ ಮತ್ತು ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ. 2021ನೇ ಸಾಲಿನ ಪುಸ್ತಕಗಳ ಆಯ್ಕೆ ಪ್ರಕ್ರಿಯೆಯನ್ನು 2024 ರಲ್ಲಿ ಪೂರ್ಣಗೊಳಿಸಿದ್ದು ನ್ಯಾಯಸಮ್ಮತವಲ್ಲ. ಪ್ರಕಾಶಕರ ಬೇಡಿಕೆಯಂತೆ ಆಯಾ ವರ್ಷದ ಪುಸ್ತಕಗಳ ಆಯ್ಕೆ, ಖರೀದಿ ಮತ್ತು ಹಣಪಾವತಿಯನ್ನು ಆಯಾ ಆರ್ಥಿಕ ವರ್ಷದಲ್ಲೇ ಪೂರ್ಣಗೊಳಿಸುವುದು ಸರಿಯಾದ ಕ್ರಮ. ಪಟ್ಟಭದ್ರರಿಗೆ ಬೇಗನೆ ಹಣ ಪಾವತಿಸುವುದು ಮತ್ತು ಉಳಿದ ಪ್ರಕಾಶಕರಿಗೆ ವಿಳಂಬಮಾಡುವ ತಾರತಮ್ಯ ನೀತಿಯನ್ನು ಇನ್ನಾದರೂ ಕೈಬಿಡುವುದೊಳಿತು.
ಗ್ರಂಥಾಲಯ ಇಲಾಖೆ ಕುರಿತು ಸರ್ಕಾರಕ್ಕಿರುವ ನಿರಾಸಕ್ತಿಯೇ ಇಲಾಖೆಯಲ್ಲಿ ಅಪ್ರಾಮಾಣಿಕತೆ ಮತ್ತು ಅವ್ಯವಹಾರ ಹೆಚ್ಚಲು ಕಾರಣವಾಗಿದೆ. ಬೇರೆ ಸಚಿವಾಲಯದ ಸುಪರ್ದಿಗೆ ಗ್ರಂಥಾಲಯ ಇಲಾಖೆಯನ್ನು ಒಪ್ಪಿಸುವ ಬದಲು ಪ್ರತ್ಯೇಕ ಸಚಿವಾಲಯ ರಚಿಸುವುದೊಳಿತು. ಗ್ರಂಥಾಲಯ ಕ್ಷೇತ್ರವನ್ನು ಅನುತ್ಪಾದಕ ಕ್ಷೇತ್ರವೆಂದು ಪರಿಗಣಿಸದೆ ಪುಸ್ತಕ ಸಂಸ್ಕೃತಿಯನ್ನು ಬಿತ್ತಿ ಬೆಳೆಯುತ್ತಿರುವ ಕ್ಷೇತ್ರವೆಂದು ಪರಿಗಣಿಸಬೇಕಾದ ತುರ್ತು ಅಗತ್ಯ ಈಗ ಎದುರಾಗಿದೆ.
ಗ್ರಂಥಾಲಯ ಇಲಾಖೆಯಲ್ಲಿ ಅವ್ಯವಹಾರ ಏಕೆ ತಾಂಡವವಾಡುತ್ತಿದೆ?. ಪುಸ್ತಕಗಳ ಖರೀದಿ ಮತ್ತು ಹಣ ಪಾವತಿಯಲ್ಲಿ ಏಕೆ ತಾರತಮ್ಯ ಮಾಡಲಾಗುತ್ತಿದೆ? ಪ್ರಭಾವಶಾಲಿ ಪ್ರಕಾಶಕರು ಹತ್ತಾರು ಪ್ರಕಾಶನ ಸಂಸ್ಥೆಗಳ ಹೆಸರುಗಳಿಂದ ಪುಸ್ತಕಗಳನ್ನು ಪೂರೈಸುತ್ತಿರುವುದು ಇಲಾಖೆ ಗಮನಕ್ಕೆ ಬಂದಿಲ್ಲವೆ? ಗಮನಕ್ಕೆ ಬಂದರೂ ಮೇಲಧಿಕಾರಿಗಳು ಕಣ್ಣಿದ್ದು ಕುರುಡರಂತೆ ಇರಲು ಏನು ಕಾರಣ? ಈ ಎಲ್ಲ ಪ್ರಶ್ನೆಗಳಿಗೆ ಸರ್ಕಾರ ಉತ್ತರದಾಯಿಯಾಗಬೇಕಿದೆ. ಸರ್ಕಾರ ಕಠಿಣ ನಿಲುವು ತಳೆಯದೆ ಹೋದರೆ ಪಟ್ಟಭದ್ರ ಪ್ರಕಾಶಕರು ಇಡೀ ಇಲಾಖೆಯನ್ನೇ ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
-ರಾಜಕುಮಾರ ಕುಲಕರ್ಣಿ